ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷಕ್ಕಾಗಿ ಹುಡುಕಾಟ

ಸಂತೋಷಕ್ಕಾಗಿ ಹುಡುಕಾಟ

ಸಂತೋಷಕ್ಕಾಗಿ ಹುಡುಕಾಟ

ಕೆಲವು ವರುಷಗಳ ಹಿಂದೆ, “ಸಂತೋಷದಿಂದ ಇರಬೇಕಾದರೆ ಏನು ಅಗತ್ಯವಿದೆ?” ಎಂದು ಅಮೆರಿಕ, ಗ್ರೇಟ್‌ ಬ್ರಿಟನ್‌, ಜರ್ಮನಿ, ಮತ್ತು ಫ್ರಾನ್ಸ್‌ನಲ್ಲಿರುವ ಜನರನ್ನು ಕೇಳಲಾಯಿತು. ಇಂಟರ್‌ವ್ಯೂ ಮಾಡಲ್ಪಟ್ಟವರಲ್ಲಿ 89 ಪ್ರತಿಶತ ಜನರು ಉತ್ತಮ ಆರೋಗ್ಯವೇ ಸಂತೋಷಕ್ಕೆ ಕಾರಣವೆಂದರು; 79 ಪ್ರತಿಶತ ಜನರು, ಒಂದು ಸಂತೃಪ್ತಿಕರ ವೈವಾಹಿಕ ಜೀವನ ಅಥವಾ ಸಹಭಾಗಿತ್ವ ಎಂದು ತಿಳಿಸಿದರು; 62 ಪ್ರತಿಶತ ಜನರು ತಂದೆತಾಯ್ತನದ ಪ್ರತಿಫಲಗಳೇ ಸಂತೋಷಕ್ಕೆ ಕಾರಣವೆಂದರು; ಮತ್ತು 51 ಪ್ರತಿಶತ ಜನರು, ಸಂತೋಷವನ್ನು ಪಡೆಯಲು ಒಂದು ಯಶಸ್ವಿದಾಯಕ ಜೀವನೊದ್ಯೋಗದ ಅಗತ್ಯವಿದೆ ಎಂದು ಭಾವಿಸಿದರು. ಹಣವು ಸಂತೋಷವನ್ನು ಖಾತರಿಪಡಿಸಸಾಧ್ಯವಿಲ್ಲ ಎಂದು ಸಾಮಾನ್ಯವಾಗಿ ಜನರಿಗೆ ಕಲಿಸಲ್ಪಟ್ಟಿರುವುದಾದರೂ, ಪ್ರಶ್ನಿಸಲ್ಪಟ್ಟವರಲ್ಲಿ 47 ಪ್ರತಿಶತ ಜನರಿಗೆ ಅದರಿಂದ ಸಂತೋಷವನ್ನು ಪಡೆಯಸಾಧ್ಯವಿದೆ ಎಂಬ ದೃಢನಿಶ್ಚಯವಿತ್ತು. ಈ ಎಲ್ಲಾ ವಾಸ್ತವಾಂಶಗಳು ಏನನ್ನು ತೋರಿಸುತ್ತವೆ?

ಮೊದಲಾಗಿ, ಹಣ ಮತ್ತು ಸಂತೋಷದ ಮಧ್ಯೆಯಿರುವ ಊಹಿಸಲಾದ ಸಂಬಂಧವನ್ನು ಗಮನಿಸಿ. ಅಮೆರಿಕದಲ್ಲಿರುವ ನೂರು ಮಂದಿ ಅತಿ ಐಶ್ವರ್ಯವಂತರ ಸಮೀಕ್ಷೆಯು, ಅವರು ಸಾಮಾನ್ಯ ಜನರಿಗಿಂತ ಕಿಂಚಿತ್ತೂ ಹೆಚ್ಚು ಸಂತೋಷಿತರಾಗಿರಲಿಲ್ಲ ಎಂಬುದನ್ನು ತೋರಿಸಿತು. ಅಷ್ಟುಮಾತ್ರವಲ್ಲದೆ, ಅಮೆರಿಕದಲ್ಲಿರುವ ಹೆಚ್ಚಿನ ಜನರು ಕಳೆದ ಮೂರು ದಶಕಗಳಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಬಹುಮಟ್ಟಿಗೆ ಎರಡುಪಟ್ಟು ಹೆಚ್ಚಿಸಿರುವುದಾದರೂ ಅವರ ಸಂತೋಷದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಮಾನಸಿಕ ಆರೋಗ್ಯ ಪರಿಣತರಿಂದ ತಿಳಿದುಬಂದಿದೆ. ವಾಸ್ತವದಲ್ಲಿ, ಒಂದು ವರದಿಯು ತಿಳಿಸುವುದು: “ಅದೇ ಸಮಯಾವಧಿಯಲ್ಲಿ ಖಿನ್ನತೆಯ ಪ್ರಮಾಣಗಳೂ ಹೆಚ್ಚಿವೆ. ಹದಿಹರೆಯದವರ ಆತ್ಮಹತ್ಯೆಯು ಮೂರುಪಟ್ಟಾಗಿದೆ. ವಿವಾಹವಿಚ್ಛೇದವು ಎರಡುಪಟ್ಟು ಹೆಚ್ಚಾಗಿದೆ.” ಸುಮಾರು 50 ವಿಭಿನ್ನ ದೇಶಗಳಲ್ಲಿ, ಹಣ ಮತ್ತು ಸಂತೋಷದ ಮಧ್ಯೆಯಿರುವ ಸಂಬಂಧವನ್ನು ಅಧ್ಯಯನಮಾಡಿದ ಸಂಶೋಧಕರು, ಹಣವು ಸಂತೋಷವನ್ನು ಖರೀದಿಸಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಹಾಗಾದರೆ, ಉತ್ತಮ ಆರೋಗ್ಯ, ಒಂದು ಸಂತೃಪ್ತಿಕರ ವೈವಾಹಿಕ ಜೀವನ, ಮತ್ತು ಒಂದು ಯಶಸ್ವಿದಾಯಕ ಜೀವನೊದ್ಯೋಗ ಈ ಮುಂತಾದ ಅಂಶಗಳು ಸಂತೋಷಕ್ಕೆ ಎಷ್ಟು ಪ್ರಾಮುಖ್ಯವಾಗಿವೆ? ಸಂತೋಷಕ್ಕೆ ಈ ಎಲ್ಲಾ ಅಂಶಗಳು ನಿಜವಾಗಿಯೂ ಅಗತ್ಯವಾಗಿರುವುದಾದರೆ, ಉತ್ತಮ ಆರೋಗ್ಯವಿಲ್ಲದಿರುವ ಕೋಟ್ಯಂತರ ಜನರ ಕುರಿತಾಗಿ ಮತ್ತು ಒಂದು ಸಂತೃಪ್ತಿಕರ ವೈವಾಹಿಕ ಜೀವನವನ್ನು ಹೊಂದಿರದಿರುವ ವ್ಯಕ್ತಿಗಳ ಕುರಿತಾಗಿ ಏನು? ಮಕ್ಕಳಿಲ್ಲದ ವಿವಾಹಿತ ದಂಪತಿಗಳ ಮತ್ತು ಒಂದು ಯಶಸ್ವಿದಾಯಕ ಜೀವನೊದ್ಯೋಗವನ್ನು ಹೊಂದಿರದ ಎಲ್ಲಾ ಸ್ತ್ರೀಪುರುಷರ ಕುರಿತಾಗಿ ಏನು? ಈ ಎಲ್ಲಾ ವ್ಯಕ್ತಿಗಳು ಅಸಂತೋಷಕರ ಜೀವನಕ್ಕೆ ಪೂರ್ವನಿರ್ಧರಿಸಲ್ಪಟ್ಟಿದ್ದಾರೋ? ಮತ್ತು ಈಗ ಉತ್ತಮ ಆರೋಗ್ಯ ಹಾಗೂ ಒಂದು ಸಂತೃಪ್ತಿಕರ ವೈವಾಹಿಕ ಜೀವನವನ್ನು ಆನಂದಿಸುತ್ತಿರುವವರಿಗಿದೆ ಎಂದು ಹೇಳಲಾಗುವ ಸಂತೋಷವು, ಅವರ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾದರೆ ಕಣ್ಮರೆಯಾಗುವುದೊ?

ನಾವು ಸರಿಯಾದ ಸ್ಥಳಗಳಲ್ಲಿ ಹುಡುಕುತ್ತಿದ್ದೇವೊ?

ಸಂತೋಷದಿಂದ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದು ಆಶ್ಚರ್ಯದ ವಿಷಯವೇನಲ್ಲ, ಏಕೆಂದರೆ ಮಾನವನ ಸೃಷ್ಟಿಕರ್ತನನ್ನು “ಸಂತೋಷವುಳ್ಳ ದೇವರು” ಎಂದು ವರ್ಣಿಸಲಾಗಿದೆ ಮತ್ತು ಮಾನವನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದಾನೆ. (1 ತಿಮೊಥೆಯ 1:​11, NW; ಆದಿಕಾಂಡ 1:​26, 27) ಆದುದರಿಂದ, ಸಂತೋಷಕ್ಕಾಗಿ ಮಾನವರು ಹುಡುಕಾಡುವುದು ಒಂದು ಸಹಜ ಸಂಗತಿ. ಹಾಗಿದ್ದರೂ, ಸಂತೋಷವನ್ನು ಹಿಡಿದಿಡುವುದು ಮುಷ್ಟಿಯಲ್ಲಿ ಮರಳನ್ನು ಹಿಡಿದಿಡುವುದಕ್ಕೆ ಸಮಾನ ಎಂದು ಅನೇಕರು ಕಂಡುಕೊಂಡಿದ್ದಾರೆ. ಇವೆರಡೂ ಸುಲಭವಾಗಿ ಜಾರಿಹೋಗುತ್ತವೆ.

ಹಾಗಿದ್ದರೂ ಕೆಲವರು ಸಂತೋಷವನ್ನು ಗಳಿಸಲು ಅತಿಯಾಗಿ ಪರಿಶ್ರಮಿಸುತ್ತಿದ್ದಾರೋ? ಹೌದೆಂದು ಸಾಮಾಜಿಕ ತತ್ತ್ವಜ್ಞಾನಿ ಎರಿಕ್‌ ಹೊಫರ್‌ ಭಾವಿಸಿದರು. ಅವರು ತಿಳಿಸಿದ್ದು: “ಸಂತೋಷಕ್ಕಾಗಿನ ಹುಡುಕಾಟವೇ ಅಸಂತೋಷದ ಮೂಲಕಾರಣಗಳಲ್ಲಿ ಒಂದಾಗಿದೆ.” ನಾವು ತಪ್ಪಾದ ಸ್ಥಳದಲ್ಲಿ ಸಂತೋಷವನ್ನು ಹುಡುಕುತ್ತಿರುವುದಾದರೆ ಈ ಮಾತು ಖಂಡಿತವಾಗಿಯೂ ಸತ್ಯ. ಆಗ ನಾವು ಆಶಾಭಂಗಪಡುವುದು ಮತ್ತು ಹತಾಶರಾಗುವುದು ನಿಶ್ಚಿತ. ಐಶ್ವರ್ಯವಂತರಾಗಲು ಪ್ರಯತ್ನಿಸುವುದು; ಖ್ಯಾತಿ ಅಥವಾ ಮನ್ನಣೆ ಪಡೆಯಲು ಹೆಣಗಾಡುವುದು; ರಾಜಕೀಯ, ಸಾಮಾಜಿಕ, ಅಥವಾ ಆರ್ಥಿಕ ಗುರಿಗಳನ್ನು ಬೆನ್ನಟ್ಟುವುದು; ಅಥವಾ ಕೇವಲ ತನಗಾಗಿ ಮತ್ತು ತನ್ನ ಇಚ್ಛೆಗಳನ್ನು ಪೂರೈಸಿಕೊಳ್ಳಲಿಕ್ಕಾಗಿ ಜೀವಿಸುವುದು, ಈ ಎಲ್ಲಾ ವಿಷಯಗಳು ಸಂತೋಷವನ್ನು ನೀಡಲು ವಿಫಲವಾಗುತ್ತವೆ. ಆದುದರಿಂದಲೇ, ಕೆಲವರು ಒಬ್ಬಾಕೆ ಬರಹಗಾರ್ತಿಯು ವ್ಯಕ್ತಪಡಿಸಿದಂಥ ಈ ವಿರುದ್ಧೋಕ್ತಿಯ ದೃಷ್ಟಿಕೋನವನ್ನು ತಮ್ಮದಾಗಿಸಿಕೊಂಡಿದ್ದಾರೆ: “ಸಂತೋಷದಿಂದಿರಬೇಕೆಂದು ಪ್ರಯತ್ನಿಸುವುದನ್ನು ನಿಲ್ಲಿಸಿದರೆ ಮಾತ್ರವೇ ನಾವು ಸಾಧಾರಣಮಟ್ಟಿಗೆ ಸಂತೋಷದಿಂದಿರಬಲ್ಲೆವು”!

ಗಮನಾರ್ಹವಾಗಿಯೇ, ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಆ ಸಮೀಕ್ಷೆಯು, ಇತರರಿಗೆ ಒಳಿತನ್ನು ಮತ್ತು ಸಹಾಯವನ್ನು ಮಾಡುವುದರಿಂದ ಸಂತೋಷವು ಫಲಿಸುತ್ತದೆ ಎಂದು 10ರಲ್ಲಿ 4 ಮಂದಿ ಹೇಳಿದರೆಂಬುದನ್ನೂ ತೋರಿಸುತ್ತದೆ. ಮತ್ತು 4ರಲ್ಲಿ ಒಬ್ಬ ವ್ಯಕ್ತಿಯು, ಸಂತೋಷದಿಂದಿರುವುದರಲ್ಲಿ ನಂಬಿಕೆ ಮತ್ತು ಧಾರ್ಮಿಕ ನಿಶ್ಚಿತಾಭಿಪ್ರಾಯವು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಒತ್ತಿಹೇಳಿದನು. ಹಾಗಾದರೆ, ನಿಜವಾಗಿಯೂ ಸಂತೋಷದಿಂದಿರಲು ಯಾವುದರ ಅಗತ್ಯವಿದೆ ಎಂಬುದನ್ನು ನಾವು ಹೆಚ್ಚು ನಿಕಟವಾಗಿ ಪರಿಶೀಲಿಸಬೇಕಾಗಿದೆ. ಇದನ್ನೇ ಮಾಡುವಂತೆ ಮುಂದಿನ ಲೇಖನವು ನಮಗೆ ಸಹಾಯಮಾಡುತ್ತದೆ.

[ಪುಟ 3ರಲ್ಲಿರುವ ಚಿತ್ರಗಳು]

ಹಣ, ಸಂತೃಪ್ತಿಕರ ಕುಟುಂಬ ಜೀವನ, ಅಥವಾ ಯಶಸ್ವಿದಾಯಕ ಜೀವನೊದ್ಯೋಗವು ಸಂತೋಷಕ್ಕೆ ಕೀಲಿ ಕೈಯಾಗಿದೆ ಎಂದು ಅನೇಕರು ಭಾವಿಸುತ್ತಾರೆ. ನೀವಿದನ್ನು ಒಪ್ಪುತ್ತೀರೋ?