ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಹಾರವನ್ನು ಲಭ್ಯಗೊಳಿಸುವ ಬೀಸುಯಂತ್ರಗಳು

ಆಹಾರವನ್ನು ಲಭ್ಯಗೊಳಿಸುವ ಬೀಸುಯಂತ್ರಗಳು

ಆಹಾರವನ್ನು ಲಭ್ಯಗೊಳಿಸುವ ಬೀಸುಯಂತ್ರಗಳು

ರೊಟ್ಟಿಯು ಅನೇಕ ಜನರ ಜೀವನದ ಮೂಲಾಧಾರ. ರಾಗಿರೊಟ್ಟಿಯಾಗಿರಲಿ, ಜೋಳದರೊಟ್ಟಿಯಾಗಿರಲಿ ಅಥವಾ ಇನ್ನಾವುದೇ ರೊಟ್ಟಿಯಾಗಿರಲಿ, ಇದು ಅಗಣಿತ ವರುಷಗಳಿಂದ ಮಾನವನ ಜೀವನಾಧಾರವಾಗಿದೆ. ಹೌದು, ರೊಟ್ಟಿಯು ಬಹಳ ಹಿಂದಿನ ಕಾಲದಿಂದಲೂ ಹೆಚ್ಚಿನ ಜನರ ಮುಖ್ಯ ಆಹಾರವಾಗಿದೆ. ವಾಸ್ತವದಲ್ಲಿ, ಅನುದಿನದ ಆಹಾರವನ್ನು ಗಳಿಸುವುದೇ ಮನುಷ್ಯನ ಅತಿ ಪ್ರಾಮುಖ್ಯ ಅಗತ್ಯಗಳಲ್ಲಿ ಒಂದಾಗಿದೆ.

ರೊಟ್ಟಿಯನ್ನು ತಯಾರಿಸಲು ಬೇಕಾಗಿರುವ ಮೂಲ ಪದಾರ್ಥವು ಹಿಟ್ಟು. ಧಾನ್ಯಗಳನ್ನು ಪುಡಿಮಾಡುವ ಮೂಲಕ ಇದನ್ನು ಪಡೆಯಲಾಗುತ್ತದೆ. ಹೀಗಿರಲಾಗಿ, ಬೀಸುವಿಕೆಯು ಒಂದು ಪುರಾತನ ಕಲೆಯಾಗಿದೆ. ಯಂತ್ರಸೌಕರ್ಯವಿಲ್ಲದಿದ್ದ ಹಿಂದಿನಕಾಲದಲ್ಲಿ, ಧಾನ್ಯವನ್ನು ಪುಡಿಮಾಡುವುದು ಎಂಥ ಒಂದು ಕಠಿನ ಪರಿಶ್ರಮವಾಗಿದ್ದಿರಬೇಕು! ಬೈಬಲಿನ ಸಮಯಗಳಲ್ಲಿ, ಕೈಯಿಂದ ನಡೆಸುವ ಬೀಸುವ ಕಲ್ಲುಗಳ ಸದ್ದು ಸುಗಮವಾದ ಮತ್ತು ಶಾಂತಿಭರಿತ ಪರಿಸ್ಥಿತಿಗಳನ್ನು ಸೂಚಿಸುತ್ತಿತ್ತು, ಆದರೆ ಅದರ ಸದ್ದಿಲ್ಲದಿರುವುದು ದುರ್ಗತಿಯನ್ನು ಸೂಚಿಸುತ್ತಿತ್ತು.​—⁠ಯೆರೆಮೀಯ 25:​10, 11.

ಮಾನವ ಇತಿಹಾಸದಾದ್ಯಂತ ಬೀಸುವಿಕೆಯು ಏನನ್ನು ಒಳಗೂಡಿತ್ತು? ಬೀಸುವಿಕೆಗಾಗಿ ಉಪಯೋಗಿಸಲಾಗುತ್ತಿದ್ದ ಕೆಲವು ವಿಧಾನಗಳು ಮತ್ತು ಸಲಕರಣೆಗಳು ಯಾವುವು? ಮತ್ತು ನಿಮಗೆ ಆಹಾರವನ್ನು ಲಭ್ಯಗೊಳಿಸಲು ಇಂದು ಯಾವ ರೀತಿಯ ಬೀಸುಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ?

ಬೀಸುಯಂತ್ರಗಳ ಅಗತ್ಯವೇಕೆ?

ಪ್ರಥಮ ಮಾನವ ಜೋಡಿಯಾದ ಆದಾಮಹವ್ವರಿಗೆ ಯೆಹೋವನು ಹೇಳಿದ್ದು: “ಸಮಸ್ತಭೂಮಿಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ.” (ಆದಿಕಾಂಡ 1:29) ಮಾನವಕುಲಕ್ಕೆ ಯೆಹೋವ ದೇವರು ಒದಗಿಸಿಕೊಟ್ಟಿರುವ ಆಹಾರಗಳಲ್ಲಿ, ಪೈರಿನ ದಂಟುಗಳಲ್ಲಿ ಬೆಳೆಯುವ ಬೀಜಗಳೂ ಸೇರಿವೆ. ಇವು ಮಾನವನ ಅಸ್ತಿತ್ವಕ್ಕೆ ಬಹಳ ಅವಶ್ಯಕವಾದ ಆಹಾರವಾಗಿವೆ, ಏಕೆಂದರೆ ಎಲ್ಲಾ ಧಾನ್ಯಗಳು​—⁠ಗೋಧಿ, ಬಾರ್ಲಿ, ರೈ, ಓಟ್ಸ್‌, ಅಕ್ಕಿ, ಜವೆಗೋಧಿ, ಜೋಳ, ಮತ್ತು ಮುಸುಕಿನ ಜೋಳವನ್ನು ಸೇರಿಸಿ​—⁠ಶರ್ಕರಪಿಷ್ಟವನ್ನು ಹೊಂದಿವೆ. ಈ ಶರ್ಕರಪಿಷ್ಟವನ್ನು ದೇಹವು, ತನ್ನ ಬಲದ ಮೂಲವಾಗಿರುವ ಗ್ಲೂಕೋಸ್‌ ಆಗಿ ಪರಿವರ್ತಿಸಲು ಶಕ್ತವಾಗಿದೆ.

ಆದರೆ, ಮನುಷ್ಯನು ಹಸಿಯಾದ ಇಡೀ ಧಾನ್ಯಗಳನ್ನು ತಿಂದು ಜೀರ್ಣಿಸಿಕೊಳ್ಳಲು ಶಕ್ತನಲ್ಲ. ಧಾನ್ಯಗಳನ್ನು ಪುಡಿಮಾಡಿ, ಅನಂತರ ಅದನ್ನು ಬೇಯಿಸುವಲ್ಲಿ ಮನುಷ್ಯರಿಗೆ ಸೇವಿಸಲು ಸುಲಭವಾಗುತ್ತದೆ. ಧಾನ್ಯವನ್ನು ಒನಕೆಯಲ್ಲಿ ಕುಟ್ಟುವುದು, ಎರಡು ಕಲ್ಲುಗಳ ಮಧ್ಯೆ ಅದನ್ನು ಪುಡಿಮಾಡುವುದು, ಅಥವಾ ಈ ಎರಡೂ ವಿಧಾನಗಳನ್ನು ಸಂಯೋಜಿಸುವುದು ಧಾನ್ಯವನ್ನು ಹಿಟ್ಟಾಗಿ ಪರಿವರ್ತಿಸುವ ಅತಿ ಸರಳ ವಿಧಾನಗಳಾಗಿವೆ.

ಮಾನವ ಹಸ್ತದಿಂದ ನಡೆಸುವ ಬೀಸುಯಂತ್ರಗಳು

ಪುರಾತನ ಐಗುಪ್ತದ ಸಮಾಧಿಗಳಲ್ಲಿ ಸಿಕ್ಕಿದ ಸಣ್ಣ ಪ್ರತಿಮೆಗಳಲ್ಲಿ, ಪುರಾತನ ಸಮಯದ ಒಂದು ರೀತಿಯ ಧಾನ್ಯ ಬೀಸುವ ಯಂತ್ರದ ಉಪಯೋಗವನ್ನು ಚಿತ್ರಿಸಲಾಗಿದೆ. ಆ ಬೀಸುಯಂತ್ರವನ್ನು ಜೀನು ಬೀಸುಯಂತ್ರ ಎಂದು ಕರೆಯಲಾಗುತ್ತದೆ. ಅದರ ಆಕಾರವು ಜೀನಿನಂತಿರುವುದರಿಂದ ಅದಕ್ಕೆ ಈ ಹೆಸರು ಕೊಡಲ್ಪಟ್ಟಿತ್ತು. ಈ ಬೀಸುಯಂತ್ರದಲ್ಲಿ ಎರಡು ಕಲ್ಲುಗಳಿದ್ದವು. ಕೆಳಕಲ್ಲಿನ ಮೇಲ್ಮೈ ಕೊಂಚ ಒಳಬಾಗಿರುತ್ತಿತ್ತು ಹಾಗೂ ಇಳಿಜಾರಾಗಿರುತ್ತಿತ್ತು ಮತ್ತು ಮೇಲ್ಕಲ್ಲು ಸಣ್ಣದ್ದಾಗಿರುತ್ತಿತ್ತು. ಕೆಲಸದಾಳು, ಸಾಮಾನ್ಯವಾಗಿ ಒಬ್ಬ ಸ್ತ್ರೀ, ಈ ಯಂತ್ರದ ಮುಂದೆ ಮೊಣಕಾಲೂರಿ ಕುಳಿತುಕೊಂಡು ತನ್ನ ಎರಡೂ ಕೈಗಳಿಂದ ಮೇಲ್ಕಲ್ಲನ್ನು ಹಿಡಿಯುತ್ತಿದ್ದಳು. ಅನಂತರ ತನ್ನ ದೇಹದ ಮೇಲ್ಭಾಗದ ಪೂರ್ತಿ ಭಾರವನ್ನು ಮೇಲ್ಕಲ್ಲಿಗೆ ಹಾಕಿ, ಅದನ್ನು ಕೆಳಕಲ್ಲಿನ ಮೇಲೆ ಮುಂದಕ್ಕೆ ಮತ್ತು ಹಿಂದಕ್ಕೆ ದೂಡುತ್ತಿದ್ದಳು. ಹೀಗೆ ದೂಡುವಾಗ ಆ ಕಲ್ಲುಗಳ ಮಧ್ಯದಲ್ಲಿರುವ ಧಾನ್ಯಗಳು ಪುಡಿಯಾಗುತ್ತಿದ್ದವು. ಎಂಥ ಒಂದು ಸರಳವಾದ, ಆದರೆ ಕಾರ್ಯಸಾಧಕ ಉಪಕರಣ!

ಆದರೆ ತಾಸುಗಟ್ಟಳೆ ಮೊಣಕಾಲೂರಿ ಕೆಲಸಮಾಡುವುದು ದೇಹಕ್ಕೆ ಹಾನಿಕಾರಕ. ಮೇಲ್ಕಲ್ಲನ್ನು ಕೆಳಕಲ್ಲಿನ ಕೊನೆಯ ವರೆಗೆ ಮುಂದಕ್ಕೆ ಮತ್ತು ಹಿಂದಕ್ಕೆ ತಳ್ಳುವುದು, ಕೆಲಸದವರ ಬೆನ್ನು, ತೋಳುಗಳು, ತೊಡೆಗಳು, ಮೊಣಕಾಲುಗಳು, ಮತ್ತು ಕಾಲ್ಬೆರಳುಗಳ ಮೇಲೆ ಸತತ ಒತ್ತಡವನ್ನು ಹಾಕಿತು. ಪುರಾತನ ಸಿರಿಯದ ಅಸ್ಥಿಪಂಜರಗಳಲ್ಲಿ ಕಂಡುಬಂದಿರುವ ಅಸ್ಥಿಅಪಸಾಮಾನ್ಯತೆಯ ಕುರಿತಾದ ಅಧ್ಯಯನಗಳು, ಆ ರೀತಿಯ ಬೀಸುಯಂತ್ರಗಳನ್ನು ಉಪಯೋಗಿಸಿದ ಯುವತಿಯರು, ಪುನರಾವರ್ತಿತ ಒತ್ತಡ ಹಾನಿಗೊಳಗಾದರು ಅಂದರೆ ಕಚ್ಚುಗಳಿರುವ ಮಂಡಿಕವಚ, ಕೊನೆಯ ಬೆನ್ನು ಮೂಳೆಗೆ ಹಾನಿ, ಮತ್ತು ಹೆಬ್ಬೆರಳಿನ ತೀವ್ರ ಅಸ್ಥಿಸಂಧಿವಾತವುಳ್ಳವರಾಗಿದ್ದರು ಎಂದು ತೀರ್ಮಾನಿಸುವಂತೆ ಪಳೆಯುಳಿಕೆ ಶಾಸ್ತ್ರಜ್ಞರನ್ನು ನಡೆಸಿದೆ. ಪುರಾತನ ಐಗುಪ್ತದಲ್ಲಿ, ಕೈಯಿಂದ ನಡೆಸುವ ಬೀಸುಯಂತ್ರಗಳಲ್ಲಿ ಕೆಲಸಮಾಡುವುದು ದಾಸಿಯರ ಕೆಲಸವಾಗಿತ್ತೆಂದು ತೋರುತ್ತದೆ. (ವಿಮೋಚನಕಾಂಡ 11:⁠5) * ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಬಂದಾಗ, ಜೀನು ಬೀಸುಯಂತ್ರವನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದರೆಂದು ಕೆಲವು ವಿದ್ವಾಂಸರು ನಂಬುತ್ತಾರೆ.

ಸಮಯಾನಂತರ ಬೀಸುಯಂತ್ರಗಳಲ್ಲಾದ ಮಾರ್ಪಾಟುಗಳಲ್ಲಿ, ಕಾರ್ಯಸಮರ್ಥತೆಯನ್ನು ಉತ್ತಮಗೊಳಿಸಲು ಎರಡೂ ಕಲ್ಲುಗಳಲ್ಲಿ ಕೊಂಚ ಕೆತ್ತುವುದೂ ಒಳಗೊಂಡಿತ್ತು. ಮೇಲ್ಕಲ್ಲಿನಲ್ಲಿ ಕೊಳವೆಯಾಕಾರದ ರಂಧ್ರದ ರಚನೆಯು ಬೀಸುವವರು ಅದರೊಳಗೆ ಧಾನ್ಯವನ್ನು ಹಾಕುವಂತೆಯೂ, ಅದು ಹೀಗೆ ಸ್ವಯಂಚಾಲಿತವಾಗಿ ಕಲ್ಲುಗಳ ಮಧ್ಯಕ್ಕೆ ಹೋಗುವಂತೆಯೂ ಸಾಧ್ಯಮಾಡಿತು. ಸಾ.ಶ.ಪೂ. ನಾಲ್ಕನೇ ಅಥವಾ ಐದನೇ ಶತಮಾನದಲ್ಲಿ, ಗ್ರೀಕರು ಸರಳವಾದ ಬೀಸುಯಂತ್ರವನ್ನು ರಚಿಸಿದರು. ಮೇಲ್ಕಲ್ಲಿನ ಒಂದು ತುದಿಯಲ್ಲಿ ಸಮತಲವಾದ ಒಂದು ಹಿಡಿ ಅಥವಾ ಗೂಟವನ್ನು ಜೋಡಿಸಲಾಗಿತ್ತು. ಈ ಗೂಟದ ಮತ್ತೊಂದು ತುದಿಯನ್ನು ಕಮಾನಿನಾಕಾರದಲ್ಲಿ ಸ್ವಲ್ಪ ಹಿಂದೆ ಮುಂದೆ ಚಲಿಸುವಾಗ ಧಾನ್ಯವನ್ನು ಬೀಳಿಸುತ್ತಿದ್ದ ಮೇಲ್ಕಲ್ಲು ಕೆಳಕಲ್ಲನ್ನು ತಿಕ್ಕುವಂತೆ ಮಾಡುತ್ತಿತ್ತು.

ಮೇಲೆ ತಿಳಿಸಿದ ಎಲ್ಲಾ ರೀತಿಯ ಬೀಸುಯಂತ್ರಗಳಲ್ಲಿಯೂ ಒಂದು ಗಂಭೀರವಾದ ಕೊರತೆಯಿತ್ತು. ಅವು, ಯಾವುದೇ ಪ್ರಾಣಿಯಿಂದ ಮಾಡಸಾಧ್ಯವಿಲ್ಲದ ಮುಂದು ಹಿಂದು ಚಲನೆಯ ಮೇಲೆ ಅವಲಂಬಿಸಿತ್ತು. ಆದುದರಿಂದ, ಈ ಬೀಸುಯಂತ್ರಗಳು ಸಂಪೂರ್ಣವಾಗಿ ಮಾನವ ಹಸ್ತಬಲದ ಮೇಲೆ ಅವಲಂಬಿಸಬೇಕಾಯಿತು. ತದನಂತರ ಒಂದು ಹೊಸ ತಂತ್ರಜ್ಞಾನವು ಬಂತು​—⁠ರೋಟರಿ ಬೀಸುಯಂತ್ರ ಅಂದರೆ ವೃತ್ತಾಕಾರದಲ್ಲಿ ಚಲಿಸಲ್ಪಡುವ ಬೀಸುಯಂತ್ರ. ಈ ಬೀಸುಯಂತ್ರವನ್ನು ನಡಿಸಲು ಈಗ ಪ್ರಾಣಿಗಳನ್ನು ಉಪಯೋಗಿಸಸಾಧ್ಯವಿತ್ತು.

ರೋಟರಿ ಬೀಸುಯಂತ್ರ ಕೆಲಸವನ್ನು ಸುಲಭಗೊಳಿಸುತ್ತದೆ

ರೋಟರಿ ಬೀಸುಯಂತ್ರವನ್ನು ಸಾ.ಶ.ಪೂ. ಎರಡನೇ ಶತಮಾನದ ಸುಮಾರಿಗೆ ಭೂಮಧ್ಯಸಾಗರದ ಸುತ್ತಲಿನ ದೇಶಗಳಲ್ಲಿ ತಯಾರಿಸಿರಬೇಕೆಂಬುದು ಅತಿ ಸಂಭವನೀಯ. ಸಾ.ಶ. ಮೊದಲನೇ ಶತಮಾನದ ಸುಮಾರಿಗೆ, ಪ್ಯಾಲೆಸ್ಟೈನ್‌ನಲ್ಲಿದ್ದ ಯೆಹೂದ್ಯರಿಗೆ ಈ ರೀತಿಯ ಬೀಸುಯಂತ್ರವು ಚಿರಪರಿಚಿತವಾಗಿತ್ತು. ಏಕೆಂದರೆ “ಕತ್ತೆಯಿಂದ ತಿರುಗಿಸಲ್ಪಡುವ ಬೀಸುವ ಕಲ್ಲಿನ” ಕುರಿತು ಯೇಸು ಮಾತಾಡಿದನು.​—⁠ಮಾರ್ಕ 9:​42, NW.

ಪ್ರಾಣಿಗಳ ಶಕ್ತಿಯಿಂದ ನಡೆಸಲ್ಪಟ್ಟ ಬೀಸುಯಂತ್ರವನ್ನು ರೋಮ್‌ನಲ್ಲಿ ಮತ್ತು ರೋಮ್‌ ಸಾಮ್ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಅಂಥ ಅನೇಕ ಬೀಸುಯಂತ್ರಗಳು ಇಂದು ಸಹ ಪಾಂಪೇಯಲ್ಲಿ ಅಸ್ತಿತ್ವದಲ್ಲಿವೆ. ಅದರಲ್ಲಿ ತೊಟ್ಟಿಯೋಪಾದಿ ಕೆಲಸಮಾಡುವ ಮರಳು ಗಡಿಯಾರದ ಆಕಾರದ ಬಹಳ ಭಾರವಾದ ಮೇಲ್ಕಲ್ಲೂ ಶಂಕುವಿನಾಕಾರದ ಕೆಳಕಲ್ಲೂ ಇವೆ. ಕೆಳಕಲ್ಲಿನ ಮೇಲೆ ಮೇಲ್ಕಲ್ಲು ಸುತ್ತುವಾಗ, ಧಾನ್ಯಗಳು ಆ ಎರಡು ಕಲ್ಲುಗಳ ಮಧ್ಯೆ ಪುಡಿಮಾಡಲ್ಪಡುತ್ತವೆ. ಈಗ ಅಸ್ತಿತ್ವದಲ್ಲಿರುವ ಈ ರೀತಿಯ ಮೇಲ್ಕಲ್ಲುಗಳು, ಸುಮಾರು 45ರಿಂದ 90 ಸೆಂಟಿಮೀಟರ್‌ಗಳ ವ್ಯಾಸದಷ್ಟು ವಿವಿಧ ಗಾತ್ರಗಳಲ್ಲಿವೆ. ಈ ಬೀಸುಯಂತ್ರಗಳು, 180 ಸೆಂಟಿಮೀಟರ್‌ಗಳಷ್ಟು ಎತ್ತರದ್ದವುಗಳಾಗಿವೆ.

ಕೈಯಿಂದ ನಡಿಸಲ್ಪಟ್ಟ ಹಗುರವಾದ ರೋಟರಿ ಬೀಸುಯಂತ್ರಗಳು ಮೊದಲು ಕಂಡುಹಿಡಿಯಲ್ಪಟ್ಟವೋ ಅಥವಾ ಪ್ರಾಣಿಗಳಿಂದ ನಡಿಸಲ್ಪಟ್ಟ ರೋಟರಿ ಬೀಸುಯಂತ್ರಗಳು ಮೊದಲು ಕಂಡುಹಿಡಿಯಲ್ಪಟ್ಟವೋ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಏನೇ ಆಗಿರಲಿ, ಕೈಯಿಂದ ನಡಿಸುವ ರೋಟರಿ ಬೀಸುಯಂತ್ರಗಳು ಸುಲಭವಾಗಿ ಒಯ್ಯಲಾಗುವಂಥದ್ದಾಗಿಯೂ ಉಪಯೋಗಿಸಲು ಸುಲಭವಾಗಿಯೂ ಇದ್ದವು. ಅದರಲ್ಲಿ ಪ್ರಾಯಶಃ 30ರಿಂದ 60 ಸೆಂಟಿಮೀಟರ್‌ಗಳಷ್ಟು ವ್ಯಾಸವುಳ್ಳ ಉರುಟಾದ ಎರಡು ಕಲ್ಲುಗಳಿದ್ದವು. ಕೆಳಕಲ್ಲಿನ ಮೇಲ್ಭಾಗವು ಸ್ವಲ್ಪಮಟ್ಟಿಗೆ ಮಧ್ಯದಲ್ಲಿ ಹೊರಬಾಗನ್ನು ಹೊಂದಿತ್ತು ಮತ್ತು ಮೇಲ್ಕಲ್ಲಿನ ಕೆಳಭಾಗವು ಸ್ವಲ್ಪಮಟ್ಟಿಗೆ ಒಳಬಾಗಿತ್ತು. ಈ ರೀತಿಯಾಗಿ ಕೆಳಕಲ್ಲಿನ ಹೊರಬಾಗಿನಲ್ಲಿ ಅದು ಸರಿಯಾಗಿ ಹೊಂದಿಕೊಳ್ಳುತ್ತಿತ್ತು. ಮೇಲ್ಕಲ್ಲು ಮಧ್ಯದ ತಿರುಗಣಿ ಗೂಟದ ಮೇಲೆ ಕೂತಿದ್ದು ಮರದ ಹಿಡಿಯಿಂದ ತಿರುಗಿಸಲ್ಪಡುತ್ತಿತ್ತು. ಸಾಮಾನ್ಯವಾಗಿ, ಇಬ್ಬರು ಹೆಂಗಸರು ಒಬ್ಬರಿಗೊಬ್ಬರು ಮುಖಮಾಡಿ ಕುಳಿತು, ಇಬ್ಬರೂ ತಮ್ಮ ಒಂದು ಕೈಯಿಂದ ಹಿಡಿಯನ್ನು ಹಿಡಿದು ಮೇಲ್ಕಲ್ಲನ್ನು ತಿರುಗಿಸುತ್ತಿದ್ದರು. (ಲೂಕ 17:35) ಇನ್ನೊಂದು ಕೈಯಿಂದ ಒಬ್ಬಾಕೆ ಹೆಂಗಸು, ಚಿಕ್ಕ ಮೊತ್ತದಲ್ಲಿ ಧಾನ್ಯಗಳನ್ನು ಮೇಲ್ಕಲ್ಲಿನಲ್ಲಿರುವ ಧಾನ್ಯ ತುಂಬಿಸುವ ತೂತಿಗೆ ತುಂಬಿಸುತ್ತಿದ್ದಳು ಮತ್ತು ಇನ್ನೊಬ್ಬ ಹೆಂಗಸು, ಬೀಸುಯಂತ್ರದ ಅಂಚಿನಿಂದ ಹೊರಬರುತ್ತಿರುವ ಹಿಟ್ಟು ಬೀಸುಯಂತ್ರದ ಕೆಳಗಿರುವ ತಟ್ಟೆ ಅಥವಾ ಬಟ್ಟೆಯಲ್ಲಿ ಬೀಳುತ್ತಿರುವಾಗ ಅದನ್ನು ಒಟ್ಟುಸೇರಿಸುತ್ತಿದ್ದಳು. ಈ ರೀತಿಯ ಬೀಸುಯಂತ್ರವು, ಸೈನಿಕರ, ನಾವಿಕರ, ಅಥವಾ ಬೀಸುವ ಯಂತ್ರಗಳುಳ್ಳ ಸ್ಥಳಗಳಿಂದ ಬಹಳ ದೂರದಲ್ಲಿ ವಾಸಿಸುವ ಜನರ ಆವಶ್ಯಕತೆಗಳನ್ನು ಪೂರೈಸುತ್ತಿತ್ತು.

ನೀರು ಅಥವಾ ಗಾಳಿಯ ಶಕ್ತಿಯಿಂದ ನಡೆಯುತ್ತಿದ್ದ ಬೀಸುಯಂತ್ರ

ಸಾ.ಶ.ಪೂ. 27ರ ಸುಮಾರಿಗೆ, ರೋಮನ್‌ ಇಂಜಿನಿಯರ್‌ ವಿಟ್ರೂವಿಯಸ್‌ ತನ್ನ ಕಾಲದಲ್ಲಿದ್ದ, ನೀರಿನ ಶಕ್ತಿಯಿಂದ ನಡೆಯುತ್ತಿದ್ದ ಬೀಸುಯಂತ್ರವನ್ನು ವರ್ಣಿಸಿದನು. ಹರಿಯುವ ನೀರು, ಒಂದು ಸಮತಲವಾಗಿರುವ ಅಚ್ಚುಗಂಬಿಗೆ ಬಿಗಿದಿರುವ ಲಂಬವಾಗಿ ನಿಂತಿರುವ ಚಕ್ರದ ಹುಟ್ಟುಗಳನ್ನು ನೂಕಿ ಈ ಮೂಲಕ ಚಕ್ರವು ತಿರುಗುವಂತೆ ಮಾಡುತ್ತಿತ್ತು. ಈ ಹಲ್ಲುಚಕ್ರಗಳು ಈ ಚಲನೆಯನ್ನು ಒಂದು ಲಂಬವಾಗಿರುವ ಚಾಲಕದಂಡಕ್ಕೆ ದಾಟಿಸಿತು. ಪ್ರತಿಯಾಗಿ, ಆ ಚಾಲಕದಂಡವು ಅದರ ಮೇಲಿರುವ ದೊಡ್ಡ ಬೀಸುವ ಕಲ್ಲನ್ನು ತಿರುಗಿಸುತ್ತಿತ್ತು.

ನೀರಿನ ಶಕ್ತಿಯಿಂದ ನಡೆಯುತ್ತಿದ್ದ ಬೀಸುಯಂತ್ರದ ಉತ್ಪನ್ನದ ಮೊತ್ತವನ್ನು ಇತರ ಬೀಸುಯಂತ್ರಗಳ ಉತ್ಪನ್ನದ ಮೊತ್ತದೊಂದಿಗೆ ಹೋಲಿಸುವಾಗ ವ್ಯತ್ಯಾಸವೆಷ್ಟಿತ್ತು? ಕೈಯಿಂದ ನಡೆಸಲ್ಪಟ್ಟ ಬೀಸುಯಂತ್ರಗಳು ಒಂದು ತಾಸಿಗೆ 10 ಕಿಲೋಗ್ರಾಮ್‌ಗಿಂತಲೂ ಕಡಿಮೆ ಧಾನ್ಯವನ್ನು ಪುಡಿಮಾಡಿದವು, ಮತ್ತು ಪ್ರಾಣಿಗಳಿಂದ ನಡೆಸಲ್ಪಟ್ಟ ಅತಿ ಕಾರ್ಯಸಾಧಕ ಬೀಸುಯಂತ್ರಗಳು ಒಂದು ತಾಸಿಗೆ ಸುಮಾರು 50 ಕಿಲೋಗ್ರಾಮ್‌ ಧಾನ್ಯವನ್ನು ಪುಡಿಮಾಡಿದವು. ಆದರೆ ವಿಟ್ರೂವಿಯಸ್‌ನಿಂದ ವರ್ಣಿಸಲಾದ, ನೀರಿನ ಶಕ್ತಿಯಿಂದ ನಡೆಯುತ್ತಿದ್ದ ಬೀಸುಯಂತ್ರವು ಒಂದು ತಾಸಿಗೆ ಸುಮಾರು 150ರಿಂದ 200 ಕಿಲೋಗ್ರಾಮ್‌ ಧಾನ್ಯವನ್ನು ಪುಡಿಮಾಡಿತು. ಅಸಂಖ್ಯಾತ ವಿವಿಧತೆ ಮತ್ತು ಸುಧಾರಣೆಗಳ ಸಹಾಯದಿಂದ ವಿಟ್ರೂವಿಯಸ್‌ ವರ್ಣಿಸಿದ ಮೂಲತತ್ತ್ವವನ್ನು ಸಮರ್ಥ ಬೀಸುಯಂತ್ರಕಾರರು ಶತಮಾನಗಳಿಂದ ಉಪಯೋಗಿಸುತ್ತಾ ಬಂದಿದ್ದಾರೆ.

ಬೀಸುವ ಕಲ್ಲುಗಳನ್ನು ನಡೆಸಲು ಬೇಕಾಗಿರುವ ನೈಸರ್ಗಿಕ ಶಕ್ತಿಯ ಮೂಲವು ಕೇವಲ ಹರಿಯುವ ನೀರು ಮಾತ್ರವಾಗಿರಲಿಲ್ಲ. ನೀರುಚಕ್ರಗಳನ್ನು ತೆಗೆದು ಅದರ ಸ್ಥಳದಲ್ಲಿ ಗಾಳಿಗಿರಣಿಯ ಹಾಯಿಗಳನ್ನು ಇಡುವಲ್ಲಿ, ಅದೇ ಉದ್ದೇಶವನ್ನು ನೆರವೇರಿಸಸಾಧ್ಯವಿತ್ತು. ಪ್ರಾಯಶಃ ಸಾ.ಶ. 12ನೇ ಶತಮಾನದಲ್ಲಿ ಯೂರೋಪಿನಲ್ಲಿ ಗಾಳಿಗಿರಣಿಗಳು ಉಪಯೋಗಕ್ಕೆ ಬಂದವು ಮತ್ತು ಬೆಲ್ಜಿಯಮ್‌, ಜರ್ಮನಿ, ಹಾಲೆಂಡ್‌, ಮತ್ತು ಇತರ ಕಡೆಗಳಲ್ಲಿನ ಬೀಸುವ ಕೆಲಸಕ್ಕೆ ಈ ರೀತಿಯ ಗಾಳಿಗಿರಣಿಗಳನ್ನು ವ್ಯಾಪಕವಾಗಿ ಉಪಯೋಗಿಸಲಾಯಿತು. ಉಗಿಯ ಮೂಲಕ ಮತ್ತು ಇತರ ಶಕ್ತಿಯ ಮೂಲಕ ಉಪಯೋಗಿಸಲ್ಪಡುವ ಬೀಸುಯಂತ್ರಗಳು ಕ್ರಮೇಣ ಬೇರೆ ಶಕ್ತಿಯ ಮೂಲಗಳನ್ನು ಲುಪ್ತಮಾಡುವ ತನಕ ಇವು ಉಪಯೋಗದಲ್ಲಿದ್ದವು.

“ನಮ್ಮ ಅನುದಿನದ ಆಹಾರ”

ಪ್ರಗತಿಯ ಹೊರತಾಗಿಯೂ, ಪುರಾತನ ಕಾಲದ ಬೀಸುವಿಕೆಯ ಅನೇಕ ವಿಧಾನಗಳು ಇಂದೂ ಲೋಕದ ಒಂದಲ್ಲ ಒಂದು ಭಾಗದಲ್ಲಿ ಕಂಡುಬರುತ್ತವೆ. ಆಫ್ರಿಕ ಮತ್ತು ಓಶೀಅನೀಯದ ಕೆಲವು ಭಾಗಗಳಲ್ಲಿ ಇನ್ನೂ ಒನಕೆ ಮತ್ತು ಕುಟ್ಟಣಿಯನ್ನು ಉಪಯೋಗಿಸಲಾಗುತ್ತಿದೆ. ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಲ್ಲಿ, ಜೋಳದರೊಟ್ಟಿಯನ್ನು ತಯಾರಿಸುವ ಸಲುವಾಗಿ ಮುಸುಕಿನ ಜೋಳವನ್ನು ಪುಡಿಮಾಡಲು ಜೀನು ಬೀಸುಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಮತ್ತು ನೀರು ಹಾಗೂ ಗಾಳಿಯ ಶಕ್ತಿಯಿಂದ ನಡೆಯುವ ಅನೇಕ ಬೀಸುಯಂತ್ರಗಳು ಇಂದೂ ಅಲ್ಲಲ್ಲಿ ಕಂಡುಬರುತ್ತವೆ.

ಹಾಗಿದ್ದರೂ, ಇಂದು ಪ್ರಗತಿಪರ ದೇಶಗಳಲ್ಲಿ ಹಿಟ್ಟುಮಾಡಲು ಹೆಚ್ಚಾಗಿ ಯಂತ್ರಚಾಲಿತ ಮತ್ತು ಸಂಪೂರ್ಣವಾಗಿ ಸ್ವಯಂಚಾಲಿತ ರೋಲರ್‌ ಬೀಸುಯಂತ್ರಗಳನ್ನು ಉಪಯೋಗಿಸಲಾಗುತ್ತದೆ. ಧಾನ್ಯಗಳು, ವಿಭಿನ್ನವಾದ ವೇಗದಲ್ಲಿ ಸುತ್ತುವ ಕೆತ್ತಿರುವ ಅಡಿಭಾಗವಿರುವ ಎರಡು ಉಕ್ಕಿನ ಸಿಲಿಂಡರ್‌ಗಳ ಮಧ್ಯದಲ್ಲಿ ಸತತವಾಗಿ ಅರೆಯಲ್ಪಟ್ಟು ಕ್ರಮೇಣ ಹಿಟ್ಟಾಗುತ್ತವೆ. ಈ ವಿಧಾನವು, ಕಡಿಮೆ ಬೆಲೆಯಲ್ಲಿ ವಿವಿಧ ಗುಣಮಟ್ಟದ ಹಿಟ್ಟನ್ನು ತಯಾರಿಸುವಂತೆ ಸಾಧ್ಯಮಾಡುತ್ತದೆ.

ಇಂದು ಆಹಾರವನ್ನು ತಯಾರಿಸಲಿಕ್ಕಾಗಿ ಹಿಟ್ಟನ್ನು ಪಡೆಯುವುದು ಹಿಂದಿನ ಕಾಲದಷ್ಟು ಕಷ್ಟಕರ ಕೆಲಸವಲ್ಲ ಎಂಬುದು ನಿಸ್ಸಂದೇಹ. ಆದರೂ, ಧಾನ್ಯವನ್ನು ಮತ್ತು ಅದನ್ನು “ನಮ್ಮ ಅನುದಿನದ ಆಹಾರ”ವನ್ನಾಗಿ ಮಾರ್ಪಡಿಸುವ ಬುದ್ಧಿಶಕ್ತಿಯನ್ನು ಕೊಟ್ಟಿರುವ ನಮ್ಮ ಸೃಷ್ಟಿಕರ್ತನಿಗೆ ನಾವು ಆಭಾರಿಗಳಾಗಿರಬಲ್ಲೆವು.​—⁠ಮತ್ತಾಯ 6:11.

[ಪಾದಟಿಪ್ಪಣಿ]

^ ಪ್ಯಾರ. 10 ಬೈಬಲ್‌ ಸಮಯಗಳಲ್ಲಿ, ಸಂಸೋನ ಮತ್ತು ಇತರ ಇಸ್ರಾಯೇಲ್ಯರಂತೆ ಸೆರೆಹಿಡಿಯಲ್ಪಟ್ಟ ವಿರೋಧಿಗಳನ್ನು ಬೀಸುವ ಕೆಲಸಕ್ಕೆ ಹಚ್ಚಲಾಯಿತು. (ನ್ಯಾಯಸ್ಥಾಪಕರು 16:21; ಪ್ರಲಾಪಗಳು 5:13) ಸ್ವತಂತ್ರರಾದ ಸ್ತ್ರೀಯರು ತಮ್ಮ ಸ್ವಂತ ಮನೆಯವರಿಗಾಗಿ ಮಾತ್ರ ಧಾನ್ಯವನ್ನು ಬೀಸುತ್ತಿದ್ದರು.​—⁠ಯೋಬ 31:10.

[ಪುಟ 23ರಲ್ಲಿರುವ ಚಿತ್ರ]

ಐಗುಪ್ತದ ಜೀನು ಬೀಸುಯಂತ್ರ

[ಕೃಪೆ]

Soprintendenza Archeologica per la Toscana, Firenze

[ಪುಟ 23ರಲ್ಲಿರುವ ಚಿತ್ರ]

ಪ್ರಾಣಿಗಳಿಂದ ನಡೆಸಲ್ಪಟ್ಟ ಬೀಸುಯಂತ್ರದಲ್ಲಿ, ಆಲಿವ್‌ ಹಣ್ಣುಗಳನ್ನು ಎಣ್ಣೆಗಾಗಿ ಜಜ್ಜುವುದು

[ಪುಟ 22ರಲ್ಲಿರುವ ಚಿತ್ರ ಕೃಪೆ]

From the Self-Pronouncing Edition of the Holy Bible, containing the King James and the Revised versions