ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ” ಒಬ್ಬ ಧೀರ “ಅಲೆಮಾರಿ”

“ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ” ಒಬ್ಬ ಧೀರ “ಅಲೆಮಾರಿ”

“ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ” ಒಬ್ಬ ಧೀರ “ಅಲೆಮಾರಿ”

ಜಾರ್ಜ್‌ ಬಾರೊ 18ರ ಪ್ರಾಯದಲ್ಲೇ 12 ಭಾಷೆಗಳನ್ನು ಕಲಿತಿದ್ದನು ಎಂದು ವರದಿಸಲಾಗಿದೆ. ಎರಡು ವರ್ಷಗಳ ಬಳಿಕ ಅವನು 20 ಬೇರೆ ಬೇರೆ ಭಾಷೆಗಳನ್ನು “ಸರಾಗವಾಗಿ ಮತ್ತು ಉತ್ಕೃಷ್ಟ ಶೈಲಿಯಲ್ಲಿ” ಭಾಷಾಂತರಿಸಲು ಶಕ್ತನಾಗಿದ್ದನು.

ಇಸವಿ 1833ರಲ್ಲಿ ಇಂಗ್ಲೆಂಡ್‌ನ ಲಂಡನಿನಲ್ಲಿರುವ ‘ಬ್ರಿಟಿಷ್‌ ಮತ್ತು ವಿದೇಶೀ ಬೈಬಲ್‌ ಸೊಸೈಟಿ’ಯು, ಅಸಾಧಾರಣ ಪ್ರತಿಭೆಯುಳ್ಳ ಈ ಮನುಷ್ಯನನ್ನು ಇಂಟರ್‌ವ್ಯೂಗಾಗಿ ಆಮಂತ್ರಿಸಿತು. ತನ್ನ ಪ್ರಯಾಣಕ್ಕಾಗಿ ಅವನ ಬಳಿ ಹಣವಿಲ್ಲದಿದ್ದರೂ, ಈ ಸದವಕಾಶವನ್ನು ಸದುಪಯೋಗಿಸಿಕೊಳ್ಳಲು ಅವನು ನಿರ್ಧರಿಸಿದನು. ಆಗ 30 ವರ್ಷದವನಾಗಿದ್ದ ಬಾರೊ, ನಾರ್‌ವಿಚ್‌ನಲ್ಲಿದ್ದ ತನ್ನ ಮನೆಯಿಂದ 180 ಕಿಲೊಮೀಟರುಗಳಷ್ಟು ದೂರ ನಡೆದನು; ಅದೂ ಕೇವಲ 28 ತಾಸುಗಳಲ್ಲಿ ಇಷ್ಟು ದೂರ ನಡೆದನು.

ಬೈಬಲ್‌ ಸೊಸೈಟಿಯು ಅವನಿಗೆ ಒಂದು ಕಷ್ಟಕರ ಕೆಲಸವನ್ನು ವಹಿಸಿಕೊಟ್ಟಿತು. ಅದು ಚೀನಾದ ಕೆಲವು ಭಾಗಗಳಲ್ಲಿ ಉಪಯೋಗಿಸಲ್ಪಡುವ ಮಂಚು ಭಾಷೆಯನ್ನು ಆರೇ ತಿಂಗಳುಗಳಲ್ಲಿ ಕಲಿಯುವುದಾಗಿತ್ತು. ಅವನು ಒಂದು ವ್ಯಾಕರಣ ಪುಸ್ತಕವನ್ನು ಕೇಳಿಕೊಂಡನಾದರೂ, ಅವರು ಅವನಿಗೆ ಮಂಚು ಭಾಷೆಯಲ್ಲಿ ಮತ್ತಾಯನ ಸುವಾರ್ತೆಯ ಒಂದು ಪ್ರತಿಯನ್ನು ಹಾಗೂ ಒಂದು ಮಂಚು-ಫ್ರೆಂಚ್‌ ಶಬ್ದಕೋಶವನ್ನು ಮಾತ್ರ ಕೊಡಸಾಧ್ಯವಾಯಿತು. ಆದರೂ, 19 ವಾರಗಳೊಳಗೆ ಅವನು ಲಂಡನಿಗೆ ಪತ್ರ ಬರೆದು, “ದೇವರ ಸಹಾಯದಿಂದ ನಾನು ಮಂಚು ಭಾಷೆಯಲ್ಲಿ ಪಾರಂಗತನಾಗಿದ್ದೇನೆ” ಎಂದು ತಿಳಿಸಿದನು. ಈ ಸಾಧನೆಯು ಇನ್ನಷ್ಟು ಗಮನಾರ್ಹವಾದದ್ದಾಗಿತ್ತು, ಏಕೆಂದರೆ ಅದೇ ಸಮಯದಲ್ಲಿ ಅವನು ಮೆಕ್ಸಿಕೋದ ಮೂಲನಿವಾಸಿಗಳ ಭಾಷೆಗಳಲ್ಲಿ ಒಂದಾಗಿರುವ ನವಾಟಲ್‌ ಭಾಷೆಯಲ್ಲಿ ಲೂಕನ ಸುವಾರ್ತೆಯನ್ನು ತಿದ್ದುತ್ತಿದ್ದನು ಎಂದು ವರದಿಸಲಾಗಿದೆ.

ಮಂಚು ಭಾಷೆಯಲ್ಲಿ ಬೈಬಲ್‌

ಹದಿನೇಳನೆಯ ಶತಮಾನದಲ್ಲಿ, ಮಂಗೋಲಿಯನ್‌ ವೇಗೂರ್‌ ಅಕ್ಷರಮಾಲೆಯಿಂದ ತೆಗೆದ ಒಂದು ಲಿಪಿಯನ್ನು ಉಪಯೋಗಿಸಿ ಪ್ರಥಮವಾಗಿ ಮಂಚು ಭಾಷೆಯು ಲಿಖಿತ ರೂಪದಲ್ಲಿ ಕಂಡುಬಂದಾಗ, ಇದು ಚೀನಾದ ಸರಕಾರದಿಂದ ಉಪಯೋಗಿಸಲ್ಪಡುವ ಒಂದು ಭಾಷೆಯಾಗಿ ಪರಿಣಮಿಸಿತು. ಸಕಾಲದಲ್ಲಿ ಇದರ ಉಪಯೋಗವು ಕ್ಷೀಣಿಸಿದರೂ, ‘ಬ್ರಿಟಿಷ್‌ ಮತ್ತು ವಿದೇಶೀ ಬೈಬಲ್‌ ಸೊಸೈಟಿ’ಯ ಸದಸ್ಯರು ಮಾತ್ರ ಮಂಚು ಭಾಷೆಯಲ್ಲಿ ಬೈಬಲುಗಳನ್ನು ಮುದ್ರಿಸಿ ವಿತರಿಸಲು ಅತ್ಯಾತುರರಾಗಿದ್ದರು. ಇಸವಿ 1822ರಷ್ಟಕ್ಕೆ ಅವರು ಸ್ಟಿಯಿಪನ್‌ ವಿ. ಲಿಪೋಫ್ಟ್‌ಸಫ್‌ನಿಂದ ಭಾಷಾಂತರಿಸಲ್ಪಟ್ಟ ಮತ್ತಾಯನ ಸುವಾರ್ತೆಯ 550 ಪ್ರತಿಗಳ ಮುದ್ರಣಕ್ಕೆ ಆರ್ಥಿಕ ನೆರವನ್ನು ನೀಡಿದ್ದರು. ಸ್ಟಿಯಿಪನ್‌ ಎಂಬಾತನು ರಷ್ಯನ್‌ ವಿದೇಶೀ ಆಫೀಸಿನ ಒಬ್ಬ ಸದಸ್ಯನಾಗಿದ್ದು, ಚೀನಾದಲ್ಲಿ 20 ವರ್ಷಗಳ ವರೆಗೆ ಇದ್ದನು. ಮತ್ತಾಯನ ಸುವಾರ್ತೆಯು ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಮುದ್ರಿಸಲ್ಪಟ್ಟಿತ್ತು, ಆದರೆ ಬೆರಳೆಣಿಕೆಯಷ್ಟು ಪ್ರತಿಗಳು ವಿತರಿಸಲ್ಪಟ್ಟ ಬಳಿಕ ಉಳಿದ ಪ್ರತಿಗಳು ಒಂದು ನೆರೆಯಿಂದ ನಾಶಗೊಳಿಸಲ್ಪಟ್ಟವು.

ತದನಂತರ, ಇಡೀ ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳ ಭಾಷಾಂತರವನ್ನು ಮಾಡಲಾಯಿತು. 1834ರಲ್ಲಿ, ಅಧಿಕಾಂಶ ಹೀಬ್ರು ಶಾಸ್ತ್ರವಚನಗಳ ಪುರಾತನ ಹಸ್ತಪ್ರತಿ ಆವೃತ್ತಿಯ ಆವಿಷ್ಕಾರವು ಬೈಬಲಿನಲ್ಲಿನ ಆಸಕ್ತಿಯನ್ನು ಹೆಚ್ಚಿಸಿತು. ಈಗಾಗಲೇ ಅಸ್ತಿತ್ವದಲ್ಲಿರುವ ಮಂಚು ಬೈಬಲಿನ ಪರಿಷ್ಕರಣವನ್ನು ಸಂಘಟಿಸಿ, ಉಳಿದ ಭಾಷಾಂತರವನ್ನು ಯಾರು ಪೂರ್ಣಗೊಳಿಸಸಾಧ್ಯವಿತ್ತು? ‘ಬ್ರಿಟಿಷ್‌ ಮತ್ತು ವಿದೇಶೀ ಬೈಬಲ್‌ ಸೊಸೈಟಿ’ಯು ತನ್ನ ಪರವಾಗಿ ಈ ಕೆಲಸವನ್ನು ನಿರ್ವಹಿಸಲು ಜಾರ್ಜ್‌ ಬಾರೋನನ್ನು ಕಳುಹಿಸಿತು.

ರಷ್ಯಕ್ಕೆ

ಸೆಂಟ್‌ ಪೀಟರ್ಸ್‌ಬರ್ಗ್‌ಗೆ ಆಗಮಿಸಿದ ಬಳಿಕ, ಇನ್ನೂ ನಿಷ್ಕೃಷ್ಟವಾಗಿ ಬೈಬಲ್‌ ಮೂಲಪಾಠದ ಕರಡು ತಿದ್ದುವಿಕೆ ಮಾಡಿ ಅದನ್ನು ಮುದ್ರಣಕ್ಕೆ ಸಿದ್ಧಪಡಿಸಲು ಶಕ್ತನಾಗಲಿಕ್ಕಾಗಿ ಬಾರೊ ಮಂಚು ಭಾಷೆಯ ಗಾಢವಾದ ಅಧ್ಯಯನವನ್ನು ಮಾಡುವುದರಲ್ಲಿ ಅತ್ಯಧಿಕ ಸಮಯವನ್ನು ವ್ಯಯಿಸಿದನು. ಹಾಗಿದ್ದರೂ, ಈ ನೇಮಕವು ತುಂಬ ಪ್ರಯಾಸಕರವಾದದ್ದಾಗಿತ್ತು, ಮತ್ತು ದ ನ್ಯೂ ಟೆಸ್ಟಮೆಂಟ್‌ಗಾಗಿರುವ ಅಚ್ಚುಮೊಳೆಯನ್ನು ಜೋಡಿಸುವುದರಲ್ಲಿ ಸಹಾಯಮಾಡುತ್ತಾ ಅವನು ದಿನವೊಂದಕ್ಕೆ 13 ತಾಸುಗಳ ವರೆಗೆ ಕೆಲಸಮಾಡಿದನು. ಕಾಲಕ್ರಮೇಣ ಈ ಬೈಬಲು “ಪೌರಸ್ತ್ಯ ಕೃತಿಯ ಸುಂದರ ಆವೃತ್ತಿ” ಎಂದು ವರ್ಣಿಸಲ್ಪಟ್ಟಿತು. 1835ರಲ್ಲಿ ಒಂದು ಸಾವಿರ ಪ್ರತಿಗಳು ಮುದ್ರಿಸಲ್ಪಟ್ಟವು. ಆದರೆ ಅವುಗಳನ್ನು ಚೀನಾಕ್ಕೆ ಕೊಂಡೊಯ್ದು ಅಲ್ಲಿಯೂ ವಿತರಿಸಬೇಕೆಂಬ ಬಾರೋನ ಯೋಜನೆಯು ಕೈಗೂಡಲಿಲ್ಲ. ತಮ್ಮ ನೆರೆಯ ದೇಶವಾದ ಚೀನಾದೊಂದಿಗಿರುವ ಸ್ನೇಹಪರ ಸಂಬಂಧವನ್ನು ಅಪಾಯಕ್ಕೊಳಪಡಿಸಬಹುದಾದ ಒಂದು ಮಿಷನೆರಿ ಸಾಹಸವಾಗಿ ಇದು ಪರಿಗಣಿಸಲ್ಪಡಸಾಧ್ಯವಿದೆ ಎಂಬ ಭಯದಿಂದ ರಷ್ಯದ ಸರಕಾರವು, ಬಾರೊ ತನ್ನೊಂದಿಗೆ “ಒಂದೇ ಒಂದು ಮಂಚು ಬೈಬಲನ್ನು” ಕೊಂಡೊಯ್ಯುವುದಾದರೂ ಚೀನೀ ಗಡಿಯ ತನಕ ಪ್ರಯಾಣಿಸಲು ಅವನಿಗೆ ಅನುಮತಿ ನೀಡಲು ನಿರಾಕರಿಸಿತು.

ಸುಮಾರು ಹತ್ತು ವರ್ಷಗಳ ಬಳಿಕ ಕೆಲವೊಂದು ಪ್ರತಿಗಳು ವಿತರಿಸಲ್ಪಟ್ಟವು, ಮತ್ತು 1859ರಲ್ಲಿ ಮತ್ತಾಯ ಹಾಗೂ ಮಾರ್ಕನ ಸುವಾರ್ತೆಯ ಭಾಷಾಂತರಗಳು​—⁠ಸಮಾಂತರ ಅಂಕಣಗಳಲ್ಲಿ ಮಂಚು ಮತ್ತು ಚೀನೀ ಭಾಷೆಯಲ್ಲಿ​—⁠ಸಿದ್ಧವಾದವು. ಆದರೂ, ಅಷ್ಟರಲ್ಲಾಗಲೇ ಮಂಚು ಭಾಷೆಯನ್ನು ಓದಶಕ್ತರಾಗಿದ್ದ ಅನೇಕರು ಚೀನೀ ಭಾಷೆಯನ್ನು ಓದಲು ಇಷ್ಟಪಟ್ಟರು, ಮತ್ತು ಮಂಚು ಭಾಷೆಯ ಪೂರ್ಣ ಬೈಬಲಿಗಾಗಿರುವ ಪ್ರತೀಕ್ಷೆಗಳು ಕ್ರಮೇಣವಾಗಿ ಕುಂದತೊಡಗಿದವು. ವಾಸ್ತವದಲ್ಲಿ ಮಂಚು ಭಾಷೆಯು ಕಣ್ಮರೆಯಾಗುತ್ತಿದ್ದು, ಅತಿ ಬೇಗನೆ ಚೀನೀ ಭಾಷೆಯಿಂದ ಸ್ಥಾನಾಂತರಿಸಲ್ಪಡಲಿಕ್ಕಿತ್ತು. ಚೀನಾ ದೇಶವು 1912ರಷ್ಟಕ್ಕೆ ಗಣರಾಜ್ಯವಾದಾಗ ಈ ಬದಲಾವಣೆಯು ಪೂರ್ಣಗೊಂಡಿತು.

ಐಬೀರಿಯನ್‌ ದ್ವೀಪಕಲ್ಪ

ತನ್ನ ಅನುಭವದಿಂದ ಉತ್ತೇಜಿತನಾದ ಜಾರ್ಜ್‌ ಬಾರೊ ಲಂಡನಿಗೆ ಹಿಂದಿರುಗಿದನು. ಸಮಯಾನಂತರ ಅವನೇ ತಿಳಿಯಪಡಿಸಿದಂತೆ, 1835ರಲ್ಲಿ ಅವನು “ಕ್ರೈಸ್ತಮತದ ಸತ್ಯಗಳನ್ನು ಸ್ವೀಕರಿಸಲಿಕ್ಕಾಗಿ ಜನರು ಎಷ್ಟರ ಮಟ್ಟಿಗೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳ”ಲಿಕ್ಕಾಗಿ ಪೋರ್ಚುಗಲ್‌ ಹಾಗೂ ಸ್ಪೆಯ್ನ್‌ಗೆ ಕಳುಹಿಸಲ್ಪಟ್ಟನು. ಆ ಸಮಯದಲ್ಲಿ ಈ ಎರಡೂ ದೇಶಗಳಲ್ಲಿ ವ್ಯಾಪಕವಾದ ರಾಜಕೀಯ ಹಾಗೂ ಸಾಮಾಜಿಕ ಅಶಾಂತಿಯು ಅಸ್ತಿತ್ವದಲ್ಲಿದ್ದ ಕಾರಣ, ‘ಬ್ರಿಟಿಷ್‌ ಮತ್ತು ವಿದೇಶೀ ಬೈಬಲ್‌ ಸೊಸೈಟಿ’ಯು ಅವುಗಳನ್ನು ಮುಟ್ಟಿರಲೇ ಇಲ್ಲ. ಪೋರ್ಚುಗಲ್‌ನ ಗ್ರಾಮೀಣ ಸಮುದಾಯಗಳಲ್ಲಿ ವಾಸಿಸುತ್ತಿದ್ದ ಜನರೊಂದಿಗೆ ಬೈಬಲಿನ ಕುರಿತಾದ ಸಂಭಾಷಣೆಗಳಲ್ಲಿ ಒಳಗೂಡುವುದರಲ್ಲಿ ಬಾರೊ ಆನಂದಪಟ್ಟನು, ಆದರೆ ಅಲ್ಪ ಕಾಲಾವಧಿಯೊಳಗೆ ಅವನು ಅಲ್ಲಿ ಎದುರಿಸಿದಂಥ ಧಾರ್ಮಿಕ ನಿರಾಸಕ್ತಿ ಹಾಗೂ ತಾತ್ಸಾರಮನೋಭಾವವು ಸ್ಪೆಯ್ನ್‌ಗೆ ಪ್ರಯಾಣಿಸುವಂತೆ ಅವನನ್ನು ಪ್ರಚೋದಿಸಿತು.

ಸ್ಪೆಯ್ನ್‌ ದೇಶವು ಭಿನ್ನವಾದೊಂದು ಪಂಥಾಹ್ವಾನವನ್ನು ಒಡ್ಡಿತು​—⁠ವಿಶೇಷವಾಗಿ ಅಲ್ಲಿನ ಜಿಪ್ಸಿ ಜನರೊಂದಿಗೆ ಅವನು ಅತಿ ಬೇಗನೆ ಆಪ್ತ ನೆಂಟುತನವನ್ನು ಬೆಳೆಸಿಕೊಂಡನು, ಏಕೆಂದರೆ ಅವನು ಅವರ ಭಾಷೆಯನ್ನು ಮಾತಾಡಶಕ್ತನಾಗಿದ್ದನು. ಅವನು ಇಲ್ಲಿಗೆ ಬಂದ ಸ್ವಲ್ಪ ಸಮಯಾನಂತರ “ಹೊಸ ಒಡಂಬಡಿಕೆ”ಯನ್ನು ಕೈಟಾನೋ ಎಂಬ ಸ್ಪ್ಯಾನಿಷ್‌ ಜಿಪ್ಸಿ ಭಾಷೆಗೆ ಭಾಷಾಂತರಿಸಲು ಆರಂಭಿಸಿದನು. ಈ ಕೆಲಸದ ಒಂದು ಹಂತದಲ್ಲಿ, ತನಗೆ ಸಹಾಯಮಾಡಲಿಕ್ಕಾಗಿ ಅವನು ಇಬ್ಬರು ಜಿಪ್ಸಿ ಸ್ತ್ರೀಯರನ್ನು ಆಹ್ವಾನಿಸಿದನು. ಅವನು ಅವರಿಗೆ ಸ್ಪ್ಯಾನಿಷ್‌ ಭಾಷಾಂತರವನ್ನು ಓದಿಹೇಳುತ್ತಿದ್ದನು, ತದನಂತರ ಅವರು ಅದನ್ನು ಭಾಷಾಂತರಿಸುವಂತೆ ಕೇಳಿಕೊಳ್ಳುತ್ತಿದ್ದನು. ಈ ರೀತಿಯಲ್ಲಿ ಅವನು ಜಿಪ್ಸಿ ನುಡಿಗಟ್ಟುಗಳ ಸರಿಯಾದ ಉಪಯೋಗವನ್ನು ಕಲಿತನು. ಈ ಪ್ರಯತ್ನದ ಫಲವಾಗಿ, 1838ರ ವಸಂತಕಾಲದಲ್ಲಿ ಲೂಕನ ಸುವಾರ್ತೆಯು ಪ್ರಕಟಿಸಲ್ಪಟ್ಟಿತು; ಇದು ಒಬ್ಬ ಬಿಷಪನು ಹೀಗೆ ಉದ್ಗರಿಸುವಂತೆ ಮಾಡಿತು: “ಜಿಪ್ಸಿ ಭಾಷೆಯ ಸಹಾಯದಿಂದ ಇವನು ಇಡೀ ಸ್ಪೆಯ್ನನ್ನೇ ಮತಾಂತರಿಸಿಬಿಡುವನು.”

“ಶಾಸ್ತ್ರವಚನಗಳನ್ನು ಬಾಸ್ಕ್‌ ಭಾಷೆಗೆ ಭಾಷಾಂತರಿಸುವ ಅರ್ಹತೆಯುಳ್ಳ ವ್ಯಕ್ತಿಯನ್ನು” ಕಂಡುಹಿಡಿಯುವ ಅಧಿಕಾರ ಜಾರ್ಜ್‌ ಬಾರೊಗೆ ಕೊಡಲ್ಪಟ್ಟಿತ್ತು. ಈ ಕೆಲಸವು ಡಾ. ಓಟೇಸಾ ಎಂಬ ವ್ಯಕ್ತಿಗೆ ಕೊಡಲ್ಪಟ್ಟಿತು; ಇವನು ಒಬ್ಬ ವೈದ್ಯನಾಗಿದ್ದು, “ಆ ಉಪಭಾಷೆಯಲ್ಲಿ ಪಾರಂಗತನಾಗಿದ್ದನು, ಈ ಭಾಷೆ ನನಗೂ ಸ್ವಲ್ಪ ಮಟ್ಟಿಗೆ ಗೊತ್ತಿದೆ” ಎಂದು ಬಾರೊ ಬರೆದನು. 1838ರಲ್ಲಿ, ಸ್ಪ್ಯಾನಿಷ್‌ ಬಾಸ್ಕ್‌ ಭಾಷೆಯಲ್ಲಿ ಸಿದ್ಧವಾದ ಪ್ರಥಮ ಬೈಬಲ್‌ ಪುಸ್ತಕವು ಲೂಕನ ಸುವಾರ್ತೆಯಾಗಿತ್ತು.

ಸಾಮಾನ್ಯ ಜನರಿಗೆ ಜ್ಞಾನೋದಯವನ್ನುಂಟುಮಾಡುವ ಬಯಕೆಯಿಂದ ಪ್ರಚೋದಿತನಾದ ಬಾರೊ, ಗ್ರಾಮೀಣ ಸಮುದಾಯಗಳಲ್ಲಿ ವಾಸಿಸುತ್ತಿದ್ದ ಬಡಜನರ ನಡುವೆ ಬೈಬಲಿನ ಪುಸ್ತಕಗಳನ್ನು ವಿತರಿಸಲಿಕ್ಕಾಗಿ ದೀರ್ಘವಾದ, ಅನೇಕವೇಳೆ ಅಪಾಯಕರವಾದ ಪ್ರಯಾಣಗಳನ್ನು ಕೈಗೊಂಡನು. ಅವರನ್ನು ಧಾರ್ಮಿಕ ಅಜ್ಞಾನ ಹಾಗೂ ಮೂಢನಂಬಿಕೆಯಿಂದ ವಿಮೋಚಿಸಬೇಕೆಂಬುದೇ ಅವನ ಆಲೋಚನೆಯಾಗಿತ್ತು. ಅವರು ಖರೀದಿಸುತ್ತಿದ್ದ ಶೇಷಪಾಪಕ್ಷಮಾಪಣೆಗಳ ನಿಷ್ಪ್ರಯೋಜನವನ್ನು ಬಯಲುಪಡಿಸುತ್ತಾ ಅವನು, ಉದಾಹರಣೆಗಾಗಿ, ಹೀಗೆ ವಾದಿಸುತ್ತಿದ್ದನು: “ಒಳ್ಳೆಯವನಾಗಿರುವ ದೇವರು ಪಾಪದ ವಿಕ್ರಯವನ್ನು ಸಮ್ಮತಿಸಸಾಧ್ಯವಿದೆಯೋ?” ಆದರೆ ಬೈಬಲ್‌ ಸೊಸೈಟಿಯು, ಸ್ಥಾಪಿತ ನಂಬಿಕೆಗಳ ಮೇಲಿನ ಇಂಥ ಆಕ್ರಮಣವು ತಮ್ಮ ಚಟುವಟಿಕೆಗಳ ಮೇಲೆ ನಿಷೇಧವನ್ನು ತಂದೊಡ್ಡಬಹುದೆಂಬ ಭಯದಿಂದ, ಶಾಸ್ತ್ರವಚನಗಳ ವಿತರಣೆಯ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುವಂತೆ ಅವನಿಗೆ ನಿರ್ದೇಶನ ನೀಡಿತು.

ಎಲ್‌ ನ್ಯೂವೋ ಟೆಸ್ಟಾಮೆಂಟೋ ಎಂಬ ಸ್ಪ್ಯಾನಿಷ್‌ ಹೊಸ ಒಡಂಬಡಿಕೆಯನ್ನು ಅದರ ರೋಮನ್‌ ಕ್ಯಾಥೊಲಿಕ್‌ ಸೈದ್ಧಾಂತಿಕ ಟಿಪ್ಪಣಿಗಳಿಲ್ಲದೆ ಮುದ್ರಿಸಲು ಬಾರೋನಿಗೆ ಮೌಖಿಕ ಅನುಮತಿ ಸಿಕ್ಕಿತು. ಯಾರು ಈ ಭಾಷಾಂತರವನ್ನು ಅಪಾಯಕರವೆಂದು ವರ್ಣಿಸಿ, ಈ ಕೃತಿಯನ್ನು “ಅನುಚಿತ ಗ್ರಂಥ” ಎಂದು ಕರೆದರೋ ಆ ಪ್ರಧಾನ ಮಂತ್ರಿಯ ಆರಂಭದ ವಿರೋಧದ ಹೊರತಾಗಿಯೂ ಅವನಿಗೆ ಮುದ್ರಿಸಲು ಅನುಮತಿ ದೊರಕಿತ್ತು. ನಂತರ ಬಾರೊ ಈ ಸ್ಪ್ಯಾನಿಷ್‌ ಹೊಸ ಒಡಂಬಡಿಕೆಯನ್ನು ಮಾರಾಟಮಾಡಲಿಕ್ಕಾಗಿ ಮಾಡ್ರಿಡ್‌ನಲ್ಲಿ ಒಂದು ಡಿಪೋವನ್ನು ತೆರೆದನು; ಈ ಕೃತ್ಯವು ಧಾರ್ಮಿಕ ಮುಖಂಡರು ಮತ್ತು ಐಹಿಕ ಅಧಿಕಾರಿಗಳೊಂದಿಗಿನ ಅವನ ಸಂಘರ್ಷಕ್ಕೆ ನಡಿಸಿತು. ಅವನು 12 ದಿನಗಳ ವರೆಗೆ ಸೆರೆಯಲ್ಲಿ ಹಾಕಲ್ಪಟ್ಟನು. ಬಾರೊ ಪ್ರತಿಭಟಿಸಿದಾಗ, ಗುಪ್ತವಾಗಿ ಅಲ್ಲಿಂದ ಹೊರಟುಹೋಗುವಂತೆ ಅವನಿಗೆ ಹೇಳಲಾಯಿತು. ತನ್ನ ಬಂಧನವು ಕಾನೂನುಬಾಹಿರವಾದದ್ದು ಎಂಬುದನ್ನು ಚೆನ್ನಾಗಿ ಅರಿತವನಾಗಿದ್ದ ಅವನು ಅಪೊಸ್ತಲ ಪೌಲನ ಉದಾಹರಣೆಯನ್ನು ಉಲ್ಲೇಖಿಸಿ, ತನ್ನ ಹೆಸರಿಗೆ ಯಾವುದೇ ಕಳಂಕವಿಲ್ಲದೆ ಯೋಗ್ಯವಾದ ರೀತಿಯಲ್ಲಿ ದೋಷಮುಕ್ತಗೊಳಿಸುವ ತನಕ ಅಲ್ಲಿಯೇ ಉಳಿಯುವ ಆಯ್ಕೆಯನ್ನು ಮಾಡಿದನು.​—⁠ಅ. ಕೃತ್ಯಗಳು 16:⁠37.

ಇಸವಿ 1840ರಲ್ಲಿ ತಮ್ಮ ಹುರುಪಿನ ಪ್ರತಿನಿಧಿಯು ಸ್ಪೆಯ್ನನ್ನು ಬಿಟ್ಟುಹೋಗುವಷ್ಟರಲ್ಲಿ, ಬೈಬಲ್‌ ಸೊಸೈಟಿಯು ಹೀಗೆ ವರದಿಸಸಾಧ್ಯವಿತ್ತು: “ಕಳೆದ ಐದೇ ವರ್ಷಗಳಲ್ಲಿ ಸ್ಪೆಯ್ನ್‌ನಲ್ಲಿ ಶಾಸ್ತ್ರವಚನಗಳ ಸುಮಾರು 14,000 ಪ್ರತಿಗಳು ವಿತರಿಸಲ್ಪಟ್ಟಿವೆ.” ಇದರಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದ ಬಾರೊ, ತನ್ನ ಸ್ಪ್ಯಾನಿಷ್‌ ಅನುಭವಗಳನ್ನು ಈ ಮಾತುಗಳಲ್ಲಿ ಸಾರಾಂಶವಾಗಿ ನುಡಿದನು: “ಅವು ನನ್ನ ಜೀವನದ ಅತ್ಯಂತ ಸಂತೋಷಕರ ವರ್ಷಗಳಾಗಿದ್ದವು.”

ಪ್ರಥಮವಾಗಿ 1842ರಲ್ಲಿ ಪ್ರಕಟಿಸಲ್ಪಟ್ಟ​—⁠ಮತ್ತು ಆಗಿನ್ನೂ ಮುದ್ರಣದ ಹಂತದಲ್ಲಿದ್ದ​—⁠ದ ಬೈಬಲ್‌ ಇನ್‌ ಸ್ಪೆಯ್ನ್‌ ಪುಸ್ತಕವು, ತನ್ನ ಪ್ರಯಾಣಗಳು ಹಾಗೂ ಸಾಹಸಗಳ ಕುರಿತಾದ ಜಾರ್ಜ್‌ ಬಾರೋನ ಸುಸ್ಪಷ್ಟ, ವೈಯಕ್ತಿಕ ವೃತ್ತಾಂತವಾಗಿದೆ. ದಿಢೀರ್‌ ಯಶಸ್ವಿಯನ್ನು ಪಡೆದ ಈ ಪುಸ್ತಕದಲ್ಲಿ, ಅವನು ತನ್ನನ್ನು “ಸುವಾರ್ತೆಯನ್ನು ಹಬ್ಬಿಸಲಿಕ್ಕಾಗಿ ಅಲೆಮಾರಿ” ಎಂದು ಕರೆದುಕೊಂಡನು. ಅವನು ಬರೆದುದು: “ಹಳ್ಳತಿಟ್ಟುಗಳುಳ್ಳ ಬೆಟ್ಟಗಳು ಮತ್ತು ಪರ್ವತಗಳ ನಡುವೆ ಇರುವ ರಹಸ್ಯವಾದ ಹಾಗೂ ಪ್ರತ್ಯೇಕವಾದ ಸ್ಥಳಗಳನ್ನು ಸಂದರ್ಶಿಸುವುದು, ಮತ್ತು ನನ್ನದೇ ಆದ ರೀತಿಯಲ್ಲಿ ಕ್ರಿಸ್ತನ ಕುರಿತು ಜನರೊಂದಿಗೆ ಮಾತಾಡುವುದು ನನ್ನ ಬಯಕೆಯಾಗಿತ್ತು.”

ಇಷ್ಟೊಂದು ಹುರುಪಿನಿಂದ ಶಾಸ್ತ್ರವಚನಗಳನ್ನು ವಿತರಿಸುವ ಹಾಗೂ ಭಾಷಾಂತರಿಸುವ ಮೂಲಕ ಜಾರ್ಜ್‌ ಬಾರೋ ಇತರರಿಗಾಗಿ ತಳಪಾಯವನ್ನು ಹಾಕಿದನು. ಇದು ಖಂಡಿತವಾಗಿಯೂ ಒಂದು ಅಮೂಲ್ಯ ಸುಯೋಗವಾಗಿತ್ತು.

[ಪುಟ 29ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಬೈಬಲನ್ನು ಭಾಷಾಂತರಿಸುವ ಹಾಗೂ ವಿತರಿಸುವ ಜಾರ್ಜ್‌ ಬಾರೋನ ಪ್ರಯತ್ನಗಳು ಅವನನ್ನು (1) ಇಂಗ್ಲೆಂಡ್‌ನಿಂದ (2) ರಷ್ಯ, (3) ಪೋರ್ಚುಗಲ್‌, ಮತ್ತು (4) ಸ್ಪೆಯ್ನ್‌ಗೆ ಕರೆದೊಯ್ದವು

[ಕೃಪೆ]

Mountain High Maps® Copyright © 1997 Digital Wisdom, Inc.

[ಪುಟ 28ರಲ್ಲಿರುವ ಚಿತ್ರ]

1835ರಲ್ಲಿ ಮುದ್ರಿಸಲ್ಪಟ್ಟ ಮಂಚು ಭಾಷೆಯಲ್ಲಿನ ಯೋಹಾನನ ಸುವಾರ್ತೆ ಪುಸ್ತಕದ ಆರಂಭದ ನುಡಿಗಳು, ಎಡದಿಂದ ಬಲಕ್ಕೆ ಮೇಲಿನಿಂದ ಕೆಳಕ್ಕೆ ಓದಲ್ಪಡುವುದು

[ಕೃಪೆ]

ಪ್ರತಿಯೊಂದು ದೇಶದ ಬೈಬಲ್‌ (ಇಂಗ್ಲಿಷ್‌) ಎಂಬ ಪುಸ್ತಕದಿಂದ, 1860

[ಪುಟ 27ರಲ್ಲಿರುವ ಚಿತ್ರ ಕೃಪೆ]

1919ರಲ್ಲಿ ಕ್ಲೆಮೆಂಟ್‌ ಕೆ. ಶಾರ್ಟರ್‌ ಅವರಿಂದ ಬರೆಯಲ್ಪಟ್ಟ ಜಾರ್ಜ್‌ ಬಾರೋನ ಜೀವನ (ಇಂಗ್ಲಿಷ್‌) ಎಂಬ ಪುಸ್ತಕದಿಂದ.