ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾರೀರಿಕವಾಗಿ ದಣಿದಿದ್ದರೂ ಆಧ್ಯಾತ್ಮಿಕವಾಗಿ ದಣಿಯದಿರುವುದು

ಶಾರೀರಿಕವಾಗಿ ದಣಿದಿದ್ದರೂ ಆಧ್ಯಾತ್ಮಿಕವಾಗಿ ದಣಿಯದಿರುವುದು

ಶಾರೀರಿಕವಾಗಿ ದಣಿದಿದ್ದರೂ ಆಧ್ಯಾತ್ಮಿಕವಾಗಿ ದಣಿಯದಿರುವುದು

‘ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದ ಯೆಹೋವನು ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ.’​—⁠ಯೆಶಾಯ 40:28, 29.

ಯೇಸುವಿನ ಶಿಷ್ಯರಾಗಿರುವ ನಮಗೆ, ಮನಸ್ಸಿಗೆ ಹಿಡಿಸುವಂಥ ಅವನ ಈ ಆಮಂತ್ರಣವು ಚಿರಪರಿಚಿತವಾಗಿದೆ: “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. . . . ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ಕ್ರೈಸ್ತರಿಗೆ “ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳ” ಆಶ್ವಾಸನೆಯು ಸಹ ಕೊಡಲ್ಪಟ್ಟಿದೆ. (ಅ. ಕೃತ್ಯಗಳು 3:19, 20) ಬೈಬಲ್‌ ಸತ್ಯಗಳನ್ನು ಕಲಿಯುವುದರ, ಭವಿಷ್ಯತ್ತಿಗಾಗಿ ಸಂತೋಷಕರ ನಿರೀಕ್ಷೆಯನ್ನು ಹೊಂದಿರುವುದರ, ಮತ್ತು ಯೆಹೋವನ ಮೂಲತತ್ತ್ವಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸುವುದರ ಚೈತನ್ಯದಾಯಕ ಪರಿಣಾಮಗಳನ್ನು ಸ್ವತಃ ನೀವೇ ನೇರವಾಗಿ ಅನುಭವಿಸಿದ್ದೀರಿ ಎಂಬುದಂತೂ ನಿಶ್ಚಯ.

2 ಆದರೂ, ಯೆಹೋವನ ಆರಾಧಕರಲ್ಲಿ ಕೆಲವರು ಆಗಿಂದಾಗ್ಗೆ ಭಾವನಾತ್ಮಕ ಬಳಲಿಕೆಯ ಅವಧಿಗಳನ್ನು ಅನುಭವಿಸುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ನಿರುತ್ತೇಜನದ ಸಮಯಾವಧಿಗಳು ಸ್ವಲ್ಪಕಾಲ ಮಾತ್ರ ಇರುತ್ತವೆ. ಬೇರೆ ಸಮಯಗಳಲ್ಲಿ ಆಯಾಸದ ಅನಿಸಿಕೆಯು ದೀರ್ಘ ಕಾಲಾವಧಿಗಳ ವರೆಗೆ ಮುಂದುವರಿಯುತ್ತಾ ಹೋಗುತ್ತದೆ. ಸಮಯವು ಗತಿಸಿದಂತೆ, ತಮ್ಮ ಕ್ರೈಸ್ತ ಜವಾಬ್ದಾರಿಗಳು ಯೇಸು ವಾಗ್ದಾನಿಸಿದಂತೆ ಚೈತನ್ಯದಾಯಕ ಹೊರೆಯಾಗಿರುವುದಕ್ಕೆ ಬದಲಾಗಿ ಒಂದು ದೊಡ್ಡ ಭಾರವಾಗಿ ಪರಿಣಮಿಸಿವೆ ಎಂದು ಕೆಲವರಿಗೆ ಅನಿಸಬಹುದು. ಇಂಥ ನಕಾರಾತ್ಮಕ ಅನಿಸಿಕೆಗಳು, ಒಬ್ಬ ಕ್ರೈಸ್ತನಿಗೆ ಯೆಹೋವನೊಂದಿಗೆ ಇರುವ ಸಂಬಂಧಕ್ಕೆ ಒಂದು ಗಂಭೀರ ಅಪಾಯವನ್ನು ಒಡ್ಡಬಹುದು.

3 ಯೇಸುವಿನ ಬಂಧನ ಹಾಗೂ ವಧೆಗೆ ಸ್ವಲ್ಪ ಮುಂಚೆ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.” (ಯೋಹಾನ 14:1) ಅತಿ ಬೇಗನೆ ಅಪೊಸ್ತಲರು ದುರಂತಮಯ ಘಟನೆಗಳನ್ನು ಅನುಭವಿಸಲಿಕ್ಕಿದ್ದುದರಿಂದ ಯೇಸು ಈ ಮಾತುಗಳನ್ನು ನುಡಿದನು. ಇಂಥ ಘಟನೆಗಳ ಬಳಿಕ ಹಿಂಸೆಯು ಆರಂಭವಾಗಲಿಕ್ಕಿತ್ತು. ತನ್ನ ಅಪೊಸ್ತಲರು ತೀವ್ರವಾದ ನಿರುತ್ತೇಜನದಿಂದ ಧೈರ್ಯಗೆಡಸಾಧ್ಯವಿದೆ ಎಂಬುದು ಯೇಸುವಿಗೆ ತಿಳಿದಿತ್ತು. (ಯೋಹಾನ 16:⁠1) ದುಃಖದ ಅನಿಸಿಕೆಗಳನ್ನು ನಿಯಂತ್ರಿಸದಿರುವಲ್ಲಿ, ಇವು ಅಪೊಸ್ತಲರನ್ನು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಿ, ಯೆಹೋವನಲ್ಲಿನ ಅವರ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಸಾಧ್ಯವಿತ್ತು. ಇಂದಿನ ಕ್ರೈಸ್ತರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ದೀರ್ಘಕಾಲಿಕ ನಿರುತ್ತೇಜನವು ಬಹಳಷ್ಟು ಬೇಗುದಿಯನ್ನು ಉಂಟುಮಾಡಬಲ್ಲದು, ಮತ್ತು ನಮ್ಮ ಹೃದಯಗಳು ಭಾರವಾಗಿಬಿಡಬಲ್ಲವು. (ಯೆರೆಮೀಯ 8:18) ನಾವು ಆಂತರಿಕವಾಗಿ ಇನ್ನಷ್ಟು ದುರ್ಬಲಗೊಳ್ಳಬಹುದು. ಈ ಒತ್ತಡದ ಕೆಳಗೆ ನಾವು ಭಾವನಾತ್ಮಕವಾಗಿಯೂ ಆಧ್ಯಾತ್ಮಿಕವಾಗಿಯೂ ಸರಿಯಾಗಿ ಕಾರ್ಯನಡಿಸದಿರಬಹುದು, ಯೆಹೋವನನ್ನು ಆರಾಧಿಸುವ ನಮ್ಮ ಬಯಕೆಯನ್ನೂ ಕಳೆದುಕೊಳ್ಳಬಹುದು.

4 “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು” ಎಂಬ ಬೈಬಲ್‌ ಬುದ್ಧಿವಾದವು ಖಂಡಿತವಾಗಿಯೂ ಸೂಕ್ತವಾದದ್ದಾಗಿದೆ. (ಜ್ಞಾನೋಕ್ತಿ 4:23) ನಮ್ಮ ಸಾಂಕೇತಿಕ ಹೃದಯವನ್ನು ನಿರುತ್ತೇಜನ ಹಾಗೂ ಆಧ್ಯಾತ್ಮಿಕ ಬಳಲಿಕೆಯಿಂದ ಸಂರಕ್ಷಿಸಲು ನಮಗೆ ಸಹಾಯಮಾಡುವ ಪ್ರಾಯೋಗಿಕ ಸಲಹೆಯನ್ನು ಬೈಬಲ್‌ ನೀಡುತ್ತದೆ. ಆದರೆ, ಮೊದಲನೆಯದಾಗಿ ನಮ್ಮ ಆಯಾಸಕ್ಕೆ ಕಾರಣವೇನು ಎಂಬುದನ್ನು ನಾವು ಗುರುತಿಸುವ ಅಗತ್ಯವಿದೆ.

ಕ್ರೈಸ್ತತ್ವವು ಹೊರೆದಾಯಕವಲ್ಲ

5 ಒಬ್ಬ ಕ್ರೈಸ್ತನಾಗಿರುವುದು ಹುರುಪಿನ ಪರಿಶ್ರಮವನ್ನು ಕೇಳಿಕೊಳ್ಳುತ್ತದೆ ಎಂಬುದಂತೂ ನಿಜ. (ಲೂಕ 13:24) ಯೇಸು ಹೀಗೂ ಹೇಳಿದನು: “ಯಾವನಾದರೂ ತನ್ನ ಶಿಲುಬೆಯನ್ನು [“ಯಾತನಾ ಕಂಬವನ್ನು,” NW] ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.” (ಲೂಕ 14:27) ಮೇಲ್ನೋಟದಲ್ಲಿ ಯೇಸುವಿನ ಈ ಮಾತುಗಳು, ತನ್ನ ಹೊರೆಯು ಹಗುರವಾದದ್ದು ಮತ್ತು ಚೈತನ್ಯದಾಯಕವಾದದ್ದು ಎಂಬ ಅವನ ಸ್ವಂತ ಹೇಳಿಕೆಗೆ ವಿರುದ್ಧವಾಗಿರುವಂತೆ ತೋರಬಹುದು. ಆದರೆ ವಾಸ್ತವದಲ್ಲಿ ಇದರಲ್ಲಿ ಯಾವುದೇ ವಿರುದ್ಧಾರ್ಥವಿಲ್ಲ.

6 ಹುರುಪಿನ ಪರಿಶ್ರಮ ಹಾಗೂ ಪ್ರಯಾಸಭರಿತ ಕೆಲಸವು ಶಾರೀರಿಕ ದಣಿವನ್ನು ಉಂಟುಮಾಡುವುದಾದರೂ, ಒಳ್ಳೇ ಕಾರಣಕ್ಕಾಗಿ ಮಾಡಲ್ಪಡುವಾಗ ಇದು ಸಂತೃಪ್ತಿಕರವೂ ಚೈತನ್ಯದಾಯಕವೂ ಆಗಿ ಪರಿಣಮಿಸಸಾಧ್ಯವಿದೆ. (ಪ್ರಸಂಗಿ 3:​13, 22) ಅದ್ಭುತಕರವಾದ ಬೈಬಲ್‌ ಸತ್ಯಗಳನ್ನು ನಮ್ಮ ಜೊತೆ ಮಾನವರೊಂದಿಗೆ ಹಂಚಿಕೊಳ್ಳುವುದಕ್ಕಿಂತ ಹೆಚ್ಚು ಉತ್ತಮ ಕಾರಣವು ಯಾವುದಿರಸಾಧ್ಯವಿದೆ? ಅಷ್ಟುಮಾತ್ರವಲ್ಲ, ದೇವರ ಉಚ್ಚ ನೈತಿಕ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸಲು ನಾವು ನಡೆಸುವ ಹೋರಾಟವು, ಅದರಿಂದ ನಾವು ಪಡೆದುಕೊಳ್ಳುವ ಪ್ರಯೋಜನಗಳ ಮುಂದೆ ತೀರ ಕ್ಷುಲ್ಲಕವಾಗಿದೆ. (ಜ್ಞಾನೋಕ್ತಿ 2:10-20) ಹಿಂಸೆಗೊಳಗಾದಾಗಲೂ, ದೇವರ ರಾಜ್ಯಕ್ಕೋಸ್ಕರ ಕಷ್ಟಾನುಭವಿಸುವುದನ್ನು ನಾವು ಒಂದು ಗೌರವವಾಗಿ ಪರಿಗಣಿಸುತ್ತೇವೆ.​—⁠1 ಪೇತ್ರ 4:⁠14.

7 ವಿಶೇಷವಾಗಿ ಈಗಲೂ ಸುಳ್ಳು ಧರ್ಮದ ನೊಗದಡಿಯಲ್ಲಿ ಇರುವವರ ಆಧ್ಯಾತ್ಮಿಕ ಅಂಧಕಾರಕ್ಕೆ ಹೋಲಿಸುವಾಗ, ಯೇಸುವಿನ ಹೊರೆಯು ನಿಜವಾಗಿಯೂ ಚೈತನ್ಯದಾಯಕವಾಗಿದೆ. ಯೆಹೋವನಿಗೆ ನಮ್ಮ ಮೇಲೆ ಕೋಮಲವಾದ ಪ್ರೀತಿಯಿದೆ ಮತ್ತು ಆತನೆಂದೂ ನಮ್ಮಿಂದ ಅನ್ಯಾಯದ ಬೇಡಿಕೆಗಳನ್ನು ಮಾಡುವುದಿಲ್ಲ. ಯೆಹೋವನ “ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ಶಾಸ್ತ್ರವಚನಗಳಲ್ಲಿ ತಿಳಿಸಲ್ಪಟ್ಟಿರುವಂತೆ, ನಿಜ ಕ್ರೈಸ್ತತ್ವವು ವಿಪರೀತ ಹೊರೆದಾಯಕವೇನಲ್ಲ. ನಮ್ಮ ಆರಾಧನಾ ರೀತಿಯು ಆಯಾಸವನ್ನು ಮತ್ತು ನಿರುತ್ತೇಜನವನ್ನು ಉಂಟುಮಾಡುವುದಿಲ್ಲ ಎಂಬುದಂತೂ ಸುಸ್ಪಷ್ಟ.

‘ಎಲ್ಲಾ ಭಾರವನ್ನು ತೆಗೆದಿಡಿರಿ’

8 ನಾವು ಆಧ್ಯಾತ್ಮಿಕ ದಣಿವನ್ನು ಅನುಭವಿಸುತ್ತಿರುವಲ್ಲಿ, ಅನೇಕವೇಳೆ ಅದು ಈ ಭ್ರಷ್ಟ ವಿಷಯಗಳ ವ್ಯವಸ್ಥೆಯು ನಮ್ಮ ಮೇಲೆ ಹೊರಿಸುವ ಹೆಚ್ಚಿನ ಭಾರದ ಫಲಿತಾಂಶವೇ ಆಗಿರುತ್ತದೆ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿ”ರುವುದರಿಂದ, ನಮ್ಮನ್ನು ದುರ್ಬಲಗೊಳಿಸುವಂಥ ಹಾಗೂ ನಮ್ಮ ಕ್ರೈಸ್ತ ಸಮತೂಕವನ್ನು ಶಿಥಿಲಗೊಳಿಸುವಂಥ ನಕಾರಾತ್ಮಕ ಶಕ್ತಿಗಳಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ. (1 ಯೋಹಾನ 5:19) ಅನಗತ್ಯ ಬೆನ್ನಟ್ಟುವಿಕೆಗಳು ನಮ್ಮ ಕ್ರೈಸ್ತ ಚಟುವಟಿಕೆಗಳ ನಿಯತಕ್ರಮದಲ್ಲಿ ತೊಡಕನ್ನುಂಟುಮಾಡಿ, ಅದನ್ನು ಭಂಗಗೊಳಿಸಸಾಧ್ಯವಿದೆ. ಈ ಹೆಚ್ಚಿನ ಹೊರೆಗಳು ನಮ್ಮನ್ನು ಭಾರದಿಂದ ಕುಗ್ಗಿಸಬಹುದು ಹಾಗೂ ನಮ್ಮ ಮನಸ್ಸನ್ನು ಜಜ್ಜಿಬಿಡಲೂಬಹುದು. ಸೂಕ್ತವಾಗಿಯೇ ಬೈಬಲ್‌ ನಮಗೆ ‘ಎಲ್ಲಾ ಭಾರವನ್ನು ತೆಗೆದಿಡಿರಿ’ ಎಂದು ಬುದ್ಧಿಹೇಳುತ್ತದೆ.​—⁠ಇಬ್ರಿಯ 12:​1-3.

9 ಉದಾಹರಣೆಗೆ, ಸ್ಥಾನಮಾನ, ಹಣ, ಮನೋರಂಜನೆ, ವಿಹಾರಕ್ಕಾಗಿ ದೇಶಸಂಚಾರ, ಮತ್ತು ಇತರ ಪ್ರಾಪಂಚಿಕ ಬೆನ್ನಟ್ಟುವಿಕೆಗಳಲ್ಲಿ ಲೋಕವು ಸಂಪೂರ್ಣವಾಗಿ ಮಗ್ನವಾಗಿರುವುದು ನಮ್ಮ ಆಲೋಚನೆಯ ಮೇಲೂ ಪ್ರಭಾವ ಬೀರಬಲ್ಲದು. (1 ಯೋಹಾನ 2:15-17) ಐಶ್ವರ್ಯವನ್ನು ಬೆನ್ನಟ್ಟಿದಂಥ ಪ್ರಥಮ ಶತಮಾನದ ಕೆಲವು ಕ್ರೈಸ್ತರು ತಮ್ಮ ಜೀವಿತಗಳನ್ನು ಬಹಳ ತೊಡಕುಗೊಳಿಸಿಕೊಂಡರು. ಅಪೊಸ್ತಲ ಪೌಲನು ವಿವರಿಸುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”​—⁠1 ತಿಮೊಥೆಯ 6:9, 10.

10 ನಾವು ದೇವರಿಗೆ ಸಲ್ಲಿಸುವ ಸೇವೆಯಲ್ಲಿ ಬಳಲಿಹೋಗುವುದಕ್ಕೂ ನಿರುತ್ತೇಜಿತರಾಗುವುದಕ್ಕೂ ಕಾರಣವು, ಪ್ರಾಪಂಚಿಕ ವಸ್ತುಗಳ ಬೆನ್ನಟ್ಟುವಿಕೆಯು ನಮ್ಮ ಆಧ್ಯಾತ್ಮಿಕತೆಗೆ ಅವಕಾಶ ಕೊಡದೆ ಅದನ್ನು ನಿಗ್ರಹಿಸುತ್ತಿರುವುದೇ ಆಗಿರಬಹುದೋ? ಬೀಜಬಿತ್ತುವವನ ಕುರಿತಾದ ಯೇಸುವಿನ ಸಾಮ್ಯದಿಂದ ಸೂಚಿಸಲ್ಪಟ್ಟಂತೆ, ಹೀಗಾಗುವ ಸಂಭವನೀಯತೆ ಖಂಡಿತವಾಗಿಯೂ ಇದೆ. ಯೇಸು, ‘ಪ್ರಪಂಚದ ಚಿಂತೆಗಳು, ಐಶ್ವರ್ಯದಿಂದುಂಟಾಗುವ ಮೋಸ, ಮತ್ತು ಇತರ ವಿಷಯಗಳ ಮೇಲಣ ಆಶೆಗಳನ್ನು,’ ನಮ್ಮ ಹೃದಯಗಳಲ್ಲಿ ದೇವರ ವಾಕ್ಯದ ಬೀಜವನ್ನು ‘ಅಡಗಿಸಿಬಿಡುವ’ ಮುಳ್ಳುಗಿಡಗಳಿಗೆ ಹೋಲಿಸಿದನು. (ಮಾರ್ಕ 4:18, 19) ಆದುದರಿಂದ, ಬೈಬಲ್‌ ನಮಗೆ ಹೀಗೆ ಸಲಹೆ ನೀಡುತ್ತದೆ: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.”​—⁠ಇಬ್ರಿಯ 13:⁠5.

11 ಕೆಲವೊಮ್ಮೆ ನಮ್ಮ ಜೀವಿತಗಳನ್ನು ತೊಡಕುಗೊಳಿಸುವಂಥ ಸಂಗತಿಯು ಹೆಚ್ಚಿನ ವಸ್ತುಗಳ ಬೆನ್ನಟ್ಟುವಿಕೆಯಲ್ಲ, ಬದಲಾಗಿ ಈಗಾಗಲೇ ನಮ್ಮ ಬಳಿಯಿರುವಂಥ ವಸ್ತುಗಳೊಂದಿಗೆ ನಾವೇನು ಮಾಡುತ್ತೇವೊ ಅದೇ ಆಗಿರುತ್ತದೆ. ಕೆಲವರು ಗಂಭೀರವಾದ ಆರೋಗ್ಯ ಸಮಸ್ಯೆಗಳು, ಮರಣದಲ್ಲಿ ಪ್ರಿಯ ವ್ಯಕ್ತಿಗಳನ್ನು ಕಳೆದುಕೊಳ್ಳುವುದು, ಅಥವಾ ಇನ್ನಿತರ ಸಂಕಟಕರ ಸಮಸ್ಯೆಗಳಿಂದಾಗಿ ಭಾವನಾತ್ಮಕ ನಿಶಕ್ತಿಯನ್ನು ಅನುಭವಿಸಬಹುದು. ಆಗಿಂದಾಗ್ಗೆ ತಮ್ಮ ಜೀವಿತದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂಬುದನ್ನು ಅವರು ಮನಗಂಡಿದ್ದಾರೆ. ಒಬ್ಬ ವಿವಾಹಿತ ದಂಪತಿ ತಮ್ಮ ಕೆಲವು ಹವ್ಯಾಸಗಳನ್ನು ಹಾಗೂ ಅನಗತ್ಯವಾದ ವೈಯಕ್ತಿಕ ಯೋಜನೆಗಳನ್ನು ಕೈಬಿಡಲು ನಿರ್ಧರಿಸಿದರು. ವಾಸ್ತವದಲ್ಲಿ ಅವರು ತಮ್ಮ ಬಳಿಯಿದ್ದ ಎಲ್ಲಾ ಸಾಮಾನುಗಳನ್ನು ಪರೀಕ್ಷಿಸಿದರು ಮತ್ತು ಅಂಥ ಯೋಜನೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಪ್ಯಾಕ್‌ಮಾಡಿ ಕಣ್ಣಿಗೆ ಬೀಳದಂಥ ಸ್ಥಳದಲ್ಲಿ ಹಾಕಿದರು. ನಾವು ದಣಿದವರಾಗಿ ಬೇಸರಗೊಳ್ಳದೆ ಇರಸಾಧ್ಯವಾಗುವಂತೆ, ನಾವೆಲ್ಲರೂ ಆಗಿಂದಾಗ್ಗೆ ನಮ್ಮ ಹವ್ಯಾಸಗಳು ಹಾಗೂ ಸೊತ್ತುಗಳನ್ನು ಪರಿಗಣಿಸಿ, ಅನಗತ್ಯವಾದ ಎಲ್ಲಾ ಭಾರವನ್ನು ತೆಗೆದಿರಿಸುವ ಮೂಲಕ ಪ್ರಯೋಜನವನ್ನು ಹೊಂದಬಲ್ಲೆವು.

ನ್ಯಾಯಸಮ್ಮತತೆ ಮತ್ತು ಮಿತವರ್ತನೆ ಅತ್ಯಾವಶ್ಯಕ

12 ಚಿಕ್ಕಪುಟ್ಟ ವಿಷಯಗಳಲ್ಲಿಯೂ ನಾವು ಮಾಡುವ ತಪ್ಪುಗಳು ನಮ್ಮ ಜೀವಿತಗಳನ್ನು ಕಾಲಕ್ರಮೇಣ ತೊಡಕುಗೊಳಿಸಬಲ್ಲವು. ದಾವೀದನ ಈ ಮಾತುಗಳು ಎಷ್ಟು ಸತ್ಯವಾಗಿವೆ: “ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿಮಿಬಿಟ್ಟವೆ.” (ಕೀರ್ತನೆ 38:4) ಅನೇಕವೇಳೆ ಕೆಲವೊಂದು ಪ್ರಾಯೋಗಿಕ ಹೊಂದಾಣಿಕೆಗಳು ನಮಗೆ ಭಾರವಾದ ಹೊರೆಯಿಂದ ವಿಮುಕ್ತಿಯನ್ನು ನೀಡುವವು.

13 “ಸುಜ್ಞಾನವನ್ನೂ ಬುದ್ಧಿಯನ್ನೂ [“ಪ್ರಾಯೋಗಿಕ ವಿವೇಕವನ್ನೂ ಆಲೋಚನಾ ಸಾಮರ್ಥ್ಯವನ್ನೂ,” NW]” ಬೆಳೆಸಿಕೊಳ್ಳುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ. (ಜ್ಞಾನೋಕ್ತಿ 3:21, 22) “ಮೇಲಣಿಂದ ಬರುವ ಜ್ಞಾನವು . . . ವಿನಯವುಳ್ಳದ್ದು” ಇಲ್ಲವೆ ನ್ಯಾಯಸಮ್ಮತವಾದದ್ದು ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 3:17) ಕ್ರೈಸ್ತ ಶುಶ್ರೂಷೆಯಲ್ಲಿ ಇತರರು ಮಾಡುವಷ್ಟೇ ಪ್ರಮಾಣದ ಕೆಲಸವನ್ನು ತಾವೂ ಮಾಡಬೇಕೆಂಬ ಒತ್ತಡದ ಅನಿಸಿಕೆ ಕೆಲವರಿಗಾಗಿದೆ. ಆದರೆ ಬೈಬಲ್‌ ನಮಗೆ ಹೀಗೆ ಬುದ್ಧಿಹೇಳುತ್ತದೆ: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ. ಯಾಕಂದರೆ ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:​4, 5) ಜೊತೆ ಕ್ರೈಸ್ತರ ಒಳ್ಳೇ ಮಾದರಿಯು ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡುವಂತೆ ನಮ್ಮನ್ನು ಪ್ರೋತ್ಸಾಹಿಸಬಲ್ಲದು ಎಂಬುದಂತೂ ನಿಜ, ಆದರೆ ಪ್ರಾಯೋಗಿಕ ವಿವೇಕ ಹಾಗೂ ನ್ಯಾಯಸಮ್ಮತತೆಯು ನಮ್ಮ ಸ್ವಂತ ಸನ್ನಿವೇಶಗಳಿಗನುಸಾರ ವಾಸ್ತವಿಕ ಗುರಿಗಳನ್ನಿಡಲು ನಮಗೆ ಸಹಾಯಮಾಡುವುದು.

14 ಕಡಿಮೆ ಪ್ರಾಮುಖ್ಯವಾಗಿ ತೋರಬಹುದಾದಂಥ ಕ್ಷೇತ್ರಗಳಲ್ಲಿಯೂ ನಾವು ತೋರಿಸುವ ನ್ಯಾಯಸಮ್ಮತತೆಯು, ಬಳಲಿಕೆಯ ಅನಿಸಿಕೆಗಳನ್ನು ತಡೆಗಟ್ಟಲು ಸಹಾಯಮಾಡಬಲ್ಲದು. ಉದಾಹರಣೆಗೆ, ಒಳ್ಳೇ ಶಾರೀರಿಕ ಆರೋಗ್ಯಕ್ಕೆ ನೆರವು ನೀಡುವಂಥ ಸಮತೂಕದ ರೂಢಿಗಳನ್ನು ನಾವು ಬೆಳೆಸಿಕೊಳ್ಳುತ್ತೇವೋ? ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲೊಂದರಲ್ಲಿ ಸೇವೆಮಾಡುತ್ತಿರುವ ಒಬ್ಬ ವಿವಾಹಿತ ದಂಪತಿಯ ಉದಾಹರಣೆಯನ್ನು ಪರಿಗಣಿಸಿರಿ. ನಿಶಕ್ತಿಯನ್ನು ತಡೆಗಟ್ಟುವುದರಲ್ಲಿ ಪ್ರಾಯೋಗಿಕ ವಿವೇಕದ ಮೌಲ್ಯವನ್ನು ಅವರು ಮನಗಂಡಿದ್ದಾರೆ. ಪತ್ನಿಯು ಹೇಳುವುದು: “ನಮಗೆ ಎಷ್ಟೇ ಕೆಲಸವಿರಲಿ ನಾವು ಮಾತ್ರ ಪ್ರತಿ ರಾತ್ರಿ ನಿಗದಿತ ಸಮಯಕ್ಕೆ ಮಲಗಲು ಪ್ರಯತ್ನಿಸುತ್ತೇವೆ. ನಾವು ಕ್ರಮವಾಗಿ ವ್ಯಾಯಾಮವನ್ನೂ ಮಾಡುತ್ತೇವೆ. ಇದು ನಿಜವಾಗಿಯೂ ನಮಗೆ ಸಹಾಯಮಾಡಿದೆ. ನಮ್ಮ ಇತಿಮಿತಿಗಳು ಏನು ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ, ಮತ್ತು ಅವುಗಳಿಗನುಸಾರ ಕಾರ್ಯನಡಿಸುತ್ತೇವೆ. ನಾವು ಶಕ್ತಿಯ ಚಿಲುಮೆಯಂತೆ ತೋರುವ ಕೆಲವರೊಂದಿಗೆ ನಮ್ಮನ್ನು ಹೋಲಿಸಿನೋಡಲು ಪ್ರಯತ್ನಿಸುವುದಿಲ್ಲ.” ನಾವು ಕ್ರಮವಾದ ರೀತಿಯಲ್ಲಿ ಚೆನ್ನಾಗಿ ಊಟಮಾಡುತ್ತೇವೋ ಮತ್ತು ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತೇವೋ? ಒಟ್ಟಿನಲ್ಲಿ ನಮ್ಮ ಆರೋಗ್ಯಕ್ಕೆ ಸಾಕಷ್ಟು ಗಮನವನ್ನು ಕೊಡುವುದು, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ದಣಿವಿನ ಅನಿಸಿಕೆಗಳನ್ನು ಕಡಿಮೆಗೊಳಿಸಸಾಧ್ಯವಿದೆ.

15 ನಮ್ಮಲ್ಲಿ ಕೆಲವರಿಗೆ ಅಸಾಮಾನ್ಯವಾದ ಅಗತ್ಯಗಳಿರಸಾಧ್ಯವಿದೆ. ಉದಾಹರಣೆಗೆ, ಒಬ್ಬ ಕ್ರೈಸ್ತ ಸಹೋದರಿಯು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಅನೇಕ ಪಂಥಾಹ್ವಾನದಾಯಕ ನೇಮಕಗಳಲ್ಲಿ ಸೇವೆಮಾಡಿದ್ದಾಳೆ. ಅವಳಿಗೆ ಕ್ಯಾನ್ಸರ್‌ ಮಾತ್ರವಲ್ಲದೆ ಇನ್ನೂ ಬೇರೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿದ್ದವು. ಈ ಒತ್ತಡಭರಿತ ಸನ್ನಿವೇಶಗಳನ್ನು ನಿಭಾಯಿಸಲು ಯಾವುದು ಅವಳಿಗೆ ಸಹಾಯಮಾಡುತ್ತದೆ? ಅವಳನ್ನುವುದು: “ನಾನು ಒಂಟಿಯಾಗಿರಲು ಮತ್ತು ಬಹಳ ಪ್ರಶಾಂತವಾದ ವಾತಾವರಣದಲ್ಲಿರಲು ಸಮಯವನ್ನು ಮಾಡಿಕೊಳ್ಳುವುದು ನನಗೆ ತುಂಬ ಪ್ರಾಮುಖ್ಯವಾದ ಸಂಗತಿಯಾಗಿದೆ. ನನ್ನಲ್ಲಿ ಒತ್ತಡ ಹಾಗೂ ನಿಶಕ್ತಿಯು ಹೆಚ್ಚುತ್ತಾ ಹೋದಂತೆ, ನಾನು ಓದಲು ಹಾಗೂ ವಿಶ್ರಮಿಸಲು ಸಾಧ್ಯವಾಗುವಂಥ ಪ್ರಶಾಂತವಾದ ಏಕಾಂತಭರಿತ ಕ್ಷಣಗಳನ್ನು ಕಳೆಯುವ ಆವಶ್ಯಕತೆ ಇನ್ನಷ್ಟು ಜರೂರಿಯದ್ದಾಗುತ್ತದೆ.” ಪ್ರಾಯೋಗಿಕ ವಿವೇಕ ಹಾಗೂ ಆಲೋಚನಾ ಸಾಮರ್ಥ್ಯವು, ನಮ್ಮ ವೈಯಕ್ತಿಕ ಅಗತ್ಯಗಳನ್ನು ಗುರುತಿಸಲು ಮತ್ತು ಅವುಗಳನ್ನು ತೃಪ್ತಿಪಡಿಸಲು ನಮಗೆ ಸಹಾಯಮಾಡುತ್ತದೆ ಮತ್ತು ಹೀಗೆ ನಾವು ಆಧ್ಯಾತ್ಮಿಕ ದಣಿವಿನಿಂದ ದೂರವಿರಸಾಧ್ಯವಿದೆ.

ಯೆಹೋವ ದೇವರು ನಮ್ಮಲ್ಲಿ ಶಕ್ತಿತುಂಬುತ್ತಾನೆ

16 ನಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ನೋಡಿಕೊಳ್ಳುವುದು ಅತ್ಯಂತ ಪ್ರಾಮುಖ್ಯವಾದ ಸಂಗತಿಯಾಗಿದೆ ಎಂಬುದಂತೂ ನಿಶ್ಚಯ. ಯೆಹೋವ ದೇವರೊಂದಿಗೆ ನಮಗೆ ಆಪ್ತ ಸಂಬಂಧವಿರುವಾಗ, ನಾವು ಶಾರೀರಿಕವಾಗಿ ದಣಿಯಬಹುದಾದರೂ ಆತನನ್ನು ಆರಾಧಿಸುವ ವಿಷಯದಲ್ಲಿ ಮಾತ್ರ ನಾವೆಂದೂ ದಣಿಯದಿರುವೆವು. ಯೆಹೋವನೇ “ಸೋತವನಿಗೆ [ಇಲ್ಲವೆ ದಣಿದವನಿಗೆ] ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸು”ವಾತನಾಗಿದ್ದಾನೆ. (ಯೆಶಾಯ 40:28, 29) ಈ ಮಾತುಗಳ ಸತ್ಯತೆಯನ್ನು ವೈಯಕ್ತಿಕವಾಗಿ ಅನುಭವಿಸಿದವನಾದ ಅಪೊಸ್ತಲ ಪೌಲನು ಬರೆದುದು: “ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.”​—⁠2 ಕೊರಿಂಥ 4:⁠16.

17 “ದಿನೇದಿನೇ” ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ಇದು ನಾವು ಪ್ರತಿದಿನವೂ ಯೆಹೋವನು ನಮಗೆ ನೀಡುವ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದನ್ನು ಸೂಚಿಸುತ್ತದೆ. 43 ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಸೇವೆಮಾಡಿದ ಒಬ್ಬ ಮಿಷನೆರಿಯು ಶಾರೀರಿಕ ದಣಿವು ಹಾಗೂ ನಿರುತ್ತೇಜನದ ಕಾಲಾವಧಿಗಳನ್ನು ಎದುರಿಸಬೇಕಾಗಿತ್ತು. ಆದರೆ ಅವಳು ಆಧ್ಯಾತ್ಮಿಕವಾಗಿ ದಣಿಯಲಿಲ್ಲ. ಅವಳನ್ನುವುದು: “ನಾನು ಬೆಳಗ್ಗೆ ಬೇಗನೆ ಏಳುವ ರೂಢಿಯನ್ನು ಮಾಡಿಕೊಂಡಿದ್ದೇನೆ, ಇದರಿಂದಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಯೆಹೋವನಿಗೆ ಪ್ರಾರ್ಥಿಸುವುದರಲ್ಲಿ ಮತ್ತು ಆತನ ವಾಕ್ಯವನ್ನು ಓದುವುದರಲ್ಲಿ ನಾನು ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಈ ದೈನಂದಿನ ನಿಯತಕ್ರಮವು ಇಷ್ಟರ ತನಕ ತಾಳಿಕೊಳ್ಳುವಂತೆ ನನಗೆ ಸಹಾಯಮಾಡಿದೆ.” ಖಂಡಿತವಾಗಿಯೂ ನಾವು ಕ್ರಮವಾಗಿ, ಹೌದು “ದಿನೇದಿನೇ” ಯೆಹೋವನ ಪೋಷಕ ಶಕ್ತಿಯ ಮೇಲೆ ಹೊಂದಿಕೊಳ್ಳಬಲ್ಲೆವು, ಆತನಿಗೆ ಪ್ರಾರ್ಥಿಸಬಲ್ಲೆವು ಮತ್ತು ಆತನ ಅತ್ಯುಚ್ಚ ಗುಣಗಳು ಹಾಗೂ ವಾಗ್ದಾನಗಳ ಕುರಿತು ಧ್ಯಾನಿಸಬಲ್ಲೆವು.

18 ವೃದ್ಧಾಪ್ಯ ಹಾಗೂ ಅನಾರೋಗ್ಯದ ಕಾರಣ ನಿರುತ್ತೇಜನಗೊಳ್ಳುವವರಿಗೆ ಇದು ವಿಶೇಷವಾಗಿ ಸಹಾಯಕರವಾಗಿದೆ. ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದರಿಂದಾಗಿ ಅಲ್ಲ, ಬದಲಾಗಿ ಒಂದು ಕಾಲದಲ್ಲಿ ಅವರು ಏನನ್ನು ಪೂರೈಸಲು ಶಕ್ತರಾಗಿದ್ದರೋ ಅದರೊಂದಿಗೆ ತಮ್ಮ ಈಗಿನ ಪರಿಸ್ಥಿತಿಯನ್ನು ಹೋಲಿಸಿಕೊಳ್ಳುವುದರಿಂದಾಗಿ ಇಂಥವರು ಮನಗುಂದಬಹುದು. ಯೆಹೋವನು ವೃದ್ಧರನ್ನು ಸನ್ಮಾನಿಸುತ್ತಾನೆ ಎಂಬುದನ್ನು ತಿಳಿದವರಾಗಿರುವುದು ಎಷ್ಟು ಸಾಂತ್ವನದಾಯಕವಾದದ್ದಾಗಿದೆ! ಬೈಬಲ್‌ ಹೇಳುವುದು: “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31) ಯೆಹೋವನಿಗೆ ನಮ್ಮ ಇತಿಮಿತಿಗಳು ಗೊತ್ತಿವೆ ಮತ್ತು ನಮ್ಮ ಕುಂದುಕೊರತೆಗಳ ನಡುವೆಯೂ ನಾವು ಸಲ್ಲಿಸುವ ಪೂರ್ಣ ಹೃದಯದ ಆರಾಧನೆಯನ್ನು ಆತನು ಅತ್ಯಮೂಲ್ಯವಾಗಿ ಪರಿಗಣಿಸುತ್ತಾನೆ. ಮತ್ತು ಈಗಾಗಲೇ ನಾವು ಮಾಡಿರುವಂಥ ಸತ್ಕಾರ್ಯಗಳು, ಅಳಿಸಲಾರದಂಥ ರೀತಿಯಲ್ಲಿ ದೇವರ ನೆನಪಿನಲ್ಲಿ ದಾಖಲಿಸಲ್ಪಟ್ಟಿವೆ. ಶಾಸ್ತ್ರವಚನಗಳು ನಮಗೆ ಹೀಗೆ ಆಶ್ವಾಸನೆ ನೀಡುತ್ತವೆ: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಅನೇಕ ದಶಕಗಳಿಂದ ಯೆಹೋವನಿಗೆ ನಿಷ್ಠಾವಂತರಾಗಿ ರುಜುಪಡಿಸಿಕೊಂಡಿರುವಂಥ ವ್ಯಕ್ತಿಗಳು ನಮ್ಮ ಮಧ್ಯೆ ಇರುವುದು ನಮ್ಮೆಲ್ಲರಿಗೂ ಎಷ್ಟು ಸಂತೋಷವನ್ನು ನೀಡುತ್ತದೆ!

ಪ್ರಯತ್ನವನ್ನು ಬಿಡಬೇಡಿ

19 ಕ್ರಮವಾಗಿ ಮಾಡಲ್ಪಡುವ ಹುರುಪಿನ ಶಾರೀರಿಕ ಚಟುವಟಿಕೆಯು ದಣಿವನ್ನು ಪರಿಹರಿಸುತ್ತದೆ ಎಂಬ ಅಭಿಪ್ರಾಯ ಅನೇಕರಿಗಿದೆ. ತದ್ರೀತಿಯಲ್ಲಿ, ಕ್ರಮವಾದ ಆಧ್ಯಾತ್ಮಿಕ ಚಟುವಟಿಕೆಗಳು, ಯಾವುದೇ ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಬಳಲಿಕೆಯ ಅನಿಸಿಕೆಗಳನ್ನು ಪರಿಹರಿಸಲು ಸಹಾಯಮಾಡಬಲ್ಲವು. ಬೈಬಲ್‌ ಹೇಳುವುದು: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:9, 10) ‘ಒಳ್ಳೇದನ್ನು ಮಾಡುವುದು’ ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ಇದು ನಾವು ಕ್ರಿಯೆಗೈಯುವುದನ್ನು ಸೂಚಿಸುತ್ತದೆ. ಇತರರಿಗಾಗಿ ಒಳ್ಳೇ ಕೆಲಸಗಳನ್ನು ಮಾಡುವುದು, ಯೆಹೋವನಿಗೆ ನಾವು ಸಲ್ಲಿಸುವ ಸೇವೆಯಲ್ಲಿ ದಣಿದುಹೋಗದಂತೆ ಖಂಡಿತವಾಗಿ ಸಹಾಯಮಾಡುತ್ತದೆ.

20 ಇದಕ್ಕೆ ತದ್ವಿರುದ್ಧವಾಗಿ, ದೇವರ ನಿಯಮಗಳನ್ನು ಕಡೆಗಣಿಸುವಂಥ ಜನರೊಂದಿಗಿನ ಸಹವಾಸ ಹಾಗೂ ಕೆಲವು ಚಟುವಟಿಕೆಗಳು ಆಧ್ಯಾತ್ಮಿಕವಾಗಿ ದಣಿಸುವಂಥ ಹೊರೆಯಾಗಿ ಪರಿಣಮಿಸಬಹುದು. ಬೈಬಲ್‌ ನಮ್ಮನ್ನು ಎಚ್ಚರಿಸುವುದು: “ಕಲ್ಲು ಭಾರ, ಮರಳು ಭಾರ, ಎರಡಕ್ಕಿಂತಲೂ ಮೂಢನ ಕೋಪವು ಬಲು ಭಾರ.” (ಜ್ಞಾನೋಕ್ತಿ 27:3) ನಿರುತ್ತೇಜನ ಹಾಗೂ ದಣಿವಿನ ಅನಿಸಿಕೆಗಳನ್ನು ಹೊಡೆದೋಡಿಸಲಿಕ್ಕಾಗಿ, ನಕಾರಾತ್ಮಕ ವಿಚಾರಗಳ ಕುರಿತಾಗಿಯೇ ಆಲೋಚಿಸುವವರ ಮತ್ತು ಇತರರಲ್ಲಿ ತಪ್ಪುಗಳನ್ನು ಹುಡುಕಿ ಅವರನ್ನು ಟೀಕಿಸುವ ಪ್ರವೃತ್ತಿಯುಳ್ಳವರ ಸಹವಾಸದಿಂದ ದೂರವಿರುವುದು ಒಳ್ಳೇದು.

21 ಕ್ರೈಸ್ತ ಕೂಟಗಳು ನಮ್ಮಲ್ಲಿ ಆಧ್ಯಾತ್ಮಿಕ ಬಲವನ್ನು ತುಂಬಿಸಬಲ್ಲ ಯೆಹೋವನ ಒದಗಿಸುವಿಕೆಯಾಗಿವೆ. ಅಲ್ಲಿ ನಮಗೆ ಸಿಗುವ ಚೈತನ್ಯದಾಯಕ ಉಪದೇಶ ಹಾಗೂ ಸಹವಾಸದಿಂದ ಪರಸ್ಪರರನ್ನು ಪ್ರೋತ್ಸಾಹಿಸಲು ನಮಗೆ ಅತ್ಯುತ್ತಮ ಸದವಕಾಶ ದೊರಕುತ್ತದೆ. (ಇಬ್ರಿಯ 10:25) ಸಭೆಯಲ್ಲಿರುವವರೆಲ್ಲರೂ, ಕೂಟಗಳಲ್ಲಿ ಉತ್ತರಗಳನ್ನು ನೀಡುವಾಗ ಅಥವಾ ವೇದಿಕೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಭಕ್ತಿವೃದ್ಧಿಯನ್ನು ಮಾಡಲು ಶ್ರಮಿಸತಕ್ಕದ್ದು. ಬೋಧಕರೋಪಾದಿ ಮುಂದಾಳತ್ವವನ್ನು ವಹಿಸುವವರು ವಿಶೇಷವಾಗಿ ಇತರರನ್ನು ಉತ್ತೇಜಿಸುವ ಜವಾಬ್ದಾರಿಯುಳ್ಳವರಾಗಿದ್ದಾರೆ. (ಯೆಶಾಯ 32:​1, 2) ಬುದ್ಧಿಹೇಳುವ ಅಥವಾ ತಿದ್ದುಪಾಟನ್ನು ನೀಡುವ ಆವಶ್ಯಕತೆಯಿರುವಾಗಲೂ, ಸಲಹೆಯನ್ನು ನೀಡುವ ವಿಧವು ಚೈತನ್ಯದಾಯಕವಾಗಿರಬೇಕು. (ಗಲಾತ್ಯ 6:​1, 2) ಇತರರಿಗಾಗಿರುವ ನಮ್ಮ ಪ್ರೀತಿಯು, ಆಧ್ಯಾತ್ಮಿಕವಾಗಿ ಎಂದಿಗೂ ದಣಿಯದೆ ಯೆಹೋವನ ಸೇವೆಮಾಡುತ್ತಾ ಇರುವಂತೆ ನಮಗೆ ಸಹಾಯಮಾಡುವುದು ಎಂಬುದಂತೂ ಖಂಡಿತ.​—⁠ಕೀರ್ತನೆ 133:1; ಯೋಹಾನ 13:⁠35.

22 ಈ ಅಂತ್ಯ ಕಾಲದಲ್ಲಿ ಯೆಹೋವನನ್ನು ಆರಾಧಿಸುವುದರಲ್ಲಿ ಪರಿಶ್ರಮವು ಒಳಗೂಡಿದೆ. ಮತ್ತು ಕ್ರೈಸ್ತರು ಸಹ ಮಾನಸಿಕ ನಿಶಕ್ತಿ, ಭಾವನಾತ್ಮಕ ನೋವು, ಹಾಗೂ ಒತ್ತಡಭರಿತ ಸನ್ನಿವೇಶಗಳನ್ನು ಅನುಭವಿಸುತ್ತಾರೆ. ನಮ್ಮ ಅಪರಿಪೂರ್ಣ ಮಾನವ ಸ್ವಭಾವವು ಮಣ್ಣಿನ ಮಡಕೆಯಂತೆ ತುಂಬ ದುರ್ಬಲವಾಗಿದೆ. ಆದರೂ ಬೈಬಲ್‌ ಹೇಳುವುದು: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂಥ 4:7) ಹೌದು, ನಾವು ದಣಿಯುತ್ತೇವೆ ನಿಜ, ಆದರೆ ನಾವೆಂದಿಗೂ ಆಧ್ಯಾತ್ಮಿಕವಾಗಿ ದಣಿದು ಪ್ರಯತ್ನವನ್ನು ಬಿಟ್ಟುಬಿಡದಿರೋಣ. ಬದಲಾಗಿ, “ಕರ್ತನು [“ಯೆಹೋವನು,” NW] ನನ್ನ ಸಹಾಯಕನು, ಭಯಪಡೆನು . . . ಎಂದು ನಾವು ಧೈರ್ಯವಾಗಿ” ಹೇಳೋಣ.​—⁠ಇಬ್ರಿಯ 13:⁠6.

ಸಂಕ್ಷಿಪ್ತ ಪುನರ್ವಿಮರ್ಶೆ

• ನಾವು ತೆಗೆದಿರಿಸಲು ಶಕ್ತರಾಗಿರಬಹುದಾದ ಹೊರೆದಾಯಕ ಭಾರಗಳಲ್ಲಿ ಕೆಲವು ಯಾವುವು?

• ನಮ್ಮ ಜೊತೆ ಕ್ರೈಸ್ತರಿಗೆ ‘ಒಳ್ಳೇದನ್ನು ಮಾಡುವುದರಲ್ಲಿ’ ನಾವು ಹೇಗೆ ಪಾಲ್ಗೊಳ್ಳಸಾಧ್ಯವಿದೆ?

• ನಾವು ದಣಿದಾಗ ಅಥವಾ ನಿರುತ್ತೇಜನಗೊಳ್ಳುವಾಗ ಯೆಹೋವನು ನಮ್ಮನ್ನು ಹೇಗೆ ಪೋಷಿಸುತ್ತಾನೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಶುದ್ಧಾರಾಧನೆಯನ್ನು ಅನುಸರಿಸಲು ಬಯಸುವವರೆಲ್ಲರಿಗೆ ಮನಸ್ಸಿಗೆ ಹಿಡಿಸುವಂಥ ಯಾವ ಆಮಂತ್ರಣವು ಕೊಡಲ್ಪಟ್ಟಿದೆ? (ಬಿ) ನಮ್ಮ ಆಧ್ಯಾತ್ಮಿಕತೆಗೆ ಯಾವುದು ಒಂದು ಗಂಭೀರ ಅಪಾಯವನ್ನು ಒಡ್ಡಬಹುದು?

3. ಯೋಹಾನ 14:1ರಲ್ಲಿ ಕಂಡುಬರುವ ಸಲಹೆಯನ್ನು ಯೇಸು ಏಕೆ ಕೊಟ್ಟನು?

4. ನಮ್ಮ ಸಾಂಕೇತಿಕ ಹೃದಯಗಳನ್ನು ಬಳಲಿಸದಿರಲು ಯಾವುದು ನಮಗೆ ಸಹಾಯಮಾಡಬಲ್ಲದು?

5. ಕ್ರೈಸ್ತ ಶಿಷ್ಯತ್ವದ ಸಂಬಂಧದಲ್ಲಿ ಯಾವುದು ವಿರುದ್ಧಾರ್ಥವುಳ್ಳದ್ದಾಗಿ ತೋರಬಹುದು?

6, 7. ನಮ್ಮ ಆರಾಧನಾ ರೀತಿಯು ಆಯಾಸವನ್ನು ಉಂಟುಮಾಡುವುದಿಲ್ಲ ಎಂದು ಏಕೆ ಹೇಳಸಾಧ್ಯವಿದೆ?

8. ಅನೇಕವೇಳೆ ಆಧ್ಯಾತ್ಮಿಕ ದಣಿವಿಗೆ ಯಾವುದು ಕಾರಣವಾಗಿರುತ್ತದೆ?

9. ಪ್ರಾಪಂಚಿಕ ಬೆನ್ನಟ್ಟುವಿಕೆಗಳು ನಮ್ಮನ್ನು ಹೇಗೆ ಕುಗ್ಗಿಸಿಬಿಡಬಲ್ಲವು?

10. ಬೀಜಬಿತ್ತುವವನ ಕುರಿತಾದ ಯೇಸುವಿನ ಸಾಮ್ಯದಿಂದ ಐಶ್ವರ್ಯದ ಬಗ್ಗೆ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

11. ನಮ್ಮನ್ನು ಕುಗ್ಗಿಸಿಬಿಡಸಾಧ್ಯವಿರುವಂಥ ವಸ್ತುಗಳನ್ನು ನಾವು ಹೇಗೆ ತೆಗೆದುಹಾಕಬಹುದು?

12. ನಮ್ಮ ಸ್ವಂತ ತಪ್ಪುಗಳ ವಿಷಯದಲ್ಲಿ ನಾವೇನನ್ನು ಮನಗಾಣುವ ಅಗತ್ಯವಿದೆ?

13. ನಮ್ಮ ಶುಶ್ರೂಷೆಯ ಬಗ್ಗೆ ಸಮತೂಕದ ದೃಷ್ಟಿಕೋನವನ್ನಿಡಲು ನ್ಯಾಯಸಮ್ಮತತೆಯು ನಮಗೆ ಹೇಗೆ ಸಹಾಯಮಾಡಬಲ್ಲದು?

14, 15. ನಮ್ಮ ಶಾರೀರಿಕ ಹಾಗೂ ಭಾವನಾತ್ಮಕ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿ ನಾವು ಪ್ರಾಯೋಗಿಕ ವಿವೇಕವನ್ನು ಹೇಗೆ ತೋರಿಸಬಲ್ಲೆವು?

16, 17. (ಎ) ನಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ನೋಡಿಕೊಳ್ಳುವುದು ಅತ್ಯಂತ ಪ್ರಾಮುಖ್ಯವಾದ ಸಂಗತಿಯಾಗಿದೆ ಏಕೆ? (ಬಿ) ನಮ್ಮ ದೈನಂದಿನ ನಿಯತಕ್ರಮದಲ್ಲಿ ನಾವು ಏನನ್ನು ಒಳಗೂಡಿಸಬೇಕು?

18. ವೃದ್ಧರಾಗಿರುವ ಅಥವಾ ಅನಾರೋಗ್ಯದಿಂದಿರುವ ನಂಬಿಗಸ್ತ ಜನರಿಗೆ ಬೈಬಲ್‌ ಯಾವ ಸಾಂತ್ವನವನ್ನು ನೀಡುತ್ತದೆ?

19. ಒಳ್ಳೇದನ್ನು ಮಾಡುವುದರಲ್ಲಿ ಕಾರ್ಯಮಗ್ನರಾಗಿರುವ ಮೂಲಕ ನಾವು ಹೇಗೆ ಪ್ರಯೋಜನವನ್ನು ಪಡೆಯುತ್ತೇವೆ?

20. ನಿರುತ್ತೇಜನವನ್ನು ಹೊಡೆದೋಡಿಸಲಿಕ್ಕಾಗಿ ನಾವು ಯಾರ ಸಹವಾಸದಿಂದ ದೂರವಿರಬೇಕು?

21. ಕ್ರೈಸ್ತ ಕೂಟಗಳಲ್ಲಿ ನಾವು ಇತರರಿಗೆ ಹೇಗೆ ಉತ್ತೇಜನದಾಯಕವಾಗಿರಸಾಧ್ಯವಿದೆ?

22. ನಮ್ಮ ಅಪರಿಪೂರ್ಣ ಮಾನವ ಸ್ವಭಾವದ ಹೊರತಾಗಿಯೂ ನಾವು ಏಕೆ ಧೈರ್ಯದಿಂದಿರಬಲ್ಲೆವು?

[ಪುಟ 23ರಲ್ಲಿರುವ ಚಿತ್ರ]

ದೀರ್ಘಕಾಲಿಕ ನಿರುತ್ತೇಜನವು ಅಪೊಸ್ತಲರಿಗೆ ಕಳವಳವನ್ನು ಉಂಟುಮಾಡಸಾಧ್ಯವಿದೆ ಎಂದು ಯೇಸುವಿಗೆ ತಿಳಿದಿತ್ತು

[ಪುಟ 24ರಲ್ಲಿರುವ ಚಿತ್ರ]

ಕೆಲವರು ನಿರ್ದಿಷ್ಟ ಹವ್ಯಾಸಗಳನ್ನು ಮತ್ತು ಅನಗತ್ಯವಾದ ವೈಯಕ್ತಿಕ ಯೋಜನೆಗಳನ್ನು ಕೈಬಿಟ್ಟಿದ್ದಾರೆ

[ಪುಟ 26ರಲ್ಲಿರುವ ಚಿತ್ರ]

ನಮ್ಮ ಇತಿಮಿತಿಗಳ ನಡುವೆಯೂ ನಾವು ಸಲ್ಲಿಸುವ ಪೂರ್ಣಹೃದಯದ ಆರಾಧನೆಯನ್ನು ಯೆಹೋವನು ಅತ್ಯಮೂಲ್ಯವಾಗಿ ಪರಿಗಣಿಸುತ್ತಾನೆ