ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ನಾಯಕತ್ವಕ್ಕಾಗಿ ಅನ್ವೇಷಣೆ

ಒಳ್ಳೇ ನಾಯಕತ್ವಕ್ಕಾಗಿ ಅನ್ವೇಷಣೆ

ಒಳ್ಳೇ ನಾಯಕತ್ವಕ್ಕಾಗಿ ಅನ್ವೇಷಣೆ

“ತೊಲಗಿಹೋಗು, ಇನ್ನು ಮುಂದೆ ನಮಗೆ ನಿನ್ನೊಂದಿಗೆ ಯಾವ ಸಂಪರ್ಕವೂ ಇಲ್ಲದಿರಲಿ. ಇಲ್ಲಿಂದ ತೊಲಗು! ದೇವರ ಹೆಸರಿನಲ್ಲಿ ಬೇಡಿಕೊಳ್ಳುತ್ತೇನೆ, ಇಲ್ಲಿಂದ ಹೊರಟುಹೋಗು!”​—⁠ಆಲಿವರ್‌ ಕ್ರೋಮ್‌ವೆಲ್‌; ಬ್ರಿಟಿಷ್‌ ಪಾರ್ಲಿಮೆಂಟ್‌ನ ಸದಸ್ಯರಾದ ಲೀಅಪೋಲ್ಡ್‌ ಏಮರೀಯವರಿಂದ ಉದ್ಧರಿಸಲ್ಪಟ್ಟ ಮಾತು.

ಎರಡನೇ ಲೋಕ ಯುದ್ಧವು ಎಂಟು ತಿಂಗಳುಗಳಿಂದ ತನ್ನ ನಾಶಕಾರಕ ಶಕ್ತಿಯನ್ನು ತೋರಿಸುತ್ತಾ ಇತ್ತು, ಮತ್ತು ಬ್ರಿಟನ್‌ ಹಾಗೂ ಅದರ ಮಿತ್ರ ರಾಷ್ಟ್ರಗಳು ಯುದ್ಧದಲ್ಲಿ ಸೋಲನ್ನಪ್ಪುವಂತೆ ತೋರುತ್ತಿತ್ತು. ಲೀಅಪೋಲ್ಡ್‌ ಏಮರೀ ಮತ್ತು ಸರಕಾರದಲ್ಲಿದ್ದ ಇತರರಿಗೆ ನಾಯಕತ್ವದಲ್ಲಿ ಒಂದು ಬದಲಾವಣೆಯ ಅಗತ್ಯವಿತ್ತು. ಆದುದರಿಂದ, 1940ರ ಮೇ 7ರಂದು ಶ್ರೀಮಾನ್‌ ಏಮರೀಯವರು ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಈ ಮೇಲಿನ ಮಾತುಗಳನ್ನು ಪ್ರಧಾನ ಮಂತ್ರಿ ನೆವಿಲ್‌ ಚೇಮ್‌ಬರ್ಲಿನ್‌ರವರಿಗೆ ಉದ್ಧರಿಸಿದರು. ಮೂರು ದಿನಗಳ ಅನಂತರ, ಶ್ರೀಮಾನ್‌ ಚೇಮ್‌ಬರ್ಲಿನ್‌ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು ಮತ್ತು ವಿನ್‌ಸ್ಟನ್‌ ಚರ್ಚಿಲರು ಆ ಸ್ಥಾನವನ್ನು ಸ್ವೀಕರಿಸಿದರು.

ನಾಯಕತ್ವವು ಮಾನವಕುಲದ ಒಂದು ಮೂಲಭೂತ ಆವಶ್ಯಕತೆಯಾಗಿದೆ, ಆದರೆ ಯಾವುದೋ ಒಂದು ರೀತಿಯ ನಾಯಕತ್ವವಿದ್ದರೆ ಸಾಕಾಗದು. ಕುಟುಂಬದಲ್ಲಿ ಕೂಡ, ಹೆಂಡತಿ ಮಕ್ಕಳು ಸಂತೋಷದಿಂದಿರಬೇಕಾದರೆ ತಂದೆಯು ಸರಿಯಾದ ರೀತಿಯಲ್ಲಿ ಮುಂದಾಳುತ್ವವನ್ನು ವಹಿಸಲು ಶಕ್ತನಾಗಿರಬೇಕು. ಹೀಗಿರುವಾಗ, ರಾಷ್ಟ್ರದ ಅಥವಾ ಲೋಕದ ನಾಯಕರಿಂದ ಅಪೇಕ್ಷಿಸಲ್ಪಡುವ ವಿಷಯಗಳ ಕುರಿತಾಗಿ ತುಸು ಆಲೋಚಿಸಿರಿ! ನಿಜವಾಗಿಯೂ ಒಬ್ಬ ಉತ್ತಮ ನಾಯಕನನ್ನು ಕಂಡುಕೊಳ್ಳುವುದು ಅತಿ ಕಷ್ಟಕರ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಸಾವಿರಾರು ವರುಷಗಳಿಂದ ಅಸಂಖ್ಯಾತ ಪಟ್ಟಾಭಿಷೇಕಗಳು, ದಂಗೆಗಳು, ರಾಷ್ಟ್ರಕ್ರಾಂತಿಗಳು, ನೇಮಕಗಳು, ಚುನಾವಣೆಗಳು, ಹತ್ಯೆಗಳು, ಮತ್ತು ಆಡಳಿತದ ಬದಲಾವಣೆಗಳು ಸಂಭವಿಸಿವೆ. ರಾಜರು, ಪ್ರಧಾನ ಮಂತ್ರಿಗಳು, ಪ್ರಭುಗಳು, ಅಧ್ಯಕ್ಷರು, ಪ್ರಧಾನ ಸಚಿವರು, ಮತ್ತು ನಿರಂಕುಶ ಪ್ರಭುಗಳು ಆಗಿಂದಾಗ್ಗೆ ಅಧಿಕಾರದ ಗದ್ದುಗೆಯನ್ನು ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಎದುರುನೋಡದಂಥ ಬದಲಾವಣೆಗಳು, ಪ್ರಭಾವಶಾಲಿ ಅಧಿಕಾರಿಗಳನ್ನು ಸಹ ಸ್ಥಾನದಿಂದ ಕೆಳಗಿಳಿಸಿವೆ. (5ನೆಯ ಪುಟದಲ್ಲಿರುವ “ಇದ್ದಕ್ಕಿದ್ದಂತೆ ಅಧಿಕಾರವನ್ನು ಕಳೆದುಕೊಳ್ಳುವುದು” ಎಂಬ ಚೌಕವನ್ನು ನೋಡಿ.) ಹಾಗಿದ್ದರೂ, ಯೋಗ್ಯವಾದ ಮತ್ತು ಬಾಳಿಕೆಬರುವ ನಾಯಕತ್ವವನ್ನು ಕಂಡುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ.

“ಇರುವವರಲ್ಲಿಯೇ ತೃಪ್ತರಾಗಬೇಕು”​—⁠ಇಲ್ಲದಿದ್ದರೆ ಬೇರೆ ದಾರಿಯಿದೆಯೇ?

ಆದುದರಿಂದ, ಒಳ್ಳೇ ನಾಯಕತ್ವವನ್ನು ಕಂಡುಕೊಳ್ಳುವ ವಿಷಯದಲ್ಲಿ ಅನೇಕರು ನಿರೀಕ್ಷೆಯನ್ನೇ ಕಳೆದುಕೊಂಡಿದ್ದಾರೆ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಕೆಲವು ದೇಶಗಳಲ್ಲಿ, ಜನರ ನಿರಾಸಕ್ತಿ ಮತ್ತು ನಿರೀಕ್ಷಾಹೀನತೆಯು ಚುನಾವಣೆಯ ಸಮಯದಲ್ಲಿ ಕಂಡುಬರುತ್ತದೆ. ಆಫ್ರಿಕದ ಪತ್ರಕರ್ತನಾದ ಜೆಫ್‌ ಹಿಲ್‌ ತಿಳಿಸುವುದು: “ತಮ್ಮ ಜೀವನದ ದುರವಸ್ಥೆಯನ್ನು ಬದಲಾಯಿಸುವುದು ಅಸಾಧ್ಯ ಎಂಬ ಅನಿಸಿಕೆ ಜನರಿಗಾದಾಗ, ನಿರಾಸಕ್ತಿ ಅಥವಾ [ಮತಹಾಕುವುದರಿಂದ] ದೂರವಿರುವುದು ಮುಂತಾದ ವಿಷಯಗಳು ಹೆಚ್ಚಾಗುತ್ತವೆ. . . . ಆಫ್ರಿಕದಲ್ಲಿ ಜನರು ಮತಹಾಕದಿದ್ದಾಗ, ಅದರ ಅರ್ಥ ಅವರು ಸಂತೃಪ್ತರಾಗಿದ್ದಾರೆ ಎಂದಲ್ಲ. ಬದಲಾಗಿ ಅದು ಅನೇಕವೇಳೆ, ತಮ್ಮ ಕುರಿತು ಯಾರೂ ಚಿಂತಿಸುವುದಿಲ್ಲ ಎಂಬುದಾಗಿ ನೆನಸುವ ಜನರು ಸಹಾಯಕ್ಕಾಗಿ ಅಂಗಲಾಚುವ ಒಂದು ಕರೆಯಾಗಿರುತ್ತದೆ.” ಅದೇ ರೀತಿಯಲ್ಲಿ, ಸನ್ನಿಹಿತವಾಗಿದ್ದ ಒಂದು ಚುನಾವಣೆಯ ಕುರಿತು ಅಮೆರಿಕದ ಒಂದು ವಾರ್ತಾಪತ್ರಿಕೆಯ ವರದಿಗಾರನು ತಿಳಿಸುವುದು: “ಪರಿಪೂರ್ಣ ಅಭ್ಯರ್ಥಿಯೊಬ್ಬನು ಸ್ಪರ್ಧಿಸಬೇಕೆಂದು ನಾನು ಆಶಿಸುತ್ತೇನೆ. ಆದರೆ ಅಂಥ ಅಭ್ಯರ್ಥಿಯು ಇಲ್ಲವೇ ಇಲ್ಲ. ಮುಂದೆಂದಿಗೂ ಇರನು. ಆದುದರಿಂದ ಇರುವವರಲ್ಲಿಯೇ ತೃಪ್ತರಾಗಬೇಕು.”

ಹಾಗಾದರೆ, ಅಪರಿಪೂರ್ಣ ನಾಯಕರನ್ನು ಸಹಿಸಿಕೊಂಡು ಹೋಗುವುದನ್ನು ಬಿಟ್ಟರೆ ಮಾನವಕುಲಕ್ಕೆ ಬೇರೆ ಯಾವ ಆಯ್ಕೆಯೇ ಇಲ್ಲವೋ? ಮಾನವ ನಾಯಕರು ತಮ್ಮ ಪ್ರಜೆಗಳ ಅಗತ್ಯಗಳನ್ನು ಪೂರೈಸಲು ಅಶಕ್ತರಾಗಿದ್ದಾರೆ ಎಂಬ ನಿಜತ್ವವು, ಮುಂದೆಂದಿಗೂ ನಮಗೊಂದು ಒಳ್ಳೇ ನಾಯಕತ್ವವು ದೊರಕದೆಂಬುದಕ್ಕೆ ರುಜುವಾತಾಗಿದೆಯೋ? ಇಲ್ಲ. ಅತ್ಯುತ್ತಮ ನಾಯಕತ್ವವು ಲಭ್ಯವಿದೆ. ಮಾನವಕುಲದ ಆದರ್ಶ ನಾಯಕನು ಯಾರು ಮತ್ತು ಅವನ ಸೇವೆಯು, ನಿಮ್ಮನ್ನೂ ಸೇರಿಸಿ ಎಲ್ಲಾ ಹಿನ್ನೆಲೆಗಳ ಕೋಟ್ಯಂತರ ಜನರಿಗೆ ಹೇಗೆ ಪ್ರಯೋಜನವನ್ನು ತರಬಲ್ಲದು ಎಂಬುದನ್ನು ಮುಂದಿನ ಲೇಖನವು ಪರಿಗಣಿಸಲಿದೆ.

[ಪುಟ 3ರಲ್ಲಿರುವ ಚಿತ್ರಗಳು]

ಮೇಲೆ ಎಡಬದಿಯಲ್ಲಿ: ನೆವಿಲ್‌ ಚೇಮ್‌ಬರ್ಲಿನ್‌

ಮೇಲೆ ಬಲಬದಿಯಲ್ಲಿ: ಲೀಅಪೋಲ್ಡ್‌ ಏಮರೀ

ಕೆಳಗೆ: ವಿನ್‌ಸ್ಟನ್‌ ಚರ್ಚಿಲ್‌

[ಕೃಪೆ]

ಚೇಮ್‌ಬರ್ಲಿನ್‌: Photo by Jimmy Sime/Central Press/Getty Images; ಏಮರೀ: Photo by Kurt Hutton/Picture Post/Getty Images; ಚರ್ಚಿಲ್‌: The Trustees of the Imperial War Museum (MH 26392)