ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೊಡ್ಡತನದ ವಿಷಯದಲ್ಲಿ ಕ್ರಿಸ್ತನಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು

ದೊಡ್ಡತನದ ವಿಷಯದಲ್ಲಿ ಕ್ರಿಸ್ತನಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು

ದೊಡ್ಡತನದ ವಿಷಯದಲ್ಲಿ ಕ್ರಿಸ್ತನಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು

“ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು.”​—⁠ಮತ್ತಾಯ 20:⁠26.

ಕೈರೋದ ಸುಮಾರು 500 ಕಿಲೊಮೀಟರುಗಳಷ್ಟು ದಕ್ಷಿಣಕ್ಕಿರುವ ಥೀಬ್ಸ್‌ನ (ಆಧುನಿಕ ದಿನದ ಕಾರ್ನಾಕ್‌) ಪುರಾತನ ಐಗುಪ್ತ್ಯ ಪಟ್ಟಣದ ಬಳಿ, IIIನೆಯ ಫರೋಹ ಆಮನ್‌ಹೋಟೆಪ್‌ನ 60 ಅಡಿಗಳಷ್ಟು ಎತ್ತರದ ಒಂದು ಪ್ರತಿಮೆಯು ನಿಲ್ಲಿಸಲ್ಪಟ್ಟಿದೆ. ಒಬ್ಬನು ಆ ಬೃಹತ್‌ ಪ್ರತಿಮೆಯನ್ನು ನೋಡುವಾಗ, ಅದಕ್ಕೆ ಹೋಲಿಕೆಯಲ್ಲಿ ತಾನು ತೀರ ಕುಬ್ಜನು ಎಂಬ ಅನಿಸಿಕೆಯಂತೂ ಉಂಟಾಗದೆ ಇರುವುದಿಲ್ಲ. ನಿಸ್ಸಂಶಯವಾಗಿಯೂ, ಫರೋಹನ ಬಗ್ಗೆ ಪೂಜ್ಯಭಾವವನ್ನು ಮೂಡಿಸಲಿಕ್ಕಾಗಿ ಸ್ಥಾಪಿಸಲ್ಪಟ್ಟಿರುವ ಈ ಸ್ಮಾರಕವು, ದೊಡ್ಡತನದ ವಿಷಯದಲ್ಲಿ ಲೋಕಕ್ಕಿರುವ ದೃಷ್ಟಿಕೋನದ ಒಂದು ಸಂಕೇತವಾಗಿದೆ. ಸಾಧ್ಯವಿರುವಷ್ಟು ಹೆಚ್ಚು ಮಟ್ಟಿಗೆ ಒಬ್ಬನು ತನ್ನನ್ನು, ಒಬ್ಬ ದೊಡ್ಡ ಮತ್ತು ಅಗ್ರಗಣ್ಯ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವುದು ಹಾಗೂ ಇತರರನ್ನು ತೀರ ಕ್ಷುಲ್ಲಕರನ್ನಾಗಿ ಮಾಡುವುದೇ ಲೋಕದ ದೃಷ್ಟಿಕೋನವಾಗಿದೆ.

2 ದೊಡ್ಡತನದ ಕುರಿತಾದ ಈ ದೃಷ್ಟಿಕೋನವನ್ನು ಯೇಸು ಕ್ರಿಸ್ತನು ಕಲಿಸಿದ ದೃಷ್ಟಿಕೋನಕ್ಕೆ ತುಲನೆಮಾಡಿರಿ. ಯೇಸು ತನ್ನ ಹಿಂಬಾಲಕರಿಗೆ “ಕರ್ತನೂ ಗುರುವೂ” ಆಗಿದ್ದನಾದರೂ, ಇತರರ ಸೇವೆಮಾಡುವುದರಿಂದ ದೊಡ್ಡತನವು ಲಭಿಸುತ್ತದೆ ಎಂದು ಅವನು ಅವರಿಗೆ ಕಲಿಸಿದನು. ತನ್ನ ಭೂಜೀವಿತದ ಕೊನೆಯ ದಿನದಂದು, ತನ್ನ ಶಿಷ್ಯರ ಕಾಲುಗಳನ್ನು ತೊಳೆಯುವ ಮೂಲಕ ಯೇಸು ತಾನು ಏನನ್ನು ಕಲಿಸಿದನೋ ಅದರ ಅರ್ಥವನ್ನು ರುಜುಪಡಿಸಿದನು. ಅದೆಷ್ಟು ದೀನಭಾವದ ಸೇವೆಯಾಗಿತ್ತು! (ಯೋಹಾನ 13:​4, 5, 14) ಇತರರ ಸೇವೆಮಾಡುವುದು ಅಥವಾ ಇತರರಿಂದ ಸೇವೆಮಾಡಿಸಿಕೊಳ್ಳುವುದು​—⁠ಇವೆರಡರಲ್ಲಿ ಯಾವುದು ನಿಮಗೆ ಹೆಚ್ಚು ಹಿಡಿಸುತ್ತದೆ? ಕ್ರಿಸ್ತನ ಮಾದರಿಯು, ಅವನಂತೆಯೇ ದೀನಭಾವದವರಾಗಿರುವ ಬಯಕೆಯ ಕಿಡಿಯನ್ನು ನಿಮ್ಮಲ್ಲಿ ಹೊತ್ತಿಸುತ್ತದೋ? ಹಾಗಿರುವಲ್ಲಿ, ದೊಡ್ಡತನದ ಬಗ್ಗೆ ಲೋಕದಲ್ಲಿ ಸರ್ವಸಾಮಾನ್ಯವಾಗಿರುವ ದೃಷ್ಟಿಕೋನಕ್ಕೆ ವ್ಯತಿರಿಕ್ತವಾಗಿ ಕ್ರಿಸ್ತನ ದೃಷ್ಟಿಕೋನವೇನೆಂಬುದನ್ನು ನಾವೀಗ ಪರಿಶೀಲಿಸೋಣ.

ದೊಡ್ಡತನದ ವಿಷಯದಲ್ಲಿ ಲೋಕದ ದೃಷ್ಟಿಕೋನವನ್ನು ತ್ಯಜಿಸಿರಿ

3 ದೊಡ್ಡತನದ ಕುರಿತಾದ ಲೋಕದ ದೃಷ್ಟಿಕೋನವು ಅವನತಿಗೆ ನಡಿಸುತ್ತದೆ ಎಂಬುದನ್ನು ತೋರಿಸುವಂಥ ಅನೇಕ ಬೈಬಲ್‌ ಉದಾಹರಣೆಗಳಿವೆ. ಎಸ್ತೇರಳು ಹಾಗೂ ಮೊರ್ದೆಕೈಯ ದಿನಗಳಲ್ಲಿ ಪಾರಸಿಯ ರಾಜನ ಆಸ್ಥಾನದಲ್ಲಿ ಅಗ್ರಗಣ್ಯನಾಗಿದ್ದ ಹಾಮಾನನ ಕುರಿತು ಆಲೋಚಿಸಿರಿ. ಮಹಿಮೆಯನ್ನು ಪಡೆದುಕೊಳ್ಳಲಿಕ್ಕಾಗಿದ್ದ ಹಾಮಾನನ ಹಂಬಲವು, ಅವನ ಅವಮರ್ಯಾದೆ ಹಾಗೂ ಮರಣಕ್ಕೆ ಕಾರಣವಾಯಿತು. (ಎಸ್ತೇರಳು 3:5; 6:10-12; 7:9, 10) ತನ್ನ ಅಧಿಕಾರದ ಉತ್ತುಂಗದಲ್ಲಿದ್ದಾಗಲೇ ಹುಚ್ಚುತನಕ್ಕೆ ಬಲಿಯಾದ ಗರ್ವಿಷ್ಠ ನೆಬೂಕದ್ನೆಚ್ಚರನ ಕುರಿತಾಗಿ ಏನು? ದೊಡ್ಡತನದ ಕುರಿತಾದ ಅವನ ತಪ್ಪು ಕಲ್ಪನೆಯು ಈ ಮಾತುಗಳಲ್ಲಿ ವ್ಯಕ್ತಪಡಿಸಲ್ಪಟ್ಟಿತು: “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್‌.” (ದಾನಿಯೇಲ 4:30) ಇನ್ನೊಂದು ಉದಾಹರಣೆಯು ಅಹಂಕಾರಿಯಾಗಿದ್ದ Iನೆಯ ಹೆರೋದ ಅಗ್ರಿಪ್ಪನದ್ದಾಗಿದೆ. ಅವನು ದೇವರಿಗೆ ಘನವನ್ನು ಸಲ್ಲಿಸುವುದಕ್ಕೆ ಬದಲಾಗಿ ತನಗೆ ಅನರ್ಹವಾಗಿದ್ದ ಘನವನ್ನು ಸ್ವೀಕರಿಸಿದನು. ಇದಕ್ಕಾಗಿ “ಅವನು ಹುಳಬಿದ್ದು ಸತ್ತನು.” (ಅ. ಕೃತ್ಯಗಳು 12:21-23) ದೊಡ್ಡತನದ ಕುರಿತಾದ ಯೆಹೋವನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ವಿಫಲರಾದದ್ದು, ಈ ಎಲ್ಲಾ ಪುರುಷರ ಅವಮಾನಕರ ದುರ್ಗತಿಗೆ ಮುನ್ನಡಿಸಿತು.

4 ನಮಗೆ ಮರ್ಯಾದೆ ಹಾಗೂ ಗೌರವವನ್ನು ತರುವಂಥ ರೀತಿಯಲ್ಲಿ ನಮ್ಮ ಜೀವಿತವನ್ನು ಉಪಯೋಗಿಸಲು ಬಯಸುವುದು ಯೋಗ್ಯವಾದದ್ದೇ. ಆದರೂ, ಈ ಬಯಕೆಯನ್ನೇ ಪಿಶಾಚನು ತನ್ನ ಸ್ವಂತ ಮಹತ್ವಾಕಾಂಕ್ಷೆಗಳ ಒಂದು ಪ್ರತಿಬಿಂಬವಾಗಿರುವ ಅಹಂಕಾರಭರಿತ ಮನೋಭಾವವನ್ನು ಉತ್ತೇಜಿಸುವ ಮೂಲಕ ತನ್ನ ಲಾಭಕ್ಕಾಗಿ ಬಳಸುತ್ತಾನೆ. (ಮತ್ತಾಯ 4:​8, 9) ಅವನು ‘ಈ ಪ್ರಪಂಚದ ದೇವರಾಗಿದ್ದಾನೆ’ ಎಂಬುದನ್ನು ಎಂದಿಗೂ ಮರೆಯದಿರಿ, ಮತ್ತು ಅವನು ಭೂಮಿಯ ಮೇಲೆ ತನ್ನ ಆಲೋಚನೆಯನ್ನು ಪ್ರವರ್ಧಿಸುವ ಪಣತೊಟ್ಟಿದ್ದಾನೆ. (2 ಕೊರಿಂಥ 4:4; ಎಫೆಸ 2:2; ಪ್ರಕಟನೆ 12:9) ಇಂಥ ಆಲೋಚನೆಯ ಮೂಲನು ಯಾರೆಂಬುದು ಕ್ರೈಸ್ತರಿಗೆ ಗೊತ್ತಿರುವುದರಿಂದ, ಅವರು ದೊಡ್ಡತನದ ವಿಷಯದಲ್ಲಿ ಲೋಕದ ದೃಷ್ಟಿಕೋನವನ್ನು ತ್ಯಜಿಸುತ್ತಾರೆ.

5 ಪಿಶಾಚನು ಪ್ರವರ್ಧಿಸುವ ಒಂದು ಸಂಗತಿಯು, ಲೋಕದಲ್ಲಿ ಒಂದು ದೊಡ್ಡ ಹೆಸರನ್ನು ಪಡೆದುಕೊಳ್ಳುವುದು, ಜನರಿಂದ ಹೊಗಳಿಸಿಕೊಳ್ಳುವುದು, ಮತ್ತು ಬೇಕಾದಷ್ಟು ಹಣವನ್ನು ಸಂಪಾದಿಸುವುದು ತಾನೇ ಸಂತೋಷಭರಿತ ಜೀವಿತವನ್ನು ಕೊಡುತ್ತದೆ ಎಂಬುದೇ. ಇದು ಸತ್ಯವೋ? ಸಾಧನೆ, ಮನ್ನಣೆ, ಮತ್ತು ಐಶ್ವರ್ಯವು ಸಂತೃಪ್ತ ಜೀವನದ ಖಾತ್ರಿಯನ್ನು ನೀಡುತ್ತದೋ? ಇಂಥ ಆಲೋಚನೆಯಿಂದ ನಾವು ಮೋಸಹೋಗದಂತೆ ಬೈಬಲ್‌ ಎಚ್ಚರಿಕೆ ನೀಡುತ್ತದೆ. ಜ್ಞಾನಿಯಾದ ಅರಸ ಸೊಲೊಮೋನನು ಬರೆದುದು: “ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.” (ಪ್ರಸಂಗಿ 4:4) ಲೋಕದಲ್ಲಿ ಸ್ಥಾನಮಾನವನ್ನು ಹಾಗೂ ಐಶ್ವರ್ಯವನ್ನು ಗಳಿಸಲಿಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಅನೇಕ ವ್ಯಕ್ತಿಗಳು, ಈ ಪ್ರೇರಿತ ಬೈಬಲ್‌ ಸಲಹೆಯ ಸತ್ಯತೆಯನ್ನು ದೃಢಪಡಿಸಬಲ್ಲರು. ಒಂದು ಉದಾಹರಣೆಯನ್ನು ತೆಗೆದುಕೊಳ್ಳಿ. ಇದು, ಮನುಷ್ಯನನ್ನು ಚಂದ್ರನಲ್ಲಿಗೆ ಕೊಂಡೊಯ್ದ ಆಕಾಶನೌಕೆಯನ್ನು ವಿನ್ಯಾಸಿಸಿ, ನಿರ್ಮಿಸಿ, ಪರೀಕ್ಷಿಸಿದಂಥ ವ್ಯಕ್ತಿಯದ್ದಾಗಿದೆ. ಅವನು ತನ್ನ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದನು: “ನಾನು ತುಂಬ ಪರಿಶ್ರಮಿಸಿದ್ದೆ ಮತ್ತು ನನ್ನ ಕೆಲಸದಲ್ಲಿ ತುಂಬ ಪ್ರವೀಣನಾಗಿದ್ದೆ. ಆದರೂ ನನಗೆ ಶಾಶ್ವತವಾದ ಸಂತೋಷ ಹಾಗೂ ಮನಶ್ಶಾಂತಿಯನ್ನು ತಂದುಕೊಡುವುದರಲ್ಲಿ ಅದು ನಿಷ್ಪ್ರಯೋಜಕವಾಗಿತ್ತು, ಅಥವಾ ನಿರರ್ಥಕವಾಗಿತ್ತು.” * ವ್ಯಾಪಾರ, ಕ್ರೀಡೆ, ಅಥವಾ ಮನೋರಂಜನೆಯ ಕ್ಷೇತ್ರದಲ್ಲೂ ದೊಡ್ಡತನದ ಕುರಿತಾದ ಲೌಕಿಕ ಅಭಿಪ್ರಾಯವು ಖಂಡಿತವಾಗಿಯೂ ಶಾಶ್ವತವಾದ ಸಂತೃಪ್ತಿಯ ಖಾತ್ರಿಯನ್ನು ನೀಡಲಾರದು.

ಪ್ರೀತಿಯಿಂದ ಪ್ರಚೋದಿಸಲ್ಪಟ್ಟ ಸೇವೆಯಿಂದ ದೊಡ್ಡತನವು ಲಭಿಸುತ್ತದೆ

6 ಯೇಸುವಿನ ಜೀವನದಲ್ಲಿ ನಡೆದ ಒಂದು ಘಟನೆಯು, ನಿಜವಾದ ದೊಡ್ಡತನದಲ್ಲಿ ಏನು ಒಳಗೂಡಿದೆ ಎಂಬುದನ್ನು ತಿಳಿಯಪಡಿಸುತ್ತದೆ. ಸಾ.ಶ. 33ರ ಪಸ್ಕಹಬ್ಬಕ್ಕಾಗಿ ಯೇಸುವೂ ಅವನ ಶಿಷ್ಯರೂ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದರು. ದಾರಿಯಲ್ಲಿ, ಯೇಸುವಿನ ಸೋದರಸಂಬಂಧಿಗಳಲ್ಲಿ ಇಬ್ಬರಾಗಿದ್ದ ಯಾಕೋಬ ಮತ್ತು ಯೋಹಾನರು ದೊಡ್ಡತನದ ವಿಷಯದಲ್ಲಿ ತಪ್ಪಾದ ದೃಷ್ಟಿಕೋನವನ್ನು ತೋರಿಸಿದರು. ತಮ್ಮ ತಾಯಿಯ ಮೂಲಕ ಅವರು ಯೇಸುವಿನ ಬಳಿ ಹೀಗೆ ವಿನಂತಿಸಿಕೊಂಡರು: ‘ನಿನ್ನ ರಾಜ್ಯದಲ್ಲಿ ನಾವು ನಿನ್ನ ಬಲಗಡೆಯಲ್ಲೂ ಎಡಗಡೆಯಲ್ಲೂ ಕೂತುಕೊಳ್ಳುವದಕ್ಕೆ ಅಪ್ಪಣೆಯಾಗಬೇಕು.’ (ಮತ್ತಾಯ 20:21) ಯೆಹೂದ್ಯರಲ್ಲಿ, ಎಡಗಡೆಯೊ ಅಥವಾ ಬಲಗಡೆಯೊ ಕುಳಿತುಕೊಳ್ಳುವುದು ಒಂದು ದೊಡ್ಡ ಗೌರವವಾಗಿ ಪರಿಗಣಿಸಲ್ಪಡುತ್ತಿತ್ತು. (1 ಅರಸುಗಳು 2:19) ಯಾಕೋಬ ಮತ್ತು ಯೋಹಾನರು ಮಹತ್ವಾಕಾಂಕ್ಷೆಯಿಂದ ಅತಿ ಶ್ರೇಷ್ಠ ಪದವಿಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು. ಅವರು ಈ ಅಧಿಕಾರ ಸ್ಥಾನಗಳನ್ನು ತಮ್ಮದಾಗಿ ಮಾಡಿಕೊಳ್ಳಲು ಬಯಸಿದರು. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದು ಯೇಸುವಿಗೆ ತಿಳಿದಿತ್ತು ಮತ್ತು ದೊಡ್ಡತನದ ವಿಷಯದಲ್ಲಿ ಅವರಿಗಿದ್ದ ತಪ್ಪಾದ ದೃಷ್ಟಿಕೋನವನ್ನು ಸರಿಪಡಿಸಲು ಅವನು ಈ ಸಂದರ್ಭವನ್ನು ಉಪಯೋಗಿಸಿಕೊಂಡನು.

7 ಈ ಅಹಂಕಾರಭರಿತ ಲೋಕದಲ್ಲಿ, ಇತರರನ್ನು ನಿಯಂತ್ರಿಸುವ ಮತ್ತು ಅವರ ಮೇಲೆ ಹಕ್ಕನ್ನು ಚಲಾಯಿಸುವ ಹಾಗೂ ಒಂದು ಚಿಟಿಕೆ ಹೊಡೆದು ತನ್ನ ವಾಂಛೆಗಳನ್ನೆಲ್ಲಾ ಪೂರೈಸಿಕೊಳ್ಳಬಲ್ಲ ವ್ಯಕ್ತಿಯೇ ಒಬ್ಬ ದೊಡ್ಡ ವ್ಯಕ್ತಿಯಾಗಿ ಪರಿಗಣಿಸಲ್ಪಡುತ್ತಾನೆ ಎಂಬುದು ಯೇಸುವಿಗೆ ಗೊತ್ತಿತ್ತು. ಯೇಸುವಿನ ಹಿಂಬಾಲಕರಲ್ಲಿಯಾದರೋ ದೀನಭಾವದ ಸೇವೆಯು ದೊಡ್ಡತನದ ಮಟ್ಟವನ್ನು ನಿರ್ಧರಿಸುವ ಅಳತೆಗೋಲಾಗಿದೆ. ಯೇಸು ಹೇಳಿದ್ದು: “ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು.”​—⁠ಮತ್ತಾಯ 20:26, 27.

8 ಬೈಬಲಿನಲ್ಲಿ “ಸೇವಕ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ಇತರರಿಗಾಗಿ ಸೇವೆಸಲ್ಲಿಸಲು ಶ್ರದ್ಧಾಪೂರ್ವಕವಾಗಿ ಮತ್ತು ಪಟ್ಟುಹಿಡಿದು ಪ್ರಯತ್ನಿಸುವಂಥ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಯೇಸು ತನ್ನ ಶಿಷ್ಯರಿಗೆ ಪ್ರಾಮುಖ್ಯವಾದ ಒಂದು ಪಾಠವನ್ನು ಕಲಿಸುತ್ತಿದ್ದನು: ಕೆಲಸಗಳನ್ನು ಮಾಡುವಂತೆ ಇತರರಿಗೆ ಅಪ್ಪಣೆಕೊಡುವುದು ಒಬ್ಬನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುವುದಿಲ್ಲ; ಪ್ರೀತಿಯಿಂದ ಪ್ರಚೋದಿತರಾಗಿ ಇತರರ ಸೇವೆಮಾಡುವುದು ತಾನೇ ಒಬ್ಬನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ಯಾಕೋಬನೊ ಅಥವಾ ಯೋಹಾನನೊ ಆಗಿರುತ್ತಿದ್ದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದೆ? ಪ್ರೀತಿಯನ್ನು ಹೇತುವಾಗಿಟ್ಟು ಸೇವೆಮಾಡುವುದು ದೊಡ್ಡತನವಾಗಿದೆ ಎಂಬುದನ್ನು ನಾನು ನಿಜವಾಗಿ ಅರ್ಥಮಾಡಿಕೊಳ್ಳುತ್ತಿದ್ದೆನೊ?’​—⁠1 ಕೊರಿಂಥ 13:⁠3.

9 ದೊಡ್ಡತನದ ಬಗ್ಗೆ ಲೋಕಕ್ಕಿರುವ ಮಟ್ಟವು ಕ್ರಿಸ್ತನಿಂದ ತೋರಿಸಲ್ಪಟ್ಟಂಥ ದೊಡ್ಡತನದ ಮಟ್ಟವಾಗಿಲ್ಲ ಎಂಬುದನ್ನು ಯೇಸು ತನ್ನ ಶಿಷ್ಯರಿಗೆ ತೋರಿಸಿದನು. ಅವನು ಯಾರ ಸೇವೆಯನ್ನು ಮಾಡಿದನೋ ಅವರಿಗಿಂತ ತಾನು ಶ್ರೇಷ್ಠನೆಂದು ಅವನೆಂದೂ ಭಾವಿಸಲಿಲ್ಲ ಅಥವಾ ಅವರಲ್ಲಿ ಕೀಳುಭಾವನೆಯನ್ನೂ ಹುಟ್ಟಿಸಲಿಲ್ಲ. ಎಲ್ಲಾ ರೀತಿಯ ಜನರು, ಅಂದರೆ ಪುರುಷರು, ಸ್ತ್ರೀಯರು, ಹಾಗೂ ಮಕ್ಕಳು, ಶ್ರೀಮಂತರು, ಬಡವರು, ಮತ್ತು ಶಕ್ತಿವಂತರು ಹಾಗೂ ಹೆಸರಾಂತ ಪಾಪಿಗಳು ಸಹ ಅವನೊಂದಿಗೆ ನಿರಾತಂಕವಾಗಿರುತ್ತಿದ್ದರು. (ಮಾರ್ಕ 10:13-16; ಲೂಕ 7:37-50) ಇತರರ ಇತಿಮಿತಿಗಳ ವಿಷಯದಲ್ಲಿ ಜನರು ಅನೇಕವೇಳೆ ಸಿಡಿಮಿಡಿಗೊಳ್ಳುತ್ತಾರೆ. ಆದರೆ ಯೇಸು ತೀರ ಭಿನ್ನನಾಗಿದ್ದನು. ಅವನ ಶಿಷ್ಯರು ಕೆಲವೊಮ್ಮೆ ಅವಿಚಾರಿಗಳೂ ಜಗಳಮಾಡುವವರೂ ಆಗಿದ್ದರೂ, ಅವರಿಗೆ ತಾಳ್ಮೆಯಿಂದ ಉಪದೇಶಿಸುತ್ತಾ, ತಾನು ನಿಜವಾಗಿಯೂ ದೀನಭಾವದವನಾಗಿದ್ದೇನೆ ಹಾಗೂ ಸಾತ್ವಿಕನಾಗಿದ್ದೇನೆ ಎಂಬುದನ್ನು ತೋರ್ಪಡಿಸಿದನು.​—⁠ಜೆಕರ್ಯ 9:9; ಮತ್ತಾಯ 11:29; ಲೂಕ 22:24-27.

10 ಅಗ್ರಗಣ್ಯನಾದ ಈ ದೇವಕುಮಾರನಿಂದ ಇಡಲ್ಪಟ್ಟ ನಿಸ್ವಾರ್ಥ ಮಾದರಿಯು, ದೊಡ್ಡತನವು ನಿಜವಾಗಿಯೂ ಏನಾಗಿದೆ ಎಂಬುದನ್ನು ರುಜುಪಡಿಸಿತು. ಯೇಸು ಇತರರಿಂದ ಸೇವೆಮಾಡಿಸಿಕೊಳ್ಳಲಿಕ್ಕಾಗಿ ಅಲ್ಲ, ಬದಲಾಗಿ ‘ತರತರವಾದ ರೋಗಗಳನ್ನು’ ಗುಣಪಡಿಸಿ, ಜನರನ್ನು ದೆವ್ವಗಳ ಹಿಡಿತದಿಂದ ಬಿಡಿಸುತ್ತಾ ಇತರರ ಸೇವೆಮಾಡಲಿಕ್ಕಾಗಿ ಭೂಮಿಗೆ ಬಂದನು. ಅವನು ತುಂಬ ಆಯಾಸಗೊಂಡವನಾಗಿದ್ದು, ವಿಶ್ರಾಂತಿಯ ಅಗತ್ಯವಿದ್ದಾಗಲೂ, ತನ್ನ ಸ್ವಂತ ಆವಶ್ಯಕತೆಗಳಿಗಿಂತಲೂ ಇತರರ ಆವಶ್ಯಕತೆಗಳಿಗೆ ಅವನು ಯಾವಾಗಲೂ ಆದ್ಯತೆಯನ್ನು ನೀಡಿದನು ಮತ್ತು ಅವರಿಗೆ ಸಾಂತ್ವನ ನೀಡಲಿಕ್ಕಾಗಿ ತನ್ನಿಂದಾದಷ್ಟು ಮಟ್ಟಿಗೆ ಶ್ರಮಿಸಿದನು. (ಮಾರ್ಕ 1:32-34; 6:30-34; ಯೋಹಾನ 11:11, 17, 33) ಅವನ ಪ್ರೀತಿಯು, ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿ ಧೂಳುತುಂಬಿದ ರಸ್ತೆಗಳಲ್ಲಿ ನೂರಾರು ಕಿಲೊಮೀಟರುಗಳಷ್ಟು ದೂರದ ವರೆಗೆ ಪ್ರಯಾಣಿಸುತ್ತಾ, ಜನರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡುವಂತೆ ಅವನನ್ನು ಪ್ರಚೋದಿಸಿತು. (ಮಾರ್ಕ 1:​38, 39) ಇತರರ ಸೇವೆಮಾಡುವುದನ್ನು ಯೇಸು ತುಂಬ ಗಂಭೀರವಾಗಿ ಪರಿಗಣಿಸಿದನು ಎಂಬುದರಲ್ಲಿ ಸಂಶಯವೇ ಇಲ್ಲ.

ಕ್ರಿಸ್ತನ ದೀನಭಾವವನ್ನು ಅನುಕರಿಸಿರಿ

11 ದಶಕ 1800ಗಳ ಕೊನೆಯ ಭಾಗದಲ್ಲಿ, ದೇವಜನರ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸಂಚರಣ ಪ್ರತಿನಿಧಿಗಳಾಗಿ ಸೇವೆಸಲ್ಲಿಸಲು ಪುರುಷರು ಆಯ್ಕೆಮಾಡಲ್ಪಡುತ್ತಿದ್ದಾಗ, ಕ್ರೈಸ್ತ ಮೇಲ್ವಿಚಾರಕರು ಬೆಳೆಸಿಕೊಳ್ಳಬೇಕಾಗಿದ್ದ ಯೋಗ್ಯವಾದ ಮನೋಭಾವವು ಒತ್ತಿಹೇಳಲ್ಪಟ್ಟಿತು. ಸೆಪ್ಟೆಂಬರ್‌ 1, 1894ರ ಝಯನ್ಸ್‌ ವಾಚ್‌ ಟವರ್‌ಗನುಸಾರ, “ಉಬ್ಬಿಹೋಗದಂತೆ ನಮ್ರರಾಗಿರುವ . . . , ಸ್ವತಃ ತಮ್ಮ ಬಗ್ಗೆ ಜಂಬಕೊಚ್ಚಿಕೊಳ್ಳದ ಬದಲಾಗಿ ಕ್ರಿಸ್ತನ ಬಗ್ಗೆ ಮಾತಾಡುವ​—⁠ತಮ್ಮ ಸ್ವಂತ ಜ್ಞಾನವನ್ನಲ್ಲ ಬದಲಾಗಿ ಸರಳತೆ ಹಾಗೂ ಅಧಿಕಾರದೊಂದಿಗೆ ಅವನ ವಾಕ್ಯವನ್ನು ತಿಳಿಯಪಡಿಸುವ ದೀನ ಮನಸ್ಸಿನ” ಪುರುಷರ ಅಗತ್ಯವಿತ್ತು. ಸತ್ಯ ಕ್ರೈಸ್ತರು ಕೇವಲ ವೈಯಕ್ತಿಕ ಹೆಬ್ಬಯಕೆಯನ್ನು ತಣಿಸಲಿಕ್ಕಾಗಿ ಅಥವಾ ಪ್ರಧಾನತೆ, ಅಧಿಕಾರ, ಮತ್ತು ಬೇರೆಯವರ ಮೇಲೆ ನಿಯಂತ್ರಣವನ್ನು ಪಡೆಯಲಿಕ್ಕಾಗಿ ಜವಾಬ್ದಾರಿಯನ್ನು ವಹಿಸಲು ಪ್ರಯತ್ನಿಸಬಾರದು ಎಂಬುದಂತೂ ಸುಸ್ಪಷ್ಟ. ತನ್ನ ಜವಾಬ್ದಾರಿಗಳು ಸ್ವತಃ ತನಗೆ ಮಹಿಮೆಯನ್ನು ತಂದುಕೊಳ್ಳಲಿಕ್ಕಾಗಿರುವ ಉಚ್ಚ ಸ್ಥಾನವಾಗಿಲ್ಲ, ಬದಲಾಗಿ ಒಂದು “ಒಳ್ಳೇ ಕೆಲಸ”ದ ಭಾಗವಾಗಿವೆ ಎಂಬುದನ್ನು ದೀನಭಾವದ ಒಬ್ಬ ಮೇಲ್ವಿಚಾರಕನು ಮನಸ್ಸಿನಲ್ಲಿಡುತ್ತಾನೆ. (1 ತಿಮೊಥೆಯ 3:​1, 2) ಎಲ್ಲಾ ಹಿರಿಯರು ಮತ್ತು ಶುಶ್ರೂಷಾ ಸೇವಕರು, ದೀನಭಾವದಿಂದ ಇತರರ ಸೇವೆಮಾಡಲು ಮತ್ತು ಪವಿತ್ರ ಸೇವೆಯಲ್ಲಿ ಮುಂದಾಳುತ್ವವನ್ನು ವಹಿಸಲು ತಮ್ಮ ಕೈಲಾದುದೆಲ್ಲವನ್ನೂ ಮಾಡುತ್ತಾ ಇತರರಿಗಾಗಿ ಅನುಕರಣಯೋಗ್ಯವಾದ ಮಾದರಿಯನ್ನಿಡಬೇಕು.​—⁠1 ಕೊರಿಂಥ 9:19; ಗಲಾತ್ಯ 5:13; 2 ತಿಮೊಥೆಯ 4:⁠5.

12 ಸುಯೋಗಗಳನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯಾವುದೇ ಸಹೋದರನು ಹೀಗೆ ಕೇಳಿಕೊಳ್ಳುವ ಅಗತ್ಯವಿರಬಹುದು: ‘ನಾನು ಇತರರ ಸೇವೆಮಾಡುವ ಸದವಕಾಶಗಳಿಗಾಗಿ ಹುಡುಕುತ್ತೇನೋ, ಅಥವಾ ಇತರರು ನನ್ನ ಸೇವೆಮಾಡಬೇಕೆಂಬ ಪ್ರವೃತ್ತಿ ನನ್ನಲ್ಲಿದೆಯೋ? ಬೇಗನೆ ಯಾರ ಗಮನಕ್ಕೂ ಬಾರದಂಥ ಸಹಾಯಕರವಾದ ಕೆಲಸಗಳನ್ನು ಮಾಡಲು ನಾನು ಮನಃಪೂರ್ವಕವಾಗಿ ಸಿದ್ಧನಿದ್ದೇನೊ?’ ಉದಾಹರಣೆಗೆ, ಒಬ್ಬ ಯುವಕನು ಕ್ರೈಸ್ತ ಸಭೆಯಲ್ಲಿ ಭಾಷಣಗಳನ್ನು ಕೊಡಲು ಇಷ್ಟಪಡಬಹುದಾದರೂ, ವೃದ್ಧರಿಗೆ ಸಹಾಯಮಾಡಲು ಹಿಂದೆಮುಂದೆ ನೋಡುತ್ತಿರಬಹುದು. ಸಭೆಯಲ್ಲಿರುವ ಜವಾಬ್ದಾರಿಯುತ ಪುರುಷರ ಸಹವಾಸದಲ್ಲಿ ಅವನು ಆನಂದಿಸಬಹುದಾದರೂ, ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿರಬಹುದು. ಇಂಥ ವ್ಯಕ್ತಿಯು ತನ್ನನ್ನು ಹೀಗೆ ಪ್ರಶ್ನಿಸಿಕೊಳ್ಳುವುದು ಒಳ್ಳೇದು: ‘ದೇವರ ಸೇವೆಯಲ್ಲಿ ನನಗೆ ಮನ್ನಣೆ ಮತ್ತು ಪ್ರಶಂಸೆಯನ್ನು ತರುವಂಥ ವಿಷಯಗಳ ಮೇಲೆ ಮಾತ್ರ ನಾನು ಪ್ರಧಾನವಾಗಿ ಮನಸ್ಸಿಡುತ್ತೇನೊ? ನಾನು ಇತರರ ಮುಂದೆ ಮಿಂಚಲು ಪ್ರಯತ್ನಿಸುತ್ತೇನೊ?’ ನಾವು ವೈಯಕ್ತಿಕ ಘನತೆಯನ್ನು ಸಾಧಿಸಲು ಪ್ರಯತ್ನಿಸುತ್ತಿರುವಲ್ಲಿ, ಖಂಡಿತವಾಗಿಯೂ ನಾವು ಯೇಸುವಿನ ಮಾದರಿಯನ್ನು ಅನುಕರಿಸುತ್ತಿಲ್ಲ.​—⁠ಯೋಹಾನ 5:⁠41.

13 ನಾವು ಕ್ರಿಸ್ತನ ದೀನಭಾವವನ್ನು ಅನುಕರಿಸಲು ಹೆಚ್ಚು ಪ್ರಯತ್ನಿಸುವಾಗ, ಇತರರ ಸೇವೆಮಾಡುವ ಪ್ರಚೋದನೆಯು ನಮ್ಮಲ್ಲುಂಟಾಗುತ್ತದೆ. ಒಬ್ಬ ಝೋನ್‌ ಮೇಲ್ವಿಚಾರಕರ ಉದಾಹರಣೆಯನ್ನು ಪರಿಗಣಿಸಿರಿ. ಒಂದು ಸಲ ಅವರು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲಿ ಒಂದರ ಕಾರ್ಯಾಚರಣೆಯನ್ನು ಪರೀಕ್ಷಿಸುತ್ತಿದ್ದರು. ತುಂಬ ಕಟ್ಟುನಿಟ್ಟಾದ ಕಾರ್ಯತಖ್ತೆ ಮತ್ತು ಅತ್ಯಧಿಕ ಜವಾಬ್ದಾರಿಯನ್ನು ಈ ಮೇಲ್ವಿಚಾರಕರು ನಿಭಾಯಿಸಬೇಕಾಗಿತ್ತಾದರೂ, ಪತ್ರಿಕೆಗಳಿಗೆ ಪಿನ್‌ಮಾಡುವ ಯಂತ್ರದ ಸೆಟಿಂಗ್‌ಗಳನ್ನು ಸರಿಹೊಂದಿಸಲು ಹೆಣಗಾಡುತ್ತಿದ್ದ ಒಬ್ಬ ಯುವ ಸಹೋದರನಿಗೆ ಸಹಾಯಮಾಡಲು ನಿಂತರು. ಆ ಯುವ ಸಹೋದರನು ಹೇಳಿದ್ದು: “ಇದನ್ನು ನೋಡಿ ನಾನು ಮೂಕವಿಸ್ಮಿತನಾದೆ! ಆ ಸಹೋದರರು ಬೆತೆಲ್‌ನಲ್ಲಿ ಸೇವೆಮಾಡುತ್ತಿದ್ದ ಯುವಕರಾಗಿದ್ದಾಗ ಇದೇ ರೀತಿಯ ಯಂತ್ರದಲ್ಲಿ ಕೆಲಸಮಾಡುತ್ತಿದ್ದರಂತೆ, ಮತ್ತು ನಿರ್ದಿಷ್ಟ ಸೆಟಿಂಗ್‌ ಅನ್ನು ಸರಿಹೊಂದಿಸುವುದು ಎಷ್ಟು ಕಷ್ಟಕರವಾಗಿತ್ತು ಎಂಬುದು ತಮಗೆ ನೆನಪಿದೆ ಎಂದು ಅವರು ನನಗೆ ಹೇಳಿದರು. ಅವರಿಗೆ ಇನ್ನೂ ಅನೇಕ ಪ್ರಮುಖ ಕೆಲಸಗಳನ್ನು ಮಾಡಲಿಕ್ಕಿತ್ತಾದರೂ, ಅವರು ಸಾಕಷ್ಟು ಸಮಯ ನನ್ನೊಂದಿಗಿದ್ದು, ಯಂತ್ರವನ್ನು ಸರಿಹೊಂದಿಸಲು ಸಹಾಯಮಾಡಿದರು. ಇದು ನಿಜವಾಗಿಯೂ ನನ್ನ ಮೇಲೆ ತುಂಬ ಪ್ರಭಾವ ಬೀರಿತು.” ಈಗ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲಿ ಒಂದರ ಮೇಲ್ವಿಚಾರಕನಾಗಿರುವ ಆ ಸಹೋದರನು ಈಗಲೂ ಆ ದೀನಭಾವದ ಕೃತ್ಯವನ್ನು ನೆನಪಿಸಿಕೊಳ್ಳುತ್ತಾನೆ. ನಾವು ಚಿಕ್ಕಪುಟ್ಟ ಕೆಲಸಗಳನ್ನು ಮಾಡಲಾರದಷ್ಟು ಉಚ್ಚಸ್ಥಾನದವರೆಂದು ಅಥವಾ ಕ್ಷುಲ್ಲಕ ಕೆಲಸಗಳನ್ನು ಮಾಡಲಾರದಷ್ಟು ಪ್ರಮುಖ ವ್ಯಕ್ತಿಗಳೆಂದು ಎಂದಿಗೂ ಭಾವಿಸದಿರೋಣ. ಅದಕ್ಕೆ ಬದಲಾಗಿ ನಾವು “ದೀನಮನಸ್ಸನ್ನು” ಬೆಳೆಸಿಕೊಳ್ಳತಕ್ಕದ್ದು. ಇದು ಆಯ್ಕೆಗೆ ಬಿಡಲ್ಪಟ್ಟ ಸಂಗತಿಯಲ್ಲ. ಇದು ಒಬ್ಬ ಕ್ರೈಸ್ತನು ಧರಿಸಿಕೊಳ್ಳಬೇಕಾದ ನೂತನ “ಸ್ವಭಾವ”ದ ಭಾಗವಾಗಿದೆ.​—⁠ಫಿಲಿಪ್ಪಿ 2:​3, NW; ಕೊಲೊಸ್ಸೆ 3:10, 12; ರೋಮಾಪುರ 12:⁠16.

ದೊಡ್ಡತನದ ಕುರಿತಾದ ಕ್ರಿಸ್ತನ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ವಿಧ

14 ದೊಡ್ಡತನದ ಕುರಿತಾದ ಯೋಗ್ಯ ದೃಷ್ಟಿಕೋನವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? ಒಂದು ವಿಧವು ಯೆಹೋವ ದೇವರೊಂದಿಗಿನ ನಮ್ಮ ಸಂಬಂಧದ ಕುರಿತು ಧ್ಯಾನಿಸುವ ಮೂಲಕವೇ ಆಗಿದೆ. ಆತನ ಪ್ರಭಾವ, ಶಕ್ತಿ, ಮತ್ತು ವಿವೇಕವು ಆತನನ್ನು ಅಲ್ಪಮಾತ್ರದವರಾಗಿರುವ ಮಾನವರ ಕ್ಷೇತ್ರಕ್ಕಿಂತ ಎಷ್ಟೋ ಹೆಚ್ಚು ಔನ್ನತ್ಯಕ್ಕೆ ಏರಿಸುತ್ತದೆ. (ಯೆಶಾಯ 40:22) ಜೊತೆ ಮಾನವರೊಂದಿಗಿನ ನಮ್ಮ ಸಂಬಂಧದ ಕುರಿತಾಗಿಯೂ ಧ್ಯಾನಿಸುವುದು ದೀನಮನಸ್ಸನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ. ಉದಾಹರಣೆಗೆ, ಕೆಲವೊಂದು ಕ್ಷೇತ್ರಗಳಲ್ಲಿ ನಾವು ಇತರರಿಗಿಂತ ಅತ್ಯುತ್ತಮರಾಗಿರಬಹುದು, ಆದರೆ ಇನ್ನೂ ಹೆಚ್ಚು ಪ್ರಾಮುಖ್ಯವಾಗಿರುವ ಜೀವನದ ಅಂಶಗಳಲ್ಲಿ ಇತರರು ನಮಗಿಂತ ಉತ್ತಮರಾಗಿರಬಹುದು, ಅಥವಾ ನಮ್ಮಲ್ಲಿ ಇಲ್ಲದಿರುವಂಥ ನಿರ್ದಿಷ್ಟ ಗುಣಗಳು ನಮ್ಮ ಕ್ರೈಸ್ತ ಸಹೋದರರಲ್ಲಿರಬಹುದು. ಒಂದು ವಾಸ್ತವಾಂಶವೇನೆಂದರೆ, ದೇವರ ದೃಷ್ಟಿಯಲ್ಲಿ ಅಮೂಲ್ಯರಾಗಿರುವ ಅನೇಕರು, ತಮ್ಮ ನಮ್ರತೆ ಹಾಗೂ ದೀನಭಾವದ ರೀತಿನೀತಿಯ ಕಾರಣದಿಂದಾಗಿ ಇತರರ ಮಧ್ಯೆ ತಮ್ಮನ್ನು ಅಗ್ರಗಣ್ಯರಾಗಿ ತೋರಿಸಿಕೊಳ್ಳಲು ಬಯಸುವುದಿಲ್ಲ.​—⁠ಜ್ಞಾನೋಕ್ತಿ 3:34; ಯಾಕೋಬ 4:⁠6.

15 ತಮ್ಮ ನಂಬಿಕೆಯ ಕಾರಣ ಪರೀಕ್ಷೆಯನ್ನು ಅನುಭವಿಸುತ್ತಿರುವಂಥ ಯೆಹೋವನ ಸಾಕ್ಷಿಗಳ ಅನುಭವಗಳು ಈ ಅಂಶವನ್ನು ದೃಷ್ಟಾಂತಿಸುತ್ತವೆ. ಅನೇಕವೇಳೆ, ಲೋಕವು ಯಾರನ್ನು ಸಾಮಾನ್ಯ ಜನರೆಂದು ಪರಿಗಣಿಸುತ್ತದೋ ಅಂಥವರೇ ಉಗ್ರ ಪರೀಕ್ಷೆಗಳ ಕೆಳಗೆ ದೇವರಿಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ. ಇಂಥ ಉದಾಹರಣೆಗಳ ಕುರಿತು ಧ್ಯಾನಿಸುವುದು ನಮ್ಮನ್ನು ದೀನಭಾವದವರಾಗಿ ಇರಿಸಿಕೊಳ್ಳಲು ಸಹಾಯಮಾಡಸಾಧ್ಯವಿದೆ ಮತ್ತು ‘ನಮ್ಮ ಯೋಗ್ಯತೆಗೆ ಮೀರಿ ನಮ್ಮ ಬಗ್ಗೆ ಭಾವಿಸಿಕೊಳ್ಳದಿರುವಂತೆ’ ಕಲಿಸುತ್ತದೆ.​—⁠ರೋಮಾಪುರ 12:⁠3. *

16 ಎಲ್ಲಾ ಕ್ರೈಸ್ತರು, ಆಬಾಲವೃದ್ಧರೆಲ್ಲರೂ ದೊಡ್ಡತನದ ಕುರಿತಾದ ಕ್ರಿಸ್ತನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಸಭೆಯಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಗಿರುತ್ತದೆ. ತೀರ ಅಲ್ಪವೆಂದು ತೋರಬಹುದಾದ ಕೆಲಸಗಳನ್ನು ಮಾಡುವಂತೆ ಕೇಳಲ್ಪಡುವಾಗ ಎಂದೂ ಅಸಮಾಧಾನಗೊಳ್ಳಬೇಡಿ. (1 ಸಮುವೇಲ 25:41; 2 ಅರಸುಗಳು 3:11) ಹೆತ್ತವರೇ, ರಾಜ್ಯ ಸಭಾಗೃಹದಲ್ಲಾಗಲಿ, ಸಮ್ಮೇಳನದ ಸ್ಥಳದಲ್ಲಾಗಲಿ, ಅಥವಾ ಅಧಿವೇಶನದ ನಿವೇಶನದಲ್ಲಾಗಲಿ ನಿಮ್ಮ ಮಕ್ಕಳಿಗೆ ಮತ್ತು ಹದಿವಯಸ್ಕರಿಗೆ ನೇಮಿಸಲ್ಪಡುವ ಯಾವುದೇ ಕೆಲಸವನ್ನು ಅವರು ಸಂತೋಷದಿಂದ ಮಾಡುವಂತೆ ಅವರನ್ನು ಉತ್ತೇಜಿಸುತ್ತೀರೋ? ನೀವು ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದನ್ನು ಅವರು ನೋಡುತ್ತಾರೋ? ಈಗ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಮಾಡುತ್ತಿರುವ ಒಬ್ಬ ಸಹೋದರನು, ತನ್ನ ಹೆತ್ತವರ ಮಾದರಿಯನ್ನು ಸುಸ್ಪಷ್ಟವಾಗಿ ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳಿದ್ದು: “ರಾಜ್ಯ ಸಭಾಗೃಹವನ್ನು ಅಥವಾ ಅಧಿವೇಶನದ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಅವರು ನಿರ್ವಹಿಸುತ್ತಿದ್ದ ವಿಧವು, ಈ ಕೆಲಸವನ್ನು ಅವರು ತುಂಬ ಪ್ರಾಮುಖ್ಯವಾದದ್ದಾಗಿ ಪರಿಗಣಿಸುತ್ತಾರೆ ಎಂಬುದನ್ನು ನನಗೆ ತಿಳಿಯಪಡಿಸಿತು. ಕೆಲವು ಕೆಲಸಗಳು ಎಷ್ಟೇ ಕ್ಷುಲ್ಲಕವಾಗಿ ಕಂಡುಬರುವುದಾದರೂ, ಸಭೆಯ ಅಥವಾ ಸಹೋದರರ ಬಳಗದ ಒಳಿತಿಗಾಗಿ ಅವುಗಳನ್ನು ಮಾಡಲು ಅವರು ತಾವಾಗಿಯೇ ಮುಂದೆ ಬರುತ್ತಿದ್ದರು. ಈ ಮನೋಭಾವವು, ಬೆತೆಲಿನಲ್ಲಿ ಕೊಡಲ್ಪಡುವ ಯಾವುದೇ ನೇಮಕವನ್ನು ಮನಃಪೂರ್ವಕವಾಗಿ ಸ್ವೀಕರಿಸುವಂತೆ ನನಗೆ ಸಹಾಯಮಾಡಿದೆ.”

17 ನಮ್ಮ ಅಭಿರುಚಿಗಳಿಂತಲೂ ಹೆಚ್ಚಾಗಿ ಇತರರ ಅಭಿರುಚಿಗಳಿಗೆ ಆದ್ಯತೆ ನೀಡುವ ವಿಷಯದಲ್ಲಿ ನಮಗೆ ಎಸ್ತೇರಳ ಅತ್ಯುತ್ತಮ ಮಾದರಿಯಿದೆ. ಅವಳು ಸಾ.ಶ.ಪೂ. ಐದನೆಯ ಶತಮಾನದಲ್ಲಿ ಪಾರಸಿಯ ಸಾಮ್ರಾಜ್ಯದ ರಾಣಿಯಾದಳು. ಅವಳು ಅರಮನೆಯಲ್ಲಿ ವಾಸಿಸುತ್ತಿದ್ದಳಾದರೂ, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸುತ್ತಾ ಆತನ ಜನರ ಪರವಾಗಿ ಕ್ರಿಯೆಗೈಯಲು ತನ್ನ ಸ್ವಂತ ಜೀವವನ್ನೇ ಅಪಾಯಕ್ಕೊಡ್ಡಲು ಸಿದ್ಧಳಾಗಿದ್ದಳು. (ಎಸ್ತೇರಳು 1:5, 6; 4:14-16) ಇಂದಿನ ಕ್ರೈಸ್ತ ಸ್ತ್ರೀಯರ ಆರ್ಥಿಕ ಸ್ಥಿತಿಗತಿಯು ಏನೇ ಆಗಿರಲಿ, ಅವರು ಖಿನ್ನರಾಗಿರುವವರನ್ನು ಉತ್ತೇಜಿಸುವ ಮೂಲಕ, ಅಸ್ವಸ್ಥರನ್ನು ಸಂದರ್ಶಿಸುವ ಮೂಲಕ, ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ, ಮತ್ತು ಹಿರಿಯರೊಂದಿಗೆ ಸಹಕರಿಸುವ ಮೂಲಕ ಎಸ್ತೇರಳಂಥ ಮನೋಭಾವವನ್ನು ತೋರಿಸಸಾಧ್ಯವಿದೆ. ಇಂಥ ದೀನಭಾವದ ಸಹೋದರಿಯರು ಸಭೆಗೆ ಎಂಥ ವರದಾನವಾಗಿದ್ದಾರೆ!

ಕ್ರಿಸ್ತನಂಥ ದೊಡ್ಡತನದ ಆಶೀರ್ವಾದಗಳು

18 ದೊಡ್ಡತನದ ಕುರಿತು ನೀವು ಕ್ರಿಸ್ತನಂಥ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವಾಗ, ನಿಮಗೆ ಅನೇಕ ಪ್ರಯೋಜನಗಳು ದೊರಕುವವು. ನಿಸ್ವಾರ್ಥಭಾವದಿಂದ ಇತರರ ಸೇವೆಮಾಡುವುದರಿಂದ ಅವರಿಗೂ ನಿಮಗೂ ಸಂತೋಷ ಸಿಗುತ್ತದೆ. (ಅ. ಕೃತ್ಯಗಳು 20:35) ನಿಮ್ಮ ಸಹೋದರರಿಗೋಸ್ಕರ ನೀವು ಸಿದ್ಧಮನಸ್ಸಿನಿಂದ ಹಾಗೂ ಅತ್ಯಾಸಕ್ತಿಯಿಂದ ಪರಿಶ್ರಮಿಸುವಾಗ, ನೀವು ಅವರಿಗೆ ಹೆಚ್ಚು ಪ್ರಿಯರಾಗುತ್ತೀರಿ. (ಅ. ಕೃತ್ಯಗಳು 20:​37, 38) ಎಲ್ಲಕ್ಕಿಂತಲೂ ಮಿಗಿಲಾಗಿ, ಜೊತೆ ಕ್ರೈಸ್ತರ ಹಿತಕ್ಷೇಮವನ್ನು ಪ್ರವರ್ಧಿಸಲಿಕ್ಕಾಗಿ ನೀವು ಏನು ಮಾಡುತ್ತೀರೋ ಅದನ್ನು ಯೆಹೋವನು ತನ್ನ ಮಹಿಮೆಗಾಗಿರುವ ಸಂತೋಷಕರ ಸ್ತುತಿಯಜ್ಞವಾಗಿ ಪರಿಗಣಿಸುತ್ತಾನೆ.​—⁠ಫಿಲಿಪ್ಪಿ 2:⁠17.

19 ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಸ್ವಂತ ಹೃದಯವನ್ನು ಪರೀಕ್ಷಿಸಿಕೊಂಡು ಹೀಗೆ ಕೇಳಿಕೊಳ್ಳುವ ಅಗತ್ಯವಿದೆ: ‘ದೊಡ್ಡತನದ ವಿಷಯದಲ್ಲಿ ಕ್ರಿಸ್ತನ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದರ ಬಗ್ಗೆ ನಾನು ಕೇವಲ ಮಾತಾಡುತ್ತೇನೆ ಅಷ್ಟೆಯೊ ಅಥವಾ ಅದನ್ನು ಕಾರ್ಯರೂಪಕ್ಕೆ ತರಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತೇನೊ?’ ಅಹಂಕಾರಿಗಳ ಕಡೆಗೆ ಯೆಹೋವನಿಗಿರುವ ಭಾವನೆಗಳು ಸುಸ್ಪಷ್ಟ. (ಜ್ಞಾನೋಕ್ತಿ 16:5; 1 ಪೇತ್ರ 5:5) ಕ್ರೈಸ್ತ ಸಭೆಯಲ್ಲಾಗಲಿ, ನಮ್ಮ ಕುಟುಂಬ ಜೀವನದಲ್ಲಾಗಲಿ ಅಥವಾ ಜೊತೆ ಮಾನವರೊಂದಿಗಿನ ನಮ್ಮ ದೈನಂದಿನ ವ್ಯವಹಾರಗಳಲ್ಲಾಗಲಿ, ಸರ್ವವನ್ನೂ ದೇವರ ಮಹಿಮೆ ಮತ್ತು ಸ್ತುತಿಗಾಗಿ ಮಾಡುತ್ತಾ, ದೊಡ್ಡತನದ ಕುರಿತಾದ ಕ್ರಿಸ್ತನ ದೃಷ್ಟಿಕೋನವನ್ನೇ ತೋರಿಸುವುದನ್ನು ನಾವು ಮಾನ್ಯಮಾಡುತ್ತೇವೆ ಎಂಬುದನ್ನು ನಮ್ಮ ಕ್ರಿಯೆಗಳು ತೋರಿಸುವಂತಾಗಲಿ.​—⁠1 ಕೊರಿಂಥ 10:⁠31.

[ಪಾದಟಿಪ್ಪಣಿಗಳು]

^ ಪ್ಯಾರ. 8 ಆಗಸ್ಟ್‌ 1, 1983ರ ಕಾವಲಿನಬುರುಜು ಪತ್ರಿಕೆಯ 3-7ನೆಯ ಪುಟಗಳಲ್ಲಿರುವ “ಯಶಸ್ಸಿನ ಅನ್ವೇಷಣೆಯಲ್ಲಿ” ಎಂಬ ಲೇಖನವನ್ನು ನೋಡಿರಿ.

^ ಪ್ಯಾರ. 21 ಉದಾಹರಣೆಗಳಿಗಾಗಿ, 1992 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ದ 181-2ನೇ ಪುಟಗಳು, ಮತ್ತು ಸೆಪ್ಟೆಂಬರ್‌ 1, 1993ರ ಕಾವಲಿನಬುರುಜುವಿನ 27-31ನೇ ಪುಟಗಳನ್ನು ನೋಡಿರಿ.

ನೀವು ವಿವರಿಸಬಲ್ಲಿರೋ?

• ದೊಡ್ಡತನದ ವಿಷಯದಲ್ಲಿ ಲೌಕಿಕ ದೃಷ್ಟಿಕೋನವನ್ನು ನಾವು ಏಕೆ ತ್ಯಜಿಸಬೇಕು?

• ಯೇಸು ದೊಡ್ಡತನವನ್ನು ಯಾವುದರ ಆಧಾರದಿಂದ ಅಳೆದನು?

• ಕ್ರಿಸ್ತನ ದೀನಭಾವವನ್ನು ಮೇಲ್ವಿಚಾರಕರು ಹೇಗೆ ಅನುಕರಿಸಬಲ್ಲರು?

• ಕ್ರಿಸ್ತನಂಥ ದೊಡ್ಡತನವನ್ನು ಬೆಳೆಸಿಕೊಳ್ಳಲು ಯಾವುದು ನಮಗೆ ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

1. ದೊಡ್ಡತನದ ವಿಷಯದಲ್ಲಿ ಲೋಕಕ್ಕಿರುವ ದೃಷ್ಟಿಕೋನವೇನು?

2. ತನ್ನ ಹಿಂಬಾಲಕರಿಗೆ ಯೇಸು ಯಾವ ಮಾದರಿಯನ್ನಿಟ್ಟನು, ಮತ್ತು ನಾವು ನಮ್ಮನ್ನೇ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳುವ ಆವಶ್ಯಕತೆಯಿದೆ?

3. ಮನುಷ್ಯರಿಂದ ಮಹಿಮೆಯನ್ನು ಪಡೆಯಲು ಹಂಬಲಿಸುವವರಿಗೆ ಲಭಿಸುವ ಕೆಟ್ಟ ಪರಿಣಾಮವನ್ನು ಯಾವ ಬೈಬಲ್‌ ಉದಾಹರಣೆಗಳು ತೋರಿಸುತ್ತವೆ?

4. ಲೋಕದ ಅಹಂಕಾರಭರಿತ ಮನೋಭಾವಕ್ಕೆ ಯಾರು ಕಾರಣನು?

5. ಸಾಧನೆ, ಮನ್ನಣೆ, ಮತ್ತು ಐಶ್ವರ್ಯವು ಶಾಶ್ವತವಾದ ಸಂತೃಪ್ತಿಯ ಖಾತ್ರಿಯನ್ನು ನೀಡುತ್ತದೋ? ವಿವರಿಸಿರಿ.

6. ಯಾಕೋಬ ಮತ್ತು ಯೋಹಾನರಿಗೆ ದೊಡ್ಡತನದ ವಿಷಯದಲ್ಲಿ ತಪ್ಪಾದ ದೃಷ್ಟಿಕೋನವಿತ್ತು ಎಂಬುದನ್ನು ಯಾವುದು ತೋರಿಸುತ್ತದೆ?

7. ನಿಜ ಕ್ರೈಸ್ತ ದೊಡ್ಡತನದ ಮಾರ್ಗವನ್ನು ಯೇಸು ಹೇಗೆ ವರ್ಣಿಸಿದನು?

8. ಒಬ್ಬ ಸೇವಕನಾಗಿರುವುದು ಏನನ್ನು ಅರ್ಥೈಸುತ್ತದೆ, ಮತ್ತು ನಾವು ವೈಯಕ್ತಿಕವಾಗಿ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?

9. ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?

10. ಯೇಸುವಿನ ಇಡೀ ಜೀವನ ರೀತಿಯು, ಇತರರ ಪರವಾಗಿದ್ದ ನಿಸ್ವಾರ್ಥ ಸೇವೆಯನ್ನು ಹೇಗೆ ಪ್ರತಿಬಿಂಬಿಸಿತು?

11. ಸಭೆಯಲ್ಲಿ ಮೇಲ್ವಿಚಾರಕರಾಗಿ ಸೇವೆಸಲ್ಲಿಸಲು ನೇಮಿತರಾಗುವ ಸಹೋದರರಲ್ಲಿ ಯಾವ ಗುಣಗಳಿರಬೇಕು?

12. ಸಭೆಯಲ್ಲಿ ಸುಯೋಗಗಳನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ವೈಯಕ್ತಿಕವಾಗಿ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?

13. (ಎ) ಒಬ್ಬ ಮೇಲ್ವಿಚಾರಕನ ದೀನಭಾವದ ಮಾದರಿಯು ಇತರರ ಮೇಲೆ ಹೇಗೆ ಪರಿಣಾಮ ಬೀರಬಲ್ಲದು? (ಬಿ) ದೀನಭಾವ, ಅಥವಾ ದೀನಮನಸ್ಸುಳ್ಳವರಾಗಿರುವುದು ಕ್ರೈಸ್ತನೊಬ್ಬನ ಆಯ್ಕೆಗೆ ಬಿಡಲ್ಪಟ್ಟ ಸಂಗತಿಯಲ್ಲ ಎಂದು ಏಕೆ ಹೇಳಸಾಧ್ಯವಿದೆ?

14. ದೇವರೊಂದಿಗಿನ ಮತ್ತು ನಮ್ಮ ಜೊತೆ ಮಾನವರೊಂದಿಗಿನ ನಮ್ಮ ಸಂಬಂಧದ ಕುರಿತು ಧ್ಯಾನಿಸುವುದು, ದೊಡ್ಡತನದ ಕುರಿತಾದ ಯೋಗ್ಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ನಮಗೆ ಹೇಗೆ ಸಹಾಯಮಾಡಬಲ್ಲದು?

15. ತಾವು ಇತರರಿಗಿಂತ ಶ್ರೇಷ್ಠರು ಎಂದು ಯಾರೊಬ್ಬರೂ ಭಾವಿಸಲು ಕಾರಣವಿಲ್ಲ ಎಂಬುದನ್ನು ದೇವಜನರ ಸಮಗ್ರತೆಯು ಹೇಗೆ ತೋರಿಸುತ್ತದೆ?

16. ಯೇಸುವಿನಿಂದ ಇಡಲ್ಪಟ್ಟ ಮಾದರಿಯನ್ನು ಅನುಕರಿಸುತ್ತಾ, ಸಭೆಯಲ್ಲಿರುವ ಎಲ್ಲರೂ ಹೇಗೆ ದೊಡ್ಡತನವನ್ನು ಬೆಳೆಸಿಕೊಳ್ಳಸಾಧ್ಯವಿದೆ?

17. ದೀನಭಾವದ ಸ್ತ್ರೀಯರು ಯಾವ ರೀತಿಯಲ್ಲಿ ಸಭೆಗೆ ವರದಾನವಾಗಿರಬಲ್ಲರು?

18. ಕ್ರಿಸ್ತನಂಥ ದೊಡ್ಡತನವನ್ನು ತೋರಿಸುವುದರಿಂದ ಯಾವ ಪ್ರಯೋಜನಗಳು ದೊರಕುವವು?

19. ದೊಡ್ಡತನದ ಕುರಿತಾದ ಕ್ರಿಸ್ತನ ದೃಷ್ಟಿಕೋನದ ಬಗ್ಗೆ ನಮಗೆ ಯಾವ ದೃಢನಿರ್ಧಾರವಿರಬೇಕು?

[ಪುಟ 17ರಲ್ಲಿರುವ ಚೌಕ]

ಕ್ರಿಸ್ತನಂಥ ದೊಡ್ಡತನವು ಯಾರಲ್ಲಿದೆ?

ಇತರರಿಂದ ಸೇವೆಮಾಡಿಸಿಕೊಳ್ಳಲು ಬಯಸುವವನಲ್ಲಿಯೊ ಅಥವಾ ಇತರರ ಸೇವೆಮಾಡಲು ಮನಃಪೂರ್ವಕವಾಗಿ ಸಿದ್ಧನಾಗಿರುವವನಲ್ಲಿಯೊ?

ಎಲ್ಲರ ಗಮನದ ಕೇಂದ್ರವಾಗಿರಲು ಇಷ್ಟಪಡುವಂಥ ವ್ಯಕ್ತಿಯಲ್ಲಿಯೊ ಅಥವಾ ಚಿಕ್ಕಪುಟ್ಟ ಕೆಲಸಗಳನ್ನು ಸ್ವೀಕರಿಸುವಂಥ ವ್ಯಕ್ತಿಯಲ್ಲಿಯೊ?

ಸ್ವತಃ ತನ್ನನ್ನು ಮೇಲೇರಿಸಿಕೊಳ್ಳುವವನಲ್ಲಿಯೋ ಅಥವಾ ಇತರರನ್ನು ಮೇಲೆತ್ತುವವನಲ್ಲಿಯೊ?

[ಪುಟ 14ರಲ್ಲಿರುವ ಚಿತ್ರ]

IIIನೆಯ ಫರೋಹ ಆಮನ್‌ಹೋಟೆಪ್‌ನ ಬೃಹತ್‌ ಪ್ರತಿಮೆ

[ಪುಟ 15ರಲ್ಲಿರುವ ಚಿತ್ರ]

ಹಾಮಾನನ ದುರ್ಗತಿಗೆ ಯಾವುದು ನಡಿಸಿತೆಂಬುದು ನಿಮಗೆ ಗೊತ್ತಿದೆಯೊ?

[ಪುಟ 16ರಲ್ಲಿರುವ ಚಿತ್ರಗಳು]

ನೀವು ಇತರರ ಸೇವೆಮಾಡಲಿಕ್ಕಾಗಿರುವ ಸದವಕಾಶಗಳಿಗಾಗಿ ಹುಡುಕುತ್ತೀರೋ?