ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”

“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”

“ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ”

“ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ಸಂಪೂರ್ಣ ರಕ್ಷಾಕವಚವನ್ನು,” Nw] ಧರಿಸಿಕೊಳ್ಳಿರಿ.”​—⁠ಎಫೆಸ 6:⁠11.

ಸಾಮಾನ್ಯ ಶಕ ಒಂದನೆಯ ಶತಮಾನದಲ್ಲಿ ರೋಮ್‌ ತನ್ನ ಅಧಿಕಾರದ ಉತ್ತುಂಗದಲ್ಲಿತ್ತು. ರೋಮನ್‌ ಸೈನ್ಯದಳಗಳ ಬಲವು, ಆಗ ಜ್ಞಾತವಾಗಿದ್ದ ಲೋಕದ ಅಧಿಕಾಂಶ ಭಾಗವನ್ನು ಹಿಡಿತದಲ್ಲಿಡಲು ರೋಮನ್ನು ಶಕ್ತಗೊಳಿಸಿತ್ತು. ಒಬ್ಬ ಇತಿಹಾಸಗಾರನು ಈ ಸೈನ್ಯವನ್ನು “ಇತಿಹಾಸದಲ್ಲೇ ಅತ್ಯಂತ ಯಶಸ್ವಿಕರ ಮಿಲಿಟರಿ ಸಂಘಟನೆ” ಎಂದು ವರ್ಣಿಸಿದನು. ರೋಮ್‌ನ ವೃತ್ತಿಪರ ಸೈನ್ಯವು ಬಹಳ ಕಟ್ಟುನಿಟ್ಟಾದ ತರಬೇತಿಯನ್ನು ಪಡೆದುಕೊಂಡಿದ್ದ ಶಿಸ್ತುಭರಿತ ಸೈನಿಕರಿಂದ ರಚಿತವಾಗಿತ್ತು, ಆದರೆ ಒಂದು ಪರಿಣಾಮಕಾರಿ ಸಮರ ಸೈನ್ಯದೋಪಾದಿ ಅವರ ಯಶಸ್ವಿಯು ಅವರ ರಕ್ಷಾಕವಚದ ಮೇಲೂ ಹೊಂದಿಕೊಂಡಿತ್ತು. ಅಪೊಸ್ತಲ ಪೌಲನು, ಪಿಶಾಚನ ವಿರುದ್ಧ ಯಶಸ್ವಿಕರವಾಗಿ ಹೋರಾಟವನ್ನು ನಡೆಸಲು ಕ್ರೈಸ್ತರಿಗೆ ಅಗತ್ಯವಿರುವ ಆಧ್ಯಾತ್ಮಿಕ ರಕ್ಷಾಕವಚವನ್ನು ದೃಷ್ಟಾಂತಿಸಲಿಕ್ಕಾಗಿ ರೋಮನ್‌ ಸೈನಿಕನೊಬ್ಬನ ರಕ್ಷಾಕವಚದ ಉದಾಹರಣೆಯನ್ನು ಉಪಯೋಗಿಸಿದನು.

2 ಈ ಆಧ್ಯಾತ್ಮಿಕ ರಕ್ಷಾಕವಚದ ಕುರಿತಾದ ವರ್ಣನೆಯನ್ನು ನಾವು ಎಫೆಸ 6:​14-17ರಲ್ಲಿ ಕಂಡುಕೊಳ್ಳುತ್ತೇವೆ. ಪೌಲನು ಬರೆದುದು: “ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಧರಿಸಿಕೊಂಡು ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಮತ್ತು ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ. ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ.” ಮಾನವ ದೃಷ್ಟಿಕೋನದಿಂದ ಪರಿಗಣಿಸುವಾಗ, ಪೌಲನು ವರ್ಣಿಸಿದಂಥ ರಕ್ಷಾಕವಚವು ಒಬ್ಬ ರೋಮನ್‌ ಸೈನಿಕನಿಗೆ ಸಾಕಷ್ಟು ಮಟ್ಟಿಗಿನ ಸಂರಕ್ಷಣೆಯನ್ನು ಒದಗಿಸಿತು. ಅಷ್ಟುಮಾತ್ರವಲ್ಲ, ಅವನು ಒಂದು ಕತ್ತಿಯನ್ನು ಸಹ ಉಪಯೋಗಿಸುತ್ತಿದ್ದನು, ಇದು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಹೋರಾಡಲಿಕ್ಕಾಗಿರುವ ಅವನ ಮುಖ್ಯ ಶಸ್ತ್ರವಾಗಿತ್ತು.

3 ಬೇಕಾದ ಸಲಕರಣೆಗಳು ಹಾಗೂ ತರಬೇತಿಯು ಮಾತ್ರವಲ್ಲದೆ, ಸೈನಿಕರು ತಮ್ಮ ಸೇನಾಧಿಪತಿಗೆ ತೋರಿಸುವ ವಿಧೇಯತೆಯ ಮೇಲೆ ರೋಮನ್‌ ಸೈನ್ಯದ ಯಶಸ್ಸು ಅವಲಂಬಿಸಿತ್ತು. ತದ್ರೀತಿಯಲ್ಲಿ, ಕ್ರೈಸ್ತರು ಯಾರನ್ನು ಬೈಬಲು ‘ಜನಾಂಗಗಳಿಗೆ ಅಧಿಪತಿ’ ಎಂದು ವರ್ಣಿಸುತ್ತದೋ ಆ ಯೇಸು ಕ್ರಿಸ್ತನಿಗೆ ವಿಧೇಯರಾಗಬೇಕು. (ಯೆಶಾಯ 55:⁠4) ಅವನು “ಸಭೆಗೆ ತಲೆ”ಯೂ ಆಗಿದ್ದಾನೆ. (ಎಫೆಸ 5:23) ನಮ್ಮ ಆಧ್ಯಾತ್ಮಿಕ ಹಿತಕ್ಷೇಮಕ್ಕಾಗಿ ಯೇಸು ನಮಗೆ ಸೂಚನೆಗಳನ್ನು ನೀಡುತ್ತಾನೆ ಮತ್ತು ಆಧ್ಯಾತ್ಮಿಕ ರಕ್ಷಾಕವಚವನ್ನು ಹೇಗೆ ಧರಿಸಬೇಕು ಎಂಬ ವಿಷಯದಲ್ಲಿ ಪರಿಪೂರ್ಣ ಮಾದರಿಯನ್ನು ಇಟ್ಟಿದ್ದಾನೆ. (1 ಪೇತ್ರ 2:21) ಕ್ರಿಸ್ತನಂಥ ವ್ಯಕ್ತಿತ್ವವು ನಮ್ಮ ಆಧ್ಯಾತ್ಮಿಕ ರಕ್ಷಾಕವಚಕ್ಕೆ ಬಹಳಷ್ಟು ಹೋಲುವುದರಿಂದ, ಕ್ರಿಸ್ತನ ಮನೋಭಾವದಿಂದ ನಮ್ಮನ್ನು “ಸಜ್ಜುಗೊಳಿಸಿ”ಕೊಳ್ಳುವಂತೆ (NW) ಶಾಸ್ತ್ರವಚನಗಳು ನಮಗೆ ಬುದ್ಧಿಹೇಳುತ್ತವೆ. (1 ಪೇತ್ರ 4:⁠1) ಆದುದರಿಂದ, ನಮ್ಮ ಆಧ್ಯಾತ್ಮಿಕ ರಕ್ಷಾಕವಚದ ಪ್ರತಿಯೊಂದು ಭಾಗವನ್ನು ನಾವು ವಿಶ್ಲೇಷಿಸುವಾಗ, ಅದರ ಮಹತ್ವ ಹಾಗೂ ಪರಿಣಾಮಕಾರಕ ಗುಣವನ್ನು ರುಜುಪಡಿಸಲಿಕ್ಕಾಗಿ ನಾವು ಯೇಸುವಿನ ಮಾದರಿಯನ್ನು ಉಪಯೋಗಿಸುವೆವು.

ನಡು, ಎದೆ, ಹಾಗೂ ಪಾದಗಳನ್ನು ಸಂರಕ್ಷಿಸುವುದು

4ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳುವುದು. ಬೈಬಲ್‌ ಕಾಲಗಳಲ್ಲಿ ಸೈನಿಕರು ಎರಡರಿಂದ ಆರು ಇಂಚುಗಳಷ್ಟು ಅಗಲವಾದ ಒಂದು ಚರ್ಮದ ಸೊಂಟಪಟ್ಟಿಯನ್ನು, ಅಥವಾ ನಡುಕಟ್ಟನ್ನು ಧರಿಸುತ್ತಿದ್ದರು. ಈ ವಚನವು “ಸತ್ಯವನ್ನು ಒಂದು ಪಟ್ಟಿಯಂತೆ ಸೊಂಟದ ಸುತ್ತಲೂ ಗಟ್ಟಿಯಾಗಿ ಕಟ್ಟಿಕೊಳ್ಳುವುದು” ಎಂದಿರಬೇಕಿತ್ತೆಂದು ಕೆಲವು ಭಾಷಾಂತರಕಾರರು ಸೂಚಿಸುತ್ತಾರೆ. ಸೈನಿಕನ ನಡುಪಟ್ಟಿಯು ಅವನ ನಡುವನ್ನು ಸಂರಕ್ಷಿಸಲು ಸಹಾಯಮಾಡುತ್ತಿತ್ತು, ಮತ್ತು ಇದು ಕತ್ತಿಯನ್ನು ಸಿಕ್ಕಿಸಲು ಅನುಕೂಲಕರವಾದ ಆಧಾರವನ್ನೂ ಒದಗಿಸುತ್ತಿತ್ತು. ಒಬ್ಬ ಸೈನಿಕನು ತನ್ನ ನಡುಪಟ್ಟಿಯನ್ನು ಕಟ್ಟಿಕೊಳ್ಳುವಾಗ ಅವನು ಕದನಕ್ಕೆ ಸಿದ್ಧನಾಗುತ್ತಿದ್ದನು. ಶಾಸ್ತ್ರೀಯ ಸತ್ಯವು ನಮ್ಮ ಜೀವಿತಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಬೇಕು ಎಂಬುದನ್ನು ದೃಷ್ಟಾಂತಿಸಲಿಕ್ಕಾಗಿ ಪೌಲನು ಸೈನಿಕನ ನಡುಕಟ್ಟನ್ನು ಉಪಯೋಗಿಸಿದನು. ಸಾಂಕೇತಿಕವಾಗಿ ಹೇಳುವುದಾದರೆ, ಇದನ್ನು ನಮ್ಮ ನಡುವಿನ ಸುತ್ತಲೂ ಬಿಗಿಯಾಗಿ ಕಟ್ಟಬೇಕಾಗಿದೆ, ಇದರಿಂದಾಗಿ ನಾವು ಸತ್ಯಕ್ಕೆ ಹೊಂದಿಕೆಯಲ್ಲಿ ಬದುಕುತ್ತೇವೆ ಮತ್ತು ಯಾವುದೇ ಸಂದರ್ಭದಲ್ಲಿ ಸತ್ಯವನ್ನು ಸಮರ್ಥಿಸಬಲ್ಲೆವು. (ಕೀರ್ತನೆ 43:3; 1 ಪೇತ್ರ 3:15) ಇದನ್ನು ಸಾಧಿಸಲಿಕ್ಕಾಗಿ ನಾವು ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನಮಾಡುವ ಅಗತ್ಯವಿದೆ ಮತ್ತು ಅದರಲ್ಲಿರುವ ವಿಚಾರಗಳ ಕುರಿತು ಧ್ಯಾನಿಸಬೇಕಾಗಿದೆ. ದೇವರ ನಿಯಮಶಾಸ್ತ್ರವು ಯೇಸುವಿನ ‘ಅಂತರಂಗದಲ್ಲಿತ್ತು.’ (ಕೀರ್ತನೆ 40:⁠8) ಆದುದರಿಂದಲೇ ಅವನು ವಿರೋಧಿಗಳಿಂದ ಪ್ರಶ್ನಿಸಲ್ಪಟ್ಟಾಗ, ನೆನಪಿನಾಳದಿಂದ ಶಾಸ್ತ್ರವಚನಗಳನ್ನು ಉಲ್ಲೇಖಿಸುವ ಮೂಲಕ ಅವರಿಗೆ ಪ್ರತಿಕ್ರಿಯಿಸಲು ಶಕ್ತನಾಗಿದ್ದನು.​—⁠ಮತ್ತಾಯ 19:3-6; 22:23-32.

5 ಬೈಬಲ್‌ ಸತ್ಯವು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡುವಾಗ, ಇದು ನಮ್ಮನ್ನು ತಪ್ಪಾದ ರೀತಿಯ ತರ್ಕದಿಂದ ಕಾಪಾಡಬಲ್ಲದು ಮತ್ತು ವಿವೇಕಭರಿತ ನಿರ್ಣಯಗಳನ್ನು ಮಾಡಲು ಶಕ್ತರನ್ನಾಗಿಸಬಲ್ಲದು. ಪ್ರಲೋಭನೆ ಅಥವಾ ಪರೀಕ್ಷೆಯ ಸಮಯಗಳಲ್ಲಿ, ಸರಿಯಾದದ್ದನ್ನೇ ಮಾಡಲಿಕ್ಕಾಗಿರುವ ನಮ್ಮ ನಿರ್ಧಾರವನ್ನು ಬೈಬಲಿನ ಮಾರ್ಗದರ್ಶನಗಳು ಇನ್ನಷ್ಟು ಬಲಗೊಳಿಸುವವು. ಇದು ನಾವು ನಮ್ಮ ಮಹಾನ್‌ ಬೋಧಕನಾಗಿರುವ ಯೆಹೋವನನ್ನು ಕಣ್ಣಾರೆ ಕಾಣುತ್ತಿದ್ದೇವೋ ಹಾಗೂ “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ನಮ್ಮ ಹಿಂದೆ ಆಡಲ್ಪಡುವ ಮಾತನ್ನು ಕೇಳುತ್ತಿದ್ದೇವೋ ಎಂಬಂತಿರುವುದು.​—⁠ಯೆಶಾಯ 30:​20, 21.

6ನೀತಿಯೆಂಬ ವಜ್ರಕವಚ. ಸೈನಿಕನ ವಜ್ರಕವಚ ಇಲ್ಲವೆ ಎದೆಕವಚವು ಒಂದು ಪ್ರಾಮುಖ್ಯ ಅಂಗವನ್ನು ಅಂದರೆ ಹೃದಯವನ್ನು ಕಾಪಾಡುತ್ತಿತ್ತು. ನಮ್ಮ ಸಾಂಕೇತಿಕ ಹೃದಯ, ಅಂದರೆ ನಮ್ಮ ಆಂತರಿಕ ವ್ಯಕ್ತಿತ್ವಕ್ಕೂ ವಿಶೇಷ ಸಂರಕ್ಷಣೆಯ ಅಗತ್ಯವಿದೆ. ಏಕೆಂದರೆ ಯಾವುದು ಕೆಟ್ಟದ್ದಾಗಿದೆಯೋ ಅದರ ಕಡೆಗೆ ಓಲುವ ಪ್ರವೃತ್ತಿ ಅದಕ್ಕಿದೆ. (ಆದಿಕಾಂಡ 8:21) ಆದುದರಿಂದಲೇ, ನಾವು ಯೆಹೋವನ ನೀತಿಯ ಮಟ್ಟಗಳ ಕುರಿತು ತಿಳಿದುಕೊಂಡು ಅವುಗಳನ್ನು ಪ್ರೀತಿಸಬೇಕಾಗಿದೆ. (ಕೀರ್ತನೆ 119:​97, 105) ನೀತಿಗಾಗಿರುವ ನಮ್ಮ ಪ್ರೀತಿಯು, ಯೆಹೋವನ ಸ್ಪಷ್ಟವಾದ ನಿರ್ದೇಶನಗಳನ್ನು ಅಲಕ್ಷಿಸುವ ಅಥವಾ ದುರ್ಬಲಗೊಳಿಸುವ ಲೌಕಿಕ ಆಲೋಚನೆಯನ್ನು ನಾವು ತಿರಸ್ಕರಿಸುವಂತೆ ಮುನ್ನಡಿಸುತ್ತದೆ. ಅಷ್ಟುಮಾತ್ರವಲ್ಲ, ನಾವು ಒಳ್ಳೇದನ್ನು ಪ್ರೀತಿಸಿ ಕೆಟ್ಟದ್ದನ್ನು ದ್ವೇಷಿಸುವಾಗ, ನಮ್ಮ ಜೀವಿತಗಳನ್ನು ಹಾಳುಮಾಡಸಾಧ್ಯವಿರುವಂಥ ಒಂದು ಜೀವನಮಾರ್ಗವನ್ನು ಬೆನ್ನಟ್ಟುವುದರಿಂದ ನಾವು ದೂರವಿರುತ್ತೇವೆ. (ಕೀರ್ತನೆ 119:99-101; ಆಮೋಸ 5:15) ಈ ವಿಷಯದಲ್ಲಿ ಯೇಸು ಆದರ್ಶಪ್ರಾಯನಾಗಿದ್ದಾನೆ, ಏಕೆಂದರೆ ಅವನ ಕುರಿತು ಶಾಸ್ತ್ರವಚನಗಳು ಹೇಳುವುದು: “ನೀನು ಧರ್ಮವನ್ನು [ಇಲ್ಲವೆ, ನೀತಿಯನ್ನು] ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ.”​—⁠ಇಬ್ರಿಯ 1:⁠9. *

7ಸಮಾಧಾನದ ವಿಷಯವಾದ ಸುವಾರ್ತೆ ಎಂಬ ಕೆರಗಳನ್ನು ಮೆಟ್ಟಿಕೊಂಡಿರುವುದು. ರೋಮನ್‌ ಸೈನಿಕರಿಗೆ ಬಾಳಿಕೆ ಬರುವಂಥ ಪಾದರಕ್ಷೆಗಳು ಅಥವಾ ಪ್ರಬಲವಾದ ಕೆರಗಳ ಅಗತ್ಯವಿತ್ತು. ಏಕೆಂದರೆ ದಂಡಯಾತ್ರೆಯ ಸಮಯದಲ್ಲಿ ಅನೇಕವೇಳೆ ಅವರು ಪ್ರತಿ ದಿನ 30 ಕಿಲೊಮೀಟರುಗಳಷ್ಟು ದೂರ ನಡೆದುಕೊಂಡು ಹೋಗಬೇಕಾಗುತ್ತಿತ್ತು. ಹೀಗೆ ಹೋಗುವಾಗ ಸುಮಾರು 27 ಕಿಲೊ ತೂಕದ ರಕ್ಷಾಕವಚವನ್ನು ಮತ್ತು ಸಲಕರಣೆಯನ್ನು ಧರಿಸಿಕೊಂಡೋ ಅಥವಾ ಹೊತ್ತುಕೊಂಡೋ ಸಾಗಬೇಕಾಗಿತ್ತು. ಕಿವಿಗೊಡುವಂಥ ಪ್ರತಿಯೊಬ್ಬರಿಗೆ ರಾಜ್ಯದ ಸಂದೇಶವನ್ನು ಸಾರಲಿಕ್ಕಾಗಿ ನಾವು ಸಿದ್ಧರಾಗಿರುವುದನ್ನು ಸೂಚಿಸಲಿಕ್ಕಾಗಿ ಪೌಲನು ಕೆರಗಳನ್ನು ಉಪಯೋಗಿಸಿದ್ದು ಸೂಕ್ತವಾದದ್ದಾಗಿತ್ತು. ಇದು ಪ್ರಾಮುಖ್ಯವಾಗಿದೆ ಏಕೆಂದರೆ, ಒಂದುವೇಳೆ ನಾವು ಸಾರಲು ಸಿದ್ಧರಿಲ್ಲದಿರುವಲ್ಲಿ ಅಥವಾ ಮನಃಪೂರ್ವಕವಾಗಿ ಇಷ್ಟಪಡದಿರುವಲ್ಲಿ, ಜನರಿಗೆ ಯೆಹೋವನ ಕುರಿತು ಹೇಗೆ ತಿಳಿದುಬರುವುದು?​—⁠ರೋಮಾಪುರ 10:​13-15.

8 ಯೇಸುವಿನ ಜೀವನದಲ್ಲಿ ಯಾವುದು ಅತಿ ಪ್ರಾಮುಖ್ಯವಾದ ಚಟುವಟಿಕೆಯಾಗಿತ್ತು? ಅವನು ರೋಮನ್‌ ಅಧಿಪತಿಯಾಗಿದ್ದ ಪೊಂತ್ಯ ಪಿಲಾತನಿಗೆ ಹೇಳಿದ್ದು: ‘ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಈ ಲೋಕಕ್ಕೆ ಬಂದಿದ್ದೇನೆ.’ ಕಿವಿಗೊಡಲು ಸಿದ್ಧನಾಗಿರುವ ವ್ಯಕ್ತಿಯನ್ನು ಕಂಡಾಗೆಲ್ಲಾ ಯೇಸು ಸಾರಿದನು, ಮತ್ತು ಅವನು ತನ್ನ ಶುಶ್ರೂಷೆಯಲ್ಲಿ ಎಷ್ಟರ ಮಟ್ಟಿಗೆ ಆನಂದಿಸಿದನೆಂದರೆ, ತನ್ನ ಶಾರೀರಿಕ ಆವಶ್ಯಕತೆಗಳಿಗಿಂತಲೂ ಹೆಚ್ಚಿನ ಆದ್ಯತೆಯನ್ನು ಅದಕ್ಕೆ ಕೊಟ್ಟನು. (ಯೋಹಾನ 4:​5-34; 18:37) ಒಂದುವೇಳೆ ಯೇಸುವಿನಂತೆ ನಾವು ಸುವಾರ್ತೆಯನ್ನು ಸಾರಲು ಉತ್ಸುಕರಾಗಿರುವಲ್ಲಿ, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಅನೇಕ ಸದವಕಾಶಗಳನ್ನು ಕಂಡುಕೊಳ್ಳುವೆವು. ಅಷ್ಟುಮಾತ್ರವಲ್ಲ, ಶುಶ್ರೂಷೆಯಲ್ಲಿ ನಮ್ಮನ್ನು ಪೂರ್ಣವಾಗಿ ತಲ್ಲೀನಗೊಳಿಸಿಕೊಳ್ಳುವುದು, ಆಧ್ಯಾತ್ಮಿಕವಾಗಿ ಸದೃಢರಾಗಿರಲು ನಮಗೆ ಸಹಾಯಮಾಡುವುದು.​—⁠ಅ. ಕೃತ್ಯಗಳು 18:⁠5.

ಗುರಾಣಿ, ಶಿರಸ್ತ್ರಾಣ, ಮತ್ತು ಕತ್ತಿ

9ನಂಬಿಕೆಯೆಂಬ ಗುರಾಣಿ. “ಗುರಾಣಿ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ದೇಹದ ಅಧಿಕಾಂಶ ಭಾಗವನ್ನು ಆವರಿಸುವಷ್ಟು ಆಗಲವಾದ ಗುರಾಣಿಯನ್ನು ಸೂಚಿಸುತ್ತದೆ. ಎಫೆಸ 6:16ರಲ್ಲಿ ತಿಳಿಸಲ್ಪಟ್ಟಿರುವ “ಅಗ್ನಿಬಾಣ”ಗಳಿಂದ ಇದು ಒಬ್ಬ ವ್ಯಕ್ತಿಗೆ ಸಂರಕ್ಷಣೆಯನ್ನು ನೀಡುತ್ತಿತ್ತು. ಬೈಬಲ್‌ ಕಾಲಗಳಲ್ಲಿ, ಟೊಳ್ಳಾದ ಜವುಗುಸಸ್ಯಗಳಿಂದ ಮಾಡಲ್ಪಟ್ಟ ಚೂಪಾದ ಎಸೆಯುವ ಆಯುಧಗಳನ್ನು ಸೈನಿಕರು ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಕಬ್ಬಿಣದ ಚಿಕ್ಕ ಕೋಶಗಳಿದ್ದು, ಅವುಗಳಲ್ಲಿ ಉರಿಯುತ್ತಿರುವ ಪೆಟ್ರೋಲಿಯಮ್‌ ಅನ್ನು ತುಂಬಿಸಸಾಧ್ಯವಿತ್ತು. ಒಬ್ಬ ವಿದ್ವಾಂಸನು ಈ ಚೂಪಾದ ಆಯುಧಗಳನ್ನು “ಪುರಾತನ ಕಾಳಗದಲ್ಲಿನ ಅತ್ಯಂತ ಅಪಾಯಕರ ಶಸ್ತ್ರಾಸ್ತ್ರಗಳಲ್ಲಿ ಒಂದು” ಎಂದು ವರ್ಣಿಸುತ್ತಾನೆ. ಇಂಥ ಅಗ್ನಿಬಾಣಗಳಿಂದ ತನ್ನನ್ನು ಸಂರಕ್ಷಿಸಿಕೊಳ್ಳಲು ಒಬ್ಬ ಸೈನಿಕನ ಬಳಿ ಗುರಾಣಿಯು ಇಲ್ಲದಿರುತ್ತಿದ್ದಲ್ಲಿ, ಅವನು ಗುರುತರವಾಗಿ ಗಾಯಗೊಳ್ಳಸಾಧ್ಯವಿತ್ತು ಅಥವಾ ಕೊಲ್ಲಲ್ಪಡಸಾಧ್ಯವಿತ್ತು.

10 ನಮ್ಮ ನಂಬಿಕೆಯನ್ನು ಶಿಥಿಲಗೊಳಿಸಲಿಕ್ಕಾಗಿ ಸೈತಾನನು ಯಾವ “ಅಗ್ನಿಬಾಣ”ಗಳನ್ನು ಉಪಯೋಗಿಸುತ್ತಾನೆ? ಅವನು ಕುಟುಂಬದಲ್ಲಿ, ಕೆಲಸದ ಸ್ಥಳದಲ್ಲಿ, ಅಥವಾ ಶಾಲೆಯಲ್ಲಿ ಹಿಂಸೆಯನ್ನು ಇಲ್ಲವೆ ವಿರೋಧವನ್ನು ತಂದೊಡ್ಡಬಹುದು. ಕೆಲವರ ವಿಷಯದಲ್ಲಿ, ಅಧಿಕಾಧಿಕ ಪ್ರಾಪಂಚಿಕ ಸೊತ್ತುಗಳನ್ನು ಸಂಪಾದಿಸುವ ಬಯಕೆ ಮತ್ತು ಅನೈತಿಕತೆಯ ಸೆಳೆತವು ಸಹ ಆಧ್ಯಾತ್ಮಿಕವಾಗಿ ವಿಧ್ವಂಸಕರವಾಗಿ ಪರಿಣಮಿಸಿದೆ. ಇಂಥ ಬೆದರಿಕೆಗಳ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳಲಿಕ್ಕಾಗಿ, ಎಲ್ಲಕ್ಕಿಂತಲೂ ಮಿಗಿಲಾಗಿ ನಾವು ‘ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಬೇಕಾಗಿದೆ.’ ನಂಬಿಕೆಯು, ಯೆಹೋವನ ಕುರಿತು ಕಲಿಯುವುದರಿಂದ, ಪ್ರಾರ್ಥನೆಯಲ್ಲಿ ಆತನೊಂದಿಗೆ ಕ್ರಮವಾಗಿ ಸಂವಾದಿಸುವುದರಿಂದ, ಮತ್ತು ಆತನು ನಮ್ಮನ್ನು ಹೇಗೆ ಸಂರಕ್ಷಿಸುತ್ತಾನೆ ಹಾಗೂ ಆಶೀರ್ವದಿಸುತ್ತಾನೆ ಎಂಬುದನ್ನು ವಿವೇಚಿಸುವುದರಿಂದ ಲಭಿಸುತ್ತದೆ.​—⁠ಯೆಹೋಶುವ 23:14; ಲೂಕ 17:5; ರೋಮಾಪುರ 10:17.

11 ಯೇಸು ಭೂಮಿಯಲ್ಲಿದ್ದಾಗ, ಕಷ್ಟಕರ ಸಮಯಗಳಲ್ಲಿ ಬಲವಾದ ನಂಬಿಕೆಯನ್ನು ಹೊಂದಿರುವುದರ ಪ್ರಮುಖತೆಯನ್ನು ಅವನು ರುಜುಪಡಿಸಿದನು. ಅವನು ತನ್ನ ತಂದೆಯ ನಿರ್ಣಯಗಳನ್ನು ಸಂಪೂರ್ಣವಾಗಿ ನಂಬಿದನು ಮತ್ತು ದೇವರ ಚಿತ್ತವನ್ನು ಮಾಡುವುದರಲ್ಲಿ ಅತ್ಯಾನಂದಪಟ್ಟನು. (ಮತ್ತಾಯ 26:​42, 53, 54; ಯೋಹಾನ 6:38) ಗೆತ್ಸೇಮನೆ ತೋಟದಲ್ಲಿ ಕಡುಸಂಕಟವನ್ನು ಅನುಭವಿಸುತ್ತಿದ್ದಾಗಲೂ ಯೇಸು ತನ್ನ ತಂದೆಗೆ ಹೇಳಿದ್ದು: “ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” (ಮತ್ತಾಯ 26:39) ಸಮಗ್ರತೆಯನ್ನು ಕಾಪಾಡಿಕೊಳ್ಳುವುದರ ಹಾಗೂ ತನ್ನ ತಂದೆಯನ್ನು ಸಂತೋಷಪಡಿಸುವುದರ ಪ್ರಮುಖತೆಯನ್ನು ಯೇಸು ಎಂದೂ ಮರೆಯಲಿಲ್ಲ. (ಜ್ಞಾನೋಕ್ತಿ 27:11) ಯೆಹೋವನಲ್ಲಿ ನಮಗೂ ತದ್ರೀತಿಯ ದೃಢಭರವಸೆಯಿರುವಲ್ಲಿ, ಟೀಕೆಯಾಗಲಿ ವಿರೋಧವಾಗಲಿ ನಮ್ಮ ನಂಬಿಕೆಯನ್ನು ಶಿಥಿಲಗೊಳಿಸುವಂತೆ ನಾವು ಬಿಡುವುದಿಲ್ಲ. ಅದಕ್ಕೆ ಬದಲಾಗಿ, ನಾವು ದೇವರ ಮೇಲೆ ಅವಲಂಬಿಸುವಲ್ಲಿ, ಆತನಿಗೆ ಪ್ರೀತಿಯನ್ನು ತೋರಿಸುವಲ್ಲಿ, ಮತ್ತು ಆತನ ಆಜ್ಞೆಗಳಿಗನುಸಾರ ನಡೆಯುವಲ್ಲಿ ನಮ್ಮ ನಂಬಿಕೆಯು ಬಲಗೊಳಿಸಲ್ಪಡುತ್ತದೆ. (ಕೀರ್ತನೆ 19:7-11; 1 ಯೋಹಾನ 5:3) ತನ್ನನ್ನು ಪ್ರೀತಿಸುವವರಿಗಾಗಿ ಯೆಹೋವನು ಕಾದಿರಿಸಿರುವ ಆಶೀರ್ವಾದಗಳೊಂದಿಗೆ ಯಾವುದೇ ರೀತಿಯ ಪ್ರಾಪಂಚಿಕ ಪ್ರತಿಫಲಗಳು ಅಥವಾ ಕ್ಷಣಿಕವಾದ ಇಂದ್ರಿಯ ಸುಖಗಳನ್ನು ಹೋಲಿಸಸಾಧ್ಯವಿಲ್ಲ.​—⁠ಜ್ಞಾನೋಕ್ತಿ 10:⁠22.

12ರಕ್ಷಣೆಯೆಂಬ ಶಿರಸ್ತ್ರಾಣ. ಒಂದು ಶಿರಸ್ತ್ರಾಣವು ಸೈನಿಕನ ತಲೆ ಹಾಗೂ ಮಿದುಳನ್ನು, ಬುದ್ಧಿಶಕ್ತಿಯ ಕೇಂದ್ರವನ್ನು ಸಂರಕ್ಷಿಸುತ್ತಿತ್ತು. ನಮ್ಮ ಕ್ರೈಸ್ತ ನಿರೀಕ್ಷೆಯನ್ನು ಒಂದು ಶಿರಸ್ತ್ರಾಣಕ್ಕೆ ಹೋಲಿಸಲಾಗಿದೆ, ಏಕೆಂದರೆ ಇದು ನಮ್ಮ ಮನಸ್ಸನ್ನು ಸಂರಕ್ಷಿಸುತ್ತದೆ. (1 ಥೆಸಲೋನಿಕ 5:⁠8) ದೇವರ ನಿಷ್ಕೃಷ್ಟವಾದ ಜ್ಞಾನದ ಸಹಾಯದಿಂದ ನಾವು ಮನಸ್ಸನ್ನು ಮಾರ್ಪಡಿಸಿದ್ದೇವಾದರೂ, ನಾವಿನ್ನೂ ದುರ್ಬಲರಾದ, ಅಪರಿಪೂರ್ಣ ಮಾನವರಾಗಿದ್ದೇವೆ. ನಮ್ಮ ಮನಸ್ಸು ಸುಲಭವಾಗಿ ಭ್ರಷ್ಟಗೊಳ್ಳಸಾಧ್ಯವಿದೆ. ಈ ವಿಷಯಗಳ ವ್ಯವಸ್ಥೆಯ ಗುರಿಗಳು ನಮ್ಮನ್ನು ಅಪಕರ್ಷಿಸಸಾಧ್ಯವಿದೆ ಅಥವಾ ನಮ್ಮ ದೇವದತ್ತ ನಿರೀಕ್ಷೆಯ ಸ್ಥಾನವನ್ನು ತೆಗೆದುಕೊಳ್ಳಲೂಬಹುದು. (ರೋಮಾಪುರ 7:18; 12:⁠2) ಯೇಸುವಿಗೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ನೀಡುವ ಪ್ರಸ್ತಾಪವನ್ನು ಮಾಡುವ ಮೂಲಕ ಪಿಶಾಚನು ಅವನನ್ನು ಪಥಭ್ರಷ್ಟಗೊಳಿಸಲು ವ್ಯರ್ಥವಾಗಿ ಪ್ರಯತ್ನಿಸಿದನು. (ಮತ್ತಾಯ 4:⁠8) ಆದರೆ ಯೇಸು ತತ್‌ಕ್ಷಣವೇ ಆ ಪ್ರಸ್ತಾಪವನ್ನು ತಿರಸ್ಕರಿಸಿದನು, ಮತ್ತು ಅವನ ಕುರಿತು ಪೌಲನು ಹೇಳಿದ್ದು: “[ಯೇಸು] ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ [“ಯಾತನಾ ಕಂಬದ,” NW] ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.”​—⁠ಇಬ್ರಿಯ 12:⁠2.

13 ಯೇಸುವಿಗಿದ್ದ ದೃಢಭರವಸೆಯು ಯಾವುದೇ ಪ್ರಯತ್ನವಿಲ್ಲದೆ ಬಂದಂಥದ್ದಾಗಿರಲಿಲ್ಲ. ಮುಂದಿರುವ ನಿರೀಕ್ಷೆಯ ಮೇಲೆ ಗಮನವನ್ನು ಕೇಂದ್ರೀಕರಿಸದೆ, ನಮ್ಮ ಮನಸ್ಸುಗಳನ್ನು ಈ ವಿಷಯಗಳ ವ್ಯವಸ್ಥೆಯ ಕನಸುಗಳು ಹಾಗೂ ಗುರಿಗಳಿಂದ ನಾವು ತುಂಬಿಸುವಲ್ಲಿ, ದೇವರ ವಾಗ್ದಾನಗಳಲ್ಲಿನ ನಮ್ಮ ನಂಬಿಕೆಯು ದುರ್ಬಲಗೊಳ್ಳುತ್ತಾ ಹೋಗುತ್ತದೆ. ಸಕಾಲದಲ್ಲಿ ನಾವು ನಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲೂ ಸಾಧ್ಯವಿದೆ. ಇನ್ನೊಂದು ಕಡೆಯಲ್ಲಿ, ದೇವರ ವಾಗ್ದಾನಗಳ ಕುರಿತು ನಾವು ಕ್ರಮವಾಗಿ ಧ್ಯಾನಿಸುತ್ತಿರುವಲ್ಲಿ, ನಮ್ಮ ಮುಂದೆ ಇಡಲ್ಪಟ್ಟಿರುವ ನಿರೀಕ್ಷೆಯಲ್ಲಿ ನಾವು ಉಲ್ಲಾಸಿಸುತ್ತಾ ಮುಂದುವರಿಯುವೆವು.​—⁠ರೋಮಾಪುರ 12:⁠12.

14ಪವಿತ್ರಾತ್ಮದ ಕತ್ತಿ. ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೇವರ ಮಾತುಗಳು ಅಥವಾ ಸಂದೇಶವು ಕಾರ್ಯಸಾಧಕವಾಗಿರುವ ಇಬ್ಬಾಯಿಕತ್ತಿಯಂತಿದೆ. ಇದು ಧಾರ್ಮಿಕ ಮಿಥ್ಯೆಯನ್ನು ಕೆಡವಿಹಾಕಬಲ್ಲದು ಮತ್ತು ಯೋಗ್ಯಹೃದಯದ ಜನರು ಆಧ್ಯಾತ್ಮಿಕ ಬಿಡುಗಡೆಯನ್ನು ಕಂಡುಕೊಳ್ಳುವಂತೆ ಅವರಿಗೆ ಸಹಾಯಮಾಡಬಲ್ಲದು. (ಯೋಹಾನ 8:32; ಇಬ್ರಿಯ 4:12) ನಾವು ಪ್ರಲೋಭನೆಗಳಿಂದ ಆಕ್ರಮಿಸಲ್ಪಡುವಾಗ ಅಥವಾ ಧರ್ಮಭ್ರಷ್ಟರು ನಮ್ಮ ನಂಬಿಕೆಯನ್ನು ನಾಶಗೊಳಿಸಲು ಪ್ರಯತ್ನಿಸುವಾಗ, ಈ ಆಧ್ಯಾತ್ಮಿಕ ಕತ್ತಿಯು ನಮಗೆ ರಕ್ಷಣೆಯನ್ನೂ ನೀಡಬಲ್ಲದು. (2 ಕೊರಿಂಥ 10:​4, 5) ‘ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ನಮ್ಮನ್ನು ಸಕಲಸತ್ಕಾರ್ಯಕ್ಕೆ ಸನ್ನದ್ಧಗೊಳಿಸುವುದರಿಂದ’ ಅದಕ್ಕೆ ನಾವೆಷ್ಟು ಆಭಾರಿಗಳಾಗಿದ್ದೇವೆ!​—⁠2 ತಿಮೊಥೆಯ 3:16, 17.

15 ಅರಣ್ಯದಲ್ಲಿ ಯೇಸು ಸೈತಾನನಿಂದ ಪ್ರಲೋಭಿಸಲ್ಪಟ್ಟಾಗ, ಸುಳ್ಳು ತರ್ಕವನ್ನು ಹಾಗೂ ಕುಯುಕ್ತಿಭರಿತ ಪ್ರಲೋಭನೆಗಳನ್ನು ಭಂಗಪಡಿಸಲಿಕ್ಕಾಗಿ ಅವನು ಪವಿತ್ರಾತ್ಮದ ಕತ್ತಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದನು. ಅವನು ಸೈತಾನನ ಪ್ರತಿಯೊಂದು ಪಂಥಾಹ್ವಾನಕ್ಕೆ ‘ಎಂಬದಾಗಿ ಬರೆದದೆ’ ಎಂದು ಉತ್ತರಿಸಿದನು. (ಮತ್ತಾಯ 4:​1-11) ತದ್ರೀತಿಯಲ್ಲಿ, ಸ್ಪೆಯ್ನ್‌ನಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ಡಾವೀಡನು, ಪ್ರಲೋಭನೆಯನ್ನು ಎದುರಿಸಲು ಶಾಸ್ತ್ರವಚನಗಳು ತನಗೆ ಸಹಾಯಮಾಡಿದವು ಎಂಬುದನ್ನು ಕಂಡುಕೊಂಡನು. ಅವನು 19ರ ಪ್ರಾಯದವನಾಗಿದ್ದಾಗ, ಅವನು ಕೆಲಸಮಾಡುತ್ತಿದ್ದ ಕ್ಲೀನಿಂಗ್‌ ಕಂಪೆನಿಯಲ್ಲೇ ಇದ್ದ ಒಬ್ಬ ಸುಂದರ ಯುವತಿಯು ಅವನಿಗೆ, ಅನೈತಿಕ ನಡವಳಿಕೆಯಲ್ಲಿ ತೊಡಗುವ ಪ್ರಸ್ತಾಪವನ್ನು ಮಾಡಿದಳು. ತನ್ನನ್ನು ಒಲಿಸಿಕೊಳ್ಳಲು ಅವಳು ಮಾಡುತ್ತಿದ್ದ ಪ್ರಯತ್ನಗಳನ್ನು ಡಾವೀಡನು ತಿರಸ್ಕರಿಸಿದನು ಮತ್ತು ಮುಂದೆಂದೂ ಇಂಥ ಸನ್ನಿವೇಶವು ಎದುರಾಗದಿರುವಂತೆ ಕಂಪೆನಿಯ ಬೇರೊಂದು ಕ್ಷೇತ್ರದಲ್ಲಿ ತನಗೆ ಕೆಲಸವನ್ನು ನೇಮಿಸುವಂತೆ ತನ್ನ ಧಣಿಯನ್ನು ಕೇಳಿಕೊಂಡನು. ಡಾವೀಡ್‌ ಹೇಳಿದ್ದು: “ನಾನು ಯೋಸೇಫನ ಉದಾಹರಣೆಯನ್ನು ಜ್ಞಾಪಿಸಿಕೊಂಡೆ. ಅವನು ಅನೈತಿಕತೆಯನ್ನು ತಿರಸ್ಕರಿಸಿದನು ಮತ್ತು ತತ್‌ಕ್ಷಣವೇ ಆ ಸ್ಥಳವನ್ನು ಬಿಟ್ಟುಹೋದನು. ನಾನೂ ಅದನ್ನೇ ಮಾಡಿದೆ.”​—⁠ಆದಿಕಾಂಡ 39:​10-12.

16 ಸೈತಾನನ ಹಿಡಿತದಿಂದ ತಪ್ಪಿಸಿಕೊಳ್ಳುವಂತೆ ಇತರರಿಗೆ ಸಹಾಯಮಾಡಲಿಕ್ಕಾಗಿಯೂ ಯೇಸು ಪವಿತ್ರಾತ್ಮದ ಕತ್ತಿಯನ್ನು ಉಪಯೋಗಿಸಿದನು. ಯೇಸು ಹೇಳಿದ್ದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು.” (ಯೋಹಾನ 7:16) ಯೇಸುವಿನ ಕೌಶಲಭರಿತ ಬೋಧನೆಯನ್ನು ಅನುಕರಿಸಬೇಕಾದರೆ ನಮಗೆ ತರಬೇತಿಯ ಅಗತ್ಯವಿದೆ. ರೋಮನ್‌ ಸೈನಿಕರ ವಿಷಯದಲ್ಲಿ ಯೆಹೂದಿ ಇತಿಹಾಸಗಾರನಾಗಿದ್ದ ಜೋಸೀಫಸನು ಬರೆದುದು: “ಪ್ರತಿಯೊಬ್ಬ ಸೈನಿಕನು ಪ್ರತಿ ದಿನ ವ್ಯಾಯಾಮ ಮಾಡುತ್ತಿದ್ದನು, ಮತ್ತು ಅವರು ರಣರಂಗದಲ್ಲಿದ್ದಾರೋ ಎಂಬಂತೆ ಅತ್ಯಂತ ಶ್ರದ್ಧೆಯಿಂದ ವ್ಯಾಯಾಮ ಮಾಡುತ್ತಿದ್ದರು. ಆದುದರಿಂದಲೇ ಅವರು ಕದನಗಳಿಂದ ಉಂಟಾಗುವ ದಣಿವನ್ನು ಬಹಳ ಸುಲಭವಾಗಿ ಸಹಿಸಿಕೊಳ್ಳಸಾಧ್ಯವಿತ್ತು.” ನಮ್ಮ ಆಧ್ಯಾತ್ಮಿಕ ಯುದ್ಧದಲ್ಲಿ ನಾವು ಬೈಬಲನ್ನು ಉಪಯೋಗಿಸುವ ಅಗತ್ಯವಿದೆ. ಅಷ್ಟುಮಾತ್ರವಲ್ಲ, ನಾವು ‘ದೇವರ ದೃಷ್ಟಿಗೆ ಯೋಗ್ಯರಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡಬೇಕು. ಅವಮಾನಕ್ಕೆ ಗುರಿಯಾಗದ ಕೆಲಸದವರೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರೂ ಆಗಿರಬೇಕು.’ (2 ತಿಮೊಥೆಯ 2:15) ಒಬ್ಬ ಆಸಕ್ತ ವ್ಯಕ್ತಿಯ ಯಥಾರ್ಥ ಪ್ರಶ್ನೆಗೆ ಉತ್ತರವನ್ನು ಕೊಡಲಿಕ್ಕಾಗಿ ನಾವು ಶಾಸ್ತ್ರವಚನಗಳನ್ನು ಉಪಯೋಗಿಸುವಾಗ ನಮಗೆಷ್ಟು ಸಂತೃಪ್ತಿಯ ಅನಿಸಿಕೆಯಾಗುತ್ತದೆ!

ಎಲ್ಲಾ ಸಮಯಗಳಲ್ಲಿ ಪ್ರಾರ್ಥಿಸಿರಿ

17 ಸಂಪೂರ್ಣ ರಕ್ಷಾಕವಚವನ್ನು ಪರಿಗಣಿಸಿದ ಬಳಿಕ ಪೌಲನು ಪ್ರಾಮುಖ್ಯವಾದ ಇನ್ನೊಂದು ಬುದ್ಧಿವಾದವನ್ನೂ ಕೂಡಿಸುತ್ತಾನೆ. ಸೈತಾನನನ್ನು ಪ್ರತಿರೋಧಿಸುವುದರಲ್ಲಿ, ಕ್ರೈಸ್ತರು “ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ” ಪ್ರಯೋಜನ ಪಡೆದುಕೊಳ್ಳಬೇಕು. ಎಷ್ಟು ಸಲ ಹೀಗೆ ಮಾಡಬೇಕು? ಪವಿತ್ರಾತ್ಮಪ್ರೇರಿತರಾಗಿ ‘ಎಲ್ಲಾ ಸಮಯಗಳಲ್ಲಿ ಪ್ರಾರ್ಥಿಸಿರಿ’ ಎಂದು ಪೌಲನು ಬರೆದನು. (ಎಫೆಸ 6:18) ನಾವು ಪ್ರಲೋಭನೆಗಳನ್ನು, ಪರೀಕ್ಷೆಗಳನ್ನು, ಅಥವಾ ನಿರುತ್ತೇಜನವನ್ನು ಎದುರಿಸುವಾಗೆಲ್ಲಾ, ಪ್ರಾರ್ಥನೆಯು ನಮ್ಮನ್ನು ಅತ್ಯಧಿಕ ಮಟ್ಟದಲ್ಲಿ ಬಲಪಡಿಸಬಲ್ಲದು. (ಮತ್ತಾಯ 26:41) ಯೇಸು “ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.”​—⁠ಇಬ್ರಿಯ 5:⁠7.

18 ಹದಿನೈದು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಅಸ್ಥಿಗತವಾಗಿ ಅಸ್ವಸ್ಥನಾಗಿರುವ ತನ್ನ ಗಂಡನನ್ನು ನೋಡಿಕೊಳ್ಳುತ್ತಿರುವ ಮೇಲಾಗ್ರೋಸ್‌ ಹೇಳುವುದು: “ನನಗೆ ನಿರುತ್ತೇಜನದ ಅನಿಸಿಕೆಯಾಗುವಾಗ, ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗುತ್ತೇನೆ. ಆತನನ್ನು ಬಿಟ್ಟು ಬೇರೆ ಯಾರೂ ನನಗೆ ಆತನಿಗಿಂತ ಹೆಚ್ಚು ಸಹಾಯಮಾಡಲಾರರು. ನಿಜ, ನನಗೆ ಇನ್ನು ಮುಂದೆ ತಾಳಿಕೊಳ್ಳಲಾಗದು ಎಂಬ ಅನಿಸಿಕೆಯಾಗುವ ಕ್ಷಣಗಳಿವೆ. ಆದರೆ ಪುನಃ ಪುನಃ ಯೆಹೋವನಿಗೆ ಪ್ರಾರ್ಥಿಸಿದ ಬಳಿಕ ನನ್ನ ಬಲವು ನವೀಕರಿಸಲ್ಪಟ್ಟ ಹಾಗೂ ನನ್ನ ಆತ್ಮವು ಹುರಿದುಂಬಿಸಲ್ಪಟ್ಟ ಅನಿಸಿಕೆ ನನಗಾಗಿದೆ.”

19 ತನಗಿರುವ ಕಾಲವು ಸ್ವಲ್ಪವೆಂಬುದು ಪಿಶಾಚನಿಗೆ ಗೊತ್ತಿದೆ, ಮತ್ತು ನಮ್ಮನ್ನು ಸೋಲಿಸಲಿಕ್ಕಾಗಿರುವ ತನ್ನ ಪ್ರಯತ್ನಗಳನ್ನು ಅವನು ಇನ್ನಷ್ಟು ತೀವ್ರಗೊಳಿಸುತ್ತಾನೆ. (ಪ್ರಕಟನೆ 12:​12, 17) ಈ ಪ್ರಬಲ ವೈರಿಯನ್ನು ನಾವು ಪ್ರತಿರೋಧಿಸಿ, “ಶ್ರೇಷ್ಠ ಹೋರಾಟವನ್ನು” ಮಾಡುವ ಅಗತ್ಯವಿದೆ. (1 ತಿಮೊಥೆಯ 6:12) ಇದು ಬಲಾಧಿಕ್ಯವನ್ನು ಅಗತ್ಯಪಡಿಸುತ್ತದೆ. (2 ಕೊರಿಂಥ 4:⁠7) ನಮಗೆ ದೇವರ ಪವಿತ್ರಾತ್ಮದ ಸಹಾಯದ ಆವಶ್ಯಕತೆಯೂ ಇದೆ; ಆದುದರಿಂದಲೇ ನಾವು ಅದಕ್ಕಾಗಿ ಪ್ರಾರ್ಥಿಸಬೇಕು. ಯೇಸು ಹೇಳಿದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.”​—⁠ಲೂಕ 11:⁠13.

20 ಯೆಹೋವನು ಒದಗಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸುವುದು ಅತ್ಯಾವಶ್ಯಕವಾಗಿದೆ ಎಂಬುದು ಸುಸ್ಪಷ್ಟ. ಈ ಆಧ್ಯಾತ್ಮಿಕ ರಕ್ಷಾಕವಚವನ್ನು ಧರಿಸುವುದು, ನಂಬಿಕೆ ಹಾಗೂ ನೀತಿಯಂಥ ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವುದನ್ನು ಅಗತ್ಯಪಡಿಸುತ್ತದೆ. ಇದು, ಸತ್ಯವು ನಮ್ಮ ನಡುವಿಗೆ ಕಟ್ಟಲ್ಪಟ್ಟಿದೆಯೋ ಎಂಬಂತೆ ನಾವದನ್ನು ಪ್ರೀತಿಸುವುದು, ಪ್ರತಿಯೊಂದು ಸಂದರ್ಭದಲ್ಲಿ ನಾವು ಸುವಾರ್ತೆಯನ್ನು ಸಾರಲು ಸಿದ್ಧರಾಗಿರುವುದು, ಮತ್ತು ಮುಂದಿರುವ ನಿರೀಕ್ಷೆಯನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವುದನ್ನು ಅಗತ್ಯಪಡಿಸುತ್ತದೆ. ನಾವು ಪವಿತ್ರಾತ್ಮದ ಕತ್ತಿಯನ್ನು ಕೌಶಲಭರಿತವಾಗಿ ಉಪಯೋಗಿಸಲು ಕಲಿಯಬೇಕಾಗಿದೆ. ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳುವ ಮೂಲಕ, ದುರಾತ್ಮಗಳ ಸೇನೆಯ ವಿರುದ್ಧ ನಡೆಸುವ ಹೋರಾಟದಲ್ಲಿ ನಾವು ಜಯಶಾಲಿಗಳಾಗಸಾಧ್ಯವಿದೆ ಮತ್ತು ನಿಜವಾಗಿಯೂ ಯೆಹೋವನ ಪವಿತ್ರ ನಾಮಕ್ಕೆ ಮಹಿಮೆಯನ್ನು ತರಸಾಧ್ಯವಿದೆ.​—⁠ರೋಮಾಪುರ 8:​37-39.

[ಪಾದಟಿಪ್ಪಣಿ]

^ ಪ್ಯಾರ. 9 ಯೆಶಾಯನ ಪ್ರವಾದನೆಯಲ್ಲಿ, ಯೆಹೋವನನ್ನು “ಧರ್ಮವನ್ನು [ಇಲ್ಲವೆ, ನೀತಿಯನ್ನು] ವಜ್ರಕವಚವನ್ನಾಗಿ” ತೊಟ್ಟುಕೊಂಡಿರುವಂತೆ ವರ್ಣಿಸಲಾಗಿದೆ. ಹೀಗೆ, ಸಭಾ ಮೇಲ್ವಿಚಾರಕರು ನ್ಯಾಯದಿಂದ ಕಾರ್ಯನಡಿಸುವಂತೆ ಮತ್ತು ನೀತಿಯಿಂದ ಕ್ರಿಯೆಗೈಯುವಂತೆ ಆತನು ಕೇಳಿಕೊಳ್ಳುತ್ತಾನೆ.​—⁠ಯೆಶಾಯ 59:​14, 15, 17.

ನೀವು ಹೇಗೆ ಉತ್ತರಿಸುವಿರಿ?

• ಆಧ್ಯಾತ್ಮಿಕ ರಕ್ಷಾಕವಚವನ್ನು ಧರಿಸುವ ವಿಷಯದಲ್ಲಿ ಯಾರು ಅತ್ಯುತ್ತಮ ಮಾದರಿಯನ್ನಿಟ್ಟನು, ಮತ್ತು ಅವನ ಮಾದರಿಯನ್ನು ನಾವೇಕೆ ಜಾಗರೂಕತೆಯಿಂದ ಪರಿಗಣಿಸಬೇಕು?

• ನಮ್ಮ ಮನಸ್ಸನ್ನು ಹಾಗೂ ಸಾಂಕೇತಿಕ ಹೃದಯವನ್ನು ನಾವು ಹೇಗೆ ಸಂರಕ್ಷಿಸಸಾಧ್ಯವಿದೆ?

• ಪವಿತ್ರಾತ್ಮದ ಕತ್ತಿಯನ್ನು ಉಪಯೋಗಿಸುವುದರಲ್ಲಿ ನಾವು ಹೇಗೆ ಕೌಶಲಭರಿತರಾಗಸಾಧ್ಯವಿದೆ?

• ನಾವು ಎಲ್ಲಾ ಸಮಯಗಳಲ್ಲಿ ಏಕೆ ಪ್ರಾರ್ಥಿಸಬೇಕು?

[ಅಧ್ಯಯನ ಪ್ರಶ್ನೆಗಳು]

1, 2. ಕ್ರೈಸ್ತರು ಧರಿಸಬೇಕಾಗಿರುವ ಆಧ್ಯಾತ್ಮಿಕ ರಕ್ಷಾಕವಚವನ್ನು ನಿಮ್ಮ ಸ್ವಂತ ಮಾತುಗಳಲ್ಲಿ ವರ್ಣಿಸಿರಿ.

3. ನಾವು ಏಕೆ ಯೇಸು ಕ್ರಿಸ್ತನ ಸೂಚನೆಗಳಿಗೆ ವಿಧೇಯರಾಗಬೇಕು ಮತ್ತು ಅವನ ಮಾದರಿಯನ್ನು ಅನುಸರಿಸಬೇಕು?

4. ಸೈನಿಕನ ರಕ್ಷಾಕವಚದಲ್ಲಿ ನಡುಕಟ್ಟು ಯಾವ ಪಾತ್ರವನ್ನು ವಹಿಸುತ್ತಿತ್ತು, ಮತ್ತು ಇದು ಏನನ್ನು ದೃಷ್ಟಾಂತಿಸುತ್ತದೆ?

5. ಪರೀಕ್ಷೆ ಅಥವಾ ಪ್ರಲೋಭನೆಯ ಸಮಯಗಳಲ್ಲಿ ಶಾಸ್ತ್ರೀಯ ಬುದ್ಧಿವಾದವು ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ವಿವರಿಸಿರಿ.

6. ಸಾಂಕೇತಿಕ ಹೃದಯಕ್ಕೆ ರಕ್ಷಣೆಯ ಅಗತ್ಯವಿದೆ ಏಕೆ, ಮತ್ತು ನೀತಿಯು ಹೇಗೆ ಅದನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಬಲ್ಲದು?

7. ಒಬ್ಬ ರೋಮನ್‌ ಸೈನಿಕನಿಗೆ ಏಕೆ ಒಳ್ಳೇ ಕೆರಗಳ ಆವಶ್ಯಕತೆಯಿತ್ತು, ಮತ್ತು ಇದು ಏನನ್ನು ದೃಷ್ಟಾಂತಿಸುತ್ತದೆ?

8. ಸುವಾರ್ತೆಯನ್ನು ಸಾರುವವನೋಪಾದಿ ಯೇಸುವಿಟ್ಟ ಮಾದರಿಯನ್ನು ನಾವು ಹೇಗೆ ಅನುಕರಿಸಸಾಧ್ಯವಿದೆ?

9. ಒಬ್ಬ ರೋಮನ್‌ ಸೈನಿಕನಿಗೆ ಗುರಾಣಿಯು ಯಾವ ಸಂರಕ್ಷಣೆಯನ್ನು ನೀಡಿತು?

10, 11. (ಎ) ಸೈತಾನನ ಯಾವ “ಅಗ್ನಿಬಾಣ”ಗಳು ನಮ್ಮ ನಂಬಿಕೆಯನ್ನು ಶಿಥಿಲಗೊಳಿಸಸಾಧ್ಯವಿದೆ? (ಬಿ) ಪರೀಕ್ಷೆಯ ಸಮಯಗಳಲ್ಲಿ ನಂಬಿಕೆಯ ಪ್ರಮುಖತೆಯನ್ನು ಯೇಸುವಿನ ಮಾದರಿಯು ಹೇಗೆ ರುಜುಪಡಿಸುತ್ತದೆ?

12. ಯಾವ ಪ್ರಮುಖ ಭಾಗವನ್ನು ನಮ್ಮ ಸಾಂಕೇತಿಕ ಶಿರಸ್ತ್ರಾಣವು ಸಂರಕ್ಷಿಸುತ್ತದೆ, ಮತ್ತು ಇಂಥ ಸಂರಕ್ಷಣೆಯು ಏಕೆ ಅತ್ಯಾವಶ್ಯಕವಾಗಿದೆ?

13. ಭಾವೀ ನಿರೀಕ್ಷೆಯಲ್ಲಿ ನಮ್ಮ ದೃಢಭರವಸೆಯನ್ನು ನಾವು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

14, 15. (ಎ) ನಮ್ಮ ಸಾಂಕೇತಿಕ ಕತ್ತಿಯು ಏನಾಗಿದೆ, ಮತ್ತು ಇದನ್ನು ಹೇಗೆ ಉಪಯೋಗಿಸಸಾಧ್ಯವಿದೆ? (ಬಿ) ಪ್ರಲೋಭನೆಯನ್ನು ಪ್ರತಿರೋಧಿಸಲು ಪವಿತ್ರಾತ್ಮದ ಕತ್ತಿಯು ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ದೃಷ್ಟಾಂತಿಸಿರಿ.

16. ‘ದೇವರ ವಾಕ್ಯವನ್ನು ಸರಿಯಾಗಿ ಉಪದೇಶಿಸಲು’ ನಮಗೆ ತರಬೇತಿಯ ಆವಶ್ಯಕತೆ ಏಕಿದೆ ಎಂಬುದನ್ನು ವಿವರಿಸಿರಿ.

17, 18. (ಎ) ಸೈತಾನನನ್ನು ಪ್ರತಿರೋಧಿಸುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ? (ಬಿ) ಪ್ರಾರ್ಥನೆಯ ಮೌಲ್ಯವನ್ನು ದೃಷ್ಟಾಂತಿಸಲು ಒಂದು ಉದಾಹರಣೆಯನ್ನು ಕೊಡಿ.

19, 20. ಸೈತಾನನ ವಿರುದ್ಧ ಹೋರಾಟದಲ್ಲಿ ಜಯಶಾಲಿಗಳಾಗಲು ನಮಗೆ ಯಾವುದರ ಅಗತ್ಯವಿದೆ?

[ಪುಟ 17ರಲ್ಲಿರುವ ಚಿತ್ರಗಳು]

ಶ್ರದ್ಧಾಪೂರ್ವಕವಾದ ಬೈಬಲ್‌ ಅಧ್ಯಯನವು, ಎಲ್ಲಾ ಸಂದರ್ಭಗಳಲ್ಲಿ ಸುವಾರ್ತೆಯನ್ನು ಸಾರುವಂತೆ ನಮ್ಮನ್ನು ಪ್ರಚೋದಿಸಬಲ್ಲದು

[ಪುಟ 18ರಲ್ಲಿರುವ ಚಿತ್ರಗಳು]

ನಮ್ಮ ನಿಶ್ಚಿತ ನಿರೀಕ್ಷೆಯು ಪರೀಕ್ಷೆಗಳನ್ನು ಎದುರಿಸುವಂತೆ ನಮಗೆ ಸಹಾಯಮಾಡುತ್ತದೆ

[ಪುಟ 19ರಲ್ಲಿರುವ ಚಿತ್ರಗಳು]

ನೀವು ಶುಶ್ರೂಷೆಯಲ್ಲಿ ‘ಪವಿತ್ರಾತ್ಮದ ಕತ್ತಿಯನ್ನು’ ಉಪಯೋಗಿಸುತ್ತೀರೋ?