ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಠಾವಂತರು ಮತ್ತು ಸ್ಥಿರಚಿತ್ತರು ಅಂದು ಮತ್ತು ಇಂದು

ನಿಷ್ಠಾವಂತರು ಮತ್ತು ಸ್ಥಿರಚಿತ್ತರು ಅಂದು ಮತ್ತು ಇಂದು

ನಿಷ್ಠಾವಂತರು ಮತ್ತು ಸ್ಥಿರಚಿತ್ತರು ಅಂದು ಮತ್ತು ಇಂದು

ಪೋಲೆಂಡ್‌ನ ದಕ್ಷಿಣ ಭಾಗದಲ್ಲಿ, ಅದರ ಗಡಿಪ್ರದೇಶದ ಬಳಿ ಸ್ಲೊವಾಕಿಯ ಮತ್ತು ಚೆಕ್‌ ರಿಪಬ್ಲಿಕ್‌ನೊಂದಿಗೆ ವೀಸ್ವಾ ಎಂಬ ಹೆಸರಿನ ಒಂದು ಚಿಕ್ಕ ಪಟ್ಟಣವಿದೆ. ನೀವೆಂದೂ ವೀಸ್ವಾದ ಕುರಿತು ಕೇಳಿಸಿಕೊಂಡಿಲ್ಲದಿರಬಹುದಾದರೂ, ಸತ್ಯ ಕ್ರೈಸ್ತರು ತುಂಬ ಆಸಕ್ತಿದಾಯಕವಾಗಿ ಕಂಡುಕೊಳ್ಳಬಹುದಾದಂಥ ಇತಿಹಾಸವನ್ನು ಇದು ಹೊಂದಿದೆ. ಇದು ಯೆಹೋವನ ಆರಾಧನೆಗಾಗಿ ಸಮಗ್ರತೆ ಹಾಗೂ ಹುರುಪಿನಿಂದ ಗುರುತಿಸಲ್ಪಟ್ಟಿರುವ ಒಂದು ಇತಿಹಾಸವಾಗಿದೆ. ಹೇಗೆ?

ವೀಸ್ವಾ ಪಟ್ಟಣವು ಸುಂದರವಾದ ಪರ್ವತಮಯ ಪ್ರಾಂತದಲ್ಲಿ ನೆಲೆಸಿದೆ. ಇಲ್ಲಿ ನಿಸರ್ಗವು ನಯನಮನೋಹರ ನೋಟವನ್ನು ಒದಗಿಸುತ್ತದೆ. ರಭಸವಾಗಿ ಹರಿಯುವ ಉಪನದಿಗಳು ಮತ್ತು ಎರಡು ತೊರೆಗಳು, ಕಾಡುಗಳಿರುವ ಪರ್ವತಗಳು ಮತ್ತು ಕಣಿವೆಗಳನ್ನು ಬಳಸಿಕೊಂಡು ಹರಿಯುವ ವಿಸ್ಟುಲಾ ನದಿಯೊಂದಿಗೆ ಲೀನವಾಗುತ್ತವೆ. ಸ್ನೇಹಭಾವದವರಾಗಿರುವ ಸ್ಥಳಿಕ ಜನರು ಮತ್ತು ಅಪೂರ್ವವಾದ ಸ್ಥಳಿಕ ಹವಾಮಾನವು, ವೀಸ್ವಾ ಪಟ್ಟಣವನ್ನು ಒಂದು ಜನಪ್ರಿಯ ವೈದ್ಯಕೀಯ ಕೇಂದ್ರವಾಗಿ, ಬೇಸಗೆಕಾಲದ ವಿರಾಮಧಾಮವಾಗಿ, ಮತ್ತು ಚಳಿಗಾಲದ ತಂಗುದಾಣವಾಗಿ ಮಾಡುತ್ತದೆ.

ಈ ಹೆಸರಿನ ಪ್ರಥಮ ವಸಾಹತು ಸ್ಥಾಪಿಸಲ್ಪಟ್ಟದ್ದು 1590ಗಳಲ್ಲಿಯೇ ಎಂಬಂತೆ ತೋರುತ್ತದೆ. ಒಂದು ಸಾಮಿಲ್‌ (ಮರಕೊಯ್ಯುವ ಕಾರ್ಖಾನೆ) ಕಟ್ಟಲ್ಪಟ್ಟಿತು, ಮತ್ತು ಸ್ವಲ್ಪದರಲ್ಲೇ ಮರಗಳು ಮತ್ತು ಪೊದೆಗಳಿಲ್ಲದ ಪ್ರದೇಶಗಳು ನೆಲೆಸಿಗರಿಂದ ಆವರಿಸಲ್ಪಟ್ಟವು. ಇವರು ಕುರಿಗಳು ಮತ್ತು ದನಕರುಗಳನ್ನು ಸಾಕುತ್ತಿದ್ದರು ಹಾಗೂ ಕೃಷಿಕೆಲಸವನ್ನು ಮಾಡುತ್ತಿದ್ದರು. ಇಂಥ ಸಾಮಾನ್ಯ ಜನರು ಧಾರ್ಮಿಕ ಬದಲಾವಣೆಯ ಸುಳಿಯಲ್ಲಿ ಸಿಕ್ಕಿಕೊಂಡರು. ಮಾರ್ಟಿನ್‌ ಲೂತರ್‌ನಿಂದ ಆರಂಭಿಸಲ್ಪಟ್ಟ ಧಾರ್ಮಿಕ ಸುಧಾರಣೆಗಳಿಂದ ಧರ್ಮವು ಬಹಳವಾಗಿ ಬಾಧಿಸಲ್ಪಟ್ಟಿತು. ಸಂಶೋಧಕನಾದ ಆ್ಯಂಜೇ ಓಟ್‌ಚೆಕ್‌ಗನುಸಾರ, ಲೂತರನ್‌ಮತವು “1545ರಲ್ಲಿ ರಾಷ್ಟ್ರೀಯ ಧರ್ಮವಾಗಿ” ಪರಿಣಮಿಸಿತು. ಆದರೂ, ಮೂವತ್ತು ವರ್ಷಗಳ ಯುದ್ಧ ಮತ್ತು ತದನಂತರ ಬಂದ ಪ್ರತಿಸುಧಾರಣೆಯು ನಾಟಕೀಯ ರೀತಿಯಲ್ಲಿ ಸನ್ನಿವೇಶವನ್ನು ಬದಲಾಯಿಸಿತು. ಓಟ್‌ಚೆಕ್‌ ಮುಂದುವರಿಸುತ್ತಾ ಹೇಳುವುದು: “1654ರಲ್ಲಿ ಪ್ರಾಟೆಸ್ಟಂಟ್‌ರಿಂದ ಎಲ್ಲಾ ಚರ್ಚ್‌ ಕಟ್ಟಡಗಳನ್ನು ಕಸಿದುಕೊಳ್ಳಲಾಯಿತು, ಅವರ ಆರಾಧನಾ ಕೂಟಗಳನ್ನು ನಿಷೇಧಿಸಲಾಯಿತು, ಮತ್ತು ಬೈಬಲುಗಳು ಹಾಗೂ ಇನ್ನಿತರ ಧಾರ್ಮಿಕ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಯಿತು. ಆದರೂ, ಸ್ಥಳಿಕ ಜನಸಂಖ್ಯೆಯಲ್ಲಿ ಹೆಚ್ಚಿನವರು ಲೂತರ್‌ನ ಅನುಯಾಯಿಗಳಾಗಿಯೇ ಉಳಿದರು.

ಬೈಬಲ್‌ ಸತ್ಯದ ಪ್ರಥಮ ಬೀಜಗಳು

ಸಂತೋಷಕರವಾಗಿಯೇ, ಹೆಚ್ಚು ಪ್ರಾಮುಖ್ಯವಾದ ಒಂದು ಧಾರ್ಮಿಕ ಸುಧಾರಣೆಯು ಇನ್ನೇನು ಸಂಭವಿಸಲಿಕ್ಕಿತ್ತು. ಇಸವಿ 1928ರಲ್ಲಿ, ಇಬ್ಬರು ಉತ್ಸಾಹಭರಿತ ಬೈಬಲ್‌ ವಿದ್ಯಾರ್ಥಿಗಳಿಂದ​—⁠ಆಗ ಯೆಹೋವನ ಸಾಕ್ಷಿಗಳು ಈ ಹೆಸರಿನಿಂದ ಕರೆಯಲ್ಪಟ್ಟರು​—⁠ಬೈಬಲ್‌ ಸತ್ಯದ ಬೀಜಗಳು ಪ್ರಥಮವಾಗಿ ಬಿತ್ತಲ್ಪಟ್ಟವು. ಅದರ ಮುಂದಿನ ವರ್ಷ ಯಾನ್‌ ಗಾಮಾಲಾರು ಒಂದು ಫೋನೊಗ್ರಾಫ್‌ನೊಂದಿಗೆ ವೀಸ್ವಾಕ್ಕೆ ಆಗಮಿಸಿದರು. ಫೋನೊಗ್ರಾಫ್‌ನಲ್ಲಿ ರೆಕಾರ್ಡ್‌ ಮಾಡಲ್ಪಟ್ಟಿದ್ದ ಶಾಸ್ತ್ರೀಯ ಭಾಷಣಗಳನ್ನು ನುಡಿಸಿದರು. ತದನಂತರ ಅವರು ಸಮೀಪದಲ್ಲಿದ್ದ ಕಣಿವೆಗೆ ಸ್ಥಳಾಂತರಿಸಿದರು ಮತ್ತು ಅಲ್ಲಿ ತೀವ್ರ ಆಸಕ್ತಿಯಿದ್ದಂಥ ವ್ಯಕ್ತಿಯೊಬ್ಬನನ್ನು ಕಂಡುಕೊಂಡರು. ಕುಳ್ಳಗೂ ದಪ್ಪಗೂ ಇದ್ದ ಆ್ಯಂಜೇ ರಾಷ್ಕಾ ಎಂಬವನೇ ಇವನಾಗಿದ್ದು, ಪ್ರತಿಕ್ರಿಯಿಸುವ ಹೃದಯವಿದ್ದ ಮಲೆನಾಡಿಗನಾಗಿದ್ದನು. ಆ ಕೂಡಲೆ ರಾಷ್ಕಾ ತನ್ನ ಬೈಬಲನ್ನು ಹೊರತೆಗೆದು, ಫೋನೊಗ್ರಾಫ್‌ ಭಾಷಣಗಳಲ್ಲಿ ಏನು ತಿಳಿಸಲ್ಪಟ್ಟಿತೋ ಅದನ್ನು ಪರಿಶೀಲಿಸಿದನು. ತದನಂತರ ಅವನು ಉದ್ಗರಿಸಿದ್ದು: “ನನ್ನ ಸಹೋದರನೇ, ಕಡೆಗೂ ನಾನು ಸತ್ಯವನ್ನು ಕಂಡುಕೊಂಡಿದ್ದೇನೆ! ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಹೋರಾಟ ನಡೆಸುತ್ತಿದ್ದಾಗಿನಿಂದಲೂ ನಾನು ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆ!”

ಅತಿಯಾದ ಹುಮ್ಮಸ್ಸಿನಿಂದ ತುಂಬಿದವನಾದ ರಾಷ್ಕಾ, ಯೆರ್‌ಸೇ ಮತ್ತು ಆ್ಯಂಜೇ ಪಿಲ್ಕ್‌ ಎಂಬ ತನ್ನ ಸ್ನೇಹಿತರನ್ನು ಸಂಧಿಸಲಿಕ್ಕಾಗಿ ಗಾಮಾಲಾರನ್ನು ಕರೆದುಕೊಂಡುಹೋದನು. ರಾಜ್ಯದ ಸಂದೇಶಕ್ಕೆ ಇವರು ಹುರುಪಿನಿಂದ ಪ್ರತಿಕ್ರಿಯಿಸಿದರು. ಫ್ರಾನ್ಸ್‌ನಲ್ಲಿ ಬೈಬಲ್‌ ಸತ್ಯವನ್ನು ಕಲಿತಿದ್ದ ಆ್ಯಂಜೇ ಟಿರ್ನ ಎಂಬಾತನು, ಈ ವ್ಯಕ್ತಿಗಳು ದೇವರ ಸಂದೇಶದ ಕುರಿತಾದ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಂತೆ ಸಹಾಯಮಾಡಿದನು. ಬೇಗನೆ ಅವರು ದೀಕ್ಷಾಸ್ನಾನವನ್ನು ಪಡೆದುಕೊಂಡರು. ವೀಸ್ವಾದಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳ ಚಿಕ್ಕ ಗುಂಪಿಗೆ ಸಹಾಯಮಾಡಲಿಕ್ಕಾಗಿ, 1930ಗಳ ಮಧ್ಯಭಾಗದಲ್ಲಿ ನೆರೆಹೊರೆಯ ಪಟ್ಟಣಗಳಿಂದ ಸಹೋದರರು ಭೇಟಿ ನೀಡುತ್ತಿದ್ದರು. ಇದರ ಫಲಿತಾಂಶಗಳು ನಂಬಲಸಾಧ್ಯವಾಗಿದ್ದವು.

ಹೊಸದಾಗಿ ಆಸಕ್ತಿಯನ್ನು ತೋರಿಸಿದವರು ಗಮನಾರ್ಹ ಸಂಖ್ಯೆಯಲ್ಲಿ ಒಟ್ಟುಗೂಡತೊಡಗಿದರು. ಸ್ಥಳಿಕ ಲೂತರನ್‌ ಕುಟುಂಬಗಳು ತಮ್ಮ ಮನೆಗಳಲ್ಲಿ ಬೈಬಲನ್ನು ಓದುವ ರೂಢಿಯನ್ನು ಮಾಡಿಕೊಂಡಿದ್ದರು. ಆದುದರಿಂದ, ನರಕಾಗ್ನಿಯ ಸಿದ್ಧಾಂತ ಮತ್ತು ತ್ರಯೈಕ್ಯದ ಕುರಿತಾದ ಮನವೊಪ್ಪಿಸುವಂಥ ಶಾಸ್ತ್ರೀಯ ವಿಚಾರಗಳನ್ನು ಅವರು ಮನಗಂಡ ಬಳಿಕ, ಅವರಲ್ಲಿ ಅನೇಕರು ಸತ್ಯಕ್ಕೂ ಸುಳ್ಳಿಗೂ ಇರುವ ವ್ಯತ್ಯಾಸವನ್ನು ಗ್ರಹಿಸಶಕ್ತರಾದರು. ಅನೇಕ ಕುಟುಂಬಗಳು ಸುಳ್ಳು ಧಾರ್ಮಿಕ ಬೋಧನೆಗಳನ್ನು ತೊರೆಯುವ ಆಯ್ಕೆಮಾಡಿದವು. ಹೀಗೆ ವೀಸ್ವಾದಲ್ಲಿನ ಸಭೆಯು ಬೆಳೆಯಿತು, ಮತ್ತು 1939ರಷ್ಟಕ್ಕೆ ಅದರಲ್ಲಿ ಸುಮಾರು 140 ಮಂದಿ ಸದಸ್ಯರಿದ್ದರು. ಆದರೂ, ಆ ಸಭೆಯಲ್ಲಿದ್ದ ವಯಸ್ಕರಲ್ಲಿ ಹೆಚ್ಚಿನವರು ದೀಕ್ಷಾಸ್ನಾನವನ್ನು ಪಡೆದುಕೊಳ್ಳದಿರುವುದು ಆಶ್ಚರ್ಯಕರ ಸಂಗತಿಯಾಗಿತ್ತು. “ಈ ಅಸ್ನಾತ ಪ್ರಚಾರಕರು ಯೆಹೋವನ ಪಕ್ಷವಹಿಸುವ ನಿಲುವನ್ನು ತೆಗೆದುಕೊಳ್ಳಲು ಶಕ್ತರಾಗಿರಲಿಲ್ಲ ಎಂಬುದನ್ನು ಇದು ಅರ್ಥೈಸಲಿಲ್ಲ” ಎಂದು ಆ ಆರಂಭದ ಸಾಕ್ಷಿಗಳಲ್ಲಿ ಒಬ್ಬಳಾಗಿರುವ ಹೆಲೆನಳು ಹೇಳುತ್ತಾಳೆ. ಅವಳು ಕೂಡಿಸಿ ಹೇಳುವುದು: “ತದನಂತರ ಸ್ವಲ್ಪದರಲ್ಲೇ ಅವರು ಎದುರಿಸಿದ ನಂಬಿಕೆಯ ಪರೀಕ್ಷೆಗಳಲ್ಲಿ ಅವರು ತಮ್ಮ ಸಮಗ್ರತೆಯನ್ನು ರುಜುಪಡಿಸಿದರು.”

ಮಕ್ಕಳ ಕುರಿತಾಗಿ ಏನು? ತಮ್ಮ ಹೆತ್ತವರು ಸತ್ಯವನ್ನು ಕಂಡುಕೊಂಡಿದ್ದಾರೆ ಎಂಬುದನ್ನು ಅವರು ಮನಗಂಡರು. ಫ್ರಾಂಚೀಶೆಕ್‌ ಬ್ರಾಂಟ್ಸ್‌ ತಿಳಿಸುವುದು: “ತಾನು ಸತ್ಯವನ್ನು ಕಂಡುಕೊಂಡಿದ್ದೇನೆ ಎಂಬುದು ನನ್ನ ಅಪ್ಪನವರಿಗೆ ಮನವರಿಕೆಯಾದಾಗ, ಅವರದನ್ನು ನನ್ನ ಮತ್ತು ನನ್ನ ಅಣ್ಣನ ಮನಸ್ಸಿಗೆ ತುಂಬಿಸಲು ಆರಂಭಿಸಿದರು. ನಾನು ಎಂಟು ವರ್ಷದವನಾಗಿದ್ದೆ ಮತ್ತು ಅಣ್ಣ ಹತ್ತು ವರ್ಷದವನಾಗಿದ್ದನು. ಅಪ್ಪನವರು ನಮಗೆ ಇಂಥ ಸರಳವಾದ ಪ್ರಶ್ನೆಗಳನ್ನು ಕೇಳುತ್ತಿದ್ದರು: ‘ದೇವರು ಯಾರು, ಮತ್ತು ಆತನ ಹೆಸರೇನು? ಯೇಸು ಕ್ರಿಸ್ತನ ಕುರಿತು ನಿಮಗೆ ಏನು ಗೊತ್ತಿದೆ?’ ನಾವು ನಮ್ಮ ಉತ್ತರಗಳನ್ನು ಬರೆದು, ಬೈಬಲ್‌ ವಚನಗಳ ಆಧಾರದಿಂದ ಅವುಗಳನ್ನು ರುಜುಪಡಿಸಬೇಕಾಗಿತ್ತು.” ಇನ್ನೊಬ್ಬ ಸಾಕ್ಷಿಯು ಹೇಳುವುದು: “ನನ್ನ ಹೆತ್ತವರು ರಾಜ್ಯದ ಸಂದೇಶಕ್ಕೆ ಮನಃಪೂರ್ವಕವಾಗಿ ಪ್ರತಿಕ್ರಿಯಿಸಿ, 1940ರಲ್ಲಿ ಲೂತರನ್‌ ಚರ್ಚನ್ನು ಬಿಟ್ಟದ್ದರಿಂದ, ಶಾಲೆಯಲ್ಲಿ ನಾನು ವಿರೋಧವನ್ನು ಎದುರಿಸಿದೆ ಮತ್ತು ಹೊಡೆತಗಳನ್ನು ತಿಂದೆ. ನನ್ನ ಹೆತ್ತವರು ನನ್ನಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅಚ್ಚೊತ್ತಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ. ಇದು, ಆ ಕಷ್ಟಕರ ಸಮಯಗಳಲ್ಲಿ ಪಾರಾಗಿ ಉಳಿಯುವಂತೆ ನನಗೆ ಸಹಾಯಮಾಡುವುದರಲ್ಲಿ ನಿರ್ಣಾಯಕವಾಗಿತ್ತು.”

ಪರೀಕ್ಷೆಗೊಳಗಾದ ನಂಬಿಕೆ

ಎರಡನೆಯ ಲೋಕ ಯುದ್ಧವು ಆರಂಭವಾಗಿ ನಾಸಿಗಳು ಈ ಕ್ಷೇತ್ರವನ್ನು ಆಕ್ರಮಿಸಿದಾಗ, ಅವರು ಯೆಹೋವನ ಸಾಕ್ಷಿಗಳನ್ನು ಸಂಪೂರ್ಣವಾಗಿ ನಿರ್ಮೂಲಮಾಡುವ ನಿರ್ಧಾರ ತಳೆದಿದ್ದರು. ಆರಂಭದಲ್ಲಿ ವಯಸ್ಕರು ಅದರಲ್ಲೂ ವಿಶೇಷವಾಗಿ ತಂದೆಗಳು, ಕೆಲವೊಂದು ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಜರ್ಮನ್‌ ರಾಷ್ಟ್ರೀಯತೆಯ ಪಟ್ಟಿಗೆ ಸಹಿಯನ್ನು ಹಾಕುವಂತೆ ಉತ್ತೇಜಿಸಲ್ಪಟ್ಟರು. ನಾಸಿಗಳಿಗೆ ಬೆಂಬಲ ನೀಡುತ್ತೇವೆ ಎಂದು ಪ್ರಕಟಿಸಲು ಸಾಕ್ಷಿಗಳು ನಿರಾಕರಿಸಿದರು. ಮಿಲಿಟರಿ ಪ್ರಾಯದ ಅನೇಕ ಸಹೋದರರು ಮತ್ತು ಆಸಕ್ತ ಜನರು ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದರು: ಅವರು ಸೈನ್ಯಕ್ಕೆ ಸೇರಸಾಧ್ಯವಿತ್ತು ಅಥವಾ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳಸಾಧ್ಯವಿತ್ತು, ಆದರೆ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಿದ್ದಲ್ಲಿ ಅವರು ತೀವ್ರವಾಗಿ ಶಿಕ್ಷೆಗೊಳಪಡಿಸಲ್ಪಡಲಿದ್ದರು. ಇಸವಿ 1943ರಲ್ಲಿ ಗೆಸ್ಟಪೊರಿಂದ ಬಂಧಿಸಲ್ಪಟ್ಟಿದ್ದ ಆ್ಯಂಜೇ ಶಾಲ್‌ಬೊಟ್‌ ವಿವರಿಸುವುದು: “ಮಿಲಿಟರಿ ಸೇವೆಯನ್ನು ನಿರಾಕರಿಸುವುದು, ಸಾಮಾನ್ಯವಾಗಿ ಔಷ್‌ವಿಟ್ಸ್‌ ಕೂಟಶಿಬಿರಕ್ಕೆ ಕಳುಹಿಸಲ್ಪಡುವುದನ್ನು ಅರ್ಥೈಸಿತು. ಆಗಿನ್ನೂ ನನಗೆ ದೀಕ್ಷಾಸ್ನಾನವಾಗಿರಲಿಲ್ಲ, ಆದರೆ ಮತ್ತಾಯ 10:​28, 29ರಲ್ಲಿ ಯೇಸುವಿನಿಂದ ಕೊಡಲ್ಪಟ್ಟ ಪುನರಾಶ್ವಾಸನೆಯು ನನಗೆ ಚೆನ್ನಾಗಿ ಗೊತ್ತಿತ್ತು. ಯೆಹೋವನಲ್ಲಿನ ನಂಬಿಕೆಯ ಕಾರಣ ನಾನು ಸಾಯುವಲ್ಲಿ, ಆತನು ನನ್ನನ್ನು ಪುನರುತ್ಥಾನಗೊಳಿಸಲು ಶಕ್ತನಾಗಿದ್ದಾನೆ ಎಂಬುದು ನನಗೆ ತಿಳಿದಿತ್ತು.”

ಇಸವಿ 1942ರ ಆರಂಭದಲ್ಲಿ ನಾಸಿಗಳು ವೀಸ್ವಾದ 17 ಮಂದಿ ಸಹೋದರರನ್ನು ಬಂಧಿಸಿದರು. ಮೂರು ತಿಂಗಳುಗಳೊಳಗೆ, ಅವರಲ್ಲಿ 15 ಮಂದಿ ಔಷ್‌ವಿಟ್ಸ್‌ ಕೂಟಶಿಬಿರದಲ್ಲಿ ತೀರಿಹೋದರು. ವೀಸ್ವಾದಲ್ಲಿದ್ದ ಉಳಿದ ಸಾಕ್ಷಿಗಳ ಮೇಲೆ ಇದು ಯಾವ ಪರಿಣಾಮವನ್ನು ಬೀರಿತು? ಇದು ಅವರು ತಮ್ಮ ನಂಬಿಕೆಯನ್ನು ತೊರೆಯುವಂತೆ ಮಾಡುವ ಬದಲು, ರಾಜಿಮಾಡಿಕೊಳ್ಳದಿರುವಂಥ ರೀತಿಯಲ್ಲಿ ಯೆಹೋವನಿಗೆ ಇನ್ನಷ್ಟು ಬಲವಾಗಿ ಅಂಟಿಕೊಳ್ಳುವಂತೆ ಅವರನ್ನು ಹುರಿದುಂಬಿಸಿತು! ಮುಂದಿನ ಆರು ತಿಂಗಳುಗಳಲ್ಲಿ, ವೀಸ್ವಾದಲ್ಲಿನ ಪ್ರಚಾರಕರ ಸಂಖ್ಯೆ ದ್ವಿಗುಣವಾಯಿತು. ಬೇಗನೆ ಇನ್ನಷ್ಟು ಜನರನ್ನು ಬಂಧಿಸಲಾಯಿತು. ಹಿಟ್ಲರನ ಪ್ರಚಂಡ ಶಕ್ತಿಯಿಂದ ಒಟ್ಟು 83 ಮಂದಿ ಸಹೋದರರು, ಆಸಕ್ತರು, ಮತ್ತು ಮಕ್ಕಳು ಬಾಧಿತರಾದರು. ಅವರಲ್ಲಿ 53 ಮಂದಿ ಕೂಟಶಿಬಿರಗಳಿಗೆ (ಹೆಚ್ಚಾಗಿ ಔಷ್‌ವಿಟ್ಸ್‌ಗೆ) ಅಥವಾ ಪೋಲೆಂಡ್‌, ಜರ್ಮನಿ, ಮತ್ತು ಬೊಹಿಮಿಯದಲ್ಲಿನ ಗಣಿಗಳು ಮತ್ತು ಕಲ್ಲುಗಣಿಗಳಲ್ಲಿ ಶ್ರಮದ ದುಡಿಮೆಯ ಶಿಬಿರಗಳಿಗೆ ಕಳುಹಿಸಲ್ಪಟ್ಟರು.

ನಿಷ್ಠಾವಂತರು ಮತ್ತು ಸ್ಥಿರಚಿತ್ತರು

ಔಷ್‌ವಿಟ್ಸ್‌ ಕೂಟಶಿಬಿರದಲ್ಲಿ ನಾಸಿಗಳು, ತತ್‌ಕ್ಷಣವೇ ಬಿಡುಗಡೆಮಾಡುವ ಪ್ರತೀಕ್ಷೆಯೊಂದಿಗೆ ಸಾಕ್ಷಿಗಳನ್ನು ಮೋಸದ ಬಲೆಯಲ್ಲಿ ಬೀಳಿಸಲು ಪ್ರಯತ್ನಿಸಿದರು. ಒಬ್ಬ ಎಸ್‌ಎಸ್‌ ಗಾರ್ಡ್‌ ಸಹೋದರನೊಬ್ಬನಿಗೆ ಹೇಳಿದ್ದು: “ಬೈಬಲ್‌ ವಿದ್ಯಾರ್ಥಿಗಳ ಸಂಘಟನೆಯನ್ನು ತೊರೆಯುತ್ತೇನೆಂದು ಕಾಗದದಲ್ಲಿ ಬರೆದು ಅದಕ್ಕೆ ಸಹಿಯನ್ನು ಹಾಕುವಲ್ಲಿ ನಾವು ನಿನ್ನನ್ನು ಬಿಡುಗಡೆಮಾಡುತ್ತೇವೆ, ಮತ್ತು ನೀನು ಮನೆಗೆ ಹೋಗಸಾಧ್ಯವಿದೆ.” ಇದೇ ರೀತಿಯ ಹೇಳಿಕೆಯನ್ನು ಅನೇಕಬಾರಿ ಪುನರಾವರ್ತಿಸಲಾಯಿತು, ಆದರೆ ಆ ಸಹೋದರನು ಯೆಹೋವನ ಕಡೆಗಿನ ತನ್ನ ನಿಷ್ಠೆಯನ್ನು ರಾಜಿಮಾಡಿಕೊಳ್ಳಲಿಲ್ಲ. ಇದರ ಫಲಿತಾಂಶವಾಗಿ, ಔಷ್‌ವಿಟ್ಸ್‌ನಲ್ಲಿ ಮತ್ತು ಜರ್ಮನಿಯ ಮಿಟಲ್‌ಬೌ-ಡೋರಾ ಕೂಟಶಿಬಿರದಲ್ಲಿ ಅವನು ಹೊಡೆತಗಳನ್ನು ತಿಂದನು, ಕುಚೋದ್ಯಕ್ಕೊಳಗಾದನು, ಮತ್ತು ಗುಲಾಮಚಾಕರಿಗೆ ಒಳಪಡಿಸಲ್ಪಟ್ಟನು. ಬಿಡುಗಡೆಗೆ ಸ್ವಲ್ಪ ಮುಂಚೆ, ಈ ಸಹೋದರನು ಬಂಧಿಸಿಡಲ್ಪಟ್ಟಿದ್ದ ಶಿಬಿರದ ಮೇಲೆ ಬಾಂಬ್‌ದಾಳಿಯು ನಡೆಸಲ್ಪಟ್ಟ ಸಮಯದಲ್ಲಿ ಕೂದಲೆಳೆಯಷ್ಟು ಅಂತರದಲ್ಲಿ ಸಾವಿನ ದವಡೆಯಿಂದ ಪಾರಾದನು.

ಇತ್ತೀಚಿಗೆ ಮರಣಪಟ್ಟಂಥ ಒಬ್ಬ ಸಾಕ್ಷಿಯಾದ ಪಾವೆಲ್‌ ಶಾಲ್‌ಬೊಟ್‌ ಒಂದು ಸಲ ಜ್ಞಾಪಿಸಿಕೊಂಡದ್ದು: “ವಿಚಾರಣೆಗಳ ಸಮಯದಲ್ಲಿ ಗೆಸ್ಟಪೊ, ಜರ್ಮನ್‌ ಸೈನ್ಯಕ್ಕೆ ಸೇರಿ ಹಿಟ್ಲರ್‌ಗೆ ಜಯವನ್ನು ಹಾರೈಸಲು ನಾನೇಕೆ ನಿರಾಕರಿಸಿದೆ ಎಂದು ನನ್ನನ್ನು ಪುನಃ ಪುನಃ ಕೇಳುತ್ತಿದ್ದರು.” ತನ್ನ ಕ್ರೈಸ್ತ ತಾಟಸ್ಥ್ಯಕ್ಕಾಗಿರುವ ಬೈಬಲ್‌ ಆಧಾರವನ್ನು ಅವನು ವಿವರಿಸಿದ ಬಳಿಕ, ಶಸ್ತ್ರಾಸ್ತ್ರಗಳ ಕಾರ್ಖಾನೆಯೊಂದರಲ್ಲಿ ಕೆಲಸಮಾಡುವ ಶಿಕ್ಷೆಯನ್ನು ಅವನಿಗೆ ವಿಧಿಸಲಾಯಿತು. “ಸ್ಪಷ್ಟವಾಗಿಯೇ, ಈ ರೀತಿಯ ಕೆಲಸವನ್ನು ನಾನು ಮನಸ್ಸಾಕ್ಷಿಪೂರ್ವಕವಾಗಿ ಅಂಗೀಕರಿಸಲು ಸಾಧ್ಯವಿರಲಿಲ್ಲ. ಆದುದರಿಂದ ಅವರು ನನ್ನನ್ನು ಗಣಿಯೊಂದರಲ್ಲಿ ಕೆಲಸಮಾಡಲು ಕಳುಹಿಸಿದರು.” ಆದರೂ ಅವನು ನಂಬಿಗಸ್ತನಾಗಿ ಉಳಿದನು.

ಯಾರು ಸೆರೆಯಲ್ಲಿಡಲ್ಪಟ್ಟಿರಲಿಲ್ಲವೋ ಅವರು, ಅಂದರೆ ಸ್ತ್ರೀಯರು ಮತ್ತು ಮಕ್ಕಳು, ಔಷ್‌ವಿಟ್ಸ್‌ನಲ್ಲಿದ್ದವರಿಗೆ ಆಹಾರದ ಪೊಟ್ಟಣಗಳನ್ನು ಕಳುಹಿಸಿದರು. ಆಗ ಯುವಕನಾಗಿದ್ದ ಒಬ್ಬ ಸಹೋದರನು ಹೇಳುವುದು: “ಬೇಸಗೆಕಾಲದಲ್ಲಿ ನಾವು ಕಾಡುಗಳಿಂದ ಕ್ರ್ಯಾನ್‌ಬೆರಿ ಹಣ್ಣುಗಳನ್ನು ಕಿತ್ತುತರುತ್ತಿದ್ದೆವು ಮತ್ತು ಅವುಗಳನ್ನು ಕೊಟ್ಟು ಗೋದಿಯನ್ನು ಪಡೆದುಕೊಳ್ಳುತ್ತಿದ್ದೆವು. ಸಹೋದರಿಯರು ಬ್ರೆಡ್‌ ರೋಲ್‌ಗಳನ್ನು ತಯಾರಿಸಿ, ಹಂದಿಯ ಕೊಬ್ಬಿನಲ್ಲಿ ಅವುಗಳನ್ನು ನೆನೆಸಿಡುತ್ತಿದ್ದರು. ಆಮೇಲೆ ನಾವು ಸೆರೆಯಲ್ಲಿದ್ದ ಜೊತೆ ವಿಶ್ವಾಸಿಗಳಿಗೆ ಆ ಬ್ರೆಡ್‌ ರೋಲ್‌ಗಳನ್ನು ಸ್ವಲ್ಪ ಪ್ರಮಾಣಗಳಲ್ಲಿ ಕಳುಹಿಸುತ್ತಿದ್ದೆವು.”

ವೀಸ್ವಾದಿಂದ ಒಟ್ಟು 53 ಮಂದಿ ವಯಸ್ಕ ಸಾಕ್ಷಿಗಳು ಕೂಟಶಿಬಿರಗಳಿಗೆ ಮತ್ತು ಶ್ರಮದ ದುಡಿಮೆ ಮಾಡಲು ಕಳುಹಿಸಲ್ಪಟ್ಟರು. ಅವರಲ್ಲಿ ಮೂವತ್ತೆಂಟು ಮಂದಿ ಮೃತಪಟ್ಟರು.

ಚಿಕ್ಕಪ್ರಾಯದ ಸಂತತಿಯ ಉದಯ

ನಾಸಿಗಳ ದಬ್ಬಾಳಿಕೆಭರಿತ ಕೃತ್ಯಗಳಿಂದ ಯೆಹೋವನ ಸಾಕ್ಷಿಗಳ ಮಕ್ಕಳು ಸಹ ಬಾಧಿಸಲ್ಪಟ್ಟರು. ಅವರಲ್ಲಿ ಕೆಲವರು ತಮ್ಮ ತಾಯಂದಿರೊಂದಿಗೆ ಬೊಹಿಮಿಯದ ತಾತ್ಕಾಲಿಕ ಶಿಬಿರಗಳಿಗೆ ಕಳುಹಿಸಲ್ಪಟ್ಟರು. ಇನ್ನಿತರರು ತಮ್ಮ ಹೆತ್ತವರಿಂದ ಬೇರ್ಪಡಿಸಲ್ಪಟ್ಟು, ಲಾಡ್ಸ್‌ನಲ್ಲಿದ್ದ ಮಕ್ಕಳ ಕುಖ್ಯಾತ ಶಿಬಿರಕ್ಕೆ ಕಳುಹಿಸಲ್ಪಟ್ಟರು.

ಅವರಲ್ಲಿ ಮೂವರು ಹೀಗೆ ಜ್ಞಾಪಿಸಿಕೊಳ್ಳುತ್ತಾರೆ: “ಲಾಡ್ಸ್‌ಗೆ ಹೊರಟ ಮೊದಲ ವಾಹನದಲ್ಲಿ, ನಮ್ಮಲ್ಲಿ ಐದರಿಂದ ಒಂಬತ್ತು ಪ್ರಾಯದವರಾಗಿದ್ದ ಹತ್ತು ಮಂದಿಯನ್ನು ಜರ್ಮನ್ನರು ಕರೆದುಕೊಂಡುಹೋದರು. ಪ್ರಾರ್ಥಿಸುವ ಮೂಲಕ ಮತ್ತು ಬೈಬಲ್‌ ಮುಖ್ಯ ವಿಷಯಗಳನ್ನು ಚರ್ಚಿಸುವ ಮೂಲಕ ನಾವು ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸಿದೆವು. ತಾಳಿಕೊಳ್ಳುವುದು ಅಷ್ಟೇನೂ ಸುಲಭವಾದದ್ದಾಗಿರಲಿಲ್ಲ.” ಇಸವಿ 1945ರಲ್ಲಿ ಆ ಮಕ್ಕಳೆಲ್ಲರೂ ಮನೆಗೆ ಹಿಂದಿರುಗಿದರು. ಅವರು ಬದುಕಿದ್ದರಾದರೂ, ತೀರ ಬಡಕಲಾಗಿದ್ದರು ಮತ್ತು ಗಾಯಗೊಳಿಸಲ್ಪಟ್ಟಿದ್ದರು. ಏನೇ ಆದರೂ ಯಾವುದೂ ಅವರ ಸಮಗ್ರತೆಯನ್ನು ಮುರಿಯಲು ಶಕ್ತವಾಗಲಿಲ್ಲ.

ತದನಂತರ ಏನು ಸಂಭವಿಸಿತು?

ಎರಡನೇ ಲೋಕ ಯುದ್ಧವು ಇನ್ನೇನು ಕೊನೆಗೊಳ್ಳಲಿದ್ದಾಗ, ವೀಸ್ವಾದ ಸಾಕ್ಷಿಗಳು ನಂಬಿಕೆಯಲ್ಲಿ ಇನ್ನೂ ಹೆಚ್ಚು ದೃಢರಾಗಿದ್ದರು ಮತ್ತು ಹುರುಪು ಹಾಗೂ ದೃಢನಿರ್ಧಾರದೊಂದಿಗೆ ತಮ್ಮ ಸಾರುವ ಚಟುವಟಿಕೆಯನ್ನು ಮತ್ತೆ ಆರಂಭಿಸಲು ಸಿದ್ಧರಾಗಿದ್ದರು. ಸಹೋದರರ ಗುಂಪುಗಳು, ವೀಸ್ವಾದಿಂದ 40 ಕಿಲೊಮೀಟರುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದ ಜನರನ್ನು ಸಂದರ್ಶಿಸಿ, ಅವರಿಗೆ ಸುವಾರ್ತೆಯನ್ನು ಸಾರಿ ಬೈಬಲ್‌ ಸಾಹಿತ್ಯವನ್ನು ವಿತರಿಸಿದವು. “ಸ್ವಲ್ಪದರಲ್ಲೇ ನಮ್ಮ ಪಟ್ಟಣದಲ್ಲಿ ಮೂರು ಕ್ರಿಯಾಶೀಲ ಸಭೆಗಳು ಕಾರ್ಯನಡಿಸುತ್ತಿದ್ದವು” ಎಂದು ಯಾನ್‌ ಕ್ಸಾಕ್‌ ಹೇಳುತ್ತಾನೆ. ಆದರೆ ಧಾರ್ಮಿಕ ಸ್ವಾತಂತ್ರ್ಯವು ಹೆಚ್ಚು ಕಾಲ ಬಾಳಲಿಲ್ಲ.

ನಾಸಿಗಳ ಸ್ಥಾನವನ್ನಾಕ್ರಮಿಸಿದ ಕಮ್ಯೂನಿಷ್ಟ್‌ ಸರಕಾರವು, 1950ರಲ್ಲಿ ಪೋಲೆಂಡ್‌ನಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯ ಮೇಲೆ ನಿಷೇಧವೊಡ್ಡಿತು. ಆದುದರಿಂದ ಸ್ಥಳಿಕ ಸಹೋದರರು ತುಂಬ ಚಾಕಚಕ್ಯತೆಯಿಂದ ತಮ್ಮ ಶುಶ್ರೂಷೆಯನ್ನು ಪೂರೈಸಬೇಕಿತ್ತು. ಕೆಲವೊಮ್ಮೆ ಅವರು ದನಕರುಗಳನ್ನು ಅಥವಾ ದವಸಧಾನ್ಯವನ್ನು ಖರೀದಿಸುವ ನೆಪದಿಂದ ಜನರ ಮನೆಗಳನ್ನು ಸಂದರ್ಶಿಸುತ್ತಿದ್ದರು. ಕ್ರೈಸ್ತ ಕೂಟಗಳು ಸಾಮಾನ್ಯವಾಗಿ ರಾತ್ರಿ ಸಮಯಗಳಲ್ಲಿ ಚಿಕ್ಕ ಗುಂಪುಗಳಲ್ಲಿ ನಡೆಸಲ್ಪಡುತ್ತಿದ್ದವು. ಆದರೂ, ಭದ್ರತಾ ನಿಯೋಗಿಗಳು ಯೆಹೋವನ ಆರಾಧಕರಲ್ಲಿ ಅನೇಕರನ್ನು ಬಂಧಿಸಲು ಶಕ್ತರಾದರು. ವಿದೇಶೀ ಸಮಾಚಾರ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಿದರು. ಇದು ಸಂಪೂರ್ಣವಾಗಿ ನಿರಾಧಾರವಾದ ಆರೋಪವಾಗಿತ್ತು. ಕೆಲವು ಅಧಿಕಾರಿಗಳು ವ್ಯಂಗ್ಯವಾಗಿ ಪಾವೆಲ್‌ ಪಿಲ್ಕ್‌ಗೆ ಹೀಗೆ ಬೆದರಿಕೆಯನ್ನೊಡ್ಡಿದರು: “ಹಿಟ್ಲರ್‌ ನಿನ್ನ ಸಮಗ್ರತೆಯನ್ನು ಮುರಿಯಲಿಲ್ಲ, ಆದರೆ ನಾವು ಮುರಿಯುವೆವು.” ಆ ಸಹೋದರನು ಸುಮಾರು ಐದು ವರ್ಷಗಳ ವರೆಗೆ ಸೆರೆಯಲ್ಲಿದ್ದರೂ ಯೆಹೋವನಿಗೆ ನಿಷ್ಠನಾಗಿ ಉಳಿದನು. ಚಿಕ್ಕಪ್ರಾಯದ ಕೆಲವು ಸಾಕ್ಷಿಗಳು ಸಮಾಜವಾದಿ ರಾಜಕೀಯ ದಾಖಲೆಪತ್ರಕ್ಕೆ ಸಹಿಹಾಕಲು ನಿರಾಕರಿಸಿದಾಗ, ಅವರು ಶಾಲೆಯಿಂದ ಬಹಿಷ್ಕರಿಸಲ್ಪಟ್ಟರು ಅಥವಾ ಉದ್ಯೋಗಗಳಿಂದ ತೆಗೆದುಹಾಕಲ್ಪಟ್ಟರು.

ಯೆಹೋವನು ಅವರಿಗೆ ಬೆಂಬಲಿಗನಾಗಿದ್ದನು

ಇಸವಿ 1989 ಬದಲಾದ ರಾಜಕೀಯ ವಾತಾವರಣವನ್ನು ತಂದಿತು, ಮತ್ತು ಪೋಲೆಂಡ್‌ನಲ್ಲಿ ಯೆಹೋವನ ಸಾಕ್ಷಿಗಳು ಕಾನೂನುಬದ್ಧವಾಗಿ ಮಾನ್ಯಮಾಡಲ್ಪಟ್ಟರು. ವೀಸ್ವಾದಲ್ಲಿದ್ದ ಯೆಹೋವನ ಸ್ಥಿರಚಿತ್ತ ಆರಾಧಕರು ತಮ್ಮ ಚಟುವಟಿಕೆಯನ್ನು ತ್ವರೆಗೊಳಿಸಿದರು. ಇದು ಪಯನೀಯರರು, ಅಥವಾ ಪೂರ್ಣ ಸಮಯದ ಶುಶ್ರೂಷಕರ ಸಂಖ್ಯೆಯಲ್ಲಿ ಸುವ್ಯಕ್ತವಾಯಿತು. ಈ ಕ್ಷೇತ್ರದ ಸುಮಾರು 100 ಮಂದಿ ಸಹೋದರ ಸಹೋದರಿಯರು ಪಯನೀಯರ್‌ ಸೇವೆಯನ್ನು ಕೈಗೊಂಡಿದ್ದಾರೆ. ಆದುದರಿಂದಲೇ ಈ ಪಟ್ಟಣಕ್ಕೆ ಪಯನೀಯರ್‌ ಫ್ಯಾಕ್ಟರಿ ಎಂಬ ಅಡ್ಡಹೆಸರು ಬಂದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಗತಕಾಲದಲ್ಲಿ ದೇವರು ತನ್ನ ಸೇವಕರನ್ನು ಬೆಂಬಲಿಸಿದ ಕುರಿತು ಬೈಬಲ್‌ ಹೀಗೆ ತಿಳಿಸುತ್ತದೆ: “ನರರು ನಮಗೆ ವಿರೋಧವಾಗಿ ಎದ್ದಾಗ ಯೆಹೋವನು ನಮಗಿಲ್ಲದಿದ್ದರೆ ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು.” (ಕೀರ್ತನೆ 124:2, 3) ನಮ್ಮ ಕಾಲದಲ್ಲಿ, ಜನಸಾಮಾನ್ಯರ ನಡುವೆ ವ್ಯಾಪಕವಾಗಿರುವ ನಿರಾಸಕ್ತಿ ಹಾಗೂ ಲೌಕಿಕ ಅನೈತಿಕ ಪ್ರವೃತ್ತಿಗಳ ನಡುವೆಯೂ ವೀಸ್ವಾದಲ್ಲಿರುವ ಯೆಹೋವನ ಆರಾಧಕರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ ಮತ್ತು ಅವರಿಗೆ ಮಹತ್ತರವಾಗಿ ಪ್ರತಿಫಲವು ದೊರಕಿದೆ. ಆ ಕ್ಷೇತ್ರದಲ್ಲಿ ಅನುಕ್ರಮವಾಗಿ ಬರುವ ಸಾಕ್ಷಿಗಳ ಸಂತತಿಗಳು, ಅಪೊಸ್ತಲ ಪೌಲನ ಈ ಹೇಳಿಕೆಯ ಸತ್ಯತೆಗೆ ಸಾಕ್ಷ್ಯ ನೀಡಬಲ್ಲವು: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”​—⁠ರೋಮಾಪುರ 8:⁠31.

[ಪುಟ 26ರಲ್ಲಿರುವ ಚಿತ್ರ]

ಇಮೇಲ್ಯಾ ಕ್ಸಾಕ್‌ ತಮ್ಮ ಮಕ್ಕಳಾದ ಹೆಲೆನ, ಇಮೀಲ್ಯಾ, ಮತ್ತು ಯಾನ್‌ರೊಂದಿಗೆ ಬೊಹಿಮಿಯದಲ್ಲಿನ ತಾತ್ಕಾಲಿಕ ಶಿಬಿರಕ್ಕೆ ಕಳುಹಿಸಲ್ಪಟ್ಟಿದ್ದರು

[ಪುಟ 26ರಲ್ಲಿರುವ ಚಿತ್ರ]

ಪಾವೆಲ್‌ ಶಾಲ್‌ಬೊಟ್‌ ಮಿಲಿಟರಿ ಸೇವೆಯನ್ನು ನಿರಾಕರಿಸಿದಾಗ, ಅವರನ್ನು ಗಣಿಯೊಂದರಲ್ಲಿ ಕೆಲಸಮಾಡಲು ಕಳುಹಿಸಲಾಯಿತು

[ಪುಟ 27ರಲ್ಲಿರುವ ಚಿತ್ರ]

ಸಹೋದರರು ಔಷ್‌ವಿಟ್ಸ್‌ ಕೂಟ ಶಿಬಿರಕ್ಕೆ ಕಳುಹಿಸಲ್ಪಟ್ಟು ಅಲ್ಲಿ ಮೃತಪಟ್ಟಾಗ, ವೀಸ್ವಾದಲ್ಲಿ ಸಾರುವ ಕೆಲಸವು ಅಭಿವೃದ್ಧಿಯಾಗುವುದು ನಿಂತುಹೋಗಲಿಲ್ಲ

[ಪುಟ 28ರಲ್ಲಿರುವ ಚಿತ್ರ]

ಪಾವೆಲ್‌ ಪಿಲ್ಕ್‌ ಮತ್ತು ಯಾನ್‌ ಪೋಲಕ್‌ರು ಲಾಡ್ಸ್‌ನಲ್ಲಿದ್ದ ಯುವ ಜನರ ಶಿಬಿರಕ್ಕೆ ಕರೆದೊಯ್ಯಲ್ಪಟ್ಟರು

[ಪುಟ 25ರಲ್ಲಿರುವ ಚಿತ್ರ ಕೃಪೆ]

ಬೆರಿಹಣ್ಣುಗಳು ಮತ್ತು ಹೂವುಗಳು: © R.M. Kosinscy / www.kosinscy.pl