ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವಳು ತನ್ನ ಸಹಪಾಠಿಗಳೊಂದಿಗೆ ತನ್ನ ನಂಬಿಕೆಗಳನ್ನು ಹಂಚಿಕೊಂಡಳು

ಅವಳು ತನ್ನ ಸಹಪಾಠಿಗಳೊಂದಿಗೆ ತನ್ನ ನಂಬಿಕೆಗಳನ್ನು ಹಂಚಿಕೊಂಡಳು

ಅವಳು ತನ್ನ ಸಹಪಾಠಿಗಳೊಂದಿಗೆ ತನ್ನ ನಂಬಿಕೆಗಳನ್ನು ಹಂಚಿಕೊಂಡಳು

ನಿಮ್ಮ ಸಹಪಾಠಿಗಳು ನಿಮ್ಮ ಬೈಬಲಾಧಾರಿತ ನಂಬಿಕೆಗಳ ಬಗ್ಗೆ ಹೆಚ್ಚು ಉತ್ತಮವಾದ ತಿಳಿವಳಿಕೆಯನ್ನು ಪಡೆಯುವಂತೆ ನೀವು ಅವರಿಗೆ ಸಹಾಯಮಾಡಲು ಬಯಸುತ್ತೀರೋ? ಪೋಲೆಂಡ್‌ನಲ್ಲಿರುವ 18 ವರ್ಷ ಪ್ರಾಯದ ಪ್ರೌಢ ಶಾಲಾ ವಿದ್ಯಾರ್ಥಿನಿಯಾಗಿರುವ ಮಾಗ್ಡಾಲೇನಾಳು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೋಪಾದಿ ತನ್ನ ನಂಬಿಕೆಗಳ ಕುರಿತು ಅನೇಕವೇಳೆ ತನ್ನ ಸಹಪಾಠಿಗಳೊಂದಿಗೆ ಮಾತಾಡುತ್ತಾಳೆ. ಇದರ ಪರಿಣಾಮವಾಗಿ, ‘ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವುದರ ಅರ್ಥವೇನು?’ ಮತ್ತು ‘ನೀವು ಯೇಸು ಕ್ರಿಸ್ತನನ್ನು ನಂಬುವುದಿಲ್ಲವೋ?’ ಎಂಬ ಪ್ರಶ್ನೆಗಳು ಅವಳಿಗೆ ಆಗಿಂದಾಗ್ಗೆ ಕೇಳಲ್ಪಟ್ಟಿವೆ. ಅವಳು ತನ್ನ ಸಹಪಾಠಿಗಳಿಗೆ ಹೇಗೆ ಸಹಾಯಮಾಡಸಾಧ್ಯವಿತ್ತು? ಮಾರ್ಗದರ್ಶನಕ್ಕಾಗಿ ಮಾಗ್ಡಾಲೇನಾ ಯೆಹೋವನಿಗೆ ಪ್ರಾರ್ಥಿಸಿದಳು ಮತ್ತು ತನ್ನ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈದಳು.​—⁠ಯಾಕೋಬ 1:⁠5.

ಒಂದು ದಿನ ಮಾಗ್ಡಾಲೇನಾ ತನ್ನ ನಂಬಿಕೆಗಳನ್ನು ಗೌರವಿಸುತ್ತಿದ್ದ ಒಬ್ಬ ಶಿಕ್ಷಕಿಯನ್ನು ಸಮೀಪಿಸಿ, ಯೆಹೋವನ ಸಾಕ್ಷಿಗಳು​—⁠ಆ ಹೆಸರಿನ ಹಿಂದಿರುವ ಸಂಸ್ಥೆ * (ಇಂಗ್ಲಿಷ್‌) ಎಂಬ ವಿಡಿಯೋವನ್ನು ತಾನು ತರಗತಿಗೆ ತೋರಿಸಬಹುದೋ ಎಂದು ಕೇಳಿದಳು. ಆ ಶಿಕ್ಷಕಿ ಇದಕ್ಕೆ ಒಪ್ಪಿಗೆಯನ್ನಿತ್ತರು. ತದನಂತರ ಮಾಗ್ಡಾಲೇನಾ ತನ್ನ ಸಹಪಾಠಿಗಳಿಗೆ ಹೇಳಿದ್ದು: “ಒಬ್ಬ ಸ್ನೇಹಿತನು ಈ ತರಗತಿಗೆ 90 ನಿಮಿಷಗಳ ಕಾರ್ಯಕ್ರಮವನ್ನು ಸಾದರಪಡಿಸುವಂತೆ ನಾನು ಏರ್ಪಾಡನ್ನು ಮಾಡುತ್ತಿದ್ದೇನೆ. ಇದರಲ್ಲಿ ಯೆಹೋವನ ಸಾಕ್ಷಿಗಳ ಕುರಿತಾದ ಒಂದು ವಿಡಿಯೋ ಪ್ರದರ್ಶನ ಹಾಗೂ ಚರ್ಚೆ ಒಳಗೂಡಿದೆ. ನೀವು ಇದಕ್ಕೆ ಹಾಜರಾಗಲು ಬಯಸುವಿರೋ?” ಪ್ರತಿಯೊಬ್ಬರೂ ಹೌದು ಎಂದು ಉತ್ತರಿಸಿದರು. ಮಾಗ್ಡಾಲೇನಾ ಮತ್ತು ಒಬ್ಬ ಅನುಭವಸ್ಥ ಪೂರ್ಣ ಸಮಯದ ಸೌವಾರ್ತಿಕನಾಗಿದ್ದ ವೊಯ್‌ಟ್ಸ್ಯೆಕ್‌, ಈ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳನ್ನು ಮಾಡತೊಡಗಿದರು.

ಈ ಕಾರ್ಯಕ್ರಮವು ಯೆಹೋವನ ಸಾಕ್ಷಿಗಳು​—⁠ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರಿನ ಮೇಲಾಧಾರಿತವಾದ 20 ನಿಮಿಷಗಳ ಒಂದು ಭಾಷಣದೊಂದಿಗೆ ಆರಂಭಗೊಳ್ಳಲಿತ್ತು. ಇದರ ಅನಂತರ ಒಂದು ಪ್ರಶ್ನೋತ್ತರ ಚರ್ಚೆಯು ನಡೆಯಲಿಕ್ಕಿತ್ತು. ಆಮೇಲೆ ಶಾಲೆಯ ಗ್ರಂಥಾಲಯದಲ್ಲಿ ವಿಡಿಯೋವನ್ನು ತೋರಿಸುವ ಏರ್ಪಾಡಿತ್ತು. ತರಗತಿಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಉಡುಗೊರೆ ಕೊಡಲ್ಪಡಲಿಕ್ಕಿತ್ತು; ಕೆಲವು ಬ್ರೋಷರ್‌ಗಳು, ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಪುಸ್ತಕ, ಮತ್ತು ಕೆಲವು ಟ್ರ್ಯಾಕ್ಟ್‌ಗಳು ಹಾಗೂ ಪತ್ರಿಕೆಗಳಿದ್ದ ಒಂದು ದೊಡ್ಡ ಲಕೋಟೆಯು ವಿತರಿಸಲ್ಪಡಲಿಕ್ಕಿತ್ತು.

ಈ ಕಾರ್ಯಕ್ರಮವು ನಡೆಯಲಿದ್ದ ದಿನದಂದು, ಕೂಡಿಬಂದಿದ್ದ ಸಭಿಕರಲ್ಲಿ 14 ಮಂದಿ ಸಹಪಾಠಿಗಳು, ಶಿಕ್ಷಕಿ, ಹಾಗೂ ಆಕಸ್ಮಿಕವಾಗಿ ಗ್ರಂಥಾಲಯದಲ್ಲಿದ್ದ 4 ಮಂದಿ ಇತರ ವಿದ್ಯಾರ್ಥಿಗಳು ಸೇರಿದ್ದರು. ಕೆಲವು ಪೋಲಿಷ್‌ ಕವಿಗಳು ಹಾಗೂ ಬರಹಗಾರರು ತಮ್ಮ ಕೃತಿಗಳಲ್ಲಿ ಯೆಹೋವ ಎಂಬ ದೈವಿಕ ನಾಮವನ್ನು ಉಪಯೋಗಿಸಿದ್ದಾರೆ ಎಂದು ವೊಯ್‌ಟ್ಸ್ಯೆಕ್‌ ಮೊದಲಾಗಿ ವಿವರಿಸಿದನು. ದೈವಿಕ ನಾಮವನ್ನು ಒಳಗೂಡಿದ್ದ ಕೆಲವು ಪುರಾತನ ಕ್ಯಾಥೊಲಿಕ್‌ ಮತಬೋಧೆಗಳ ಕುರಿತಾಗಿಯೂ ಅವನು ಸೂಚಿಸಿ ಮಾತಾಡಿದನು. ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಚಟುವಟಿಕೆಯನ್ನು ವಿವರಿಸುತ್ತಿರುವಾಗ, ಬೇರೆ ಬೇರೆ ಬ್ರಾಂಚ್‌ ಆಫೀಸುಗಳ ಬ್ರೋಷರ್‌ಗಳನ್ನು ಮತ್ತು ಅನೇಕ ಅಸೆಂಬ್ಲಿ ಹಾಲ್‌ಗಳ ಛಾಯಾಚಿತ್ರಗಳನ್ನು ಅವನು ತೋರಿಸಿದನು.

ತದನಂತರ ತುಂಬ ಲವಲವಿಕೆಯಿಂದ ಕೂಡಿದ ಚರ್ಚೆಯು ನಡೆಯಿತು. ಅವರ ಪ್ರಶ್ನೆಗಳನ್ನು ಉತ್ತರಿಸುವಾಗ ಮಾಗ್ಡಾಲೇನಾ ಮತ್ತು ವೊಯ್‌ಟ್ಸ್ಯೆಕ್‌ ಬೈಬಲನ್ನು ಉಪಯೋಗಿಸಿದರು. ಇದು ಸಭಿಕರನ್ನು ಪ್ರಭಾವಿಸಿತು ಮತ್ತು ಯೆಹೋವನ ಸಾಕ್ಷಿಗಳು ತಮ್ಮ ಸ್ವಂತ ವಿಚಾರಧಾರೆಗಳನ್ನು ಸಾರುತ್ತಿಲ್ಲ ಎಂಬುದನ್ನು ಅವರಿಗೆ ಮನದಟ್ಟುಮಾಡಿತು. ಅವರು ಕೇಳಿದ ಪ್ರಶ್ನೆಗಳಲ್ಲಿ ಕೆಲವು ಯಾವುವು, ಮತ್ತು ಅವು ಹೇಗೆ ಉತ್ತರಿಸಲ್ಪಟ್ಟವು?

ಪ್ರಶ್ನೆ: ಬೈಬಲಿನಲ್ಲಿ ತುಂಬ ಅಸ್ಪಷ್ಟ ಅಭಿವ್ಯಕ್ತಿಗಳು ಮತ್ತು ರೂಪಕಾಲಂಕಾರಗಳೇ ತುಂಬಿವೆ; ಇವುಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥನಿರೂಪಿಸಸಾಧ್ಯವಿದೆ. ಹಾಗಾದರೆ ಬೈಬಲಿನೊಂದಿಗೆ ಹೊಂದಿಕೆಯಲ್ಲಿ ಹೇಗೆ ಜೀವಿಸಸಾಧ್ಯವಿದೆ?

ಉತ್ತರ: ನಮ್ಮಲ್ಲಿರುವ ಯಾವುದೇ ವಿಚಾರಧಾರೆಯನ್ನು ಬೆಂಬಲಿಸಲಿಕ್ಕಾಗಿ ಬೈಬಲನ್ನು ಉಪಯೋಗಿಸಸಾಧ್ಯವಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಆಲೋಚಿಸಿರಿ: ಒಬ್ಬ ಲೇಖಕನು ತನ್ನ ಹೇಳಿಕೆಗಳಿಂದ ಏನನ್ನು ಅರ್ಥೈಸುತ್ತಾನೆ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸುವಲ್ಲಿ, ನೇರವಾಗಿ ಅವನನ್ನೇ ಕೇಳುವುದು ಅತ್ಯುತ್ತಮವಾದದ್ದಲ್ಲವೇ? ಮಾನವ ಕೃತಿಗಳ ಮೃತ ಲೇಖಕರಿಗೆ ಅಸದೃಶವಾಗಿ, ಬೈಬಲಿನ ಲೇಖಕನಾಗಿರುವ ಯೆಹೋವ ದೇವರು ಜೀವಂತನಾಗಿದ್ದಾನೆ. (ರೋಮಾಪುರ 1:20; 1 ಕೊರಿಂಥ 8:5, 6) ಒಂದು ಶಾಸ್ತ್ರವಚನದ ಪೂರ್ವಾಪರವು ಸರಿಯಾದ ಅರ್ಥವಿವರಣೆಯನ್ನು ಸೂಚಿಸಸಾಧ್ಯವಿದೆ. ಅಷ್ಟುಮಾತ್ರವಲ್ಲ, ಬೈಬಲ್‌ ಅನೇಕವೇಳೆ ಒಂದೇ ವಿಷಯವಸ್ತುವಿನ ಕುರಿತು ಬೇರೆ ಬೇರೆ ವಚನಗಳಲ್ಲಿ ಉಲ್ಲೇಖವನ್ನು ಮಾಡುತ್ತದೆ. ಆದುದರಿಂದ ಈ ವಚನಗಳನ್ನು ಹೋಲಿಸಿನೋಡುವುದು ಸಹಾಯಕರವಾಗಿರುವುದು. ಹೀಗೆ, ದೇವರೇ ನಮಗೆ ಶಾಸ್ತ್ರವಚನವನ್ನು ವಿವರಿಸುತ್ತಿದ್ದಾನೋ ಎಂಬಂತೆ, ಆತನೇ ನಮ್ಮ ಆಲೋಚನೆಗಳನ್ನು ಮಾರ್ಗದರ್ಶಿಸುವಂತೆ ಬಿಡಸಾಧ್ಯವಿದೆ. ಹೀಗೆ ಮಾಡುವ ಮೂಲಕ ನಾವು ಬೈಬಲಿನಲ್ಲಿ ತಿಳಿಯಪಡಿಸಲ್ಪಟ್ಟಿರುವ ದೇವರ ಚಿತ್ತವನ್ನು ತಿಳಿದುಕೊಳ್ಳಸಾಧ್ಯವಿದೆ ಮತ್ತು ಅದಕ್ಕನುಸಾರ ಜೀವಿಸಸಾಧ್ಯವಿದೆ, ಅಲ್ಲವೆ?

ಪ್ರಶ್ನೆ: ಕ್ರೈಸ್ತರು ಮತ್ತು ಯೆಹೋವನ ಸಾಕ್ಷಿಗಳ ಮಧ್ಯೆ ಯಾವ ವ್ಯತ್ಯಾಸವಿದೆ?

ಉತ್ತರ: ನಾವೂ ಕ್ರೈಸ್ತರಾಗಿದ್ದೇವೆ! ಆದರೆ ಕ್ರೈಸ್ತರಾಗಿದ್ದೇವೆ ಎಂದು ಸುಮ್ಮನೆ ಪ್ರತಿಪಾದಿಸುವುದಕ್ಕೆ ಬದಲಾಗಿ, ಯೆಹೋವನ ಸಾಕ್ಷಿಗಳು ಏನನ್ನು ನಂಬುತ್ತಾರೋ ಮತ್ತು ಅವರ ಪ್ರಯೋಜನಕ್ಕಾಗಿ ದೇವರು ಅವರಿಗೆ ಏನನ್ನು ಬೋಧಿಸುತ್ತಾನೋ ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಹೆಣಗಾಡುತ್ತಾರೆ. (ಯೆಶಾಯ 48:17, 18) ಅವರ ಎಲ್ಲಾ ಬೋಧನೆಗಳು ಬೈಬಲಾಧಾರಿತವಾಗಿರುವುದರಿಂದ, ತಮ್ಮ ಬಳಿ ಸತ್ಯವಿದೆ ಎಂಬುದು ಅವರಿಗೆ ಗೊತ್ತು.​—⁠ಮತ್ತಾಯ 7:​13, 14, 21-23.

ಪ್ರಶ್ನೆ: ನೀವು ಪೂರ್ಣ ಅಪರಿಚಿತರನ್ನು ಸಮೀಪಿಸಿ, ಅವರೊಂದಿಗೆ ಮಾತಾಡಲು ಪಟ್ಟುಹಿಡಿಯುವುದೇಕೆ? ಇದು ನಿಮ್ಮ ನಂಬಿಕೆಯನ್ನು ಇತರರ ಮೇಲೆ ಒತ್ತಾಯಭರಿತವಾಗಿ ಹೇರಿದಂತಾಗುವುದಿಲ್ಲವೇ?

ಉತ್ತರ: ಬೀದಿಯಲ್ಲಿ ಯಾರಾದರೊಬ್ಬರು ನಿಮ್ಮೊಂದಿಗೆ ವಿನಯಭರಿತರಾಗಿ ಮಾತಾಡಿ, ಒಂದು ವಿಚಾರದ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕೇಳುವುದು ತಪ್ಪು ಎಂದು ನೀವು ನೆನಸುತ್ತೀರೋ? (ಯೆರೆಮೀಯ 5:1; ಚೆಫನ್ಯ 2:​1-3) (ತದನಂತರ ವೊಯ್‌ಟ್ಸ್ಯೆಕ್‌ ಮತ್ತು ಮಾಗ್ಡಾಲೇನಾ, ಅವರು ಹೇಗೆ ದಾರಿಹೋಕರನ್ನು ಸಮೀಪಿಸಿ, ಪೋಲೆಂಡ್‌ನಲ್ಲಿ ಇತ್ತೀಚಿಗೆ ಸಂಭವಿಸಿದ ಪ್ರಳಯದಲ್ಲಿ ಕಷ್ಟಾನುಭವಿಸಿದವರ ಕುರಿತು ದೇವರು ಕಾಳಜಿವಹಿಸುತ್ತಾನೋ ಎಂದು ಕೇಳಿದರು ಎಂಬುದನ್ನು ಪ್ರತ್ಯಕ್ಷಾಭಿನಯಿಸಿದರು.) ಅವರ ಅಭಿಪ್ರಾಯವನ್ನು ಕೇಳಿಸಿಕೊಂಡ ಬಳಿಕ ನಾವು ಬೈಬಲಿನ ಕಡೆಗೆ ಗಮನಹರಿಸುತ್ತೇವೆ. ಯಾರಿಗಾದರೂ ಮಾತಾಡಲು ಇಷ್ಟವಿಲ್ಲದಿರುವಲ್ಲಿ, ಅವರಿಗೆ ವಿದಾಯ ಹೇಳಿ ನಾವು ಮುಂದುವರಿಯುತ್ತೇವೆ. (ಮತ್ತಾಯ 10:​11-14) ಇದು ಇತರರನ್ನು ಸಂಭಾಷಣೆಯಲ್ಲಿ ಒತ್ತಾಯವಾಗಿ ಒಳಗೂಡಿಸುವಂತಿದೆಯೋ? ಅಥವಾ ಜನರು ಎಂದಿಗೂ ಸಂಭಾಷಣೆಯನ್ನೇ ಮಾಡಬಾರದೊ?

ಪ್ರಶ್ನೆ: ನೀವು ಹಬ್ಬಗಳನ್ನು ಏಕೆ ಆಚರಿಸುವುದಿಲ್ಲ?

ಉತ್ತರ: ಬೈಬಲು ನಮಗೆ ಆಚರಿಸುವಂತೆ ಆಜ್ಞಾಪಿಸುವ ಏಕಮಾತ್ರ ಘಟನೆಯನ್ನು ನಾವು ಆಚರಿಸುತ್ತೇವೆ. ಅದು ಯೇಸು ಕ್ರಿಸ್ತನ ಮರಣದ ಜ್ಞಾಪಕವೇ ಆಗಿದೆ. (1 ಕೊರಿಂಥ 11:​23-26) ಹಬ್ಬಗಳ ವಿಷಯದಲ್ಲಿ ಹೇಳುವುದಾದರೆ, ಎನ್‌ಸೈಕ್ಲಪೀಡೀಯಗಳನ್ನು ಹಾಗೂ ಇತರ ವಿಶ್ವಾಸಾರ್ಹ ಮೂಲಗಳನ್ನು ಸಂಪರ್ಕಿಸುವ ಮೂಲಕ ನೀವು ಅವುಗಳ ಮೂಲದ ಕುರಿತು ತಿಳಿದುಕೊಳ್ಳಸಾಧ್ಯವಿದೆ. ಹೀಗೆ ಮಾಡುವಲ್ಲಿ, ಇಂಥ ಆಚರಣೆಗಳಲ್ಲಿ ನಾವು ಏಕೆ ಒಳಗೂಡುವುದಿಲ್ಲ ಎಂಬುದನ್ನು ನೀವೇ ಸುಲಭವಾಗಿ ಕಂಡುಕೊಳ್ಳುವಿರಿ.​—⁠2 ಕೊರಿಂಥ 6:​14-18.

ಇನ್ನೂ ಅನೇಕ ಪ್ರಶ್ನೆಗಳು ಕೇಳಲ್ಪಟ್ಟವು ಮತ್ತು ಉತ್ತರಿಸಲ್ಪಟ್ಟವು. ಈ ಚರ್ಚೆಯು ಎಷ್ಟು ದೀರ್ಘವಾಗಿತ್ತೆಂದರೆ, ವಿಡಿಯೋ ಪ್ರದರ್ಶನವನ್ನು ಮುಂದೂಡಬೇಕಾಯಿತು.

ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನಾಗಿತ್ತು? ಅದನ್ನು ಮಾಗ್ಡಾಲೇನಾಳೇ ನಮಗೆ ಹೇಳಲಿ: “ಸಾಮಾನ್ಯವಾಗಿ ಮೂರ್ಖತನದಿಂದ ವರ್ತಿಸುತ್ತಿದ್ದು, ಇತರರನ್ನು ಕುಚೋದ್ಯಮಾಡುತ್ತಿದ್ದಂಥ ವಿದ್ಯಾರ್ಥಿಗಳು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದನ್ನು ನೋಡಿ ನಾನು ಮೂಕವಿಸ್ಮಿತಳಾದೆ. ತಾವು ನಾಸ್ತಿಕರೆಂದು ಅವರು ಹೇಳಿಕೊಳ್ಳುತ್ತಿದ್ದರಾದರೂ, ಚರ್ಚೆಯ ಸಮಯದಲ್ಲಿ ಅವರು ದೇವರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದರು!” ಸಭಿಕರಲ್ಲಿದ್ದವರು ಉಡುಗೊರೆಗಳನ್ನು ಕೃತಜ್ಞತಾಭಾವದಿಂದ ಸ್ವೀಕರಿಸಿದರು. ಒಟ್ಟು 35 ಪುಸ್ತಕಗಳು, 63 ಬ್ರೋಷರ್‌ಗಳು, ಮತ್ತು 34 ಪತ್ರಿಕೆಗಳು ವಿತರಿಸಲ್ಪಟ್ಟವು.

ಒಂದು ಶಾಲಾ ಕಾರ್ಯಕ್ರಮದಿಂದ ಎಷ್ಟು ಅದ್ಭುತಕರವಾದ ಫಲಿತಾಂಶಗಳು ದೊರೆತವು! ಇದು ಮಾಗ್ಡಾಲೇನಾಳ ಸಹಪಾಠಿಗಳು ಯೆಹೋವನ ಸಾಕ್ಷಿಗಳ ಕುರಿತು ತಿಳಿದುಕೊಳ್ಳುವಂತೆ ಮತ್ತು ಅವರನ್ನು ಹೆಚ್ಚು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿತು ಮಾತ್ರವಲ್ಲ, ಯುವ ಜನರಲ್ಲಿ ಅನೇಕರು ಜೀವಿತದ ಉದ್ದೇಶದ ಕುರಿತು ಆಲೋಚಿಸುವಂತೆಯೂ ಮಾಡಿತು. ನೀವು ಏನನ್ನು ನಂಬುತ್ತೀರೋ ಅದರ ಕುರಿತು ಹೆಚ್ಚನ್ನು ತಿಳಿದುಕೊಳ್ಳುವಂತೆ ನಿಮ್ಮ ಸಹಪಾಠಿಗಳಿಗೆ ಸಹಾಯಮಾಡಲು ನೀವೇಕೆ ಪ್ರಯತ್ನಿಸಬಾರದು?

[ಪಾದಟಿಪ್ಪಣಿ]

^ ಪ್ಯಾರ. 3 ಯೆಹೋವನ ಸಾಕ್ಷಿಗಳಿಂದ ಸಿದ್ಧಪಡಿಸಲ್ಪಟ್ಟದ್ದು.

[ಪುಟ 31ರಲ್ಲಿರುವ ಚಿತ್ರ]

ಚರ್ಚೆಗಾಗಿ ಮಾಗ್ಡಾಲೇನಾ ಮತ್ತು ವೊಯ್‌ಟ್ಸ್ಯೆಕ್‌ ಸಿದ್ಧತೆಗಳನ್ನು ಮಾಡುತ್ತಿರುವುದು