“‘ಹೌದು!’ ಎಂದು ಹೇಳಲು ನಾವು ಬಯಸುತ್ತೇವೆ”
“‘ಹೌದು!’ ಎಂದು ಹೇಳಲು ನಾವು ಬಯಸುತ್ತೇವೆ”
ಇತ್ತೀಚೆಗೆ ನೈಜಿರೀಯದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು ಒಂದು ಪತ್ರವನ್ನು ಪಡೆದುಕೊಂಡಿತು. ಆ ಪತ್ರವು ಆಂಶಿಕವಾಗಿ ಹೀಗೆ ಓದುತ್ತದೆ:
“ನಮ್ಮ ಮಗನಾದ ಆ್ಯಂಡರ್ಸನ್ ಹದಿನಾಲ್ಕು ವರುಷ ಪ್ರಾಯದಲ್ಲಿ ತೀರಿಕೊಂಡನು. ಸಾಯುವ ಮುನ್ನ, ಅವನು ಎರಡು ಕೋಳಿಗಳನ್ನು ಸಾಕುತ್ತಿದ್ದ. ಮುಂದಕ್ಕೆ ಅದನ್ನು ಮಾರಿ, ಬಂದ ಹಣವನ್ನು ಬ್ರಾಂಚ್ ಆಫೀಸಿಗೆ ಕಳುಹಿಸಬೇಕೆಂಬುದು ಅವನ ಇಚ್ಛೆಯಾಗಿತ್ತು. ಆದರೆ ಅವುಗಳನ್ನು ಮಾರುವ ಮುನ್ನವೇ ಅವನು ತೀರಿಕೊಂಡನು.
“ಅವನ ಇಚ್ಛೆಯ ಮೇರೆಗೆ, ಹೆತ್ತವರಾದ ನಾವು ಆ ಕೋಳಿಗಳನ್ನು ಬೆಳೆಸಿ ಮಾರಿದೆವು. ಅದರಿಂದ ಸಿಕ್ಕಿರುವ ಹಣವನ್ನು ನಾವು ನಿಮಗೆ ಆ್ಯಂಡರ್ಸನ್‌ನ ಕಾಣಿಕೆಯಾಗಿ ಕಳುಹಿಸುತ್ತಿದ್ದೇವೆ. ಯೆಹೋವನ ವಾಗ್ದಾನದ ಕಾರಣ, ಬೇಗನೆ ಹೌದು ಅತಿ ಬೇಗನೆ, ಪುನಃ ಆ್ಯಂಡರ್ಸನ್‌ನನ್ನು ನೋಡುವೆವು ಎಂಬ ದೃಢಭರವಸೆ ನಮಗಿದೆ. ಅವನು ಪುನರುತ್ಥಾನವಾಗಿ ಬಂದ ನಂತರ, ಅವನ ಮನದಾಸೆಯನ್ನು ನಾವು ನೆರವೇರಿಸಿದ್ದೇವೋ ಎಂದು ಅವನು ಕೇಳುವಾಗ, ‘ಹೌದು!’ ಎಂದು ಹೇಳಲು ನಾವು ಬಯಸುತ್ತೇವೆ. ಆ್ಯಂಡರ್ಸನ್‌ನನ್ನು ಮಾತ್ರವಲ್ಲ ಪುನರುತ್ಥಾನ ಹೊಂದಲಿರುವ ‘ಮೇಘದೋಪಾದಿಯಲ್ಲಿರುವ ಸಾಕ್ಷಿಗಳನ್ನು’ ಸಹ ನೋಡಲು ನಾವು ಮುನ್ನೋಡುತ್ತಿದ್ದೇವೆ.”—ಇಬ್ರಿಯ 12:1; ಯೋಹಾನ 5:28, 29.
ಮೇಲಿನ ಪತ್ರದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಲ್ಪಟ್ಟಿರುವಂತೆ, ಪುನರುತ್ಥಾನದಲ್ಲಿನ ನಂಬಿಕೆಯು ನಿಜ ಕ್ರೈಸ್ತರನ್ನು ಬಲಪಡಿಸುವಂತಹ ಒಂದು ನಿರೀಕ್ಷೆಯಾಗಿದೆ. ಆ್ಯಂಡರ್ಸನ್‌ನ ಕುಟುಂಬದಂತೆ ಕೋಟ್ಯಂತರ ಕುಟುಂಬಗಳು, ಶತ್ರುವಾಗಿರುವ ಮರಣದಲ್ಲಿ ಕಳೆದುಕೊಂಡ ತಮ್ಮ ಪ್ರಿಯ ಜನರನ್ನು ಪುನಃ ಸ್ವಾಗತಿಸುವಾಗ ಎಷ್ಟೊಂದು ಆನಂದವನ್ನು ಅನುಭವಿಸುವವು!—1 ಕೊರಿಂಥ 15:24-26.
ದೇವರ ವಾಕ್ಯವು ಪುನರುತ್ಥಾನದ ಈ ಸಾಂತ್ವನದಾಯಕ ನಿರೀಕ್ಷೆಯನ್ನು ನೀಡುತ್ತದೆ. ದೇವರ ರಾಜ್ಯದ ಕೆಳಗಿನ ನೀತಿಯ ನೂತನ ಲೋಕದಲ್ಲಿ ಬೇಗನೆ ಸಂಭವಿಸಲಿರುವ ಅನೇಕ ಅದ್ಭುತಕರ ವಿಷಯಗಳಲ್ಲಿ ಇದೂ ಒಂದಾಗಿದೆ. (2 ಪೇತ್ರ 3:13) ಆ ಸಮಯದಲ್ಲಿ ಜನರಿಗಾಗಿ ದೇವರು ಏನು ಮಾಡಲಿದ್ದಾನೆ ಎಂಬದನ್ನು ತಿಳಿಸುತ್ತಾ ಬೈಬಲ್ ಹೇಳುವುದು: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.