ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದು ಬದುಕಿಗೆ ನಿಜ ಅರ್ಥವನ್ನು ಕೊಡುತ್ತದೆ?

ಯಾವುದು ಬದುಕಿಗೆ ನಿಜ ಅರ್ಥವನ್ನು ಕೊಡುತ್ತದೆ?

ಯಾವುದು ಬದುಕಿಗೆ ನಿಜ ಅರ್ಥವನ್ನು ಕೊಡುತ್ತದೆ?

ಜೀವನದ ಅರ್ಥವೇನು ಎಂದು 17 ವರ್ಷ ಪ್ರಾಯದ ಪ್ರೌಢ ಶಾಲಾ ವಿದ್ಯಾರ್ಥಿಯಾಗಿರುವ ಜೆಸ್ಸಿಯನ್ನು ಕೇಳಿದಾಗ, “ಬದುಕಿರುವಷ್ಟು ಕಾಲ ಸಾಧ್ಯವಾದಷ್ಟು ಮಜಾ ಮಾಡಿ” ಎಂದು ಅವನು ಉತ್ತರಿಸಿದನು. ಸೂಸೀಗೆ ಭಿನ್ನವಾದ ದೃಷ್ಟಿಕೋನವಿತ್ತು. “ಬದುಕಿನ ಅರ್ಥವು ಏನಾಗಿರಬೇಕೆಂದು ನೀವು ಆಯ್ಕೆಮಾಡುತ್ತೀರೋ ಅದೇ ಅದರ ಅರ್ಥವಾಗುತ್ತದೆ ಎಂಬುದನ್ನು ನಾನು ಮನಸಾರೆ ನಂಬುತ್ತೇನೆ” ಎಂದು ಅವಳು ಹೇಳಿದಳು.

ಬದುಕಿನ ಅರ್ಥ ಏನಾಗಿರಬಹುದೆಂದು ನೀವು ಕುತೂಹಲಪಟ್ಟಿದ್ದೀರೊ? ಇಡೀ ಮಾನವಕುಲಕ್ಕಾಗಿ ಏಕಮಾತ್ರ ಉದ್ದೇಶವು ಇದೆಯೋ? ಅಥವಾ ನಾವು ಯಾವ ಆಯ್ಕೆಯನ್ನು ಮಾಡುತ್ತೇವೋ ಅದೇ ಬದುಕಿನ ಅರ್ಥವಾಗುತ್ತದೆ ಎಂದು ಸೂಸೀ ಹೇಳಿದ ಮಾತು ಸರಿಯೊ? ನಮ್ಮ ಸಮಾಜವು ತಾಂತ್ರಿಕತೆಯಲ್ಲಿ ಎಷ್ಟೇ ಮುಂದುವರಿದಿರುವುದಾದರೂ, ನಮ್ಮ ಆಂತರ್ಯವು ಮಾತ್ರ ಬದುಕಿನ ಅರ್ಥವನ್ನು ತಿಳಿದುಕೊಳ್ಳಲು ಹಂಬಲಿಸುತ್ತಿರುವಂತೆ ತೋರುತ್ತದೆ. ನಮ್ಮ ಜೀವಿತದ ಯಾವುದಾದರೊಂದು ಹಂತದಲ್ಲಿ, ‘ನಾವೇಕೆ ಅಸ್ತಿತ್ವದಲ್ಲಿದ್ದೇವೆ?’ ಎಂದು ನಮ್ಮಲ್ಲಿ ಹೆಚ್ಚಿನವರು ಆಲೋಚಿಸುತ್ತೇವೆ.

ಈ ಪ್ರಶ್ನೆಗೆ ಉತ್ತರವನ್ನು ಕೊಡಲು ಆಧುನಿಕ ವಿಜ್ಞಾನವು ಬಹಳಷ್ಟು ಪ್ರಯಾಸಪಟ್ಟಿದೆ. ಇದರ ಫಲಿತಾಂಶವೇನು? “ವಿಕಾಸವಾದದ ಕಾರ್ಯಗತಿಯಲ್ಲಿ, ಬದುಕಿರುವುದಕ್ಕೆ ಯಾವುದೇ ರೀತಿಯ ಅಂತರ್ಗತ ಅರ್ಥವೆಂಬುದಿಲ್ಲ” ಎಂದು ಮನಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರದ ಪ್ರೊಫೆಸರರಾಗಿರುವ ಡೇವಿಡ್‌ ಪಿ. ಬೇರಷ್‌ ಹೇಳಿದರು. ವಿಕಾಸಾತ್ಮಕ ಜೀವಶಾಸ್ತ್ರಜ್ಞರ ದೃಷ್ಟಿಯಲ್ಲಿ ಜೀವಿಗಳಿಗೆ ಒಂದೇ ಒಂದು ಉದ್ದೇಶವಿದೆ: ಬದುಕಿಉಳಿದು ಸಂತಾನೋತ್ಪತ್ತಿಯನ್ನು ಮಾಡುವುದು. ಹೀಗೆ ಪ್ರೊಫೆಸರ್‌ ಬೇರಷ್‌ ಸೂಚಿಸುವುದು: “ಯಾವುದೇ ಉದ್ದೇಶವಿಲ್ಲದ ಹಾಗೂ ಜನರ ಕುರಿತು ಕಾಳಜಿಯೇ ಇಲ್ಲದಿರುವಂಥ ಈ ಬೃಹತ್‌ ವಿಶ್ವದಲ್ಲಿ, ನಾವು ಮಾಡುವ ಸ್ವಇಚ್ಛೆಯ, ಪ್ರಜ್ಞಾಪೂರ್ವಕ, ಉದ್ದೇಶಪೂರ್ವಕ ಆಯ್ಕೆಗಳ ಮೂಲಕ ನಮ್ಮ ಬದುಕುಗಳಿಗೆ ಅರ್ಥವನ್ನು ಕೊಡುವುದು ಮಾನವರ ಜವಾಬ್ದಾರಿಯಾಗಿದೆ.”

ನಮ್ಮ ಅಸ್ತಿತ್ವದ ಅರ್ಥ ಮತ್ತು ಉದ್ದೇಶದ ಮೂಲ

ಹಾಗಾದರೆ, ನಮ್ಮಲ್ಲಿ ಪ್ರತಿಯೊಬ್ಬರೂ ಅವನಿಗೆ ಅಥವಾ ಅವಳಿಗೆ ತೋಚಿದ್ದನ್ನೇ ಮಾಡುವುದು ಬದುಕಿನ ಅರ್ಥವಾಗಿದೆಯೋ? ಉದ್ದೇಶ ಮತ್ತು ಅರ್ಥದ ಕೊರತೆಯಿರುವಂಥ ಒಂದು ವಿಶ್ವದಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವಂತೆ ನಮ್ಮನ್ನು ಬಿಡುವುದಕ್ಕೆ ಬದಲಾಗಿ, ನಾವು ಒಂದು ಉದ್ದೇಶಕ್ಕಾಗಿ ಇಲ್ಲಿದ್ದೇವೆ ಎಂದು ಬೈಬಲು ದೀರ್ಘ ಸಮಯಕ್ಕೆ ಮುಂಚೆಯೇ ತಿಳಿಯಪಡಿಸಿದೆ. ನಮ್ಮ ಅಸ್ತಿತ್ವವು ವಿಶ್ವದಲ್ಲಿ ನಡೆದ ಒಂದು ಆಕಸ್ಮಿಕ ಘಟನೆಯ ಫಲಿತಾಂಶವೇನಲ್ಲ. ಸೃಷ್ಟಿಕರ್ತನು ಮನುಷ್ಯನ ಆಗಮನಕ್ಕಾಗಿ ಈ ಭೂಮಿಯನ್ನು ಸಿದ್ಧಪಡಿಸಲು ಸಾವಿರಾರು ವರ್ಷಗಳನ್ನು ತೆಗೆದುಕೊಂಡನು ಎಂದು ನಮಗೆ ತಿಳಿಸಲಾಗಿದೆ. ಯಾವುದೂ ಆಕಸ್ಮಿಕವಾಗಿ ಸಂಭವಿಸಲಿಲ್ಲ. ಎಲ್ಲವೂ “ಬಹು ಒಳ್ಳೇದಾಗಿತ್ತು” ಎಂಬುದನ್ನು ಆತನು ಖಚಿತಪಡಿಸಿಕೊಂಡನು. (ಆದಿಕಾಂಡ 1:31; ಯೆಶಾಯ 45:18) ಏಕೆ? ಏಕೆಂದರೆ ಮನುಷ್ಯನಿಗಾಗಿ ದೇವರು ಒಂದು ಉದ್ದೇಶವನ್ನಿಟ್ಟಿದ್ದನು.

ಆದರೂ, ದೈವಿಕ ಹಸ್ತಕ್ಷೇಪದ ಮೂಲಕವಾಗಿಯಾಗಲಿ ಅಥವಾ ಯಾವುದೋ ಜೈವಿಕ ಕಾರ್ಯಗತಿಯಿಂದಾಗಲಿ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯತ್ತನ್ನು ದೇವರು ಮುಂಚಿತವಾಗಿಯೇ ನಿರ್ಣಯಿಸಿಡಲಿಲ್ಲ ಎಂಬುದು ಆಸಕ್ತಿಕರ ಸಂಗತಿಯಾಗಿದೆ. ಬಾಧ್ಯತೆಯಾಗಿ ಪಡೆದಿರುವ ವಂಶವಾಹಿಗಳಿಂದ ನಾವು ಪ್ರಭಾವಿಸಲ್ಪಟ್ಟಿರುವುದಾದರೂ, ಬಹುಮಟ್ಟಿಗೆ ನಮ್ಮ ವರ್ತನೆಗಳನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಬದುಕಿನಲ್ಲಿ ಯಾವ ಮಾರ್ಗವನ್ನಾದರೂ ಆಯ್ಕೆಮಾಡುವ ಸ್ವಾತಂತ್ರ್ಯ ನಮ್ಮೆಲ್ಲರಿಗಿದೆ.

ನಮ್ಮ ಜೀವನವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ನಿರ್ಧರಿಸುವುದು ನಮಗೆ ಸಂಬಂಧಪಟ್ಟ ವಿಷಯವಾಗಿರುವುದಾದರೂ, ನಮ್ಮ ಯೋಜನೆಯಿಂದ ಸೃಷ್ಟಿಕರ್ತನನ್ನು ಹೊರಗಿಡುವುದು ತಪ್ಪಾಗಿರುವುದು. ವಾಸ್ತವದಲ್ಲಿ, ಬದುಕಿನ ನಿಜ ಅರ್ಥ ಹಾಗೂ ಉದ್ದೇಶವು ದೇವರೊಂದಿಗಿನ ಸಂಬಂಧದೊಂದಿಗೆ ಹೆಣೆದುಕೊಂಡಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ. ದೇವರು ಮತ್ತು ನಮ್ಮ ಬದುಕಿನ ಉದ್ದೇಶದ ನಡುವೆ ಇರುವ ಪ್ರಮುಖ ಸಂಬಂಧವು, ಯೆಹೋವ ಎಂಬ ದೇವರ ವೈಯಕ್ತಿಕ ಹೆಸರಿನಲ್ಲಿ ಎತ್ತಿತೋರಿಸಲ್ಪಟ್ಟಿದೆ; ಈ ಹೆಸರಿನ ಅರ್ಥವು “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. (ವಿಮೋಚನಕಾಂಡ 6:3; ಕೀರ್ತನೆ 83:18) ಅಂದರೆ, ತಾನು ಏನನ್ನು ವಾಗ್ದಾನಿಸುತ್ತಾನೋ ಅದನ್ನು ಆತನು ಪ್ರಗತಿಪರವಾಗಿ ಪೂರೈಸುತ್ತಾನೆ ಮತ್ತು ಆತನು ಏನನ್ನು ಮಾಡಲು ಉದ್ದೇಶಿಸುತ್ತಾನೋ ಅದನ್ನು ಯಾವಾಗಲೂ ನೆರವೇರಿಸಿಯೇ ತೀರುತ್ತಾನೆ. (ವಿಮೋಚನಕಾಂಡ 3:14; ಯೆಶಾಯ 55:​10, 11) ಆತನ ಹೆಸರಿನ ಮಹತ್ವಾರ್ಥದ ಕುರಿತು ಆಲೋಚಿಸಿರಿ. ಯೆಹೋವ ಎಂಬ ಹೆಸರು ನಮ್ಮೆಲ್ಲರಿಗೂ, ಆತನೇ ಅರ್ಥಭರಿತ ಉದ್ದೇಶದ ಮೂಲ ಹಾಗೂ ನಿತ್ಯ ಉಗಮನಾಗಿದ್ದಾನೆ ಎಂಬುದಕ್ಕೆ ಒಂದು ಖಾತ್ರಿಯಾಗಿದೆ.

ಸೃಷ್ಟಿಕರ್ತನ ಅಸ್ತಿತ್ವವನ್ನು ಅಂಗೀಕರಿಸುವುದು ತಾನೇ ಒಬ್ಬ ವ್ಯಕ್ತಿಗೆ ಜೀವನದ ಕುರಿತು ಇರುವ ದೃಷ್ಟಿಕೋನದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ. ಲಿನೆಟ್‌ ಎಂಬ 19 ವರ್ಷ ಪ್ರಾಯದ ಹುಡುಗಿಯೊಬ್ಬಳು ಹೇಳುವುದು: “ಯೆಹೋವನು ಸೃಷ್ಟಿಸಿರುವ ಎಲ್ಲಾ ಅದ್ಭುತಕರ ವಿಷಯಗಳನ್ನು ಮತ್ತು ಅವುಗಳ ಉದ್ದೇಶವನ್ನು ನೋಡುವುದು, ನಾನು ಸಹ ಒಂದು ಕಾರಣಕ್ಕಾಗಿಯೇ ಸೃಷ್ಟಿಸಲ್ಪಟ್ಟಿದ್ದೇನೆ ಎಂಬುದನ್ನು ನನಗೆ ತೋರಿಸುತ್ತದೆ.” ಆ್ಯಂಬರ್‌ ಹೇಳುವುದು: “ಜನರು ‘ಆ ಅಜ್ಞಾತನ’ ಕುರಿತು ಮಾತಾಡುವಾಗ, ನನಗೆ ಆತನ ಕುರಿತು ಗೊತ್ತಿದೆ ಎಂಬ ಕೃತಜ್ಞತಾಭಾವವು ನನ್ನಲ್ಲಿ ಮೂಡುತ್ತದೆ. ಯೆಹೋವನು ಅಸ್ತಿತ್ವದಲ್ಲಿದ್ದಾನೆ ಎಂಬ ಪುರಾವೆಯು, ಆತನು ಸೃಷ್ಟಿಸಿರುವ ವಸ್ತುಗಳಲ್ಲೇ ತೋರಿಬರುತ್ತದೆ.” (ರೋಮಾಪುರ 1:20) ಸೃಷ್ಟಿಕರ್ತನು ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಅಂಗೀಕರಿಸುವುದು ಒಂದು ವಿಷಯವಾಗಿರುವುದಾದರೂ, ಆತನೊಂದಿಗೆ ಅರ್ಥಭರಿತ ಸಂಬಂಧವನ್ನು ಬೆಳೆಸಿಕೊಳ್ಳುವುದು ಇನ್ನೊಂದು ವಿಚಾರವಾಗಿದೆ ಎಂಬುದಂತೂ ನಿಶ್ಚಯ.

ದೇವರೊಂದಿಗೆ ಸ್ನೇಹ

ಇಲ್ಲಿಯೂ ಬೈಬಲ್‌ ನಮಗೆ ಸಹಾಯಮಾಡಬಲ್ಲದು. ಅದರ ಆರಂಭದ ಅಧ್ಯಾಯಗಳು, ಯೆಹೋವ ದೇವರು ಒಬ್ಬ ಪ್ರೀತಿಯ ತಂದೆಯಾಗಿದ್ದಾನೆ ಎಂಬ ಸ್ಪಷ್ಟವಾದ ಪುರಾವೆಯನ್ನು ನೀಡುತ್ತವೆ. ಉದಾಹರಣೆಗೆ, ಆತನು ಆದಾಮಹವ್ವರನ್ನು ಸೃಷ್ಟಿಸಿ, ತಾನು ಯಾರೆಂಬುದನ್ನು ಅವರೇ ಊಹಿಸಿನೋಡುವಂತೆ ಬಿಡಲಿಲ್ಲ. ಅದಕ್ಕೆ ಬದಲಾಗಿ, ಆತನು ಕ್ರಮವಾಗಿ ಅವರೊಂದಿಗೆ ಸಂವಾದ ಮಾಡುತ್ತಿದ್ದನು. ಏದೆನ್‌ ತೋಟದಲ್ಲಿ ಅವರು ಸ್ವತಃ ತಮ್ಮನ್ನೇ ಮಾರ್ಗದರ್ಶಿಸಿಕೊಳ್ಳುವಂತೆ ಅವರನ್ನು ಅವರಷ್ಟಕ್ಕೇ ಬಿಟ್ಟು, ಆತನು ತನ್ನ ಪಾಡಿಗೆ ತನ್ನ ಇತರ ಅಭಿರುಚಿಗಳನ್ನು ಬೆನ್ನಟ್ಟಲಿಲ್ಲ. ಬದಲಾಗಿ, ಬದುಕುವ ಅತ್ಯುತ್ತಮ ವಿಧ ಯಾವುದೆಂಬ ವಿಷಯದಲ್ಲಿ ಅವರಿಗೆ ನಿರ್ದಿಷ್ಟ ನಿರ್ದೇಶನವನ್ನು ನೀಡಿದನು. ಆತನು ಅವರಿಗೆ ಸಂತೃಪ್ತಿದಾಯಕ ಕೆಲಸವನ್ನು ನೇಮಿಸಿದನು, ಮತ್ತು ಅವರ ಸತತ ಶಿಕ್ಷಣಕ್ಕಾಗಿ ಏರ್ಪಾಡನ್ನೂ ಮಾಡಿದನು. (ಆದಿಕಾಂಡ 1:​26-30; 2:​7-9) ಒಬ್ಬ ಸಮರ್ಥ, ಪ್ರೀತಿಪರ ಹೆತ್ತವರಿಂದ ನೀವು ನಿರೀಕ್ಷಿಸುವಂಥದ್ದು ಇದೆಲ್ಲವನ್ನೇ ತಾನೆ? ಈಗ ಇದೆಲ್ಲವೂ ಏನನ್ನು ಅರ್ಥೈಸುತ್ತದೆ ಎಂಬುದರ ಕುರಿತು ಆಲೋಚಿಸಿರಿ. “ಯೆಹೋವನು ಭೂಮಿಯನ್ನು ಸೃಷ್ಟಿಸಿ, ತನ್ನ ಸೃಷ್ಟಿಯಲ್ಲಿ ಆನಂದಿಸುವ ಸಾಮರ್ಥ್ಯವನ್ನು ನಮಗೆ ಕೊಟ್ಟಿದ್ದಾನೆಂಬ ತಿಳಿವಳಿಕೆಯು, ನಾವು ಸಂತೋಷವಾಗಿರಬೇಕು ಎಂಬುದೇ ಆತನ ಬಯಕೆಯಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಡೇನ್ಯಲ್‌ ಹೇಳುತ್ತಾಳೆ.

ಅದಕ್ಕಿಂತಲೂ ಹೆಚ್ಚಾಗಿ, ಯಾವನೇ ಒಬ್ಬ ಪ್ರೀತಿಪರ ತಂದೆಯು ಬಯಸುವಂತೆಯೇ, ತನ್ನೆಲ್ಲಾ ಮಕ್ಕಳು ತನ್ನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಯೆಹೋವನು ಬಯಸುತ್ತಾನೆ. ಈ ವಿಷಯದಲ್ಲಿ ಅಪೊಸ್ತಲ ಕೃತ್ಯಗಳು 17:27 ನಮಗೆ ಹೀಗೆ ಆಶ್ವಾಸನೆಯನ್ನೀಯುತ್ತದೆ: “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” ಇದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುತ್ತದೋ? ಆ್ಯಂಬರ್‌ ಹೇಳುವುದು: “ಯೆಹೋವನನ್ನು ಅರಿಯುವುದು, ನಾನೆಂದೂ ಪೂರ್ಣವಾಗಿ ಒಂಟಿಯಾಗಿಲ್ಲ ಎಂಬ ದೃಢಭರವಸೆಯನ್ನು ನನ್ನಲ್ಲಿ ಮೂಡಿಸಿದೆ. ಯಾವುದೇ ಸನ್ನಿವೇಶದಲ್ಲಿ ನಾನು ಸಹಾಯವನ್ನು ಯಾಚಿಸಲು ಒಬ್ಬರು ನನಗೆ ಯಾವಾಗಲೂ ಇದ್ದಾರೆ.” ಅಷ್ಟುಮಾತ್ರವಲ್ಲ, ನೀವು ಯೆಹೋವನನ್ನು ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಆತನು ದಯಾಪರನೂ, ನ್ಯಾಯವಂತನೂ, ಒಳ್ಳೆಯವನೂ ಆಗಿದ್ದಾನೆ ಎಂಬುದನ್ನು ಕಂಡುಕೊಳ್ಳುವಿರಿ. ನೀವು ಆತನ ಮೇಲೆ ಅವಲಂಬಿಸಸಾಧ್ಯವಿದೆ. “ಯೆಹೋವನು ಆಪ್ತ ಸ್ನೇಹಿತನಾದಾಗ, ನನಗೆ ಅಗತ್ಯವಿರುವ ಸಹಾಯವನ್ನು ಆತನಿಗಿಂತ ಉತ್ತಮವಾದ ರೀತಿಯಲ್ಲಿ ಯಾರೂ ಒದಗಿಸಲಾರರು ಎಂಬುದು ನನಗೆ ಗೊತ್ತಾಯಿತು” ಎಂದು ಜೆಫ್‌ ಹೇಳುತ್ತಾನೆ.

ಅಸಂತೋಷಕರವಾಗಿಯೇ, ಯೆಹೋವನ ಕುರಿತು ಅನೇಕ ನಕಾರಾತ್ಮಕ ವಿಷಯಗಳು ಹೇಳಲ್ಪಟ್ಟಿವೆ. ಮಾನವ ಕಷ್ಟಾನುಭವ ಮತ್ತು ಧಾರ್ಮಿಕ ದುರ್ನಡತೆಯಲ್ಲಿ ಹೆಚ್ಚಿನದ್ದಕ್ಕೆ ಆತನೇ ಕಾರಣನೆಂಬ ದೋಷಾರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಮಾನವ ಇತಿಹಾಸದಲ್ಲಿನ ಅತ್ಯಂತ ಕೆಡುಕಿನ ದುರಾಚಾರಗಳಲ್ಲಿ ಕೆಲವಕ್ಕೆ ಆತನೇ ಕಾರಣನೆಂದು ಹೇಳಲಾಗಿದೆ. ಆದರೆ ಧರ್ಮೋಪದೇಶಕಾಂಡ 32:​4, 5 ವಿವರಿಸುವುದು: “ಆತನು ನಡಿಸುವದೆಲ್ಲಾ ನ್ಯಾಯ; . . . ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು.” ಆದುದರಿಂದ, ವಾಸ್ತವಾಂಶಗಳನ್ನು ಪರಿಶೀಲಿಸಿ ನೋಡುವ ಹಂಗು ನಮಗಿದೆ.​—⁠ಧರ್ಮೋಪದೇಶಕಾಂಡ 30:​19, 20.

ದೇವರ ಉದ್ದೇಶವು ಪೂರೈಸಲ್ಪಟ್ಟದ್ದು

ನಾವು ಯಾವುದೇ ನಿರ್ಣಯವನ್ನು ಮಾಡಿದರೂ, ಈ ಭೂಮಿ ಮತ್ತು ಮಾನವಕುಲಕ್ಕಾಗಿರುವ ದೇವರ ಉದ್ದೇಶವನ್ನು ಪೂರ್ಣವಾಗಿ ನೆರವೇರಿಸುವುದರಿಂದ ಯಾವುದೂ ಆತನನ್ನು ತಡೆಯದು. ಎಷ್ಟೆಂದರೂ ಆತನು ಸೃಷ್ಟಿಕರ್ತನಾಗಿದ್ದಾನೆ. ಹಾಗಾದರೆ ಆ ಉದ್ದೇಶವೇನಾಗಿದೆ? ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಕ್ರಿಸ್ತನು ಇದನ್ನು ಸೂಚಿಸಿ ಮಾತಾಡಿದನು. ಅವನು ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” ತದನಂತರ, ಅವನು ತನ್ನ ಅಪೊಸ್ತಲನಾದ ಯೋಹಾನನಿಗೆ, ದೇವರು “ಲೋಕನಾಶಕರನ್ನು ನಾಶ”ಮಾಡಲು ನಿರ್ಧರಿಸಿದ್ದಾನೆ ಎಂದು ಸೂಚಿಸಿದನು. (ಮತ್ತಾಯ 5:5; ಪ್ರಕಟನೆ 11:18) ಸೃಷ್ಟಿಯ ಸಮಯದಲ್ಲಿ ಯೇಸು ದೇವರೊಂದಿಗೆ ಇದ್ದುದರಿಂದ, ಒಂದು ಪರಿಪೂರ್ಣ ಮಾನವ ಕುಟುಂಬವು ಭೂಪರದೈಸಿನಲ್ಲಿ ನಿತ್ಯಕ್ಕೂ ನಿವಾಸಿಸುವಂತೆ ಮಾಡುವುದು ಆರಂಭದಿಂದಲೂ ದೇವರ ಉದ್ದೇಶವಾಗಿತ್ತು ಎಂಬುದು ಅವನಿಗೆ ಗೊತ್ತಿದೆ. (ಆದಿಕಾಂಡ 1:26, 27; ಯೋಹಾನ 1:1-3) ಮತ್ತು ದೇವರು ಎಂದಿಗೂ ಬದಲಾಗುವುದಿಲ್ಲ. (ಮಲಾಕಿಯ 3:⁠6) ದೇವರು ನಮಗೆ ವಾಗ್ದಾನಿಸುವುದು: “ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.”​—⁠ಯೆಶಾಯ 14:⁠24.

ಯೆಹೋವನು ನಮ್ಮ ಕಾಲದಲ್ಲಿ, ಒಂದು ಐಕ್ಯ ಸಮಾಜಕ್ಕೆ ಈಗಾಗಲೇ ತಳಪಾಯವನ್ನು ಹಾಕಲಾರಂಭಿಸಿದ್ದಾನೆ. ಆ ಸಮಾಜವು, ಇಂದಿನ ನಮ್ಮ ಲೋಕದಲ್ಲಿ ತುಂಬಿರುವಂತೆ ದುರಾಸೆ ಅಥವಾ ಸ್ವಾರ್ಥ ಅಭಿರುಚಿಯ ಮೇಲಲ್ಲ, ಬದಲಾಗಿ ದೇವರ ಮತ್ತು ನೆರೆಯವರ ಪ್ರೀತಿಯ ಮೇಲೆ ಆಧಾರಿತವಾಗಿದೆ. (ಯೋಹಾನ 13:35; ಎಫೆಸ 4:15, 16; ಫಿಲಿಪ್ಪಿ 2:1-4) ಇದು, ಪ್ರಗತಿಶೀಲರು ಮತ್ತು ಒಂದು ಕಾರ್ಯಯೋಜನೆಯಿಂದ​—⁠ಈ ವಿಷಯಗಳ ವ್ಯವಸ್ಥೆಯು ಕೊನೆಗೊಳ್ಳುವುದಕ್ಕೆ ಮೊದಲು ದೇವರ ಬರಲಿರುವ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಿಂದ​—⁠ಅಪಾರವಾಗಿ ಪ್ರಚೋದಿಸಲ್ಪಟ್ಟವರು ಆಗಿರುವಂಥ ಸ್ವಯಂ ಸೇವಕರ ಒಂದು ಸಮಾಜವಾಗಿದೆ. (ಮತ್ತಾಯ 24:14; 28:​19, 20) 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ, 60 ಲಕ್ಷಕ್ಕಿಂತಲೂ ಹೆಚ್ಚು ಕ್ರೈಸ್ತರು ಈಗಾಗಲೇ ಪ್ರೀತಿಭರಿತ, ಐಕ್ಯ ಅಂತಾರಾಷ್ಟ್ರೀಯ ಸಹೋದರತ್ವದಲ್ಲಿ ಒಟ್ಟಿಗೆ ಆರಾಧಿಸುತ್ತಿದ್ದಾರೆ.

ನಿಮ್ಮ ಬದುಕಿಗೆ ಅರ್ಥವನ್ನು ಕೊಡಿರಿ

ನಿಮ್ಮ ಬದುಕಿನಲ್ಲಿ ನೀವು ಹೆಚ್ಚಿನ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ, ಯೆಹೋವನ ಜನರೊಂದಿಗೆ, ಆತನ “ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗ”ದೊಂದಿಗೆ ಈಗಲೇ ಸಹವಾಸಮಾಡುವಂತೆ ಆತನು ನಿಮ್ಮನ್ನು ಆಮಂತ್ರಿಸುತ್ತಿದ್ದಾನೆ ಎಂಬುದನ್ನು ದಯವಿಟ್ಟು ಗ್ರಹಿಸಿರಿ. (ಯೆಶಾಯ 26:⁠2) ಆದರೂ, ‘ಈ ಕ್ರೈಸ್ತ ಸಮಾಜದಲ್ಲಿ ಬದುಕು ಹೇಗಿರುವುದು? ನಾನು ನಿಜವಾಗಿಯೂ ಈ ಸಮಾಜದ ಭಾಗವಾಗಬೇಕೊ?’ ಎಂದು ನೀವು ಕುತೂಹಲಪಡುತ್ತಿರಬಹುದು. ಕೆಲವು ಯುವಜನರು ಏನು ಹೇಳುತ್ತಾರೋ ಅದನ್ನು ಸ್ವಲ್ಪ ಕೇಳಿಸಿಕೊಳ್ಳಿ:

ಕ್ವೆಂಟನ್‌: “ಸಭೆಯು ನನಗೆ ಲೋಕದಿಂದ ರಕ್ಷಣೆಯನ್ನು ನೀಡುವ ತಾಣವಾಗಿದೆ. ನನ್ನ ಜೀವನದಲ್ಲಿ ಯೆಹೋವನು ಕ್ರಿಯಾಶೀಲನಾಗಿ ಒಳಗೂಡಿದ್ದಾನೆ ಎಂಬುದನ್ನು ಮನಗಾಣುವುದು, ಆತನು ಅಸ್ತಿತ್ವದಲ್ಲಿದ್ದಾನೆ ಮತ್ತು ನಾನು ಸಂತೋಷದಿಂದಿರಲು ಬಯಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.”

ಜೆಫ್‌: “ನಾನು ಉತ್ತೇಜನವನ್ನು ಪಡೆದುಕೊಳ್ಳಸಾಧ್ಯವಿರುವ ಅತ್ಯುತ್ತಮ ಸ್ಥಳ ಸಭೆಯಾಗಿದೆ. ನನ್ನ ಸಹೋದರ ಸಹೋದರಿಯರು ಅಲ್ಲಿದ್ದಾರೆ, ಅವರು ತಮ್ಮ ಬೆಂಬಲ ಹಾಗೂ ಶ್ಲಾಘನೆಯ ಮಹಾಪೂರವನ್ನೇ ಹರಿಸುತ್ತಾರೆ. ನಿಜವಾಗಿಯೂ ಅವರು ನನ್ನ ಸ್ವಂತ ಕುಟುಂಬದಂತಿದ್ದಾರೆ.”

ಲಿನೆಟ್‌: “ಯಾರಾದರೊಬ್ಬರು ಬೈಬಲ್‌ ಸತ್ಯವನ್ನು ಸ್ವೀಕರಿಸುವುದು ಮತ್ತು ಯೆಹೋವನ ಸೇವೆಯನ್ನು ಮಾಡಲು ತಮ್ಮನ್ನು ಸಮರ್ಪಿಸಿಕೊಳ್ಳುವುದನ್ನು ನೋಡುವುದರಿಂದ ಸಿಗುವ ಆನಂದವನ್ನು ಬೇರೆ ಯಾವುದೇ ವಿಚಾರಕ್ಕೆ ಹೋಲಿಸಲು ಸಾಧ್ಯವಿಲ್ಲ. ಇದು ನನ್ನ ಜೀವಿತಕ್ಕೆ ತುಂಬ ಸಂತೃಪ್ತಿಯನ್ನು ತರುತ್ತದೆ.”

ಕೋಡೀ: “ಯೆಹೋವನಿಲ್ಲದಿದ್ದರೆ ನನ್ನ ಬದುಕಿಗೆ ಯಾವುದೇ ಬೆಲೆಯಿರುತ್ತಿರಲಿಲ್ಲ. ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ, ಆದರೆ ಅದನ್ನು ಕಂಡುಕೊಳ್ಳಲು ಅಸಮರ್ಥರಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಗೊತ್ತುಗುರಿಯಿಲ್ಲದೆ ಅಲೆದಾಡುವ ಅನೇಕರಂತೆ ನಾನೂ ಅಲೆದಾಡುತ್ತಿರುತ್ತಿದ್ದೆ. ಅದಕ್ಕೆ ಬದಲಾಗಿ, ತನ್ನೊಂದಿಗೆ ಒಂದು ಸಂಬಂಧವನ್ನು ಕಾಪಾಡಿಕೊಳ್ಳುವಂಥ ಅಮೂಲ್ಯ ಸುಯೋಗವನ್ನು ಯೆಹೋವನು ನನಗೆ ಕೊಟ್ಟಿದ್ದಾನೆ, ಮತ್ತು ಇದು ನನ್ನ ಬದುಕಿಗೆ ಅರ್ಥವನ್ನು ಕೊಟ್ಟಿದೆ.”

ಸ್ವತಃ ನೀವೇ ಏಕೆ ಈ ವಿಷಯವನ್ನು ಪರಿಶೀಲಿಸಬಾರದು? ನಿಮ್ಮ ಸೃಷ್ಟಿಕರ್ತನಾಗಿರುವ ಯೆಹೋವ ದೇವರ ಹೆಚ್ಚು ಸಮೀಪಕ್ಕೆ ಬರುವ ಮೂಲಕ, ನೀವು ಬದುಕಿನಲ್ಲಿ ನಿಜವಾದ ಅರ್ಥವನ್ನು ಕಂಡುಕೊಳ್ಳುವಿರಿ ಎಂಬುದು ನಿಮಗೇ ಗೊತ್ತಾಗುವುದು.

[ಪುಟ 31ರಲ್ಲಿರುವ ಚಿತ್ರಗಳು]

ದೇವರೊಂದಿಗಿನ ಸಂಬಂಧವು ನಮ್ಮ ಬದುಕಿಗೆ ಅರ್ಥವನ್ನು ಕೊಡುತ್ತದೆ

[ಪುಟ 29ರಲ್ಲಿರುವ ಚಿತ್ರ ಕೃಪೆ]

NASA photo