ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅನ್ಯರ ಸ್ವರದ’ ವಿಷಯದಲ್ಲಿ ಎಚ್ಚರಿಕೆಯಿಂದಿರಿ

‘ಅನ್ಯರ ಸ್ವರದ’ ವಿಷಯದಲ್ಲಿ ಎಚ್ಚರಿಕೆಯಿಂದಿರಿ

‘ಅನ್ಯರ ಸ್ವರದ’ ವಿಷಯದಲ್ಲಿ ಎಚ್ಚರಿಕೆಯಿಂದಿರಿ

“ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ.”​—⁠ಯೋಹಾನ 10:⁠5.

ಪುನರುತ್ಥಿತ ಯೇಸು, ಅವನ ಬರಿದಾದ ಸಮಾಧಿಯ ಬಳಿಯಲ್ಲಿ ನಿಂತಿರುವ ಸ್ತ್ರೀಯನ್ನು ಗಮನಿಸುತ್ತಾನೆ. ಅವಳು ಅವನಿಗೆ ಚಿರಪರಿಚಿತಳು. ಅವಳು ಮಗ್ದಲದ ಮರಿಯಳೇ. ಸುಮಾರು ಎರಡು ವರ್ಷಗಳಿಗೆ ಮುಂಚೆ ದೆವ್ವ ಹಿಡಿದಿದ್ದ ಅವಳನ್ನು ಅವನೇ ಗುಣಪಡಿಸಿದ್ದನು. ಅಂದಿನಿಂದ ಅವಳು, ಯೇಸು ಹಾಗೂ ಅವನ ಅಪೊಸ್ತಲರ ಜೊತೆಗಿದ್ದು, ಅವರ ದೈನಂದಿನ ಆವಶ್ಯಕತೆಗಳನ್ನು ನೋಡಿಕೊಳ್ಳುತ್ತಿದ್ದಳು. (ಲೂಕ 8:​1-3) ಆದರೆ ಇಂದು ಮರಿಯಳು ಅಪಾರ ದುಃಖದಿಂದ ಅಳುತ್ತಿದ್ದಾಳೆ, ಏಕೆಂದರೆ ಯೇಸು ಸಾಯುವುದನ್ನು ಅವಳು ಕಣ್ಣಾರೆ ನೋಡಿದ್ದಳು ಮತ್ತು ಈಗ ಅವನ ದೇಹವೂ ಸಮಾಧಿಯಿಂದ ಕಾಣೆಯಾಗಿದೆ! ಆದುದರಿಂದ ಯೇಸು ಅವಳನ್ನು, “ಅಮ್ಮಾ, ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ?” ಎಂದು ಕೇಳುತ್ತಾನೆ. ಅವನನ್ನು ತೋಟಗಾರನೆಂದು ನೆನಸಿ ಅವಳು ಉತ್ತರಿಸುವುದು: “ಅಯ್ಯಾ, ನೀನು ಆತನನ್ನು ಎತ್ತಿಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ನನಗೆ ಹೇಳು; ನಾನು ತೆಗೆದುಕೊಂಡು ಹೋಗುತ್ತೇನೆ.” ಆಗ ಯೇಸು ಅವಳಿಗೆ, “ಮರಿಯಳೇ” ಎಂದು ಹೇಳುತ್ತಾನೆ. ಒಡನೆಯೇ ಅವಳು ತನ್ನೊಂದಿಗೆ ಅವನು ಮಾತಾಡುತ್ತಿದ್ದ ಚಿರಪರಿಚಿತ ರೀತಿಯನ್ನು ಗ್ರಹಿಸಿ, “ಗುರುವೇ” ಎಂದು ಹರ್ಷೋಲ್ಲಾಸದಿಂದ ಉದ್ಗರಿಸುತ್ತಾಳೆ, ಮತ್ತು ಅವನನ್ನು ಆಲಂಗಿಸುತ್ತಾಳೆ.​—⁠ಯೋಹಾನ 20:​11-18.

2 ಈ ವೃತ್ತಾಂತವು, ಸ್ವಲ್ಪ ಸಮಯಾವಧಿಗೆ ಮುಂಚೆ ಯೇಸು ಏನು ಹೇಳಿದ್ದನೋ ಅದನ್ನು ಭಾವನಾತ್ಮಕ ರೀತಿಯಲ್ಲಿ ದೃಷ್ಟಾಂತಿಸುತ್ತದೆ. ತನ್ನನ್ನು ಒಬ್ಬ ಕುರುಬನಿಗೆ ಹಾಗೂ ತನ್ನ ಹಿಂಬಾಲಕರನ್ನು ಕುರಿಗಳಿಗೆ ಹೋಲಿಸುತ್ತಾ, ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆಯುತ್ತಾನೆ ಮತ್ತು ಅವುಗಳಿಗೆ ಅವನ ಸ್ವರವು ತಿಳಿದಿದೆ ಎಂದು ಅವನು ಹೇಳಿದನು. (ಯೋಹಾನ 10:3, 4, 14, 15, 27, 28) ವಾಸ್ತವದಲ್ಲಿ ಒಂದು ಕುರಿಯು ತನ್ನ ಕುರುಬನನ್ನು ಗುರುತಿಸುವಂತೆಯೇ ಮರಿಯಳು ಸಹ ತನ್ನ ಕುರುಬನಾದ ಕ್ರಿಸ್ತನನ್ನು ಗುರುತಿಸಿದಳು. ಇಂದು ಯೇಸುವಿನ ಹಿಂಬಾಲಕರಾಗಿರುವವರು ಸಹ ತಮ್ಮ ಕುರುಬನ ಸ್ವರವನ್ನು ಗುರುತಿಸುತ್ತಾರೆ. (ಯೋಹಾನ 10:16) ಒಂದು ಕುರಿಗಿರುವ, ವ್ಯತ್ಯಾಸವನ್ನು ತಿಳಿಯಬಲ್ಲ ಕಿವಿಯು ಅದು ತನ್ನ ಕುರುಬನಿಗೆ ಸಮೀಪವಾಗಿ ಉಳಿಯುವಂತೆ ಹೇಗೆ ಶಕ್ತಗೊಳಿಸುತ್ತದೋ ಹಾಗೆಯೇ, ನಮ್ಮ ಆಧ್ಯಾತ್ಮಿಕ ಸೂಕ್ಷ್ಮ ಪರಿಜ್ಞಾನವು ನಮ್ಮ ಒಳ್ಳೇ ಕುರುಬನಾಗಿರುವ ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಿಕಟವಾಗಿ ನಡೆಯುವಂತೆ ನಮ್ಮನ್ನು ಪ್ರಚೋದಿಸಬೇಕು.​—⁠ಯೋಹಾನ 13:15; 1 ಯೋಹಾನ 2:6; 5:⁠20.

3 ಆದರೆ, ಅದೇ ದೃಷ್ಟಾಂತಕ್ಕನುಸಾರ, ಮಾನವ ಧ್ವನಿಗಳನ್ನು ಗುರುತಿಸಲಿಕ್ಕಾಗಿ ಒಂದು ಕುರಿಗೆ ಕೊಡಲ್ಪಟ್ಟಿರುವ ಸಾಮರ್ಥ್ಯವೇ, ಅದು ತನ್ನ ಸ್ನೇಹಿತನನ್ನು ಮಾತ್ರವಲ್ಲ ವೈರಿಯನ್ನು ಸಹ ಗುರುತಿಸಲು ಸಹಾಯಮಾಡುತ್ತದೆ. ಇದು ತುಂಬ ಮಹತ್ವಪೂರ್ಣವಾಗಿದೆ, ಏಕೆಂದರೆ ನಮಗೂ ವಂಚನಾತ್ಮಕ ವಿರೋಧಿಗಳಿದ್ದಾರೆ. ಅವರು ಯಾರು? ಅವರು ಹೇಗೆ ಕ್ರಿಯೆಗೈಯುತ್ತಾರೆ? ನಮ್ಮನ್ನು ನಾವು ಹೇಗೆ ಸಂರಕ್ಷಿಸಿಕೊಳ್ಳಸಾಧ್ಯವಿದೆ? ಇದನ್ನು ಕಂಡುಕೊಳ್ಳಲಿಕ್ಕಾಗಿ, ಕುರಿಹಟ್ಟಿಯ ಕುರಿತಾದ ತನ್ನ ದೃಷ್ಟಾಂತದಲ್ಲಿ ಯೇಸು ಇನ್ನೇನನ್ನು ಹೇಳಿದನು ಎಂಬುದನ್ನು ನಾವು ನೋಡೋಣ.

‘ಬಾಗಲಿಂದ ಒಳಗೆ ಬಾರದೆ ಇರುವವನು’

4 ಯೇಸು ಹೇಳಿದ್ದು: “ಬಾಗಲಿಂದ ಒಳಗೆ ಬರುವವನು ಆ ಕುರಿಗಳ ಕುರುಬನು. ಬಾಗಲು ಕಾಯುವವನು ಅವನಿಗೆ ಬಾಗಲನ್ನು ತೆರೆಯುತ್ತಾನೆ, ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಡುತ್ತಾನೆ. ಸ್ವಂತ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ; ಕುರಿಗಳು ಅವನ ಸ್ವರವನ್ನು ತಿಳುಕೊಂಡು ಅವನ ಹಿಂದೆ ಹೋಗುತ್ತವೆ. ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ.” (ಯೋಹಾನ 10:2-5) ಯೇಸು ಇಲ್ಲಿ “ಸ್ವರ” ಎಂಬ ಪದವನ್ನು ಮೂರು ಬಾರಿ ಉಪಯೋಗಿಸಿದನು ಎಂಬುದನ್ನು ಗಮನಿಸಿರಿ. ಎರಡು ಬಾರಿ ಅವನು ಕುರುಬನ ಸ್ವರದ ಕುರಿತು ಮಾತಾಡಿದನು, ಆದರೆ ಮೂರನೆಯ ಬಾರಿ ಅವನು ‘ಅನ್ಯರ ಸ್ವರಕ್ಕೆ’ ಸೂಚಿಸಿ ಮಾತಾಡಿದನು. ಯಾವ ರೀತಿಯ ಅನ್ಯ ವ್ಯಕ್ತಿಯನ್ನು ಯೇಸು ಸೂಚಿಸುತ್ತಿದ್ದಾನೆ?

5 ಇಲ್ಲಿ ಯೇಸು ನಾವು ಯಾರಿಗೆ ಅತಿಥಿಸತ್ಕಾರವನ್ನು ತೋರಿಸಬೇಕೊ ಆ ರೀತಿಯ ಅಪರಿಚಿತ ವ್ಯಕ್ತಿಯ ಕುರಿತು ಚರ್ಚಿಸುತ್ತಿಲ್ಲ. ಅತಿಥಿಸತ್ಕಾರ ಎಂಬ ಪದಕ್ಕೆ ಬೈಬಲಿನ ಮೂಲ ಭಾಷೆಯಲ್ಲಿ “ಅಪರಿಚಿತರಿಗೆ ತೋರಿಸಲ್ಪಡುವ ಪ್ರೀತಿ” ಎಂದರ್ಥವಿದೆ. (ಇಬ್ರಿಯ 13:⁠2) ಯೇಸುವಿನ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟಿರುವ ಅನ್ಯ ವ್ಯಕ್ತಿಯು ಒಬ್ಬ ಆಹ್ವಾನಿತ ಅತಿಥಿಯಲ್ಲ. ಅವನು “ಕುರೀಹಟ್ಟಿಯೊಳಗೆ ಬಾಗಲಿಂದ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನು” ಆಗಿದ್ದಾನೆ. ಅವನು “ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ.” (ಯೋಹಾನ 10:1) ದೇವರ ವಾಕ್ಯದಲ್ಲಿ ಒಬ್ಬ ಕಳ್ಳನೂ ಸುಲುಕೊಳ್ಳುವವನೂ ಆಗಿ ಪ್ರಥಮ ಬಾರಿ ಉಲ್ಲೇಖಿಸಲ್ಪಟ್ಟಿರುವವನು ಯಾರಾಗಿದ್ದಾನೆ? ಪಿಶಾಚನಾದ ಸೈತಾನನೇ. ನಾವು ಆದಿಕಾಂಡ ಪುಸ್ತಕದಲ್ಲಿ ಇದಕ್ಕೆ ಪುರಾವೆಯನ್ನು ಕಂಡುಕೊಳ್ಳುತ್ತೇವೆ.

ಅನ್ಯ ವ್ಯಕ್ತಿಯ ಸ್ವರವು ಪ್ರಥಮವಾಗಿ ಕೇಳಿಬಂದ ಸಂದರ್ಭ

6ಆದಿಕಾಂಡ 3:​1-5 ನೆಯ ವಚನಗಳು, ಭೂಮಿಯ ಮೇಲೆ ಪ್ರಥಮ ಬಾರಿ ಅನ್ಯ ವ್ಯಕ್ತಿಯ ಸ್ವರವು ಹೇಗೆ ಕೇಳಿಬಂತು ಎಂಬುದನ್ನು ವಿವರಿಸುತ್ತವೆ. ಸೈತಾನನು ಒಂದು ಸರ್ಪದ ಮೂಲಕ ಮೊದಲ ಸ್ತ್ರೀಯಾದ ಹವ್ವಳನ್ನು ಸಮೀಪಿಸಿ, ತಪ್ಪುದಾರಿಗೆ ನಡೆಸುವಂಥ ರೀತಿಯಲ್ಲಿ ಅವಳೊಂದಿಗೆ ಮಾತಾಡಿದನು ಎಂದು ಈ ವೃತ್ತಾಂತವು ತಿಳಿಸುತ್ತದೆ. ಈ ವೃತ್ತಾಂತದಲ್ಲಿ ಸೈತಾನನನ್ನು ಅಕ್ಷರಾರ್ಥವಾಗಿ ‘ಅನ್ಯನು’ ಎಂದು ಕರೆಯಲಾಗಿಲ್ಲ ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಆದರೂ, ಅನೇಕ ವಿಧಗಳಲ್ಲಿ ಅವನು, ಯೋಹಾನ 10ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ದೃಷ್ಟಾಂತದಲ್ಲಿ ವರ್ಣಿಸಲ್ಪಟ್ಟ ಅನ್ಯನಂತಿದ್ದನು ಎಂಬುದನ್ನು ಅವನ ಕ್ರಿಯೆಗಳೇ ತೋರಿಸುತ್ತವೆ. ಇವುಗಳಲ್ಲಿ ಕೆಲವು ಹೋಲಿಕೆಗಳನ್ನು ಪರಿಗಣಿಸಿರಿ.

7 ಅನ್ಯ ವ್ಯಕ್ತಿಯು ಕುರಿಹಟ್ಟಿಯಲ್ಲಿರುವ ತನ್ನ ಬಲಿಪಶುಗಳನ್ನು ಪರೋಕ್ಷವಾದ ರೀತಿಯಲ್ಲಿ ಸಮೀಪಿಸುತ್ತಾನೆ ಎಂದು ಯೇಸು ಹೇಳುತ್ತಾನೆ. ತದ್ರೀತಿಯಲ್ಲಿ, ಸೈತಾನನು ಒಂದು ಸರ್ಪವನ್ನುಪಯೋಗಿಸಿ ಪರೋಕ್ಷವಾದ ರೀತಿಯಲ್ಲಿ ತನ್ನ ಬಲಿಪಶುವನ್ನು ಸಮೀಪಿಸಿದನು. ಕಪಟೋಪಾಯದ ಈ ಸಮೀಪಿಸುವಿಕೆಯು ಸೈತಾನನು ನಿಜವಾಗಿಯೂ ಏನಾಗಿದ್ದಾನೋ ಅದನ್ನು, ಅಂದರೆ ಅವನು ವಂಚನಾತ್ಮಕವಾಗಿ ಒಳನುಗ್ಗುವವನಾಗಿದ್ದಾನೆ ಎಂಬುದನ್ನು ಬಯಲುಪಡಿಸಿತು. ಅಷ್ಟುಮಾತ್ರವಲ್ಲ, ಕುರಿಹಟ್ಟಿಯಲ್ಲಿರುವ ಅನ್ಯನು, ಹಕ್ಕುಬಾಧ್ಯತೆಯುಳ್ಳ ಯಜಮಾನನಿಂದ ಅವನ ಕುರಿಗಳನ್ನು ಲೂಟಿಮಾಡಲು ಹಂಚಿಕೆ ಹೂಡುತ್ತಾನೆ. ವಾಸ್ತವದಲ್ಲಿ ಅವನು ಒಬ್ಬ ಕಳ್ಳನಿಗಿಂತಲೂ ಹೀನನಾಗಿದ್ದಾನೆ, ಏಕೆಂದರೆ ಅವನ ಗುರಿ ‘ಕೊಲ್ಲುವುದೂ ನಾಶಮಾಡುವುದೂ’ ಆಗಿರುತ್ತದೆ. (ಯೋಹಾನ 10:​10, ಪರಿಶುದ್ಧ ಬೈಬಲ್‌ *) ಇದೇ ರೀತಿಯಲ್ಲಿ ಸೈತಾನನು ಒಬ್ಬ ಕಳ್ಳನಾಗಿದ್ದನು. ಹವ್ವಳನ್ನು ವಂಚಿಸುವ ಮೂಲಕ ದೇವರ ಕಡೆಗೆ ಅವಳಿಗಿದ್ದ ನಿಷ್ಠೆಯನ್ನು ಅವನು ಕದ್ದನು. ಅದಕ್ಕಿಂತಲೂ ಹೆಚ್ಚಾಗಿ, ಸೈತಾನನು ಮಾನವರೆಲ್ಲರ ಮೇಲೆ ಮರಣವನ್ನು ತಂದನು. ಆದುದರಿಂದಲೇ ಅವನು ಕೊಲೆಗಾರನಾಗಿದ್ದಾನೆ.

8 ಸೈತಾನನು ಯೆಹೋವನ ಮಾತುಗಳನ್ನು ಮತ್ತು ಹೇತುಗಳನ್ನು ತಿರುಚಿಹೇಳಿದ ರೀತಿಯಿಂದ ಅವನ ಅಪ್ರಾಮಾಣಿಕತೆಯು ಸುವ್ಯಕ್ತವಾಗುತ್ತದೆ. “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಎಂದು ಅವನು ಹವ್ವಳನ್ನು ಕೇಳಿದನು. ಸೈತಾನನು ತುಂಬ ಆಘಾತಗೊಂಡವನಂತೆ ನಟಿಸಿ, ‘ದೇವರು ಹೇಗೆ ಇಷ್ಟರ ಮಟ್ಟಿಗೆ ಅವಿಚಾರಪರನಾಗಿರಸಾಧ್ಯವಿದೆ?’ ಎಂದು ಅವನು ಹೇಳುತ್ತಿದ್ದಾನೋ ಎಂಬಂತಿತ್ತು. ಅವನು ಇನ್ನೂ ಕೂಡಿಸಿ ಹೇಳಿದ್ದು: “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; . . . ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” “ದೇವರಿಗೆ ಚೆನ್ನಾಗಿ ಗೊತ್ತುಂಟು” ಎಂಬ ಅವನ ಮಾತುಗಳನ್ನು ಗಮನಿಸಿ. ಸೈತಾನನು ಹೇಳಿದ್ದು, ‘ದೇವರಿಗೆ ಏನು ಗೊತ್ತು ಎಂಬುದು ನನಗೂ ಗೊತ್ತು. ಆತನ ಹೇತುಗಳು ನನಗೆ ಗೊತ್ತಿವೆ, ಅವು ಕೆಟ್ಟದ್ದಾಗಿವೆ’ ಎಂಬಂತಿತ್ತು. (ಓರೆ ಅಕ್ಷರಗಳು ನಮ್ಮವು.) (ಆದಿಕಾಂಡ 2:16, 17; ಆದಿಕಾಂಡ 3:1, 5) ದುಃಖಕರವಾಗಿಯೇ, ಆದಾಮಹವ್ವರು ಈ ಅನ್ಯ ವ್ಯಕ್ತಿಯ ಸ್ವರದಿಂದ ವಿಮುಖರಾಗಲಿಲ್ಲ. ಅದಕ್ಕೆ ಬದಲಾಗಿ ಅವರು ಈ ಸ್ವರಕ್ಕೆ ಕಿವಿಗೊಟ್ಟರು ಮತ್ತು ಸ್ವತಃ ತಮ್ಮ ಮೇಲೆ ಹಾಗೂ ತಮ್ಮ ಸಂತತಿಯ ಮೇಲೆ ವಿಪತ್ತನ್ನು ಬರಮಾಡಿದರು.​—⁠ರೋಮಾಪುರ 5:​12, 14.

9 ಇಂದು ದೇವಜನರನ್ನು ತಪ್ಪುದಾರಿಗೆಳೆಯಲಿಕ್ಕಾಗಿ ಸೈತಾನನು ತದ್ರೀತಿಯ ವಿಧಾನಗಳನ್ನು ಉಪಯೋಗಿಸುತ್ತಾನೆ. (ಪ್ರಕಟನೆ 12:⁠9) ಅವನು “ಸುಳ್ಳಿಗೆ ಮೂಲಪುರುಷ”ನಾಗಿದ್ದಾನೆ, ಮತ್ತು ಅವನಂತೆಯೇ ಯಾರು ದೇವರ ಸೇವಕರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಾರೋ ಅವರು ಅವನ ಮಕ್ಕಳಾಗಿದ್ದಾರೆ. (ಯೋಹಾನ 8:44) ಇಂದು ಅನ್ಯರ ಸ್ವರವು ಕೇಳಿಬರುವ ಕೆಲವು ವಿಧಗಳನ್ನು ನಾವೀಗ ಗಮನಿಸೋಣ.

ಇಂದು ಅನ್ಯರ ಸ್ವರವು ಕೇಳಿಬರುವ ವಿಧ

10ವಂಚನಾತ್ಮಕ ತರ್ಕಗಳು. ಅಪೊಸ್ತಲ ಪೌಲನು ಹೇಳುವುದು: “ನಾನಾವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ.” (ಇಬ್ರಿಯ 13:9) ಯಾವ ರೀತಿಯ ಉಪದೇಶಗಳು ಅಥವಾ ಬೋಧನೆಗಳು? ಅವು ನಮ್ಮನ್ನು ‘ಸೆಳವಿಗೆ ಸಿಕ್ಕಿಸ’ಸಾಧ್ಯವಿರುವುದರಿಂದ, ನಮ್ಮ ಆಧ್ಯಾತ್ಮಿಕ ಸಮತೂಕವನ್ನು ದುರ್ಬಲಗೊಳಿಸುವಂಥ ಬೋಧನೆಗಳಿಗೆ ಪೌಲನು ಸೂಚಿಸುತ್ತಾನೆ ಎಂಬುದು ಸುಸ್ಪಷ್ಟ. ಇಂಥ ಅನ್ಯ ಬೋಧನೆಗಳನ್ನು ಯಾರು ನುಡಿಯುತ್ತಿದ್ದಾರೆ? ಕ್ರೈಸ್ತ ಹಿರಿಯರ ಒಂದು ಗುಂಪಿಗೆ ಪೌಲನು ಹೇಳಿದ್ದು: “ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.” (ಅ. ಕೃತ್ಯಗಳು 20:30) ಪೌಲನ ದಿನದಲ್ಲಿದ್ದಂತೆಯೇ ಇಂದು, ಈ ಮುಂಚೆ ಕ್ರೈಸ್ತ ಸಭೆಯ ಭಾಗವಾಗಿದ್ದ ಕೆಲವರು, “ವ್ಯತ್ಯಾಸ ಬೋಧನೆಗಳನ್ನು” ಅಂದರೆ ಅರ್ಧಸತ್ಯಗಳನ್ನು ಹಾಗೂ ಶುದ್ಧ ಸುಳ್ಳುಗಳನ್ನು ಮಾತಾಡುವ ಮೂಲಕ ಈಗಲೂ ಕುರಿಗಳನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಪೊಸ್ತಲ ಪೇತ್ರನು ವ್ಯಕ್ತಪಡಿಸುವಂತೆ, ಅವರು “ಕಲ್ಪನೆಯ ಮಾತುಗಳನ್ನು” ಅಂದರೆ ಸತ್ಯದ ಹೋಲಿಕೆಯಿರುವುದಾದರೂ ವಾಸ್ತವದಲ್ಲಿ ನಿಷ್ಪ್ರಯೋಜಕವಾಗಿರುವ ಮಾತುಗಳನ್ನು ಉಪಯೋಗಿಸುತ್ತಾರೆ.​—⁠2 ಪೇತ್ರ 2:⁠3.

11 “ಅವರು ನಾಶಕರವಾದ ಮತಭೇದಗಳನ್ನು ಕಳ್ಳತನದಿಂದ ಹುಟ್ಟಿಸು”ವರು ಎಂದು ಹೇಳುವ ಮೂಲಕ ಪೇತ್ರನು ಧರ್ಮಭ್ರಷ್ಟರ ವಿಧಾನಗಳನ್ನು ಇನ್ನಷ್ಟು ಬೆಳಕಿಗೆ ತರುತ್ತಾನೆ. (2 ಪೇತ್ರ 2:1, 3) ಯೇಸುವಿನ ದೃಷ್ಟಾಂತದಲ್ಲಿನ ಕಳ್ಳನು ಕುರಿಹಟ್ಟಿಯೊಳಗೆ “ಬಾಗಲಿಂದ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರು”ವಂತೆಯೇ, ಧರ್ಮಭ್ರಷ್ಟರು ಗೋಪ್ಯವಾದ ವಿಧಗಳಲ್ಲಿ ನಮ್ಮನ್ನು ಸಮೀಪಿಸುತ್ತಾರೆ. (ಗಲಾತ್ಯ 2:4; ಯೂದ 4) ಅವರ ಗುರಿಯೇನು? ಪೇತ್ರನು ಕೂಡಿಸಿ ಹೇಳುವುದು: ‘ಅವರು ನಿಮ್ಮಿಂದ ಲಾಭವನ್ನು ಸಂಪಾದಿಸಬೇಕೆಂದಿರುವರು.’ ಧರ್ಮಭ್ರಷ್ಟರು ಯಾವುದೇ ರೀತಿಯಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೂ, ವಂಚನಾತ್ಮಕವಾಗಿ ಒಳನುಗ್ಗುವವರ ನಿಜವಾದ ಗುರಿಯು ‘ಕದ್ದುಕೊಳ್ಳುವುದು, ಕೊಯ್ಯುವುದು, ಮತ್ತು ಹಾಳುಮಾಡುವುದೇ’ ಆಗಿದೆ ಎಂಬುದು ಖಂಡಿತವಾಗಿಯೂ ಸತ್ಯವಾಗಿದೆ. (ಯೋಹಾನ 10:10) ಇಂಥ ಅನ್ಯರ ವಿಷಯದಲ್ಲಿ ಎಚ್ಚರಿಕೆಯಿಂದಿರಿ!

12ಹಾನಿಕರ ಒಡನಾಡಿಗಳು. ನಾವು ಯಾರೊಂದಿಗೆ ಸಹವಾಸಮಾಡುತ್ತೇವೋ ಅವರ ಮೂಲಕವೂ ಅನ್ಯರ ಸ್ವರವು ಕೇಳಿಬರಬಹುದು. ದುಸ್ಸಹವಾಸಗಳು ಯುವಜನರಿಗೆ ವಿಶೇಷವಾಗಿ ಹಾನಿಕರವಾಗಿವೆ. (1 ಕೊರಿಂಥ 15:33) ಸೈತಾನನು, ಪ್ರಥಮ ಮಾನವ ಜೋಡಿಯಲ್ಲಿ ಚಿಕ್ಕ ಪ್ರಾಯದವಳೂ ಕಡಿಮೆ ಅನುಭವಸ್ಥಳೂ ಆಗಿದ್ದ ಹವ್ವಳನ್ನು ಗುರಿಯಾಗಿ ಉಪಯೋಗಿಸಿದನು ಎಂಬುದನ್ನು ಮರೆಯದಿರಿ. ಯೆಹೋವನು ಅವಳ ಸ್ವಾತಂತ್ರ್ಯವನ್ನು ಅನಗತ್ಯವಾಗಿ ನಿರ್ಬಂಧಿಸಿದ್ದಾನೆ ಎಂದು ಅವಳಿಗೆ ಮನಗಾಣಿಸುವುದರಲ್ಲಿ ಅವನು ಯಶಸ್ವಿಯಾದನು. ಆದರೆ ವಾಸ್ತವದಲ್ಲಿ ಇದಕ್ಕೆ ತದ್ವಿರುದ್ಧವಾದದ್ದು ಸತ್ಯವಾಗಿತ್ತು. ಯೆಹೋವನು ತನ್ನ ಮಾನವ ಸೃಷ್ಟಿಯನ್ನು ಪ್ರೀತಿಸಿದನು ಮತ್ತು ಅವರ ಹಿತಕ್ಷೇಮದ ಬಗ್ಗೆ ಕಾಳಜಿ ತೋರಿಸಿದನು. (ಯೆಶಾಯ 48:17) ತದ್ರೀತಿಯಲ್ಲಿ ಇಂದು, ಯುವಜನರೇ ನಿಮ್ಮ ಕ್ರೈಸ್ತ ಹೆತ್ತವರು ನಿಮ್ಮ ಸ್ವಾತಂತ್ರ್ಯವನ್ನು ಅನಗತ್ಯವಾಗಿ ನಿರ್ಬಂಧಿಸುತ್ತಾರೆ ಎಂಬುದನ್ನು ಅನ್ಯ ವ್ಯಕ್ತಿಗಳು ನಿಮಗೆ ಒಡಂಬಡಿಸಲು ಪ್ರಯತ್ನಿಸುತ್ತಾರೆ. ಇಂಥ ಅನ್ಯ ವ್ಯಕ್ತಿಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು? ಒಬ್ಬ ಕ್ರೈಸ್ತ ಹುಡುಗಿಯು ಹೀಗೆ ಒಪ್ಪಿಕೊಳ್ಳುತ್ತಾಳೆ: “ಸ್ವಲ್ಪ ಸಮಯದ ವರೆಗೆ ನನ್ನ ಸಹಪಾಠಿಗಳಿಂದ ನನ್ನ ನಂಬಿಕೆಯು ಸಾಕಷ್ಟು ಮಟ್ಟಿಗೆ ದುರ್ಬಲಗೊಳಿಸಲ್ಪಟ್ಟಿತು. ಏಕೆಂದರೆ ನನ್ನ ಧರ್ಮವು ತುಂಬ ಕಟ್ಟುಪಾಡುಗಳನ್ನೊಡ್ಡುತ್ತದೆ ಮತ್ತು ಅದು ನ್ಯಾಯಸಮ್ಮತವಾದದ್ದಲ್ಲ ಎಂದು ಅವರು ಹೇಳುತ್ತಾ ಇದ್ದರು.” ಆದರೆ ಸತ್ಯಸಂಗತಿಯೇನೆಂದರೆ ನಿಮ್ಮ ಹೆತ್ತವರು ನಿಮ್ಮನ್ನು ತುಂಬ ಪ್ರೀತಿಸುತ್ತಾರೆ. ಆದುದರಿಂದ, ನೀವು ನಿಮ್ಮ ಹೆತ್ತವರನ್ನು ನಂಬದಿರುವಂತೆ ಮಾಡಲು ಸಹಪಾಠಿಗಳು ಪ್ರಯತ್ನಿಸುವಾಗ, ಹವ್ವಳಂತೆ ತಪ್ಪುದಾರಿಗಿಳಿಯದಿರಿ.

13 ಹಾನಿಕರವಾದ ಸಹವಾಸಗಳ ವಿಷಯದಲ್ಲಿ ಕೀರ್ತನೆಗಾರನಾದ ದಾವೀದನು ಹೇಳುವುದು: “ನಾನು ಕುಟಿಲಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ.” (ಕೀರ್ತನೆ 26:4) ಮತ್ತೊಮ್ಮೆ, ಅನ್ಯರ ವಿಶೇಷ ಲಕ್ಷಣವನ್ನು ನೀವು ಇಲ್ಲಿ ಗಮನಿಸಿದಿರೋ? ಅವರು ಕಪಟಿಗಳಾಗಿದ್ದಾರೆ, ಅಂದರೆ ತಮ್ಮ ನಿಜವಾದ ವ್ಯಕ್ತಿತ್ವವನ್ನು ಮರೆಮಾಚುತ್ತಾರೆ​—⁠ಸೈತಾನನು ಸಹ ಒಂದು ಸರ್ಪವನ್ನು ಉಪಯೋಗಿಸುವ ಮೂಲಕ ತನ್ನ ಗುರುತನ್ನು ಮರೆಮಾಚಿದನು. ಇಂದು ಕೆಲವು ಅನೈತಿಕ ಜನರು ಇಂಟರ್‌ನೆಟ್‌ ಅನ್ನು ಉಪಯೋಗಿಸುವ ಮೂಲಕ ತಮ್ಮ ಗುರುತನ್ನು ಹಾಗೂ ನಿಜವಾದ ಹೇತುಗಳನ್ನು ಮರೆಮಾಚುತ್ತಾರೆ. ಚ್ಯಾಟ್‌ ರೂಮ್‌ಗಳಲ್ಲಿ, ಅಡ್ಡಮಾರ್ಗವನ್ನು ಹಿಡಿದಿರುವ ವಯಸ್ಕರು ನಿಮ್ಮನ್ನು ತಮ್ಮ ಬಲೆಯಲ್ಲಿ ಬೀಳಿಸಿಕೊಳ್ಳಲಿಕ್ಕಾಗಿ ಯುವಪ್ರಾಯದ ವ್ಯಕ್ತಿಯಾಗಿ ತಮ್ಮನ್ನು ಪರಿಚಯಿಸಿಕೊಳ್ಳಲೂಬಹುದು. ಯುವಜನರೇ ದಯವಿಟ್ಟು ತುಂಬ ಜಾಗ್ರತೆಯಿಂದಿರಿ, ಇಲ್ಲದಿದ್ದರೆ ನೀವು ಆಧ್ಯಾತ್ಮಿಕವಾಗಿ ಹಾನಿಗೊಳಗಾಗುವಿರಿ.​—⁠ಕೀರ್ತನೆ 119:101; ಜ್ಞಾನೋಕ್ತಿ 22:⁠3.

14ಸುಳ್ಳು ಆಪಾದನೆಗಳು. ಯೆಹೋವನ ಸಾಕ್ಷಿಗಳ ಕುರಿತಾದ ಕೆಲವು ವಾರ್ತಾ ವರದಿಗಳು ಸ್ವಲ್ಪಮಟ್ಟಿಗೆ ಸಮಂಜಸವಾಗಿರುವುದಾದರೂ, ಕೆಲವೊಮ್ಮೆ ಅನ್ಯರ ಪೂರ್ವಾಗ್ರಹಪೀಡಿತ ಸ್ವರವನ್ನು ಪಸರಿಸಲಿಕ್ಕಾಗಿ ವಾರ್ತಾ ಮಾಧ್ಯಮಗಳು ಉಪಯೋಗಿಸಲ್ಪಡುತ್ತವೆ. ಉದಾಹರಣೆಗೆ, ಒಂದು ದೇಶದ ವಾರ್ತಾ ವರದಿಯು, IIನೆಯ ಲೋಕ ಯುದ್ಧದಲ್ಲಿ ಸಾಕ್ಷಿಗಳು ಹಿಟ್ಲರನ ಆಳ್ವಿಕೆಗೆ ಬೆಂಬಲವನ್ನಿತ್ತರು ಎಂಬ ಸುಳ್ಳು ಸುದ್ದಿಯನ್ನು ಪ್ರಚಾರಮಾಡಿತು. ಇನ್ನೊಂದು ದೇಶದಲ್ಲಿ, ಸಾಕ್ಷಿಗಳು ಚರ್ಚ್‌ ಕಟ್ಟಡಗಳನ್ನು ವಿಧ್ವಂಸಗೊಳಿಸುತ್ತಿದ್ದಾರೆ ಎಂದು ವರದಿಯೊಂದು ಸುಳ್ಳಾರೋಪವನ್ನು ಹೊರಿಸಿತು. ಅನೇಕ ದೇಶಗಳಲ್ಲಿ, ಸಾಕ್ಷಿಗಳು ತಮ್ಮ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ನಿರಾಕರಿಸುತ್ತಿದ್ದಾರೆ ಮತ್ತು ಜೊತೆ ವಿಶ್ವಾಸಿಗಳಿಂದ ಗೈಯಲ್ಪಟ್ಟ ಗಂಭೀರವಾದ ಪಾಪಗಳನ್ನು ಉದ್ದೇಶಪೂರ್ವಕವಾಗಿ ಮನ್ನಿಸುತ್ತಿದ್ದಾರೆ ಎಂದು ವಾರ್ತಾ ಮಾಧ್ಯಮಗಳು ಸುಳ್ಳಾಗಿ ಆಪಾದಿಸುತ್ತವೆ. (ಮತ್ತಾಯ 10:22) ಹೀಗಿದ್ದರೂ, ನಮ್ಮನ್ನು ವೈಯಕ್ತಿಕವಾಗಿ ಅರಿತುಕೊಂಡಿರುವ ಯಥಾರ್ಥ ಜನರು ಇಂಥ ಆಪಾದನೆಗಳು ಸುಳ್ಳಾಗಿವೆ ಎಂಬುದನ್ನು ಗ್ರಹಿಸುತ್ತಾರೆ.

15 ಇಂಥ ಅನ್ಯರ ಸ್ವರದಿಂದ ಹಬ್ಬಿಸಲ್ಪಡುವ ಆಪಾದನೆಗಳನ್ನು ನಾವು ಎದುರಿಸುವಲ್ಲಿ ಆಗ ಏನು ಮಾಡಬೇಕು? ಜ್ಞಾನೋಕ್ತಿ 14:15 ರಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳುವುದು ಒಳ್ಳೇದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” ವಾರ್ತಾ ಮಾಧ್ಯಮದಲ್ಲಿ ಸತ್ಯವೆಂದು ಪ್ರಸ್ತುತಪಡಿಸಲ್ಪಡುವ ಪ್ರತಿಯೊಂದು ವಿಷಯವನ್ನೂ ನಂಬುವುದು ಅವಿವೇಕತನವಾಗಿದೆ. ಎಲ್ಲಾ ರೀತಿಯ ಐಹಿಕ ಮಾಹಿತಿಯನ್ನು ನಾವು ಅವಿಶ್ವಾಸದಿಂದ ಕಾಣುವುದಿಲ್ಲವಾದರೂ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದನ್ನು ನಾವು ಗ್ರಹಿಸುತ್ತೇವೆ. (ಓರೆ ಅಕ್ಷರಗಳು ನಮ್ಮವು.)​—⁠1 ಯೋಹಾನ 5:⁠19.

‘ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಪರೀಕ್ಷಿಸಿರಿ’

16 ಆದರೂ, ನಾವು ಒಬ್ಬ ಸ್ನೇಹಿತನೊಂದಿಗೆ ವ್ಯವಹರಿಸುತ್ತಿದ್ದೇವೋ ಅಥವಾ ಒಬ್ಬ ವೈರಿಯೊಂದಿಗೊ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಸಾಧ್ಯವಿದೆ? ಕುರಿಗಳಿಗೆ ತಮ್ಮ ಕುರುಬನ ‘ಸ್ವರವು ತಿಳಿದಿರುವುದರಿಂದ’ ಅವು ಅವನನ್ನು ಹಿಂಬಾಲಿಸುತ್ತವೆ ಎಂದು ಯೇಸು ಹೇಳುತ್ತಾನೆ. (ಯೋಹಾನ 10:⁠4) ಅಕ್ಷರಾರ್ಥ ಕುರುಬನ ಹೊರತೋರಿಕೆಯು ಕುರಿಗಳು ಅವನನ್ನು ಹಿಂಬಾಲಿಸುವಂತೆ ಪ್ರಚೋದಿಸುವುದಿಲ್ಲ, ಬದಲಾಗಿ ಅವನ ಸ್ವರವೇ ಅವುಗಳನ್ನು ಪ್ರಚೋದಿಸುತ್ತದೆ. ಬೈಬಲ್‌ ದೇಶಗಳ ಕುರಿತಾದ ಒಂದು ಪುಸ್ತಕವು, ಕುರಿಗಳು ಕುರುಬನ ಸ್ವರದಿಂದಲ್ಲ ಬದಲಾಗಿ ಅವನ ಬಟ್ಟೆಯಿಂದಲೇ ಅವನನ್ನು ಗುರುತಿಸುತ್ತವೆ ಎಂದು ಒಬ್ಬ ಸಂದರ್ಶಕನು ಪ್ರತಿಪಾದಿಸಿದಂಥ ಒಂದು ಸಂದರ್ಭದ ಬಗ್ಗೆ ತಿಳಿಸುತ್ತದೆ. ಅವು ಸ್ವರವನ್ನು ಗುರುತಿಸುತ್ತವೆ ಎಂದು ಒಬ್ಬ ಕುರುಬನು ಅವನಿಗೆ ಉತ್ತರಿಸಿದನು. ಇದನ್ನು ರುಜುಪಡಿಸಲಿಕ್ಕಾಗಿ ಅವನು ಸಂದರ್ಶಕನಿಗೆ ತನ್ನ ಬಟ್ಟೆಯನ್ನು ಕೊಟ್ಟು ಅವನ ಬಟ್ಟೆಯನ್ನು ತಾನು ಧರಿಸಿಕೊಂಡನು. ಕುರುಬನ ಬಟ್ಟೆಗಳನ್ನು ಧರಿಸಿಕೊಂಡಿದ್ದ ಸಂದರ್ಶಕನು ಕುರಿಗಳನ್ನು ಕರೆದನು, ಆದರೆ ಅವು ಸ್ವಲ್ಪವೂ ಪ್ರತಿಕ್ರಿಯಿಸಲಿಲ್ಲ. ಅವುಗಳಿಗೆ ಅವನ ಸ್ವರದ ಪರಿಚಯವಿರಲಿಲ್ಲ. ಆದರೆ ಕುರುಬನು ಅವುಗಳನ್ನು ಕರೆದಾಗ, ಅವನು ವೇಷಮರೆಸಿಕೊಂಡಿದ್ದರೂ ಕುರಿಗಳು ಒಡನೆಯೇ ಅವನ ಬಳಿ ಓಡಿದವು. ಹೀಗೆ, ಯಾರಾದರೊಬ್ಬರು ಕುರುಬನಂತೆ ತೋರಬಹುದಾದರೂ, ಕುರಿಗಳಿಗೆ ಮಾತ್ರ ಅವನು ನಿಜವಾದ ಕುರುಬನಾಗಿದ್ದಾನೆಂದು ಅದು ರುಜುಪಡಿಸುವುದಿಲ್ಲ. ಕುರಿಗಳು ತಮ್ಮನ್ನು ಕರೆದವನ ಸ್ವರವನ್ನು ಕುರುಬನ ಸ್ವರದೊಂದಿಗೆ ಹೋಲಿಸಿ ನೋಡುವ ಮೂಲಕ ಕಾರ್ಯತಃ ಅದನ್ನು ಪರೀಕ್ಷಿಸುತ್ತವೆ. ದೇವರ ವಾಕ್ಯವು ನಮಗೆ ಇದನ್ನೇ ಮಾಡುವಂತೆ, ಅಂದರೆ ‘ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಪರೀಕ್ಷಿಸಿ’ ನೋಡುವಂತೆ ಹೇಳುತ್ತದೆ. (1 ಯೋಹಾನ 4:1; 2 ತಿಮೊಥೆಯ 1:13) ಹೀಗೆ ಮಾಡಲು ಯಾವುದು ನಮಗೆ ಸಹಾಯಮಾಡುತ್ತದೆ?

17 ಅರ್ಥಮಾಡಿಕೊಳ್ಳತಕ್ಕ ಸಂಗತಿಯೇನೆಂದರೆ, ನಾವು ಯೆಹೋವನ ಸ್ವರ ಅಥವಾ ಸಂದೇಶವನ್ನು ಹೆಚ್ಚು ನಿಷ್ಕೃಷ್ಟವಾಗಿ ತಿಳಿದಿರುವಲ್ಲಿ, ಅಷ್ಟೇ ಚೆನ್ನಾಗಿ ಅನ್ಯರ ಸ್ವರವನ್ನು ಪತ್ತೆಹಚ್ಚಲು ಸಮರ್ಥರಾಗುತ್ತೇವೆ. ಇಂಥ ಜ್ಞಾನವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಎಂಬುದನ್ನು ಬೈಬಲು ತಿಳಿಯಪಡಿಸುತ್ತದೆ. ಅದು ಹೀಗನ್ನುತ್ತದೆ: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ನಮಗೆ ಹಿಂದಿನಿಂದ ಕೇಳುವ ಆ “ಮಾತು” ದೇವರ ವಾಕ್ಯದಿಂದ ಬರುತ್ತದೆ. ಪ್ರತಿ ಬಾರಿ ನಾವು ಬೈಬಲನ್ನು ಓದುವಾಗ, ನಮ್ಮ ಮಹಾನ್‌ ಕುರುಬನಾದ ಯೆಹೋವನ ಸ್ವರವನ್ನು ನಾವು ಸಾಂಕೇತಿಕವಾದ ರೀತಿಯಲ್ಲಿ ಕೇಳಿಸಿಕೊಳ್ಳುತ್ತೇವೆ. (ಕೀರ್ತನೆ 23:⁠1) ಆದುದರಿಂದ, ನಾವು ಬೈಬಲನ್ನು ಹೆಚ್ಚೆಚ್ಚು ಅಧ್ಯಯನಮಾಡುವಾಗ ದೇವರ ಸ್ವರವು ನಮಗೆ ಹೆಚ್ಚೆಚ್ಚು ಚಿರಪರಿಚಿತವಾಗುತ್ತದೆ. ಮತ್ತು ಈ ಗಹನವಾದ ಜ್ಞಾನವು ನಾವು ಕೂಡಲೆ ಅನ್ಯರ ಸ್ವರವನ್ನು ಪತ್ತೆಹಚ್ಚುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ.​—⁠ಗಲಾತ್ಯ 1:⁠8.

18 ಯೆಹೋವನ ಸ್ವರವನ್ನು ತಿಳಿದುಕೊಂಡಿರುವುದರಲ್ಲಿ ಇನ್ನೂ ಏನು ಒಳಗೂಡಿದೆ? ಇದರಲ್ಲಿ ಕೇವಲ ಕಿವಿಗೊಡುವುದಲ್ಲ, ಬದಲಾಗಿ ವಿಧೇಯರಾಗುವುದೂ ಒಳಗೂಡಿದೆ. ಯೆಶಾಯ 30:21 ನ್ನು ಪುನಃ ಗಮನಿಸಿರಿ. ದೇವರ ವಾಕ್ಯವು ಹೀಗೆ ಪ್ರಕಟಿಸುತ್ತದೆ: “ಇದೇ ಮಾರ್ಗ.” ಹೌದು, ಬೈಬಲಿನ ಅಧ್ಯಯನದ ಮೂಲಕ ನಾವು ಯೆಹೋವನ ನಿರ್ದೇಶನಗಳನ್ನು ಕೇಳಿಸಿಕೊಳ್ಳುತ್ತೇವೆ. ತದನಂತರ, ಆತನು ಆಜ್ಞೆ ನೀಡುವುದು: “ಇದರಲ್ಲೇ ನಡೆಯಿರಿ.” ನಾವೇನನ್ನು ಕೇಳಿಸಿಕೊಳ್ಳುತ್ತೇವೋ ಅದಕ್ಕನುಸಾರ ಕ್ರಿಯೆಗೈಯುವಂತೆ ಯೆಹೋವನು ಬಯಸುತ್ತಾನೆ. ಹೀಗೆ, ನಾವು ಕಲಿಯುವಂಥ ವಿಷಯಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ನಾವು ಯೆಹೋವನ ಸ್ವರವನ್ನು ಕೇಳಿಸಿಕೊಂಡಿದ್ದೇವೆ ಮಾತ್ರವಲ್ಲ ಅದಕ್ಕೆ ವಿಧೇಯರೂ ಆಗಿದ್ದೇವೆ ಎಂಬುದನ್ನು ನಾವು ರುಜುಪಡಿಸುತ್ತೇವೆ. (ಧರ್ಮೋಪದೇಶಕಾಂಡ 28:⁠1) ಯೆಹೋವನ ಸ್ವರಕ್ಕೆ ವಿಧೇಯರಾಗುವುದು ಯೇಸುವಿನ ಸ್ವರಕ್ಕೂ ವಿಧೇಯರಾಗುವುದನ್ನು ಅರ್ಥೈಸುತ್ತದೆ, ಏಕೆಂದರೆ ಹೀಗೆ ಮಾಡುವಂತೆ ಯೆಹೋವನೇ ನಮಗೆ ತಿಳಿಸಿದ್ದಾನೆ. (ಮತ್ತಾಯ 17:⁠5) ಒಳ್ಳೇ ಕುರುಬನಾಗಿರುವ ಯೇಸು ನಮಗೆ ಏನು ಮಾಡುವಂತೆ ತಿಳಿಸುತ್ತಾನೆ? ನಾವು ಶಿಷ್ಯರನ್ನು ಮಾಡಬೇಕೆಂದು ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೇಲೆ ಭರವಸೆಯಿಡಬೇಕೆಂದು ಅವನು ಕಲಿಸುತ್ತಾನೆ. (ಮತ್ತಾಯ 24:45; 28:18-20) ಅವನ ಸ್ವರಕ್ಕೆ ವಿಧೇಯರಾಗುವುದು ನಮಗೆ ನಿತ್ಯಜೀವದ ಅರ್ಥದಲ್ಲಿದೆ.​—⁠ಅ. ಕೃತ್ಯಗಳು 3:⁠23.

‘ಅವುಗಳು ಅವನ ಬಳಿಯಿಂದ ಓಡಿಹೋಗುತ್ತವೆ’

19 ಹಾಗಾದರೆ ನಾವು ಅನ್ಯರ ಸ್ವರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಕುರಿಗಳು ಹೇಗೆ ಪ್ರತಿಕ್ರಿಯಿಸುತ್ತವೋ ಅದೇ ರೀತಿಯಲ್ಲಿ. ಯೇಸು ಹೇಳುವುದು: “ಅವು . . . [“ಎಂದಿಗೂ,” ಪರಿಶುದ್ಧ ಬೈಬಲ್‌] ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ.” (ಯೋಹಾನ 10:5) ನಮ್ಮ ಪ್ರತಿಕ್ರಿಯೆಯು ಇಮ್ಮಡಿಯಾಗಿದೆ. ಮೊದಲನೆಯದಾಗಿ, ನಾವು “ಎಂದಿಗೂ” ಒಬ್ಬ ಅನ್ಯನ ‘ಹಿಂದೆ ಹೋಗುವುದಿಲ್ಲ.’ ಹೌದು, ದೃಢಸಂಕಲ್ಪದಿಂದ ನಾವು ಅನ್ಯ ವ್ಯಕ್ತಿಯನ್ನು ತಿರಸ್ಕರಿಸುತ್ತೇವೆ. ವಾಸ್ತವದಲ್ಲಿ, ಬೈಬಲನ್ನು ಬರೆಯಲಿಕ್ಕಾಗಿ ಉಪಯೋಗಿಸಲ್ಪಟ್ಟಿರುವ ಗ್ರೀಕ್‌ ಭಾಷೆಯಲ್ಲಿ “ಎಂದಿಗೂ” ಎಂಬ ಪದವು, ಅತ್ಯಂತ ಕಟುವಾದ ರೀತಿಯಲ್ಲಿ ತಿರಸ್ಕಾರವನ್ನು ವ್ಯಕ್ತಪಡಿಸುವ ವಿಧವಾಗಿದೆ. (ಮತ್ತಾಯ 24:35; ಇಬ್ರಿಯ 13:⁠5) ಎರಡನೆಯದಾಗಿ, ನಾವು “ಅವನ ಬಳಿಯಿಂದ ಓಡಿಹೋಗು”ವೆವು, ಅಥವಾ ಅವನಿಂದ ವಿಮುಖರಾಗುವೆವು. ಯಾರ ಬೋಧನೆಗಳು ಒಳ್ಳೇ ಕುರುಬನ ಸ್ವರಕ್ಕೆ ಹೊಂದಿಕೆಯಲ್ಲಿಲ್ಲವೋ ಅಂಥವರೊಂದಿಗೆ ಪ್ರತಿಕ್ರಿಯಿಸುವ ಏಕಮಾತ್ರ ಸೂಕ್ತ ವಿಧವು ಇದೇ ಆಗಿದೆ.

20 ಆದುದರಿಂದ, ಧರ್ಮಭ್ರಷ್ಟ ವಿಚಾರಧಾರೆಗಳನ್ನು ವ್ಯಕ್ತಪಡಿಸುವಂಥ ಜನರು ಎದುರಾದಾಗೆಲ್ಲಾ ನಾವು ದೇವರ ವಾಕ್ಯವು ಏನು ಹೇಳುತ್ತದೋ ಅದನ್ನು ಮಾಡಬೇಕು. ಅದು ಹೀಗೆ ತಿಳಿಸುತ್ತದೆ: “ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿ ಹೋಗಿರಿ.” (ಓರೆ ಅಕ್ಷರಗಳು ನಮ್ಮವು.) (ರೋಮಾಪುರ 16:​17; ತೀತ 3:10) ತದ್ರೀತಿಯಲ್ಲಿ, ಹಾನಿಕರ ಒಡನಾಡಿಗಳ ಅಪಾಯವನ್ನು ಎದುರಿಸುತ್ತಿರುವ ಕ್ರೈಸ್ತ ಯುವಜನರು, ಯುವ ತಿಮೊಥೆಯನಿಗೆ ಪೌಲನಿಂದ ಕೊಡಲ್ಪಟ್ಟ “ನೀನು ಯೌವನದ ಇಚ್ಛೆಗಳಿಗೆ ದೂರವಾಗಿರು” ಎಂಬ ಸಲಹೆಯನ್ನು ಅನ್ವಯಿಸಿಕೊಳ್ಳಬೇಕು. ಮತ್ತು ವಾರ್ತಾ ಮಾಧ್ಯಮದಲ್ಲಿ ಸುಳ್ಳು ಆಪಾದನೆಗಳನ್ನು ಎದುರಿಸುವಾಗ ನಾವು ಪೌಲನು ತಿಮೊಥೆಯನಿಗೆ ನೀಡಿದ ಈ ಬುದ್ಧಿವಾದವನ್ನು ಜ್ಞಾಪಿಸಿಕೊಳ್ಳುವೆವು: “ಅವರು [ಅನ್ಯರ ಸ್ವರಕ್ಕೆ ಕಿವಿಗೊಡುವವರು] . . . ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು. ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು.” (ಓರೆ ಅಕ್ಷರಗಳು ನಮ್ಮವು.) (2 ತಿಮೊಥೆಯ 2:22; 4:3-5) ಅನ್ಯರ ಸ್ವರವು ಎಷ್ಟೇ ಹಿತಕರವಾಗಿ ಕೇಳಿಬರಬಹುದಾದರೂ, ನಮ್ಮ ನಂಬಿಕೆಯನ್ನು ಉರುಳಿಸುವಂಥ ಎಲ್ಲಾ ರೀತಿಯ ವಿಷಯಗಳಿಂದ ನಾವು ದೂರ ಓಡಿಹೋಗುವೆವು.​—⁠ಕೀರ್ತನೆ 26:5; ಜ್ಞಾನೋಕ್ತಿ 7:5, 21; ಪ್ರಕಟನೆ 18:2, 4.

21 ಅನ್ಯರ ಸ್ವರವನ್ನು ಅಂಗೀಕರಿಸದಿರುವ ಮೂಲಕ, ಆತ್ಮಾಭಿಷಿಕ್ತ ಕ್ರೈಸ್ತರು ಲೂಕ 12:32 ರಲ್ಲಿ ಕಂಡುಬರುವ ಒಳ್ಳೇ ಕುರುಬನ ಮಾತುಗಳಿಗೆ ಪ್ರತಿಕ್ರಿಯಿಸುತ್ತಾರೆ. ಅಲ್ಲಿ ಯೇಸು ಅವರಿಗೆ ಹೇಳುವುದು: “ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.” ತದ್ರೀತಿಯಲ್ಲಿ, “ಬೇರೆ ಕುರಿಗಳು” ಯೇಸುವಿನ ಈ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲು ತವಕದಿಂದ ಕಾದಿರುವರು: “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.” (ಯೋಹಾನ 10:16; ಮತ್ತಾಯ 25:34) ಒಂದುವೇಳೆ ನಾವು ‘ಅನ್ಯರ ಸ್ವರ’ವನ್ನು ತಿರಸ್ಕರಿಸುವಲ್ಲಿ, ಎಷ್ಟು ಹೃದಯೋತ್ತೇಜಕ ಪ್ರತಿಫಲವು ನಮಗಾಗಿ ಕಾದಿರುತ್ತದೆ!

[ಪಾದಟಿಪ್ಪಣಿ]

^ ಪ್ಯಾರ. 11 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನಿಮಗೆ ನೆನಪಿದೆಯೊ?

• ಕುರಿಹಟ್ಟಿಯ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟಿರುವ ಅನ್ಯ ವ್ಯಕ್ತಿಯ ವರ್ಣನೆಯು ಹೇಗೆ ಸೈತಾನನಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ?

• ಇಂದು ಅನ್ಯರ ಸ್ವರವು ಹೇಗೆ ಕೇಳಿಬರುತ್ತದೆ?

• ನಾವು ಹೇಗೆ ಅನ್ಯರ ಸ್ವರವನ್ನು ಗುರುತಿಸಸಾಧ್ಯವಿದೆ?

• ಅನ್ಯರ ಸ್ವರಕ್ಕೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಮರಿಯಳನ್ನು ಯೇಸು ಹೆಸರು ಹಿಡಿದು ಕರೆದಾಗ ಅವಳು ಹೇಗೆ ಪ್ರತಿಕ್ರಿಯಿಸಿದಳು, ಮತ್ತು ಸ್ವಲ್ಪ ಸಮಯಾವಧಿಗೆ ಮುಂಚೆ ಯೇಸು ನುಡಿದ ಯಾವ ಹೇಳಿಕೆಯು ಈ ಘಟನೆಯಿಂದ ದೃಷ್ಟಾಂತಿಸಲ್ಪಟ್ಟಿದೆ? (ಬಿ) ಯಾವುದು ನಮ್ಮನ್ನು ಯೇಸುವಿಗೆ ನಿಕಟವಾಗಿ ಉಳಿಯುವಂತೆ ಪ್ರಚೋದಿಸುತ್ತದೆ?

3. ಕುರಿಹಟ್ಟಿಯ ಕುರಿತಾದ ಯೇಸುವಿನ ದೃಷ್ಟಾಂತವು ಮನಸ್ಸಿಗೆ ತರುವಂಥ ಪ್ರಶ್ನೆಗಳಲ್ಲಿ ಕೆಲವು ಯಾವುವು?

4. ಕುರುಬನ ಕುರಿತಾದ ದೃಷ್ಟಾಂತಕ್ಕನುಸಾರ ಕುರಿಗಳು ಯಾರ ಹಿಂದೆ ಹೋಗುತ್ತವೆ, ಮತ್ತು ಯಾರ ಹಿಂದೆ ಹೋಗುವುದಿಲ್ಲ?

5. ಯೋಹಾನ 10ನೆಯ ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟಿರುವಂಥ ರೀತಿಯ ಅನ್ಯನಿಗೆ ನಾವೇಕೆ ಅತಿಥಿಸತ್ಕಾರವನ್ನು ತೋರಿಸುವುದಿಲ್ಲ?

6, 7. ಸೈತಾನನು ಅನ್ಯನು ಹಾಗೂ ಕಳ್ಳನು ಎಂದು ಸೂಕ್ತವಾಗಿಯೇ ಕರೆಯಲ್ಪಡಸಾಧ್ಯವಿದೆ ಏಕೆ?

8. ಸೈತಾನನು ಯೆಹೋವನ ಮಾತುಗಳು ಮತ್ತು ಹೇತುಗಳನ್ನು ಹೇಗೆ ತಿರುಚಿದನು?

9. ಇಂದು ಅನ್ಯರ ಸ್ವರವು ಕೇಳಿಬರುವುದೆಂದು ನಾವೇಕೆ ನಿರೀಕ್ಷಿಸಸಾಧ್ಯವಿದೆ?

10. ಇಂದು ಅನ್ಯರ ಸ್ವರವು ಕೇಳಿಬರುತ್ತಿರುವ ಒಂದು ವಿಧವು ಯಾವುದು?

11. ಎರಡನೆಯ ಪೇತ್ರ 2:​1, 3 ರಲ್ಲಿ ಕಂಡುಬರುವ ಮಾತುಗಳು, ಧರ್ಮಭ್ರಷ್ಟರ ವಿಧಾನವನ್ನು ಮತ್ತು ಗುರಿಯನ್ನು ಹೇಗೆ ಬಯಲುಪಡಿಸುತ್ತದೆ?

12. (ಎ) ನಮ್ಮ ಸಹವಾಸಗಳು ನಮ್ಮನ್ನು ಅನ್ಯರ ಸ್ವರಕ್ಕೆ ಒಡ್ಡಸಾಧ್ಯವಿದೆ ಹೇಗೆ? (ಬಿ) ಸೈತಾನನ ಮತ್ತು ಇಂದಿನ ಅನ್ಯರ ಚತುರೋಪಾಯಗಳ ನಡುವೆ ಯಾವ ಹೋಲಿಕೆಗಳಿವೆ?

13. ದಾವೀದನು ಯಾವ ವಿವೇಕಯುತ ಮಾರ್ಗವನ್ನು ಅನುಸರಿಸಿದನು, ಮತ್ತು ನಾವು ಅವನನ್ನು ಅನುಕರಿಸಸಾಧ್ಯವಿರುವ ಒಂದು ವಿಧವು ಯಾವುದು?

14. ಕೆಲವೊಮ್ಮೆ ವಾರ್ತಾ ಮಾಧ್ಯಮಗಳು ಹೇಗೆ ಅನ್ಯರ ಸ್ವರವನ್ನು ಪ್ರಚಾರಮಾಡುತ್ತವೆ?

15. ವಾರ್ತಾ ಮಾಧ್ಯಮದಲ್ಲಿ ಪ್ರಸ್ತುತಪಡಿಸಲ್ಪಡುವ ಪ್ರತಿಯೊಂದನ್ನೂ ನಂಬುವುದು ಅವಿವೇಕತನವಾಗಿದೆ ಏಕೆ?

16. (ಎ) ಅಕ್ಷರಾರ್ಥ ಕುರಿಗಳ ವರ್ತನೆಯು, ಯೋಹಾನ 10:4 ರಲ್ಲಿ ಕಂಡುಬರುವ ಯೇಸುವಿನ ಮಾತುಗಳ ಸತ್ಯತೆಯನ್ನು ಹೇಗೆ ದೃಷ್ಟಾಂತಿಸುತ್ತದೆ? (ಬಿ) ಏನು ಮಾಡುವಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ?

17. (ಎ) ನಾವು ಹೇಗೆ ಯೆಹೋವನ ಸ್ವರದೊಂದಿಗೆ ಚಿರಪರಿಚಿತರಾಗುತ್ತೇವೆ? (ಬಿ) ಯೆಹೋವನ ಜ್ಞಾನವು ನಮ್ಮನ್ನು ಏನು ಮಾಡುವಂತೆ ಶಕ್ತರನ್ನಾಗಿಸುತ್ತದೆ?

18. (ಎ) ಯೆಹೋವನ ಸ್ವರವನ್ನು ತಿಳಿದುಕೊಂಡಿರುವುದರಲ್ಲಿ ಏನು ಒಳಗೂಡಿದೆ? (ಬಿ) ಮತ್ತಾಯ 17:5 ಕ್ಕನುಸಾರ ನಾವು ಯೇಸುವಿನ ಸ್ವರಕ್ಕೆ ಏಕೆ ವಿಧೇಯರಾಗಬೇಕು?

19. ಅನ್ಯರ ಸ್ವರಕ್ಕೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು?

20. (ಎ) ವಂಚನಾತ್ಮಕ ಅಪೊಸ್ತಲರು, (ಬಿ) ಹಾನಿಕರ ಒಡನಾಡಿಗಳು, (ಸಿ) ವಾರ್ತಾ ಮಾಧ್ಯಮದ ಪೂರ್ವಾಗ್ರಹಪೀಡಿತ ವರದಿಗಳನ್ನು ಎದುರಿಸುವಾಗ ನಾವು ಹೇಗೆ ಪ್ರತಿಕ್ರಿಯಿಸುವೆವು?

21. ಅನ್ಯರ ಸ್ವರವನ್ನು ತಿರಸ್ಕರಿಸುವಂಥವರಿಗೆ ಯಾವ ಪ್ರತಿಫಲವು ಕಾದಿರಿಸಲ್ಪಟ್ಟಿದೆ?

[ಪುಟ 15ರಲ್ಲಿರುವ ಚಿತ್ರ]

ಮರಿಯಳು ಕ್ರಿಸ್ತನನ್ನು ಗುರುತಿಸಿದಳು

[ಪುಟ 16ರಲ್ಲಿರುವ ಚಿತ್ರ]

ಅನ್ಯ ವ್ಯಕ್ತಿಯು ನೇರವಾದ ರೀತಿಯಲ್ಲಿ ಕುರಿಗಳ ಬಳಿಗೆ ಬರುವುದಿಲ್ಲ

[ಪುಟ 18ರಲ್ಲಿರುವ ಚಿತ್ರ]

ಅನ್ಯರ ಸ್ವರಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ?