ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು “ಒಮ್ಮುಖವಾಗಿ” ಕೊಂಡಾಡಿರಿ

ದೇವರನ್ನು “ಒಮ್ಮುಖವಾಗಿ” ಕೊಂಡಾಡಿರಿ

ದೇವರನ್ನು “ಒಮ್ಮುಖವಾಗಿ” ಕೊಂಡಾಡಿರಿ

‘ಒಮ್ಮುಖವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡಿರಿ.’ ​—⁠ರೋಮಾಪುರ 15:⁠6.

ಎಲ್ಲಾ ಕ್ರೈಸ್ತರು ಒಂದೇ ರೀತಿಯ ಆಯ್ಕೆಗಳನ್ನು ಮಾಡುವುದಿಲ್ಲ ಅಥವಾ ಒಂದೇ ರೀತಿಯ ಅಭಿರುಚಿಗಳನ್ನು ಹೊಂದಿರುವುದಿಲ್ಲ. ಆದರೂ, ಜೀವಕ್ಕೆ ನಡೆಸುವ ಹಾದಿಯಲ್ಲಿ ಕ್ರೈಸ್ತರೆಲ್ಲರೂ ಐಕ್ಯಭಾವದಿಂದ ನಡೆಯಬೇಕಾಗಿದೆ. ಇದು ಸಾಧ್ಯವೋ? ಹೌದು, ಒಂದುವೇಳೆ ನಾವು ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡ ಸಮಸ್ಯೆಗಳಾಗಿ ಮಾರ್ಪಡುವಂತೆ ಬಿಡದಿರುವುದಾದರೆ ಖಂಡಿತ ಇದು ಸಾಧ್ಯ. ಪ್ರಥಮ ಶತಮಾನದಲ್ಲಿನ ಜೊತೆ ವಿಶ್ವಾಸಿಗಳಿಗೆ ಅಪೊಸ್ತಲ ಪೌಲನು ಕಲಿಸಿದ ಒಂದು ಪಾಠವು ಇದೇ ಆಗಿತ್ತು. ಈ ಪ್ರಮುಖ ಅಂಶವನ್ನು ಅವನು ಹೇಗೆ ವಿವರಿಸಿದನು? ಮತ್ತು ಇಂದು ಅವನ ಪ್ರೇರಿತ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?

ಕ್ರೈಸ್ತ ಐಕ್ಯದ ಮಹತ್ವ

2 ಕ್ರೈಸ್ತ ಐಕ್ಯವು ಅತ್ಯಾವಶ್ಯಕವಾಗಿದೆ ಎಂಬುದು ಪೌಲನಿಗೆ ಗೊತ್ತಿತ್ತು, ಮತ್ತು ಕ್ರೈಸ್ತರು ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಅವನು ಅತ್ಯುತ್ತಮ ಸಲಹೆಯನ್ನು ಕೊಟ್ಟನು. (ಎಫೆಸ 4:1-3; ಕೊಲೊಸ್ಸೆ 3:12-14) ಆದರೂ, 20ಕ್ಕಿಂತಲೂ ಹೆಚ್ಚು ವರ್ಷಗಳ ಅವಧಿಯಲ್ಲಿ ಅನೇಕ ಸಭೆಗಳನ್ನು ಸ್ಥಾಪಿಸಿ, ಇತರ ಸಭೆಗಳನ್ನು ಸಂದರ್ಶಿಸಿದ ಬಳಿಕ, ಐಕ್ಯವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿರಸಾಧ್ಯವಿದೆ ಎಂಬುದು ಅವನಿಗೆ ಗೊತ್ತಿತ್ತು. (1 ಕೊರಿಂಥ 1:11-13; ಗಲಾತ್ಯ 2:11-14) ಹೀಗೆ, ರೋಮ್‌ನಲ್ಲಿ ವಾಸಿಸುತ್ತಿದ್ದ ಜೊತೆ ವಿಶ್ವಾಸಿಗಳಿಗೆ ಅವನು ಉತ್ತೇಜನ ನೀಡಿದ್ದು: ‘ಸ್ಥಿರಚಿತ್ತವನ್ನೂ ಆದರಣೆಯನ್ನೂ ಕೊಡುವ ದೇವರು ನೀವು ಏಕಮನಸ್ಸಿನಿಂದ ಒಮ್ಮುಖವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡುವಂತೆ ಮಾಡಲಿ.’ (ರೋಮಾಪುರ 15:5, 6) ತದ್ರೀತಿಯಲ್ಲಿ ಇಂದು ನಾವು ಯೆಹೋವ ದೇವರ ಜನರಿಂದ ಕೂಡಿರುವ ಒಂದು ಐಕ್ಯ ಗುಂಪಿನೋಪಾದಿ “ಒಮ್ಮುಖವಾಗಿ” ಆತನನ್ನು ಕೊಂಡಾಡಬೇಕು. ಎಷ್ಟರ ಮಟ್ಟಿಗೆ ನಾವು ಯೆಹೋವನನ್ನು ಹೀಗೆ ಕೊಂಡಾಡುತ್ತಿದ್ದೇವೆ?

3 ರೋಮ್‌ನಲ್ಲಿದ್ದ ಅನೇಕ ಕ್ರೈಸ್ತರು ಪೌಲನ ವೈಯಕ್ತಿಕ ಮಿತ್ರರಾಗಿದ್ದರು. (ರೋಮಾಪುರ 16:3-16) ಅವರ ಹಿನ್ನೆಲೆಗಳು ಬೇರೆ ಬೇರೆಯಾಗಿದ್ದರೂ, ತನ್ನೆಲ್ಲಾ ಸಹೋದರರನ್ನು ಪೌಲನು ‘ದೇವರಿಗೆ ಪ್ರಿಯರಾದ’ ಜನರಾಗಿ ಸ್ವೀಕರಿಸಿದನು. ಅವನು ಬರೆದುದು: “ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.” ರೋಮ್‌ನಲ್ಲಿದ್ದವರು ಅನೇಕ ವಿಧಗಳಲ್ಲಿ ಆದರ್ಶಪ್ರಾಯರಾಗಿದ್ದರು ಎಂಬುದು ಸುಸ್ಪಷ್ಟ. (ರೋಮಾಪುರ 1:​2, 6-8; 15:14) ಅದೇ ಸಮಯದಲ್ಲಿ, ಸಭೆಯ ಕೆಲವು ಸದಸ್ಯರಿಗೆ ಕೆಲವೊಂದು ವಿಚಾರಗಳಲ್ಲಿ ಪರಸ್ಪರ ಭಿನ್ನವಾದ ದೃಷ್ಟಿಕೋನಗಳಿದ್ದವು. ಇಂದು ಕ್ರೈಸ್ತರು ಬೇರೆ ಬೇರೆ ಹಿನ್ನೆಲೆಗಳು ಹಾಗೂ ಸಂಸ್ಕೃತಿಗಳಿಂದ ಬಂದವರಾಗಿರುವುದರಿಂದ, ಭಿನ್ನಾಭಿಪ್ರಾಯಗಳನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತಾದ ಪೌಲನ ಪ್ರೇರಿತ ಸಲಹೆಯನ್ನು ಅಧ್ಯಯನಮಾಡುವುದು, “ಒಮ್ಮುಖವಾಗಿ” ಮಾತಾಡಲು ಅವರಿಗೆ ಸಹಾಯಮಾಡಬಲ್ಲದು.

4 ರೋಮ್‌ನಲ್ಲಿ ಯೆಹೂದ್ಯ ಹಾಗೂ ಅನ್ಯಜನಾಂಗಗಳ ವಿಶ್ವಾಸಿಗಳು ಇದ್ದರು. (ರೋಮಾಪುರ 4:1; 11:13) ಕೆಲವು ಯೆಹೂದಿ ಕ್ರೈಸ್ತರು, ಮೋಶೆಯ ಧರ್ಮಶಾಸ್ತ್ರದ ಕೆಳಗೆ ಆಚರಿಸುತ್ತಿದ್ದ ಕೆಲವೊಂದು ಪದ್ಧತಿಗಳು ರಕ್ಷಣೆಗೆ ಅಗತ್ಯವಿರಲಿಲ್ಲ ಎಂಬುದನ್ನು ಗ್ರಹಿಸಬೇಕಿತ್ತಾದರೂ ಅಂಥ ಪದ್ಧತಿಗಳನ್ನು ನಿಲ್ಲಿಸಲಿಲ್ಲ ಎಂಬುದು ಸುವ್ಯಕ್ತ. ಇನ್ನೊಂದು ಕಡೆಯಲ್ಲಿ, ಕ್ರೈಸ್ತರಾಗುವುದಕ್ಕೆ ಮೊದಲು ತಾವು ಅನುಸರಿಸುತ್ತಿದ್ದ ಕಟ್ಟುಪಾಡುಗಳಿಂದ ಕ್ರಿಸ್ತನ ಯಜ್ಞವು ತಮ್ಮನ್ನು ಬಿಡಿಸಿದೆಯೆಂದು ಅನೇಕ ಯೆಹೂದಿ ಕ್ರೈಸ್ತರು ಅಂಗೀಕರಿಸಿದರು. ಇದರ ಫಲಿತಾಂಶವಾಗಿ, ಅವರು ತಮ್ಮ ವೈಯಕ್ತಿಕ ರೂಢಿಗಳು ಹಾಗೂ ಪದ್ಧತಿಗಳಲ್ಲಿ ಕೆಲವನ್ನು ಬದಲಾಯಿಸಿದರು. (ಗಲಾತ್ಯ 4:​8-11) ಹಾಗಿದ್ದರೂ, ಪೌಲನು ಸೂಚಿಸಿದಂತೆ, ಎಲ್ಲರೂ ‘ದೇವರಿಗೆ ಪ್ರಿಯರಾದ’ ಜನರಾಗಿದ್ದರು. ಅವರು ಒಬ್ಬರು ಇನ್ನೊಬ್ಬರ ಕಡೆಗೆ ಯೋಗ್ಯವಾದ ಮನೋಭಾವವನ್ನು ಕಾಪಾಡಿಕೊಂಡಿರುತ್ತಿದ್ದಲ್ಲಿ, ಎಲ್ಲರೂ “ಒಮ್ಮುಖವಾಗಿ” ದೇವರನ್ನು ಸ್ತುತಿಸಸಾಧ್ಯವಿತ್ತು. ಇಂದು ಸಹ ನಮಗೂ ಕೆಲವೊಂದು ವಿಚಾರಗಳ ಬಗ್ಗೆ ಬೇರೆ ಬೇರೆ ದೃಷ್ಟಿಕೋನಗಳಿರಬಹುದು. ಆದುದರಿಂದ, ಆ ಪ್ರಮುಖ ಮೂಲತತ್ತ್ವವನ್ನು ಪೌಲನು ಹೇಗೆ ವಿವರಿಸುತ್ತಾನೆ ಎಂಬುದನ್ನು ನಾವು ಜಾಗರೂಕತೆಯಿಂದ ಪರಿಗಣಿಸುವುದು ಒಳ್ಳೇದು.​—⁠ರೋಮಾಪುರ 15:⁠4.

‘ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಿರಿ’

5 ರೋಮ್‌ನವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು, ಬೇರೆ ಬೇರೆ ಅಭಿಪ್ರಾಯಗಳಿರುವಂಥ ಒಂದು ಸನ್ನಿವೇಶದ ಕುರಿತು ಮಾತಾಡುತ್ತಾನೆ. ಅವನು ಬರೆಯುವುದು: “ಒಬ್ಬನು ಯಾವದನ್ನಾದರೂ ತಿನ್ನಬಹುದೆಂದು ನಂಬುತ್ತಾನೆ; ನಂಬಿಕೆಯಲ್ಲಿ ದೃಢವಿಲ್ಲದವನು ಕಾಯಿಪಲ್ಯಗಳನ್ನು ಮಾತ್ರ ತಿನ್ನುತ್ತಾನೆ.” ಏಕೆ? ಮೋಶೆಯ ಧರ್ಮಶಾಸ್ತ್ರದ ಕೆಳಗೆ ಹಂದಿ ಮಾಂಸವು ಅಂಗೀಕೃತ ಆಹಾರವಾಗಿರಲಿಲ್ಲ. (ರೋಮಾಪುರ 14:2; ಯಾಜಕಕಾಂಡ 11:7) ಆದರೆ ಯೇಸುವಿನ ಮರಣಾನಂತರ ಆ ಧರ್ಮಶಾಸ್ತ್ರವನ್ನು ಪಾಲಿಸುವ ಹಂಗಿರಲಿಲ್ಲ. (ಎಫೆಸ 2:​14, 15) ಇದಲ್ಲದೆ, ಯೇಸುವಿನ ಮರಣಾನಂತರ ಮೂರೂವರೆ ವರ್ಷಗಳ ಬಳಿಕ, ದೇವರ ದೃಷ್ಟಿಕೋನದಿಂದ ಯಾವುದೇ ಆಹಾರವನ್ನು ಅಶುದ್ಧವಾಗಿ ಪರಿಗಣಿಸಬಾರದು ಎಂದು ಒಬ್ಬ ದೇವದೂತನು ಅಪೊಸ್ತಲ ಪೇತ್ರನಿಗೆ ಹೇಳಿದನು. (ಅ. ಕೃತ್ಯಗಳು 11:7-12) ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಕೆಲವು ಯೆಹೂದಿ ಕ್ರೈಸ್ತರಿಗೆ, ತಾವು ಹಂದಿ ಮಾಂಸವನ್ನು ತಿನ್ನಸಾಧ್ಯವಿದೆ ಅಥವಾ ಧರ್ಮಶಾಸ್ತ್ರದ ಕೆಳಗೆ ನಿಷೇಧಿಸಲ್ಪಟ್ಟಿದ್ದ ಇನ್ನಿತರ ಆಹಾರ ಪದಾರ್ಥಗಳನ್ನು ಆಸ್ವಾದಿಸಸಾಧ್ಯವಿದೆ ಎಂದು ಅನಿಸಿರಬಹುದು.

6 ಆದರೂ, ಈ ಮುಂಚೆ ಅಶುದ್ಧವಾಗಿ ಪರಿಗಣಿಸಲ್ಪಡುತ್ತಿದ್ದ ಆಹಾರ ಪದಾರ್ಥಗಳನ್ನು ತಿನ್ನುವ ಆಲೋಚನೆಯೇ ಇತರ ಯೆಹೂದಿ ಕ್ರೈಸ್ತರಿಗೆ ಅಸಹ್ಯಕರವಾಗಿದ್ದಿರಬಹುದು. ಇಂಥ ಸೂಕ್ಷ್ಮಮನಸ್ಸಿನ ವ್ಯಕ್ತಿಗಳು, ಯೆಹೂದಿ ಹಿನ್ನೆಲೆಯಿಂದ ಬಂದಿರುವ ತಮ್ಮ ಜೊತೆ ಕ್ರೈಸ್ತರು ಇಂಥ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನೋಡಿ ಸಹಜವಾಗಿಯೇ ಅಸಮಾಧಾನಗೊಂಡಿರಬಹುದು. ಅಷ್ಟುಮಾತ್ರವಲ್ಲ, ಯಾರ ಧಾರ್ಮಿಕ ಹಿನ್ನೆಲೆಯು ಎಂದೂ ಆಹಾರಪಥ್ಯಕ್ಕೆ ಸಂಬಂಧಿಸಿದ ನಿಷೇಧಗಳನ್ನು ಒಳಗೂಡಿರಲಿಲ್ಲವೋ ಅಂಥ ಕೆಲವು ಅನ್ಯಜನಾಂಗದ ಕ್ರೈಸ್ತರು, ಆಹಾರದ ಬಗ್ಗೆ ಯಾಕೆ ಇವರು ಇಷ್ಟು ದೊಡ್ಡ ರಂಪಾಟವೆಬ್ಬಿಸುತ್ತಿದ್ದಾರೆ ಎಂದು ಕಕ್ಕಾಬಿಕ್ಕಿಯಾಗಿದ್ದಿರಬಹುದು. ರಕ್ಷಣೆಯನ್ನು ಪಡೆಯಲು ಅಂಥ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರುವ ಅಗತ್ಯವಿದೆ ಎಂದು ಒಬ್ಬನು ಎಷ್ಟರ ತನಕ ಇತರರ ಮೇಲೆ ಒತ್ತಾಯ ಹೇರದೇ ಇರುತ್ತಿದ್ದನೊ, ಅಷ್ಟರ ವರೆಗೆ ಅವನು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದರಲ್ಲಿ ತಪ್ಪೇನಿರಲಿಲ್ಲ ಎಂಬುದಂತೂ ನಿಶ್ಚಯ. ಆದರೂ, ಭಿನ್ನ ದೃಷ್ಟಿಕೋನಗಳು ಸಭೆಯಲ್ಲಿ ಸುಲಭವಾಗಿಯೇ ವಾಗ್ವಾದವನ್ನು ಉಂಟುಮಾಡುವ ಸಾಧ್ಯತೆಯಿತ್ತು. ರೋಮ್‌ನಲ್ಲಿದ್ದ ಕ್ರೈಸ್ತರು ಇಂಥ ಭಿನ್ನಾಭಿಪ್ರಾಯಗಳು ದೇವರನ್ನು “ಒಮ್ಮುಖವಾಗಿ” ಕೊಂಡಾಡುವುದರಿಂದ ತಮ್ಮನ್ನು ತಡೆಗಟ್ಟದಂತೆ ಜಾಗರೂಕರಾಗಿರುವ ಅಗತ್ಯವಿತ್ತು.

7 ಪೌಲನು ಎರಡನೆಯ ಉದಾಹರಣೆಯನ್ನು ಕೊಡುತ್ತಾನೆ: “ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ವಿಶೇಷವೆಂದೆಣಿಸುತ್ತಾನೆ; ಮತ್ತೊಬ್ಬನು ಎಲ್ಲಾ ದಿವಸಗಳನ್ನೂ ವಿಶೇಷವೆಂದೆಣಿಸುತ್ತಾನೆ.” (ರೋಮಾಪುರ 14:5ಎ) ಮೋಶೆಯ ಧರ್ಮಶಾಸ್ತ್ರದ ಕೆಳಗೆ, ಸಬ್ಬತ್ತಿನಂದು ಯಾವ ಕೆಲಸವನ್ನೂ ಮಾಡಬಾರದಾಗಿತ್ತು. ಆ ದಿನದಲ್ಲಿ ಪ್ರಯಾಣಮಾಡುವುದು ಸಹ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿತ್ತು. (ವಿಮೋಚನಕಾಂಡ 20:8-10; ಮತ್ತಾಯ 24:20; ಅ. ಕೃತ್ಯಗಳು 1:12) ಆದರೂ, ಧರ್ಮಶಾಸ್ತ್ರವು ರದ್ದುಪಡಿಸಲ್ಪಟ್ಟಾಗ, ಆ ನಿಷೇಧಗಳು ಸಹ ನಿರ್ಮೂಲನಮಾಡಲ್ಪಟ್ಟವು. ಹೀಗಿದ್ದರೂ, ಕೆಲವು ಯೆಹೂದಿ ಕ್ರೈಸ್ತರು ಈ ಮುಂಚೆ ಪವಿತ್ರವಾಗಿ ಪರಿಗಣಿಸುತ್ತಿದ್ದ ದಿನದಂದು ಯಾವುದೇ ರೀತಿಯ ಕೆಲಸವನ್ನು ಮಾಡುವುದು ಅಥವಾ ತುಂಬ ದೂರ ಪ್ರಯಾಣಿಸುವುದರ ಕುರಿತು ಕಸಿವಿಸಿಪಡುತ್ತಿದ್ದಿರಬಹುದು. ದೇವರ ದೃಷ್ಟಿಕೋನದಲ್ಲಿ ಸಬ್ಬತ್‌ ನಿಯಮವು ಜಾರಿಯಲ್ಲಿಲ್ಲದಿದ್ದರೂ, ಕ್ರೈಸ್ತರಾಗಿ ಪರಿಣಮಿಸಿದ ಬಳಿಕವೂ ಇವರು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಏಳನೆಯ ದಿನವನ್ನು ಸಂಪೂರ್ಣವಾಗಿ ಬದಿಗಿರಿಸುತ್ತಿದ್ದಿರಬಹುದು. ಹೀಗೆ ಮಾಡುವ ಮೂಲಕ ಅವರು ತಪ್ಪು ಮಾಡುತ್ತಿದ್ದರೋ? ಇಲ್ಲ, ಸಬ್ಬತ್‌ ಆಚರಣೆಯು ದೇವರಿಂದ ಅಗತ್ಯಪಡಿಸಲ್ಪಟ್ಟಿದೆ ಎಂದು ಅವರು ಒತ್ತಾಯಿಸದಿದ್ದರೆ ಸಾಕು, ಅಷ್ಟೆ. ಆದುದರಿಂದ, ತನ್ನ ಕ್ರೈಸ್ತ ಸಹೋದರರ ಮನಸ್ಸಾಕ್ಷಿಗೆ ಪರಿಗಣನೆ ತೋರಿಸುತ್ತಾ ಪೌಲನು ಬರೆದುದು: “ಪ್ರತಿಯೊಬ್ಬನು ತನ್ನ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿರಬೇಕು.”​—⁠ರೋಮಾಪುರ 14:⁠5ಬಿ.

8 ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಹೆಣಗಾಡುತ್ತಿದ್ದವರೊಂದಿಗೆ ತಾಳ್ಮೆಯಿಂದ ವ್ಯವಹರಿಸುವಂತೆ ಪೌಲನು ತನ್ನ ಸಹೋದರರಿಗೆ ಆದರಣೀಯವಾಗಿ ಉತ್ತೇಜಿಸಿದರೂ, ರಕ್ಷಣೆಯನ್ನು ಪಡೆಯಲಿಕ್ಕಾಗಿ ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗುವಂತೆ ತಮ್ಮ ಜೊತೆ ವಿಶ್ವಾಸಿಗಳನ್ನು ಒತ್ತಾಯಿಸಲು ಪ್ರಯತ್ನಿಸುತ್ತಿದ್ದವರನ್ನು ಅವನು ಬಲವಾಗಿ ಖಂಡಿಸಿದನು. ಉದಾಹರಣೆಗೆ, ಸಾ.ಶ. 61ರ ಸುಮಾರಿಗೆ ಪೌಲನು ಇಬ್ರಿಯ ಪುಸ್ತಕವನ್ನು ಬರೆದನು. ಇದು, ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗುವುದರಲ್ಲಿ ಯಾವುದೇ ಮೌಲ್ಯವಿಲ್ಲ, ಏಕೆಂದರೆ ಯೇಸುವಿನ ಈಡಿನ ಯಜ್ಞದ ಮೇಲಾಧಾರಿತವಾದ ಒಂದು ಉತ್ಕೃಷ್ಟ ನಿರೀಕ್ಷೆಯು ಕ್ರೈಸ್ತರಿಗಿದೆ ಎಂಬುದನ್ನು ಯೆಹೂದಿ ಕ್ರೈಸ್ತರಿಗೆ ಸ್ಪಷ್ಟವಾಗಿ ವಿವರಿಸುತ್ತಾ ಬರೆದ ಒಂದು ಪ್ರಬಲ ಪತ್ರವಾಗಿತ್ತು.​—⁠ಗಲಾತ್ಯ 5:1-12; ತೀತ 1:10, 11; ಇಬ್ರಿಯ 10:1-17.

9 ಈಗಾಗಲೇ ನಾವು ನೋಡಿರುವಂತೆ, ಕ್ರೈಸ್ತ ಮೂಲತತ್ತ್ವಗಳ ಸ್ಪಷ್ಟವಾದ ಉಲ್ಲಂಘನೆಯು ಒಳಗೂಡದಿರುವಷ್ಟರ ತನಕ, ಬೇರೆ ಬೇರೆ ಆಯ್ಕೆಗಳನ್ನು ಮಾಡುವುದು ಐಕ್ಯಕ್ಕೆ ಒಂದು ಬೆದರಿಕೆಯಾಗಿರಬೇಕೆಂದೇನಿಲ್ಲ ಎಂದು ಪೌಲನು ವಾದಿಸುತ್ತಾನೆ. ಆದುದರಿಂದ, ದುರ್ಬಲವಾದ ಮನಸ್ಸಾಕ್ಷಿಯಿರುವ ಕ್ರೈಸ್ತರಿಗೆ ಪೌಲನು ಹೀಗೆ ಕೇಳುತ್ತಾನೆ: “ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವದೇನು?” ಮತ್ತು ಬಲವಾದ ಮನಸ್ಸಾಕ್ಷಿಯಿರುವವರಿಗೆ (ಯಾರ ಮನಸ್ಸಾಕ್ಷಿಯು ಧರ್ಮಶಾಸ್ತ್ರದ ಕೆಳಗೆ ನಿಷೇಧಿಸಲ್ಪಟ್ಟಿದ್ದಂಥ ಕೆಲವು ಆಹಾರ ಪದಾರ್ಥಗಳನ್ನು ತಿನ್ನುವಂತೆ ಅಥವಾ ಸಬ್ಬತ್ತಿನಂದು ಐಹಿಕ ಕೆಲಸವನ್ನು ಮಾಡುವಂತೆ ಅನುಮತಿಸುತ್ತದೋ ಅಂಥವರಿಗೆ) ಅವನು ಕೇಳುವುದು: “ನಿನ್ನ ಸಹೋದರನನ್ನು ನೀನು ಹೀನೈಸುವದೇನು?” (ರೋಮಾಪುರ 14:10) ಪೌಲನಿಗನುಸಾರ, ದುರ್ಬಲ ಮನಸ್ಸಾಕ್ಷಿಯಿರುವ ಕ್ರೈಸ್ತರು, ವಿಶಾಲ ಮನೋಭಾವವಿರುವ ತಮ್ಮ ಸಹೋದರರನ್ನು ಖಂಡಿಸುವುದರಿಂದ ದೂರವಿರಬೇಕಾಗಿತ್ತು. ಅದೇ ಸಮಯದಲ್ಲಿ, ಪ್ರಬಲವಾದ ಮನಸ್ಸಾಕ್ಷಿಯಿರುವ ಕ್ರೈಸ್ತರು, ಕೆಲವೊಂದು ಕ್ಷೇತ್ರಗಳಲ್ಲಿ ಇನ್ನೂ ದುರ್ಬಲ ಮನಸ್ಸಾಕ್ಷಿಯನ್ನು ಹೊಂದಿರುವವರನ್ನು ಹೀನೈಸಬಾರದಾಗಿತ್ತು. ಎಲ್ಲರೂ ಇತರರ ಯೋಗ್ಯ ಹೇತುಗಳನ್ನು ಗೌರವಿಸಬೇಕು ಮತ್ತು ‘ಯಾರೂ ತಮ್ಮ ಯೋಗ್ಯತೆಗೆ ಮೀರಿ ತಮ್ಮನ್ನು ಭಾವಿಸಿಕೊಳ್ಳ’ಬಾರದು.​—⁠ರೋಮಾಪುರ 12:3, 18.

10 ಪೌಲನು ಒಂದು ಸಮತೂಕ ನೋಟವನ್ನು ಈ ರೀತಿಯಲ್ಲಿ ವಿವರಿಸಿದನು: “ತಿನ್ನುವವನು ತಿನ್ನದವನನ್ನು ಹೀನೈಸಬಾರದು; ತಿನ್ನದವನು ತಿನ್ನುವವನನ್ನು ದೋಷಿಯೆಂದು ಎಣಿಸಬಾರದು. ದೇವರು ಇಬ್ಬರನ್ನೂ ಸೇರಿಸಿಕೊಂಡಿದ್ದಾನಲ್ಲಾ.” ಇದಲ್ಲದೆ ಅವನು ಮುಂದುವರಿಸಿ ಹೇಳುವುದು: ‘ಕ್ರಿಸ್ತನು ನಮ್ಮನ್ನು ಸ್ವೀಕರಿಸಿಕೊಂಡನು, ಇದು ದೇವರಿಗೆ ಮಹಿಮೆಯನ್ನು ಉಂಟುಮಾಡುತ್ತದೆ.’ ಪ್ರಬಲವಾದ ಮನಸ್ಸಾಕ್ಷಿಯಿರುವವರು ಮತ್ತು ದುರ್ಬಲವಾದ ಮನಸ್ಸಾಕ್ಷಿಯಿರುವವರು, ಈ ಎರಡೂ ರೀತಿಯ ಜನರು ದೇವರಿಗೂ ಕ್ರಿಸ್ತನಿಗೂ ಸ್ವೀಕಾರಾರ್ಹರಾಗಿರುವುದರಿಂದ, ನಮಗೂ ತದ್ರೀತಿಯ ವಿಶಾಲ ಮನೋಭಾವವಿರಬೇಕು ಮತ್ತು ನಾವು “ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು.” (ರೋಮಾಪುರ 14:3; 15:​7, ಪರಿಶುದ್ಧ ಬೈಬಲ್‌ *) ಈ ವಿಚಾರವನ್ನು ಯಾರು ತಾನೇ ಸಮ್ಮತಿಸದಿರಸಾಧ್ಯವಿದೆ?

ಸಹೋದರ ಪ್ರೀತಿಯು ಇಂದು ಐಕ್ಯವನ್ನು ಉಂಟುಮಾಡುತ್ತದೆ

11 ರೋಮ್‌ನವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಅಸಾಮಾನ್ಯವಾದ ಒಂದು ಸನ್ನಿವೇಶದ ಕುರಿತು ಮಾತಾಡುತ್ತಾನೆ. ಇತ್ತೀಚೆಗೆ ಯೆಹೋವನು ಒಂದು ಒಡಂಬಡಿಕೆಯನ್ನು ರದ್ದುಪಡಿಸಿ, ಹೊಸ ಒಡಂಬಡಿಕೆಯೊಂದನ್ನು ಸ್ಥಾಪಿಸಿದ್ದನು. ಇದಕ್ಕೆ ಹೊಂದಿಕೊಳ್ಳುವುದು ಕೆಲವರಿಗೆ ತುಂಬ ಕಷ್ಟಕರವಾಗಿತ್ತು. ಇದೇ ನಿರ್ದಿಷ್ಟ ಸನ್ನಿವೇಶವು ಇಂದು ಇಲ್ಲವಾದರೂ, ಕೆಲವೊಮ್ಮೆ ತದ್ರೀತಿಯ ವಿವಾದಾಂಶಗಳು ಏಳಬಹುದು.

12 ಉದಾಹರಣೆಗೆ, ಕ್ರೈಸ್ತ ಸ್ತ್ರೀಯೊಬ್ಬಳು ಒಂದು ಕಾಲದಲ್ಲಿ, ಉಡುಪು ಹಾಗೂ ಹೊರತೋರಿಕೆಯಲ್ಲಿ ನಿರಾಡಂಬರತೆಯನ್ನು ಅಗತ್ಯಪಡಿಸುತ್ತಿದ್ದ ಒಂದು ಧರ್ಮಕ್ಕೆ ಸೇರಿದವಳಾಗಿದ್ದಿರಬಹುದು. ಅವಳು ಸತ್ಯವನ್ನು ಸ್ವೀಕರಿಸಿದಾಗ, ಸೂಕ್ತವಾದ ಸಂದರ್ಭಗಳಲ್ಲಿ ಸಭ್ಯವಾದ, ಬಣ್ಣಬಣ್ಣದ ಉಡುಪುಗಳನ್ನು ಧರಿಸುವುದು ಅಥವಾ ಮಿತವಾದ ಪ್ರಮಾಣದಲ್ಲಿ ಪ್ರಸಾಧನಗಳನ್ನು (ಮೇಕಪ್‌) ಉಪಯೋಗಿಸುವುದರಲ್ಲಿ ತಪ್ಪೇನಿಲ್ಲ ಎಂಬ ವಿಚಾರಧಾರೆಗೆ ಹೊಂದಿಕೊಳ್ಳಲು ಅವಳಿಗೆ ಕಷ್ಟವಾಗಬಹುದು. ಇದರಲ್ಲಿ ಯಾವುದೇ ಬೈಬಲ್‌ ಮೂಲತತ್ತ್ವವು ಒಳಗೂಡಿಲ್ಲದಿರುವುದರಿಂದ, ಯಾರೇ ಆಗಲಿ ಈ ಕ್ರೈಸ್ತ ಸ್ತ್ರೀಯು ತನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿ ಕಾರ್ಯನಡಿಸುವಂತೆ ಒತ್ತಾಯಿಸಲು ಪ್ರಯತ್ನಿಸುವುದು ಯೋಗ್ಯವಾದದ್ದಲ್ಲ. ಅದೇ ಸಮಯದಲ್ಲಿ ಅವಳು ಕೂಡ, ಯಾರ ಮನಸ್ಸಾಕ್ಷಿಯು ಇಂಥ ವಸ್ತುಗಳನ್ನು ಉಪಯೋಗಿಸುವಂತೆ ಅವರನ್ನು ಅನುಮತಿಸುತ್ತದೋ ಅಂಥ ಕ್ರೈಸ್ತ ಸ್ತ್ರೀಯರನ್ನು ತಾನೆಂದೂ ಟೀಕಿಸಬಾರದು ಎಂಬುದನ್ನು ಗ್ರಹಿಸುತ್ತಾಳೆ.

13 ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಒಬ್ಬ ಕ್ರೈಸ್ತ ಪುರುಷನು ಮದ್ಯಪಾನದ ಉಪಯೋಗವು ಅಸಮ್ಮತಿಸಲ್ಪಟ್ಟಿರುವಂಥ ಒಂದು ಪರಿಸರದಲ್ಲಿ ಬೆಳೆದುಬಂದವನಾಗಿರಬಹುದು. ಸತ್ಯದ ಜ್ಞಾನಕ್ಕೆ ಬಂದ ಬಳಿಕ, ದ್ರಾಕ್ಷಾಮದ್ಯವು ದೇವರ ಕೊಡುಗೆಯಾಗಿದೆ ಮತ್ತು ಇದನ್ನು ಮಿತವಾದ ಪ್ರಮಾಣದಲ್ಲಿ ಉಪಯೋಗಿಸಬಹುದು ಎಂಬ ಬೈಬಲ್‌ ದೃಷ್ಟಿಕೋನವು ಅವನಿಗೆ ಗೊತ್ತಾಗುತ್ತದೆ. (ಕೀರ್ತನೆ 104:15) ಅವನು ಈ ದೃಷ್ಟಿಕೋನವನ್ನು ಅಂಗೀಕರಿಸುತ್ತಾನೆ. ಆದರೂ, ತನ್ನ ಹಿನ್ನೆಲೆಯ ಕಾರಣ ಅವನು ಎಲ್ಲಾ ವಿಧದ ಮದ್ಯಪಾನೀಯಗಳಿಂದ ದೂರವಿರಲು ಇಷ್ಟಪಡುತ್ತಾನೆ; ಆದರೆ ಯಾರು ಮದ್ಯಪಾನೀಯಗಳನ್ನು ಮಿತವಾಗಿ ಉಪಯೋಗಿಸುತ್ತಾರೋ ಅವರನ್ನು ಅವನು ಟೀಕಿಸುವುದಿಲ್ಲ. ಹೀಗೆ ಅವನು ಪೌಲನ ಈ ಮಾತುಗಳನ್ನು ಅನ್ವಯಿಸುತ್ತಾನೆ: “ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳೋಣ.”​—⁠ರೋಮಾಪುರ 14:⁠19.

14 ರೋಮ್‌ನವರಿಗೆ ಪೌಲನು ನೀಡಿದ ಸಲಹೆಯ ನಿಜಾರ್ಥವನ್ನು ಅನ್ವಯಿಸಿಕೊಳ್ಳುವಂತೆ ಅಗತ್ಯಪಡಿಸುವ ಇತರ ಸನ್ನಿವೇಶಗಳು ಎದುರಾಗುತ್ತವೆ. ಕ್ರೈಸ್ತ ಸಭೆಯು ಅನೇಕ ವ್ಯಕ್ತಿಗಳಿಂದ ರಚಿತವಾಗಿದೆ, ಮತ್ತು ಅವರಿಗೆ ಬೇರೆ ಬೇರೆ ಅಭಿರುಚಿಗಳಿರುತ್ತವೆ. ಆದುದರಿಂದಲೇ ಅವರು ಭಿನ್ನವಾದ ರೀತಿಯ ಆಯ್ಕೆಗಳನ್ನು ಮಾಡಬಹುದು; ಉದಾಹರಣೆಗೆ, ಉಡುಪು ಮತ್ತು ಶೃಂಗಾರದ ವಿಷಯವನ್ನು ತೆಗೆದುಕೊಳ್ಳಿ. ಎಲ್ಲಾ ಪ್ರಾಮಾಣಿಕಮನಸ್ಸಿನ ಕ್ರೈಸ್ತರು ಪಾಲಿಸುವಂಥ ಸ್ಪಷ್ಟವಾದ ಮೂಲತತ್ತ್ವಗಳನ್ನು ಬೈಬಲ್‌ ನೀಡುತ್ತದೆ ಎಂಬುದು ನಿಜ. ನಮ್ಮಲ್ಲಿ ಯಾರೂ ವಿಲಕ್ಷಣವಾದ ಅಥವಾ ಅಸಭ್ಯವಾದ, ಇಲ್ಲವೆ ಲೋಕದ ಅನಪೇಕ್ಷಣೀಯ ಗುಂಪುಗಳೊಂದಿಗೆ ಸೇರಿದವರಾಗಿದ್ದೇವೆಂಬ ಅಭಿಪ್ರಾಯವನ್ನು ಮೂಡಿಸಸಾಧ್ಯವಿರುವಂಥ ಉಡುಪುಗಳನ್ನು ಧರಿಸಬಾರದು ಅಥವಾ ಅಂಥ ಕೇಶಾಲಂಕಾರಗಳನ್ನು ಮಾಡಿಕೊಳ್ಳಬಾರದು. (1 ಯೋಹಾನ 2:​15-17) ಎಲ್ಲಾ ಸಮಯಗಳಲ್ಲಿ, ವಿರಮಿಸುತ್ತಿರುವಾಗ ಸಹ ತಾವು ವಿಶ್ವದ ಪರಮಾಧಿಕಾರಿಯನ್ನು ಪ್ರತಿನಿಧಿಸುವ ಶುಶ್ರೂಷಕರಾಗಿದ್ದೇವೆ ಎಂಬುದನ್ನು ಕ್ರೈಸ್ತರು ನೆನಪಿನಲ್ಲಿಡುತ್ತಾರೆ. (ಯೆಶಾಯ 43:10; ಯೋಹಾನ 17:16; 1 ತಿಮೊಥೆಯ 2:9, 10) ಆದರೂ, ಅನೇಕ ಕ್ಷೇತ್ರಗಳಲ್ಲಿ ಕ್ರೈಸ್ತರಿಗೆ ಸ್ವೀಕಾರಾರ್ಹ ಆಯ್ಕೆಗಳನ್ನು ಮಾಡಲು ಬಹಳಷ್ಟು ಅವಕಾಶಗಳಿವೆ. *

ಇತರರನ್ನು ಎಡವಿಸುವುದರಿಂದ ದೂರವಿರಿ

15 ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಕೊಟ್ಟ ತನ್ನ ಸಲಹೆಯಲ್ಲಿ ಪೌಲನು ಇನ್ನೂ ಒಂದು ಪ್ರಮುಖ ಮೂಲತತ್ತ್ವವನ್ನು ನಮ್ಮ ಗಮನಕ್ಕೆ ತರುತ್ತಾನೆ. ಕೆಲವೊಮ್ಮೆ ಸುಶಿಕ್ಷಿತ ಮನಸ್ಸಾಕ್ಷಿಯಿರುವ ಕ್ರೈಸ್ತನೊಬ್ಬನು, ಯಾವುದೇ ತಪ್ಪಿಲ್ಲದಂಥ ಒಂದು ವಿಚಾರವನ್ನು ಮಾಡದೇ ಇರುವ ಆಯ್ಕೆಯನ್ನು ಮಾಡಬಹುದು. ಏಕೆ? ತಾನೊಂದು ನಿರ್ದಿಷ್ಟ ಮಾರ್ಗವನ್ನು ಬೆನ್ನಟ್ಟುವುದು ಇತರರಿಗೆ ಹಾನಿಯನ್ನು ಉಂಟುಮಾಡಬಹುದೆಂಬುದನ್ನು ಅವನು ಮನಗಾಣುವುದರಿಂದಲೇ. ಇಂಥ ಸನ್ನಿವೇಶದಲ್ಲಿ ನಾವಿದ್ದರೆ ಏನು ಮಾಡಬೇಕು? ಪೌಲನು ಹೇಳುವುದು: “ಮಾಂಸ ತಿನ್ನುವದನ್ನಾಗಲಿ ದ್ರಾಕ್ಷಾರಸ ಕುಡಿಯುವದನ್ನಾಗಲಿ ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವದನ್ನಾಗಲಿ ಬಿಟ್ಟುಬಿಡುವದೇ ಒಳ್ಳೇದು.” (ರೋಮಾಪುರ 14:14, 20, 21) ಹೀಗೆ, “ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ.” (ರೋಮಾಪುರ 15:1, 2) ನಾವು ಏನು ಮಾಡುತ್ತೇವೋ ಅದರಿಂದ ಜೊತೆ ಕ್ರೈಸ್ತನೊಬ್ಬನ ಮನಸ್ಸಾಕ್ಷಿಯು ಘಾಸಿಗೊಳ್ಳುವ ಸಾಧ್ಯತೆಯಿರುವಾಗ, ನಾವು ಇತರರಿಗೆ ಪರಿಗಣನೆಯನ್ನು ತೋರಿಸುವಂತೆ ಮತ್ತು ನಮ್ಮ ಆಯ್ಕೆಗಳನ್ನು ನಿರ್ಬಂಧಿಸುವಂತೆ ಸಹೋದರ ಪ್ರೀತಿಯು ನಮ್ಮನ್ನು ಪ್ರಚೋದಿಸುವುದು. ಮದ್ಯಪಾನೀಯಗಳ ಉಪಯೋಗವನ್ನು ಇದಕ್ಕೆ ಒಂದು ಉದಾಹರಣೆಯೋಪಾದಿ ತೆಗೆದುಕೊಳ್ಳಬಹುದು. ಒಬ್ಬ ಕ್ರೈಸ್ತನಿಗೆ ಮಿತವಾದ ಪ್ರಮಾಣದಲ್ಲಿ ದ್ರಾಕ್ಷಾಮದ್ಯವನ್ನು ಕುಡಿಯುವ ಅನುಮತಿಯಿದೆ. ಆದರೆ ಹೀಗೆ ಮಾಡುವುದು ತನ್ನ ಸಂಗಡಿಗನನ್ನು ಎಡವಿಸಬಹುದಾದಲ್ಲಿ, ಅದನ್ನು ಕುಡಿಯುವ ಹಕ್ಕು ತನಗಿದೆಯೆಂಬ ಒಂದೇ ಕಾರಣಕ್ಕಾಗಿ ಅವನದನ್ನು ಕುಡಿಯುವುದರ ಬಗ್ಗೆ ಹಠಹಿಡಿಯದಿರುವನು.

16 ಈ ಮೂಲತತ್ತ್ವವು, ಕ್ರೈಸ್ತ ಸಭೆಯ ಹೊರಗಿನ ನಮ್ಮ ವ್ಯವಹಾರಗಳಿಗೂ ಅನ್ವಯಿಸಸಾಧ್ಯವಿದೆ. ಉದಾಹರಣೆಗೆ, ನಾವು ವಾಸಿಸುತ್ತಿರುವಂಥ ಕ್ಷೇತ್ರದಲ್ಲಿ ಪ್ರಬಲವಾಗಿರುವ ಧರ್ಮವು ಅದರ ಅನುಯಾಯಿಗಳಿಗೆ ವಾರದ ಒಂದು ದಿನವನ್ನು ವಿಶ್ರಾಂತಿಯ ದಿನವಾಗಿ ಪರಿಗಣಿಸುವಂತೆ ಬೋಧಿಸುತ್ತಿರಬಹುದು. ಈ ಕಾರಣದಿಂದ, ನಮ್ಮ ನೆರೆಯವರನ್ನು ಎಡವಿಸದಿರುವಂತೆ ಹಾಗೂ ಸಾರುವ ಕೆಲಸಕ್ಕೆ ಅಡಚಣೆಗಳನ್ನು ಬರಮಾಡಿಕೊಳ್ಳದಿರುವಂತೆ, ಆ ದಿನದಂದು ನಮ್ಮಿಂದ ಸಾಧ್ಯವಾಗುವಷ್ಟು ಮಟ್ಟಿಗೆ ನಮ್ಮ ನೆರೆಯವರನ್ನು ಕೋಪಗೊಳಿಸಬಲ್ಲ ಯಾವುದೇ ಕೆಲಸವನ್ನು ಮಾಡದಿರಲು ಪ್ರಯತ್ನಿಸುವೆವು. ಇನ್ನೊಂದು ಸನ್ನಿವೇಶದಲ್ಲಿ, ಶ್ರೀಮಂತ ಕ್ರೈಸ್ತನೊಬ್ಬನು ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ಸೇವೆಮಾಡಲಿಕ್ಕಾಗಿ ಒಂದು ಬಡ ಪ್ರದೇಶಕ್ಕೆ ಸ್ಥಳಾಂತರಿಸಬಹುದು. ಅವನು ತುಂಬ ಸರಳವಾದ ಬಟ್ಟೆಧರಿಸುವ ಮೂಲಕ ಅಥವಾ ಹೆಚ್ಚು ಸೌಕರ್ಯಭರಿತ ಜೀವನವನ್ನು ನಡೆಸಲು ಸಾಧ್ಯವಿದ್ದರೂ ಅದಕ್ಕೆ ಬದಲಾಗಿ ನಿರಾಡಂಬರ ಜೀವನ ನಡೆಸುವ ಮೂಲಕ, ತನ್ನ ಹೊಸ ನೆರೆಯವರಿಗೆ ಪರಿಗಣನೆಯನ್ನು ತೋರಿಸುವ ಆಯ್ಕೆಮಾಡಬಹುದು.

17 ‘ದೃಢವಾದ ನಂಬಿಕೆಯುಳ್ಳವರು’ ಇಂಥ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತೆ ನಿರೀಕ್ಷಿಸುವುದು ನ್ಯಾಯಸಮ್ಮತವಾಗಿದೆಯೋ? ಈ ದೃಷ್ಟಾಂತವನ್ನು ಪರಿಗಣಿಸಿರಿ: ಒಂದು ಹೆದ್ದಾರಿಯಲ್ಲಿ ವಾಹನವನ್ನು ನಡೆಸುತ್ತಿರುವಾಗ, ನಮ್ಮ ಮುಂದೆ ಕೆಲವು ಮಕ್ಕಳು ಅಪಾಯಕರವಾದ ರೀತಿಯಲ್ಲಿ ರಸ್ತೆಗೆ ಹತ್ತಿರವಾಗಿ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ. ಗರಿಷ್ಠ ವೇಗದಲ್ಲಿ ಡ್ರೈವ್‌ಮಾಡಲು ನಮಗೆ ಕಾನೂನುಬದ್ಧ ಹಕ್ಕಿದೆ ಎಂದ ಮಾತ್ರಕ್ಕೆ ನಾವು ಅಷ್ಟು ವೇಗದಲ್ಲಿ ವಾಹನವನ್ನು ನಡೆಸುತ್ತಾ ಹೋಗುತ್ತೇವೋ? ಇಲ್ಲ, ಮಕ್ಕಳಿಗೆ ಅಪಾಯವಾಗದಂತೆ ತಡೆಯಲಿಕ್ಕಾಗಿ ನಾವು ವೇಗವನ್ನು ಕಡಿಮೆಗೊಳಿಸುತ್ತೇವೆ. ಕೆಲವೊಮ್ಮೆ, ನಮ್ಮ ಜೊತೆ ವಿಶ್ವಾಸಿಗಳು ಅಥವಾ ಇನ್ನಿತರರೊಂದಿಗಿನ ನಮ್ಮ ಸಂಬಂಧದಲ್ಲಿ ನಿಧಾನಗೊಳ್ಳಲು ಅಥವಾ ಮಣಿಯಲು ತದ್ರೀತಿಯ ಸಿದ್ಧಮನಸ್ಸಿನ ಆವಶ್ಯಕತೆಯಿರುತ್ತದೆ. ನಮಗೆ ಮಾಡಲು ಸಂಪೂರ್ಣ ಹಕ್ಕು ಇರುವಂಥ ಏನೋ ಒಂದನ್ನು ನಾವು ಮಾಡುತ್ತಿರಬಹುದು. ಹೀಗೆ ಮಾಡುವಾಗ ಯಾವುದೇ ಬೈಬಲ್‌ ಮೂಲತತ್ತ್ವಗಳು ಉಲ್ಲಂಘಿಸಲ್ಪಡುತ್ತಿಲ್ಲದಿರಬಹುದು. ಆದರೂ, ಒಂದುವೇಳೆ ಅದನ್ನು ಮಾಡುವುದರಿಂದ ನಾವು ದುರ್ಬಲ ಮನಸ್ಸಾಕ್ಷಿಯಿರುವ ಇತರರ ಮನನೋಯಿಸುವ ಅಥವಾ ಅವರಿಗೆ ಹಾನಿಯನ್ನು ಉಂಟುಮಾಡುವ ಸಾಧ್ಯತೆಯಿರುವಲ್ಲಿ, ಎಚ್ಚರಿಕೆಯಿಂದ ಕ್ರಿಯೆಗೈಯುವಂತೆ ಕ್ರೈಸ್ತ ಪ್ರೀತಿಯು ನಮ್ಮನ್ನು ಪ್ರಚೋದಿಸುವುದು. (ರೋಮಾಪುರ 14:​13, 15) ನಮ್ಮ ವೈಯಕ್ತಿಕ ಹಕ್ಕುಗಳನ್ನು ಸಾಧಿಸುವುದಕ್ಕಿಂತಲೂ ಐಕ್ಯಭಾವವನ್ನು ಕಾಪಾಡಿಕೊಳ್ಳುವುದು ಮತ್ತು ರಾಜ್ಯಾಭಿರುಚಿಗಳನ್ನು ಉತ್ತೇಜಿಸುವುದು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ.

18 ನಾವು ಈ ರೀತಿಯಲ್ಲಿ ಕ್ರಿಯೆಗೈಯುವಾಗ, ಇರುವುದರಲ್ಲೇ ಅತ್ಯುತ್ತಮವಾದ ಮಾದರಿಯನ್ನು ಅನುಸರಿಸುವವರಾಗಿದ್ದೇವೆ. ಪೌಲನು ಹೇಳುವುದು: “ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ. ದೇವರೇ, ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಬಂದವು ಎಂಬದಾಗಿ ಬರೆದಿರುವಂತೆ ಆತನಿಗೆ ಸಂಭವಿಸಿತಲ್ಲಾ.” ಯೇಸು ನಮಗೋಸ್ಕರ ತನ್ನ ಜೀವವನ್ನೇ ಅರ್ಪಿಸಲು ಸಿದ್ಧನಾಗಿದ್ದನು. ನಮ್ಮ ಹಕ್ಕುಗಳಲ್ಲಿ ಕೆಲವನ್ನು ತ್ಯಾಗಮಾಡುವುದು, ‘ದೃಢವಿಲ್ಲದವರು’ ನಮ್ಮೊಂದಿಗೆ ಒಟ್ಟುಗೂಡಿ ದೇವರನ್ನು ಕೊಂಡಾಡಲು ಅವರನ್ನು ಶಕ್ತರನ್ನಾಗಿ ಮಾಡುವುದಾದರೆ, ನಾವು ಹಾಗೆ ಮಾಡಲು ಸಿದ್ಧರಾಗಿದ್ದೇವೆ ಎಂಬುದಂತೂ ಖಂಡಿತ. ದುರ್ಬಲವಾದ ಮನಸ್ಸಾಕ್ಷಿಯಿರುವ ಕ್ರೈಸ್ತರ ಕಡೆಗೆ ತಾಳ್ಮೆ ಹಾಗೂ ಉದಾರ ಮನೋಭಾವವನ್ನು ತೋರಿಸುವುದು, ಅಥವಾ ಸ್ವಯಂ ಪ್ರೇರಿತವಾಗಿ ನಮ್ಮ ಆಯ್ಕೆಗಳನ್ನು ನಿರ್ಬಂಧಿಸುವುದು ಮತ್ತು ನಮ್ಮ ಹಕ್ಕುಗಳನ್ನು ಸಾಧಿಸಲು ಹಠಹಿಡಿಯದಿರುವುದು, ನಾವು ‘ಕ್ರಿಸ್ತ ಯೇಸುವಿನಂತಹದ್ದೇ ಮನಸ್ಸುಳ್ಳವರಾಗಿದ್ದೇವೆ’ ಎಂಬುದನ್ನು ರುಜುಪಡಿಸುತ್ತದೆ ನಿಜ.​—⁠ರೋಮಾಪುರ 15:​1-5.

19 ಶಾಸ್ತ್ರೀಯ ಮೂಲತತ್ತ್ವಗಳು ಒಳಗೂಡಿಲ್ಲದಿರುವಂಥ ವಿಚಾರಗಳ ಕುರಿತಾದ ನಮ್ಮ ದೃಷ್ಟಿಕೋನಗಳಲ್ಲಿ ಸ್ವಲ್ಪ ಭಿನ್ನತೆಯಿದ್ದರೂ, ಆರಾಧನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ನಾವು ಸಂಪೂರ್ಣ ಒಮ್ಮತದಿಂದ ಕ್ರಿಯೆಗೈಯುತ್ತೇವೆ. (1 ಕೊರಿಂಥ 1:10) ಉದಾಹರಣೆಗೆ, ಸತ್ಯಾರಾಧನೆಯನ್ನು ವಿರೋಧಿಸುವವರಿಗೆ ನಾವು ತೋರಿಸುವ ಪ್ರತಿಕ್ರಿಯೆಯಲ್ಲಿ ಇಂಥ ಐಕ್ಯಭಾವವು ಸುವ್ಯಕ್ತವಾಗುತ್ತದೆ. ದೇವರ ವಾಕ್ಯವು ಇಂಥ ವಿರೋಧಿಗಳನ್ನು ಅನ್ಯರು ಎಂದು ಕರೆಯುತ್ತದೆ ಮತ್ತು ‘ಅನ್ಯರ ಸ್ವರದ’ ವಿಷಯದಲ್ಲಿ ಜಾಗ್ರತೆಯಿಂದಿರಿ ಎಂದು ನಮಗೆ ಎಚ್ಚರಿಕೆ ನೀಡುತ್ತದೆ. (ಯೋಹಾನ 10:⁠5) ಇಂಥ ಅನ್ಯರನ್ನು ನಾವು ಹೇಗೆ ಗುರುತಿಸಸಾಧ್ಯವಿದೆ? ನಾವು ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು? ಮುಂದಿನ ಲೇಖನದಲ್ಲಿ ಈ ಪ್ರಶ್ನೆಗಳು ಪರಿಗಣಿಸಲ್ಪಡುವವು.

[ಪಾದಟಿಪ್ಪಣಿಗಳು]

^ ಪ್ಯಾರ. 14 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 19 ಉಡುಪಿನ ವಿಷಯದಲ್ಲಿ ಚಿಕ್ಕ ಪ್ರಾಯದ ಮಕ್ಕಳು ತಮ್ಮ ಹೆತ್ತವರ ಬಯಕೆಗಳಿಂದ ಮಾರ್ಗದರ್ಶಿಸಲ್ಪಡುತ್ತಾರೆ.

ಹೇಗೆ ಉತ್ತರಿಸುವಿರಿ?

• ವೈಯಕ್ತಿಕ ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿರುವುದು ಐಕ್ಯಭಾವಕ್ಕೆ ಏಕೆ ಬೆದರಿಕೆಯಾಗಿರಲಾರದು?

• ಕ್ರೈಸ್ತರೋಪಾದಿ ನಾವು ಒಬ್ಬರಿಗೊಬ್ಬರು ಏಕೆ ಪ್ರೀತಿಪರ ಪರಿಗಣನೆಯನ್ನು ತೋರಿಸಬೇಕು?

• ಐಕ್ಯಭಾವದ ಕುರಿತು ಪೌಲನು ನೀಡಿರುವ ಸಲಹೆಯನ್ನು ನಾವು ಇಂದು ಅನ್ವಯಿಸಿಕೊಳ್ಳಸಾಧ್ಯವಿರುವ ಕೆಲವು ವಿಧಗಳು ಯಾವುವು, ಮತ್ತು ಹೀಗೆ ಮಾಡುವಂತೆ ಯಾವುದು ನಮ್ಮನ್ನು ಪ್ರಚೋದಿಸುವುದು?

[ಅಧ್ಯಯನ ಪ್ರಶ್ನೆಗಳು]

1. ಭಿನ್ನ ದೃಷ್ಟಿಕೋನಗಳನ್ನು ಬಗೆಹರಿಸುವ ವಿಷಯದಲ್ಲಿ ಪೌಲನು ಜೊತೆ ವಿಶ್ವಾಸಿಗಳೊಂದಿಗೆ ಯಾವ ಪಾಠವನ್ನು ಹಂಚಿಕೊಂಡನು?

2. ಐಕ್ಯವಾಗಿರುವ ಆವಶ್ಯಕತೆಯನ್ನು ಪೌಲನು ಹೇಗೆ ಒತ್ತಿಹೇಳಿದನು?

3, 4. (ಎ) ರೋಮ್‌ನಲ್ಲಿದ್ದ ಕ್ರೈಸ್ತರು ಯಾವ ರೀತಿಯ ಭಿನ್ನ ಹಿನ್ನೆಲೆಗಳಿಂದ ಬಂದವರಾಗಿದ್ದರು? (ಬಿ) ರೋಮ್‌ನಲ್ಲಿದ್ದ ಕ್ರೈಸ್ತರು “ಒಮ್ಮುಖವಾಗಿ” ಯೆಹೋವನ ಸೇವೆಮಾಡಲು ಹೇಗೆ ಶಕ್ತರಾಗಬಹುದಿತ್ತು?

5, 6. ರೋಮ್‌ನ ಸಭೆಯಲ್ಲಿ ಏಕೆ ಭಿನ್ನಾಭಿಪ್ರಾಯಗಳಿದ್ದವು?

7. ಪ್ರತಿ ವಾರ ಒಂದು ದಿನವನ್ನು ವಿಶೇಷವೆಂದು ಆಚರಿಸುವ ವಿಷಯದಲ್ಲಿ ಯಾವ ಭಿನ್ನ ದೃಷ್ಟಿಕೋನಗಳು ಅಸ್ತಿತ್ವದಲ್ಲಿದ್ದವು?

8. ರೋಮ್‌ನ ಕ್ರೈಸ್ತರು ಇತರರ ಮನಸ್ಸಾಕ್ಷಿಗೆ ಪರಿಗಣನೆಯನ್ನು ತೋರಿಸಸಾಧ್ಯವಿತ್ತಾದರೂ, ಅವರು ಏನು ಮಾಡಬಾರದಾಗಿತ್ತು?

9, 10. ಕ್ರೈಸ್ತರು ಏನು ಮಾಡುವುದರಿಂದ ದೂರವಿರಬೇಕು? ವಿವರಿಸಿರಿ.

11. ಪೌಲನ ದಿನದಲ್ಲಿ ಯಾವ ಅಸಾಮಾನ್ಯ ಸನ್ನಿವೇಶವು ಅಸ್ತಿತ್ವದಲ್ಲಿತ್ತು?

12, 13. ಇಂದು ಕ್ರೈಸ್ತರು ತಮ್ಮ ಸಹೋದರರ ಮನಸ್ಸಾಕ್ಷಿಗೆ ಪರಿಗಣನೆಯನ್ನು ತೋರಿಸಸಾಧ್ಯವಿರುವ ಕೆಲವು ಸನ್ನಿವೇಶಗಳು ಯಾವುವು?

14. ಪೌಲನು ರೋಮ್‌ನವರಿಗೆ ನೀಡಿದ ಸಲಹೆಯ ನಿಜಾರ್ಥವನ್ನು ಕ್ರೈಸ್ತರು ಯಾವ ಸನ್ನಿವೇಶಗಳಲ್ಲಿ ಅನ್ವಯಿಸಿಕೊಳ್ಳಸಾಧ್ಯವಿದೆ?

15. ತನ್ನ ಸಹೋದರರ ಪ್ರಯೋಜನಕ್ಕಾಗಿ, ಯಾವಾಗ ಕ್ರೈಸ್ತನೊಬ್ಬನು ತನ್ನ ಹಕ್ಕನ್ನು ಸಾಧಿಸುವುದರಿಂದ ದೂರವಿರಬಹುದು?

16. ನಮ್ಮ ಟೆರಿಟೊರಿಯಲ್ಲಿರುವವರಿಗೆ ನಾವು ಹೇಗೆ ಪರಿಗಣನೆಯನ್ನು ತೋರಿಸಸಾಧ್ಯವಿದೆ?

17. ನಾವು ಮಾಡುವ ಆಯ್ಕೆಗಳಲ್ಲಿ ಇತರರನ್ನು ಪರಿಗಣಿಸುವುದು ಏಕೆ ನ್ಯಾಯಸಮ್ಮತವಾದದ್ದಾಗಿದೆ?

18, 19. (ಎ) ಇತರರಿಗೆ ಪರಿಗಣನೆ ತೋರಿಸುವುದರಲ್ಲಿ ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸುತ್ತೇವೆ? (ಬಿ) ಯಾವ ವಿಷಯಗಳಲ್ಲಿ ನಾವು ಸಂಪೂರ್ಣ ಒಮ್ಮತದಿಂದ ಕ್ರಿಯೆಗೈಯುತ್ತೇವೆ, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

[ಪುಟ 9ರಲ್ಲಿರುವ ಚಿತ್ರ]

ಐಕ್ಯದ ಕುರಿತಾದ ಪೌಲನ ಸಲಹೆಯು ಸಭೆಗೆ ಅತ್ಯಾವಶ್ಯಕವಾಗಿತ್ತು

[ಪುಟ 10ರಲ್ಲಿರುವ ಚಿತ್ರ]

ಬೇರೆ ಬೇರೆ ಹಿನ್ನೆಲೆಗಳಿಂದ ಬಂದವರಾಗಿದ್ದರೂ ಕ್ರೈಸ್ತರು ಐಕ್ಯರಾಗಿದ್ದಾರೆ

[ಪುಟ 12ರಲ್ಲಿರುವ ಚಿತ್ರ]

ಈ ಡ್ರೈವರ್‌ ಈಗೇನು ಮಾಡಬೇಕು?