ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೇಸು ತನ್ನ ಹಿಂಬಾಲಕರಿಗೆ, “ಸಾಲ ಕೊಡುವಾಗ ಮತ್ತೆ ಅವರಿಂದ ಪಡೆಯಬಹುದೆಂಬ ನಿರೀಕ್ಷೆಯಿಲ್ಲದೆ ಕೊಡಿರಿ” ಎಂದು ಬೋಧಿಸಿದಾಗ, ಅವರು ಅಸಲು ಹಣವನ್ನೂ ಹಿಂದೆ ತೆಗೆದುಕೊಳ್ಳಬಾರದೆಂದು ಅವನು ಅರ್ಥೈಸಿದನೋ?

ಲೂಕ 6:35 (ಪರಿಶುದ್ಧ ಬೈಬಲ್‌ *)ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳನ್ನು, ಮೋಶೆಯ ಧರ್ಮಶಾಸ್ತ್ರದ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ. ಮೋಶೆಯ ಧರ್ಮಶಾಸ್ತ್ರದಲ್ಲಿ, ಆರ್ಥಿಕವಾಗಿ ನಿರ್ಗತಿಕರಾಗಿದ್ದ ಮತ್ತು ಸಹಾಯದ ಅಗತ್ಯದಲ್ಲಿದ್ದ ಜೊತೆ ಇಸ್ರಾಯೇಲ್ಯರಿಗೆ ಬಡ್ಡಿರಹಿತ ಸಾಲವನ್ನು ಕೊಡುವಂತೆ ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದನು. (ವಿಮೋಚನಕಾಂಡ 22:25; ಯಾಜಕಕಾಂಡ 25:35-37; ಮತ್ತಾಯ 5:42) ಈ ಸಾಲಗಳು ಆರ್ಥಿಕ ಲಾಭವನ್ನು ಗಳಿಸುವ ಉದ್ದೇಶಕ್ಕಾಗಿರಲಿಲ್ಲ. ಬದಲಾಗಿ, ಇಂಥ ಬಡ್ಡಿರಹಿತ ಸಾಲಗಳು ಬಡತನ ಅಥವಾ ಪ್ರತಿಕೂಲ ಪರಿಸ್ಥಿತಿಗಳನ್ನು ನಿವಾರಿಸಲಿಕ್ಕಾಗಿ ಲಭ್ಯಗೊಳಿಸಲ್ಪಟ್ಟಿದ್ದವು. ಎಷ್ಟೆಂದರೂ, ನೆರೆಯವನೊಬ್ಬನ ಹಣಕಾಸಿನ ತೊಂದರೆಯ ಸಮಯದಲ್ಲಿ ಅವನಿಂದ ಲಾಭವನ್ನು ಪಡೆಯಲು ಪ್ರಯತ್ನಿಸುವುದು ಅತ್ಯಂತ ಪ್ರೀತಿರಹಿತ ಕೃತ್ಯವಾಗಿರುವುದು. ಆದರೂ, ಸಾಲಕೊಡುವವನು ಅಸಲು ಹಣವನ್ನು ಹಿಂದೆ ಪಡೆಯಲು ಅರ್ಹನಾಗಿದ್ದನು, ಮತ್ತು ಅವನು ಕೆಲವೊಮ್ಮೆ ಏನನ್ನಾದರೂ ಒತ್ತೆ (ಸಾಲಕೊಟ್ಟದ್ದಕ್ಕೆ ಜಾಮೀನು) ಇಟ್ಟುಕೊಳ್ಳುತ್ತಿದ್ದನು.

ಯೇಸು ಧರ್ಮಶಾಸ್ತ್ರವನ್ನು ಬೆಂಬಲಿಸಿದನು, ಮತ್ತು ಯಾರು ಸಹಾಯವನ್ನು ನೀಡುತ್ತಿದ್ದಾರೋ ಆ ವ್ಯಕ್ತಿಯು ‘ಮತ್ತೆ ಪಡೆಯಬಹುದೆಂಬ’ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದು ಹೇಳುವ ಮೂಲಕ ಅದನ್ನು ಇನ್ನೂ ವಿಸ್ತಾರವಾದ ರೀತಿಯಲ್ಲಿ ಅನ್ವಯಿಸಿದನು. ಇಸ್ರಾಯೇಲ್ಯರಂತೆ, ಕೆಲವೊಮ್ಮೆ ಕ್ರೈಸ್ತರು ಹಣಕಾಸಿನ ತೊಂದರೆಯನ್ನು ಅಥವಾ ಇತರ ಸನ್ನಿವೇಶಗಳನ್ನು ಅನುಭವಿಸುತ್ತಾರೆ; ಇವು ಅವರನ್ನು ಬಡತನಕ್ಕೆ ತಳ್ಳಿಬಿಡಬಹುದು ಅಥವಾ ನಿರ್ಗತಿಕರನ್ನಾಗಿಯೂ ಮಾಡಬಹುದು. ಇಂಥ ಹತಾಶ ಸನ್ನಿವೇಶದಲ್ಲಿರುವ ಒಬ್ಬ ಕ್ರೈಸ್ತನು ಆರ್ಥಿಕ ಸಹಾಯವನ್ನು ಕೇಳುವಲ್ಲಿ, ಅವನಿಗೆ ನೆರವು ನೀಡುವುದು ದಯಾಪರ ಕೃತ್ಯವಲ್ಲವೇ? ವಾಸ್ತವದಲ್ಲಿ, ಪರಿಸ್ಥಿತಿಗಳ ಕಾರಣದಿಂದಾಗಿ ಗಂಭೀರವಾದ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಕೊಂಡಿರುವ ಒಬ್ಬ ಸಹೋದರನಿಗೆ ಸಹಾಯಮಾಡಲು ಬಯಸುವಂತೆ ನಿಜ ಪ್ರೀತಿಯು ಒಬ್ಬ ಜೊತೆ ಕ್ರೈಸ್ತನನ್ನು ಪ್ರಚೋದಿಸುತ್ತದೆ. (ಜ್ಞಾನೋಕ್ತಿ 3:27) ಒಬ್ಬನ ಬಳಿ ಸಾಲವಾಗಿ ಕೊಡಬಹುದಾದಷ್ಟು ಮೊತ್ತದ ಹಣವಿಲ್ಲದಿರಬಹುದಾದರೂ, ಅವನ ಬಳಿ ಎಷ್ಟಿದೆಯೋ ಅದನ್ನು ಅಗತ್ಯದಲ್ಲಿರುವ ಒಬ್ಬ ಸಹೋದರನಿಗೆ ಉದಾರವಾಗಿ ಕೊಡಸಾಧ್ಯವಿರಲೂಬಹುದು.​—⁠ಕೀರ್ತನೆ 37:21.

ಸಾ.ಶ. ಪ್ರಥಮ ಶತಮಾನದಲ್ಲಿ, ಕ್ಷಾಮದ ಕಾರಣದಿಂದಾಗಿ ಯೂದಾಯ ಸೀಮೆಯಲ್ಲಿದ್ದ ಸಹೋದರರಿಗೆ ಏಷ್ಯ ಮೈನರ್‌ನಲ್ಲಿರುವ ಕ್ರೈಸ್ತರು ನೀಡಿದ ಕಾಣಿಕೆಗಳನ್ನು ಕೊಂಡೊಯ್ಯುವಂತೆ ಅಪೊಸ್ತಲ ಪೌಲನನ್ನೂ ಬಾರ್ನಬನನ್ನೂ ನೇಮಿಸಲಾಯಿತು. (ಅ. ಕೃತ್ಯಗಳು 11:28-30) ತದ್ರೀತಿಯಲ್ಲಿ ಇಂದು, ವಿಪತ್ತು ಬಂದೆರಗುವಾಗ ಕ್ರೈಸ್ತರು ಅನೇಕವೇಳೆ ಅಗತ್ಯದಲ್ಲಿರುವ ತಮ್ಮ ಸಹೋದರರಿಗೆ ದಾನಗಳನ್ನು ಕಳುಹಿಸುತ್ತಾರೆ. ಹೀಗೆ ಮಾಡುವ ಮೂಲಕ ಅವರು ಇತರರಿಗೂ ಅತ್ಯುತ್ತಮ ಸಾಕ್ಷಿಯನ್ನು ಕೊಡುತ್ತಾರೆ. (ಮತ್ತಾಯ 5:16) ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವಂಥ ವ್ಯಕ್ತಿಯ ಮನೋಭಾವ ಮತ್ತು ಸನ್ನಿವೇಶವನ್ನೂ ಪರಿಗಣಿಸಬೇಕು ಎಂಬುದಂತೂ ನಿಶ್ಚಯ. ಅವನು ಏಕೆ ಅಗತ್ಯದಲ್ಲಿದ್ದಾನೆ? ಈ ವಿಷಯದಲ್ಲಿ ಪೌಲನ ಮಾತುಗಳು ಗಮನಾರ್ಹವಾಗಿವೆ: ‘ಕೆಲಸಮಾಡಲೊಲ್ಲದವನು ಊಟಮಾಡಬಾರದು.’​—⁠2 ಥೆಸಲೋನಿಕ 3:10.

ಸಾಲವನ್ನು ಕೇಳುತ್ತಿರುವ ಒಬ್ಬ ಸಹೋದರನು ಸಂಕಷ್ಟದಲ್ಲಿ ಇಲ್ಲದಿರುವುದಾದರೂ, ಯಾವುದೋ ಆರ್ಥಿಕ ಬಿಕ್ಕಟ್ಟಿನ ಬಳಿಕ ಪುನಃ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲಿಕ್ಕಾಗಿ ತಾತ್ಕಾಲಿಕ ಸಹಾಯವನ್ನು ಮಾತ್ರವೇ ಬಯಸುವಲ್ಲಿ, ಅವನಿಗೆ ಬಡ್ಡಿರಹಿತ ಸಾಲವನ್ನು ಕೊಡುವುದು ಸೂಕ್ತವಾದದ್ದಾಗಿ ಕಂಡುಬರಬಹುದು. ಇಂಥ ಸನ್ನಿವೇಶದ ಕೆಳಗೆ, ಪೂರ್ಣ ರೀತಿಯಲ್ಲಿ ಹಿಂದಿರುಗಿಸುವ ಉದ್ದೇಶದಿಂದ ಸಾಲವನ್ನು ಮಾಡುವುದು, ಲೂಕ 6:35ರಲ್ಲಿ ಕಂಡುಬರುವ ಯೇಸುವಿನ ಮಾತುಗಳಿಗೆ ವಿರುದ್ಧವಾಗಿ ಕಾರ್ಯನಡಿಸುವುದಾಗಿರುವುದಿಲ್ಲ. ಇಂಥ ಸನ್ನಿವೇಶದಲ್ಲಿ, ಲಿಖಿತ ರೂಪದಲ್ಲಿ ಒಂದು ಒಪ್ಪಂದವನ್ನು ಮಾಡಿಕೊಳ್ಳಬೇಕು, ಮತ್ತು ಒಪ್ಪಂದಮಾಡಿಕೊಂಡ ಕಾಲಾವಧಿಗಳಿಗನುಸಾರ ಸಾಲವನ್ನು ಹಿಂದಿರುಗಿಸಲು ಸಕಲ ಪ್ರಯತ್ನವನ್ನೂ ಮಾಡಬೇಕು. ವಾಸ್ತವದಲ್ಲಿ, ಹೇಗೆ ಸಾಲವನ್ನು ಕೊಡುವಂತೆ ಪ್ರೀತಿಯು ಒಬ್ಬ ವ್ಯಕ್ತಿಯನ್ನು ಪ್ರಚೋದಿಸಿತೋ ಹಾಗೆಯೇ ಸಾಲವನ್ನು ಹಿಂದಿರುಗಿಸುವಂತೆ ಕ್ರೈಸ್ತ ಪ್ರೀತಿಯು ಸಾಲಗಾರನನ್ನು ಹುರಿದುಂಬಿಸಬೇಕು.

ಸಾಲವನ್ನು ಕೊಡುವಂಥ (ಅಥವಾ ಉದಾರವಾಗಿ ಕೊಡುವಂಥ) ವ್ಯಕ್ತಿಯು ತನ್ನ ಸ್ವಂತ ಕುಟುಂಬ ಸನ್ನಿವೇಶವನ್ನೂ ಪರಿಶೀಲಿಸುವ ಅಗತ್ಯವಿದೆ. ಉದಾಹರಣೆಗೆ, ಒಂದುವೇಳೆ ಅವನು ಸಾಲವನ್ನು ಕೊಡುವುದಾದರೆ, ಅವನ ಕುಟುಂಬ ಸದಸ್ಯರ ಆವಶ್ಯಕತೆಗಳನ್ನು ಪೂರೈಸುವ ಶಾಸ್ತ್ರೀಯ ಆದ್ಯತೆಯನ್ನು ನೆರವೇರಿಸುವುದರ ಕಡೆಗಿನ ಅವನ ಸಾಮರ್ಥ್ಯವು ಅಪಾಯಕ್ಕೆ ಗುರಿಯಾಗಬಹುದೋ? (2 ಕೊರಿಂಥ 8:12; 1 ತಿಮೊಥೆಯ 5:8) ಆದರೂ, ಕ್ರೈಸ್ತರು ಪರಸ್ಪರ ಪ್ರೀತಿಯನ್ನು ತೋರಿಸುವ ಸದವಕಾಶಗಳಿಗಾಗಿ ಎದುರುನೋಡುತ್ತಾರೆ ಮತ್ತು ಈ ರೀತಿಯ ಪ್ರೀತಿಯನ್ನು ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರುವ ಪ್ರಾಯೋಗಿಕ ವಿಧಗಳಲ್ಲಿ ವ್ಯಕ್ತಪಡಿಸುತ್ತಾರೆ.​—⁠ಯಾಕೋಬ 1:27; 1 ಯೋಹಾನ 3:18; 4:7-11.

[ಪಾದಟಿಪ್ಪಣಿ]

^ ಪ್ಯಾರ. 3 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.