ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಯಾವ ರೀತಿಯ ಕಾಯುವ ಮನೋಭಾವವಿದೆ?

ನಿಮಗೆ ಯಾವ ರೀತಿಯ ಕಾಯುವ ಮನೋಭಾವವಿದೆ?

ನಿಮಗೆ ಯಾವ ರೀತಿಯ ಕಾಯುವ ಮನೋಭಾವವಿದೆ?

ಇಂದಿನ ಲೋಕದಲ್ಲಿ, ಯಾರಿಗಾದರೂ ಅಥವಾ ಯಾವುದಕ್ಕಾದರೂ ಕಾಯುವುದನ್ನು ಆನಂದಕರವಾಗಿ ಕಂಡುಕೊಳ್ಳುವವರು ಕೇವಲ ಕೆಲವರೇ. ಅದು ಅವರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆದರೆ, ಶಾಸ್ತ್ರವಚನಗಳಾದರೋ ‘ಕಾಯುವ’ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ದೇವಜನರನ್ನು ಪ್ರೋತ್ಸಾಹಿಸುತ್ತದೆ. ತನ್ನ ಸುತ್ತಲೂ ಜೀವಿಸುತ್ತಿದ್ದ ಜನರಿಗೆ ವ್ಯತಿರಿಕ್ತವಾಗಿ ಪ್ರವಾದಿಯಾದ ಮೀಕನು, “ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು” ಎಂದು ಘೋಷಿಸಿದನು.​—⁠ಮೀಕ 7:7; ಪ್ರಲಾಪಗಳು 3:26.

ಆದರೆ, ಯೆಹೋವನಿಗಾಗಿ ಕಾಯುವುದರ ಅರ್ಥವೇನು? ಒಬ್ಬ ಕ್ರೈಸ್ತನು ದೇವರಿಗಾಗಿ ಕಾಯುವುದು ಹೇಗೆ? ಇದನ್ನು ಮಾಡುವ ಸರಿಯಾದ ಮತ್ತು ತಪ್ಪಾದ ವಿಧಗಳಿವೆಯೋ? ಸಾ.ಶ.ಪೂ. ಒಂಬತ್ತನೇ ಶತಮಾನದ ಪ್ರವಾದಿಯಾಗಿದ್ದ ಯೋನನ ಅನುಭವವು ನಮಗೆ ಈ ವಿಷಯದಲ್ಲಿ ಒಂದು ಪಾಠವನ್ನು ಒದಗಿಸುತ್ತದೆ.

ತಪ್ಪಾದ ಕಾಯುವಿಕೆಯ ಒಂದು ಮಾದರಿ

ಯೋನನು ಅಶ್ಶೂರ ಸಾಮ್ರಾಜ್ಯದ ರಾಜಧಾನಿಯಾದ ನಿನೆವೆಯ ಜನರಿಗೆ ಹೋಗಿ ಸಾರುವಂತೆ ಯೆಹೋವ ದೇವರು ಅವನನ್ನು ನಿರ್ದೇಶಿಸಿದನು. ನಿನೆವೆಯ ಮೊಂಡ ಪಾಶವೀಯತೆ ಮತ್ತು ಕ್ರೌರ್ಯಕ್ಕಾಗಿ ಅದನ್ನು “ರಕ್ತಮಯಪುರಿ” ಎಂದು ಕರೆಯಲಾಗುತ್ತಿತ್ತು. ಮತ್ತು ಇದು ಸತ್ಯವೆಂದು ಇತಿಹಾಸಕಾರರು ಮತ್ತು ಪ್ರಾಕ್ತನಶಾಸ್ತ್ರಜ್ಞರು ದೃಢಪಡಿಸುತ್ತಾರೆ. (ನಹೂಮ 3:1) ಯೋನನು ಪ್ರಥಮವಾಗಿ ಈ ನೇಮಕದಿಂದ ಓಡಿಹೋಗಲು ಪ್ರಯತ್ನಿಸಿದನಾದರೂ, ಪ್ರವಾದಿಯು ಕೊನೆಗೆ ನಿನೆವೆಗೆ ಹೋಗುವುದನ್ನು ಯೆಹೋವನು ಖಚಿತಪಡಿಸಿಕೊಂಡನು.​—⁠ಯೋನ 1:3-3:⁠2.

“ಯೋನನು ಪಟ್ಟಣದಲ್ಲಿ . . . ಒಂದು ದಿವಸದ ಪ್ರಯಾಣದಷ್ಟು ದೂರ ನಡೆದು​—⁠ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು ಎಂದು ಸಾರತೊಡಗಿದನು.” (ಯೋನ 3:4) ಯೋನನ ಪ್ರಯತ್ನಗಳಿಗೆ ಗಮನಾರ್ಹವಾದ ಪ್ರತಿಕ್ರಿಯೆಯು ಸಿಕ್ಕಿತು: “ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಗೊತ್ತುಮಾಡಿ ಸಾರಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.” (ಯೋನ 3:5) ಇದಕ್ಕನುಸಾರ, “ಯಾವನಾದರೂ ನಾಶವಾಗುವದರಲ್ಲಿ . . . ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವ” ಯೆಹೋವ ದೇವರು ಪಟ್ಟಣವನ್ನು ಕೆಡವಿಹಾಕಲಿಲ್ಲ.​—⁠2 ಪೇತ್ರ 3:⁠9.

ಯೋನನ ಪ್ರತಿಕ್ರಿಯೆ ಏನಾಗಿತ್ತು? ದಾಖಲೆಯು ಹೇಳುವುದು: “ಇದರಿಂದ ಯೋನನಿಗೆ ಬಹು ಕರಕರೆಯಾಯಿತು.” (ಯೋನ 4:1) ಏಕೆ? ಒಂದು ನಿರ್ದಿಷ್ಟ ತಾರೀಖಿನಂದು ಬರಲಿಕ್ಕಿದ್ದ, ಆದರೆ ಪೂರೈಸಲ್ಪಡದೇ ಹೋದ ನಾಶನದ ಕುರಿತು ಪ್ರಕಟಿಸಿ ಒಬ್ಬ ಪ್ರವಾದಿಯಾಗಿ ತಾನು ತಲೆತಗ್ಗಿಸುವಂತಾಯಿತಲ್ಲಾ ಎಂದು ಯೋನನು ಯೋಚಿಸಿದ್ದಿರಬಹುದು. ಇತರರಿಗೆ ತೋರಿಸಲ್ಪಡುವ ದಯೆ ಮತ್ತು ರಕ್ಷಣೆಗಿಂತ ತನ್ನ ಹೆಸರನ್ನು ಕಾಪಾಡಿಕೊಳ್ಳುವುದರ ಕುರಿತೇ ಯೋನನು ಹೆಚ್ಚು ಚಿಂತಿತನಾದನು ಎಂದು ತೋರುತ್ತದೆ.

ವಾಸ್ತವದಲ್ಲಿ, ಯೋನನು ಒಬ್ಬ ಪ್ರವಾದಿಯಾಗಿ ತನ್ನ ನೇಮಕವನ್ನು ಬಿಟ್ಟುಬಿಡುವ ಹಂತಕ್ಕೆ ಹೋಗಲಿಲ್ಲ. ಆದರೂ, “ಪಟ್ಟಣವು ಏನಾಗುವದೋ” ಎಂದು ಕಾಯುತ್ತಾ ಕುಳಿತನು. ಹೌದು, ಒಂದು ರೀತಿಯ ಅಸಹನಾಪೂರ್ವಕವಾದ ಕಾದು-ನೋಡುವ ಮನೋಭಾವವನ್ನು ಅವನು ಬೆಳೆಸಿಕೊಂಡನು. ತಾನು ಅಪೇಕ್ಷಿಸಿದ ರೀತಿಯಲ್ಲಿ ವಿಷಯಗಳು ನಡೆಯಲಿಲ್ಲ ಎಂಬುದನ್ನು ಗ್ರಹಿಸಿದ ಅವನು, ತನಗಾಗಿ ಒಂದು ಗುಡಿಸಲನ್ನು ಮಾಡಿ ಅದರ ನೆರಳಿನಲ್ಲಿ ಕುಳಿತುಕೊಂಡು, ಏನು ಸಂಭವಿಸುವುದೆಂದು ನೋಡಲಿಕ್ಕಾಗಿ ಮುನಿಸಿಕೊಂಡು ಕಾಯುತ್ತಾ ಇದ್ದನು. ಯೆಹೋವನಾದರೋ ಯೋನನ ಮನೋಭಾವವನ್ನು ಒಪ್ಪಲಿಲ್ಲ, ಮತ್ತು ಪ್ರವಾದಿಯ ತಪ್ಪು ಆಲೋಚನೆಯನ್ನು ಪ್ರೀತಿಯಿಂದ ತಿದ್ದಿದನು.​—⁠ಯೋನ 4:5, 9-11.

ಯೆಹೋವನು ತಾಳ್ಮೆಯಿಂದಿರುವುದರ ಕಾರಣ

ನಿನೆವೆ ಪಟ್ಟಣವು ಪಶ್ಚಾತ್ತಾಪಪಟ್ಟು ಉಳಿಸಲ್ಪಟ್ಟರೂ, ತದನಂತರ ಅದು ತನ್ನ ದುಷ್ಕೃತ್ಯಗಳಿಗೆ ಮರಳಿತು. ತನ್ನ ಪ್ರವಾದಿಗಳಾದ ನಹೂಮ ಮತ್ತು ಚೆಫನ್ಯರ ಮೂಲಕ ಯೆಹೋವನು ನಾಶನವನ್ನು ಮುಂತಿಳಿಸಿದನು. “ರಕ್ತಮಯಪುರಿಯ” ಕುರಿತು ಮಾತಾಡುತ್ತಾ, ಅಶ್ಶೂರವನ್ನು ಧ್ವಂಸಪಡಿಸುವೆನು ಮತ್ತು ನಿನೆವೆಯನ್ನು ಹಾಳುಮಾಡುವೆನು ಎಂದು ಯೆಹೋವನು ಘೋಷಿಸಿದನು. (ನಹೂಮ 3:1; ಚೆಫನ್ಯ 2:13) ಸಾ.ಶ.ಪೂ. 632ರಲ್ಲಿ, ನಿನೆವೆ ಇನ್ನೆಂದಿಗೂ ತಲೆದೋರದಂತೆ ನಾಶಗೊಳಿಸಲ್ಪಟ್ಟಿತು.

ತದ್ರೀತಿಯಲ್ಲಿ, ಇಂದಿನ ಲೋಕವು ಪುರಾತನ ನಿನೆವೆಗಿಂತಲೂ ಅತಿ ಹೆಚ್ಚು ಪ್ರಮಾಣದಲ್ಲಿ ನಿಷ್ಕಾರಣವಾಗಿ ರಕ್ತಪಾತವನ್ನು ಮಾಡಿರುವ ಅಪರಾಧವನ್ನು ಹೊತ್ತಿದೆ. ಈ ಕಾರಣಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ, ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯು ಹಿಂದೆಂದೂ ಕಂಡಿಲ್ಲದ “ಮಹಾ ಸಂಕಟ”ದಲ್ಲಿ ತನ್ನ ಅಂತ್ಯವನ್ನು ಕಾಣುವುದು ಎಂದು ಯೆಹೋವನು ವಿಧಿಸಿದ್ದಾನೆ.​—⁠ಮತ್ತಾಯ 24:20-22.

ಆದರೂ, ಯೆಹೋವನು ವಾಗ್ದಾನಿತ ನಾಶನವನ್ನು, ನಿನೆವೆಯ ಪಶ್ಚಾತ್ತಾಪಪಟ್ಟ ಜನರ ವಿಷಯದಲ್ಲಿ ಮಾಡಿದಂತೆಯೇ ಇಂದು ಪ್ರಾಮಾಣಿಕ ಜನರು ಪಶ್ಚಾತ್ತಾಪಪಟ್ಟು ಉಳಿಸಲ್ಪಡಲಿಕ್ಕಾಗಿ ತಡೆದುಹಿಡಿದಿದ್ದಾನೆ. ಅಪೊಸ್ತಲ ಪೇತ್ರನು ದೇವರ ತಾಳ್ಮೆಯನ್ನು ಈ ಮಾತುಗಳಲ್ಲಿ ಸೂಚಿಸುತ್ತಾನೆ: “ಕರ್ತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”​—⁠2 ಪೇತ್ರ 3:9, 10, 13.

ಸರಿಯಾದ ವಿಧದಲ್ಲಿ ಕಾಯುವುದು

ಪೇತ್ರನು ಮುಂದುವರಿಸುತ್ತಾ ಹೇಳುವುದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ಯೆಹೋವನ ದಿನಕ್ಕಾಗಿ ಕಾಯುತ್ತಿರುವಾಗ, ನಾವು “ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ” ಉಳ್ಳವರಾಗಿರಬೇಕು ಎಂಬುದನ್ನು ಗಮನಿಸಿ​—⁠ಆದುದರಿಂದ ನಿಷ್ಕ್ರಿಯತೆ ಅಲ್ಲ ಕ್ರಿಯೆಯೇ ಯೋಗ್ಯವಾದದ್ದು.

ಹೌದು, ಸರಿಯಾದ ರೀತಿಯ ಕಾಯುವ ಮನೋಭಾವವು, ಯೆಹೋವನ ದಿನವು ಆತನು ಉದ್ದೇಶಿಸಿದ್ದಕ್ಕಿಂತ ಒಂದು ನಿಮಿಷ ಕೂಡ ತಡವಾಗದು ಎಂಬ ದೃಢಸಂಕಲ್ಪವನ್ನು ವ್ಯಕ್ತಪಡಿಸುತ್ತದೆ. ಇಂತಹ ನಂಬಿಕೆಯು ಪರಿಶುದ್ಧವಾದ ನಡವಳಿಕೆ ಮತ್ತು ಭಕ್ತಿಯ ಕೃತ್ಯಗಳನ್ನು ಉತ್ಪಾದಿಸುತ್ತದೆ, ಮತ್ತು ಇವುಗಳಲ್ಲಿ ಮುಖ್ಯವಾದದ್ದು ದೇವರ ರಾಜ್ಯದ ಸುವಾರ್ತೆಯ ಸಾರುವಿಕೆಯೇ ಆಗಿದೆ. ಯೇಸು ಸಾರುವುದರಲ್ಲಿ ಉತ್ತಮ ಮಾದರಿಯನ್ನಿಟ್ಟನು, ಮತ್ತು ಅವನ ಅಭಿಷಿಕ್ತ ಹಿಂಬಾಲಕರಿಗೆ ಈ ಉಪದೇಶವನ್ನಿತ್ತನು: “ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀವಟಿಗೆಗಳು ಉರಿಯುತ್ತಾ ಇರಲಿ. ನೀವಂತೂ ತಮ್ಮ ಯಜಮಾನನು ಬಂದು ತಟ್ಟಿದ ಕೂಡಲೆ ಕದವನ್ನು ತೆರೆಯುವದಕ್ಕೆ ಸಿದ್ಧವಾಗಿದ್ದು ಮದುವೇ ಊಟವನ್ನು ಯಾವಾಗ ತೀರಿಸಿಕೊಂಡು ಬರುವನೋ ಎಂದು ಅವನನ್ನು ಎದುರುನೋಡುತ್ತಿರುವ ಮನುಷ್ಯರಂತಿರಿ. ಯಜಮಾನನು ಬಂದು ಯಾವ ಯಾವ ಆಳುಗಳು ಎಚ್ಚರವಾಗಿರುವದನ್ನು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು.”​—⁠ಲೂಕ 12:35-37.

ಪ್ರಥಮ ಶತಮಾನದ ಆಳುಗಳು ಶ್ರಮದ ಶಾರೀರಿಕ ಕೆಲಸವನ್ನು ಮಾಡಲು ಸುಲಭವಾಗುವಂತೆ, ತಮ್ಮ ನಿಲುವಂಗಿಯ ಅಂಚುಗಳನ್ನು ನಡುಪಟ್ಟಿಯ ಕೆಳಗೆ ಸೇರಿಸಿಕೊಳ್ಳುವ ಮೂಲಕ ತಮ್ಮ ‘ನಡುಗಳನ್ನು ಕಟ್ಟಿಕೊಳ್ಳುತ್ತಿದ್ದರು.’ ಹೀಗೆ, ಒಬ್ಬ ಕ್ರೈಸ್ತನು ಕಾರ್ಯಮಗ್ನನಾಗಿರಬೇಕು, ಸತ್ಕಾರ್ಯಗಳಲ್ಲಿ ಹುರುಪುಳ್ಳವನಾಗಿರಬೇಕು. ಅವನು ಆಧ್ಯಾತ್ಮಿಕ ಚಟುವಟಿಕೆಯಲ್ಲಿ “ಆಲಸ್ಯ” ತೋರಿಸುವ, ಪ್ರಾಯಶಃ ತನ್ನ ಶಕ್ತಿಗಳನ್ನು ಸುಖಭೋಗ ಅಥವಾ ಭೌತಿಕ ಬೆನ್ನಟ್ಟುವಿಕೆಗಳ ಹಿಂದೆ ವ್ಯಯಿಸುವ ಪ್ರಭಾವದ ವಿರುದ್ಧ ಹೋರಾಡಬೇಕು. ಅದಕ್ಕೆ ಬದಲಾಗಿ, ಯೆಹೋವನ ಮಹಾ ಮತ್ತು ಭಯಪ್ರೇರಕವಾದ ದಿನಕ್ಕಾಗಿ ಕಾಯುತ್ತಿರುವಾಗ ಅವನು ‘ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವನಾಗಿರಬೇಕು.’​—⁠ರೋಮಾಪುರ 12:11; 1 ಕೊರಿಂಥ 15:58.

ಕಾಯುತ್ತಿರುವಾಗ ಕ್ರಿಯಾಶೀಲರು

ಯೆಹೋವನ ದಿನಕ್ಕಾಗಿ ಕಾಯುತ್ತಿರುವಾಗ ಯೆಹೋವನ ಸಾಕ್ಷಿಗಳು ತಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಇರಿಸಿಕೊಂಡಿದ್ದಾರೆ. ಇಸವಿ 2003ರ ಸೇವಾ ವರ್ಷದಲ್ಲಿ, ಅವರು ಯೆಹೋವನ ವಾಕ್ಯವನ್ನು ಸಾರುವುದರಲ್ಲಿ ಪ್ರತಿ ದಿನ ಸರಾಸರಿ 33,83,000 ತಾಸುಗಳನ್ನು ವ್ಯಯಿಸಿದರು. ಒಂದು ದಿನದಲ್ಲಿ ಮಾಡಲಾದ ಈ ಕೆಲಸದ ಮೊತ್ತವನ್ನು ಸಾಧಿಸಲು ಒಬ್ಬ ಸಾಕ್ಷಿಯು ಎಡೆಬಿಡದೆ 386 ವರ್ಷ ಸಾರಬೇಕಾಗುವುದು!

ಆದರೂ, ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ನನಗೆ ವೈಯಕ್ತಿಕವಾಗಿ ಯಾವ ರೀತಿಯ ಕಾಯುವ ಮನೋಭಾವವಿದೆ?’ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಂದ ಅಪೇಕ್ಷಿಸಲ್ಪಡುವ ಉದ್ಯೋಗಶೀಲತೆಯನ್ನು ವಿವರಿಸುವ ಒಂದು ಸಾಮ್ಯವನ್ನು ಯೇಸು ಕೊಟ್ಟನು. ಅವನು ಮೂವರು ಆಳುಗಳ ಕುರಿತು ಮಾತಾಡಿದನು: “[ದಣಿಯು] ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು. ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು. ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು. ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗಿದು ತನ್ನ ದಣಿಯ ಹಣವನ್ನು ಬಚ್ಚಿಟ್ಟನು. ಬಹುಕಾಲದ ಮೇಲೆ ಆ ಆಳುಗಳ ದಣಿಯು ಬಂದು ಅವರಿಂದ ಲೆಕ್ಕ ತೆಗೆದು”ಕೊಂಡನು.​—⁠ಮತ್ತಾಯ 25:15-19.

ಮೂವರೂ ಆಳುಗಳು ದಣಿಯ ಬರೋಣಕ್ಕಾಗಿ ಕಾಯುತ್ತಿದ್ದರು. ತಮ್ಮ ದಣಿಯ ಆಗಮನಕ್ಕಾಗಿ ಕಾಯುತ್ತಿದ್ದ ಸಮಯದಲ್ಲಿ ತಮ್ಮನ್ನು ಕಾರ್ಯಮಗ್ನರನ್ನಾಗಿ ಇರಿಸಿಕೊಂಡಿದ್ದ ಇಬ್ಬರಿಗೆ ದಣಿಯು ಬಂದಾಗ ಹೀಗೆ ಹೇಳಲಾಯಿತು: “ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು.” ಆದರೆ, ಏನೂ ಮಾಡದೆ ಸುಮ್ಮನೆ ಕಾಲಕಳೆಯುತ್ತಾ ಕಾದಿದ್ದವನಿಗೆ ಬೇರೆ ರೀತಿಯ ಉಪಚಾರ ಸಿಕ್ಕಿತು. ದಣಿಯು ಹೇಳಿದ್ದು: “ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ.”​—⁠ಮತ್ತಾಯ 25:20-30.

ಈ ಸಾಮ್ಯವು ಅಭಿಷಿಕ್ತ ಕ್ರೈಸ್ತರಿಗೆ ಅನ್ವಯಿಸುತ್ತದೆ ನಿಜ, ಆದರೆ ನಮ್ಮ ನಿರೀಕ್ಷೆಯ ಹೊರತೂ ನಮ್ಮೆಲ್ಲರಿಗೂ ಇದರಲ್ಲೊಂದು ಪಾಠವಿದೆ. ದಣಿಯಾದ ಯೇಸು ಕ್ರಿಸ್ತನು, ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನ ಮಹಾ ದಿನದಲ್ಲಿ ಅವನ ಬರೋಣಕ್ಕಾಗಿ ಕಾಯುತ್ತಿರುವಾಗ ಅವನ ಸೇವೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವಂತೆ ಅಪೇಕ್ಷಿಸುತ್ತಾನೆ. ಅವನು ಪ್ರತಿಯೊಬ್ಬನ ಶ್ರಮವನ್ನು “ಅವನವನ ಸಾಮರ್ಥ್ಯ” ಮತ್ತು ಪರಿಸ್ಥಿತಿಗನುಸಾರ ಗಣ್ಯಮಾಡುತ್ತಾನೆ. ಕಾಯುವಿಕೆಯು ಕೊನೆಗೂ ಮುಗಿಯುವಾಗ ದಣಿಯಿಂದ “ಭಲಾ” ಎಂದು ಹೇಳಿಸಿಕೊಳ್ಳುವುದು ಎಷ್ಟು ಆನಂದಕರವಾಗಿರುವುದು!

ನಮ್ಮ ಕರ್ತನ ತಾಳ್ಮೆಯು ರಕ್ಷಣೆಯನ್ನು ಅರ್ಥೈಸುತ್ತದೆ

ಈ ವಿಷಯಗಳ ವ್ಯವಸ್ಥೆಯು ನಾವು ಒಮ್ಮೆ ಯೋಚಿಸಿದ್ದಕ್ಕಿಂತ ಅಥವಾ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿದಿರುವುದಾದರೆ ಆಗೇನು? ಹೀಗೆ ವಿನಾಕಾರಣ ಮಾಡಲ್ಪಟ್ಟಿರುವುದಿಲ್ಲ. ಅಪೊಸ್ತಲ ಪೇತ್ರನು ಬರೆದದ್ದು: “ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ.” (2 ಪೇತ್ರ 3:15) ದೇವರ ಉದ್ದೇಶದ ನಿಷ್ಕೃಷ್ಟ ಜ್ಞಾನ ಮತ್ತು ಆ ಉದ್ದೇಶದ ನೆರವೇರಿಕೆಯಷ್ಟು ನಾವು ಪ್ರಾಮುಖ್ಯರಲ್ಲ ಎಂಬುದನ್ನು ದೀನತೆಯಿಂದ ಅಂಗೀಕರಿಸುವುದು, ಯೆಹೋವನು ಎಷ್ಟರ ವರೆಗೆ ಈ ಹಳೇ ವ್ಯವಸ್ಥೆಯೊಂದಿಗೆ ತಾಳಿಕೊಂಡು ಹೋಗುವುದು ಯುಕ್ತವಾಗಿದೆ ಎಂದನ್ನುತ್ತಾನೋ ಅಷ್ಟರ ವರೆಗೆ ತಾಳಿಕೊಳ್ಳುವಂತೆ ನಮಗೆ ಸಹಾಯಮಾಡುವುದು.

ತಾಳ್ಮೆಯುಳ್ಳವರಾಗಿರುವಂತೆ ಕ್ರೈಸ್ತರನ್ನು ಪ್ರೋತ್ಸಾಹಿಸಲಿಕ್ಕಾಗಿ, ಬೈಬಲ್‌ ಬರಹಗಾರನಾದ ಯಾಕೋಬನು ಒಂದು ದೃಷ್ಟಾಂತವನ್ನು ಕೊಟ್ಟನು. ಅವನು ಬರೆದುದು: “ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಬೆಲೆಯುಳ್ಳ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಕರ್ತನ ಪ್ರತ್ಯಕ್ಷತೆಯು ಹತ್ತಿರವಾಯಿತು.”​—⁠ಯಾಕೋಬ 5:7, 8.

ಕಾಯುತ್ತಿರುವಾಗ ನಾವು ಬೇಸತ್ತುಹೋಗುವಂತೆ ಅಥವಾ ಪ್ರಯತ್ನವನ್ನು ಬಿಟ್ಟುಬಿಡುವಂತೆ ಯೆಹೋವ ದೇವರು ಅಪೇಕ್ಷಿಸುವುದಿಲ್ಲ. ಆತನು ನಮಗೆ ಒಂದು ಕೆಲಸವನ್ನು ನೇಮಿಸಿದ್ದಾನೆ ಮತ್ತು ಕಾಯುತ್ತಿರುವ ಸಮಯವನ್ನು ನಾವು ಆ ಕೆಲಸವನ್ನು ಮಾಡುವುದರಲ್ಲಿ ಉದ್ಯೋಗಶೀಲತೆಯಿಂದ ವ್ಯಯಿಸುವುದಾದರೆ ಆತನು ಸಂತೋಷಪಡುತ್ತಾನೆ. ಅಪೊಸ್ತಲ ಪೌಲನು ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಯಾರ ಕುರಿತು ವರ್ಣಿಸಿದನೋ ಅಂಥವರಲ್ಲಿ ನಾವೂ ಒಬ್ಬರಾಗಿರುವಂತೆ ಆತನು ಬಯಸುತ್ತಾನೆ: “ನೀವು ಉಪಚಾರಮಾಡುವದರಲ್ಲಿ ಯಾವ ಆಸಕ್ತಿಯನ್ನು ತೋರಿಸಿದ್ದೀರೋ ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ. ನೀವು ಮಂದಮತಿಗಳಾಗಿರದೆ ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.”​—⁠ಇಬ್ರಿಯ 6:11, 12.

ಆದುದರಿಂದ ನಾವು ದಣಿದುಹೋಗದೇ ಇರೋಣ. ಬದಲಿಗೆ, ಯೆಹೋವ ದೇವರೊಂದಿಗೆ ನಾವು ಹೊಂದಿರುವ ವೈಯಕ್ತಿಕ ಸಂಬಂಧ, ಯೇಸುವಿನ ಈಡು ಯಜ್ಞದಲ್ಲಿ ನಮಗಿರುವ ನಂಬಿಕೆ, ಮತ್ತು ಹೊಸ ವಿಷಯಗಳ ವ್ಯವಸ್ಥೆಯಲ್ಲಿನ ನಮ್ಮ ಉಜ್ವಲ ನಿರೀಕ್ಷೆ​—⁠ಇವು ನಮ್ಮ ಜೀವನಗಳಲ್ಲಿ ಶಕ್ತಿ ತುಂಬಿಸುವಂಥ ವಿಷಯಗಳಾಗಿರಲಿ. ಯೇಸುವಿನ ಸಾಮ್ಯದ ‘ನಂಬಿಗಸ್ತರಾದ ಒಳ್ಳೇ’ ಆಳುಗಳಂತೆ, ನಮ್ಮ ದೇವರಿಗೆ ಸ್ತುತಿಯನ್ನು ಸಲ್ಲಿಸುವುದರಲ್ಲಿ ಕಾರ್ಯಮಗ್ನರಾಗಿರುತ್ತಾ ನಾವು ನಮ್ಮನ್ನು ಶ್ಲಾಘನೆ ಮತ್ತು ಬಹುಮಾನಕ್ಕೆ ಯೋಗ್ಯರನ್ನಾಗಿ ರುಜುಪಡಿಸಿಕೊಳ್ಳೋಣ. ಹೀಗೆ ಹೇಳಿದ ಕೀರ್ತನೆಗಾರನು ಇದನ್ನೇ ಮಾಡಿದನು: “ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು; ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು.”​—⁠ಕೀರ್ತನೆ 71:14.

[ಪುಟ 21ರಲ್ಲಿರುವ ಚಿತ್ರ]

ಆಶಾಭಂಗಗೊಂಡವನಾಗಿ ಯೋನನು ನಿನೆವೆಗೆ ಏನು ಸಂಭವಿಸಬಹುದು ಎಂಬುದನ್ನು ನೋಡಲು ಕಾಯುತ್ತಾ ಕುಳಿತನು

[ಪುಟ 22, 23ರಲ್ಲಿರುವ ಚಿತ್ರಗಳು]

ಯೆಹೋವನ ದಿನಕ್ಕಾಗಿ ಕಾಯುತ್ತಿರುವಾಗ ನಾವು ದೈವಿಕ ಭಕ್ತಿಯನ್ನು ಪ್ರದರ್ಶಿಸೋಣ