ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳಿಗೆ ನೀವು ಯಾವ ಆಸ್ತಿಯನ್ನು ನೀಡಲಿದ್ದೀರಿ?

ನಿಮ್ಮ ಮಕ್ಕಳಿಗೆ ನೀವು ಯಾವ ಆಸ್ತಿಯನ್ನು ನೀಡಲಿದ್ದೀರಿ?

ನಿಮ್ಮ ಮಕ್ಕಳಿಗೆ ನೀವು ಯಾವ ಆಸ್ತಿಯನ್ನು ನೀಡಲಿದ್ದೀರಿ?

ದಕ್ಷಿಣ ಯೂರೋಪಿನ ಕುಟುಂಬಸ್ಥನಾದ ಪೌಲೋಸ್‌ ಎಂಬವನು, ತನ್ನ ಹೆಂಡತಿ ಮತ್ತು 13 ಹಾಗೂ 11 ವರುಷದ ಇಬ್ಬರು ಹೆಣ್ಣುಮಕ್ಕಳು ಮತ್ತು 7 ವರುಷದ ಒಬ್ಬ ಗಂಡು ಮಗನೊಂದಿಗೆ ಸಮಯಕಳೆಯಲು ಮನೆಯಲ್ಲಿರುವುದೇ ಬಹೂ ವಿರಳ. ತನ್ನ ಕನಸನ್ನು ನನಸಾಗಿಸಲು ಬಹಳಷ್ಟು ಹಣಸಂಪಾದಿಸುವ ಪ್ರಯತ್ನದಲ್ಲಿ ಪೌಲೋಸ್‌, ವಾರದ ಏಳು ದಿನಗಳಲ್ಲಿ, ಪ್ರತಿ ದಿನಕ್ಕೆ ಎರಡು ಶಿಫ್ಟ್‌ನಂತೆ ಕೆಲಸಮಾಡುತ್ತಾನೆ. ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಒಂದೊಂದು ಮನೆಯನ್ನು ಖರೀದಿಸಿಕೊಡಬೇಕೆಂದು ಮತ್ತು ತನ್ನ ಮಗನಿಗೆ ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಿಕೊಡಬೇಕೆಂದು ಅವನು ಬಯಸುತ್ತಾನೆ. ಅವನ ಹೆಂಡತಿ ಸೋಫಿಯಾ, ತಮ್ಮ ಮಕ್ಕಳ ಭಾವೀ ಮನೆಗಳಿಗಾಗಿ ಬಟ್ಟೆಗಳನ್ನು, ಅಡುಗೆಮನೆಯ ಸಾಮಾಗ್ರಿಗಳನ್ನು, ಪಿಂಗಾಣಿ ಸಾಮಾನು, ಮತ್ತು ಬೆಳ್ಳಿಪಾತ್ರೆಗಳು ಮುಂತಾದ ಸಾಮಾನುಗಳನ್ನು ಒಟ್ಟುಗೂಡಿಸಲು ದುಡಿಯುತ್ತಾಳೆ. ಅವರು ಯಾಕಾಗಿ ಇಷ್ಟು ಪರಿಶ್ರಮಿಸುತ್ತಾರೆ ಎಂದು ಕೇಳಿದಾಗ, ಅವರಿಬ್ಬರೂ ಒಟ್ಟಾಗಿ ಈ ಉತ್ತರವನ್ನು ನೀಡಿದರು: “ನಮ್ಮ ಮಕ್ಕಳಿಗಾಗಿ!”

ಪೌಲೋಸ್‌ ಮತ್ತು ಸೋಫಿಯಾರಂತೆ ಇಂದು ಲೋಕವ್ಯಾಪಕವಾಗಿ ಅನೇಕ ಹೆತ್ತವರು ತಮ್ಮ ಮಕ್ಕಳಿಗೆ ಜೀವನದಲ್ಲಿ ಒಂದು ಉತ್ತಮ ಆರಂಭವನ್ನು ನೀಡಲಿಕ್ಕಾಗಿ ತಮ್ಮಿಂದಾದದ್ದೆಲ್ಲವನ್ನೂ ಮಾಡುತ್ತಾರೆ. ಕೆಲವರು ಮಕ್ಕಳ ಭವಿಷ್ಯತ್ತಿಗಾಗಿ ಹಣವನ್ನು ಒಟ್ಟುಸೇರಿಸುತ್ತಾರೆ. ಇನ್ನಿತರರು, ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರಕುವಂತೆ ಮತ್ತು ಅವರ ಮುಂದಿನ ಜೀವನದಲ್ಲಿ ಉಪಯುಕ್ತಕರವಾಗಿರುವ ಕೌಶಲಗಳನ್ನು ಅವರು ಕಲಿಯುವಂತೆ ನೋಡಿಕೊಳ್ಳುತ್ತಾರೆ. ಇಂಥ ಉಡುಗೊರೆಯನ್ನು ಹೆಚ್ಚಿನ ಹೆತ್ತವರು ತಮ್ಮ ಪ್ರೀತಿಯ ಕಾಣಿಕೆಯಾಗಿ ವೀಕ್ಷಿಸುತ್ತಾರೆ, ಆದರೂ ಅಂಥ ಒದಗಿಸುವಿಕೆಯನ್ನು ಮಾಡುವುದು ಅನೇಕವೇಳೆ ಹೆತ್ತವರ ಮೇಲೆ ಬಹಳಷ್ಟು ಒತ್ತಡವನ್ನು ಹೇರುತ್ತದೆ. ಏಕೆಂದರೆ, ಅವರು ತಮ್ಮ ಸಂಬಂಧಿಕರ, ಸ್ನೇಹಿತರ, ಮತ್ತು ತಾವು ವಾಸಿಸುತ್ತಿರುವ ಸಮುದಾಯದ ನಿರೀಕ್ಷಣೆಗಳನ್ನು ಪೂರೈಸಬೇಕಾಗುತ್ತದೆ. ಆದುದರಿಂದ, ‘ನಮ್ಮ ಮಕ್ಕಳಿಗೆ ನಾವು ಎಷ್ಟನ್ನು ಕೊಡಬೇಕು?’ ಎಂಬುದಾಗಿ ಕಾಳಜಿಯಿರುವ ಹೆತ್ತವರು ಯೋಗ್ಯವಾಗಿಯೇ ಪ್ರಶ್ನಿಸುತ್ತಾರೆ.

ಭವಿಷ್ಯತ್ತಿಗಾಗಿ ಮುಂದಾಗಿಯೇ ಏರ್ಪಾಡುಗಳನ್ನು ಮಾಡುವುದು

ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗಾಗಿ ಮುಂದಾಗಿಯೇ ಏರ್ಪಾಡುಗಳನ್ನು ಮಾಡುವುದು ಸ್ವಾಭಾವಿಕ ಮಾತ್ರವಲ್ಲದೆ ಶಾಸ್ತ್ರೀಯವೂ ಹೌದು. ಅಪೊಸ್ತಲ ಪೌಲನು ತನ್ನ ದಿನಗಳಲ್ಲಿನ ಕ್ರೈಸ್ತರಿಗೆ ಹೀಗೆ ಹೇಳಿದನು: “ಹೆತ್ತವರು ತಮ್ಮ ಮಕ್ಕಳಿಗೋಸ್ಕರ ಒದಗಿಸುವಿಕೆಯನ್ನು ಮಾಡಿಡಬೇಕೇ ಹೊರತು ಮಕ್ಕಳು ಹೆತ್ತವರಿಗೋಸ್ಕರವಲ್ಲ.” (2 ಕೊರಿಂಥ 12:​14, ದ ನ್ಯೂ ಇಂಗ್ಲಿಷ್‌ ಬೈಬಲ್‌) ಹೆತ್ತವರು ನೀಡಬೇಕಾದ ಆರೈಕೆಯು ಬಹಳ ಗಂಭೀರವಾದ ಜವಾಬ್ದಾರಿಯಾಗಿದೆ ಎಂದು ಪೌಲನು ಮುಂದಕ್ಕೆ ತಿಳಿಸಿದನು. ಅವನು ಬರೆದದ್ದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:⁠8) ಬೈಬಲಿನ ಸಮಯಗಳಲ್ಲಿ ದೇವರ ಸೇವಕರ ನಡುವೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ವಿಷಯಗಳು ಬಹು ಪ್ರಾಮುಖ್ಯವಾಗಿದ್ದವೆಂದು ಅಸಂಖ್ಯಾತ ಬೈಬಲ್‌ ವೃತ್ತಾಂತಗಳು ದೃಷ್ಟಾಂತಿಸುತ್ತವೆ.​—⁠ರೂತಳು 2:​19, 20; 3:​9-13; 4:​1-22; ಯೋಬ 42:15.

ಹಾಗಿದ್ದರೂ ಕೆಲವೊಮ್ಮೆ ಹೆತ್ತವರು ತಮ್ಮ ಮಕ್ಕಳಿಗೆ ದೊಡ್ಡ ಮೊತ್ತದ ಆಸ್ತಿಯನ್ನು ನೀಡುವ ಸಲುವಾಗಿ ಕೆಲಸದಲ್ಲಿ ಮುಳುಗಿಹೋಗುತ್ತಾರೆ. ಏಕೆ? ದಕ್ಷಿಣ ಯೂರೋಪಿನಿಂದ ಅಮೆರಿಕಕ್ಕೆ ಸ್ಥಳಾಂತರಿಸಿದ್ದ ಮಾನೊಲೀಸ್‌ ಎಂಬ ಹೆಸರಿನ ಒಬ್ಬ ತಂದೆಯು ಒಂದು ಕಾರಣವನ್ನು ನೀಡುತ್ತಾನೆ: “ಎರಡನೇ ಲೋಕ ಯುದ್ಧದ ಧ್ವಂಸಕಾರಿ ಪರಿಣಾಮಗಳನ್ನು ಅನುಭವಿಸಿದ ಹೆತ್ತವರು ತಮ್ಮ ಮಕ್ಕಳ ಜೀವನವನ್ನು ಉತ್ತಮಗೊಳಿಸಲು ದೃಢನಿಶ್ಚಯದಿಂದಿದ್ದಾರೆ.” ಅವನು ಕೂಡಿಸಿದ್ದು: “ಹೆತ್ತವರ ಅತಿರೇಕ ಜವಾಬ್ದಾರಿ ಭಾವನೆಯಿಂದಾಗಿ ಮತ್ತು ಮಕ್ಕಳು ತಮ್ಮ ಜೀವನವನ್ನು ಒಳ್ಳೇ ರೀತಿಯಲ್ಲಿ ಆರಂಭಿಸಶಕ್ತರಾಗುವಂತೆ ಅವರಿಗೆ ತಮ್ಮಿಂದಾದದ್ದೆಲ್ಲವನ್ನು ನೀಡಬೇಕೆಂಬ ಇಚ್ಛೆಯಿಂದಾಗಿ, ಹೆತ್ತವರು ಕೆಲವೊಮ್ಮೆ ತಮ್ಮನ್ನೇ ಹಾನಿಗೊಳಪಡಿಸುತ್ತಾರೆ.” ಹೌದು, ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಆಸ್ತಿಪಾಸ್ತಿಯನ್ನು ಕೂಡಿಸಿಡುವ ಉದ್ದೇಶದಿಂದ ಜೀವನದ ಅಗತ್ಯತೆಗಳಿಂದ ತಮ್ಮನ್ನು ವಂಚಿತರನ್ನಾಗಿ ಮಾಡಿಕೊಳ್ಳುತ್ತಾರೆ ಅಥವಾ ಒಂದು ವಿರಕ್ತ ಜೀವನವನ್ನು ನಡೆಸುತ್ತಾರೆ. ಆದರೆ ಅಂಥ ಒಂದು ಜೀವನ ಮಾರ್ಗವನ್ನು ಬೆನ್ನಟ್ಟುವುದು ಹೆತ್ತವರಿಗೆ ವಿವೇಕದ ಸಂಗತಿಯಾಗಿದೆಯೋ?

“ವ್ಯರ್ಥವೂ ಕೇವಲ ಅನ್ಯಾಯವೂ ಆಗಿದೆ”

ಪುರಾತನ ಇಸ್ರಾಯೇಲಿನ ರಾಜನಾದ ಸೊಲೊಮೋನನು ಆಸ್ತಿಗಳ ಕುರಿತು ಒಂದು ಎಚ್ಚರಿಕೆಯ ಮಾತನ್ನು ನೀಡಿದನು. ಅವನು ಬರೆದದ್ದು: “ನನ್ನ ಪ್ರಯಾಸದ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕೆಂದು ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆಲ್ಲಾ ಬೇಸರಗೊಂಡೆನು. ಅವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಎಂಥವನಾದರೂ ನಾನು ಲೋಕದೊಳಗೆ ಯಾವದರಲ್ಲಿ ಜ್ಞಾನವನ್ನೂ ಪ್ರಯಾಸವನ್ನೂ ವ್ರಯಮಾಡಿದ್ದೇನೋ ಅದರ ಮೇಲೆ ದೊರೆತನಮಾಡುವನು. ಇದೂ ವ್ಯರ್ಥ. . . . ಒಬ್ಬನು ಜ್ಞಾನದಿಂದಲೂ ತಿಳುವಳಿಕೆಯಿಂದಲೂ ತನ್ನ ಕೆಲಸವನ್ನು ನಡಿಸಿ ಸಾಫಲ್ಯಕ್ಕೆ ತಂದ ಮೇಲೆ ಆ ಕೆಲಸದಲ್ಲಿ ಪ್ರಯಾಸಪಡದವನಿಗೆ ಅದರ ಫಲವನ್ನು ಬಾಧ್ಯತೆಯಾಗಿ ಬಿಡಬೇಕಾಗುವದು. ಇದು ಸಹ ವ್ಯರ್ಥವೂ ಕೇವಲ ಅನ್ಯಾಯವೂ ಆಗಿದೆ.”​—⁠ಪ್ರಸಂಗಿ 2:​18-21.

ಸೊಲೊಮೋನನು ವಿವರಿಸಿದಂತೆ, ಯಾರು ಆಸ್ತಿಯನ್ನು ಪಡೆಯುತ್ತಾರೋ ಅವರು ಅದರ ಪೂರ್ಣ ಮೌಲ್ಯವನ್ನು ಗಣ್ಯಮಾಡಲಿಕ್ಕಿಲ್ಲ, ಏಕೆಂದರೆ ಅವರು ಸ್ವತಃ ಅದಕ್ಕಾಗಿ ಪರಿಶ್ರಮಿಸಲಿಲ್ಲ. ತಮ್ಮ ಹೆತ್ತವರು ಕಷ್ಟಪಟ್ಟು ಒಟ್ಟುಸೇರಿಸಿದ್ದನ್ನು ಮಕ್ಕಳು ಮೂರ್ಖತನದಿಂದ ಹಾಳುಮಾಡಬಹುದು. ಕಠಿನ ಶ್ರಮದಿಂದ ಶೇಖರಿಸಲಾದ ಅಂಥ ಸೊತ್ತನ್ನು ಅವರು ದುಂದುವೆಚ್ಚಮಾಡಿ ಹಾಳುಮಾಡಲೂಬಹುದು. (ಲೂಕ 15:​11-16) ಹೀಗಾದರೆ ಅದೆಷ್ಟು ‘ವ್ಯರ್ಥ ಮತ್ತು ಅನ್ಯಾಯವೂ’ ಆಗಿರುವುದು!

ಆಸ್ತಿ ಮತ್ತು ಲೋಭ

ಹೆತ್ತವರು ಪರಿಗಣಿಸಬೇಕಾದ ಬೇರೊಂದು ವಿಷಯವೂ ಇದೆ. ಪಿತ್ರಾರ್ಜಿತ ಆಸ್ತಿಗಳ ಮತ್ತು ವಿವಾಹ ವರಮಾನಗಳ ಕುರಿತು ಬಹಳಷ್ಟು ಚಿಂತಿಸಲಾಗುವ ಸಂಸ್ಕೃತಿಗಳಲ್ಲಿ ಮಕ್ಕಳು ಲೋಭಿಗಳಾಗಬಹುದು ಮತ್ತು ಹೆತ್ತವರಿಂದ ನೀಡಲು ಅಸಾಧ್ಯವಾಗಿರುವಷ್ಟು ಭೂಮಿ, ಅಥವಾ ವರದಕ್ಷಿಣೆಗಾಗಿ ತಗಾದೆಮಾಡಬಹುದು. “ಎರಡು ಅಥವಾ ಮೂರು ಹೆಣ್ಣುಮಕ್ಕಳಿರುವ ತಂದೆಗೆ ದುರ್ಗತಿಯೇ,” ಎಂದು ಗ್ರೀಸ್‌ ದೇಶದ ಲೂಕಸ್‌ ಎಂಬ ಹೆಸರಿನ ಒಬ್ಬ ತಂದೆಯು ಹಾಸ್ಯಾಸ್ಪದವಾಗಿ ಹೇಳುತ್ತಾನೆ. ಅವನು ಮುಂದುವರಿಸುವುದು: “ಹೆಣ್ಣುಮಕ್ಕಳು, ತಮ್ಮ ತಂದೆ ತಮಗಾಗಿ ಏನನ್ನು ನೀಡಶಕ್ತರೊ ಅದನ್ನು ಇತರ ಹೆತ್ತವರು ಅವರ ಮಕ್ಕಳಿಗಾಗಿ ‘ಧಾರಾಳವಾಗಿ’ ಕೂಡಿಟ್ಟಿರುವ ವಿಷಯಗಳೊಂದಿಗೆ ಹೋಲಿಸಬಹುದು. ಉತ್ತಮವಾದ ವರದಕ್ಷಿಣೆಯನ್ನು ಕೊಡಸಾಧ್ಯವಿಲ್ಲದಿದ್ದರೆ ತಮಗೆ ವಿವಾಹವಾಗುವ ಸಾಧ್ಯತೆಗಳು ಕಡಿಮೆಯಾಗುವವು ಎಂದು ಸಹ ಅವರು ಹೇಳಬಹುದು.”

ಈ ಹಿಂದೆ ಉಲ್ಲೇಖಿಸಲ್ಪಟ್ಟ ಮಾನೊಲೀಸ್‌ ಹೇಳುವುದು: “ಒಬ್ಬ ಯುವಕನು ತನ್ನ ಭಾವೀ ವಧುವಿನ ತಂದೆಯು ಆಕೆಗೆ ಏನನ್ನಾದರೂ ಅಂದರೆ ಆಸ್ತಿ ಅಥವಾ ದೊಡ್ಡ ಮೊತ್ತದ ಹಣವನ್ನು ನೀಡುವುದಾಗಿ ಮಾತುಕೊಡುವ ತನಕ ವಿವಾಹವನ್ನು ಮುಂದೂಡುತ್ತಲೇ ಇರಬಹುದು. ಇದು ಒಂದು ರೀತಿಯ ಬ್ಲ್ಯಾಕ್‌ಮೇಲ್‌ ಆಗಿರಬಲ್ಲದು.”

ಎಲ್ಲಾ ರೀತಿಯ ಲೋಭದ ವಿರುದ್ಧ ಬೈಬಲ್‌ ಎಚ್ಚರಿಸುತ್ತದೆ. ಸೊಲೊಮೋನನು ಬರೆದದ್ದು: “ಮೊದಲು ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು.” (ಜ್ಞಾನೋಕ್ತಿ 20:21) ಅಪೊಸ್ತಲ ಪೌಲನು ಒತ್ತಿಹೇಳಿದ್ದು: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.”​—⁠1 ತಿಮೊಥೆಯ 6:10; ಎಫೆಸ 5:⁠5.

“ಆಸ್ತಿಯೊಂದಿಗೆ ವಿವೇಕ”

ಆಸ್ತಿಯು ಕೊಂಚ ಮೌಲ್ಯವನ್ನು ಹೊಂದಿರುವುದಾದರೂ, ವಿವೇಕವು ಭೌತಿಕ ಸೊತ್ತಿಗಿಂತಲೂ ಅತಿ ಹೆಚ್ಚು ಮೌಲ್ಯವನ್ನು ಹೊಂದಿದೆ. ರಾಜ ಸೊಲೊಮೋನನು ಬರೆದದ್ದು: ವಿವೇಕವು ಅಥವಾ “ಜ್ಞಾನವು ಸ್ವಾಸ್ತ್ಯದಂತೆ ಪ್ರಯೋಜನಕರ; . . . ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನೆಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:11, 12; ಜ್ಞಾನೋಕ್ತಿ 2:7; 3:21) ಹಣವು ತನ್ನನ್ನು ಹೊಂದಿದವನಿಗೆ ಅಗತ್ಯವಿರುವುದನ್ನು ಪಡೆಯಲು ಶಕ್ತಗೊಳಿಸುವ ಕಾರಣ ಅದು ಸ್ವಲ್ಪಮಟ್ಟಿಗೆ ಸಂರಕ್ಷಣೆಯನ್ನು ನೀಡಬಲ್ಲದ್ದಾದರೂ, ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಇನ್ನೊಂದು ಬದಿಯಲ್ಲಿ ವಿವೇಕವು ಅಂದರೆ ಸಮಸ್ಯೆಗಳನ್ನು ಬಗೆಹರಿಸಲು ಅಥವಾ ನಿರ್ದಿಷ್ಟ ಗುರಿಗಳನ್ನು ತಲಪಲು ಜ್ಞಾನವನ್ನು ಸರಿಯಾಗಿ ಉಪಯೋಗಿಸುವ ಸಾಮರ್ಥ್ಯವು ಮೂರ್ಖತನದ ಅಪಾಯಕಾರಿ ಕಾರ್ಯಗಳಿಗೆ ಕೈಹಾಕದಂತೆ ಒಬ್ಬನನ್ನು ಕಾಪಾಡುತ್ತದೆ. ಅಷ್ಟುಮಾತ್ರವಲ್ಲದೆ ಅದು ಸರಿಯಾದ ದೈವಿಕ ಭಯದ ಮೇಲೆ ಆಧಾರಿತವಾಗಿರುವಲ್ಲಿ, ದೇವರ ನೂತನ ಲೋಕದಲ್ಲಿ ಅನಂತ ಜೀವನವನ್ನು ಗಳಿಸುವಂತೆ ಅದು ಅವನಿಗೆ ಸಹಾಯಮಾಡುವುದು ಮತ್ತು ವಾಸ್ತವದಲ್ಲಿ ಇದೊಂದು ಅತ್ಯಮೂಲ್ಯ ಆಸ್ತಿಯಾಗಿದೆ!​—⁠2 ಪೇತ್ರ 3:13.

ಕ್ರೈಸ್ತ ಹೆತ್ತವರು ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಸರಿಯಾದ ಆದ್ಯತೆಗಳನ್ನು ಇಡುವ ಮೂಲಕ ಅಂಥ ವಿವೇಕವನ್ನು ತೋರಿಸುತ್ತಾರೆ. (ಫಿಲಿಪ್ಪಿ 1:10) ಮಕ್ಕಳ ಉಪಯೋಗಕ್ಕೆಂದು ಶೇಖರಿಸಿಡುವ ಭೌತಿಕ ವಸ್ತುಗಳು ಆಧ್ಯಾತ್ಮಿಕ ವಿಷಯಗಳಿಗಿಂತ ಹೆಚ್ಚಿನ ಸ್ಥಾನವನ್ನು ತೆಗೆದುಕೊಳ್ಳಬಾರದು. ಯೇಸು ತನ್ನ ಹಿಂಬಾಲಕರಿಗೆ ಉತ್ತೇಜಿಸಿದ್ದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ತಮ್ಮ ಕ್ರೈಸ್ತ ಕುಟುಂಬಕ್ಕೆ ಆಧ್ಯಾತ್ಮಿಕ ಗುರಿಗಳನ್ನಿಡುವ ಹೆತ್ತವರು, ಹೇರಳವಾದ ಪ್ರತಿಫಲವನ್ನು ಎದುರುನೋಡಬಲ್ಲರು. ವಿವೇಕಿಯಾದ ರಾಜ ಸೊಲೊಮೋನನು ಬರೆದದ್ದು: “ಧರ್ಮಿಯ ತಂದೆಯು ಅತಿ ಸಂತೋಷಪಡುವನು; ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.”​—⁠ಜ್ಞಾನೋಕ್ತಿ 23:​24, 25.

ನಿತ್ಯಕ್ಕೂ ಉಳಿಯುವ ಸೊತ್ತು

ಪುರಾತನ ಇಸ್ರಾಯೇಲ್ಯರಿಗೆ, ಪಿತ್ರಾರ್ಜಿತಸ್ವಾಸ್ತ್ಯಕ್ಕೆ ಸಂಬಂಧಪಟ್ಟ ವಿಷಯಗಳು ಬಹಳ ಪ್ರಾಮುಖ್ಯವಾಗಿದ್ದವು. (1 ಅರಸುಗಳು 21:​2-6) ಹಾಗಿದ್ದರೂ ಯೆಹೋವನು ಅವರಿಗೆ ಆಜ್ಞಾಪಿಸಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:​6, 7) ಅಂತೆಯೇ ಕ್ರೈಸ್ತ ಹೆತ್ತವರಿಗೆ ಹೀಗೆ ತಿಳಿಸಲಾಗಿದೆ: “ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ [ನಿಮ್ಮ ಮಕ್ಕಳನ್ನು] ಸಾಕಿಸಲಹಿರಿ.”​—⁠ಎಫೆಸ 6:⁠4.

ತಮ್ಮ ಮನೆವಾರ್ತೆಗೆ ಒದಗಿಸಿಕೊಡುವುದರಲ್ಲಿ ಬೈಬಲಿನಿಂದ ಸಲಹೆಯನ್ನು ನೀಡುವುದೂ ಒಳಗೊಂಡಿದೆ ಎಂಬುದನ್ನು ಆಧ್ಯಾತ್ಮಿಕ ಹೊರನೋಟವಿರುವ ಹೆತ್ತವರು ಗ್ರಹಿಸುತ್ತಾರೆ. ಮೂರು ಮಕ್ಕಳ ತಂದೆಯಾದ ಆ್ಯನ್ತ್ರೀಯಾಸ್‌ ಹೇಳುವುದು: “ಮಕ್ಕಳು ತಮ್ಮ ಜೀವನದಲ್ಲಿ ದೈವಿಕ ಮೂಲತತ್ತ್ವಗಳನ್ನು ಅನ್ವಯಿಸಲು ಕಲಿತರೆ, ಅವರು ಭವಿಷ್ಯತ್ತಿಗಾಗಿ ಹೆಚ್ಚು ಉತ್ತಮ ರೀತಿಯಲ್ಲಿ ಸಜ್ಜಿತರಾಗುತ್ತಾರೆ.” ಅಂಥ ಸ್ವಾಸ್ತ್ಯವು, ಅವರು ತಮ್ಮ ಸೃಷ್ಟಿಕರ್ತನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಸ್ಥಾಪಿಸಿ, ಅದನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತದೆ.​—⁠1 ತಿಮೊಥೆಯ 6:​18, 19.

ನಿಮ್ಮ ಮಗುವಿನ ಆಧ್ಯಾತ್ಮಿಕ ಭವಿಷ್ಯಕ್ಕಾಗಿ ಒದಗಿಸಿಕೊಡುವ ವಿಷಯದ ಕುರಿತು ನೀವು ಆಲೋಚಿಸಿದ್ದೀರೋ? ಉದಾಹರಣೆಗೆ, ತಮ್ಮ ಮಗನೋ ಮಗಳೋ ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟುತ್ತಿರುವುದಾದರೆ ಹೆತ್ತವರು ಏನು ಮಾಡಬಲ್ಲರು? ಪೂರ್ಣ ಸಮಯದ ಶುಶ್ರೂಷಕನು ಆರ್ಥಿಕ ಬೆಂಬಲವನ್ನು ಕೇಳಿಕೊಳ್ಳಬಾರದಾದರೂ, ಪ್ರೀತಿಯ ಹೆತ್ತವರು ಅವನು ಪೂರ್ಣ ಸಮಯದ ಸೇವೆಯಲ್ಲಿ ಉಳಿಯಸಾಧ್ಯವಾಗುವಂತೆ ‘ಅವನ ಅಗತ್ಯಗಳಿಗೆ ಅನುಸಾರವಾಗಿ ಅವನೊಂದಿಗೆ ಹಂಚಿಕೊಳ್ಳಲು’ ನಿರ್ಧರಿಸಬಹುದು. (ರೋಮಾಪುರ 12:​13, NW; 1 ಸಮುವೇಲ 2:18, 19; ಫಿಲಿಪ್ಪಿ 4:14-18) ಅಂಥ ಬೆಂಬಲಾತ್ಮಕ ಮನೋಭಾವವು ಯೆಹೋವನಿಗೆ ನಿಶ್ಚಯವಾಗಿಯೂ ಮೆಚ್ಚಿಗೆಯಾಗುತ್ತದೆ.

ಹಾಗಾದರೆ, ತಮ್ಮ ಮಕ್ಕಳಿಗೆ ಹೆತ್ತವರು ಯಾವ ಆಸ್ತಿಯನ್ನು ನೀಡಲಿಕ್ಕಿದೆ? ಅವರ ಭೌತಿಕ ಅಗತ್ಯಗಳನ್ನು ಒದಗಿಸುವುದರ ಜೊತೆಗೆ, ತಮ್ಮ ಮಕ್ಕಳಿಗೆ ನಿತ್ಯ ನಿರಂತರವೂ ಪ್ರಯೋಜನವನ್ನು ತರಬಲ್ಲ ಹೇರಳವಾದ ಆಧ್ಯಾತ್ಮಿಕ ಸ್ವಾಸ್ತ್ಯವು ಸಿಗುವಂತೆ ಕ್ರೈಸ್ತ ಹೆತ್ತವರು ಖಚಿತಪಡಿಸಿಕೊಳ್ಳುವರು. ಈ ರೀತಿಯಲ್ಲಿ, ಕೀರ್ತನೆ 37:18ರಲ್ಲಿ ಕಂಡುಬರುವ ಮಾತುಗಳು ನಿಜವೆಂದು ರುಜುವಾಗುತ್ತವೆ. ಅಲ್ಲಿ ಹೇಳುವುದು: “ಯೆಹೋವನು ಸದ್ಭಕ್ತರ ಜೀವಮಾನವನ್ನು ಲಕ್ಷಿಸುತ್ತಾನೆ: ಅವರ ಸ್ವಾಸ್ತ್ಯವು ಶಾಶ್ವತವಾಗಿ ನಿಲ್ಲುವದು.”

[ಪುಟ 26, 27ರಲ್ಲಿರುವ ಚಿತ್ರಗಳು]

ನಿಮ್ಮ ಮಕ್ಕಳಿಗಾಗಿ ಯಾವ ಭವಿಷ್ಯತ್ತು ನಿಮ್ಮ ಮನಸ್ಸಿನಲ್ಲಿದೆ?