ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯಾಜಕಕಾಂಡ ಅಧ್ಯಾಯ 25ರಲ್ಲಿ ತಿಳಿಸಲ್ಪಟ್ಟಿರುವ ಜೂಬಿಲಿ ಸಂವತ್ಸರದ ಏರ್ಪಾಡು ಏನನ್ನು ಮುನ್‌ಚಿತ್ರಿಸುತ್ತದೆ?

‘ಏಳನೆಯ ವರುಷವು ವಿಶ್ರಾಂತಿಕಾಲವಾಗಿಯೂ ಸಬ್ಬತ್‌ಕಾಲವಾಗಿಯೂ ಇರಬೇಕು’ ಎಂದು ಮೋಶೆಯ ಧರ್ಮಶಾಸ್ತ್ರವು ವಿಧಿಸಿತ್ತು. ಆ ವರುಷದ ಬಗ್ಗೆ ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಲಾಗಿತ್ತು: “ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷೇತೋಟದ ಕೆಲಸವನ್ನು ನಡಿಸಬಾರದು. ಹೊಲದಲ್ಲಿ ತಾನಾಗಿ ಬೆಳೆದ ಪೈರನ್ನು ನೀವು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ಹಣ್ಣನ್ನು ಸಂಗ್ರಹಿಸಬಾರದು. ಆ ವರುಷವೆಲ್ಲಾ ಭೂಮಿಗೆ ಸಂಪೂರ್ಣವಾಗಿ ವಿಶ್ರಾಂತಿಯಿರಬೇಕು.” (ಯಾಜಕಕಾಂಡ 25:4, 5) ಇದಕ್ಕನುಸಾರ ಪ್ರತಿ ಏಳನೆಯ ವರುಷವು, ಸಬ್ಬತ್‌ ವರುಷವಾಗಿರಬೇಕಿತ್ತು. ಮತ್ತು ಪ್ರತಿ 50ನೆಯ ವರುಷ, ಅಂದರೆ ಏಳನೆಯ ಸಬ್ಬತ್‌ ವರುಷದ ಮುಂದಿನ ವರುಷವು ಒಂದು ಜೂಬಿಲಿಯಾಗಿರಬೇಕಿತ್ತು. ಆ ವರುಷ ಏನು ನಡೆಯುತ್ತಿತ್ತು?

ಮೋಶೆಯ ಮುಖಾಂತರ ಯೆಹೋವನು ಇಸ್ರಾಯೇಲಿಗೆ ಹೇಳಿದ್ದು: “ನೀವು ಐವತ್ತನೆಯ ವರುಷವನ್ನು ದೇವರಿಗೆ ಮೀಸಲಾದ ವರುಷವೆಂದು ಭಾವಿಸಿ ಅದರಲ್ಲಿ ದೇಶದ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂಬದಾಗಿ ಸಾರಬೇಕು. ಅದು ಜೂಬಿಲಿ ಸಂವತ್ಸರವಾದದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಸ್ವಜನರ ಬಳಿಗೂ ಹೋಗಿ ಇರಬಹುದು. ಆ ಐವತ್ತನೆಯ ವರುಷದಲ್ಲಿ ಅಂದರೆ ಜೂಬಿಲಿ ಸಂವತ್ಸರದಲ್ಲಿ ನೀವು ಬೀಜವನ್ನು ಬಿತ್ತಬಾರದು; ತಾನಾಗಿ ಬೆಳೆದ ಪೈರನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಆದ ಹಣ್ಣನ್ನು ಸಂಗ್ರಹಿಸಬಾರದು.” (ಯಾಜಕಕಾಂಡ 25:10, 11) ಭೂಮಿಗೆ ಇಲ್ಲವೆ ಜಮೀನಿಗೆ, ಜೂಬಿಲಿ ಸಂವತ್ಸರದ ಸಮಯದಲ್ಲಿ ಕ್ರಮಾನುಗತವಾಗಿ ಎರಡು ಸಬ್ಬತ್‌ ವರುಷಗಳಿರುತ್ತಿದ್ದವು. ದೇಶದ ನಿವಾಸಿಗಳಿಗಾದರೊ ಜೂಬಿಲಿಯು ಸ್ವಾತಂತ್ರ್ಯವನ್ನು ತರುತ್ತಿತ್ತು. ದಾಸತ್ವಕ್ಕೆ ಮಾರಲ್ಪಟ್ಟಿದ್ದ ಯೆಹೂದ್ಯರನ್ನು ಬಿಡುಗಡೆಗೊಳಿಸಬೇಕಿತ್ತು. ಒಬ್ಬ ವ್ಯಕ್ತಿಯು ತನ್ನ ಪಿತ್ರಾರ್ಜಿತ ಆಸ್ತಿಯನ್ನು ನಿರ್ಬಂಧಕ್ಕೊಳಗಾಗಿ ಮಾರಬೇಕಾಗಿ ಬಂದಿದ್ದಲ್ಲಿ, ಆ ವರುಷ ಅದನ್ನು ಅವನ ಕುಟುಂಬಕ್ಕೆ ಹಿಂದಿರುಗಿಸಬೇಕಿತ್ತು. ಜೂಬಿಲಿ ಸಂವತ್ಸರವು, ಪ್ರಾಚೀನ ಇಸ್ರಾಯೇಲಿಗೆ ಪುನಸ್ಸ್ಥಾಪನೆ ಮತ್ತು ವಿಮೋಚನೆಯ ವರುಷವಾಗಿರಲಿತ್ತು. ಇದು ಕ್ರೈಸ್ತರಿಗಾಗಿ ಏನನ್ನು ಮುನ್‌ಚಿತ್ರಿಸುತ್ತದೆ?

ಮೊದಲನೆಯ ಪುರುಷನಾದ ಆದಾಮನ ದಂಗೆಯು, ಮಾನವಕುಲವನ್ನು ಪಾಪದ ದಾಸತ್ವಕ್ಕೆ ತಳ್ಳಿತು. ಮಾನವಕುಲವನ್ನು ಪಾಪದ ಬಿಗಿಮುಷ್ಠಿಯಿಂದ ಬಿಡಿಸುವ ದೇವರ ಏರ್ಪಾಡು, ಯೇಸು ಕ್ರಿಸ್ತನ ಈಡು ಯಜ್ಞವಾಗಿದೆ. * (ಮತ್ತಾಯ 20:28; ಯೋಹಾನ 3:16; 1 ಯೋಹಾನ 2:​1, 2) ಕ್ರೈಸ್ತರು ಪಾಪದ ನಿಯಮದಿಂದ ಬಿಡುಗಡೆಹೊಂದುವುದು ಯಾವಾಗ? ಅಭಿಷಿಕ್ತ ಕ್ರೈಸ್ತರನ್ನು ಸಂಬೋಧಿಸುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ಜೀವವನ್ನುಂಟುಮಾಡುವ ಪವಿತ್ರಾತ್ಮನಿಂದಾದ ನಿಯಮವು ನಿನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಕ್ರಿಸ್ತ ಯೇಸುವಿನ ಮೂಲಕ ಬಿಡಿಸಿತು.” (ರೋಮಾಪುರ 8:2) ಸ್ವರ್ಗೀಯ ಜೀವನದ ನಿರೀಕ್ಷೆಯುಳ್ಳವರು, ಪವಿತ್ರಾತ್ಮದಿಂದ ಅಭಿಷಿಕ್ತರಾಗುವಾಗ ಈ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಅವರ ದೇಹಗಳು ರಕ್ತಮಾಂಸದವುಗಳು ಮತ್ತು ಅಪರಿಪೂರ್ಣವಾಗಿದ್ದರೂ ದೇವರು ಅವರನ್ನು ನೀತಿವಂತರೆಂದು ಘೋಷಿಸಿ, ತನ್ನ ಆಧ್ಯಾತ್ಮಿಕ ಪುತ್ರರನ್ನಾಗಿ ತೆಗೆದುಕೊಳ್ಳುತ್ತಾನೆ. (ರೋಮಾಪುರ 3:24; 8:​16, 17) ಅಭಿಷಿಕ್ತರಿಗೆ, ಕ್ರೈಸ್ತ ಜೂಬಿಲಿಯು ಸಾ.ಶ. 33ರ ಪಂಚಾಶತ್ತಮದಲ್ಲಿ ಆರಂಭಗೊಂಡಿತು.

ಭೂಮಿಯ ಮೇಲೆ ನಿತ್ಯಜೀವದ ಪ್ರತೀಕ್ಷೆಯುಳ್ಳ ‘ಬೇರೆ ಕುರಿಗಳ’ ಕುರಿತಾಗಿ ಏನು? (ಯೋಹಾನ 10:16) ಬೇರೆ ಕುರಿಗಳಿಗೆ, ಕ್ರಿಸ್ತನ ಸಾವಿರ ವರುಷದ ಆಳ್ವಿಕೆಯು, ಪುನಸ್ಸ್ಥಾಪನೆ ಮತ್ತು ವಿಮೋಚನೆಯ ಸಮಯವಾಗಿ ಪರಿಣಮಿಸುವುದು. ಈ ಸಹಸ್ರವರ್ಷದ ಜೂಬಿಲಿಯಲ್ಲಿ, ಯೇಸು ತನ್ನ ಈಡು ಯಜ್ಞದ ಪ್ರಯೋಜನಗಳನ್ನು ನಂಬಿಕೆಯುಳ್ಳ ಮಾನವಕುಲಕ್ಕೆ ಅನ್ವಯಿಸುವನು ಮತ್ತು ಪಾಪದ ಪರಿಣಾಮಗಳನ್ನು ರದ್ದುಮಾಡುವನು. (ಪ್ರಕಟನೆ 21:​3, 4) ಕ್ರಿಸ್ತನ ಸಹಸ್ರವರ್ಷದಾಳಿಕೆಯ ಕೊನೆಯಲ್ಲಿ, ಮಾನವಕುಲವು ಪರಿಪೂರ್ಣತೆಯನ್ನು ತಲಪಿ, ಬಾಧ್ಯತೆಯಾಗಿ ಬಂದಿರುವ ಪಾಪಮರಣಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವುದು. (ರೋಮಾಪುರ 8:21) ಈ ಕೆಲಸವು ಪೂರೈಸಲ್ಪಡುವಾಗ, ಕ್ರೈಸ್ತ ಜೂಬಿಲಿಯು ಕೊನೆಗೊಳ್ಳುವುದು.

[ಪಾದಟಿಪ್ಪಣಿ]

^ ಪ್ಯಾರ. 5 ವಾಸ್ತವದಲ್ಲಿ ಯೇಸುವನ್ನು, ‘ಸೆರೆಯವರಿಗೆ ಬಿಡುಗಡೆಯಾಗುವದನ್ನು ಪ್ರಸಿದ್ಧಿಪಡಿಸಲು’ ಕಳುಹಿಸಲಾಗಿತ್ತು. (ಯೆಶಾಯ 61:​1-7; ಲೂಕ 4:​16-21) ಅವನು ಆಧ್ಯಾತ್ಮಿಕವಾದ ಬಿಡುಗಡೆಯನ್ನು ಪ್ರಕಟಿಸಿದನು.

[ಪುಟ 26ರಲ್ಲಿರುವ ಚಿತ್ರ]

ಸಹಸ್ರವರ್ಷದ ಜೂಬಿಲಿಯು​—⁠‘ಬೇರೆ ಕುರಿಗಳಿಗೆ’ ಪುನಸ್ಸ್ಥಾಪನೆ ಮತ್ತು ವಿಮೋಚನೆಯ ಸಮಯ