ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಕರ್ತನಲ್ಲಿ ಶಕ್ತಿಯನ್ನು ಪಡೆದುಕೊಳ್ಳುತ್ತಾ ಮುಂದುವರಿಯಿರಿ’

‘ಕರ್ತನಲ್ಲಿ ಶಕ್ತಿಯನ್ನು ಪಡೆದುಕೊಳ್ಳುತ್ತಾ ಮುಂದುವರಿಯಿರಿ’

‘ಕರ್ತನಲ್ಲಿ ಶಕ್ತಿಯನ್ನು ಪಡೆದುಕೊಳ್ಳುತ್ತಾ ಮುಂದುವರಿಯಿರಿ’

“ಕರ್ತನಲ್ಲಿಯೂ ಆತನ ಅತ್ಯಧಿಕವಾದ ಬಲದಲ್ಲಿಯೂ ಶಕ್ತಿಯನ್ನು ಪಡೆದುಕೊಳ್ಳುತ್ತಾ ಮುಂದುವರಿಯಿರಿ.”​—⁠ಎಫೆಸ 6:​10, Nw.

ಸುಮಾರು 3,000 ವರ್ಷಗಳ ಹಿಂದೆ, ಕದನರಂಗದಲ್ಲಿ ಎರಡು ವಿರುದ್ಧ ಸೈನ್ಯಗಳ ನಡುವೆ ಇಬ್ಬರು ಯೋಧರು ಮುಖಾಮುಖಿಯಾಗಿ ಎದುರಾದರು. ಕಿರಿಯವನು ದಾವೀದನೆಂಬ ಹೆಸರಿನ ಕುರುಬನಾಗಿದ್ದಾನೆ. ಅವನೆದುರು ನಿಂತಿರುವವನು ಗೊಲ್ಯಾತನು. ಇವನು ಅಸಾಧಾರಣ ಬಲ ಹಾಗೂ ಎತ್ತರಕಾಯವಿರುವ ಪುರುಷನಾಗಿದ್ದಾನೆ. ಇವನ ಉಕ್ಕಿನ ಕವಚವು 57 ಕಿಲೊಗ್ರಾಮ್‌ಗಳಷ್ಟು ತೂಕವುಳ್ಳದ್ದಾಗಿದೆ, ಮತ್ತು ಅವನು ಬೃಹದಾಕಾರದ ಒಂದು ಈಟಿಯನ್ನೂ ದೊಡ್ಡ ಕತ್ತಿಯನ್ನೂ ಹೊತ್ತುಕೊಂಡಿದ್ದಾನೆ. ದಾವೀದನಾದರೋ ಯಾವುದೇ ರಕ್ಷಾಕವಚವನ್ನು ತೊಟ್ಟುಕೊಂಡಿಲ್ಲ, ಮತ್ತು ಅವನ ಬಳಿಯಿರುವ ಏಕಮಾತ್ರ ಆಯುಧವು ಒಂದು ಕವಣೆಯೇ. ತನ್ನ ವಿರುದ್ಧ ಹೋರಾಡಲು ಬಂದಿರುವ ಇಸ್ರಾಯೇಲ್ಯನು ಬರೀ ಯೌವನಸ್ಥ ಎಂಬುದನ್ನು ತಿಳಿದು ಫಿಲಿಷ್ಟಿಯ ದೈತ್ಯ ಗೊಲ್ಯಾತನಿಗೆ ತುಂಬ ಅವಮಾನವಾಗುತ್ತದೆ. (1 ಸಮುವೇಲ 17:42-44) ಉಭಯ ಪಕ್ಷಗಳಲ್ಲಿರುವ ಪ್ರೇಕ್ಷಕರಿಗೆ, ಈ ಹೋರಾಟದ ಫಲಿತಾಂಶವೇನು ಎಂಬುದು ಮೊದಲೇ ನಿರ್ಣಯಿಸಲ್ಪಟ್ಟಿರುವಂತೆ ಕಂಡುಬಂದಿರಬೇಕು. ಆದರೆ ಕದನದಲ್ಲಿ ಯಾವಾಗಲೂ ಬಲಶಾಲಿಗಳೇ ಜಯಶಾಲಿಗಳಾಗುವುದಿಲ್ಲ. (ಪ್ರಸಂಗಿ 9:11) ದಾವೀದನು ವಿಜೇತನಾದನು, ಏಕೆಂದರೆ ಅವನು ಯೆಹೋವನ ಬಲದ ಸಹಾಯದಿಂದ ಹೋರಾಡಿದನು. “ಯುದ್ಧಫಲವು ಯೆಹೋವನ ಕೈಯಲ್ಲಿದೆ” ಎಂದು ಅವನು ಹೇಳಿದನು. ಬೈಬಲ್‌ ವೃತ್ತಾಂತವು ದಾಖಲಿಸುವುದು: “ದಾವೀದನು ಕವಣೆಯ ಒಂದೇ ಕಲ್ಲಿನಿಂದ ಫಿಲಿಷ್ಟಿಯನಿಗಿಂತ ಹೆಚ್ಚು ಬಲಶಾಲಿಯಾಗಿ ಕಂಡುಬಂದನು.”​—⁠1 ಸಮುವೇಲ 17:​47, 50, NW.

2 ಕ್ರೈಸ್ತರು ಶಾರೀರಿಕ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ. ಅವರು ಎಲ್ಲರ ಸಂಗಡ ಸಮಾಧಾನದಿಂದ ಇರುವುದಾದರೂ, ತುಂಬ ಪ್ರಬಲರಾಗಿರುವ ಎದುರಾಳಿಗಳ ವಿರುದ್ಧ ಅವರು ಒಂದು ಆಧ್ಯಾತ್ಮಿಕ ಕದನದಲ್ಲಿ ಒಳಗೂಡುತ್ತಾರೆ. (ರೋಮಾಪುರ 12:18) ಎಫೆಸದವರಿಗೆ ಬರೆದ ತನ್ನ ಪತ್ರದ ಕೊನೆಯ ಅಧ್ಯಾಯದಲ್ಲಿ ಪೌಲನು, ಪ್ರತಿಯೊಬ್ಬ ಕ್ರೈಸ್ತನು ಒಳಗೂಡಿರುವಂಥ ಒಂದು ಹೋರಾಟದ ಕುರಿತು ವರ್ಣಿಸುತ್ತಾನೆ. ಅವನು ಬರೆದುದು: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.”​—⁠ಎಫೆಸ 6:⁠12.

3 ಈ “ದುರಾತ್ಮಗಳ ಸೇನೆ”ಯು, ಯೆಹೋವ ದೇವರೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡಲು ಬಯಸುವ ಸೈತಾನನು ಮತ್ತು ದೆವ್ವಗಳಿಂದ ರಚಿತವಾಗಿದೆ. ಇವರು ನಮಗಿಂತಲೂ ಹೆಚ್ಚು ಬಲಶಾಲಿಗಳಾಗಿರುವುದರಿಂದ ನಾವು ಸಹ ದಾವೀದನಿದ್ದ ಸನ್ನಿವೇಶದಲ್ಲೇ ಇದ್ದೇವೆ. ಮತ್ತು ದೇವರ ಬಲದ ಮೇಲೆ ಹೊಂದಿಕೊಳ್ಳದಿದ್ದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯಲಾರೆವು. ಆದುದರಿಂದಲೇ ಪೌಲನು ನಮ್ಮನ್ನು ಹೀಗೆ ಉತ್ತೇಜಿಸುತ್ತಾನೆ: “ಕರ್ತನಲ್ಲಿಯೂ ಆತನ ಅತ್ಯಧಿಕವಾದ ಬಲದಲ್ಲಿಯೂ ಶಕ್ತಿಯನ್ನು ಪಡೆದುಕೊಳ್ಳುತ್ತಾ ಮುಂದುವರಿಯಿರಿ.” (ಎಫೆಸ 6:​10, NW) ಅಪೊಸ್ತಲನು ಈ ಸಲಹೆಯನ್ನು ಕೊಟ್ಟ ಬಳಿಕ, ಹೋರಾಟದಲ್ಲಿ ಜಯಶಾಲಿಗಳಾಗಲು ನಮ್ಮನ್ನು ಶಕ್ತರನ್ನಾಗಿ ಮಾಡುವಂಥ ಆಧ್ಯಾತ್ಮಿಕ ಒದಗಿಸುವಿಕೆಗಳು ಹಾಗೂ ಕ್ರೈಸ್ತ ಗುಣಗಳನ್ನು ವರ್ಣಿಸುತ್ತಾನೆ.​—⁠ಎಫೆಸ 6:​11-17.

4 ನಮ್ಮ ಶತ್ರುವಿನ ತಾಕತ್ತು ಹಾಗೂ ತಂತ್ರೋಪಾಯಗಳ ಕುರಿತು ಶಾಸ್ತ್ರವಚನಗಳು ಏನು ಹೇಳುತ್ತವೆ ಎಂಬುದನ್ನು ನಾವೀಗ ವಿಶ್ಲೇಷಿಸೋಣ. ತದನಂತರ, ನಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ನಾವು ಉಪಯೋಗಿಸಬೇಕಾದ ರಕ್ಷಣಾತ್ಮಕ ವಿಧವನ್ನು ಪರಿಗಣಿಸುವೆವು. ನಾವು ಯೆಹೋವನ ಸೂಚನೆಗಳನ್ನು ಅನುಸರಿಸುವಲ್ಲಿ, ವೈರಿಗಳು ನಮ್ಮ ವಿರುದ್ಧ ಮೇಲುಗೈ ಪಡೆಯುವುದಿಲ್ಲ ಎಂಬ ವಿಷಯದಲ್ಲಿ ನಾವು ದೃಢಭರವಸೆಯಿಂದಿರಸಾಧ್ಯವಿದೆ.

ದುರಾತ್ಮಗಳ ಸೇನೆಯ ವಿರುದ್ಧ ಹೋರಾಟ

5 ‘ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆ ನಾವು ಹೋರಾಡ’ಬೇಕಾಗಿದೆ ಎಂದು ಪೌಲನು ವಿವರಿಸುತ್ತಾನೆ. ಅತಿ ಮುಖ್ಯ ದುರಾತ್ಮನು “ದೆವ್ವಗಳ ಒಡೆಯ”ನಾಗಿರುವ ಪಿಶಾಚನಾದ ಸೈತಾನನೇ ಆಗಿದ್ದಾನೆ ಎಂಬುದಂತೂ ನಿಶ್ಚಯ. (ಮತ್ತಾಯ 12:24-26) ಮೂಲ ಭಾಷೆಯಲ್ಲಿ ಬೈಬಲು ನಮ್ಮ ಹೋರಾಟವನ್ನು ಕುಸ್ತಿಗೆ ಅಥವಾ ಕೈಕೈ ಮಿಲಾಯಿಸಿ ನಡೆಸುವ ಹೋರಾಟಕ್ಕೆ ಹೋಲಿಸುತ್ತದೆ. ಪುರಾತನ ಗ್ರೀಸ್‌ನ ಕುಸ್ತಿಯ ಸ್ಪರ್ಧೆಗಳಲ್ಲಿ, ಪ್ರತಿಯೊಬ್ಬ ಸ್ಪರ್ಧಾಳುವೂ ತನ್ನ ಎದುರಾಳಿಯನ್ನು ನೆಲಕ್ಕೆ ಕೆಡವುವ ಸಲುವಾಗಿ ಅವನ ಸಮತೋಲನವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದನು. ತದ್ರೀತಿಯಲ್ಲಿ, ನಾವು ನಮ್ಮ ಆಧ್ಯಾತ್ಮಿಕ ಸಮತೋಲನವನ್ನು ಕಳೆದುಕೊಳ್ಳುವಂತೆ ಪಿಶಾಚನು ಬಯಸುತ್ತಾನೆ. ನಮಗೆ ಇದಾಗುವಂತೆ ಸೈತಾನನು ಹೇಗೆ ಮಾಡಬಲ್ಲನು?

6 ಪಿಶಾಚನು ಒಂದು ಸರ್ಪದಂತೆ, ಗರ್ಜಿಸುತ್ತಿರುವ ಸಿಂಹದಂತೆ, ಅಥವಾ ಪ್ರಕಾಶರೂಪವುಳ್ಳ ದೇವದೂತನಂತೆಯೂ ಕ್ರಿಯೆಗೈಯಬಹುದು. (2 ಕೊರಿಂಥ 11:3, 14; 1 ಪೇತ್ರ 5:8) ನಮ್ಮನ್ನು ಹಿಂಸಿಸಲಿಕ್ಕಾಗಿ ಅಥವಾ ನಿರುತ್ತೇಜಿಸಲಿಕ್ಕಾಗಿ ಅವನು ಮಾನವರನ್ನು ಉಪಯೋಗಿಸಬಲ್ಲನು. (ಪ್ರಕಟನೆ 2:10) ಇಡೀ ಲೋಕವು ಸೈತಾನನ ಅಧಿಕಾರದ ಕೆಳಗಿರುವುದರಿಂದ, ನಮ್ಮನ್ನು ಪಾಶದಲ್ಲಿ ಸಿಕ್ಕಿಸಲಿಕ್ಕಾಗಿ ಅವನು ಲೌಕಿಕ ಬಯಕೆಗಳು ಹಾಗೂ ಆಕರ್ಷಣೆಗಳನ್ನು ಪೂರ್ಣ ರೀತಿಯಲ್ಲಿ ಉಪಯೋಗಿಸಬಲ್ಲನು. (2 ತಿಮೊಥೆಯ 2:26; 1 ಯೋಹಾನ 2:16; 5:19) ಅವನು ಹವ್ವಳನ್ನು ವಂಚಿಸಿದಂತೆಯೇ ನಮ್ಮನ್ನು ತಪ್ಪುದಾರಿಗೆ ಎಳೆಯಲಿಕ್ಕಾಗಿ ಲೌಕಿಕ ಅಥವಾ ಧರ್ಮಭ್ರಷ್ಟ ಆಲೋಚನೆಯನ್ನು ಬಳಸಬಲ್ಲನು.​—⁠1 ತಿಮೊಥೆಯ 2:⁠14.

7 ಸೈತಾನನ ಹಾಗೂ ಅವನ ದೆವ್ವಗಳ ಆಯುಧಗಳು ಮತ್ತು ಶಕ್ತಿಯು ತುಂಬ ಪರಿಣಾಮಕಾರಿಯಾಗಿ ಕಂಡುಬರುವುದಾದರೂ, ಅವರಿಗೆ ಅವರದ್ದೇ ಆದ ಇತಿಮಿತಿಗಳಿವೆ. ನಮ್ಮ ಸ್ವರ್ಗೀಯ ಪಿತನಿಗೆ ಅಸಂತೋಷವನ್ನು ಉಂಟುಮಾಡುವಂಥ ದುಷ್ಟ ಕಾರ್ಯಗಳನ್ನು ಮಾಡುವಂತೆ ಈ ದುರಾತ್ಮಗಳು ನಮ್ಮನ್ನು ಬಲಾತ್ಕರಿಸಲಾರವು. ನಾವು ಇಚ್ಛಾಸ್ವಾತಂತ್ರ್ಯವಿರುವ ವ್ಯಕ್ತಿಗಳಾಗಿದ್ದೇವೆ, ಮತ್ತು ನಮ್ಮ ಆಲೋಚನೆಗಳು ಹಾಗೂ ಕ್ರಿಯೆಗಳ ಮೇಲೆ ನಮಗೆ ಹಿಡಿತವಿದೆ. ಅಷ್ಟುಮಾತ್ರವಲ್ಲ, ನಾವು ಒಂಟಿಯಾಗಿ ಹೋರಾಡುವುದಿಲ್ಲ. ಎಲೀಷನ ಕಾಲದಲ್ಲಿ ಸತ್ಯವಾಗಿದ್ದಂಥ ಸಂಗತಿಯೇ ಇಂದು ನಮ್ಮ ದಿನದಲ್ಲಿಯೂ ಸತ್ಯವಾಗಿದೆ: “ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” (2 ಅರಸುಗಳು 6:16) ನಾವು ನಮ್ಮನ್ನು ದೇವರಿಗೆ ಅಧೀನಪಡಿಸಿಕೊಂಡು, ಪಿಶಾಚನನ್ನು ಎದುರಿಸುವಲ್ಲಿ, ಅವನು ನಮ್ಮನ್ನು ಬಿಟ್ಟು ಓಡಿಹೋಗುವನು ಎಂದು ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ.​—⁠ಯಾಕೋಬ 4:⁠7.

ಸೈತಾನನ ಯೋಚನೆಗಳ ಅರಿವುಳ್ಳವರು

8 ಸೈತಾನನ ಯೋಚನೆಗಳ ಬಗ್ಗೆ ನಾವು ಅಜ್ಞಾನಿಗಳೇನಲ್ಲ, ಏಕೆಂದರೆ ಶಾಸ್ತ್ರವಚನಗಳು ನಮಗೆ ಅವನ ಮೂಲಭೂತ ತಂತ್ರೋಪಾಯಗಳನ್ನು ಬಯಲುಪಡಿಸುತ್ತವೆ. (2 ಕೊರಿಂಥ 2:11) ನೀತಿವಂತನಾಗಿದ್ದ ಯೋಬನ ವಿರುದ್ಧ ಪಿಶಾಚನು ಗುರುತರವಾದ ಆರ್ಥಿಕ ಸಮಸ್ಯೆಗಳನ್ನು, ಪ್ರಿಯರ ಮರಣವನ್ನು, ಕುಟುಂಬದ ವಿರೋಧವನ್ನು, ಶಾರೀರಿಕ ಕಷ್ಟಾನುಭವವನ್ನು, ಹಾಗೂ ಸುಳ್ಳು ಸ್ನೇಹಿತರಿಂದ ನಿರಾಧಾರವಾದ ಟೀಕೆಯನ್ನು ಉಪಯೋಗಿಸಿದನು. ಯೋಬನು ಖಿನ್ನತೆಯನ್ನು ಅನುಭವಿಸಿದನು ಮತ್ತು ದೇವರು ತನ್ನನ್ನು ತೊರೆದುಬಿಟ್ಟಿದ್ದಾನೆ ಎಂಬ ಅನಿಸಿಕೆಯೂ ಅವನಿಗಾಯಿತು. (ಯೋಬ 10:​1, 2) ಇಂದು ಸೈತಾನನು ನೇರವಾಗಿ ಇಂಥ ಸಮಸ್ಯೆಗಳನ್ನು ಉಂಟುಮಾಡದಿರಬಹುದಾದರೂ, ಇಂಥ ಕಷ್ಟತೊಂದರೆಗಳು ಅನೇಕ ಕ್ರೈಸ್ತರನ್ನು ಬಾಧಿಸುತ್ತಿವೆ, ಮತ್ತು ಸೈತಾನನು ಇವುಗಳನ್ನು ತನ್ನ ಪ್ರಯೋಜನಕ್ಕಾಗಿ ಬಳಸಿಕೊಳ್ಳಸಾಧ್ಯವಿದೆ.

9 ಈ ಅಂತ್ಯಕಾಲದಲ್ಲಿ ಆಧ್ಯಾತ್ಮಿಕ ಅಪಾಯಗಳು ತೀವ್ರಗತಿಯಲ್ಲಿ ಹೆಚ್ಚಿವೆ. ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಆಧ್ಯಾತ್ಮಿಕ ಗುರಿಗಳ ಸ್ಥಾನವನ್ನು ತೆಗೆದುಕೊಳ್ಳುತ್ತಿರುವಂಥ ಒಂದು ಲೋಕದಲ್ಲಿ ನಾವು ಬದುಕುತ್ತಿದ್ದೇವೆ. ವಾರ್ತಾಮಾಧ್ಯಮವು ನಿಷಿದ್ಧ ಲೈಂಗಿಕತೆಯನ್ನು ಒಂದು ಮನೋವೇದನೆಯ ಬದಲಾಗಿ ಸಂತೋಷದ ಮೂಲವಾಗಿ ಸತತವಾಗಿ ಚಿತ್ರಿಸುತ್ತದೆ. ಮತ್ತು ಹೆಚ್ಚೆಚ್ಚು ಜನರು ‘ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರಾಗಿ’ ಪರಿಣಮಿಸಿದ್ದಾರೆ. (2 ತಿಮೊಥೆಯ 3:1-5) ‘ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನಾವು ಹೋರಾಟವನ್ನು’ ನಡೆಸದಿದ್ದರೆ, ಈ ರೀತಿಯ ಆಲೋಚನೆಯು ನಮ್ಮ ಆಧ್ಯಾತ್ಮಿಕ ಸಮತೋಲನಕ್ಕೆ ಬೆದರಿಕೆಯನ್ನು ಒಡ್ಡಸಾಧ್ಯವಿದೆ.​—⁠ಯೂದ 3.

10 ಸೈತಾನನ ಅತ್ಯಂತ ಯಶಸ್ವಿಕರ ತಂತ್ರೋಪಾಯಗಳಲ್ಲಿ ಒಂದು, ಈ ಲೋಕದಲ್ಲಿ ಮತ್ತು ಅದರ ಪ್ರಾಪಂಚಿಕ ಬೆನ್ನಟ್ಟುವಿಕೆಗಳಲ್ಲಿ ನಾವು ಸಂಪೂರ್ಣವಾಗಿ ತಲ್ಲೀನರಾಗುವಂತೆ ಮಾಡಿಬಿಡುವುದೇ ಆಗಿದೆ. ಬೀಜಬಿತ್ತುವವನ ಕುರಿತಾದ ಸಾಮ್ಯದಲ್ಲಿ, ಕೆಲವೊಮ್ಮೆ “ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ [ರಾಜ್ಯದ] ಆ ವಾಕ್ಯವನ್ನು ಅಡಗಿಸಿಬಿಡು”ತ್ತದೆ ಎಂದು ಯೇಸು ಎಚ್ಚರಿಕೆ ನೀಡಿದನು. (ಮತ್ತಾಯ 13:18, 22) ಇಲ್ಲಿ “ಅಡಗಿಸಿಬಿಡು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು “ಸಂಪೂರ್ಣವಾಗಿ ಹಿಸುಕಿಹಾಕು”ವುದನ್ನು ಅರ್ಥೈಸುತ್ತದೆ.

11 ಉಷ್ಣವಲಯದ ಕಾಡುಗಳಲ್ಲಿ ಒಬ್ಬನು ಸ್ಟ್ರಾಂಗ್ಲರ್‌ (ಹಿಸುಕಿಹಾಕುವ) ಅಂಜೂರ ಬಳ್ಳಿಯನ್ನು ನೋಡಬಹುದು. ಇದು ನಿಧಾನವಾಗಿ ಬೆಳೆಯುತ್ತಿರುವಾಗ ಆಸರೆ ನೀಡುವಂಥ ಮರದ ಕಾಂಡಕ್ಕೆ ಸುತ್ತಿಕೊಳ್ಳುತ್ತದೆ. ಕಾಲಕ್ರಮೇಣ, ಈ ಬಳ್ಳಿಯು ಆಸರೆಯಾಗಿರುವ ಮರದ ಸುತ್ತಲೂ ಬೇರುಗಳನ್ನು ಬಿಡುತ್ತದೆ, ಮತ್ತು ಈ ಬೇರುಗಳು ದಿನೇ ದಿನೇ ಬಲಗೊಳ್ಳುತ್ತಾ ಹೋಗುತ್ತವೆ. ಸ್ಟ್ರಾಂಗ್ಲರ್‌ ಅಂಜೂರ ಬಳ್ಳಿಯ ಅನೇಕಾನೇಕ ಬೇರುಗಳು, ಆಸರೆಯಾಗಿರುವ ಮರದ ಬುಡದ ಮಣ್ಣಿನಲ್ಲಿರುವ ಬಹುತೇಕ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ, ಅದೇ ಸಮಯದಲ್ಲಿ ಈ ಬಳ್ಳಿಯ ಮೇಲ್ಚಪ್ಪರವು ಆ ಮರಕ್ಕೆ ಬೆಳಕೇ ದೊರಕದಿರುವಂತೆ ಮಾಡಿಬಿಡುತ್ತದೆ. ಕಟ್ಟಕಡೆಗೆ ಈ ಆಸರೆ ಮರವು ಸತ್ತುಹೋಗುತ್ತದೆ.

12 ತದ್ರೀತಿಯಲ್ಲಿ, ಈ ಪ್ರಪಂಚದ ಚಿಂತೆಗಳು ಮತ್ತು ಐಶ್ವರ್ಯ ಹಾಗೂ ಐಷಾರಾಮದ ಜೀವನ ಶೈಲಿಗಾಗಿರುವ ಹುಡುಕಾಟವು, ಕಾಲಕ್ರಮೇಣ ನಮ್ಮ ಸಮಯ ಹಾಗೂ ಶಕ್ತಿಯಲ್ಲಿ ಹೆಚ್ಚೆಚ್ಚನ್ನು ಕಬಳಿಸಿಬಿಡಸಾಧ್ಯವಿದೆ. ನಮ್ಮ ಗಮನವು ಲೋಕದ ವಸ್ತುಗಳ ಕಡೆಗೆ ಸೆಳೆಯಲ್ಪಟ್ಟಿರುವುದರಿಂದ, ನಾವು ಸುಲಭವಾಗಿಯೇ ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ಅಲಕ್ಷಿಸಿಬಿಡಬಹುದು ಹಾಗೂ ಕ್ರೈಸ್ತ ಕೂಟಗಳಿಗೆ ತಪ್ಪಿಸಿಕೊಳ್ಳುವುದನ್ನು ರೂಢಿಮಾಡಿಕೊಳ್ಳಬಹುದು ಮತ್ತು ಹೀಗೆ ಆಧ್ಯಾತ್ಮಿಕ ಪೋಷಣೆಯನ್ನು ಸಂಪೂರ್ಣವಾಗಿ ಕಡಿದುಹಾಕಬಹುದು. ಈಗ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಬದಲಾಗಿ ಪ್ರಾಪಂಚಿಕಭಾವದ ಗುರಿಗಳು ಆ ಸ್ಥಾನವನ್ನು ಆಕ್ರಮಿಸುತ್ತವೆ, ಮತ್ತು ಅಂತಿಮವಾಗಿ ನಾವು ಸೈತಾನನ ಪಾಶಕ್ಕೆ ಸುಲಭವಾಗಿ ಬಲಿಯಾಗುತ್ತೇವೆ.

ನಾವು ಸ್ಥಿರರಾಗಿ ನಿಲ್ಲುವ ಅಗತ್ಯವಿದೆ

13 “ಸೈತಾನನ ತಂತ್ರೋಪಾಯಗಳ” ವಿರುದ್ಧ ಸ್ಥಿರರಾಗಿ ನಿಲ್ಲುವಂತೆ ಪೌಲನು ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಿದನು. (ಎಫೆಸ 6:11) ನಾವು ಪಿಶಾಚನನ್ನೂ ಅವನ ದೆವ್ವಗಳನ್ನೂ ನಾಶಮಾಡಲಾರೆವು ಎಂಬುದಂತೂ ಸತ್ಯ. ಈ ಕೆಲಸವನ್ನು ದೇವರು ಯೇಸು ಕ್ರಿಸ್ತನಿಗೆ ಒಪ್ಪಿಸಿದ್ದಾನೆ. (ಪ್ರಕಟನೆ 20:​1, 2) ಆದರೂ, ಸೈತಾನನು ತೆಗೆದುಹಾಕಲ್ಪಡುವ ತನಕ, ಅವನ ಆಕ್ರಮಣಗಳು ನಮ್ಮನ್ನು ಸಹಾಯಶೂನ್ಯರಾಗಿ ಮಾಡದಿರುವಂತೆ ನಾವು ಸ್ಥಿರರಾಗಿ ನಿಲ್ಲುವ ಅಗತ್ಯವಿದೆ.

14 ಸೈತಾನನ ವಿರುದ್ಧ ಸ್ಥಿರರಾಗಿ ನಿಲ್ಲುವುದರ ಆವಶ್ಯಕತೆಯನ್ನು ಅಪೊಸ್ತಲ ಪೇತ್ರನು ಸಹ ಒತ್ತಿಹೇಳಿದನು. ಪೇತ್ರನು ಬರೆದುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.” (1 ಪೇತ್ರ 5:8, 9) ವಾಸ್ತವದಲ್ಲಿ, ಪಿಶಾಚನು ಗರ್ಜಿಸುವ ಸಿಂಹದೋಪಾದಿ ಆಕ್ರಮಿಸುವಾಗ ನಾವು ಸ್ಥಿರರಾಗಿ ನಿಲ್ಲಬೇಕಾದರೆ, ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಬೆಂಬಲವು ಅತ್ಯಾವಶ್ಯಕವಾಗಿದೆ.

15 ಆಫ್ರಿಕದ ಹುಲ್ಲುಗಾಡುಗಳಲ್ಲಿ ಸಮೀಪದಲ್ಲಿರುವ ಒಂದು ಸಿಂಹವು ಗರ್ಜಿಸುವಾಗ, ಅಲ್ಲಿರುವ ಜಿಂಕೆಗಳು ಇದಕ್ಕೆ ಪ್ರತಿಕ್ರಿಯೆಯಲ್ಲಿ ಅಪಾಯದಿಂದ ದೂರವಾಗುವ ವರೆಗೆ ಅತ್ಯಂತ ವೇಗವಾಗಿ ಓಡಿಹೋಗಬಹುದು. ಆನೆಗಳಾದರೋ ಪರಸ್ಪರ ಬೆಂಬಲಕ್ಕೆ ಒಂದು ಮಾದರಿಯನ್ನು ಒದಗಿಸುತ್ತವೆ. ಆನೆಗಳು​—⁠ಆಫ್ರಿಕ ಮತ್ತು ಏಷ್ಯದ ಸೌಮ್ಯ ದೈತ್ಯಗಳು (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುವುದು: “ಆನೆಗಳ ಹಿಂಡು ಸರ್ವಸಾಮಾನ್ಯವಾಗಿ ಉಪಯೋಗಿಸುವ ಸಂರಕ್ಷಣಾ ವಿಧವು ಯಾವುದೆಂದರೆ, ಅವು ಒಟ್ಟುಗೂಡಿ ಒಂದು ವೃತ್ತಾಕಾರದಲ್ಲಿ ನಿಂತುಕೊಳ್ಳುತ್ತವೆ; ಪ್ರಾಯದ ಆನೆಗಳು ಬೆದರಿಕೆಯ ದಿಕ್ಕಿನಲ್ಲಿ ಹೊರಮುಖವಾಗಿ ನಿಂತಿರುತ್ತವೆ ಮತ್ತು ಮರಿಗಳು ಆ ವರ್ತುಲಾಕಾರದೊಳಗೆ ಸಂರಕ್ಷಿಸಲ್ಪಡುತ್ತವೆ.” ಈ ರೀತಿಯ ಬಲ ಹಾಗೂ ಬೆಂಬಲವು ತೋರಿಸಲ್ಪಡುವಾಗ, ಸಿಂಹಗಳು ಮರಿಯಾನೆಗಳ ಮೇಲೆ ಆಕ್ರಮಣ ಮಾಡುವುದು ಸಹ ತುಂಬ ಅಪರೂಪ.

16 ಸೈತಾನನಿಂದ ಹಾಗೂ ಅವನ ದೆವ್ವಗಳಿಂದ ಬೆದರಿಕೆಗೊಳಗಾಗುವಾಗ, ನಂಬಿಕೆಯಲ್ಲಿ ದೃಢರಾಗಿ ನಿಂತಿರುವ ನಮ್ಮ ಸಹೋದರರೊಂದಿಗೆ ನಾವು ಸಹ ತದ್ರೀತಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಒಟ್ಟಿಗೆ ಉಳಿಯುವ ಅಗತ್ಯವಿದೆ. ರೋಮ್‌ನಲ್ಲಿ ಪೌಲನು ಸೆರೆಯಲ್ಲಿದ್ದಾಗ, ಕೆಲವು ಜೊತೆ ಕ್ರೈಸ್ತರು ತನಗೆ “ಬಲಪಡಿಸುವ ಸಹಾಯಕ”ವಾಗಿ (NW) ಪರಿಣಮಿಸಿದರು ಎಂಬುದನ್ನು ಅವನು ಒಪ್ಪಿಕೊಂಡನು. (ಕೊಲೊಸ್ಸೆ 4:10, 11) “ಬಲಪಡಿಸುವ ಸಹಾಯಕ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿ ಒಂದೇ ಒಂದು ಸಲ ಕಂಡುಬರುತ್ತದೆ. ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ಗನುಸಾರ, “ಈ ಪದದ ಕ್ರಿಯಾರೂಪವು ಕೆರಳಿಕೆಯನ್ನು ಶಮನಗೊಳಿಸುವ ಔಷಧಗಳನ್ನು ಸೂಚಿಸುತ್ತದೆ.” ಉಪಶಮನ ನೀಡುವ ಮುಲಾಮಿನಂತೆ, ಯೆಹೋವನ ಪ್ರೌಢ ಆರಾಧಕರ ಬೆಂಬಲವು, ಭಾವನಾತ್ಮಕ ಅಥವಾ ಶಾರೀರಿಕ ಕಷ್ಟಾನುಭವದಿಂದ ಉಂಟುಮಾಡಲ್ಪಡುವ ನೋವನ್ನು ನಿವಾರಿಸಬಲ್ಲದು.

17 ಇಂದು ಜೊತೆ ಕ್ರೈಸ್ತರಿಂದ ಸಿಗುವ ಉತ್ತೇಜನವು, ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುವ ನಮ್ಮ ದೃಢನಿರ್ಧಾರವನ್ನು ಬಲಗೊಳಿಸಬಲ್ಲದು. ವಿಶೇಷವಾಗಿ ಕ್ರೈಸ್ತ ಹಿರಿಯರು ಆಧ್ಯಾತ್ಮಿಕ ಸಹಾಯವನ್ನು ಒದಗಿಸಲು ಉತ್ಸುಕರಾಗಿದ್ದಾರೆ. (ಯಾಕೋಬ 5:13-15) ನಂಬಿಗಸ್ತಿಕೆಗಾಗಿರುವ ಸಹಾಯಗಳಲ್ಲಿ, ಕ್ರಮವಾದ ಬೈಬಲ್‌ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಿಗೆ, ಸಮ್ಮೇಳನಗಳಿಗೆ, ಮತ್ತು ಅಧಿವೇಶನಗಳಿಗೆ ಹಾಜರಾಗುವುದೂ ಒಳಗೂಡಿದೆ. ದೇವರೊಂದಿಗಿನ ನಮ್ಮ ಸ್ವಂತ ಆಪ್ತ ಸಂಬಂಧವು, ಆತನಿಗೆ ನಂಬಿಗಸ್ತರಾಗಿ ಉಳಿಯಲು ನಮಗೆ ಸಹಾಯಮಾಡುತ್ತದೆ. ವಾಸ್ತವದಲ್ಲಿ, ನಾವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಲು ಬಯಸಬೇಕು. (1 ಕೊರಿಂಥ 10:31) ಸಹಜವಾಗಿಯೇ, ಯೆಹೋವನಿಗೆ ಮೆಚ್ಚಿಕೆಯಾಗುವಂಥ ಮಾರ್ಗದಲ್ಲಿ ಮುಂದುವರಿಯಲು ಆತನ ಮೇಲೆ ಪ್ರಾರ್ಥನಾಪೂರ್ವಕವಾಗಿ ಅವಲಂಬಿಸುವುದು ಅತ್ಯಗತ್ಯವಾಗಿದೆ.​—⁠ಕೀರ್ತನೆ 37:⁠5.

18 ಕೆಲವೊಮ್ಮೆ ನಾವು ಆಧ್ಯಾತ್ಮಿಕವಾಗಿ ದುರ್ಬಲರಾಗಿರುವ ಸಮಯದಲ್ಲೇ ಸೈತಾನನಿಂದ ಆಕ್ರಮಣಗಳು ಬರುತ್ತವೆ. ದುರ್ಬಲವಾಗಿರುವಂಥ ಒಂದು ಪ್ರಾಣಿಯ ಮೇಲೇ ಸಿಂಹವು ಥಟ್ಟನೆ ಎರಗುತ್ತದೆ. ಕುಟುಂಬದ ಸಮಸ್ಯೆಗಳು, ಆರ್ಥಿಕ ಮುಗ್ಗಟ್ಟು, ಅಥವಾ ಅಸ್ವಸ್ಥತೆಯು ನಮ್ಮ ಆಧ್ಯಾತ್ಮಿಕ ಬಲವನ್ನು ಬತ್ತಿಸಿಬಿಡಬಹುದು. ಆದರೆ ದೇವರಿಗೆ ಏನು ಮೆಚ್ಚಿಕೆಯಾಗಿದೆಯೋ ಅದನ್ನು ಮಾಡುವುದನ್ನು ನಾವು ನಿಲ್ಲಿಸದಿರೋಣ, ಏಕೆಂದರೆ ಪೌಲನು ಹೇಳಿದ್ದು: “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:10; ಗಲಾತ್ಯ 6:9; 2 ಥೆಸಲೋನಿಕ 3:13) ಅವನು ಏನನ್ನು ಅರ್ಥೈಸಿದನು? ಒಂದುವೇಳೆ ನಾವು ಬಲಕ್ಕಾಗಿ ಯೆಹೋವನ ಕಡೆಗೆ ತಿರುಗುವಲ್ಲಿ, ದೇವರ ಶಕ್ತಿಯು ನಮ್ಮ ಮಾನವ ನಿರ್ಬಲತೆಗಳನ್ನು ತಾಳಿಕೊಳ್ಳುವಂತೆ ಸಹಾಯಮಾಡುವುದು ಎಂಬುದು ಅವನ ಮಾತುಗಳ ಅರ್ಥವಾಗಿತ್ತು. ಗೊಲ್ಯಾತನ ಮೇಲೆ ದಾವೀದನು ಗಳಿಸಿದ ಜಯವು, ದೇವರು ತನ್ನ ಜನರನ್ನು ಬಲಪಡಿಸಬಲ್ಲನು ಮತ್ತು ಬಲಪಡಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ತೀವ್ರವಾದ ಬಿಕ್ಕಟ್ಟಿನ ಸಮಯಗಳಲ್ಲಿ ತಮಗೆ ದೇವರ ಬಲದಾಯಕ ಹಸ್ತದ ಅನುಭವವಾಗಿದೆ ಎಂಬುದಕ್ಕೆ ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಪುರಾವೆಯನ್ನು ನೀಡಬಲ್ಲರು.​—⁠ದಾನಿಯೇಲ 10:⁠19.

19 ದೇವರು ತಮಗೆ ಕೊಟ್ಟ ಬೆಂಬಲದ ಕುರಿತು ಒಬ್ಬ ವಿವಾಹಿತ ದಂಪತಿಯು ಬರೆದುದು: “ಅನೇಕ ವರ್ಷಗಳಿಂದ ನಾವು ಪತಿಪತ್ನಿಯೋಪಾದಿ ಯೆಹೋವನ ಸೇವೆಮಾಡಿದ್ದೇವೆ ಮತ್ತು ಅನೇಕ ಆಶೀರ್ವಾದಗಳನ್ನು ಆನಂದಿಸಿದ್ದೇವೆ ಹಾಗೂ ಅನೇಕ ಒಳ್ಳೇ ಜನರ ಪರಿಚಯ ನಮಗಾಗಿದೆ. ಕಷ್ಟದೆಸೆಗಳನ್ನು ಯಶಸ್ವಿಕರವಾಗಿ ತಾಳಿಕೊಳ್ಳಲಿಕ್ಕಾಗಿ ನಾವು ಯೆಹೋವನಿಂದ ತರಬೇತಿಗೊಳಿಸಲ್ಪಟ್ಟಿದ್ದೇವೆ ಮತ್ತು ಬಲಪಡಿಸಲ್ಪಟ್ಟಿದ್ದೇವೆ. ಯೋಬನಂತೆ, ಯಾಕೆ ಈ ಎಲ್ಲಾ ಸಂಗತಿಗಳು ನಮಗೆ ಸಂಭವಿಸುತ್ತವೆ ಎಂಬುದನ್ನು ನಾವು ಯಾವಾಗಲೂ ಅರ್ಥಮಾಡಿಕೊಳ್ಳಲಿಲ್ಲವಾದರೂ, ನಮಗೆ ಸಹಾಯಮಾಡಲು ಯೆಹೋವನು ಯಾವಾಗಲೂ ಸಿದ್ಧನಾಗಿದ್ದಾನೆ ಎಂಬುದು ನಮಗೆ ಗೊತ್ತಿತ್ತು.”

20 ತನ್ನ ನಂಬಿಗಸ್ತ ಜನರನ್ನು ಬೆಂಬಲಿಸಲು ಮತ್ತು ಬಲಪಡಿಸಲು ಯೆಹೋವನು ಮೋಟುಗೈಯವನಲ್ಲ. (ಯೆಶಾಯ 59:⁠1) ಕೀರ್ತನೆಗಾರನಾದ ದಾವೀದನು ಹಾಡಿದ್ದು: “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.” (ಕೀರ್ತನೆ 145:14) ಖಂಡಿತವಾಗಿಯೂ ನಮ್ಮ ಸ್ವರ್ಗೀಯ ಪಿತನು ‘ಅನುದಿನವೂ ನಮ್ಮ ಭಾರವನ್ನು ಹೊರುತ್ತಾನೆ’ ಮತ್ತು ನಮಗೆ ನಿಜವಾಗಿಯೂ ಯಾವುದರ ಆವಶ್ಯಕತೆಯಿದೆಯೋ ಅದನ್ನು ಒದಗಿಸುತ್ತಾನೆ.​—⁠ಕೀರ್ತನೆ 68:⁠19.

ನಮಗೆ ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚದ’ ಅಗತ್ಯವಿದೆ

21 ಸೈತಾನನ ವಿಧಾನಗಳಲ್ಲಿ ಕೆಲವನ್ನು ನಾವು ಪರಿಗಣಿಸಿದ್ದೇವೆ ಮತ್ತು ಅವನ ಆಕ್ರಮಣಗಳ ಎದುರಿನಲ್ಲಿ ನಾವು ಸ್ಥಿರರಾಗಿ ನಿಲ್ಲುವ ಅಗತ್ಯವಿದೆ ಎಂಬುದನ್ನು ಅವಲೋಕಿಸಿದ್ದೇವೆ. ನಮ್ಮ ನಂಬಿಕೆಯನ್ನು ಯಶಸ್ವಿಕರವಾಗಿ ಸಂರಕ್ಷಿಸಲಿಕ್ಕಾಗಿ, ಈಗ ನಾವು ಇನ್ನೊಂದು ಅತ್ಯಾವಶ್ಯಕ ಒದಗಿಸುವಿಕೆಯನ್ನು ಪರಿಗಣಿಸಬೇಕು. ಎಫೆಸದವರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು, ಸೈತಾನನ ತಂತ್ರೋಪಾಯಗಳ ವಿರುದ್ಧ ಸ್ಥಿರರಾಗಿ ನಿಲ್ಲುವುದರಲ್ಲಿ ಮತ್ತು ದುರಾತ್ಮ ಸೇನೆಗಳ ವಿರುದ್ಧ ನಡೆಸುವ ನಮ್ಮ ಹೋರಾಟದಲ್ಲಿ ಸಫಲರಾಗುವುದರಲ್ಲಿ ಒಳಗೂಡಿರುವ ಒಂದು ಅತ್ಯಾವಶ್ಯಕ ಅಂಶವನ್ನು ಎರಡು ಬಾರಿ ತಿಳಿಸಿದನು. ಪೌಲನು ಬರೆದುದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ಸಂಪೂರ್ಣ ರಕ್ಷಾಕವಚವನ್ನು,” NW] ಧರಿಸಿಕೊಳ್ಳಿರಿ. . . . ಕಠಿನ ಯುದ್ಧವು ನಡೆಯುವ ದಿವಸದಲ್ಲಿ ಆ ವೈರಿಗಳನ್ನು ಎದುರಿಸುವದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ಜಯಶಾಲಿಗಳಾಗಿ ನಿಲ್ಲುವದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ಸಂಪೂರ್ಣ ರಕ್ಷಾಕವಚವನ್ನು,” NW] ತೆಗೆದುಕೊಳ್ಳಿರಿ.”​—⁠ಎಫೆಸ 6:11, 13.

22 ಹೌದು, ನಾವು “ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿ”ಕೊಳ್ಳುವ ಅಗತ್ಯವಿದೆ. ಪೌಲನು ಎಫೆಸದವರಿಗೆ ತನ್ನ ಪತ್ರವನ್ನು ಬರೆದಾಗ, ಒಬ್ಬ ರೋಮನ್‌ ಸೈನಿಕನು ಅವನಿಗೆ ಕಾವಲಿದ್ದನು. ಈ ಸೈನಿಕನು ಕೆಲವೊಮ್ಮೆ ಸಂಪೂರ್ಣ ರಕ್ಷಾಕವಚವನ್ನು ಧರಿಸಿದ್ದಿರಬಹುದು. ಆದರೂ, ಯೆಹೋವನ ಪ್ರತಿಯೊಬ್ಬ ಸೇವಕನಿಗೆ ಅತ್ಯಾವಶ್ಯಕವಾಗಿ ಅಗತ್ಯವಿರುವ ಆಧ್ಯಾತ್ಮಿಕ ರಕ್ಷಾಕವಚದ ಕುರಿತು ಚರ್ಚಿಸುವಂತೆ ಅಪೊಸ್ತಲನು ಪ್ರಚೋದಿತನಾದದ್ದು ದೈವಿಕ ಪ್ರೇರಣೆಯಿಂದಲೇ.

23 ಈ ದೇವದತ್ತ ರಕ್ಷಾಕವಚದಲ್ಲಿ, ಒಬ್ಬ ಕ್ರೈಸ್ತನಿಗಿರಬೇಕಾದ ಗುಣಗಳು ಹಾಗೂ ಯೆಹೋವನಿಂದ ಮಾಡಲ್ಪಟ್ಟ ಆಧ್ಯಾತ್ಮಿಕ ಒದಗಿಸುವಿಕೆಗಳು ಒಳಗೂಡಿವೆ. ಮುಂದಿನ ಲೇಖನದಲ್ಲಿ ನಾವು ಆಧ್ಯಾತ್ಮಿಕ ರಕ್ಷಾಕವಚದ ಪ್ರತಿಯೊಂದು ಭಾಗವನ್ನೂ ಕೂಲಂಕಷವಾಗಿ ಪರಿಗಣಿಸುವೆವು. ನಮ್ಮ ಆಧ್ಯಾತ್ಮಿಕ ಯುದ್ಧಕ್ಕೆ ನಾವು ಎಷ್ಟರಮಟ್ಟಿಗೆ ಸಿದ್ಧರಾಗಿದ್ದೇವೆ ಎಂಬುದನ್ನು ನಿರ್ಧರಿಸಲು ಇದು ನಮ್ಮನ್ನು ಶಕ್ತರನ್ನಾಗಿ ಮಾಡುವುದು. ಅದೇ ಸಮಯದಲ್ಲಿ, ಪಿಶಾಚನಾದ ಸೈತಾನನನ್ನು ಪ್ರತಿರೋಧಿಸುವುದರಲ್ಲಿ ಸಫಲರಾಗಲು ಯೇಸು ಕ್ರಿಸ್ತನ ಅತ್ಯುತ್ತಮ ಮಾದರಿಯು ನಮಗೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನೂ ನೋಡಲಿರುವೆವು.

ನೀವು ಹೇಗೆ ಉತ್ತರಿಸುವಿರಿ?

• ಎಲ್ಲಾ ಕ್ರೈಸ್ತರಿಗೆ ಯಾವ ಹೋರಾಟವಿದೆ?

• ಸೈತಾನನ ತಂತ್ರೋಪಾಯಗಳಲ್ಲಿ ಕೆಲವೊಂದನ್ನು ವರ್ಣಿಸಿರಿ.

• ಜೊತೆ ಕ್ರೈಸ್ತರ ಬೆಂಬಲವು ನಮ್ಮನ್ನು ಹೇಗೆ ಬಲಪಡಿಸಬಲ್ಲದು?

• ನಾವು ಯಾರ ಬಲದ ಮೇಲೆ ಅವಲಂಬಿಸಬೇಕಾಗಿದೆ, ಮತ್ತು ಏಕೆ?

[ಅಧ್ಯಯನ ಪ್ರಶ್ನೆಗಳು]

1. (ಎ) ಸುಮಾರು 3,000 ವರ್ಷಗಳ ಹಿಂದೆ ಯಾವ ಅಸಾಧಾರಣ ಹೋರಾಟವು ನಡೆಯಿತು? (ಬಿ) ದಾವೀದನು ಏಕೆ ವಿಜೇತನಾಗಿ ರುಜುವಾದನು?

2. ಯಾವ ರೀತಿಯ ಹೋರಾಟದಲ್ಲಿ ಕ್ರೈಸ್ತರು ಪಾಲ್ಗೊಳ್ಳುತ್ತಾರೆ?

3. ಎಫೆಸ 6:10ಕ್ಕನುಸಾರ, ನಮ್ಮ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳಲು ನಮಗೆ ಯಾವುದರ ಅಗತ್ಯವಿದೆ?

4. ಈ ಲೇಖನದಲ್ಲಿ ಯಾವ ಎರಡು ಮುಖ್ಯ ಅಂಶಗಳನ್ನು ನಾವು ಪರಿಗಣಿಸುವೆವು?

5. ಎಫೆಸ 6:12ರ ಮೂಲ ಭಾಷೆಯಲ್ಲಿ ಈ ಕಾದಾಟವು ಚಿತ್ರಿಸಲ್ಪಟ್ಟಿರುವ ವಿಧವು, ಸೈತಾನನ ಯುಕ್ತಿಯನ್ನು ಗ್ರಹಿಸಲು ನಮ್ಮನ್ನು ಹೇಗೆ ಶಕ್ತರನ್ನಾಗಿ ಮಾಡುತ್ತದೆ?

6. ನಮ್ಮ ನಂಬಿಕೆಯನ್ನು ಶಿಥಿಲಗೊಳಿಸಲಿಕ್ಕಾಗಿ ಪಿಶಾಚನು ಬೇರೆ ಬೇರೆ ತಂತ್ರೋಪಾಯಗಳನ್ನು ಹೇಗೆ ಉಪಯೋಗಿಸಬಲ್ಲನು ಎಂಬುದನ್ನು ಶಾಸ್ತ್ರವಚನಗಳಿಂದ ತೋರಿಸಿರಿ.

7. ದೆವ್ವಗಳಿಗೆ ಯಾವ ಇತಿಮಿತಿಗಳಿವೆ, ಮತ್ತು ನಾವು ಯಾವ ಪ್ರಯೋಜನಗಳಲ್ಲಿ ಆನಂದಿಸುತ್ತೇವೆ?

8, 9. ಯೋಬನ ಸಮಗ್ರತೆಯನ್ನು ಮುರಿಯಲಿಕ್ಕಾಗಿ ಸೈತಾನನು ಯಾವ ಪರೀಕ್ಷೆಗಳನ್ನು ಅವನ ಮೇಲೆ ಬರಮಾಡಿದನು, ಮತ್ತು ಇಂದು ನಾವು ಯಾವ ಆಧ್ಯಾತ್ಮಿಕ ಅಪಾಯಗಳನ್ನು ಎದುರಿಸುತ್ತೇವೆ?

10-12. (ಎ) ಬೀಜಬಿತ್ತುವವನ ಕುರಿತಾದ ತನ್ನ ಸಾಮ್ಯದಲ್ಲಿ ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟನು? (ಬಿ) ಆಧ್ಯಾತ್ಮಿಕ ಚಟುವಟಿಕೆಗಳು ಹೇಗೆ ಹಿಸುಕಿಹಾಕಲ್ಪಡಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಿರಿ.

13, 14. ಸೈತಾನನಿಂದ ವಿರೋಧಿಸಲ್ಪಡುವಾಗ ನಾವು ಯಾವ ನಿಲುವನ್ನು ತೆಗೆದುಕೊಳ್ಳುವ ಅಗತ್ಯವಿದೆ?

15, 16. ನಾವು ಸ್ಥಿರರಾಗಿ ನಿಲ್ಲಲಿಕ್ಕಾಗಿ ಜೊತೆ ವಿಶ್ವಾಸಿಗಳ ಬೆಂಬಲವು ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ತೋರಿಸಲು ಒಂದು ಶಾಸ್ತ್ರೀಯ ಉದಾಹರಣೆಯನ್ನು ಕೊಡಿರಿ.

17. ದೇವರಿಗೆ ನಂಬಿಗಸ್ತರಾಗಿರಲು ನಮಗೆ ಯಾವುದು ಸಹಾಯಮಾಡಬಲ್ಲದು?

18. ಸಂಕಟದಾಯಕ ಸನ್ನಿವೇಶಗಳು ನಮ್ಮ ಬಲವನ್ನು ಬತ್ತಿಸಿಬಿಡುವುದಾದರೂ, ನಾವೇಕೆ ಪ್ರಯತ್ನವನ್ನು ಬಿಡಬಾರದು?

19. ಯೆಹೋವನು ತನ್ನ ಸೇವಕರನ್ನು ಹೇಗೆ ಬಲಪಡಿಸಬಲ್ಲನು ಎಂಬುದನ್ನು ತೋರಿಸಲು ಒಂದು ಉದಾಹರಣೆಯನ್ನು ಕೊಡಿರಿ.

20. ಯೆಹೋವನು ತನ್ನ ಜನರಿಗೆ ಯಾವಾಗಲೂ ಬೆಂಬಲ ನೀಡುತ್ತಾನೆ ಎಂಬುದನ್ನು ಯಾವ ಶಾಸ್ತ್ರೀಯ ರುಜುವಾತು ತೋರಿಸುತ್ತದೆ?

21. ಆಧ್ಯಾತ್ಮಿಕ ರಕ್ಷಾಕವಚಕ್ಕಾಗಿರುವ ಆವಶ್ಯಕತೆಯನ್ನು ಪೌಲನು ಹೇಗೆ ಒತ್ತಿಹೇಳಿದನು?

22, 23. (ಎ) ನಮ್ಮ ಆಧ್ಯಾತ್ಮಿಕ ರಕ್ಷಾಕವಚದಲ್ಲಿ ಏನು ಒಳಗೂಡಿದೆ? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸಲಿದ್ದೇವೆ?

[ಪುಟ 11ರಲ್ಲಿರುವ ಚಿತ್ರಗಳು]

ಕ್ರೈಸ್ತರಿಗೆ ‘ದುರಾತ್ಮಗಳ ಸೇನೆಯ ವಿರುದ್ಧ ಹೋರಾಟ’ ನಡೆಸಲಿಕ್ಕಿದೆ

[ಪುಟ 12ರಲ್ಲಿರುವ ಚಿತ್ರ]

ಈ ಪ್ರಪಂಚದ ಚಿಂತೆಗಳು ರಾಜ್ಯದ ವಾಕ್ಯವನ್ನು ಅಡಗಿಸಿಬಿಡಸಾಧ್ಯವಿದೆ

[ಪುಟ 13ರಲ್ಲಿರುವ ಚಿತ್ರ]

ಜೊತೆ ಕ್ರೈಸ್ತರು “ಬಲಪಡಿಸುವ ಸಹಾಯಕ”ದಂತೆ ಇರಸಾಧ್ಯವಿದೆ

[ಪುಟ 14ರಲ್ಲಿರುವ ಚಿತ್ರ]

ಬಲಕ್ಕಾಗಿ ನೀವು ದೇವರ ಬಳಿ ಬೇಡಿಕೊಳ್ಳುತ್ತೀರೋ?