ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಸರಕಾರಕ್ಕಾಗಿ ಅನ್ವೇಷಣೆ

ಒಳ್ಳೇ ಸರಕಾರಕ್ಕಾಗಿ ಅನ್ವೇಷಣೆ

ಒಳ್ಳೇ ಸರಕಾರಕ್ಕಾಗಿ ಅನ್ವೇಷಣೆ

“ಲೋಕದ ರಾಷ್ಟ್ರಗಳ ಮಧ್ಯೆ ಪರಸ್ಪರ ಅವಲಂಬನೆಯು ಬೆಳೆಯುತ್ತಿರುವುದರಿಂದ, ಪ್ರತ್ಯೇಕ ರಾಷ್ಟ್ರಗಳು ಸ್ವತಃ ಸರಿಪಡಿಸಿಕೊಳ್ಳಲು ಸಾಧ್ಯವಾಗದ ಭೌಗೋಳಿಕ ಸಮಸ್ಯೆಗಳ ಸಾಲನ್ನೇ ಇದು ಉಂಟುಮಾಡಿದೆ. ಮಾನವಕುಲವು ಎದುರಿಸುತ್ತಿರುವ ಅತ್ಯಧಿಕ ಅಪಾಯಗಳನ್ನೂ ಪಂಥಾಹ್ವಾನಗಳನ್ನೂ ಯಶಸ್ವಿಯಾಗಿ ನಿಭಾಯಿಸಲು ಕೇವಲ ಲೋಕವ್ಯಾಪಕ ಸಹಪ್ರಯತ್ನದಿಂದ ಮಾತ್ರ ಸಾಧ್ಯ.”​—⁠ಗುಲಾಮ್‌ ಊಮಾರ್‌, ಪಾಕಿಸ್ತಾನಿ ರಾಜಕೀಯ ವಿಶ್ಲೇಷಕ.

ಇಂದಿನ ಜಗತ್ತು ವಿರೋಧಾಭಾಸಗಳಿಂದ ತುಂಬಿದೆ. ಈ ಜಗತ್ತು ಹೇರಳವಾದ ಭೌತಿಕ ವಸ್ತುಗಳಿಂದ ಸುತ್ತುವರಿದಿದೆಯಾದರೂ, ಅನೇಕರು ತಮ್ಮ ಮೂಲಾವಶ್ಯಕತೆಗಳನ್ನು ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂದಿನ ಕಂಪ್ಯೂಟರ್‌ ಯುಗದಲ್ಲಿ ಜನರು ಹಿಂದೆಂದಿಗಿಂತಲೂ ಅತಿ ವಿದ್ಯಾವಂತರೂ ಜ್ಞಾನಿಗಳೂ ಆಗಿರುವುದಾದರೂ, ಹೆಚ್ಚೆಚ್ಚು ಜನರು ಒಂದು ಸ್ಥಿರವಾದ ಉದ್ಯೋಗವನ್ನು ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಹಿಂದೆಂದಿಗಿಂತಲೂ ಇಂದು ಜನರಿಗೆ ಹೆಚ್ಚು ಸ್ವಾತಂತ್ರ್ಯವಿರುವಂತೆ ತೋರುವುದಾದರೂ, ಕೋಟ್ಯಂತರ ಜನರು ಭಯ, ಅಭದ್ರತೆ, ಮತ್ತು ಅನಿಶ್ಚಿತತೆಯ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಅನೇಕ ಆಕರ್ಷಕ ಅವಕಾಶಗಳಿಂದ ನಾವು ಸುತ್ತುವರಿಯಲ್ಪಟ್ಟಿರಬಹುದು, ಆದರೆ ಸಮಾಜದ ಎಲ್ಲಾ ಮಟ್ಟಗಳಲ್ಲಿ ಇರುವ ಭ್ರಷ್ಟಾಚಾರ ಮತ್ತು ನ್ಯಾಯನಿರ್ಲಕ್ಷ್ಯವು ಅನೇಕರಿಗೆ ಆಶಾಭಂಗವನ್ನು ಉಂಟುಮಾಡಿದೆ.

ಮಾನವಕುಲವು ಎದುರಿಸುತ್ತಿರುವ ಸಮಸ್ಯೆಗಳ ವ್ಯಾಪ್ತಿಯು ಎಷ್ಟು ವಿಸ್ತಾರವಾಗಿದೆ ಎಂದರೆ, ಯಾವುದೇ ಒಂದು ರಾಷ್ಟ್ರ ಅಥವಾ ರಾಷ್ಟ್ರಗಳ ಒಂದು ಗುಂಪು ಸಹ ಅದನ್ನು ಪರಿಹರಿಸಸಾಧ್ಯವಿಲ್ಲ. ಆದುದರಿಂದ, ಲೋಕ ಶಾಂತಿ ಮತ್ತು ಭದ್ರತೆಯು ವಾಸ್ತವಿಕ ಸಂಗತಿಯಾಗಬೇಕಾದರೆ ಎಲ್ಲಾ ರಾಷ್ಟ್ರಗಳು ಐಕ್ಯವಾಗಿ ಒಂದೇ ಸರಕಾರದ ಕೆಳಗೆ ಬರಬೇಕು ಎಂದು ಅನೇಕರು ತೀರ್ಮಾನಿಸಿದ್ದಾರೆ. ಉದಾಹರಣೆಗೆ, ಇಂಥ ವಿಚಾರವನ್ನು ಬಹಳಷ್ಟು ಹಿಂದೆಯೇ ಆಲ್ಬರ್ಟ್‌ ಐನ್‌ಸ್ಟೈನ್‌ ಬೆಂಬಲಿಸಿದ್ದನು. 1946ರಲ್ಲಿ ಅವನು ಕಂಠೋಕ್ತವಾಗಿ ಹೇಳಿದ್ದು: “ಲೋಕದಲ್ಲಿರುವ ಅಧಿಕಾಂಶ ಜನರು ಶಾಂತಿ ಮತ್ತು ಭದ್ರತೆಯಲ್ಲಿ ಜೀವಿಸಲು ಇಚ್ಛಿಸುತ್ತಾರೆ ಎಂಬುದನ್ನು ನಾನು ದೃಢವಾಗಿ ನಂಬುತ್ತೇನೆ. . . . ಕೇವಲ ಒಂದು ಲೋಕ ಸರಕಾರವನ್ನು ರಚಿಸುವ ಮೂಲಕ ಮಾತ್ರವೇ ಶಾಂತಿಗಾಗಿರುವ ಮಾನವಕುಲದ ಇಚ್ಛೆಯು ಪೂರೈಸಲ್ಪಡಸಾಧ್ಯವಿದೆ.”

ಐದು ದಶಕಗಳ ನಂತರವೂ ಈ ಪ್ರಾಮುಖ್ಯ ಅಗತ್ಯವು ಇನ್ನೂ ಪೂರೈಸಲ್ಪಡದೇ ಉಳಿದಿದೆ. 21ನೇ ಶತಮಾನದ ಸಮಸ್ಯೆಗಳನ್ನು ಪಟ್ಟಿಮಾಡುತ್ತಾ ಫ್ರಾನ್ಸ್‌ ದೇಶದ ಪ್ಯಾರಿಸ್‌ನಲ್ಲಿನ ಲ ಮೊಂಡ್‌ ವಾರ್ತಾಪತ್ರಿಕೆಯಲ್ಲಿನ ಒಂದು ವ್ಯಾಖ್ಯಾನವು ತಿಳಿಸುವುದು: “ಲೋಕದ ಯಾವುದೇ ಭಾಗದಲ್ಲಿ ಜನಾಂಗೀಯ ಹತ್ಯಾಕಾಂಡವು ನಡೆಯುವಾಗ ಕೂಡಲೆ ಮಧ್ಯೆ ಪ್ರವೇಶಿಸಶಕ್ತವಾಗಿರುವಂಥ, ನಿರ್ಣಯಾತ್ಮಕ, ಆಡಳಿತಾತ್ಮಕ, ಮತ್ತು ಸಂವಿಧಾನಾತ್ಮಕ ತಳಪಾಯಗಳ ಮೇಲೆ ಕಟ್ಟಲ್ಪಟ್ಟಿರುವ ಒಂದು ಅಂತಾರಾಷ್ಟ್ರೀಯ ಸರಕಾರವನ್ನು ಸ್ಥಾಪಿಸುವುದು ಬಹಳ ಪ್ರಾಮುಖ್ಯವಾದ ವಿಷಯವಾಗಿದೆ. ಇಂದಿನಿಂದ ಇಡೀ ಭೂಮಿಯು ಒಂದೇ ದೇಶವಾಗಿದೆ ಎಂಬ ವಿಚಾರವನ್ನು ಸ್ವೀಕರಿಸುವುದು ಸಹ ಅತ್ಯಗತ್ಯ.” ಆದರೆ, ಮಾನವರು ಒಂದು ಶಾಂತಿಭರಿತ ಭವಿಷ್ಯತ್ತನ್ನು ಹೊಂದಶಕ್ತರಾಗುವಂತೆ, ಇದನ್ನು ಸಾಧಿಸುವ ಶಕ್ತಿ ಮತ್ತು ಸಾಮರ್ಥ್ಯವು ಯಾರಿಗೆ ಅಥವಾ ಯಾವುದಕ್ಕೆ ಇದೆ?

ವಿಶ್ವಸಂಸ್ಥೆಯು ಸಮಸ್ಯೆಯನ್ನು ಸರಿಪಡಿಸಬಲ್ಲದೋ?

ಲೋಕ ಶಾಂತಿಗಾಗಿ ಅನೇಕರು ವಿಶ್ವಸಂಸ್ಥೆಯ ಮೇಲೆ ತಮ್ಮ ನಿರೀಕ್ಷೆಯನ್ನಿಟ್ಟಿದ್ದಾರೆ. ಆದರೆ ವಿಶ್ವಸಂಸ್ಥೆಯು, ಲೋಕಕ್ಕೆ ನಿಜ ಶಾಂತಿ ಮತ್ತು ಭದ್ರತೆಯನ್ನು ತರಬಲ್ಲ ಸರಕಾರವಾಗಿದೆಯೊ? ಸ್ಫೂರ್ತಿಕೊಡುವ ಹಾಗೂ ಭರವಸೆಮೂಡಿಸುವಂತೆ ಕಾಣುವ ರಾಜಕೀಯ ಭಾಷಣಗಳಿಗೆ ಯಾವುದೇ ಕೊರತೆಯಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಉದಾಹರಣೆಗೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ತನ್ನ, 2000ದ “ಸಹಸ್ರಮಾನ ಒಪ್ಪಂದ”ದಲ್ಲಿ ಈ ಗಂಭೀರವಾದ ಪ್ರಮಾಣವನ್ನು ಮಾಡಿತು: “ಕಳೆದ ದಶಕದಲ್ಲಿ 50 ಲಕ್ಷಕ್ಕಿಂತಲೂ ಹೆಚ್ಚು ಜನರ ಜೀವಗಳನ್ನು ಬಲಿತೆಗೆದುಕೊಂಡಿರುವ, ರಾಷ್ಟ್ರದೊಳಗಿನ ಅಥವಾ ರಾಷ್ಟ್ರಗಳ ಮಧ್ಯೆ ನಡೆಯುವ ಯುದ್ಧದ ಪೀಡೆಯಿಂದ ನಮ್ಮ ಜನರನ್ನು ವಿಮುಕ್ತಗೊಳಿಸಲು ನಾವು ನಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಮಾಡುವೆವು.” ಇಂಥ ಘೋಷಣೆಗಳು, ವಿಶ್ವಸಂಸ್ಥೆಯು ಅನೇಕ ಜನರಿಂದ ಹೊಗಳಿಕೆ ಮತ್ತು ಮೆಚ್ಚಿಗೆಯನ್ನು ಪಡೆಯುವಂತೆ ಮಾಡಿತು. ಅಷ್ಟುಮಾತ್ರವಲ್ಲದೆ, ಇದರಿಂದಾಗಿ ವಿಶ್ವಸಂಸ್ಥೆಗೆ ಇಸವಿ 2001ರ ನೋಬೆಲ್‌ ಶಾಂತಿ ಪಾರಿತೋಷಕವೂ ದೊರಕಿತು. ಈ ರೀತಿ ವಿಶ್ವಸಂಸ್ಥೆಯನ್ನು ಗೌರವಿಸುತ್ತಾ, ನಾರ್ವೇಯ ನೋಬೆಲ್‌ ಮಂಡಳಿಯು ತಿಳಿಸಿದ್ದು: “ಭೌಗೋಳಿಕ ಶಾಂತಿ ಮತ್ತು ಐಕ್ಯವನ್ನು ಸಾಧಿಸುವ ಒಂದೇ ಮಾರ್ಗವು ವಿಶ್ವಸಂಸ್ಥೆಯ ಮೂಲಕವೇ ಆಗಿದೆ.”

ಇದೆಲ್ಲಾದರ ಹೊರತಾಗಿಯೂ, 1945ರಲ್ಲಿ ಸ್ಥಾಪಿತವಾದ ವಿಶ್ವಸಂಸ್ಥೆಯು, ನೈಜ ಮತ್ತು ಬಾಳುವ ಲೋಕ ಶಾಂತಿಯನ್ನು ತರಶಕ್ತವಾಗಿರುವ ಸರಕಾರವಾಗಿ ರುಜುವಾಗಿದೆಯೇ? ಇಲ್ಲ. ಏಕೆಂದರೆ ಅದರ ಸದಸ್ಯ ರಾಷ್ಟ್ರಗಳ ಸ್ವಾರ್ಥ ಮತ್ತು ರಾಷ್ಟ್ರೀಯತಾವಾದಿ ಮಹತ್ವಾಕಾಂಕ್ಷೆಗಳು ಅದರ ಅನೇಕ ಪ್ರಯತ್ನಗಳನ್ನು ಕೆಡಿಸಿವೆ. ವಿಶ್ವಸಂಸ್ಥೆಯ ಕುರಿತು ಸಾರ್ವಜನಿಕರಿಗಿರುವ ಅಭಿಪ್ರಾಯವು ಒಂದು ವಾರ್ತಾಪತ್ರಿಕೆಯ ಸಂಪಾದಕನ ಮಾತುಗಳಲ್ಲಿ ಹೀಗೆ ತಿಳಿಸಲ್ಪಟ್ಟಿದೆ: ವಿಶ್ವಸಂಸ್ಥೆಯು ಕೇವಲ “ಭೌಗೋಳಿಕಾಭಿಪ್ರಾಯದ ಒಂದು ಸೂಚಕಯಂತ್ರ”ವಾಗಿದೆ, ಮತ್ತು “ಅದರ ಕಾರ್ಯಕ್ರಮದ ಪಟ್ಟಿಯು, ಅನೇಕ ವರುಷಗಳಿಂದ ಚರ್ಚಿಸಲ್ಪಟ್ಟು ಯಾವುದೇ ಪರಿಹಾರವನ್ನು ಕಾಣದ ಸಮಸ್ಯೆಗಳಿಂದ ತುಂಬಿದೆ.” ಆದುದರಿಂದ ಉತ್ತರಿಸಲ್ಪಡದೆ ಉಳಿದಿರುವ ಪ್ರಶ್ನೆಯೇನೆಂದರೆ, ಲೋಕದ ರಾಷ್ಟ್ರಗಳು ಎಂದಾದರೊಂದು ದಿನ ನಿಜವಾಗಿಯೂ ಐಕ್ಯಗೊಳ್ಳುವವೊ?

ಅಂಥ ಐಕ್ಯವು ಬೇಗನೆ ಸಾಧಿಸಲ್ಪಡಲಿದೆ ಎಂದು ಬೈಬಲ್‌ ತಿಳಿಸುತ್ತದೆ. ಆದರೆ ಇದು ಹೇಗೆ ಸಂಭವಿಸುತ್ತದೆ? ಮತ್ತು ಇದನ್ನು ಸಾಧಿಸುವ ಸರಕಾರವು ಯಾವುದು? ಉತ್ತರಗಳಿಗಾಗಿ, ದಯಮಾಡಿ ಮುಂದಿನ ಲೇಖನವನ್ನು ಓದಿರಿ.

[ಪುಟ 3ರಲ್ಲಿರುವ ಚಿತ್ರ]

ಒಂದು ಲೋಕ ಸರಕಾರದ ಅಗತ್ಯವಿದೆ ಎಂಬ ವಿಚಾರವನ್ನು ಐನ್‌ಸ್ಟೈನ್‌ ಬೆಂಬಲಿಸಿದನು

[ಕೃಪೆ]

ಐನ್‌ಸ್ಟೈನ್‌: U.S. National Archives photo