ನೀವು ಭರವಸೆಯಿಡಬಲ್ಲ ಒಂದು ಆಸ್ತಿ
ನೀವು ಭರವಸೆಯಿಡಬಲ್ಲ ಒಂದು ಆಸ್ತಿ
“ವಾರಸುದಾರರಿಲ್ಲದ ಆಸ್ತಿಯು ನಿಮಗಾಗಿ ಕಾದಿದೆ ಎಂಬ ಸುದ್ದಿಯು ನಿಮಗೆ ಅಂಚೆಯ ಮೂಲಕ ಯಾರೋ ಒಬ್ಬರಿಂದ ಬರುವುದಾದರೆ, ಎಚ್ಚರಿಕೆಯಿಂದಿರಿ. ನೀವು ಒಬ್ಬ ನಯ ವಂಚಕನಿಗೆ ಬಲಿಯಾಗಸಾಧ್ಯವಿದೆ.”
ಈ ಎಚ್ಚರಿಕೆಯ ಮಾತುಗಳನ್ನು, ಯುನೈಟೆಡ್ ಸ್ಟೇಟ್ಸ್‌ನ ಅಂಚೆ ತನಿಖಾ ಇಲಾಖೆಯು ತನ್ನ ವೆಬ್ ಸೈಟ್‌ನಲ್ಲಿ ಹಾಕಿದೆ. ಏಕೆ? ಏಕೆಂದರೆ ಸಾವಿರಾರು ಜನರು ಅಂಚೆಯ ಮೂಲಕ, ‘ನಿಮ್ಮ ಸಂಬಂಧಿಕರಲ್ಲೊಬ್ಬರು ಮೃತಪಟ್ಟಿದ್ದಾರೆ ಮತ್ತು ಆಸ್ತಿಯನ್ನು ನಿಮಗಾಗಿ ಬಿಟ್ಟುಹೋಗಿದ್ದಾರೆ’ ಎಂಬ ನೋಟೀಸನ್ನು ಪಡೆಯುತ್ತಾರೆ. ಈ ಆಸ್ತಿಯು ಎಲ್ಲಿದೆ ಮತ್ತು ಅದನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅನೇಕರು ಆ ಸುದ್ದಿಯನ್ನು ಕಳುಹಿಸಿದ ವಿಳಾಸಕ್ಕೆ ಹಣ ಕಳುಹಿಸುತ್ತಾರೆ. ಆದರೆ, ತದನಂತರ ಅವರು ತೀವ್ರ ಆಶಾಭಂಗವನ್ನು ಅನುಭವಿಸುತ್ತಾರೆ. ಹಣ ಕಳುಹಿಸುವ ಮೂಲಕ ಪ್ರತಿಕ್ರಿಯೆಯನ್ನು ತೋರಿಸಿದ ಎಲ್ಲರೂ ಒಂದೇ ಉತ್ತರವನ್ನು ಪಡೆದುಕೊಳ್ಳುತ್ತಾರೆ ಮತ್ತು ಆಸ್ತಿಯನ್ನು ಪಡೆದುಕೊಳ್ಳುವುದಂತೂ ಕನಸೇ ಸರಿ.
ಇಂಥ ಒಳಸಂಚುಗಳು, ಆಸ್ತಿಯನ್ನು ಹೊಂದಬೇಕೆಂಬ ಜನರ ಸ್ವಾಭಾವಿಕ ಇಚ್ಛೆಯನ್ನು ಬಲವಾಗಿ ಆಕರ್ಷಿಸುತ್ತವೆ. ಹಾಗಿದ್ದರೂ, ನಿಜವಾಗಿಯೂ ಆಸ್ತಿಯನ್ನು ನೀಡುವವರ ವಿಷಯವಾಗಿ ಬೈಬಲ್ ಮೆಚ್ಚಿಕೆಯಿಂದಲೇ ಮಾತಾಡುತ್ತದೆ. ಅದು ಹೇಳುವುದು: “ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ.” (ಜ್ಞಾನೋಕ್ತಿ 13:22) ವಾಸ್ತವದಲ್ಲಿ, ನಮಗೆಲ್ಲರಿಗೂ ತಿಳಿದಿರುವ ಮತ್ತು ಅತಿ ಪ್ರಿಯವಾದ ಈ ಹೇಳಿಕೆಯನ್ನು ಯೇಸು ಕ್ರಿಸ್ತನು ತಾನೇ ತನ್ನ ಪರ್ವತಪ್ರಸಂಗದಲ್ಲಿ ಮಾಡಿದ್ದಾನೆ: “ಶಾಂತರು [ಅಥವಾ ದೀನರು] ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾಯ 5:5.
ಯೇಸುವಿನ ಈ ಮಾತುಗಳು, ಶತಮಾನಗಳ ಹಿಂದೆ ಪುರಾತನ ಇಸ್ರಾಯೇಲಿನ ರಾಜ ದಾವೀದನು ಬರೆದ ಪ್ರೇರಿತ ಮಾತುಗಳನ್ನು ನಮ್ಮ ನೆನಪಿಗೆ ತರುತ್ತವೆ: “ದೀನರು ದೇಶವನ್ನು ಅನುಭವಿಸುವರು [“ಭೂಮಿಗೆ ಬಾಧ್ಯರಾಗುವರು,” ಕಿಂಗ್ ಜೇಮ್ಸ್ ವರ್ಷನ್]; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
‘ಭೂಮಿಗೆ ಬಾಧ್ಯರಾಗುವುದು’ ಎಂಥ ಒಂದು ರೋಮಾಂಚಕ ಪ್ರತೀಕ್ಷೆ! ಆದರೆ, ಇದು ಜನರನ್ನು ಯಾವುದರಿಂದಲೋ ವಂಚಿತರನ್ನಾಗಿ ಮಾಡಲು ವಿನ್ಯಾಸಿಸಿದ ಇನ್ನೊಂದು ಕುಟಿಲ ಒಳಸಂಚಲ್ಲವೆಂದು ನಾವು ನಿಶ್ಚಿತರಾಗಿರಬಲ್ಲೆವೋ? ಹೌದು, ನಿಶ್ಚಿತರಾಗಿರಬಲ್ಲೆವು. ಭೂಮಿಯು ಯೆಹೋವನ ಅದ್ಭುತಕರ ಸೃಷ್ಟಿಯ ಭಾಗವಾಗಿರುವ ಕಾರಣ, ಅದರ ನಿರ್ಮಾಣಿಕನೂ ಧಣಿಯೂ ಆಗಿರುವ ಆತನಿಗೆ ಅದನ್ನು ತನಗಿಷ್ಟಬಂದವರಿಗೆ ಬಾಧ್ಯವಾಗಿ ಕೊಡಲು ಕಾನೂನುಬದ್ಧ ಅಧಿಕಾರವಿದೆ. ರಾಜ ದಾವೀದನ ಮೂಲಕ ಯೆಹೋವನು ತನ್ನ ಪ್ರಿಯ ಪುತ್ರನಾದ ಯೇಸು ಕ್ರಿಸ್ತನಿಗೆ ಈ ಪ್ರವಾದನಾತ್ಮಕ ವಾಗ್ದಾನವನ್ನು ಮಾಡಿದನು: “ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು.” (ಕೀರ್ತನೆ 2:8) ಈ ಕಾರಣಕ್ಕಾಗಿಯೇ ಅಪೊಸ್ತಲ ಪೌಲನು ಯೇಸುವಿನ ಕುರಿತು “ಈತನನ್ನು [ದೇವರು] ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು” ಎಂದು ತಿಳಿಸಿದನು. (ಇಬ್ರಿಯ 1:2) ಆದುದರಿಂದ, ದೀನರು “ಭೂಮಿಗೆ ಬಾಧ್ಯರಾಗುವರು” ಎಂದು ಯೇಸು ಹೇಳಿದಾಗ ಅವನು ಪ್ರಾಮಾಣಿಕ ಹೇತುವಿನಿಂದಲೇ ಅದನ್ನು ಹೇಳಿದನೆಂದು ನಾವು ಸಂಪೂರ್ಣ ಭರವಸೆಯಿಂದಿರಬಲ್ಲೆವು, ಮತ್ತು ಅವನಿಗೆ ತನ್ನ ವಾಗ್ದಾನವನ್ನು ನೆರವೇರಿಸುವ ಎಲ್ಲಾ ಅಧಿಕಾರವೂ ಇದೆ.—ಮತ್ತಾಯ 28:18.
ಹಾಗಾದರೆ ಈಗ ನಮ್ಮ ಮುಂದಿರುವ ಪ್ರಾಮುಖ್ಯ ಪ್ರಶ್ನೆಯು, ಈ ವಾಗ್ದಾನವು ಹೇಗೆ ನೆರವೇರಲಿದೆ? ಇಂದು ನಾವು ಎಲ್ಲಿ ನೋಡಿದರೂ ಕ್ರೂರಿಗಳೂ ಅಹಂಕಾರಿಗಳೂ ಆದ ಜನರು ಮೇಲುಗೈ ಹೊಂದುತ್ತಿದ್ದಾರೆ ಮತ್ತು ತಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಿರುವಾಗ ದೀನರಿಗೆ ಏನು ಉಳಿದಿರುವುದು?
ಅಷ್ಟುಮಾತ್ರವಲ್ಲದೆ, ಭೂಮಿಯು ಮಾಲಿನ್ಯದಂಥ ಗಂಭೀರ ಸಮಸ್ಯೆಗಳಿಂದ ಬಾಧಿತವಾಗಿದೆ, ಮತ್ತು ಅದರ ಸಂಪನ್ಮೂಲಗಳನ್ನು ಲೋಭಿಗಳು ಹಾಗೂ ಮುಂದಾಲೋಚನೆಯಿಲ್ಲದ ಜನರು ಧ್ವಂಸಗೊಳಿಸುತ್ತಿದ್ದಾರೆ. ಹಾಗಾದರೆ, ಬಾಧ್ಯವಾಗಿ ಪಡೆದುಕೊಳ್ಳಲು ಯೋಗ್ಯವಾದ ಒಂದು ಭೂಮಿಯಾದರೂ ಮುಂದಕ್ಕೆ ಇರುವುದೋ? ಈ ಪ್ರಶ್ನೆಗೆ ಮತ್ತು ಇನ್ನೂ ಇತರ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಮುಂದಿನ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.[ಪುಟ 3ರಲ್ಲಿರುವ ಚಿತ್ರ]
ಒಂದು ನಿಜವಾದ ಬಾಧ್ಯತೆಯನ್ನು ಪಡೆದುಕೊಳ್ಳುವವರ ಸಾಲಿನಲ್ಲಿ ನೀವಿದ್ದೀರೋ?