ನಾವು ಯೆಹೋವನ ಬಲವನ್ನೇ ಅವಲಂಬಿಸಿದೆವು
ಜೀವನ ಕಥೆ
ನಾವು ಯೆಹೋವನ ಬಲವನ್ನೇ ಅವಲಂಬಿಸಿದೆವು
ಎರ್‌ಸೇಬೆಟ್ ಹಾಫ್‌ನರ್ ಅವರು ಹೇಳಿದಂತೆ
ಚೆಕೊಸ್ಲೊವಾಕಿಯವನ್ನು ಬಿಟ್ಟುಹೋಗುವಂತೆ ನನಗೆ ಆಜ್ಞೆ ವಿಧಿಸಲಾಗಿದೆ ಎಂದು ಟೇಬೊರ್ ಹಾಫ್‌ನರ್‌ಗೆ ತಿಳಿದುಬಂದಾಗ, “ನಿನ್ನನ್ನು ಗಡೀಪಾರುಮಾಡಲು ನಾನು ಬಿಡುವುದಿಲ್ಲ” ಎಂದು ಅವರು ಹೇಳಿದರು. ತದನಂತರ ಅವರು ಕೂಡಿಸಿ ಹೇಳಿದ್ದು: “ಒಂದುವೇಳೆ ನೀನು ಒಪ್ಪುವುದಾದರೆ, ನಾನು ನಿನ್ನನ್ನು ಮದುವೆಯಾಗುತ್ತೇನೆ, ಮತ್ತು ನೀನು ಶಾಶ್ವತವಾಗಿ ನನ್ನೊಂದಿಗೆ ಉಳಿಯಬಹುದು.”
ಅನಿರೀಕ್ಷಿತವಾದ ಈ ವಿವಾಹ ಪ್ರಸ್ತಾಪದ ಕೆಲವೇ ವಾರಗಳ ಬಳಿಕ, ಅಂದರೆ 1938ರ ಜನವರಿ 29ರಂದು, ಕ್ರೈಸ್ತ ಸಹೋದರರಾದ ಟೇಬೊರ್ ಅವರನ್ನು ನಾನು ಮದುವೆಯಾದೆ; ಇವರೇ ನನ್ನ ಕುಟುಂಬಕ್ಕೆ ಪ್ರಥಮವಾಗಿ ಸಾಕ್ಷಿಯನ್ನು ನೀಡಿದ್ದ ವ್ಯಕ್ತಿಯಾಗಿದ್ದರು. ಈ ನಿರ್ಣಯವನ್ನು ಮಾಡುವುದು ಸುಲಭವೇನಾಗಿರಲಿಲ್ಲ. ನಾನಾಗ ಕೇವಲ 18 ವರ್ಷದವಳಾಗಿದ್ದೆ, ಮತ್ತು ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕಿಯಾಗಿದ್ದ ನಾನು, ನನ್ನ ಯುವ ಪ್ರಾಯವನ್ನೆಲ್ಲಾ ದೇವರ ಸೇವೆಗಾಗಿಯೇ ಮುಡಿಪಾಗಿಡಲು ಬಯಸಿದ್ದೆ. ನಾನು ತುಂಬಾ ಅತ್ತು ಪ್ರಾರ್ಥಿಸಿದೆ. ನನ್ನ ಮನಸ್ಸು ಪ್ರಶಾಂತವಾದಾಗಲೇ, ಟೇಬೊರ್ ನನ್ನ ಮುಂದೆ ಇಟ್ಟ ಪ್ರಸ್ತಾಪವು ಕೇವಲ ಒಂದು ದಯಾಪರ ಸಹಾಯವಾಗಿರದೆ ಅದರಲ್ಲಿ ಹೆಚ್ಚಿನದ್ದು ಒಳಗೂಡಿತ್ತು ಎಂಬುದು ನನಗೆ ಮನವರಿಕೆಯಾಯಿತು. ಯಥಾರ್ಥವಾಗಿ ನನ್ನನ್ನು ಪ್ರೀತಿಸುತ್ತಿದ್ದ ಈ ವ್ಯಕ್ತಿಯೊಂದಿಗೆ ಜೀವಿಸಬೇಕೆಂಬ ಭಾವನೆಯು ನನ್ನಲ್ಲಿ ಅಂಕುರಿಸಿತು.
ಆದರೆ ನಾನು ಗಡೀಪಾರುಮಾಡಲ್ಪಡುವ ಅಪಾಯಕ್ಕೆ ಏಕೆ ತುತ್ತಾಗಿದ್ದೆ? ಎಷ್ಟೆಂದರೂ ತನ್ನ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ಹೆಮ್ಮೆಪಡುತ್ತಿದ್ದಂಥ ಒಂದು ದೇಶದಲ್ಲಿ ನಾನು ವಾಸಿಸುತ್ತಿದ್ದೆ. ಸರಿ, ಈ ಹಂತದಲ್ಲಿ ನನ್ನ ಹಿನ್ನೆಲೆಯ ಕುರಿತು ನಿಮಗೆ ಹೆಚ್ಚನ್ನು ತಿಳಿಸುವ ಅಗತ್ಯವಿದೆ ಎಂದು ನನಗನಿಸುತ್ತಿದೆ.
ನಾನು 1919ರ ಡಿಸೆಂಬರ್ 26ರಂದು, ಬುಡಾಪೆಸ್ಟ್‌ನ ಸುಮಾರು 160 ಕಿಲೊಮೀಟರುಗಳಷ್ಟು ಪೂರ್ವಕ್ಕಿರುವ ಹಂಗೇರಿಯ ಶಾಯೊಸಂಟ್‌ಪೀಟರ್ ಎಂಬ ಹಳ್ಳಿಯಲ್ಲಿನ ಗ್ರೀಕ್-ಕ್ಯಾಥೊಲಿಕ್ ಹೆತ್ತವರಿಗೆ ಜನಿಸಿದೆ. ದುಃಖಕರ ಸಂಗತಿಯೇನೆಂದರೆ, ನಾನು ಹುಟ್ಟುವುದಕ್ಕೆ ಮುಂಚೆಯೇ ನನ್ನ ತಂದೆಯವರು ತೀರಿಹೋಗಿದ್ದರು. ಸ್ವಲ್ಪದರಲ್ಲೇ ನನ್ನ ತಾಯಿಯವರು ನಾಲ್ಕು ಮಕ್ಕಳಿದ್ದ ಒಬ್ಬ ವಿಧುರನನ್ನು ಮದುವೆಯಾದರು, ಮತ್ತು ನಾವು ಲುಕೆನ್ಯೆಟ್ಸ್‌ಗೆ ಸ್ಥಳಾಂತರಿಸಿದೆವು. ಇದು ಆಗ ಯಾವುದು ಚೆಕೊಸ್ಲೊವಾಕಿಯವಾಗಿತ್ತೋ ಅಲ್ಲಿನ ಒಂದು ಸುಂದರ ನಗರವಾಗಿತ್ತು. ಆ ಕಾಲದಲ್ಲಿ ಮಲಕುಟುಂಬದಲ್ಲಿ ಬದುಕುವುದು ಅಷ್ಟೇನೂ ಸುಲಭವಾದದ್ದಾಗಿರಲಿಲ್ಲ. ಐವರು ಮಕ್ಕಳಲ್ಲಿ ಕಿರಿಯವಳಾಗಿದ್ದ ನನಗೆ, ನಿಜವಾಗಿಯೂ ನಾನು ಈ ಕುಟುಂಬದ ಭಾಗವಾಗಿಲ್ಲ ಎಂದು ಅನಿಸುತ್ತಿತ್ತು. ಆರ್ಥಿಕ ಪರಿಸ್ಥಿತಿಯು ತುಂಬ ಕಷ್ಟಕರವಾಗಿತ್ತು, ಮತ್ತು ನಾನು
ಭೌತಿಕ ವಸ್ತುಗಳಿಂದ ಮಾತ್ರವಲ್ಲ, ಹೆತ್ತವರ ಸಾಕಷ್ಟು ಗಮನ ಹಾಗೂ ಪ್ರೀತಿಯಿಂದಲೂ ವಂಚಿತಳಾಗಿದ್ದೆ.ಯಾರಿಗಾದರೂ ಉತ್ತರವು ಗೊತ್ತಿತ್ತೊ?
ನಾನು 16ರ ಪ್ರಾಯದವಳಾಗಿದ್ದಾಗ, ಗಂಭೀರವಾದ ಪ್ರಶ್ನೆಗಳು ನನ್ನನ್ನು ಕಾಡಿದವು. ಒಂದನೆಯ ಲೋಕ ಯುದ್ಧದ ಇತಿಹಾಸವನ್ನು ನಾನು ಭಾರಿ ಆಸಕ್ತಿಯಿಂದ ಓದಿದೆ, ಮತ್ತು ಕ್ರೈಸ್ತರೆಂದು ಹೇಳಿಕೊಳ್ಳುವ ನಾಗರಿಕ ದೇಶಗಳ ನಡುವೆ ಸಂಭವಿಸಿದ ಎಲ್ಲ ಹತ್ಯೆಗಳ ಕುರಿತು ಓದಿ ಅತ್ಯಾಶ್ಚರ್ಯಪಟ್ಟೆ. ಅಷ್ಟುಮಾತ್ರವಲ್ಲ, ಅನೇಕ ಸ್ಥಳಗಳಲ್ಲಿ ಮಿಲಿಟರಿ ಧೋರಣೆಯು ಬೆಳೆಯುತ್ತಿರುವುದನ್ನು ನಾನು ಗಮನಿಸಸಾಧ್ಯವಿತ್ತು. ನೆರೆಯವರ ಪ್ರೀತಿಯ ಕುರಿತು ನಾನು ಚರ್ಚಿನಲ್ಲಿ ಏನನ್ನು ಕಲಿತಿದ್ದೆನೋ ಅದರೊಂದಿಗೆ ಯಾವುದೂ ಹೊಂದಿಕೆಯಲ್ಲಿರಲಿಲ್ಲ.
ಆದುದರಿಂದ ನಾನು ರೋಮನ್ ಕ್ಯಾಥೊಲಿಕ್ ಪಾದ್ರಿಯ ಬಳಿಗೆ ಹೋಗಿ ಹೀಗೆ ಕೇಳಿದೆ: “ಕ್ರೈಸ್ತರಾಗಿರುವ ನಾವು ಯಾವ ಆಜ್ಞೆಗೆ ವಿಧೇಯರಾಗಬೇಕು—ಯುದ್ಧಕ್ಕೆ ಹೋಗಿ ನಮ್ಮ ನೆರೆಯವರನ್ನು ಹತಿಸಬೇಕೊ ಅಥವಾ ಅವರನ್ನು ಪ್ರೀತಿಸಬೇಕೊ?” ನನ್ನ ಪ್ರಶ್ನೆಯಿಂದ ಕುಪಿತನಾದ ಅವನು, ಮೇಲಿನ ಅಧಿಕಾರಿಗಳಿಂದ ತನಗೆ ಏನು ತಿಳಿಸಲ್ಪಡುತ್ತದೋ ಅದನ್ನೇ ತಾನು ಇತರರಿಗೆ ಕಲಿಸುತ್ತೇನೆ ಎಂದು ಉತ್ತರಿಸಿದನು. ತದನಂತರ ನಾನು ಕ್ಯಾಲ್ವಿನ್ ಪಂಥದ ಒಬ್ಬ ವ್ಯಕ್ತಿಯನ್ನು ಹಾಗೂ ಒಬ್ಬ ಯೆಹೂದಿ ರಬ್ಬಿಯನ್ನು ಸಂದರ್ಶಿಸಿದಾಗಲೂ ಇದೇ ರೀತಿಯ ಅನುಭವವಾಯಿತು. ನನ್ನ ಅಸಾಮಾನ್ಯ ಪ್ರಶ್ನೆಯ ವಿಷಯದಲ್ಲಿ ಅವರು ತೋರಿಸಿದ ವಿಸ್ಮಯವನ್ನು ಬಿಟ್ಟು ಬೇರಾವುದೇ ಉತ್ತರವು ನನಗೆ ಸಿಗಲಿಲ್ಲ. ಕಟ್ಟಕಡೆಗೆ ನಾನು ಒಬ್ಬ ಲೂತರನ್ ಪಾದ್ರಿಯನ್ನು ಭೇಟಿಯಾಗಲು ಹೋದೆ. ಅವನಿಗೂ ತುಂಬ ಸಿಟ್ಟು ಬಂತು, ಆದರೆ ನಾನು ಅಲ್ಲಿಂದ ಹೊರಡುವುದಕ್ಕೆ ಮುಂಚೆ ಅವನು ಹೇಳಿದ್ದು: “ಇದರ ಕುರಿತು ನೀನು ನಿಜವಾಗಿಯೂ ತಿಳಿದುಕೊಳ್ಳಬೇಕೆಂದಿದ್ದರೆ, ಯೆಹೋವನ ಸಾಕ್ಷಿಗಳ ಬಳಿ ಹೋಗಿ ಕೇಳು.”
ನಾನು ಸಾಕ್ಷಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದೆನಾದರೂ ಅವರು ಸಿಗಲಿಲ್ಲ. ಕೆಲವು ದಿನಗಳ ಬಳಿಕ ನಾನು ಕೆಲಸದಿಂದ ಮನೆಗೆ ಬರುತ್ತಿದ್ದಾಗ, ನಮ್ಮ ಮನೆಯ ಬಾಗಿಲು ಅರ್ಧ ತೆರೆದಿರುವುದನ್ನು ನಾನು ಗಮನಿಸಿದೆ. ಒಬ್ಬ ಸ್ಫುರದ್ರೂಪಿ ಯುವಕನೊಬ್ಬನು ನನ್ನ ತಾಯಿಗೆ ಬೈಬಲಿನ ವಚನವೊಂದನ್ನು ಓದಿಹೇಳುತ್ತಿದ್ದನು. ‘ಹೌದು, ಇವನು ಒಬ್ಬ ಯೆಹೋವನ ಸಾಕ್ಷಿಯಾಗಿರಲೇಬೇಕು!’ ಎಂದು ಆ ಕೂಡಲೆ ನನ್ನ ಮನಸ್ಸಿಗೆ ಹೊಳೆಯಿತು. ಟೇಬೊರ್ ಹಾಫ್‌ನರ್ ಎಂಬ ಈ ವ್ಯಕ್ತಿಯನ್ನು ನಾವು ಮನೆಯೊಳಗೆ ಆಮಂತ್ರಿಸಿದೆವು, ಮತ್ತು ನನ್ನ ಪ್ರಶ್ನೆಗಳನ್ನು ನಾನು ಅವನ ಮುಂದೆಯೂ ಪುನರಾವರ್ತಿಸಿದೆ. ತನ್ನ ಸ್ವಂತ ಅಭಿಪ್ರಾಯಗಳನ್ನು ತಿಳಿಸುವುದಕ್ಕೆ ಬದಲಾಗಿ ಅವನು, ಸತ್ಯ ಕ್ರೈಸ್ತರ ಗುರುತಿನ ಕುರಿತು ಹಾಗೂ ನಾವು ಜೀವಿಸುತ್ತಿರುವ ಸಮಯಗಳ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ನನಗೆ ತೋರಿಸಿದನು.—ಯೋಹಾನ 13:34, 35; 2 ತಿಮೊಥೆಯ 3:1-5.
ತದನಂತರ ಕೆಲವೇ ತಿಂಗಳುಗಳೊಳಗೆ, ನಾನು 17 ವರ್ಷದವಳಾಗುವುದಕ್ಕೆ ಮೊದಲೇ ನನಗೆ ದೀಕ್ಷಾಸ್ನಾನವಾಯಿತು. ನಾನು ಇಷ್ಟೊಂದು ಕಷ್ಟದಿಂದ ಕಂಡುಕೊಂಡಿರುವ ಈ ಅಮೂಲ್ಯ ಬೈಬಲ್ ಸತ್ಯಗಳನ್ನು ಪ್ರತಿಯೊಬ್ಬರೂ ಕೇಳಿಸಿಕೊಳ್ಳಬೇಕು ಎಂಬ ಅನಿಸಿಕೆ ನನಗಾಯಿತು. ನಾನು ಪೂರ್ಣ ಸಮಯ ಸಾರುವ ಕೆಲಸದಲ್ಲಿ ತೊಡಗಿದೆ; 1930ಗಳ ಕೊನೇ ಭಾಗದಲ್ಲಿ ಚೆಕೊಸ್ಲೊವಾಕಿಯದಲ್ಲಿ ಸಾರುವುದು ತುಂಬ ಪಂಥಾಹ್ವಾನದಾಯಕ ಸಂಗತಿಯಾಗಿತ್ತು. ನಮ್ಮ ಸಾರುವ ಕೆಲಸವು ಅಧಿಕೃತವಾಗಿ ನೋಂದಾಯಿಸಲ್ಪಟ್ಟಿತ್ತಾದರೂ, ನಾವು ಪಾದ್ರಿಗಳಿಂದ ಚಿತಾವಣೆಮಾಡಲ್ಪಟ್ಟ ಬಲವಾದ ವಿರೋಧವನ್ನು ಎದುರಿಸುತ್ತಿದ್ದೆವು.
ಹಿಂಸೆಯ ಮೊದಲ ರುಚಿ
ಇಸವಿ 1937ರ ಕೊನೆಯ ಭಾಗದಲ್ಲಿ ಒಂದು ದಿನ, ಲುಕೆನ್ಯೆಟ್ಸ್‌ಗೆ ಸಮೀಪವಾಗಿದ್ದ ಹಳ್ಳಿಯೊಂದರಲ್ಲಿ ನಾನು ಇನ್ನೊಬ್ಬ ಕ್ರೈಸ್ತ ಸಹೋದರಿಯೊಂದಿಗೆ ಸಾಕ್ಷಿಕಾರ್ಯದಲ್ಲಿ ತೊಡಗಿದ್ದೆ. ಸ್ವಲ್ಪದರಲ್ಲೇ ನಮ್ಮನ್ನು ಬಂಧಿಸಲಾಯಿತು ಮತ್ತು ಸೆರೆಮನೆಗೆ ಕರೆದೊಯ್ಯಲಾಯಿತು. ಅಲ್ಲಿನ ಗಾರ್ಡ್, “ನೀವು ಇಲ್ಲೇ ಸಾಯುವಿರಿ” ಎಂದು ಹೇಳುತ್ತಾ ಸೆರೆಕೋಣೆಯ ಬಾಗಿಲನ್ನು ಜೋರಾಗಿ ಮುಚ್ಚಿದನು.
ಸಂಜೆಯಷ್ಟಕ್ಕೆ, ನಮ್ಮ ಸೆರೆಕೋಣೆಯಲ್ಲಿ ಇನ್ನೂ ನಾಲ್ಕು ಮಂದಿ ಸೆರೆಯಾಳುಗಳು ಜಮಾಯಿಸಿದ್ದರು. ನಾವು ಅವರನ್ನು ಸಮಾಧಾನಪಡಿಸಿದೆವು ಮತ್ತು ಅವರಿಗೆ ಸಾಕ್ಷಿಯನ್ನು ನೀಡಿದೆವು. ಅವರು ಸ್ವಲ್ಪ ಸಮಾಧಾನಗೊಂಡರು, ಮತ್ತು ನಾವಿಬ್ಬರೂ ರಾತ್ರಿಯೆಲ್ಲಾ ಅವರೊಂದಿಗೆ ಬೈಬಲ್ ಸತ್ಯವನ್ನು ಚರ್ಚಿಸುವುದರಲ್ಲಿ ಮಗ್ನರಾಗಿದ್ದೆವು.
ಬೆಳಗ್ಗೆ ಆರು ಗಂಟೆಯಷ್ಟಕ್ಕೆ, ಗಾರ್ಡ್ ಬಂದು ನನ್ನನ್ನು ಕೋಣೆಯಿಂದ ಹೊರಗೆ ಬರುವಂತೆ ಕರೆದನು. ನನ್ನ ಜೊತೆಯಲ್ಲಿದ್ದ ಸಹೋದರಿಗೆ ನಾನು ಹೇಳಿದ್ದು: “ನಾವು ದೇವರ ರಾಜ್ಯದಲ್ಲಿ ಪುನಃ ಭೇಟಿಯಾಗೋಣ.” ಒಂದುವೇಳೆ ಅವಳು ಬದುಕಿ ಉಳಿಯುವಲ್ಲಿ, ಇಲ್ಲಿ ಏನು ಸಂಭವಿಸಿತು ಎಂಬುದನ್ನು ನನ್ನ ಕುಟುಂಬಕ್ಕೆ ತಿಳಿಸುವಂತೆ ನಾನು ಅವಳನ್ನು ಕೇಳಿಕೊಂಡೆ. ನಾನು ಒಂದು ಮೌನ ಪ್ರಾರ್ಥನೆಯನ್ನು ಸಲ್ಲಿಸಿ, ಗಾರ್ಡ್‌ನೊಂದಿಗೆ ಹೋದೆ. ಅವನು ಸೆರೆಯ ಕ್ಷೇತ್ರದಲ್ಲೇ ಇದ್ದ ತನ್ನ ಅಪಾರ್ಟ್‌ಮೆಂಟ್‌ಗೆ ನನ್ನನ್ನು ಕರೆದುಕೊಂಡುಹೋದನು. ಅನಂತರ ಅವನು ಹೇಳಿದ್ದು: “ಲೇ ಹುಡುಗಿ, ನಾನು ನಿನ್ನ ಬಳಿ ಕೆಲವು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ದೇವರ ಹೆಸರು ಯೆಹೋವ ಎಂದು ನಿನ್ನೆ ರಾತ್ರಿ ನೀನು ಹೇಳಿದಿ. ನೀನು ಅದನ್ನು ನನಗೆ ಬೈಬಲಿನಿಂದ ತೋರಿಸಬಲ್ಲಿಯಾ?” ಇದೆಷ್ಟು ಆಶ್ಚರ್ಯಕರವಾದ ಹಾಗೂ ನಿರಾಳವಾದ ಅನಿಸಿಕೆಯನ್ನು ಮೂಡಿಸಿತು! ಅವನು ತನ್ನ ಬೈಬಲನ್ನು ತಂದನು, ಮತ್ತು ಅವನಿಗೂ ಅವನ ಪತ್ನಿಗೂ ನಾನು ಯೆಹೋವನ ಹೆಸರನ್ನು ತೋರಿಸಿದೆ. ಹಿಂದಿನ ರಾತ್ರಿ ಆ ನಾಲ್ಕು ಮಂದಿ ಸ್ತ್ರೀಯರೊಂದಿಗೆ ನಾವು ಚರ್ಚಿಸಿದ್ದ ವಿಷಯಗಳ ಕುರಿತು ಅವನಿಗೆ ಇನ್ನೂ ಅನೇಕ ಪ್ರಶ್ನೆಗಳಿದ್ದವು. ಕೊಡಲ್ಪಟ್ಟ ಉತ್ತರಗಳಿಂದ ಸಂತೃಪ್ತನಾದ ಅವನು, ನನಗೂ ನನ್ನ ಜೊತೆ ಸಾಕ್ಷಿಗೂ ಬೆಳಗ್ಗಿನ ಉಪಾಹಾರವನ್ನು ತಯಾರಿಸುವಂತೆ ತನ್ನ ಪತ್ನಿಗೆ ಹೇಳಿದನು.
ಕೆಲವಾರು ದಿನಗಳ ಬಳಿಕ ನಮಗೆ ಬಿಡುಗಡೆಯಾಯಿತು, ಆದರೆ ನಾನು ಹಂಗೇರಿಯ ಪ್ರಜೆಯಾಗಿದ್ದರಿಂದ ಚೆಕೊಸ್ಲೊವಾಕಿಯವನ್ನು ಬಿಟ್ಟುಹೋಗುವಂತೆ ನ್ಯಾಯಾಧಿಪತಿಯು ತೀರ್ಪು ನೀಡಿದನು. ಈ ಘಟನೆಯ ಬಳಿಕವೇ ಟೇಬೊರ್ ಹಾಫ್‌ನರ್ ನನ್ನನ್ನು ತಮ್ಮ ಪತ್ನಿಯಾಗುವಂತೆ
ಕೇಳಿಕೊಂಡರು. ನಾವು ಮದುವೆಯಾದೆವು, ಮತ್ತು ಅವರ ಹೆತ್ತವರ ಮನೆಗೆ ನಾವು ಸ್ಥಳಾಂತರಿಸಿದೆವು.ಹಿಂಸೆಯು ತೀವ್ರಗೊಂಡದ್ದು
ವಿವಾಹಿತ ದಂಪತಿಯೋಪಾದಿ ನಾವು ಸಾರುವ ಕೆಲಸದಲ್ಲಿ ಮುಂದುವರಿದೆವು. ಟೇಬೊರ್‌ರಿಗೆ ಸಂಸ್ಥೆಯ ಕೆಲಸವನ್ನು ಸಹ ಮಾಡಲಿಕ್ಕಿರುತ್ತಿತ್ತು. 1938ರ ನವೆಂಬರ್ ತಿಂಗಳಿನಲ್ಲಿ ಹಂಗೇರಿಯ ಸೈನಿಕರು ನಮ್ಮ ನಗರವನ್ನು ಪ್ರವೇಶಿಸುವ ಕೆಲವೇ ದಿನಗಳಿಗೆ ಮುಂಚೆ, ನಮ್ಮ ಮಗನಾದ ಟೇಬೊರ್ ಜೂನಿಯರ್ ಜನಿಸಿದನು. ಯೂರೋಪಿನಲ್ಲಿ IIನೆಯ ಲೋಕ ಯುದ್ಧವು ಸಮೀಪಿಸುತ್ತಿತ್ತು. ಚೆಕೊಸ್ಲೊವಾಕಿಯದ ಬಹುತೇಕ ಭಾಗವು ಹಂಗೇರಿಯಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟು, ಆ ಕ್ಷೇತ್ರಗಳಲ್ಲಿ ವಾಸಿಸುತ್ತಿದ್ದ ಯೆಹೋವನ ಸಾಕ್ಷಿಗಳ ಮೇಲೆ ತೀವ್ರವಾದ ಹಿಂಸೆಯು ಬರಮಾಡಲ್ಪಟ್ಟಿತು.
ಇಸವಿ 1942ರ ಅಕ್ಟೋಬರ್ 10ರಂದು, ಕೆಲವು ಸಹೋದರರನ್ನು ಸಂಧಿಸಲಿಕ್ಕಾಗಿ ಟೇಬೊರ್ ಡಿಬ್ರೆಸೆನ್‌ಗೆ ಹೋದರು. ಆದರೆ ಈ ಬಾರಿ ಅವರು ಹಿಂದಿರುಗಲಿಲ್ಲ. ಆಗ ಏನು ಸಂಭವಿಸಿತು ಎಂಬುದನ್ನು ಅವರು ಸಮಯಾನಂತರ ನನಗೆ ಹೇಳಿದರು. ಇವರ ಕೂಟವು ಎಲ್ಲಿ ನಡೆಯಬೇಕಾಗಿತ್ತೋ ಆ ಸೇತುವೆಯ ಬಳಿ, ಸಹೋದರರಿಗೆ ಬದಲಾಗಿ ಕೆಲಸಗಾರರ ಹಾಗೆ ವೇಷವನ್ನು ಧರಿಸಿಕೊಂಡಿದ್ದ ಕೆಲವು ಪೊಲೀಸರು ಇದ್ದರು. ಅವರು ನನ್ನ ಪತಿಗಾಗಿ ಮತ್ತು ಪಾಲ್ ನಾಜ್‌ಪೇಲ್ ಎಂಬ ಸಹೋದರರಿಗಾಗಿ ಕಾಯುತ್ತಿದ್ದರಂತೆ—ಕೊನೆಯದಾಗಿ ಅಲ್ಲಿಗೆ ಬಂದು ತಲಪಲಿಕ್ಕಿದ್ದವರು ಇವರಿಬ್ಬರೇ. ಪೊಲೀಸರು ಇವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಮತ್ತು ಇವರು ನೋವಿನಿಂದ ಮೂರ್ಛೆಹೋಗುವ ತನಕ ಇವರ ಪಾದಗಳ ಮೇಲೆ ದೊಣ್ಣೆಗಳಿಂದ ಹೊಡೆದರು.
ತದನಂತರ ಅವರು, ಬೂಟುಗಳನ್ನು ಹಾಕಿಕೊಂಡು ಎದ್ದುನಿಲ್ಲುವಂತೆ ಇವರಿಗೆ ಅಪ್ಪಣೆ ಕೊಟ್ಟರು. ಆ ಅಪಾರವಾದ ನೋವಿನ ಹೊರತಾಗಿಯೂ ರೈಲು ನಿಲ್ದಾಣಕ್ಕೆ ಹೋಗುವಂತೆ ಇವರನ್ನು ಒತ್ತಾಯಿಸಲಾಯಿತು. ಅಷ್ಟರಲ್ಲಿ ಪೊಲೀಸರು ಇನ್ನೊಬ್ಬ ವ್ಯಕ್ತಿಯನ್ನು ಕರೆದುತಂದರು. ಆ ವ್ಯಕ್ತಿಯ ತಲೆಯ ತುಂಬ ಬ್ಯಾಂಡೇಜ್ ಹಾಕಲ್ಪಟ್ಟಿದ್ದು, ಅವರ ಮುಖವನ್ನು ನೋಡಲು ಸಾಧ್ಯವಿರಲಿಲ್ಲ. ಇವರು ಸಹೋದರ ಆಂಡ್ರೇಶ್ ಎಂಬವರಾಗಿದ್ದು, ಇವರು ಸಹ ಸಹೋದರರೊಂದಿಗಿನ ಕೂಟಕ್ಕೆ ಬಂದವರಾಗಿದ್ದರು. ನನ್ನ ಪತಿಯನ್ನು ರೈಲಿನಲ್ಲಿ ಕರೆದೊಯ್ದು, ಬುಡಾಪೆಸ್ಟ್‌ಗೆ ಸಮೀಪದಲ್ಲಿದ್ದ ಆಲಾಗ್ ಎಂಬ ಹಳ್ಳಿಯಲ್ಲಿನ ಬಂಧನ ಕೇಂದ್ರದಲ್ಲಿಡಲಾಯಿತು. ಟೇಬೊರ್‌ರ ಗಾಯಗೊಂಡ ಪಾದವನ್ನು ನೋಡಿದ ಗಾರ್ಡ್‌ಗಳಲ್ಲಿ ಒಬ್ಬನು ವ್ಯಂಗ್ಯವಾಗಿ ಹೇಳಿದ್ದು: “ಜನರು ಎಷ್ಟು ಕ್ರೂರರಾಗಿರುತ್ತಾರಲ್ಲವೆ! ಯೋಚಿಸಬೇಡ, ನಾವು ನಿನಗೆ ವಾಸಿಮಾಡುತ್ತೇವೆ.” ತದನಂತರ ಇಬ್ಬರು ಗಾರ್ಡ್‌ಗಳು ಟೇಬೊರ್ ಅವರ ಪಾದಗಳ ಮೇಲೆ ಪುನಃ ಹೊಡೆಯಲಾರಂಭಿಸಿದರು ಮತ್ತು ರಕ್ತವು ಎಲ್ಲಾ ಕಡೆಯೂ ಚಿಮ್ಮಿತು. ಕೆಲವು ನಿಮಿಷಗಳ ಬಳಿಕ ಅವರಿಗೆ ಪ್ರಜ್ಞೆತಪ್ಪಿತು.
ಮುಂದಿನ ತಿಂಗಳಲ್ಲಿ ಟೇಬೊರ್‌ರನ್ನೂ 60ಕ್ಕಿಂತಲೂ ಹೆಚ್ಚಿನ ಇತರ ಸಹೋದರ ಸಹೋದರಿಯರನ್ನೂ ವಿಚಾರಣೆಗೆ ಒಳಪಡಿಸಲಾಯಿತು. ಸಹೋದರ ಆಂಡ್ರೇಶ್ ಬಾರ್ಟಾ, ಡೇನಶ್ ಫಾಲ್‌ವುನೇಗೇ, ಮತ್ತು ಯೇನೊಶ್ ಕೊನ್‌ರಾಡ್‌ರನ್ನು ಗಲ್ಲಿಗೇರಿಸುವ ಮೂಲಕ ಮರಣಶಿಕ್ಷೆಗೆ ಗುರಿಪಡಿಸಲಾಯಿತು. ಸಹೋದರ ಆಂಡ್ರೇಶ್ ಪಿಲಿಂಗ್‌ರಿಗೆ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತು, ಮತ್ತು ನನ್ನ ಪತಿಗೆ 12 ವರ್ಷಗಳ ಸೆರೆವಾಸವು ಕೊಡಲ್ಪಟ್ಟಿತು. ಅವರು ಗೈದ ಅಪರಾಧವೇನು? ರಾಜ್ಯದ್ರೋಹ, ಮಿಲಿಟರಿ ಸೇವೆಯ ನಿರಾಕರಣೆ, ಗೂಢಚಾರತನ, ಮತ್ತು ಪವಿತ್ರ ಚರ್ಚಿನ ಮೇಲೆ ಮಿಥ್ಯಾಪವಾದ ಹೊರಿಸಿದ ದೋಷಾರೋಪವು ಇವರ ಮೇಲಿದೆ ಎಂದು ಫಿರ್ಯಾದಿಯು ತಿಳಿಸಿದನು. ಮರಣದಂಡನೆಯು ಸಮಯಾನಂತರ ಜೀವಾವಧಿ ಶಿಕ್ಷೆಗೆ ಬದಲಾಯಿಸಲ್ಪಟ್ಟಿತು.
ನನ್ನ ಪತಿಯನ್ನು ಹಿಂಬಾಲಿಸಿದ್ದು
ಟೇಬೊರ್, ಡಿಬ್ರೆಸೆನ್‌ನಲ್ಲಿನ ಕೂಟಕ್ಕೆ ಹೋಗಿ ಎರಡು ದಿನಗಳು ಕಳೆದ ಬಳಿಕ, ನಾನು ಬೆಳಗ್ಗೆ ಆರು ಗಂಟೆಗೆ ಮುಂಚೆ ಎದ್ದು ಬಟ್ಟೆಗಳನ್ನು ಇಸ್ತ್ರಿಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಜೋರಾಗಿ ಬಾಗಿಲು ಬಡಿದ ಶಬ್ದವಾಯಿತು. ‘ಅವರು ಇಲ್ಲಿಗೂ ಬಂದಿದ್ದಾರೆ’ ಎಂದು ನೆನಸಿದೆ. ಆರು ಮಂದಿ ಪೊಲೀಸರು ಒಳಗೆ ಬಂದು, ಮನೆಯನ್ನು ತಲಾಷುಮಾಡಲು ತಮಗೆ ಅನುಮತಿ ಸಿಕ್ಕಿದೆ ಎಂದು ಹೇಳಿದರು. ನಮ್ಮ ಮೂರು ವರ್ಷದ ಮಗನನ್ನೂ ಸೇರಿಸಿ ಮನೆಯಲ್ಲಿದ್ದವರೆಲ್ಲರೂ ಬಂಧಿಸಲ್ಪಟ್ಟು, ಪೊಲೀಸ್ ಠಾಣೆಗೆ ಕರೆದೊಯ್ಯಲ್ಪಟ್ಟರು. ಅದೇ ದಿನ ನಮ್ಮನ್ನು ಹಂಗೇರಿಯ ಪೆಟ್‌ಇರ್ವಶೇರಾದ ಸೆರೆಮನೆಗೆ ಸ್ಥಳಾಂತರಿಸಲಾಯಿತು.
ಇಲ್ಲಿಗೆ ಬಂದ ಬಳಿಕ ನನಗೆ ತುಂಬ ಜ್ವರ ಬಂತು ಮತ್ತು ಇತರ ಸೆರೆವಾಸಿಗಳಿಂದ ನನ್ನನ್ನು ಪ್ರತ್ಯೇಕವಾಗಿರಿಸಲಾಯಿತು. ನಾನು ಗುಣಮುಖಳಾದಾಗ, ನನ್ನ ಸೆರೆಕೋಣೆಯಲ್ಲಿ ಇಬ್ಬರು ಸೈನಿಕರು ನನ್ನ ಬಗ್ಗೆ ಜಗಳವಾಡುತ್ತಿದ್ದರು. “ನಾವು ಅವಳನ್ನು ಗುಂಡಿಕ್ಕಿ ಸಾಯಿಸಬೇಕು! ನಾನೇ ಅವಳಿಗೆ ಗುಂಡಿಕ್ಕುವೆ!” ಎಂದು ಒಬ್ಬನು ಹೇಳುತ್ತಿದ್ದನು. ಆದರೆ ಇನ್ನೊಬ್ಬನು, ನನ್ನನ್ನು ಕೊಲ್ಲುವುದಕ್ಕೆ ಮುಂಚೆ ನನ್ನ ಆರೋಗ್ಯದ ಸ್ಥಿತಿ ಹೇಗಿದೆ ಎಂಬುದನ್ನು ಪರೀಕ್ಷಿಸಲು ಬಯಸುತ್ತಿದ್ದನು. ನನ್ನನ್ನು ಬದುಕಲು ಬಿಡುವಂತೆ ನಾನು ಅವರ ಬಳಿ ಅಂಗಲಾಚಿದೆ. ಕಡೆಗೂ ಅವರು ನನ್ನ ಸೆರೆಕೋಣೆಯಿಂದ ಹೊರಗೆ ಹೋದರು, ಮತ್ತು ನನಗೆ ಸಹಾಯಮಾಡಿದ್ದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಸಲ್ಲಿಸಿದೆ.
ಗಾರ್ಡ್‌ಗಳು ವಿಚಿತ್ರವಾದ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದರು. ನನ್ನ ಬಾಯಲ್ಲಿ ಕಾಲುಚೀಲಗಳನ್ನು ತುರುಕಿಸಿ, ನನ್ನ ಕೈಕಾಲುಗಳನ್ನು ಕಟ್ಟಿಹಾಕಿ, ನೆಲದ ಮೇಲೆ ಕೆಳಮುಖವಾಗಿ ಮಲಗುವಂತೆ ಅವರು ನನಗೆ ಅಪ್ಪಣೆಯಿತ್ತರು, ಮತ್ತು ರಕ್ತ ಬರುವ ತನಕ ಚೆನ್ನಾಗಿ ಥಳಿಸಿದರು. ತನಗೆ ಹೊಡೆದು ಹೊಡೆದು ಸುಸ್ತಾಗಿದೆ ಎಂದು ಸೈನಿಕರಲ್ಲಿ ಒಬ್ಬನು ಹೇಳಿದಾಗ ಮಾತ್ರ ಅವರು ಹೊಡೆಯುವುದನ್ನು ನಿಲ್ಲಿಸಿದರು. ನನ್ನ ಪತಿಯನ್ನು ಬಂಧಿಸಿದ ದಿನ, ಅವರು ಯಾರನ್ನು ಭೇಟಿಯಾಗಲಿಕ್ಕಿದ್ದರು
ಎಂಬುದನ್ನು ಹೇಳುವಂತೆ ಈ ಸೈನಿಕರು ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಹೇಳಲೇ ಇಲ್ಲ, ಆದುದರಿಂದ ಮೂರು ದಿನಗಳ ವರೆಗೆ ಹೊಡೆತವು ಮುಂದುವರಿಯಿತು. ನಾಲ್ಕನೆಯ ದಿನ, ನನ್ನ ಮಗನನ್ನು ನನ್ನ ತಾಯಿಯ ಬಳಿ ಬಿಟ್ಟುಬರಲು ನನಗೆ ಅನುಮತಿ ನೀಡಲಾಯಿತು. ಥಂಡಿಗಟ್ಟಿಸುತ್ತಿದ್ದ ಹವಾಮಾನದಲ್ಲಿ, ಗಾಯಗೊಂಡಿದ್ದ ನನ್ನ ಬೆನ್ನಿನ ಮೇಲೆ ನನ್ನ ಚಿಕ್ಕ ಮಗುವನ್ನು ಕೂರಿಸಿಕೊಂಡು, ರೈಲು ನಿಲ್ದಾಣವನ್ನು ತಲಪಲು ಸುಮಾರು 13 ಕಿಲೊಮೀಟರುಗಳಷ್ಟು ನಡೆದೆ. ಇಲ್ಲಿಂದ, ರೈಲಿನ ಮೂಲಕ ಮನೆಗೆ ಪ್ರಯಾಣಿಸಿದೆ, ಆದರೆ ಅದೇ ದಿನ ನಾನು ಶಿಬಿರಕ್ಕೆ ಹಿಂದೆ ಬರಬೇಕಾಗಿತ್ತು.ಬುಡಾಪೆಸ್ಟ್‌ನ ಸೆರೆಯೊಂದರಲ್ಲಿ ನನಗೆ ಆರು ವರ್ಷಗಳ ಸೆರೆವಾಸವು ವಿಧಿಸಲ್ಪಟ್ಟಿತು. ಇಲ್ಲಿಗೆ ಬಂದ ಬಳಿಕ, ಟೇಬೊರ್ ಸಹ ಇದೇ ಸೆರೆಮನೆಯಲ್ಲಿದ್ದಾರೆ ಎಂಬುದು ನನಗೆ ಗೊತ್ತಾಯಿತು. ನಾವು ಕಬ್ಬಿಣದ ಬೇಲಿಯಿಂದ ಕೆಲವಾರು ನಿಮಿಷಗಳ ವರೆಗೆ ಪರಸ್ಪರ ಮಾತಾಡಲು ನಮಗೆ ಅನುಮತಿ ಸಿಕ್ಕಿದಾಗ ನಮಗೆಷ್ಟು ಸಂತೋಷವಾಯಿತು! ನಮಗಿಬ್ಬರಿಗೂ ಯೆಹೋವನ ಪ್ರೀತಿಯ ಅನುಭವವಾಯಿತು, ಮತ್ತು ಈ ಅಮೂಲ್ಯ ಕ್ಷಣಗಳಿಂದ ನಾವು ಇನ್ನಷ್ಟು ಬಲಗೊಂಡೆವು. ನಾವಿಬ್ಬರೂ ಪುನಃ ಸಂಧಿಸುವ ಮುಂಚೆ, ಕೂದಲೆಳೆಯಷ್ಟು ಅಂತರದಲ್ಲಿ ನಾವು ಮರಣದಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಾ, ಅನೇಕ ಭೀಕರ ವಿಚಾರಣೆಗಳಿಗೆ ಒಳಪಟ್ಟೆವು.
ಒಂದು ಸೆರೆಮನೆಯಿಂದ ಇನ್ನೊಂದು ಸೆರೆಮನೆಗೆ
ಒಂದು ಸೆರೆಕೋಣೆಯಲ್ಲಿ ನಾವು ಹೆಚ್ಚುಕಡಿಮೆ 80 ಮಂದಿ ಸಹೋದರಿಯರಿದ್ದೆವು. ನಾವು ಆಧ್ಯಾತ್ಮಿಕ ಆಹಾರಕ್ಕಾಗಿ ಹಂಬಲಿಸುತ್ತಿದ್ದೆವು, ಆದರೆ ಸೆರೆಮನೆಯೊಳಗೆ ಅದನ್ನು ತರುವುದು ಅಸಾಧ್ಯವಾದದ್ದಾಗಿ ತೋರಿತು. ಸೆರೆಮನೆಯ ಒಳಗಿನಿಂದಲೇ ಏನನ್ನಾದರೂ ಪಡೆಯಸಾಧ್ಯವಿತ್ತೊ? ನಾವೇನು ಮಾಡಿದೆವೆಂದು ನಿಮಗೆ ಹೇಳುತ್ತೇನೆ. ಸೆರೆಮನೆಯ ಗುಮಾಸ್ತರ ಕಾಲುಚೀಲಗಳನ್ನು ರಿಪೇರಿಮಾಡುವ ಕೆಲಸಕ್ಕಾಗಿ ನಾನು ಮುಂದೆಬಂದೆ. ಒಂದು ಕಾಲುಚೀಲದಲ್ಲಿ, ಸೆರೆಮನೆಯ ಗ್ರಂಥಾಲಯದಲ್ಲಿರುವ ಬೈಬಲಿನ ಅನುಕ್ರಮಣಿಕೆ ಸಂಖ್ಯೆಯನ್ನು ತಿಳಿಸುವಂತೆ ವಿನಂತಿಸಿಕೊಳ್ಳುತ್ತಾ ಒಂದು ಕಾಗದದ ಚೀಟಿಯನ್ನು ಹಾಕಿದೆ. ಯಾವುದೇ ರೀತಿಯಲ್ಲಿ ಸಂಶಯ ಬರದಿರುವಂತೆ ಇನ್ನೂ ಎರಡು ಪುಸ್ತಕಗಳ ಹೆಸರುಗಳನ್ನೂ ಅದರಲ್ಲಿ ಸೇರಿಸಿದೆ.
ಮರುದಿನ, ಗುಮಾಸ್ತರಿಂದ ಕಾಲುಚೀಲಗಳ ಇನ್ನೊಂದು ಕಟ್ಟು ನನಗೆ ಕಳುಹಿಸಲ್ಪಟ್ಟಿತು. ಅವುಗಳಲ್ಲೊಂದರಲ್ಲಿ ನನ್ನ ಚೀಟಿಗೆ ಉತ್ತರವಿತ್ತು. ತದನಂತರ ನಾನು ಈ ಸಂಖ್ಯೆಗಳಿರುವ ಪುಸ್ತಕಗಳನ್ನು ತಂದುಕೊಡುವಂತೆ ಗಾರ್ಡ್‌ನ ಬಳಿ ವಿನಂತಿಸಿದೆ. ಬೈಬಲನ್ನೂ ಸೇರಿಸಿ ಇತರ ಪುಸ್ತಕಗಳು ನಮಗೆ ತಂದುಕೊಡಲ್ಪಟ್ಟಾಗ ನಮಗೆಷ್ಟು ಪರಮಾನಂದವಾಯಿತು! ಬೇರೆ ಪುಸ್ತಕಗಳನ್ನು ನಾವು ಪ್ರತಿ ವಾರ ಬದಲಾಯಿಸುತ್ತಿದ್ದೆವು, ಆದರೆ ಬೈಬಲನ್ನು ಮಾತ್ರ ನಮ್ಮ ಬಳಿಯಲ್ಲೇ ಇಟ್ಟುಕೊಂಡೆವು. ಇದರ ಕುರಿತು ಗಾರ್ಡ್ ನಮ್ಮನ್ನು ವಿಚಾರಿಸಿದಾಗ, “ಇದು ತುಂಬ ದೊಡ್ಡ ಪುಸ್ತಕ, ಮತ್ತು ಎಲ್ಲರೂ ಇದನ್ನು ಓದಲು ಇಷ್ಟಪಡುತ್ತಾರೆ” ಎಂದು ಯಾವಾಗಲೂ ಹೇಳುತ್ತಿದ್ದೆವು. ಹೀಗೆ ನಾವು ಬೈಬಲನ್ನು ಓದಲು ಸಾಧ್ಯವಾಯಿತು.
ಒಂದು ದಿನ, ಆಫೀಸರನೊಬ್ಬನು ನನ್ನನ್ನು ತನ್ನ ಆಫೀಸಿಗೆ ಕರೆಸಿಕೊಂಡನು. ಅವನು ತುಂಬ ವಿನಯಶೀಲನಾಗಿ ಕಂಡುಬಂದನು, ಮತ್ತು ಇದು ನನಗೆ ಅಸಾಮಾನ್ಯವಾದದ್ದಾಗಿ ತೋರಿತು.
“ಶ್ರೀಮತಿ ಹಾಫ್‌ನರ್, ನಿನಗೆ ಒಂದು ಸಿಹಿ ಸುದ್ದಿ ತಿಳಿಸಲಿಕ್ಕಿದೆ. ನೀನು ನಾಳೆಯೇ ಮನೆಗೆ ಹೋಗಬಹುದು. ರೈಲು ಸಿಕ್ಕುವಲ್ಲಿ ಇವತ್ತೇ ಹೋಗಬಹುದು” ಎಂದು ಅವನು ಹೇಳಿದನು.
“ಇದು ನಿಜವಾಗಿಯೂ ಸಂತೋಷಕರ ಸಂಗತಿಯಾಗಿದೆ” ಎಂದು ನಾನುತ್ತರಿಸಿದೆ.
“ಹೌದು, ನಿನಗೆ ಒಂದು ಮಗುವಿದೆ, ಮತ್ತು ನೀನು ಅವನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಲು ಇಷ್ಟಪಡುತ್ತೀ ಎಂದು ನನಗೆ ಗೊತ್ತಿದೆ” ಎಂದು ಅವನು ಹೇಳಿ, ತದನಂತರ ಕೂಡಿಸಿದ್ದು: “ಆದರೆ ಈ ಪತ್ರಕ್ಕೆ ಒಂದು ಸಹಿಯನ್ನು ಹಾಕಿ ಹೋಗು.”
“ಅದು ಯಾವ ಪತ್ರ?” ಎಂದು ನಾನು ಕೇಳಿದೆ.
ಅವನು ಒತ್ತಾಯಿಸುತ್ತಾ ಹೇಳಿದ್ದು: “ಅದರ ಬಗ್ಗೆ ಏನೂ ಚಿಂತಿಸಬೇಡ. ಸುಮ್ಮನೆ ಸಹಿ ಹಾಕಿಬಿಡು, ನಿನಗೆ ಬಿಡುಗಡೆ ಸಿಗುತ್ತದೆ.” ಆಮೇಲೆ ಅವನು ಹೇಳಿದ್ದು: “ನೀನು ಮನೆಗೆ ಹೋದ ಕೂಡಲೆ ನಿನಗೆ ಇಷ್ಟಬಂದ ಹಾಗೆ ಮಾಡು. ಆದರೆ ಈಗ ನೀನು ಒಬ್ಬ ಯೆಹೋವನ ಸಾಕ್ಷಿಯಾಗಿಲ್ಲ ಎಂದು ಸಹಿ ಹಾಕಬೇಕಷ್ಟೆ.”
ನಾನು ಹಿನ್ನೆಜ್ಜೆಯಿಟ್ಟು, ದೃಢಚಿತ್ತದಿಂದ ಇದನ್ನು ನಿರಾಕರಿಸಿದೆ.
“ಹಾಗಾದರೆ ಇಲ್ಲೇ ಬಿದ್ದು ಸಾಯಿ!” ಎಂದು ಅವನು ಕೋಪದಿಂದ ಕೂಗುತ್ತಾ, ನನ್ನನ್ನು ಹಿಂದಕ್ಕೆ ಕಳುಹಿಸಿಬಿಟ್ಟನು.
ಇಸವಿ 1943ರ ಮೇ ತಿಂಗಳಿನಲ್ಲಿ, ಬುಡಾಪೆಸ್ಟ್‌ನಲ್ಲಿರುವ ಇನ್ನೊಂದು ಸೆರೆಮನೆಗೆ ನನ್ನನ್ನು ಸ್ಥಳಾಂತರಿಸಲಾಯಿತು, ಮತ್ತು ಸಮಯಾನಂತರ ಮೇರಿಆನೊಸ್ಟ್ರಾದ ಹಳ್ಳಿಯ ಸೆರೆಮನೆಗೆ ಕಳುಹಿಸಲಾಯಿತು. ಅಲ್ಲಿ ನಾವು ಸುಮಾರು 70 ಮಂದಿ ಕ್ರೈಸ್ತ ಸಂನ್ಯಾಸಿನಿಯರೊಂದಿಗೆ ಒಂದು ಸಂನ್ಯಾಸಿ ಮಠದಲ್ಲಿ ವಾಸಿಸುತ್ತಿದ್ದೆವು. ಹಸಿವೆ ಮತ್ತು ಇತರ ಕಷ್ಟದೆಸೆಗಳಿದ್ದರೂ, ನಮ್ಮ ನಿರೀಕ್ಷೆಯನ್ನು ಅವರೊಂದಿಗೆ ಹಂಚಿಕೊಳ್ಳಲು ನಾವು ಅತ್ಯಾತುರರಾಗಿದ್ದೆವು. ಸಂನ್ಯಾಸಿನಿಯರಲ್ಲಿ ಒಬ್ಬರು ನಮ್ಮ ಸಂದೇಶದಲ್ಲಿ ನಿಜವಾದ ಆಸಕ್ತಿಯನ್ನು ತೋರಿಸುತ್ತಾ ಹೇಳಿದ್ದು: “ಇವು ನಿಜವಾಗಿಯೂ ಸುಂದರ ಬೋಧನೆಗಳಾಗಿವೆ. ಇಂಥ ವಿಷಯಗಳನ್ನು ನಾನು ಹಿಂದೆಂದೂ ಕೇಳಿಸಿಕೊಂಡಿರಲಿಲ್ಲ. ದಯವಿಟ್ಟು ನನಗೆ ಇನ್ನಷ್ಟು ವಿಷಯಗಳನ್ನು ತಿಳಿಸಿ.” ನೂತನ ಲೋಕ ಹಾಗೂ ಅಲ್ಲಿನ ಸುಂದರ ಜೀವನದ ಕುರಿತು ನಾವು ಅವಳಿಗೆ ಹೇಳಿದೆವು. ಹೀಗೆ ನಾವು ಮಾತಾಡುತ್ತಾ ಇದ್ದಾಗ, ಕಾನ್ವೆಂಟ್‌ನ ಮುಖ್ಯಸ್ಥೆ ಅಲ್ಲಿಗೆ ಬಂದಳು. ತತ್‌ಕ್ಷಣವೇ, ಆಸಕ್ತಿಯನ್ನು ತೋರಿಸುತ್ತಿದ್ದ ಆ ಸಂನ್ಯಾಸಿಯನ್ನು ಕರೆದುಕೊಂಡು ಹೋಗಿ, ಅವಳ ಬಟ್ಟೆಗಳನ್ನು ತೆಗೆಸಿ, ಚಾವಟಿಯಿಂದ ಚೆನ್ನಾಗಿ ಥಳಿಸಿದರು. ನಾವು
ಅವಳನ್ನು ಪುನಃ ಭೇಟಿಯಾದಾಗ ಅವಳು ಹೀಗೆ ಬೇಡಿಕೊಂಡಳು: “ನನ್ನನ್ನು ಕಾಪಾಡುವಂತೆ ಮತ್ತು ಈ ಸಂನ್ಯಾಸಿ ಮಠದಿಂದ ನನ್ನನ್ನು ಹೊರಗೆ ಕರೆದುಕೊಂಡುಹೋಗುವಂತೆ ದಯವಿಟ್ಟು ಯೆಹೋವನಿಗೆ ಪ್ರಾರ್ಥಿಸಿರಿ. ನಾನು ನಿಮ್ಮಲ್ಲಿ ಒಬ್ಬಳಾಗಲು ಬಯಸುತ್ತೇನೆ.”ನಮ್ಮ ಮುಂದಿನ ಗಮ್ಯಸ್ಥಾನವು, ಬುಡಾಪೆಸ್ಟ್‌ನ ಸುಮಾರು 80 ಕಿಲೊಮೀಟರುಗಳಷ್ಟು ಪಶ್ಚಿಮಕ್ಕಿರುವ ಡಾನ್ಯೂಬ್ ನದಿಯ ಮೇಲಿರುವ ಕೊಮಾರೋಮ್ ನಗರದಲ್ಲಿದ್ದ ಹಳೇ ಸೆರೆಮನೆಯಾಗಿತ್ತು. ಅಲ್ಲಿನ ಜೀವನ ಪರಿಸ್ಥಿತಿಗಳು ಭೀಕರವಾಗಿದ್ದವು. ಅನೇಕ ಸಹೋದರಿಯರಂತೆಯೇ ನಾನು ಸಹ ಟೈಫಸ್ ಜ್ವರದಿಂದ ಅಸ್ವಸ್ಥಳಾದೆ; ರಕ್ತವನ್ನು ಕಕ್ಕುತ್ತಾ ಇದ್ದುದರಿಂದ ತುಂಬ ನಿತ್ರಾಣಳಾದೆ. ನಮ್ಮ ಬಳಿ ಔಷಧವೂ ಇರಲಿಲ್ಲ, ಮತ್ತು ನನ್ನ ಸಾವು ಸಮೀಪಿಸಿದೆ ಎಂದು ನನಗನಿಸಿತು. ಆದರೆ ಅಷ್ಟರಲ್ಲೇ ಅಧಿಕಾರಿಗಳು ಆಫೀಸಿನ ಕೆಲಸವನ್ನು ಮಾಡಲಿಕ್ಕಾಗಿ ಒಬ್ಬ ವ್ಯಕ್ತಿಯನ್ನು ಹುಡುಕುತ್ತಿದ್ದರು. ಜೊತೆಗಿದ್ದ ಸಹೋದರಿಯರು ನನ್ನ ಹೆಸರನ್ನು ಸೂಚಿಸಿದರು. ಹೀಗೆ, ನನಗೆ ಸ್ವಲ್ಪ ಔಷಧವನ್ನು ಕೊಡಲಾಯಿತು, ಮತ್ತು ನಾನು ಗುಣಮುಖಳಾದೆ.
ನನ್ನ ಕುಟುಂಬದೊಂದಿಗೆ ಪುನರ್ಮಿಲನ
ಪೂರ್ವದಿಂದ ಸೋವಿಯಟ್ ಸೈನ್ಯವು ಸಮೀಪಿಸುತ್ತಿದ್ದಂತೆ, ಪಶ್ಚಿಮದ ಕಡೆಗೆ ಸ್ಥಳಾಂತರಿಸುವಂತೆ ನಮ್ಮನ್ನು ಒತ್ತಾಯಿಸಲಾಯಿತು. ನಾವು ಅನುಭವಿಸಿದ ಎಲ್ಲಾ ಭೀಕರತೆಗಳನ್ನು ವರ್ಣಿಸುತ್ತಾ ಹೋದರೆ ಅದೊಂದು ದೊಡ್ಡ ಕಥೆಯೇ ಆಗಿಬಿಡುವುದು. ನಾನು ಅನೇಕ ಬಾರಿ ಮರಣಕ್ಕೆ ನಿಕಟವಾಗಿದ್ದೆ, ಆದರೆ ಯೆಹೋವನ ಸಂರಕ್ಷಣಾತ್ಮಕ ಹಸ್ತವು ನನ್ನನ್ನು ಕಾಪಾಡಿತು, ಮತ್ತು ನಾನು ಬದುಕಿ ಉಳಿದೆ. ಯುದ್ಧವು ಕೊನೆಗೊಂಡಾಗ, ನಾವು ಪ್ರಾಗ್‌ನಿಂದ ಸುಮಾರು 80 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಟಾಬೊರ್‌ನ ಚೆಕ್ ನಗರದಲ್ಲಿದ್ದೆವು. ಇನ್ನೂ ಮೂರು ವಾರಗಳ ಬಳಿಕ, ಅಂದರೆ 1945ರ ಮೇ 30ರಂದು, ನಾನು ಹಾಗೂ ನನ್ನ ನಾದಿನಿಯಾದ ಮಾಗ್‌ಡಾಲೇನಾಳು ಲುಕೆನ್ಯೆಟ್ಸ್‌ನಲ್ಲಿರುವ ನಮ್ಮ ಮನೆಯನ್ನು ತಲಪಿದೆವು.
ಬಹಳ ದೂರದಿಂದಲೇ ನಾನು ಮನೆಯ ಅಂಗಳದಲ್ಲಿದ್ದ ನನ್ನ ಅತ್ತೆಯನ್ನೂ ನನ್ನ ಮುದ್ದು ಮಗನಾದ ಟೇಬೊರ್‌ನನ್ನೂ ನೋಡಸಾಧ್ಯವಿತ್ತು. ನನ್ನ ಕಣ್ಣಾಲಿಗಳು ತುಂಬಿಬಂದವು, ಮತ್ತು ನಾನು “ಟೈಬಿಕ್!” ಎಂದು ಜೋರಾಗಿ ಕೂಗಿದೆ. ಅವನು ಓಡಿ ಬಂದು, ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು. “ಅಮ್ಮ, ನೀನು ಪುನಃ ನನ್ನನ್ನು ಬಿಟ್ಟುಹೋಗುವುದಿಲ್ಲ ತಾನೆ?” ಇವು, ನನ್ನನ್ನು ನೋಡಿದ ಕೂಡಲೆ ನನಗೆ ಅವನು ಹೇಳಿದ ಮೊದಲ ಮಾತುಗಳಾಗಿದ್ದವು, ಮತ್ತು ಈ ಮಾತುಗಳನ್ನು ನಾನೆಂದೂ ಮರೆಯಲಾರೆ.
ಯೆಹೋವನು ನನ್ನ ಪತಿಯಾದ ಟೇಬೊರ್‌ರಿಗೂ ಕರುಣೆಯನ್ನು ತೋರಿಸಿದನು. ಬುಡಾಪೆಸ್ಟ್‌ನಲ್ಲಿರುವ ಸೆರೆಮನೆಯಿಂದ ಅವರನ್ನು, ಸುಮಾರು 160 ಸಹೋದರರೊಂದಿಗೆ ಬೋರ್‌ನಲ್ಲಿದ್ದ ಕಾರ್ಮಿಕ ಶಿಬಿರಕ್ಕೆ ಕಳುಹಿಸಲಾಗಿತ್ತು. ಅನೇಕ ಬಾರಿ ಅವರು ಸಾವಿನ ದವಡೆಯನ್ನು ಸಮೀಪಿಸಿದ್ದರು, ಆದರೆ ಒಂದು ಗುಂಪಿನೋಪಾದಿ ಅವರು ಜೀವಂತವಾಗಿ ಕಾಪಾಡಲ್ಪಟ್ಟರು. ನನಗಿಂತ ಸುಮಾರು ಒಂದು ತಿಂಗಳ ಮುಂಚೆ, 1945ರ ಏಪ್ರಿಲ್ 8ರಂದು ಟೇಬೊರ್ ಮನೆಗೆ ಹಿಂದಿರುಗಿದರು.
ಯುದ್ಧದ ಬಳಿಕವೂ, ಚೆಕೊಸ್ಲೊವಾಕಿಯದಲ್ಲಿನ ಕಮ್ಯೂನಿಸ್ಟ್ ಆಳ್ವಿಕೆಯ ಕೆಳಗೆ ಇನ್ನೂ 40 ವರ್ಷಗಳ ಎಲ್ಲಾ ಪರೀಕ್ಷೆಗಳಿಂದ ಬದುಕಿ ಉಳಿಯಲು ನಮಗೆ ಯೆಹೋವನ ಬಲದ ಅಗತ್ಯವಿತ್ತು. ಪುನಃ ಟೇಬೊರ್ ಅವರನ್ನು ದೀರ್ಘಾವಧಿಯ ಸೆರೆಮನೆ ವಾಸಕ್ಕೆ ಒಳಪಡಿಸಲಾಯಿತು, ಮತ್ತು ಅವರಿಲ್ಲದೆ ನಾನೊಬ್ಬಳೇ ನಮ್ಮ ಮಗನನ್ನು ನೋಡಿಕೊಳ್ಳಬೇಕಾಯಿತು. ಟೇಬೊರ್‌ರ ಬಿಡುಗಡೆಯಾದ ಬಳಿಕ ಅವರು ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಿದರು. 40 ವರ್ಷಗಳ ಕಮ್ಯೂನಿಸ್ಟ್ ಆಳ್ವಿಕೆಯಾದ್ಯಂತ, ನಮ್ಮ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿರುವ ಪ್ರತಿಯೊಂದು ಅವಕಾಶವನ್ನು ನಾವು ಸದುಪಯೋಗಿಸಿದೆವು. ಸತ್ಯವನ್ನು ಕಲಿಯಲು ನಾವು ಅನೇಕರಿಗೆ ಸಹಾಯಮಾಡಲು ಶಕ್ತರಾದೆವು. ಹೀಗೆ ಅವರು ನಮ್ಮ ಆಧ್ಯಾತ್ಮಿಕ ಮಕ್ಕಳಾಗಿ ಪರಿಣಮಿಸಿದರು.
ಇಸವಿ 1989ರಲ್ಲಿ ನಮಗೆ ಧಾರ್ಮಿಕ ಸ್ವಾತಂತ್ರ್ಯವು ಸಿಕ್ಕಿದಾಗ ನಮಗೆಷ್ಟು ಸಂತೋಷವಾಯಿತು! ಮರುವರ್ಷ ನಾವು, ತುಂಬ ದೀರ್ಘ ಕಾಲಾವಧಿಯ ಬಳಿಕ ನಡೆದ ನಮ್ಮ ದೇಶದಲ್ಲಿನ ಪ್ರಥಮ ಅಧಿವೇಶನಕ್ಕೆ ಹಾಜರಾದೆವು. ಅನೇಕ ದಶಕಗಳ ವರೆಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡಿದ್ದ ನಮ್ಮ ಸಾವಿರಾರು ಸಹೋದರ ಸಹೋದರಿಯರನ್ನು ನಾವು ನೋಡಿದಾಗ, ಅವರೆಲ್ಲರಿಗೂ ಅತ್ಯಧಿಕ ಬಲವನ್ನು ಒದಗಿಸಿದಾತನು ಯೆಹೋವನೇ ಎಂಬುದು ನಮಗೆ ಮನದಟ್ಟಾಯಿತು.
ಇಸವಿ 1993ರ ಅಕ್ಟೋಬರ್ 14ರಂದು, ನನ್ನ ಪ್ರಿಯ ಪತಿಯಾದ ಟೇಬೊರ್ ದೇವರಿಗೆ ನಂಬಿಗಸ್ತರಾಗಿ ಮರಣಪಟ್ಟರು, ಮತ್ತು ನಾನು ಈಗ ಸ್ಲೊವಾಕಿಯದ ಝೀಲೀನಾ ಪಟ್ಟಣದಲ್ಲಿ ನನ್ನ ಮಗನಿಗೆ ಹತ್ತಿರದಲ್ಲೇ ವಾಸಿಸುತ್ತಿದ್ದೇನೆ. ಶಾರೀರಿಕವಾಗಿ ನನ್ನಲ್ಲಿ ಹೆಚ್ಚು ಬಲವು ಉಳಿದಿಲ್ಲವಾದರೂ, ಯೆಹೋವನ ಶಕ್ತಿಯಿಂದ ನನ್ನ ಮನೋಬಲವು ಗಟ್ಟಿಯಾಗಿದೆ. ಈ ಹಳೆಯ ವ್ಯವಸ್ಥೆಯಲ್ಲಿ ಎದುರಾಗುವ ಯಾವುದೇ ಪರೀಕ್ಷೆಗಳನ್ನು ನಾನು ಆತನ ಬಲದಿಂದ ತಾಳಿಕೊಳ್ಳಬಲ್ಲೆ ಎಂಬುದನ್ನು ನಾನು ನಿಸ್ಸಂಶಯವಾಗಿ ನಂಬುತ್ತೇನೆ. ಅಷ್ಟುಮಾತ್ರವಲ್ಲ, ಯೆಹೋವನ ಅಪಾತ್ರ ಕೃಪೆಯಿಂದ ಸದಾಕಾಲಕ್ಕೂ ಜೀವಿಸಲು ಶಕ್ತಳಾಗಿರುವಂಥ ಸಮಯಕ್ಕಾಗಿ ನಾನು ಎದುರುನೋಡುತ್ತೇನೆ.
[ಪುಟ 20ರಲ್ಲಿರುವ ಚಿತ್ರ]
ನಾನು ಬಿಟ್ಟುಹೋಗಬೇಕಾಗಿದ್ದ ನನ್ನ ಮಗ ಟೇಬೊರ್ ಜೂನಿಯರ್ (4ರ ಪ್ರಾಯದಲ್ಲಿ)
[ಪುಟ 21ರಲ್ಲಿರುವ ಚಿತ್ರ]
ಟೇಬೊರ್ ಸೀನಿಯರ್ ಅವರು ಬೋರ್‌ನಲ್ಲಿ ಇತರ ಸಹೋದರರೊಂದಿಗೆ
[ಪುಟ 22ರಲ್ಲಿರುವ ಚಿತ್ರ]
ಟೇಬೊರ್ ಮತ್ತು ನನ್ನ ನಾದಿನಿಯಾದ ಮಾಗ್‌ಡಾಲೇನಾ—1947ರಲ್ಲಿ, ಬರ್ನೊದಲ್ಲಿ
[ಪುಟ 23ರಲ್ಲಿರುವ ಚಿತ್ರಗಳು]
ನಾನು ಅನೇಕ ಬಾರಿ ಮರಣಕ್ಕೆ ನಿಕಟವಾಗಿದ್ದೆ, ಆದರೆ ಯೆಹೋವನ ಸಂರಕ್ಷಣಾತ್ಮಕ ಹಸ್ತವು ನನ್ನನ್ನು ಕಾಪಾಡಿತು, ಮತ್ತು ನಾನು ಬದುಕಿ ಉಳಿದೆ