ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷದಿಂದಿರಲು ನಿಜವಾಗಿಯೂ ಯಾವುದರ ಅಗತ್ಯವಿದೆ?

ಸಂತೋಷದಿಂದಿರಲು ನಿಜವಾಗಿಯೂ ಯಾವುದರ ಅಗತ್ಯವಿದೆ?

ಸಂತೋಷದಿಂದಿರಲು ನಿಜವಾಗಿಯೂ ಯಾವುದರ ಅಗತ್ಯವಿದೆ?

ಸಂತೋಷದಿಂದಿರಲು ಯಾವುದರ ಅಗತ್ಯವಿದೆ ಎಂದು ಎಲ್ಲರಿಗಿಂತಲೂ ಅತ್ಯುತ್ತಮವಾಗಿ, “ಸಂತೋಷವುಳ್ಳ ದೇವರು” ಆಗಿರುವ ಯೆಹೋವನಿಗೆ ಮತ್ತು “ಸಂತೋಷವುಳ್ಳ ಏಕಾಧಿಪತಿ” ಆಗಿರುವ ಯೇಸು ಕ್ರಿಸ್ತನಿಗೆ ತಿಳಿದಿದೆ. (1 ತಿಮೊಥೆಯ 1:​11, NW; 6:​15, NW) ಹಾಗಿರುವುದರಿಂದ, ಸಂತೋಷಕ್ಕಾಗಿರುವ ಕೀಲಿ ಕೈಯನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಕೊಳ್ಳುತ್ತೇವೆ ಎಂಬುದು ಆಶ್ಚರ್ಯದ ಸಂಗತಿಯಲ್ಲ.​—⁠ಪ್ರಕಟನೆ 1:3; 22:⁠7.

ಯೇಸು ತನ್ನ ಪ್ರಸಿದ್ಧ ಪರ್ವತಪ್ರಸಂಗದಲ್ಲಿ, ಸಂತೋಷದಿಂದಿರಲು ಯಾವುದರ ಅಗತ್ಯವಿದೆ ಎಂಬುದನ್ನು ವರ್ಣಿಸಿದ್ದಾನೆ. ಅವನು ಹೇಳಿದ್ದು: (1) ತಮ್ಮ ಆಧ್ಯಾತ್ಮಿಕ ಅಗತ್ಯದ ಅರುಹುಳ್ಳವರು, (2) ದುಃಖಪಡುವವರು, (3) ಶಾಂತರು, (4) ನೀತಿಗೆ ಹಸಿದು ಬಾಯಾರಿದವರು, (5) ಕರುಣೆಯುಳ್ಳವರು, (6) ನಿರ್ಮಲಚಿತ್ತರು, (7) ಸಮಾಧಾನ ಪಡಿಸುವವರು, (8) ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು, ಮತ್ತು (9) ಅವನ ನಿಮಿತ್ತವಾಗಿ ನಿಂದಿಸಿ ಹಿಂಸಿಸಲ್ಪಟ್ಟವರು “ಸಂತೋಷಿತರು.”​—⁠ಮತ್ತಾಯ 5:​3-11, NW. *

ಯೇಸುವಿನ ಹೇಳಿಕೆಗಳು ಸತ್ಯವಾಗಿವೆಯೊ?

ಯೇಸುವಿನ ಕೆಲವು ಹೇಳಿಕೆಗಳ ಸತ್ಯತೆಯನ್ನು ತಿಳಿದುಕೊಳ್ಳಲು ಸ್ವಲ್ಪ ವಿವರಣೆಯ ಅಗತ್ಯವಿದೆ. ಶುದ್ಧ ಹೃದಯದಿಂದ ಪ್ರೇರಿತರಾಗಿ ಶಾಂತರಾಗಿಯೂ, ಕರುಣೆಯುಳ್ಳವರಾಗಿಯೂ, ಸಮಾಧಾನ ಪಡಿಸುವವರಾಗಿಯೂ ಇರುವ ಜನರು ಕೋಪಸ್ವಭಾವದವರೂ, ಜಗಳಗಂಟರೂ, ಕರುಣಾರಹಿತರೂ ಆಗಿರುವ ಜನರಿಗಿಂತ ಹೆಚ್ಚು ಸಂತೋಷಿತರಾಗಿರುವರು ಎಂಬುದನ್ನು ಯಾರು ತಾನೇ ಅಲ್ಲಗಳೆಯುವರು?

ನೀತಿಗೆ ಹಸಿದು ಬಾಯಾರಿದ ಅಥವಾ ದುಃಖಪಡುವ ಜನರನ್ನು ಹೇಗೆ ಸಂತೋಷಿತರು ಎಂದು ಕರೆಯಸಾಧ್ಯವಿದೆ ಎಂದು ನಾವು ಆಶ್ಚರ್ಯಪಡಬಹುದು. ಅಂಥ ವ್ಯಕ್ತಿಗಳಿಗೆ ಲೋಕ ಪರಿಸ್ಥಿತಿಗಳ ಕುರಿತು ವಾಸ್ತವಿಕ ದೃಷ್ಟಿಕೋನವಿರುತ್ತದೆ. ಅವರು ನಮ್ಮ ದಿನಗಳಲ್ಲಿ ‘ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಾರೆ.’ (ಯೆಹೆಜ್ಕೇಲ 9:⁠4) ಆದರೆ ಅದು ತಾನೇ ಅವರನ್ನು ಸಂತೋಷಿತರನ್ನಾಗಿ ಮಾಡುವುದಿಲ್ಲ. ಬದಲಾಗಿ, ಭೂಮಿಯ ಮೇಲೆ ನೀತಿಯ ಪರಿಸ್ಥಿತಿಗಳನ್ನು ತರುವ ಮತ್ತು ದಲಿತರಿಗೆ ನ್ಯಾಯವನ್ನು ಒದಗಿಸುವ ದೇವರ ಉದ್ದೇಶದ ಕುರಿತು ಅವರು ಕಲಿಯುವಾಗ ಅವರ ಆನಂದಕ್ಕೆ ಎಲ್ಲೆಯೇ ಇರುವುದಿಲ್ಲ.​—⁠ಯೆಶಾಯ 11:⁠4.

ವ್ಯಕ್ತಿಗಳಲ್ಲಿ ನೀತಿಗಾಗಿ ಪ್ರೀತಿಯಿರುವಲ್ಲಿ, ಯಾವುದು ಸರಿಯಾಗಿದೆಯೊ ಅದನ್ನು ಮಾಡಲು ಅವರು ಆಗಿಂದಾಗ ತಪ್ಪಿಬೀಳುವಾಗ ಅದು ಅವರಿಗೆ ದುಃಖವನ್ನುಂಟುಮಾಡುತ್ತದೆ. ಇದರ ಅರ್ಥ ಅವರು ತಮ್ಮ ಆಧ್ಯಾತ್ಮಿಕ ಅಗತ್ಯದ ಅರುಹುಳ್ಳವರಾಗಿದ್ದಾರೆಂದೇ. ಅಂಥ ಜನರು ಮಾರ್ಗದರ್ಶನಕ್ಕಾಗಿ ದೇವರ ಕಡೆಗೆ ನೋಡಲು ಸಿದ್ಧರಾಗಿರುತ್ತಾರೆ. ಏಕೆಂದರೆ, ಜನರು ತಮ್ಮ ಬಲಹೀನತೆಗಳನ್ನು ಜಯಿಸಲು ದೇವರು ಮಾತ್ರ ಸಹಾಯನೀಡಶಕ್ತನು ಎಂಬುದನ್ನು ಅವರು ಗ್ರಹಿಸುತ್ತಾರೆ.

ದುಃಖಪಡುವ, ನೀತಿಗೆ ಹಸಿದು ಬಾಯಾರಿರುವ, ಮತ್ತು ತಮ್ಮ ಆಧ್ಯಾತ್ಮಿಕ ಅಗತ್ಯದ ಅರುಹುಳ್ಳ ಜನರು, ಸೃಷ್ಟಿಕರ್ತನೊಂದಿಗೆ ಒಂದು ಉತ್ತಮ ಸಂಬಂಧವನ್ನು ಹೊಂದಿರುವ ಪ್ರಮುಖತೆಯನ್ನು ತಿಳಿದಿರುತ್ತಾರೆ. ಮಾನವರೊಂದಿಗಿನ ಒಂದು ಒಳ್ಳೇ ಸಂಬಂಧವು ಸಂತೋಷವನ್ನು ತರುತ್ತದಾದರೂ, ದೇವರೊಂದಿಗಿನ ಒಂದು ಉತ್ತಮ ಸಂಬಂಧವು ಅದಕ್ಕಿಂತಲೂ ಹೆಚ್ಚಿನ ಸಂತೋಷವನ್ನು ತರುತ್ತದೆ. ಹೌದು, ದೈವಿಕ ಮಾರ್ಗದರ್ಶನವನ್ನು ಸ್ವೀಕರಿಸಲು ಸಿದ್ಧರಿರುವ, ಗಂಭೀರಮನಸ್ಸಿನಿಂದ ನೀತಿಯನ್ನು ಪ್ರೀತಿಸುವ ಜನರನ್ನು ನಿಜವಾಗಿಯೂ ಸಂತೋಷಿತರೆಂದು ಕರೆಯಸಾಧ್ಯವಿದೆ.

ಆದರೆ, ನಿಂದಿಸಿ ಹಿಂಸಿಸಲ್ಪಟ್ಟ ಯಾವನೇ ಒಬ್ಬ ವ್ಯಕ್ತಿಯು ಸಂತೋಷದಿಂದಿರಬಲ್ಲನು ಎಂಬುದನ್ನು ನಂಬಲು ನಿಮಗೆ ಕಷ್ಟವಾದೀತು. ಹಾಗಿದ್ದರೂ ಇದು ಸತ್ಯವಾಗಿರಲೇಬೇಕು, ಏಕೆಂದರೆ ಈ ಮಾತುಗಳನ್ನು ಸ್ವತಃ ಯೇಸುವೇ ಹೇಳಿದ್ದಾನೆ. ಹಾಗಾದರೆ, ಅವನ ಈ ಮಾತನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

ಹಿಂಸಿಸಲ್ಪಟ್ಟರೂ ಸಂತೋಷಿತರು​—⁠ಅದು ಹೇಗೆ ಸಾಧ್ಯ?

ನಿಂದೆ ಮತ್ತು ಹಿಂಸೆ ತಾನೇ ಸಂತೋಷವನ್ನು ತರುತ್ತದೆ ಎಂದು ಯೇಸು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಅವನು ತಿಳಿಸಿದ್ದು: ‘ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು ಧನ್ಯರು’ ಇಲ್ಲವೆ ಸಂತೋಷಿತರು, ‘ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿದರೆ ನೀವು ಧನ್ಯರು’ ಇಲ್ಲವೆ ಸಂತೋಷಿತರು. (ಮತ್ತಾಯ 5:​10, 11) ಹಾಗಾದರೆ, ಒಬ್ಬನು ಕ್ರಿಸ್ತನ ಹಿಂಬಾಲಕನಾಗಿರುವ ಕಾರಣಕ್ಕಾಗಿ ಮತ್ತು ಯೇಸು ಕಲಿಸಿಕೊಟ್ಟ ನೀತಿಯ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಜೀವನವನ್ನು ನಡಿಸುತ್ತಿರುವ ಕಾರಣಕ್ಕಾಗಿ ನಿಂದೆಯನ್ನು ಅನುಭವಿಸಿದರೆ ಸಂತೋಷವು ಫಲಿಸುತ್ತದೆ.

ಇದು, ಆರಂಭದ ಕ್ರೈಸ್ತರಿಗೆ ಏನು ಸಂಭವಿಸಿತೊ ಅದರಿಂದ ದೃಷ್ಟಾಂತಿಸಲ್ಪಟ್ಟಿದೆ. ಯೆಹೂದಿ ಹಿರೀ ಸಭೆಯಾಗಿದ್ದ ಸನ್ಹೆದ್ರಿನ್‌ನ ಸದಸ್ಯರು, “ಅಪೊಸ್ತಲರನ್ನು ಕರೆಸಿ ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತಾಡಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು.” ಇದಕ್ಕೆ ಅಪೊಸ್ತಲರು ಹೇಗೆ ಪ್ರತಿಕ್ರಿಯಿಸಿದರು? “[ಅವರು] ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಓರೆ ಅಕ್ಷರಗಳು ನಮ್ಮವು.)​—⁠ಅ. ಕೃತ್ಯಗಳು 5:​40-42; 13:​50-52.

ನಿಂದೆ ಮತ್ತು ಸಂತೋಷದ ನಡುವೆ ಇರುವ ಸಂಬಂಧದ ವಿಷಯವಾಗಿ ಅಪೊಸ್ತಲ ಪೇತ್ರನು ಇನ್ನಷ್ಟು ಬೆಳಕನ್ನು ಬೀರಿದನು. ಅವನು ಬರೆದದ್ದು: “ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರೇ [“ಸಂತೋಷಿತರೇ,” NW]; ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.” (1 ಪೇತ್ರ 4:14) ಹೌದು, ಯಾವುದು ಸರಿಯಾಗಿದೆಯೋ ಅದನ್ನು ಮಾಡುವ ಕಾರಣ ಕ್ರೈಸ್ತನೊಬ್ಬನು ಅನುಭವಿಸುವ ಸಂಕಷ್ಟವು ಅಹಿತಕರವಾಗಿದ್ದರೂ, ಅದನ್ನು ಅನುಭವಿಸುವಾಗ ಒಬ್ಬನು ದೇವರ ಪವಿತ್ರಾತ್ಮವನ್ನು ಹೊಂದುತ್ತಾನೆ ಎಂಬುದನ್ನು ತಿಳಿದಿರುವುದು ತಾನೇ ಸಂತೋಷವನ್ನು ತರುತ್ತದೆ. ದೇವರಾತ್ಮವು ಸಂತೋಷದೊಂದಿಗೆ ಹೇಗೆ ಸಂಬಂಧಿಸಿದೆ?

ಶರೀರಭಾವದ ಕರ್ಮಗಳೊ ಅಥವಾ ಆತ್ಮದ ಫಲಗಳೊ?

ದೇವರ ಪವಿತ್ರಾತ್ಮವು ಆತನಿಗೆ ವಿಧೇಯರಾಗಿರುವವರ ಮೇಲೆ ಮಾತ್ರ ನೆಲೆಗೊಂಡಿರುತ್ತದೆ. (ಅ. ಕೃತ್ಯಗಳು 5:32) ‘ಶರೀರಭಾವದ ಕರ್ಮಗಳನ್ನು’ ಅಭ್ಯಾಸಮಾಡುವವರಿಗೆ ಯೆಹೋವನು ತನ್ನ ಆತ್ಮವನ್ನು ದಯಪಾಲಿಸುವುದಿಲ್ಲ. ಆ ಕರ್ಮಗಳು, “ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತನ ಇಂಥವುಗಳೇ.” (ಗಲಾತ್ಯ 5:​19-21) ನಿಜ, ಇಂದಿನ ಲೋಕದಲ್ಲಿ “ಶರೀರಭಾವದ ಕರ್ಮಗಳು” ಸರ್ವಸಾಮಾನ್ಯವಾಗಿದೆ. ಆದರೂ, ಅದನ್ನು ನಡಿಸುವವರು ನೈಜ ಮತ್ತು ಬಾಳುವ ಸಂತೋಷವನ್ನು ಅನುಭವಿಸುವುದಿಲ್ಲ. ಬದಲಾಗಿ, ಅಂಥ ಕಾರ್ಯಗಳನ್ನು ನಡಿಸುವುದು ಒಬ್ಬ ವ್ಯಕ್ತಿಗೆ ಸಂಬಂಧಿಕರು, ಸ್ನೇಹಿತರು, ಮತ್ತು ಪರಿಚಯಸ್ಥರೊಂದಿಗಿರುವ ಸಂಬಂಧವನ್ನು ಧ್ವಂಸಗೊಳಿಸುತ್ತದೆ. ಅಷ್ಟುಮಾತ್ರವಲ್ಲದೆ, “ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು ದೇವರ ವಾಕ್ಯವು ತಿಳಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, “ದೇವರಾತ್ಮನಿಂದ ಉಂಟಾಗುವ ಫಲ”ಗಳನ್ನು ಬೆಳೆಸಿಕೊಳ್ಳುವವರಿಗೆ ದೇವರು ತನ್ನ ಆತ್ಮವನ್ನು ದಯಪಾಲಿಸುತ್ತಾನೆ. ಈ ಫಲದಲ್ಲಿ ಒಳಗೂಡಿರುವ ಗುಣಗಳು, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ.” (ಗಲಾತ್ಯ 5:​22, 23) ಈ ಗುಣಗಳನ್ನು ನಾವು ಪ್ರದರ್ಶಿಸುವಾಗ, ಇತರರೊಂದಿಗೆ ಮತ್ತು ದೇವರೊಂದಿಗೆ ಒಂದು ಶಾಂತಿಯುತ ಸಂಬಂಧವನ್ನು ಹೊಂದಿರಲು ಬೇಕಾದ ಪರಿಸ್ಥಿತಿಗಳನ್ನು ನಾವು ರಚಿಸುತ್ತೇವೆ. ಮತ್ತು ಇಂಥ ಸಂಬಂಧಗಳಿಂದಾಗಿ ನಿಜವಾದ ಸಂತೋಷವು ಫಲಿಸುತ್ತದೆ. (ಚೌಕವನ್ನು ನೋಡಿ.) ಹೆಚ್ಚು ಪ್ರಾಮುಖ್ಯವಾಗಿ, ಪ್ರೀತಿ, ದಯೆ, ಉಪಕಾರ ಮತ್ತು ಇತರ ದೈವಿಕ ಗುಣಗಳನ್ನು ತೋರಿಸುವ ಮೂಲಕ ನಾವು ಯೆಹೋವನನ್ನು ಮೆಚ್ಚಿಸುತ್ತೇವೆ ಹಾಗೂ ದೇವರ ನೀತಿಯ ನೂತನ ಲೋಕದಲ್ಲಿ ನಿತ್ಯಜೀವದ ಸಂತೋಷಕರ ನಿರೀಕ್ಷೆಯು ನಮ್ಮದಾಗಿರುತ್ತದೆ.

ಸಂತೋಷವು ಒಂದು ಆಯ್ಕೆಯಾಗಿದೆ

ಜರ್ಮನಿಯಲ್ಲಿ ವಾಸಿಸುವ ದಂಪತಿಗಳಾದ ವುಲ್ಫ್‌ಗ್ಯಾಂಗ್‌ ಮತ್ತು ಬ್ರಿಜಿಟ್‌, ಶ್ರದ್ಧಾಪೂರ್ವಕವಾಗಿ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದ ಸಮಯದಲ್ಲಿ, ಸಂತೋಷಕ್ಕೆ ಅಗತ್ಯವೆಂದು ಜನರು ಭಾವಿಸುತ್ತಿದ್ದ ಅನೇಕ ಭೌತಿಕ ವಸ್ತುಗಳನ್ನು ಹೊಂದಿದ್ದರು. ಅವರು ಯುವಪ್ರಾಯದವರೂ ಆರೋಗ್ಯವಂತರೂ ಆಗಿದ್ದರು. ಅವರು ಬೆಲೆಬಾಳುವ ವಸ್ತ್ರಗಳನ್ನು ಧರಿಸುತ್ತಿದ್ದರು, ಆಕರ್ಷಕವಾಗಿ ಸಜ್ಜುಗೊಳಿಸಿದ ಒಂದು ಮನೆಯಲ್ಲಿ ವಾಸಿಸುತ್ತಿದ್ದರು, ಮತ್ತು ಒಂದು ಯಶಸ್ವಿ ವ್ಯಾಪಾರವನ್ನು ಹೊಂದಿದ್ದರು. ಅವರ ಹೆಚ್ಚಿನ ಸಮಯವು ಹೆಚ್ಚೆಚ್ಚು ಭೌತಿಕ ವಸ್ತುಗಳನ್ನು ಸಂಗ್ರಹಿಸುವುದರಲ್ಲಿಯೇ ಕಳೆಯುತ್ತಿತು. ಆದರೆ, ಅದು ಅವರಿಗೆ ನಿಜವಾದ ಸಂತೋಷವನ್ನು ನೀಡಲಿಲ್ಲ. ಸಮಯಾನಂತರ, ವುಲ್ಫ್‌ಗ್ಯಾಂಗ್‌ ಮತ್ತು ಬ್ರಿಜಿಟ್‌ ಒಂದು ಮಹತ್ವಪೂರ್ಣ ಆಯ್ಕೆಯನ್ನು ಮಾಡಿದರು. ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟಲಿಕ್ಕಾಗಿ ಹೆಚ್ಚಿನ ಸಮಯ ಮತ್ತು ಪ್ರಯತ್ನವನ್ನು ಮೀಸಲಾಗಿಡಲು ಆರಂಭಿಸಿದರು ಮತ್ತು ಯೆಹೋವನಿಗೆ ಇನ್ನಷ್ಟು ಸಮೀಪವಾಗಲಿಕ್ಕಾಗಿ ಮಾರ್ಗಗಳನ್ನು ಹುಡುಕಿದರು. ಅವರ ಈ ಆಯ್ಕೆಯು ಬೇಗನೆ ಅವರ ಮನೋಭಾವದಲ್ಲಿ ಬದಲಾವಣೆಯನ್ನು ತಂದಿತು. ಇದು ಅವರನ್ನು, ತಮ್ಮ ಜೀವನವನ್ನು ಸರಳೀಕರಿಸುವಂತೆ ಮತ್ತು ಪಯನೀಯರರಾಗಿ ಅಥವಾ ಪೂರ್ಣ ಸಮಯದ ರಾಜ್ಯ ಶುಶ್ರೂಷಕರಾಗಿ ಸೇವೆಸಲ್ಲಿಸುವಂತೆ ಪ್ರಚೋದಿಸಿತು. ಇಂದು ಅವರು, ಜರ್ಮನಿಯ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇದಕ್ಕೆ ಕೂಡಿಕೆಯಾಗಿ, ದೇವರ ವಾಕ್ಯವಾದ ಬೈಬಲಿನಲ್ಲಿರುವ ಸತ್ಯವನ್ನು ಕಲಿಯುವಂತೆ ವಿದೇಶಿಯರಿಗೆ ಸಹಾಯಮಾಡುವ ಸಲುವಾಗಿ ಅವರು ಏಷ್ಯಾ ಖಂಡದ ಒಂದು ಭಾಷೆಯನ್ನು ಕಲಿಯುತ್ತಿದ್ದಾರೆ.

ಈ ದಂಪತಿಯು ನಿಜವಾದ ಸಂತೋಷವನ್ನು ಕಂಡುಕೊಂಡರೋ? ವುಲ್ಫ್‌ಗ್ಯಾಂಗ್‌ ಹೇಳುವುದು: “ಎಂದಿನಿಂದ ನಾವು ಆಧ್ಯಾತ್ಮಿಕ ವಿಷಯಗಳನ್ನು ಬೆನ್ನಟ್ಟುವುದರಲ್ಲಿ ಹೆಚ್ಚು ಒಳಗೂಡಲು ಆರಂಭಿಸಿದೆವೊ ಅಂದಿನಿಂದ ನಾವು ಹೆಚ್ಚು ಸಂತೋಷಿತರಾಗಿದ್ದೇವೆ ಮತ್ತು ಹೆಚ್ಚು ಸಂತೃಪ್ತಿಯನ್ನು ಸಹ ಅನುಭವಿಸಿದ್ದೇವೆ. ಯೆಹೋವನನ್ನು ಪೂರ್ಣಹೃದಯದಿಂದ ಸೇವಿಸುವುದು ನಮ್ಮ ವೈವಾಹಿಕ ಜೀವನವನ್ನು ಸಹ ಬಲಗೊಳಿಸಿದೆ. ಈ ಹಿಂದೆಯೂ ನಮ್ಮ ವೈವಾಹಿಕ ಜೀವನವು ಸಂತೋಷಭರಿತವಾಗಿತ್ತು, ಆದರೆ ನಮಗಿದ್ದ ಹಂಗುಗಳು ಮತ್ತು ಅಭಿರುಚಿಗಳು ನಮ್ಮನ್ನು ವಿಭಿನ್ನ ದಿಕ್ಕುಗಳಿಗೆ ಎಳೆಯುತ್ತಿದ್ದವು. ಆದರೆ ಈಗ ನಾವು ಐಕ್ಯದಿಂದ ಒಂದೇ ಗುರಿಯನ್ನು ಬೆನ್ನಟ್ಟುತ್ತಿದ್ದೇವೆ.”

ಸಂತೋಷದಿಂದಿರಲು ಯಾವುದರ ಅಗತ್ಯವಿದೆ?

ಸಂಕ್ಷಿಪ್ತವಾಗಿ ಹೇಳಬೇಕಾದರೆ: ‘ಶರೀರಭಾವದ ಕರ್ಮಗಳನ್ನು’ ತ್ಯಜಿಸಿರಿ, ‘ದೇವರಾತ್ಮದಿಂದ ಉಂಟಾಗುವ ಫಲವನ್ನು’ ಬೆಳೆಸಿಕೊಳ್ಳಿರಿ. ಸಂತೋಷದಿಂದಿರಲು, ಒಬ್ಬ ವ್ಯಕ್ತಿಯು ದೇವರೊಂದಿಗೆ ಆಪ್ತ ಸಂಬಂಧವನ್ನು ಹೊಂದಿರಲು ಹಾತೊರೆಯಬೇಕು. ಇದನ್ನು ಹೊಂದಲು ಶ್ರಮಿಸುವ ವ್ಯಕ್ತಿಯು, ಒಬ್ಬ ಸಂತೋಷಿತ ವ್ಯಕ್ತಿಯ ಕುರಿತಾಗಿ ಯೇಸು ನೀಡಿದ ವಿವರಣೆಗೆ ಹೊಂದಿಕೆಯಲ್ಲಿರುತ್ತಾನೆ.

ಆದುದರಿಂದ, ಸಂತೋಷವು ನಿಮ್ಮ ಕೈಗೆಟುಕಲಾರದೆಂದು ಎಂದೂ ತಪ್ಪಾಗಿ ತೀರ್ಮಾನಿಸಬೇಡಿ. ಒಂದುವೇಳೆ ಸದ್ಯಕ್ಕೆ ನಿಮಗೆ ಉತ್ತಮ ಆರೋಗ್ಯ ಇಲ್ಲದಿರಬಹುದು ಅಥವಾ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು ಎಂಬುದು ಒಪ್ಪತಕ್ಕ ಸಂಗತಿ. ತಂದೆತಾಯ್ತನದ ಆನಂದ ನಿಮಗಿಲ್ಲದಿರಬಹುದು ಅಥವಾ ನೀವು ಇನ್ನೂ ಒಂದು ಯಶಸ್ವಿ ಜೀವನೊದ್ಯೋಗಕ್ಕಾಗಿ ಹೆಣಗಾಡುತ್ತಿರಬಹುದು. ಒಂದುವೇಳೆ ಈ ಮುಂಚೆ ನಿಮ್ಮ ಜೇಬಿನಲ್ಲಿ ತುಂಬಿರುತ್ತಿದ್ದಷ್ಟು ಹಣ ಈಗ ಇರಲಿಕ್ಕಿಲ್ಲ. ಆದರೂ, ಧೈರ್ಯದಿಂದಿರಿ, ನಿರಾಶರಾಗಲು ನಿಮಗೆ ಯಾವುದೇ ಕಾರಣವಿಲ್ಲ! ದೇವರ ರಾಜ್ಯವು ಈ ಎಲ್ಲಾ ಮತ್ತು ಇನ್ನೂ ನೂರಾರು ಸಮಸ್ಯೆಗಳನ್ನು ಬಗೆಹರಿಸಲಿದೆ. ವಾಸ್ತವದಲ್ಲಿ, ಯೆಹೋವ ದೇವರು ಕೀರ್ತನೆಗಾರನ ಮೂಲಕ ತಿಳಿಸಿರುವ ತನ್ನ ವಾಗ್ದಾನವನ್ನು ಬೇಗನೆ ನೆರವೇರಿಸಲಿದ್ದಾನೆ: “ನಿನ್ನ ರಾಜ್ಯವು ಶಾಶ್ವತವಾಗಿದೆ; . . . ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:​13, 16) ಲೋಕಾದ್ಯಂತವಿರುವ ಯೆಹೋವನ ಲಕ್ಷಾಂತರ ಸೇವಕರು ಪರೀಕ್ಷಿಸಿ ನೋಡಸಾಧ್ಯವಿರುವಂತೆ, ಯೆಹೋವನ ಈ ಪುನರಾಶ್ವಾಸನದಾಯಕ ವಾಗ್ದಾನವನ್ನು ಮನಸ್ಸಿನಲ್ಲಿಡುವುದು ಇಂದು ನಿಮ್ಮ ಸಂತೋಷವನ್ನು ಬಹಳಷ್ಟು ಮಟ್ಟಿಗೆ ಹೆಚ್ಚಿಸುತ್ತದೆ.​—⁠ಪ್ರಕಟನೆ 21:⁠3.

[ಪಾದಟಿಪ್ಪಣಿ]

^ ಪ್ಯಾರ. 3 ಸಾಮಾನ್ಯವಾಗಿ ಕ್ರಿಸ್ತನ-ಧನ್ಯವಾಕ್ಯಗಳು ಎಂದು ಕರೆಯಲ್ಪಡುವ ಈ ಒಂಬತ್ತು ವಾಕ್ಯಗಳಲ್ಲಿ ಪ್ರತಿಯೊಂದೂ ಮಕಾರೀಐ ಎಂಬ ಗ್ರೀಕ್‌ ಪದದಿಂದ ಆರಂಭವಾಗುತ್ತದೆ. ಈ ಪದವನ್ನು ಕೆಲವು ಭಾಷಾಂತರಗಳು “ಧನ್ಯರು” ಎಂದು ತರ್ಜುಮೆಮಾಡಿವೆಯಾದರೂ, ನೂತನ ಲೋಕ ಭಾಷಾಂತರ ಮತ್ತು ದಿ ಜೆರೂಸಲಮ್‌ ಬೈಬಲ್‌ ಹಾಗೂ ಟುಡೇಸ್‌ ಇಂಗ್ಲಿಷ್‌ ವರ್ಷನ್‌ನಂತಹ ಕೆಲವು ಇತರ ಭಾಷಾಂತರಗಳು “ಸಂತೋಷಿತರು” ಎಂಬ ಹೆಚ್ಚು ನಿಷ್ಕೃಷ್ಟ ಪದವನ್ನು ಉಪಯೋಗಿಸಿವೆ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಸಂತೋಷಕ್ಕೆ ನಡೆಸುವ ಅಂಶಗಳು

ಪ್ರೀತಿಯು ಇತರರು ನಿಮ್ಮನ್ನು ಪ್ರತಿಯಾಗಿ ಪ್ರೀತಿಸುವಂತೆ ಪ್ರೇರೇಪಿಸುತ್ತದೆ.

ಆನಂದವು ಪಂಥಾಹ್ವಾನಗಳನ್ನು ಎದುರಿಸಲು ನಿಮಗೆ ಬಲವನ್ನು ನೀಡುತ್ತದೆ.

ಸಮಾಧಾನವು ಜಗಳಗಳಿಲ್ಲದೆ ಶಾಂತಿಯುತ ಸಂಬಂಧಗಳನ್ನು ಇಟ್ಟುಕೊಳ್ಳಲು ನಿಮಗೆ ಸಹಾಯಮಾಡುತ್ತದೆ.

ದೀರ್ಘಶಾಂತಿಯು ಪರೀಕ್ಷೆಯ ಕೆಳಗೂ ಸಂತೋಷದಿಂದಿರಲು ನಿಮಗೆ ಸಹಾಯಮಾಡುತ್ತದೆ.

ದಯೆಯು ಇತರರನ್ನು ನಿಮ್ಮ ಕಡೆಗೆ ಸೆಳೆಯುತ್ತದೆ.

ಉಪಕಾರ ಮಾಡುವವರಾಗಿರುವುದಾದರೆ ನಿಮಗೆ ಅಗತ್ಯವಿರುವಾಗ ಇತರರು ನಿಮಗೆ ಉಪಕಾರಮಾಡುವರು.

ನಂಬಿಕೆಯು ದೇವರ ಪ್ರೀತಿಪರ ಮಾರ್ಗದರ್ಶನದ ಆಶ್ವಾಸನೆಯನ್ನು ನಿಮಗೆ ನೀಡುತ್ತದೆ.

ಸಾಧುತ್ವವು ಪ್ರಶಾಂತವಾದ ಹೃದಯ, ಮನಸ್ಸು, ಮತ್ತು ದೇಹವನ್ನು ಹೊಂದಿರಲು ನಿಮಗೆ ಸಹಾಯಮಾಡುತ್ತದೆ.

ಶಮೆದಮೆ ಎಂಬ ಗುಣವನ್ನು ತೋರಿಸಿದರೆ ನಿಮ್ಮ ತಪ್ಪುಗಳು ಕಡಿಮೆಯಾಗಿರುವವು.

[ಪುಟ 7ರಲ್ಲಿರುವ ಚಿತ್ರಗಳು]

ಸಂತೋಷವನ್ನು ಗಳಿಸಲು, ನೀವು ನಿಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ತೃಪ್ತಿಪಡಿಸಬೇಕು