ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮೋಪದೇಶಕಾಂಡ ಪುಸ್ತಕದ ಮುಖ್ಯಾಂಶಗಳು

ಧರ್ಮೋಪದೇಶಕಾಂಡ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಧರ್ಮೋಪದೇಶಕಾಂಡ ಪುಸ್ತಕದ ಮುಖ್ಯಾಂಶಗಳು

ವರುಷ ಸಾ.ಶ.ಪೂ. 1473. ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಬಿಡಿಸಿ ನಾಲ್ವತ್ತು ವರುಷಗಳು ದಾಟಿವೆ. ಇಷ್ಟೊಂದು ವರುಷಗಳನ್ನು ಅರಣ್ಯದಲ್ಲಿ ಕಳೆದ ಇಸ್ರಾಯೇಲ್ಯರು ಇನ್ನೂ ಸ್ವದೇಶವನ್ನು ಹೊಂದಿರದ ಒಂದು ಜನಾಂಗವಾಗಿದ್ದಾರೆ. ಆದರೆ ಕೊನೆಗೂ ಈಗ ಅವರು ವಾಗ್ದತ್ತ ದೇಶದ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಈ ದೇಶವನ್ನು ಅವರು ಸ್ವಾಧೀನಮಾಡಿಕೊಳ್ಳುವಾಗ ಏನು ಸಂಭವಿಸಲಿದೆ? ಅವರು ಅಲ್ಲಿ ಯಾವ ಸಮಸ್ಯೆಗಳನ್ನು ಎದುರಿಸಲಿದ್ದಾರೆ, ಮತ್ತು ಆ ಸಮಸ್ಯೆಗಳನ್ನು ಅವರು ಹೇಗೆ ಎದುರಿಸಬೇಕಾಗಿದೆ?

ಇಸ್ರಾಯೇಲ್ಯರು ಯೊರ್ದನ್‌ ಹೊಳೆಯನ್ನು ದಾಟಿ ಕಾನಾನ್‌ ದೇಶಕ್ಕೆ ಪ್ರವೇಶಿಸುವ ಮುನ್ನ, ಮೋಶೆಯು ಸರ್ವಸಮೂಹದವರನ್ನು ಅವರ ಮುಂದಿದ್ದ ಮಹಾ ಕೆಲಸಕ್ಕಾಗಿ ಸಿದ್ಧಗೊಳಿಸುತ್ತಾನೆ. ಹೇಗೆ? ಒಂದರ ಅನಂತರ ಇನ್ನೊಂದು ಉಪನ್ಯಾಸಗಳನ್ನು ಕೊಡುವ ಮೂಲಕವೇ. ಈ ಉಪನ್ಯಾಸಗಳಲ್ಲಿ ಉತ್ತೇಜನ ಮತ್ತು ಪ್ರಚೋದನೆ, ಬುದ್ಧಿವಾದ ಮತ್ತು ಎಚ್ಚರಿಕೆಗಳು ಸೇರಿದ್ದವು. ಯೆಹೋವನು ಅನನ್ಯಭಕ್ತಿಯನ್ನು ಕೇಳಿಕೊಳ್ಳುತ್ತಾನೆ ಮತ್ತು ಇಸ್ರಾಯೇಲ್ಯರು ತಮ್ಮ ಸುತ್ತಲಿರುವ ಜನಾಂಗಗಳ ಮಾರ್ಗಗಳನ್ನು ಅನುಕರಿಸಲೇಬಾರದು ಎಂದು ಅವನು ಅವರಿಗೆ ಜ್ಞಾಪಕಹುಟ್ಟಿಸುತ್ತಾನೆ. ಈ ಉಪನ್ಯಾಸಗಳೇ, ಬೈಬಲ್‌ ಪುಸ್ತಕವಾದ ಧರ್ಮೋಪದೇಶಕಾಂಡದ ಮುಖ್ಯ ಭಾಗವಾಗಿವೆ. ಮತ್ತು ಅದರಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದಗಳು ಇಂದಿರುವ ನಮಗೆ ಅಗತ್ಯವಾದವುಗಳಾಗಿವೆ, ಏಕೆಂದರೆ ನಾವು ಸಹ ಯೆಹೋವನಿಗೆ ಅನನ್ಯಭಕ್ತಿಯನ್ನು ಸಲ್ಲಿಸುವುದು ಒಂದು ಪಂಥಾಹ್ವಾನವಾಗಿರುವ ಲೋಕದಲ್ಲಿ ಇಂದು ಜೀವಿಸುತ್ತಿದ್ದೇವೆ.​—⁠ಇಬ್ರಿಯ 4:12.

ಕೊನೆಯ ಅಧ್ಯಾಯವನ್ನು ಬಿಟ್ಟು ಈ ಪುಸ್ತಕದ ಬೇರೆಲ್ಲಾ ಭಾಗವನ್ನು ಮೋಶೆಯು ಬರೆದನು. ಈ ಪುಸ್ತಕವು ಎರಡು ತಿಂಗಳುಗಳಿಗಿಂತ ಸ್ವಲ್ಪ ಹೆಚ್ಚು ಕಾಲವನ್ನು ಆವರಿಸಿತು. * (ಧರ್ಮೋಪದೇಶಕಾಂಡ 1:4; ಯೆಹೋಶುವ 4:19) ಅದರಲ್ಲಿ ತಿಳಿಸಲ್ಪಟ್ಟಿರುವ ವಿಷಯವು, ಯೆಹೋವನನ್ನು ನಮ್ಮ ಪೂರ್ಣಹೃದಯದಿಂದ ಪ್ರೀತಿಸುವಂತೆ ಮತ್ತು ಆತನನ್ನು ನಂಬಿಗಸ್ತಿಕೆಯಿಂದ ಸೇವಿಸುವಂತೆ ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ನೋಡೋಣ.

‘ನೀವು ನೋಡಿದ ಸಂಗತಿಗಳನ್ನು ಎಷ್ಟುಮಾತ್ರವೂ ಮರೆಯದಿರಿ’

(ಧರ್ಮೋಪದೇಶಕಾಂಡ 1:​1–4:49)

ಮೋಶೆಯು ತನ್ನ ಮೊದಲನೆಯ ಉಪನ್ಯಾಸದಲ್ಲಿ, ಅರಣ್ಯದಲ್ಲಿ ಅವರಿಗಾದ ಕೆಲವು ಅನುಭವಗಳನ್ನು ಸವಿವರವಾಗಿ ವರ್ಣಿಸುತ್ತಾನೆ. ಇವುಗಳಲ್ಲಿ ವಿಶೇಷವಾಗಿ, ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಇಸ್ರಾಯೇಲ್ಯರು ಸಿದ್ಧರಾಗುತ್ತಿರುವಾಗ ಅವರಿಗೆ ಉಪಯುಕ್ತವಾಗುವ ಅನುಭವಗಳೂ ಸೇರಿದ್ದವು. ನ್ಯಾಯಾಧಿಪತಿಗಳ ನೇಮಕದ ವೃತ್ತಾಂತವು, ಯೆಹೋವನು ತನ್ನ ಜನರಿಗೆ ಪ್ರೀತಿಪರ ಆರೈಕೆಯು ದೊರಕುವಂಥ ರೀತಿಯಲ್ಲಿ ಅವರನ್ನು ಸಂಘಟಿಸುತ್ತಾನೆ ಎಂಬುದನ್ನು ಅವರಿಗೆ ನೆನಪಿಸಿರಲೇಬೇಕು. ಹತ್ತು ಮಂದಿ ಗೂಢಚಾರರು ತಂದ ಕೆಟ್ಟ ವರದಿ, ಮತ್ತು ಅದನ್ನು ಆಲಿಸಿದ ಹಿಂದಿನ ಸಂತತಿಯು ವಾಗ್ದತ್ತ ದೇಶವನ್ನು ಪ್ರವೇಶಿಸಲು ತಪ್ಪಿಹೋದ ಸಂಗತಿಯನ್ನೂ ಮೋಶೆ ನೆನಪಿಸುತ್ತಾನೆ. ಈ ಎಚ್ಚರಿಕೆಯ ಉದಾಹರಣೆಯು, ವಾಗ್ದತ್ತ ದೇಶವು ತಮ್ಮ ಕಣ್ಮುಂದೆ ಇರುವುದನ್ನು ನೋಡುತ್ತಿದ್ದ ಮೋಶೆಯ ಕೇಳುಗರ ಮೇಲೆ ಬೀರಿದ ಪ್ರಭಾವವನ್ನು ತುಸು ಆಲೋಚಿಸಿರಿ.

ಯೊರ್ದನ್‌ ಹೊಳೆಯನ್ನು ದಾಟುವ ಮುನ್ನ ತಮಗೆ ಯೆಹೋವನು ನೀಡಿದ ವಿಜಯಗಳನ್ನು ನೆನಪಿಸಿಕೊಳ್ಳುವುದು, ಹೊಳೆಯನ್ನು ದಾಟಿ ಆ ಪಕ್ಕದಲ್ಲಿ ತಮ್ಮ ದಂಡಯಾತ್ರೆಯನ್ನು ಆರಂಭಿಸಲು ಸಿದ್ಧರಾಗಿ ನಿಂತಿದ್ದ ಇಸ್ರಾಯೇಲ್ಯರಲ್ಲಿ ಧೈರ್ಯವನ್ನು ತುಂಬಿಸಿರಲೇಬೇಕು. ಸ್ವಲ್ಪ ಸಮಯದಲ್ಲಿಯೇ ಅವರು ಸ್ವಾಧೀನಪಡಿಸಿಕೊಳ್ಳಲಿರುವ ದೇಶವು ವಿಗ್ರಹಾರಾಧನೆಯಿಂದ ತುಂಬಿತ್ತು. ಆದುದರಿಂದ, ಮೋಶೆಯು ವಿಗ್ರಹಾರಾಧನೆಯ ವಿರುದ್ಧ ದೃಢವಾದ ಎಚ್ಚರಿಕೆಯನ್ನು ನೀಡುವುದು ಎಷ್ಟು ಸೂಕ್ತವಾಗಿತ್ತು!

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

2:​4-6, 9, 19, 24, 31-35; 3:​1-6​—⁠ಇಸ್ರಾಯೇಲ್ಯರು, ಯೊರ್ದನಿನ ಪೂರ್ವದಲ್ಲಿ ವಾಸಿಸುತ್ತಿದ್ದ ಕೆಲವು ಜನರನ್ನು ಹತಿಸಿ, ಇತರರನ್ನು ಹತಿಸದೇ ಇದ್ದದ್ದೇಕೆ? ಏಸಾವನ ವಂಶದವರೊಂದಿಗೆ ಯುದ್ಧ ಮಾಡಬಾರದೆಂದು ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. ಏಕೆ? ಏಕೆಂದರೆ ಅವರು ಯಾಕೋಬನ ಅಣ್ಣನ ಸಂತತಿಯವರಾಗಿದ್ದರು. ಇಸ್ರಾಯೇಲ್ಯರು, ಮೋವಾಬ್ಯರನ್ನು ಮತ್ತು ಅಮ್ಮೋನಿಯರನ್ನು ದುರುಪಯೋಗಿಸಬಾರದಿತ್ತು ಹಾಗೂ ಅವರ ವಿರುದ್ಧವಾಗಿ ಯುದ್ಧ ಮಾಡಬಾರದಿತ್ತು. ಏಕೆಂದರೆ, ಅವರು ಅಬ್ರಹಾಮನ ಸೋದರಳಿಯನಾಗಿದ್ದ ಲೋಟನ ಸಂತತಿಯವರಾಗಿದ್ದರು. ಆದರೆ, ಅಮೋರಿಯರ ರಾಜರಾದ ಸೀಹೋನ ಮತ್ತು ಓಗರಿಗೆ ಅಂಥ ಯಾವುದೇ ಸಂಬಂಧವಿರಲಿಲ್ಲ. ತಮ್ಮ ಅಧೀನದಲ್ಲಿದ್ದ ದೇಶದ ಮೇಲೆ ಅವರಿಗೆ ಯಾವುದೇ ಹಕ್ಕಿರಲಿಲ್ಲ. ಆದುದರಿಂದ, ಸೀಹೋನನು ಇಸ್ರಾಯೇಲ್ಯರು ಆ ದೇಶವನ್ನು ದಾಟಿಹೋಗುವಂತೆ ಬಿಡಲು ನಿರಾಕರಿಸಿದಾಗ ಮತ್ತು ಓಗನು ಅವರೊಡನೆ ಯುದ್ಧ ಮಾಡಲು ಬಂದಾಗ, ಅವರ ಪಟ್ಟಣಗಳನ್ನು ಧ್ವಂಸಮಾಡುವಂತೆ ಹಾಗೂ ಒಬ್ಬರನ್ನೂ ಉಳಿಸದಂತೆ ಯೆಹೋವನು ಇಸ್ರಾಯೇಲ್ಯರಿಗೆ ಅಪ್ಪಣೆಕೊಟ್ಟನು.

4:​15-​20, 23, 24​—⁠ಯಾವುದೇ ಮೂರ್ತಿಯನ್ನು ಮಾಡುವುದರ ನಿಷೇಧವು, ಕಲಾ ಸೌಂದರ್ಯಕ್ಕಾಗಿ ಯಾವುದೇ ವಸ್ತುವನ್ನು ಇಡುವುದನ್ನೂ ತಪ್ಪೆಂದು ಸೂಚಿಸುತ್ತದೊ? ಇಲ್ಲ. ಇಲ್ಲಿ ಕೊಡಲ್ಪಟ್ಟಿರುವ ನಿಷೇಧವು, ಆರಾಧನೆಗಾಗಿ ಮೂರ್ತಿಗಳನ್ನು ಮಾಡುವುದರ ವಿರುದ್ಧವಾಗಿತ್ತು​—⁠‘ಅವುಗಳನ್ನು ಪೂಜಿಸುವ ಮತ್ತು ನಮಸ್ಕರಿಸುವ’ ವಿರುದ್ಧ ಒಂದು ನಿಷೇಧವಾಗಿತ್ತು. ಕಲಾ ಸೌಂದರ್ಯಕ್ಕಾಗಿ ಶಿಲ್ಪಕೃತಿಗಳ ಕೆತ್ತನೆಯನ್ನು ಅಥವಾ ಯಾವುದೇ ವಸ್ತುವಿನ ವರ್ಣಚಿತ್ರಗಳನ್ನು ಬಿಡಿಸುವುದನ್ನು ಶಾಸ್ತ್ರವಚನಗಳು ನಿಷೇಧಿಸುವುದಿಲ್ಲ.​—⁠1 ಅರಸುಗಳು 7:​18, 25.

ನಮಗಾಗಿರುವ ಪಾಠಗಳು:

1:​2, 19. “[ದಶಾಜ್ಞೆಯು ಎಲ್ಲಿ ನೀಡಲ್ಪಟ್ಟಿತೊ ಆ ಸೀನಾಯಿ ಬೆಟ್ಟದ ಸುತ್ತಲಿನ ಬೆಟ್ಟಪ್ರದೇಶವಾದ] ಹೋರೇಬಿನಿಂದ ಸೇಯೀರ್‌ ಬೆಟ್ಟಗಳ ಮಾರ್ಗವಾಗಿ” ಕಾದೇಶ್‌ಬರ್ನೇಯಕ್ಕೆ ಹೋಗಲು ಕೇವಲ “ಹನ್ನೊಂದು ದಿನದ ದಾರಿ” ಇದ್ದರೂ, ಇಸ್ರಾಯೇಲ್ಯರು ಅರಣ್ಯದಲ್ಲಿ ಸುಮಾರು 38 ವರುಷಗಳ ಕಾಲ ಅಲೆದಾಡಿದರು. ದೇವರಾದ ಯೆಹೋವನಿಗೆ ಅವಿಧೇಯತೆಯನ್ನು ತೋರಿಸಿದಕ್ಕಾಗಿ ಎಂಥ ಒಂದು ಬೆಲೆಯನ್ನು ತೆರಬೇಕಾಯಿತು!​—⁠ಅರಣ್ಯಕಾಂಡ 14:​26-34.

1:​16, 17. ಇಂದು ಸಹ ದೇವರ ನ್ಯಾಯವಿಚಾರಣೆಯ ಮಟ್ಟಗಳು ಅದೇ ಆಗಿವೆ. ಯಾರಿಗೆ ನ್ಯಾಯವಿಚಾರಣಾ ಕಮಿಟಿಯಲ್ಲಿ ಸೇವೆಸಲ್ಲಿಸುವ ಜವಾಬ್ದಾರಿಯು ವಹಿಸಲ್ಪಟ್ಟಿದೆಯೋ ಅವರು, ಪಕ್ಷಪಾತ ಅಥವಾ ಮನುಷ್ಯನ ಭಯವು ತಮ್ಮ ನ್ಯಾಯತೀರ್ಪನ್ನು ತಿರುಚುವಂತೆ ಬಿಡಬಾರದು.

4:⁠9. ‘ಅವರು ನೋಡಿದ ಸಂಗತಿಗಳನ್ನು ಎಷ್ಟುಮಾತ್ರವೂ ಮರೆಯದೆ’ ಇರುವುದು ಇಸ್ರಾಯೇಲ್ಯರ ಯಶಸ್ಸಿಗೆ ಬಹಳ ಪ್ರಾಮುಖ್ಯವಾಗಿತ್ತು. ವಾಗ್ದತ್ತ ಹೊಸ ಲೋಕವು ಸಮೀಪಿಸುತ್ತಾ ಇರುವಾಗ, ಯೆಹೋವನ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿದ್ದು ಆತನ ಅದ್ಭುತಕರ ಕ್ರಿಯೆಗಳನ್ನು ಯಾವಾಗಲೂ ನಮ್ಮ ಕಣ್ಮುಂದೆ ಹಚ್ಚಹಸುರಾಗಿ ಇಟ್ಟುಕೊಳ್ಳುವುದು ಅತಿ ಪ್ರಾಮುಖ್ಯವಾಗಿದೆ.

ಯೆಹೋವನನ್ನು ಪ್ರೀತಿಸಿರಿ, ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಿರಿ

(ಧರ್ಮೋಪದೇಶಕಾಂಡ 5:​1–26:19)

ಮೋಶೆಯು ತನ್ನ ಎರಡನೆಯ ಉಪನ್ಯಾಸದಲ್ಲಿ, ಸೀನಾಯಿ ಬೆಟ್ಟದಲ್ಲಿ ಧರ್ಮಶಾಸ್ತ್ರವು ನೀಡಲ್ಪಟ್ಟ ವಿಷಯವನ್ನು ಮರುಜ್ಞಾಪಿಸುತ್ತಾನೆ ಮತ್ತು ದಶಾಜ್ಞೆಗಳನ್ನು ಪುನಃ ಹೇಳುತ್ತಾನೆ. ಸಂಪೂರ್ಣ ನಾಶನಕ್ಕೆ ಗುರಿಯಾಗಲಿಕ್ಕಿದ್ದ ಏಳು ಜನಾಂಗಗಳ ಬಗ್ಗೆ ಅಲ್ಲಿ ತಿಳಿಸಲಾಯಿತು. ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ ಕಲಿತುಕೊಂಡ ಒಂದು ಪ್ರಾಮುಖ್ಯ ಪಾಠವನ್ನು ಅವರ ಜ್ಞಾಪಕಕ್ಕೆ ತರಲಾಯಿತು. ಆ ಪಾಠವು, “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ” ಎಂಬುದೇ ಆಗಿದೆ. ಅವರ ಹೊಸ ಸನ್ನಿವೇಶದಲ್ಲಿ, ಇಸ್ರಾಯೇಲ್ಯರು ‘ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಬೇಕಿತ್ತು.’​—⁠ಧರ್ಮೋಪದೇಶಕಾಂಡ 8:3; 11:⁠8.

ಮುಂದಕ್ಕೆ ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿ ನೆಲೆಸುವಾಗ, ಅವರಿಗೆ ಕೇವಲ ಆರಾಧನೆಗೆ ಸಂಬಂಧಿಸಿದ ನಿಯಮಗಳು ಮಾತ್ರವಲ್ಲ ನ್ಯಾಯವಿಚಾರಣೆ, ಸರಕಾರ, ಯುದ್ಧ, ಮತ್ತು ಪ್ರತಿನಿತ್ಯದ ಸಾಮಾಜಿಕ ಹಾಗೂ ಖಾಸಗಿ ಜೀವನದ ಕುರಿತಾದ ನಿಯಮಗಳೂ ಅಗತ್ಯವಿದ್ದವು. ಈ ನಿಯಮಗಳನ್ನು ಮೋಶೆಯು ಪುನರ್ವಿಮರ್ಶಿಸುತ್ತಾನೆ ಮತ್ತು ಯೆಹೋವನನ್ನು ಪ್ರೀತಿಸುವ ಹಾಗೂ ಆತನ ಆಜ್ಞೆಗಳಿಗೆ ವಿಧೇಯರಾಗುವ ಅಗತ್ಯವನ್ನು ಎತ್ತಿತೋರಿಸುತ್ತಾನೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

8:​3, 4​—⁠ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚರಿಸುತ್ತಿದ್ದ ಸಮಯದಲ್ಲಿ ಯಾವ ವಿಧದಲ್ಲಿ ಅವರ ಉಡುಪು ಜೀರ್ಣವಾಗಲಿಲ್ಲ ಮತ್ತು ಕಾಲುಗಳು ಬಾತುಹೋಗಲಿಲ್ಲ? ಕ್ರಮವಾಗಿ ಒದಗಿಸಲ್ಪಟ್ಟ ಮನ್ನದಂತೆಯೇ ಇದೊಂದು ದೇವರ ಅದ್ಭುತಕರ ಒದಗಿಸುವಿಕೆಯಾಗಿತ್ತು. ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚರಿಸಲು ಆರಂಭಿಸುವ ಮುನ್ನ ಧರಿಸುತ್ತಿದ್ದ ಅದೇ ಬಟ್ಟೆಗಳನ್ನು ಮತ್ತು ಪಾದರಕ್ಷೆಯನ್ನು ಉಪಯೋಗಿಸುತ್ತಿದ್ದರು. ಮಕ್ಕಳು ಬೆಳೆದು ದೊಡ್ಡವರಾದಾಗ ಮತ್ತು ಪ್ರಾಯಸ್ಥರು ಮೃತಪಟ್ಟಾಗ ಬಹುಶಃ ಅವರ ಉಡಿಗೆತೊಡಿಗೆ ಹಾಗೂ ಪಾದರಕ್ಷೆಯನ್ನು ಇತರರಿಗೆ ದಾಟಿಸಿರಬಹುದು. ಅರಣ್ಯಸಂಚಾರದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಮಾಡಲ್ಪಟ್ಟ ಎರಡು ಖಾನೇಷುಮಾರಿಗಳ ವರದಿಯು ತೋರಿಸುವಂತೆ, ಆ ಸಮಯಾವಧಿಯಲ್ಲಿ ಇಸ್ರಾಯೇಲ್ಯರ ಸಂಖ್ಯೆಯು ಹೆಚ್ಚಾಗಲಿಲ್ಲ. ಆದುದರಿಂದ, ಉಡಿಗೆತೊಡಿಗೆ ಮತ್ತು ಪಾದರಕ್ಷೆಯ ಆರಂಭದ ಸರಬರಾಯಿಯೇ ಅವರಿಗೆ ಸಾಕಾಗಿದ್ದಿರಬೇಕು.​—⁠ಅರಣ್ಯಕಾಂಡ 2:32; 26:51.

14:21​—⁠ಸ್ವತಃ ತಾವೇ ತಿನ್ನದಿರುವ ರಕ್ತ ಬಸಿಯದ ಸತ್ತ ಪ್ರಾಣಿಯನ್ನು ಇಸ್ರಾಯೇಲ್ಯರು ಏಕೆ ಪರದೇಶೀಯರಿಗೆ ತಿನ್ನುವದಕ್ಕೆ ಕೊಡಸಾಧ್ಯವಿತ್ತು ಅಥವಾ ಅನ್ಯರಿಗೆ ಮಾರಸಾಧ್ಯವಿತ್ತು? ಬೈಬಲಿನಲ್ಲಿ “ಪರದೇಶಿ” ಎಂಬುದಾಗಿ ಹೇಳುವಾಗ ಅದು, ಯೆಹೂದಿ ಮತಾವಲಂಬಿಯಾಗಿ ಪರಿಣಮಿಸಿರುವ ಒಬ್ಬ ಇಸ್ರಾಯೇಲ್ಯನಲ್ಲದವನಿಗೆ ಅಥವಾ ಆ ದೇಶದ ಮೂಲಭೂತ ನಿಯಮಗಳಿಗನುಸಾರ ಜೀವಿಸುವ ಆದರೆ ಯೆಹೋವನ ಆರಾಧಕನಾಗಿರದ ನೆಲಸಿಗನಿಗೆ ಸೂಚಿತವಾಗಿದೆ. ಯೆಹೂದಿ ಮತಾವಲಂಬಿಗಳಾಗಿರದಿದ್ದ ಪರದೇಶೀಯರೂ ಅನ್ಯರೂ ನಿಯಮದೊಡಂಬಡಿಕೆಯ ಕೆಳಗಿರಲಿಲ್ಲ, ಮತ್ತು ಈ ಕಾರಣದಿಂದ ರಕ್ತ ಬಸಿಯದ ಸತ್ತ ಪ್ರಾಣಿಯನ್ನು ಅವರು ವಿವಿಧ ರೀತಿಗಳಲ್ಲಿ ಉಪಯೋಗಿಸಸಾಧ್ಯವಿತ್ತು. ಅಂಥ ಪ್ರಾಣಿಗಳನ್ನು ಅವರಿಗೆ ಕೊಡಲು ಅಥವಾ ಮಾರಲು ಇಸ್ರಾಯೇಲ್ಯರು ಅನುಮತಿಸಲ್ಪಟ್ಟಿದ್ದರು. ಆದರೆ ಇನ್ನೊಂದು ಬದಿಯಲ್ಲಿ, ಯೆಹೂದಿ ಮತಾವಲಂಬಿಗಳು ನಿಯಮದೊಡಂಬಡಿಕೆಗೆ ಬದ್ಧರಾಗಿದ್ದರು. ಯಾಜಕಕಾಂಡ 17:10ರಲ್ಲಿ ಸೂಚಿಸಲ್ಪಟ್ಟಂತೆ, ಅಂಥ ವ್ಯಕ್ತಿಗಳು ಪ್ರಾಣಿಯ ರಕ್ತವನ್ನು ಸೇವಿಸುವುದರಿಂದ ನಿಷೇಧಿಸಲ್ಪಟ್ಟಿದ್ದರು.

24:6​—⁠“ಬೀಸುವಕಲ್ಲನ್ನು ಪೂರ್ತಿಯಾಗಲಿ ಅರ್ಧವಾಗಲಿ” ಒತ್ತೆತೆಗೆದುಕೊಳ್ಳುವುದು, “ಜೀವನಾಧಾರವನ್ನೇ” ಒತ್ತೆಯಾಗಿ ತೆಗೆದುಕೊಳ್ಳುವುದಕ್ಕೆ ಸಮಾನವಾಗಿತ್ತು ಏಕೆ? ಪೂರ್ತಿಯಾಗಲಿ ಅರ್ಧವಾಗಲಿ ಬೀಸುವಕಲ್ಲು ಒಬ್ಬ ವ್ಯಕ್ತಿಯ ‘ಜೀವನಾಧಾರ’ ಇಲ್ಲವೆ ಜೀವನ ನಡೆಸಲಿಕ್ಕಾಗಿರುವ ಸಾಧನವನ್ನು ಸೂಚಿಸುತ್ತದೆ. ಇದರಲ್ಲಿ ಯಾವುದೇ ಒಂದನ್ನು ಒತ್ತೆಯಾಗಿ ತೆಗೆದುಕೊಂಡರೆ ಅವನ ಕುಟುಂಬದವರೆಲ್ಲರೂ ತಮ್ಮ ದೈನಂದಿನ ಆಹಾರದಿಂದ ವಂಚಿತರಾಗುವರು.

25:9​—⁠ಮೈದುನ ಧರ್ಮವನ್ನು ನೆರವೇರಿಸಲು ನಿರಾಕರಿಸುವವನ ಕಾಲಿನಿಂದ ಕೆರವನ್ನು ತೆಗೆಯುವುದು ಮತ್ತು ಅವನ ಮುಖದ ಮೇಲೆ ಉಗುಳುವುದು ಏನನ್ನು ಸೂಚಿಸುತ್ತದೆ? “ಯಾವದಾದರೊಂದು ವಸ್ತುವನ್ನು ತೆಗೆದುಕೊಳ್ಳುವಾಗ . . . ಮಾತನ್ನು ದೃಢಪಡಿಸುವದಕ್ಕೋಸ್ಕರ ಇಸ್ರಾಯೇಲ್ಯರಲ್ಲಿ ಪೂರ್ವಕಾಲದಿಂದಿದ್ದ ಪದ್ಧತಿ ಯಾವದೆಂದರೆ​—⁠ಕೊಡುವವನು ತೆಗೆದುಕೊಳ್ಳುವವನಿಗೆ ತನ್ನ ಕೆರವನ್ನು ಕೊಡುವನು.” (ರೂತಳು 4:7) ಆದುದರಿಂದ ಮೈದುನ ಧರ್ಮವನ್ನು ನೆರವೇರಿಸಲು ನಿರಾಕರಿಸಿದ ಮನುಷ್ಯನ ಕಾಲಿನಿಂದ ಕೆರವನ್ನು ತೆಗೆಯುವುದು, ಅವನು ತನ್ನ ಸ್ಥಾನವನ್ನು ಹಾಗೂ ತನ್ನ ಅಣ್ಣನಿಗೆ ಸಂತಾನವನ್ನು ನೀಡುವ ತನ್ನ ಅಧಿಕಾರವನ್ನು ತ್ಯಜಿಸಿದ್ದಾನೆ ಎಂಬುದನ್ನು ದೃಢಪಡಿಸಿತು. ಇದು ಒಂದು ನಾಚಿಕೆಯ ಸಂಗತಿಯಾಗಿತ್ತು. (ಧರ್ಮೋಪದೇಶಕಾಂಡ 25:10) ಅವನ ಮುಖದ ಮೇಲೆ ಉಗುಳುವುದು ಅವಮಾನದ ಒಂದು ಕೃತ್ಯವಾಗಿತ್ತು.​—⁠ಅರಣ್ಯಕಾಂಡ 12:⁠14.

ನಮಗಾಗಿರುವ ಪಾಠಗಳು:

6:​6-9. ಧರ್ಮಶಾಸ್ತ್ರವನ್ನು ತಿಳಿದಿರಬೇಕೆಂದು ಇಸ್ರಾಯೇಲ್ಯರು ಆಜ್ಞಾಪಿಸಲ್ಪಟ್ಟಂತೆ, ನಾವು ಸಹ ದೇವರ ಆಜ್ಞೆಗಳನ್ನು ತಿಳಿದಿರಬೇಕು, ಅವುಗಳನ್ನು ಎಲ್ಲಾ ಸಮಯದಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕು, ಮತ್ತು ನಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಬೇಕು. ಅವುಗಳನ್ನು ನಾವು “ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು,” ಅಂದರೆ ನಮ್ಮ ಕೈಯಿಂದ ಸೂಚಿತವಾಗುವ ನಮ್ಮ ಕೃತ್ಯಗಳು ನಾವು ಯೆಹೋವನಿಗೆ ವಿಧೇಯರಾಗಿದ್ದೇವೆ ಎಂಬುದನ್ನು ತೋರಿಸಿಕೊಡಬೇಕು. ಅಷ್ಟುಮಾತ್ರವಲ್ಲದೆ, “ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ” ನಮ್ಮ ವಿಧೇಯತೆಯು ಎಲ್ಲರಿಗೂ ಪ್ರತ್ಯಕ್ಷವಾಗಬೇಕು.

6:16. ಇಸ್ರಾಯೇಲ್ಯರು ಮಸ್ಸದಲ್ಲಿ ಕುಡಿಯಲು ನೀರಿಲ್ಲದ್ದಕ್ಕಾಗಿ ಅಪನಂಬಿಕೆಯಿಂದ ಗುಣುಗುಟ್ಟುವ ಮೂಲಕ ಯೆಹೋವನನ್ನು ಪರೀಕ್ಷಿಸಿದಂತೆ ನಾವು ಎಂದಿಗೂ ಪರೀಕ್ಷಿಸಬಾರದು.​—⁠ವಿಮೋಚನಕಾಂಡ 17:​1-7.

8:​11-18. ಪ್ರಾಪಂಚಿಕತೆಯು ನಾವು ಯೆಹೋವನನ್ನು ಮರೆಯುವಂತೆ ಮಾಡಬಲ್ಲದು.

9:​4-6. ಸ್ವನೀತಿಯ ವಿರುದ್ಧ ನಾವು ಎಚ್ಚರದಿಂದಿರಬೇಕು.

13:⁠6. ಯೆಹೋವನ ಆರಾಧನೆಯಿಂದ ನಮ್ಮನ್ನು ದೂರಸೆಳೆಯುವಂತೆ ನಾವು ಯಾರಿಗೂ ಅನುಮತಿಸಬಾರದು.

14:⁠1. ಸ್ವಂತ ದೇಹವನ್ನು ಗಾಯಮಾಡಿಕೊಳ್ಳುವುದು, ಮಾನವ ದೇಹಕ್ಕಾಗಿರುವ ಅಗೌರವವನ್ನು ತೋರಿಸುತ್ತದೆ. ಅಷ್ಟುಮಾತ್ರವಲ್ಲದೆ, ಅದು ಸುಳ್ಳು ಧರ್ಮಕ್ಕೆ ಸಂಬಂಧಿಸಿರಬಹುದು. ಆದುದರಿಂದ ಅದನ್ನು ತ್ಯಜಿಸಲೇಬೇಕು. (1 ಅರಸುಗಳು 18:​25-28) ಪುನರುತ್ಥಾನದಲ್ಲಿನ ನಮ್ಮ ನಿರೀಕ್ಷೆಯಿಂದಾಗಿ, ಸತ್ತವರಿಗೋಸ್ಕರ ಅತಿರೇಕವಾಗಿ ಗೋಳಾಡುವುದು ಅನುಚಿತ.

20:​5-7; 24:⁠5. ನೀವು ಮಾಡುತ್ತಿರುವ ಕೆಲಸವು ಎಷ್ಟೇ ಪ್ರಾಮುಖ್ಯವಾದದ್ದಾಗಿರಲಿ, ವಿಶೇಷ ಸನ್ನಿವೇಶದಲ್ಲಿರುವವರಿಗೆ ನೀವು ಪರಿಗಣನೆಯನ್ನು ತೋರಿಸಬೇಕು.

22:​23-27. ಒಬ್ಬ ಸ್ತ್ರೀಯು ಬಲಾತ್ಕಾರ ಸಂಭೋಗಕ್ಕೆ ಗುರಿಯಾಗುವ ಅಪಾಯದಲ್ಲಿದ್ದರೆ, ಅವಳ ಬಳಿಯಿರುವ ಅತ್ಯುತ್ತಮ ಆಯುಧವು ಗಟ್ಟಿಯಾಗಿ ಕೂಗುವುದೇ ಆಗಿದೆ.

‘ನೀವು ಜೀವವನ್ನೇ ಆದುಕೊಳ್ಳಿರಿ’

(ಧರ್ಮೋಪದೇಶಕಾಂಡ 27:​1–34:12)

ಮೋಶೆಯು ತನ್ನ ಮೂರನೆಯ ಉಪನ್ಯಾಸದಲ್ಲಿ, ಇಸ್ರಾಯೇಲ್ಯರು ಯೊರ್ದನ್‌ ಹೊಳೆಯನ್ನು ದಾಟಿದ ನಂತರ ದೊಡ್ಡ ಕಲ್ಲುಗಳ ಮೇಲೆ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಬರೆಯಬೇಕು ಎಂಬುದಾಗಿ ಮತ್ತು ಅವಿಧೇಯತೆಗೆ ಶಾಪಗಳನ್ನೂ ವಿಧೇಯತೆಗೆ ಆಶೀರ್ವಾದಗಳನ್ನೂ ಘೋಷಿಸಬೇಕು ಎಂಬುದಾಗಿ ಅವರಿಗೆ ತಿಳಿಸಿದನು. ನಾಲ್ಕನೆಯ ಉಪನ್ಯಾಸವು, ಯೆಹೋವನ ಮತ್ತು ಇಸ್ರಾಯೇಲಿನ ಮಧ್ಯೆ ಇದ್ದ ಒಡಂಬಡಿಕೆಯ ನವೀಕರಣದೊಂದಿಗೆ ಆರಂಭವಾಗುತ್ತದೆ. ಮೋಶೆಯು ಪುನಃ ಒಮ್ಮೆ ಅವಿಧೇಯತೆಯ ವಿರುದ್ಧ ಎಚ್ಚರಿಸುತ್ತಾನೆ ಮತ್ತು ‘ಜೀವವನ್ನೇ ಆದುಕೊಳ್ಳುವಂತೆ’ ಜನರನ್ನು ಉತ್ತೇಜಿಸುತ್ತಾನೆ.​—⁠ಧರ್ಮೋಪದೇಶಕಾಂಡ 30:19.

ನಾಲ್ಕು ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಮೋಶೆಯು, ನಾಯಕತ್ವದ ಬದಲಾವಣೆಯ ಕುರಿತಾಗಿಯೂ ಚರ್ಚಿಸುತ್ತಾನೆ ಮತ್ತು ಯೆಹೋವನನ್ನು ಸ್ತುತಿಸುವ ಮತ್ತು ಅಪನಂಬಿಗಸ್ತಿಕೆಯಿಂದಾಗಿ ಅನುಭವಿಸಬೇಕಾದ ಶಾಪಗಳ ಕುರಿತಾಗಿಯೂ ಎಚ್ಚರಿಸುವ ಒಂದು ಸುಂದರವಾದ ಪದ್ಯವನ್ನು ಇಸ್ರಾಯೇಲ್ಯರಿಗೆ ಕಲಿಸುತ್ತಾನೆ. ಎಲ್ಲಾ ಕುಲಗಳನ್ನು ಆಶೀರ್ವದಿಸಿದ ಅನಂತರ ಮೋಶೆಯು 120 ವರುಷ ಪ್ರಾಯದವನಾಗಿದ್ದಾಗ ಮೃತಪಟ್ಟು, ಹೂಣಲ್ಪಟ್ಟನು. ಪ್ರಲಾಪವು 30 ದಿನಗಳ ಅವಧಿಯದ್ದಾಗಿತ್ತು, ಅಂದರೆ ಧರ್ಮೋಪದೇಶಕಾಂಡ ಪುಸ್ತಕವು ಆವರಿಸಿದ ಸಮಯಾವಧಿಯ ಅರ್ಧದಷ್ಟಾಗಿತ್ತು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

33:​1-29​—⁠ಮೋಶೆಯು ಇಸ್ರಾಯೇಲ್ಯರನ್ನು ಆಶೀರ್ವದಿಸಿದಾಗ ಅವನು ಸಿಮೆಯೋನನನ್ನು ಏಕೆ ನಿರ್ದಿಷ್ಟವಾಗಿ ಉಲ್ಲೇಖಿಸಲಿಲ್ಲ? ಇದಕ್ಕೆ ಕಾರಣ, ಸಿಮೆಯೋನನೂ ಲೇವಿಯೂ “ದಾಕ್ಷಿಣ್ಯವಿಲ್ಲದೆ” ನಡಕೊಂಡಿದ್ದರು ಮತ್ತು ಅವರ ಕೋಪವು “ಕ್ರೂರ”ವಾಗಿತ್ತು. (ಆದಿಕಾಂಡ 34:​13-31; 49:​5-7) ಅವರ ಸ್ವಾಸ್ತ್ಯವು, ಇತರ ಕುಲದವರ ಸ್ವಾಸ್ತ್ಯಕ್ಕೆ ಸಮಾನವಾಗಿರಲಿಲ್ಲ. ಲೇವಿಯು 48 ಪಟ್ಟಣಗಳನ್ನು ಪಡೆದನು, ಮತ್ತು ಯೆಹೂದನಿಗೆ ದೊರೆತ ಪ್ರದೇಶದಲ್ಲಿಯೇ ಸಿಮೆಯೋನನಿಗೂ ಪಾಲುಸಿಕ್ಕಿತು. (ಯೆಹೋಶುವ 19:9; 21:​41, 42) ಆದುದರಿಂದ, ಮೋಶೆಯು ಸಿಮೆಯೋನನನ್ನು ನಿರ್ದಿಷ್ಟವಾಗಿ ಆಶೀರ್ವದಿಸಲಿಲ್ಲ. ಹಾಗಿದ್ದರೂ, ಇಸ್ರಾಯೇಲ್ಯರಿಗೆ ಸಾರ್ವತ್ರಿಕವಾಗಿ ನೀಡಿದ ಆಶೀರ್ವಾದದಲ್ಲಿ ಸಿಮೆಯೋನನಿಗೂ ಆಶೀರ್ವಾದವು ಸೇರಿತ್ತು.

ನಮಗಾಗಿರುವ ಪಾಠಗಳು:

31:12. ಸಭಾ ಕೂಟಗಳಲ್ಲಿ ಮಕ್ಕಳು ದೊಡ್ಡವರೊಂದಿಗೆ ಕುಳಿತುಕೊಳ್ಳಬೇಕು ಮತ್ತು ಕಿವಿಗೊಡಲು ಹಾಗೂ ಕಲಿಯಲು ಪ್ರಯತ್ನಿಸಬೇಕು.

32:⁠4. ಯೆಹೋವನ ಎಲ್ಲಾ ಕಾರ್ಯಗಳು ಕುಂದಿಲ್ಲದವುಗಳಾಗಿವೆ, ಅಂದರೆ ಆತನು ತನ್ನ ಗುಣಗಳಾದ ನ್ಯಾಯ, ವಿವೇಕ, ಪ್ರೀತಿ, ಮತ್ತು ಶಕ್ತಿಯನ್ನು ಸಮತೂಕ ರೀತಿಯಲ್ಲಿ ತೋರಿಸುತ್ತಾನೆ.

ನಮಗಾಗಿ ಅತಿ ಮೌಲ್ಯವುಳ್ಳ ಪುಸ್ತಕ

ಧರ್ಮೋಪದೇಶಕಾಂಡ ಪುಸ್ತಕವು ಯೆಹೋವನನ್ನು ‘ಒಬ್ಬನೇ ಯೆಹೋವನು’ ಎಂದು ಕರೆಯುತ್ತದೆ. (ಧರ್ಮೋಪದೇಶಕಾಂಡ 6:​4) ಇದು, ದೇವರೊಂದಿಗೆ ವಿಶೇಷ ಸಂಬಂಧವನ್ನು ಆನಂದಿಸುತ್ತಿದ್ದ ಜನರ ಕುರಿತು ತಿಳಿಸುವ ಪುಸ್ತಕವಾಗಿದೆ. ವಿಗ್ರಹಾರಾಧನೆಯ ವಿರುದ್ಧವಾಗಿಯೂ ಧರ್ಮೋಪದೇಶಕಾಂಡ ಪುಸ್ತಕವು ಎಚ್ಚರಿಸುತ್ತದೆ. ಅಷ್ಟುಮಾತ್ರವಲ್ಲದೆ, ಸತ್ಯ ದೇವರಿಗೆ ಅನನ್ಯಭಕ್ತಿಯನ್ನು ಸಲ್ಲಿಸುವ ಅಗತ್ಯವನ್ನೂ ಒತ್ತಿಹೇಳುತ್ತದೆ.

ನಿಶ್ಚಯವಾಗಿಯೂ ಧರ್ಮೋಪದೇಶಕಾಂಡವು ನಮಗೆ ಅತಿ ಮೌಲ್ಯವುಳ್ಳ ಪುಸ್ತಕವಾಗಿದೆ! ನಾವು ಧರ್ಮಶಾಸ್ತ್ರದ ಅಧೀನದಲ್ಲಿಲ್ಲವಾದರೂ, ಇದರಿಂದ ನಾವು ಬಹಳಷ್ಟನ್ನು ಕಲಿಯಬಲ್ಲೆವು ಮತ್ತು ಕಲಿತಂಥ ವಿಷಯವು ನಾವು ‘ನಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸುವಂತೆ’ ಸಹಾಯಮಾಡುವುದು.​—⁠ಧರ್ಮೋಪದೇಶಕಾಂಡ 6:⁠5.

[ಪಾದಟಿಪ್ಪಣಿ]

^ ಪ್ಯಾರ. 5 ಮೋಶೆಯ ಮರಣದ ದಾಖಲೆಯನ್ನು ಹೊಂದಿರುವ ಕೊನೆಯ ಅಧ್ಯಾಯವು, ಯೆಹೋಶುವನಿಂದ ಅಥವಾ ಮಹಾ ಯಾಜಕನಾದ ಎಲ್ಲಾಜಾರ್‌ನಿಂದ ಸೇರಿಸಲ್ಪಟ್ಟಿರಬಹುದು.

[ಪುಟ 24ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸೇಯೀರ್‌

ಕಾದೇಶ್‌ ಬರ್ನೇಯ

ಸೀನಾಯಿ ಬೆಟ್ಟ (ಹೋರೇಬ್‌)

ಕೆಂಪು ಸಮುದ್ರ

[ಕೃಪೆ]

Based on maps copyrighted by Pictorial Archive (Near Eastern History) Est. and Survey of Israel

[ಪುಟ 24ರಲ್ಲಿರುವ ಚಿತ್ರ]

ಮೋಶೆಯ ಉಪನ್ಯಾಸಗಳೇ ಧರ್ಮೋಪದೇಶಕಾಂಡದ ಮುಖ್ಯ ಭಾಗವಾಗಿವೆ

[ಪುಟ 26ರಲ್ಲಿರುವ ಚಿತ್ರ]

ಯೆಹೋವನು ಮನ್ನವನ್ನು ಒದಗಿಸಿದ ವಿಷಯದಿಂದ ಯಾವ ಪಾಠವನ್ನು ಕಲಿಸಲಾಯಿತು?

[ಪುಟ 26ರಲ್ಲಿರುವ ಚಿತ್ರ]

ಬೀಸುವಕಲ್ಲನ್ನು ಪೂರ್ತಿಯಾಗಲಿ ಅರ್ಧವಾಗಲಿ ಒತ್ತೆತೆಗೆದುಕೊಳ್ಳುವುದು, “ಜೀವನಾಧಾರವನ್ನೇ” ಒತ್ತೆಯಾಗಿ ತೆಗೆದುಕೊಳ್ಳುವುದಕ್ಕೆ ಸಮಾನವಾಗಿತ್ತು