ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೀನರು ಭೂಮಿಗೆ ಬಾಧ್ಯರಾಗುವರು”—ಹೇಗೆ?

“ದೀನರು ಭೂಮಿಗೆ ಬಾಧ್ಯರಾಗುವರು”—ಹೇಗೆ?

“ದೀನರು ಭೂಮಿಗೆ ಬಾಧ್ಯರಾಗುವರು”​—⁠ಹೇಗೆ?

“‘ದೀನರು ಭೂಮಿಗೆ ಬಾಧ್ಯರಾಗುವರು’ ಎಂಬ ಯೇಸುವಿನ ಹೃದಯೋಲ್ಲಾಸಕರ ಮಾತುಗಳ ಚಿರಪರಿಚಯ ನಿಮಗಿರಬಹುದು. ಆದರೆ, ಇಂದು ಜನರು ಪರಸ್ಪರ ಏನು ಮಾಡಿಕೊಳ್ಳುತ್ತಿದ್ದಾರೋ ಮತ್ತು ಭೂಮಿಗೆ ಏನನ್ನು ಮಾಡುತ್ತಿದ್ದಾರೋ ಅದನ್ನು ಗಮನಿಸುವಾಗ, ದೀನರಿಗೆ ಬಾಧ್ಯವಾಗಿ ಪಡೆದುಕೊಳ್ಳಲು ಏನು ತಾನೇ ಉಳಿಯಬಹುದೆಂದು ನೀವು ನೆನಸುತ್ತೀರಿ?”​—⁠ಮತ್ತಾಯ 5:5; ಕೀರ್ತನೆ 37:​11; ಕಿಂಗ್‌ ಜೇಮ್ಸ್‌ ವರ್ಷನ್‌.

ಈ ಪ್ರಶ್ನೆಯನ್ನು, ಮಿರೀಯಮ್‌ ಎಂಬ ಯೆಹೋವನ ಸಾಕ್ಷಿಯೊಬ್ಬಳು ಒಂದು ಬೈಬಲ್‌ ಚರ್ಚೆಯನ್ನು ಆರಂಭಿಸಲು ಉಪಯೋಗಿಸಿದಳು. ಅವಳು ಯಾರಿಗೆ ಪ್ರಶ್ನೆಯನ್ನು ಕೇಳಿದಳೋ ಆ ಮನುಷ್ಯನು ಪ್ರತಿಕ್ರಿಯಿಸಿದ್ದು: “ಈ ವಾಗ್ದಾನವನ್ನು ಯೇಸು ಮಾಡಿರುವುದಾದರೆ ಖಂಡಿತವಾಗಿಯೂ ಭೂಮಿ, ಹಾಳುಬಿದ್ದ ಅಥವಾ ವಾಸಿಸಲು ಯೋಗ್ಯವಲ್ಲದ ಒಂದು ಕೊಂಪೆಯಾಗಿರದೆ, ಬಾಧ್ಯವಾಗಿ ಪಡೆದುಕೊಳ್ಳಲು ಯೋಗ್ಯವಾದ ಒಂದು ಸ್ಥಳವಾಗಲಿದೆ ಎಂಬುದನ್ನೇ ಅವನು ಸೂಚಿಸಿರಬೇಕು.”

ಇದು ನಿಶ್ಚಯವಾಗಿಯೂ ಒಂದು ಆಶಾವಾದದ ಉತ್ತರವಾಗಿದೆ. ಇಂಥ ಸಕಾರಾತ್ಮಕ ಹೊರನೋಟವನ್ನು ಹೊಂದಿರಲು ನಮಗೆ ಸಕಾರಣವಿದೆಯೋ? ಹೌದು ಇದೆ, ಏಕೆಂದರೆ ಆ ವಾಗ್ದಾನವು ನಿಜವಾಗಿಯೂ ನೆರವೇರುವುದೆಂಬುದನ್ನು ನಂಬಲು ಬೈಬಲ್‌ ನಮಗೆ ಬಲವಾದ ಕಾರಣಗಳನ್ನು ಒದಗಿಸುತ್ತದೆ. ಆ ವಾಗ್ದಾನದ ನೆರವೇರಿಕೆ ಮತ್ತು ಮಾನವಕುಲದ ಹಾಗೂ ಭೂಮಿಯ ಕಡೆಗಿನ ದೇವರ ಉದ್ದೇಶವು ಒಂದಕ್ಕೊಂದು ಹೊಂದಿಕೆಯಲ್ಲಿದೆ. ಮತ್ತು ದೇವರು ಏನನ್ನು ಉದ್ದೇಶಿಸಿದ್ದಾನೋ ಅದನ್ನು ಖಂಡಿತವಾಗಿಯೂ ನೆರವೇರಿಸುತ್ತಾನೆಂಬ ಪೂರ್ಣ ಭರವಸೆ ನಮಗಿದೆ. (ಯೆಶಾಯ 55:11) ಹಾಗಿರುವಲ್ಲಿ, ದೇವರು ಆದಿಯಲ್ಲಿ ಮಾನವಕುಲಕ್ಕಾಗಿ ಏನನ್ನು ಉದ್ದೇಶಿಸಿದ್ದನು, ಮತ್ತು ಅದು ಹೇಗೆ ನೆರವೇರಲಿದೆ?

ಭೂಮಿಗಾಗಿ ದೇವರ ನಿತ್ಯ ಉದ್ದೇಶ

ಯೆಹೋವ ದೇವರು ಭೂಮಿಯನ್ನು ಒಂದು ವಿಶೇಷ ಉದ್ದೇಶಕ್ಕಾಗಿ ಸೃಷ್ಟಿಸಿದನು. “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ​—⁠ನಾನೇ ಯೆಹೋವನು, ಇನ್ನು ಯಾವನೂ ಅಲ್ಲ.” (ಯೆಶಾಯ 45:18) ಹಾಗಾದರೆ, ಭೂಮಿಯು ಒಂದು ವಿಶೇಷ ಉದ್ದೇಶಕ್ಕಾಗಿ ಅಂದರೆ ಜನನಿವಾಸಕ್ಕಾಗಿಯೇ ಸೃಷ್ಟಿಸಲ್ಪಟ್ಟಿದೆ. ಅಷ್ಟುಮಾತ್ರವಲ್ಲದೆ, ಭೂಮಿಯು ಮಾನವಕುಲದ ನಿತ್ಯ ಬೀಡಾಗಿರಬೇಕೆಂಬುದು ದೇವರ ಉದ್ದೇಶವಾಗಿದೆ. ‘ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ [ಆತನು] ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದಾನೆ.’​—⁠ಕೀರ್ತನೆ 104:5; 119:90.

ಪ್ರಥಮ ಮಾನವ ದಂಪತಿಗೆ ದೇವರು ಆಜ್ಞಾಪಿಸಿದ ಕೆಲಸದಲ್ಲಿಯೂ ಭೂಮಿಗಾಗಿರುವ ಆತನ ಉದ್ದೇಶವು ಸ್ಪಷ್ಟವಾಗಿ ಕಂಡುಬರುತ್ತದೆ. ಆದಾಮಹವ್ವರಿಗೆ ಯೆಹೋವನು ಹೇಳಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ದೇವರು ಆದಾಮಹವ್ವರಿಗೆ ನೀಡಿದ ಭೂಮಿಯು, ಅವರಿಗೆ ಮತ್ತು ಅವರ ಸಂತತಿಗೆ ಒಂದು ನಿತ್ಯ ಬೀಡಾಗಿರಲಿಕ್ಕಿತ್ತು. “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ” ಎಂದು ಕೀರ್ತನೆಗಾರನು ಅನೇಕ ಶತಮಾನಗಳ ಅನಂತರ ತಿಳಿಸಿದನು.​—⁠ಕೀರ್ತನೆ 115:16.

ಆ ಅದ್ಭುತಕರ ಪ್ರತೀಕ್ಷೆಯನ್ನು ಹೊಂದಲು ಆದಾಮಹವ್ವರು ಮತ್ತು ಅವರ ಸಂತತಿಯವರಲ್ಲಿ ಪ್ರತಿಯೊಬ್ಬರು, ಸೃಷ್ಟಿಕರ್ತನೂ ಜೀವದಾತನೂ ಆದ ಯೆಹೋವ ದೇವರನ್ನು ತಮ್ಮ ಪರಮಾಧಿಕಾರಿಯನ್ನಾಗಿ ಸ್ವೀಕರಿಸಲೇಬೇಕು ಹಾಗೂ ಆತನಿಗೆ ವಿಧೇಯರಾಗಲು ಸಿದ್ಧರಿರಬೇಕು. ಈ ವಿಷಯದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂಬುದು ಯೆಹೋವನು ಆದಾಮನಿಗೆ ನೀಡಿದ ಆಜ್ಞೆಯಿಂದ ತಿಳಿಯುತ್ತದೆ. ಆತನಂದದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:​16, 17) ಏದೆನ್‌ ತೋಟದಲ್ಲಿ ಜೀವಿಸುತ್ತಾ ಮುಂದುವರಿಯಲು ಆದಾಮಹವ್ವರು ಆ ಸರಳವಾದ ಮತ್ತು ಸ್ಪಷ್ಟವಾದ ಆಜ್ಞೆಗೆ ವಿಧೇಯರಾಗಲೇಬೇಕಿತ್ತು. ಹೀಗೆ ವಿಧೇಯರಾಗುವುದು, ಸ್ವರ್ಗೀಯ ತಂದೆಯು ಅವರಿಗಾಗಿ ಮಾಡಿದ ಎಲ್ಲಾ ವಿಷಯಗಳಿಗೆ ಅವರು ತೋರಿಸುವ ಗಣ್ಯತೆಯ ಒಂದು ಅಭಿವ್ಯಕ್ತಿಯಾಗಿತ್ತು.

ಆದರೆ ಆದಾಮಹವ್ವರು ತಮಗೆ ಕೊಡಲ್ಪಟ್ಟ ಆಜ್ಞೆಯನ್ನು ಮುರಿಯುವ ಮೂಲಕ ಇಚ್ಛಾಪೂರ್ವಕವಾಗಿ ಯೆಹೋವನಿಗೆ ಅವಿಧೇಯರಾದಾಗ, ವಾಸ್ತವದಲ್ಲಿ ಅವರು ತಮಗೆ ಎಲ್ಲವನ್ನು ಒದಗಿಸಿದಾತನನ್ನೇ ತಳ್ಳಿಹಾಕಿದರು. (ಆದಿಕಾಂಡ 3:⁠6) ಹೀಗೆ ಮಾಡುವ ಮೂಲಕ, ಅವರು ತಮ್ಮ ಸುಂದರವಾದ ಪರದೈಸ್‌ ಬೀಡನ್ನು ಕಳೆದುಕೊಂಡರು. ಅವರು ಕಳೆದುಕೊಂಡದ್ದು ಮಾತ್ರವಲ್ಲ, ಅವರ ಸಂತತಿಯವರಿಗೂ ಅದು ಸಿಗದಿರಲು ಕಾರಣರಾದರು. (ರೋಮಾಪುರ 5:12) ಆದರೆ, ಪ್ರಥಮ ದಂಪತಿಯ ಅವಿಧೇಯತೆಯು, ಭೂಮಿಯನ್ನು ಸೃಷ್ಟಿಮಾಡಿದಾಗ ಅದರ ಕಡೆಗಿದ್ದ ದೇವರ ಉದ್ದೇಶವನ್ನು ಬದಲಾಯಿಸಿತೋ?

ಬದಲಾಗದ ದೇವರು

ತನ್ನ ಪ್ರವಾದಿಯಾದ ಮಲಾಕಿಯನ ಮೂಲಕ ದೇವರು ಘೋಷಿಸಿದ್ದು: “ಯೆಹೋವನಾದ ನಾನು ಮಾರ್ಪಟ್ಟಿಲ್ಲ.” (ಮಲಾಕಿಯ 3:6) ಫ್ರೆಂಚ್‌ ಬೈಬಲ್‌ ವಿದ್ವಾಂಸರಾದ ಎಲ್‌. ಫೀಯಾನ್‌ರು ಈ ವಚನದ ಕುರಿತು ಹೇಳಿಕೆ ನೀಡುತ್ತಾ, ಈ ಘೋಷಣೆಯು ದೈವಿಕ ವಾಗ್ದಾನಗಳ ನೆರವೇರಿಕೆಯೊಂದಿಗೆ ನಿಕಟ ಸಂಬಂಧದಲ್ಲಿದೆ ಎಂದು ತಿಳಿಸಿದರು. ಫೀಯಾನ್‌ರವರು ಬರೆದದ್ದು: “ಯೆಹೋವನು ತನ್ನ ದಂಗೆಕೋರ ಜನರನ್ನು ನಾಶಮಾಡಶಕ್ತನು, ಆದರೆ ಯಾವುದೇ ಸನ್ನಿವೇಶಗಳಲ್ಲಿ ತನ್ನ ವಾಗ್ದಾನಗಳಲ್ಲಿ ಬದಲಾಗದವನಾದ ಕಾರಣ ಆತನು ಪೂರ್ವದಲ್ಲಿ ಮಾಡಿದ ತನ್ನ ವಾಗ್ದಾನಗಳಿಗೆ ನಂಬಿಗಸ್ತನಾಗಿರುತ್ತಾನೆ.” ಒಬ್ಬ ವ್ಯಕ್ತಿಗೆ, ಒಂದು ಜನಾಂಗಕ್ಕೆ, ಅಥವಾ ಇಡೀ ಮಾನವಕುಲಕ್ಕೆ ದೇವರು ಮಾಡಿದ ವಾಗ್ದಾನಗಳು ಎಂದಿಗೂ ಮರೆಯಲ್ಪಡುವುದಿಲ್ಲ, ಬದಲಾಗಿ ಅವು ತಕ್ಕ ಸಮಯದಲ್ಲಿ ನೆರವೇರುತ್ತವೆ. “ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳ ವರೆಗೂ ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.”​—⁠ಕೀರ್ತನೆ 105:⁠8.

ಆದರೆ, ಯೆಹೋವನು ಭೂಮಿಗಾಗಿರುವ ತನ್ನ ಆರಂಭದ ಉದ್ದೇಶದಲ್ಲಿಯೂ ಬದಲಾಗಿಲ್ಲ ಎಂದು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು? ನಾವು ಖಾತ್ರಿಯಿಂದಿರಬಲ್ಲೆವು, ಏಕೆಂದರೆ ದೇವರ ಪ್ರೇರಿತ ವಾಕ್ಯವಾದ ಬೈಬಲಿನಾದ್ಯಂತ, ವಿಧೇಯ ಮಾನವರಿಗೆ ಭೂಮಿಯನ್ನು ಬಾಧ್ಯವಾಗಿ ನೀಡುವ ದೈವಿಕ ಉದ್ದೇಶದ ಉಲ್ಲೇಖವನ್ನು ನಾವು ಕಾಣುತ್ತೇವೆ. (ಕೀರ್ತನೆ 25:13; 37:​9, 22, 29, 34) ಅಷ್ಟುಮಾತ್ರವಲ್ಲದೆ, ಯೆಹೋವನಿಂದ ಆಶೀರ್ವಾದವನ್ನು ಪಡೆದುಕೊಳ್ಳುವವರು ‘ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವರು’ ಮತ್ತು “ಅವರನ್ನು ಯಾರೂ ಹೆದರಿಸರು” ಎಂದು ಶಾಸ್ತ್ರವಚನಗಳು ವರ್ಣಿಸುತ್ತವೆ. (ಮೀಕ 4:4; ಯೆಹೆಜ್ಕೇಲ 34:28) ಯೆಹೋವನಿಂದ ಆಯ್ಕೆಮಾಡಲ್ಪಟ್ಟವರು “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.” ಕಾಡುಮೃಗಗಳೊಂದಿಗೂ ಅವರು ಶಾಂತಿಭರಿತ ಸಂಬಂಧವನ್ನು ಹೊಂದಿರುವರು.​—⁠ಯೆಶಾಯ 11:​6-9; 65:​21, 25.

ದೇವರ ವಾಗ್ದಾನದ ಮುನ್ನೋಟವನ್ನು ಬೈಬಲ್‌ ಇನ್ನೊಂದು ರೀತಿಯಲ್ಲಿಯೂ ಒದಗಿಸುತ್ತದೆ. ರಾಜ ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ, ಇಸ್ರಾಯೇಲ್‌ ಜನಾಂಗವು ಶಾಂತಿ ಮತ್ತು ಸಮೃದ್ಧಿಯನ್ನು ಅನುಭವಿಸಿತು. ಅವನ ಆಳ್ವಿಕೆಯ ಕೆಳಗೆ, “ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.” (1 ಅರಸುಗಳು 4:25) ಬೈಬಲ್‌ ಯೇಸುವನ್ನು ‘ಸೊಲೊಮೋನನಿಗಿಂತಲೂ ಹೆಚ್ಚಿನವನು’ ಎಂದು ಹೇಳುತ್ತದೆ ಮತ್ತು ಅವನ ಆಳ್ವಿಕೆಯ ಕುರಿತು ಮಾತಾಡುತ್ತಾ ಕೀರ್ತನೆಗಾರನು ಪ್ರವಾದನಾತ್ಮಕವಾಗಿ ಘೋಷಿಸಿದ್ದು: ‘ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗುವುದು; ಚಂದ್ರನಿರುವ ವರೆಗೂ ಪರಿಪೂರ್ಣ ಸೌಭಾಗ್ಯವಿರುವುದು.’ ಆ ಸಮಯದಲ್ಲಿ, ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗುವುದು.’​—⁠ಲೂಕ 11:31; ಕೀರ್ತನೆ 72:​7, 16.

ಯೆಹೋವ ದೇವರು ತನ್ನ ವಾಗ್ದಾನಕ್ಕನುಸಾರ, ವಾಗ್ದತ್ತ ಆಸ್ತಿಯು ದೊರೆಯುವಂತೆ ಖಾತ್ರಿಯಿಂದಿರುವುದು ಮಾತ್ರವಲ್ಲದೆ ಅದು ತನ್ನೆಲ್ಲಾ ವೈಭವಕ್ಕೆ ಪುನಸ್ಥಾಪಿಸಲ್ಪಡುವಂತೆಯೂ ನೋಡಿಕೊಳ್ಳುವನು. ನೂತನ ಲೋಕದಲ್ಲಿ ದೇವರು “[ಜನರ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂದು ಪ್ರಕಟನೆ 21:4ರಲ್ಲಿ ದೇವರ ವಾಕ್ಯವು ನಮಗೆ ತಿಳಿಸುತ್ತದೆ. ಇಲ್ಲಿ ವಾಗ್ದಾನಿಸಿರುವ ಪರಿಸ್ಥಿತಿಯೇ ಪರದೈಸಾಗಿದೆ.​—⁠ಲೂಕ 23:43.

ವಾಗ್ದತ್ತ ಆಸ್ತಿಯನ್ನು ಗಳಿಸುವ ವಿಧ

ಯೇಸು ಕ್ರಿಸ್ತನು ರಾಜನಾಗಿರುವ ರಾಜ್ಯದ ಕೆಳಗೆ, ಅಂದರೆ ಸ್ವರ್ಗದಿಂದ ತನ್ನ ಆಳ್ವಿಕೆಯನ್ನು ನಡೆಸುವ ಸರಕಾರದ ಕೆಳಗೆ ಭೂಮಿಯು ಪರದೈಸಾಗಿ ಮಾರ್ಪಡಲಿದೆ. (ಮತ್ತಾಯ 6:​9, 10) ಮೊದಲಾಗಿ, ರಾಜ್ಯವು ‘ಲೋಕನಾಶಕರನ್ನು ನಾಶಮಾಡುವುದು.’ (ಪ್ರಕಟನೆ 11:18; ದಾನಿಯೇಲ 2:44) ಅನಂತರ, “ಸಮಾಧಾನದ ಪ್ರಭು”ವಾಗಿರುವ ಯೇಸು ಕ್ರಿಸ್ತನು ಈ ಪ್ರವಾದನಾತ್ಮಕ ಮಾತುಗಳನ್ನು ನೆರವೇರಿಸುವನು: “ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, . . . ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು.” (ಯೆಶಾಯ 9:​6, 7) ಆ ರಾಜ್ಯದ ಕೆಳಗೆ, ಪುನರುತ್ಥಾನದ ಮೂಲಕ ಜೀವಕ್ಕೆ ಹಿಂದಿರುಗಿದವರನ್ನು ಸೇರಿಸಿ ಕೋಟ್ಯಂತರ ಜನರಿಗೆ ಭೂಮಿಯನ್ನು ಬಾಧ್ಯವಾಗಿ ಪಡೆಯುವ ಸಂದರ್ಭವಿರುವುದು.​—⁠ಯೋಹಾನ 5:28, 29; ಅ. ಕೃತ್ಯಗಳು 24:⁠15.

ಅಂಥ ಅದ್ಭುತಕರ ಆಸ್ತಿಯನ್ನು ಅನುಭವಿಸುವವರ ಸಾಲಿನಲ್ಲಿ ಯಾರಿರುವರು? ಯೇಸುವಿನ ಮಾತುಗಳನ್ನು ಪರಿಗಣಿಸಿರಿ: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:⁠5) ಶಾಂತರಾಗಿರುವುದು, ಅಥವಾ ದೀನರಾಗಿರುವುದು ಯಾವ ಅರ್ಥವನ್ನು ನೀಡುತ್ತದೆ? “ದೀನ” ಅಥವಾ “ಶಾಂತ” ಎಂಬ ಪದಕ್ಕೆ ಶಬ್ದಕೋಶಗಳು ಸಾಮಾನ್ಯವಾಗಿ ಕೋಮಲತೆ, ಮಿತಸ್ವಭಾವ, ಭಕ್ತಿಗೌರವ, ಸೌಮ್ಯ ಈ ಮುಂತಾದ ಅರ್ಥವನ್ನು ನೀಡುತ್ತವೆ. ಆದರೆ, ಇದಕ್ಕೆ ಉಪಯೋಗಿಸಲ್ಪಟ್ಟಿರುವ ಮೂಲ ಗ್ರೀಕ್‌ ಪದವು ಇನ್ನೂ ಹೆಚ್ಚಿನ ಅರ್ಥವನ್ನು ನೀಡುತ್ತದೆ. ಆ ಪದದಲ್ಲಿ “ಕೋಮಲತೆಯು ಅಡಕವಾಗಿದೆ, ಆದರೆ ಈ ಕೋಮಲತೆಯ ಹಿಂದೆ ಉಕ್ಕಿನಂಥ ಬಲವು ಅಡಗಿದೆ” ಎಂಬುದಾಗಿ ವಿಲ್ಯಂ ಬಾರ್‌ಕ್ಲೇಯವರ ಹೊಸ ಒಡಂಬಡಿಕೆಯ ಶಬ್ದಕೋಶ (ಇಂಗ್ಲಿಷ್‌)ವು ತಿಳಿಸುತ್ತದೆ. ಇದು, ಒಬ್ಬ ವ್ಯಕ್ತಿಗೆ ಹಾನಿಯಾದಾಗ ಅವನು ಕೋಪಿಸಿಕೊಳ್ಳದೆ ಅಥವಾ ಪ್ರತೀಕಾರದ ಆಲೋಚನೆಯನ್ನು ಮಾಡದೆ ಅದನ್ನು ಸಹಿಸಲು ಅವನನ್ನು ಸಾಧ್ಯಗೊಳಿಸುವ ಮನೋವೃತ್ತಿಯನ್ನು ಸೂಚಿಸುತ್ತದೆ. ಆ ಮನೋವೃತ್ತಿಯು ಅವನಿಗೆ ದೇವರೊಂದಿಗಿರುವ ಒಂದು ಉತ್ತಮ ಸಂಬಂಧದಿಂದ ಫಲಿಸುತ್ತದೆ. ಮತ್ತು ಆ ಸಂಬಂಧವು ಅವನಿಗೆ ಬಲದ ಒಂದು ಮೂಲವಾಗಿ ಕಾರ್ಯವೆಸಗುತ್ತದೆ.​—⁠ಯೆಶಾಯ 12:2; ಫಿಲಿಪ್ಪಿ 4:⁠13.

ದೀನ ವ್ಯಕ್ತಿಯು ತನ್ನ ವೈಯಕ್ತಿಕ ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ದೇವರ ಮಟ್ಟಗಳನ್ನು ದೀನಭಾವದಿಂದ ಸ್ವೀಕರಿಸುತ್ತಾನೆ; ತನ್ನ ಸ್ವಂತ ದೃಷ್ಟಿಕೋನಕ್ಕೆ ಅನುಸಾರವಾಗಿ ಅಥವಾ ಇತರರ ಅಭಿಪ್ರಾಯಕ್ಕೆ ಅನುಸಾರವಾಗಿ ವಿಷಯಗಳನ್ನು ನಿರ್ವಹಿಸಲು ಅವನು ಪಟ್ಟುಹಿಡಿಯುವುದಿಲ್ಲ. ಅವನು ಕಲಿಯುವ ಮನೋಭಾವವನ್ನು ತೋರಿಸುತ್ತಾನೆ, ಯಾವಾಗಲೂ ಯೆಹೋವನಿಂದ ಕಲಿಸಲ್ಪಡಲು ಬಯಸುತ್ತಾನೆ. ಕೀರ್ತನೆಗಾರನಾದ ದಾವೀದನು ಬರೆದದ್ದು: “[ಯೆಹೋವನು] ದೀನರನ್ನು ತನ್ನ ವಿಧಿಗನುಗುಣವಾಗಿ ನಡಿಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.”​—⁠ಕೀರ್ತನೆ 25:9; ಜ್ಞಾನೋಕ್ತಿ 3:5, 6.

ಭೂಮಿಯನ್ನು ಬಾಧ್ಯವಾಗಿ ಹೊಂದಲಿರುವ “ದೀನ” ಜನರಲ್ಲಿ ನೀವೂ ಒಬ್ಬರಾಗಿರುವಿರಾ? ಯೆಹೋವನ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನಮಾಡಿ, ಆತನನ್ನು ಮತ್ತು ಆತನ ಚಿತ್ತವನ್ನು ಚೆನ್ನಾಗಿ ತಿಳಿದುಕೊಳ್ಳುವ ಮೂಲಕ ಮತ್ತು ನೀವು ಕಲಿತುಕೊಂಡ ವಿಷಯವನ್ನು ಅನ್ವಯಿಸುವ ಮೂಲಕ, ನೀವು ಸಹ ಭೂಪರದೈಸನ್ನು ಬಾಧ್ಯವಾಗಿ ಹೊಂದಿ ಅದರಲ್ಲಿ ಎಂದೆಂದಿಗೂ ಜೀವಿಸಲು ಮುನ್ನೋಡಬಲ್ಲಿರಿ.​—⁠ಯೋಹಾನ 17:⁠3.

[ಪುಟ 5ರಲ್ಲಿರುವ ಚಿತ್ರ]

ಆದಾಮಹವ್ವರಿಗೆ ದೇವರು ಆಜ್ಞಾಪಿಸಿದ ಕೆಲಸದಲ್ಲಿಯೂ ಭೂಮಿಗಾಗಿರುವ ಆತನ ಉದ್ದೇಶವು ಸ್ಪಷ್ಟವಾಗಿ ಕಂಡುಬರುತ್ತದೆ

[ಪುಟ 6, 7ರಲ್ಲಿರುವ ಚಿತ್ರ]

ರಾಜ ಸೊಲೊಮೋನನ ಆಳ್ವಿಕೆಯಲ್ಲಿದ್ದ ಶಾಂತಿ ಮತ್ತು ಸಮೃದ್ಧಿಯು, ವಾಗ್ದತ್ತ ಆಸ್ತಿಯ ಮುನ್ನೋಟವನ್ನು ಒದಗಿಸುತ್ತದೆ

[ಕೃಪೆ]

ಕುರಿ ಮತ್ತು ಹಿನ್ನೆಲೆಯಲ್ಲಿ ಗುಡ್ಡ: Pictorial Archive (Near Eastern History) Est.; ಅರೇಬಿಯನ್‌ ಆರಿಕ್ಸ್‌ ಜಿಂಕೆ: Hai-Bar, Yotvata, Israel; ಉಳುವ ರೈತ: Garo Nalbandian

[ಪುಟ 7ರಲ್ಲಿರುವ ಚಿತ್ರ]

ಒಂದು ನೀತಿಯ ನೂತನ ಲೋಕವು ಮುಂದಿದೆ​—⁠ನೀವು ಅಲ್ಲಿರುವಿರಾ?