ಮನಃಪೂರ್ವಕ ತ್ಯಾಗದ ಸಂತೃಪ್ತಿಕರ ಹಾಗೂ ಸಂತೋಷಭರಿತ ಜೀವನ
ಜೀವನ ಕಥೆ
ಮನಃಪೂರ್ವಕ ತ್ಯಾಗದ ಸಂತೃಪ್ತಿಕರ ಹಾಗೂ ಸಂತೋಷಭರಿತ ಜೀವನ
ಮಾರಿಯೊನ್ ಮತ್ತು ರೋಸಾ ಶುಮಿಗ ಅವರು ಹೇಳಿದಂತೆ
“ನಾನು ಸಂತೋಷದಿಂದ ನಿನಗೆ ಯಜ್ಞವನ್ನು ಸಮರ್ಪಿಸುವೆನು” ಎಂದು ಕೀರ್ತನೆ 54:7 ತಿಳಿಸುತ್ತದೆ. ಈ ಹೇಳಿಕೆಯು, ಫ್ರಾನ್ಸ್‌ನಲ್ಲಿ ವಾಸಿಸುತ್ತಿರುವ ಮಾರಿಯೊನ್ ಶುಮಿಗ ಮತ್ತು ಅವರ ಹೆಂಡತಿಯಾದ ರೋಸಾರವರ ಬದುಕಿನ ಮುಖ್ಯ ವಿಷಯವಾಗಿದೆ. ಯೆಹೋವನ ಸೇವೆಯಲ್ಲಿ ಕಳೆದಿರುವ ತಮ್ಮ ಸುದೀರ್ಘವಾದ, ಸಂಪದ್ಭರಿತ ಬದುಕಿನ ಮುಖ್ಯಾಂಶಗಳಲ್ಲಿ ಕೆಲವನ್ನು ಅವರು ಇತ್ತೀಚೆಗೆ ತಿಳಿಸಿದರು.
ಮಾರಿಯೊನ್: ನನ್ನ ಹೆತ್ತವರು ಪೋಲೆಂಡ್‌ನಿಂದ ಬಂದ ರೋಮನ್ ಕ್ಯಾಥೊಲಿಕ್ ವಲಸಿಗರಾಗಿದ್ದರು. ತಂದೆಯವರಿಗೆ ಶಾಲೆಗೆ ಹೋಗುವ ಅವಕಾಶ ಸಿಗಲಿಲ್ಲ. ಆದರೂ, ಮೊದಲನೇ ಲೋಕ ಯುದ್ಧದ ಸಮಯದಲ್ಲಿ ಸೈನಿಕರೋಪಾದಿ ಅವರು ಕಂದಕಗಳಲ್ಲಿ ತಮ್ಮ ಕರ್ತವ್ಯಗಳನ್ನು ಪೂರೈಸುತ್ತಿರುವಾಗ ಓದಲು ಮತ್ತು ಬರೆಯಲು ಕಲಿತರು. ತಂದೆಯವರು ದೇವಭಯವಿದ್ದ ವ್ಯಕ್ತಿಯಾಗಿದ್ದರಾದರೂ, ಚರ್ಚಿನ ಲೋಪದೋಷಗಳು ಅವರಿಗೆ ತುಂಬ ನಿರಾಶೆಯನ್ನುಂಟುಮಾಡಿದವು.
ವಿಶೇಷವಾಗಿ ಒಂದು ಘಟನೆಯು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಯುದ್ಧದ ಸಮಯದಲ್ಲಿ ಒಂದು ದಿನ ಸೈನ್ಯದ ಪಾದ್ರಿಯೊಬ್ಬನು ತಂದೆಯವರ ಮಿಲಿಟರಿ ತಂಡವನ್ನು ಸಂದರ್ಶಿಸಿದನು. ಸಮೀಪದಲ್ಲೇ ಒಂದು ಸಿಡಿಗುಂಡು ಸ್ಫೋಟಿಸಿದಾಗ, ಕುದುರೆಯನ್ನು ಓಡಿಸಲಿಕ್ಕಾಗಿ ಆ ಪಾದ್ರಿಯು ಒಂದು ಶಿಲುಬೆಯಿಂದ ಅದನ್ನು ಹೊಡೆಯುತ್ತಾ ಭಯಭೀತನಾಗಿ ಅಲ್ಲಿಂದ ಪಲಾಯನಗೈದನು. ದೇವರ “ಪ್ರತಿನಿಧಿ”ಯೊಬ್ಬನು ತನ್ನ ಪಲಾಯನವನ್ನು ವೇಗಗೊಳಿಸಲಿಕ್ಕಾಗಿ “ಪವಿತ್ರ” ವಸ್ತುವನ್ನು ಉಪಯೋಗಿಸಿದ್ದನ್ನು ನೋಡಿ ತಂದೆಯವರು ಆಘಾತಗೊಂಡರು. ಇಂಥ ಅನುಭವಗಳಾಗಿದ್ದರೂ ಮತ್ತು ಯುದ್ಧದ ಬೀಭತ್ಸ ದೃಶ್ಯಗಳನ್ನು ಕಣ್ಣಾರೆ ಕಂಡಿದ್ದರೂ ದೇವರಲ್ಲಿ ತಂದೆಯವರಿಗಿದ್ದ ನಂಬಿಕೆಯು ಮಾತ್ರ ಕಡಿಮೆಯಾಗಲಿಲ್ಲ. ಯುದ್ಧದಿಂದ ಸುರಕ್ಷಿತವಾಗಿ ಮನೆಗೆ ಹಿಂದಿರುಗಿದ್ದಕ್ಕಾಗಿ ಅವರು ಅನೇಕವೇಳೆ ದೇವರಿಗೆ ಕೀರ್ತಿ ಸಲ್ಲಿಸುತ್ತಿದ್ದರು.
“ಚಿಕ್ಕ ಪೋಲೆಂಡ್”
ಇಸವಿ 1911ರಲ್ಲಿ, ನನ್ನ ತಂದೆಯವರು ಪಕ್ಕದ ಹಳ್ಳಿಯ ಹುಡುಗಿಯೊಬ್ಬಳನ್ನು ಮದುವೆಯಾದರು. ಅವಳ ಹೆಸರು ಆನ ಟ್ಸಸಾವ್‌ಸ್ಕೀ ಎಂದಾಗಿತ್ತು. ಯುದ್ಧಾನಂತರ ಸ್ವಲ್ಪದರಲ್ಲೇ, ಅಂದರೆ 1919ರಲ್ಲಿ ತಂದೆ ಹಾಗೂ ತಾಯಿಯವರು ಪೋಲೆಂಡ್‌ನಿಂದ ಫ್ರಾನ್ಸ್‌ಗೆ ವಲಸೆಹೋದರು. ಅಲ್ಲಿ ತಂದೆಯವರಿಗೆ ಕಲ್ಲಿದ್ದಲಿನ ಗಣಿಯಲ್ಲಿ ಕೆಲಸ ಸಿಕ್ಕಿತು. ನಾನು 1926ರ ಮಾರ್ಚ್ ತಿಂಗಳಿನಲ್ಲಿ ನೈರುತ್ಯ ಫ್ರಾನ್ಸ್‌ನ ಕಾನ್ಯಾಕ್
ಲೆ ಮೀನ್‌ನಲ್ಲಿ ಜನಿಸಿದೆ. ತದನಂತರ ನನ್ನ ಹೆತ್ತವರು ಉತ್ತರ ಫ್ರಾನ್ಸ್‌ನ ಲೊಂಸ್‌ನ ಬಳಿಯಿದ್ದ ಲೋಸಾ ಒಂಗೋಎಲ್‌ನ ಪೋಲಿಷ್ ಸಮುದಾಯವೊಂದರಲ್ಲಿ ನೆಲೆಸಿದರು. ಅಲ್ಲಿ ರೊಟ್ಟಿಮಾಡುತ್ತಿದ್ದವನು ಪೋಲೆಂಡಿನವನಾಗಿದ್ದನು, ಕಸಾಯಿಯೂ ಪೋಲೆಂಡಿನವನಾಗಿದ್ದನು, ಮತ್ತು ಚರ್ಚಿನ ಪಾದ್ರಿಯು ಸಹ ಪೋಲೆಂಡಿನವನಾಗಿದ್ದನು. ಆದುದರಿಂದಲೇ ಈ ಕ್ಷೇತ್ರವು ಚಿಕ್ಕ ಪೋಲೆಂಡ್ ಎಂದು ಕರೆಯಲ್ಪಡುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ನನ್ನ ಹೆತ್ತವರು ಸಮುದಾಯದ ಚಟುವಟಿಕೆಗಳಲ್ಲಿ ಒಳಗೂಡುತ್ತಿದ್ದರು. ತಂದೆಯವರು ಅನೇಕವೇಳೆ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದು, ಅವುಗಳಲ್ಲಿ ನಾಟಕ, ಸಂಗೀತ, ಮತ್ತು ಹಾಡುವಿಕೆಯು ಒಳಗೂಡಿರುತ್ತಿತ್ತು. ಅವರು ಪಾದ್ರಿಯೊಂದಿಗೆ ಕ್ರಮವಾದ ಚರ್ಚೆಗಳನ್ನು ಸಹ ನಡೆಸುತ್ತಿದ್ದರು. ಆದರೆ ಪಾದ್ರಿಯು ಸಾಮಾನ್ಯವಾಗಿ “ಇದರಲ್ಲಿ ಅನೇಕ ರಹಸ್ಯಗಳು ಅಡಕವಾಗಿವೆ” ಎಂದು ಉತ್ತರಿಸುತ್ತಿದ್ದಾಗ ತಂದೆಯವರಿಗೆ ತೃಪ್ತಿಯಾಗುತ್ತಿರಲಿಲ್ಲ.ಇಸವಿ 1930ರ ಒಂದು ದಿನ, ಇಬ್ಬರು ಸ್ತ್ರೀಯರು ನಮ್ಮ ಮನೆಯ ಕದತಟ್ಟಿದರು. ಅವರು ಬೈಬಲ್ ವಿದ್ಯಾರ್ಥಿಗಳಾಗಿದ್ದು, ಆಗ ಯೆಹೋವನ ಸಾಕ್ಷಿಗಳನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು. ನನ್ನ ತಂದೆಯವರು ಅವರಿಂದ ಒಂದು ಬೈಬಲನ್ನು ಪಡೆದುಕೊಂಡರು; ಅನೇಕ ವರ್ಷಗಳಿಂದ ಅವರು ಈ ಪುಸ್ತಕವನ್ನು ಓದಲು ಬಯಸುತ್ತಿದ್ದರು. ಅವರು ಮತ್ತು ತಾಯಿಯವರು ಆ ಸ್ತ್ರೀಯರು ಬಿಟ್ಟುಹೋಗಿದ್ದ ಬೈಬಲಾಧಾರಿತ ಪ್ರಕಾಶನಗಳನ್ನು ಸಹ ಆಸಕ್ತಿಯಿಂದ ಓದಿದರು. ನನ್ನ ಹೆತ್ತವರು ಈ ಪ್ರಕಾಶನಗಳಲ್ಲಿ ಏನನ್ನು ಓದಿದರೋ ಅದರಿಂದ ಬಹಳವಾಗಿ ಪ್ರಭಾವಿತರಾದರು. ತಮ್ಮ ಚಟುವಟಿಕೆಭರಿತ ಜೀವನದ ನಡುವೆಯೂ ನನ್ನ ಹೆತ್ತವರು, ಬೈಬಲ್ ವಿದ್ಯಾರ್ಥಿಗಳಿಂದ ಏರ್ಪಡಿಸಲ್ಪಟ್ಟಿದ್ದ ಕೂಟಗಳಿಗೆ ಹಾಜರಾಗತೊಡಗಿದರು. ಈಗ ಪಾದ್ರಿಯೊಂದಿಗಿನ ಚರ್ಚೆಗಳು ಹೆಚ್ಚೆಚ್ಚು ವಾಗ್ವಾದಾಸ್ಪದವಾಗಿ ಪರಿಣಮಿಸಿದವು. ಕೊನೆಗೆ ಒಂದು ದಿನ, ನನ್ನ ಹೆತ್ತವರು ಬೈಬಲ್ ವಿದ್ಯಾರ್ಥಿಗಳೊಂದಿಗೆ ಸಹವಾಸಿಸುವುದನ್ನು ಮುಂದುವರಿಸುವುದಾದರೆ, ನನ್ನ ಅಕ್ಕ ಸ್ಟಿಫನೀಯನ್ನು ಕ್ಯಾಟಿಕಿಸಮ್‌ನಿಂದ ಬಹಿಷ್ಕರಿಸಲಾಗುವುದು ಎಂದು ಆ ಪಾದ್ರಿಯು ಬೆದರಿಕೆಯೊಡ್ಡಿದನು. ಇದಕ್ಕೆ ತಂದೆಯವರು ಉತ್ತರಿಸಿದ್ದು: “ನೀವೇನೂ ತೊಂದರೆ ತೆಗೆದುಕೊಳ್ಳಬೇಡಿ. ಇಂದಿನಿಂದ ನನ್ನ ಮಗಳು ಮತ್ತು ಇತರ ಮಕ್ಕಳು ನಮ್ಮೊಂದಿಗೆ ಬೈಬಲ್ ವಿದ್ಯಾರ್ಥಿಗಳ ಕೂಟಗಳಿಗೆ ಬರುತ್ತಾರೆ.” ತಂದೆಯವರು ಚರ್ಚಿನಿಂದ ಸದಸ್ಯತ್ವವನ್ನು ಹಿಂದೆಗೆದುಕೊಂಡರು, ಮತ್ತು 1932ರ ಆರಂಭದಲ್ಲಿ ನನ್ನ ಹೆತ್ತವರು ದೀಕ್ಷಾಸ್ನಾನ ಪಡೆದುಕೊಂಡರು. ಆ ಸಮಯದಲ್ಲಿ ಫ್ರಾನ್ಸಿನಲ್ಲಿ ಸುಮಾರು 800 ಮಂದಿ ರಾಜ್ಯ ಪ್ರಚಾರಕರು ಮಾತ್ರ ಇದ್ದರು.
ರೋಸಾ: ನನ್ನ ಹೆತ್ತವರು ಹಂಗೇರಿಯವರಾಗಿದ್ದರು, ಮತ್ತು ಮಾರಿಯೊನ್‌ರ ಕುಟುಂಬದಂತೆಯೇ ಇವರು ಸಹ ಕಲ್ಲಿದ್ದಲಿನ ಗಣಿಗಳಲ್ಲಿ ಕೆಲಸಮಾಡಲಿಕ್ಕಾಗಿ ಫ್ರಾನ್ಸಿನ ಉತ್ತರ ಭಾಗಕ್ಕೆ ಬಂದು ನೆಲೆಸಿದ್ದರು. ನಾನು 1925ರಲ್ಲಿ ಜನಿಸಿದೆ. ಇಸವಿ 1937ರಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ಆಗುಸ್ಟ ಬೂಸಾನ್‌ರು ನನ್ನ ಹೆತ್ತವರಿಗೋಸ್ಕರ ಹಂಗೇರಿಯನ್ ಭಾಷೆಯಲ್ಲಿ ಕಾವಲಿನಬುರುಜು ಪತ್ರಿಕೆಗಳನ್ನು ತರಲಾರಂಭಿಸಿದರು. ನಾವು ಅವರನ್ನು ಪಪ್ಪಾ ಆಗುಸ್ಟ ಎಂದು ಕರೆಯುತ್ತಿದ್ದೆವು. ನನ್ನ ಹೆತ್ತವರಿಗೆ ಈ ಪತ್ರಿಕೆಗಳು ತುಂಬ ಆಸಕ್ತಿಕರವಾಗಿ ಕಂಡುಬಂದವು, ಆದರೆ ಅವರಲ್ಲಿ ಒಬ್ಬರೂ ಯೆಹೋವನ ಸಾಕ್ಷಿಯಾಗಲಿಲ್ಲ.
ನಾನು ಚಿಕ್ಕವಳಾಗಿದ್ದೆನಾದರೂ, ಕಾವಲಿನಬುರುಜು ಪತ್ರಿಕೆಯಲ್ಲಿ ನಾನು ಓದುತ್ತಿದ್ದ ವಿಚಾರಗಳು ನನ್ನ ಮನಸ್ಸನ್ನು ಕಲಕಿದವು, ಮತ್ತು ಆಗುಸ್ಟ ಪಪ್ಪರ ಸೊಸೆಯಾಗಿದ್ದ ಸೂಈಸಾನ್ ಬೂಸಾನ್ ನನ್ನಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿದಳು. ಅವಳು ನನ್ನನ್ನು ಕೂಟಗಳಿಗೆ ಕರೆದುಕೊಂಡು ಹೋಗಲು ನನ್ನ ಹೆತ್ತವರು ಅನುಮತಿಸಿದರು. ಸಮಯಾನಂತರ, ನಾನು ಕೆಲಸಮಾಡಲು ಆರಂಭಿಸಿದಾಗ, ಭಾನುವಾರಗಳಂದು ನಾನು ಕೂಟಗಳಿಗೆ ಹಾಜರಾಗುತ್ತಿದ್ದದ್ದು ತಂದೆಯವರಿಗೆ ತುಂಬ ಕೋಪವನ್ನುಂಟುಮಾಡಿತು. ಅವರು ಸಾಮಾನ್ಯವಾಗಿ ಒಳ್ಳೇ ಸ್ವಭಾವದವರಾಗಿದ್ದರೂ, “ಇಡೀ ವಾರ ಹೇಗೂ ನೀನು ಮನೆಯಲ್ಲಿರುವುದಿಲ್ಲ, ಮತ್ತು ಭಾನುವಾರ ಸಹ ನಿನ್ನ ಕೂಟಗಳಿಗೆ ಹೋಗಿಬಿಡುತ್ತೀ!” ಎಂದು ದೂರುತ್ತಿದ್ದರು. ಆದರೆ ನಾನು ಮಾತ್ರ ಕೂಟಗಳಿಗೆ ಹೋಗುವುದನ್ನು ಮುಂದುವರಿಸಿದೆ. ಆದುದರಿಂದ, ಒಂದು ದಿನ ನನ್ನ ತಂದೆಯವರು ನನಗೆ, “ನಿನ್ನ ಗಂಟುಮೂಟೆ ಕಟ್ಟಿಕೊಂಡು ಈ ಮನೆಯಿಂದ ತೊಲಗು!” ಎಂದು ಹೇಳಿದರು. ಆಗಲೇ ಕತ್ತಲಾಗುತ್ತಾ ಬಂದಿತ್ತು. ಆಗ ನಾನಿನ್ನೂ 17 ವರ್ಷದವಳಾಗಿದ್ದೆ, ಮತ್ತು ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗಲಿಲ್ಲ. ಅತ್ತು ಅತ್ತು, ಕೊನೆಗೆ ಸೂಈಸಾನಳ ಮನೆಗೆ ಬಂದು ತಲಪಿದೆ. ಸುಮಾರು ಒಂದು ವಾರದ ವರೆಗೆ 1 ಯೋಹಾನ 4:18ರಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ವಿಚಾರವು ದೃಢವಾಗಿ ನಿಲ್ಲಲು ನನಗೆ ಸಹಾಯಮಾಡಿತು. “ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ” ಎಂದು ಆ ವಚನವು ಹೇಳುತ್ತದೆ. ಇಸವಿ 1942ರಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ.
ನಾನು ಸೂಈಸಾನಳ ಮನೆಯಲ್ಲೇ ಉಳಿದೆ. ತದನಂತರ ತಂದೆಯವರು ನನ್ನನ್ನು ಮನೆಗೆ ಕರೆದುಕೊಂಡುಬರಲಿಕ್ಕಾಗಿ ನನ್ನ ಅಕ್ಕನನ್ನು ಕಳುಹಿಸಿದರು. ನಾನು ತುಂಬ ನಾಚಿಕೆ ಸ್ವಭಾವದವಳಾಗಿದ್ದೆ, ಆದರೆಒಂದು ಅಮೂಲ್ಯ ಆಧ್ಯಾತ್ಮಿಕ ಪರಂಪರೆ
ಮಾರಿಯೊನ್: ನಾನು 1942ರಲ್ಲಿ ನನ್ನ ಅಕ್ಕಂದಿರಾದ ಸ್ಟಿಫನೀ ಮತ್ತು ಮೆಲಾನೀ ಹಾಗೂ ನನ್ನ ಅಣ್ಣ ಸ್ಟಿಫಾನ್‌ನೊಂದಿಗೆ ದೀಕ್ಷಾಸ್ನಾನ ಪಡೆದುಕೊಂಡೆ. ಮನೆಯಲ್ಲಿ ಕುಟುಂಬ ಜೀವನವು ದೇವರ ವಾಕ್ಯದ ಮೇಲೆ ಕೇಂದ್ರೀಕೃತವಾಗಿತ್ತು. ನಾವೆಲ್ಲರೂ ಮೇಜಿನ ಸುತ್ತ ಕುಳಿತುಕೊಂಡಿರುವಾಗ ತಂದೆಯವರು ಪೋಲಿಷ್ ಭಾಷೆಯಲ್ಲಿ ಬೈಬಲನ್ನು ಓದುತ್ತಿದ್ದರು. ನಮ್ಮ ಹೆತ್ತವರು ರಾಜ್ಯ ಸಾರುವಿಕೆಯ ಕೆಲಸದಲ್ಲಿ ತಮಗಾದ ಅನುಭವಗಳನ್ನು ಹೇಳುವುದನ್ನು ಕೇಳಿಸಿಕೊಳ್ಳುವುದರಲ್ಲೇ ನಮ್ಮ ಸಂಜೆಗಳು ಅನೇಕವೇಳೆ ಕಳೆದುಹೋಗುತ್ತಿದ್ದವು. ಆಧ್ಯಾತ್ಮಿಕವಾಗಿ ಉತ್ತೇಜನದಾಯಕವಾಗಿದ್ದ ಈ ಸಮಯಾವಧಿಗಳೇ, ನಾವು ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನ ಮೇಲೆ ಹೆಚ್ಚೆಚ್ಚು ಭರವಸೆಯಿಡುವಂತೆ ಕಲಿಸಿದವು. ತಂದೆಯವರ ಅನಾರೋಗ್ಯವು ಅವರು ಕೆಲಸಮಾಡುವುದನ್ನು ನಿಲ್ಲಿಸುವಂತೆ ಮಾಡಿತು, ಆದರೆ ಅವರು ಆಧ್ಯಾತ್ಮಿಕವಾಗಿ ಮತ್ತು ಭೌತಿಕವಾಗಿ ನಮ್ಮ ಪರಾಮರಿಕೆಮಾಡುವುದನ್ನು ಮುಂದುವರಿಸಿದರು.
ಈಗ ತಂದೆಯವರಿಗೆ ಹೆಚ್ಚು ಸಮಯ ಸಿಗುತ್ತಿದ್ದುದರಿಂದ, ಸಭೆಯ ಯುವಜನರೊಂದಿಗೆ ಅವರು ವಾರಕ್ಕೊಮ್ಮೆ ಪೋಲಿಷ್ ಭಾಷೆಯಲ್ಲಿ ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದರು. ನಾನು ಪೋಲಿಷ್ ಭಾಷೆಯನ್ನು ಓದಲು ಕಲಿತದ್ದು ಇಲ್ಲಿಯೇ. ತಂದೆಯವರು ಯುವಜನರನ್ನು ಇನ್ನಿತರ ವಿಧಗಳಲ್ಲೂ ಉತ್ತೇಜಿಸಿದರು. ಆ ಸಮಯದಲ್ಲಿ ಸಹೋದರ ಗುಸ್ಟಾವ್ ಸಾಪ್‌ಫರ್ ಅವರು ಫ್ರಾನ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಕೆಲಸವನ್ನು ಮೇಲ್ವಿಚಾರಣೆಮಾಡುತ್ತಿದ್ದರು. ಒಮ್ಮೆ ಅವರು ನಮ್ಮ ಸಭೆಯನ್ನು ಸಂದರ್ಶಿಸಿದಾಗ, ತಂದೆಯವರು ಒಂದು ಗಾಯಕವೃಂದವನ್ನು ಮತ್ತು ಬೇಲ್ಶಚ್ಚರನ ಔತಣ ಹಾಗೂ ಗೋಡೆಯ ಮೇಲಿನ ಕೈಬರಹದ ಮೇಲಾಧಾರಿತವಾದ ಪೂರ್ಣ ಪೋಷಾಕಿನ ಒಂದು ಬೈಬಲ್ ಡ್ರಾಮವನ್ನು ಏರ್ಪಡಿಸಿದರು. (ದಾನಿಯೇಲ 5:1-31) ಲ್ವೀ ಪ್ಯೆಶುತ ಎಂಬುವನು ದಾನಿಯೇಲನ ಪಾತ್ರವನ್ನು ಮಾಡಿದನು, ಸಮಯಾನಂತರ ಇವನು ನಾಸಿಗಳ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡನು. * ಮಕ್ಕಳಾಗಿದ್ದ ನಾವು ಬೆಳೆದದ್ದು ಈ ರೀತಿಯ ವಾತಾವರಣದಲ್ಲೇ. ನಮ್ಮ ಹೆತ್ತವರು ಯಾವಾಗಲೂ ಆಧ್ಯಾತ್ಮಿಕ ವಿಷಯಗಳಲ್ಲಿ ಕಾರ್ಯಮಗ್ನರಾಗಿ ಇರುತ್ತಿದ್ದುದನ್ನು ನಾವು ಗಮನಿಸಿದೆವು. ಇಂದು, ನನ್ನ ಹೆತ್ತವರು ಎಷ್ಟು ಅಮೂಲ್ಯವಾದ ಪರಂಪರೆಯನ್ನು ನಮಗೋಸ್ಕರ ಬಿಟ್ಟುಹೋದರು ಎಂಬುದು ನನಗೆ ಅರಿವಾಗುತ್ತದೆ.
ಇಸವಿ 1939ರಲ್ಲಿ IIನೆಯ ಲೋಕ ಯುದ್ಧವು ತಲೆದೋರಿದಾಗ, ಫ್ರಾನ್ಸ್‌ನಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಚಟುವಟಿಕೆಯು ನಿಷೇಧಕ್ಕೊಳಗಾಯಿತು. ಒಂದು ಸಂದರ್ಭದಲ್ಲಿ, ನಮ್ಮ ಹಳ್ಳಿಯು ತಲಾಷಿಗೆ ಒಳಗಾಯಿತು. ಎಲ್ಲಾ ಮನೆಗಳು ಜರ್ಮನ್ ಸೈನಿಕರಿಂದ ಮುತ್ತಿಗೆಹಾಕಲ್ಪಟ್ಟವು. ತಂದೆಯವರು ಕಪಾಟಿನ ಕೆಳಭಾಗದಲ್ಲಿ ಒಂದು ಹುಸಿತಳವನ್ನು ಮಾಡಿದ್ದರು, ಮತ್ತು ನಾವು ಬೇರೆ ಬೇರೆ ಬೈಬಲ್ ಪ್ರಕಾಶನಗಳನ್ನು ಅಲ್ಲಿ ಬಚ್ಚಿಟ್ಟೆವು. ಆದರೆ ಫ್ಯಾಸಿಸಮ್ ಅಥವಾ ಸ್ವಾತಂತ್ರ್ಯ (ಇಂಗ್ಲಿಷ್) ಎಂಬ ಪುಸ್ತಿಕೆಯ ಅನೇಕ ಪ್ರತಿಗಳು ಊಟದ ಕೋಣೆಯಲ್ಲಿದ್ದ ಮೇಜಿನ ಡ್ರಾಯರಿನಲ್ಲಿದ್ದವು. ಆ ಕೂಡಲೆ ತಂದೆಯವರು ಅವುಗಳನ್ನು ಮೊಗಸಾಲೆಯ ಗೂಟದಲ್ಲಿ ನೇತುಹಾಕಲ್ಪಟ್ಟಿದ್ದ ಕೋಟಿನ ಜೇಬಿನಲ್ಲಿ ತುರುಕಿದರು. ಇಬ್ಬರು ಸೈನಿಕರು ಮತ್ತು ಒಬ್ಬ ಫ್ರೆಂಚ್ ಪೊಲೀಸನು ಸೇರಿಕೊಂಡು ನಮ್ಮ ಮನೆಯನ್ನು ತಲಾಷುಮಾಡಿದರು. ನಾವು ಉಸಿರು ಬಿಗಿಹಿಡಿದು ನಿಂತಿದ್ದೆವು. ಸೈನಿಕರಲ್ಲಿ ಒಬ್ಬನು ಮೊಗಸಾಲೆಯಲ್ಲಿ ನೇತುಹಾಕಲ್ಪಟ್ಟಿದ್ದ ಬಟ್ಟೆಗಳನ್ನು ಹುಡುಕಲಾರಂಭಿಸಿದನು, ಮತ್ತು ತದನಂತರ ಅವನು ತನ್ನ ಕೈಯಲ್ಲಿ ಪುಸ್ತಿಕೆಗಳನ್ನು ಹಿಡಿದುಕೊಂಡು ಅಡಿಗೆಮನೆಯನ್ನು ಪ್ರವೇಶಿಸಿದನು. ನಾವು ಅಲ್ಲಿಯೇ ಇದ್ದೆವು. ಅವನು ನಮ್ಮನ್ನು ದುರುಗುಟ್ಟಿ ನೋಡಿ, ಆ ಪುಸ್ತಿಕೆಗಳನ್ನು ಮೇಜಿನ ಮೇಲಿಟ್ಟು, ಬೇರೆ ಕಡೆ ತನ್ನ ತಲಾಷನ್ನು ಮುಂದುವರಿಸಿದನು. ತಕ್ಷಣವೇ ನಾನು ಆ ಪುಸ್ತಿಕೆಗಳನ್ನು ತೆಗೆದುಕೊಂಡು, ಆ ಸೈನಿಕನು ಈಗಾಗಲೇ ತಲಾಷುಮಾಡಿ ಮುಗಿಸಿದ್ದಂಥ ಒಂದು ಡ್ರಾಯರಿನಲ್ಲಿ ಇಟ್ಟೆ. ಆ ಸೈನಿಕನು ಆ ಪುಸ್ತಿಕೆಗಳನ್ನು ಕೇಳಲೇ ಇಲ್ಲ—ಅವನು ಅವುಗಳ ಬಗ್ಗೆ ಸಂಪೂರ್ಣವಾಗಿ ಮರೆತುಬಿಟ್ಟಂತಿತ್ತು!
ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದ್ದು
ಇಸವಿ 1948ರಲ್ಲಿ, ಪಯನೀಯರ್ ಸೇವೆಯಲ್ಲಿ ಪೂರ್ಣ ಸಮಯ ಯೆಹೋವನ ಸೇವೆಮಾಡಲಿಕ್ಕಾಗಿ ನನ್ನನ್ನು ಲಭ್ಯಗೊಳಿಸಿಕೊಳ್ಳುವ ನಿರ್ಧಾರವನ್ನು ಮಾಡಿದೆ. ಕೆಲವು ದಿನಗಳ ಬಳಿಕ, ಫ್ರಾನ್ಸಿನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಿಂದ ನನಗೆ ಒಂದು ಪತ್ರ ಬಂತು. ಆ ಪತ್ರದಲ್ಲಿ, ಬೆಲ್ಜಿಯಮ್‌ನ ಬಳಿಯಿರುವ ಸೂಡಾನ್ ನಗರದಲ್ಲಿರುವ ಸಭೆಯಲ್ಲಿ ಒಬ್ಬ ಪಯನೀಯರನೋಪಾದಿ ಸೇವೆಮಾಡುವ ನೇಮಕವು ಕೊಡಲ್ಪಟ್ಟಿತ್ತು. ಈ ರೀತಿಯಲ್ಲಿ ನಾನು ಯೆಹೋವನ ಸೇವೆಯನ್ನು ಕೈಗೊಂಡದ್ದನ್ನು ನೋಡಿ ನನ್ನ ಹೆತ್ತವರು ತುಂಬ ಖುಷಿಪಟ್ಟರು. ಆದರೂ, ಪಯನೀಯರ್ ಸೇವೆಯು ಸುಲಭದ ಕೆಲಸವೇನಲ್ಲ, ಇದರಲ್ಲಿ ಶ್ರಮೆಯು ಒಳಗೂಡಿದೆ ಎಂದು ತಂದೆಯವರು ತಿಳಿಯಪಡಿಸಿದರು. ಇದಲ್ಲದೆ, ನಮ್ಮ ಮನೆಯು ನಿನಗಾಗಿ ಸದಾ ತೆರೆದಿರುತ್ತದೆ ಮತ್ತು ನಿನಗೆ ಸಮಸ್ಯೆಗಳಿರುವಲ್ಲಿ ಸಹಾಯಕ್ಕಾಗಿ ತನ್ನ ಮೇಲೆ ಅವಲಂಬಿಸಸಾಧ್ಯವಿದೆ ಎಂದು ಅವರು ಹೇಳಿದರು. ನನ್ನ ಹೆತ್ತವರ ಬಳಿ ಹೆಚ್ಚು ಹಣವಿರಲಿಲ್ಲವಾದರೂ, ಅವರು ನನಗೊಂದು ಹೊಸ ಬೈಸಿಕಲನ್ನು ತಂದುಕೊಟ್ಟರು. ಆ ಬೈಸಿಕಲಿನ ರಸೀದಿಯು ಈಗಲೂ ನನ್ನ ಬಳಿಯಿದೆ, ಮತ್ತು ನಾನು ಅದನ್ನು ನೋಡುವಾಗ ನನ್ನ ಕಣ್ಣಾಲಿಗಳು ತುಂಬಿಬರುತ್ತವೆ. ಇಸವಿ 1961ರಲ್ಲಿ ತಂದೆಯವರು ಹಾಗೂ ತಾಯಿಯವರು ತೀರಿಹೋದರು, ಆದರೆ ತಂದೆಯವರ ವಿವೇಕಯುತ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ; ನನ್ನ ಸೇವಾ ವರ್ಷಗಳಾದ್ಯಂತ ಅವು ನನ್ನನ್ನು ಉತ್ತೇಜಿಸಿವೆ ಹಾಗೂ ನನಗೆ ಸಾಂತ್ವನ ನೀಡಿವೆ.
ಉತ್ತೇಜನದ ಇನ್ನೊಂದು ಮೂಲವು, ಸೂಡಾನ್‌ನ ಸಭೆಯಲ್ಲಿದ್ದ ಎಲೀಸ ಮೊಟ್ ಎಂಬ ಹೆಸರಿನ 75 ವರ್ಷಪ್ರಾಯದ ಒಬ್ಬ ಕ್ರೈಸ್ತ ಸಹೋದರಿಯಾಗಿದ್ದರು. ಬೇಸಗೆಕಾಲದಲ್ಲಿ ನಾನು ಸಾರಲಿಕ್ಕಾಗಿ ಹೊರಪ್ರಾಂತದಲ್ಲಿರುವ ಹಳ್ಳಿಗಳಿಗೆ ಬೈಸಿಕಲಿನಲ್ಲಿ ಹೋಗುತ್ತಿದ್ದೆ, ಮತ್ತು ಎಲೀಸರವರು ರೈಲಿನಲ್ಲಿ ಪ್ರಯಾಣಿಸಿ ನನ್ನನ್ನು ಜೊತೆಗೂಡುತ್ತಿದ್ದರು. ಆದರೆ, ಒಂದು ದಿನ ರೈಲಿನ ಇಂಜಿನಿಯರ್‌ಗಳು ಮುಷ್ಕರ ಹೂಡಿದ್ದರು, ಮತ್ತು ಎಲೀಸರಿಗೆ ಮನೆಗೆ ಹೋಗಲು ಸಾಧ್ಯವಿರಲಿಲ್ಲ. ನನಗೆ ತೋಚಿದ ಏಕಮಾತ್ರ ಪರಿಹಾರವು, ನನ್ನ ಬೈಸಿಕಲ್‌ನ ಸಾಮಾನು ಇಡುವ ಜಾಗದಲ್ಲಿ ಅವರನ್ನು ಕೂರಿಸಿಕೊಂಡು ಮನೆಗೆ ಕರೆದುಕೊಂಡು ಹೋಗುವುದೇ ಆಗಿತ್ತು. ಇದು ಖಂಡಿತವಾಗಿಯೂ ಒಂದು ಆರಾಮದಾಯಕ ಸವಾರಿಯಾಗಿರಲಿಲ್ಲ. ಮರುದಿನ ಬೆಳಗ್ಗೆ ನಾನೊಂದು ದಿಂಬನ್ನು ತೆಗೆದುಕೊಂಡು ಹೋದೆ ಮತ್ತು ಎಲೀಸರ ಮನೆಯಿಂದ ಅವರನ್ನು ಬೈಸಿಕಲಿನಲ್ಲಿ ಕೂರಿಸಿಕೊಂಡು ಕ್ಷೇತ್ರಕ್ಕೆ ಹೋದೆ. ಅವರು ರೈಲಿನಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸಿದರು, ಮತ್ತು ಪ್ರಯಾಣದ ಟಿಕೇಟಿನಿಂದ ಉಳಿಸಲ್ಪಟ್ಟ ಹಣದಿಂದ ಅವರು ಊಟದ ಸಮಯದಲ್ಲಿ ನಮಗೋಸ್ಕರ ಬಿಸಿಬಿಸಿಯಾದ ಪಾನೀಯವನ್ನು ಕೊಂಡುಕೊಳ್ಳಲು ಶಕ್ತರಾದರು. ನನ್ನ ಬೈಸಿಕಲ್ ಸಾರ್ವಜನಿಕ ಸಾರಿಗೆ ವಾಹನವಾಗಿರುವುದೆಂದು ಯಾರು ನೆನಸಿದ್ದರು?
ಹೆಚ್ಚಿನ ಜವಾಬ್ದಾರಿಗಳು
ಇಸವಿ 1950ರಲ್ಲಿ, ಇಡೀ ಉತ್ತರ ಫ್ರಾನ್ಸಿಗೆ ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ನನಗೆ ಕೇಳಲಾಯಿತು. ಆಗ ನಾನು ಕೇವಲ 23 ವರ್ಷದವನಾಗಿದ್ದರಿಂದ ನನ್ನ ಮೊದಲ ಪ್ರತಿಕ್ರಿಯೆ ಭಯವೇ ಆಗಿತ್ತು. ಬ್ರಾಂಚ್ ಆಫೀಸು ಎಲ್ಲೋ ತಪ್ಪಿನಿಂದ ಈ ನೇಮಕವನ್ನು ನೀಡಿದೆ ಎಂದು ನಾನು ನೆನಸಿದೆ! ‘ಆಧ್ಯಾತ್ಮಿಕವಾಗಿ ಮತ್ತು ಶಾರೀರಿಕವಾಗಿ ನಾನು ಈ ಕೆಲಸಕ್ಕೆ ಅರ್ಹನಾಗಿದ್ದೇನೋ? ಪ್ರತಿ ವಾರ ಬೇರೆ ಬೇರೆ ವಸತಿಗಳಲ್ಲಿ ನಾನು ಹೇಗಿರಬಲ್ಲೆ?’ ಎಂಬ ಪ್ರಶ್ನೆಗಳು ನನ್ನ ತಲೆಯಲ್ಲಿ ಓಡಿದವು. ಇಷ್ಟು ಮಾತ್ರ ಸಾಲದೋ ಎಂಬಂತೆ, ಆರು ವರ್ಷ ಪ್ರಾಯದಿಂದಲೂ ನಾನು ಮೆಳ್ಳೆಗಣ್ಣು ಎಂದು ಕರೆಯಲ್ಪಡುವಂಥ ಕಣ್ಣಿನ ತೊಂದರೆಯಿಂದ ಕಷ್ಟಾನುಭವಿಸುತ್ತಿದ್ದೆ. ಈ ತೊಂದರೆಯು ನನ್ನ ಕಣ್ಣುಗಳಲ್ಲಿ ಒಂದು ಹೊರಮುಖವಾಗಿ ತಿರುಗಿರುವಂತೆ ಮಾಡುತ್ತಿತ್ತು. ಈ ಕಾರಣದಿಂದಾಗಿ ಇತರರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಕುರಿತು ಚಿಂತಿಸುತ್ತಾ ನಾನು ಯಾವಾಗಲೂ ತುಂಬ ಸ್ವಪ್ರಜ್ಞೆಯುಳ್ಳವನಾಗಿದ್ದೇನೆ. ಸಂತೋಷಕರವಾಗಿಯೇ, ಈ ಸಂದರ್ಭದಲ್ಲಿ ಗಿಲ್ಯಡ್‌ನ ಮಿಷನೆರಿ ಶಾಲೆಯ ಪದವೀಧರರಾಗಿದ್ದ ಸ್ಟಿಫಾನ್ ಬೆಹುನಿಕ್ ಅವರಿಂದ ನಾನು ಅತ್ಯಧಿಕ ಸಹಾಯವನ್ನು ಪಡೆದುಕೊಂಡೆ. ಸಹೋದರ ಬೆಹುನಿಕ್‌ರವರು ತಮ್ಮ ಸಾರುವ ಚಟುವಟಿಕೆಯ ಕಾರಣದಿಂದಾಗಿ ಪೋಲೆಂಡ್‌ನಿಂದ ಗಡೀಪಾರುಮಾಡಲ್ಪಟ್ಟಿದ್ದರು ಮತ್ತು ಅವರನ್ನು ಫ್ರಾನ್ಸಿಗೆ ಪುನರ್‌ನೇಮಿಸಲಾಗಿತ್ತು. ಅವರ ಧೈರ್ಯವು ನಿಜವಾಗಿಯೂ ನನ್ನನ್ನು ತುಂಬ ಪ್ರಭಾವಿಸಿತು. ಯೆಹೋವನಿಗಾಗಿ ಮತ್ತು ಸತ್ಯಕ್ಕಾಗಿ ಅವರಿಗೆ ಆಳವಾದ ಗೌರವವಿತ್ತು. ಅವರು ನನ್ನೊಂದಿಗೆ ತುಂಬ ಕಟ್ಟುನಿಟ್ಟಾಗಿದ್ದಾರೆ ಎಂದು ಕೆಲವರು ನೆನಸಿದರಾದರೂ, ಅವರಿಂದ ನಾನು ಬಹಳಷ್ಟು ವಿಷಯಗಳನ್ನು ಕಲಿತೆ. ಅವರ ಧೈರ್ಯವು ನಾನು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿತು.
ಸರ್ಕಿಟ್ ಕೆಲಸವು, ಕ್ಷೇತ್ರ ಸೇವೆಯ ಆಶ್ಚರ್ಯಕರ ಅನುಭವಗಳಲ್ಲಿ ನಾನು ಆನಂದಿಸುವಂತೆ ಅವಕಾಶಮಾಡಿಕೊಟ್ಟಿತು. ಇಸವಿ 1953ರಲ್ಲಿ, ಪ್ಯಾರಿಸ್‌ನ ದಕ್ಷಿಣ ಭಾಗದಲ್ಲಿ ನೆಲೆಸಿದ್ದು, ಕಾವಲಿನಬುರುಜು ಪತ್ರಿಕೆಯ ಚಂದಾದಾರರಾಗಿದ್ದ ಶ್ರೀ. ಪಾಉಲಿ ಎಂಬವರನ್ನು ಭೇಟಿಮಾಡುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ನಾವಿಬ್ಬರೂ ಪರಸ್ಪರ ಸಂಧಿಸಿದೆವು, ಮತ್ತು ಅವರು ಸೈನ್ಯದಿಂದ ನಿವೃತ್ತಿಹೊಂದಿದವರಾಗಿದ್ದರು ಹಾಗೂ ಕಾವಲಿನಬುರುಜು ಪತ್ರಿಕೆಯು ಅವರಿಗೆ ತುಂಬ ಆಸಕ್ತಿಕರವಾಗಿ ಕಂಡುಬಂತು ಎಂಬುದು ನನಗೆ ಗೊತ್ತಾಯಿತು. ಇತ್ತೀಚಿನ ಸಂಚಿಕೆಯೊಂದರಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಕುರಿತಾದ ಒಂದು ಲೇಖನವನ್ನು ಓದಿದ ಬಳಿಕ, ಅವರು ತಮ್ಮಷ್ಟಕ್ಕೇ ಜ್ಞಾಪಕವನ್ನು ಆಚರಿಸಿ, ಆ ಸಾಯಂಕಾಲದ ಉಳಿದ ವೇಳೆಯನ್ನೆಲ್ಲಾ ಕೀರ್ತನೆಗಳನ್ನು ಓದುವುದರಲ್ಲಿ ಕಳೆದರೆಂದು ಹೇಳಿದರು. ನಮ್ಮ ಚರ್ಚೆಯು ಬಹುಮಟ್ಟಿಗೆ ಇಡೀ ಮಧ್ಯಾಹ್ನ ಮುಂದುವರಿಯಿತು. ನಾನು ಅಲ್ಲಿಂದ ಹೊರಡುವ ಮುಂಚೆ ದೀಕ್ಷಾಸ್ನಾನದ ಕುರಿತಾಗಿಯೂ ನಾವು ಚುಟುಕಾಗಿ ಮಾತಾಡಿದೆವು. ಅನಂತರ 1954ರ ಆರಂಭದಲ್ಲಿ ನಡೆಯಲಿದ್ದ ನಮ್ಮ ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗಲಿಕ್ಕಾಗಿ ನಾನು ಅವರಿಗೆ ಆಮಂತ್ರಣವನ್ನು ಕಳುಹಿಸಿದೆ. ಅವರು ಬಂದರು, ಮತ್ತು ಆ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಂಡ 26 ವ್ಯಕ್ತಿಗಳಲ್ಲಿ ಸಹೋದರ ಪಾಉಲಿ ಸಹ ಒಬ್ಬರಾಗಿದ್ದರು. ಇಂಥ ಅನುಭವಗಳು ಈಗಲೂ ನನ್ನಲ್ಲಿ ಆನಂದವನ್ನು ಚಿಮ್ಮಿಸುತ್ತವೆ.
ರೋಸಾ: ಇಸವಿ 1948ರ ಅಕ್ಟೋಬರ್ ತಿಂಗಳಿನಲ್ಲಿ ನಾನು ಒಬ್ಬ ಪಯನೀಯರಳೋಪಾದಿ ಸೇವೆಸಲ್ಲಿಸಲಾರಂಭಿಸಿದೆ. ಬೆಲ್ಜಿಯಮ್‌ನ ಬಳಿಯಿರುವ ಆನೊರ್ ಪಟ್ಟಣದಲ್ಲಿ ಸೇವೆಮಾಡಿದ ಬಳಿಕ, ಈರನ
ಕೋಲಾನ್‌ಸ್ಕೀ (ಈಗ ಲುರ್ವಾ) ಎಂಬ ಇನ್ನೊಬ್ಬ ಪಯನೀಯರಳೊಂದಿಗೆ ನನ್ನನ್ನು ಪ್ಯಾರಿಸ್‌ಗೆ ನೇಮಿಸಲಾಯಿತು. ಆ ನಗರದ ಕೇಂದ್ರಭಾಗದಲ್ಲಿರುವ ಸಾ-ಜೆರ್‌ಮಾ-ದೀ ಪ್ರೆಯ ಚಿಕ್ಕ ಕೋಣೆಯೊಂದರಲ್ಲಿ ನಾವು ವಾಸಿಸುತ್ತಿದ್ದೆವು. ನಾನು ಹಳ್ಳಿಯಿಂದ ಬಂದ ಹುಡುಗಿಯಾಗಿದ್ದರಿಂದ, ಪ್ಯಾರಿಸ್‌ವಾಸಿಗಳನ್ನು ನೋಡಿ ತುಂಬ ಭೀತಿಗೊಂಡಿದ್ದೆ. ಅವರೆಲ್ಲಾ ತುಂಬ ಮೇಧಾವಿಗಳೂ ಬುದ್ಧಿವಂತರೂ ಆಗಿದ್ದಾರೆ ಎಂಬುದು ನನ್ನ ಕಲ್ಪನೆಯಾಗಿತ್ತು. ಆದರೆ ಅವರಿಗೆ ಸಾರುವ ಮೂಲಕ, ಇವರು ಬೇರೆ ಜನರಿಗಿಂತ ಭಿನ್ನರೇನಲ್ಲ ಎಂಬುದು ನನಗೆ ಸ್ವಲ್ಪದರಲ್ಲೇ ಅರಿವಿಗೆ ಬಂತು. ಅನೇಕವೇಳೆ ನಮ್ಮನ್ನು ಕಾವಲುಗಾರರು ಓಡಿಸುತ್ತಿದ್ದರು, ಮತ್ತು ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಕಷ್ಟಕರವಾಗಿತ್ತು. ಹೀಗಿದ್ದರೂ ಕೆಲವರು ನಮ್ಮ ಸಂದೇಶವನ್ನು ಸ್ವೀಕರಿಸಿದರು.ಇಸವಿ 1951ರಲ್ಲಿ ನಡೆದ ಒಂದು ಸರ್ಕಿಟ್ ಸಮ್ಮೇಳನದಲ್ಲಿ, ನಮ್ಮ ಪಯನೀಯರ್ ಸೇವೆಯ ಕುರಿತು ನನ್ನನ್ನು ಮತ್ತು ಈರನಳನ್ನು ಇಂಟರ್‌ವ್ಯೂ ಮಾಡಲಾಯಿತು. ನಮ್ಮನ್ನು ಇಂಟರ್‌ವ್ಯೂ ಮಾಡಿದ್ದು ಯಾರು ಎಂಬುದನ್ನು ಊಹಿಸಬಲ್ಲಿರೋ? ಮಾರಿಯೊನ್ ಶುಮಿಗ ಎಂಬ ಹೆಸರಿನ ಒಬ್ಬ ಯುವ ಸರ್ಕಿಟ್ ಮೇಲ್ವಿಚಾರಕರೇ. ಈ ಮುಂಚೆ ನಾವು ಒಂದು ಸಲ ಭೇಟಿಯಾಗಿದ್ದೆವು, ಆದರೆ ಈ ಸಮ್ಮೇಳನದ ಬಳಿಕ ನಾವು ಪತ್ರವ್ಯವಹಾರ ನಡೆಸಲಾರಂಭಿಸಿದೆವು. ಮಾರಿಯೊನ್‌ರಲ್ಲಿ ಹಾಗೂ ನನ್ನಲ್ಲಿ ಅನೇಕ ವಿಚಾರಗಳು ಸರ್ವಸಾಮಾನ್ಯವಾಗಿದ್ದವು; ಒಂದೇ ವರ್ಷದಲ್ಲಿ ನಾವಿಬ್ಬರೂ ದೀಕ್ಷಾಸ್ನಾನ ಪಡೆದುಕೊಂಡಿದ್ದೆವು ಮತ್ತು ಒಂದೇ ವರ್ಷದಲ್ಲಿ ಇಬ್ಬರೂ ಪಯನೀಯರರಾಗಿದ್ದೆವು. ಆದರೂ, ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ ನಾವಿಬ್ಬರೂ ಪೂರ್ಣ ಸಮಯದ ಸೇವೆಯಲ್ಲೇ ಉಳಿಯಲು ಬಯಸುತ್ತಿದ್ದೆವು. ಆದುದರಿಂದ, ಪ್ರಾರ್ಥನಾಪೂರ್ವಕ ಪರಿಗಣನೆಯ ಬಳಿಕ, 1956ರ ಜುಲೈ 31ರಂದು ನಾವು ವಿವಾಹವಾದೆವು. ಈ ಹೆಜ್ಜೆಯನ್ನು ತೆಗೆದುಕೊಂಡು, ನಾನು ಸಂಪೂರ್ಣವಾಗಿ ಹೊಸತಾದ ಜೀವನ ಮಾರ್ಗಕ್ಕೆ ಕಾಲಿಟ್ಟೆ. ನಾನು ಒಬ್ಬ ಹೆಂಡತಿಯ ಸ್ಥಾನಕ್ಕೆ ಮಾತ್ರವಲ್ಲ, ಸರ್ಕಿಟ್ ಕೆಲಸದಲ್ಲಿ ಮಾರಿಯೊನ್‌ರೊಂದಿಗೆ ಜೊತೆಗೂಡುವುದಕ್ಕೂ ಒಗ್ಗಿಕೊಳ್ಳಬೇಕಾಗಿತ್ತು. ಇದರ ಅರ್ಥ ಪ್ರತಿ ವಾರ ಬೇರೆ ಬೇರೆ ಮನೆಗಳಲ್ಲಿ ಉಳಿದುಕೊಳ್ಳಬೇಕಾಗಿತ್ತು. ಆರಂಭದಲ್ಲಿ ಇದು ನನಗೆ ತುಂಬ ಕಷ್ಟಕರವಾಗಿತ್ತು, ಆದರೆ ಅತ್ಯಧಿಕ ಸಂತೋಷವು ನಮಗಾಗಿ ಕಾದಿತ್ತು.
ಸಂತೃಪ್ತಿಕರ ಜೀವನ
ಮಾರಿಯೊನ್: ಗತ ವರ್ಷಗಳಿಂದಲೂ ಅನೇಕ ಅಧಿವೇಶನಗಳಿಗೆ ಸಿದ್ಧತೆಯನ್ನು ಮಾಡುವುದರಲ್ಲಿ ಸಹಾಯಮಾಡುವ ಸುಯೋಗವು ನಮಗೆ ಸಿಕ್ಕಿದೆ. ವಿಶೇಷವಾಗಿ 1966ರಲ್ಲಿ ಬೊರ್ದುವಿನಲ್ಲಿ ನಡೆದ ಅಧಿವೇಶನದ ಸವಿನೆನಪುಗಳು ನನ್ನ ಮನಃಪಟಲದಲ್ಲಿವೆ. ಆ ಸಮಯದಲ್ಲಿ ಪೋರ್ಚುಗಲ್‌ನಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ನಿಷೇಧಕ್ಕೊಳಗಾಗಿದ್ದವು. ಆದುದರಿಂದ, ಫ್ರಾನ್ಸಿಗೆ ಪ್ರಯಾಣಿಸಸಾಧ್ಯವಿದ್ದ ಸಾಕ್ಷಿಗಳ ಪ್ರಯೋಜನಾರ್ಥವಾಗಿ ಅಧಿವೇಶನದ ಕಾರ್ಯಕ್ರಮವು ಪೋರ್ಚುಗೀಸ್ ಭಾಷೆಯಲ್ಲಿಯೂ ಸಾದರಪಡಿಸಲ್ಪಟ್ಟಿತು. ಪೋರ್ಚುಗಲ್‌ನಿಂದ ನೂರಾರು ಸಂಖ್ಯೆಯಲ್ಲಿ ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ಇಲ್ಲಿಗೆ ಆಗಮಿಸಿದರು, ಆದರೆ
ಇವರನ್ನು ಎಲ್ಲಿ ಇರಿಸುವುದು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು. ಬೊರ್ದುವಿನಲ್ಲಿ ಸಾಕ್ಷಿಗಳ ಮನೆಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇರಲಿಲ್ಲವಾದ್ದರಿಂದ, ಒಂದು ಡಾರ್ಮಿಟರಿಯಾಗಿ ಉಪಯೋಗಿಸಲಿಕ್ಕಾಗಿ ನಾವು ಖಾಲಿಯಾಗಿದ್ದ ಚಿತ್ರಮಂದಿರವೊಂದನ್ನು ಬಾಡಿಗೆಗೆ ತೆಗೆದುಕೊಂಡೆವು. ನಾವು ಎಲ್ಲಾ ಸೀಟುಗಳನ್ನು ತೆಗೆದುಹಾಕಿದೆವು, ಮತ್ತು ಸ್ಟೇಜಿನ ಮೇಲಿದ್ದ ಕರ್ಟನ್‌ನ ಸಹಾಯದಿಂದ ಆ ಹಾಲ್ ಅನ್ನು ಎರಡು ಡಾರ್ಮಿಟರಿಗಳಾಗಿ ಮಾಡಿ, ಒಂದು ಸಹೋದರರ ಉಪಯೋಗಕ್ಕಾಗಿ ಮತ್ತು ಇನ್ನೊಂದು ಸಹೋದರಿಯರ ಉಪಯೋಗಕ್ಕಾಗಿ ಕೊಡಲ್ಪಟ್ಟಿತು. ನಾವು ಸ್ನಾನದ ಕೋಣೆಗಳನ್ನು ಮತ್ತು ವಾಷ್ ಬೇಸಿನ್‌ಗಳನ್ನು ಸಹ ನಿರ್ಮಿಸಿದೆವು, ಕಾಂಕ್ರಿಟ್ ನೆಲದ ಮೇಲೆ ಹುಲ್ಲನ್ನು ಹಾಸಿ, ಅದರ ಮೇಲೆ ಕ್ಯಾನ್‌ವಾಸಿನ ಬಟ್ಟೆಯನ್ನು ಹೊದಿಸಿದೆವು. ಈ ಏರ್ಪಾಡಿನಿಂದ ಪ್ರತಿಯೊಬ್ಬರೂ ಸಂತೃಪ್ತರಾದರು.ಅಧಿವೇಶನದ ಸೆಷನ್‌ಗಳು ಮುಗಿದ ಬಳಿಕ, ಡಾರ್ಮಿಟರಿಯಲ್ಲಿದ್ದ ನಮ್ಮ ಸಹೋದರ ಸಹೋದರಿಯರನ್ನು ನಾವು ಸಂದರ್ಶಿಸಿದೆವು. ಅಲ್ಲಿ ಅತ್ಯಂತ ಉಲ್ಲಾಸಮಯ ವಾತಾವರಣವಿತ್ತು. ಅನೇಕ ವರ್ಷಗಳ ವಿರೋಧದ ಮಧ್ಯೆಯೂ ಅವರು ಆನಂದಿಸಿದ್ದ ಅನುಭವಗಳಿಂದ ನಾವೆಷ್ಟು ಪ್ರೋತ್ಸಾಹಿತರಾದೆವು! ಅಧಿವೇಶನದ ಕೊನೆಯಲ್ಲಿ ಅವರು ಅಲ್ಲಿಂದ ಹೊರಟಾಗ ನಮಗೆಲ್ಲರಿಗೂ ಬಹಳ ದುಃಖವಾಯಿತು.
ಇದಕ್ಕಿಂತ ಎರಡು ವರ್ಷಗಳಿಗೆ ಮುಂಚೆ, 1964ರಲ್ಲಿ ಒಬ್ಬ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ನೇಮಿಸಲ್ಪಟ್ಟದ್ದು ನನಗೆ ಸಿಕ್ಕಿದಂಥ ಇನ್ನೊಂದು ಸುಯೋಗವಾಗಿತ್ತು. ಈ ಕೆಲಸ ನನ್ನಿಂದ ಸಾಧ್ಯವೋ ಎಂದು ಪುನಃ ಒಮ್ಮೆ ನಾನು ಚಿಂತಿತನಾಗಿದ್ದೆ. ಆದರೆ ನೇಮಕಗಳನ್ನು ನೀಡುವ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರೇ ನಾನು ಈ ನೇಮಕವನ್ನು ಸ್ವೀಕರಿಸುವಂತೆ ಕೇಳಿಕೊಂಡಿರುವುದರಿಂದ, ಸುಸ್ಪಷ್ಟವಾಗಿಯೇ ಅವರು ನಾನು ಈ ಕೆಲಸವನ್ನು ನಿಭಾಯಿಸಲು ಸಮರ್ಥನು ಎಂದು ನೆನಸಿದ್ದಾರೆ ಎಂದು ನನ್ನಷ್ಟಕ್ಕೆ ಹೇಳಿಕೊಂಡೆ. ಇತರ ಸಂಚರಣ ಮೇಲ್ವಿಚಾರಕರೊಂದಿಗೆ ನಿಕಟವಾಗಿ ಸೇವೆಮಾಡುವುದು ನಿಜಕ್ಕೂ ಅತ್ಯುತ್ತಮ ಅನುಭವವಾಗಿತ್ತು. ನಾನು ಅವರಿಂದ ಅನೇಕ ವಿಷಯಗಳನ್ನು ಕಲಿತೆ. ಅವರಲ್ಲಿ ಅನೇಕರು, ಯೆಹೋವನ ದೃಷ್ಟಿಯಲ್ಲಿ ಅತ್ಯಾವಶ್ಯಕ ಗುಣಗಳಾಗಿರುವ ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯ ನೈಜ ಮಾದರಿಗಳಾಗಿದ್ದಾರೆ. ಒಂದುವೇಳೆ ನಾವು ತಾಳ್ಮೆಯಿಂದಿರುವುದಾದರೆ, ನಮ್ಮನ್ನು ಹೇಗೆ ಉಪಯೋಗಿಸಬೇಕೆಂಬುದು ಯೆಹೋವನಿಗೆ ಗೊತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ.
ಇಸವಿ 1982ರಲ್ಲಿ, ಪ್ಯಾರಿಸ್‌ನ ಹೊರವಲಯದಲ್ಲಿದ್ದ ಬೂಲೋನ್ಯ-ಬಿಯಾಂಕೂರ್‌ನ 12 ಮಂದಿ ಪೋಲಿಷ್ ಪ್ರಚಾರಕರಿದ್ದ ಒಂದು ಚಿಕ್ಕ ಗುಂಪನ್ನು ನೋಡಿಕೊಳ್ಳುವಂತೆಯೂ ಬ್ರಾಂಚ್ ಆಫೀಸು ನಮ್ಮನ್ನು ಕೇಳಿಕೊಂಡಿತು. ಇದೊಂದು ಅನಿರೀಕ್ಷಿತ ಸಂಗತಿಯಾಗಿತ್ತು. ಪೋಲಿಷ್ ಭಾಷೆಯಲ್ಲಿ ನನಗೆ ದೇವಪ್ರಭುತ್ವಾತ್ಮಕ ಪದಗಳು ಗೊತ್ತಿದ್ದವು, ಆದರೆ ವಾಕ್ಯಗಳನ್ನು ರಚಿಸುವುದು ನನಗೆ ತುಂಬ ಕಷ್ಟಕರವಾಗಿತ್ತು. ಆದರೂ, ಆ ಸಹೋದರರ ದಯಾಭಾವ ಹಾಗೂ ಮನಃಪೂರ್ವಕ ಸಹಕಾರವು ನನಗೆ ಮಹತ್ತರವಾಗಿ ಸಹಾಯಮಾಡಿತು. ಆ ಸಭೆಯಲ್ಲಿ ಇಂದು ಸುಮಾರು 60 ಪಯನೀಯರರನ್ನೂ ಸೇರಿಸಿ 170 ಮಂದಿ ಪ್ರಚಾರಕರಿದ್ದಾರೆ. ಸಮಯಾನಂತರ ರೋಸಾ ಹಾಗೂ ನಾನು, ಆಸ್ಟ್ರಿಯ, ಜರ್ಮನಿ, ಹಾಗೂ ಡೆನ್ಮಾರ್ಕಿನಲ್ಲಿದ್ದ ಪೋಲಿಷ್ ಗುಂಪುಗಳನ್ನು ಮತ್ತು ಸಭೆಗಳನ್ನು ಸಹ ಸಂದರ್ಶಿಸಿದೆವು.
ಬದಲಾದ ಸನ್ನಿವೇಶಗಳು
ಬೇರೆ ಬೇರೆ ಸಭೆಗಳನ್ನು ಸಂದರ್ಶಿಸುವುದು ನಮ್ಮ ಜೀವನವಾಗಿತ್ತು, ಆದರೆ ನನ್ನ ಆರೋಗ್ಯದ ಸಮಸ್ಯೆಯು ನಾವು 2001ರಲ್ಲಿ ಸಂಚರಣ ಶುಶ್ರೂಷೆಯನ್ನು ನಿಲ್ಲಿಸುವಂತೆ ಮಾಡಿತು. ನನ್ನ ತಂಗಿ ರೂಟಳು ಎಲ್ಲಿ ವಾಸಿಸುತ್ತಿದ್ದಾಳೋ ಆ ಪೀಟೀವ್ಯೆ ಪಟ್ಟಣದಲ್ಲಿ ನಮಗೆ ಒಂದು ಮನೆ ಸಿಕ್ಕಿತು. ಬ್ರಾಂಚ್ ಆಫೀಸಿನ ದಯೆಯಿಂದ ನಾವು ವಿಶೇಷ ಪಯನೀಯರರಾಗಿ ನೇಮಕವನ್ನು ಪಡೆದಿದ್ದೇವೆ, ಮತ್ತು ನಮ್ಮ ಸನ್ನಿವೇಶಗಳಿಗನುಸಾರ ತಾಸುಗಳ ಆವಶ್ಯಕತೆಗಳಲ್ಲಿಯೂ ಬ್ರಾಂಚ್ ರಿಯಾಯಿತಿಯನ್ನು ನೀಡಿದೆ.
ರೋಸಾ: ಸರ್ಕಿಟ್ ಕೆಲಸವನ್ನು ನಿಲ್ಲಿಸಿದ ಮೊದಲ ವರ್ಷದಲ್ಲಿ ನನಗೆ ತುಂಬ ಕಷ್ಟವಾಯಿತು. ಇದು ಜೀವನದಲ್ಲಿ ಎಷ್ಟು ದೊಡ್ಡ ಬದಲಾವಣೆಯಾಗಿತ್ತೆಂದರೆ, ನಾನು ನಿಷ್ಪ್ರಯೋಜಕಳು ಎಂದು ನನಗನಿಸಿತು. ಆಗ ನನ್ನಷ್ಟಕ್ಕೆ ನಾನು ಹೀಗೆ ಹೇಳಿಕೊಳ್ಳುತ್ತಿದ್ದೆ: ‘ಒಬ್ಬ ಪಯನೀಯರಳಾಗಿ ಸೇವೆಮಾಡುವ ಮೂಲಕ ಈಗಲೂ ನೀನು ನಿನ್ನ ಸಮಯವನ್ನು ಹಾಗೂ ಬಲವನ್ನು ಪ್ರಯೋಜನದಾಯಕವಾಗಿ ಉಪಯೋಗಿಸಸಾಧ್ಯವಿದೆ.’ ಇಂದು, ನಮ್ಮ ಸಭೆಯಲ್ಲಿರುವ ಇತರ ಪಯನೀಯರರೊಂದಿಗೆ ಸೇವೆಮಾಡುವುದರಲ್ಲಿ ನಾನು ತುಂಬ ಸಂತೋಷವನ್ನು ಕಾಣುತ್ತಿದ್ದೇನೆ.
ಯೆಹೋವನು ಯಾವಾಗಲೂ ನಮ್ಮನ್ನು ಪರಾಮರಿಸಿದ್ದಾನೆ
ಮಾರಿಯೊನ್: ಕಳೆದ 48 ವರ್ಷಗಳಿಂದ ರೋಸಾಳು ನನ್ನ ಸಂಗಾತಿಯಾಗಿರುವುದಕ್ಕಾಗಿ ನಾನು ಯೆಹೋವನಿಗೆ ತುಂಬ ಆಭಾರಿಯಾಗಿದ್ದೇನೆ. ಸಂಚರಣ ಕೆಲಸದಲ್ಲಿನ ಆ ಎಲ್ಲಾ ವರ್ಷಗಳಲ್ಲಿ ಅವಳು ನನಗೆ ಮಹಾನ್ ರೀತಿಯಲ್ಲಿ ಬೆಂಬಲ ನೀಡಿದ್ದಾಳೆ. ‘ನಾವು ಈ ಕೆಲಸವನ್ನು ನಿಲ್ಲಿಸಿ, ನಮ್ಮದೇ ಮನೆಮಾಡಿಕೊಂಡಿರೋಣ’ ಎಂದು ಅವಳು ಒಂದು ಸಲವೂ ಹೇಳುವುದನ್ನು ನಾನು ಕೇಳಿಸಿಕೊಂಡಿಲ್ಲ.
ರೋಸಾ: ಕೆಲವೊಮ್ಮೆ ಯಾರಾದರೊಬ್ಬರು ನನಗೆ ಹೀಗೆ ಹೇಳಿಬಿಡುತ್ತಿದ್ದರು: “ನೀವು ಸಹಜವಾದ ರೀತಿಯಲ್ಲಿ ಬದುಕುತ್ತಿಲ್ಲ. ಯಾವಾಗಲೂ ಇತರರೊಂದಿಗೆ ವಾಸಿಸುತ್ತಿರುತ್ತೀರಿ.” ಆದರೆ ಯಾವುದು ನಿಜವಾಗಿಯೂ ‘ಸಹಜವಾದ ಬದುಕಾಗಿದೆ?’ ಅನೇಕವೇಳೆ ನಾವು, ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳ ಬೆನ್ನಟ್ಟುವಿಕೆಗೆ ತಡೆಗಳಾಗಿ ಪರಿಣಮಿಸಬಹುದಾದಂಥ ಬಹುತೇಕ ವಸ್ತುಗಳಿಂದ ಸುತ್ತುವರಿದಿರುತ್ತೇವೆ. ನಮಗೆ ನಿಜವಾಗಿಯೂ ಬೇಕಾಗಿರುವುದು ಒಂದು ಒಳ್ಳೇ ಹಾಸಿಗೆ, ಒಂದು ಮೇಜು, ಮತ್ತು ಇನ್ನಿತರ ಕೆಲವು ಮೂಲಭೂತ ಕೀರ್ತನೆ 34:10ರಲ್ಲಿರುವ ಮಾತುಗಳನ್ನು ಉಲ್ಲೇಖಿಸುತ್ತೇನೆ: “ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ.” ಎಲ್ಲಾ ಸಮಯಗಳಲ್ಲಿ ಯೆಹೋವನು ನಮ್ಮನ್ನು ಪರಾಮರಿಸಿದ್ದಾನೆ.
ವಸ್ತುಗಳು ಮಾತ್ರ. ಪಯನೀಯರರಾಗಿದ್ದ ನಮ್ಮ ಬಳಿ ಭೌತಿಕವಾಗಿ ಹೆಚ್ಚೇನೂ ಇರಲಿಲ್ಲವಾದರೂ, ಯೆಹೋವನ ಚಿತ್ತವನ್ನು ಮಾಡಲು ಏನು ಅಗತ್ಯವಿತ್ತೋ ಅದೆಲ್ಲವೂ ನಮ್ಮ ಬಳಿಯಿತ್ತು. “ನೀವು ವೃದ್ಧರಾಗಿ, ಇರಲಿಕ್ಕಾಗಿ ಮನೆಯಿಲ್ಲದೆ, ನಿವೃತ್ತಿ ವೇತನವೂ ಇಲ್ಲದೆ ಇರಬೇಕಾದಾಗ ಏನು ಮಾಡುವಿರಿ?” ಎಂದು ಕೆಲವೊಮ್ಮೆ ನನ್ನನ್ನು ಕೇಳಲಾಗಿದೆ. ಆಗ ನಾನುಮಾರಿಯೊನ್: ಇದು ನಿಜವಾಗಿಯೂ ಸತ್ಯ! ವಾಸ್ತವದಲ್ಲಿ, ನಮಗೆ ಏನು ಅಗತ್ಯವಿದೆಯೋ ಅದಕ್ಕಿಂತಲೂ ಹೆಚ್ಚಿನದನ್ನು ಯೆಹೋವನು ನಮಗೆ ದಯಪಾಲಿಸಿದ್ದಾನೆ. ಉದಾಹರಣೆಗೆ, 1958ರಲ್ಲಿ ನಾನು, ನ್ಯೂ ಯಾರ್ಕಿನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ನಮ್ಮ ಸರ್ಕಿಟನ್ನು ಪ್ರತಿನಿಧಿಸಲಿಕ್ಕಾಗಿ ಆಯ್ಕೆಮಾಡಲ್ಪಟ್ಟಿದ್ದೆ. ಆದರೆ, ರೋಸಾಳಿಗೆ ಟಿಕೆಟನ್ನು ಖರೀದಿಸಲಿಕ್ಕಾಗಿ ನಮ್ಮ ಬಳಿ ಹಣವಿರಲಿಲ್ಲ. ಒಂದು ದಿನ ಸಾಯಂಕಾಲ ಸಹೋದರನೊಬ್ಬನು ನಮಗೆ “ನ್ಯೂ ಯಾರ್ಕ್” ಎಂದು ಬರೆಯಲ್ಪಟ್ಟಿದ್ದ ಒಂದು ಲಕೋಟೆಯನ್ನು ನೀಡಿದನು. ಅದರಲ್ಲಿದ್ದ ಉಡುಗೊರೆಯು ರೋಸಾಳು ನನ್ನೊಂದಿಗೆ ಪ್ರಯಾಣಿಸುವಂತೆ ಸಾಧ್ಯಮಾಡಿತು!
ಯೆಹೋವನ ಸೇವೆಯಲ್ಲಿ ಕಳೆದ ನಮ್ಮ ವರ್ಷಗಳ ಬಗ್ಗೆ ರೋಸಾಳಿಗೆ ಮತ್ತು ನನಗೆ ಖಂಡಿತವಾಗಿಯೂ ಯಾವುದೇ ವಿಷಾದವಿಲ್ಲ. ನಾವು ಏನನ್ನೂ ಕಳೆದುಕೊಳ್ಳಲಿಲ್ಲ, ಬದಲಾಗಿ ಸಕಲವನ್ನೂ ಪಡೆದುಕೊಂಡೆವು—ಪೂರ್ಣ ಸಮಯದ ಸೇವೆಯಲ್ಲಿ ಸಂತೃಪ್ತಿಕರವಾದ ಹಾಗೂ ಸಂತೋಷಭರಿತವಾದ ಜೀವನವನ್ನೇ. ಯೆಹೋವನು ಅಷ್ಟು ಉದಾತ್ತನಾದ ದೇವರಾಗಿದ್ದಾನೆ. ನಾವು ಆತನಲ್ಲಿ ಸಂಪೂರ್ಣವಾಗಿ ಭರವಸೆಯಿಡಲು ಕಲಿತಿದ್ದೇವೆ, ಮತ್ತು ಆತನಿಗಾಗಿರುವ ನಮ್ಮ ಪ್ರೀತಿಯು ಇನ್ನಷ್ಟು ಆಳಗೊಂಡಿದೆ. ನಮ್ಮ ಕ್ರೈಸ್ತ ಸಹೋದರರಲ್ಲಿ ಕೆಲವರು ತಮ್ಮ ನಂಬಿಗಸ್ತಿಕೆಗಾಗಿ ಜೀವವನ್ನೇ ತ್ಯಾಗಮಾಡಿದ್ದಾರೆ. ಆದರೆ, ಒಬ್ಬ ವ್ಯಕ್ತಿಯು ಯೆಹೋವನ ಸೇವೆಯಲ್ಲಿ ಅನುದಿನವೂ ತನ್ನ ಜೀವವನ್ನು ವಿನಿಯೋಗಿಸಸಾಧ್ಯವಿದೆ ಎಂದು ನಾನು ನಂಬುತ್ತೇನೆ. ಇಷ್ಟರ ತನಕ ರೋಸಾಳೂ ನಾನೂ ಇದನ್ನೇ ಮಾಡಲು ಹೆಣಗಾಡಿದ್ದೇವೆ, ಮತ್ತು ಭವಿಷ್ಯತ್ತಿನಲ್ಲೂ ನಾವು ಮಾಡಲು ನಿರ್ಧರಿಸಿರುವುದು ಇದನ್ನೇ.
[ಪಾದಟಿಪ್ಪಣಿ]
^ ಪ್ಯಾರ. 14 ಆಗಸ್ಟ್ 15, 1980ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯಲ್ಲಿ ಲ್ವೀ ಪ್ಯೆಶುತರವರ “ನಾನು ‘ಮೃತ್ಯು ನಡಿಗೆ’ಯಿಂದ ಪಾರಾದೆ” ಎಂಬ ಜೀವನ ಕಥೆಯು ಪ್ರಕಟಿಸಲ್ಪಟ್ಟಿತು.
[ಪುಟ 20ರಲ್ಲಿರುವ ಚಿತ್ರ]
ಫ್ರಾನ್‌ಸವಾ ಮತ್ತು ಆನ ಶುಮಿಗ ಮತ್ತು ಅವರ ಮಕ್ಕಳಾದ ಸ್ಟಿಫನೀ, ಸ್ಟಿಫಾನ್, ಮೆಲಾನೀ, ಮತ್ತು ಮಾರಿಯೊನ್ (ಸುಮಾರು 1930ರಲ್ಲಿ). ಮಾರಿಯೊನ್ ಸ್ಟೂಲಿನ ಮೇಲೆ ನಿಂತಿದ್ದಾರೆ
[ಪುಟ 22ರಲ್ಲಿರುವ ಚಿತ್ರ]
ಮೇಲೆ: 1950ರಲ್ಲಿ ಉತ್ತರ ಫ್ರಾನ್ಸಿನ ಆರ್ಮೆಟೈರಸ್‌ನಲ್ಲಿ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಬೈಬಲ್ ಪ್ರಕಾಶನಗಳನ್ನು ನೀಡುತ್ತಿರುವುದು
[ಪುಟ 22ರಲ್ಲಿರುವ ಚಿತ್ರ]
ಎಡಕ್ಕೆ: 1950ರಲ್ಲಿ ಮಾರಿಯೊನ್‌ರೊಂದಿಗೆ ಸ್ಟಿಫಾನ್ ಬೆಹುನಿಕ್
[ಪುಟ 23ರಲ್ಲಿರುವ ಚಿತ್ರ]
ರೋಸಾ (ತೀರ ಎಡಭಾಗದಲ್ಲಿ) ಮತ್ತು ಅವರ ಪಯನೀಯರ್ ಸಂಗಾತಿಯಾದ ಈರನ (ಎಡಭಾಗದಿಂದ ನಾಲ್ಕನೆಯವರು) —1951ರಲ್ಲಿ ನಡೆಯಲಿದ್ದ ಒಂದು ಸಮ್ಮೇಳನದ ಬಗ್ಗೆ ಪ್ರಕಟಿಸುತ್ತಿರುವುದು
[ಪುಟ 23ರಲ್ಲಿರುವ ಚಿತ್ರ]
ತಮ್ಮ ಮದುವೆಯ ಮುಂಚಿನ ದಿನ ಮಾರಿಯೊನ್ ಮತ್ತು ರೋಸಾ
[ಪುಟ 23ರಲ್ಲಿರುವ ಚಿತ್ರ]
ಸರ್ಕಿಟ್ ಸಂದರ್ಶನಗಳ ಸಮಯದಲ್ಲಿ ಸಂಚರಣೆಯು ಹೆಚ್ಚಾಗಿ ಬೈಸಿಕಲ್‌ನ ಸಹಾಯದಿಂದಾಗಿತ್ತು