ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟವರು

ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟವರು

ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟವರು

“ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು.”​—⁠ಯೋಹಾನ 15:⁠25.

ಯೆಹೋವನ ಸಾಕ್ಷಿಗಳು ದೇವರ ವಾಕ್ಯದಲ್ಲಿ ಕಂಡುಬರುವ ಮೂಲತತ್ತ್ವಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಾರೆ. ಇದರ ಫಲಿತಾಂಶವಾಗಿ, ಅನೇಕ ದೇಶಗಳಲ್ಲಿ ಅವರಿಗೆ ಒಳ್ಳೇ ಹೆಸರಿದೆ. ಆದರೂ, ಕೆಲವೊಮ್ಮೆ ಅವರು ತಪ್ಪಾಗಿ ಪ್ರತಿನಿಧಿಸಲ್ಪಟ್ಟಿದ್ದಾರೆ. ಉದಾಹರಣೆಗೆ, ರಷ್ಯದ ಸೆಂಟ್‌ ಪೀಟರ್ಸ್‌ಬರ್ಗ್‌ನ ನಗರವೊಂದರ ಸರಕಾರಿ ಅಧಿಕಾರಿಯೊಬ್ಬನು ಹೀಗೆ ಜ್ಞಾಪಿಸಿಕೊಂಡನು: “ಯೆಹೋವನ ಸಾಕ್ಷಿಗಳು ಗೋಪ್ಯವಾಗಿದ್ದು, ಮಕ್ಕಳನ್ನು ವಧಿಸುತ್ತಾ ತಮ್ಮನ್ನೇ ಕೊಂದುಕೊಳ್ಳುತ್ತಾ ಇರುವ ಒಂದು ರೀತಿಯ ಗುಪ್ತ ಪಂಥವಾಗಿದ್ದಾರೆ ಎಂದು ನಮಗೆ ವರದಿಸಲಾಗಿತ್ತು.” ಆದರೆ ಒಂದು ಅಂತಾರಾಷ್ಟ್ರೀಯ ಅಧಿವೇಶನದ ಸಂಬಂಧದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಕೆಲಸಮಾಡಿದ ಬಳಿಕ, ಅದೇ ಅಧಿಕಾರಿಯು ಹೇಳಿದ್ದು: “ಈಗ ನಾನು, ಇತರ ಜನರಂತೆಯೇ ಇರುವ, ನಸುನಗುತ್ತಿರುವ ಜನರನ್ನು ನೋಡುತ್ತೇನೆ . . . ಅವರು ಶಾಂತಿಭರಿತರೂ ಸೌಮ್ಯರೂ ಆಗಿದ್ದು, ಒಬ್ಬರನ್ನೊಬ್ಬರು ಅಪಾರವಾಗಿ ಪ್ರೀತಿಸುತ್ತಾರೆ.” ಅವನು ಕೂಡಿಸಿ ಹೇಳಿದ್ದು: “ಜನರು ಅವರ ಬಗ್ಗೆ ಯಾಕೆ ಇಷ್ಟು ಸುಳ್ಳುಗಳನ್ನು ಹೇಳುತ್ತಾರೆ ಎಂಬುದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ.”​—⁠1 ಪೇತ್ರ 3:16.

2 ದೇವರ ಸೇವಕರು ಕೆಡುಕರೆಂದು ಸುಳ್ಳಾಗಿ ಕರೆಸಿಕೊಳ್ಳುವುದರಲ್ಲಿ ಯಾವುದೇ ರೀತಿಯ ಸಂತೋಷವನ್ನು ಕಂಡುಕೊಳ್ಳುವುದಿಲ್ಲ, ಆದರೂ ತಮ್ಮ ವಿರುದ್ಧ ಜನರು ಮಾತಾಡುವಾಗ ಅವರಿಗೇನೂ ಆಶ್ಚರ್ಯವಾಗುವುದಿಲ್ಲ. ಯೇಸು ತನ್ನ ಹಿಂಬಾಲಕರಿಗೆ ಮುನ್ನೆಚ್ಚರಿಕೆ ನೀಡಿದ್ದು: “ಲೋಕವು ನಿಮ್ಮ ಮೇಲೆ ದ್ವೇಷಮಾಡುವದಾದರೆ ಅದು ಮೊದಲು ನನ್ನ ಮೇಲೆ ದ್ವೇಷಮಾಡಿತೆಂದು ತಿಳುಕೊಳ್ಳಿರಿ. . . . ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.” * (ಯೋಹಾನ 15:18-20, 25; ಕೀರ್ತನೆ 35:19; 69:4) ಅದಕ್ಕೂ ಮುಂಚೆ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟ ಮೇಲೆ ಆತನ ಮನೆಯವರನ್ನು ಏನಂದಾರು?” (ಮತ್ತಾಯ 10:25) ಇಂಥ ನಿಂದೆಯನ್ನು ಸಹಿಸುವುದು, ಅವರು ಕ್ರಿಸ್ತನ ಹಿಂಬಾಲಕರಾದಾಗ ಅಂಗೀಕರಿಸಿದಂಥ “ಯಾತನಾ ಕಂಬ”ದ (NW) ಭಾಗವಾಗಿದೆ ಎಂಬುದನ್ನು ಕ್ರೈಸ್ತರು ಅರ್ಥಮಾಡಿಕೊಳ್ಳುತ್ತಾರೆ.​—⁠ಮತ್ತಾಯ 16:⁠24.

3 ಸತ್ಯಾರಾಧಕರ ಹಿಂಸೆಯು “ನೀತಿವಂತನಾದ ಹೇಬೆಲನ” ಕಾಲದಷ್ಟು ಹಿಂದಿನಿಂದ ಆರಂಭಿಸುತ್ತಾ ದೀರ್ಘವಾದ ಚರಿತ್ರೆಯುಳ್ಳದ್ದಾಗಿದೆ. (ಮತ್ತಾಯ 23:​34, 35) ಅದು ಕೇವಲ ಕೆಲವೇ ಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ತನ್ನ ಹೆಸರಿನ ನಿಮಿತ್ತ ತನ್ನ ಹಿಂಬಾಲಕರನ್ನು “ಎಲ್ಲರೂ ಹಗೆಮಾಡುವರು” ಎಂದು ಯೇಸು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 10:22) ಅಷ್ಟುಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬರನ್ನೂ ಸೇರಿಸಿ ದೇವರ ಸೇವಕರೆಲ್ಲರೂ ಹಿಂಸೆಯನ್ನು ನಿರೀಕ್ಷಿಸಬೇಕು ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:12) ಇದಕ್ಕೆ ಕಾರಣವೇನು?

ಅನುಚಿತ ದ್ವೇಷದ ಮೂಲ

4 ಆರಂಭದಿಂದಲೂ ಅಗೋಚರನಾದ ಒಬ್ಬನು ದ್ವೇಷವನ್ನು ಚಿತಾಯಿಸುತ್ತಿದ್ದಾನೆ ಎಂದು ದೇವರ ವಾಕ್ಯವು ಬಯಲುಪಡಿಸುತ್ತದೆ. ಪ್ರಥಮ ನಂಬಿಗಸ್ತ ಪುರುಷನಾಗಿದ್ದ ಹೇಬೆಲನ ಪಾಶವೀಯ ಕೊಲೆಯನ್ನು ಪರಿಗಣಿಸಿರಿ. ಅವನ ಕೊಲೆಗಡುಕ ಸಹೋದರನಾದ ಕಾಯಿನನು “ಕೆಡುಕನಿಂದ,” ಅಂದರೆ ಪಿಶಾಚನಾದ ಸೈತಾನನಿಂದ ‘ಹುಟ್ಟಿದನು’ ಎಂದು ಬೈಬಲ್‌ ಹೇಳುತ್ತದೆ. (1 ಯೋಹಾನ 3:12) ಕಾಯಿನನು ಸೈತಾನನ ಮನೋವೃತ್ತಿಯನ್ನು ತೋರಿಸಿದನು, ಮತ್ತು ತನ್ನ ದುಷ್ಟ ಒಳಸಂಚುಗಳನ್ನು ಪೂರೈಸಲಿಕ್ಕಾಗಿ ಪಿಶಾಚನು ಅವನನ್ನು ಉಪಯೋಗಿಸಿದನು. ಯೋಬನ ಮೇಲೆ ಹಾಗೂ ಯೇಸು ಕ್ರಿಸ್ತನ ಮೇಲೆ ನಡೆಸಲ್ಪಟ್ಟ ದುರಾಕ್ರಮಣಗಳಲ್ಲಿಯೂ ಸೈತಾನನು ವಹಿಸಿದ ಪಾತ್ರವನ್ನು ಬೈಬಲ್‌ ಬಯಲುಪಡಿಸುತ್ತದೆ. (ಯೋಬ 1:12; 2:6, 7; ಯೋಹಾನ 8:​37, 44; 13:27) ಯೇಸುವಿನ ಹಿಂಬಾಲಕರ ಹಿಂಸೆಯ ಮೂಲವನ್ನು ಪ್ರಕಟನೆ ಪುಸ್ತಕವು ಸುಸ್ಪಷ್ಟವಾಗಿ ಸೂಚಿಸುತ್ತಾ ಹೇಳುವುದು: “ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ.” (ಓರೆ ಅಕ್ಷರಗಳು ನಮ್ಮವು.) (ಪ್ರಕಟನೆ 2:​10) ಹೌದು, ದೇವಜನರ ವಿರುದ್ಧ ತೋರಿಸಲ್ಪಡುವ ಎಲ್ಲಾ ರೀತಿಯ ಅನುಚಿತ ದ್ವೇಷದ ಮೂಲನು ಸೈತಾನನೇ ಆಗಿದ್ದಾನೆ.

5 ಸತ್ಯಾರಾಧಕರ ಕಡೆಗಿನ ಸೈತಾನನ ದ್ವೇಷದ ಹಿಂದಿರುವ ಕಾರಣವೇನು? ಅಸಾಧಾರಣ ಮಟ್ಟದ ಒಣಹೆಮ್ಮೆಯನ್ನು ತೋರಿಸುವಂಥ ಒಂದು ಒಳಸಂಚಿನಲ್ಲಿ ಸೈತಾನನು “ಸರ್ವಯುಗಗಳ ಅರಸ”ನಾಗಿರುವ ಯೆಹೋವ ದೇವರ ವಿರುದ್ಧ ರಂಗಕ್ಕಿಳಿದಿದ್ದಾನೆ. (1 ತಿಮೊಥೆಯ 1:17; 3:6) ತನ್ನ ಸೃಷ್ಟಿಜೀವಿಗಳ ಮೇಲಿನ ತನ್ನ ಆಳ್ವಿಕೆಯಲ್ಲಿ ದೇವರು ಅಗತ್ಯಕ್ಕಿಂತ ಹೆಚ್ಚು ನಿರ್ಬಂಧಗಳನ್ನು ಒಡ್ಡುತ್ತಾನೆ ಮತ್ತು ಯಾರೊಬ್ಬರೂ ಒಳ್ಳೇ ಹೇತುವಿನಿಂದ ಯೆಹೋವನ ಸೇವೆಮಾಡುವುದಿಲ್ಲ, ಕೇವಲ ಸ್ವಾರ್ಥ ಲಾಭಕ್ಕಾಗಿ ಜನರು ಹಾಗೆ ಮಾಡುತ್ತಾರೆ ಎಂದು ಅವನು ವಾದಿಸುತ್ತಾನೆ. ಮಾನವರನ್ನು ಪರೀಕ್ಷೆಗೊಳಪಡಿಸಲು ದೇವರು ತನಗೆ ಅನುಮತಿ ನೀಡುವಲ್ಲಿ, ಆತನ ಸೇವೆಮಾಡುವುದರಿಂದ ಪ್ರತಿಯೊಬ್ಬರನ್ನು ತಾನು ವಿಮುಖಗೊಳಿಸಬಲ್ಲೆ ಎಂದು ಸೈತಾನನು ಪ್ರತಿಪಾದಿಸುತ್ತಾನೆ. (ಆದಿಕಾಂಡ 3:1-6; ಯೋಬ 1:6-12; 2:1-7) ಯೆಹೋವನು ಒಬ್ಬ ಪೀಡಕನು, ಸುಳ್ಳುಗಾರನು, ಮತ್ತು ಸೋತವನಾಗಿದ್ದಾನೆ ಎಂದು ಆತನ ಹೆಸರನ್ನು ಕೆಡಿಸುವ ಮೂಲಕ ಸೈತಾನನು ತನ್ನನ್ನು ಒಬ್ಬ ಪ್ರತಿಸ್ಪರ್ಧಿ ಪರಮಾಧಿಕಾರಿಯಾಗಿ ರುಜುಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಹೀಗೆ, ದೇವರ ಸೇವಕರ ವಿರುದ್ಧ ಅವನಿಗಿರುವ ಕ್ರೋಧವು, ತನಗೆ ಆರಾಧನೆಯು ಸಲ್ಲಬೇಕೆಂಬ ಅವನ ಉತ್ಕಟ ಬಯಕೆಯಿಂದ ಪ್ರಚೋದಿಸಲ್ಪಟ್ಟಿದೆ.​—⁠ಮತ್ತಾಯ 4:​8, 9.

6 ಈ ವಿವಾದಾಂಶವು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಅರ್ಥವಾಗುತ್ತಿದೆಯೋ? ಯೆಹೋವ ದೇವರ ಒಬ್ಬ ಸೇವಕರೋಪಾದಿ, ಆತನ ಚಿತ್ತವನ್ನು ಮಾಡಲು ಶ್ರದ್ಧಾಪೂರ್ವಕ ಪ್ರಯತ್ನದ ಅಗತ್ಯವಿದ್ದರೂ, ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನಗಳು ಅತ್ಯಧಿಕ ಎಂಬುದನ್ನು ನೀವು ಮನಗಂಡಿರುವ ಸಾಧ್ಯತೆ ಇದೆ. ಆದರೆ, ಒಂದುವೇಳೆ ನಿಮ್ಮ ಜೀವಿತದ ಪರಿಸ್ಥಿತಿಗಳು ನೀವು ಯೆಹೋವನ ನಿಯಮಗಳಿಗೆ ಹಾಗೂ ಮೂಲತತ್ತ್ವಗಳಿಗೆ ಹೊಂದಿಕೊಂಡು ಹೋಗುವುದನ್ನು ತುಂಬ ಕಷ್ಟಕರವಾದದ್ದಾಗಿಯೂ ವೇದನಾಭರಿತವಾದದ್ದಾಗಿಯೂ ಮಾಡುವಲ್ಲಿ ಆಗೇನು? ಮತ್ತು ಯೆಹೋವನ ಸೇವೆಮಾಡುವುದರಿಂದ ನಿಮಗೆ ಯಾವುದೇ ಪ್ರಯೋಜನ ಸಿಗದಿರುವಂತೆ ತೋರುವಲ್ಲಿ ಆಗೇನು? ಯೆಹೋವನ ಸೇವೆಮಾಡುತ್ತಾ ಮುಂದುವರಿಯುವುದರಿಂದ ಯಾವುದೇ ಒಳಿತಾಗುವುದಿಲ್ಲ ಎಂಬ ತೀರ್ಮಾನಕ್ಕೆ ನೀವು ಬರುವಿರೋ? ಅಥವಾ ಯೆಹೋವನಿಗಾಗಿರುವ ಪ್ರೀತಿ ಹಾಗೂ ಆತನ ಅದ್ಭುತಕರ ಗುಣಗಳಿಗಾಗಿರುವ ಆಳವಾದ ಗಣ್ಯತೆಯು, ಎಲ್ಲಾ ವಿಷಯಗಳಲ್ಲಿ ಆತನ ಮಾರ್ಗದಲ್ಲೇ ನಡೆಯುತ್ತಾ ಮುಂದುವರಿಯುವಂತೆ ನಿಮ್ಮನ್ನು ಪ್ರಚೋದಿಸುವುದೊ? (ಧರ್ಮೋಪದೇಶಕಾಂಡ 10:​12, 13) ನಮ್ಮ ಮೇಲೆ ಕೆಲವು ಕಷ್ಟತೊಂದರೆಗಳನ್ನು ಬರಗೊಡಿಸುವಂತೆ ಸೈತಾನನಿಗೆ ಅನುಮತಿಸುವ ಮೂಲಕ, ಸೈತಾನನ ಪಂಥಾಹ್ವಾನಕ್ಕೆ ನಮ್ಮ ವೈಯಕ್ತಿಕ ಉತ್ತರವನ್ನು ನೀಡುವಂತೆ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸದವಕಾಶವನ್ನು ಕೊಟ್ಟಿದ್ದಾನೆ.​—⁠ಜ್ಞಾನೋಕ್ತಿ 27:⁠11.

‘ಜನರು ನಿಮ್ಮನ್ನು ನಿಂದಿಸುವಾಗ’

7 ಈ ವಿವಾದಾಂಶದಲ್ಲಿ ತನ್ನ ಆರೋಪಗಳನ್ನು ರುಜುಪಡಿಸುವ ಪ್ರಯತ್ನದಲ್ಲಿ ಸೈತಾನನಿಂದ ಉಪಯೋಗಿಸಲ್ಪಡುವ ತಂತ್ರೋಪಾಯಗಳಲ್ಲಿ ಒಂದನ್ನು, ಅಂದರೆ ಸುಳ್ಳು ನಿಂದೆಯನ್ನು ಅವನು ಹೇಗೆ ಬಳಸುತ್ತಾನೆಂಬುದನ್ನು ನಾವೀಗ ಹೆಚ್ಚು ನಿಕಟವಾಗಿ ಪರಿಗಣಿಸೋಣ. ಯೇಸು ಸೈತಾನನನ್ನು “ಸುಳ್ಳಿಗೆ ಮೂಲಪುರುಷನು” ಎಂದು ಕರೆದನು. (ಯೋಹಾನ 8:44) “ಮಿಥ್ಯಾಪವಾದಿ” ಎಂಬರ್ಥವಿರುವ ಪಿಶಾಚ ಎಂಬ ವರ್ಣನಾತ್ಮಕ ಹೆಸರು, ದೇವರ ಮೇಲೆ, ಆತನ ಪ್ರಯೋಜನದಾಯಕ ವಾಕ್ಯದ ಮೇಲೆ, ಮತ್ತು ಆತನ ಪವಿತ್ರ ನಾಮದ ಮೇಲೆ ಮಿಥ್ಯಾಪವಾದ ಹೊರಿಸುವವರಲ್ಲೇ ಅಗ್ರಗಣ್ಯನಾಗಿ ಅವನನ್ನು ಗುರುತಿಸುತ್ತದೆ. ಯೆಹೋವನ ಪರಮಾಧಿಕಾರಕ್ಕೆ ಸವಾಲನ್ನೊಡ್ಡುವುದರಲ್ಲಿ ಪಿಶಾಚನು ವ್ಯಂಗ್ಯೋಕ್ತಿಗಳನ್ನು, ಸುಳ್ಳು ದೋಷಾರೋಪಗಳನ್ನು ಮತ್ತು ನೇರವಾದ ಸುಳ್ಳುಗಳನ್ನು ಉಪಯೋಗಿಸುತ್ತಾನೆ, ಮತ್ತು ದೇವರ ನಿಷ್ಠಾವಂತ ಸೇವಕರ ಹೆಸರನ್ನು ಕೆಡಿಸಲಿಕ್ಕಾಗಿಯೂ ಅವನು ಈ ಚತುರೋಪಾಯಗಳನ್ನೇ ಬಳಸುತ್ತಾನೆ. ಈ ಸಾಕ್ಷಿಗಳ ಮೇಲೆ ನಿಂದೆಯನ್ನು ಬರಮಾಡುವ ಮೂಲಕ, ತುಂಬ ಕಠಿನವಾಗಿರುವಂಥ ಒಂದು ಪರೀಕ್ಷೆಯನ್ನು ತಾಳಿಕೊಳ್ಳಲು ಇನ್ನಷ್ಟು ಕಷ್ಟಕರವಾದದ್ದಾಗಿ ಅವನು ಮಾಡಬಲ್ಲನು.

8 ಯಾರ ಹೆಸರಿನ ಅರ್ಥವು “ಹಗೆಪಾತ್ರನು” ಎಂದಾಗಿತ್ತೋ ಆ ಯೋಬನ ಮೇಲೆ ಬಂದೆರಗಿದ ಕಷ್ಟಾಪತ್ತುಗಳನ್ನು ಪರಿಗಣಿಸಿರಿ. ಯೋಬನ ಜೀವನೋಪಾಯ, ಅವನ ಮಕ್ಕಳು, ಮತ್ತು ಅವನ ಆರೋಗ್ಯವನ್ನು ಹಾಳುಮಾಡುವುದರ ಜೊತೆಗೆ, ಸೈತಾನನು ಯೋಬನನ್ನು ದೇವರಿಂದ ಶಿಕ್ಷೆಗೊಳಗಾಗಿರುವ ಒಬ್ಬ ಪಾಪಿಯಾಗಿ ಕಂಡುಬರುವಂತೆ ಮಾಡಿದನು. ಒಂದುಕಾಲದಲ್ಲಿ ಯೋಬನು ತುಂಬ ಗೌರವಾನ್ವಿತ ವ್ಯಕ್ತಿಯಾಗಿದ್ದರೂ, ಈಗ ಅವನ ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರನ್ನೂ ಸೇರಿಸಿ ಎಲ್ಲರಿಂದ ತುಚ್ಛೀಕರಿಸಲ್ಪಟ್ಟನು. (ಯೋಬ 19:13-19; 29:1, 2, 7-11) ಅಷ್ಟುಮಾತ್ರವಲ್ಲ, ಸುಳ್ಳು ಸಾಂತ್ವನಗಾರರ ಮೂಲಕ ಸೈತಾನನು ‘ಯೋಬನನ್ನು ಮಾತುಗಳಿಂದ ಜಜ್ಜಲು’ ಪ್ರಯತ್ನಿಸಿದನು​—⁠ಮೊದಲಾಗಿ ಅವನು ಯಾವುದೋ ಗಂಭೀರ ಪಾಪವನ್ನು ಮಾಡಿದ್ದಿರಬಹುದು ಎಂದು ಪರೋಕ್ಷವಾಗಿ ಹೇಳುವ ಮೂಲಕ ಮತ್ತು ತದನಂತರ ಅವನು ತಪ್ಪಿತಸ್ಥನು ಎಂದು ನೇರವಾಗಿ ಖಂಡಿಸುವ ಮೂಲಕ ಹೀಗೆ ಮಾಡಿದನು. (ಯೋಬ 4:6-9; 19:2; 22:5-10) ಇದು ಯೋಬನನ್ನು ಎಷ್ಟು ಎದೆಗುಂದಿಸಿರಬೇಕು!

9 ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದವರಲ್ಲಿ ಅಗ್ರಗಣ್ಯನಾಗಿದ್ದ ದೇವಕುಮಾರನು, ಸೈತಾನನ ಹಗೆತನದ ಮುಖ್ಯ ಗುರಿಹಲಗೆಯಾದನು. ಯೇಸು ಭೂಮಿಗೆ ಬಂದಾಗ, ಯೋಬನಿಗೆ ಮಾಡಿದಂತೆಯೇ ಯೇಸುವನ್ನೂ ಒಬ್ಬ ಪಾಪಿಯಾಗಿ ಕಂಡುಬರುವಂತೆ ಮಾಡುವ ಮೂಲಕ ಸೈತಾನನು ಇವನನ್ನೂ ಆಧ್ಯಾತ್ಮಿಕವಾಗಿ ವಿರೂಪಗೊಳಿಸಲು ಪ್ರಯತ್ನಿಸಿದನು. (ಯೆಶಾಯ 53:2-4; ಯೋಹಾನ 9:24) ಜನರು ಅವನನ್ನು ಹೊಟ್ಟೆಬಾಕನು, ಕುಡುಕನು ಮತ್ತು ‘ದೆವ್ವಹಿಡಿದವನು’ ಎಂದು ಕರೆದರು. (ಮತ್ತಾಯ 11:18, 19; ಯೋಹಾನ 7:20; 8:48; 10:20) ಅವನು ದೇವದೂಷಣೆಮಾಡುತ್ತಾನೆಂದು ಅವನ ಮೇಲೆ ಸುಳ್ಳಾರೋಪವನ್ನು ಹೊರಿಸಲಾಯಿತು. (ಮತ್ತಾಯ 9:2, 3; 26:63-66; ಯೋಹಾನ 10:33-36) ಇದರಿಂದಾಗಿ ಯೇಸುವಿಗೆ ಸಂಕಟವಾಗುತ್ತಿತ್ತು, ಏಕೆಂದರೆ ಇದು ತನ್ನ ತಂದೆಯ ಮೇಲೆ ಅನುಚಿತ ಕಳಂಕವನ್ನು ತಂದಿತು ಎಂಬುದು ಅವನಿಗೆ ಗೊತ್ತಿತ್ತು. (ಲೂಕ 22:​41-44) ಅಂತಿಮವಾಗಿ, ಒಬ್ಬ ಶಾಪಗ್ರಸ್ತ ದುಷ್ಕರ್ಮಿಯೋಪಾದಿ ಯೇಸುವನ್ನು ಶೂಲಕ್ಕೇರಿಸಲಾಯಿತು. (ಮತ್ತಾಯ 27:​38-44) ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಳ್ಳುವಾಗ ಯೇಸು “ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.”​—⁠ಇಬ್ರಿಯ 12:2, 3.

10 ಆಧುನಿಕ ಸಮಯಗಳಲ್ಲಿ, ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಲ್ಲಿ ಉಳಿಕೆಯವರು ತದ್ರೀತಿಯಲ್ಲಿ ಪಿಶಾಚನ ಹಗೆತನಕ್ಕೆ ಗುರಿಯಾಗಿದ್ದಾರೆ. ಸೈತಾನನನ್ನು, ‘ಹಗಲಿರುಳು [ಕ್ರಿಸ್ತನ] ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳುವ ದೂರುಗಾರನು’ ಎಂದು ವರ್ಣಿಸಲಾಗಿದೆ. (ಪ್ರಕಟನೆ 12:9, 10) ಸೈತಾನನು ಸ್ವರ್ಗದಿಂದ ದೊಬ್ಬಲ್ಪಟ್ಟು ಭೂಮಿಗೆ ಬಂಧಿತನಾಗಿರುವುದರಿಂದ, ಕ್ರಿಸ್ತನ ಸಹೋದರರನ್ನು ತಿರಸ್ಕಾರಕ್ಕೆ ಯೋಗ್ಯರಾದ ಬಹಿಷ್ಕೃತರೋಪಾದಿ ಚಿತ್ರಿಸುವ ತನ್ನ ಪ್ರಯತ್ನಗಳನ್ನು ಅವನು ಇನ್ನಷ್ಟು ತೀವ್ರಗೊಳಿಸಿದ್ದಾನೆ. (1 ಕೊರಿಂಥ 4:13) ಕೆಲವು ದೇಶಗಳಲ್ಲಿ, ಪ್ರಥಮ ಶತಮಾನದ ಕ್ರೈಸ್ತರಂತೆಯೇ ಇವರನ್ನು ಸಹ ಅಪಾಯಕರ ಪಂಥವೆಂದು ಸುಳ್ಳಾಗಿ ಕರೆಯಲಾಗುತ್ತದೆ. (ಅ. ಕೃತ್ಯಗಳು 24:5, 14; 28:22) ಆರಂಭದಲ್ಲೇ ಗಮನಿಸಿದಂತೆ, ಸುಳ್ಳು ಪ್ರಚಾರದ ಮೂಲಕ ಅವರ ಹೆಸರನ್ನು ಕೆಡಿಸಲಾಗಿದೆ. ಆದರೂ, ‘ಮಾನ ಅವಮಾನ ಕೀರ್ತಿ ಅಪಕೀರ್ತಿಗಳ’ ನಡುವೆಯೂ ಕ್ರಿಸ್ತನ ಅಭಿಷಿಕ್ತ ಸಹೋದರರು “ಬೇರೆ ಕುರಿ”ಗಳಾಗಿರುವ ಅವರ ಜೊತೆಗಾರರ ಬೆಂಬಲದಿಂದ, ‘ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಲು’ ದೀನಭಾವದಿಂದ ಶ್ರಮಿಸಿದ್ದಾರೆ.​—⁠2 ಕೊರಿಂಥ 6:8; ಯೋಹಾನ 10:16; ಪ್ರಕಟನೆ 12:⁠17.

11 ದೇವರ ಒಬ್ಬೊಬ್ಬ ಸೇವಕನು ಅನುಭವಿಸುವ ಎಲ್ಲಾ ನಿಂದೆಯು “ನೀತಿಯ ನಿಮಿತ್ತವಾಗಿ”ರುವುದಿಲ್ಲ ಎಂಬುದಂತೂ ನಿಶ್ಚಯ. (ಮತ್ತಾಯ 5:10) ಕೆಲವು ಸಮಸ್ಯೆಗಳು ನಮ್ಮ ಸ್ವಂತ ಅಪರಿಪೂರ್ಣತೆಗಳ ಫಲಿತಾಂಶವಾಗಿರಬಹುದು. ಒಂದುವೇಳೆ ನಾವು ‘ತಪ್ಪಿಗಾಗಿ ದಂಡಿಸಲ್ಪಟ್ಟು, ಆ ದಂಡನೆಯನ್ನು ತಾಳ್ಮೆಯಿಂದ ಸಹಿಸಿಕೊಂಡರೆ’ ಅದಕ್ಕೆ ಯಾವುದೇ ವಿಶೇಷ ಮೌಲ್ಯವಿಲ್ಲ. ಆದರೆ, ಕ್ರೈಸ್ತನೊಬ್ಬನು “ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ” ಯೆಹೋವನ ದೃಷ್ಟಿಯಲ್ಲಿ ಅದು “ಮೆಚ್ಚುಗೆಗೆ ಪಾತ್ರ”ವಾಗಿದೆ. (1 ಪೇತ್ರ 2:​19, 20, ಪರಿಶುದ್ಧ ಬೈಬಲ್‌ *) ಯಾವ ಸನ್ನಿವೇಶಗಳ ಕೆಳಗೆ ಕ್ರೈಸ್ತರು ಅನ್ಯಾಯವಾಗಿ ಸಂಕಟವನ್ನು ಸಹಿಸಿಕೊಳ್ಳಬೇಕಾಗಬಹುದು?

12 ಅಶಾಸ್ತ್ರೀಯವಾದ ಶವಸಂಸ್ಕಾರ ಪದ್ಧತಿಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಕಾರಣ ಕೆಲವರನ್ನು ದೌರ್ಜನ್ಯಭರಿತ ರೀತಿಯಲ್ಲಿ ಉಪಚರಿಸಲಾಗಿದೆ. (ಧರ್ಮೋಪದೇಶಕಾಂಡ 14:⁠1) ಯೆಹೋವನ ನೈತಿಕ ಮಟ್ಟಗಳಿಗೆ ಬಲವಾಗಿ ಅಂಟಿಕೊಂಡಿದ್ದಕ್ಕಾಗಿ ಸಾಕ್ಷಿ ಯುವ ಜನರು ಸತತವಾದ ವಾಗ್ದಾಳಿಗೆ ಬಲಿಯಾಗಿದ್ದಾರೆ. (1 ಪೇತ್ರ 4:⁠4) ಕೆಲವು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗಾಗಿ ರಕ್ತರಹಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದರಿಂದ, ಅವರಿಗೆ “ಅಲಕ್ಷ್ಯಭಾವದವರು” ಅಥವಾ “ದೌರ್ಜನ್ಯನಡೆಸುವವರು” ಎಂಬ ಹಣೆಪಟ್ಟಿ ಹಚ್ಚಲಾಗಿದೆ. (ಅ. ಕೃತ್ಯಗಳು 15:29) ಕ್ರೈಸ್ತರು ಯೆಹೋವನ ಸೇವಕರಾಗಿ ಪರಿಣಮಿಸಿದ್ದ ಒಂದೇ ಕಾರಣಕ್ಕಾಗಿ ಸಂಬಂಧಿಕರಿಂದ ಮತ್ತು ನೆರೆಹೊರೆಯವರಿಂದ ಬಹಿಷ್ಕರಿಸಲ್ಪಟ್ಟಿದ್ದಾರೆ. (ಮತ್ತಾಯ 10:34-37) ಇವರೆಲ್ಲರೂ, ಅನ್ಯಾಯವಾಗಿ ಕಷ್ಟಾನುಭವಿಸುವುದರಲ್ಲಿ ಪ್ರವಾದಿಗಳಿಂದ ಮತ್ತು ಸ್ವತಃ ಯೇಸುವಿನಿಂದ ಇಡಲ್ಪಟ್ಟ ಮಾದರಿಯನ್ನು ಅನುಸರಿಸುತ್ತಿದ್ದಾರೆ.​—⁠ಮತ್ತಾಯ 5:11, 12; ಯಾಕೋಬ 5:10; 1 ಪೇತ್ರ 2:⁠21.

ನಿಂದೆಯ ಕೆಳಗೆ ತಾಳಿಕೊಳ್ಳುವುದು

13 ನಮ್ಮ ನಂಬಿಕೆಯ ಕಾರಣ ನಾವು ತೀವ್ರ ನಿಂದೆಯನ್ನು ಅನುಭವಿಸುವಾಗ, ಪ್ರವಾದಿಯಾದ ಯೆರೆಮೀಯನಂತೆಯೇ ನಾವು ತುಂಬ ನಿರುತ್ಸಾಹಗೊಳ್ಳಬಹುದು, ಮತ್ತು ಯೆಹೋವನ ಸೇವೆಯನ್ನು ಮುಂದುವರಿಸಸಾಧ್ಯವಿಲ್ಲ ಎಂದು ನಮಗನಿಸಬಹುದು. (ಯೆರೆಮೀಯ 20:​7-9) ನಮ್ಮ ಆಧ್ಯಾತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳಲು ಯಾವುದು ನಮಗೆ ಸಹಾಯಮಾಡಬಲ್ಲದು? ವಿಷಯವನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿರಿ. ಪರೀಕ್ಷೆಯ ಕೆಳಗೆ ನಿಷ್ಠಾವಂತರಾಗಿ ಉಳಿಯುವವರನ್ನು ಆತನು ಬಲಿಪಶುಗಳನ್ನಾಗಿ ಅಲ್ಲ, ಬದಲಾಗಿ ವಿಜೇತರನ್ನಾಗಿ ಪರಿಗಣಿಸುತ್ತಾನೆ. (ರೋಮಾಪುರ 8:37) ಪಿಶಾಚನು ತಂದೊಡ್ಡಸಾಧ್ಯವಿದ್ದ ಪ್ರತಿಯೊಂದು ಅವಮಾನದ ಎದುರಿನಲ್ಲಿಯೂ ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದಿರುವಂಥ ವ್ಯಕ್ತಿಗಳನ್ನು, ಹೇಬೆಲ, ಯೋಬ, ಯೇಸುವಿನ ತಾಯಿಯಾಗಿದ್ದ ಮರಿಯಳು, ಮತ್ತು ಪುರಾತನ ಕಾಲದ ಇತರ ನಂಬಿಗಸ್ತರನ್ನು ಹಾಗೂ ಆಧುನಿಕ ಸಮಯಗಳಲ್ಲಿರುವ ನಮ್ಮ ಜೊತೆ ಸೇವಕರಂಥ ಸ್ತ್ರೀಪುರುಷರನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಪ್ರಯತ್ನಿಸಿರಿ. (ಇಬ್ರಿಯ 11:35-37; 12:1) ಅವರ ಸಮಗ್ರತೆಯ ಜೀವನ ಮಾರ್ಗದ ಕುರಿತು ಧ್ಯಾನಿಸಿರಿ. ಮಹಾ ಮೇಘದಂತಿರುವ ಆ ನಿಷ್ಠಾವಂತ ಸೇವಕರು, ನಂಬಿಕೆಯ ಮೂಲಕ ವಿಜಯವನ್ನು ಪಡೆಯುವುದರಲ್ಲಿ ತಮ್ಮೊಂದಿಗೆ ಜೊತೆಗೂಡುವಂತೆ ನಮ್ಮನ್ನು ಆಮಂತ್ರಿಸುತ್ತಾರೆ.​—⁠1 ಯೋಹಾನ 5:⁠4.

14 ‘ನಮ್ಮಲ್ಲಿ ಅನೇಕ ಚಿಂತೆಗಳಿರುವಾಗ’ ನಾವು ಶ್ರದ್ಧಾಪೂರ್ವಕವಾದ ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗಸಾಧ್ಯವಿದೆ, ಮತ್ತು ಆತನು ನಮಗೆ ಸಾಂತ್ವನ ನೀಡುವನು ಮತ್ತು ನಮ್ಮನ್ನು ಬಲಪಡಿಸುವನು. (ಕೀರ್ತನೆ 50:15; 94:19) ಪರೀಕ್ಷೆಯನ್ನು ನಿಭಾಯಿಸಲು ಅಗತ್ಯವಿರುವ ವಿವೇಕವನ್ನು ಆತನು ನಮಗೆ ದಯಪಾಲಿಸುವನು. ಮತ್ತು ತನ್ನ ಸೇವಕರ ವಿರುದ್ಧ ಬರಮಾಡಲ್ಪಟ್ಟ ಅನ್ಯಾಯಭರಿತ ದ್ವೇಷಕ್ಕೆ ಕಾರಣವಾಗಿರುವ, ಯೆಹೋವನ ಪರಮಾಧಿಕಾರದ ಕುರಿತಾದ ದೊಡ್ಡ ವಿವಾದಾಂಶದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ನಮಗೆ ಸಹಾಯಮಾಡುವನು. (ಯಾಕೋಬ 1:⁠5) ಯೆಹೋವನು ನಮಗೆ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಸಹ ದಯಪಾಲಿಸುವನು. (ಫಿಲಿಪ್ಪಿ 4:6, 7) ಈ ದೇವದತ್ತ ಶಾಂತಿಯು, ವಿಪರೀತ ಒತ್ತಡದ ಎದುರಿನಲ್ಲಿ ನಾವು ಸಂಶಯ ಅಥವಾ ಭಯಕ್ಕೆ ಒಳಗಾಗದೆ, ಶಾಂತವಾಗಿ ಮತ್ತು ದೃಢನಿಶ್ಚಿತರಾಗಿ ಉಳಿಯುವಂತೆ ಸಹಾಯಮಾಡುತ್ತದೆ. ನಮ್ಮ ಮೇಲೆ ಬರುವಂತೆ ಯೆಹೋವನು ಅನುಮತಿಸುವ ಯಾವುದೇ ಸಂಕಷ್ಟದಿಂದ, ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ಸಂರಕ್ಷಿಸಬಲ್ಲನು.​—⁠1 ಕೊರಿಂಥ 10:⁠13.

15 ನಿಷ್ಕಾರಣವಾಗಿ ನಮ್ಮನ್ನು ದ್ವೇಷಿಸುವವರ ಕಡೆಗೆ ಕಹಿಮನೋಭಾವವನ್ನು ತಾಳದಿರಲು ಯಾವುದು ನಮಗೆ ಸಹಾಯಮಾಡಬಲ್ಲದು? ಸೈತಾನನೂ ಅವನ ದೆವ್ವಗಳೂ ನಮ್ಮ ಮುಖ್ಯ ವಿರೋಧಿಗಳಾಗಿದ್ದಾರೆ ಎಂಬುದನ್ನು ಮರೆಯದಿರಿ. (ಎಫೆಸ 6:12) ಕೆಲವರು ನಮ್ಮನ್ನು ಬೇಕುಬೇಕೆಂದು ಮತ್ತು ಉದ್ದೇಶಪೂರ್ವಕವಾಗಿ ಹಿಂಸಿಸುತ್ತಾರಾದರೂ, ದೇವಜನರನ್ನು ವಿರೋಧಿಸುವವರಲ್ಲಿ ಅಧಿಕಾಂಶ ಜನರು ಅಜ್ಞಾನದಿಂದ ಅಥವಾ ಇತರರಿಂದ ಉದ್ರೇಕಿಸಲ್ಪಟ್ಟದ್ದರಿಂದ ಹೀಗೆ ಮಾಡುತ್ತಾರೆ. (ದಾನಿಯೇಲ 6:4-16; 1 ತಿಮೊಥೆಯ 1:12, 13) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ” ಸೇರುವ ಸದವಕಾಶವನ್ನು ಪಡೆಯಬೇಕೆಂಬುದು ಯೆಹೋವನ ಬಯಕೆಯಾಗಿದೆ. (1 ತಿಮೊಥೆಯ 2:⁠4) ವಾಸ್ತವದಲ್ಲಿ, ಈ ಮುಂಚೆ ವಿರೋಧಿಗಳಾಗಿದ್ದವರಲ್ಲಿ ಕೆಲವರು, ನಮ್ಮ ದೋಷರಹಿತ ನಡವಳಿಕೆಯನ್ನು ಗಮನಿಸಿದ ಫಲಿತಾಂಶವಾಗಿ ಈಗ ನಮ್ಮ ಕ್ರೈಸ್ತ ಸಹೋದರರಾಗಿದ್ದಾರೆ. (1 ಪೇತ್ರ 2:12) ಇದಕ್ಕೆ ಕೂಡಿಸಿ, ಯಾಕೋಬನ ಮಗನಾದ ಯೋಸೇಫನ ಉದಾಹರಣೆಯಿಂದ ನಾವು ಒಂದು ಪಾಠವನ್ನು ಕಲಿಯಸಾಧ್ಯವಿದೆ. ಯೋಸೇಫನು ತನ್ನ ಮಲಸಹೋದರರಿಂದಾಗಿ ಅಪಾರ ಕಷ್ಟವನ್ನು ಅನುಭವಿಸಿದನಾದರೂ, ಅವನೆಂದೂ ಅವರ ಬಗ್ಗೆ ಕಡುದ್ವೇಷವನ್ನು ಬೆಳೆಸಿಕೊಳ್ಳಲಿಲ್ಲ. ಏಕೆ? ಏಕೆಂದರೆ, ಯೆಹೋವನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಘಟನೆಗಳನ್ನು ನಿರ್ದೇಶಿಸುವ ಮೂಲಕ ಇದರಲ್ಲಿ ಒಳಗೂಡಿದ್ದನು ಎಂಬುದನ್ನು ಅವನು ಅರ್ಥಮಾಡಿಕೊಂಡನು. (ಆದಿಕಾಂಡ 45:​4-8) ತದ್ರೀತಿಯಲ್ಲಿ ಯೆಹೋವನು, ನಾವು ಅನುಭವಿಸಬಹುದಾದ ಯಾವುದೇ ಅನುಚಿತ ಕಷ್ಟಾನುಭವವು ತನ್ನ ಹೆಸರಿನ ಮಹಿಮೆಗಾಗಿ ಕಾರ್ಯನಡಿಸುವಂತೆ ಮಾಡಬಲ್ಲನು.​—⁠1 ಪೇತ್ರ 4:⁠16.

16 ಸುವಾರ್ತೆಯ ಮುನ್ನಡೆಯನ್ನು ತಡೆಗಟ್ಟುವುದರಲ್ಲಿ ಸ್ವಲ್ಪ ಕಾಲಾವಧಿಯ ವರೆಗೆ ಎದುರಾಳಿಗಳು ಯಶಸ್ವಿಯಾಗುತ್ತಿರುವಂತೆ ಕಂಡುಬರುವಲ್ಲಿ ನಾವು ಅನಾವಶ್ಯಕವಾಗಿ ಚಿಂತಾಕ್ರಾಂತರಾಗಬೇಕಾಗಿಲ್ಲ. ಕೊಡಲಾಗುತ್ತಿರುವ ಭೂವ್ಯಾಪಕ ಸಾಕ್ಷಿಯ ಮೂಲಕ ಯೆಹೋವನು ಈಗ ಜನಾಂಗಗಳನ್ನು ನಡುಗಿಸುತ್ತಿದ್ದಾನೆ, ಮತ್ತು ಇಷ್ಟವಸ್ತುಗಳಿಂದ ಆಲಯವು ತುಂಬಿಸಲ್ಪಡುತ್ತಿದೆ. (ಹಗ್ಗಾಯ 2:⁠7) ಒಳ್ಳೇ ಕುರುಬನಾಗಿರುವ ಕ್ರಿಸ್ತ ಯೇಸು ಹೇಳಿದ್ದು: “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; . . . ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು.” (ಓರೆ ಅಕ್ಷರಗಳು ನಮ್ಮವು.) (ಯೋಹಾನ 10:27-29) ಬೃಹತ್ತಾದ ಆಧ್ಯಾತ್ಮಿಕ ಕೊಯ್ಲಿನಲ್ಲಿ ಪವಿತ್ರ ದೇವದೂತರು ಸಹ ಒಳಗೂಡಿದ್ದಾರೆ. (ಮತ್ತಾಯ 13:39, 41; ಪ್ರಕಟನೆ 14:6, 7) ಆದುದರಿಂದ, ಎದುರಾಳಿಗಳು ಹೇಳುವ ಅಥವಾ ಮಾಡುವ ಯಾವುದೇ ವಿಷಯವು ದೇವರ ಉದ್ದೇಶಕ್ಕೆ ಭಂಗತರಲಾರದು.​—⁠ಯೆಶಾಯ 54:17; ಅ. ಕೃತ್ಯಗಳು 5:38, 39.

17 ಅನೇಕವೇಳೆ ಎದುರಾಳಿಗಳ ಪ್ರಯತ್ನವು ತಿರುಗುಬಾಣವಾಗುತ್ತದೆ. ಆಫ್ರಿಕದ ಒಂದು ಸಮುದಾಯದಲ್ಲಿ, ಯೆಹೋವನ ಸಾಕ್ಷಿಗಳು ಪಿಶಾಚನನ್ನು ಆರಾಧಿಸುತ್ತಾರೆ ಎಂಬ ಸುಳ್ಳಿನ ಜೊತೆಗೆ ಇನ್ನೂ ಅನೇಕ ಭೀಕರ ಸುಳ್ಳುಗಳು ಹಬ್ಬಿಸಲ್ಪಟ್ಟಿದ್ದವು. ಈ ಕಾರಣದಿಂದ, ಸಾಕ್ಷಿಗಳು ಭೇಟಿ ನೀಡಿದಾಗೆಲ್ಲಾ ಗ್ರೇಸ್‌ ತನ್ನ ಮನೆಯ ಹಿಂದೆ ಓಡಿಬಿಡುತ್ತಿದ್ದಳು ಮತ್ತು ಅವರು ಅಲ್ಲಿಂದ ಹೋಗುವ ತನಕ ಅವಿತುಕೊಂಡಿರುತ್ತಿದ್ದಳು. ಒಂದು ದಿನ ಅವಳ ಚರ್ಚಿನ ಪಾಸ್ಟರನೊಬ್ಬನು ನಮ್ಮ ಪ್ರಕಾಶನಗಳಲ್ಲಿ ಒಂದನ್ನು ಮೇಲೆತ್ತಿ ಹಿಡಿದು, ಇದು ತಮ್ಮ ಧರ್ಮವನ್ನು ತೊರೆಯುವಂತೆ ಮಾಡಸಾಧ್ಯವಿರುವ ಕಾರಣ ಇದನ್ನು ಯಾರೂ ಓದಬಾರದೆಂದು ಹಾಜರಿದ್ದವರೆಲ್ಲರಿಗೆ ಹೇಳಿದನು. ಇದು ಗ್ರೇಸಳ ಕುತೂಹಲವನ್ನು ಕೆರಳಿಸಿತು. ಮುಂದಿನ ಸಲ ಸಾಕ್ಷಿಗಳು ಬಂದಾಗ, ಅವಿತುಕೊಳ್ಳುವುದಕ್ಕೆ ಬದಲಾಗಿ ಅವಳು ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದಳು ಹಾಗೂ ಆ ಪ್ರಕಾಶನದ ಒಂದು ವೈಯಕ್ತಿಕ ಪ್ರತಿಯನ್ನು ಪಡೆದುಕೊಂಡಳು. ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು, ಮತ್ತು 1996ರಲ್ಲಿ ಅವಳು ದೀಕ್ಷಾಸ್ನಾನ ಪಡೆದುಕೊಂಡಳು. ಗ್ರೇಸ್‌ ಈಗ ಯೆಹೋವನ ಸಾಕ್ಷಿಗಳ ಕುರಿತು ತಪ್ಪು ಮಾಹಿತಿಯನ್ನು ಪಡೆದುಕೊಂಡಿರಬಹುದಾದಂಥ ಇತರರನ್ನು ಹುಡುಕುವುದರಲ್ಲಿ ತನ್ನ ಸಮಯವನ್ನು ಕಳೆಯುತ್ತಾಳೆ.

ಈಗಲೇ ನಿಮ್ಮ ನಂಬಿಕೆಯನ್ನು ಬಲಪಡಿಸಿರಿ

18 ಇದ್ದಕ್ಕಿದ್ದಂತೆ ಸೈತಾನನು ಅನುಚಿತ ದ್ವೇಷದಿಂದ ಆಕ್ರಮಣಮಾಡುವ ಸಾಧ್ಯತೆಯಿರುವುದರಿಂದ, ನಾವು ಈಗಲೇ ನಮ್ಮ ನಂಬಿಕೆಯನ್ನು ಬಲಪಡಿಸುವುದು ಅತ್ಯಾವಶ್ಯಕವಾಗಿದೆ. ನಾವಿದನ್ನು ಹೇಗೆ ಮಾಡಸಾಧ್ಯವಿದೆ? ಯೆಹೋವನ ಜನರು ಹಿಂಸಿಸಲ್ಪಟ್ಟಿರುವ ಒಂದು ದೇಶದಿಂದ ಬಂದ ವರದಿಯೊಂದು ತಿಳಿಸಿದ್ದು: “ಒಂದು ವಿಷಯವಂತೂ ಸುಸ್ಪಷ್ಟವಾಗಿದೆ: ಯಾರಿಗೆ ಒಳ್ಳೇ ಆಧ್ಯಾತ್ಮಿಕ ರೂಢಿಗಳು ಮತ್ತು ಬೈಬಲ್‌ ಸತ್ಯಕ್ಕಾಗಿ ಆಳವಾದ ಗಣ್ಯತೆ ಇರುತ್ತದೋ ಅವರಿಗೆ, ಪರೀಕ್ಷೆಗಳು ಬರುವಾಗ ದೃಢರಾಗಿ ನಿಲ್ಲುವುದರಲ್ಲಿ ಯಾವುದೇ ಸಮಸ್ಯೆಯಿರುವುದಿಲ್ಲ. ಆದರೆ ‘ಅನುಕೂಲವಾದ ಕಾಲದಲ್ಲಿ’ ಕೂಟಗಳಿಗೆ ತಪ್ಪಿಸಿಕೊಳ್ಳುವ, ಕ್ಷೇತ್ರ ಸೇವೆಯಲ್ಲಿ ಅಕ್ರಮರಾಗಿರುವ, ಮತ್ತು ಚಿಕ್ಕಪುಟ್ಟ ವಿಷಯಗಳಲ್ಲಿಯೂ ರಾಜಿಮಾಡಿಕೊಳ್ಳುವಂಥ ಜನರು, ‘ಬೆಂಕಿಯಂಥ’ ಪರೀಕ್ಷೆಗಳ ಕೆಳಗೆ ಅನೇಕವೇಳೆ ಬಿದ್ದುಹೋಗುತ್ತಾರೆ.” (2 ತಿಮೊಥೆಯ 4:⁠2) ನೀವು ಸುಧಾರಣೆಗಳನ್ನು ಮಾಡಲು ಅಗತ್ಯವಿರುವ ಕ್ಷೇತ್ರಗಳನ್ನು ಗಮನಿಸುವಲ್ಲಿ, ತಡಮಾಡದೆ ಅದನ್ನು ಮಾಡಲು ಪ್ರಯತ್ನಿಸಿರಿ.​—⁠ಕೀರ್ತನೆ 119:⁠60.

19 ಸೈತಾನನ ಕಡುದ್ವೇಷದ ಕೆಳಗೂ ಸತ್ಯಾರಾಧಕರು ತೋರಿಸುವ ಸಮಗ್ರತೆಯು, ಯೆಹೋವನ ಪರಮಾಧಿಕಾರದ ನ್ಯಾಯಸಮ್ಮತತೆ, ಅರ್ಹತೆ, ಮತ್ತು ನೀತಿಗೆ ಸಜೀವ ಸಾಕ್ಷ್ಯವಾಗಿದೆ. ಅವರ ನಂಬಿಗಸ್ತಿಕೆಯು ದೇವರ ಹೃದಯವನ್ನು ಸಂತೋಷಪಡಿಸುತ್ತದೆ. ಜನರು ಅವರ ಮೇಲೆ ನಿಂದೆಯನ್ನು ತಂದೊಡ್ಡುವುದಾದರೂ, ಭೂಪರಲೋಕಗಳಿಗಿಂತ ಉನ್ನತ ಮಹಿಮೆಯನ್ನು ಹೊಂದಿರುವಾತನು ‘ಅವರ ದೇವರೆನಿಸಿಕೊಳ್ಳುವದಕ್ಕೆ ನಾಚಿಕೊಳ್ಳುವುದಿಲ್ಲ.’ ವಾಸ್ತವದಲ್ಲಿ, ಇಂಥ ನಿಷ್ಠಾವಂತರೆಲ್ಲರ ಕುರಿತು ಹೀಗೆ ಹೇಳುವುದು ಯುಕ್ತವಾಗಿದೆ: “ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಲ್ಲ.”​—⁠ಇಬ್ರಿಯ 11:16, 38.

[ಪಾದಟಿಪ್ಪಣಿಗಳು]

^ ಪ್ಯಾರ. 4 ಶಾಸ್ತ್ರವಚನಗಳಲ್ಲಿ, “ದ್ವೇಷ” ಎಂಬ ಪದಕ್ಕೆ ಸೂಕ್ಷ್ಮ ರೀತಿಯಲ್ಲಿ ವ್ಯತ್ಯಾಸವಿರುವ ಅರ್ಥಗಳಿವೆ. ಕೆಲವು ಪೂರ್ವಾಪರಗಳಲ್ಲಿ ಅದರ ಅರ್ಥ ಸ್ವಲ್ಪ ಕಡಿಮೆ ಮಟ್ಟದಲ್ಲಿ ಪ್ರೀತಿಸುವುದು ಎಂದಾಗಿರುತ್ತದೆ. (ಧರ್ಮೋಪದೇಶಕಾಂಡ 21:​15, 16) “ದ್ವೇಷ”ವು ಬಲವಾದ ಅಪ್ರಿಯತೆಯನ್ನು ಸಹ ಸೂಚಿಸಬಹುದಾದರೂ, ನಿರ್ದಿಷ್ಟ ವ್ಯಕ್ತಿಗೆ ಅಥವಾ ವಸ್ತುವಿಗೆ ಯಾವುದೇ ಹಾನಿಯನ್ನು ಮಾಡುವ ಉದ್ದೇಶದಿಂದಲ್ಲ, ಬದಲಿಗೆ ಅದರ ಕಡೆಗಿರುವ ಅಸಹ್ಯ ಭಾವನೆಯಿಂದಾಗಿ ಅದರಿಂದ ದೂರವಿರಲು ಪ್ರಯತ್ನಮಾಡಲಾಗುವುದು. ಆದರೂ, “ದ್ವೇಷ” ಎಂಬ ಪದವು ತೀವ್ರವಾದ ಹಗೆತನವನ್ನು, ಅನೇಕವೇಳೆ ವೈರತ್ವದೊಂದಿಗೆ ಜೊತೆಗೂಡಿದ ದೀರ್ಘಕಾಲದ ಹಗೆಸಾಧನೆಯನ್ನು ಸಹ ಅರ್ಥೈಸಬಹುದು. “ದ್ವೇಷ” ಎಂಬ ಪದದ ಈ ಅರ್ಥವನ್ನೇ ಈ ಲೇಖನದಲ್ಲಿ ಚರ್ಚಿಸಲಾಗಿದೆ.

^ ಪ್ಯಾರ. 15 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನೀವು ವಿವರಿಸಬಲ್ಲಿರೋ?

• ಸತ್ಯಾರಾಧಕರ ಕಡೆಗೆ ತೋರಿಸಲ್ಪಡುವ ಅನುಚಿತ ದ್ವೇಷದ ಹಿಂದೆ ಯಾವ ಕಾರಣವಿದೆ?

• ಯೋಬ ಮತ್ತು ಯೇಸುವಿನ ಸಮಗ್ರತೆಯನ್ನು ಮುರಿಯುವ ಪ್ರಯತ್ನದಲ್ಲಿ ಸೈತಾನನು ಯಾವ ರೀತಿಯಲ್ಲಿ ನಿಂದೆಯನ್ನು ಉಪಯೋಗಿಸಿದನು?

• ಸೈತಾನನ ದ್ವೇಷದ ಎದುರಿನಲ್ಲಿ ಸದೃಢರಾಗಿ ನಿಲ್ಲಲು ಯೆಹೋವನು ನಮ್ಮನ್ನು ಹೇಗೆ ಬಲಪಡಿಸುತ್ತಾನೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಕ್ರೈಸ್ತರ ವಿರುದ್ಧ ಮಾತಾಡಲ್ಪಡುವಾಗ ಕೆಲವರು ಏಕೆ ಗಲಿಬಿಲಿಗೊಳ್ಳುತ್ತಾರೆ, ಆದರೆ ಅಂಥ ಮಾತುಗಳು ನಮಗೇಕೆ ಆಶ್ಚರ್ಯವನ್ನುಂಟುಮಾಡಬಾರದು? (ಬಿ) “ದ್ವೇಷ” ಎಂಬ ಪದದ ಯಾವ ಅರ್ಥವನ್ನು ನಾವು ಈ ಲೇಖನದಲ್ಲಿ ಪರಿಗಣಿಸಲಿರುವೆವು? (ಪಾದಟಿಪ್ಪಣಿಯನ್ನು ನೋಡಿ.)

3. ಎಷ್ಟರ ಮಟ್ಟಿಗೆ ಸತ್ಯಾರಾಧಕರು ಹಿಂಸಿಸಲ್ಪಟ್ಟಿದ್ದಾರೆ?

4. ಎಲ್ಲಾ ರೀತಿಯ ಅನುಚಿತ ದ್ವೇಷದ ಮೂಲನನ್ನು ಬೈಬಲು ಹೇಗೆ ಬಯಲುಪಡಿಸುತ್ತದೆ?

5. ಸತ್ಯಾರಾಧಕರ ಕಡೆಗಿನ ಸೈತಾನನ ದ್ವೇಷದ ಹಿಂದಿರುವ ಕಾರಣವೇನು?

6. (ಎ) ಯೆಹೋವನ ಪರಮಾಧಿಕಾರದ ವಿವಾದಾಂಶದಲ್ಲಿ ನಾವು ಹೇಗೆ ವೈಯಕ್ತಿಕವಾಗಿ ಒಳಗೂಡಿದ್ದೇವೆ? (ಬಿ) ಈ ವಿವಾದಾಂಶವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಹೇಗೆ ಸಹಾಯಮಾಡುತ್ತದೆ? (16ನೆಯ ಪುಟದಲ್ಲಿರುವ ಚೌಕವನ್ನು ನೋಡಿ.)

7. ಯೆಹೋವನಿಂದ ನಮ್ಮನ್ನು ವಿಮುಖಗೊಳಿಸಲು ಪ್ರಯತ್ನಿಸುವುದರಲ್ಲಿ ಪಿಶಾಚನು ಉಪಯೋಗಿಸುವ ಚತುರೋಪಾಯಗಳಲ್ಲಿ ಒಂದು ಯಾವುದು?

8. ಯಾವ ರೀತಿಯಲ್ಲಿ ಸೈತಾನನು ಯೋಬನನ್ನು ನಿಂದಿಸಿದನು, ಮತ್ತು ಯಾವ ಪರಿಣಾಮದೊಂದಿಗೆ?

9. ಯೇಸುವನ್ನು ಹೇಗೆ ಒಬ್ಬ ಪಾಪಿಯಾಗಿ ಕಂಡುಬರುವಂತೆ ಮಾಡಲಾಯಿತು?

10. ಆಧುನಿಕ ಸಮಯಗಳಲ್ಲಿ ಅಭಿಷಿಕ್ತ ಉಳಿಕೆಯವರು ಹೇಗೆ ಸೈತಾನನ ಗುರಿಹಲಗೆಯಾಗಿದ್ದಾರೆ?

11, 12. (ಎ) ಕ್ರೈಸ್ತರು ಅನುಭವಿಸುತ್ತಿರುವ ನಿಂದೆಯಲ್ಲಿ ಕೆಲವೊಂದಕ್ಕೆ ಯಾವುದು ಕಾರಣವಾಗಿರಬಹುದು? (ಬಿ) ತನ್ನ ನಂಬಿಕೆಯ ಕಾರಣದಿಂದ ಯಾವ ವಿಧಗಳಲ್ಲಿ ಕ್ರೈಸ್ತನೊಬ್ಬನು ಅನ್ಯಾಯವಾಗಿ ಕಷ್ಟಾನುಭವಿಸಬಹುದು?

13. ತೀವ್ರ ನಿಂದೆಯನ್ನು ಎದುರಿಸುವಾಗ ನಮ್ಮ ಆಧ್ಯಾತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು?

14. ಶ್ರದ್ಧಾಪೂರ್ವಕವಾದ ಪ್ರಾರ್ಥನೆಯು ನಂಬಿಗಸ್ತರಾಗಿ ಉಳಿಯಲು ನಮ್ಮನ್ನು ಹೇಗೆ ಬಲಪಡಿಸಬಲ್ಲದು?

15. ನಾವು ಕಷ್ಟಾನುಭವಿಸುವಾಗ ಕಹಿಮನೋಭಾವವನ್ನು ತಾಳದಿರುವಂತೆ ಯಾವುದು ನಮಗೆ ಸಹಾಯಮಾಡಬಲ್ಲದು?

16, 17. ಸಾರುವ ಕೆಲಸವನ್ನು ತಡೆಗಟ್ಟಲು ಎದುರಾಳಿಗಳು ಮಾಡಬಹುದಾದ ಪ್ರಯತ್ನಗಳ ಕುರಿತು ನಾವು ಏಕೆ ಅನಾವಶ್ಯಕವಾಗಿ ಚಿಂತಾಕ್ರಾಂತರಾಗಬೇಕಾಗಿಲ್ಲ?

18. ತೀವ್ರವಾದ ಪರೀಕ್ಷೆಗಳು ಬರುವುದಕ್ಕೆ ಮುಂಚೆಯೇ ನಮ್ಮ ನಂಬಿಕೆಯನ್ನು ಬಲಪಡಿಸುವ ಆವಶ್ಯಕತೆ ಏಕಿದೆ, ಮತ್ತು ನಾವದನ್ನು ಹೇಗೆ ಮಾಡಸಾಧ್ಯವಿದೆ?

19. ಅನುಚಿತ ದ್ವೇಷದ ಎದುರಿನಲ್ಲಿ ದೇವರ ಸೇವಕರು ತೋರಿಸುವ ಸಮಗ್ರತೆಯು ಏನನ್ನು ಪೂರೈಸುತ್ತದೆ?

[ಪುಟ 16ರಲ್ಲಿರುವ ಚೌಕ/ಚಿತ್ರ]

ಅವರು ನಿಜವಾದ ವಿವಾದಾಂಶವನ್ನು ಗ್ರಹಿಸಿದರು

ರಾಜ್ಯದ ಸಾರುವಿಕೆಯ ಕೆಲಸವು ಸುಮಾರು 50ಕ್ಕಿಂತಲೂ ಹೆಚ್ಚು ವರ್ಷಗಳಿಂದ ನಿಷೇಧಕ್ಕೆ ಒಳಗಾಗಿದ್ದ ಯುಕ್ರೇನ್‌ನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ತಿಳಿಸಿದ್ದು: “ಯೆಹೋವನ ಸಾಕ್ಷಿಗಳ ಸನ್ನಿವೇಶವನ್ನು ಇತರ ಮಾನವರು ನಮ್ಮನ್ನು ಹೇಗೆ ಉಪಚರಿಸುತ್ತಾರೆ ಎಂಬರ್ಥದಲ್ಲಿ ಮಾತ್ರ ಪರಿಗಣಿಸಬಾರದು. . . . ಅಧಿಕಾಂಶ ಅಧಿಕಾರಿಗಳು ಕೇವಲ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಸರಕಾರವು ಬದಲಾದಾಗ, ಅಧಿಕಾರಿಗಳು ಸಹ ತಮ್ಮ ಸ್ವಾಮಿನಿಷ್ಠೆಯನ್ನು ಬದಲಾಯಿಸಿದರು, ಆದರೆ ನಾವು ಮಾತ್ರ ಹಾಗೇ ಉಳಿದೆವು. ನಮ್ಮ ತೊಂದರೆಗಳ ನಿಜ ಮೂಲವು ಬೈಬಲಿನಲ್ಲಿ ತಿಳಿಸಲ್ಪಟ್ಟಿದೆ ಎಂಬುದನ್ನು ನಾವು ಗ್ರಹಿಸಿದೆವು.

“ನಾವು ದಬ್ಬಾಳಿಕೆ ನಡೆಸುವಂಥ ಪುರುಷರ ಕೈಯಲ್ಲಿ ಮುಗ್ಧ ಬಲಿಪಶುಗಳಾಗಿದ್ದೇವೆ ಅಷ್ಟೇ ಎಂದು ಸ್ವತಃ ನಮ್ಮ ಬಗ್ಗೆ ನಾವು ನೆನಸಲಿಲ್ಲ. ಏದೆನ್‌ ತೋಟದಲ್ಲಿ ಎಬ್ಬಿಸಲ್ಪಟ್ಟ ವಿವಾದಾಂಶ, ಅಂದರೆ ಆಳಲಿಕ್ಕಾಗಿರುವ ದೇವರ ಹಕ್ಕಿನ ವಿವಾದಾಂಶದ ಕುರಿತಾದ ಸ್ಪಷ್ಟವಾದ ತಿಳಿವಳಿಕೆಯೇ ನಮಗೆ ತಾಳಿಕೊಳ್ಳಲು ಸಹಾಯಮಾಡಿತು. . . . ಕೇವಲ ಮಾನವರ ವೈಯಕ್ತಿಕ ಅಭಿರುಚಿಗಳಿಗೆ ಮಾತ್ರ ಸಂಬಂಧಪಟ್ಟದ್ದಲ್ಲ, ಬದಲಾಗಿ ವಿಶ್ವದ ಪರಮಾಧಿಕಾರಿಯ ಅಭಿರುಚಿಗಳಿಗೂ ಸಂಬಂಧಪಟ್ಟ ಒಂದು ವಿವಾದಾಂಶದ ವಿಷಯದಲ್ಲಿ ನಾವು ದೃಢವಾದ ನಿಲುವನ್ನು ತೆಗೆದುಕೊಂಡೆವು. ಒಳಗೂಡಿದ್ದ ನಿಜ ವಿವಾದಾಂಶಗಳ ಕುರಿತು ನಮಗೆ ಹೆಚ್ಚು ಉನ್ನತವಾದ ತಿಳಿವಳಿಕೆಯಿತ್ತು. ಇದು ನಮ್ಮನ್ನು ಬಲಪಡಿಸಿತು ಮತ್ತು ಅತ್ಯಂತ ಕಷ್ಟಕರ ಸನ್ನಿವೇಶಗಳ ಕೆಳಗೂ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶಕ್ತರನ್ನಾಗಿ ಮಾಡಿತು.”

[ಚಿತ್ರ]

ವೀಕ್ಟೊರ್‌ ಪೊಪೊವಿಕ್‌​—⁠1970ರಲ್ಲಿ ಸೆರೆಹಿಡಿಯಲ್ಪಟ್ಟದ್ದು

[ಪುಟ 13ರಲ್ಲಿರುವ ಚಿತ್ರ]

ಯೇಸು ಯಾವ ನಿಂದೆಗೆ ಒಳಗಾದನೋ ಅದರ ಹಿಂದೆ ಯಾರ ಕೈವಾಡವಿತ್ತು?

[ಪುಟ 15ರಲ್ಲಿರುವ ಚಿತ್ರಗಳು]

ಯೋಬನು, ಮರಿಯಳು, ಮತ್ತು ಆಧುನಿಕ ದಿನದ ದೇವರ ಸೇವಕರಾಗಿರುವ ಸ್ಟ್ಯಾನ್ಲಿ ಜೋನ್ಸ್‌ರಂಥ ವ್ಯಕ್ತಿಗಳು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದಿದ್ದಾರೆ