ಇದು ಆಟ ಮಾತ್ರವೇ ಅಲ್ಲ
ಇದು ಆಟ ಮಾತ್ರವೇ ಅಲ್ಲ
ಆಟವಾಡುವುದೆಂದರೆ ಮಕ್ಕಳಿಗೆ ಅತಿ ಪ್ರಿಯ. ಆದರೆ, “ಇದು ಕೇವಲ ವ್ಯರ್ಥ ಚಟುವಟಿಕೆಯಲ್ಲ. ಹೆಚ್ಚಿನ ಮಾನಸಿಕ ಬೆಳವಣಿಗೆಗೆ ಇದು ಆಧಾರವಾಗಿದೆ” ಎಂದು ಬೆಳೆಯುವ ಮಗು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ವಿವರಿಸಲಾಗಿದೆ. ಆಟವಾಡುವ ಮೂಲಕ, ಮಕ್ಕಳು ತಮ್ಮ ಜ್ಞಾನೇಂದ್ರಿಯಗಳನ್ನು ಉಪಯೋಗಿಸಲು, ತಮ್ಮ ಪರಿಸರವನ್ನು ಅರ್ಥಮಾಡಿಕೊಳ್ಳಲು, ಮತ್ತು ಇತರರೊಂದಿಗೆ ಸ್ಪಂದಿಸಲು ಕಲಿಯುತ್ತಾರೆ.
ನಾಲ್ಕು ಅಥವಾ ಐದು ವರುಷ ಪ್ರಾಯದಿಂದಲೇ, ಮಕ್ಕಳು ತಮ್ಮ ಆಟದಲ್ಲಿ ಪ್ರಾಯಸ್ಥರ ಪಾತ್ರಗಳನ್ನು ಅಭಿನಯಿಸಲು ಆರಂಭಿಸುತ್ತಾರೆ. ಆಟವಾಡುತ್ತಿದ್ದ ಮಕ್ಕಳ ಕುರಿತು ಯೇಸು ಒಮ್ಮೆ ಮಾತಾಡಿದನು. ಕೆಲವರು “ವಿವಾಹ”ವನ್ನು ಅಭಿನಯಿಸಲು ಬಯಸಿದರು, ಮತ್ತು ಇತರರು “ಶವ ಸಂಸ್ಕಾರ”ವನ್ನು ಅಭಿನಯಿಸಲು ಬಯಸಿದರು. ಅಷ್ಟುಮಾತ್ರವಲ್ಲದೆ, ಮಕ್ಕಳು ಸಾಮಾನ್ಯವಾಗಿ ಮಾಡುವಂತೆ, ಕೆಲವು ಮಕ್ಕಳು ತಮ್ಮೊಂದಿಗೆ ಭಾಗವಹಿಸದಿದ್ದದಕ್ಕಾಗಿ ಅವರು ತಮ್ಮ ಮಧ್ಯೆ ಜಗಳವನ್ನೂ ಮಾಡಿಕೊಂಡರು. (ಮತ್ತಾಯ 11:16, 17, NW) ಈ ರೀತಿಯ ಆಟಗಳನ್ನು ಆಡುವುದು, ಬೆಳೆಯುತ್ತಿರುವ ಮಕ್ಕಳ ಮನಸ್ಸಿನಲ್ಲಿ ಅರ್ಥಭರಿತವಾದ ಪಾತ್ರಗಳನ್ನು ಅಚ್ಚೊತ್ತಬಲ್ಲದು.
ಈ ಪುಟದ ಚಿತ್ರದಲ್ಲಿರುವ ಮಕ್ಕಳು, ಬೈಬಲ್ ಅಧ್ಯಾಪಕಿ ಮತ್ತು ಒಬ್ಬ ವಿದ್ಯಾರ್ಥಿಯ ಪಾತ್ರವನ್ನು ಆಡುತ್ತಿದ್ದಾರೆ. ಇಲ್ಲಿ ಒಂದು ನಿಜವಾದ ಬೈಬಲ್ ಅಧ್ಯಯನವು ನಡೆಯುತ್ತಿಲ್ಲ, ಆದರೆ ಬೈಬಲ್ ಸಂದೇಶವನ್ನು ಹಂಚಬೇಕೆಂಬ ವಿಚಾರವು ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿದೆ. ಮತ್ತು ಈ ಪಾಠವು ಪ್ರಾಮುಖ್ಯವಾಗಿದೆ, ಏಕೆಂದರೆ ಯೇಸು ತನ್ನ ಎಲ್ಲಾ ಹಿಂಬಾಲಕರಿಗೆ ಜನರನ್ನು ಶಿಷ್ಯರನ್ನಾಗಿ ಮಾಡುವ ಮತ್ತು ಅವನು ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡುವ ಆಜ್ಞೆಯನ್ನು ಕೊಟ್ಟಿದ್ದಾನೆ.—ಮತ್ತಾಯ 28:19, 20.
ಯಾರ ಮಕ್ಕಳು ಬೈಬಲ್ ಅಧ್ಯಯನಗಳನ್ನು ನಡಿಸುವ, ಭಾಷಣಗಳನ್ನು ನೀಡುವ, ಅಥವಾ ಮನೆಯಿಂದ ಮನೆಗೆ ಸಾರುವಂತೆ ನಟಿಸಲು ಬಯಸುತ್ತಾರೋ ಅಂಥ ಮಕ್ಕಳ ಹೆತ್ತವರು ತಮ್ಮ ಬಗ್ಗೆ ಹೆಮ್ಮೆಪಡಬಲ್ಲರು. ಸಾಮಾನ್ಯವಾಗಿ ಮಕ್ಕಳು ತಮ್ಮ ಸುತ್ತಲಿರುವ ಪ್ರಾಯಸ್ಥರು ಏನು ಮಾಡುತ್ತಾರೋ ಅದನ್ನು ಅನುಕರಿಸುತ್ತಾರೆ. ಮಕ್ಕಳ ಬೈಬಲ್ ಆಟಗಳು, “ಕರ್ತನಿಗೆ ಒಪ್ಪಿಗೆಯಾಗಿರುವಂಥ ರೀತಿಯ ಶಿಕ್ಷಣ ಮತ್ತು ಸಲಹೆಯಿಂದ” ಅವರು ಬೆಳೆಸಲ್ಪಡುತ್ತಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತವೆ.—ಎಫೆಸ 6:4, ಚಾರ್ಲ್ಸ್ ಬಿ. ವಿಲ್ಯಮ್ಸ್.
ಸತ್ಯಾರಾಧನೆಯಲ್ಲಿ ಮಕ್ಕಳು ಸಹ ಭಾಗವಹಿಸಬೇಕೆಂದು ಯೆಹೋವನು ಬಯಸುತ್ತಾನೆ. ಧರ್ಮಶಾಸ್ತ್ರವನ್ನು ಓದುವಾಗ, “ಮಕ್ಕಳನ್ನೂ” ಒಟ್ಟುಗೂಡಿಸುವಂತೆ ಆತನು ಮೋಶೆಗೆ ಹೇಳಿದನು. (ಧರ್ಮೋಪದೇಶಕಾಂಡ 31:12) ಈ ರೀತಿ ಚಿಕ್ಕ ಮಕ್ಕಳು ಒಳಗೂಡಿಸಲ್ಪಟ್ಟರೆ, ಅದು ಅವರ ಆಟಗಳಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. ಮತ್ತು ಯಾವ ಮಗುವು ದೇವರ ಶುಶ್ರೂಷಕನಂತೆ ಆಟವಾಡುತ್ತದೋ ಆ ಮಗು ಮುಂದಕ್ಕೆ ದೇವರ ಶುಶ್ರೂಷಕನಾಗಲು ಈಗಾಗಲೇ ಮೊದಲ ಹೆಜ್ಜೆಯನ್ನು ತೆಗೆದುಕೊಂಡಂತಿರುತ್ತದೆ.