ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಮುದ್ರದಿಂದ ಐಶ್ವರ್ಯ”

“ಸಮುದ್ರದಿಂದ ಐಶ್ವರ್ಯ”

ಯೆಹೋವನ ಸೃಷ್ಟಿಯ ವೈಭವ

“ಸಮುದ್ರದಿಂದ ಐಶ್ವರ್ಯ”

ಸೂರ್ಯಾಸ್ತಮಾನದ ಸಮಯಕ್ಕೆ ತಣ್ಣನೆಯ ಗಾಳಿ ಬೀಸಿ, ಸಮುದ್ರದ ಮೇಲ್ಮೈಯ ನೀರನ್ನು ಅಲುಗಾಡಿಸುತ್ತದೆ ಮತ್ತು ಇದರಿಂದಾಗಿ ಅಲೆಗಳು ಮೃದುವಾಗಿ ಬಂದು ದಡವನ್ನು ಅಪ್ಪಳಿಸುತ್ತವೆ. ದಡಕ್ಕೆ ತಾಕುವ ಅಲೆಗಳಿಂದ ಉಂಟಾಗುವ ಹಿತಕರವಾದ ಶಬ್ದವು, ಅನೇಕ ಜನರನ್ನು ಸಮುದ್ರತೀರಕ್ಕೆ ಆಕರ್ಷಿಸುತ್ತದೆ. ಅವರು ಅಲ್ಲಿ ಕುಳಿತು ವಿಶ್ರಾಂತಿಯನ್ನೂ ನೆಮ್ಮದಿಯನ್ನೂ ಅನುಭವಿಸುತ್ತಾರೆ. *

ಇಂಥ ಉದ್ದುದ್ದ ಸಮುದ್ರತೀರಗಳು, ಲೋಕದ ಸುತ್ತಲೂ ಇರುವ ಕರಾವಳಿತೀರಗಳಲ್ಲಿ ಸಾವಿರಾರು ಕಿಲೊಮೀಟರುಗಳಷ್ಟು ದೂರದ ವರೆಗಿವೆ. ಮರಳು ಮತ್ತು ನೀರಿನ ಮಧ್ಯೆ ಇರುವ ಎಂದಿಗೂ ಬದಲಾಗದ ಈ ಎಲ್ಲೆಗೆರೆಯು, ಸಮುದ್ರದ ಹತೋಟಿಯ ಪರಿಮಿತಿಯನ್ನು ತೋರಿಸುತ್ತದೆ. ಹೀಗಿರುವಂತೆ ಸೃಷ್ಟಿಕರ್ತನು ಏರ್ಪಡಿಸಿದನು. ತನ್ನ ಕುರಿತಾಗಿ ಮಾತಾಡುತ್ತ ದೇವರು, ತಾನು ‘ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ಮೇರೆಯನ್ನಾಗಿ ನೇಮಿಸಿದ್ದೇನೆ’ ಎಂದು ತಿಳಿಸಿದ್ದಾನೆ. ಆತನು ಕೂಡಿಸಿದ್ದು: “ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.”​—⁠ಯೆರೆಮೀಯ 5:22; ಯೋಬ 38:8; ಕೀರ್ತನೆ 33:⁠7.

ಸೌರವ್ಯೂಹದಲ್ಲಿರುವ ಬೇರೆ ಯಾವುದೇ ಗ್ರಹಕ್ಕಿಂತಲೂ ನಮ್ಮ ಭೂಗ್ರಹವು ಅಧಿಕಾಂಶವಾಗಿ ನೀರಿನಿಂದ ಆವರಿಸಲ್ಪಟ್ಟಿದೆ. ಭೂಗೋಳದ 70 ಪ್ರತಿಶತಕ್ಕಿಂತಲೂ ಹೆಚ್ಚು ಭಾಗವು ನೀರಿನಿಂದ ಆವರಿಸಲ್ಪಟ್ಟಿದೆ. ಮಾನವ ನಿವಾಸಕ್ಕಾಗಿ ಯೆಹೋವನು ಭೂಮಿಯನ್ನು ಸಜ್ಜುಗೊಳಿಸಿದಾಗ ಆತನು ಹೀಗೆ ಆಜ್ಞೆಯಿತ್ತನು: “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣನೆಲವು ಕಾಣಿಸಲಿ.” ಮತ್ತು “ಹಾಗೆಯೇ ಆಯಿತು.” ವೃತ್ತಾಂತವು ಕೂಡಿಸುವುದು: “ದೇವರು ಒಣನೆಲಕ್ಕೆ ಭೂಮಿಯೆಂದೂ ಜಲಸಮೂಹಕ್ಕೆ ಸಮುದ್ರವೆಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೇದೆಂದು ನೋಡಿದನು.” (ಆದಿಕಾಂಡ 1:​9, 10) ಸಾಗರಗಳಿಂದ ಏನು ಸಾಧಿಸಲ್ಪಡುತ್ತಿದೆ?

ಅನೇಕಾನೇಕ ಅದ್ಭುತಕರ ರೀತಿಯಲ್ಲಿ ಸಾಗರಗಳಲ್ಲಿನ ನೀರು ಜೀವಪೋಷಣೆಗಾಗಿ ವಿನ್ಯಾಸಿಸಲ್ಪಟ್ಟಿದೆ. ಉದಾಹರಣೆಗೆ, ನೀರಿಗೆ ಶಾಖವನ್ನು ಶೇಖರಿಸಿಡುವ ಸಾಮರ್ಥ್ಯವಿದೆ. ಈ ರೀತಿಯಲ್ಲಿ, ಸಾಗರಗಳು ಒಂದು ಬೃಹತ್‌ ಗಾತ್ರದ ಶಾಖ ಭಂಡಾರದಂತೆ ಕಾರ್ಯವೆಸಗುತ್ತವೆ. ಇದು, ಚಳಿಗಾಲದ ಕೊರೆಯುವ ಚಳಿಯನ್ನು ಕಡಿಮೆಗೊಳಿಸಲು ಸಹಾಯಮಾಡುತ್ತದೆ.

ನೀರಿಗೆ ಇನ್ನೊಂದು ರೀತಿಯ ಜೀವಪೋಷಕ ಸಾಮರ್ಥ್ಯವಿದೆ. ಬೇರೆ ಯಾವುದೇ ದ್ರವಕ್ಕೆ ಹೋಲಿಸುವಾಗ, ಇದು ಇತರ ಪದಾರ್ಥಗಳನ್ನು ಹೆಚ್ಚು ಸುಲಭವಾಗಿ ಕರಗಿಸುತ್ತದೆ. ರಾಸಾಯನಿಕ ಪ್ರತಿಕ್ರಿಯೆಗಳಿಂದಲೇ ಜೀವನದ ಕಾರ್ಯಗತಿಯು ಸಾಗುತ್ತದಾದ ಕಾರಣ, ಪ್ರತಿಕ್ರಿಯೆಗೊಳಪಡುವ ಪದಾರ್ಥಗಳನ್ನು ಕರಗಿಸಿ ಅದರಲ್ಲಿರುವ ಬಹು ಸೂಕ್ಷ್ಮ ಕಣಗಳನ್ನು ಸಂಯೋಗಿಸಬೇಕಾದರೆ ನೀರು ಖಂಡಿತವಾಗಿಯೂ ಅಗತ್ಯವಾಗಿದೆ. ಜೀವಕೋಶಗಳಲ್ಲಿ ಕಂಡುಬರುವ ಅನೇಕ ರಾಸಾಯನಿಕ ಪದಾರ್ಥಗಳು ನೀರನ್ನು ಹೊಂದಿರುತ್ತವೆ. ಸಮುದ್ರ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಎಲ್ಲಾ ರೀತಿಯ ಜೀವಿಗಳಿಗೆ ನೀರು ಅಗತ್ಯವಾಗಿದೆ. ಮತ್ತು ಭೂಮಿಯಲ್ಲಿ ಜೀವಿಸುವ ಸಸ್ಯಗಳು ಹಾಗೂ ಪ್ರಾಣಿಗಳನ್ನು ಸೇರಿಸಿ ಎಲ್ಲಾ ಜೀವಿಗಳಿಗೆ ಬೇಕಾಗಿರುವ ಈ ನೀರು ಮೂಲತಃ ಸಾಗರಗಳಿಂದಲೇ ಸಿಗುತ್ತದೆ.”

ಅಷ್ಟುಮಾತ್ರವಲ್ಲದೆ, ಭೂಸಾಗರಗಳು ವಾತಾವರಣವನ್ನು ಶುದ್ಧೀಕರಿಸುವುದರಲ್ಲಿ ಅತಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆ. ಸಾಗರಗಳಲ್ಲಿರುವ ಜೀವರಾಶಿಯು ಕಾರ್ಬನ್‌ ಡೈಆಕ್ಸೈಡನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆಮಾಡುತ್ತದೆ. ಒಬ್ಬ ಸಂಶೋಧಕರಿಗನುಸಾರ, “ಪ್ರತಿ ವರುಷ ವಾತಾವರಣಕ್ಕೆ ಕೂಡಿಸಲ್ಪಡುವ 70 ಪ್ರತಿಶತ ಆಮ್ಲಜನಕವು ಸಮುದ್ರದಲ್ಲಿರುವ ಜೀವರಾಶಿಯಿಂದ ದೊರಕುತ್ತದೆ.”

ಸಾಗರಗಳು, ರೋಗಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡಲು ನೈಸರ್ಗಿಕ ಔಷಧಿಗಳನ್ನು ಸಹ ಒದಗಿಸುತ್ತವೆ. ಶತಮಾನಗಳಿಂದ, ಮೀನಿನಿಂದ ತೆಗೆಯಲ್ಪಟ್ಟ ಅಂಶಗಳನ್ನು ಔಷಧವಾಗಿ ಉಪಯೋಗಿಸಲಾಗಿದೆ. ಕೋಡ್‌-ಲಿವರ್‌ ಆಯಿಲ್‌ (ಮೀನಿನ ಎಣ್ಣೆಯಿಂದ ತಯಾರಿಸಿದ ಮಾತ್ರೆ), ಬಹಳಷ್ಟು ವರುಷಗಳಿಂದ ಉಪಯೋಗಿಸಲ್ಪಡುತ್ತಿದೆ. ಇತ್ತೀಚೆಗೆ, ಮೀನು ಮತ್ತು ಇತರ ಸಮುದ್ರ ಜೀವಿಗಳಿಂದ ತೆಗೆಯಲ್ಪಟ್ಟ ರಾಸಾಯನಿಕ ಪದಾರ್ಥಗಳನ್ನು ಉಬ್ಬಸದ ಚಿಕಿತ್ಸೆಗೆ ಹಾಗೂ ವೈರಸ್‌ ಮತ್ತು ಕ್ಯಾನ್ಸರ್‌ ರೋಗಗಳ ಚಿಕಿತ್ಸೆಗೂ ಉಪಯೋಗಿಸಲಾಗಿದೆ.

ಸಾಗರದಿಂದ ಗಳಿಸಲಾಗುವ ಪ್ರಯೋಜನಗಳ ಆರ್ಥಿಕ ಮೌಲ್ಯವನ್ನು ಅಂದಾಜುಮಾಡಲು ಪ್ರಯತ್ನಿಸಲಾಗಿದೆ. ನಿಖರವಾಗಿ ಅದರ ಮೌಲ್ಯವನ್ನು ಹೇಳಲಾಗದಿದ್ದರೂ, ಸಂಶೋಧಕರ ಅಂದಾಜಿಗನುಸಾರ ಭೌಗೋಳಿಕ ಪರಿಸರ ವ್ಯವಸ್ಥೆಯಿಂದ ದೊರಕುವ ಆರ್ಥಿಕ ಪ್ರಯೋಜನಗಳಲ್ಲಿ ಹೆಚ್ಚುಕಡಿಮೆ ಮೂರರಲ್ಲಿ ಎರಡಂಶವು ಸಾಗರಗಳಿಂದಲೇ ದೊರಕುತ್ತವೆ. ಹೌದು, ಸಮುದ್ರಗಳು ಒಂದು ಉದ್ದೇಶದಿಂದಲೇ​—⁠ಜೀವದ ಅಗತ್ಯಗಳನ್ನು ಪೂರೈಸಲು ಮತ್ತು ಬೆಂಬಲಿಸಲು​—⁠ಸೃಷ್ಟಿಸಲ್ಪಟ್ಟವು ಎಂಬುದನ್ನು ಇದು ರುಜುಪಡಿಸುತ್ತದೆ. “ಸಮುದ್ರದಿಂದ ಐಶ್ವರ್ಯ” ಎಂಬುದಾಗಿ ಬೈಬಲ್‌ ಹೇಳುವ ಮಾತಿನೊಂದಿಗೆ ಇದು ಎಷ್ಟು ಹೊಂದಿಕೆಯಲ್ಲಿದೆ!​—⁠ಧರ್ಮೋಪದೇಶಕಾಂಡ 33:⁠19.

ಈ ಐಶ್ವರ್ಯದ ಮಹಾ ವಿನ್ಯಾಸಗಾರನೂ ರಚಕನೂ ಎಂದು ಯೆಹೋವನನ್ನು ಮಹಿಮೆಪಡಿಸಲಾಗಿದೆ. ಈ ಮುಂದಿನ ಮಾತುಗಳಿಂದ ಆತನನ್ನು ಸ್ತುತಿಸಲು ನೆಹೆಮೀಯನು ಪ್ರಚೋದಿಸಲ್ಪಟ್ಟನು: ‘ಯೆಹೋವನೇ, ನೀನೊಬ್ಬನೇ ದೇವರು; ನೀನು ಆಕಾಶವನ್ನೂ ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟುಮಾಡಿ ಜೀವಾಧಾರನಾಗಿರುತ್ತೀ.’​—⁠ನೆಹೆಮೀಯ 9:​5, 6.

[ಪಾದಟಿಪ್ಪಣಿ]

^ ಪ್ಯಾರ. 3 ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ನ (ಇಂಗ್ಲಿಷ್‌) ಸೆಪ್ಟೆಂಬರ್‌/ಅಕ್ಟೋಬರ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ನೀರು, ಗಾಳಿ, ಮತ್ತು ಅಲೆಗಳು

ನೀರು ಮತ್ತು ಗಾಳಿಯು ದೊಡ್ಡ ಅಲೆಗಳನ್ನು ಉಂಟುಮಾಡುತ್ತದೆ ಮತ್ತು ಅವು, ಇಲ್ಲಿ ತೋರಿಸಿರುವ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವಂಥ ಬಂಡೆಗಳಿಗೆ, ಕಿವುಡಾಗಿಸುವಷ್ಟು ಜೋರಾಗಿ ಭೋರ್ಗರೆಯುತ್ತಾ ಬಡಿಯುತ್ತವೆ. ಅಲೆಗಳು ಯಾವಾಗಲೂ ಸಾಗರದ ಒಂದು ಅದ್ಭುತಕರ ವೈಶಿಷ್ಟ್ಯವಾಗಿರುತ್ತವೆ ಮತ್ತು ಅವು ತಮ್ಮ ಭಯಂಕರ ಶಕ್ತಿಯನ್ನು ಪ್ರದರ್ಶಿಸುತ್ತವೆ. ಅಷ್ಟುಮಾತ್ರವಲ್ಲದೆ, ಅವು ನಮಗೆ ಸೃಷ್ಟಿಕರ್ತನ ಮಹತ್ತರವಾದ ಶಕ್ತಿಯನ್ನು ಜ್ಞಾಪಕಕ್ಕೆ ತರುತ್ತವೆ. ಯೆಹೋವನು “ಅಲ್ಲೋಲಕಲ್ಲೋಲವಾದ [“ದೊಡ್ಡ ಅಲೆಗಳುಳ್ಳ,” NW] ಸಮುದ್ರದ ಮೇಲೆ ನಡೆಯುತ್ತಾನೆ.” “ಆತನು ತನ್ನ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾನೆ, ಮತ್ತು ತನ್ನ ತಿಳಿವಳಿಕೆಯಿಂದ ಸಾಗರವನ್ನು ಶಾಂತಪಡಿಸಿದ್ದಾನೆ.” (ಯೋಬ 9:8; 26:​12, NW) ನಿಶ್ಚಯವಾಗಿಯೂ, “ಜಲರಾಶಿಗಳ ಘೋಷಕ್ಕಿಂತಲೂ ಮಹಾತರಂಗಗಳ ಗರ್ಜನೆಗಿಂತಲೂ ಉನ್ನತದಲ್ಲಿರುವ ಯೆಹೋವನ ಮಹಿಮೆಯು ಗಾಂಭೀರ್ಯವುಳ್ಳದ್ದು.”​—⁠ಕೀರ್ತನೆ 93:⁠4.

ಮರಳಿನ ಕಲಾಕೃತಿಗಳು

ಸಮುದ್ರತೀರವು ಕೆಲವೊಮ್ಮೆ, ಇಲ್ಲಿ ತೋರಿಸಿರುವ ನಮೀಬಿಯದ ಕರಾವಳಿಯಲ್ಲಿರುವ ಮರಳಿನ ದಿಬ್ಬಗಳಂಥ ಆಕರ್ಷಕ ಮರಳಿನ ಕಲಾಕೃತಿಗಳಿಗೆ ಹಿನ್ನೆಲೆಯನ್ನು ಒದಗಿಸುತ್ತದೆ. ಮರಳಿಗೆ ವಿಭಿನ್ನವಾದ ಆಕೃತಿಯನ್ನು ನೀಡುವ ಶಕ್ತಿಯು ಗಾಳಿಯಾಗಿದೆ. ಇಂಥ ಮರಳಿನ ರಾಶಿಗಳಲ್ಲಿ ಕೆಲವು ಕೇವಲ ಸಣ್ಣ ದಿಬ್ಬಗಳಂತೆ ಕಾಣಬಹುದಾದರೂ, ಇನ್ನು ಕೆಲವು 400 ಮೀಟರ್‌ಗಳಷ್ಟು ಎತ್ತರದ್ದಾಗಿರುತ್ತವೆ. ಮರಳಿನ ಅಂಥ ಅಪಾರ ಮೊತ್ತವು, “ಸಮುದ್ರತೀರದಲ್ಲಿರುವ ಉಸುಬಿನಂತೆ” ಎಂಬ ಬೈಬಲಿನ ಹೇಳಿಕೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ಈ ಹೇಳಿಕೆಯನ್ನು, ಲೆಕ್ಕಿಸಲಸಾಧ್ಯವಾದದ್ದು ಅಥವಾ ಅಳೆಯಲು ಅಸಾಧ್ಯವಾದದ್ದನ್ನು ಸೂಚಿಸಲಿಕ್ಕಾಗಿ ಉಪಯೋಗಿಸಲಾಗುತ್ತದೆ. (ಆದಿಕಾಂಡ 22:17) ಬಿರುಗಾಳಿಯಿಂದ ಅಲ್ಲೋಲಕಲ್ಲೋಲಗೊಂಡ ಸಮುದ್ರದ ಹಠಾತ್‌ ದಾಳಿಗಳನ್ನು ತಡೆಯಲು ಯೆಹೋವನು ಚಾತುರ್ಯದಿಂದ ರಚಿಸಿದ ಮರಳಿನ ತಡೆಯನ್ನು ನೋಡುವಾಗ, ಸೃಷ್ಟಿಕರ್ತನ ಮುಂದೆ ನಾವು ಮೂಕವಿಸ್ಮಿತರಾಗಿ ನಿಲ್ಲುತ್ತೇವೆ.

[ಪುಟ 9ರಲ್ಲಿರುವ ಚಿತ್ರ]

ಕ್ಯಾಮರೂನ್‌ನ, ಬಿಯಾಫ್ರ ಕೊಲ್ಲಿಯ ಸೂರ್ಯಾಸ್ತಮಾನ ಕರಾವಳಿ