ನನ್ನ ಜೀವನದುದ್ದಕ್ಕೂ ಮುಂದುವರಿಯುತ್ತಿರುವ ಶಿಕ್ಷಣ
ಜೀವನ ಕಥೆ
ನನ್ನ ಜೀವನದುದ್ದಕ್ಕೂ ಮುಂದುವರಿಯುತ್ತಿರುವ ಶಿಕ್ಷಣ
ಹ್ಯಾರಲ್ಡ್ ಗ್ಲೂಯಸ್ ಅವರು ಹೇಳಿದಂತೆ
ನನ್ನ ಬಾಲ್ಯದಲ್ಲಿ ನಾನು ನೋಡಿದ ಒಂದು ದೃಶ್ಯವು ನನ್ನ ಮನಸ್ಸಿನಲ್ಲಿ 70 ವರ್ಷಗಳಿಗಿಂತ ಹೆಚ್ಚು ಕಾಲ ಉಳಿದಿದೆ. ನಾನು ಅಡಿಗೆಮನೆಯಲ್ಲಿ “ಸಿಲೋನ್ ಟೀ” ಎಂದು ಬರೆಯಲ್ಪಟ್ಟಿದ್ದ ಒಂದು ಲೇಬಲ್ ಅನ್ನು ನೋಡುತ್ತಾ ಕುಳಿತೆ. ಅದರಲ್ಲಿ ಸಿಲೋನ್‌ನ (ಈಗ ಶ್ರೀ ಲಂಕ) ಹುಲುಸಾಗಿ ಬೆಳೆದಿರುವ ಹಸಿರು ಜಮೀನುಗಳಲ್ಲಿ ಕೆಲವು ಸ್ತ್ರೀಯರು ಟೀ ಎಲೆಗಳನ್ನು ಕೀಳುತ್ತಿದ್ದ ಚಿತ್ರವೂ ಇತ್ತು. ಈ ದೃಶ್ಯವು, ದಕ್ಷಿಣ ಆಸ್ಟ್ರೇಲಿಯದ ಬೆಂಗಾಡಿನಲ್ಲಿದ್ದ ನಮ್ಮ ಮನೆಯಿಂದ ಅತಿ ದೂರದಲ್ಲಿತ್ತಾದರೂ, ನನ್ನ ಕಲ್ಪನೆಯನ್ನು ಕೆರಳಿಸಿತು. ಸಿಲೋನ್ ಎಷ್ಟು ಸುಂದರವಾದ ಮತ್ತು ಪುಳಕಿತಗೊಳಿಸುವ ದೇಶವಾಗಿರಬೇಕು! ಆದರೆ, ಅತ್ಯಂತ ಸುಂದರವಾದ ಆ ದ್ವೀಪದಲ್ಲಿ ನಾನು ನನ್ನ ಜೀವಮಾನ ಕಾಲದ 45 ವರ್ಷಗಳನ್ನು ವ್ಯಯಿಸುವೆ ಎಂದು ನಾನು ಆಗ ನೆನಸಿಯೇ ಇರಲಿಲ್ಲ.
ಇಸವಿ 1922ರ ಏಪ್ರಿಲ್ ತಿಂಗಳಿನಲ್ಲಿ, ಇಂದಿರುವುದಕ್ಕಿಂತ ತೀರ ಭಿನ್ನವಾದ ಲೋಕವೊಂದರಲ್ಲಿ ನಾನು ಜನಿಸಿದೆ. ನನ್ನ ಕುಟುಂಬವು ಕಿಂಬ ಪಟ್ಟಣದ ಪ್ರತ್ಯೇಕವಾದ ಪ್ರದೇಶದಲ್ಲಿ ದವಸಧಾನ್ಯ ಬೆಳೆಯುವ ಒಂದು ಏಕಾಂತವಾದ ಜಮೀನಿನಲ್ಲಿ ವ್ಯವಸಾಯಮಾಡುತ್ತಿತ್ತು. ಈ ಪಟ್ಟಣವು ವಿಸ್ತಾರವಾದ ಆಸ್ಟ್ರೇಲಿಯ ಖಂಡದ ಮಧ್ಯಭಾಗದಲ್ಲಿ ಮತ್ತು ದೊಡ್ಡ ಮರುಭೂಮಿಯ ದೂರದ ಒಳನಾಡಿನ ಪ್ರದೇಶದಲ್ಲಿದೆ. ಅದೊಂದು ಅಪಾಯಕರ ಜೀವನವೇ ಆಗಿತ್ತು, ಏಕೆಂದರೆ ನಾವು ಸದಾ ಬರಗಾಲ, ಕೀಟಗಳ ಪಿಡುಗು, ಮತ್ತು ವಿಪರೀತ ಸೆಕೆಯೊಂದಿಗೆ ಹೋರಾಡುವ ಸ್ಥಿತಿಯಲ್ಲೇ ಜೀವಿಸುತ್ತಿದ್ದೆವು. ನಾವು ಒಂದು ತಗಡಿನ ಗುಡಿಸಲಿನಲ್ಲಿ ಜೀವಿಸುತ್ತಿದ್ದೆವು ಮತ್ತು ತಂದೆಯನ್ನೂ ಆರು ಮಂದಿ ಮಕ್ಕಳನ್ನೂ ನೋಡಿಕೊಳ್ಳಲಿಕ್ಕಾಗಿ ನನ್ನ ತಾಯಿ ತುಂಬ ಕಷ್ಟಪಟ್ಟು ಕೆಲಸಮಾಡಿದರು.
ನನಗಾದರೋ, ಈ ಒಳನಾಡಿನ ಪ್ರದೇಶವು ಸ್ವಾತಂತ್ರ್ಯ ಮತ್ತು ಕುತೂಹಲದ ಸ್ಥಳವಾಗಿತ್ತು. ದಷ್ಟಪುಷ್ಟವಾದ ಎತ್ತಿನ ತಂಡಗಳು ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಪೊದೆಗಳನ್ನು ಕಿತ್ತೊಗೆಯುತ್ತಿರುವುದನ್ನು ಅಥವಾ ಹುಯ್ಯಲಿಡುವ ಧೂಳಿನ ಸುಂಟರಗಾಳಿಗಳು ಗ್ರಾಮೀಣ ಪ್ರದೇಶವನ್ನು ಆವರಿಸುತ್ತಿದ್ದದ್ದನ್ನು ನೋಡುವಾಗ ನಾನೆಷ್ಟು ಆಶ್ಚರ್ಯಚಕಿತನಾಗುತ್ತಿದ್ದೆ ಎಂಬುದನ್ನು ನಾನು ಜ್ಞಾಪಿಸಿಕೊಳ್ಳಬಲ್ಲೆ. ಆದುದರಿಂದ,
ಜೀವನದಲ್ಲಿ ನನ್ನ ಶಿಕ್ಷಣವು, ಮನೆಯಿಂದ ಐದು ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಚಿಕ್ಕದಾದ ಮತ್ತು ಒಬ್ಬರೇ ಶಿಕ್ಷಕರಿದ್ದ ಶಾಲೆಗೆ ಸೇರಿಕೊಳ್ಳುವ ಮುನ್ನವೇ ಪ್ರಾರಂಭವಾಯಿತು.ನನ್ನ ಹೆತ್ತವರು ಧಾರ್ಮಿಕ ವ್ಯಕ್ತಿಗಳಾಗಿದ್ದರು. ಆದರೆ ಅವರು ಎಂದಿಗೂ ಚರ್ಚಿಗೆ ಹೋಗಿರಲಿಲ್ಲ, ಮತ್ತು ಇದಕ್ಕೆ ಪ್ರಧಾನವಾಗಿ ನಮ್ಮ ಜಮೀನಿನಿಂದ ಪಟ್ಟಣಕ್ಕಿದ್ದ ದೂರವೇ ಕಾರಣವಾಗಿತ್ತು. ಆದರೂ, 1930ಗಳ ಆರಂಭದಲ್ಲಿ, ಆ್ಯಡಲೇಡ್‌ನ ಒಂದು ರೇಡಿಯೋ ಸ್ಟೇಷನ್‌ನಿಂದ ಪ್ರತಿ ವಾರ ಪ್ರಸಾರ ಮಾಡಲಾಗುತ್ತಿದ್ದ ಜಡ್ಜ್ ರದರ್‌ಫರ್ಡರ ಬೈಬಲ್ ಉಪನ್ಯಾಸಗಳಿಗೆ ತಾಯಿ ಕಿವಿಗೊಡಲಾರಂಭಿಸಿದರು. ಜಡ್ಜ್ ರದರ್‌ಫರ್ಡ ಯಾರೋ ಧರ್ಮಗುರುವಾಗಿರಬೇಕು ಎಂದು ನಾನು ನೆನಸಿ ಅದರಲ್ಲಿ ಅಷ್ಟು ಆಸಕ್ತಿಯನ್ನು ತೋರಿಸಲಿಲ್ಲ. ಆದರೆ ತಾಯಿಯವರು ಪ್ರತಿ ವಾರ ರದರ್‌ಫರ್ಡರ ಪ್ರಸಾರಗಳಿಗಾಗಿ ಕಾತುರದಿಂದ ಕಾಯುತ್ತಿದ್ದರು ಮತ್ತು ಬ್ಯಾಟರಿ ಚಾಲಿತವಾದ ನಮ್ಮ ಹಳೆಯ ರೇಡಿಯೋದಲ್ಲಿ ಚಟಪಟಗುಟ್ಟುತ್ತಾ ಅವರ ಧ್ವನಿ ಕೇಳಿಬಂದಾಗ ತೀವ್ರ ಗಮನವನ್ನು ಕೊಡುತ್ತಿದ್ದರು.
ತುಂಬ ಬಿಸಿಲಾಗಿದ್ದ, ಧೂಳು ತುಂಬಿದ್ದ ಒಂದು ಮಧ್ಯಾಹ್ನದಂದು, ಒಂದು ಹಳೆಯ ಪಿಕ್‌ಅಪ್ ಟ್ರಕ್ ನಮ್ಮ ಮನೆಯ ಮುಂದೆ ಬಂದು ನಿಂತಿತು. ಅದರಿಂದ ಒಳ್ಳೇ ರೀತಿಯಲ್ಲಿ ವಸ್ತ್ರಧರಿಸಿದ್ದ ಇಬ್ಬರು ಪುರುಷರು ಇಳಿದರು. ಅವರು ಯೆಹೋವನ ಸಾಕ್ಷಿಗಳಾಗಿದ್ದರು. ತಾಯಿ ಅವರ ಸಂದೇಶಕ್ಕೆ ಕಿವಿಗೊಟ್ಟು, ಸುಮಾರು ಪುಸ್ತಗಳನ್ನು ಕಾಣಿಕೆ ಕೊಟ್ಟು ಪಡೆದುಕೊಂಡರು, ಮತ್ತು ಕೂಡಲೆ ಅವನ್ನು ಓದಲು ಆರಂಭಿಸಿದರು. ಈ ಪುಸ್ತಕಗಳು ನನ್ನ ತಾಯಿಯ ಮೇಲೆ ಎಷ್ಟು ಗಾಢವಾದ ಪ್ರಭಾವವನ್ನು ಬೀರಿದವೆಂದರೆ, ಕಲಿಯುತ್ತಿರುವ ವಿಷಯಗಳ ಬಗ್ಗೆ ನೆರೆಹೊರೆಯವರೊಂದಿಗೆ ಮಾತಾಡಲು ಸಾಧ್ಯವಾಗುವಂತೆ ಅವರ ಬಳಿ ಕರೆದೊಯ್ಯಬೇಕೆಂದು ತಾಯಿಯು ತಂದೆಯನ್ನು ಕೂಡಲೇ ಕೇಳಿಕೊಂಡರು.
ಸಕಾರಾತ್ಮಕ ಪ್ರಭಾವಗಳ ಪ್ರಯೋಜನ
ಇದಾದ ಸ್ವಲ್ಪದರಲ್ಲೇ ಒಳನಾಡಿನ ಪ್ರದೇಶಗಳ ಕ್ರೂರ ವಾತಾವರಣದಿಂದಾಗಿ ನಾವು 500 ಕಿಲೊಮೀಟರುಗಳಷ್ಟು ದೂರದಲ್ಲಿರುವ ಆ್ಯಡಲೇಡ್‌ಗೆ ಸ್ಥಳಾಂತರಿಸುವಂತಾಯಿತು. ನನ್ನ ಕುಟುಂಬವು ಯೆಹೋವನ ಸಾಕ್ಷಿಗಳ ಆ್ಯಡಲೇಡ್ ಸಭೆಯೊಂದಿಗೆ ಸಹವಾಸಿಸಲು ಆರಂಭಿಸಿತು ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿತು. ನಮ್ಮ ಸ್ಥಳಾಂತರವು ನನ್ನ ಐಹಿಕ ಶಿಕ್ಷಣಕ್ಕೆ ಸಹ ಅಂತ್ಯವನ್ನು ತಂದಿತು. ನನ್ನ ಶಾಲಾ ಶಿಕ್ಷಣವನ್ನು 13ರ ಪ್ರಾಯದವನಾಗಿರುವಾಗಲೇ ಮುಗಿಸಿದ್ದೆ, ಅಂದರೆ ಏಳನೇ ತರಗತಿಗೇ ನಿಲ್ಲಿಸಿಬಿಟ್ಟೆ. ನನಗೆ ನಿಶ್ಚಿಂತ ಸ್ವಭಾವವಿತ್ತು, ಮತ್ತು ನನ್ನಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಂಡ ಅನೇಕ ಉತ್ತಮ ಪಯನೀಯರರು ಅಥವಾ ಪೂರ್ಣ ಸಮಯದ ಶುಶ್ರೂಷಕರು ಇಲ್ಲದಿರುತ್ತಿದ್ದಲ್ಲಿ ಈ ಸ್ವಭಾವವು ನನ್ನನ್ನು ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳಿಂದ ದೂರ ಕೊಂಡೊಯ್ಯಬಹುದಿತ್ತು.
ಕಾಲ ಸಂದಂತೆ, ಈ ಹುರುಪುಳ್ಳ ಸಹೋದರರ ಪ್ರಭಾವವು ನನ್ನಲ್ಲಿ ಆಧ್ಯಾತ್ಮಿಕತೆಯ ಕಿಡಿಯನ್ನು ಹೊತ್ತಿಸಿತು. ನಾನು ಅವರ ಸಂಗಡವಿರಲು ತುಂಬ ಇಷ್ಟಪಟ್ಟೆ ಮತ್ತು ಅವರ ಶ್ರಮಶೀಲ ಮನೋಭಾವವನ್ನು ತುಂಬ ಮೆಚ್ಚಿದೆ. ಆದುದರಿಂದ, 1940ರಲ್ಲಿ ಆ್ಯಡಲೇಡ್‌ನ ಅಧಿವೇಶನವೊಂದರಲ್ಲಿ ಪೂರ್ಣ ಸಮಯದ ಸೇವೆಯನ್ನು ಪ್ರೋತ್ಸಾಹಿಸುತ್ತಾ ಒಂದು ಪ್ರಕಟನೆಯು ಮಾಡಲ್ಪಟ್ಟಾಗ, ಆಶ್ಚರ್ಯಕರವಾಗಿ ನಾನು ನನ್ನ ಹೆಸರನ್ನು ಕೊಟ್ಟುಬಿಟ್ಟೆ. ನನಗೆ ಆಗ ದೀಕ್ಷಾಸ್ನಾನವೂ ಆಗಿರಲಿಲ್ಲ ಮತ್ತು ನನಗೆ ಸಾಕ್ಷಿ ನೀಡುವ ಅನುಭವವೂ ಅಷ್ಟಾಗಿ ಇರಲಿಲ್ಲ. ಆದರೂ, ಕೆಲವು ದಿನಗಳ ಅನಂತರ, ಆ್ಯಡಲೇಡ್‌ನಿಂದ ನೂರಾರು ಮೈಲಿಗಳಷ್ಟು ದೂರದಲ್ಲಿದ್ದ ನೆರೆಯ ರಾಜ್ಯವಾದ ವಿಕ್ಟೋರಿಯದ ವಾರ್‌ನಂಬೂಲ್‌ನಲ್ಲಿದ್ದ ಚಿಕ್ಕ ಪಯನೀಯರರ ಗುಂಪನ್ನು ಸೇರಿಕೊಳ್ಳುವಂತೆ ನನಗೆ ಆಮಂತ್ರಣವು ಬಂತು.
ಹೀಗೆ ತಡವರಿಸುತ್ತಾ ಆರಂಭಿಸಿದರೂ, ನಾನು ಬೇಗನೆ ಕ್ಷೇತ್ರ ಶುಶ್ರೂಷೆಗಾಗಿ ಹಂಬಲವನ್ನು ಬೆಳೆಸಿಕೊಂಡೆ, ಮತ್ತು ವರ್ಷಗಳು ಗತಿಸಿದಂತೆ ಈ ಹಂಬಲವು ನಂದಿಹೋಗಲಿಲ್ಲ ಎಂಬುದನ್ನು ಹೇಳಲು ನಾನು ಸಂತೋಷಪಡುತ್ತೇನೆ. ಅದು, ವಾಸ್ತವದಲ್ಲಿ ಒಂದು ತಿರುಗುಬಿಂದುವಾಗಿತ್ತು, ಮತ್ತು ನಾನು ನಿಜ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಾರಂಭಿಸಿದೆ. ಆಧ್ಯಾತ್ಮಿಕ ವಿಷಯಗಳಿಗಾಗಿ ಪ್ರೀತಿಯನ್ನು ಹೊಂದಿದ್ದವರ ಸಮೀಪಕ್ಕೆ ಹೋಗುವುದರ ಮೌಲ್ಯವನ್ನು ನಾನು ಕಲಿತುಕೊಂಡೆ. ಅವರ ಉತ್ತಮ ಪ್ರಭಾವವು ನಮ್ಮ ಶಿಕ್ಷಣದ ಹೊರತೂ
ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಹೇಗೆ ಹೊರತರಬಲ್ಲದು ಮತ್ತು ಹೀಗೆ ನಾವು ಕಲಿತುಕೊಳ್ಳುವ ವಿಷಯಗಳು ಹೇಗೆ ಜೀವನದುದ್ದಕ್ಕೂ ಪ್ರಯೋಜನವನ್ನು ತರಬಲ್ಲವು ಎಂಬುದನ್ನು ನಾನು ಕಂಡುಕೊಂಡೆ.ಪರೀಕ್ಷೆಗಳಿಂದ ಬಲಪಡಿಸಲ್ಪಟ್ಟದ್ದು
ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ನಿಷೇಧವು ಹಾಕಲ್ಪಟ್ಟಾಗ, ನಾನು ಪಯನೀಯರ್ ಸೇವೆಯನ್ನು ಆರಂಭಿಸಿ ಸ್ವಲ್ಪ ಸಮಯವೇ ಆಗಿತ್ತು. ದಿಕ್ಕುತೋಚದೆ, ನಾನು ಸಹೋದರರಿಂದ ಮಾರ್ಗದರ್ಶನಕ್ಕಾಗಿ ಕೇಳಿಕೊಂಡೆ, ಮತ್ತು ಅವರು ಜನರೊಂದಿಗೆ ಬೈಬಲಿನ ಕುರಿತು ಮಾತಾಡುವುದರ ಬಗ್ಗೆ ಯಾವುದೇ ನಿಷೇಧವಿಲ್ಲ ಎಂದು ನನಗೆ ಸೂಚಿಸಿದರು. ಆದುದರಿಂದ ಪಯನೀಯರರೊಂದಿಗೆ ಸೇರಿಕೊಂಡು, ಬೈಬಲಿನಿಂದ ಒಂದು ಸರಳ ಸಂದೇಶವನ್ನು ಮನೆಯಿಂದ ಮನೆಗೆ ಸಾರುತ್ತಾ ಹೋದೆ. ಇದು ಸಮೀಪಿಸುತ್ತಿದ್ದ ಪರೀಕ್ಷೆಗಳನ್ನು ಎದುರಿಸುವಂತೆ ನನ್ನನ್ನು ಬಲಪಡಿಸಿತು.
ನಾಲ್ಕು ತಿಂಗಳುಗಳ ಅನಂತರ ನನಗೆ 18 ವರ್ಷ ವಯಸ್ಸಾಯಿತು ಮತ್ತು ಮಿಲಿಟರಿ ಸೇವೆಗೆ ನೋಂದಾಯಿಸಿಕೊಳ್ಳುವಂತೆ ನನಗೆ ಕರೆಬಂತು. ಇದು, ಹಲವಾರು ಮಿಲಿಟರಿ ಅಧಿಕಾರಿಗಳು ಮತ್ತು ಒಬ್ಬ ನ್ಯಾಯಾಧೀಶನ ಮುಂದೆ ನನ್ನ ನಂಬಿಕೆಯನ್ನು ಸಮರ್ಥಿಸಲು ನನಗೆ ಅವಕಾಶವನ್ನು ಮಾಡಿಕೊಟ್ಟಿತು. ಆ ಸಮಯದಲ್ಲಿ, ತಮ್ಮ ತಟಸ್ಥ ನಿಲುವಿಗಾಗಿ 20 ಸಹೋದರರನ್ನು ಆ್ಯಡಲೇಡ್‌ನ ಸೆರೆಮನೆಗೆ ಹಾಕಲಾಗಿತ್ತು, ಮತ್ತು ನಾನು ಅವರ ಜೊತೆಗೂಡಿದೆ. ನಮ್ಮನ್ನು ಕಲ್ಲು ಅಗೆಯುವ ಮತ್ತು ರಸ್ತೆಗಳನ್ನು ರಿಪೇರಿಮಾಡುವ ಕಠಿಣ ಕೆಲಸಕ್ಕೆ ಒಳಪಡಿಸಲಾಯಿತು. ಇದು ನಾನು ತಾಳ್ಮೆ ಮತ್ತು ದೃಢಸಂಕಲ್ಪವೆಂಬ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿತು. ನಮ್ಮ ಒಳ್ಳೇ ನಡತೆ ಮತ್ತು ದೃಢ ನಿಲುವು ಕಾಲಕ್ರಮೇಣ ಸೆರೆಮನೆಯ ಅನೇಕ ಕಾವಲುಗಾರರ ಗೌರವವನ್ನು ಗಳಿಸುವಂತೆ ಮಾಡಿತು.
ಹಲವಾರು ತಿಂಗಳುಗಳ ನಂತರ ನಾನು ಬಿಡುಗಡೆಮಾಡಲ್ಪಟ್ಟಾಗ, ಪುನಃ ಒಳ್ಳೆಯ ಊಟವನ್ನು ಮಾಡುವ ಭಾಗ್ಯ ನನಗೆ ದೊರೆಯಿತು ಮತ್ತು ಕೂಡಲೇ ನಾನು ಪಯನೀಯರ್ ಸೇವೆಯನ್ನು ಆರಂಭಿಸಿದೆ. ಆದರೂ, ಪಯನೀಯರ್ ಸಂಗಾತಿಗಳು ಸಿಗುವುದೇ ಕಷ್ಟಕರವಾಗಿತ್ತು. ಆದುದರಿಂದ, ದಕ್ಷಿಣ ಆಸ್ಟ್ರೇಲಿಯದ ಒಂದು ಪ್ರತ್ಯೇಕವಾದ ಹೊಲಪ್ರದೇಶದಲ್ಲಿ ನಾನೊಬ್ಬನೇ ಸೇವೆಮಾಡಲು ಬಯಸುವೆನೋ ಎಂದು ನನ್ನನ್ನು ಕೇಳಲಾಯಿತು. ನಾನದಕ್ಕೆ ಒಪ್ಪಿಕೊಂಡೆ ಮತ್ತು ಕೇವಲ ಸಾಕ್ಷಿಕಾರ್ಯಕ್ಕೆ ಬೇಕಾಗಿರುವ ಸಾಮಗ್ರಿ ಹಾಗೂ ನನ್ನ ಬೈಸಿಕಲ್‌ನೊಂದಿಗೆ ಯಾರ್ಕ್ ಪರ್ಯಾಯ ದ್ವೀಪಕ್ಕೆ ಹಡಗಿನ ಮೂಲಕ ಪ್ರಯಾಣವನ್ನು ಬೆಳೆಸಿದೆ. ನಾನು ಅಲ್ಲಿ ಆಗಮಿಸಿದಾಗ, ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದ ಒಂದು ಕುಟುಂಬವು ನನ್ನನ್ನು ಒಂದು ಚಿಕ್ಕ ಅತಿಥಿಗೃಹಕ್ಕೆ ಮಾರ್ಗದರ್ಶಿಸಿತು ಮತ್ತು ಅಲ್ಲಿದ್ದ ಒಬ್ಬ ದಯಾಭರಿತ ಸ್ತ್ರೀ ನನ್ನನ್ನು ತನ್ನ ಮಗನೋಪಾದಿ ಉಪಚರಿಸಿದಳು. ಹಗಲು ಹೊತ್ತಿನಲ್ಲಿ, ನಾನು ಮಣ್ಣಿನ ರಸ್ತೆಗಳಲ್ಲಿ ನನ್ನ ಸೈಕಲನ್ನು ಓಡಿಸಿಕೊಂಡು ದ್ವೀಪದುದ್ದಕ್ಕೂ ಇದ್ದ ಚಿಕ್ಕ ಪಟ್ಟಣಗಳಲ್ಲಿ ಸಾರುತ್ತಾ ಹೋದೆ. ದೂರ ಪ್ರದೇಶಗಳನ್ನು ಆವರಿಸಲಿಕ್ಕಾಗಿ, ನಾನು ಕೆಲವೊಮ್ಮೆ ಚಿಕ್ಕ ಹೋಟೆಲುಗಳು ಅಥವಾ ಅತಿಥಿಗೃಹಗಳಲ್ಲಿ ರಾತ್ರಿಕಳೆಯುತ್ತಿದ್ದೆ. ಈ ರೀತಿ, ನಾನು ನೂರಾರು ಕಿಲೊಮೀಟರ್ ಸೈಕಲ್ ಸವಾರಿ ಮಾಡಿದ್ದೇನೆ ಮತ್ತು ಅನೇಕ ಉತ್ತಮ ಅನುಭವಗಳಲ್ಲಿ ಆನಂದಿಸಿದ್ದೇನೆ. ಸೇವೆಯಲ್ಲಿ ಒಬ್ಬಂಟಿಗನಾಗಿದ್ದೇನೆ ಎಂಬುದರ ಕುರಿತು ನಾನು ಹೆಚ್ಚು ಚಿಂತಿಸುತ್ತಿರಲಿಲ್ಲ, ಮತ್ತು ನಾನು ಯೆಹೋವನ ಆರೈಕೆಯ ಅನುಭವವನ್ನು ಸವಿದಂತೆ ಆತನ ಸಮೀಪಕ್ಕೆ ಸೆಳೆಯಲ್ಪಟ್ಟೆ.
ಅಸಮರ್ಪಕತೆಯ ಭಾವನೆಗಳನ್ನು ನಿಭಾಯಿಸುವುದು
ಇಸವಿ 1946ರಲ್ಲಿ, ಸಹೋದರರ ಸೇವಕ (ಈಗ ಸರ್ಕಿಟ್ ಮೇಲ್ವಿಚಾರಕರೆಂದು ಕರೆಯಲಾಗುತ್ತದೆ)ನಾಗಿ ಸಂಚರಣ ಕೆಲಸವನ್ನು ವಹಿಸಿಕೊಳ್ಳುವಂತೆ ಆಮಂತ್ರಿಸಿದಂಥ ಒಂದು ಪತ್ರವನ್ನು ಪಡೆದೆ. ಒಂದು ನೇಮಿತ ಸರ್ಕಿಟ್‌ನಲ್ಲಿ ಅನೇಕ ಸಭೆಗಳನ್ನು ಸಂದರ್ಶಿಸುವುದನ್ನು ಇದು ಅವಶ್ಯಪಡಿಸುತ್ತದೆ. ಈ ನೇಮಕದ ಜವಾಬ್ದಾರಿಗಳನ್ನು ನಾನು ನಿಜವಾಗಿಯೂ ಒಂದು ಪಂಥಾಹ್ವಾನವಾಗಿ ಕಂಡುಕೊಂಡೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಒಂದು ದಿನ ಒಬ್ಬ ಸಹೋದರನು ಹೀಗೆ ಹೇಳುತ್ತಿರುವುದನ್ನು ನಾನು ಕೇಳಿಸಿಕೊಂಡೆ: “ಹ್ಯಾರಲ್ಡ್ ಅಷ್ಟು ಉತ್ತಮ ಭಾಷಣಕರ್ತರೇನಲ್ಲ, ಆದರೆ ಕ್ಷೇತ್ರ ಸೇವೆಯಲ್ಲಿ ಅತಿ ಉತ್ತಮ ಕೆಲಸಗಾರ.” ಈ ಹೇಳಿಕೆಯು ನನ್ನನ್ನು ಅತ್ಯಧಿಕವಾಗಿ ಪ್ರೋತ್ಸಾಹಿಸಿತು. ನನಗೆ ನನ್ನ ವಾಕ್ಚಾತುರ್ಯ ಮತ್ತು ಸಂಘಟನಾತ್ಮಕ ಪರಿಮಿತಿಗಳ ಬಗ್ಗೆ ಅರಿವಿತ್ತು, ಆದರೆ ಸಾರುವ ಕೆಲಸವು ಕ್ರೈಸ್ತರ ಪ್ರಧಾನ ಚಟುವಟಿಕೆಯಾಗಿದೆ ಎಂಬುದನ್ನು ನಾನು ನಂಬಿದ್ದೆ.
ಇಸವಿ 1947ರಲ್ಲಿ, ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಿಂದ ಸಹೋದರರಾದ ನೇತನ್ ನಾರ್ ಮತ್ತು ಮಿಲ್ಟನ್ ಹೆನ್ಶಲ್‌ರವರು ಭೇಟಿ ನೀಡುವುದರ ಕುರಿತು ತುಂಬ ಕುತೂಹಲವೆದ್ದಿತ್ತು. ಸಹೋದರ ರದರ್‌ಫರ್ಡ 1938ರಲ್ಲಿ ಭೇಟಿಯಿತ್ತ ನಂತರ ಮುಖ್ಯ ಕಾರ್ಯಾಲಯದಿಂದ ಸಹೋದರರು ಸಂದರ್ಶಿಸುತ್ತಿರುವುದು ಇದೇ ಮೊದಲ ಬಾರಿಯಾಗಿತ್ತು. ಈ ಭೇಟಿಯ ಜೊತೆಯೇ ಸಿಡ್ನಿಯಲ್ಲಿ ಒಂದು ದೊಡ್ಡ ಅಧಿವೇಶನವನ್ನು ನಡೆಸಲಾಯಿತು. ಇತರ ಅನೇಕ ಯುವ ಪಯನೀಯರರಂತೆ
ನನಗೂ ಆಗ ತಾನೇ ಅಮೆರಿಕದ ನ್ಯೂ ಯಾರ್ಕ್‌ನ ಸೌತ್ ಲ್ಯಾನ್‌ಸಿಂಗ್‌ನಲ್ಲಿ ತೆರೆಯಲ್ಪಟ್ಟಿದ್ದ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ನೀಡುತ್ತಿರುವ ಮಿಷನೆರಿ ತರಬೇತಿಯಲ್ಲಿ ಆಸಕ್ತಿಯಿತ್ತು. ಆ ಶಾಲೆಯಲ್ಲಿ ನೋಂದಾಯಿಸಲ್ಪಡಬೇಕಾದರೆ ಉಚ್ಚ ಶಿಕ್ಷಣದ ಅಗತ್ಯವಿರಬಹುದು ಎಂದು ಹಾಜರಿದ್ದ ನಮ್ಮಲ್ಲಿ ಅನೇಕರು ನೆನಸಿದೆವು. ಆದರೆ, ನಾವು ಕಾವಲಿನಬುರುಜು ಪತ್ರಿಕೆಯಲ್ಲಿ ಒಂದು ಲೇಖನವನ್ನು ಓದಿ ಅದರ ಮುಖ್ಯ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿರುವುದಾದರೆ ನಾವು ಪ್ರಾಯಶಃ ಗಿಲ್ಯಡ್‌ನಲ್ಲಿ ಯಶಸ್ಸನ್ನು ಕಾಣಬಲ್ಲೆವು ಎಂದು ಸಹೋದರ ನಾರ್ ವಿವರಿಸಿದರು.ನನ್ನ ಸೀಮಿತ ಶಿಕ್ಷಣದಿಂದಾಗಿ ನಾನು ಆಯ್ಕೆಯಾಗುವುದು ಕಷ್ಟ ಎಂದು ನಾನು ನೆನಸಿದೆ. ನನ್ನ ಆಶ್ಚರ್ಯಕ್ಕೆ, ಹಲವಾರು ತಿಂಗಳುಗಳ ಅನಂತರ ನನ್ನನ್ನು ಗಿಲ್ಯಡ್ ತರಬೇತಿಗೆ ಅರ್ಜಿ ಹಾಕುವಂತೆ ಕೇಳಿಕೊಳ್ಳಲಾಯಿತು. ತದನಂತರ, ನನ್ನನ್ನು ಒಬ್ಬ ವಿದ್ಯಾರ್ಥಿಯಾಗಿ ಸ್ವೀಕರಿಸಲಾಯಿತು, ಮತ್ತು 1950ರಲ್ಲಿ ನಡೆಸಲ್ಪಟ್ಟ 16ನೆಯ ತರಗತಿಗೆ ನಾನು ಹಾಜರಾದೆ. ಇದು ಒಂದು ಅದ್ಭುತಕರ ಅನುಭವವಾಗಿ ಪರಿಣಮಿಸಿತು ಮತ್ತು ನನ್ನ ದೃಢವಿಶ್ವಾಸವನ್ನು ಬಹಳಷ್ಟು ಮಟ್ಟಿಗೆ ವರ್ಧಿಸಿತು. ಯಶಸ್ಸನ್ನು ಕಂಡುಕೊಳ್ಳಲು ಒಬ್ಬ ವ್ಯಕ್ತಿ ಪಾಂಡಿತ್ಯವನ್ನು ಪಡೆದುಕೊಂಡಿರಬೇಕೆಂಬುದು ಪ್ರಧಾನ ವಿಷಯವಾಗಿರುವುದಿಲ್ಲ ಎಂಬುದನ್ನು ಇದು ರುಜುಪಡಿಸಿತು. ಬದಲಿಗೆ, ಶ್ರದ್ಧೆ ಮತ್ತು ವಿಧೇಯತೆ ಮುಖ್ಯ ಅರ್ಹತೆಗಳಾಗಿದ್ದವು. ನಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮ ಪ್ರಯತ್ನವನ್ನು ಮಾಡುವಂತೆ ನಮ್ಮ ಶಿಕ್ಷಕರು ಪ್ರೋತ್ಸಾಹಿಸಿದರು. ಅವರ ಸಲಹೆಯನ್ನು ಅನ್ವಯಿಸಿದಾಗ, ನಾನು ಕ್ರಮವಾದ ಪ್ರಗತಿಯನ್ನು ಮಾಡಿದೆ ಮತ್ತು ಕೊಡಲ್ಪಟ್ಟ ಉಪದೇಶವನ್ನು ಸಾಧ್ಯವಾದಷ್ಟು ಉತ್ತಮವಾಗಿ ಅನುಕರಿಸುತ್ತಾ ಹೋಗಲು ನನ್ನಿಂದ ಸಾಧ್ಯವಾಯಿತು.
ಬಂಜರು ಪ್ರದೇಶದಿಂದ ಸುಂದರ ದ್ವೀಪಕ್ಕೆ
ಪದವಿಯನ್ನು ಪಡೆದುಕೊಂಡ ಬಳಿಕ ನನ್ನನ್ನು ಮತ್ತು ಆಸ್ಟ್ರೇಲಿಯದ ಇತರ ಇಬ್ಬರು ಸಹೋದರರನ್ನು ಸಿಲೋನ್‌ಗೆ (ಈಗ ಶ್ರೀ ಲಂಕ) ನೇಮಿಸಲಾಯಿತು. ನಾವು ರಾಜಧಾನಿಯಾದ ಕೊಲಂಬೋಗೆ 1951ರ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಮಿಸಿದೆವು. ಅಲ್ಲಿ ಶುಷ್ಕ ಆರ್ದ್ರ ವಾತಾವರಣವಿತ್ತು, ಮತ್ತು ಹೊಸ ದೃಶ್ಯಗಳ, ಶಬ್ದಗಳ, ಮತ್ತು ಸುವಾಸನೆಗಳ ಸಮ್ಮಿಶ್ರಣವೇ ನಮ್ಮ ಜ್ಞಾನೇಂದ್ರಿಯಗಳನ್ನು ಆಕ್ರಮಿಸಿತು. ನಾವು ಹಡಗಿನಿಂದ ಇಳಿದು ಬಂದಾಗ, ಈಗಾಗಲೇ ಈ ದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಮಿಷನೆರಿಯು ನನಗೆ ಒಂದು ಕರಪತ್ರವನ್ನು ನೀಡಿದನು, ಮತ್ತು ಅದರಲ್ಲಿ ಮುಂದಿನ ಭಾನುವಾರ ನಗರದ ಚೌಕದಲ್ಲಿ ನೀಡಲ್ಪಡಲಿರುವ ಒಂದು ಸಾರ್ವಜನಿಕ ಭಾಷಣದ ಪ್ರಕಟನೆಯಿತ್ತು. ನನ್ನ ಆಶ್ಚರ್ಯಕ್ಕೆ ನನ್ನ ಹೆಸರು ಆ ಕರಪತ್ರದಲ್ಲಿತ್ತು, ಮತ್ತು ಭಾಷಣಕರ್ತನು ನಾನೇ ಆಗಿದ್ದೆ! ನನ್ನ ಹೆದರಿಕೆಯನ್ನು ತುಸು ಊಹಿಸಿ ನೋಡಿ. ಆದರೆ, ಆಸ್ಟ್ರೇಲಿಯದಲ್ಲಿ ಮಾಡಿದ್ದ ಪಯನೀಯರ್ ಸೇವೆಯು, ಯಾವುದೇ ನೇಮಕವು ಕೊಡಲ್ಪಡುವುದಾದರೂ ಅದನ್ನು ಸ್ವೀಕರಿಸುವಂತೆ ನನಗೆ ಕಲಿಸಿತ್ತು. ಆದುದರಿಂದ, ಯೆಹೋವನ ಸಹಾಯದಿಂದ ನಾನು ಸಾರ್ವಜನಿಕ ಭಾಷಣವನ್ನು ಯಶಸ್ವಿಯಾಗಿ ಕೊಟ್ಟೆ. ಈಗಾಗಲೇ ಕೊಲಂಬೋ ಮಿಷನೆರಿ ಗೃಹದಲ್ಲಿದ್ದ ನಾಲ್ಕು ಅವಿವಾಹಿತ ಸಹೋದರರೊಂದಿಗೆ ನಾವು ಮೂವರೂ ಕಷ್ಟಕರವಾದ ಸಿನ್ಹಾಲಾ ಭಾಷೆಯನ್ನು ಸಂಬಾಲಿಸಲು ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಲು ಆರಂಭಿಸಿದೆವು. ಹೆಚ್ಚು ಸಮಯ ನಾವು ಒಬ್ಬೊಬ್ಬರಾಗಿಯೇ ಸೇವೆ ಮಾಡಿದೆವು, ಮತ್ತು ಸ್ಥಳಿಕ ಜನರು ಗೌರವ ತೋರಿಸುವವರೂ ಸತ್ಕಾರಭಾವದವರೂ ಆಗಿದ್ದಾರೆ ಎಂಬುದನ್ನು ತಿಳಿದು ನಮಗೆ ಸಂತೋಷವಾಯಿತು. ಶೀಘ್ರವೇ ಕೂಟಗಳಿಗೆ ಹಾಜರಾಗುವವರ ಸಂಖ್ಯೆ ಹೆಚ್ಚಲಾರಂಭಿಸಿತು.
ಕಾಲ ಸಂದಂತೆ, ನಾನು ಸಿಬಲ್ ಎಂಬ ಒಬ್ಬ ಆಕರ್ಷಕ ಪಯನೀಯರ್ ಸಹೋದರಿಯ ಬಗ್ಗೆ ಗಂಭೀರವಾಗಿ ಯೋಚಿಸಲು ಆರಂಭಿಸಿದೆ. ಗಿಲ್ಯಡ್ ಸ್ಕೂಲ್‌ಗೆ ಹಾಜರಾಗಲು ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ನಾನು ಅವಳನ್ನು ಭೇಟಿಮಾಡಿದ್ದೆ. ಅವಳು ನ್ಯೂ ಯಾರ್ಕ್ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲು ಪ್ರಯಾಣಿಸುತ್ತಿದ್ದಳು. ತದನಂತರ, ಅವಳು ಗಿಲ್ಯಡ್‌ನ 21ನೇ ತರಗತಿಗೆ ಹಾಜರಾದಳು ಮತ್ತು 1953ರಲ್ಲಿ ಹಾಂಗ್ ಕಾಂಗ್‌ಗೆ ನೇಮಿಸಲ್ಪಟ್ಟಳು. ನಾನು ಅವಳಿಗೆ ಒಂದು ಪತ್ರವನ್ನು ಬರೆಯುವ ನಿರ್ಧಾರವನ್ನು ಮಾಡಿದೆ, ಮತ್ತು ಈ ಪತ್ರವ್ಯವಹಾರವು, ಎಲ್ಲಿ ನಮ್ಮ ವಿವಾಹವಾಯಿತೋ ಆ ಸಿಲೋನ್‌ನಲ್ಲಿ ಸಿಬಲ್ ನನ್ನ ಜೊತೆಸೇರುವ ವರೆಗೂ ಅಂದರೆ 1955ರ ವರೆಗೂ ಮುಂದುವರಿಯಿತು.
ಮಿಷನೆರಿ ದಂಪತಿಯೋಪಾದಿ ನಮ್ಮಿಬ್ಬರ ಮೊದಲ ನೇಮಕ ಜಾಫ್ನಾ ಆಗಿತ್ತು, ಈ ಪಟ್ಟಣವು ಶ್ರೀ ಲಂಕದ ತೀರ ಉತ್ತರಕ್ಕಿದೆ. ದಶಕ 1950ರ ಮಧ್ಯದಲ್ಲಿ, ರಾಜಕೀಯ ಭಿನ್ನತೆಗಳು ಸಿನ್ಹಾಲಾ ಮತ್ತು ತಮಿಳು ಸಮಾಜಗಳನ್ನು ವಿರುದ್ಧಪಕ್ಷಗಳಾಗಿ ರೂಪುಗೊಳಿಸಲು ಆರಂಭಿಸಿದವು, ಮತ್ತು ಇದು ತದನಂತರದ ದಶಕಗಳಲ್ಲಿ ಶಸ್ತ್ರಾಸ್ತ್ರಗಳ ಕದನಕ್ಕೆ ತಳಪಾಯವನ್ನು ಹಾಕಿತು. ಆ ಕಷ್ಟಕರ ವರ್ಷಗಳಲ್ಲಿ ಸಿನ್ಹಾಲಾ ಮತ್ತು ತಮಿಳು ಸಾಕ್ಷಿಗಳು ಕೆಲವೊಮ್ಮೆ ಹಲವಾರು ತಿಂಗಳುಗಳ ವರೆಗೆ ಒಬ್ಬರಿಗೊಬ್ಬರು ಆಶ್ರಯವನ್ನು ನೀಡಿಕೊಂಡರು ಎಂಬುದನ್ನು ನೋಡುವುದು ಎಷ್ಟು ಹೃದಯೋತ್ತೇಜಕವಾಗಿತ್ತು! ಆ ಪರೀಕ್ಷೆಗಳು ಸಹೋದರರ ನಂಬಿಕೆಯನ್ನು ಪರಿಷ್ಕರಿಸಿ ಬಲಪಡಿಸಿದವು.
ಶ್ರೀ ಲಂಕದಲ್ಲಿ ಸಾರುವುದು ಮತ್ತು ಕಲಿಸುವುದು
ಹಿಂದೂ ಮತ್ತು ಮುಸ್ಲಿಮ್ ಸಮಾಜಗಳಿಗೆ ಹೊಂದಿಕೊಳ್ಳುವುದು ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯನ್ನು ಅವಶ್ಯಪಡಿಸಿತು. ಹಾಗಿದ್ದರೂ, ನಾವು ಎರಡೂ ಸಂಸ್ಕೃತಿಗಳನ್ನು ಮತ್ತು ಆ ಸಂಸ್ಕೃತಿಗಳ ಜನರ ರಮಣೀಯ ಗುಣಗಳನ್ನು ಮಾನ್ಯಮಾಡಲಾರಂಭಿಸಿದೆವು. ಸ್ಥಳಿಕ ಬಸ್ಸುಗಳಲ್ಲಿ ವಿದೇಶೀಯರು ಪ್ರಯಾಣಿಸುತ್ತಿರುವುದನ್ನು ನೋಡುವುದು ಅಸಾಮಾನ್ಯವಾಗಿದ್ದುದರಿಂದ, ನಮ್ಮ ಉಪಸ್ಥಿತಿಯು ಅನೇಕರ ಕೌತುಕವನ್ನು ಕೆರಳಿಸಿ ಅವರು ನಮ್ಮನ್ನು ದಿಟ್ಟಿಸಿ ನೋಡುವಂತೆ ಮಾಡುತ್ತಿತ್ತು. ಸಿಬಲ್ ತಾನು ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸುವೆನೆಂದು ತೀರ್ಮಾನಿಸಿದಳು. ಇದು ಎಷ್ಟು ಪ್ರತಿಫಲದಾಯಕವಾಗಿತ್ತು, ಏಕೆಂದರೆ ಕೌತುಕತೆಯಿಂದ ತುಂಬಿದ್ದ ಆ ಮುಖಗಳು ಸುಂದರವಾದ ಮುಗುಳ್ನಗೆಗಳಾಗಿ ಮಾರ್ಪಟ್ಟವು!
ಒಂದು ಸಂದರ್ಭದಲ್ಲಿ, ಒಂದು ರಸ್ತೆಯ ಅಡ್ಡಗಟ್ಟಿನ ಬಳಿ ಅಧಿಕಾರಿಗಳು ನಮ್ಮನ್ನು ನಿಲ್ಲಿಸಿದರು. ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಗಾರ್ಡ್ ನಮ್ಮನ್ನು ವಿಚಾರಿಸಿದ ಬಳಿಕ ಅವನ ಪ್ರಶ್ನೆಗಳು ತುಂಬ ವೈಯಕ್ತಿಕವಾದವು.
“ಈ ಸ್ತ್ರೀ ಯಾರು?”
“ನನ್ನ ಹೆಂಡತಿ,” ಎಂದು ನಾನು ಉತ್ತರಿಸಿದೆ.
“ನಿಮಗೆ ಮದುವೆಯಾಗಿ ಎಷ್ಟು ವರ್ಷ ಆಯಿತು?”
“ಎಂಟು ವರ್ಷಗಳು.”
“ನಿಮಗೆ ಮಕ್ಕಳಿದ್ದಾರೋ?”
“ಇಲ್ಲ.”
“ಹೌದಾ! ಡಾಕ್ಟರನ್ನು ಹೋಗಿ ನೋಡಲಿಲ್ಲವೇ?”
ಈ ಸ್ವಾಭಾವಿಕ ಕೌತುಕವು ಪ್ರಥಮವಾಗಿ ನಮ್ಮನ್ನು ಅಚ್ಚರಿಗೊಳಿಸಿತು, ಆದರೆ ಕಾಲ ಸಂದಂತೆ ಇದು ಸ್ಥಳಿಕ ಜನರು ಇತರರಲ್ಲಿ ತೋರಿಸುವ ಪ್ರಾಮಾಣಿಕ ವೈಯಕ್ತಿಕ ಆಸಕ್ತಿಯ ಒಂದು ಅಭಿವ್ಯಕ್ತಿಯಾಗಿದೆ ಎಂದು ನಾವು ಪರಿಗಣಿಸಿದೆವು. ವಾಸ್ತವದಲ್ಲಿ, ಇದು ಅವರ ಅತಿ ರಮಣೀಯ ವೈಶಿಷ್ಟ್ಯಗಳಲ್ಲೊಂದು. ಒಬ್ಬ ವ್ಯಕ್ತಿಯು ಒಂದು ಸಾರ್ವಜನಿಕ ಸ್ಥಳದಲ್ಲಿ ತುಸು ಹೊತ್ತು ಕೇವಲ ನಿಂತಿದ್ದರೆ ಸಾಕು, ಯಾರಾದರೂ ಬಂದು ದೈನ್ಯದಿಂದ ‘ನನ್ನಿಂದ ನಿಮಗೆ ಏನಾದರೂ ಸಹಾಯ ಬೇಕೆ?’ ಎಂದು ಕೇಳುವದುಂಟು.
ಬದಲಾವಣೆಗಳು ಮತ್ತು ಹಿನ್ನೋಟಗಳು
ಈ ಎಲ್ಲಾ ವರ್ಷಗಳಲ್ಲಿ, ಶ್ರೀ ಲಂಕದಲ್ಲಿ ಮಿಷನೆರಿ ಕೆಲಸವಲ್ಲದೆ ಇತರ ನೇಮಕಗಳಲ್ಲೂ ನಾವು ಆನಂದಿಸಿದ್ದೇವೆ. ನನಗೆ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಕೆಲಸವು ನೇಮಿಸಲ್ಪಟ್ಟಿತು ಮತ್ತು ನಾನು ಬ್ರಾಂಚ್ ಕಮಿಟಿಯ ಒಬ್ಬ ಸದಸ್ಯನಾಗಿ ಸಹ ನೇಮಿಸಲ್ಪಟ್ಟೆ. ಇಸವಿ 1996ರಷ್ಟಕ್ಕೆ, ನಾನು ನನ್ನ 75ರ ಪ್ರಾಯದಲ್ಲಿದ್ದೆ. ನಾನು ಶ್ರೀ ಲಂಕದಲ್ಲಿ ಕಳೆದಿದ್ದ 45 ವರ್ಷಗಳ ಮಿಷನೆರಿ ಸೇವೆಯ ಕಡೆಗೆ ಹಿನ್ನೋಟ ಬೀರುವ ಆನಂದ ನನಗೆ ಸಿಕ್ಕಿತು. ನಾನು ಕೊಲಂಬೋದಲ್ಲಿ ಮೊದಲ ಕೂಟಕ್ಕೆ ಹಾಜರಾದಾಗ, 20 ಮಂದಿ ಉಪಸ್ಥಿತರಿದ್ದರು. ಆ ಸಂಖ್ಯೆಯು ಈಗ 3,500ಕ್ಕೆ ಬೆಳೆದಿದೆ! ಸಿಬಲ್ ಮತ್ತು ನಾನು ಈ ಪ್ರಿಯ ವ್ಯಕ್ತಿಗಳಲ್ಲಿ ಅನೇಕರನ್ನು ನಮ್ಮ ಆಧ್ಯಾತ್ಮಿಕ ಮಕ್ಕಳು ಮತ್ತು ಮೊಮ್ಮಕ್ಕಳಾಗಿ ಪರಿಗಣಿಸಿದೆವು. ಆದರೂ, ಇಡೀ ದೇಶದಲ್ಲಿ ಮಾಡಲಿಕ್ಕೆ ಇನ್ನು ಎಷ್ಟೋ ಕೆಲಸವಿತ್ತು—ನಮಗಿಂತ ಚಿಕ್ಕ ಪ್ರಾಯದವರಾಗಿರುವವರ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅಗತ್ಯಪಡಿಸುವ ಕೆಲಸ ಅದಾಗಿತ್ತು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಪುನಃ ಆಸ್ಟ್ರೇಲಿಯಕ್ಕೆ ಹಿಂದಿರುಗುವಂತೆ ಕೇಳಿಕೊಂಡ ಆಡಳಿತ ಮಂಡಲಿಯ ಆಮಂತ್ರಣವನ್ನು ನಾವು ಸ್ವೀಕರಿಸಿದೆವು. ಇದು ಯುವ ದಂಪತಿಗಳು ಮಿಷನೆರಿಗಳಾಗಿ ಶ್ರೀ ಲಂಕಕ್ಕೆ ಹೋಗಿ ನಮ್ಮ ಸ್ಥಾನವನ್ನು ತೆಗೆದುಕೊಳ್ಳುವಂತೆ ಸಾಧ್ಯಗೊಳಿಸಿದೆ.
ನಾನು ಈಗ 82 ವರ್ಷ ಪ್ರಾಯದವನಾಗಿದ್ದೇನೆ. ನಾನು ಮತ್ತು ಸಿಬಲ್ ಆ್ಯಡಲೇಡ್‌ನಲ್ಲೇ ನಮ್ಮ ಹಳೇ ಮನೆಯಿರುವಲ್ಲಿ ನಮ್ಮ ವಿಶೇಷ ಪಯನೀಯರ್ ಸೇವೆಯನ್ನು ಮುಂದುವರಿಸುವಷ್ಟು ಇನ್ನೂ ಆರೋಗ್ಯವಂತರಾಗಿದ್ದೇವೆ ಎಂಬುದರ ಬಗ್ಗೆ ನಮಗೆ ಸಂತೋಷವಿದೆ. ನಮ್ಮ ಶುಶ್ರೂಷೆಯು ನಮ್ಮನ್ನು ಮಾನಸಿಕವಾಗಿ ಚುರುಕಾಗಿಯೂ ಹೊಂದಿಕೊಳ್ಳುವವರಾಗಿಯೂ ಇರುವಂತೆ ಮಾಡುತ್ತದೆ. ಮತ್ತು ಆಸ್ಟ್ರೇಲಿಯದ ತೀರ ಭಿನ್ನವಾದ ಬಾಳ್ವೆಗೆ ಹೊಂದಿಕೊಳ್ಳಲೂ ಇದು ನಮಗೆ ಸಹಾಯಮಾಡಿದೆ.
ಯೆಹೋವನು ನಮ್ಮ ಭೌತಿಕ ಅಗತ್ಯಗಳನ್ನು ಸದಾ ಒದಗಿಸುತ್ತಾ ಬಂದಿದ್ದಾನೆ, ಮತ್ತು ನಮ್ಮ ಸ್ಥಳಿಕ ಸಭೆಯಲ್ಲಿರುವ ಸಹೋದರ ಸಹೋದರಿಯರು ಹೆಚ್ಚು ಪ್ರೀತಿ ಮತ್ತು ಬೆಂಬಲವನ್ನು ಕೊಡುತ್ತಾರೆ. ನಾನು ಇತ್ತೀಚೆಗೆ ಒಂದು ಹೊಸ ನೇಮಕವನ್ನು ಪಡೆದುಕೊಂಡೆ. ನಾನು ಸಭೆಯ ಸೆಕ್ರಿಟರಿಯಾಗಿ ಸೇವೆ ಸಲ್ಲಿಸಲಿದ್ದೇನೆ. ಹೀಗೆ, ನಾನು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಲು ಪ್ರಯತ್ನಿಸಿದಷ್ಟು ನನ್ನ ತರಬೇತಿಯು ಮುಂದುವರಿಯುತ್ತಾ ಇರುತ್ತದೆ ಎಂಬುದನ್ನು ಮನಗಂಡಿದ್ದೇನೆ. ಕಳೆದುಹೋದ ಎಲ್ಲಾ ವರ್ಷಗಳ ಕಡೆಗೆ ಹಿನ್ನೋಟ ಬೀರುವಾಗ, ಯಾವುದೋ ಹಳ್ಳಿಯಲ್ಲಿ ಜೀವಿಸುತ್ತಿದ್ದ ಸರಳ ಹಾಗೂ ನಿಶ್ಚಿಂತ ಸ್ವಭಾವದ ಹುಡುಗನು ಇಂತಹ ಅದ್ಭುತಕರ ಶಿಕ್ಷಣವನ್ನು ಪಡೆದುಕೊಳ್ಳುವುದೇ ಎಂದು ನಾನು ಸದಾ ವಿಸ್ಮಯಗೊಳ್ಳುತ್ತೇನೆ. ಈ ಶಿಕ್ಷಣವು ನನ್ನ ಜೀವನದುದ್ದಕ್ಕೂ ನಡೆಯುತ್ತಾ ಬಂದಿದೆ!
[ಪುಟ 26ರಲ್ಲಿರುವ ಚಿತ್ರ]
ನಮ್ಮ ವಿವಾಹದ ದಿನ, 1955
[ಪುಟ 27ರಲ್ಲಿರುವ ಚಿತ್ರ]
ಇಸವಿ 1957ರಲ್ಲಿ, ಸ್ಥಳಿಕ ಸಹೋದರರಾದ ರಾಜನ್ ಕಾದೀರ್‌ಗಾಮಾರ್‌ರೊಂದಿಗೆ
[ಪುಟ 28ರಲ್ಲಿರುವ ಚಿತ್ರ]
ಇಂದು ಸಿಬಲ್‌ಳೊಂದಿಗೆ