ಚೆಸ್ಟರ್ ಬೀಟೀಯ ನಿಕ್ಷೇಪಗಳತ್ತ ಒಂದು ನೋಟ
ಚೆಸ್ಟರ್ ಬೀಟೀಯ ನಿಕ್ಷೇಪಗಳತ್ತ ಒಂದು ನೋಟ
“ಕಳೆದುಹೋದ ಅನೇಕ ನಾಗರಿಕತೆಗಳ ನಿಕ್ಷೇಪಗಳಿಂದ ತುಂಬಿದೆ, . . . ಅತ್ಯಾಕರ್ಷಕವಾದ ಪುಟ್ಟ ಭಾವಚಿತ್ರಗಳು ಮತ್ತು ವರ್ಣಚಿತ್ರಗಳಿಂದ ಕಂಗೊಳಿಸುತ್ತಿದೆ.” ಈ ರೀತಿ, ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಚೆಸ್ಟರ್ ಬೀಟೀ ಲೈಬ್ರರಿಯನ್ನು ಅದರ ಮಾಜಿ ಪಾರುಪತ್ಯಗಾರರಾದ ಆರ್. ಜೆ. ಹೇಸ್ ವರ್ಣಿಸುತ್ತಾರೆ. ಈ ಲೈಬ್ರರಿಯು ಬೆಲೆಕಟ್ಟಲಾಗದ ಅನೇಕ ಪ್ರಾಚೀನ ವಸ್ತುಗಳು, ಕಣ್ಸೆಳೆಯುವ ಕಲಾಕೃತಿಗಳು, ಮತ್ತು ಅತಿ ಅಮೂಲ್ಯವಾಗಿರುವ ತುಂಬ ಅಪರೂಪದ ಪುಸ್ತಕಗಳು ಹಾಗೂ ಹಸ್ತಪ್ರತಿಗಳ ಭಂಡಾರವಾಗಿದೆ. ಹಾಗಾದರೆ, ಈ ಚೆಸ್ಟರ್ ಬೀಟೀ ಯಾರಾಗಿದ್ದನು? ಮತ್ತು ಅವನು ಯಾವ ನಿಕ್ಷೇಪಗಳನ್ನು ಸಂಗ್ರಹಿಸಿದನು?
ಆಲ್ಫ್ರೆಡ್ ಚೆಸ್ಟರ್ ಬೀಟೀ ಇಸವಿ 1875ರಲ್ಲಿ ಅಮೆರಿಕದ ನ್ಯೂ ಯಾರ್ಕ್‌ನಲ್ಲಿ ಜನಿಸಿದನು. ಅವನ ಪೂರ್ವಜರು ಸ್ಕಾಟಿಷ್, ಐರಿಷ್, ಮತ್ತು ಆಂಗ್ಲ ಮನೆತನದವರಾಗಿದ್ದರು. ಅವನು 32 ವರುಷ ಪ್ರಾಯದವನಾಗುವುದರೊಳಗೆ ಬಹಳ ಐಶ್ವರ್ಯವಂತನಾದನು. ಏಕೆಂದರೆ ಅವನು ಗಣಿ ಇಂಜಿನಿಯರ್ ಮತ್ತು ಸಲಹೆಗಾರನೋಪಾದಿ ಕೆಲಸಮಾಡುತ್ತಿದ್ದನು. ಅವನು ತನ್ನ ಜೀವಮಾನದಾದ್ಯಂತ ತನ್ನಲ್ಲಿರುವ ಸಂಪತ್ತನ್ನು, ಸುಂದರವಾದ ಮತ್ತು ಶ್ರೇಷ್ಠವಾದ ವಸ್ತುಗಳನ್ನು ಸಂಗ್ರಹಿಸಲು ಉಪಯೋಗಿಸಿದನು. ಇಸವಿ 1968ರಲ್ಲಿ, 92 ವರುಷ ಪ್ರಾಯದಲ್ಲಿ ಬೀಟೀ ಮೃತಪಟ್ಟಾಗ, ತನ್ನ ಇಡೀ ಸಂಗ್ರಹವನ್ನು ಐರ್ಲೆಂಡ್‌ನ ಜನರಿಗಾಗಿ ಬಿಟ್ಟುಹೋದನು.
ಅವನು ಏನನ್ನು ಸಂಗ್ರಹಿಸಿದನು?
ಬೀಟೀಯ ಸಂಗ್ರಹಗಳು ವಿಸ್ತಾರವಾದದ್ದೂ ವೈವಿಧ್ಯಮಯವಾದದ್ದೂ ಆಗಿವೆ. ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಅವನ ಸಂಗ್ರಹಗಳ ಕೇವಲ 1 ಪ್ರತಿಶತವನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಅಪರೂಪದ ಮತ್ತು ಬಹು ಬೆಲೆಬಾಳುವ ಅನೇಕ ವಸ್ತುಗಳನ್ನು, ಅನೇಕ ವಿವಿಧ ಕಾಲಾವಧಿಗಳ ಮತ್ತು ಸಾವಿರಾರು ವರುಷಗಳ—ಮಧ್ಯಯುಗ ಮತ್ತು ಪುನರುಜ್ಜೀವಿತ ಯೂರೋಪಿನಿಂದ ಹಾಗೂ ಏಷ್ಯಾ ಮತ್ತು ಆಫ್ರಿಕದ ಅನೇಕಾನೇಕ ದೇಶಗಳಿಂದಲೂ—ಸಂಸ್ಕೃತಿಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಅವನು ಒಟ್ಟುಗೂಡಿಸಿದ್ದಾನೆ. ಉದಾಹರಣೆಗೆ, ಅವನು ಸಂಗ್ರಹಿಸಿದ ಜಪಾನಿನ ಮರದಚ್ಚಿನಿಂದ ಮುದ್ರಿಸಿದ ಮನೋಹರ ಚಿತ್ರಗಳು ಲೋಕದಲ್ಲಿಯೇ ಅತಿ ಸುಂದರವಾದ ಚಿತ್ರಗಳಾಗಿ ಪರಿಗಣಿಸಲ್ಪಡುತ್ತವೆ.
ಚಿತ್ರಕಲಾಕೃತಿಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ, ಬಾಬೆಲಿನ ಮತ್ತು ಸುಮೇರಿಯದ ನೂರಕ್ಕಿಂತಲೂ ಹೆಚ್ಚು ಪ್ರಾಚೀನ ಬೆಣೆಲಿಪಿ ಬರಹಗಳನ್ನು ಹೊಂದಿರುವ ಮಣ್ಣಿನ ಫಲಕಗಳ ಒಂದು ಮನಮೋಹಕ ಸಂಗ್ರಹವಿದೆ. ಮೆಸೊಪೊತಾಮ್ಯದಲ್ಲಿ 4,000ಕ್ಕಿಂತಲೂ ಹೆಚ್ಚು ವರುಷಗಳ ಹಿಂದೆ ಜೀವಿಸುತ್ತಿದ್ದ ಜನರು ತಮ್ಮ ಜೀವಿತದ ಚಿಕ್ಕಪುಟ್ಟ ವಿವರಗಳನ್ನು ಮಣ್ಣಿನ ಫಲಕಗಳಲ್ಲಿ ಬರೆದಿಡುತ್ತಿದ್ದರು. ಆ ಮಣ್ಣಿನ ಫಲಕಗಳನ್ನು ಆಮೇಲೆ ಬೆಂಕಿಯಲ್ಲಿ ಸುಡಲಾಗುತ್ತಿತ್ತು. ಅಂಥ ಅನೇಕ ಫಲಕಗಳು ನಮ್ಮ ದಿನಗಳ ವರೆಗೂ ಉಳಿದಿವೆ ಮತ್ತು ಇದು ಬರಹದ ಕಲೆಯು ಎಷ್ಟು ಹಳೆಯಕಾಲದ್ದಾಗಿದೆ ಎಂಬುದಕ್ಕೆ ಸ್ಪಷ್ಟ ರುಜುವಾತನ್ನು ನೀಡುತ್ತದೆ.
ಪುಸ್ತಕಗಳ ಕಡೆಗೆ ಆಕರ್ಷಣೆ
ಉತ್ತಮ ಪುಸ್ತಕಗಳನ್ನು ತಯಾರಿಸುವುದರಲ್ಲಿ ಒಳಗೂಡಿರುವ ಕಲಾಕೌಶಲದಿಂದ ಚೆಸ್ಟರ್ ಬೀಟೀ ಬಹಳ ಆಕರ್ಷಿತನಾಗಿದ್ದನು ಎಂದು ತೋರುತ್ತದೆ. ಅವನು ಸಾವಿರಾರು ಐಹಿಕ ಮತ್ತು ಧಾರ್ಮಿಕ ಪುಸ್ತಕಗಳನ್ನು ಸಂಗ್ರಹಿಸಿದನು. ಇದರಲ್ಲಿ ಸುಂದರವಾಗಿ ಅಲಂಕೃತವಾದ ಖುರಾನ್‌ನ ಪ್ರತಿಗಳೂ ಸೇರಿವೆ. ಅವನ ಕುರಿತು ಒಬ್ಬ ಬರಹಗಾರನು ಹೇಳುವುದು: ಅವನು “ಅರೇಬಿಕ್ ಹಸ್ತಪ್ರತಿಯ ಗಣಿತಶಾಸ್ತ್ರ ಪ್ರಮಾಣಗಳಿಂದ ಪ್ರಭಾವಿತನಾದನು, . . . ಮತ್ತು ಚಿನ್ನ ಹಾಗೂ ಬೆಳ್ಳಿಯ ಹಾಳೆ ಮತ್ತು ಇತರ ವಿವಿಧ ರೀತಿಯ ಖನಿಜಗಳಿಂದ ಸುಂದರಲಿಪಿಯು ಅಲಂಕರಿಸಲ್ಪಟ್ಟದ್ದನ್ನು ಕಂಡು, ಬಣ್ಣಗಳ ಕಡೆಗಿನ ಅವನ ಗಣ್ಯತೆಯು ಇನ್ನಷ್ಟು ಗಾಢವಾಯಿತು.”
ಚೆಸ್ಟರ್ ಬೀಟೀ, ಹಸಿರು ಹರಳಿನ ಕಡೆಗೆ ಬಹಳ ಆಕರ್ಷಿತನಾದನು. ಹಿಂದಿನ ಶತಮಾನಗಳಲ್ಲಿ, ಚೀನಾದ ಚಕ್ರವರ್ತಿಗಳಲ್ಲಿ ಕೆಲವರು ಸಹ ಈ ಹರಳಿನಿಂದ ಆಕರ್ಷಿತರಾಗಿದ್ದರು. ಅವರು ಹಸಿರು ಹರಳನ್ನು ಎಲ್ಲಾ ಖನಿಜ ಪದಾರ್ಥಗಳಲ್ಲಿ ಅತಿ ಬೆಲೆಬಾಳುವಂಥದ್ದಾಗಿ ಪರಿಗಣಿಸುತ್ತಿದ್ದರು. ಅವರದನ್ನು ಚಿನ್ನಕ್ಕಿಂತಲೂ ಅತ್ಯಮೂಲ್ಯವಾಗಿ ವೀಕ್ಷಿಸುತ್ತಿದ್ದರು. ಈ ಅಧಿಕಾರಿಗಳು, ಹಸಿರು ಹರಳಿನ ದೊಡ್ಡ ದೊಡ್ಡ ತುಂಡುಗಳನ್ನು ಮೃದುವಾದ ತೆಳ್ಳಗಿನ ಹಾಳೆಗಳಾಗಿ ಮಾಡಲು ನಿಪುಣ ಕಾರ್ಮಿಕರನ್ನು ಉಪಯೋಗಿಸಿದರು. ಅನಂತರ, ಆ ಹಾಳೆಯಲ್ಲಿ ಅತಿ ಸುಂದರವಾದ ಲಿಪಿಯನ್ನು ಮತ್ತು ಚಿತ್ರಗಳನ್ನು ಚಿನ್ನದಲ್ಲಿ ಕೆತ್ತಲಾಗುತ್ತಿತ್ತು. ಈ ಮೂಲಕ ಅತಿ ಮನೋಹರವಾದ ಕೆಲವು ಪುಸ್ತಕಗಳನ್ನು ತಯಾರಿಸಲಾಗುತ್ತಿತ್ತು. ಬೀಟೀಯ ಈ ರೀತಿಯ ಪುಸ್ತಕಗಳ ಸಂಗ್ರಹವು ಜಗತ್ಪ್ರಸಿದ್ಧವಾಗಿದೆ.
ಅಮೂಲ್ಯವಾದ ಬೈಬಲ್ ಹಸ್ತಪ್ರತಿಗಳು
ಬೈಬಲ್ ಪ್ರಿಯರಿಗೆ, ಚೆಸ್ಟರ್ ಬೀಟೀಯ ಅತಿ ಶ್ರೇಷ್ಠ ನಿಕ್ಷೇಪವು, ಪುರಾತನ ಮತ್ತು ಮಧ್ಯಯುಗದ ಬೈಬಲ್ ಹಸ್ತಪ್ರತಿಗಳ ಅವನ ಅಪಾರ
ಸಂಗ್ರಹವೇ ಆಗಿದೆ. ಸುಂದರವಾಗಿ ಅಲಂಕರಿಸಲ್ಪಟ್ಟಿರುವ ಈ ಹಸ್ತಪ್ರತಿಗಳು, ಅವುಗಳನ್ನು ಕೈಯಿಂದ ನಕಲುಮಾಡಿದ ಬರವಣಿಗೆಗಾರರ ತಾಳ್ಮೆ ಮತ್ತು ಕಲಾಕೌಶಲವನ್ನು ಪ್ರತಿಬಿಂಬಿಸುತ್ತವೆ. ಮುದ್ರಣ ಮಾಡಲ್ಪಟ್ಟಿರುವ ಪುಸ್ತಕಗಳು, ಪುರಾತನಕಾಲದ ಪುಸ್ತಕ ಬೈಂಡ್‌ಮಾಡುವವರ ಮತ್ತು ಮುದ್ರಕರ ಕೈಚಳಕ ಹಾಗೂ ಕಲೆಗಾರಿಕೆಯನ್ನು ಪ್ರದರ್ಶಿಸುತ್ತವೆ. ಉದಾಹರಣೆಗೆ, ಯೋಹಾನ್ಸ್ ಗುಟನ್‌ಬರ್ಗ್‌ರ ಸಮಯದಲ್ಲಿ ಜೀವಿಸುತ್ತಿದ್ದ ಆ್ಯನ್‌ಟೋನ್ ಕೋಬರ್ಗರ್ ಎಂಬವನಿಂದ 1479ರಲ್ಲಿ ನ್ಯೂರೆಂಬರ್ಗ್‌ನಲ್ಲಿ ಬಿಬ್ಲಿಯಾ ಲ್ಯಾಟಿನ ಎಂಬ ಪುಸ್ತಕವು ಮುದ್ರಿಸಲ್ಪಟ್ಟಿತು ಮತ್ತು ಅವನನ್ನು, “ಆರಂಭದ ಮುದ್ರಣಕಾರರಲ್ಲೇ ಅತಿ ಪ್ರಮುಖ ಹಾಗೂ ಸಕ್ರಿಯ ಮುದ್ರಣಕಾರನೆಂದು” ವರ್ಣಿಸಲಾಗಿದೆ.ಸಿರಿಯದ ವಿದ್ವಾಂಸರಾದ ಈಫ್ರಾಯಿಮ್‌ರಿಂದ ಬರೆಯಲ್ಪಟ್ಟ ನಾಲ್ಕನೇ ಶತಮಾನದ ಒಂದು ಚರ್ಮದ ಹಸ್ತಪ್ರತಿಯು, ಚೆಸ್ಟರ್ ಬೀಟೀ ಲೈಬ್ರರಿಯ ಒಂದು ವಿಶಿಷ್ಟ ಪ್ರದರ್ಶನಾ ವಸ್ತುವಾಗಿದೆ. ಈಫ್ರಾಯಿಮ್‌ರವರು, ಎರಡನೇ ಶತಮಾನದ ಕೃತಿಯಾದ ಥೀಆಟಿಸಾರೊನ್‌ನಿಂದ ವಿಸ್ತಾರವಾಗಿ ಉದ್ಧರಿಸಿದ್ದಾರೆ. ಆ ಕೃತಿಯಲ್ಲಿ ಅದರ ಬರಹಗಾರನಾದ ಟಾಶೆನ್, ಯೇಸು ಕ್ರಿಸ್ತನ ಜೀವನ ವೃತ್ತಾಂತವನ್ನು ತಿಳಿಯಪಡಿಸುವ ನಾಲ್ಕು ಸುವಾರ್ತಾ ಪುಸ್ತಕಗಳನ್ನು ಒಂದುಗೂಡಿಸಿ ಬರೆದಿದ್ದಾನೆ. ಅನಂತರದ ಬರಹಗಾರರು ಥೀಆಟಿಸಾರೊನ್‌ಗೆ ಸೂಚಿಸಿರುವುದಾದರೂ, ಅದರ ಒಂದು ಪ್ರತಿಯೂ ಅಸ್ತಿತ್ವದಲ್ಲಿಲ್ಲ. 19ನೇ ಶತಮಾನದ ಕೆಲವು ವಿದ್ವಾಂಸರು ಅದರ ಅಸ್ತಿತ್ವದ ಕುರಿತು ಸಂಶಯವನ್ನು ಸಹ ವ್ಯಕ್ತಪಡಿಸಿದರು. ಆದರೆ 1956ರಲ್ಲಿ, ಟಾಶೆನ್‌ನ ಥೀಆಟಿಸಾರೊನ್‌ನ ಕುರಿತಾದ ಈಫ್ರಾಯಿಮ್‌ರವರ ವ್ಯಾಖ್ಯಾನವನ್ನು ಬೀಟೀ ಕಂಡುಹಿಡಿದನು. ಈ ಕಂಡುಹಿಡಿತವು, ಬೈಬಲಿನ ವಿಶ್ವಾಸಾರ್ಹತೆ ಮತ್ತು ಸತ್ಯತೆಗೆ ಇನ್ನಷ್ಟು ಪುರಾವೆಯನ್ನು ಸೇರಿಸಿತು.
ಪಪೈರಸ್ ಹಸ್ತಪ್ರತಿಗಳ ನಿಕ್ಷೇಪ
ಬೀಟೀ, ಅಪಾರ ಸಂಖ್ಯೆಯಲ್ಲಿ ಧಾರ್ಮಿಕ ಮತ್ತು ಐಹಿಕ ವಿಷಯಕ್ಕೆ ಸಂಬಂಧಿಸಿದ ಪಪೈರಸ್ ಹಸ್ತಪ್ರತಿಗಳನ್ನು ಸಹ ಸಂಗ್ರಹಿಸಿದನು. ಸುಮಾರು 50ಕ್ಕಿಂತಲೂ ಹೆಚ್ಚಿನ ಪಪೈರಸ್ ಕೋಡೆಕ್ಸ್ ಗ್ರಂಥಗಳು, ಸಾ.ಶ. ನಾಲ್ಕನೇ ಶತಮಾನಕ್ಕಿಂತಲೂ ಹಿಂದಿನವುಗಳಾಗಿವೆ. ಇವುಗಳಲ್ಲಿ ಕೆಲವು, ಐಗುಪ್ತದ ಮರುಭೂಮಿಯಲ್ಲಿ ಬಹಳ ಶತಮಾನಗಳಿಂದಲೂ ಕಂಡುಹಿಡಿಯಲ್ಪಡದೆ ಬಿಡಲ್ಪಟ್ಟಿದ್ದ ಪಪೈರಸ್‌ನ ದೊಡ್ಡ ರಾಶಿಗಳ ಮಧ್ಯೆ—ಮುಖ್ಯವಾಗಿ ಹಳೆಯ ಕಾಗದದ ಕೊಂಪೆಗಳಲ್ಲಿ—ಕಂಡುಕೊಳ್ಳಲ್ಪಟ್ಟವು. ಪಪೈರಸ್ ದಾಖಲೆ ಪತ್ರಗಳು ಮಾರಾಟಕ್ಕೆ ಇಡಲ್ಪಟ್ಟಾಗ, ಅವುಗಳಲ್ಲಿ ಹೆಚ್ಚಿನವು ತುಂಡು ತುಂಡಾಗಿದ್ದವು. ಮಾರಾಟಗಾರರು, ರಟ್ಟಿನ ಬಾಕ್ಸ್‌ಗಳಲ್ಲಿ ಪಪೈರಸ್ ತುಂಡುಗಳನ್ನು ತುಂಬಿಸಿ ತರುತ್ತಿದ್ದರು. “ಯಾರು ಅದನ್ನು ಖರೀದಿಸಲು ಇಷ್ಟಪಡುತ್ತಿದ್ದರೋ ಅವರು ಆ ಬಾಕ್ಸಿನೊಳಗೆ ಕೈಹಾಕಿ, ಹೆಚ್ಚಿನ ಬರಹವನ್ನು ಹೊಂದಿದ್ದ ಮತ್ತು ಎಲ್ಲದಕ್ಕಿಂತಲೂ ದೊಡ್ಡದಾದ ತುಂಡನ್ನು ಆರಿಸಿತೆಗೆಯುತ್ತಿದ್ದರು,” ಎಂಬುದಾಗಿ ಚೆಸ್ಟರ್ ಬೀಟೀ ಲೈಬ್ರರಿಯ ಪಾಶ್ಚಾತ್ಯ ಸಂಗ್ರಹಗಳ ಪಾರುಪತ್ಯಗಾರರಾದ ಚಾರ್ಲ್ಸ್ ಹೊರ್ಟನ್ ತಿಳಿಸುತ್ತಾರೆ.
ಬೀಟೀಯ “ಅತಿ ರೋಮಾಂಚಕ ಕಂಡುಹಿಡಿತವು,” ಅತ್ಯಮೂಲ್ಯ ಬೈಬಲ್ ಕೋಡೆಕ್ಸ್ ಗ್ರಂಥಗಳಾಗಿದ್ದವು ಎಂದು ಹೊರ್ಟನ್ ತಿಳಿಸುತ್ತಾರೆ. ಇವುಗಳಲ್ಲಿ, “ಕ್ರೈಸ್ತ ಹಳೆಯ ಮತ್ತು ಹೊಸ ಒಡಂಬಡಿಕೆಯ ಅತಿ ಪುರಾತನ ಪ್ರತಿಗಳೆಂದು ಜ್ಞಾತವಾಗಿದ್ದ ಪ್ರತಿಗಳೂ ಸೇರಿದ್ದವು.” ಇದರ ಮೌಲ್ಯವನ್ನು ಅರಿತಿದ್ದ ಮಾರಾಟಗಾರರು, ಅವುಗಳ ವಿಭಿನ್ನ ಭಾಗಗಳನ್ನು ಬೇರೆ ಬೇರೆ ಖರೀದಿಗಾರರಿಗೆ ಮಾರುವ ಉದ್ದೇಶದಿಂದ ಅವುಗಳನ್ನು ಹರಿದಿರಲೂಬಹುದು. ಹಾಗಿದ್ದರೂ, ಬೀಟೀಯು ಅವುಗಳಲ್ಲಿ ಹೆಚ್ಚಿನ ಕೋಡೆಕ್ಸ್ ಗ್ರಂಥಗಳನ್ನು ಖರೀದಿಸಶಕ್ತನಾದನು. ಈ ಕೋಡೆಕ್ಸ್ ಗ್ರಂಥಗಳು ಎಷ್ಟು ಪ್ರಾಮುಖ್ಯವಾಗಿವೆ? ಇವುಗಳ ಕಂಡುಹಿಡಿತವನ್ನು ಸರ್ ಫ್ರೆಡ್ರಿಕ್ ಕೆನ್ಯಾನ್‌ರವರು, 1844ರಲ್ಲಿ ಟಿಷನ್‌ಡಾರ್ಫ್ ಪತ್ತೆಹಚ್ಚಿದ ಕೋಡೆಕ್ಸ್ ಸೈನಾಯ್ಟಿಕಸ್‌ನ ಅನಂತರದ “ಅತಿ ಪ್ರಾಮುಖ್ಯ” ಆವಿಷ್ಕಾರವೆಂದು ವರ್ಣಿಸಿದ್ದಾರೆ.
ಈ ಕೋಡೆಕ್ಸ್ ಗ್ರಂಥಗಳು, ಸಾ.ಶ. ಎರಡನೇ ಮತ್ತು ನಾಲ್ಕನೇ ಶತಮಾನಗಳ ಮಧ್ಯಭಾಗದವುಗಳಾಗಿವೆ. ಗ್ರೀಕ್ ಸೆಪ್ಟ್ಯುಅಜಿಂಟ್ ಭಾಷಾಂತರದ ಹೀಬ್ರು ಶಾಸ್ತ್ರದ ಪುಸ್ತಕಗಳಲ್ಲಿ ಆದಿಕಾಂಡ ಪುಸ್ತಕದ ಎರಡು ಪ್ರತಿಗಳಿವೆ. ಇದು ವಿಶೇಷ ಮೌಲ್ಯವನ್ನು ಹೊಂದಿದೆ, “ಏಕೆಂದರೆ [ಆದಿಕಾಂಡ] ಪುಸ್ತಕದ ಹೆಚ್ಚಿನ ಭಾಗವು,” ನಾಲ್ಕನೇ ಶತಮಾನದ ಚರ್ಮದ ಹಸ್ತಪ್ರತಿಗಳಾದ “ವ್ಯಾಟಿಕನಸ್ ಮತ್ತು ಸೈನಾಯ್ಟಿಕಸ್‌ನಲ್ಲಿ ಕಂಡುಬರುವುದಿಲ್ಲ” ಎಂಬುದಾಗಿ ಕೆನ್ಯಾನ್ ತಿಳಿಸುತ್ತಾರೆ. ಕಂಡುಕೊಳ್ಳಲ್ಪಟ್ಟ ಮೂರು ಕೋಡೆಕ್ಸ್ ಗ್ರಂಥಗಳಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರದ ಪುಸ್ತಕಗಳೂ ಇವೆ. ಒಂದರಲ್ಲಿ, ನಾಲ್ಕು ಸುವಾರ್ತಾ ಪುಸ್ತಕಗಳ ಹೆಚ್ಚಿನಾಂಶ ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕದ ಹೆಚ್ಚಿನ ಭಾಗವು ಇವೆ. ಎರಡನೇ ಕೋಡೆಕ್ಸ್ ಗ್ರಂಥದಲ್ಲಿ—ಇದರ ಕೆಲವು ಹಾಳೆಗಳನ್ನು ಬೀಟೀ ಅನಂತರ ಪಡೆದುಕೊಂಡನು—ಇಬ್ರಿಯರಿಗೆ ಬರೆದ ಪತ್ರವನ್ನು ಸೇರಿಸಿ ಬಹುಮಟ್ಟಿಗೆ ಅಪೊಸ್ತಲ ಪೌಲನ ಪತ್ರಗಳ ಸಂಪೂರ್ಣ ಪ್ರತಿ ಅಡಕವಾಗಿದೆ. ಮೂರನೇ ಕೋಡೆಕ್ಸ್ ಗ್ರಂಥದಲ್ಲಿ, ಪ್ರಕಟನೆ ಪುಸ್ತಕದ ಮೂರನೇ ಒಂದು ಭಾಗವು ಅಡಕವಾಗಿದೆ. ಕೆನ್ಯಾನ್‌ಗನುಸಾರ, ಈ ಪಪೈರಸ್ ಕಾಗದಗಳು “ಈಗ ನಮ್ಮ ಬಳಿಯಿರುವ ಹೊಸ ಒಡಂಬಡಿಕೆಯ ಗ್ರಂಥಪಾಠದಿಂದ ಈಗಾಗಲೇ
ಬಲಗೊಂಡಿರುವ ನಮ್ಮ ಭರವಸೆಯನ್ನು ಇನ್ನೂ ಬಲಗೊಳಿಸುವ ದೃಶ್ಯ ಪುರಾವೆಗಳಾಗಿವೆ.”ಸಾ.ಶ. ಮೊದಲನೇ ಶತಮಾನದ ಅಂತ್ಯಕ್ಕಿಂತಲೂ ಮುಂಚಿತವಾಗಿಯೇ ಅಂದರೆ ಬಹಳ ಮುಂಚೆಯೇ ಕ್ರೈಸ್ತರು, ಉಪಯೋಗಿಸಲು ಕಷ್ಟಕರವಾಗಿದ್ದ ಮಡಚಲಾಗದ ಸುರುಳಿಗಳಿಗೆ ಬದಲಾಗಿ ಕೋಡೆಕ್ಸ್ ಗ್ರಂಥ ಅಥವಾ ಹಾಳೆ-ಪುಸ್ತಕವನ್ನು ಉಪಯೋಗಿಸಲು ಆರಂಭಿಸಿದರೆಂದು ಚೆಸ್ಟರ್ ಬೀಟೀಯ ಬೈಬಲ್ ಸಂಬಂಧಿತ ಪಪೈರಸ್ ಕಾಗದಗಳು ತೋರಿಸುತ್ತವೆ. ಅಷ್ಟುಮಾತ್ರವಲ್ಲದೆ, ಬರವಣಿಗೆಗಾಗಿ ಹಾಳೆಗಳು ತೀರಾ ಕಡಿಮೆಯಿದ್ದ ಕಾರಣ ನಕಲುಪ್ರತಿಮಾಡುವವರು ಅನೇಕವೇಳೆ ಹಳೆಯ ಪಪೈರಸ್ ಹಾಳೆಯನ್ನು ಪುನಃ ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಯೋಹಾನನ ಸುವಾರ್ತೆಯ ಒಂದು ಭಾಗದ ಒಂದು ಕಾಪ್ಟಿಕ್ ಹಸ್ತಪ್ರತಿಯು, “ಗ್ರೀಕ್ ಗಣಿತವನ್ನು ಹೊಂದಿದ್ದ ಶಾಲೆಯ ನೋಟ್ ಬುಕ್ ಎಂಬಂತೆ ತೋರುವಂಥ ಪುಸ್ತಕದಲ್ಲಿ” ಬರೆಯಲ್ಪಟ್ಟಿದೆ.
ಈ ಪಪೈರಸ್ ದಾಖಲೆಗಳು ನಯನಮನೋಹರವಾಗಿಲ್ಲ, ಆದರೂ ಅವು ಅತ್ಯಮೂಲ್ಯವಾಗಿವೆ. ಅವು ಕ್ರೈಸ್ತತ್ವದ ಆರಂಭಗಳಿಗೆ ಪ್ರತ್ಯಕ್ಷವಾದ ಪುರಾವೆಯಾಗಿವೆ. “ಪೂರ್ವಕಾಲದ ಕ್ರೈಸ್ತ ಸಮುದಾಯಗಳಲ್ಲಿ ಉಪಯೋಗಿಸಲ್ಪಡುತ್ತಿದ್ದು ಅವರಿಂದ ನಿಕ್ಷೇಪದೋಪಾದಿ ಪರಿಗಣಿಸಲ್ಪಡುತ್ತಿದ್ದ ಕೆಲವು ಪುಸ್ತಕಗಳು ಹೇಗಿದ್ದವು ಎಂಬುದನ್ನು ನೀವು ನಿಮ್ಮ ಕಣ್ಮುಂದೆಯೇ ನೋಡಬಲ್ಲಿರಿ” ಎಂಬುದಾಗಿ ಚಾರ್ಲ್ಸ್ ಹೊರ್ಟನ್ ತಿಳಿಸುತ್ತಾರೆ. (ಜ್ಞಾನೋಕ್ತಿ 2:4, 5) ನಿಮಗೆ ಈ ನಿಕ್ಷೇಪಗಳನ್ನು ಚೆಸ್ಟರ್ ಬೀಟೀ ಲೈಬ್ರರಿಯಲ್ಲಿ ನೋಡುವ ಸಂದರ್ಭವು ದೊರಕುವುದಾದರೆ, ನೀವು ಖಂಡಿತವಾಗಿಯೂ ಆಶಾಭಂಗಪಡುವುದಿಲ್ಲ.
[ಪುಟ 31ರಲ್ಲಿರುವ ಚಿತ್ರ]
ಕಾಟ್ಸೂಶೀಕಾ ಹೋಕೂಸೀಯಿಂದ ಜಪಾನಿನ ಮರದಚ್ಚಿನಿಂದ ಮುದ್ರಿಸಲ್ಪಟ್ಟ ಚಿತ್ರ
[ಪುಟ 31ರಲ್ಲಿರುವ ಚಿತ್ರ]
“ಬಿಬ್ಲಿಯಾ ಲ್ಯಾಟಿನ” ಎಂಬುದು ಬೈಬಲಿನ ಅತ್ಯಾರಂಭದ ಮುದ್ರಿತ ಪ್ರತಿಗಳಲ್ಲಿ ಒಂದಾಗಿತ್ತು
[ಪುಟ 31ರಲ್ಲಿರುವ ಚಿತ್ರ]
ಟಾಶೆನ್‌ನ “ಥೀಆಟಿಸಾರೊನ್”ನ ಕುರಿತಾಗಿ ಈಫ್ರಾಯಿಮ್‌ರವರು ಮಾಡಿದ ಹೇಳಿಕೆಯು, ಬೈಬಲಿನ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಬಲಪಡಿಸುತ್ತದೆ
[ಪುಟ 31ರಲ್ಲಿರುವ ಚಿತ್ರ]
ಲೋಕದಲ್ಲಿಯೇ ಅತಿ ಹಳೆಯ ಕೋಡೆಕ್ಸ್ ಗ್ರಂಥವಾದ ಚೆಸ್ಟರ್ ಬೀಟೀ P45ರಲ್ಲಿ ನಾಲ್ಕು ಸುವಾರ್ತಾ ಪುಸ್ತಕಗಳ ಹೆಚ್ಚಿನಾಂಶ ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕದ ಹೆಚ್ಚಿನ ಭಾಗವು ಒಂದೇ ಸಂಪುಟದಲ್ಲಿ ಅಡಕವಾಗಿದೆ
[ಪುಟ 29ರಲ್ಲಿರುವ ಚಿತ್ರ ಕೃಪೆ]
Reproduced by kind permission of The Trustees of the Chester Beatty Library, Dublin
[ಪುಟ 31ರಲ್ಲಿರುವ ಚಿತ್ರ ಕೃಪೆ]
ಎಲ್ಲಾ ಚಿತ್ರಗಳು: Reproduced by kind permission of The Trustees of the Chester Beatty Library, Dublin