ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಸಲಹೆಯ ಅಗತ್ಯವಿದೆಯೋ?

ಒಳ್ಳೇ ಸಲಹೆಯ ಅಗತ್ಯವಿದೆಯೋ?

ಒಳ್ಳೇ ಸಲಹೆಯ ಅಗತ್ಯವಿದೆಯೋ?

ಇಂದು ಅನೇಕರು, ತಮಗೆ ಒಳ್ಳೇದು ಮತ್ತು ಕೆಟ್ಟದ್ದರ ವ್ಯತ್ಯಾಸವನ್ನು ಅರಿಯುವ ಸಾಮರ್ಥ್ಯವಿದೆ ಮತ್ತು ತಮಗೆ ಏನು ಇಷ್ಟವಿದೆಯೊ ಅದನ್ನು ಮಾಡುವ ಹಕ್ಕು ತಮಗಿದೆ ಎಂದು ನಂಬುತ್ತಾರೆ. ಯಾವುದೇ ವಿಷಯವಾಗಿರಲಿ, ಅದು ಒಬ್ಬನಿಗೆ ಸಂತೋಷ ನೀಡುತ್ತದಾದರೆ, ಖಂಡಿತವಾಗಿಯೂ ಅದು ಅಂಗೀಕೃತವಾಗಿದೆ ಎಂದು ಇತರರು ಹೇಳುತ್ತಾರೆ. ಬಹಳ ದೀರ್ಘಕಾಲದಿಂದಲೂ ಮಾನವ ಸಮಾಜದ ಮೂಲಭೂತ ಏರ್ಪಾಡುಗಳಾಗಿ ಪರಿಗಣಿಸಲ್ಪಟ್ಟಿದ್ದ ವಿವಾಹ ಮತ್ತು ಕುಟುಂಬ ಜೀವನವು ಈಗ ಗಂಭೀರವಾಗಿ ಬಾಧಿಸಲ್ಪಟ್ಟಿದೆ.​—⁠ಆದಿಕಾಂಡ 3:⁠5.

ಮೆಕ್ಸಿಕೋದಲ್ಲಿ ವಾಸಿಸುತ್ತಿರುವ ವೆರೋನೀಕಾಳನ್ನು ಪರಿಗಣಿಸಿರಿ. * ಅವಳು ವರದಿಸುವುದು: “ನಮ್ಮ ವಿವಾಹದ 15ನೇ ವಾರ್ಷಿಕೋತ್ಸವಕ್ಕೆ ಸ್ವಲ್ಪ ಮುಂಚೆ, ನನ್ನ ಗಂಡನು ತಾನು ಬೇರೊಬ್ಬ ಸ್ತ್ರೀಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದೇನೆಂದು ನನಗೆ ಹೇಳಿದನು. ಆ ಸ್ತ್ರೀ ಯುವ ಪ್ರಾಯದವಳಾಗಿದ್ದು, ತನಗೆ ಹೆಚ್ಚು ಸಂತೋಷವನ್ನು ಕೊಡುತ್ತಿರುವುದರಿಂದ ತಾನು ಅವಳನ್ನು ಬಿಡಲಾರೆನೆಂದು ಅವನು ಹೇಳಿದನು. ಸದಾ ನನ್ನ ಜೊತೆ ಇರಬೇಕಾಗಿದ್ದ ನನ್ನ ಪರಮಮಿತ್ರನು ಇನ್ನೆಂದೂ ನನ್ನ ಪಕ್ಕ ಇರನು ಎಂಬ ಯೋಚನೆಯೇ ನನಗೆ ಆಘಾತವನ್ನುಂಟುಮಾಡಿತು. ನಮ್ಮ ಪ್ರಿಯ ವ್ಯಕ್ತಿಗಳ ಮರಣವೇ ಅತ್ಯಂತ ಅಪಾರ ವೇದನೆಯನ್ನು ಉಂಟುಮಾಡುವ ಸಂಗತಿಯಾಗಿದೆ ಎಂದು ನಾನು ನೆನಸುತ್ತಿದ್ದೆ. ಆದರೆ ನನ್ನ ವಿಷಯದಲ್ಲಿ ಹೇಳುವುದಾದರೆ, ವ್ಯಭಿಚಾರವು ಹೆಚ್ಚು ವೇದನಾಭರಿತ ಸಂಗತಿಯಾಗಿತ್ತು, ಏಕೆಂದರೆ ನಾನು ಮನಸಾರೆ ಪ್ರೀತಿಸುತ್ತಿದ್ದಂಥ ವ್ಯಕ್ತಿಯನ್ನು ಕಳೆದುಕೊಂಡೆ ಮಾತ್ರವಲ್ಲ, ಅವನು ನನಗೆ ನೋವನ್ನು ಉಂಟುಮಾಡುತ್ತಿದ್ದ ಸಂಗತಿಗಳನ್ನೇ ಮಾಡುತ್ತಾ ಮುಂದುವರಿದನು.”

ಇನ್ನೊಂದು ಸನ್ನಿವೇಶವು, 22 ವರ್ಷ ಪ್ರಾಯದ ಪುರುಷನದ್ದಾಗಿದೆ. ಅವನು ಈಗಾಗಲೇ ವಿವಾಹ ವಿಚ್ಛೇದ ಪಡೆದುಕೊಂಡಿದ್ದು, ಅವನಿಗೆ ಒಬ್ಬ ಮಗನಿದ್ದಾನೆ. ಆದರೆ ಒಬ್ಬ ತಂದೆಯೋಪಾದಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ಅವನು ಸ್ವಲ್ಪವೂ ಸಿದ್ಧನಿಲ್ಲ. ತನ್ನನ್ನೂ ಮಗನನ್ನೂ ತನ್ನ ತಾಯಿಯೇ ನೋಡಿಕೊಳ್ಳಬೇಕೆಂದು ಅವನು ನಿರೀಕ್ಷಿಸುತ್ತಾನೆ. ಅವನು ತಗಾದೆಮಾಡುವ ಎಲ್ಲಾ ವಿಷಯಗಳನ್ನು ಪೂರೈಸಲು ತಾಯಿ ಒಪ್ಪಿಕೊಳ್ಳದಿರುವಾಗ, ಅವನು ತುಂಬ ಕೋಪಾವೇಶಗೊಳ್ಳುತ್ತಾನೆ ಮತ್ತು ಒಬ್ಬ ಅಸಭ್ಯ ಮಗುವಿನಂತೆ ತಾಯಿಯ ಮೇಲೆ ವಾಗ್ದಾಳಿಮಾಡುತ್ತಾನೆ. ಇಂಥ ಮನನೋಯಿಸುವ ವರ್ತನೆಯನ್ನು ಎದುರಿಸುವಾಗ ತಾಯಿಗೆ ತುಂಬ ಅಸಹಾಯಕ ಅನಿಸಿಕೆಯಾಗುತ್ತದೆ.

ಇವು ತುಂಬ ಅಪರೂಪದ ಸಂಗತಿಗಳೇನಲ್ಲ. ಕಾನೂನುಬದ್ಧ ಪ್ರತ್ಯೇಕವಾಸ ಮತ್ತು ವಿವಾಹ ವಿಚ್ಛೇದವು ಎಲ್ಲಾ ಕಡೆಗಳಲ್ಲೂ ಹೆಚ್ಚುತ್ತಿವೆ. ಅನೇಕ ಮಕ್ಕಳು ತಮ್ಮ ಹೆತ್ತವರಲ್ಲಿ ಒಬ್ಬರು ಹೊಸ ಜೀವನವನ್ನು ಆರಂಭಿಸಲಿಕ್ಕಾಗಿ ಮನೆಬಿಟ್ಟು ಹೋಗುವುದನ್ನು ನೋಡುತ್ತಾರೆ. ಕೆಲವು ಯುವ ಜನರು ತಮ್ಮ ಹೆತ್ತವರ ಜೊತೆಗೆ ಇತರರ ಕಡೆಗೂ ಗೌರವವನ್ನು ಕಳೆದುಕೊಂಡಿದ್ದಾರೆ, ಮತ್ತು ಗತಕಾಲದಲ್ಲಿ ಊಹಿಸಲೂ ಅಸಾಧ್ಯವಾಗಿದ್ದಂಥ ವರ್ತನೆಯಲ್ಲಿ ಒಳಗೂಡುತ್ತಾರೆ. ಲೈಂಗಿಕ ಪ್ರಯೋಗಪರೀಕ್ಷೆ, ಅಮಲೌಷಧಗಳ ದುರುಪಯೋಗ, ಯುವ ಜನರಿಂದ ಆಕ್ರಮಣಗಳು, ಮತ್ತು ಮಕ್ಕಳಿಂದ ಶಿಕ್ಷಕರ ಅಥವಾ ಹೆತ್ತವರ ಹತ್ಯೆಗಳಂಥ ಸಂಗತಿಗಳು ಅನೇಕ ದೇಶಗಳಲ್ಲಿ ಸರ್ವಸಾಮಾನ್ಯವಾಗಿಬಿಟ್ಟಿವೆ. ಮತ್ತು ಇಂದಿನ ಲೋಕದಲ್ಲಿ ಮಕ್ಕಳ ಪೋಷಣೆ ಮತ್ತು ವಿವಾಹದಂಥ ಕ್ಷೇತ್ರಗಳು ಮಾತ್ರವೇ ಕಷ್ಟತೊಂದರೆಗಳನ್ನು ಎದುರಿಸುತ್ತಿಲ್ಲ ಎಂಬುದನ್ನು ನೀವು ಗಮನಿಸಿರಬಹುದು.

ಈ ವಿಕಸನಗಳನ್ನು ಗಮನಿಸುವಾಗ, ಸಮಾಜಕ್ಕೆ ಏನಾಗಿದೆ ಎಂದು ನಾವು ಕುತೂಹಲಪಡಬಹುದು. ಒಂದುವೇಳೆ ಜನರಿಗೆ ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬುದು ನಿಜವಾಗಿಯೂ ತಿಳಿದಿರುವಲ್ಲಿ, ಇಷ್ಟೊಂದು ಸಮಸ್ಯೆಗಳು ಬಗೆಹರಿಸಲ್ಪಡದೇ ಉಳಿದಿರುವುದೇಕೆ? ಒಳ್ಳೇ ಸಲಹೆಯ ಅಗತ್ಯವಿದೆಯೋ? ಅಂಥ ಪ್ರಯೋಜನದಾಯಕ ಸಲಹೆಯ ಒಂದು ಮೂಲ, ಅಂದರೆ ವಿಶ್ವಾಸಾರ್ಹವಾಗಿ ಕಂಡುಬಂದಿರುವಂಥ ಒಂದು ಮೂಲವು ಇದೆಯೋ? ಅನೇಕರು ತಾವು ದೇವರಲ್ಲಿ ಹಾಗೂ ಆತನ ಲಿಖಿತ ವಾಕ್ಯದಲ್ಲಿ ನಂಬಿಕೆಯಿಡುತ್ತೇವೆ ಎಂದು ಹೇಳುವುದಾದರೂ, ಈ ಪ್ರತಿಪಾದನೆಯು ಅವರ ನಿರ್ಣಯಗಳನ್ನು ಪ್ರಭಾವಿಸುತ್ತಿರುವಂತೆ ತೋರುವುದಿಲ್ಲ. ಆದರೆ ದೇವರಿಂದ ನಾವು ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ ಮತ್ತು ಪಡೆದುಕೊಂಡಾಗ ನಾವು ಯಾವ ಪ್ರಯೋಜನಗಳನ್ನು ಪಡೆದುಕೊಳ್ಳಬಲ್ಲೆವು? ನಾವಿದನ್ನು ಮುಂದಿನ ಲೇಖನದಲ್ಲಿ ಪರಿಗಣಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 3 ಹೆಸರನ್ನು ಬದಲಾಯಿಸಲಾಗಿದೆ.