ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳು ಪ್ರಕಟನೆ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ 1,44,000 ಎಂಬ ಸಂಖ್ಯೆಯನ್ನು ಸಾಂಕೇತಿಕವಾಗಿ ಅಲ್ಲ ಬದಲಾಗಿ ಅಕ್ಷರಾರ್ಥವಾಗಿ ತೆಗೆದುಕೊಳ್ಳುತ್ತಾರೆ ಏಕೆ?

ಅಪೊಸ್ತಲ ಯೋಹಾನನು ಬರೆದುದು: “ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ನಾನು ಕೇಳಿದೆನು. . . . ಅವರ ಸಂಖ್ಯೆ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ.” (ಪ್ರಕಟನೆ 7:4) ಬೈಬಲಿನಲ್ಲಿ, ‘ಮುದ್ರೆ ಒತ್ತಿಸಿಕೊಂಡವರು’ ಎಂಬ ವಾಕ್ಸರಣಿಯು, ಬರಲಿರುವ ಪರದೈಸ ಭೂಮಿಯ ಮೇಲೆ ಕ್ರಿಸ್ತನೊಂದಿಗೆ ಸ್ವರ್ಗದಿಂದ ಆಳಲಿಕ್ಕಾಗಿ ಮಾನವಕುಲದಿಂದ ಆರಿಸಿಕೊಳ್ಳಲ್ಪಟ್ಟಿರುವ ವ್ಯಕ್ತಿಗಳ ಒಂದು ಗುಂಪನ್ನು ಸೂಚಿಸುತ್ತದೆ. (2 ಕೊರಿಂಥ 1:21, 22; ಪ್ರಕಟನೆ 5:9, 10; 20:6) ಅನೇಕ ಕಾರಣಗಳಿಗಾಗಿ ಅವರ 1,44,000 ಎಂಬ ಸಂಖ್ಯೆಯನ್ನು ಅಕ್ಷರಾರ್ಥವಾಗಿ ಪರಿಗಣಿಸಲಾಗುತ್ತದೆ. ಪ್ರಕಟನೆ 7:4ರ ನಂತರ ಬರುವ ವಚನಗಳಲ್ಲಿ ಒಂದು ಕಾರಣವು ಕಂಡುಬರುತ್ತದೆ.

ದರ್ಶನದಲ್ಲಿ ಅಪೊಸ್ತಲ ಯೋಹಾನನಿಗೆ, 1,44,000 ಮಂದಿಯಿಂದ ಕೂಡಿದ್ದ ಈ ಗುಂಪಿನ ಕುರಿತು ಹೇಳಿದ ಬಳಿಕ, ಅವನಿಗೆ ಇನ್ನೊಂದು ಗುಂಪು ತೋರಿಸಲ್ಪಟ್ಟಿತು. ಯೋಹಾನನು ಈ ಎರಡನೆಯ ಗುಂಪನ್ನು ‘ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದು, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ’ ಎಂದು ವರ್ಣಿಸುತ್ತಾನೆ. ಈ ಮಹಾ ಸಮೂಹವು, ಸದ್ಯದ ದುಷ್ಟ ಲೋಕವನ್ನು ನಾಶಮಾಡುವ ಬರಲಿರುವ “ಮಹಾ ಸಂಕಟ”ದಿಂದ (NW) ಪಾರಾಗಲಿರುವವರನ್ನು ಸೂಚಿಸುತ್ತದೆ.​—⁠ಪ್ರಕಟನೆ 7:​9, 14.

ಪ್ರಕಟನೆ 7ನೇ ಅಧ್ಯಾಯದ 4 ಮತ್ತು 9ನೇ ವಚನಗಳ ಮಧ್ಯೆ ಯೋಹಾನನು ಸ್ಪಷ್ಟವಾದ ವ್ಯತ್ಯಾಸವೊಂದನ್ನು ತೋರಿಸುತ್ತಾನೆಂಬುದನ್ನು ಗಮನಿಸಿರಿ. ‘ಮುದ್ರೆ ಒತ್ತಿಸಿಕೊಂಡಿದ್ದ’ ಮೊದಲ ಗುಂಪಿಗೆ ಒಂದು ನಿಶ್ಚಿತ ಸಂಖ್ಯೆಯಿದೆಯೆಂದು ಅವನು ತಿಳಿಸುತ್ತಾನೆ. ಆದರೆ ‘ಮಹಾ ಸಮೂಹ’ವಾಗಿರುವ ಎರಡನೆಯ ಗುಂಪು ನಿಶ್ಚಿತ ಸಂಖ್ಯೆಯನ್ನು ಹೊಂದಿಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, 1,44,000 ಎಂಬ ಸಂಖ್ಯೆಯನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳುವುದು ತರ್ಕಬದ್ಧವಾಗಿದೆ. ಒಂದುವೇಳೆ 1,44,000 ಎಂಬ ಸಂಖ್ಯೆಯು ಸಾಂಕೇತಿಕವಾಗಿರುತ್ತಿದ್ದಲ್ಲಿ ಮತ್ತು ವಾಸ್ತವದಲ್ಲಿ ಇದು ಅಸಂಖ್ಯಾತ ಜನರಿರುವ ಒಂದು ಗುಂಪಿಗೆ ಸೂಚಿತವಾಗಿರುತ್ತಿದ್ದಲ್ಲಿ, ಈ ಎರಡು ವಚನಗಳ ನಡುವೆ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ. ಹೀಗೆ, 1,44,000 ಸಂಖ್ಯೆಯನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಪೂರ್ವಾಪರ ವಚನಗಳು ಬಲವಾಗಿ ಸೂಚಿಸುತ್ತವೆ.

ಗತಕಾಲದ ಹಾಗೂ ಸದ್ಯದ ಬೇರೆ ಬೇರೆ ಬೈಬಲ್‌ ವಿದ್ವಾಂಸರು ಈ ಸಂಖ್ಯೆಯು ಅಕ್ಷರಾರ್ಥವಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಉದಾಹರಣೆಗಾಗಿ, ಸುಮಾರು 100 ವರ್ಷಗಳ ಹಿಂದೆ ಬ್ರಿಟಿಷ್‌ ನಿಘಂಟುಕಾರರಾದ ಡಾ. ಎಥಲ್‌ಬರ್ಟ್‌ ಡಬ್ಲ್ಯೂ. ಬುಲಿಂಗರ್‌ ಅವರು ಪ್ರಕಟಣೆ 7:​4, 9ರ ಕುರಿತು ಹೇಳಿಕೆ ನೀಡುತ್ತಾ ತಿಳಿಸಿದ್ದು: “ಇದು ವಾಸ್ತವಾಂಶದ ಸರಳ ಹೇಳಿಕೆಯಾಗಿದೆ: ಇದೇ ಅಧ್ಯಾಯದಲ್ಲಿರುವ ಅನಿಶ್ಚಿತ ಸಂಖ್ಯೆಗೆ ವ್ಯತಿರಿಕ್ತವಾಗಿ ಇದೊಂದು ನಿಶ್ಚಿತ ಸಂಖ್ಯೆ.” (ಅಪಾಕಲಿಪ್ಸ್‌ ಅಥವಾ “ಕರ್ತನ ದಿನ” [ಇಂಗ್ಲಿಷ್‌], ಪುಟ 282) ತೀರ ಇತ್ತೀಚಿಗೆ, ಯುನೈಟಡ್‌ ಸ್ಟೇಟ್ಸ್‌ನ ದ ಮಾಸ್ಟರ್ಸ್‌ ಸೆಮಿನೆರಿಯಲ್ಲಿ ಹೊಸ ಒಡಂಬಡಿಕೆಯ ಪ್ರೊಫೆಸರರಾಗಿರುವ ರಾಬರ್ಟ್‌ ಎಲ್‌. ಥಾಮಸ್‌ ಜೂನಿಯರ್‌, ಅವರು ಬರೆದುದು: “ಈ ಸಂಖ್ಯೆಯನ್ನು ಸಾಂಕೇತಿಕವಾಗಿ ಪರಿಗಣಿಸಲು ಯಾವುದೇ ಬಲವಾದ ಆಧಾರವಿಲ್ಲ.” ಅವರು ಕೂಡಿಸಿದ್ದು: “7:9ರಲ್ಲಿರುವ ಅನಿಶ್ಚಿತ ಸಂಖ್ಯೆಗೆ ವ್ಯತಿರಿಕ್ತವಾಗಿ ಇದು [7:4ರಲ್ಲಿ] ಒಂದು ನಿಶ್ಚಿತ ಸಂಖ್ಯೆಯಾಗಿದೆ. ಈ ಸಂಖ್ಯೆಯನ್ನು ಸಾಂಕೇತಿಕವಾಗಿ ತೆಗೆದುಕೊಳ್ಳುವುದಾದರೆ, ಪ್ರಕಟನೆ ಪುಸ್ತಕದಲ್ಲಿರುವ ಯಾವುದೇ ಸಂಖ್ಯೆಯನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಸಾಧ್ಯವಿಲ್ಲ.”​—⁠ಪ್ರಕಟನೆ: ವಿವರಣಾತ್ಮಕ ವಿಮರ್ಶೆ, (ಇಂಗ್ಲಿಷ್‌) ಸಂಪುಟ 1, ಪುಟ 474.

ಪ್ರಕಟನೆ ಪುಸ್ತಕದಲ್ಲಿ ಬಹಳಷ್ಟು ಸಾಂಕೇತಿಕ ಭಾಷೆಯು ಒಳಗೂಡಿರುವುದರಿಂದ, 1,44,000 ಸಂಖ್ಯೆಯನ್ನೂ ಸೇರಿಸಿ ಇದರಲ್ಲಿ ಕಂಡುಬರುವ ಎಲ್ಲಾ ಸಂಖ್ಯೆಗಳು ಸಾಂಕೇತಿಕವಾಗಿರಲೇಬೇಕು ಎಂದು ಕೆಲವರು ವಾದಿಸುತ್ತಾರೆ. (ಪ್ರಕಟನೆ 1:1, 4; 2:10) ಆದರೂ, ಈ ತೀರ್ಮಾನವು ಸರಿಯಲ್ಲ ಎಂಬುದು ಸುಸ್ಪಷ್ಟ. ಪ್ರಕಟನೆ ಪುಸ್ತಕದಲ್ಲಿ ಅನೇಕ ಸಾಂಕೇತಿಕ ಸಂಖ್ಯೆಗಳು ಒಳಗೂಡಿವೆ ಎಂಬುದು ಒಪ್ಪಿಕೊಳ್ಳತಕ್ಕ ವಿಚಾರವೇ ಆದರೂ, ಇದರಲ್ಲಿ ಅಕ್ಷರಾರ್ಥ ಸಂಖ್ಯೆಗಳೂ ಸೇರಿವೆ. ಉದಾಹರಣೆಗೆ, ಯೋಹಾನನು “ಯಜ್ಞದ ಕುರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರು”ಗಳ ಕುರಿತು ಮಾತಾಡುತ್ತಾನೆ. (ಪ್ರಕಟನೆ 21:14) ಸ್ಪಷ್ಟವಾಗಿಯೇ, ಈ ವಚನದಲ್ಲಿ ತಿಳಿಸಲ್ಪಟ್ಟಿರುವ 12 ಎಂಬ ಸಂಖ್ಯೆಯು ಸಾಂಕೇತಿಕವಲ್ಲ ಬದಲಾಗಿ ಅಕ್ಷರಾರ್ಥವಾಗಿದೆ. ಅಷ್ಟುಮಾತ್ರವಲ್ಲ, ಅಪೊಸ್ತಲ ಯೋಹಾನನು ಕ್ರಿಸ್ತನ “ಸಾವಿರ ವರುಷ”ಗಳ ಆಳ್ವಿಕೆಯ ಕುರಿತು ಬರೆಯುತ್ತಾನೆ. ಬೈಬಲಿನ ಜಾಗರೂಕ ಪರಿಗಣನೆಯು ತೋರಿಸುವಂತೆ, ಈ ಸಂಖ್ಯೆಯನ್ನು ಸಹ ಅಕ್ಷರಾರ್ಥವಾಗಿ ತೆಗೆದುಕೊಳ್ಳಬೇಕಾಗಿದೆ. * (ಪ್ರಕಟನೆ 20:3, 5-7) ಆದುದರಿಂದ, ಪ್ರಕಟನೆ ಪುಸ್ತಕದಲ್ಲಿನ ಒಂದು ಸಂಖ್ಯೆಯನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಬೇಕೊ ಅಥವಾ ಸಾಂಕೇತಿಕವಾಗಿ ತೆಗೆದುಕೊಳ್ಳಬೇಕೊ ಎಂಬುದು, ಅದರ ಹಿನ್ನೆಲೆ ಹಾಗೂ ಪೂರ್ವಾಪರದ ಮೇಲೆ ಹೊಂದಿಕೊಂಡಿರುತ್ತದೆ.

ಒಂದು ಲಕ್ಷದ ನಾಲ್ವತ್ತುನಾಲ್ಕು ಸಾವಿರ ಎಂಬ ಸಂಖ್ಯೆಯು ಅಕ್ಷರಾರ್ಥವಾಗಿದೆ ಮತ್ತು ಒಂದು ಸೀಮಿತ ಸಂಖ್ಯೆಯ ವ್ಯಕ್ತಿಗಳಿಗೆ, ಹಾಗೂ “ಮಹಾ ಸಮೂಹ”ಕ್ಕೆ ಹೋಲಿಸುವಾಗ ಇದು ತೀರ ಚಿಕ್ಕದಾಗಿರುವ ಒಂದು ಗುಂಪಿಗೆ ಸೂಚಿಸುತ್ತದೆ ಎಂಬ ವಿಚಾರವು ಇತರ ಬೈಬಲ್‌ ಭಾಗಗಳೊಂದಿಗೆ ಸಹ ತಾಳೆಬೀಳುತ್ತದೆ. ಉದಾಹರಣೆಗೆ, ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ಆ ದರ್ಶನದಲ್ಲಿ ಮುಂದೆ, 1,44,000 ಮಂದಿಯನ್ನು ‘ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟ ಪ್ರಥಮಫಲ’ ಎಂದು ವರ್ಣಿಸಲಾಗಿದೆ. (ಪ್ರಕಟನೆ 14:1, 4) “ಪ್ರಥಮಫಲ” ಎಂಬ ಅಭಿವ್ಯಕ್ತಿಯು, ಒಂದು ಚಿಕ್ಕ ಪ್ರಾತಿನಿಧಿಕ ಆಯ್ಕೆಯನ್ನು ಸೂಚಿಸುತ್ತದೆ. ಇದಲ್ಲದೆ, ಯೇಸು ಭೂಮಿಯಲ್ಲಿದ್ದಾಗ, ಸ್ವರ್ಗೀಯ ರಾಜ್ಯದಲ್ಲಿ ಯಾರು ತನ್ನೊಂದಿಗೆ ಆಳಲಿಕ್ಕಿದ್ದಾರೋ ಅವರ ಕುರಿತು ಅವನು ಮಾತಾಡಿದನು ಮತ್ತು ಅವರನ್ನು ‘ಚಿಕ್ಕ ಹಿಂಡು’ ಎಂದು ಕರೆದನು. (ಲೂಕ 12:32; 22:29) ಹೌದು, ಬರಲಿರುವ ಪರದೈಸ ಭೂಮಿಯಲ್ಲಿ ವಾಸಿಸಲಿರುವ ಮಾನವಕುಲದವರೊಂದಿಗೆ ಹೋಲಿಸುವಾಗ, ಮಾನವಕುಲದಿಂದ ಆರಿಸಿಕೊಳ್ಳಲ್ಪಟ್ಟು ಸ್ವರ್ಗದಲ್ಲಿ ಆಳ್ವಿಕೆ ನಡೆಸಲಿರುವವರು ಕೊಂಚ ಮಂದಿಯೇ ಸರಿ.

ಹೀಗಿರುವುದರಿಂದ, ಪ್ರಕಟನೆ 7:4ರ ಪೂರ್ವಾಪರ ವಚನ ಹಾಗೂ ಇದಕ್ಕೆ ಸಂಬಂಧಿತವಾಗಿ ಬೈಬಲಿನಲ್ಲಿ ಬೇರೆ ಕಡೆಗಳಲ್ಲಿ ಕಂಡುಬರುವ ಹೇಳಿಕೆಗಳು, 1,44,000 ಎಂಬ ಸಂಖ್ಯೆಯನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಬೇಕು ಎಂಬುದನ್ನು ದೃಢಪಡಿಸುತ್ತವೆ. ಇದು, ಒಂದು ಪರದೈಸ ಭೂಮಿಯ ಮೇಲೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲಿರುವವರನ್ನು ಸೂಚಿಸುತ್ತದೆ; ಆ ಸಮಯದಲ್ಲಿ ಭೂಮಿಯು ಯೆಹೋವ ದೇವರನ್ನು ಆರಾಧಿಸುವಂಥ ದೊಡ್ಡ ಹಾಗೂ ಅನಿರ್ಧಾರಿತ ಸಂಖ್ಯೆಯ ಸಂತೋಷಭರಿತ ಜನರಿಂದ ತುಂಬಿರುವುದು.​—⁠ಕೀರ್ತನೆ 37:⁠29.

[ಪಾದಟಿಪ್ಪಣಿ]

^ ಪ್ಯಾರ. 7 ಕ್ರಿಸ್ತನ ಸಾವಿರ ವರುಷಗಳ ಆಳ್ವಿಕೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶನಮಾಡಲ್ಪಟ್ಟಿರುವ ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 289-90ನೆಯ ಪುಟಗಳನ್ನು ನೋಡಿರಿ.

[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸ್ವರ್ಗೀಯ ಬಾಧ್ಯಸ್ಥರ ಸಂಖ್ಯೆಯು 1,44,000ಕ್ಕೆ ಸೀಮಿತವಾಗಿದೆ

[ಪುಟ 31ರಲ್ಲಿರುವ ಚಿತ್ರ]

“ಮಹಾ ಸಮೂಹವು” ಅಸಂಖ್ಯಾತವಾಗಿದೆ

[ಪುಟ 31ರಲ್ಲಿರುವ ಚಿತ್ರ ಕೃಪೆ]

ನಕ್ಷತ್ರಗಳು: Courtesy of Anglo-Australian Observatory, photograph by David Malin