ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸತ್ಯದೇವರೂ ನಿತ್ಯಜೀವವೂ” ಯಾರು?

“ಸತ್ಯದೇವರೂ ನಿತ್ಯಜೀವವೂ” ಯಾರು?

“ಸತ್ಯದೇವರೂ ನಿತ್ಯಜೀವವೂ” ಯಾರು?

ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ಯೆಹೋವನು ಸತ್ಯ ದೇವರಾಗಿದ್ದಾನೆ. ಆತನು ಸೃಷ್ಟಿಕರ್ತನೂ ತನ್ನನ್ನು ಪ್ರೀತಿಸುವವರಿಗೆ ನಿತ್ಯಜೀವವನ್ನು ನೀಡುವವನೂ ಆಗಿದ್ದಾನೆ. ಬೈಬಲನ್ನು ಓದುವ ಮತ್ತು ಅದರಲ್ಲಿ ನಂಬಿಕೆಯನ್ನಿಡುವ ಅನೇಕರು, ಈ ಲೇಖನದ ಶೀರ್ಷಿಕೆಯಲ್ಲಿ ಕೇಳಲ್ಪಟ್ಟಿರುವ ಪ್ರಶ್ನೆಗೆ ಈ ರೀತಿ ಉತ್ತರಿಸುತ್ತಾರೆ. ವಾಸ್ತವದಲ್ಲಿ ಯೇಸು ತಾನೇ ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಓರೆ ಅಕ್ಷರಗಳು ನಮ್ಮವು.)​—⁠ಯೋಹಾನ 17:⁠3.

ಹಾಗಿದ್ದರೂ, ಚರ್ಚಿಗೆ ಹೋಗುವ ಅನೇಕರು ಈ ಅಭಿವ್ಯಕ್ತಿಗೆ ಬೇರೆ ರೀತಿಯ ಅರ್ಥನಿರೂಪಣೆಯನ್ನು ಕೊಡುತ್ತಾರೆ. ಶೀರ್ಷಿಕೆಯಲ್ಲಿರುವ ಪದಗಳು 1 ಯೋಹಾನ 5:20ರಿಂದ ತೆಗೆಯಲ್ಪಟ್ಟವುಗಳಾಗಿವೆ. ಆ ವಚನವು ಭಾಗಶಃ ಹೀಗೆ ತಿಳಿಸುತ್ತದೆ: “ನಾವು ದೇವರ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ.”

ತ್ರಯೈಕ್ಯ ಸಿದ್ಧಾಂತದಲ್ಲಿ ನಂಬಿಕೆಯಿಡುವವರು, ಇಲ್ಲಿ ತಿಳಿಸಿದ “ಆತನು” (ಹೌಟಸ್‌) ಎಂಬ ನಿರ್ದೇಶಕ ಸರ್ವನಾಮವನ್ನು ಆ ಪದದ ಮುಂಚಿನ ವಾಕ್ಯದಲ್ಲಿರುವ ವ್ಯಕ್ತಿಗೆ, ಅಂದರೆ ಯೇಸು ಕ್ರಿಸ್ತನಿಗೆ ಸೂಚಿಸುತ್ತಾರೆ. ಯೇಸು ಕ್ರಿಸ್ತನು, “ಸತ್ಯದೇವರೂ ನಿತ್ಯಜೀವವೂ” ಆಗಿದ್ದಾನೆ ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ, ಈ ಅರ್ಥವಿವರಣೆಯು ಇತರ ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿಲ್ಲ. ಅಷ್ಟುಮಾತ್ರವಲ್ಲದೆ, ಅಧಿಕಾರವುಳ್ಳ ಅನೇಕ ವಿದ್ವಾಂಸರು ಸಹ ತ್ರಯೈಕ್ಯದಲ್ಲಿ ನಂಬಿಕೆಯಿಡುವವರ ಈ ದೃಷ್ಟಿಕೋನವನ್ನು ಸ್ವೀಕರಿಸುವುದಿಲ್ಲ. ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ವಿದ್ವಾಂಸರಾದ ಬಿ. ಎಫ್‌. ವೆಸ್‌ಕಾಟ್‌ ಬರೆದದ್ದು: “[ಹೌಟಸ್‌ ಎಂಬ ಸರ್ವನಾಮವನ್ನು] ಸಾಮಾನ್ಯವಾಗಿ ಅದರ ಹಿಂದಿರುವ ಒಂದು ವಿಷಯವಸ್ತುವಿಗೆ ಸೂಚಿಸಲಾಗುವುದಿಲ್ಲ, ಬದಲಾಗಿ ಅಪೊಸ್ತಲನ ಮನಸ್ಸಿನಲ್ಲಿ ಮುಖ್ಯವಾಗಿ ಯಾವ ವಿಷಯವಸ್ತುವಿತ್ತೋ ಅದಕ್ಕೆ ಸೂಚಿಸಲಾಗುತ್ತದೆ.” ಹೀಗೆ, ಅಪೊಸ್ತಲ ಯೋಹಾನನ ಮನಸ್ಸಿನಲ್ಲಿದ್ದದ್ದು ಯೇಸುವಿನ ತಂದೆಯೇ. ಜರ್ಮನಿಯ ತತ್ತ್ವಜ್ಞಾನಿಯಾದ ಎರಿಕ್‌ ಹಾಪ್ಟ್‌ ಬರೆದದ್ದು: “ಮುಂದಿನ ಹೇಳಿಕೆಯಲ್ಲಿನ [ಹೌಟಸ್‌], ಅದರ ಹಿಂದಿರುವ ವಿಷಯವಸ್ತುವಿಗೆ ಸೂಚಿಸುತ್ತದೊ . . . ಅಥವಾ ಈ ಹಿಂದೆ ಚರ್ಚಿಸಲ್ಪಟ್ಟಿರುವ ವಿಚಾರವಾದ ದೇವರಿಗೆ ಸೂಚಿಸುತ್ತದೊ ಎಂಬುದನ್ನು ನಿರ್ಧರಿಸಬೇಕು. . . . ಈ ವಚನವನ್ನು ಅರ್ಥಮಾಡಿಕೊಳ್ಳುವಾಗ ಇದು, ಕ್ರಿಸ್ತನು ದೇವರು ಎಂಬುದಕ್ಕೆ ಸೂಚಿತವಾಗಿರದೆ ಒಬ್ಬನೇ ಸತ್ಯ ದೇವರಿಗೆ ಸೂಚಿತವಾಗಿದೆ ಎಂಬುದು ರುಜುವಾಗುತ್ತದೆ. ಏಕೆಂದರೆ, ವಿಗ್ರಹಕ್ಕೆ ದೂರವಾಗಿರುವಂತೆ ಅಂತಿಮವಾಗಿ ಕೊಡಲ್ಪಟ್ಟಿರುವ ಎಚ್ಚರಿಕೆಗೆ ಇದು ಹೊಂದಿಕೆಯಲ್ಲಿದೆ.”

ರೋಮ್‌ನಲ್ಲಿರುವ ಪಾಂಟಿಫಿಕಲ್‌ ಬಿಬ್ಲಿಕಲ್‌ ಇನ್ಸ್‌ಟಿಟ್ಯೂಟ್‌ನಿಂದ ಪ್ರಕಟಮಾಡಲ್ಪಟ್ಟಿರುವ ಎ ಗ್ರಮ್ಯಾಟಿಕಲ್‌ ಎನಾಲಿಸಿಸ್‌ ಆಫ್‌ ಗ್ರೀಕ್‌ ನ್ಯೂ ಟೆಸ್ಟಮೆಂಟ್‌ ಸಹ ಹೀಗೆ ತಿಳಿಸುತ್ತದೆ: “[ಹೌಟಸ್‌]: 18-20ನೆಯ ವಚನಗಳ ಅಂತ್ಯದಲ್ಲಿರುವ ಈ ಪದವು, ನಿಶ್ಚಯವಾಗಿಯೂ ಬಹುಮಟ್ಟಿಗೆ ವಿಧರ್ಮಿ ದೇವರುಗಳಿಗೆ ವಿರುದ್ಧವಾಗಿರುವ (ವಚನ 21) ನಿಜವಾದ ಮತ್ತು ಸತ್ಯವಂತನಾದ ದೇವರಿಗೆ ಸೂಚಿತವಾಗಿದೆ.”

“ಇದು” ಅಥವಾ “ಆತನು” ಎಂದು ಸಾಮಾನ್ಯವಾಗಿ ಭಾಷಾಂತರಿಸಿರುವ ಪದವಾದ ಹೌಟಸ್‌ ಅನೇಕವೇಳೆ ಅದರ ಹಿಂದಿರುವ ವಾಕ್ಯದ ವಿಷಯವಸ್ತುವನ್ನು ಸೂಚಿಸುವುದಿಲ್ಲ.

ಲೂಕನು ಸಹ ಅಪೊಸ್ತಲರ ಕೃತ್ಯಗಳು 4:​10, 11ರಲ್ಲಿ ಇದೇ ಸರ್ವನಾಮವನ್ನು ಉಪಯೋಗಿಸುತ್ತಾನೆ: “ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ನಿಮ್ಮೆದುರಿನಲ್ಲಿ ಸ್ವಸ್ಥನಾಗಿ ನಿಂತಿರುತ್ತಾನೆ. ಮನೆಕಟ್ಟುವವರಾದ ನೀವು ಹೀನೈಸಿದ ಕಲ್ಲು ಆತನು [ಹೌಟಸ್‌]; ಆತನೇ ಮುಖ್ಯವಾದ ಮೂಲೆಗಲ್ಲಾದನು.” ಇಲ್ಲಿ ಉಪಯೋಗಿಸಿರುವ “ಆತನು” ಎಂಬ ಸರ್ವನಾಮಕ್ಕೆ ಮುಂಚೆ, ಗುಣಪಡಿಸಲ್ಪಟ್ಟ ವ್ಯಕ್ತಿಯ ಕುರಿತು ಉಲ್ಲೇಖಿಸಿರುವುದಾದರೂ, ಆ ಸರ್ವನಾಮವು ಅವನನ್ನು ಸೂಚಿಸುವುದಿಲ್ಲ. ವಚನ 11ರಲ್ಲಿರುವ “ಆತನು” ಎಂಬ ಪದವು, ಕ್ರೈಸ್ತ ಸಭೆಯು ಯಾವುದರ ಮೇಲೆ ಕಟ್ಟಲ್ಪಟ್ಟಿತೋ ಆ “ಮೂಲೆಗಲ್ಲಾದ” ನಜರೇತಿನ ಯೇಸು ಕ್ರಿಸ್ತನನ್ನು ಸೂಚಿಸುತ್ತದೆ.​—⁠ಎಫೆಸ 2:20; 1 ಪೇತ್ರ 2:​4-8.

ಈ ವೃತ್ತಾಂತವು, ಗ್ರೀಕ್‌ ವಿದ್ವಾಂಸನಾದ ಡ್ಯಾನಿಯೆಲ್‌ ವಾಲೇಸ್‌ನಿಂದ ಗಮನಿಸಲ್ಪಟ್ಟ ವಿಷಯವನ್ನು ರುಜುಪಡಿಸುತ್ತದೆ. ಗ್ರೀಕ್‌ ನಿರ್ದೇಶಕ ಸರ್ವನಾಮವನ್ನು ಉಪಯೋಗಿಸುವಾಗ “ನಿರ್ದಿಷ್ಟ ಬರಹದ ಪೂರ್ವಾಪರಕ್ಕೆ ಹತ್ತಿರವಾಗಿರುವ ಪೂರ್ವಭಾವಿಪದವು, ಬರಹಗಾರನ ಮನಸ್ಸಿನಲ್ಲಿರುವ ಪೂರ್ವಭಾವಿಪದವಾಗಿ ಇರಲಿಕ್ಕಿಲ್ಲ.”

‘ಸತ್ಯವಾಗಿರುವಾತನು’

ಅಪೊಸ್ತಲ ಯೋಹಾನನು ಬರೆದಂತೆ ‘ಸತ್ಯವಾಗಿರುವಾತನು,’ ಯೇಸು ಕ್ರಿಸ್ತನ ತಂದೆಯಾದ ಯೆಹೋವನೇ ಆಗಿದ್ದಾನೆ. ಆತನೊಬ್ಬನೇ ಸೃಷ್ಟಿಕರ್ತನಾದ ಸತ್ಯ ದೇವರು. ಅಪೊಸ್ತಲ ಪೌಲನು ಇದನ್ನು ಒಪ್ಪಿಕೊಂಡನು: “ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು.” (1 ಕೊರಿಂಥ 8:6; ಯೆಶಾಯ 42:8) 1 ಯೋಹಾನ 5:20ರಲ್ಲಿ ತಿಳಿಸಿದ ‘ಸತ್ಯವಾಗಿರುವಾತನು’ ಯೆಹೋವನೇ ಎಂಬುದಕ್ಕೆ ಇನ್ನೊಂದು ಕಾರಣವು, ಆತನು ಸತ್ಯದ ಮೂಲನಾಗಿದ್ದಾನೆ. ಕೀರ್ತನೆಗಾರನು, ಯೆಹೋವನನ್ನು ‘ನಂಬಿಕೆಯುಳ್ಳ [“ಸತ್ಯದ,” NW] ದೇವರು’ ಎಂದು ಕರೆದನು, ಏಕೆಂದರೆ ತಾನು ಮಾಡುವ ಪ್ರತಿಯೊಂದು ವಿಷಯದಲ್ಲಿಯೂ ಯೆಹೋವನು ನಂಬಿಕೆಗೆ ಅರ್ಹನಾಗಿದ್ದಾನೆ ಮತ್ತು ಸತ್ಯವಂತನಾಗಿದ್ದಾನೆ. (ಕೀರ್ತನೆ 31:5; ವಿಮೋಚನಕಾಂಡ 34:6; ತೀತ 1:​1-4) ತನ್ನ ಸ್ವರ್ಗೀಯ ತಂದೆಗೆ ಸೂಚಿಸುತ್ತಾ ಮಗನು ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.” ತನ್ನ ಸ್ವಂತ ಬೋಧನೆಗಳ ಕುರಿತಾಗಿ ಯೇಸು ಹೇಳಿದ್ದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು.”​—⁠ಯೋಹಾನ 7:16; 17:17.

ಯೆಹೋವನು “ನಿತ್ಯಜೀವವೂ” ಆಗಿದ್ದಾನೆ. ಆತನು ಜೀವದ ಮೂಲನಾಗಿದ್ದಾನೆ. ಕ್ರಿಸ್ತನ ಮೂಲಕ ಒಂದು ಅಪಾತ್ರ ವರದಾನವಾಗಿ ಜೀವವನ್ನು ಆತನು ನಮಗೆ ನೀಡುವವನಾಗಿದ್ದಾನೆ. (ಕೀರ್ತನೆ 36:9; ರೋಮಾಪುರ 6:23) ಗಮನಾರ್ಹವಾಗಿಯೇ, ದೇವರು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ಅಪೊಸ್ತಲ ಪೌಲನು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಇಬ್ರಿಯ 11:⁠6) ಸತ್ತವರೊಳಗಿಂದ ಎಬ್ಬಿಸುವ ಮೂಲಕ ದೇವರು ತನ್ನ ಮಗನಿಗೆ ಪ್ರತಿಫಲವನ್ನು ನೀಡಿದನು, ಮತ್ತು ತನ್ನನ್ನು ಹೃದಯಾಳದಿಂದ ಸೇವಿಸುವವರಿಗೆ ನಿತ್ಯಜೀವದ ಪ್ರತಿಫಲವನ್ನು ತಂದೆಯು ನೀಡಲಿದ್ದಾನೆ.​—⁠ಅ. ಕೃತ್ಯಗಳು 26:23; 2 ಕೊರಿಂಥ 1:⁠9.

ಆದುದರಿಂದ, ನಾವು ಈಗ ಯಾವ ತೀರ್ಮಾನಕ್ಕೆ ಬರಬೇಕು? “ಸತ್ಯದೇವರೂ ನಿತ್ಯಜೀವವೂ” ಯೆಹೋವನೇ ಆಗಿದ್ದಾನೆ, ಬೇರೆ ಯಾರೂ ಅಲ್ಲ. ತನ್ನ ಸೃಷ್ಟಿಜೀವಿಗಳಿಂದ ಅನನ್ಯ ಭಕ್ತಿಯನ್ನು ಪಡೆದುಕೊಳ್ಳಲು ಆತನೊಬ್ಬನೇ ಅರ್ಹನಾಗಿದ್ದಾನೆ.​—⁠ಪ್ರಕಟನೆ 4:11.