ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೆಕ್ಸಿಕೋದ ಮೂಲನಿವಾಸಿಗಳುಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ

ಮೆಕ್ಸಿಕೋದ ಮೂಲನಿವಾಸಿಗಳುಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ

ಮೆಕ್ಸಿಕೋದ ಮೂಲನಿವಾಸಿಗಳುಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ

ಇಸವಿ 2002ರ ನವೆಂಬರ್‌ 10ರಂದು, ಮೆಕ್ಸಿಕೋದ ಮೂಲನಿವಾಸಿಗಳಾಗಿರುವ ಮೀಕೀಗಳ ಒಂದು ಗುಂಪು, ಕೆಟ್‌ಸಾಲ್‌ಟೆಪೆಕ್‌ನ ಸಾನ್‌ ಮೀಗಲ್‌ನಲ್ಲಿ ಒಟ್ಟುಗೂಡಿತು. ಇದು ವಹಾಕ ಎಂಬ ಸುಂದರವಾದ ದಕ್ಷಿಣ ರಾಜ್ಯದಲ್ಲಿರುವ ಒಂದು ಪಟ್ಟಣವಾಗಿದೆ. ಈ ಗುಂಪು ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನವೊಂದಕ್ಕೆ ಹಾಜರಾಗುತ್ತಿತ್ತು. ಆ ದಿನದ ಬೆಳಗ್ಗಿನ ಕಾರ್ಯಕ್ರಮದ ಮುಖ್ಯಭಾಗವು ಒಂದು ಬೈಬಲ್‌ ಡ್ರಾಮ ಆಗಿತ್ತು.

ಆ ಬೈಬಲ್‌ ಡ್ರಾಮದ ಮೊದಲ ನುಡಿಗಳು ಧ್ವನಿ ವ್ಯವಸ್ಥೆಯಲ್ಲಿ ಕೇಳಿಬಂದಾಗ, ಸಭಿಕರು ಮೂಕವಿಸ್ಮಿತರಾದರು. ಅವರು ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ, ಅವರಲ್ಲಿ ಅನೇಕರು ಕಂಬನಿ ಸುರಿಸುವ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದರು. ಏಕೆಂದರೆ ಆ ಡ್ರಾಮವು ಮೀಕೀ ಭಾಷೆಯಲ್ಲಿ ಪ್ರಸ್ತುತಪಡಿಸಲ್ಪಟ್ಟಿತು! ಡ್ರಾಮವು ಮುಗಿದಾಗ, ಈ ಅನಿರೀಕ್ಷಿತ ಉಡುಗೊರೆಗಾಗಿ ಅನೇಕರು ಹೃದಯದಾಳದಿಂದ ಗಣ್ಯತೆಯನ್ನು ವ್ಯಕ್ತಪಡಿಸಿದರು. “ಮೊತ್ತಮೊದಲ ಬಾರಿಗೆ ನಾನು ಡ್ರಾಮವನ್ನು ಅರ್ಥಮಾಡಿಕೊಳ್ಳಲು ಶಕ್ತಳಾದೆ. ಇದು ನನ್ನ ಹೃದಯವನ್ನು ತಲಪಿತು” ಎಂದು ಒಬ್ಬರು ಹೇಳಿದರು. “ನನ್ನ ಸ್ವಂತ ಭಾಷೆಯಲ್ಲಿ ಡ್ರಾಮವನ್ನು ಕೇಳಿಸಿಕೊಳ್ಳುವ ವರವನ್ನು ಯೆಹೋವನು ನೀಡಿರುವುದರಿಂದ, ಈಗ ನಾನು ತೃಪ್ತಿಯಿಂದ ಸಾಯಬಲ್ಲೆ,” ಎಂದು ಇನ್ನೊಬ್ಬರು ಉದ್ಗರಿಸಿದರು.

ಆ ದಿನ ಬೆಳಗ್ಗೆ ಏನು ನಡೆಯಿತೋ ಅದು, ರಾಜ್ಯದ ಸುವಾರ್ತೆಯನ್ನು ಮೂಲನಿವಾಸಿಗಳಿಗೆ ತಲಪಿಸಲಿಕ್ಕಾಗಿ ಮೆಕ್ಸಿಕೋದಲ್ಲಿರುವ ಯೆಹೋವನ ಸಾಕ್ಷಿಗಳಿಂದ ಇತ್ತೀಚಿಗೆ ಕೈಗೊಳ್ಳಲ್ಪಟ್ಟ ತೀವ್ರ ಪ್ರಯತ್ನದ ಒಂದು ಭಾಗವಾಗಿತ್ತು.​—⁠ಮತ್ತಾಯ 24:​14; 28:​19, 20.

ಯೆಹೋವನು ಪ್ರಾರ್ಥನೆಗಳಿಗೆ ಕಿವಿಗೊಟ್ಟನು

ಮೆಕ್ಸಿಕೋದಲ್ಲಿ 60,00,000ಕ್ಕಿಂತಲೂ ಹೆಚ್ಚು ಮೂಲನಿವಾಸಿಗಳು ಇದ್ದಾರೆ. ಇದು ಅವರದ್ದೇ ಆದ ಜನಾಂಗವನ್ನು, ಹೌದು 62 ಭಿನ್ನ ಭಾಷೆಗಳಿಂದ ಕೂಡಿರುವ ಬಹುಸಂಸ್ಕೃತಿಯ ಜನಾಂಗವೊಂದನ್ನು ರಚಿಸಲು ಸಾಕಾಗುವಷ್ಟು ದೊಡ್ಡ ಸಂಖ್ಯೆಯಾಗಿದೆ. ಇವುಗಳಲ್ಲಿ ಹದಿನೈದು ಭಾಷೆಗಳನ್ನು 1,00,000ಕ್ಕಿಂತಲೂ ಹೆಚ್ಚು ಜನರು ಮಾತಾಡುತ್ತಾರೆ. ಸುಮಾರು 10,00,000ಕ್ಕಿಂತ ಹೆಚ್ಚು ಮಂದಿ ಮೂಲನಿವಾಸಿಗಳು, ಮೆಕ್ಸಿಕೋದ ಅಧಿಕೃತ ಭಾಷೆಯಾಗಿರುವ ಸ್ಪ್ಯಾನಿಷನ್ನು ಮಾತಾಡುವುದಿಲ್ಲ. ಮತ್ತು ಯಾರು ಸ್ಪ್ಯಾನಿಷ್‌ ಭಾಷೆಯನ್ನು ಮಾತಾಡುತ್ತಾರೋ ಅವರಲ್ಲಿ ಅನೇಕರು ತಮ್ಮ ಸ್ವಂತ ಭಾಷೆಯಲ್ಲಿ ಬೈಬಲ್‌ ಸತ್ಯವನ್ನು ಹೆಚ್ಚು ಸುಲಭವಾಗಿ ಕಲಿಯಸಾಧ್ಯವಿದೆ. (ಅ. ಕೃತ್ಯಗಳು 2:6; 22:2) ಕೆಲವರು ಬೈಬಲ್‌ ಅಧ್ಯಯನಮಾಡಿದ್ದರು ಮತ್ತು ಅನೇಕ ವರ್ಷಗಳಿಂದ ನಂಬಿಗಸ್ತಿಕೆಯಿಂದ ಕ್ರೈಸ್ತ ಕೂಟಗಳಿಗೆ ಹಾಜರಾಗಿದ್ದರು, ಆದರೆ ಅವರ ಗ್ರಹಣವ್ಯಾಪ್ತಿಯು ತೀರ ಪರಿಮಿತವಾದದ್ದಾಗಿತ್ತು. ಆದುದರಿಂದ, ತಮ್ಮ ಮಾತೃಭಾಷೆಯಲ್ಲಿ ಸತ್ಯದ ಸಂದೇಶವನ್ನು ಲಭ್ಯಗೊಳಿಸುವಂತೆ ಅವರು ಸದಾ ಪ್ರಾರ್ಥನೆಗಳಲ್ಲಿ ಬೇಡಿಕೊಳ್ಳುತ್ತಿದ್ದರು.

ಈ ಪಂಥಾಹ್ವಾನವನ್ನು ನಿಭಾಯಿಸಲಿಕ್ಕಾಗಿ, ಮೆಕ್ಸಿಕೋದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸು 1999ರಲ್ಲಿ ಮೂಲನಿವಾಸಿಗಳ ಭಾಷೆಗಳಲ್ಲಿ ಸಭಾ ಕೂಟಗಳನ್ನು ನಡೆಸುವ ಏರ್ಪಾಡುಗಳನ್ನು ಮಾಡಿತು. ಭಾಷಾಂತರದ ತಂಡಗಳು ಸಹ ರಚಿಸಲ್ಪಟ್ಟವು. ಇಸವಿ 2000ದಷ್ಟಕ್ಕೆ, ಜಿಲ್ಲಾ ಅಧಿವೇಶನದ ಡ್ರಾಮವು ಮಾಯ ಭಾಷೆಯಲ್ಲಿ ಹಾಗೂ ಸಮಯಾನಂತರ ಇನ್ನಿತರ ಹಲವಾರು ಭಾಷೆಗಳಲ್ಲಿ ಪ್ರಸ್ತುತಪಡಿಸಲ್ಪಟ್ಟಿತು.

ಮುಂದಿನ ಹೆಜ್ಜೆಯು, ಯೆಹೋವನ ಸಾಕ್ಷಿಗಳ ಬೈಬಲ್‌ ಅಧ್ಯಯನ ಸಹಾಯಕಗಳ ಭಾಷಾಂತರದ ಕೆಲಸವನ್ನು ಆರಂಭಿಸುವುದೇ ಆಗಿತ್ತು. ಪ್ರಥಮವಾಗಿ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಎಂಬ ಬ್ರೋಷರನ್ನು ವಾವೆ, ಮಾಯ, ಮಾಸಾಟೆಕೋ, ಟೋಟೋನಾಕೋ, ಟ್ಸೋಟ್‌ಸೀಲ್‌, ಮತ್ತು ಟ್ಸೇಲ್‌ಟಾಲ್‌ ಭಾಷೆಗಳಿಗೆ ಭಾಷಾಂತರಿಸಲಾಯಿತು. ತದನಂತರ ಮಾಯ ಭಾಷೆಯಲ್ಲಿ ನಮ್ಮ ರಾಜ್ಯ ಸೇವೆಯ ಕ್ರಮವಾದ ಸಂಚಿಕೆಯನ್ನೂ ಸೇರಿಸಿ ಇನ್ನೂ ಹೆಚ್ಚಿನ ಪ್ರಕಾಶನಗಳು ಭಾಷಾಂತರಿಸಲ್ಪಟ್ಟವು. ಕೆಲವು ಪ್ರಕಾಶನಗಳ ಆಡಿಯೋಕ್ಯಾಸೆಟ್‌ ರೆಕಾರ್ಡಿಂಗ್‌ಗಳು ಸಹ ಮಾಡಲ್ಪಟ್ಟವು. ಮೂಲನಿವಾಸಿಗಳು ತಮ್ಮ ಮಾತೃಭಾಷೆಯನ್ನು ಓದಲು ಮತ್ತು ಬರೆಯಲು ಕಲಿಯಲಿಕ್ಕಾಗಿ, ವಾಚನಕ್ಕೂ ಬರವಣಿಗೆಗೂ ಶ್ರದ್ಧಾಪೂರ್ವಕವಾದ ಗಮನವನ್ನು ಕೊಡಿರಿ * ಎಂಬ ಶೀರ್ಷಿಕೆಯಿರುವ ಬ್ರೋಷರ್‌ ಅನ್ನು ಸ್ಥಳಿಕ ಉಪಯೋಗಕ್ಕೆ ಹೊಂದಿಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಬೈಬಲ್‌ ಸಾಹಿತ್ಯವು ಮೂಲನಿವಾಸಿಗಳ 15 ಭಾಷೆಗಳಲ್ಲಿ ಪ್ರಕಟಿಸಲ್ಪಟ್ಟಿದೆ, ಮತ್ತು ಇನ್ನೂ ಹೆಚ್ಚಿನ ಪ್ರಕಾಶನಗಳು ಪ್ರಕಟಿಸಲ್ಪಡುವವು.

‘ಸರ್ವ ಪ್ರಯತ್ನವನ್ನೂ ಮಾಡುವುದು’

ಭಾಷಾಂತರದ ಕೆಲಸವು ಅಷ್ಟೇನೂ ಸುಲಭವಾದದ್ದಾಗಿರಲಿಲ್ಲ. ಒಂದು ಕಾರಣವೇನೆಂದರೆ, ಮೆಕ್ಸಿಕೋದ ಮೂಲನಿವಾಸಿಗಳ ಭಾಷೆಯಲ್ಲಿ ಲಭ್ಯವಿರುವ ಐಹಿಕ ಸಾಹಿತ್ಯವು ತೀರ ಕಡಿಮೆ. ಅನೇಕ ಸಂದರ್ಭಗಳಲ್ಲಿ, ಶಬ್ದಕೋಶಗಳು ಸಿಗುವುದು ಒಂದು ದೊಡ್ಡ ಪಂಥಾಹ್ವಾನವಾಗಿರುತ್ತದೆ. ಅಷ್ಟುಮಾತ್ರವಲ್ಲ, ಕೆಲವು ಭಾಷೆಗಳಿಗೆ ಅನೇಕ ಉಪಭಾಷೆಗಳು ಸಹ ಇವೆ. ಉದಾಹರಣೆಗೆ, ಸಾಪೋಟೆಕ್‌ ಭಾಷೆಯೊಂದರಲ್ಲೇ ಕಡಿಮೆಪಕ್ಷ ಐದು ಉಪಭಾಷೆಗಳು ಮಾತಾಡಲ್ಪಡುತ್ತವೆ. ಈ ಉಪಭಾಷೆಗಳು ಎಷ್ಟು ವ್ಯತ್ಯಾಸಭರಿತವಾಗಿವೆಯೆಂದರೆ, ಬೇರೆ ಬೇರೆ ಕ್ಷೇತ್ರಗಳ ಸಾಪೋಟೆಕ್‌ ಜನರು ಪರಸ್ಪರರನ್ನು ಅರ್ಥಮಾಡಿಕೊಳ್ಳಲಾರರು.

ಇದಲ್ಲದೆ, ಒಂದು ಭಾಷೆಗೆ ಸ್ಥಾಪಿತ ಮಟ್ಟಗಳು ಇಲ್ಲದಿರುವಲ್ಲೆಲ್ಲಾ, ಭಾಷಾಂತರಕಾರರು ತಮ್ಮ ಸ್ವಂತ ಮಟ್ಟಗಳನ್ನು ಸ್ಥಾಪಿಸಬೇಕಾಗುತ್ತದೆ. ಇದಕ್ಕಾಗಿ ಬಹಳಷ್ಟು ಪರಿಶೀಲನೆ ಹಾಗೂ ಸಮಾಲೋಚನೆಯ ಆವಶ್ಯಕತೆಯಿದೆ. ಆದುದರಿಂದಲೇ, ಆರಂಭದಲ್ಲಿ ಭಾಷಾಂತರಕಾರರಲ್ಲಿ ಅನೇಕರಿಗೆ ವಾವೆ ತಂಡದ ಈಲೇಡಾಳಿಗೆ ಅನಿಸಿದಂತೆಯೇ ಅನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ! ಅವಳು ಜ್ಞಾಪಿಸಿಕೊಳ್ಳುವುದು: “ಮೆಕ್ಸಿಕೋದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಭಾಷಾಂತರದ ಕೆಲಸವನ್ನು ಮಾಡಲಿಕ್ಕಾಗಿ ನಾನು ಆಮಂತ್ರಿಸಲ್ಪಟ್ಟಾಗ, ನನಗೆ ಇಬ್ಬಗೆಯ ಭಾವನೆಗಳಿದ್ದವು​—⁠ಸಂತೋಷ ಹಾಗೂ ಭಯ.”

ಭಾಷಾಂತರಕಾರರು ಕಂಪ್ಯೂಟರ್‌ ಕೌಶಲಗಳು, ಶೆಡ್ಯೂಲಿಂಗ್‌, ಮತ್ತು ಭಾಷಾಂತರ ವಿಧಾನಗಳನ್ನು ಸಹ ಕಲಿಯಬೇಕಾಗಿತ್ತು. ಈ ಕೆಲಸವು ಅವರಿಗೆ ಸಾಕಷ್ಟು ಪಂಥಾಹ್ವಾನದಾಯಕವಾಗಿತ್ತು ಎಂಬುದಂತೂ ನಿಶ್ಚಯ. ಇದರ ಕುರಿತು ಅವರಿಗೆ ಹೇಗನಿಸುತ್ತದೆ? ಮಾಯ ತಂಡದ ಒಬ್ಬ ಸದಸ್ಯಳಾಗಿರುವ ಗ್ಲೋರೀಆ ಉತ್ತರಿಸುವುದು: “ಬೈಬಲ್‌ ಪ್ರಕಾಶನಗಳನ್ನು ನಮ್ಮ ಮಾತೃಭಾಷೆಯಾಗಿರುವ ಮಾಯ ಭಾಷೆಗೆ ಭಾಷಾಂತರಿಸುವುದರಲ್ಲಿ ಒಂದು ಪಾತ್ರವನ್ನು ಹೊಂದುವುದರಿಂದ ನಮಗೆ ಸಿಕ್ಕಿರುವ ಸಂತೋಷವನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.” ಮತ್ತು ಭಾಷಾಂತರಕಾರರ ಕುರಿತು ಭಾಷಾಂತರ ಇಲಾಖೆಯ ಮೇಲ್ವಿಚಾರಕನೊಬ್ಬನು ಹೀಗೆ ತಿಳಿಸಿದನು: “ತಮ್ಮ ಭಾಷೆಯಲ್ಲಿ ಬೈಬಲ್‌ ಪ್ರಕಾಶನಗಳನ್ನು ಹೊಂದುವ ಬಯಕೆಯು ಅವರಲ್ಲಿ ಎಷ್ಟು ತೀವ್ರವಾಗಿದೆಯೆಂದರೆ, ಈ ಪಂಥಾಹ್ವಾನವನ್ನು ಎದುರಿಸಲು ಅವರು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.” ಇದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆಯೋ?

“ಯೆಹೋವನೇ, ನಿನಗೆ ಉಪಕಾರ!”

ಮೂಲನಿವಾಸಿಗಳ ಕ್ಷೇತ್ರದಲ್ಲಿನ ಕೆಲಸದ ಮೇಲೆ ಯೆಹೋವನ ಆಶೀರ್ವಾದವಿದೆ ಎಂಬುದು ಸುವ್ಯಕ್ತವಾಗಿದೆ. ಕ್ರೈಸ್ತ ಕೂಟಗಳು ಮತ್ತು ಸಮ್ಮೇಳನಗಳಲ್ಲಿನ ಹಾಜರಿಯು ಅತ್ಯಧಿಕಗೊಂಡಿದೆ. ಉದಾಹರಣೆಗೆ, 2001ರಲ್ಲಿ ಮೀಕೀ ಭಾಷೆಯನ್ನಾಡುವ 223 ಮಂದಿ ಸಾಕ್ಷಿಗಳು ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸಲಿಕ್ಕಾಗಿ ಕೂಡಿಬಂದರು. ಆದರೆ ಅಲ್ಲಿ ಕೂಡಿಬಂದವರ ಒಟ್ಟು ಹಾಜರಿಯು 1,674 ಆಗಿತ್ತು; ಇದು ಸಾಕ್ಷಿಗಳ ಸಂಖ್ಯೆಗಿಂತ ಏಳೂವರೆ ಪಟ್ಟು ಹೆಚ್ಚು!

ಸತ್ಯವನ್ನು ಸ್ವೀಕರಿಸುವಂಥ ಕೆಲವರು ಈಗ ಅದನ್ನು ಆರಂಭದಿಂದಲೇ ಸರಿಯಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದಾರೆ. ಮಾಯ ಭಾಷೆಯಲ್ಲಿ ಕೂಟಗಳು ನಡೆಸಲ್ಪಡುವುದಕ್ಕೆ ಮುಂಚೆ ತನಗೆ ಹೇಗನಿಸಿತು ಎಂಬುದನ್ನು ಮೇರ್ನಾ ಜ್ಞಾಪಿಸಿಕೊಳ್ಳುತ್ತಾಳೆ. ಅವಳನ್ನುವುದು: “ಮೂರು ತಿಂಗಳುಗಳ ವರೆಗೆ ಬೈಬಲ್‌ ಅಧ್ಯಯನ ನಡೆಸಿದ ಬಳಿಕ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ನಾನು ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿತ್ತಾದರೂ, ನಾನು ಎಷ್ಟರ ಮಟ್ಟಿಗೆ ಬೈಬಲ್‌ ಸತ್ಯಗಳನ್ನು ಅರ್ಥಮಾಡಿಕೊಳ್ಳಬೇಕಿತ್ತೋ ಅಷ್ಟರ ಮಟ್ಟಿಗೆ ಅವುಗಳನ್ನು ನಾನು ಅರ್ಥಮಾಡಿಕೊಂಡಿರಲಿಲ್ಲ ಎಂಬುದನ್ನಂತೂ ಒಪ್ಪಿಕೊಳ್ಳಲೇಬೇಕು. ಮಾಯ ಭಾಷೆ ನನ್ನ ಮಾತೃಭಾಷೆಯಾಗಿದ್ದು, ನಾನು ಸ್ಪ್ಯಾನಿಷ್‌ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಸಮರ್ಥಳಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು ಎಂಬುದು ನನ್ನ ಅನಿಸಿಕೆ. ಸತ್ಯವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ನನಗೆ ಸಾಕಷ್ಟು ಸಮಯ ಹಿಡಿಯಿತು.” ಇಂದು, ಅವಳೂ ಅವಳ ಗಂಡನೂ ಮಾಯ ಭಾಷಾಂತರ ತಂಡದಲ್ಲಿ ಒಳಗೂಡಿರುವುದಕ್ಕಾಗಿ ತುಂಬ ಸಂತೋಷಿಸುತ್ತಾರೆ.

ಸಭೆಗಳಲ್ಲಿರುವವರೆಲ್ಲರಿಗೂ, ತಮ್ಮ ಮಾತೃಭಾಷೆಯಲ್ಲಿ ಪ್ರಕಾಶನಗಳನ್ನು ಪಡೆದುಕೊಳ್ಳುವುದು ಅಪಾರ ಸಂತೋಷವನ್ನುಂಟುಮಾಡಿದೆ. ಟ್ಸೋಟ್‌ಸೀಲ್‌ ಭಾಷೆಯಲ್ಲಿ ಹೊಸದಾಗಿ ಭಾಷಾಂತರಿಸಲ್ಪಟ್ಟ ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಎಂಬ ಬ್ರೋಷರನ್ನು, ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದ್ದ ಒಬ್ಬ ಸ್ತ್ರೀಗೆ ನೀಡಿದಾಗ, ಅವಳು ಅದನ್ನು ಅಪ್ಪಿಕೊಂಡು “ಯೆಹೋವನೇ, ನಿನಗೆ ಉಪಕಾರ!” ಎಂದು ಉದ್ಗರಿಸಿದಳು. ಅನೇಕ ಬೈಬಲ್‌ ವಿದ್ಯಾರ್ಥಿಗಳು ಅತಿ ಬೇಗನೆ ದೀಕ್ಷಾಸ್ನಾನದ ಕಡೆಗೆ ಪ್ರಗತಿಯನ್ನು ಮಾಡಿದ್ದಾರೆ, ಅಕ್ರಿಯ ಪ್ರಚಾರಕರು ಪುನಃ ಕ್ರಿಯಾಶೀಲರಾಗುತ್ತಿದ್ದಾರೆ, ಮತ್ತು ಅನೇಕ ಕ್ರೈಸ್ತ ಸಹೋದರರಿಗೆ ಈಗ ಸಭೆಯಲ್ಲಿ ಜವಾಬ್ದಾರಿಗಳನ್ನು ಸ್ವೀಕರಿಸಲು ತಾವು ಅರ್ಹರಾಗಿದ್ದೇವೆ ಎಂದನಿಸುತ್ತದೆ ಎಂದು ವರದಿಗಳು ತೋರಿಸುತ್ತವೆ. ಮನೆಗಳಲ್ಲಿ ಸಿಗುವಂಥ ಕೆಲವರು ತಮ್ಮ ಸ್ವಂತ ಭಾಷೆಯಲ್ಲಿ ಬೈಬಲ್‌ ಸಾಹಿತ್ಯವನ್ನು ಸ್ವೀಕರಿಸಲು ಮತ್ತು ಅದನ್ನು ಅಧ್ಯಯನಮಾಡಲು ಹೆಚ್ಚೆಚ್ಚು ಸಿದ್ಧಮನಸ್ಕರಾಗಿದ್ದಾರೆ.

ಒಮ್ಮೆ ಸಾಕ್ಷಿಯೊಬ್ಬಳು ಒಂದು ಬೈಬಲ್‌ ಅಧ್ಯಯನವನ್ನು ನಡೆಸಲು ಹೋದಳು, ಆದರೆ ಬೈಬಲ್‌ ವಿದ್ಯಾರ್ಥಿ ಮನೆಯಲ್ಲಿರಲಿಲ್ಲ. ಅವಳ ಗಂಡನು ಬಾಗಿಲ ಬಳಿ ಬಂದಾಗ, ಒಂದು ಬ್ರೋಷರಿನಿಂದ ತಾನೊಂದು ವಿಚಾರವನ್ನು ಓದಿ ಹೇಳುತ್ತೇನೆಂದು ಈ ಸಾಕ್ಷಿಯು ಅವನಿಗೆ ಹೇಳಿದಳು. “ನನಗೆ ಏನನ್ನೂ ಓದಿ ಹೇಳುವುದು ಬೇಡ” ಎಂದನವನು. ಆಗ ಆ ಸಹೋದರಿಯು, ಆ ಬ್ರೋಷರ್‌ ಅವನ ಸ್ವಂತ ಭಾಷೆಯಲ್ಲಿದೆ ಎಂದು ಟೋಟೋನಾಕೋ ಭಾಷೆಯಲ್ಲಿ ಅವನಿಗೆ ಹೇಳಿದಳು. ಇದನ್ನು ಕೇಳಿದಾಕ್ಷಣ ಆ ವ್ಯಕ್ತಿ ಒಂದು ಬೆಂಚನ್ನು ಎಳೆದು, ಅದರ ಮೇಲೆ ಕುಳಿತುಕೊಂಡನು. ಅವಳು ಬ್ರೋಷರಿನಿಂದ ಓದಿ ಹೇಳುತ್ತಿರುವಾಗ, ಅವನು “ಅದು ನಿಜ. ಖಂಡಿತವಾಗಿಯೂ ನಿಜ” ಎಂದನ್ನುತ್ತಾ ಇದ್ದನು. ಈಗ ಅವನು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದಾನೆ.

ಯುಕಟೇನ್‌ನಲ್ಲಿ ಒಬ್ಬ ಸಾಕ್ಷಿಯ ಗಂಡನು ಸತ್ಯವನ್ನು ವಿರೋಧಿಸುತ್ತಿದ್ದನು ಮತ್ತು ಕೆಲವೊಮ್ಮೆ ಅವಳು ಕೂಟಗಳಿಂದ ಮನೆಗೆ ಬಂದಾಗ ಅವಳಿಗೆ ಹೊಡೆಯುತ್ತಿದ್ದನು. ಮಾಯ ಭಾಷೆಯಲ್ಲಿ ಕೂಟಗಳು ನಡೆಸಲ್ಪಡಲು ಆರಂಭವಾದಾಗ ಅವಳು ಅವನನ್ನು ಆಮಂತ್ರಿಸಲು ನಿರ್ಧರಿಸಿದಳು. ಅವನು ಕೂಟಕ್ಕೆ ಬಂದನು ಮತ್ತು ಅದರಲ್ಲಿ ಬಹಳವಾಗಿ ಆನಂದಿಸಿದನು. ಈಗ ಅವನು ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಾನೆ, ಅವನೊಂದಿಗೆ ಒಂದು ಬೈಬಲ್‌ ಅಧ್ಯಯನ ನಡೆಸಲ್ಪಡುತ್ತಿದೆ, ಮತ್ತು ಈಗವನು ತನ್ನ ಹೆಂಡತಿಗೆ ಹೊಡೆಯುವುದಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಟೋಟೋನಾಕೋ ಭಾಷೆಯನ್ನು ಮಾತಾಡುವ ವ್ಯಕ್ತಿಯೊಬ್ಬನು, ತಾನು ಪ್ರಾರ್ಥನೆಯೇ ಮಾಡುವುದಿಲ್ಲ ಏಕೆಂದರೆ ದೇವರು ಸ್ಪ್ಯಾನಿಷ್‌ ಭಾಷೆಯಲ್ಲಿ ಮಾಡಲ್ಪಡುವ ಪ್ರಾರ್ಥನೆಗಳಿಗೆ ಮಾತ್ರ ಕಿವಿಗೊಡುತ್ತಾನೆ ಎಂದು ಕ್ಯಾಥೊಲಿಕ್‌ ಪಾದ್ರಿಯು ಹೇಳಿದ್ದಾನೆಂದು ಇಬ್ಬರು ಸಾಕ್ಷಿಗಳಿಗೆ ಹೇಳಿದನು. ವಾಸ್ತವದಲ್ಲಿ, ಟೋಟೋನಾಕೋ ಜನರ ಪರವಾಗಿ ಪ್ರಾರ್ಥಿಸಲಿಕ್ಕಾಗಿ ಅವನು ಪಾದ್ರಿಗೆ ಹಣವನ್ನು ನೀಡಬೇಕಾಗಿ ಬಂತು. ಎಲ್ಲಾ ಭಾಷೆಗಳಲ್ಲಿ ಮಾಡಲ್ಪಡುವ ಪ್ರಾರ್ಥನೆಗಳಿಗೆ ದೇವರು ಕಿವಿಗೊಡುತ್ತಾನೆ ಎಂದು ಸಾಕ್ಷಿಗಳು ವಿವರಿಸಿದರು, ಮತ್ತು ಟೋಟೋನಾಕೋ ಭಾಷೆಯ ಒಂದು ಬ್ರೋಷರನ್ನು ಅವನಿಗೆ ನೀಡಿದರು ಹಾಗೂ ಅವನು ಅದನ್ನು ಬಹಳ ಸಂತೋಷದಿಂದಲೇ ಸ್ವೀಕರಿಸಿದನು.​—⁠2 ಪೂರ್ವಕಾಲವೃತ್ತಾಂತ 6:32, 33; ಕೀರ್ತನೆ 65:⁠2.

“ಕೂಆಲ್ಟ್‌ಸೀನ್‌ ಟಾಕ್ಟೋಊವಾ”

ಈ ವಿಕಸನಗಳಿಂದ ಪುಳಕಿತರಾದ ಅನೇಕ ರಾಜ್ಯ ಪ್ರಚಾರಕರು, ಮೂಲನಿವಾಸಿಗಳ ಭಾಷೆಯೊಂದನ್ನು ಕಲಿಯಲು ಅಥವಾ ಅಂಥ ಒಂದು ಭಾಷೆಯ ಕುರಿತಾದ ತಮ್ಮ ಜ್ಞಾನವನ್ನು ಇನ್ನೂ ಹೆಚ್ಚಿಸಿಕೊಳ್ಳಲು ಪರಿಶ್ರಮಿಸುತ್ತಿದ್ದಾರೆ. ಉತ್ತರ ಪ್ಯೂಬ್ಲ ರಾಜ್ಯದಲ್ಲಿರುವ ನವಾಟಲ್‌ ಭಾಷೆಯನ್ನು ಮಾತಾಡುವಂಥ ಐದು ಸಭೆಗಳಲ್ಲಿ ಸೇವೆಮಾಡುವ ಸರ್ಕಿಟ್‌ ಮೇಲ್ವಿಚಾರಕರೊಬ್ಬರು ಇದನ್ನೇ ಮಾಡುತ್ತಿದ್ದಾರೆ. ಅವರು ತಿಳಿಸುವುದು: “ಕೂಟಗಳಲ್ಲಿ ನಿದ್ರೆಮಾಡಿಬಿಡುತ್ತಿದ್ದ ಮಕ್ಕಳು ಈಗ ನಾನು ನವಾಟಲ್‌ ಭಾಷೆಯಲ್ಲಿ ಮಾತಾಡುವಾಗ ತುಂಬ ಎಚ್ಚರವಾಗಿರುತ್ತಾರೆ ಮತ್ತು ಜಾಗ್ರತೆಯಿಂದ ಕೇಳಿಸಿಕೊಳ್ಳುತ್ತಾರೆ. ಒಂದು ಕೂಟದ ಅಂತ್ಯದಲ್ಲಿ, ನಾಲ್ಕು ವರ್ಷ ಪ್ರಾಯದ ಒಬ್ಬ ಹುಡುಗನು ನನ್ನ ಬಳಿ ಬಂದು ಹೇಳಿದ್ದು: ‘ಕೂಆಲ್ಟ್‌ಸೀನ್‌ ಟಾಕ್ಟೋಊವಾ’ (ನೀವು ತುಂಬ ಚೆನ್ನಾಗಿ ಮಾತಾಡುತ್ತೀರಿ). ಇದನ್ನು ಕೇಳಿ ನನಗೆ ನನ್ನ ಪ್ರಯತ್ನ ಸಾರ್ಥಕವಾಯಿತು ಎಂದನಿಸಿತು.”

ಹೌದು, ಮೂಲನಿವಾಸಿಗಳ ಭಾಷಾ ಕ್ಷೇತ್ರವು ನಿಜವಾಗಿಯೂ ‘ಬೆಳ್ಳಗಾಗಿ ಕೊಯ್ಲಿಗೆ ಬಂದಿವೆ’ ಮತ್ತು ಇದರಲ್ಲಿ ಪಾಲ್ಗೊಳ್ಳುವವರೆಲ್ಲರೂ ಬಹಳವಾಗಿ ಉತ್ತೇಜಿತರಾಗಿದ್ದಾರೆ. (ಯೋಹಾನ 4:35) ಭಾಷಾಂತರದ ತಂಡಗಳನ್ನು ಸಂಘಟಿಸಲು ಶ್ರಮಿಸಿದ ರೋಬರ್ಟೋ ಅವರು ಅದನ್ನು ಈ ಮಾತುಗಳಲ್ಲಿ ಸಾರಾಂಶಿಸುತ್ತಾರೆ: “ತಮ್ಮ ಸ್ವಂತ ಭಾಷೆಯಲ್ಲಿ ಸತ್ಯವನ್ನು ಕೇಳಿಸಿಕೊಳ್ಳುವಾಗ ಮತ್ತು ಅದರ ಅರ್ಥವನ್ನು ಗ್ರಹಿಸುವಾಗ ನಮ್ಮ ಸಹೋದರ ಸಹೋದರಿಯರ ಕಣ್ಣುಗಳಿಂದ ಹರಿಯುವ ಆನಂದಾಶ್ರುಗಳನ್ನು ನೋಡುವುದು ಅವಿಸ್ಮರಣೀಯ ಅನುಭವವಾಗಿದೆ. ಇದರ ಕುರಿತು ಆಲೋಚಿಸುವಾಗ ನನಗೆ ಗಂಟಲುಬ್ಬಿಬರುತ್ತದೆ.” ರಾಜ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳುವಂತೆ ಯಥಾರ್ಥ ಮನಸ್ಸಿನ ಈ ಜನರಿಗೆ ಸಹಾಯಮಾಡುವುದು ಯೆಹೋವನ ಹೃದಯಕ್ಕೂ ಸಂತೋಷ ತರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.​—⁠ಜ್ಞಾನೋಕ್ತಿ 27:⁠11.

[ಪಾದಟಿಪ್ಪಣಿ]

^ ಪ್ಯಾರ. 8 ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 10, 11ರಲ್ಲಿರುವ ಚೌಕ]

ಭಾಷಾಂತರಕಾರರಲ್ಲಿ ಕೆಲವರನ್ನು ಪರಿಚಯಮಾಡಿಕೊಳ್ಳಿ

● “ನನಗೆ ನೆನಪಿರುವಂದಿನಿಂದ ನನ್ನ ಹೆತ್ತವರು ನನಗೆ ಸತ್ಯವನ್ನು ಕಲಿಸಿದರು. ದುಃಖಕರವಾಗಿಯೇ, ನಾನು 11 ವರ್ಷ ಪ್ರಾಯದವಳಾಗಿದ್ದಾಗ, ನನ್ನ ತಂದೆಯವರು ಕ್ರೈಸ್ತ ಸಭೆಯನ್ನು ಬಿಟ್ಟರು. ಎರಡು ವರ್ಷಗಳ ತರುವಾಯ ನನ್ನ ತಾಯಿ ನಮ್ಮನ್ನು ಬಿಟ್ಟುಹೋದರು. ಐವರು ಮಕ್ಕಳಲ್ಲಿ ನಾನು ಹಿರಿಯವಳಾಗಿದ್ದರಿಂದ, ನನ್ನ ತಾಯಿಯ ಜವಾಬ್ದಾರಿಗಳನ್ನು ನಾನು ನಿರ್ವಹಿಸಬೇಕಾಗಿತ್ತು; ಆಗಿನ್ನೂ ನಾನು ಶಾಲೆಗೆ ಹೋಗುತ್ತಿದ್ದೆ.

“ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಪ್ರೀತಿಭರಿತ ಬೆಂಬಲ ನಮಗಿತ್ತು, ಆದರೂ ಬದುಕು ತುಂಬ ಕಷ್ಟಕರವಾಗಿತ್ತು. ಕೆಲವೊಮ್ಮೆ ನನಗೆ ಹೀಗನಿಸುತ್ತಿತ್ತು: ‘ನನ್ನ ಜೀವನದಲ್ಲಿ ಹೀಗೇಕೆ ಆಗುತ್ತಿದೆ? ನಾನು ಇನ್ನೂ ಚಿಕ್ಕವಳು!’ ಕೇವಲ ಯೆಹೋವನ ಸಹಾಯದಿಂದ ಮಾತ್ರವೇ ನಾನು ಇದನ್ನು ನಿಭಾಯಿಸಲು ಶಕ್ತಳಾಗಿದ್ದೆ. ಪ್ರೌಢ ಶಾಲೆಯಿಂದ ತೇರ್ಗಡೆಯಾದ ಬಳಿಕ ನಾನು ಒಬ್ಬ ಪೂರ್ಣ ಸಮಯದ ಶುಶ್ರೂಷಕಳಾದೆ, ಮತ್ತು ಇದು ನನಗೆ ಅತ್ಯಧಿಕ ರೀತಿಯಲ್ಲಿ ಸಹಾಯಮಾಡಿತು. ನವಾಟಲ್‌ ಭಾಷಾಂತರ ತಂಡವು ರಚಿಸಲ್ಪಟ್ಟಾಗ, ಅದರಲ್ಲಿ ಸೇರಿಕೊಳ್ಳಲು ನನಗೆ ಆಮಂತ್ರಣ ಸಿಕ್ಕಿತು.

“ಈಗ ನನ್ನ ತಂದೆಯವರು ಸಭೆಗೆ ಹಿಂದಿರುಗಿದ್ದಾರೆ, ಮತ್ತು ನನ್ನ ತಮ್ಮಂದಿರು ಹಾಗೂ ತಂಗಿಯರು ಯೆಹೋವನ ಸೇವೆಮಾಡುತ್ತಿದ್ದಾರೆ. ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ಮಾಡಲ್ಪಟ್ಟ ಪ್ರಯತ್ನವು ಸಾರ್ಥಕವಾಯಿತು. ಆತನು ನನ್ನ ಕುಟುಂಬವನ್ನು ಬಹಳವಾಗಿ ಆಶೀರ್ವದಿಸಿದ್ದಾನೆ.”​—⁠ಆಲೇಸ್‌ಯಾ.

● “ಒಬ್ಬ ಸಾಕ್ಷಿ ಸಹಪಾಠಿಯು ಜೀವದ ಮೂಲದ ಬಗ್ಗೆ ಶಾಲೆಯಲ್ಲಿ ಒಂದು ಭಾಷಣವನ್ನು ಕೊಟ್ಟಳು. ಆ ಕ್ಲಾಸಿಗೆ ನಾನು ಗೈರುಹಾಜರಾಗಿದ್ದ ಕಾರಣ ಆ ವಿಷಯದ ಕುರಿತು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿದರೆ ಉತ್ತರಿಸಲಾರೆ ಎಂದು ಚಿಂತಿತನಾಗಿದ್ದೆ. ಆದುದರಿಂದ, ಆ ವಿಷಯವನ್ನು ನನಗೆ ವಿವರಿಸುವಂತೆ ನಾನು ಅವಳ ಬಳಿ ಕೇಳಿಕೊಂಡೆ. ಜನರು ಏಕೆ ಸಾಯುತ್ತಾರೆ ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತಿತ್ತು. ಅವಳು ನನಗೆ ಸೃಷ್ಟಿ ಪುಸ್ತಕವನ್ನು * ಮತ್ತು ಒಂದು ಬೈಬಲ್‌ ಅಧ್ಯಯನ ಸಹಾಯಕವನ್ನು ಕೊಟ್ಟಾಗ ನಾನು ಸ್ವೀಕರಿಸಿದೆ. ಸೃಷ್ಟಿಕರ್ತನ ಉದ್ದೇಶ ಹಾಗೂ ಪ್ರೀತಿಯಿಂದ ನಾನು ಬಹಳವಾಗಿ ಪ್ರಚೋದಿತನಾದೆ.

“ನಾನು ಶಾಲಾ ವ್ಯಾಸಂಗವನ್ನು ಮುಗಿಸಿದಾಗ, ಸ್ಪ್ಯಾನಿಷ್‌ ಹಾಗೂ ಟ್ಸೋಟ್‌ಸೀಲ್‌ ಭಾಷೆಗಳಲ್ಲಿ ದ್ವಿಭಾಷಿ ಶಿಕ್ಷಕನಾಗುವ ಸದವಕಾಶ ನನಗೆ ಸಿಕ್ಕಿತು. ಆದರೆ ಇದು ತುಂಬ ದೂರ ಸ್ಥಳಾಂತರಿಸುವಂತೆ, ವಾರಾಂತ್ಯಗಳಲ್ಲಿ ಕ್ಲಾಸ್‌ ತೆಗೆದುಕೊಳ್ಳುವಂತೆ, ಮತ್ತು ಕ್ರೈಸ್ತ ಕೂಟಗಳನ್ನು ತಪ್ಪುವಂತೆ ಮಾಡಸಾಧ್ಯವಿತ್ತು. ಅದಕ್ಕೆ ಬದಲಾಗಿ, ನಾನು ಇಟ್ಟಿಗೆಕಟ್ಟುವ ಕೆಲಸವನ್ನು ಮಾಡಿದೆ. ಅವಿಶ್ವಾಸಿಯಾಗಿದ್ದ ನನ್ನ ತಂದೆಯವರಿಗೆ ನನ್ನ ನಿರ್ಧಾರ ಸ್ವಲ್ಪವೂ ಇಷ್ಟವಾಗಲಿಲ್ಲ. ಸಮಯಾನಂತರ, ನಾನು ಪಯನೀಯರ್‌ ಶುಶ್ರೂಷಕನಾಗಿ ಸೇವೆಮಾಡುತ್ತಿದ್ದಾಗ, ಟ್ಸೋಟ್‌ಸೀಲ್‌ ಭಾಷೆಗೆ ಬೈಬಲ್‌ ಸಾಹಿತ್ಯವನ್ನು ಭಾಷಾಂತರಿಸುವ ಒಂದು ತಂಡವು ಸಂಘಟಿಸಲ್ಪಟ್ಟಿತು. ಇದರಲ್ಲಿ ಪಾಲ್ಗೊಳ್ಳುವಂತೆ ನಾನು ಪ್ರಚೋದಿಸಲ್ಪಟ್ಟೆ.

“ತಮ್ಮ ಸ್ವಂತ ಭಾಷೆಯಲ್ಲಿ ಪ್ರಕಾಶನಗಳನ್ನು ಪಡೆದುಕೊಳ್ಳುವುದು ನಮ್ಮ ಸಹೋದರ ಸಹೋದರಿಯರಲ್ಲಿ, ತಮ್ಮನ್ನು ಗಣ್ಯಮಾಡಲಾಗುತ್ತಿದೆ ಮತ್ತು ತಮಗೆ ಮಹತ್ವವನ್ನು ಕೊಡಲಾಗುತ್ತಿದೆ ಎಂಬ ಭಾವನೆಯನ್ನುಂಟುಮಾಡುತ್ತದೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇದು ಮನಸ್ಸಿಗೆ ತುಂಬ ತೃಪ್ತಿಯನ್ನು ನೀಡುತ್ತದೆ. ಈ ನೇಮಕವನ್ನು ಪಡೆದಿರುವುದೇ ಅತೀ ದೊಡ್ಡ ಸುಯೋಗವಾಗಿದೆ ಎಂಬುದು ನನ್ನ ಅನಿಸಿಕೆ.”​—⁠ಉಂಬರ್ಟೋ.

● “ನಾನು ಆರು ವರ್ಷದವಳಾಗಿದ್ದಾಗ ನನ್ನ ತಾಯಿಯವರು ನಮ್ಮನ್ನು ಬಿಟ್ಟುಹೋದರು. ನನ್ನ ಹದಿಪ್ರಾಯದಲ್ಲಿ ನನ್ನ ತಂದೆಯವರು ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಲಾರಂಭಿಸಿದರು. ಒಂದು ದಿನ ಸಹೋದರಿಯೊಬ್ಬಳು ಯುವ ಜನರಿಗಾಗಿರುವ ಸಲಹೆಯನ್ನು ಒಳಗೂಡಿದ್ದ ಒಂದು ಬೈಬಲ್‌ ಅಧ್ಯಯನಕ್ಕೆ ಕುಳಿತುಕೊಳ್ಳುವಂತೆ ನನ್ನನ್ನು ಕೇಳಿಕೊಂಡಳು. ತಾಯಿಯಿಲ್ಲದ ಹದಿವಯಸ್ಕಳಾಗಿರುವ ನನಗೆ ಈಗ ಇದರ ಆವಶ್ಯಕತೆಯಿದೆ ಎಂದು ಅನಿಸಿತು. ನನ್ನ 15ರ ಪ್ರಾಯದಲ್ಲಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.

“ಇಸವಿ 1999ರಲ್ಲಿ, ನಮ್ಮ ತಂದೆಯವರ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಕೆಲವು ದುಷ್ಟರು ಅವರನ್ನು ಕೊಂದುಬಿಟ್ಟರು. ಇದರಿಂದ ನಾನು ತೀವ್ರ ಆಘಾತಕ್ಕೊಳಗಾದೆ. ನಾನು ಗುರುತರವಾದ ಖಿನ್ನತೆಗೊಳಗಾದೆ ಮತ್ತು ನನಗೆ ಬದುಕೇ ಬೇಡವಾಯಿತು. ಆದರೆ ಬಲಕ್ಕಾಗಿ ಯೆಹೋವನ ಬಳಿ ಪ್ರಾರ್ಥಿಸುತ್ತಾ ಇದ್ದೆ. ಸಂಚರಣ ಮೇಲ್ವಿಚಾರಕರು ಹಾಗೂ ಅವರ ಪತ್ನಿಯವರು ನನಗೆ ಬಹಳವಾಗಿ ಪ್ರೋತ್ಸಾಹಿಸುತ್ತಾ ಇದ್ದರು. ಆದುದರಿಂದ ಬೇಗನೆ ನಾನು ರೆಗ್ಯುಲರ್‌ ಪಯನೀಯರಳಾದೆ.

“ಒಂದು ಸಂದರ್ಭದಲ್ಲಿ, ಟೋಟೋನಾಕೋ ಭಾಷೆಯಲ್ಲಿದ್ದ ಕೇವಲ 20 ನಿಮಿಷದ ಭಾಷಣವನ್ನು ಕೇಳಿಸಿಕೊಳ್ಳಲಿಕ್ಕಾಗಿ ಆರು ತಾಸುಗಳ ವರೆಗೆ ಕಾಲ್ನಡಿಗೆಯಲ್ಲಿ ಹೋದಂಥ ಜನರನ್ನು ನಾನು ಗಮನಿಸಿದೆ. ಕೂಟದ ಉಳಿದ ಭಾಗವು, ಅವರು ಅರ್ಥಮಾಡಿಕೊಳ್ಳಲು ಅಸಾಧ್ಯವಾಗಿದ್ದ ಸ್ಪ್ಯಾನಿಷ್‌ ಭಾಷೆಯಲ್ಲಿತ್ತು. ಹೀಗಿರುವುದರಿಂದ, ಟೋಟೋನಾಕೋ ಭಾಷೆಯಲ್ಲಿ ಬೈಬಲ್‌ ಪ್ರಕಾಶನಗಳನ್ನು ಭಾಷಾಂತರಿಸಲು ಸಹಾಯಮಾಡುವಂತೆ ನನ್ನನ್ನು ಆಮಂತ್ರಿಸಲಾದಾಗ ನಾನು ತುಂಬ ಪುಳಕಿತಳಾದೆ.

“ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುವುದು ನನ್ನ ಕನಸಾಗಿದೆ ಎಂದು ನಾನು ತಂದೆಯವರಿಗೆ ಹೇಳುತ್ತಿದ್ದೆ. ನನ್ನ ಪ್ರಾಯದ ಅವಿವಾಹಿತ ಹುಡುಗಿಯು ಅಲ್ಲಿಗೆ ಆಮಂತ್ರಿಸಲ್ಪಡುವುದು ಅಷ್ಟೇನೂ ಸುಲಭವಲ್ಲ ಎಂದು ಅವರು ನನಗೆ ಹೇಳುತ್ತಿದ್ದರು. ಆದರೆ ಪುನರುತ್ಥಾನದಲ್ಲಿ ಅವರು ಹಿಂದೆ ಬರುವಾಗ, ನಾನು ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡಲು ಶಕ್ತಳಾಗಿ, ನಮ್ಮ ಭಾಷೆಯಲ್ಲಿ ಬೈಬಲ್‌ ಸಾಹಿತ್ಯವನ್ನು ಭಾಷಾಂತರಿಸುತ್ತಿದ್ದೆ ಎಂಬುದು ಅವರಿಗೆ ಗೊತ್ತಾಗುವಾಗ ಅವರೆಷ್ಟು ಸಂಭ್ರಮಿಸುವರು!”​—⁠ಇಡೀಟ್‌.

[ಪಾದಟಿಪ್ಪಣಿ]

^ ಪ್ಯಾರ. 30 ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌)​—⁠1985ರಲ್ಲಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 9ರಲ್ಲಿರುವ ಚಿತ್ರ]

ಟ್ಸೋಟ್‌ಸೀಲ್‌ ಭಾಷಾಂತರ ತಂಡದ ಸದಸ್ಯರು, ಭಾಷಾಂತರಿಸಲು ಕಷ್ಟಕರವಾಗಿರುವ ಒಂದು ಪದವನ್ನು ಚರ್ಚಿಸುತ್ತಿರುವುದು