ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ” ಎಂದು ಅಪೊಸ್ತಲ ಯೋಹಾನನು ಬರೆದಾಗ, “ಪೂರ್ಣಪ್ರೀತಿ” ಎಂಬ ಅಭಿವ್ಯಕ್ತಿಯಿಂದ ಅವನು ಏನನ್ನು ಅರ್ಥೈಸಿದನು, ಮತ್ತು ಹೀಗೆ ಯಾವ “ಹೆದರಿಕೆ” ಹೊರಡಿಸಲ್ಪಡುತ್ತದೆ?

“ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ,” ಎಂದು ಅಪೊಸ್ತಲ ಯೋಹಾನನು ಬರೆದನು.​—⁠1 ಯೋಹಾನ 4:18.

ಯೋಹಾನನು ಇಲ್ಲಿ ವಾಕ್‌ ಸರಳತೆಯ ಬಗ್ಗೆ ಚರ್ಚಿಸುತ್ತಿದ್ದಾನೆ ಎಂಬುದನ್ನು ಪೂರ್ವಾಪರವು ತೋರಿಸುತ್ತದೆ​—⁠ವಿಶೇಷವಾಗಿ ದೇವರ ಮೇಲಿರುವ ಪ್ರೀತಿ ಮತ್ತು ಆತನೊಂದಿಗೆ ಹೊಂದಿರುವ ವಾಕ್‌ ಸರಳತೆಯ ಮಧ್ಯೆ ಇರುವ ಸಂಬಂಧದ ಕುರಿತು ಮಾತಾಡುತ್ತಿದ್ದನು. ಇದನ್ನು ನಾವು 17ನೆಯ ವಚನದಲ್ಲಿ ಏನನ್ನು ಓದುತ್ತೇವೋ ಅದರಿಂದ ಕಂಡುಕೊಳ್ಳಬಹುದು: “ನ್ಯಾಯತೀರ್ಪಿನ ದಿನದಲ್ಲಿ ನಮಗಿರುವ ಧೈರ್ಯ [“ವಾಕ್‌ ಸರಳತೆ,” NW]ದಲ್ಲಿಯೇ ಆತನ ಪ್ರೀತಿಯು ನಮ್ಮೊಳಗೆ ಸಿದ್ಧಿಗೆ ಬಂತು.” ಒಬ್ಬ ಕ್ರೈಸ್ತನು, ದೇವರನ್ನು ಎಷ್ಟು ಪ್ರೀತಿಸುತ್ತಾನೋ ಮತ್ತು ಅವನ ಮೇಲೆ ದೇವರಿಗಿರುವ ಪ್ರೀತಿಯನ್ನು ಎಷ್ಟು ಗ್ರಹಿಸಿಕೊಳ್ಳುತ್ತಾನೋ ಅಷ್ಟರ ಮಟ್ಟಿಗೆ ಅದು, ಅವನು ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ ಅವನ ವಾಕ್‌ ಸರಳತೆಯ ಮೇಲೆ​—⁠ಅಥವಾ ಅದರ ಕೊರತೆಯ ಮೇಲೆ​—⁠ನೇರವಾದ ಪ್ರಭಾವವನ್ನು ಬೀರುವುದು.

“ಪೂರ್ಣಪ್ರೀತಿ” ಎಂಬ ಅಭಿವ್ಯಕ್ತಿಯು ವಿಶೇಷಾರ್ಥವುಳ್ಳದ್ದಾಗಿದೆ. “ಪೂರ್ಣ”ವೆಂಬುದು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ ಯಾವಾಗಲೂ ಪರಿಪೂರ್ಣತೆಯನ್ನು ಸಂಪೂರ್ಣವಾದ ರೀತಿಯಲ್ಲಿ ಅರ್ಥೈಸುವುದಿಲ್ಲ, ಅಂದರೆ ಅದರ ಅತಿ ಉಚ್ಚ ಮಟ್ಟದಲ್ಲಿ ಅಲ್ಲ, ಬದಲಿಗೆ ಸಂಬಂಧಿತ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ, ತನ್ನ ಪರ್ವತಪ್ರಸಂಗದಲ್ಲಿ ಯೇಸು ಹೇಳಿದ್ದು: “ಪರಲೋಕದಲ್ಲಿರುವ ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ,” ಅಥವಾ ಪೂರ್ಣರಾಗಿರ್ರಿ. ತನ್ನ ಹಿಂಬಾಲಕರು ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುವುದಾದರೆ ಅವರ ಪ್ರೀತಿಯು ಅಪೂರ್ಣವಾಗಿರುವುದು, ಕೊರತೆಯುಳ್ಳದ್ದಾಗಿರುವುದು, ದೋಷವುಳ್ಳದ್ದಾಗಿರುವುದು ಎಂದು ಯೇಸು ಅವರಿಗೆ ಹೇಳುತ್ತಿದ್ದನು. ಅವರು ವೈರಿಗಳನ್ನೂ ಪ್ರೀತಿಸುವ ಮೂಲಕ ತಮ್ಮ ಪ್ರೀತಿಯನ್ನು ಪೂರ್ಣವಾಗಿಸಬೇಕು, ಅಥವಾ ಸಂಪೂರ್ಣ ಮಟ್ಟಕ್ಕೆ ತರಬೇಕು. ತದ್ರೀತಿಯಲ್ಲಿ, ಯೋಹಾನನು “ಪೂರ್ಣಪ್ರೀತಿ”ಯ ಬಗ್ಗೆ ಬರೆದಾಗ, ಅವನು ಪೂರ್ಣಹೃದಯದ, ಪೂರ್ತಿಯಾಗಿ ಬೆಳೆದ, ಮತ್ತು ಜೀವನದ ಎಲ್ಲಾ ವೈಶಿಷ್ಟ್ಯಗಳನ್ನು ಆವರಿಸುವ ದೇವರ ಪ್ರೀತಿಯ ಬಗ್ಗೆ ಮಾತಾಡುತ್ತಿದ್ದನು.​—⁠ಮತ್ತಾಯ 5:46-48; 19:20, 21.

ಒಬ್ಬ ಕ್ರೈಸ್ತನು ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ, ತಾನು ಪಾಪಿ ಮತ್ತು ಅಪರಿಪೂರ್ಣನು ಎಂಬ ಪ್ರಜ್ಞೆ ಅವನಿಗಿರುತ್ತದೆ. ಆದರೂ, ಅವನಿಗೆ ದೇವರ ಮೇಲೆ ಇರುವ ಪ್ರೀತಿ ಮತ್ತು ದೇವರು ಅವನ ಮೇಲೆ ಪ್ರೀತಿಯನ್ನಿಟ್ಟಿದ್ದಾನೆ ಎಂಬ ಪ್ರಜ್ಞೆಯು ಪೂರ್ತಿಯಾಗಿ ಬೆಳೆದಿರುವುದಾದರೆ, ಅವನು ಖಂಡನೆಯ ಅಥವಾ ನಿರಾಕರಣೆಯ ಭೀತಿಯಿಂದ ನಿರ್ಬಂಧಿತನಾಗುವುದಿಲ್ಲ. ಬದಲಿಗೆ, ಅವನು ತನ್ನ ಹೃದಯದಲ್ಲಿ ಏನಿದೆಯೋ ಅದನ್ನು ವ್ಯಕ್ತಪಡಿಸುವುದರಲ್ಲಿ ಮತ್ತು ಯೇಸು ಕ್ರಿಸ್ತನ ಮೂಲಕ ದೇವರು ಪ್ರೀತಿಯಿಂದ ಒದಗಿಸಿರುವ ಈಡು ಯಜ್ಞದ ಮೇಲಾಧಾರಿಸಿ ಕ್ಷಮಾಪಣೆಯನ್ನು ಯಾಚಿಸುವುದರಲ್ಲಿ ಅವನಿಗೆ ವಾಕ್‌ ಸರಳತೆಯಿರುತ್ತದೆ. ತನ್ನ ಬಿನ್ನಹಗಳು ದೇವರಿಂದ ಸ್ವೀಕಾರಾರ್ಹವಾಗಿ ಆಲಿಸಲ್ಪಡುತ್ತವೆ ಎಂಬ ದೃಢವಿಶ್ವಾಸ ಅವನಿಗಿರುತ್ತದೆ.

ಒಬ್ಬನು “ಪೂರ್ಣಪ್ರೀತಿ”ಯುಳ್ಳವನಾಗಿ ಖಂಡಿಸಲ್ಪಡುವ ಅಥವಾ ನಿರಾಕರಿಸಲ್ಪಡುವ ಹೆದರಿಕೆಯನ್ನು ‘ಹೊರಡಿಸಿಬಿಡುವುದು’ ಹೇಗೆ? “ಯಾವನಾದರೂ ಆತನ [ದೇವರ] ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ” ಎಂದು ಅಪೊಸ್ತಲ ಯೋಹಾನನು ಹೇಳಿದನು. (1 ಯೋಹಾನ 2:5) ಇದನ್ನು ಪರಿಗಣಿಸಿ: ನಾವು ಪಾಪಿಗಳಾಗಿರುವಾಗಲೇ ದೇವರು ನಮ್ಮನ್ನು ಪ್ರೀತಿಸಿರುವುದಾದರೆ, ನಾವು ನಿಜವಾಗಿಯೂ ಪಶ್ಚಾತ್ತಾಪಪಡುವುದಾದರೆ ಮತ್ತು ಶ್ರದ್ಧೆಯಿಂದ “ಆತನ ವಾಕ್ಯವನ್ನು ಕೈಕೊಂಡು ನಡೆದರೆ” ಆತನು ನಮ್ಮನ್ನು ಇನ್ನು ಹೆಚ್ಚಾಗಿ ಪ್ರೀತಿಸುವನಲ್ಲವೇ? (ರೋಮಾಪುರ 5:8; 1 ಯೋಹಾನ 4:10) ವಾಸ್ತವದಲ್ಲಿ, ನಾವು ನಂಬಿಗಸ್ತರಾಗಿ ಉಳಿಯುವಷ್ಟು ಕಾಲ, ಅಪೊಸ್ತಲ ಪೌಲನು ದೇವರ ಬಗ್ಗೆ ಏನು ಹೇಳಿದನೋ ಅದೇ ದೃಢವಿಶ್ವಾಸವನ್ನು ನಾವು ಹೊಂದಿರಬಲ್ಲೆವು: “ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?”​—⁠ರೋಮಾಪುರ 8:⁠32.