ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಿಮ್ಮ ಹೆತ್ತವರು ನಿಮಗೆ ಸಹಾಯಮಾಡುವಂತೆ ಬಿಡಿರಿ!

ಯುವ ಜನರೇ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಿಮ್ಮ ಹೆತ್ತವರು ನಿಮಗೆ ಸಹಾಯಮಾಡುವಂತೆ ಬಿಡಿರಿ!

ಯುವ ಜನರೇ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ನಿಮ್ಮ ಹೆತ್ತವರು ನಿಮಗೆ ಸಹಾಯಮಾಡುವಂತೆ ಬಿಡಿರಿ!

ಹಡಗೊಂದರ ಕ್ಯಾಪ್ಟನ್‌ಗೆ ಎದುರಾಗುವ ಅತ್ಯಂತ ಕಷ್ಟಕರ ಪಂಥಾಹ್ವಾನವು ಯಾವುದೆಂದು ನೀವು ನೆನಸುತ್ತೀರಿ? ವಿಶಾಲವಾದ ಒಂದು ಮಹಾ ಸಾಗರವನ್ನು ದಾಟುವುದೋ? ಸಾಮಾನ್ಯವಾಗಿ ಇದು ಪಂಥಾಹ್ವಾನವಾಗಿರುವುದಿಲ್ಲ. ಬಹುತೇಕ ಹಡಗೊಡೆತಗಳು ಸಂಭವಿಸುವುದು ದಡದ ಬಳಿಯೇ ಹೊರತು ಸಮುದ್ರದಲ್ಲಲ್ಲ. ವಾಸ್ತವದಲ್ಲಿ, ಒಂದು ಹಡಗನ್ನು ಹಡಗುಕಟ್ಟೆಗೆ ತಂದು ನಿಲ್ಲಿಸುವುದು, ಒಂದು ವಿಮಾನವನ್ನು ಕೆಳಗೆ ಇಳಿಸುವುದಕ್ಕಿಂತಲೂ ಹೆಚ್ಚು ಅಪಾಯಕರವಾದ ಕೆಲಸವಾಗಿರಸಾಧ್ಯವಿದೆ. ಏಕೆ?

ಒಬ್ಬ ಕ್ಯಾಪ್ಟನ್‌ ತನ್ನ ಹಡಗನ್ನು ಸುರಕ್ಷಿತವಾಗಿ ಹಡಗುಕಟ್ಟೆಗೆ ತಂದು ನಿಲ್ಲಿಸುವುದಕ್ಕೆ ಮೊದಲು, ಒಂದು ನಿರ್ದಿಷ್ಟ ಬಂದರು ಒಡ್ಡಬಹುದಾದ ಎಲ್ಲಾ ಅಪಾಯಗಳನ್ನು ಜಯಿಸಿ ಬರಬೇಕಾಗಿದೆ. ಅವನು ಬೇರೆ ಹಡಗುಗಳಿಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸುವುದರ ಜೊತೆಗೆ ನೀರಿನ ಹರಿವಿನ ಸೆಳೆತಗಳನ್ನು ಸಹ ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಅಷ್ಟುಮಾತ್ರವಲ್ಲ, ಮರಳದಂಡೆಗಳು, ಬಂಡೆಗಳು, ಅಥವಾ ನೀರಿನ ಕೆಳಗಿರುವಂಥ ಒಡೆದುಹೋದ ಹಡಗಿನ ವಸ್ತುಗಳನ್ನು ಸಹ ಸುತ್ತಿಬಳಸಿ ಹೋಗಬೇಕು. ಮತ್ತು ಅವನು ಈ ಬಂದರನ್ನು ಪ್ರಥಮ ಬಾರಿ ಸಂದರ್ಶಿಸುತ್ತಿರುವುದಾದರೆ ಸಮಸ್ಯೆಯು ಇನ್ನಷ್ಟು ಕ್ಲಿಷ್ಟಕರವಾಗಿರಬಹುದು.

ಈ ಸಮಸ್ಯೆಗಳನ್ನು ಜಯಿಸಲಿಕ್ಕಾಗಿ ವಿವೇಕಿಯಾದ ಒಬ್ಬ ಕ್ಯಾಪ್ಟನ್‌, ಸ್ಥಳಿಕ ಬಂದರಿನ ಆಗುಹೋಗುಗಳ ಕುರಿತು ನಿಷ್ಕೃಷ್ಟವಾದ ಜ್ಞಾನವನ್ನು ಹೊಂದಿರುವಂಥ ಒಬ್ಬ ಮಾರ್ಗದರ್ಶಿ (ಪೈಲಟ್‌)ಯ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಈ ಮಾರ್ಗದರ್ಶಿಯು ಕ್ಯಾಪ್ಟನ್‌ನ ಕ್ಯಾಬಿನ್‌ನಲ್ಲಿ ಅವನ ಪಕ್ಕ ನಿಂತುಕೊಂಡು, ಪರಿಣತ ಮಾರ್ಗದರ್ಶನವನ್ನು ಕೊಡುತ್ತಾನೆ. ಅವರಿಬ್ಬರೂ ಸೇರಿಕೊಂಡು ಅಪಾಯಗಳ ಕುರಿತು ಪರಿಗಣಿಸಿ, ಯಾವುದೇ ಇಕ್ಕಟ್ಟಾದ ಕಡಲ್ಗಾಲುವೆಗಳ ಮೂಲಕ ಹಡಗನ್ನು ನಡಿಸಿಕೊಂಡು ಬಂದರಿನತ್ತ ಸಾಗುತ್ತಾರೆ.

ಆ ಮಾರ್ಗದರ್ಶಿಯ ಅಮೂಲ್ಯವಾದ ಪರಿಣತ ಸಲಹೆಯು, ಜೀವನದ ಕಷ್ಟಕರ ಸನ್ನಿವೇಶಗಳ ಮೂಲಕ ಜೀವನಮಾರ್ಗವನ್ನು ನಡೆಸಲು ಯೋಜಿಸಬೇಕಾಗಿರುವಂಥ ಕ್ರೈಸ್ತ ಯುವ ಜನರಿಗೆ ಲಭ್ಯವಿರುವ ಬೆಲೆಕಟ್ಟಲಾಗದ ಸಹಾಯವನ್ನು ದೃಷ್ಟಾಂತಿಸುತ್ತದೆ. ಈ ಸಹಾಯವು ಏನಾಗಿದೆ? ಹದಿವಯಸ್ಕರಿಗೆ ಇದು ಏಕೆ ಆವಶ್ಯಕವಾಗಿದೆ?

ನಾವೀಗ ಹಡಗಿನ ದೃಷ್ಟಾಂತವನ್ನೇ ಮುಂದುವರಿಸೋಣ. ನೀವು ಹದಿಹರೆಯದವರಾಗಿರುವಲ್ಲಿ, ಒಂದು ಹಡಗಿನ ಕ್ಯಾಪ್ಟನ್‌ನಂತಿದ್ದೀರಿ, ಏಕೆಂದರೆ ಕಾಲಕ್ರಮೇಣ ನಿಮ್ಮ ಜೀವಿತದ ಜವಾಬ್ದಾರಿಯನ್ನು ನೀವೇ ಹೊರಬೇಕಾಗಿರುತ್ತದೆ. ಮತ್ತು ನಿಮ್ಮ ಹೆತ್ತವರಿಗೆ ಹಡಗಿನ ಮಾರ್ಗದರ್ಶಿಯ ತುಲನಾತ್ಮಕ ಪಾತ್ರವನ್ನು ವಹಿಸಲಿಕ್ಕಿರುತ್ತದೆ. ಏಕೆಂದರೆ ಜೀವನದಲ್ಲಿ ನೀವು ಎದುರಿಸಬೇಕಾಗಿರುವಂಥ ಕೆಲವು ಅತ್ಯಂತ ಕಷ್ಟಕರ ಸನ್ನಿವೇಶಗಳಿಂದ ಹೊರಬರಲಿಕ್ಕಾಗಿ ಅವರು ನಿಮ್ಮನ್ನು ಮಾರ್ಗದರ್ಶಿಸಲು ಪ್ರಯತ್ನಿಸುತ್ತಾರೆ. ಆದರೆ, ಹದಿಪ್ರಾಯದ ವರ್ಷಗಳಲ್ಲಿ, ನಿಮ್ಮ ಹೆತ್ತವರು ನಿಮಗೆ ಕೊಡುವಂಥ ಸಲಹೆಯನ್ನು ಸ್ವೀಕರಿಸುವುದನ್ನು ನೀವು ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು. ಏಕೆ?

ಅನೇಕವೇಳೆ ಸಮಸ್ಯೆಯು ಹೃದಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ನಿಮ್ಮ ಹೃದಯವು ಯಾವುದು ನಿಷೇಧಿಸಲ್ಪಟ್ಟಿದೆಯೋ ಅದನ್ನು ಬಯಸುವಂತೆ ನಿಮ್ಮನ್ನು ಪ್ರಚೋದಿಸಬಹುದು ಅಥವಾ ನಿಮ್ಮ ಸ್ವಾತಂತ್ರ್ಯಕ್ಕೆ ನಿರ್ಬಂಧವೊಡ್ಡುತ್ತಿರುವಂತೆ ತೋರುವ ಎಲ್ಲವನ್ನೂ ಪ್ರತಿಭಟಿಸಬಹುದು. ಬೈಬಲ್‌ ಹೀಗನ್ನುತ್ತದೆ: “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು.” (ಆದಿಕಾಂಡ 8:21) ನಿಜವಾದ ಪರೀಕ್ಷೆಯೇ ನಿಮ್ಮ ಮುಂದಿದೆ ಎಂಬುದನ್ನು ಯೆಹೋವನು ಸ್ಪಷ್ಟಪಡಿಸುತ್ತಾನೆ. “ಹೃದಯವು ಎಲ್ಲಕ್ಕಿಂತಲೂ ವಂಚಕ, ಮತ್ತು ಅಪಾಯಕರವಾದ ರೀತಿಯಲ್ಲಿ ಮೊಂಡತನದಿಂದ ತುಂಬಿದೆ” ಎಂದು ಆತನು ಎಚ್ಚರಿಸುತ್ತಾನೆ. (ಯೆರೆಮೀಯ 17:​9, ರಾಥರ್‌ಹ್ಯಾಮ್‌) ಹೃದಯವು ಗುಪ್ತವಾಗಿ ಕೆಟ್ಟ ಬಯಕೆಗಳನ್ನು ಬೆಳೆಸಿಕೊಳ್ಳುವುದರೊಂದಿಗೆ, ತನ್ನ ಹೆತ್ತವರಿಗಿಂತಲೂ ತನಗೆ ಹೆಚ್ಚು ಗೊತ್ತಿದೆ ಎಂದು ನೆನಸುವಂತೆ ಮಾಡುವ ಮೂಲಕ ಒಬ್ಬ ಯುವ ವ್ಯಕ್ತಿಯನ್ನು ವಂಚಿಸಬಲ್ಲದು. ವಾಸ್ತವದಲ್ಲಿ ಹೆತ್ತವರಿಗಾದರೋ ಜೀವನದಲ್ಲಿ ಅತ್ಯಧಿಕ ಅನುಭವವಿರುತ್ತದೆ. ಆದರೂ, ಕಷ್ಟಕರವಾದ ಹದಿಪ್ರಾಯದ ವರ್ಷಗಳಲ್ಲಿ ಯಾನಮಾಡುತ್ತಿರುವಾಗ, ನೀವು ನಿಮ್ಮ ಹೆತ್ತವರ ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಯತ್ನಿಸಲು ಸಕಾರಣಗಳಿವೆ.

ನಿಮ್ಮ ಹೆತ್ತವರಿಗೆ ಏಕೆ ವಿಧೇಯರಾಗಬೇಕು?

ಎಲ್ಲಕ್ಕಿಂತಲೂ ಮಿಗಿಲಾಗಿ, ಕುಟುಂಬದ ಮೂಲಕರ್ತನಾಗಿರುವ ಯೆಹೋವನು, ಹೆತ್ತವರ ಮಾರ್ಗದರ್ಶನಕ್ಕೆ ನೀವು ಕಿವಿಗೊಡಬೇಕು ಎಂದು ನಿಮಗೆ ಹೇಳುತ್ತಾನೆ. (ಎಫೆಸ 3:​14, 15) ನಿಮ್ಮನ್ನು ಪರಾಮರಿಸುವಂತೆ ದೇವರು ನಿಮ್ಮ ಹೆತ್ತವರನ್ನು ನೇಮಿಸಿರುವುದರಿಂದ, ಆತನು ನಿಮಗೆ ಈ ಸಲಹೆಯನ್ನು ಕೊಡುತ್ತಾನೆ: “ಮಕ್ಕಳೇ, ಕರ್ತನು ನಿಮ್ಮ ಮೇಲೆ ನೇಮಿಸಿರುವವರೋಪಾದಿ ನಿಮ್ಮ ಹೆತ್ತವರಿಗೆ ವಿಧೇಯರಾಗುವುದು ನಿಮಗೆ ಯೋಗ್ಯವಾದ ಸಂಗತಿಯಾಗಿದೆ.” (ಎಫೆಸ 6:​1-3, ಫಿಲಿಪ್ಸ್‌; ಕೀರ್ತನೆ 78:⁠5) ಈಗ ನೀವು ಹದಿಪ್ರಾಯದವರಾಗಿರಬಹುದಾದರೂ ಈಗಲೂ ನಿಮ್ಮನ್ನು ಮಾರ್ಗದರ್ಶಿಸುವ ಜವಾಬ್ದಾರಿ ನಿಮ್ಮ ಹೆತ್ತವರಿಗಿದೆ, ಮತ್ತು ಅವರು ಏನು ಹೇಳುತ್ತಾರೋ ಅದಕ್ಕೆ ಕಿವಿಗೊಡುವ ಹಂಗು ನಿಮಗಿದೆ. ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಬೇಕು ಎಂದು ಅಪೊಸ್ತಲ ಪೌಲನು ಬರೆದಾಗ, ಎಲ್ಲಾ ವಯೋಮಿತಿಯ ಮಕ್ಕಳಿಗೆ ಅನ್ವಯಿಸಬಲ್ಲ ಒಂದು ಗ್ರೀಕ್‌ ಪದವನ್ನು ಬಳಸಿದನು. ಉದಾಹರಣೆಗೆ, ಮತ್ತಾಯ 23:37ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೆರೂಸಲೇಮಿನ ನಿವಾಸಿಗಳಲ್ಲಿ ಹೆಚ್ಚಿನವರು ವಯಸ್ಕರಾಗಿದ್ದರೂ, ಯೇಸು ಅವರನ್ನು ಅದರ “ಮಕ್ಕಳು” ಎಂದು ಸೂಚಿಸಿ ಮಾತಾಡಿದನು.

ಪುರಾತನಕಾಲದ ಅನೇಕ ನಂಬಿಗಸ್ತ ವ್ಯಕ್ತಿಗಳು ವಯಸ್ಕರಾದ ಬಳಿಕವೂ ದೀರ್ಘ ಸಮಯಾವಧಿಯ ವರೆಗೆ ತಮ್ಮ ಹೆತ್ತವರಿಗೆ ವಿಧೇಯರಾಗುತ್ತಾ ಮುಂದುವರಿದರು. ಯಾಕೋಬನು ಪ್ರಾಯಕ್ಕೆ ಬಂದ ಪುರುಷನಾಗಿದ್ದರೂ, ಯೆಹೋವನ ಆರಾಧಕಳಲ್ಲದ ಒಬ್ಬ ಸ್ತ್ರೀಯನ್ನು ಮದುವೆಮಾಡಿಕೊಳ್ಳಬೇಡ ಎಂದು ಅವನ ತಂದೆಯು ನೀಡಿದ ಆಜ್ಞೆಗೆ ವಿಧೇಯನಾಗಬೇಕು ಎಂಬುದನ್ನು ಮನಗಂಡನು. (ಆದಿಕಾಂಡ 28:​1, 2) ನಿಸ್ಸಂದೇಹವಾಗಿಯೂ, ವಿಧರ್ಮಿ ಕಾನಾನ್ಯ ಸ್ತ್ರೀಯನ್ನು ಮದುವೆಯಾಗಲು ತನ್ನ ಅಣ್ಣನು ಮಾಡಿದ ನಿರ್ಧಾರವು ತನ್ನ ಹೆತ್ತವರಿಗೆ ಸಾಕಷ್ಟು ಮನೋವೇದನೆಯನ್ನು ನೀಡಿತ್ತೆಂಬುದನ್ನೂ ಯಾಕೋಬನು ಗಮನಿಸಿದ್ದನು.​—⁠ಆದಿಕಾಂಡ 27:46.

ನಿಮ್ಮನ್ನು ಮಾರ್ಗದರ್ಶಿಸಲು ನಿಮ್ಮ ಕ್ರೈಸ್ತ ಹೆತ್ತವರಿಗಿರುವ ದೇವದತ್ತ ಕರ್ತವ್ಯದೊಂದಿಗೆ, ಅವರು ನಿಮ್ಮ ಸಲಹೆಗಾರರೋಪಾದಿ ಕ್ರಿಯೆಗೈಯಲು ಅತ್ಯಂತ ಅರ್ಹ ವ್ಯಕ್ತಿಗಳಾಗಿರುವುದೂ ಸಂಭವನೀಯ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಅವರಿಗೆ ನಿಮ್ಮ ಬಗ್ಗೆ ತುಂಬ ಚೆನ್ನಾಗಿ ಗೊತ್ತಿದೆ ಮತ್ತು ಅನೇಕ ವರ್ಷಗಳಿಂದಲೂ ನಿಮಗೆ ಅವರು ನಿಸ್ವಾರ್ಥ ಪ್ರೀತಿಯನ್ನು ತೋರಿಸಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಡಗಿನ ಮಾರ್ಗದರ್ಶಿಯಂತೆಯೇ ನಿಮ್ಮ ಹೆತ್ತವರು ಅನುಭವದಿಂದ ಮಾತಾಡುತ್ತಾರೆ. ಸ್ವತಃ ಅವರು “ಯೌವನದ ಇಚ್ಛೆ”ಗಳನ್ನು ಅನುಭವಿಸಿದ್ದಾರೆ. ಮತ್ತು ಸತ್ಕ್ರೈಸ್ತರೋಪಾದಿ ಅವರು, ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವುದರ ಮೌಲ್ಯವನ್ನು ವೈಯಕ್ತಿಕವಾಗಿ ಮನಗಂಡಿದ್ದಾರೆ.​—⁠2 ತಿಮೊಥೆಯ 2:22.

ಇಂಥ ಅನುಭವಸ್ಥ ಸಹಾಯವು ನಿಮ್ಮ ಹತ್ತಿರವೇ ಇರುವುದರಿಂದ, ಅತ್ಯಂತ ಕಷ್ಟಕರವಾದ ಸನ್ನಿವೇಶಗಳನ್ನು ಸಹ ಯಶಸ್ವಿಕರವಾಗಿ ನಿರ್ವಹಿಸುವುದರಲ್ಲಿ ನಿಮಗೆ ನೆರವು ನೀಡಲ್ಪಡುತ್ತದೆ. ಉದಾಹರಣೆಗೆ, ವಿರುದ್ಧ ಲಿಂಗದವರೊಂದಿಗಿನ ನಿಮ್ಮ ಸಂಬಂಧವನ್ನು ಪರಿಗಣಿಸಿರಿ. ಈ ಸೂಕ್ಷ್ಮ ವಿಚಾರದಲ್ಲಿ ಕ್ರೈಸ್ತ ಹೆತ್ತವರು ನಿಮ್ಮನ್ನು ಹೇಗೆ ಮಾರ್ಗದರ್ಶಿಸಬಲ್ಲರು?

ವಿರುದ್ಧ ಲಿಂಗದವರ ಕಡೆಗಿನ ಆಕರ್ಷಣೆ

ಮರಳದಂಡೆಗಳಿಂದ ಸಾಕಷ್ಟು ಅಂತರವನ್ನಿಡುವಂತೆ ಹಡಗಿನ ಮಾರ್ಗದರ್ಶಿಗಳು ಕ್ಯಾಪ್ಟನ್‌ಗಳಿಗೆ ಸಲಹೆ ನೀಡುತ್ತಾರೆ. ಮರಳದಂಡೆಗಳು ಮೃದುವಾಗಿರುತ್ತವೆ ಮಾತ್ರವಲ್ಲ ಮೋಸಕರವಾಗಿಯೂ ಇರುತ್ತವೆ, ಏಕೆಂದರೆ ಅವು ಸತತವಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಿರುತ್ತವೆ. ತದ್ರೀತಿಯಲ್ಲಿ ನಿಮ್ಮನ್ನು ಭಾವನಾತ್ಮಕವಾಗಿ ಪಾಶಕ್ಕೆ ಸಿಕ್ಕಿಸಬಹುದಾದ ಸನ್ನಿವೇಶಗಳಿಂದ ನಿಮ್ಮನ್ನು ದೂರವಿರಿಸಿಕೊಳ್ಳುವಂತೆ ನಿಮ್ಮ ಹೆತ್ತವರು ಬಯಸುತ್ತಾರೆ. ಉದಾಹರಣೆಗೆ, ವಿರುದ್ಧ ಲಿಂಗದವರ ಕಡೆಗಿನ ಭಾವನೆಗಳು ತೀವ್ರವಾಗಿರುತ್ತವೆ ಮತ್ತು ಇವುಗಳನ್ನು ವರ್ಣಿಸುವುದು ತುಂಬ ಕಷ್ಟಕರವಾಗಿರಸಾಧ್ಯವಿದೆ ಎಂಬುದು ಹೆತ್ತವರಿಗೆ ಗೊತ್ತಿದೆ. ಆದರೆ ಈ ಭಾವನೆಗಳು ಒಮ್ಮೆ ಕೆರಳಿಸಲ್ಪಡುವಲ್ಲಿ, ನಿಮಗೆ ಹಡಗೊಡೆತವನ್ನು ಉಂಟುಮಾಡಬಲ್ಲವು.

ದೀನಳ ಉದಾಹರಣೆಯು, ಅಪಾಯಕ್ಕೆ ತೀರ ಹತ್ತಿರವೇ ಹಡಗನ್ನು ನಡೆಸುವುದರ ಪರಿಣಾಮವನ್ನು ದೃಷ್ಟಾಂತಿಸುತ್ತದೆ. ಬಹುಶಃ ದೀನಳಿಗಿದ್ದ ಕುತೂಹಲ ಮನೋಭಾವ ಹಾಗೂ ಮೋಜಿನಿಂದ ಕಾಲಕಳೆಯಬೇಕೆಂಬ ಬಯಕೆಯು, ಯಾರ ನೈತಿಕ ನಡವಳಿಕೆಯು ನಿಸ್ಸಂದೇಹವಾಗಿಯೂ ಸಡಿಲವಾಗಿತ್ತೋ ಅಂಥ ಕಾನಾನ್ಯ ಹುಡುಗಿಯರ ಸಹವಾಸಮಾಡುವಂತೆ ಅವಳನ್ನು ಪ್ರಚೋದಿಸಿರಬಹುದು. ಯಾವುದು ಆರಂಭದಲ್ಲಿ ಮುಗ್ಧತೆಯಿಂದ ಕೂಡಿದ ತಮಾಷೆಯಾಗಿ ಕಂಡುಬಂತೋ ಅದೇ ದುರಂತಮಯ ಅನುಭವಕ್ಕೆ ಮುನ್ನಡೆಸಿತು. ಆ ಪಟ್ಟಣದಲ್ಲೇ “ಘನವಂತನಾಗಿದ್ದ” ಯೌವನಸ್ಥನಿಂದ ಅವಳು ಮಾನಭಂಗಕ್ಕೆ ತುತ್ತಾದಳು.​—⁠ಆದಿಕಾಂಡ 34:​1, 2, 19.

ನಾವು ಜೀವಿಸುತ್ತಿರುವ ಈ ಸಮಯಗಳಲ್ಲಿ ಲೈಂಗಿಕ ವಿಷಯಗಳಿಗೆ ಸತತವಾಗಿ ಒತ್ತು ನೀಡಲ್ಪಡುತ್ತಿರುವುದರಿಂದ ಇಂಥ ಅಪಾಯಗಳು ಇನ್ನಷ್ಟು ಜಟಿಲಗೊಂಡಿವೆ. (ಹೋಶೇಯ 5:⁠4) ಅಧಿಕಾಂಶ ಯುವ ಜನರು, ವಿರುದ್ಧ ಲಿಂಗದವರೊಂದಿಗೆ ಮಜಾಮಾಡುವುದೇ ಅತ್ಯಂತ ರೋಮಾಂಚಕ ಸಂಗತಿಯಾಗಿದೆ ಎಂಬ ಚಿತ್ರಣವನ್ನು ನೀಡಬಹುದು. ತುಂಬ ಆಕರ್ಷಕವಾಗಿ ಕಾಣುತ್ತಾನೆಂದು ಅಥವಾ ಕಾಣುತ್ತಾಳೆಂದು ನೀವು ನೆನಸುವಂಥ ಒಬ್ಬ ವ್ಯಕ್ತಿಯೊಂದಿಗೆ ಒಂಟಿಯಾಗಿ ಕಾಲಕಳೆಯುವ ಆಲೋಚನೆಯೇ ನಿಮ್ಮನ್ನು ತುಂಬ ರೋಮಾಂಚನಗೊಳಿಸಬಹುದು. ಪ್ರೀತಿಭರಿತ ಹೆತ್ತವರಾದರೋ, ದೇವರ ಮಟ್ಟಗಳನ್ನು ಗೌರವಿಸದಿರುವಂಥ ಯುವ ಜನರೊಂದಿಗೆ ಸಹವಾಸಮಾಡುವುದರಿಂದ ನಿಮ್ಮನ್ನು ಸಂರಕ್ಷಿಸಲು ಪ್ರಯತ್ನಿಸುವರು.

ಕುತೂಹಲ ಮನೋಭಾವವು ಹದಿಪ್ರಾಯದವರನ್ನು ಅಪಾಯಕ್ಕೆ ಕುರುಡರಾಗುವಂತೆ ಮಾಡಬಲ್ಲದು ಎಂದು ಲಾರ ಒಪ್ಪಿಕೊಳ್ಳುತ್ತಾಳೆ. “ನನ್ನ ತರಗತಿಯಲ್ಲಿರುವ ಹುಡುಗಿಯರು, ಸುಂದರ ಹುಡುಗರೊಂದಿಗೆ ತಾವು ಮಧ್ಯರಾತ್ರಿಯ ವರೆಗೆ ಡ್ಯಾನ್ಸ್‌ ಮಾಡಿದೆವು ಎಂದು ನನಗೆ ಹೇಳುವಾಗೆಲ್ಲಾ, ಅದೊಂದು ತುಂಬ ಅವಿಸ್ಮರಣೀಯ ಅನುಭವವಾಗಿದೆಯೋ ಎಂಬಂತೆ ವರ್ಣಿಸುತ್ತಾರೆ. ಕೆಲವೊಮ್ಮೆ ಅವರು ಅತಿಶಯಿಸಿ ಹೇಳುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತದೆ, ಆದರೂ ನನಗೆ ಕುತೂಹಲವೆನಿಸುತ್ತದೆ ಮತ್ತು ನನಗೆ ಮಜಾಮಾಡುವ ಅವಕಾಶವೆಲ್ಲಾ ಕೈತಪ್ಪಿಹೋಗುತ್ತಿದೆ ಎಂಬ ಅನಿಸಿಕೆಯುಂಟಾಗುತ್ತದೆ. ಇಂಥ ಸ್ಥಳಗಳಿಗೆ ಹೋಗಲು ಅನುಮತಿಸದಿರುವ ಮೂಲಕ ನನ್ನ ಹೆತ್ತವರು ಒಳ್ಳೇದನ್ನೇ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆಯಾದರೂ, ನನಗೆ ತುಂಬ ಪ್ರಲೋಭನೆಯಾಗುತ್ತದೆ.”

ಹಡಗಿಗೆ ಬ್ರೇಕ್‌ಗಳಿರುವುದಿಲ್ಲ, ಆದುದರಿಂದ ಅದನ್ನು ನಿಲ್ಲಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಕಾಮೋದ್ರೇಕವು ಸಹ ಇದೇ ರೀತಿಯಲ್ಲಿ ಕಾರ್ಯನಡಿಸುತ್ತದೆ ಎಂಬುದು ಹೆತ್ತವರಿಗೆ ಗೊತ್ತಿದೆ. ಜ್ಞಾನೋಕ್ತಿ ಪುಸ್ತಕವು, ಹತೋಟಿ ಮೀರಿದ ಕಾಮೋದ್ರೇಕದಿಂದ ಪ್ರಚೋದಿತನಾದ ಒಬ್ಬ ಮನುಷ್ಯನನ್ನು ವಧ್ಯಸ್ಥಾನಕ್ಕೆ ಹೋಗುವ ಹೋರಿಗೆ ಹೋಲಿಸುತ್ತದೆ. (ಜ್ಞಾನೋಕ್ತಿ 7:​21-23) ನಿಮಗೆ ಈ ರೀತಿ ಸಂಭವಿಸುವುದನ್ನು ಅಂದರೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಹಡಗೊಡೆತಕ್ಕೆ ಮುನ್ನಡಿಸುವ ಮಾರ್ಗವನ್ನು ನೀವು ಇಷ್ಟಪಡುವುದಿಲ್ಲ. ಈ ಕ್ಷೇತ್ರದಲ್ಲಿ ನಿಮ್ಮ ಹೃದಯವು ನಿಮ್ಮನ್ನು ಯಾವಾಗ ತಪ್ಪುದಾರಿಗೆಳೆಯಲು ಆರಂಭಿಸಿದೆ ಎಂಬುದನ್ನು ನಿಮ್ಮ ಹೆತ್ತವರು ಗ್ರಹಿಸಬಹುದು, ಮತ್ತು ಅದಕ್ಕನುಸಾರ ಅವರು ನಿಮಗೆ ಸಲಹೆಯನ್ನು ನೀಡಬಹುದು. ಅವರಿಗೆ ಕಿವಿಗೊಟ್ಟು, ಆಪತ್ತಿನಿಂದ ನಿಮ್ಮನ್ನು ಕಾಪಾಡಿಕೊಳ್ಳುವ ವಿವೇಕ ನಿಮಗಿದೆಯೋ?​—⁠ಜ್ಞಾನೋಕ್ತಿ 1:8; 27:12.

ಸಮವಯಸ್ಕರ ಒತ್ತಡವನ್ನು ನಿಭಾಯಿಸಬೇಕಾಗಿರುವಾಗಲೂ ನಿಮ್ಮ ಹೆತ್ತವರ ಬೆಂಬಲದ ಆವಶ್ಯಕತೆ ನಿಮಗಿದೆ. ಅವರು ನಿಮಗೆ ಹೇಗೆ ಸಹಾಯಮಾಡಬಲ್ಲರು?

ನಿಮ್ಮ ಸಮವಯಸ್ಕರ ಒಡಂಬಡಿಸುವ ಪ್ರಭಾವ

ಪ್ರಬಲವಾದ ಒಂದು ಅಲೆ ಅಥವಾ ಪ್ರವಾಹದ ಸೆಳೆತವು ಹಡಗನ್ನು ವಿಪಥಗೊಳಿಸಬಹುದು. ಹೀಗಾಗದಂತೆ ತಡೆಯಬೇಕಾದರೆ, ಹಡಗನ್ನು ಇನ್ನೊಂದು ದಿಕ್ಕಿನಲ್ಲಿ ಮುನ್ನಡೆಸುವ ಅಗತ್ಯವಿದೆ. ತದ್ರೀತಿಯಲ್ಲಿ, ಒಂದುವೇಳೆ ನೀವು ಪ್ರತಿಯಾಗಿ ಸೂಕ್ತಕ್ರಮಗಳನ್ನು ತೆಗೆದುಕೊಳ್ಳದಿರುವಲ್ಲಿ, ಬೇರೆ ಯುವ ಜನರ ಒಡಂಬಡಿಸುವ ಪ್ರಭಾವವು ನಿಮ್ಮನ್ನು ಆಧ್ಯಾತ್ಮಿಕವಾಗಿ ವಿಪಥಗೊಳಿಸಸಾಧ್ಯವಿದೆ.

ದೀನಳ ಅನುಭವವು ಉದಾಹರಿಸುವಂತೆ, “ನೀವು ಮೂಢರನ್ನು ನಿಮ್ಮ ಸ್ನೇಹಿತರನ್ನಾಗಿ ಆಯ್ದುಕೊಂಡರೆ, ನಿಮಗೆ ತೊಂದರೆ ಉಂಟಾಗುವುದು.” (ಜ್ಞಾನೋಕ್ತಿ 13:​20, ಪರಿಶುದ್ಧ ಬೈಬಲ್‌ *) ಬೈಬಲ್‌ಗೆ ಸಂಬಂಧಿಸಿದ ಬಳಕೆಯಲ್ಲಿ, “ಮೂಢ” ಎಂಬ ಪದವು ಯೆಹೋವನ ಬಗ್ಗೆ ತಿಳಿದಿರದ ಅಥವಾ ಆತನ ಮಾರ್ಗಗಳಲ್ಲಿ ನಡೆಯದಿರಲು ಆಯ್ಕೆಮಾಡುವಂಥ ಒಬ್ಬನನ್ನು ಸೂಚಿಸುತ್ತದೆ.

ಆದರೂ, ನಿಮ್ಮ ಸಹಪಾಠಿಗಳ ದೃಷ್ಟಿಕೋನಗಳನ್ನು ಅಥವಾ ರೂಢಿಗಳನ್ನು ತಳ್ಳಿಹಾಕುವುದು ಅಷ್ಟೇನೂ ಸುಲಭವಾದ ಸಂಗತಿಯಲ್ಲ. ಮಾರೀಆ ಹೋಸೇ ವಿವರಿಸುವುದು: “ಬೇರೆ ಯುವ ಜನರು ನನ್ನನ್ನು ಅಂಗೀಕರಿಸಬೇಕು ಎಂಬುದು ನನ್ನ ಬಯಕೆಯಾಗಿತ್ತು. ನಾನು ಅವರಿಗಿಂತ ಬೇರೆಯಾಗಿದ್ದೇನೆ ಎಂದು ಅವರು ನೆನಸುವುದು ನನಗೆ ಇಷ್ಟವಿರಲಿಲ್ಲವಾದ್ದರಿಂದ ಸಾಧ್ಯವಾದಷ್ಟು ನಿಕಟವಾಗಿ ನಾನು ಅವರನ್ನು ಅನುಕರಿಸುತ್ತಿದ್ದೆ.” ನಿಮ್ಮ ಸಂಗೀತದ ಆಯ್ಕೆಯಲ್ಲಿ, ನೀವು ಧರಿಸಲು ಬಯಸುವ ಬಟ್ಟೆಗಳಲ್ಲಿ, ಅಥವಾ ನೀವು ಮಾತಾಡುವ ವಿಧದಲ್ಲಿಯೂ ನಿಮಗೆ ಅರಿವಿಲ್ಲದೇ ನೀವು ಸಮವಯಸ್ಕರಿಂದ ಪ್ರಭಾವಿತರಾಗಿರಬಹುದು. ನಿಮ್ಮದೇ ಪ್ರಾಯದ ಯುವ ಜನರೊಂದಿಗಿರುವುದು ನಿಮಗೆ ಹಾಯಾದ ಅನಿಸಿಕೆಯನ್ನು ನೀಡಬಹುದು. ಇದು ಸಹಜವಾಗಿದೆ, ಆದರೆ ನೀವು ಅವರ ಬಲವಾದ ಪ್ರಭಾವಕ್ಕೆ ಸುಲಭವಾಗಿ ಸಿಕ್ಕಿಬೀಳುವಿರಿ ಮತ್ತು ಇದು ನಿಮಗೆ ವಿಪತ್ಕಾರಕವಾಗಿರಬಹುದು.​—⁠ಜ್ಞಾನೋಕ್ತಿ 1:​10-16.

ಕೆಲವೊಂದು ವರ್ಷಗಳ ಹಿಂದೆ ತಾನು ಎದುರಿಸಿದ ಸಂಕಷ್ಟವನ್ನು ಕ್ಯಾರೊಲೀನ್‌ ಜ್ಞಾಪಿಸಿಕೊಳ್ಳುತ್ತಾಳೆ: “ನನ್ನ ಜೊತೆ ಇರುತ್ತಿದ್ದ ಹುಡುಗಿಯರಲ್ಲಿ ಹೆಚ್ಚಿನವರಿಗೆ 13ರ ಪ್ರಾಯದಿಂದಲೇ ಬಾಯ್‌ಫ್ರೆಂಡ್‌ಗಳಿದ್ದರು, ಮತ್ತು ಅನೇಕ ವರ್ಷಗಳ ವರೆಗೆ ನಾನು ಅವರ ಮಾದರಿಯನ್ನು ಅನುಸರಿಸುವ ಸತತ ಒತ್ತಡಕ್ಕೆ ಒಳಗಾಗಿದ್ದೆ. ಆದರೂ, ಈ ಕಷ್ಟಕರ ಸಮಯದಲ್ಲಿ ನನ್ನ ತಾಯಿ ನನ್ನನ್ನು ಮಾರ್ಗದರ್ಶಿಸಿದರು. ನನಗೆ ಕಿವಿಗೊಡಲು, ನನ್ನೊಂದಿಗೆ ತರ್ಕಸಮ್ಮತವಾಗಿ ಮಾತಾಡಲು, ಮತ್ತು ನಾನು ಇನ್ನೂ ಪ್ರೌಢಳಾಗುವ ವರೆಗೆ ಇಂಥ ಸಂಬಂಧಗಳನ್ನು ಮುಂದೂಡುವ ಆವಶ್ಯಕತೆಯನ್ನು ಮನಗಾಣುವಂತೆ ನನಗೆ ಸಹಾಯಮಾಡಲು ಅವರು ತಾಸುಗಟ್ಟಲೆ ಸಮಯವನ್ನು ವಿನಿಯೋಗಿಸಿದರು.”

ಕ್ಯಾರೊಲೀನಳ ತಾಯಿಯಂತೆ, ಸಮವಯಸ್ಕರ ಒತ್ತಡದ ಕುರಿತು ನಿಮ್ಮನ್ನು ಎಚ್ಚರಿಸುವ ಅಥವಾ ಕೆಲವೊಂದು ಚಟುವಟಿಕೆಗಳನ್ನು ಇಲ್ಲವೆ ಸ್ನೇಹವನ್ನು ನಿರ್ಬಂಧಿಸುವ ಹಂಗಿನ ಅನಿಸಿಕೆಯೂ ನಿಮ್ಮ ಹೆತ್ತವರಿಗೆ ಆಗಬಹುದು. ಇಂಥ ವಿವಾದಾಂಶಗಳ ಬಗ್ಗೆ ತನ್ನ ಹೆತ್ತವರೊಂದಿಗೆ ನಡೆದ ಅನೇಕ ಸಂಘರ್ಷಗಳನ್ನು ನೇಥನ್‌ ಜ್ಞಾಪಿಸಿಕೊಳ್ಳುತ್ತಾನೆ. ಅವನು ವಿವರಿಸುವುದು: “ನನ್ನ ಸ್ನೇಹಿತರು ಅನೇಕಬಾರಿ ತಮ್ಮೊಂದಿಗೆ ಬರುವಂತೆ ನನ್ನನ್ನು ಕರೆಯುತ್ತಿದ್ದರು, ಆದರೆ ನಾನು ದೊಡ್ಡ ದೊಡ್ಡ ಗುಂಪುಗಳೊಂದಿಗೆ ಕಾಲಕಳೆಯುವುದು ಅಥವಾ ಮೇಲ್ವಿಚಾರಣೆಯಿಲ್ಲದಂಥ ದೊಡ್ಡ ಪಾರ್ಟಿಗಳಿಗೆ ಹೋಗುವುದು ನನ್ನ ಹೆತ್ತವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಆ ಸಮಯದಲ್ಲಿ, ಏಕೆ ಬೇರೆ ಹೆತ್ತವರು ನನ್ನ ಹೆತ್ತವರಿಗಿಂತ ಹೆಚ್ಚು ಅನಿರ್ಬಂಧಿತ ಮನೋಭಾವದವರಾಗಿದ್ದಾರೆ ಎಂಬುದು ನನಗೆ ಅರ್ಥವಾಗಿರಲಿಲ್ಲ.”

ಆದರೆ, ಸಮಯಾನಂತರ ನೇಥನ್‌ಗೆ ಅರ್ಥವಾಯಿತು. ಅವನು ಒಪ್ಪಿಕೊಳ್ಳುವುದು: “ನನ್ನ ವಿಷಯದಲ್ಲಿ ಹೇಳುವುದಾದರೆ, ‘ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ’ ಎಂಬ ಮಾತು ನಿಜವಾಗಿತ್ತು. ಹುಡುಗರು ಗುಂಪಾಗಿ ಕಾಲಕಳೆಯುವಾಗ ಈ ಮುರ್ಖತನವು ಸುಲಭವಾಗಿ ವ್ಯಕ್ತವಾಗುವಂತೆ ತೋರುತ್ತಿತ್ತು. ಒಬ್ಬನು ಏನಾದರೂ ಕೆಟ್ಟ ವಿಷಯವನ್ನು ಹೇಳಲಾರಂಭಿಸುತ್ತಾನೆ, ಇನ್ನೊಬ್ಬನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ, ಮತ್ತು ಮೂರನೆಯವನಂತೂ ಸನ್ನಿವೇಶವನ್ನು ಇನ್ನೂ ಕೆಟ್ಟ ಸ್ಥಿತಿಗೆ ತಂದು ಮುಟ್ಟಿಸುತ್ತಾನೆ. ಸ್ವಲ್ಪದರಲ್ಲೇ ಉಳಿದವರೆಲ್ಲರೂ ಇದರಲ್ಲಿ ಜೊತೆಗೂಡುವಂತೆ ಒತ್ತಾಯಿಸಲ್ಪಡುತ್ತಾರೆ. ಯೆಹೋವನ ಸೇವೆಮಾಡುತ್ತೇವೆಂದು ಹೇಳಿಕೊಳ್ಳುವ ಯುವ ಜನರು ಕೂಡ ಈ ಪಾಶದೊಳಕ್ಕೆ ಸಿಕ್ಕಿಕೊಳ್ಳಸಾಧ್ಯವಿದೆ.”​—⁠ಜ್ಞಾನೋಕ್ತಿ 22:⁠15.

ತಮ್ಮ ಸಮವಯಸ್ಕರು ಸೂಚಿಸಿದಂಥ ವಿಷಯಗಳನ್ನು ಮಾಡಲು ನೇಥನ್‌ ಮತ್ತು ಮಾರೀಆ ಹೋಸೇಯರ ಹೆತ್ತವರು ಅವರನ್ನು ಅನುಮತಿಸದಿದ್ದ ಕಾರಣ, ಅವರಿಬ್ಬರೂ ತಮ್ಮ ಹೃದಯಗಳೊಂದಿಗೆ ಹೋರಾಟ ನಡೆಸಿದ್ದರು. ಆದರೂ, ಅವರು ತಮ್ಮ ಹೆತ್ತವರಿಗೆ ಕಿವಿಗೊಟ್ಟರು ಮತ್ತು ಸಮಯಾನಂತರ ತಾವು ಈ ಆಯ್ಕೆಯನ್ನು ಮಾಡಿದ್ದಕ್ಕಾಗಿ ಸಂತೋಷಪಟ್ಟರು. ಜ್ಞಾನೋಕ್ತಿಯು ಹೇಳುವುದು: “ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು; ನನ್ನ ಜ್ಞಾನಬೋಧೆಗೆ ಮನಸ್ಸಿಡು.”​—⁠ಜ್ಞಾನೋಕ್ತಿ 22:⁠17.

ಗೌರವಾರ್ಹರು

ಒಂದೇ ಕಡೆ ಓಲುವ ಹಡಗನ್ನು ಸಂಬಾಳಿಸುವುದು ತುಂಬ ಕಷ್ಟ, ಮತ್ತು ಅದು ಸ್ವಲ್ಪ ಹೆಚ್ಚು ಓಲುವಲ್ಲಿ ಸುಲಭವಾಗಿ ಮಗುಚಿಬೀಳಬಲ್ಲದು. ನಮ್ಮ ಅಪರಿಪೂರ್ಣ ಸ್ವಭಾವದ ಕಾರಣದಿಂದ, ನಾವೆಲ್ಲರೂ ಸ್ವಾರ್ಥಪರ ಹಾಗೂ ನಿಷೇಧಿತ ಪ್ರವೃತ್ತಿಗಳ ಕಡೆಗೆ ಓಲುವವರಾಗಿದ್ದೇವೆ. ಸಾಂಕೇತಿಕವಾಗಿ ಹೇಳುವುದಾದರೆ, ಯುವ ಜನರು ತಮ್ಮ ಹೆತ್ತವರ ಮಾರ್ಗದರ್ಶನವನ್ನು ಜಾಗರೂಕತೆಯಿಂದ ಅನುಸರಿಸುವಲ್ಲಿ, ಈ ಪ್ರವೃತ್ತಿಗಳು ಇರುವುದಾದರೂ ಅವರು ಬಂದರನ್ನು ತಲಪಸಾಧ್ಯವಿದೆ.

ಉದಾಹರಣೆಗೆ, ಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿ ಮತ್ತು ನಾಶಕ್ಕೆ ನಡೆಸುವ ಅಗಲವಾದ ದಾರಿಯಲ್ಲದೆ, ಇನ್ನೊಂದು ಮಧ್ಯಮ ದಾರಿ ಇದೆ ಎಂಬ ವಿಚಾರಧಾರೆಯನ್ನು ತೊರೆಯಲು ನಿಮ್ಮ ಹೆತ್ತವರು ನಿಮಗೆ ಸಹಾಯಮಾಡಬಲ್ಲರು. (ಮತ್ತಾಯ 7:​13, 14) ತದ್ರೀತಿಯಲ್ಲಿ, ಪಾಪವನ್ನು ನುಂಗುವುದಲ್ಲ ಬದಲಾಗಿ ಸ್ವಲ್ಪವೇ “ರುಚಿನೋಡು”ವುದೋ ಎಂಬಂತೆ, ನಿಜವಾಗಿಯೂ ದೇವರ ನಿಯಮಗಳನ್ನು ಉಲ್ಲಂಘಿಸದೆ ನೀವು ಅಯುಕ್ತವಾದ ಒಂದು ವಿಷಯವನ್ನು ಸ್ವಲ್ಪಮಟ್ಟಿಗಾದರೂ ಆನಂದಿಸಸಾಧ್ಯವಿದೆ ಎಂದು ನೆನಸುವುದು ಅವಾಸ್ತವಿಕವಾಗಿದೆ. ಇಂಥ ಮಾರ್ಗಕ್ರಮವನ್ನು ಅನುಸರಿಸಲು ಪ್ರಯತ್ನಿಸುವವರು ‘ಎರಡು ಮನಸ್ಸುಳ್ಳವರಾಗಿದ್ದಾರೆ,’ ಅಂದರೆ ಸ್ವಲ್ಪಮಟ್ಟಿಗೆ ಯೆಹೋವನ ಸೇವೆಮಾಡುವವರು ಆದರೆ ಅದೇ ಸಮಯದಲ್ಲಿ ಲೋಕವನ್ನೂ ಲೋಕದಲ್ಲಿರುವವುಗಳನ್ನೂ ಪ್ರೀತಿಸುವವರು ಆಗಿದ್ದಾರೆ, ಮತ್ತು ಆಧ್ಯಾತ್ಮಿಕವಾಗಿ ಸುಲಭವಾಗಿಯೇ ಮಗುಚಿಬೀಳಸಾಧ್ಯವಿದೆ. (1 ಅರಸುಗಳು 18:21; 1 ಯೋಹಾನ 2:15) ಇದು ಏಕೆ ಸಂಭವಿಸುತ್ತದೆ? ನಮ್ಮ ಪಾಪಪೂರ್ಣ ಪ್ರವೃತ್ತಿಗಳ ಕಾರಣದಿಂದಲೇ.

ನಮ್ಮ ಅಪರಿಪೂರ್ಣ ಬಯಕೆಗಳಿಗೆ ನಾವು ಬಲಿಬೀಳುವುದಾದರೆ, ಅವು ಇನ್ನಷ್ಟು ಬಲವಾಗಿ ಬೇರೂರುತ್ತವೆ. ನಮ್ಮ ‘ವಂಚಕ ಹೃದಯವು’ ಪಾಪದ ಒಂದೇ ಒಂದು ತುತ್ತಿನಿಂದ ಸಂತೃಪ್ತವಾಗುವುದಿಲ್ಲ. ಅದು ಇನ್ನೂ ಹೆಚ್ಚನ್ನು ತಗಾದೆಮಾಡುತ್ತದೆ. (ಯೆರೆಮೀಯ 17:⁠9) ಒಮ್ಮೆ ನಾವು ಆಧ್ಯಾತ್ಮಿಕತೆಯಿಂದ ಬೇರೆ ಕಡೆಗೆ ತೇಲಿಹೋಗತೊಡಗುವಲ್ಲಿ, ಲೋಕವು ನಮ್ಮ ಮೇಲೆ ಹೆಚ್ಚೆಚ್ಚು ಪ್ರಭಾವವನ್ನು ಬೀರುತ್ತಾ ಹೋಗುವುದು. (ಇಬ್ರಿಯ 2:⁠1) ನೀವು ಆಧ್ಯಾತ್ಮಿಕವಾಗಿ ಮಗುಚಿಕೊಳ್ಳುತ್ತಾ ಇದ್ದೀರಿ ಎಂಬುದನ್ನು ನೀವು ಗಮನಿಸದಿರಬಹುದು, ಆದರೆ ನಿಮ್ಮ ಕ್ರೈಸ್ತ ಹೆತ್ತವರು ಇದನ್ನು ಗಮನಿಸುವುದು ಸಂಭವನೀಯ. ಅವರು ಒಂದು ಕಂಪ್ಯೂಟರ್‌ ಪ್ರೋಗ್ರ್ಯಾಮ್‌ ಅನ್ನು ನಿಮ್ಮಷ್ಟು ಬೇಗನೆ ಕಲಿಯದಿರಬಹುದು, ಆದರೆ ವಂಚನಾತ್ಮಕ ಹೃದಯದ ಕುರಿತು ಅವರಿಗೆ ನಿಮಗಿಂತಲೂ ಎಷ್ಟೋ ಹೆಚ್ಚು ವಿಚಾರಗಳು ತಿಳಿದಿರುತ್ತವೆ ಎಂಬುದು ಖಂಡಿತವಾಗಿಯೂ ಸತ್ಯ. ಮತ್ತು ಜೀವವನ್ನು ಫಲಿಸಬಲ್ಲ ‘ಮಾರ್ಗದಲ್ಲಿ ನಿಮ್ಮ ಮನಸ್ಸನ್ನು ನಡೆಸಲು’ ಅವರು ನಿಮಗೆ ಸಹಾಯಮಾಡಬಯಸುತ್ತಾರೆ.​—⁠ಜ್ಞಾನೋಕ್ತಿ 23:19.

ನಿಶ್ಚಯವಾಗಿಯೂ ಸಂಗೀತ, ಮನೋರಂಜನೆ, ಮತ್ತು ಶೃಂಗಾರದಂಥ ಕಷ್ಟಕರ ಕ್ಷೇತ್ರಗಳಲ್ಲಿ ನಿಮ್ಮ ಹೆತ್ತವರು ನಿಮಗೆ ಮಾರ್ಗದರ್ಶನಗಳನ್ನು ನೀಡಬೇಕಾದಾಗ, ಅವುಗಳ ಕುರಿತಾದ ಅವರ ವಿಮರ್ಶೆಯು ಪರಿಪೂರ್ಣವಾಗಿರುತ್ತದೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಹೆತ್ತವರಿಗೆ ಸೊಲೊಮೋನನಂಥ ವಿವೇಕ ಅಥವಾ ಯೋಬನಂಥ ತಾಳ್ಮೆ ಇಲ್ಲದಿರಬಹುದು. ಒಂದು ಹಡಗಿನ ಮಾರ್ಗದರ್ಶಿಯಂತೆ, ಎಚ್ಚರಿಕೆ ನೀಡುವಾಗ ಅವರು ಕೆಲವೊಮ್ಮೆ ವಿಪರೀತಕ್ಕೆ ಹೋಗಬಹುದು. ಆದರೂ, ಒಂದುವೇಳೆ ನಾವು “ತಂದೆಯ ಉಪದೇಶ”ಕ್ಕೆ ಕಿವಿಗೊಟ್ಟು “ತಾಯಿಯ ಬೋಧನೆಯನ್ನು ತೊರೆಯ”ದಿರುವಲ್ಲಿ, ಅವರ ಮಾರ್ಗದರ್ಶನವು ಅತ್ಯಮೂಲ್ಯವಾಗಿ ಕಂಡುಬರುವುದು.​—⁠ಜ್ಞಾನೋಕ್ತಿ 1:​8, 9.

ಬೇರೆ ಯುವ ಜನರು ತಮ್ಮ ಹೆತ್ತವರ ಕುರಿತು ಹೀನವಾಗಿ ಮಾತಾಡಬಹುದು. ಆದರೆ, ನಿಮ್ಮ ಹೆತ್ತವರು ಶಾಸ್ತ್ರವಚನಗಳನ್ನು ಅನುಸರಿಸಲು ಹೆಣಗಾಡುತ್ತಿರುವಲ್ಲಿ, ಎಲ್ಲಾ ರೀತಿಯ ಹವಾಮಾನಗಳಲ್ಲಿ, ಎಲ್ಲಾ ಸಮಯಗಳಲ್ಲಿ, ಎಲ್ಲಾ ರೀತಿಯ ಕಷ್ಟದೆಸೆಗಳ ಎದುರಿನಲ್ಲಿ ಅವರು ನಿಮ್ಮ ಪಕ್ಕದಲ್ಲೇ ಇರುವರು. ಹಡಗಿನ ಒಬ್ಬ ಅನುಭವಸ್ಥ ಮಾರ್ಗದರ್ಶಿಯಿಂದ ಸಲಹೆಯನ್ನು ಪಡೆದುಕೊಳ್ಳುವ ಕ್ಯಾಪ್ಟನ್‌ನಂತೆ, ನಿಮ್ಮನ್ನು ಮಾರ್ಗದರ್ಶಿಸಲು, ವಿವೇಕದ ಮಾರ್ಗದಲ್ಲಿ ಮುನ್ನಡಿಸಲು ನಿಮಗೆ ನಿಮ್ಮ ಹೆತ್ತವರ ಮಾರ್ಗದರ್ಶನವು ಅಗತ್ಯವಾಗಿದೆ. ಇದರಿಂದ ಸಿಗುವ ಪ್ರತಿಫಲಗಳು ಅಗಣ್ಯ.

“ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ. ಅವರಾದರೋ ಕತ್ತಲ ಹಾದಿಗಳನ್ನು ಹಿಡಿಯಬೇಕೆಂದು ಧರ್ಮಮಾರ್ಗಗಳನ್ನು ತೊರೆದುಬಿಡುವರು; ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.”​—⁠ಜ್ಞಾನೋಕ್ತಿ 2:10-13, 21.

[ಪಾದಟಿಪ್ಪಣಿ]

^ ಪ್ಯಾರ. 22 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 22ರಲ್ಲಿರುವ ಚಿತ್ರ]

ಬೇರೆ ಯುವ ಜನರ ಪ್ರಭಾವವು ನಿಮ್ಮನ್ನು ಆಧ್ಯಾತ್ಮಿಕವಾಗಿ ವಿಪಥಗೊಳಿಸಸಾಧ್ಯವಿದೆ

[ಪುಟ 23ರಲ್ಲಿರುವ ಚಿತ್ರ]

ದೀನಳ ಅನುಭವವನ್ನು ಜ್ಞಾಪಿಸಿಕೊಳ್ಳಿರಿ

[ಪುಟ 24ರಲ್ಲಿರುವ ಚಿತ್ರ]

ಹಡಗಿನ ಕ್ಯಾಪ್ಟನನು ಒಬ್ಬ ಅನುಭವಸ್ಥ ಮಾರ್ಗದರ್ಶಿಯಿಂದ ಸಲಹೆಯನ್ನು ಪಡೆದುಕೊಳ್ಳುವಂತೆಯೇ, ಯುವ ಜನರು ತಮ್ಮ ಹೆತ್ತವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು

[ಪುಟ 24ರಲ್ಲಿರುವ ಚಿತ್ರ ಕೃಪೆ]

ಚಿತ್ರ: www.comstock.com