ದೇವರ ಆಳ್ವಿಕೆಯ ಪರವಾಗಿ ನಾವು ದೃಢನಿರ್ಧಾರವನ್ನು ಮಾಡಿದೆವು
ಜೀವನ ಕಥೆ
ದೇವರ ಆಳ್ವಿಕೆಯ ಪರವಾಗಿ ನಾವು ದೃಢನಿರ್ಧಾರವನ್ನು ಮಾಡಿದೆವು
ಮೀಕಾಲ್ ಸಾಬ್ರಾಕ್ ಅವರು ಹೇಳಿದಂತೆ
ಏಕಾಂತ ಸೆರೆವಾಸದಲ್ಲಿ ನಾನು ಒಂದು ತಿಂಗಳನ್ನು ಕಳೆದ ಬಳಿಕ, ವಿಚಾರಣೆ ನಡೆಸುವವನ ಮುಂದೆ ಎಳೆದೊಯ್ಯಲ್ಪಟ್ಟೆ. ಕೂಡಲೆ ಅವನು ಕೋಪಾವೇಶದಿಂದ, “ನೀವು ಗೂಢಚಾರರು! ಅಮೆರಿಕನ್ ಗೂಢಚಾರರು!” ಎಂದು ಕೂಗಾಡಿದನು. ಯಾವುದು ಅವನಿಗೆ ಇಷ್ಟು ಕೋಪೋದ್ರೇಕವನ್ನು ಉಂಟುಮಾಡಿತ್ತು? ಅವನು ನನಗೆ ‘ನೀನು ಯಾವ ಧರ್ಮದವನು’ ಎಂದು ಕೇಳಿದ್ದನು, ಅದಕ್ಕೆ ನಾನು “ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು” ಎಂದು ಉತ್ತರಿಸಿದ್ದೆ.
ಸುಮಾರು ಅರ್ಧ ಶತಮಾನಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಇದು ಸಂಭವಿಸಿತು. ಆ ಸಮಯದಲ್ಲಿ ನಾನು ವಾಸವಾಗಿದ್ದ ದೇಶವು ಕಮ್ಯೂನಿಸ್ಟ್ ಆಳ್ವಿಕೆಯ ಕೆಳಗಿತ್ತು. ಆದರೂ, ಅದಕ್ಕೆ ಮುಂಚೆ ನಾವು ನಮ್ಮ ಕ್ರೈಸ್ತ ಶೈಕ್ಷಣಿಕ ಕೆಲಸಕ್ಕೆ ತೀವ್ರವಾದ ವಿರೋಧವನ್ನು ಅನುಭವಿಸಿದ್ದೆವು.
ನಾವು ಯುದ್ಧದ ವೇದನಾಭರಿತ ಪರಿಣಾಮಗಳನ್ನು ಅನುಭವಿಸಿದ್ದು
ಇಸವಿ 1914ರಲ್ಲಿ Iನೆಯ ಲೋಕ ಯುದ್ಧವು ಆರಂಭಗೊಂಡಾಗ ನಾನು ಎಂಟು ವರ್ಷದವನಾಗಿದ್ದೆ. ಆ ಸಮಯದಲ್ಲಿ, ಸಾಲುಸೈಟ್ಸ ಎಂಬ ನನ್ನ ಹಳ್ಳಿಯು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ರಾಜಪ್ರಭುತ್ವಕ್ಕೆ ಅಧೀನವಾಗಿತ್ತು. ಯುದ್ಧವು ಲೋಕ ದೃಶ್ಯವನ್ನು ಅಸ್ತವ್ಯಸ್ತಗೊಳಿಸಿತು ಮಾತ್ರವಲ್ಲ, ನನ್ನ ಬಾಲ್ಯಾವಸ್ಥೆಯನ್ನು ಸಹ ಇದ್ದಕ್ಕಿದ್ದಂತೆ ಕೊನೆಗೊಳಿಸಿಬಿಟ್ಟಿತು. ಸೈನಿಕರಾಗಿದ್ದ ನನ್ನ ತಂದೆಯವರು ಯುದ್ಧದ ಮೊದಲ ವರ್ಷದಲ್ಲೇ ತೀರಿಕೊಂಡರು. ಇದು ನನ್ನನ್ನು, ನನ್ನ ತಾಯಿಯನ್ನು ಮತ್ತು ನನ್ನ ಇಬ್ಬರು ತಂಗಿಯರನ್ನು ಕಡುಬಡ ಸ್ಥಿತಿಗೆ ತಂದುಬಿಟ್ಟಿತು. ಮನೆಯಲ್ಲಿ ಹಿರಿಯ ಗಂಡುಮಗನಾಗಿದ್ದ ನಾನು, ನಮ್ಮ ಚಿಕ್ಕ ಜಮೀನಿನಲ್ಲಿ ಹಾಗೂ ಮನೆಯಲ್ಲಿ ಅನೇಕ ಜವಾಬ್ದಾರಿಗಳಿಗೆ ಹೆಗಲುಕೊಡಬೇಕಾದ ಹಂತವನ್ನು ತಲಪಿದ್ದೆ. ಚಿಕ್ಕ ಪ್ರಾಯದಿಂದಲೇ ನಾನು ತುಂಬ ಧಾರ್ಮಿಕ ಮನೋಭಾವದವನಾಗಿದ್ದೆ. ನಮ್ಮ ರಿಫಾರ್ಮ್ಡ್ (ಕ್ಯಾಲ್ವಿನಿಸ್ಟ್) ಚರ್ಚಿನ ಪಾದ್ರಿಯು, ಅವನಿಲ್ಲದಿದ್ದಾಗ ನನ್ನ ಸಹಪಾಠಿಗಳಿಗೆ ಪಾಠವನ್ನು ಕಲಿಸುವಂತೆಯೂ ನನ್ನನ್ನು ಕೇಳಿಕೊಳ್ಳುತ್ತಿದ್ದನು.
ಇಸವಿ 1918ರಲ್ಲಿ ಮಹಾ ಯುದ್ಧವು ಕೊನೆಗೊಂಡಿತು ಮತ್ತು ನಮಗೆ ತುಂಬ ಸಂತೋಷವಾಯಿತು. ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯವು ಉರುಳಿಸಲ್ಪಟ್ಟಿತು, ಮತ್ತು ನಾವು ರಿಪಬ್ಲಿಕ್ ಆಫ್ ಚೆಕಸ್ಲೊವಾಕಿಯದ ನಾಗರಿಕರಾಗಿ ಪರಿಣಮಿಸಿದೆವು. ಸ್ವಲ್ಪದರಲ್ಲೇ, ನಮ್ಮ ಕ್ಷೇತ್ರದಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆಹೋಗಿದ್ದ ಅನೇಕರು ಸ್ವದೇಶಕ್ಕೆ ಹಿಂದಿರುಗಿದರು. ಮೀಕಾಲ್ ಪೆಟ್‌ರೀಕ್‌ರವರು
ಇವರಲ್ಲಿ ಒಬ್ಬರಾಗಿದ್ದರು ಮತ್ತು ಅವರು 1922ರಲ್ಲಿ ನಮ್ಮ ಹಳ್ಳಿಗೆ ಬಂದರು. ನಮ್ಮ ನೆರೆಹೊರೆಯಲ್ಲಿದ್ದ ಒಂದು ಕುಟುಂಬವನ್ನು ಅವರು ಸಂದರ್ಶಿಸುತ್ತಿದ್ದಾಗ, ನನ್ನನ್ನು ಮತ್ತು ನನ್ನ ತಾಯಿಯನ್ನು ಸಹ ಅಲ್ಲಿಗೆ ಆಮಂತ್ರಿಸಲಾಗಿತ್ತು.ದೇವರ ಆಳ್ವಿಕೆಯು ನಮಗೆ ವಾಸ್ತವಿಕವಾಗಿ ಪರಿಣಮಿಸಿದ್ದು
ಮೀಕಾಲ್ ಒಬ್ಬ ಬೈಬಲ್ ವಿದ್ಯಾರ್ಥಿಯಾಗಿದ್ದರು—ಆಗ ಯೆಹೋವನ ಸಾಕ್ಷಿಗಳು ಈ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಅವರು ಪ್ರಾಮುಖ್ಯವಾದ ಬೈಬಲ್ ವಾದಾಂಶಗಳ ಕುರಿತು ಮಾತಾಡಿದ್ದು ನನ್ನ ಆಸಕ್ತಿಯನ್ನು ಕೆರಳಿಸಿತು. ಇವುಗಳಲ್ಲಿ ತುಂಬ ಅಗ್ರಗಣ್ಯವಾದದ್ದು, ಯೆಹೋವನ ರಾಜ್ಯದ ಬರೋಣವೇ ಆಗಿತ್ತು. (ದಾನಿಯೇಲ 2:44) ಮುಂದಿನ ಭಾನುವಾರ ಸಾಹಾರ್ ಎಂಬ ಹಳ್ಳಿಯಲ್ಲಿ ಒಂದು ಕ್ರೈಸ್ತ ಕೂಟವು ನಡೆಯಲಿದೆ ಎಂದು ಅವರು ಹೇಳಿದಾಗ, ನಾನು ಅಲ್ಲಿಗೆ ಹೋಗಲೇಬೇಕೆಂಬ ದೃಢನಿರ್ಧಾರವನ್ನು ಮಾಡಿದೆ. ನಾನು ಬೆಳಗ್ಗೆ 4 ಗಂಟೆಗೆ ಎದ್ದು, ಒಂದು ಸೈಕಲನ್ನು ಬಾಡಿಗೆಗೆ ಪಡೆಯಲಿಕ್ಕಾಗಿ ನನ್ನ ಸಂಬಂಧಿಕರ ಮನೆಗೆ ಹೋಗಲು ಸುಮಾರು 8 ಕಿಲೊಮೀಟರ್‌ಗಳಷ್ಟು ದೂರ ನಡೆದೆ. ಅದರ ಟಯರನ್ನು ರಿಪೇರಿಮಾಡಿದ ಬಳಿಕ 24 ಕಿಲೊಮೀಟರ್ ದೂರವಿದ್ದ ಸಾಹಾರ್‌ಗೆ ಪ್ರಯಾಣವನ್ನು ಮುಂದುವರಿಸಿದೆ. ಕೂಟವು ಎಲ್ಲಿ ನಡೆಯುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ, ಆದುದರಿಂದ ಅಲ್ಲಿನ ಬೀದಿಯೊಂದರಲ್ಲಿ ನಿಧಾನವಾಗಿ ಹೋಗುತ್ತಿದ್ದೆ. ಆಗ ಒಂದು ಮನೆಯಲ್ಲಿ ರಾಜ್ಯ ಗೀತೆಯು ಹಾಡಲ್ಪಡುತ್ತಿದ್ದದ್ದು ನನ್ನ ಕಿವಿಗೆ ಬಿತ್ತು. ನನ್ನ ಹೃದಯ ಉಲ್ಲಾಸದಿಂದ ಪುಟಿಯಿತು. ನಾನು ಆ ಮನೆಗೆ ಹೋಗಿ, ಅಲ್ಲಿಗೆ ಬರಲು ಕಾರಣವೇನೆಂದು ವಿವರಿಸಿದೆ. ಬೆಳಗ್ಗಿನ ಉಪಾಹಾರವನ್ನು ತಿನ್ನಲಿಕ್ಕಾಗಿ ಜೊತೆಗೂಡುವಂತೆ ಆ ಕುಟುಂಬವು ನನ್ನನ್ನು ಆಮಂತ್ರಿಸಿತು, ಬಳಿಕ ಅವರು ನನ್ನನ್ನು ಕೂಟಕ್ಕೆ ಕರೆದೊಯ್ದರು. ಪುನಃ ಮನೆಗೆ ಹಿಂದಿರುಗಲಿಕ್ಕಾಗಿ ನಾನು ಒಟ್ಟು 32 ಕಿಲೊಮೀಟರ್‌ಗಳಷ್ಟು ಪ್ರಯಾಣಿಸಬೇಕಾಗಿತ್ತಾದರೂ ನನಗೆ ಆಯಾಸದ ಅನಿಸಿಕೆಯೇ ಆಗಲಿಲ್ಲ.—ಯೆಶಾಯ 40:31.
ಯೆಹೋವನ ಸಾಕ್ಷಿಗಳಿಂದ ಕಲಿಸಲ್ಪಟ್ಟ ಸ್ಪಷ್ಟವಾದ ಬೈಬಲಾಧಾರಿತ ವಿವರಗಳು ನನಗೆ ತುಂಬ ಹಿಡಿಸಿದವು. ದೇವರ ಆಳ್ವಿಕೆಯ ಕೆಳಗೆ ಸಂಪೂರ್ಣವಾದ ಹಾಗೂ ಸಂತೃಪ್ತಿಕರವಾದ ಜೀವನದಲ್ಲಿ ಆನಂದಿಸುವ ಪ್ರತೀಕ್ಷೆಯು ನನ್ನ ಮೇಲೆ ಆಳವಾದ ಪ್ರಭಾವವನ್ನು ಬೀರಿತು. (ಕೀರ್ತನೆ 104:28) ನಾನು ಮತ್ತು ತಾಯಿಯವರು ನಮ್ಮ ಚರ್ಚಿಗೆ ಒಂದು ತ್ಯಾಗಪತ್ರವನ್ನು ಕೊಟ್ಟುಬಿಡಲು ನಿರ್ಧರಿಸಿದೆವು. ಇದು ನಮ್ಮ ಹಳ್ಳಿಯಲ್ಲಿ ಒಂದು ದೊಡ್ಡ ಕೋಲಾಹಲವನ್ನೇ ಎಬ್ಬಿಸಿತು. ಸ್ವಲ್ಪಕಾಲಾವಧಿಯ ವರೆಗೆ ಕೆಲವರು ನಮ್ಮೊಂದಿಗೆ ಮಾತಾಡುವುದನ್ನೇ ನಿಲ್ಲಿಸಿಬಿಟ್ಟರು, ಆದರೂ ನಮ್ಮ ಕ್ಷೇತ್ರದಲ್ಲಿದ್ದ ಅನೇಕ ಸಾಕ್ಷಿಗಳೊಂದಿಗೆ ನಾವು ಒಳ್ಳೇ ಸಹವಾಸದಲ್ಲಿ ಆನಂದಿಸಿದೆವು. (ಮತ್ತಾಯ 5:11, 12) ತದನಂತರ ಸ್ವಲ್ಪದರಲ್ಲೇ ನಾನು ಊ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.
ಶುಶ್ರೂಷೆಯು ನಮ್ಮ ಜೀವನಮಾರ್ಗವಾದದ್ದು
ನಾವು ಪ್ರತಿಯೊಂದು ಸಂದರ್ಭವನ್ನು ಯೆಹೋವನ ರಾಜ್ಯದ ಕುರಿತು ಸಾರಲಿಕ್ಕಾಗಿ ಉಪಯೋಗಿಸಿದೆವು. (ಮತ್ತಾಯ 24:14) ಭಾನುವಾರಗಳಂದು ಏರ್ಪಡಿಸಲ್ಪಡುತ್ತಿದ್ದ ಸುಸಂಘಟಿತ ಸಾರುವ ಕಾರ್ಯಾಚರಣೆಗಳ ಮೇಲೆ ನಾವು ವಿಶೇಷವಾಗಿ ಗಮನವನ್ನು ಕೇಂದ್ರೀಕರಿಸುತ್ತಿದ್ದೆವು. ಸಾಮಾನ್ಯವಾಗಿ ಆಗಿನ ಜನರು ಬೆಳಗ್ಗೆ ಬೇಗನೆ ಏಳುತ್ತಿದ್ದರು, ಆದುದರಿಂದ ನಾವು ಸಾಕಷ್ಟು ಬೇಗನೆ ಸಾರುವ ಕೆಲಸವನ್ನು ಆರಂಭಿಸಸಾಧ್ಯವಿತ್ತು. ಸಾರುವ ಕೆಲಸದ ಬಳಿಕ ಸಾರ್ವಜನಿಕ ಕೂಟದ ಏರ್ಪಾಡಿರುತ್ತಿತ್ತು. ಬೈಬಲ್ ಶಿಕ್ಷಕರು ಹೆಚ್ಚಾಗಿ ಆಶುಭಾಷಣದ ರೂಪದಲ್ಲಿ ಭಾಷಣವನ್ನು ಕೊಡುತ್ತಿದ್ದರು. ಅವರು ಆಸಕ್ತ ವ್ಯಕ್ತಿಗಳ ಸಂಖ್ಯೆ, ಅವರ ಧಾರ್ಮಿಕ ಹಿನ್ನೆಲೆ ಮತ್ತು ಅವರಿಗೆ ಆಸಕ್ತಿಕರವಾಗಿದ್ದ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದರು.
ನಾವು ಸಾರಿದ ಬೈಬಲ್ ಸತ್ಯಗಳು, ಅನೇಕ ಪ್ರಾಮಾಣಿಕ ಹೃದಯದ ಜನರಿಗೆ ಆಧ್ಯಾತ್ಮಿಕವಾಗಿ ಜ್ಞಾನೋದಯವನ್ನುಂಟುಮಾಡಿದವು. ನಾನು ದೀಕ್ಷಾಸ್ನಾನ ಪಡೆದ ಕೂಡಲೆ ಟ್ರಾವಿಷ್ಟದ ಹಳ್ಳಿಯಲ್ಲಿ ಸಾರುವಿಕೆಯನ್ನು ಆರಂಭಿಸಿದೆ. ನಾನು ಒಂದು ಮನೆಯಲ್ಲಿ, ದಯಾಭರಿತಳೂ ಸ್ನೇಹಪರಳೂ ಆಗಿದ್ದ ಶ್ರೀಮತಿ ಸೂಸನ ಮಾಸ್ಕಾಲ್ ಎಂಬ ಸ್ತ್ರೀಯೊಂದಿಗೆ ಮಾತಾಡಿದೆ. ಅವಳು ಹಾಗೂ ಅವಳ ಕುಟುಂಬದವರು ಕ್ಯಾಲ್ವಿನ್ ಪಂಥಕ್ಕೆ ಸೇರಿದವರಾಗಿದ್ದರು. ಅವಳು ಬೈಬಲಿನೊಂದಿಗೆ ಚಿರಪರಿಚಿತಳಾಗಿದ್ದಳಾದರೂ, ಉತ್ತರವನ್ನು ಪಡೆದುಕೊಳ್ಳಲು ಬಯಸುತ್ತಿದ್ದ ಅನೇಕ ಬೈಬಲ್ ಪ್ರಶ್ನೆಗಳು ಅವಳಿಗಿದ್ದವು. ನಾವು ಸುಮಾರು ಒಂದು ತಾಸು ಚರ್ಚೆಯನ್ನು ನಡೆಸಿದೆವು, ಮತ್ತು ನಾನು ದೇವರ ವೀಣೆ (ಇಂಗ್ಲಿಷ್) ಎಂಬ ಪುಸ್ತಕವನ್ನು ಅವಳಿಗೆ ನೀಡಿದೆ. *
ಆ ಕೂಡಲೆ ಮಾಸ್ಕಾಲ್ ಕುಟುಂಬವು ತಮ್ಮ ಕ್ರಮವಾದ ಬೈಬಲ್ ವಾಚನದೊಂದಿಗೆ ವೀಣೆ ಪುಸ್ತಕದ ವಾಚನವನ್ನೂ ಒಳಗೂಡಿಸಿತು. ಈ ಹಳ್ಳಿಯಲ್ಲಿದ್ದ ಇನ್ನೂ ಅನೇಕ ಕುಟುಂಬಗಳು ಆಸಕ್ತಿಯನ್ನು ತೋರಿಸಿದವು ಮತ್ತು ನಮ್ಮ ಕೂಟಗಳಿಗೆ ಹಾಜರಾಗಲಾರಂಭಿಸಿದವು. ಅವರ ಕ್ಯಾಲ್ವಿನಿಸ್ಟ್ ಪಾದ್ರಿಯು ನಮ್ಮ ವಿರುದ್ಧ ಹಾಗೂ ನಮ್ಮ ಸಾಹಿತ್ಯದ ವಿರುದ್ಧ ಜನರಿಗೆ ಕಟ್ಟೆಚ್ಚರಿಕೆಯನ್ನು ನೀಡಿದನು. ಆಗ ಆಸಕ್ತ ವ್ಯಕ್ತಿಗಳಲ್ಲಿ ಕೆಲವರು, ಆ ಪಾದ್ರಿಯು ನಮ್ಮ ಕೂಟಕ್ಕೆ ಬಂದು, ಒಂದು ಸಾರ್ವಜನಿಕ ಚರ್ಚಾಕೂಟದಲ್ಲಿ ನಮ್ಮ ಬೋಧನೆಗಳನ್ನು ತಪ್ಪೆಂದು ರುಜುಪಡಿಸುವಂತೆ ಸಲಹೆ ನೀಡಿದರು.
ಪಾದ್ರಿಯು ನಮ್ಮ ಕೂಟಕ್ಕೆ ಬಂದನು, ಆದರೆ ತನ್ನ ಬೋಧನೆಗಳನ್ನು ಬೆಂಬಲಿಸಲಿಕ್ಕಾಗಿ ಬೈಬಲಿನ ಸಹಾಯದಿಂದ ಒಂದೇ ಒಂದು ವಾಗ್ವಾದವನ್ನು ಪ್ರಸ್ತುತಪಡಿಸಲೂ ಅವನು ಶಕ್ತನಾಗಲಿಲ್ಲ. ತನ್ನದೇ ಸರಿಯೆಂದು ಸಮರ್ಥಿಸಲಿಕ್ಕಾಗಿ ಅವನು ಹೇಳಿದ್ದು: “ಬೈಬಲಿನಲ್ಲಿರುವ ಪ್ರತಿಯೊಂದನ್ನೂ ನಾವು ನಂಬಸಾಧ್ಯವಿಲ್ಲ. ಅದು ಮಾನವರಿಂದ ಬರೆಯಲ್ಪಟ್ಟಿದೆ, ಮತ್ತು ಧಾರ್ಮಿಕ ಪ್ರಶ್ನೆಗಳನ್ನು ಬೇರೆ ಬೇರೆ ವಿಧಗಳಲ್ಲಿ ವಿವರಿಸಸಾಧ್ಯವಿದೆ.” ಇದು ಅನೇಕರ ಜೀವನದಲ್ಲಿ ಒಂದು ತಿರುಗುಬಿಂದುವಾಗಿತ್ತು. ಆ ಪಾದ್ರಿಯೇ ಬೈಬಲಿನಲ್ಲಿ ನಂಬಿಕೆಯಿಡದಿರುವಲ್ಲಿ, ಇನ್ನೆಂದೂ ಅವನ ಪ್ರಸಂಗಗಳಿಗೆ ಕಿವಿಗೊಡಲು ತಾವು ಬರುವುದಿಲ್ಲ ಎಂದು ಕೆಲವರು ಅವನಿಗೆ ಹೇಳಿಬಿಟ್ಟರು. ಹೀಗೆ ಅವರು ಕ್ಯಾಲ್ವಿನಿಸ್ಟ್ ಚರ್ಚಿನೊಂದಿಗಿನ ತಮ್ಮ ಸದಸ್ಯತ್ವವನ್ನು ತ್ಯಜಿಸಿಬಿಟ್ಟರು, ಮತ್ತು ಆ ಹಳ್ಳಿಯಲ್ಲಿ ಸುಮಾರು 30 ಮಂದಿ ಬೈಬಲ್ ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಂಡರು.
ರಾಜ್ಯದ ಸುವಾರ್ತೆಯನ್ನು ಸಾರುವುದು ನಮ್ಮ ಜೀವನಮಾರ್ಗವಾಗಿ ಪರಿಣಮಿಸಿತು. ಆದುದರಿಂದ, ಸಹಜವಾಗಿಯೇ ನಾನು ಆಧ್ಯಾತ್ಮಿಕವಾಗಿ ಪ್ರಬಲವಾಗಿದ್ದ ಒಂದು ಕುಟುಂಬದಿಂದಲೇ ವಿವಾಹ ಸಂಗಾತಿಯನ್ನು ಪಡೆದುಕೊಳ್ಳುವ ಹುಡುಕಾಟದಲ್ಲಿದ್ದೆ. ಶುಶ್ರೂಷೆಯಲ್ಲಿ ನನ್ನೊಂದಿಗೆ ಕೆಲಸಮಾಡುತ್ತಿದ್ದವರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸತ್ಯವನ್ನು ಕಲಿತಿದ್ದ ಯಾನ್ ಪೆಟ್‌ರೂಷ್ಕಾ ಎಂಬವರು ಒಬ್ಬರಾಗಿದ್ದರು. ಅವರ ಮಗಳಾದ ಮಾರಿಯಳು ತನ್ನ ತಂದೆಯಂತೆಯೇ ಪ್ರತಿಯೊಬ್ಬರಿಗೂ ಸಾಕ್ಷಿಯನ್ನು ನೀಡಲು ತೋರಿಸುತ್ತಿದ್ದ ಸಿದ್ಧಮನಸ್ಸು ನನ್ನನ್ನು ಬಹಳವಾಗಿ ಪ್ರಭಾವಿಸಿತು. ಇಸವಿ 1936ರಲ್ಲಿ ನಾವು ವಿವಾಹವಾದೆವು, ಮತ್ತು ಮಾರಿಯಳು 50 ವರ್ಷಗಳ ವರೆಗೆ ನನ್ನ ನಂಬಿಗಸ್ತ ಸಂಗಾತಿಯಾಗಿದ್ದಳು; ಆದರೆ 1986ರಲ್ಲಿ ಅವಳು ತೀರಿಕೊಂಡಳು. ಇಸವಿ 1938ರಲ್ಲಿ ನಮ್ಮ ಏಕಮಾತ್ರ ಮಗುವಾಗಿದ್ದ ಏಡುಆರ್ಟ್ ಜನಿಸಿದನು. ಆದರೆ ಆ ಸಮಯದಲ್ಲಿ ಯೂರೋಪಿನಲ್ಲಿ ಇನ್ನೊಂದು ಯುದ್ಧವು ಸಮೀಪಿಸುತ್ತಿರುವಂತೆ ತೋರಿತು. ಇದು ನಮ್ಮ ಸಾರುವ ಕೆಲಸದ ಮೇಲೆ ಯಾವ ಪರಿಣಾಮ ಬೀರಲಿತ್ತು?
ನಮ್ಮ ಕ್ರೈಸ್ತ ತಾಟಸ್ಥ್ಯವು ಪರೀಕ್ಷೆಗೊಡ್ಡಲ್ಪಡುತ್ತದೆ
ಎರಡನೆಯ ಲೋಕ ಯುದ್ಧವು ಆರಂಭಗೊಂಡಾಗ, ತದನಂತರ ಒಂದು ಪ್ರತ್ಯೇಕ ದೇಶವಾಗಿ ಪರಿಣಮಿಸಿದ ಸ್ಲೊವಾಕಿಯವು ನಾಸಿ ಪ್ರಭಾವದ ಕೆಳಗಿತ್ತು. ಆದರೂ, ಒಂದು ಸಂಸ್ಥೆಯೋಪಾದಿ ಯೆಹೋವನ ಸಾಕ್ಷಿಗಳ ವಿರುದ್ಧ ಯಾವುದೇ ನಿರ್ದಿಷ್ಟ ಸರಕಾರೀ ಕ್ರಮವು ಕೈಗೊಳ್ಳಲ್ಪಟ್ಟಿರಲಿಲ್ಲ. ಆದರೆ ನಾವು ಮಾತ್ರ ರಹಸ್ಯವಾಗಿ ನಮ್ಮ ಚಟುವಟಿಕೆಗಳನ್ನು ಮಾಡಬೇಕಾಗಿತ್ತು, ಮತ್ತು ನಮ್ಮ ಸಾಹಿತ್ಯವು ಸೆನ್ಸರ್ ಮಾಡಲ್ಪಟ್ಟಿತು. ಆದರೂ, ಜಾಣತನದಿಂದ ನಾವು ನಮ್ಮ ಚಟುವಟಿಕೆಗಳನ್ನು ಮುಂದುವರಿಸಿದೆವು.—ಮತ್ತಾಯ 10:16.
ಯುದ್ಧವು ತೀವ್ರಗೊಂಡಂತೆ, ನಾನು 35ರ ಪ್ರಾಯದವನಾಗಿದ್ದರೂ ನನ್ನನ್ನು ಬಲಾತ್ಕಾರದಿಂದ ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ನನ್ನ ಕ್ರೈಸ್ತ ತಾಟಸ್ಥ್ಯದ ನಿಮಿತ್ತ ನಾನು ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ. (ಯೆಶಾಯ 2:2-4) ಸಂತೋಷಕರವಾಗಿಯೇ, ನನ್ನ ವಿಷಯದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ತೀರ್ಮಾನಿಸುವ ಮೊದಲೇ ನನ್ನ ಪ್ರಾಯದವರಾಗಿದ್ದವರೆಲ್ಲರನ್ನೂ ಬಿಡುಗಡೆಮಾಡಲಾಯಿತು.
ಗ್ರಾಮೀಣ ಕ್ಷೇತ್ರಗಳಲ್ಲಿ ವಾಸಿಸುತ್ತಿದ್ದ ನಮಗಿಂತಲೂ ನಗರಗಳಲ್ಲಿ ವಾಸಿಸುತ್ತಿದ್ದ ನಮ್ಮ ಸಹೋದರರಿಗೆ ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳುವುದು ತುಂಬ ಕಷ್ಟಕರವಾಗಿತ್ತು ಎಂಬುದು ನಮಗೆ ಮನವರಿಕೆಯಾಯಿತು. ನಮ್ಮ ಬಳಿ ಇರುವುದನ್ನು ನಾವು ಹಂಚಿಕೊಳ್ಳಲು ಬಯಸಿದೆವು. (2 ಕೊರಿಂಥ 8:14) ಹೀಗೆ, ನಮ್ಮಿಂದ ಕೊಂಡೊಯ್ಯಲು ಸಾಧ್ಯವಾಗುವಷ್ಟು ಆಹಾರಪದಾರ್ಥಗಳನ್ನು ತೆಗೆದುಕೊಂಡು, 500 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿ ದೇಶದ ಇನ್ನೊಂದು ಭಾಗದಲ್ಲಿರುವ ಬ್ರಾಟಿಸ್ಲಾವಕ್ಕೆ ಹೋಗುತ್ತಿದ್ದೆವು. ಯುದ್ಧದ ವರ್ಷಗಳಲ್ಲಿ ನಾವು ಬೆಸೆದ ಕ್ರೈಸ್ತ ಸ್ನೇಹ ಹಾಗೂ ಪ್ರೀತಿಯ ಬಂಧಗಳು, ಮುಂದೆ ಬರಲಿದ್ದ ಕಷ್ಟಕರ ವರ್ಷಗಳಾದ್ಯಂತ ನಮ್ಮನ್ನು ಸಂರಕ್ಷಿಸಿದವು.
ಅಗತ್ಯವಿರುವ ಉತ್ತೇಜನವನ್ನು ಪಡೆದುಕೊಳ್ಳುವುದು
ಎರಡನೆಯ ಲೋಕ ಯುದ್ಧದ ಬಳಿಕ, ಸ್ಲೊವಾಕಿಯವು ಪುನಃ ಚೆಕಸ್ಲೊವಾಕಿಯದ ಭಾಗವಾಯಿತು. ಇಸವಿ 1946ರಿಂದ 1948ರ ತನಕ, ಬರ್ನೋದಲ್ಲಿ ಅಥವಾ ಪ್ರಾಗ್‌ನಲ್ಲಿ ಯೆಹೋವನ ಸಾಕ್ಷಿಗಳ ರಾಷ್ಟ್ರವ್ಯಾಪಿ ಅಧಿವೇಶನಗಳು ನಡೆಸಲ್ಪಟ್ಟವು. ನಾವು ಪೂರ್ವ ಸ್ಲೊವಾಕಿಯದಿಂದ ಅಧಿವೇಶನದ ಪ್ರತಿನಿಧಿಗಳಿಗಾಗಿ ಏರ್ಪಡಿಸಲ್ಪಟ್ಟಿದ್ದ ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದೆವು. ನೀವು ಆ ರೈಲುಗಳನ್ನು ಹಾಡುವ ರೈಲುಗಳೆಂದು ಕರೆಯಬಹುದಿತ್ತು, ಏಕೆಂದರೆ ದಾರಿಯುದ್ದಕ್ಕೂ ನಾವು ಹಾಡುತ್ತಾ ಸಾಗಿದೆವು.—ಅ. ಕೃತ್ಯಗಳು 16:25.
ಇಸವಿ 1947ರಲ್ಲಿ ಬರ್ನೋದಲ್ಲಿ ನಡೆದ ಅಧಿವೇಶನವನ್ನು ನಾನು ವಿಶೇಷವಾಗಿ ಜ್ಞಾಪಿಸಿಕೊಳ್ಳುತ್ತೇನೆ; ಆ ಅಧಿವೇಶನಕ್ಕೆ ಜಾಗತಿಕ ಮುಖ್ಯಕಾರ್ಯಾಲಯದಿಂದ ನೇಥನ್ ಏಚ್. ನಾರ್‌ರವರನ್ನೂ ಒಳಗೊಂಡು ಮೂವರು ಕ್ರೈಸ್ತ ಮೇಲ್ವಿಚಾರಕರು ಹಾಜರಿದ್ದರು. ಸಾರ್ವಜನಿಕ ಭಾಷಣವನ್ನು ಪ್ರಚಾರಮಾಡಲಿಕ್ಕಾಗಿ, ನಮ್ಮಲ್ಲಿ ಅನೇಕರು
ಮುಖ್ಯ ವಿಷಯವನ್ನು ಪ್ರಕಟಿಸುವಂಥ ಸೂಚನಾಫಲಕಗಳೊಂದಿಗೆ ನಗರದಾದ್ಯಂತ ನಡೆದಾಡಿದೆವು. ಆಗ ಕೇವಲ ಒಂಬತ್ತು ವರ್ಷದವನಾಗಿದ್ದ ನಮ್ಮ ಮಗ ಏಡುಆರ್ಟ್, ಇಂಥ ಸೂಚನಾಫಲಕವು ತನಗೆ ಸಿಗಲಿಲ್ಲವೆಂದು ಅಸಂತೋಷಗೊಂಡಿದ್ದನು. ಆದುದರಿಂದ ಸಹೋದರರು ಚಿಕ್ಕ ಚಿಕ್ಕ ಸೂಚನಾಫಲಕಗಳನ್ನು ಮಾಡಿ, ಅವನಿಗೆ ಮಾತ್ರವಲ್ಲ ಇನ್ನೂ ಅನೇಕ ಮಕ್ಕಳಿಗೂ ಕೊಟ್ಟರು. ಈ ಮಕ್ಕಳ ಗುಂಪು ಅತ್ಯುತ್ತಮ ರೀತಿಯಲ್ಲಿ ಭಾಷಣದ ಕುರಿತು ಪ್ರಚಾರಮಾಡಿತು!ಇಸವಿ 1948ರಲ್ಲಿ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದರು. ಇಂದಲ್ಲ ನಾಳೆ ಆ ಸರಕಾರವು ನಮ್ಮ ಶುಶ್ರೂಷೆಯನ್ನು ನಿರ್ಬಂಧಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದು ನಮಗೆ ಗೊತ್ತಿತ್ತು. ಇಸವಿ 1948ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾಗ್‌ನಲ್ಲಿ ಒಂದು ಅಧಿವೇಶನವು ನಡೆಸಲ್ಪಟ್ಟಿತು. ಮತ್ತು ಸಭೆಸೇರುವ ಸ್ವಾತಂತ್ರ್ಯವನ್ನು ಕೇವಲ ಮೂರು ವರ್ಷಗಳ ವರೆಗೆ ಅನುಭವಿಸಿದ ಬಳಿಕ, ನಮ್ಮ ಸಾರ್ವಜನಿಕ ಕೂಡಿಬರುವಿಕೆಯ ಮೇಲೆ ನಾವು ಇನ್ನೊಂದು ನಿಷೇಧದ ನಿರೀಕ್ಷಣೆಯಲ್ಲಿದ್ದುದರಿಂದ, ನಮಗೆ ಬಲವಾದ ಅನಿಸಿಕೆಗಳಿದ್ದವು. ಅಧಿವೇಶನದಿಂದ ಹೊರಡುವುದಕ್ಕೆ ಮೊದಲು ನಾವು ಒಂದು ಠರಾವನ್ನು ಅಂಗೀಕರಿಸಿದೆವು. ಅದರ ಒಂದು ಭಾಗವು ಹೀಗಿತ್ತು: “ಯೆಹೋವನ ಸಾಕ್ಷಿಗಳೋಪಾದಿ ಒಟ್ಟುಗೂಡಿರುವ ನಾವು . . . ಈ ಆಶೀರ್ವದಿತ ಸೇವೆಯನ್ನು ಇನ್ನಷ್ಟು ಹೆಚ್ಚಿಸುವ, ಮತ್ತು ಕರ್ತನ ಕೃಪೆಯಿಂದ ಅನುಕೂಲಕರವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದನ್ನು ಮುಂದುವರಿಸುವ, ಹಾಗೂ ದೇವರ ರಾಜ್ಯದ ಸುವಾರ್ತೆಯನ್ನು ಇನ್ನಷ್ಟು ಹುರುಪಿನಿಂದ ಸಾರುವ ನಿರ್ಧಾರವನ್ನು ಮಾಡಿದ್ದೇವೆ.”
“ಸರಕಾರದ ಶತ್ರುಗಳು”
ಪ್ರಾಗ್ ಅಧಿವೇಶನವು ಮುಗಿದ ಎರಡೇ ತಿಂಗಳುಗಳ ಬಳಿಕ ಗುಪ್ತ ಪೊಲೀಸರು ಪ್ರಾಗ್‌ನ ಸಮೀಪವಿದ್ದ ಬೆತೆಲ್ ಗೃಹದ ಮೇಲೆ ದಾಳಿಮಾಡಿದರು. ಅವರು ಬ್ರಾಂಚ್ ಸೌಕರ್ಯವನ್ನು ವಶಪಡಿಸಿಕೊಂಡು, ತಮ್ಮ ಕಣ್ಣಿಗೆ ಬಿದ್ದ ಸಾಹಿತ್ಯವನ್ನು ದೋಚಿಕೊಂಡು, ಎಲ್ಲಾ ಬೆತೆಲಿಗರನ್ನು ಮತ್ತು ಇನ್ನೂ ಕೆಲವು ಸಹೋದರರನ್ನು ಬಂಧಿಸಿದರು. ಆದರೆ ಇನ್ನೂ ಹೆಚ್ಚಿನದ್ದು ಸಂಭವಿಸಲಿಕ್ಕಿತ್ತು.
ಇಸವಿ 1952ರ ಫೆಬ್ರವರಿ 3-4ರ ರಾತ್ರಿಯಂದು, ಭದ್ರತಾ ಪಡೆಗಳು ದೇಶದಾದ್ಯಂತ ಹುಡುಕಾಟ ನಡೆಸಿ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ಬಂಧಿಸಿದವು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಮುಂಜಾನೆ ಮೂರು ಗಂಟೆಗೆ ಪೊಲೀಸರು ನನ್ನ ಇಡೀ ಕುಟುಂಬವನ್ನು ನಿದ್ರೆಯಿಂದ ಎಬ್ಬಿಸಿದರು. ಯಾವುದೇ ವಿವರಣೆಯನ್ನು ಕೊಡದೆ, ತಮ್ಮೊಂದಿಗೆ ಬರುವಂತೆ ನನಗೆ ಆಜ್ಞೆಯಿತ್ತರು. ನನಗೆ ಬೇಡಿಗಳನ್ನು ತೊಡಿಸಲಾಯಿತು ಮತ್ತು ಕಣ್ಣಿಗೆ ಬಟ್ಟೆಕಟ್ಟಲಾಯಿತು, ಮತ್ತು ಇನ್ನೂ ಅನೇಕರೊಂದಿಗೆ ಒಂದು ಟ್ರಕ್ಕಿಗೆ ಹತ್ತಿಸಲಾಯಿತು. ಕೊನೆಗೆ ನಾನು ಏಕಾಂತ ಸೆರೆವಾಸಕ್ಕೆ ಬಂದು ಮುಟ್ಟಿದೆ.
ಯಾರೊಬ್ಬರೂ ನನ್ನೊಂದಿಗೆ ಮಾತಾಡದೆ ಇಡೀ ತಿಂಗಳು ಕಳೆಯಿತು. ನನ್ನ ಕಣ್ಣಿಗೆ ಬೀಳುತ್ತಿದ್ದ ವ್ಯಕ್ತಿ, ಬಾಗಿಲಿನ ಕಿಂಡಿಯ ಮೂಲಕ ಅತ್ಯಲ್ಪ ಆಹಾರವನ್ನು ನನ್ನ ಕಡೆಗೆ ಒರಟಾಗಿ ತಳ್ಳುತ್ತಿದ್ದ ಒಬ್ಬ ಗಾರ್ಡ್ ಮಾತ್ರವೇ ಆಗಿದ್ದನು. ತದನಂತರ ಆರಂಭದಲ್ಲಿ ತಿಳಿಸಲ್ಪಟ್ಟ ವಿಚಾರಣೆ ನಡೆಸುವವನ ಮುಂದೆ ನನ್ನನ್ನು ಕರೆತರಲಾಯಿತು. ಅವನು ನನ್ನನ್ನು ಗೂಢಚಾರನೆಂದು ಕರೆದ ಬಳಿಕ ಮುಂದುವರಿಸಿ ಹೇಳಿದ್ದು: “ಧರ್ಮವು ಅಜ್ಞಾನವಾಗಿದೆ. ದೇವರು ಇಲ್ಲವೇ ಇಲ್ಲ! ನಮ್ಮ ಕಾರ್ಮಿಕ ವರ್ಗವನ್ನು ಮೋಸಗೊಳಿಸಲು ನಾವು ನಿನಗೆ ಅವಕಾಶ ಕೊಡುವುದಿಲ್ಲ. ನೀನು ಗಲ್ಲಿಗೇರಿಸಲ್ಪಡುತ್ತೀ ಅಥವಾ ಸೆರೆಯಲ್ಲೇ ಸಾಯುತ್ತಿ. ಅಷ್ಟುಮಾತ್ರವಲ್ಲ, ಒಂದುವೇಳೆ ನಿನ್ನ ದೇವರು ಇಲ್ಲಿಗೆ ಬರುವುದಾದರೆ ನಾವು ಅವನನ್ನೂ ಕೊಂದುಹಾಕುವೆವು!”
ನಮ್ಮ ಕ್ರೈಸ್ತ ಚಟುವಟಿಕೆಗಳನ್ನು ನಿಷೇಧಿಸುವಂಥ ಯಾವುದೇ ನಿರ್ದಿಷ್ಟ ನಿಯಮವು ಇರಲಿಲ್ಲ ಎಂಬುದು ಅಧಿಕಾರಿಗಳಿಗೆ ಗೊತ್ತಿತ್ತು. ಆದುದರಿಂದ ನಾವು “ಸರಕಾರದ ಶತ್ರುಗಳು” ಎಂಬ ಚಿತ್ರಣವನ್ನು ನೀಡುವ ಮೂಲಕ, ಅಸ್ತಿತ್ವದಲ್ಲಿರುವ ನಿಯಮಗಳಿಗೆ ಹೊಂದಿಕೊಳ್ಳುವಂತೆ ನಮ್ಮ ಚಟುವಟಿಕೆಗಳನ್ನು ಬೇರೆ ರೀತಿಯಲ್ಲಿ ನಿರೂಪಿಸಲು ಅವರು ಬಯಸಿದರು. ಇದನ್ನು ಸಾಧಿಸಲಿಕ್ಕಾಗಿ ಅವರು ನಮ್ಮ ಮನಶ್ಶಕ್ತಿಯನ್ನು ಮುರಿಯಬೇಕಾಗಿತ್ತು ಮತ್ತು ನಾವು ಸುಳ್ಳಾರೋಪಗಳನ್ನು “ಒಪ್ಪಿಕೊಳ್ಳುವಂತೆ” ಮಾಡಬೇಕಾಗಿತ್ತು. ಆ ರಾತ್ರಿ ವಿಚಾರಣೆ ನಡೆಸಿದ ಬಳಿಕ ನನಗೆ ಮಲಗಲು ಅವಕಾಶವನ್ನೇ ಕೊಡಲಿಲ್ಲ. ಕೆಲವೇ ತಾಸುಗಳೊಳಗೆ ಪುನಃ ನನ್ನನ್ನು ವಿಚಾರಣೆಗೊಳಪಡಿಸಲಾಯಿತು. ಈ ಸಲ ನಾನು ಒಂದು ಹೇಳಿಕೆಗೆ ಸಹಿಹಾಕಬೇಕೆಂಬುದು ವಿಚಾರಕನ ಬಯಕೆಯಾಗಿತ್ತು. ಆ ಹೇಳಿಕೆಯು ಹೀಗಿತ್ತು: “ಪೀಪಲ್ಸ್ ಡೆಮೊಕ್ರ್ಯಾಟಿಕ್ ಚೆಕಸ್ಲೊವಾಕಿಯದ ಒಬ್ಬ ಶತ್ರುವಾಗಿರುವ ನಾನು, ಅಮೆರಿಕನ್ನರಿಗಾಗಿ ಎದುರುನೋಡುತ್ತಿದ್ದುದರಿಂದ [ಕೂಡುಸಾಗುವಳಿ ಜಮೀನಿನ ಕೆಲಸಕ್ಕೆ] ಸೇರಿಕೊಳ್ಳಲಿಲ್ಲ.” ನಾನು ಇಂಥ ಸುಳ್ಳಿಗೆ ಸಹಿಹಾಕಲು ನಿರಾಕರಿಸಿದ್ದರಿಂದಲೇ ನನ್ನನ್ನು ತಿದ್ದುಪಾಟಿನ ಶಿಕ್ಷಾಗೃಹಕ್ಕೆ ಕಳುಹಿಸಲಾಯಿತು.
ನನ್ನನ್ನು ನಿದ್ರಿಸಲು, ಕೈಕಾಲು ಚಾಚಲು, ಅಥವಾ ಕುಳಿತುಕೊಳ್ಳಲು ಸಹ ಬಿಡುತ್ತಿರಲಿಲ್ಲ. ಕೇವಲ ನಿಲ್ಲಸಾಧ್ಯವಿತ್ತು ಅಥವಾ ನಡೆದಾಡಸಾಧ್ಯವಿತ್ತು. ತುಂಬ ದಣಿದಾಗ ನಾನು ಕಾಂಕ್ರಿಟ್ ನೆಲದ ಮೇಲೆ ಬಿದ್ದುಕೊಂಡೆ. ಆಗ ಗಾರ್ಡ್‌ಗಳು ನನ್ನನ್ನು ವಿಚಾರಕನ ಆಫೀಸಿಗೆ ಪುನಃ ಕರೆದುಕೊಂಡು ಹೋದರು. “ಈಗಲಾದರೂ ಸಹಿಹಾಕುತ್ತೀಯಾ?” ಎಂದು ವಿಚಾರಕನು ನನ್ನನ್ನು ಪ್ರಶ್ನಿಸಿದನು. ನಾನು ಪುನಃ ನಿರಾಕರಿಸಿದಾಗ, ಅವನು ನನಗೆ
ಮುಖದ ಮೇಲೆ ಹೊಡೆದನು. ಮುಖದಿಂದ ರಕ್ತಬರಲಾರಂಭಿಸಿತು. ಆಗ ಅವನು ಗಾರ್ಡ್‌ಗಳಿಗೆ ಕೋಪದಿಂದ ಗುರುಗುಟ್ಟಿದ್ದು: “ಇವನು ತನ್ನನ್ನು ಕೊಂದುಕೊಳ್ಳಲು ಬಯಸುತ್ತಿದ್ದಾನೆ. ಇವನು ಆತ್ಮಹತ್ಯೆಮಾಡಿಕೊಳ್ಳದಂತೆ ಇವನ ಮೇಲೆ ಕಣ್ಗಾವಲಿಡಿರಿ!” ತದನಂತರ ನನ್ನನ್ನು ಏಕಾಂತ ಸೆರೆವಾಸಕ್ಕೆ ಹಿಂದೆ ಕಳುಹಿಸಲಾಯಿತು. ಸುಮಾರು ಆರು ತಿಂಗಳುಗಳ ವರೆಗೆ, ಬೇರೆ ಬೇರೆ ಸಂದರ್ಭಗಳಲ್ಲಿ ಈ ವಿಚಾರಣಾ ತಂತ್ರಗಳನ್ನು ಪುನರಾವರ್ತಿಸಲಾಯಿತು. ನಾನು ಸರಕಾರದ ಶತ್ರುವಾಗಿದ್ದೇನೆ ಎಂದು ಒಪ್ಪಿಕೊಳ್ಳಲಿಕ್ಕಾಗಿ ಮಾಡಲ್ಪಟ್ಟ ಯಾವುದೇ ಸೈದ್ಧಾಂತಿಕ ಒಡಂಬಡಿಸುವಿಕೆ ಅಥವಾ ಪ್ರಯತ್ನಗಳು, ಯೆಹೋವನಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ನನ್ನ ದೃಢನಿರ್ಧಾರವನ್ನು ಸಡಿಲಿಸಲಿಲ್ಲ.ವಿಚಾರಣೆಗಾಗಿ ಕರೆದೊಯ್ಯಲ್ಪಡುವ ಒಂದು ತಿಂಗಳಿಗೆ ಮುಂಚೆ, ಪ್ರಾಗ್‌ನಿಂದ ಬಂದ ಒಬ್ಬ ಫಿರ್ಯಾದಿ ಅಧಿಕಾರಿಯು 12 ಮಂದಿ ಸಹೋದರರಿದ್ದ ನಮ್ಮ ಗುಂಪಿನಲ್ಲಿ ಪ್ರತಿಯೊಬ್ಬರ ತನಿಖೆ ನಡೆಸಿದನು. ಅವನು ನನ್ನನ್ನು ಕೇಳಿದ್ದು: “ಪಾಶ್ಚಾತ್ಯ ಸಾಮ್ರಾಜ್ಯವಾದಿಗಳು ನಮ್ಮ ದೇಶದ ಮೇಲೆ ಆಕ್ರಮಣಮಾಡುವಲ್ಲಿ ನೀನು ಏನು ಮಾಡುವಿ?” “ಹಿಟ್ಲರ್‌ನೊಂದಿಗೆ ಸೇರಿಕೊಂಡು ಈ ದೇಶವು ರಷ್ಯದ ಮೇಲೆ ಆಕ್ರಮಣಮಾಡಿದಾಗ ನಾನು ಏನು ಮಾಡಿದೆನೋ ಅದನ್ನೇ ಮಾಡುವೆ. ಆಗಲೂ ನಾನು ಯುದ್ಧಮಾಡಲಿಲ್ಲ, ಈಗಲೂ ಮಾಡುವುದಿಲ್ಲ, ಏಕೆಂದರೆ ನಾನು ಒಬ್ಬ ಕ್ರೈಸ್ತನಾಗಿದ್ದೇನೆ ಮತ್ತು ಯುದ್ಧದ ವಿಷಯದಲ್ಲಿ ನಾನು ತಟಸ್ಥನು.” ಆಗ ಅವನು ನನಗೆ ಹೇಳಿದ್ದು: “ಯೆಹೋವನ ಸಾಕ್ಷಿಗಳನ್ನು ಸಹಿಸಿಕೊಳ್ಳುವುದು ನಮ್ಮಿಂದ ಅಸಾಧ್ಯವಾಗಿಬಿಟ್ಟಿದೆ. ಒಂದುವೇಳೆ ಪಾಶ್ಚಾತ್ಯ ಸಾಮ್ರಾಜ್ಯವಾದಿಗಳು ನಮ್ಮ ಮೇಲೆ ಆಕ್ರಮಣಮಾಡುವಲ್ಲಿ ನಮಗೆ ಸೈನಿಕರ ಆವಶ್ಯಕತೆಯಿದೆ, ಮತ್ತು ಪಶ್ಚಿಮದಲ್ಲಿರುವ ನಮ್ಮ ಕಾರ್ಮಿಕ ವರ್ಗವನ್ನು ಬಿಡುಗಡೆಗೊಳಿಸಲಿಕ್ಕಾಗಿ ನಮಗೆ ಸೈನಿಕರ ಆವಶ್ಯಕತೆಯಿದೆ.”
ಇಸವಿ 1953ರ ಜುಲೈ 24ರಂದು ನಾವು ನ್ಯಾಯಸಭೆಗೆ ಕರೆದೊಯ್ಯಲ್ಪಟ್ಟೆವು. ನಾವು 12 ಮಂದಿಯೂ ಒಬ್ಬರಾದ ಮೇಲೆ ಇನ್ನೊಬ್ಬರಂತೆ ನ್ಯಾಯದರ್ಶಿಗಳ ಮುಂದೆ ಕರೆಯಲ್ಪಟ್ಟೆವು. ನಮ್ಮ ನಂಬಿಕೆಯ ಕುರಿತು ಸಾಕ್ಷಿನೀಡಲಿಕ್ಕಾಗಿ ನಾವು ಈ ಅವಕಾಶವನ್ನು ಉಪಯೋಗಿಸಿದೆವು. ನಮ್ಮ ವಿರುದ್ಧ ಹೊರಿಸಲ್ಪಟ್ಟಿದ್ದ ಸುಳ್ಳಾರೋಪಗಳಿಗೆ ನಮ್ಮ ಪ್ರತಿವರ್ತನೆಯನ್ನು ನೋಡಿದ ಬಳಿಕ, ಒಬ್ಬ ವಕೀಲನು ಎದ್ದುನಿಂತು ಹೇಳಿದ್ದು: “ನಾನು ಅನೇಕ ಬಾರಿ ಈ ನ್ಯಾಯಸಭೆಗೆ ಹಾಜರಾಗಿದ್ದೇನೆ. ಸಾಮಾನ್ಯವಾಗಿ ಇಲ್ಲಿ ಸಾಕಷ್ಟು ಪಾಪನಿವೇದನೆ, ಪಶ್ಚಾತ್ತಾಪ ಮತ್ತು ಕಣ್ಣೀರು ಸಹ ಹರಿಸಲ್ಪಟ್ಟಿದೆ. ಆದರೆ ಈ ಪುರುಷರು ಇಲ್ಲಿಗೆ ಬಂದಾಗ ಇದ್ದುದಕ್ಕಿಂತಲೂ ಹೆಚ್ಚು ಪ್ರಬಲರಾಗಿ ಹಿಂದಿರುಗುತ್ತಾರೆ.” ತದನಂತರ, 12 ಮಂದಿಯನ್ನೂ ಸರಕಾರದ ವಿರುದ್ಧ ಒಳಸಂಚು ನಡೆಸಿದ ದೋಷಾಪರಾಧಿಗಳೆಂದು ತೀರ್ಪುನೀಡಲಾಯಿತು. ನನಗೆ ಮೂರು ವರ್ಷಗಳ ಸೆರೆವಾಸ ಹಾಗೂ ನನ್ನೆಲ್ಲಾ ಸೊತ್ತನ್ನು ಸರಕಾರಕ್ಕೆ ದಂಡವಾಗಿ ತೆರುವ ಶಿಕ್ಷೆಯು ವಿಧಿಸಲ್ಪಟ್ಟಿತು.
ವೃದ್ಧಾಪ್ಯವು ನನ್ನನ್ನು ತಡೆಯಲಿಲ್ಲ
ಮನೆಗೆ ಹಿಂದಿರುಗಿದ ಬಳಿಕವೂ ನಾನು ಗುಪ್ತ ಪೊಲೀಸರ ಕಣ್ಗಾವಲಿನ ಕೆಳಗೇ ಇದ್ದೆ. ಆದರೂ ನನ್ನ ದೇವಪ್ರಭುತ್ವಾತ್ಮಕ ಚಟುವಟಿಕೆಗಳನ್ನು ನಾನು ಪುನಃ ಆರಂಭಿಸಿದೆ ಮತ್ತು ನಮ್ಮ ಸಭೆಯಲ್ಲಿ ಆಧ್ಯಾತ್ಮಿಕ ಮೇಲ್ವಿಚಾರಣೆಯ ಕೆಲಸವು ನನಗೆ ಒಪ್ಪಿಸಲ್ಪಟ್ಟಿತು. ಸರಕಾರದಿಂದ ವಶಪಡಿಸಿಕೊಳ್ಳಲ್ಪಟ್ಟಿದ್ದ ನಮ್ಮ ಮನೆಯಲ್ಲೇ ನಾವು ವಾಸಿಸಲು ಅನುಮತಿಯಿತ್ತಾದರೂ, ಸುಮಾರು 40 ವರ್ಷಗಳ ಅನಂತರ ಅಂದರೆ ಕಮ್ಯೂನಿಸಮ್‌ನ ಅವನತಿಯಾದ ಬಳಿಕವೇ ಅದು ನಮಗೆ ಕಾನೂನುಬದ್ಧವಾಗಿ ಹಿಂದಿರುಗಿಸಲ್ಪಟ್ಟಿತು.
ನನ್ನ ಕುಟುಂಬದಲ್ಲಿ ಸೆರೆವಾಸವನ್ನು ಅನುಭವಿಸಿದವರಲ್ಲಿ ನಾನೇ ಕೊನೆಯವನಾಗಿರಲಿಲ್ಲ. ನಾನು ಮನೆಗೆ ಹಿಂದಿರುಗಿ ಇನ್ನೂ ಮೂರು ವರ್ಷ ಕಳೆದಿರಲಿಲ್ಲ, ಅಷ್ಟರಲ್ಲಿ ಏಡುಆರ್ಟ್‌ನನ್ನು ಬಲವಂತವಾಗಿ ಸೈನ್ಯಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಯಿತು. ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಕಾರಣದಿಂದ ಅವನು ಇದನ್ನು ನಿರಾಕರಿಸಿದ್ದಕ್ಕಾಗಿ ಅವನನ್ನು ಸೆರೆಯಲ್ಲಿ ಹಾಕಲಾಯಿತು. ಅನೇಕ ವರ್ಷಗಳ ಬಳಿಕ ನನ್ನ ಮೊಮ್ಮಗನಾದ ಪೀಟರ್‌ಗೆ ಸಹ ಇದೇ ಅನುಭವವಾಯಿತು—ಅವನಿಗೆ ಆರೋಗ್ಯ ಸಮಸ್ಯೆಯೂ ಇತ್ತು.
ಇಸವಿ 1989ರಲ್ಲಿ ಚೆಕಸ್ಲೊವಾಕಿಯದಲ್ಲಿನ ಕಮ್ಯೂನಿಸ್ಟ್ ಆಳ್ವಿಕೆಯು ಪತನಗೊಂಡಿತು. ನಾಲ್ಕು ದಶಕಗಳ ನಿಷೇಧದ ಬಳಿಕ, ಯಾವುದೇ ನಿರ್ಬಂಧವಿಲ್ಲದೆ ಮನೆಯಿಂದ ಮನೆಗೆ ಸಾರಲು ಶಕ್ತನಾದುದಕ್ಕಾಗಿ ನಾನೆಷ್ಟು ಸಂತೋಷಪಟ್ಟೆ! (ಅ. ಕೃತ್ಯಗಳು 20:20) ನನ್ನ ಆರೋಗ್ಯವು ಅನುಮತಿಸುವಷ್ಟರ ತನಕ ನಾನು ಈ ರೀತಿಯ ಸೇವೆಯಲ್ಲಿ ಆನಂದಿಸಿದೆ. ಈಗ ನಾನು 98 ವರ್ಷದವನಾಗಿರುವುದರಿಂದ ನನ್ನ ಆರೋಗ್ಯ ಈ ಮುಂಚಿನಂತೆ ಇಲ್ಲವಾದರೂ, ಭವಿಷ್ಯತ್ತಿಗಾಗಿರುವ ಯೆಹೋವನ ಮಹಿಮಾಭರಿತ ವಾಗ್ದಾನಗಳ ಕುರಿತು ಈಗಲೂ ನಾನು ಜನರಿಗೆ ಸಾಕ್ಷಿನೀಡಶಕ್ತನಾಗಿರುವುದಕ್ಕಾಗಿ ಸಂತೋಷಿತನಾಗಿದ್ದೇನೆ.
ನನ್ನ ಸ್ವದೇಶದ ಮೇಲೆ ಆಳ್ವಿಕೆ ನಡೆಸಿದಂಥ ಐದು ಬೇರೆ ಬೇರೆ ದೇಶಗಳ 12 ವಿಭಿನ್ನ ನಾಯಕರನ್ನು ನಾನು ಲೆಕ್ಕಿಸಬಲ್ಲೆ. ಇವರಲ್ಲಿ ಸರ್ವಾಧಿಕಾರಿಗಳು, ಅಧ್ಯಕ್ಷರು ಮತ್ತು ಒಬ್ಬ ಅಧಿಪತಿಯೂ ಒಳಗೂಡಿದ್ದರು. ಇವರಲ್ಲಿ ಯಾರೊಬ್ಬರೂ ತಮ್ಮ ಆಳ್ವಿಕೆಯ ಕೆಳಗೆ, ಜನರಿಗೆ ತೊಂದರೆದಾಯಕವಾಗಿದ್ದ ಕೆಡುಕುಗಳಿಗೆ ಶಾಶ್ವತವಾದ ಪರಿಹಾರವನ್ನು ಒದಗಿಸಲು ಶಕ್ತರಾಗಲಿಲ್ಲ. (ಕೀರ್ತನೆ 146:3, 4) ನನ್ನ ಜೀವನದಲ್ಲಿ ಬಹಳ ಮುಂಚೆಯೇ ಯೆಹೋವನ ಕುರಿತು ತಿಳಿದುಕೊಳ್ಳುವಂತೆ ಆತನು ಅನುಮತಿಸಿದ್ದಕ್ಕಾಗಿ ನಾನು ಆತನಿಗೆ ಆಭಾರಿಯಾಗಿದ್ದೇನೆ. ಹೀಗೆ, ಮೆಸ್ಸೀಯನ ರಾಜ್ಯದ ಮೂಲಕ ಆತನು ನೀಡಲಿರುವ ಪರಿಹಾರವನ್ನು ನಾನು ಅರ್ಥಮಾಡಿಕೊಂಡು, ದೇವರಿಲ್ಲದ ವ್ಯರ್ಥ ಜೀವನದಿಂದ ದೂರವಿರಲು ಶಕ್ತನಾದೆ. ಆ ಅತ್ಯುತ್ತಮ ಸುವಾರ್ತೆಯನ್ನು 75ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ನಾನು ಕ್ರಿಯಾಶೀಲ ರೀತಿಯಲ್ಲಿ ಸಾರಿದ್ದೇನೆ, ಮತ್ತು ಇದು ನನಗೆ ಜೀವನದಲ್ಲಿ ಒಂದು ಉದ್ದೇಶವನ್ನು, ಸಂತೃಪ್ತಿಯನ್ನು, ಮತ್ತು ಭೂಮಿಯ ಮೇಲೆ ನಿತ್ಯಜೀವದ ಉಜ್ವಲ ನಿರೀಕ್ಷೆಯನ್ನು ನೀಡಿದೆ. ಇದಕ್ಕಿಂತಲೂ ಮಿಗಿಲಾದ ಯಾವುದನ್ನು ನಾನು ಕೇಳಿಕೊಳ್ಳಸಾಧ್ಯವಿದೆ? *
[ಪಾದಟಿಪ್ಪಣಿಗಳು]
^ ಪ್ಯಾರ. 14 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು, ಈಗ ಮುದ್ರಣದಲ್ಲಿಲ್ಲ.
^ ಪ್ಯಾರ. 38 ದುಃಖಕರ ಸಂಗತಿಯೇನೆಂದರೆ, ಸಹೋದರ ಮೀಕಾಲ್ ಸಾಬ್ರಾಕ್ ಅವರ ಬಲವು ಕೊನೆಗೂ ಕುಂದಿಹೋಯಿತು. ಈ ಲೇಖನವು ಪ್ರಕಾಶನಕ್ಕಾಗಿ ಸಿದ್ಧಪಡಿಸಲ್ಪಡುತ್ತಿದ್ದಾಗ, ಪುನರುತ್ಥಾನದ ನಿರೀಕ್ಷೆಯಲ್ಲಿ ದೃಢವಿಶ್ವಾಸವುಳ್ಳವರಾಗಿದ್ದ ಅವರು ನಂಬಿಗಸ್ತರಾಗಿ ಮರಣಪಟ್ಟರು.
[ಪುಟ 26ರಲ್ಲಿರುವ ಚಿತ್ರ]
ನಮ್ಮ ವಿವಾಹವಾಗಿ ಸ್ವಲ್ಪ ಕಾಲಾವಧಿಯ ಬಳಿಕ
[ಪುಟ 26ರಲ್ಲಿರುವ ಚಿತ್ರ]
1940ಗಳ ಆರಂಭದಲ್ಲಿ ಏಡುಆರ್ಟ್‌ನೊಂದಿಗೆ
[ಪುಟ 27ರಲ್ಲಿರುವ ಚಿತ್ರ]
1947ರಲ್ಲಿ ಬರ್ನೋದಲ್ಲಿ ಅಧಿವೇಶನದ ಪ್ರಚಾರಮಾಡುತ್ತಿರುವುದು