ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅತ್ಯಂತ ಪ್ರಯೋಜನದಾಯಕ ಸಲಹೆಯನ್ನು ಕಂಡುಕೊಳ್ಳುವುದು

ಅತ್ಯಂತ ಪ್ರಯೋಜನದಾಯಕ ಸಲಹೆಯನ್ನು ಕಂಡುಕೊಳ್ಳುವುದು

ಅತ್ಯಂತ ಪ್ರಯೋಜನದಾಯಕ ಸಲಹೆಯನ್ನು ಕಂಡುಕೊಳ್ಳುವುದು

ಯಶಸ್ವಿಕರವಾದ ಜೀವನವು ನಿಜವಾಗಿಯೂ ಅಪೇಕ್ಷಣೀಯ. ಈ ಜಟಿಲ ಲೋಕದಲ್ಲಿ ಇಂಥ ಜೀವನವನ್ನು ಹೊಂದಲು, ಒಳ್ಳೇ ಸಲಹೆ ಹಾಗೂ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಬಯಕೆಗಳೇ ಕೀಲಿ ಕೈಗಳಾಗಿವೆ. ಆದರೂ, ಮಾನವರು ಯಾವಾಗಲೂ ಪ್ರಯೋಜನದಾಯಕ ಸಲಹೆಗೆ ಕಿವಿಗೊಡಲು ಸಿದ್ಧರಾಗಿಲ್ಲ. ಮನುಷ್ಯನು ತನ್ನ ಸ್ವಂತ ಇಷ್ಟಗಳಿಗನುಸಾರ ತನ್ನ ಜೀವನವನ್ನು ನಡೆಸಬೇಕು ಎಂದು ಅನೇಕರು ವಾದಿಸಿದ್ದಾರೆ. ವಾಸ್ತವದಲ್ಲಿ, ದೈವಿಕ ಪರಮಾಧಿಕಾರದ ಮೊತ್ತಮೊದಲ ಶತ್ರುವಾಗಿರುವ ಸೈತಾನನು ಪ್ರಥಮ ಮಾನವರೊಂದಿಗೆ ಸ್ವಾತಂತ್ರ್ಯದ ಪ್ರಸ್ತಾಪಮಾಡಿದನು ಎಂದು ಬೈಬಲ್‌ ದಾಖಲೆಯು ತೋರಿಸುತ್ತದೆ. ಹವ್ವಳಿಗೆ ಅವನು ಹೇಳಿದ ವಿಚಾರವನ್ನು ಆದಿಕಾಂಡ 3:5 ಹೀಗೆ ದಾಖಲಿಸುತ್ತದೆ: “ನೀವು ಇದರ [ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ] ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.”

ತದನಂತರ ಆದಾಮಹವ್ವರು ಕೇವಲ ತಮ್ಮ ಸ್ವಂತ ಅಭಿಪ್ರಾಯಗಳಿಂದ ಮಾರ್ಗದರ್ಶಿಸಲ್ಪಟ್ಟು, ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದೆ ಯಶಸ್ವಿಕರವಾಗಿ ಜೀವಿಸಲು ಶಕ್ತರಾದರೋ? ಖಂಡಿತವಾಗಿಯೂ ಇಲ್ಲ. ಒಳ್ಳೇದು ಮತ್ತು ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ಸ್ವತಃ ನಿರ್ಧರಿಸುವ ಸ್ವಾತಂತ್ರ್ಯವನ್ನು ತಮ್ಮದಾಗಿಸಿಕೊಂಡದ್ದರ ಫಲಿತಾಂಶಗಳಿಂದ ಅವರು ಆ ಕೂಡಲೇ ನಿರಾಶೆಗೊಂಡರು. ಯೋಗ್ಯವಾಗಿಯೇ ಅವರು ದೇವರ ಅಸಮ್ಮತಿಗೆ ಗುರಿಯಾದರು ಮತ್ತು ಅಪರಿಪೂರ್ಣತೆಯಲ್ಲಿ ಕಷ್ಟಕರ ಜೀವನವನ್ನು ಆರಂಭಿಸಿದರು, ಹಾಗೂ ಮರಣವು ಅಂತಿಮ ಫಲಿತಾಂಶವಾಗಿತ್ತು. (ಆದಿಕಾಂಡ 3:16-19, 23) ಮರಣವು ನಮ್ಮೆಲ್ಲರ ಮೇಲೂ ಪರಿಣಾಮ ಬೀರುತ್ತದೆ. ಬೈಬಲ್‌ ಹೇಳುವುದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”​—⁠ರೋಮಾಪುರ 5:⁠12.

ಆದಾಮಹವ್ವರ ಆಯ್ಕೆಯಿಂದ ಕೆಟ್ಟ ಪರಿಣಾಮಗಳು ಉಂಟಾಗಿರುವುದಾದರೂ, ಮನುಷ್ಯನನ್ನು ಸೃಷ್ಟಿಸಿದಾತನಿಂದ ಕೊಡಲ್ಪಡುವ ಸಲಹೆಯನ್ನು ಅನ್ವಯಿಸಿಕೊಳ್ಳುವುದರ ವಿವೇಕವನ್ನು ಅನೇಕರು ಇನ್ನೂ ಮನಗಂಡಿಲ್ಲ. ಆದರೂ ಬೈಬಲು ಹೇಳುವುದೇನೆಂದರೆ, ಅದು ‘ದೈವಪ್ರೇರಿತವಾಗಿದೆ ಮತ್ತು ಉಪಯುಕ್ತಕರವಾಗಿದೆ,’ ಹಾಗೂ ನಾವು ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗಲು’ ನಮಗೆ ಸಹಾಯಮಾಡಬಲ್ಲದು. (2 ತಿಮೊಥೆಯ 3:​16, 17) ಬೈಬಲಿನಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ನಾವು ಅನುಸರಿಸುವಲ್ಲಿ, ಖಂಡಿತವಾಗಿಯೂ ನಾವು ಹೆಚ್ಚು ಸಂತೋಷಭರಿತರಾಗಿರುವೆವು. ಇದು ಅನ್ವಯವಾಗುವ ಪ್ರಮುಖ ಕ್ಷೇತ್ರವು ಕುಟುಂಬ ಜೀವನವೇ ಆಗಿದೆ.

ದಾಂಪತ್ಯನಿಷ್ಠೆ

ಬೈಬಲಿಗನುಸಾರ, ವಿವಾಹವು ಶಾಶ್ವತವಾದ ಬಂಧವಾಗಿರಬೇಕು ಎಂಬುದೇ ದೇವರ ಉದ್ದೇಶವಾಗಿತ್ತು. (ಆದಿಕಾಂಡ 2:22-24; ಮತ್ತಾಯ 19:6) ಅಷ್ಟುಮಾತ್ರವಲ್ಲ, “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು,” ಅಂದರೆ ಈ ಸಂಬಂಧವು ಎಂದಿಗೂ ವಿವಾಹಬಾಹಿರ ಲೈಂಗಿಕ ಸಂಬಂಧಗಳಿಂದ ಕಳಂಕಗೊಳ್ಳಬಾರದು ಎಂದು ಶಾಸ್ತ್ರವಚನಗಳು ತಿಳಿಸುತ್ತವೆ. (ಇಬ್ರಿಯ 13:4) ಆದರೂ, ಇಂದು ಅನೇಕ ವಿವಾಹಗಳು ಈ ಮಟ್ಟಕ್ಕೆ ಹೊಂದಿಕೆಯಲ್ಲಿಲ್ಲ ಎಂಬುದು ನಿಮಗೆ ಗೊತ್ತಿರಬಹುದು. ಕೆಲವರು ಕೆಲಸದ ಸ್ಥಳದಲ್ಲಿ ತಮ್ಮ ವಿವಾಹ ಸಂಗಾತಿಗಳಾಗಿರದಂಥ ವ್ಯಕ್ತಿಗಳೊಂದಿಗೆ ಚೆಲ್ಲಾಟವಾಡುವುದನ್ನು ರೂಢಿಮಾಡಿಕೊಂಡಿರುತ್ತಾರೆ. ಇನ್ನಿತರರು ತಮ್ಮ ಸಂಗಾತಿಯಲ್ಲದ ವ್ಯಕ್ತಿಯೊಂದಿಗೆ ಸಮಯವನ್ನು ಕಳೆಯಲಿಕ್ಕಾಗಿ ತಮ್ಮ ಕುಟುಂಬದ ಸದಸ್ಯರಿಗೆ ಸುಳ್ಳುಹೇಳುತ್ತಾರೆ. ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಲ್ಪಟ್ಟ ವೆರೋನೀಕಾಳ ಜೀವನದಲ್ಲಿ ನಡೆದಂತೆ, ಇನ್ನು ಕೆಲವರು ಯುವ ಪ್ರಾಯದ ಸಹಭಾಗಿಯೊಂದಿಗೆ ಜೀವಿಸಲಿಕ್ಕಾಗಿ ತಮ್ಮ ವಿವಾಹ ಸಂಗಾತಿಯನ್ನೂ ತೊರೆಯುತ್ತಾರೆ, ಮತ್ತು ಈ ಮೂಲಕ, ತಮ್ಮಲ್ಲಿ ಇನ್ನೂ ತಾರುಣ್ಯವಿದೆ ಮತ್ತು ಹೆಚ್ಚು ಸಂತೋಷದ ಭಾವನೆಯುಂಟಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ.

ಆದರೂ, ಪರಿಣಾಮಗಳು ಏನೇ ಆಗಿರಲಿ ಒಬ್ಬನು ತನ್ನನ್ನೇ ಸಂತೋಷಪಡಿಸಿಕೊಳ್ಳಲು ನಿರ್ಧರಿಸುವುದು ಶಾಶ್ವತವಾದ ಸಂತೋಷವನ್ನು ಉಂಟುಮಾಡುವುದಿಲ್ಲ. ರಾನಲ್ಡ್‌ ಇದಕ್ಕೆ ರುಜುವಾತನ್ನು ನೀಡಬಲ್ಲನು. ತನ್ನ ಜೀವನವನ್ನು ಉತ್ತಮಗೊಳಿಸುವೆ ಎಂದು ಅವನೆಷ್ಟು ನಿಶ್ಚಿತನಾಗಿದ್ದನೆಂದರೆ ಅವನು ತನ್ನ ಪತ್ನಿಯನ್ನು ತೊರೆದು, ಆರು ವರ್ಷಗಳಿಂದ ಯಾರನ್ನು ಗುಪ್ತವಾಗಿ ಪ್ರೀತಿಸಿ, ಈಗಾಗಲೇ ಇಬ್ಬರು ಮಕ್ಕಳನ್ನು ಪಡೆದಿದ್ದನೋ ಆ ಸ್ತ್ರೀಯೊಂದಿಗೆ ಹೊಸ ಕುಟುಂಬವನ್ನು ಆರಂಭಿಸಲಿಕ್ಕಾಗಿ ಹೋದನು. ಆದರೂ, ಅವನು ತನ್ನ ವಿವಾಹವನ್ನು ಕೊನೆಗೊಳಿಸಿ ಸ್ವಲ್ಪ ಸಮಯದ ಬಳಿಕ, ಅವನ ಪ್ರೇಯಸಿಯೇ ಅವನನ್ನು ಬಿಟ್ಟುಹೋದಳು! ಕಡೆಗೆ ರಾನಲ್ಡ್‌ ತನ್ನ ಹೆತ್ತವರೊಂದಿಗೆ ವಾಸಿಸತೊಡಗಿದನು. ಅವನು ತನ್ನ ಸನ್ನಿವೇಶವನ್ನು “ನಾಚಿಕೆಗೇಡು” ಎಂದು ವರ್ಣಿಸಿದನು. ಇದು ಕೇವಲ ಒಂದು ಉದಾಹರಣೆಯಾಗಿದೆ. ಸ್ವಾರ್ಥಪರ ಬಯಕೆಗಳಿಂದ ಪ್ರಚೋದಿತವಾದ ಇಂಥ ನಡವಳಿಕೆಯು, ವಿವಾಹ ವಿಚ್ಛೇದಗಳೂ ಕುಟುಂಬದ ಒಡಕುಗಳೂ ಇದ್ದಕ್ಕಿದ್ದಂತೆ ಮತ್ತು ಆಗಿಂದಾಗ್ಗೆ ಸಂಭವಿಸುವಂತೆ ಮಾಡಿದೆ; ಇದರ ಫಲಿತಾಂಶವಾಗಿ ಅಸಂಖ್ಯಾತ ವ್ಯಕ್ತಿಗಳು, ಅಂದರೆ ವಯಸ್ಕರು ಹಾಗೂ ಮಕ್ಕಳು ಕಷ್ಟಾನುಭವಿಸುವಂತಾಗಿದೆ.

ಇನ್ನೊಂದು ಕಡೆಯಲ್ಲಿ, ಬೈಬಲ್‌ ಸಲಹೆಯನ್ನು ಪಾಲಿಸುವುದು ನಿಜವಾದ ಸಂತೋಷವನ್ನು ತರುತ್ತದೆ. ರೋಬರ್ಟೊವಿನ ವಿಷಯದಲ್ಲಿ ಇದು ನಿಜವಾಗಿತ್ತು. ಅವನು ಹೇಳುವುದು: “ಬೈಬಲು ಕೊಟ್ಟ ಸಲಹೆಯಿಂದಾಗಿಯೇ ನಾನು ನನ್ನ ಪತ್ನಿಯನ್ನು ಕಳೆದುಕೊಳ್ಳಲಿಲ್ಲ. ನಮ್ಮ ವಿವಾಹ ಸಂಗಾತಿಯಲ್ಲದ ಯಾರೊಂದಿಗಾದರೂ​—⁠ಅಂಥ ವ್ಯಕ್ತಿಯು ಎಷ್ಟೇ ಆಕರ್ಷಕವಾಗಿ ತೋರಬಹುದಾದರೂ​—⁠ಶೋಧನೆಗೆ ಒಳಗಾಗುವ ಮೂಲಕ ನಾವು ನಿಜವಾದ ಸಂತೋಷವನ್ನು ಪಡೆದುಕೊಳ್ಳಲಾರೆವು. ಬೈಬಲ್‌ ಶಿಕ್ಷಣವು, ಇಷ್ಟು ವರ್ಷಗಳಿಂದ ನನ್ನ ಜೊತೆಯಲ್ಲಿ ಬಾಳುತ್ತಿರುವ ನನ್ನ ಸಂಗಾತಿಯನ್ನು ಅಮೂಲ್ಯವಾಗಿ ಪರಿಗಣಿಸುವಂತೆ ನನಗೆ ಸಹಾಯಮಾಡಿದೆ.” “ಯಾವನೂ ತನ್ನ ಯೌವನದ ಪತ್ನಿಗೆ ದ್ರೋಹಮಾಡದಿರಲಿ” ಎಂಬ ಬೈಬಲ್‌ ಸಲಹೆಯು ರೋಬರ್ಟೊನ ಜೀವನದಲ್ಲಿ ಪ್ರಾಮುಖ್ಯವಾದ ಪಾತ್ರವನ್ನು ವಹಿಸಿತು. (ಮಲಾಕಿಯ 2:15) ಯಾವ ಇನ್ನಿತರ ವಿಷಯಗಳಲ್ಲಿ ನಾವು ದೈವಿಕ ಸಲಹೆಯಿಂದ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ?

ನಮ್ಮ ಮಕ್ಕಳನ್ನು ಬೆಳೆಸುವ ವಿಧ

ಕೆಲವು ದಶಕಗಳ ಹಿಂದೆ, ತಮ್ಮ ಮಕ್ಕಳನ್ನು ಬೆಳೆಸುವಾಗ ಹೆತ್ತವರು ಅನೇಕ ಗಡಿರೇಖೆಗಳನ್ನು ಸ್ಥಾಪಿಸಬಾರದು ಎಂಬ ವಿಚಾರಧಾರೆಯು ತುಂಬ ಜನಪ್ರಿಯವಾಯಿತು. ಹೇಗೆ ಆಲೋಚಿಸಬೇಕು ಹಾಗೂ ವರ್ತಿಸಬೇಕು ಎಂಬ ವಿಷಯದಲ್ಲಿ ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ ಮಕ್ಕಳನ್ನು ಅನುಮತಿಸುವುದು ತುಂಬ ತರ್ಕಸಮ್ಮತವಾದದ್ದಾಗಿ ಕಂಡುಬಂತು. ಅವರ ಅಭಿವೃದ್ಧಿಯನ್ನು ಕುಂಠಿತಗೊಳಿಸದಿರುವುದೇ ಇದರ ಮುಖ್ಯ ಹೇತುವಾಗಿತ್ತು. ಕೆಲವು ಸ್ಥಳಗಳಲ್ಲಿ, ಸ್ವಲ್ಪ ಕಡಿಮೆ ಸಂಘಟನೆ ಇರುವ ಶೈಕ್ಷಣಿಕ ಸಂಸ್ಥೆಗಳನ್ನೂ ಸ್ಥಾಪಿಸಲಾಯಿತು. ಇತರ ವಿಷಯಗಳೊಂದಿಗೆ, ತಾವು ಕ್ಲಾಸುಗಳಿಗೆ ಹಾಜರಾಗಬೇಕೊ ಬೇಡವೊ ಎಂಬುದನ್ನೂ ವಿದ್ಯಾರ್ಥಿಗಳೇ ನಿರ್ಧರಿಸಸಾಧ್ಯವಿತ್ತು ಮತ್ತು ತಾವು ಎಷ್ಟು ಪ್ರಮಾಣದ ಮನೋರಂಜನೆಯನ್ನು ಅಥವಾ ಶಿಕ್ಷಣವನ್ನು ಬಯಸುತ್ತೇವೆ ಎಂಬುದನ್ನು ಅವರೇ ಆಯ್ಕೆಮಾಡಸಾಧ್ಯವಿತ್ತು. ಈ ರೀತಿಯ ಶಾಲೆಯೊಂದರ ಧೋರಣೆಯು, “ವಯಸ್ಕರೊಬ್ಬರ ಟೀಕೆ ಮತ್ತು ಹಸ್ತಕ್ಷೇಪವಿಲ್ಲದೆ ಮಕ್ಕಳು ತಮ್ಮ ಆಯ್ಕೆಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವಂತೆ ಅನುಮತಿಸುವುದೇ” ಆಗಿತ್ತು. ಇಂದು, ಮಾನವ ನಡವಳಿಕೆಯ ಬಗ್ಗೆ ಸಲಹೆ ನೀಡುವಂಥ ಕೆಲವು ವ್ಯಕ್ತಿಗಳು, ಪ್ರೀತಿಪರ ಶಿಸ್ತನ್ನು ನೀಡುವ ಅಗತ್ಯವಿದೆ ಎಂದು ಹೆತ್ತವರು ನೆನಸುವಂಥ ಸಂದರ್ಭಗಳಲ್ಲೂ ನಿರ್ದಿಷ್ಟ ರೀತಿಯ ಶಿಸ್ತನ್ನು ನೀಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಪ್ರಶ್ನೆಯೆಬ್ಬಿಸುತ್ತಾರೆ.

ಇದರ ಫಲಿತಾಂಶವೇನಾಗಿದೆ? ಮಕ್ಕಳನ್ನು ಬೆಳೆಸುವ ಸ್ವಚ್ಛಂದ ವಿಧಾನಗಳು ಮಕ್ಕಳಿಗೆ ತೀರ ಹೆಚ್ಚು ಸ್ವಾತಂತ್ರ್ಯವನ್ನು ಕೊಟ್ಟಿವೆ ಎಂದು ಅನೇಕಾನೇಕ ಜನರು ನಂಬುತ್ತಾರೆ. ಇದು ದುಷ್ಕೃತ್ಯ ಹಾಗೂ ಅಮಲೌಷಧದ ಬಳಕೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆಯೆಂಬುದು ಅವರ ಅಭಿಪ್ರಾಯ. ಮಕ್ಕಳಿಗೆ ಹಾಗೂ ಯುವ ಜನರಿಗೆ ಅಗತ್ಯವಿರುವಷ್ಟು ನಿರ್ದೇಶನವು ಹೆತ್ತವರಿಂದ ಕೊಡಲ್ಪಡುತ್ತಿಲ್ಲ ಎಂಬುದು ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ಒಂದು ಸಮೀಕ್ಷೆಗೆ ಪ್ರತಿಸ್ಪಂದಿಸಿದವರಲ್ಲಿ ಸುಮಾರು 70 ಪ್ರತಿಶತದಷ್ಟು ಜನರ ಅಭಿಪ್ರಾಯವಾಗಿತ್ತು ಎಂದು ಆ ಸಮೀಕ್ಷೆಯು ಪ್ರಕಟಪಡಿಸಿತು. ಹದಿವಯಸ್ಕರಿಂದ ಶಾಲೆಯಲ್ಲಿ ನಡೆಸಲ್ಪಡುವ ಹತ್ಯೆಗಳು ಹಾಗೂ ಇತರ ಭೀಕರ ದುಷ್ಕೃತ್ಯಗಳಿಗೆ ಕಾರಣವೇನು ಎಂಬುದನ್ನು ವಿವರಿಸಲು ಪ್ರಯತ್ನಿಸುವಾಗ ಅನೇಕರು “ಹೆತ್ತವರ ನಿಯಂತ್ರಣದ ಕೊರತೆಯ” ಮೇಲೆ ಆರೋಪ ಹೊರಿಸುತ್ತಾರೆ. ಮತ್ತು ಫಲಿತಾಂಶಗಳು ಹೆಚ್ಚು ದುರಂತಮಯವಾಗಿ ಇಲ್ಲದಿರುವುದಾದರೂ, ಮಗುವನ್ನು ತಪ್ಪಾದ ರೀತಿಯಲ್ಲಿ ಬೆಳೆಸುವುದರ ಕಹಿ ಪರಿಣಾಮಗಳನ್ನಂತೂ ಹೆತ್ತವರು ಹಾಗೂ ಮಕ್ಕಳು ಅನುಭವಿಸೇ ತೀರುತ್ತಾರೆ.

ಈ ವಿಷಯದಲ್ಲಿ ಬೈಬಲ್‌ ಏನು ಹೇಳುತ್ತದೆ? ಹೆತ್ತವರು ಪ್ರೀತಿಯಿಂದ ಮತ್ತು ದೃಢತೆಯಿಂದ ಅಧಿಕಾರವನ್ನು ತೋರಿಸಬೇಕು ಎಂಬುದೇ ಶಾಸ್ತ್ರೀಯ ಸಲಹೆಯಾಗಿದೆ. ಬೈಬಲ್‌ ಹೇಳುವುದು: “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವದು.” (ಜ್ಞಾನೋಕ್ತಿ 22:15) ಹೆತ್ತವರು ನೀಡುವಂಥ ಎಲ್ಲಾ ರೀತಿಯ ಶಿಸ್ತು ಸನ್ನಿವೇಶಗಳಿಗೆ ಸೂಕ್ತವಾದದ್ದಾಗಿರಬೇಕು ಎಂಬುದಂತೂ ನಿಶ್ಚಯ. ಕೊಡಲ್ಪಡುವ ಯಾವುದೇ ಶಿಸ್ತನ್ನು ಸೌಮ್ಯಭಾವ, ಆತ್ಮನಿಯಂತ್ರಣ, ಹಾಗೂ ಪರಹಿತಚಿಂತನೆಗಳು ನಿಯಂತ್ರಿಸಬೇಕು. ಈ ರೀತಿಯಲ್ಲಿ ಶಿಸ್ತು ಕೊಡಲ್ಪಡುವಾಗ ಅದು ಪ್ರೀತಿಯ ಸಂಕೇತವಾಗಿರುವುದು. ಒರಟಾದ ಪಾಶವೀಯ ರೀತಿಯಲ್ಲಲ್ಲ, ಬದಲಾಗಿ ಪ್ರೀತಿಭರಿತ ರೀತಿಯಲ್ಲಿ ಹೆತ್ತವರು ಅಧಿಕಾರವನ್ನು ತೋರಿಸುವುದರಿಂದ ಯಶಸ್ಸನ್ನು ಗಳಿಸುವ ಹೆಚ್ಚಿನ ಸಂಭವನೀಯತೆ ಇದೆ.

ಈ ಬುದ್ಧಿವಾದವನ್ನು ಅನ್ವಯಿಸುವ ಮೂಲಕ ಗಮನಾರ್ಹ ರೀತಿಯ ಒಳ್ಳೇ ಫಲಿತಾಂಶಗಳು ಸಿಕ್ಕಿವೆ. ಇತ್ತೀಚಿಗೆ ವಿವಾಹವಾದ, ಮೆಕ್ಸಿಕೋದ 30 ವರ್ಷ ಪ್ರಾಯದ ಆರ್ಟೂರೊ ಎಂಬವನು ಹೇಳುವುದು: “ನನ್ನ ತಂದೆಯವರು, ತನಗೂ ತಾಯಿಗೂ ಈ ಕುಟುಂಬದಲ್ಲಿ ಅಧಿಕಾರವಿದೆ ಎಂಬುದನ್ನು ನನಗೆ, ನನ್ನ ಅಣ್ಣನಿಗೆ ಹಾಗೂ ತಮ್ಮನಿಗೆ ಸ್ಪಷ್ಟವಾಗಿ ಹೇಳಿದರು. ನಮಗೆ ಶಿಸ್ತನ್ನು ನೀಡಲು ಅವರೆಂದೂ ಹಿಂಜರಿಯಲಿಲ್ಲ. ಆದರೂ, ಅವರು ನಮ್ಮೊಂದಿಗೆ ಮಾತಾಡಲು ಯಾವಾಗಲೂ ಸಮಯವನ್ನು ಮಾಡಿಕೊಳ್ಳುತ್ತಿದ್ದರು. ಈಗ ನಾನೊಬ್ಬ ವಯಸ್ಕನಾಗಿರುವುದರಿಂದ, ನಾನು ಆನಂದಿಸುತ್ತಿರುವ ಸ್ಥಿರ ಜೀವಿತವು ನನಗೆ ತುಂಬ ಅಮೂಲ್ಯವಾದದ್ದಾಗಿದೆ, ಮತ್ತು ಇದು ಬಹುಪಾಲು, ನನಗೆ ಸಿಕ್ಕಿದ ಒಳ್ಳೇ ಮಾರ್ಗದರ್ಶನದ ಫಲಿತಾಂಶವಾಗಿದೆ ಎಂಬುದು ನನಗೆ ಗೊತ್ತಿದೆ.”

ಅತ್ಯಂತ ಪ್ರಯೋಜನದಾಯಕ ಸಲಹೆಯನ್ನು ಸದುಪಯೋಗಿಸಿಕೊಳ್ಳಿರಿ

ದೇವರ ವಾಕ್ಯವಾಗಿರುವ ಬೈಬಲಿನಲ್ಲಿ ಮಾನವಕುಲಕ್ಕೆ ಲಭ್ಯವಿರುವ ಅತ್ಯಂತ ಪ್ರಯೋಜನದಾಯಕ ಸಲಹೆ ಇದೆ. ಅದರ ಮಾರ್ಗದರ್ಶನವು ಕುಟುಂಬ ವೃತ್ತಕ್ಕೆ ಮಾತ್ರ ಸೀಮಿತವಾದುದಲ್ಲ. ಅದು ಅನೇಕ ವಿಧಗಳಲ್ಲಿ ನಮ್ಮನ್ನು ಸಿದ್ಧಪಡಿಸಲು ಸಹಾಯಮಾಡುತ್ತದೆ, ಏಕೆಂದರೆ ತಮ್ಮ ಸ್ವಂತ ಒಳಿತಿಗಾಗಿ ತಮ್ಮ ಜೀವನಗಳನ್ನು ವಿವೇಕದ ಪರಮಶ್ರೇಷ್ಠ ಮೂಲವು ತಾನೇ ನಿಯಂತ್ರಿಸಬೇಕು ಎಂಬುದನ್ನು ಅಧಿಕಾಂಶ ಮಂದಿ ಸ್ವೀಕರಿಸಲು ಸಿದ್ಧರಾಗಿರದಂಥ ಒಂದು ಲೋಕದಲ್ಲಿ ನಾವು ಹೇಗೆ ಕ್ರಿಯೆಗೈಯಬೇಕು ಎಂಬುದನ್ನು ಅದು ನಮಗೆ ಕಲಿಸುತ್ತದೆ.

ಮಾನವಕುಲದ ಸೃಷ್ಟಿಕರ್ತನಾಗಿರುವ ಯೆಹೋವ ದೇವರು, ಕೀರ್ತನೆಗಾರನಾದ ದಾವೀದನ ಮೂಲಕ ಈ ಆಶ್ವಾಸನೆಯನ್ನು ಕೊಟ್ಟನು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” (ಕೀರ್ತನೆ 32:⁠8) ನಮ್ಮನ್ನು ಅಪಾಯಗಳಿಂದ ಕಾಪಾಡಲಿಕ್ಕಾಗಿ ಸೃಷ್ಟಿಕರ್ತನು ನಮ್ಮನ್ನು ಕಟಾಕ್ಷಿಸುವುದು, ಇಲ್ಲವೆ ನಮ್ಮ ಮೇಲೆ ಕಣ್ಣಿಟ್ಟಿರುವುದು ಏನನ್ನು ಅರ್ಥೈಸುತ್ತದೆ ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಆದರೂ, ನಮ್ಮಲ್ಲಿ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆಯು ಯಾವುದೆಂದರೆ, ‘ನಾನು ದೀನಭಾವದಿಂದ ಯೆಹೋವನ ಸಂರಕ್ಷಣಾತ್ಮಕ ಮಾರ್ಗದರ್ಶನವನ್ನು ಅಂಗೀಕರಿಸುತ್ತೇನೋ?’ ಆತನ ವಾಕ್ಯವು ಪ್ರೀತಿಯಿಂದ ನಮಗೆ ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”​—⁠ಜ್ಞಾನೋಕ್ತಿ 3:5, 6.

ಯೆಹೋವನನ್ನು ತಿಳಿದುಕೊಳ್ಳುವುದು ಪ್ರಯತ್ನ ಹಾಗೂ ಸಮರ್ಪಣಾ ಮನೋಭಾವವನ್ನು ಅಗತ್ಯಪಡಿಸುತ್ತದೆ, ಆದರೆ ಬೈಬಲಿನ ಮೂಲಕ ಮಾನವಕುಲವು ಇದನ್ನು ಸಾಧಿಸಸಾಧ್ಯವಿದೆ. ಯೆಹೋವನು ಶಿಫಾರಸ್ಸುಮಾಡುವ ಜೀವನಮಾರ್ಗವು “ಇಹಪರಗಳಲ್ಲಿಯೂ ಜೀವವಾಗ್ದಾನ”ವುಳ್ಳದ್ದಾಗಿದೆ. ಅದು ನೀಡುವ ಪ್ರಯೋಜನಗಳನ್ನು ಪರಿಗಣಿಸುವಾಗ, ಇದು ನಿಜವಾಗಿಯೂ ಒಂದು ದೊಡ್ಡ ಲಾಭವಾಗಿದೆ.​—⁠1 ತಿಮೊಥೆಯ 4:8; 6:⁠6.

ಬೈಬಲ್‌ ನೀಡುವ ಒಳನೋಟದಿಂದ ಹಾಗೂ ಅದಕ್ಕೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ಫಲಿಸುವ ಆಶೀರ್ವಾದಗಳಿಂದ ನೀವು ಆಕರ್ಷಿತರಾಗಿರುವಲ್ಲಿ, ದೇವರ ವಾಕ್ಯವನ್ನು ಓದುವುದನ್ನು ಹಾಗೂ ಧ್ಯಾನಿಸುವುದನ್ನು ನಿಮ್ಮ ಜೀವಿತದಲ್ಲಿ ಪ್ರಥಮ ಸ್ಥಾನದಲ್ಲಿಡಿ. ಹೀಗೆ ಮಾಡುವುದು ಇಂದಿನ ಪಂಥಾಹ್ವಾನಗಳನ್ನು ಹಾಗೂ ಮುಂದೆ ಎದುರಾಗಬಹುದಾದ ಯಾವುದೇ ಪಂಥಾಹ್ವಾನಗಳನ್ನು ಯಶಸ್ವಿಕರವಾಗಿ ಎದುರಿಸಲು ನಿಮಗೆ ಸಹಾಯಮಾಡುವುದು. ಅಷ್ಟುಮಾತ್ರವಲ್ಲ, ನೀವು ದೇವರ ನೂತನ ಲೋಕದಲ್ಲಿ ಜೀವಿಸುವ ನಿರೀಕ್ಷೆಯನ್ನು ಕಂಡುಕೊಳ್ಳುವಿರಿ, ಅಲ್ಲಿ ಎಲ್ಲರೂ ಯೆಹೋವನಿಂದ ಶಿಕ್ಷಿಸಲ್ಪಡುವರು ಮತ್ತು ಅಧಿಕ ಸುಕ್ಷೇಮವಿರುವುದು.​—⁠ಯೆಶಾಯ 54:⁠13.

[ಪುಟ 5ರಲ್ಲಿರುವ ಚಿತ್ರ]

ಬೈಬಲಿನ ಸಲಹೆಯು ವಿವಾಹ ಬಂಧವನ್ನು ಬಲಗೊಳಿಸಬಲ್ಲದು

[ಪುಟ 6ರಲ್ಲಿರುವ ಚಿತ್ರಗಳು]

ಬೈಬಲ್‌ ಸಲಹೆಯು ಅತ್ಯುತ್ತಮ ಮಾರ್ಗದರ್ಶನಕ್ಕೆ ಮೂಲಾಧಾರವಾಗಿದೆ, ಆದರೆ ಅದು ಸುಖಾನುಭವಕ್ಕೂ ಎಡೆಮಾಡಿಕೊಡುತ್ತದೆ

[ಪುಟ 7ರಲ್ಲಿರುವ ಚಿತ್ರಗಳು]

ಬೈಬಲ್‌ ಸಲಹೆಯನ್ನು ಅನ್ವಯಿಸಿಕೊಳ್ಳುವವರು ಒಂದು ಸಮತೂಕ ಜೀವನದಲ್ಲಿ ಆನಂದಿಸಬಲ್ಲರು