ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ‘ಇಕ್ಕಟ್ಟಿನಲ್ಲಿ ನಮ್ಮ ದುರ್ಗಸ್ಥಾನ’

ಯೆಹೋವನು ‘ಇಕ್ಕಟ್ಟಿನಲ್ಲಿ ನಮ್ಮ ದುರ್ಗಸ್ಥಾನ’

ಯೆಹೋವನು ‘ಇಕ್ಕಟ್ಟಿನಲ್ಲಿ ನಮ್ಮ ದುರ್ಗಸ್ಥಾನ’

“ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ.” —⁠ಕೀರ್ತನೆ 37:⁠39.

ಯೆಹೋವನು ಸರ್ವಶಕ್ತನಾಗಿದ್ದಾನೆ. ತನಗಿಷ್ಟ ಬಂದ ರೀತಿಯಲ್ಲಿ ಆತನು ತನ್ನ ನಂಬಿಗಸ್ತ ಆರಾಧಕರನ್ನು ಸಂರಕ್ಷಿಸುವ ಶಕ್ತಿಯುಳ್ಳವನಾಗಿದ್ದಾನೆ. ಆತನು ತನ್ನ ಜನರನ್ನು ಶಾರೀರಿಕವಾಗಿ ಈ ಲೋಕದಿಂದ ಪ್ರತ್ಯೇಕಿಸಿ, ಅವರನ್ನು ಸುರಕ್ಷಿತವಾದ ಹಾಗೂ ಶಾಂತಿಭರಿತವಾದ ಪರಿಸರದಲ್ಲಿ ಇಡಲೂ ಶಕ್ತನಾಗಿದ್ದಾನೆ. ಆದರೆ ತನ್ನ ಶಿಷ್ಯರ ಕುರಿತಾಗಿ ಯೇಸು ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥಿಸಿದ್ದು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.”​—⁠ಯೋಹಾನ 17:⁠15.

2 ಯೆಹೋವನು ನಮ್ಮನ್ನು “ಲೋಕದೊಳಗಿಂದ ತೆಗೆದುಕೊಂಡು ಹೋಗ”ದಿರುವ ಆಯ್ಕೆಮಾಡಿದ್ದಾನೆ. ಅದಕ್ಕೆ ಬದಲಾಗಿ, ಆತನ ನಿರೀಕ್ಷೆ ಹಾಗೂ ಸಾಂತ್ವನದ ಸಂದೇಶವನ್ನು ಇತರರಿಗೆ ಪ್ರಕಟಿಸಲಿಕ್ಕಾಗಿ ನಾವು ಲೋಕದಲ್ಲಿರುವ ಎಲ್ಲರೊಂದಿಗೆ ಬದುಕಬೇಕು ಎಂಬುದು ಆತನ ಚಿತ್ತವಾಗಿದೆ. (ರೋಮಾಪುರ 10:​13-15) ಆದರೆ, ತನ್ನ ಪ್ರಾರ್ಥನೆಯಲ್ಲಿ ಯೇಸು ಅರ್ಥೈಸಿದಂತೆ, ಈ ಲೋಕದಲ್ಲಿ ಜೀವಿಸುತ್ತಿರುವಾಗ ನಾವು “ಕೆಡುಕ”ನಿಗೆ ಒಡ್ಡಲ್ಪಡುತ್ತೇವೆ. ಅವಿಧೇಯ ಮಾನವಕುಲ ಹಾಗೂ ದುರಾತ್ಮಗಳು, ಅತ್ಯಧಿಕ ವೇದನೆ ಹಾಗೂ ಬೇಗುದಿಯನ್ನು ಉಂಟುಮಾಡುತ್ತವೆ, ಮತ್ತು ಕ್ರೈಸ್ತರು ಇಕ್ಕಟ್ಟಿನಿಂದ ವಿಮುಕ್ತರೇನಲ್ಲ.​—⁠1 ಪೇತ್ರ 5:⁠9.

3 ಇಂಥ ಪರೀಕ್ಷೆಗಳ ಕೆಳಗೆ ತಾತ್ಕಾಲಿಕವಾಗಿ ನಿರುತ್ಸಾಹವನ್ನು ಅನುಭವಿಸುವುದು ಸಹಜ. (ಜ್ಞಾನೋಕ್ತಿ 24:10) ಇಕ್ಕಟ್ಟನ್ನು ಅನುಭವಿಸಿರುವ ನಂಬಿಗಸ್ತರ ಅನೇಕ ವೃತ್ತಾಂತಗಳು ಬೈಬಲ್‌ ದಾಖಲೆಯಲ್ಲಿವೆ. ಕೀರ್ತನೆಗಾರನು ಹೇಳುವುದು: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” (ಕೀರ್ತನೆ 34:19) ಹೌದು, ‘ನೀತಿವಂತರಿಗೆ’ ಸಹ ಕೆಟ್ಟ ವಿಷಯಗಳು ಸಂಭವಿಸುತ್ತವೆ. ಕೀರ್ತನೆಗಾರನಾದ ದಾವೀದನಂತೆ, ಕೆಲವೊಮ್ಮೆ ನಾವು ‘ಜೋಮುಹಿಡಿದವರಾಗಿ, ಬಹಳ ಮನಗುಂದಿದ’ವರೂ ಆಗಬಹುದು. (ಕೀರ್ತನೆ 38:⁠8) ಆದರೂ, “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂಬುದನ್ನು ತಿಳಿದವರಾಗಿರುವುದು ಸಾಂತ್ವನದಾಯಕ ಸಂಗತಿಯಾಗಿದೆ.​—⁠ಕೀರ್ತನೆ 34:18; 94:⁠19.

4 ಯೇಸುವಿನ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ಖಂಡಿತವಾಗಿಯೂ ಯೆಹೋವನು ನಮ್ಮ ಮೇಲೆ ನಿಗವಿಟ್ಟಿದ್ದಾನೆ. “ಇಕ್ಕಟ್ಟಿನಲ್ಲಿ” ಆತನೇ ನಮ್ಮ “ದುರ್ಗಸ್ಥಾನ”ವಾಗಿದ್ದಾನೆ. (ಕೀರ್ತನೆ 37:39) “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು” ಎಂದು ಜ್ಞಾನೋಕ್ತಿ ಪುಸ್ತಕವು ಹೇಳುವಾಗ, ಇದು ತದ್ರೀತಿಯ ಪದಪ್ರಯೋಗವನ್ನು ಮಾಡುತ್ತದೆ. (ಜ್ಞಾನೋಕ್ತಿ 18:10) ಈ ಶಾಸ್ತ್ರವಚನವು ತನ್ನ ಸೃಷ್ಟಿಜೀವಿಗಳ ಕಡೆಗೆ ಯೆಹೋವನಿಗಿರುವ ಕೋಮಲ ಹಿತಾಸಕ್ತಿಯ ಕುರಿತಾದ ಒಂದು ಮೂಲಭೂತ ಸತ್ಯವನ್ನು ತಿಳಿಯಪಡಿಸುತ್ತದೆ. ಆಶ್ರಯಕ್ಕಾಗಿ ಒಂದು ಬಲವಾದ ಬುರಜಿನೊಳಗೆ ನಾವು ಓಡುತ್ತಿದ್ದೇವೋ ಎಂಬಂತೆ ನೀತಿವಂತರು ಕ್ರಿಯಾಶೀಲ ರೀತಿಯಲ್ಲಿ ತನ್ನನ್ನು ಹುಡುಕಲು ಪ್ರಯತ್ನಿಸುವಾಗ, ದೇವರು ಅವರಿಗೆ ವಿಶೇಷವಾಗಿ ರಕ್ಷಣೆಯನ್ನು ಒದಗಿಸುತ್ತಾನೆ.

5 ಸಂಕಟಮಯ ಸಮಸ್ಯೆಗಳನ್ನು ಎದುರಿಸುವಾಗ ನಾವು ರಕ್ಷಣೆಗಾಗಿ ಯೆಹೋವನ ಬಳಿಗೆ ಹೇಗೆ ಓಡಿಹೋಗಸಾಧ್ಯವಿದೆ? ಯೆಹೋವನ ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ತೆಗೆದುಕೊಳ್ಳಬಲ್ಲ ಮೂರು ಅತ್ಯಾವಶ್ಯಕ ಹೆಜ್ಜೆಗಳನ್ನು ನಾವೀಗ ಪರಿಗಣಿಸೋಣ. ಮೊದಲನೆಯದಾಗಿ, ಪ್ರಾರ್ಥನೆಯಲ್ಲಿ ನಾವು ನಮ್ಮ ಸ್ವರ್ಗೀಯ ತಂದೆಯ ಕಡೆಗೆ ತಿರುಗಬೇಕು. ಎರಡನೆಯದಾಗಿ, ನಾವು ಆತನ ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸಬೇಕು. ಮತ್ತು ಮೂರನೆಯದಾಗಿ, ಇಕ್ಕಟ್ಟಿನಲ್ಲಿ ನಮಗೆ ಉಪಶಮನವನ್ನು ನೀಡಸಾಧ್ಯವಿರುವ ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡಲು ಪ್ರಯತ್ನಿಸುವ ಮೂಲಕ ನಾವು ಯೆಹೋವನ ಏರ್ಪಾಡಿಗೆ ಅಧೀನರಾಗಬೇಕು.

ಪ್ರಾರ್ಥನೆಯ ಬಲ

6 ಆರೋಗ್ಯ ಪರಿಣತರಲ್ಲಿ ಕೆಲವರು, ಪ್ರಾರ್ಥನೆಯನ್ನು ಖಿನ್ನತೆ ಹಾಗೂ ಒತ್ತಡಕ್ಕಾಗಿರುವ ಚಿಕಿತ್ಸೆಯಾಗಿ ಶಿಫಾರಸ್ಸುಮಾಡುತ್ತಾರೆ. ಪ್ರಾರ್ಥನೆಯನ್ನು ಮಾಡುವಂಥ ರೀತಿಯ ಕೆಲವು ಕ್ಷಣಗಳ ಏಕಾಂತ ಧ್ಯಾನವು ಒತ್ತಡವನ್ನು ಕಡಿಮೆಮಾಡುತ್ತದೆ ಎಂಬುದು ಸತ್ಯವಾಗಿರಬಹುದಾದರೂ, ಕೆಲವು ನೈಸರ್ಗಿಕ ಧ್ವನಿಗಳು, ಅಥವಾ ಬೆನ್ನಿನ ಮೇಲೆ ಮಸಾಜ್‌ ಮಾಡುವುದು ಸಹ ಒತ್ತಡದಿಂದ ಉಪಶಮನವನ್ನು ಕೊಡಸಾಧ್ಯವಿದೆ. ಸತ್ಯ ಕ್ರೈಸ್ತರು ಪ್ರಾರ್ಥನೆಯನ್ನು ಕೇವಲ ಒಂದು ಭಾವನಾತ್ಮಕ ಚಿಕಿತ್ಸೆಯಾಗಿ ಪರಿಗಣಿಸುವ ಮೂಲಕ ಅದನ್ನು ಅಲ್ಪವೆಂದೆಣಿಸುವುದಿಲ್ಲ. ನಾವು ಪ್ರಾರ್ಥನೆಯನ್ನು ಸೃಷ್ಟಿಕರ್ತನೊಂದಿಗಿನ ಭಯಭಕ್ತಿಭರಿತ ಸಂವಾದವಾಗಿ ಪರಿಗಣಿಸುತ್ತೇವೆ. ಪ್ರಾರ್ಥನೆಯಲ್ಲಿ ದೇವರ ಕಡೆಗಿನ ನಮ್ಮ ಭಕ್ತಿ ಹಾಗೂ ದೃಢಭರವಸೆಯು ಒಳಗೂಡಿದೆ. ಹೌದು, ಪ್ರಾರ್ಥನೆಯು ನಮ್ಮ ಆರಾಧನೆಯ ಒಂದು ಭಾಗವಾಗಿದೆ.

7 ನಮ್ಮ ಪ್ರಾರ್ಥನೆಗಳ ಜೊತೆಗೆ ಯೆಹೋವನಲ್ಲಿ ದೃಢಭರವಸೆ, ಅಥವಾ ವಿಶ್ವಾಸವು ಸಹ ತೋರಿಸಲ್ಪಡಬೇಕು. ಅಪೊಸ್ತಲ ಯೋಹಾನನು ಬರೆದುದು: “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು.” (1 ಯೋಹಾನ 5:14) ಪರಮಾತ್ಮನಾಗಿರುವ, ಏಕಮಾತ್ರ ಸತ್ಯ ಹಾಗೂ ಸರ್ವಶಕ್ತ ದೇವರಾಗಿರುವ ಯೆಹೋವನು, ತನ್ನ ಆರಾಧಕರ ಕಟ್ಟಾಸಕ್ತಿಯ ಪ್ರಾರ್ಥನೆಗಳಿಗೆ ನಿಜವಾಗಿಯೂ ವಿಶೇಷ ಗಮನವನ್ನು ಕೊಡುತ್ತಾನೆ. ನಮ್ಮ ಚಿಂತೆಗಳು ಹಾಗೂ ಸಮಸ್ಯೆಗಳನ್ನು ನಮ್ಮ ಪ್ರೀತಿಭರಿತ ದೇವರಿಗೆ ಹೇಳಿಕೊಳ್ಳುವಾಗ, ಆತನು ನಮಗೆ ಕಿವಿಗೊಡುತ್ತಾನೆ ಎಂಬ ಪರಿಜ್ಞಾನವೇ ಬಹಳಷ್ಟು ಸಾಂತ್ವನದಾಯಕವಾಗಿದೆ.​—⁠ಫಿಲಿಪ್ಪಿ 4:⁠6.

8 ನಂಬಿಗಸ್ತ ಕ್ರೈಸ್ತರು ಪ್ರಾರ್ಥನೆಯಲ್ಲಿ ಯೆಹೋವನನ್ನು ಸಮೀಪಿಸಲು ಎಂದಿಗೂ ನಾಚಿಕೆಪಟ್ಟುಕೊಳ್ಳಬಾರದು, ತಾವು ಅಯೋಗ್ಯರು ಎಂದು ಭಾವಿಸಬಾರದು, ಅಥವಾ ಅವರಲ್ಲಿ ಎಂದೂ ದೃಢಭರವಸೆಯ ಕೊರತೆಯಿರಬಾರದು. ಸ್ವತಃ ನಮ್ಮ ಬಗ್ಗೆ ನಾವು ನಿರುತ್ಸಾಹಗೊಂಡಿರುವಾಗ ಅಥವಾ ವಿಪರೀತ ಸಮಸ್ಯೆಗಳಲ್ಲಿ ಮುಳುಗಿಹೋಗಿರುವಾಗ, ಪ್ರಾರ್ಥನೆಯಲ್ಲಿ ಯೆಹೋವನನ್ನು ಸಮೀಪಿಸುವ ಪ್ರವೃತ್ತಿ ನಮ್ಮಲ್ಲಿ ಸದಾ ಇರದಿರಬಹುದು ನಿಜ. ಇಂಥ ಸಂದರ್ಭಗಳಲ್ಲಿ, ಯೆಹೋವನು “ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸು”ತ್ತಾನೆ ಮತ್ತು ‘ದೀನಾವಸ್ಥೆಯಲ್ಲಿರುವವರನ್ನು ಸಂತೈಸುತ್ತಾನೆ’ ಎಂಬುದನ್ನು ನಾವು ಜ್ಞಾಪಿಸಿಕೊಳ್ಳುವುದು ಒಳ್ಳೇದು. (ಯೆಶಾಯ 49:13; 2 ಕೊರಿಂಥ 7:6) ವಿಶೇಷವಾಗಿ ಸಂಕಟ ಹಾಗೂ ಇಕ್ಕಟ್ಟಿನ ಸಮಯಗಳಲ್ಲಿ ನಾವು ದೃಢವಿಶ್ವಾಸದಿಂದ ನಮ್ಮ ದುರ್ಗಸ್ಥಾನದೋಪಾದಿ ನಮ್ಮ ಸ್ವರ್ಗೀಯ ಪಿತನ ಕಡೆಗೆ ತಿರುಗುವ ಆವಶ್ಯಕತೆಯಿದೆ.

9 ಪ್ರಾರ್ಥನೆಯ ಸುಯೋಗದಿಂದ ಪೂರ್ಣವಾಗಿ ಪ್ರಯೋಜನ ಹೊಂದಬೇಕಾದರೆ, ನಮ್ಮಲ್ಲಿ ನಿಜವಾದ ನಂಬಿಕೆಯಿರಬೇಕು. “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ” ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 11:6) ನಂಬಿಕೆಯು, ದೇವರು ಅಸ್ತಿತ್ವದಲ್ಲಿದ್ದಾನೆ ಅಂದರೆ ಆತನು “ಇದ್ದಾನೆ” ಎಂಬುದನ್ನು ಕೇವಲ ನಂಬುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿದೆ. ನಿಜ ನಂಬಿಕೆಯು, ನಮ್ಮ ವಿಧೇಯ ಜೀವನ ಮಾರ್ಗಕ್ಕೆ ಪ್ರತಿಫಲವನ್ನು ನೀಡುವ ಆತನ ಸಾಮರ್ಥ್ಯ ಮತ್ತು ಬಯಕೆಯಲ್ಲಿ ದೃಢವಾದ ವಿಶ್ವಾಸವಿರಿಸುವುದನ್ನು ಒಳಗೂಡಿದೆ. “ಕರ್ತನು [“ಯೆಹೋವನು,” NW] ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ.” (1 ಪೇತ್ರ 3:12) ನಮಗೋಸ್ಕರ ಯೆಹೋವನು ತೋರಿಸುವ ಪ್ರೀತಿಭರಿತ ಕಾಳಜಿಯ ಸತತವಾದ ಅರಿವು ನಮಗಿರುವುದು, ನಮ್ಮ ಪ್ರಾರ್ಥನೆಗಳಿಗೆ ವಿಶೇಷ ಅರ್ಥವನ್ನು ಕೊಡುತ್ತದೆ.

10 ನಮ್ಮ ಪ್ರಾರ್ಥನೆಗಳು ಪೂರ್ಣ ಹೃದಯದಿಂದ ಮಾಡಲ್ಪಡುವಾಗ, ಯೆಹೋವನು ಅವುಗಳಿಗೆ ಕಿವಿಗೊಡುತ್ತಾನೆ. ಕೀರ್ತನೆಗಾರನು ಬರೆದುದು: “ಯೆಹೋವನೇ, ಸಂಪೂರ್ಣಮನಸ್ಸಿನಿಂದ [“ಸಂಪೂರ್ಣ ಹೃದಯದಿಂದ,” NW] ಮೊರೆಯಿಟ್ಟಿದ್ದೇನೆ, ಸದುತ್ತರವನ್ನು ದಯಪಾಲಿಸು.” (ಕೀರ್ತನೆ 119:145) ಅನೇಕ ಧರ್ಮಗಳಲ್ಲಿರುವ ಸಂಸ್ಕಾರಬದ್ಧ ಪ್ರಾರ್ಥನೆಗಳಿಗೆ ಅಸದೃಶವಾಗಿ, ನಮ್ಮ ಪ್ರಾರ್ಥನೆಗಳು ಕಾಟಾಚಾರದವುಗಳು ಅಥವಾ ಅರೆಮನಸ್ಸಿನಿಂದ ಮಾಡಲ್ಪಡುವಂಥವುಗಳು ಆಗಿರುವುದಿಲ್ಲ. ನಮ್ಮ “ಸಂಪೂರ್ಣ ಹೃದಯದಿಂದ” ನಾವು ಯೆಹೋವನಿಗೆ ಪ್ರಾರ್ಥಿಸುವಾಗ, ನಮ್ಮ ಮಾತುಗಳು ಅರ್ಥಭರಿತವೂ ಉದ್ದೇಶಭರಿತವೂ ಆಗಿರುತ್ತವೆ. ಇಂಥ ಶ್ರದ್ಧಾಪೂರ್ವಕ ಪ್ರಾರ್ಥನೆಗಳ ಬಳಿಕ, ನಮ್ಮ “ಚಿಂತಾಭಾರವನ್ನು ಯೆಹೋವನ ಮೇಲೆ” ಹಾಕುವುದರಿಂದ ಸಿಗುವ ಉಪಶಮನವನ್ನು ನಾವು ಅನುಭವಿಸಲಾರಂಭಿಸುತ್ತೇವೆ. ಬೈಬಲ್‌ ವಾಗ್ದಾನಿಸುವಂತೆ, ಆತನೇ ನಮ್ಮನ್ನು “ಉದ್ಧಾರಮಾಡುವನು.”​—⁠ಕೀರ್ತನೆ 55:22; 1 ಪೇತ್ರ 5:6, 7.

ದೇವರಾತ್ಮವು ನಮ್ಮ ಸಹಾಯಕ

11 ಯೆಹೋವನು ಕೇವಲ ನಮ್ಮ ಪ್ರಾರ್ಥನೆಗಳನ್ನು ಕೇಳುವಾತನು ಮಾತ್ರವಲ್ಲ ಅವುಗಳಿಗೆ ಉತ್ತರ ನೀಡುವಾತನೂ ಆಗಿದ್ದಾನೆ. (ಕೀರ್ತನೆ 65:⁠2) ದಾವೀದನು ಬರೆದುದು: “ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.” (ಕೀರ್ತನೆ 86:⁠7) ತದ್ರೀತಿಯಲ್ಲಿ, ಯೇಸು ತನ್ನ ಶಿಷ್ಯರಿಗೆ, ಯೆಹೋವನ ಸಹಾಯಕ್ಕಾಗಿ ‘ಬೇಡಿಕೊಳ್ಳುತ್ತಾ’ ಇರುವಂತೆ ಉತ್ತೇಜಿಸಿದನು, ಏಕೆಂದರೆ ‘ಪರಲೋಕದಲ್ಲಿರುವ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನು.’ (ಲೂಕ 11:​9-13) ಹೌದು, ದೇವರ ಕ್ರಿಯಾಶೀಲ ಶಕ್ತಿಯು ಆತನ ಜನರಿಗೆ ಒಬ್ಬ ಸಹಾಯಕನಾಗಿ, ಅಥವಾ ಸಾಂತ್ವನಗಾರನಾಗಿ ಕ್ರಿಯೆಗೈಯುತ್ತದೆ.​—⁠ಯೋಹಾನ 14:⁠16.

12 ನಾವು ಪರೀಕ್ಷೆಗಳನ್ನು ಎದುರಿಸುತ್ತಿರುವಾಗಲೂ ದೇವರಾತ್ಮವು ನಮ್ಮಲ್ಲಿ “ಬಲಾಧಿಕ್ಯ”ವನ್ನು ತುಂಬಿಸಬಲ್ಲದು. (2 ಕೊರಿಂಥ 4:⁠7) ಅನೇಕ ಒತ್ತಡಭರಿತ ಸನ್ನಿವೇಶಗಳನ್ನು ತಾಳಿಕೊಂಡ ಅಪೊಸ್ತಲ ಪೌಲನು ದೃಢಭರವಸೆಯಿಂದ ಹೇಳಿದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ತದ್ರೀತಿಯಲ್ಲಿ, ಅನೇಕ ಕ್ರೈಸ್ತರು ಇಂದು ತಮ್ಮ ವಿಜ್ಞಾಪನೆಗಳಿಗೆ ಉತ್ತರವಾಗಿ ನವೀಕೃತ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಬಲವನ್ನು ಪಡೆದುಕೊಂಡಿದ್ದಾರೆ. ಅನೇಕವೇಳೆ, ನಾವು ದೇವರಾತ್ಮದ ಸಹಾಯವನ್ನು ಪಡೆದುಕೊಂಡ ಬಳಿಕ, ಸಂಕಟಮಯ ಸಮಸ್ಯೆಗಳು ಮೊದಲಿನಷ್ಟು ದೊಡ್ಡವುಗಳಾಗಿ ತೋರುವುದಿಲ್ಲ. ಈ ದೇವದತ್ತ ಬಲದಿಂದಾಗಿ ನಾವು ಅಪೊಸ್ತಲನಂತೆಯೇ ಹೇಳಸಾಧ್ಯವಿದೆ: “ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕುಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ.”​—⁠2 ಕೊರಿಂಥ 4:8, 9.

13 ಪವಿತ್ರಾತ್ಮವು ನಮ್ಮ ಪ್ರಯೋಜನಕ್ಕಾಗಿ ದೇವರ ಲಿಖಿತ ವಾಕ್ಯವನ್ನು ಪ್ರೇರಿಸಿ ಅದನ್ನು ಜೋಪಾನವಾಗಿ ಸಂರಕ್ಷಿಸಿದೆ. ತನ್ನ ವಾಕ್ಯದ ಪುಟಗಳ ಮೂಲಕ ಯೆಹೋವನು ಇಕ್ಕಟ್ಟಿನ ಸಮಯದಲ್ಲಿ ನಮ್ಮ ದುರ್ಗಸ್ಥಾನವಾಗಿ ರುಜುವಾಗಿರುವುದು ಹೇಗೆ? ಒಂದು ವಿಧವು ಯಾವುದೆಂದರೆ, ನಮಗೆ ಪ್ರಾಯೋಗಿಕ ವಿವೇಕ ಹಾಗೂ ಆಲೋಚನಾ ಸಾಮರ್ಥ್ಯವನ್ನು (NW) ನೀಡುವ ಮೂಲಕವೇ. (ಜ್ಞಾನೋಕ್ತಿ 3:21-24) ಬೈಬಲು ನಮ್ಮ ಮನಶ್ಶಕ್ತಿಗಳನ್ನು ತರಬೇತುಗೊಳಿಸುತ್ತದೆ ಮತ್ತು ನಮ್ಮ ತರ್ಕಶಕ್ತಿಯನ್ನು ಉತ್ತಮಗೊಳಿಸುತ್ತದೆ. (ರೋಮಾಪುರ 12:⁠1, NW) ದೇವರ ವಾಕ್ಯದ ಕ್ರಮವಾದ ವಾಚನ ಮತ್ತು ಅಧ್ಯಯನದ ಜೊತೆಗೆ ಅದನ್ನು ಉಪಯೋಗದಲ್ಲಿ ಹಾಕುವ ಮೂಲಕ, ನಾವು ನಮ್ಮ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ಅರಿಯಸಾಧ್ಯವಿದೆ. (ಇಬ್ರಿಯ 5:14) ನೀವು ಕಷ್ಟಗಳನ್ನು ಎದುರಿಸಿದಾಗ ವಿವೇಕಯುತವಾದ ನಿರ್ಣಯಗಳನ್ನು ಮಾಡಲು ಬೈಬಲ್‌ ಮೂಲತತ್ತ್ವಗಳು ನಿಮಗೆ ಹೇಗೆ ಸಹಾಯಮಾಡಿದವು ಎಂಬುದನ್ನು ವೈಯಕ್ತಿಕವಾಗಿ ನೀವೇ ಅನುಭವದಿಂದ ಕಂಡುಕೊಂಡಿರಬಹುದು. ಸಂಕಟಮಯ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯಮಾಡಬಲ್ಲ ಜಾಣತನವನ್ನು ಬೈಬಲು ನಮಗೆ ನೀಡುತ್ತದೆ.​—⁠ಜ್ಞಾನೋಕ್ತಿ 1:⁠4.

14 ದೇವರ ವಾಕ್ಯವು ಬಲದ ಇನ್ನೊಂದು ಮೂಲವನ್ನು ನಮಗೆ ಒದಗಿಸುತ್ತದೆ. ಅದು ರಕ್ಷಣೆಯ ನಿರೀಕ್ಷೆಯೇ ಆಗಿದೆ. (ರೋಮಾಪುರ 15:⁠4) ಕೆಟ್ಟ ಘಟನೆಗಳು ಅನಿಶ್ಚಿತ ಕಾಲಾವಧಿಯ ವರೆಗೆ ಮುಂದುವರಿಯುವುದಿಲ್ಲ ಎಂದು ಬೈಬಲ್‌ ನಮಗೆ ತಿಳಿಸುತ್ತದೆ. ನಾವು ಅನುಭವಿಸುವ ಯಾವುದೇ ಸಂಕಟಗಳು ತಾತ್ಕಾಲಿಕವಾದವುಗಳಾಗಿವೆ. (2 ಕೊರಿಂಥ 4:​16-18) ನಮಗೆ “ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನಮಾಡಿ”ದ್ದಾನೆ. (ತೀತ 1:1) ಯೆಹೋವನು ವಾಗ್ದಾನಿಸಿರುವ ಉಜ್ವಲ ಭವಿಷ್ಯತ್ತಿನ ಸತತ ಅರಿವಿನೊಂದಿಗೆ ನಾವು ಆ ನಿರೀಕ್ಷೆಯಲ್ಲಿ ಉಲ್ಲಾಸಿಸುವುದಾದರೆ, ಉಪದ್ರವದಲ್ಲಿರುವಾಗ ಸೈರಣೆಯುಳ್ಳವರಾಗಿರಸಾಧ್ಯವಿದೆ.​—⁠ರೋಮಾಪುರ 12:12; 1 ಥೆಸಲೊನೀಕ 1:⁠3.

ಸಭೆ​—⁠ದೇವರ ಪ್ರೀತಿಯ ಒಂದು ಅಭಿವ್ಯಕ್ತಿ

15 ಇಕ್ಕಟ್ಟಿನ ಸಮಯದಲ್ಲಿ ನಮಗೆ ಸಹಾಯಮಾಡಸಾಧ್ಯವಿರುವ ಯೆಹೋವನ ಇನ್ನೊಂದು ಒದಗಿಸುವಿಕೆಯು, ಕ್ರೈಸ್ತ ಸಭೆಯಲ್ಲಿ ನಾವು ಆನಂದಿಸುವ ಒಡನಾಟವೇ ಆಗಿದೆ. ಬೈಬಲ್‌ ಹೇಳುವುದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋಕ್ತಿ 17:17) ಸಭೆಯಲ್ಲಿರುವ ಎಲ್ಲರೂ ಪರಸ್ಪರ ಗೌರವಿಸುವಂತೆ ಹಾಗೂ ಪ್ರೀತಿಸುವಂತೆ ದೇವರ ವಾಕ್ಯವು ಪ್ರೋತ್ಸಾಹಿಸುತ್ತದೆ. (ರೋಮಾಪುರ 12:10) ಅಪೊಸ್ತಲ ಪೌಲನು ಬರೆದುದು: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” (1 ಕೊರಿಂಥ 10:24) ಈ ಮನೋಭಾವವನ್ನು ಹೊಂದಿರುವುದು, ನಮ್ಮ ಸ್ವಂತ ಪರೀಕ್ಷೆಗಳಿಗೆ ಬದಲಾಗಿ ಇತರರ ಆವಶ್ಯಕತೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ನಮಗೆ ಸಹಾಯಮಾಡಬಲ್ಲದು. ನಾವು ಇತರರಿಗಾಗಿ ನಮ್ಮನ್ನು ನೀಡಿಕೊಳ್ಳುವಾಗ, ನಾವು ಅವರಿಗೆ ಸಹಾಯಮಾಡುತ್ತೇವೆ ಮಾತ್ರವಲ್ಲ ನಾವು ಸಹ ಸ್ವಲ್ಪ ಮಟ್ಟಿಗಿನ ಸಂತೋಷ ಹಾಗೂ ಸಂತೃಪ್ತಿಯನ್ನು ಅನುಭವಿಸುತ್ತೇವೆ, ಮತ್ತು ಇದು ನಮ್ಮ ಸ್ವಂತ ಹೊರೆಗಳನ್ನು ಇನ್ನಷ್ಟು ಸಹ್ಯವಾಗಿ ಮಾಡುತ್ತದೆ.​—⁠ಅ. ಕೃತ್ಯಗಳು 20:⁠35.

16 ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ಸ್ತ್ರೀಪುರುಷರು ಇತರರನ್ನು ಬಲಪಡಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲರು. ಇತರರನ್ನು ಬಲಪಡಿಸಲಿಕ್ಕಾಗಿ, ಅವರು ಸ್ನೇಹಶೀಲರೂ ತಮ್ಮನ್ನು ಲಭ್ಯಗೊಳಿಸಿಕೊಳ್ಳುವವರೂ ಆಗಿರುತ್ತಾರೆ. (2 ಕೊರಿಂಥ 6:11-13) ಚಿಕ್ಕವರನ್ನು ಪ್ರಶಂಸಿಸಲು, ಹೊಸ ವಿಶ್ವಾಸಿಗಳನ್ನು ಬಲಪಡಿಸಲು, ಮತ್ತು ಖಿನ್ನರನ್ನು ಉತ್ತೇಜಿಸಲು ಎಲ್ಲರೂ ಸಮಯವನ್ನು ಮಾಡಿಕೊಳ್ಳುವಾಗ, ಸಭೆಯು ನಿಜವಾಗಿಯೂ ಪ್ರಯೋಜನ ಹೊಂದುತ್ತದೆ. (ರೋಮಾಪುರ 15:⁠7) ಸಹೋದರರ ಪ್ರೀತಿಯು, ನಾವು ಒಬ್ಬರು ಇನ್ನೊಬ್ಬರ ವಿಷಯದಲ್ಲಿ ಸಂಶಯಭಾವವನ್ನು ತಾಳದಿರುವಂತೆಯೂ ನಮಗೆ ಸಹಾಯಮಾಡುವುದು. ವೈಯಕ್ತಿಕ ಭಿನ್ನತೆಗಳು ಆಧ್ಯಾತ್ಮಿಕ ದೌರ್ಬಲ್ಯದ ಸಂಕೇತವಾಗಿವೆ ಎಂದು ತೀರ್ಮಾನಿಸಲು ಆತುರಪಡಬಾರದು. ಪೌಲನು ಸೂಕ್ತವಾಗಿಯೇ ಕ್ರೈಸ್ತರಿಗೆ, “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು ಉತ್ತೇಜಿಸಿದನು. (1 ಥೆಸಲೋನಿಕ 5:14) ನಂಬಿಗಸ್ತ ಕ್ರೈಸ್ತರು ಸಹ ಇಕ್ಕಟ್ಟನ್ನು ಅನುಭವಿಸುತ್ತಾರೆ ಎಂದು ಬೈಬಲ್‌ ತೋರಿಸುತ್ತದೆ.​—⁠ಅ. ಕೃತ್ಯಗಳು 14:15.

17 ಕ್ರೈಸ್ತ ಕೂಟಗಳು, ಪರಸ್ಪರ ಸಾಂತ್ವನ ನೀಡಲು ಮತ್ತು ಉತ್ತೇಜಿಸಲು ಅತ್ಯುತ್ತಮ ಅವಕಾಶವನ್ನು ನೀಡುತ್ತವೆ. (ಇಬ್ರಿಯ 10:​24, 25) ಪ್ರೀತಿಯಿಂದ ಕೂಡಿದ ಈ ಪರಸ್ಪರ ಕ್ರಿಯೆಯು ಸಭಾ ಕೂಟಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಅನೌಪಚಾರಿಕ ಸನ್ನಿವೇಶಗಳಲ್ಲೂ ಹಿತಕರವಾದ ಸಹವಾಸದಲ್ಲಿ ಒಳಗೂಡಲಿಕ್ಕಾಗಿರುವ ಅವಕಾಶಗಳನ್ನು ದೇವಜನರು ಎದುರುನೋಡುತ್ತಾರೆ. ಇಕ್ಕಟ್ಟಿನ ಸನ್ನಿವೇಶಗಳು ಏಳುವಾಗ, ಈಗಾಗಲೇ ಸ್ನೇಹದ ಬಲವಾದ ಬಂಧಗಳು ಬೆಸೆಯಲ್ಪಟ್ಟಿರುವುದರಿಂದ ನಾವು ಸಿದ್ಧಮನಸ್ಸಿನಿಂದ ಪರಸ್ಪರ ಸಹಾಯಮಾಡುವೆವು. ಅಪೊಸ್ತಲ ಪೌಲನು ಬರೆದುದು: ‘ದೇಹದಲ್ಲಿ ಭೇದವೇನೂ ಇರದೆ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗಿವೆ. ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.’​—⁠1 ಕೊರಿಂಥ 12:24-26.

18 ಕೆಲವೊಮ್ಮೆ ಜೊತೆ ಕ್ರೈಸ್ತರೊಂದಿಗಿನ ಸಹವಾಸದಲ್ಲಿ ಆನಂದಿಸಲು ಇಷ್ಟವಿಲ್ಲದಿರುವಷ್ಟರ ಮಟ್ಟಿಗೆ ನಾವು ಮನಗುಂದಿದವರಾಗಿರಬಹುದು. ಜೊತೆ ವಿಶ್ವಾಸಿಗಳು ನೀಡಸಾಧ್ಯವಿರುವ ಸಾಂತ್ವನ ಹಾಗೂ ಸಹಾಯದಿಂದ ನಾವು ವಂಚಿತರಾಗದಿರಲಿಕ್ಕಾಗಿ ಇಂಥ ಭಾವನೆಗಳ ವಿರುದ್ಧ ನಾವು ಹೋರಾಡಬೇಕು. ಬೈಬಲು ನಮ್ಮನ್ನು ಹೀಗೆ ಎಚ್ಚರಿಸುತ್ತದೆ: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” (ಜ್ಞಾನೋಕ್ತಿ 18:1) ನಮ್ಮ ಸಹೋದರ ಸಹೋದರಿಯರು ದೇವರು ನಮ್ಮ ಕುರಿತು ವಹಿಸುವ ಕಾಳಜಿಯ ಒಂದು ಅಭಿವ್ಯಕ್ತಿಯಂತಿದ್ದಾರೆ. ಈ ಪ್ರೀತಿಭರಿತ ಒದಗಿಸುವಿಕೆಯನ್ನು ನಾವು ಅಂಗೀಕರಿಸುವಲ್ಲಿ, ಇಕ್ಕಟ್ಟಿನ ಸಮಯಗಳಲ್ಲಿ ನಾವು ಉಪಶಮನವನ್ನು ಕಂಡುಕೊಳ್ಳುವೆವು.

ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿರಿ

19 ನಿರುತ್ತೇಜನ ಹಾಗೂ ದುಃಖವು ಉಂಟಾಗುವಾಗ, ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರುವುದು ತುಂಬ ಸುಲಭ. ಉದಾಹರಣೆಗೆ, ವಿಪತ್ತನ್ನು ಅನುಭವಿಸುತ್ತಿರುವಾಗ ಕೆಲವರು ತಮ್ಮ ಸ್ವಂತ ಆಧ್ಯಾತ್ಮಿಕತೆಯ ಬಗ್ಗೆ ಸಂಶಯಪಡಬಹುದು ಮತ್ತು ತಮಗೆ ಬಂದಿರುವ ಕಷ್ಟವು ದೇವರ ಅಸಮ್ಮತಿಯ ಸಂಕೇತವಾಗಿದೆ ಎಂಬ ನಿರ್ಧಾರಕ್ಕೆ ಬರಬಹುದು. ಆದರೂ, ಯೆಹೋವನು ಎಂದೂ “ಕೆಟ್ಟ” ವಿಷಯಗಳಿಂದ ಯಾರನ್ನೂ ಪರೀಕ್ಷಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿರಿ. (ಯಾಕೋಬ 1:13) “ನರಜನ್ಮದವರನ್ನು ಬಾಧಿಸಿ ವ್ಯಥೆಗೊಳಿಸುವದು [ದೇವರಿಗೆ] ಇಷ್ಟವಿಲ್ಲ” ಎಂದು ಬೈಬಲ್‌ ಹೇಳುತ್ತದೆ. (ಪ್ರಲಾಪಗಳು 3:33) ಅದಕ್ಕೆ ಬದಲಾಗಿ, ತನ್ನ ಸೇವಕರು ಕಷ್ಟಾನುಭವಿಸುವಾಗ ಯೆಹೋವನು ತುಂಬ ದುಃಖಪಡುತ್ತಾನೆ.​—⁠ಯೆಶಾಯ 63:8, 9; ಜೆಕರ್ಯ 2:⁠8.

20 ಯೆಹೋವನು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿ”ದ್ದಾನೆ. (2 ಕೊರಿಂಥ 1:⁠3) ಆತನು ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆ, ಮತ್ತು ತಕ್ಕ ಕಾಲದಲ್ಲಿ ನಮ್ಮನ್ನು ಮೇಲಕ್ಕೆ ತರುವನು. (1 ಪೇತ್ರ 5:​6, 7) ನಮ್ಮ ಬಗ್ಗೆ ದೇವರಿಗಿರುವ ಮಮತೆಯ ಸತತ ಅರಿವು, ನಾವು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ಮತ್ತು ಹರ್ಷಿಸುವಂತೆಯೂ ನಮಗೆ ಸಹಾಯಮಾಡುವುದು. ಯಾಕೋಬನು ಬರೆದುದು: “ನನ್ನ ಸಹೋದರರೇ, . . . ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” (ಯಾಕೋಬ 1:2) ಏಕೆ? ಅವನು ಉತ್ತರಿಸುವುದು: “ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಸ್ವಾಮಿಯು [“ಯೆಹೋವನು,” NW] ತನ್ನನ್ನು ಪ್ರೀತಿಸುವವರಿಗೆ ಇದನ್ನು ವಾಗ್ದಾನಮಾಡಿದ್ದಾನೆ.”​—⁠ಯಾಕೋಬ 1:⁠12.

21 ಯೇಸು ನಮಗೆ ಎಚ್ಚರಿಸಿದಂತೆ, ಲೋಕದಲ್ಲಿ ನಮಗೆ ಸಂಕಟ ಉಂಟು. (ಯೋಹಾನ 16:33) ಆದರೆ, “ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವದೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ” ಯೆಹೋವನ ಪ್ರೀತಿ ಹಾಗೂ ಆತನ ಕುಮಾರನ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದೆಂದು ಬೈಬಲ್‌ ವಾಗ್ದಾನಿಸುತ್ತದೆ. (ರೋಮಾಪುರ 8:35, 39) ನಮಗೆ ಎದುರಾಗುವ ಯಾವುದೇ ಇಕ್ಕಟ್ಟು ತಾತ್ಕಾಲಿಕವಾದದ್ದಾಗಿದೆ ಎಂಬುದನ್ನು ತಿಳಿಯುವುದು ಎಷ್ಟು ಸಾಂತ್ವನದಾಯಕವಾಗಿದೆ! ಈ ನಡುವೆ, ಮಾನವ ಕಷ್ಟಾನುಭವದ ಅಂತ್ಯಕ್ಕಾಗಿ ನಾವು ಕಾಯುತ್ತಿರುವಾಗ, ನಮ್ಮ ಪ್ರೀತಿಯ ತಂದೆಯಾಗಿರುವ ಯೆಹೋವನು ನಮ್ಮ ಮೇಲೆ ನಿಗವಿಡುತ್ತಾನೆ. ನಾವು ರಕ್ಷಣೆಗಾಗಿ ಆತನ ಬಳಿಗೆ ಓಡುವಲ್ಲಿ, ಆತನು “ಕುಗ್ಗಿಹೋದವರಿಗೆ ಆಶ್ರಯವೂ ಆಪತ್ಕಾಲದಲ್ಲಿ ದುರ್ಗವೂ” ಆಗಿ ಕಂಡುಬರುವನು.​—⁠ಕೀರ್ತನೆ 9:⁠9.

ನಾವೇನನ್ನು ಕಲಿತೆವು?

• ಈ ದುಷ್ಟ ಲೋಕದಲ್ಲಿ ಬದುಕುತ್ತಿರುವಾಗ ಕ್ರೈಸ್ತರು ಏನನ್ನು ನಿರೀಕ್ಷಿಸಬೇಕು?

• ನಾವು ಪರೀಕ್ಷೆಗಳನ್ನು ಎದುರಿಸುವಾಗ, ನಮ್ಮ ಕಟ್ಟಾಸಕ್ತಿಯ ಪ್ರಾರ್ಥನೆಗಳು ಹೇಗೆ ಬಲದಾಯಕವಾಗಿ ಕಂಡುಬರಸಾಧ್ಯವಿದೆ?

• ದೇವರಾತ್ಮವು ಹೇಗೆ ಒಂದು ಸಹಾಯಕವಾಗಿದೆ?

• ಪರಸ್ಪರ ಸಹಾಯಮಾಡಲಿಕ್ಕಾಗಿ ನಾವು ಏನು ಮಾಡಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ತನ್ನ ಶಿಷ್ಯರ ಪರವಾಗಿ ಯೇಸು ಏನೆಂದು ಪ್ರಾರ್ಥಿಸಿದನು? (ಬಿ) ತನ್ನ ಜನರ ವಿಷಯದಲ್ಲಿ ದೇವರ ಚಿತ್ತವೇನಾಗಿದೆ?

3. ಯೆಹೋವನ ನಂಬಿಗಸ್ತ ಆರಾಧಕರು ಸಹ ಯಾವ ವಾಸ್ತವಿಕತೆಯನ್ನು ಎದುರಿಸಬೇಕಾಗಿದೆ, ಆದರೆ ದೇವರ ವಾಕ್ಯದಲ್ಲಿ ನಾವು ಯಾವ ಸಾಂತ್ವನವನ್ನು ಕಂಡುಕೊಳ್ಳುತ್ತೇವೆ?

4, 5. (ಎ) ಜ್ಞಾನೋಕ್ತಿ 18:10ಕ್ಕೆ ಹೊಂದಿಕೆಯಲ್ಲಿ, ದೇವರ ರಕ್ಷಣೆಯನ್ನು ಪಡೆದುಕೊಳ್ಳಲಿಕ್ಕಾಗಿ ನಾವೇನು ಮಾಡಬೇಕು? (ಬಿ) ದೇವರ ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ತೆಗೆದುಕೊಳ್ಳಬಲ್ಲ ಕೆಲವು ನಿರ್ದಿಷ್ಟ ಹೆಜ್ಜೆಗಳು ಯಾವುವು?

6. ಸತ್ಯ ಕ್ರೈಸ್ತರು ಪ್ರಾರ್ಥನೆಯನ್ನು ಹೇಗೆ ಪರಿಗಣಿಸುತ್ತಾರೆ?

7. ದೃಢಭರವಸೆಯಿಂದ ಪ್ರಾರ್ಥಿಸುವುದು ಏನನ್ನು ಅರ್ಥೈಸುತ್ತದೆ, ಮತ್ತು ಇಕ್ಕಟ್ಟನ್ನು ನಿಭಾಯಿಸಲು ಇಂಥ ಪ್ರಾರ್ಥನೆಗಳು ನಮಗೆ ಹೇಗೆ ಸಹಾಯಮಾಡುತ್ತವೆ?

8. ಪ್ರಾರ್ಥನೆಯಲ್ಲಿ ಯೆಹೋವನನ್ನು ಸಮೀಪಿಸಲು, ನಂಬಿಗಸ್ತ ಕ್ರೈಸ್ತರು ಎಂದೂ ನಾಚಿಕೆಪಡಬಾರದು ಅಥವಾ ತಾವು ಅಯೋಗ್ಯರೆಂಬ ಭಾವವನ್ನು ತಾಳಬಾರದೇಕೆ?

9. ನಾವು ಪ್ರಾರ್ಥನೆಯಲ್ಲಿ ದೇವರನ್ನು ಸಮೀಪಿಸುವಾಗ, ನಂಬಿಕೆಯು ಯಾವ ಪಾತ್ರವನ್ನು ವಹಿಸುತ್ತದೆ?

10. ಒಂದುವೇಳೆ ನಾವು ಯೆಹೋವನಿಂದ ಆಧ್ಯಾತ್ಮಿಕ ಪೋಷಣೆಯನ್ನು ಪಡೆದುಕೊಳ್ಳಬೇಕಾದರೆ, ನಮ್ಮ ಪ್ರಾರ್ಥನೆಗಳ ವಿಷಯದಲ್ಲಿ ಯಾವುದು ಸತ್ಯವಾಗಿರಬೇಕು?

11. ನಾವು ಯೆಹೋವನ ಸಹಾಯಕ್ಕಾಗಿ ‘ಬೇಡಿಕೊಳ್ಳುತ್ತಾ’ ಇರುವಾಗ, ಆತನು ನಮಗೆ ಉತ್ತರ ಕೊಡುವ ಒಂದು ವಿಧವು ಯಾವುದು?

12. ಸಮಸ್ಯೆಗಳು ತುಂಬ ದೊಡ್ಡವುಗಳಾಗಿ ತೋರುವಾಗ, ದೇವರಾತ್ಮವು ನಮಗೆ ಹೇಗೆ ಸಹಾಯಮಾಡಬಲ್ಲದು?

13, 14. (ಎ) ತನ್ನ ಲಿಖಿತ ವಾಕ್ಯದ ಮೂಲಕ ಯೆಹೋವನು ಹೇಗೆ ನಮ್ಮ ದುರ್ಗಸ್ಥಾನವಾಗಿ ರುಜುವಾಗಿದ್ದಾನೆ? (ಬಿ) ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವುದು ನಿಮಗೆ ಹೇಗೆ ವೈಯಕ್ತಿಕವಾಗಿ ಸಹಾಯಮಾಡಿದೆ?

15. ಕ್ರೈಸ್ತರು ಹೇಗೆ ಪರಸ್ಪರ ಸಹಾಯಮಾಡಸಾಧ್ಯವಿದೆ?

16. ಪ್ರತಿಯೊಬ್ಬ ಕ್ರೈಸ್ತನು ಪ್ರೋತ್ಸಾಹದಾಯಕವಾಗಿರಸಾಧ್ಯವಿದೆ ಹೇಗೆ?

17. ಕ್ರೈಸ್ತ ಸಹೋದರತ್ವದ ಬಂಧವನ್ನು ಬಲಪಡಿಸಲು ಯಾವ ಸದವಕಾಶಗಳು ನಮಗಿವೆ?

18. ಮನಗುಂದಿದವರಾಗಿರುವಾಗ ಯಾವ ಪ್ರವೃತ್ತಿಯಿಂದ ನಾವು ದೂರವಿರಬೇಕು?

19, 20. ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಲು ಶಾಸ್ತ್ರವಚನಗಳು ನಮಗೆ ಹೇಗೆ ಸಹಾಯಮಾಡುತ್ತವೆ?

21. ನಾವು ಎದುರಿಸುವಂಥ ಕಷ್ಟಗಳ ಹೊರತಾಗಿಯೂ ತನಗೆ ನಂಬಿಗಸ್ತರಾಗಿ ಕಂಡುಬರುವವರಿಗೆ ದೇವರು ಯಾವ ಖಾತ್ರಿಯನ್ನು ನೀಡುತ್ತಾನೆ?

[ಪುಟ 18ರಲ್ಲಿರುವ ಚಿತ್ರ]

ಒಂದು ಬಲವಾದ ಬುರುಜಿನೊಳಗೆ ಓಡುತ್ತಿದ್ದೇವೋ ಎಂಬಂತೆ ನಾವು ಯೆಹೋವನನ್ನು ಹುಡುಕಲು ಪ್ರಯತ್ನಿಸಬೇಕು

[ಪುಟ 20ರಲ್ಲಿರುವ ಚಿತ್ರಗಳು]

ಆಧ್ಯಾತ್ಮಿಕವಾಗಿ ಪ್ರೌಢರಾಗಿರುವವರು, ಇತರರನ್ನು ಪ್ರಶಂಸಿಸಲು ಮತ್ತು ಉತ್ತೇಜಿಸಲು ಸಿಗುವ ಪ್ರತಿಯೊಂದು ಸದವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ