ದೇವರ ರಾಜ್ಯ ಸರಕಾರ ಇಂದು ಒಂದು ನೈಜ ಸಂಗತಿ
ದೇವರ ರಾಜ್ಯ ಸರಕಾರ ಇಂದು ಒಂದು ನೈಜ ಸಂಗತಿ
“ಬೆಳವಣಿಗೆಯ ವಿವಿಧ ಹಂತಗಳಲ್ಲಿರುವ ವಿಭಿನ್ನ ಸಂಸ್ಕೃತಿಗಳುಳ್ಳ ಇಷ್ಟೊಂದು ದೇಶಗಳು ಐಕ್ಯವಾಗುವುದಾದರೂ ಹೇಗೆ? ಇನ್ನೊಂದು ಗ್ರಹದಿಂದ ಒಂದು ದಾಳಿಯಾದರೆ ಮಾತ್ರವೇ ಮಾನವ ಕುಲವು ಐಕ್ಯಗೊಳ್ಳಲು ಸಾಧ್ಯ ಎಂದು ಹೇಳಲಾಗಿದೆ.”—ದಿ ಏಜ್, ಆಸ್ಟ್ರೇಲಿಯದ ವಾರ್ತಾಪತ್ರಿಕೆ.
ಇನ್ನೊಂದು ಗ್ರಹದಿಂದ ಒಂದು ದಾಳಿ? ಇದು ಎಲ್ಲಾ ರಾಷ್ಟ್ರಗಳ ಜನರನ್ನು ಐಕ್ಯಗೊಳಿಸುವುದೋ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲವಾದರೂ, ಬೈಬಲ್ ಪ್ರವಾದನೆಯಾದರೊ ಲೋಕದ ಎಲ್ಲಾ ರಾಷ್ಟ್ರಗಳನ್ನು ಒಂದುಗೂಡಿಸುವಂತೆ ಮಾಡಲಿರುವ ಭಾವೀ ಬಿಕ್ಕಟ್ಟಿನ ಕುರಿತು ತಿಳಿಸುತ್ತದೆ. ಈ ಬಿಕ್ಕಟ್ಟು, ಭೂಬಾಹ್ಯ ಶಕ್ತಿಗಳಿಂದ ಉಂಟಾಗಲಿದೆ.
ಈ ಲೋಕ ಪರಿಸ್ಥಿತಿಯ ಕುರಿತು ಪುರಾತನ ಇಸ್ರಾಯೇಲಿನ ರಾಜ ದಾವೀದನು ಪ್ರವಾದನಾತ್ಮಕವಾಗಿ ಮಾತಾಡಿದ್ದನು. ದೈವಿಕ ಪ್ರೇರಣೆಯಿಂದ ಅವನು ಬರೆದದ್ದು: “ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತಿದ್ದಾರೆ, ಅಧಿಕಾರಿಗಳು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತು ಬೇಡಿಗಳನ್ನು ಮುರಿದು ಬೀಸಾಡೋಣ ಎಂದು ಮಾತಾಡಿಕೊಳ್ಳುತ್ತಾರಲ್ಲಾ.” (ಕೀರ್ತನೆ 2:2, 3; ಅ. ಕೃತ್ಯಗಳು 4:25, 26) ಗಮನಿಸಿರಿ, ಲೋಕದ ಅಧಿಕಾರಿಗಳು, ವಿಶ್ವದ ಸೃಷ್ಟಿಕರ್ತನಾದ ಯೆಹೋವನ ಮತ್ತು ಆತನು ಅಭಿಷೇಕಿಸಿದವನ ಅಂದರೆ ಆತನ ಅಭಿಷಿಕ್ತ ರಾಜನಾದ ಯೇಸು ಕ್ರಿಸ್ತನ ವಿರೋಧವಾಗಿ ಒಟ್ಟಾಗಿ ಸೇರುವರು. ಅದು ಹೇಗೆ ಸಂಭವಿಸುತ್ತದೆ?
ಬೈಬಲ್ ಕಾಲಗಣನಶಾಸ್ತ್ರ ಮತ್ತು ನೆರವೇರಿರುವ ಪ್ರವಾದನೆಗಳಿಗನುಸಾರ, 1914ನೆಯ ವರ್ಷದಲ್ಲಿ, ಯೇಸು ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯವು ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿತು. * ಆ ಸಮಯದಲ್ಲಿ ಲೋಕದ ರಾಷ್ಟ್ರಗಳಿಗೆ ಒಂದೇ ಆಲೋಚನೆಯಿತ್ತು. ಅವು ದೇವರ ನವಜನಿತ ರಾಜ್ಯದ ಪರಮಾಧಿಕಾರಕ್ಕೆ ತಲೆಬಾಗುವ ಬದಲಿಗೆ, ಅಧಿಕಾರಕ್ಕಾಗಿರುವ ಒಂದು ಹೋರಾಟದಲ್ಲಿ, ಅಂದರೆ ಒಂದು ಮಹಾ ಯುದ್ಧ ಅಥವಾ ಮೊದಲನೇ ಲೋಕ ಯುದ್ಧದಲ್ಲಿ ಮುಳುಗಿದ್ದವು.
ಮಾನವ ಅಧಿಕಾರಿಗಳ ಇಂಥ ಪ್ರತಿಕ್ರಿಯೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? ‘ಪರಲೋಕದಲ್ಲಿ ಆಸನಾರೂಢನಾಗಿರುವಾತನು ಅದಕ್ಕೆ ನಗುವನು; ಯೆಹೋವನು ಅವರನ್ನು ಪರಿಹಾಸ್ಯಮಾಡುವನು. ಅನಂತರ ಆತನು ಸಿಟ್ಟಾಗಿ ಕೋಪಾವೇಶದಿಂದ ಅವರನ್ನು ಕಳವಳಗೊಳಿಸುವನು.’ ನಂತರ ಯೆಹೋವನು ತನ್ನ ಮಗನಿಗೆ, ಅಂದರೆ ರಾಜ್ಯದ ಅಭಿಷಿಕ್ತ ರಾಜನಿಗೆ ಹೀಗೆ ಹೇಳುವನು: “ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು. ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವಿ; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ.”—ಕೀರ್ತನೆ 2:4, 5, 8, 9.
ಕಬ್ಬಿಣದ ಗದೆಯಿಂದ ವಿರೋಧಿ ರಾಷ್ಟ್ರಗಳ ಈ ಅಂತಿಮ ಒಡೆಯುವಿಕೆಯು ಅರ್ಮಗೆದೋನಿನಲ್ಲಿ ಅಥವಾ ಹರ್ಮಗೆದೋನಿನಲ್ಲಿ ಸಂಭವಿಸಲಿದೆ. ಈ ಅಂತಿಮ ಘಟನೆಯನ್ನು ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯು, ‘ಭೂಲೋಕದಲ್ಲೆಲ್ಲಿಯೂ ಇರುವ ರಾಜರು’ ಒಟ್ಟುಗೂಡಿಸಲ್ಪಡುವ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಎಂದು ವರ್ಣಿಸುತ್ತದೆ. (ಪ್ರಕಟನೆ 16:14, 16) ದೆವ್ವಗಳ ಪ್ರಭಾವದ ಕೆಳಗೆ, ಅಂತಿಮವಾಗಿ ಭೂಲೋಕದ ಎಲ್ಲಾ ರಾಷ್ಟ್ರಗಳು ಒಂದೇ ಧ್ಯೇಯದಿಂದ ಐಕ್ಯವಾಗುತ್ತವೆ. ಸರ್ವಶಕ್ತ ದೇವರ ವಿರುದ್ಧ ಯುದ್ಧಮಾಡುವುದೇ ಆ ಧೇಯ್ಯ.
ಮಾನವರು ದೇವರ ಪರಮಾಧಿಕಾರಕ್ಕೆ ವಿರುದ್ಧವಾಗಿ ಒಟ್ಟುಗೂಡುವ ಸಮಯವು ಅತಿ ಹತ್ತಿರವಾಗುತ್ತಾ ಇದೆ. ವ್ಯಂಗ್ಯಾತ್ಮಕ ಸಂಗತಿಯೇನೆಂದರೆ, ಅವರ ಈ “ಐಕ್ಯವು” ಅವರಿಗೆ ಯಾವುದೇ ವೈಯಕ್ತಿಕ ಪ್ರಯೋಜನಗಳನ್ನು ತರುವುದಿಲ್ಲ. ಬದಲಾಗಿ ಅವರ ಕೃತ್ಯವು, ಇಡೀ ಮಾನವಕುಲವು ಬಹುಕಾಲದಿಂದ ಕಾಯುತ್ತಿರುವ ಶಾಂತಿಯ ಸಮಯಕ್ಕೆ ಒಂದು ನಾಂದಿಯಾಗಲಿದೆ. ಅದು ಹೇಗೆ? ಆ ಅಂತಿಮ ಯುದ್ಧದಲ್ಲಿ, ದೇವರ ರಾಜ್ಯವು “[ಲೋಕದ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಲೋಕ ಶಾಂತಿಗಾಗಿರುವ ಮಾನವಕುಲದ ಇಚ್ಛೆಯನ್ನು ಪೂರೈಸುವಂಥ ಸರಕಾರವು ಯಾವುದೇ ಮಾನವ ಸಂಸ್ಥೆಯಲ್ಲ, ಬದಲಾಗಿ ದೇವರ ರಾಜ್ಯವೇ ಆಗಿದೆ.
ರಾಜ್ಯ ಸರಕಾರದ ಮುಖ್ಯ ಆಡಳಿತಗಾರ
ಈ ರಾಜ್ಯಕ್ಕಾಗಿಯೇ ಅನೇಕ ಯಥಾರ್ಥ ಜನರು, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸಿದರು. (ಮತ್ತಾಯ 6:10) ದೇವರ ರಾಜ್ಯವು ಮಾನವ ಹೃದಯದಲ್ಲಿರುವ ಒಂದು ಅಗೋಚರ ಸ್ಥಿತಿಯಾಗಿರದೆ, 1914ರಲ್ಲಿ ಸ್ವರ್ಗದಲ್ಲಿ ಸ್ಥಾಪನೆಗೊಂಡಂದಿನಿಂದ ಅನೇಕ ಅದ್ಭುತ ಕೃತ್ಯಗಳನ್ನು ನೆರವೇರಿಸಿರುವ ಒಂದು ನೈಜ ಸರಕಾರವಾಗಿದೆ. ದೇವರ ಸರಕಾರವು ಇಂದು ಸಂಪೂರ್ಣವಾಗಿ ಕಾರ್ಯಕ್ಕಿಳಿದಿರುವ ಒಂದು ನೈಜ ಸರಕಾರವಾಗಿದೆ ಎಂಬುದನ್ನು ರುಜುಪಡಿಸುವ ಕೆಲವು ಪ್ರಾಮುಖ್ಯ ಅಂಶಗಳನ್ನು ನಾವೀಗ ಪರಿಗಣಿಸೋಣ.
ಮೊದಲಾಗಿ, ಅದಕ್ಕೆ ಸಿಂಹಾಸನಾರೂಢನಾದ ಅರಸನಾಗಿರುವ ಯೇಸು ಕ್ರಿಸ್ತನಿಂದ ಮುನ್ನಡೆಸಲ್ಪಡುತ್ತಿರುವ ಶಕ್ತಿಶಾಲಿ ಹಾಗೂ ಪರಿಣಾಮಕಾರಿ ಕಾರ್ಯನಿರ್ವಾಹಕ ಶಾಖೆಯಿದೆ. ಸಾ.ಶ. 33ರಲ್ಲಿ ಯೆಹೋವ ದೇವರು ಯೇಸು ಕ್ರಿಸ್ತನನ್ನು ಕ್ರೈಸ್ತ ಸಭೆಯ ಶಿರಸ್ಸನ್ನಾಗಿ ಮಾಡಿದನು. (ಎಫೆಸ 1:22) ಅಂದಿನಿಂದ ಯೇಸು ತನ್ನ ತಲೆತನವನ್ನು ನಿರ್ವಹಿಸುತ್ತಿದ್ದಾನೆ ಮತ್ತು ಈ ರೀತಿಯಲ್ಲಿ ತನ್ನ ಆಡಳಿತಾತ್ಮಕ ಸಾಮರ್ಥ್ಯವನ್ನು ತೋರಿಸುತ್ತಿದ್ದಾನೆ. ಉದಾಹರಣೆಗೆ, ಮೊದಲನೆಯ ಶತಮಾನದಲ್ಲಿ ಯೂದಾಯದಲ್ಲಿ ಒಂದು ದೊಡ್ಡ ಕ್ಷಾಮವು ತಲೆದೋರಿದಾಗ, ಕ್ರೈಸ್ತ ಸಭೆಯು ತ್ವರಿತವಾಗಿ ಕ್ರಿಯೆಗೈದು ಅದರ ಸದಸ್ಯರಿಗೆ ನೆರವು ನೀಡಿತು. ಒಂದು ಪರಿಹಾರ ಕೆಲಸವು ಸಂಘಟಿಸಲ್ಪಟ್ಟಿತು, ಮತ್ತು ದ್ರವ್ಯ ಸಹಾಯದೊಂದಿಗೆ ಬಾರ್ನಬ ಹಾಗೂ ಸೌಲರನ್ನು ಅಂತಿಯೋಕ್ಯದಿಂದ ಕಳುಹಿಸಲಾಯಿತು.—ಅ. ಕೃತ್ಯಗಳು 11:27-30.
ಇದಕ್ಕಿಂತಲೂ ಹೆಚ್ಚಿನದ್ದನ್ನು ನಾವು ಈಗ ಯೇಸು ಕ್ರಿಸ್ತನಿಂದ ನಿರೀಕ್ಷಿಸಬಹುದು, ಏಕೆಂದರೆ ರಾಜ್ಯ ಸರಕಾರವು ಈಗ ಕಾರ್ಯಾಚರಣೆ ನಡೆಸುತ್ತಿದೆ. ಭೂಕಂಪಗಳು, ಕ್ಷಾಮ, ನೆರೆಹಾವಳಿ, ಚಂಡಮಾರುತ, ಬಿರುಗಾಳಿ, ಅಥವಾ ಜ್ವಾಲಾಮುಖಿ ಸ್ಫೋಟ ಈ ಮುಂತಾದವುಗಳು ಯಾವಾಗಲಾದರೂ ಸಂಭವಿಸಿದರೆ, ಬಾಧಿತ ಕ್ಷೇತ್ರಗಳಲ್ಲಿನ ಜೊತೆ ವಿಶ್ವಾಸಿಗಳಿಗೆ ಹಾಗೂ ಇತರರಿಗೆ ಸಹಾಯವನ್ನು ನೀಡಲು ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯು ತ್ವರಿತವಾಗಿ ಕ್ರಿಯೆಗೈಯುತ್ತದೆ. ಉದಾಹರಣೆಗೆ, 2001ರ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಎಲ್ ಸಾಲ್ವಡಾರ್‌ನಲ್ಲಿ ಧ್ವಂಸಕಾರಿ ಭೂಕಂಪಗಳು ಸಂಭವಿಸಿದಾಗ, ದೇಶದ
ಎಲ್ಲಾ ಭಾಗಗಳಲ್ಲಿಯೂ ಪರಿಹಾರ ಚಟುವಟಿಕೆಗಳು ಸಂಘಟಿಸಲ್ಪಟ್ಟವು, ಮತ್ತು ಕೆನಡ, ಗ್ವಾಟೆಮಾಲ, ಹಾಗೂ ಅಮೆರಿಕದ ಯೆಹೋವನ ಸಾಕ್ಷಿಗಳ ಗುಂಪುಗಳು ಸಹಾಯವನ್ನು ಒದಗಿಸಿದವು. ಅವರ ಆರಾಧನಾ ಸ್ಥಳಗಳಲ್ಲಿ ಮೂರನ್ನು ಮತ್ತು 500ಕ್ಕಿಂತಲೂ ಹೆಚ್ಚು ಮನೆಗಳನ್ನು ಸ್ವಲ್ಪ ಸಮಯದೊಳಗಾಗಿ ಪುನರ್‌ನಿರ್ಮಿಸಲಾಯಿತು.ದೇವರ ರಾಜ್ಯ ಸರಕಾರದ ಪ್ರಜೆಗಳು
ದೇವರ ಸ್ವರ್ಗೀಯ ರಾಜ್ಯವು 1914ರಲ್ಲಿ ಸ್ಥಾಪನೆಗೊಂಡಂದಿನಿಂದ, ಲೋಕದಾದ್ಯಂತ ಇರುವ ಜನರಿಂದ ಅದು ತನ್ನ ಪ್ರಜೆಗಳನ್ನು ಒಟ್ಟುಗೂಡಿಸುತ್ತಾ ಇದೆ. ಇದು ಯೆಶಾಯದಲ್ಲಿ ದಾಖಲಾಗಿರುವ ಒಂದು ಗಮನಾರ್ಹ ಪ್ರವಾದನೆಯ ನೆರವೇರಿಕೆಯಲ್ಲಿದೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು [ಉನ್ನತಕ್ಕೇರಿಸಲ್ಪಟ್ಟಿರುವ ಆತನ ಸತ್ಯಾರಾಧನೆ] ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.” ಈ ಪ್ರವಾದನೆಯು, “ಬಹು ಜನಾಂಗದವರು” ಆ ಬೆಟ್ಟಕ್ಕೆ ಹೋಗುವರು ಮತ್ತು ಯೆಹೋವನ ಸಲಹೆಗಳನ್ನು ಹಾಗೂ ನಿಯಮಗಳನ್ನು ಸ್ವೀಕರಿಸುವರು ಎಂಬುದನ್ನು ತೋರಿಸುತ್ತದೆ.—ಯೆಶಾಯ 2:2, 3.
ಈ ಚಟುವಟಿಕೆಯು, ಆಧುನಿಕ ಸಮಯಗಳಲ್ಲೇ ಅತಿ ಮಹತ್ವಪೂರ್ಣವಾದ ಚಳವಳಿಯನ್ನು, ಅಂದರೆ ಲೋಕದಾದ್ಯಂತ 230ಕ್ಕಿಂತ ಹೆಚ್ಚಿನ ದೇಶದ್ವೀಪಗಳಲ್ಲಿ 60,00,000ಕ್ಕಿಂತಲೂ ಹೆಚ್ಚಿನ ಕ್ರೈಸ್ತರ ಒಂದು ಅಂತಾರಾಷ್ಟ್ರೀಯ ಸಹೋದರತ್ವವನ್ನು ಫಲಿಸಿದೆ. ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ, ವಿವಿಧ ರಾಷ್ಟ್ರೀಯ ಹಿನ್ನೆಲೆಗಳು, ಸಂಸ್ಕೃತಿಗಳು ಮತ್ತು ಭಾಷೆಗಳ ತಡೆಗಳನ್ನು ಭೇದಿಸಿ ಬಂದಿರುವ ದೊಡ್ಡ ಜನಸಮೂಹಗಳು ಪ್ರೀತಿ, ಶಾಂತಿ, ಮತ್ತು ಐಕ್ಯತೆಯಿಂದ ಒಟ್ಟಾಗಿರುವುದನ್ನು ನೋಡಿ ಪ್ರೇಕ್ಷಕರು ಅನೇಕವೇಳೆ ದಂಗಾಗುತ್ತಾರೆ. (ಅ. ಕೃತ್ಯಗಳು 10:34, 35) ನೂರಾರು ಕುಲಸಂಬಂಧಿತ ಗುಂಪುಗಳ ಜನರು ಶಾಂತಿ ಮತ್ತು ಐಕ್ಯತೆಯಿಂದ ಒಂದಾಗಿರುವಂತೆ ಮಾಡಶಕ್ತವಾಗಿರುವ ಒಂದು ಸರಕಾರವು, ಪ್ರಭಾವಕಾರಿಯೂ ಸ್ಥಿರವೂ ಹಾಗೂ ಮುಖ್ಯವಾಗಿ ನೈಜವೂ ಆದ ಸರಕಾರವಾಗಿರಬೇಕು ಎಂಬುದನ್ನು ನೀವು ಒಪ್ಪುವುದಿಲ್ಲವೇ?
ದೇವರ ರಾಜ್ಯ ಮತ್ತು ಶಿಕ್ಷಣ
ಪ್ರತಿಯೊಂದು ಸರಕಾರಕ್ಕೆ ಅದರದ್ದೇ ಆದ ಮಟ್ಟಗಳಿರುತ್ತವೆ ಮತ್ತು ಅದರ ಪ್ರಜೆಗಳು ಅವುಗಳನ್ನು ಪಾಲಿಸಬೇಕೆಂದು ನಿರೀಕ್ಷಿಲಾಗುತ್ತದೆ. ಯಾರೆಲ್ಲಾ ಆ ಸರಕಾರದ ಪ್ರಜೆಯಾಗಿ ಬದುಕಲು ಬಯಸುತ್ತಾರೋ ಅವರು ಆ ಮಟ್ಟಗಳನ್ನು ತಲಪಲೇಬೇಕಾಗಿದೆ. ಅಂತೆಯೇ, ದೇವರ ರಾಜ್ಯಕ್ಕೂ ಅದರದ್ದೇ ಆದ ಮಟ್ಟಗಳಿವೆ ಮತ್ತು ಅದರ ಪ್ರಜೆಗಳಾಗಿ ಅರ್ಹತೆಯನ್ನು ಪಡೆಯಬೇಕಾದವರು ಆ ಮಟ್ಟಗಳನ್ನು ತಲಪಲೇಬೇಕಾಗಿದೆ. ಆದರೆ, ವಿಭಿನ್ನ ಹಿನ್ನಲೆಯಿಂದ ಬಂದಿರುವ ಜನರು ಒಂದೇ ರೀತಿಯ ಮಟ್ಟಗಳನ್ನು ಸ್ವೀಕರಿಸಿ ಅವುಗಳನ್ನು ಅನುಸರಿಸುವಂತೆ ಮಾಡುವುದು ನಿಜವಾಗಿಯೂ ಒಂದು ದೊಡ್ಡ ಕೆಲಸವಾಗಿದೆ. ಇಲ್ಲಿ ನಾವು ದೇವರ ರಾಜ್ಯದ ನೈಜತೆಗೆ ಇನ್ನೊಂದು ಪುರಾವೆಯನ್ನು ಕಾಣುತ್ತೇವೆ. ಅದೇನೆಂದರೆ, ಜನರ ಮನಸ್ಸನ್ನು ಮಾತ್ರವಲ್ಲದೆ ಅವರ ಹೃದಯಗಳನ್ನು ಸಹ ತಲಪಿ, ಬದಲಾವಣೆಗಳನ್ನು ಮಾಡಶಕ್ತವಾಗಿರುವ ಅದರ ಪ್ರಭಾವಕಾರಿ ಶಿಕ್ಷಣ ಕಾರ್ಯಕ್ರಮವೇ ಆಗಿದೆ.
ಈ ಪಂಥಾಹ್ವಾನದಾಯಕವಾದ ಕೆಲಸವನ್ನು ರಾಜ್ಯ ಸರಕಾರವು ಹೇಗೆ ಪೂರೈಸುತ್ತದೆ? “ಮನೆಮನೆಯಲ್ಲಿ” ಸಾರುವ ಮತ್ತು ವ್ಯಕ್ತಿಗತವಾಗಿ ದೇವರ ವಾಕ್ಯವನ್ನು ಕಲಿಸುವ ಅಪೊಸ್ತಲರ ವಿಧಾನದ ಮೂಲಕವಾಗಿಯೇ. (ಅ. ಕೃತ್ಯಗಳು 5:42; 20:20) ಈ ಶಿಕ್ಷಣ ವಿಧಾನವು ಎಷ್ಟು ಪ್ರಭಾವಕಾರಿಯಾಗಿದೆ? ಜ್ಯಾಕ್ ಜಾನ್ಸನ್ ಎಂಬ ಒಬ್ಬ ಕ್ಯಾಥೊಲಿಕ್ ಪಾದ್ರಿಯು, ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನಮಾಡದಂತೆ ಒಬ್ಬಾಕೆ ಸ್ತ್ರೀಯನ್ನು ತಡೆಯಲು ಮಾಡಿದ ಪ್ರಯತ್ನಗಳ ಕುರಿತು ಕೆನಡದ ವಾರಪತ್ರಿಕೆಯಲ್ಲಿ ಬರೆದದ್ದು: “ನಾನು ಬಹಳ ಗಲಿಬಿಲಿಗೊಂಡೆ ಮತ್ತು ನಾನೊಂದು ಸೋಲುವ ಕದನದಲ್ಲಿ ಭಾಗವಹಿಸುತ್ತಿದ್ದೇನೆಂದು ಗ್ರಹಿಸಿದೆ. . . . ಈ ಯೆಹೋವನ ಸಾಕ್ಷಿ ಸ್ತ್ರೀಯರು, ಮನೆಗೇ ನಿರ್ಬಂಧಿತಳಾಗಿದ್ದ ಈ ಯುವ ತಾಯಿಯೊಂದಿಗೆ ಅನೇಕ ತಿಂಗಳುಗಳಿಂದ ಅರ್ಥಭರಿತ ಸಂಬಂಧವನ್ನು ಬೆಸೆದಿದ್ದರೆಂಬುದನ್ನು ಮನಗಂಡೆ. ಅವರು ಅವಳಿಗೆ ಸಹಾಯಮಾಡುತ್ತಾ, ಅವಳೊಂದಿಗೆ ಸ್ನೇಹವನ್ನು ಬೆಳೆಸುತ್ತಾ, ಒಂದು ಅರ್ಥಭರಿತವಾದ ಹೃದಯದ ಬಾಂಧವ್ಯವನ್ನು ಬೆಸೆಯುತ್ತಾ ಅವಳೊಂದಿಗೆ ಒಂದು ಆಪ್ತ ಸಂಬಂಧದೊಳಕ್ಕೆ ಬಂದರು. ಅವಳು ಅತಿ ಬೇಗನೆ ಅವರ ಧರ್ಮದ ಒಬ್ಬ ಕ್ರಿಯಾಶೀಲ ಸದಸ್ಯಳಾದಳು ಮತ್ತು ಅದು ಸಂಭವಿಸದಂತೆ ತಡೆಯಲು ನನ್ನಿಂದ ಏನನ್ನೂ ಮಾಡಸಾಧ್ಯವಾಗಲಿಲ್ಲ.” ಯೆಹೋವನ ಸಾಕ್ಷಿಗಳು ಕಲಿಸಿದ ಬೈಬಲ್ ಸಂದೇಶ ಮತ್ತು ಅವರ ಕ್ರೈಸ್ತ ನಡತೆಯಿಂದ, ಹಿಂದೆ ಒಬ್ಬ ಕ್ಯಾಥೊಲಿಕಳಾಗಿದ್ದ ಈ ಸ್ತ್ರೀಯ ಹೃದಯವು ಪ್ರಭಾವಿಸಲ್ಪಟ್ಟಂತೆ ಲೋಕವ್ಯಾಪಕವಾಗಿ ಲಕ್ಷಾಂತರ ಜನರ ಹೃದಯಗಳು ಪ್ರಭಾವಿಸಲ್ಪಡುತ್ತಿವೆ.
ಈ ರೀತಿಯ ಶಿಕ್ಷಣವು—ರಾಜ್ಯ ಶಿಕ್ಷಣ—ಬೈಬಲಿನ ಮೇಲೆ ಆಧಾರಿತವಾಗಿದೆ. ಇದು, ಬೈಬಲಿನ ಮೌಲ್ಯಗಳನ್ನು ಮತ್ತು ನೈತಿಕ ಮಟ್ಟಗಳನ್ನು ಎತ್ತಿಹಿಡಿಯುತ್ತದೆ. ಯಾವುದೇ ಹಿನ್ನೆಲೆಗಳ ಹೊರತೂ ಜನರು ಒಬ್ಬರನ್ನೊಬ್ಬರು ಪ್ರೀತಿಸುವಂತೆಯೂ ಗೌರವಿಸುವಂತೆಯೂ ಇದು ಕಲಿಸುತ್ತದೆ. (ಯೋಹಾನ 13:34, 35) “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ” ಎಂಬ ಸಲಹೆಗೂ ಪ್ರತಿಕ್ರಿಯೆ ತೋರಿಸುವಂತೆ ಇದು ಜನರಿಗೆ ಸಹಾಯಮಾಡುತ್ತದೆ. (ರೋಮಾಪುರ 12:2) ತಮ್ಮ ಹಳೇ ಜೀವನ ಮಾರ್ಗವನ್ನು ತ್ಯಜಿಸಿ, ರಾಜ್ಯ ಸರಕಾರದ ನಿಯಮಗಳು ಮತ್ತು ಮೂಲತತ್ತ್ವಗಳಿಗೆ ಸಂತೋಷದಿಂದ ತಮ್ಮನ್ನು ಹೊಂದಿಸಿಕೊಳ್ಳುವ ಮೂಲಕ, ಲಕ್ಷಾಂತರ ಜನರು ಈಗ ನಿಜ ಶಾಂತಿ ಮತ್ತು ಸಂತೋಷವನ್ನು ಹಾಗೂ ಭವಿಷ್ಯತ್ತಿಗಾಗಿ ಉಜ್ವಲ ಪ್ರತೀಕ್ಷೆಗಳನ್ನು ಕಂಡುಕೊಂಡಿದ್ದಾರೆ.—ಕೊಲೊಸ್ಸೆ 3:9-11.
ಈ ಲೋಕವ್ಯಾಪಕ ಐಕ್ಯತೆಯನ್ನು ಸಾಧಿಸುವುದರಲ್ಲಿ, ಕಾವಲಿನಬುರುಜು ಎಂಬ ಈ ಪತ್ರಿಕೆಯು ಒಂದು ಎದ್ದುಕಾಣುವ ಸಹಾಯಕವಾಗಿದೆ. ಸಂಘಟಿತ ಭಾಷಾಂತರ ವಿಧಾನಗಳು ಮತ್ತು ಬಹುಭಾಷೆಯ ಪ್ರಕಾಶನ ಸಲಕರಣೆಯ ಮೂಲಕ, ಕಾವಲಿನಬುರುಜು ಪತ್ರಿಕೆಯ ಮುಖ್ಯ ಲೇಖನಗಳು ಏಕಕಾಲಿಕವಾಗಿ 135 ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತಿವೆ, ಮತ್ತು ಲೋಕವ್ಯಾಪಕವಾಗಿ ಅದರ ಓದುಗರಲ್ಲಿ 95 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಏಕಕಾಲದಲ್ಲೇ ತಮ್ಮ ಸ್ವಂತ ಭಾಷೆಯಲ್ಲಿ ಅದರಲ್ಲಿರುವ ಮಾಹಿತಿಯನ್ನು ಅಧ್ಯಯನಮಾಡಬಲ್ಲರು.
ಒಬ್ಬ ಮಾರ್ಮನ್ ಬರಹಗಾರನು ತನ್ನ ಸ್ವಂತ ಚರ್ಚಿನ ಹೊರಗೆ ನಡೆಯುತ್ತಿರುವ ಅತಿ ಶ್ರೇಷ್ಠ ಮಿಷನೆರಿ ಯಶಸ್ಸುಗಳ ಒಂದು ಪಟ್ಟಿಯನ್ನು ಮಾಡಿದನು. ಅದರಲ್ಲಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಡುತ್ತಿರುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಅತ್ಯುತ್ತಮವಾದ ಸೌವಾರ್ತಿಕ ಪತ್ರಿಕೆಗಳು ಎಂದು ಪಟ್ಟಿಮಾಡುತ್ತಾ ಅವನು ತಿಳಿಸಿದ್ದು: “‘ಕಾವಲಿನಬುರುಜು’ ಮತ್ತು ‘ಎಚ್ಚರ!’ ಪತ್ರಿಕೆಗಳು ಜನರಲ್ಲಿ ಸ್ವತೃಪ್ತ ಮನೋಭಾವವನ್ನು ಬೆಳೆಸುತ್ತವೆ ಎಂದು ಯಾರೂ ದೂರುಹೊರಿಸಸಾಧ್ಯವಿಲ್ಲ, ಅದಕ್ಕೆ ವ್ಯತಿರಿಕ್ತವಾಗಿ ಅವು ಜನರಲ್ಲಿ ಅರಿವನ್ನು ಮೂಡಿಸುತ್ತವೆ. ಇದನ್ನು ಬೇರೆ ಯಾವುದೇ ಧಾರ್ಮಿಕ ಸಾಹಿತ್ಯಗಳಲ್ಲಿ ನಾನು ಬಹು ಅಪರೂಪವಾಗಿ ಗಮನಿಸಿದ್ದೇನೆ. ವಾಸ್ತವಾಂಶಗಳನ್ನು, ಚೆನ್ನಾಗಿ ಸಂಶೋಧಿಸಲ್ಪಟ್ಟಿರುವ ವಿಷಯಗಳನ್ನು, ಮತ್ತು ನಿಜ ಜೀವನಕ್ಕೆ ಉಪಯುಕ್ತವಾಗಿರುವ ಅಂಶಗಳನ್ನು ಹೊಂದಿರುವ ‘ಕಾವಲಿನಬುರುಜು’ ಮತ್ತು ‘ಎಚ್ಚರ!’ ಪತ್ರಿಕೆಗಳು ಬಹಳ ಚೈತನ್ಯದಾಯಕವಾಗಿವೆ.”
ದೇವರ ಸರಕಾರವು ನೈಜ ಸಂಗತಿಯಾಗಿದೆ ಮತ್ತು ಈಗ ಪೂರ್ಣ ಕಾರ್ಯಾಚರಣೆಯಲ್ಲಿದೆ ಎಂಬುದಕ್ಕೆ ರುಜುವಾತುಗಳು ಹೇರಳವಾಗಿವೆ. ಯೆಹೋವನ ಸಾಕ್ಷಿಗಳು ಬಹು ಸಂತೋಷದಿಂದಲೂ ಉತ್ಸುಕತೆಯಿಂದಲೂ “ರಾಜ್ಯದ ಈ ಸುವಾರ್ತೆ”ಯನ್ನು ತಮ್ಮ ನೆರೆಯವರೊಂದಿಗೆ ಹಂಚಿಕೊಳ್ಳುತ್ತಾ, ಅವರೂ ಅದರ ಪ್ರಜೆಗಳಾಗುವಂತೆ ಆಮಂತ್ರಿಸುತ್ತಾರೆ. (ಮತ್ತಾಯ 24:14) ಅಂಥ ಪ್ರತೀಕ್ಷೆಯು ನಿಮ್ಮ ಮನಸ್ಸಿಗೆ ಹಿಡಿಸುತ್ತದೋ? ಯಾರು ರಾಜ್ಯದ ಮಟ್ಟಗಳಿಗೆ ಅನುಸಾರವಾಗಿ ಜೀವಿಸಲು ಶಿಕ್ಷಣವನ್ನು ಪಡೆಯುತ್ತಿದ್ದಾರೋ ಮತ್ತು ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸುತ್ತಿದ್ದಾರೋ ಅವರೊಂದಿಗೆ ಸಹವಾಸಿಸುವ ಮೂಲಕ, ಬರುವಂಥ ಆಶೀರ್ವಾದಗಳಲ್ಲಿ ನೀವು ಸಹ ಆನಂದಿಸಬಲ್ಲಿರಿ. ಇನ್ನೂ ಉತ್ತಮ ಸಂಗತಿಯೇನೆಂದರೆ, “ನೀತಿಯು ವಾಸವಾಗಿರುವ” ವಾಗ್ದತ್ತ ನೂತನ ಲೋಕದಲ್ಲಿ ರಾಜ್ಯಾಡಳಿತದ ಕೆಳಗೆ ಜೀವಿಸುವ ನಿರೀಕ್ಷೆಯಲ್ಲಿ ನೀವು ಆನಂದಿಸಬಲ್ಲಿರಿ.—2 ಪೇತ್ರ 3:13.
[ಪಾದಟಿಪ್ಪಣಿ]
^ ಪ್ಯಾರ. 5 ವಿವರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ “ದೇವರ ರಾಜ್ಯವು ಆಳುತ್ತದೆ” ಎಂಬ 10ನೇ ಅಧ್ಯಾಯದ 90-7ನೇ ಪುಟಗಳನ್ನು ನೋಡಿರಿ.
[ಪುಟ 4, 5ರಲ್ಲಿರುವ ಚಿತ್ರ]
ಇಸವಿ 1914ರಲ್ಲಿ ರಾಷ್ಟ್ರಗಳು ಒಂದು ಲೋಕ ಯುದ್ಧದಲ್ಲಿ ಮುಳುಗಿದವು
[ಪುಟ 6ರಲ್ಲಿರುವ ಚಿತ್ರಗಳು]
ಸ್ವಯಂಪ್ರೇರಿತ ಪರಿಹಾರ ಕೆಲಸವು, ಕ್ರಿಯೆಯಲ್ಲಿ ತೋರಿಸಲ್ಪಡುವ ಕ್ರೈಸ್ತ ಪ್ರೀತಿಯ ರುಜುವಾತಾಗಿದೆ
[ಪುಟ 7ರಲ್ಲಿರುವ ಚಿತ್ರ]
ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಒಂದೇ ರೀತಿಯ ಶಿಕ್ಷಣ ಕಾರ್ಯಕ್ರಮದಿಂದ ಪ್ರಯೋಜನಪಡೆಯುತ್ತಾರೆ