ನಮ್ಮ ದಿನಗಳಿಗಾಗಿ ಸಮರ್ಥ ನಾಯಕನು ಯಾರು?
ನಮ್ಮ ದಿನಗಳಿಗಾಗಿ ಸಮರ್ಥ ನಾಯಕನು ಯಾರು?
ಇಸವಿ 1940ರಲ್ಲಿ, ಬ್ರಿಟನ್ ಪಾರ್ಲಿಮೆಂಟ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಏರ್ಪಟ್ಟಿತು. ಅಲ್ಲಿ ನಡೆದ ವಾಗ್ವಾದವನ್ನು ಆಲಿಸುತ್ತಿದ್ದ ಎಪ್ಪತ್ತೇಳು ವರುಷ ಪ್ರಾಯದ ಡೇವಿಡ್ ಲಾಯಿಡ್ ಜಾರ್ಜ್, ಒಂದನೇ ಲೋಕ ಯುದ್ಧದ ಸಮಯದಲ್ಲಿ ಬ್ರಿಟನ್‌ಗೆ ಜಯವನ್ನು ತಂದುಕೊಟ್ಟವರಾಗಿದ್ದರು. ಅಷ್ಟುಮಾತ್ರವಲ್ಲದೆ, ರಾಜಕೀಯದಲ್ಲಿನ ಅವರ ಅನೇಕ ವರುಷಗಳ ಅನುಭವವು, ಉಚ್ಚ ಅಧಿಕಾರಿಗಳ ಕೆಲಸವನ್ನು ತೂಗಿನೋಡಲು ಅವರನ್ನು ಶಕ್ತರನ್ನಾಗಿ ಮಾಡಿತ್ತು. ಮೇ 8ರಂದು ಹೌಸ್ ಆಫ್ ಕಾಮನ್ಸ್‌ಗೆ ಕೊಟ್ಟ ಭಾಷಣದಲ್ಲಿ ಅವರು ಹೇಳಿದ್ದು: “ಎಷ್ಟರ ತನಕ ರಾಷ್ಟ್ರಕ್ಕೆ ಒಂದು ನಾಯಕತ್ವವು ಇರುತ್ತದೋ, ಎಷ್ಟರ ತನಕ ಸರಕಾರವು ತನ್ನ ಗುರಿಗಳು ಏನೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೋ, ಮತ್ತು ಎಷ್ಟರ ತನಕ ತಮ್ಮನ್ನು ನಡೆಸುವವರು ತಮ್ಮಿಂದಾದ ಎಲ್ಲವನ್ನೂ ಮಾಡುತ್ತಿದ್ದಾರೆ ಎಂಬ ಭರವಸೆಯು ರಾಷ್ಟ್ರಕ್ಕಿರುತ್ತದೋ ಅಷ್ಟರ ತನಕ ರಾಷ್ಟ್ರವು ಯಾವುದೇ ತ್ಯಾಗವನ್ನು ಮಾಡಲು ಸಿದ್ಧವಿದೆ.”
ತಮ್ಮ ನಾಯಕರು ಸಮರ್ಥರಾಗಿರಬೇಕು ಮತ್ತು ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಜನರು ಎದುರುನೋಡುತ್ತಾರೆ ಎಂಬುದನ್ನು ಲಾಯಿಡ್ ಜಾರ್ಜ್‌ರವರ ಮಾತುಗಳು ಸ್ಪಷ್ಟಪಡಿಸುತ್ತವೆ. ಚುನಾವಣಾ ಕಾರ್ಯಕರ್ತೆಯೊಬ್ಬಳು ಇದನ್ನು ಈ ರೀತಿ ತಿಳಿಸಿದಳು: “ಜನರು ಮತಹಾಕುವಾಗ ತಮ್ಮ ಜೀವಗಳನ್ನು, ತಮ್ಮ ಭವಿಷ್ಯತ್ತನ್ನು, ಮತ್ತು ತಮ್ಮ ಮಕ್ಕಳನ್ನು ಯಾರ ಕೈಗೆ ಒಪ್ಪಿಸಶಕ್ತರೋ ಅಂಥವರಿಗೆ ಮತಹಾಕುತ್ತಾರೆ.” ಇಂಥ ಭರವಸೆಯನ್ನು ಕಾಪಾಡಿಕೊಳ್ಳುವುದು ಒಂದು ಗಂಭೀರವಾದ ಜವಾಬ್ದಾರಿಯಾಗಿದೆ. ಏಕೆ?
ನಮ್ಮ ಲೋಕವು ಪರಿಹರಿಸಲು ಅಸಾಧ್ಯವೆಂದು ತೋರುವ ಅನೇಕ ಸಮಸ್ಯೆಗಳಿಂದ ತುಂಬಿದೆ. ಉದಾಹರಣೆಗೆ, ತಾನು ಹಿಂಸಾಚಾರ ಮತ್ತು ಯುದ್ಧವನ್ನು ನಿರ್ಮೂಲಮಾಡುವಷ್ಟು ವಿವೇಕಿಯೂ ಶಕ್ತಿಶಾಲಿಯೂ ಆಗಿದ್ದೇನೆಂದು ಯಾವ ನಾಯಕನು ತಾನೇ ತೋರಿಸಿಕೊಟ್ಟಿದ್ದಾನೆ? ಎಲ್ಲ ಮಾನವರಿಗೆ ಆಹಾರ, ಶುದ್ಧ ನೀರು ಮತ್ತು ಆರೋಗ್ಯಾರೈಕೆಯನ್ನು ಒದಗಿಸಲು ಬೇಕಾಗಿರುವ ಸಂಪನ್ಮೂಲಗಳು ಮತ್ತು ಅನುಕಂಪವು ಇಂದಿನ ನಾಯಕರಲ್ಲಿ ಯಾರಲ್ಲಿದೆ? ಪರಿಸರವನ್ನು ಸಂರಕ್ಷಿಸಲು ಮತ್ತು ದುರಸ್ತುಪಡಿಸಲು ಬೇಕಾಗಿರುವ ಜ್ಞಾನ ಮತ್ತು ದೃಢಸಂಕಲ್ಪ ಯಾರಿಗಿದೆ? ಎಲ್ಲ ಮಾನವಕುಲವು ದೀರ್ಘವಾದ ಮತ್ತು ಸಂತೋಷಕರ ಜೀವನವನ್ನು ಅನುಭವಿಸುವಂತೆ ಮಾಡಬಲ್ಲ ಸಾಮರ್ಥ್ಯ ಮತ್ತು ಶಕ್ತಿ ಯಾರಿಗಿದೆ?
ಇದನ್ನು ಸಾಧಿಸಲು ಮಾನವರು ಅಶಕ್ತರಾಗಿದ್ದಾರೆ
ಕೆಲವು ನಾಯಕರು ತಕ್ಕಮಟ್ಟಿಗಿನ ಯಶಸ್ಸನ್ನು ಗಳಿಸಿದ್ದಾರೆಂಬುದು ನಿಜ. ಆದರೆ, ಅವರು ಕೇವಲ ಕೆಲವು ದಶಕಗಳ ವರೆಗೆ ಸೇವೆಸಲ್ಲಿಸಬಲ್ಲರು—ಅವರ ಅನಂತರ ಬರುವವರು ಯಾರು? ಜೀವಿಸಿರುವ ಅತಿ ಸಮರ್ಥ ನಾಯಕರಲ್ಲಿ ಒಬ್ಬನಾದ ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಇದೇ ಪ್ರಶ್ನೆಯನ್ನು ಪರಿಶೀಲಿಸಿದನು. ಅವನು ಈ ತೀರ್ಮಾನಕ್ಕೆ ಬಂದನು: “ನನ್ನ ಪ್ರಯಾಸದ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕೆಂದು ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆಲ್ಲಾ ಬೇಸರಗೊಂಡೆನು. ಅವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಎಂಥವನಾದರೂ ನಾನು ಲೋಕದೊಳಗೆ ಯಾವದರಲ್ಲಿ ಜ್ಞಾನವನ್ನೂ ಪ್ರಸಂಗಿ 2:18, 19.
ಪ್ರಯಾಸವನ್ನೂ ವ್ರಯಮಾಡಿದ್ದೇನೋ ಅದರ ಮೇಲೆ ದೊರೆತನಮಾಡುವನು. ಇದೂ ವ್ಯರ್ಥ.”—ತನ್ನ ಅನಂತರ ಬರುವವನು ತಾನು ಮಾಡಿದ ಉತ್ತಮ ಕೆಲಸಗಳನ್ನು ಮುಂದುವರಿಸುವನೋ ಅಥವಾ ಅದನ್ನು ಹಾಳುಮಾಡುವನೋ ಎಂಬುದು ಸೊಲೊಮೋನನಿಗೆ ತಿಳಿದಿರಲಿಲ್ಲ. ಅವನ ದೃಷ್ಟಿಯಲ್ಲಿ, ಹಳೆಯ ರಾಜನನ್ನು ಹೊಸ ರಾಜನಿಂದ ಸ್ಥಾನಭರ್ತಿಮಾಡುವುದು ಒಂದು “ವ್ಯರ್ಥ” ಕೆಲಸವಾಗಿತ್ತು. ಈ ಕಾರ್ಯಗತಿಯನ್ನು ಇತರ ಬೈಬಲ್ ಭಾಷಾಂತರಗಳು “ನಿಷ್ಪ್ರಯೋಜಕ” ಅಥವಾ “ಅರ್ಥಹೀನ” ಎಂದು ತರ್ಜುಮೆಮಾಡಿವೆ. ಒಂದು ಭಾಷಾಂತರವು ಹೇಳುವುದು: “ಇದರಲ್ಲಿ ಯಾವ ಅರ್ಥವೂ ಇಲ್ಲ.”
ಕೆಲವೊಮ್ಮೆ, ಅಧಿಕಾರಿಗಳ ಬದಲಾವಣೆಗಾಗಿ ಹಿಂಸಾಚಾರವನ್ನು ಉಪಯೋಗಿಸಲಾಗುತ್ತದೆ. ಅರ್ಹ ನಾಯಕರು ತಮ್ಮ ಕೆಲಸವನ್ನು ಮಾಡುತ್ತಿರುವಾಗಲೇ ಅವರನ್ನು ಕೊಲ್ಲಲಾಗಿದೆ. ಅಮೆರಿಕದ ಪ್ರಖ್ಯಾತ ಅಧ್ಯಕ್ಷರಾದ ಅಬ್ರಹಾಮ್ ಲಿಂಕನ್ ಒಮ್ಮೆ ತಮ್ಮ ಸಭಿಕರಿಗೆ ಹೀಗೆ ಹೇಳಿದರು: “ಒಂದು ಸಂಕ್ಷಿಪ್ತ ಅವಧಿಗಾಗಿ ಪ್ರಾಮುಖ್ಯ ಸ್ಥಾನವನ್ನು ಭರ್ತಿಮಾಡಲು ನಾನು ಆಯ್ಕೆಮಾಡಲ್ಪಟ್ಟಿದ್ದೇನೆ, ಮತ್ತು ನಿಮ್ಮ ಮುಂದೆ ಈಗ ನನಗೆ, ಅತಿ ಬೇಗನೆ ಇಲ್ಲದೆ ಹೋಗುವ ಒಂದು ಸ್ಥಾನವು ನೀಡಲ್ಪಟ್ಟಿದೆ.” ಅವರ ಸೇವೆಯು ನಿಜವಾಗಿಯೂ ಸಂಕ್ಷಿಪ್ತವಾಗಿತ್ತು. ಅಧ್ಯಕ್ಷ ಲಿಂಕನ್‌ರವರು ಜನರಿಗಾಗಿ ಮಾಡಿದ ಮತ್ತು ಮಾಡಲಿಚ್ಛಿಸಿದ ಎಲ್ಲ ವಿಷಯಗಳ ಹೊರತಾಗಿಯೂ, ಅವರು ತಮ್ಮ ದೇಶವನ್ನು ಕೇವಲ ನಾಲ್ಕು ವರುಷಗಳ ವರೆಗೆ ಆಳಿದರು. ಅವರ ಅಧಿಕಾರದ ಎರಡನೇ ಕಾಲಾವಧಿಯ ಆರಂಭದಲ್ಲಿ, ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸಿದ ಒಬ್ಬ ವ್ಯಕ್ತಿಯಿಂದ ಅವರು ಕೊಲ್ಲಲ್ಪಟ್ಟರು.
ಅತ್ಯುತ್ತಮರಾದ ಮಾನವ ನಾಯಕರು ಸಹ ತಮ್ಮ ಸ್ವಂತ ಭವಿಷ್ಯತ್ತನ್ನು ಖಾತರಿಪಡಿಸಿಕೊಳ್ಳಲಾರರು. ಹಾಗಿರುವಾಗ, ನಿಮ್ಮ ಭವಿಷ್ಯತ್ತನ್ನು ಖಾತರಿಪಡಿಸುವಂತೆ ನೀವು ಅವರಲ್ಲಿ ಭರವಸೆಯಿಡಬೇಕೋ? ಬೈಬಲ್ ತಿಳಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” ಬೈಯಿಂಗ್ಟನ್‌ರ ಭಾಷಾಂತರವು 4ನೇ ವಚನದ ಕೊನೇ ಭಾಗವನ್ನು ಈ ರೀತಿ ಭಾಷಾಂತರಿಸಿದೆ: “ಅವನ ಸದ್ಭಾವನೆಯು ಅದೇ ದಿನದಲ್ಲಿ ಪೂರ್ತಿ ನಷ್ಟವಾಗುತ್ತದೆ.”—ಕೀರ್ತನೆ 146:3, 4.
ಮಾನವ ನಾಯಕರಲ್ಲಿ ಭರವಸೆಯಿಡಬಾರದು ಎಂಬ ಸಲಹೆಯು ಸ್ವೀಕರಿಸಲು ಕಷ್ಟಕರವಾಗಿರಬಹುದು. ಹಾಗಿದ್ದರೂ, ಮಾನವಕುಲವು ಎಂದಿಗೂ ಒಳ್ಳೆಯ, ಸ್ಥಿರ ನಾಯಕತ್ವವನ್ನು ಹೊಂದದು ಎಂದು ಬೈಬಲ್ ಹೇಳುವುದಿಲ್ಲ. ಯೆಶಾಯ 32:1 ಹೇಳುವುದು, “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು.” ಮಾನವನ ಸೃಷ್ಟಿಕರ್ತನಾದ ಯೆಹೋವ ದೇವರು, “ಒಬ್ಬ ರಾಜ”ನನ್ನು ಅಂದರೆ ಒಬ್ಬ ನಾಯಕನನ್ನು ಸಿದ್ಧಗೊಳಿಸಿದ್ದಾನೆ ಮತ್ತು ಅವನು ಭೂಮಿಯ ಆಗುಹೋಗುಗಳನ್ನು ಬೇಗನೆ ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳಲಿದ್ದಾನೆ. ಅವನು ಯಾರು? ಬೈಬಲ್ ಪ್ರವಾದನೆಯು ಅವನನ್ನು ಗುರುತಿಸುತ್ತದೆ.
ನಾಯಕತ್ವವನ್ನು ವಹಿಸಲು ನಿಜವಾಗಿಯೂ ಅರ್ಹನಾದವನು
ಎರಡು ಸಾವಿರ ವರುಷಗಳ ಹಿಂದೆ, ಮರಿಯಳೆಂಬ ಹೆಸರಿನ ಒಬ್ಬ ಯೆಹೂದಿ ಯುವತಿಗೆ ದೇವದೂತನೊಬ್ಬನು ಹೇಳಿದ್ದು: “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:31-33) ಹೌದು, ಬೈಬಲ್ ಪ್ರವಾದನೆಯಲ್ಲಿ ಗುರುತಿಸಲಾದ ಆ ರಾಜನು ನಜರೇತಿನ ಯೇಸುವೇ ಆಗಿದ್ದಾನೆ.
ಧಾರ್ಮಿಕ ಕಲಾಕೃತಿಗಳು ಅನೇಕವೇಳೆ ಯೇಸುವನ್ನು ಒಂದು ಮಗುವಾಗಿ, ನ್ಯೂನಪೋಷಿತನಾದ ಬಲಹೀನ ವ್ಯಕ್ತಿಯಾಗಿ, ಅಥವಾ ತನಗೆದುರಾಗುವ ಎಲ್ಲ ವಿಷಯಗಳನ್ನು ಮೌನವಾಗಿ ಸಹಿಸುವ ಒಬ್ಬ ಸಂನ್ಯಾಸಿಯೋಪಾದಿ ಚಿತ್ರಿಸುತ್ತವೆ. ಈ ಎಲ್ಲ ಚಿತ್ರಗಳು, ಒಬ್ಬ ರಾಜನೋಪಾದಿ ಅವನಲ್ಲಿ ನಮ್ಮ ಭರವಸೆಯನ್ನು ಮೂಡಿಸುವುದಿಲ್ಲ. ಆದರೆ, ಬೈಬಲಿನಲ್ಲಿ ತಿಳಿಸಿರುವ ನಿಜವಾದ ಯೇಸು ಕ್ರಿಸ್ತನು ಒಬ್ಬ ಬಲಶಾಲಿ, ಪ್ರೌಢ ವ್ಯಕ್ತಿಯಾಗಿ ಬೆಳೆದನು. ಅವನು ಹುರುಪಿನಿಂದ ಕೂಡಿದ ಮುನ್ನೆಜ್ಜೆಯನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಿದ್ದನು. ಅಷ್ಟುಮಾತ್ರವಲ್ಲದೆ, ನಾಯಕತ್ವವನ್ನು ವಹಿಸಲು ಅವನನ್ನು ಅರ್ಹನನ್ನಾಗಿ ಮಾಡಿದ ಇತರ ಗುಣಗಳನ್ನೂ ಹೊಂದಿದ್ದನು. (ಲೂಕ 2:52) ಅವನ ಎದ್ದುಕಾಣುವ ವ್ಯಕ್ತಿತ್ವದ ಕೆಲವು ಅಂಶಗಳು ಇಲ್ಲಿವೆ.
ಯೇಸು ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡನು. ಅವನು ಎಷ್ಟು ಪ್ರಾಮಾಣಿಕನೂ ಒಳ್ಳೇ ನಡತೆಯವನೂ ಆಗಿದ್ದನೆಂದರೆ, ತನ್ನ ವಿರುದ್ಧ ನ್ಯಾಯಸಮ್ಮತವಾದ ಯಾವುದಾದರೊಂದು ಅಪವಾದವನ್ನು ಎತ್ತಿತೋರಿಸುವಂತೆ ಬಹಿರಂಗವಾಗಿ ತನ್ನ ವಿರೋಧಿಗಳಿಗೆ ಸವಾಲೊಡ್ಡಿದನು. ಆದರೆ ಅವರಿಂದಾಗಲಿಲ್ಲ. (ಯೋಹಾನ 8:46) ಯೇಸುವಿನ ಕಪಟರಹಿತ ಬೋಧನೆಗಳು ಅನೇಕ ಯಥಾರ್ಥ ಜನರನ್ನು ಅವನ ಹಿಂಬಾಲಕರಾಗುವಂತೆ ಪ್ರೇರೇಪಿಸಿದವು.—ಯೋಹಾನ 7:46; 8:28-30; 12:19.
ಯೇಸು ದೇವರಿಗೆ ಸಂಪೂರ್ಣವಾಗಿ ಸಮರ್ಪಿತನಾಗಿದ್ದನು. ದೇವದತ್ತ ಕೆಲಸವನ್ನು ಮಾಡಿಮುಗಿಸಲು ಅವನು ಎಷ್ಟು ದೃಢನಿಶ್ಚಿತನಾಗಿದ್ದನೆಂದರೆ, ಯಾವ ವಿರೋಧಿಗಳೂ—ಮಾನವರಾಗಲಿ ಅಥವಾ ದೆವ್ವಗಳಾಗಲಿ—ಅವನನ್ನು ಅದರಿಂದ ತಡೆಯಶಕ್ತರಾಗಲಿಲ್ಲ. ಕ್ರೂರ ಹಿಂಸೆಯು ಅವನಿಗೆ ಬೆದರಿಕೆಯನ್ನು ಉಂಟುಮಾಡಲಿಲ್ಲ. (ಲೂಕ 4:28-30) ದಣಿವು ಮತ್ತು ಹಸಿವು ಅವನನ್ನು ನಿರುತ್ತೇಜನಗೊಳಿಸಲಿಲ್ಲ. (ಯೋಹಾನ 4:5-16, 31-34) ಅವನ ಸ್ನೇಹಿತರೆಲ್ಲರು ಅವನನ್ನು ಬಿಟ್ಟು ಓಡಿಹೋದರೂ, ಅವನು ತನ್ನ ಗುರಿಯಿಂದ ದೂರಸರಿಯಲಿಲ್ಲ.—ಮತ್ತಾಯ 26:55, 56; ಯೋಹಾನ 18:3-9.
ಯೇಸುವಿಗೆ ಜನರ ಕಡೆಗೆ ಆಳವಾದ ಚಿಂತನೆಯಿತ್ತು. ಅವನು ಹಸಿದವರಿಗೆ ಆಹಾರವನ್ನು ಒದಗಿಸಿದನು. (ಯೋಹಾನ 6:10, 11) ಖಿನ್ನರಿಗೆ ಸಾಂತ್ವನವನ್ನು ನೀಡಿದನು. (ಲೂಕ 7:11-15) ಕುರುಡರಿಗೆ ಕಣ್ಣನ್ನೂ ಕಿವುಡರಿಗೆ ಕಿವಿಯನ್ನೂ ಅಸ್ವಸ್ಥರಿಗೆ ಆರೋಗ್ಯವನ್ನೂ ಕೊಟ್ಟನು. (ಮತ್ತಾಯ 12:22; ಲೂಕ 8:43-48; ಯೋಹಾನ 9:1-6) ಕಠಿನವಾಗಿ ಪರಿಶ್ರಮಿಸಿದ ಅಪೊಸ್ತಲರಿಗೆ ಅವನು ಉತ್ತೇಜನವನ್ನು ನೀಡಿದನು. (ಯೋಹಾನ 13-17ನೇ ಅಧ್ಯಾಯಗಳು) ಅವನು ತನ್ನ ಕುರಿಗಳ ಕುರಿತು ಚಿಂತಿಸುವ “ಒಳ್ಳೇ ಕುರುಬ”ನಾಗಿ ತನ್ನನ್ನು ರುಜುಪಡಿಸಿದನು.—ಯೋಹಾನ 10:11-14.
ಯೇಸು ಕೆಲಸಮಾಡಲು ಇಚ್ಛೆಯುಳ್ಳವನಾಗಿದ್ದನು. ಒಂದು ಪ್ರಾಮುಖ್ಯ ಪಾಠವನ್ನು ಕಲಿಸುವ ಸಲುವಾಗಿ ಅವನು ತನ್ನ ಶಿಷ್ಯರ ಕಾಲುಗಳನ್ನು ತೊಳೆದನು. (ಯೋಹಾನ 13:4-15) ಇಸ್ರಾಯೇಲಿನ ಮಣ್ಣುದಾರಿಯಲ್ಲಿ ನಡೆದು ಹೋಗಿ ಸುವಾರ್ತೆಯನ್ನು ಸಾರಿದ್ದರಿಂದ ಅವನ ಕಾಲುಗಳೂ ಕೊಳಕಾದವು. (ಲೂಕ 8:1) ಅವನು “ಅಡವಿಗೆ” ಹೋಗಿ ದಣಿವಾರಿಸಿಕೊಳ್ಳಲು ನಿರ್ಧರಿಸಿದಾಗಲೂ, ಅವನಿಂದ ಹೆಚ್ಚಿನ ಬೋಧನೆಯನ್ನು ಪಡೆಯಲೆಂದು ಜನರ ಗುಂಪು ಅವನ ಬಳಿಗೆ ಬಂದಾಗ ಅವನು ಅವರಿಗೆ ಬೋಧಿಸಿದನು. (ಮಾರ್ಕ 6:30-34) ಈ ರೀತಿಯಲ್ಲಿ ಕಷ್ಟಪಟ್ಟು ದುಡಿಯುವ ವಿಷಯದಲ್ಲಿ ಅವನು ಎಲ್ಲ ಕ್ರೈಸ್ತರಿಗೆ ಒಂದು ಮಾದರಿಯನ್ನಿಟ್ಟನು.—1 ಯೋಹಾನ 2:6.
ಯೇಸು ತನ್ನ ನೇಮಕವನ್ನು ಮುಗಿಸಿ, ಭೂದೃಶ್ಯದಿಂದ ಹೋಗಿಬಿಟ್ಟನು. ಅವನ ನಂಬಿಗಸ್ತಿಕೆಯ ಪ್ರತಿಫಲವಾಗಿ, ಯೆಹೋವ ದೇವರು ಅವನಿಗೆ ಸ್ವರ್ಗದಲ್ಲಿ ರಾಜತ್ವ ಮತ್ತು ಅಮರತ್ವವನ್ನು ನೀಡಿದನು. ಪುನರುತ್ಥಿತ ಯೇಸುವಿನ ಕುರಿತು ಬೈಬಲ್ ಹೇಳುವುದು: “ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಇನ್ನೂ ಆತನನ್ನು ಆಳುವದಿಲ್ಲ.” (ರೋಮಾಪುರ 6:9) ಮಾನವಕುಲಕ್ಕೆ ಅತಿ ಉತ್ತಮ ನಾಯಕನು ಅವನೇ ಆಗಿದ್ದಾನೆ ಎಂಬುದರಲ್ಲಿ ನೀವು ದೃಢನಿಶ್ಚಿತರಾಗಿರಬಲ್ಲಿರಿ. ಒಮ್ಮೆ ಕ್ರಿಸ್ತನು ಇಡೀ ಭೂಮಿಯನ್ನು ತನ್ನ ಸಂಪೂರ್ಣ ಹತೋಟಿಗೆ ತೆಗೆದುಕೊಂಡ ಬಳಿಕ, ಮುಂದೆಂದೂ ಇನ್ನೊಬ್ಬ ವ್ಯಕ್ತಿಯನ್ನು ಅಧಿಕಾರಿಯನ್ನಾಗಿ ಮಾಡುವ ಅಗತ್ಯವಿಲ್ಲ, ಅಥವಾ ನಾಯಕತ್ವದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ. ಅಧಿಕಾರದಲ್ಲಿರುವಾಗ ಅವನು ಎಂದಿಗೂ ಕೊಲ್ಲಲ್ಪಡನು, ಮತ್ತು ಅವನು ಮಾಡಿದ ಕೆಲಸವು ಅವನ ಬಳಿಕ ಬರುವವನಿಂದ ಹಾಳುಮಾಡಲ್ಪಡುವುದಿಲ್ಲ ಇಲ್ಲವೆ ಧ್ವಂಸಮಾಡಲ್ಪಡುವುದಿಲ್ಲ. ಆದರೆ ಮಾನವಕುಲವು ಪ್ರಯೋಜನಪಡೆಯುವಂತೆ ಅವನು ನಿರ್ದಿಷ್ಟವಾಗಿ ಏನು ಮಾಡಲಿದ್ದಾನೆ?
ಈ ಹೊಸ ನಾಯಕನು ಮಾಡಲಿರುವ ಸಂಗತಿಗಳು
ಪರಿಪೂರ್ಣನೂ ಅಮರನೂ ಆದ ಈ ರಾಜನು ಹೇಗೆ ಆಳಲಿದ್ದಾನೆ ಎಂಬುದರ ಕುರಿತು ಕೀರ್ತನೆ 72ನೇ ಅಧ್ಯಾಯವು ಕೆಲವು ಪ್ರವಾದನಾತ್ಮಕ ವಿವರಗಳನ್ನು ನೀಡುತ್ತದೆ. ವಚನ 7 ಮತ್ತು 8ರಲ್ಲಿ ನಾವು ಓದುವುದು: “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. ಅವನು ಸಮುದ್ರದಿಂದ ಸಮುದ್ರದ ವರೆಗೂ [ಯೂಫ್ರೇಟೀಸ್] ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳಲಿ.” ಯೆಶಾಯ 11:1-9) ಶಾಂತಿಯು ಸಮೃದ್ಧವಾಗಿರುವುದು.
ಅವನ ಪ್ರಯೋಜನಾತ್ಮಕ ಆಳ್ವಿಕೆಯಡಿಯಲ್ಲಿ ಭೂಪ್ರಜೆಗಳು ನಿತ್ಯಕ್ಕೂ ಭದ್ರತೆಯನ್ನು ಅನುಭವಿಸುವರು. ಅಸ್ತಿತ್ವದಲ್ಲಿರುವ ಎಲ್ಲ ಆಯುಧಗಳನ್ನು ಅವನು ನಾಶಮಾಡುವನು ಮತ್ತು ಜನರ ಹೃದಯದಿಂದ ಕಾದಾಡುವ ಬಯಕೆಯನ್ನು ಸಹ ತೆಗೆದುಬಿಡುವನು. ಇಂದು ಇತರರನ್ನು ಕ್ರೂರ ಸಿಂಹದಂತೆ ಆಕ್ರಮಿಸುವವರು ಅಥವಾ ತಮ್ಮ ನೆರೆಯವರೊಂದಿಗೆ ಕೋಪದ ಕರಡಿಯಂತೆ ವ್ಯವಹರಿಸುವವರು ಸಂಪೂರ್ಣವಾಗಿ ಬದಲಾಗಿರುವರು. (ಕೀರ್ತನೆ 72 ಮುಂದಕ್ಕೆ ವಚನ 12ರಿಂದ 14ರಲ್ಲಿ ಹೀಗೆ ಹೇಳುತ್ತದೆ: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.” ದೀನದರಿದ್ರರು ಮತ್ತು ಕುಗ್ಗಿದವರು ಒಂದು ಸಂತೋಷಕರ ಮಾನವ ಕುಟುಂಬದ ಭಾಗವಾಗುವರು. ಅವರು, ರಾಜನಾದ ಯೇಸು ಕ್ರಿಸ್ತನ ನಾಯಕತ್ವದ ಕೆಳಗೆ ಐಕ್ಯರಾಗುವರು. ನೋವು ಮತ್ತು ನಿರಾಶೆಗೆ ಬದಲಾಗಿ ಆನಂದವು ಅವರ ಜೀವನದ ಅಂಶವಾಗುವುದು.—ಯೆಶಾಯ 35:10.
ವಚನ 16 ವಾಗ್ದಾನಿಸುವುದು: ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗುವುದು.’ ಹಸಿವೆಯೇ ಇಂದು ಲಕ್ಷಾಂತರ ಜನರ ನಿರಂತರ ಗೋಳಾಗಿದೆ. ಅನೇಕವೇಳೆ ರಾಜಕೀಯವು ಮತ್ತು ಲೋಭವು, ಯಾವುದೇ ತಾರತಮ್ಯವಿಲ್ಲದೆ ಬೇಕಾದಷ್ಟು ಆಹಾರವನ್ನು ಎಲ್ಲರಿಗೆ ವಿತರಿಸುವುದನ್ನು ತಡೆಯುತ್ತದೆ. ಇದರಿಂದಾಗಿ ಸಹಸ್ರಾರು ಜನರು, ಅದರಲ್ಲಿಯೂ ಮುಖ್ಯವಾಗಿ ಮಕ್ಕಳು ಹೊಟ್ಟೆಗಿಲ್ಲದೆ ಸಾಯುತ್ತಾರೆ. ಆದರೆ ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗೆ ಈ ಸಮಸ್ಯೆಯು ಇಲ್ಲದೆ ಹೋಗುವುದು. ಭೂಮಿಯು ರುಚಿಕರವಾದ ಆಹಾರದ ಒಳ್ಳೇ ಫಸಲುಗಳನ್ನು ಹೇರಳವಾಗಿ ಉತ್ಪಾದಿಸುವುದು. ಇಡೀ ಮಾನವಕುಲವು ಪುಷ್ಕಳವಾಗಿ ಉಣಿಸಲ್ಪಡುವುದು.
ಉತ್ತಮ ನಾಯಕತ್ವದ ಈ ಎಲ್ಲ ಆಶೀರ್ವಾದಗಳನ್ನು ನೀವು ಅನುಭವಿಸಲು ಬಯಸುತ್ತೀರೋ? ಒಂದುವೇಳೆ ನೀವು ಬಯಸುವಲ್ಲಿ, ಬೇಗನೆ ಇಡೀ ಭೂಮಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲಿರುವಂಥ ನಾಯಕನ ಕುರಿತು ಕಲಿಯುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಹಾಗೆ ಮಾಡುವಂತೆ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡುವರು. ನೀವು ನಿರಾಶೆಗೊಳ್ಳುವುದಿಲ್ಲ, ಏಕೆಂದರೆ ಯೆಹೋವ ದೇವರು ಸ್ವತಃ ತನ್ನ ಮಗನ ಕುರಿತು ಹೇಳಿದ್ದು: “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು.”—ಕೀರ್ತನೆ 2:5.
[ಪುಟ 5ರಲ್ಲಿರುವ ಚೌಕ]
ಇದ್ದಕ್ಕಿದ್ದಂತೆ ಅಧಿಕಾರವನ್ನು ಕಳೆದುಕೊಳ್ಳುವುದು
ಒಬ್ಬ ಅಧಿಕಾರಿಯು ತನ್ನ ಪ್ರಜೆಗಳಿಗೆ ಸಾಕಷ್ಟು ಮಟ್ಟಿಗಿನ ಶಾಂತಿಯನ್ನು ಮತ್ತು ಭದ್ರ ಜೀವನ ಪರಿಸ್ಥಿತಿಯನ್ನು ತರುವುದಾದರೆ, ಅವನು ಪ್ರಜೆಗಳ ಗೌರವ ಮತ್ತು ಬೆಂಬಲವನ್ನು ಗಳಿಸಸಾಧ್ಯವಿದೆ. ಆದರೆ, ಯಾವುದೇ ಕಾರಣಕ್ಕಾಗಿ ಜನರು ಅವನ ಮೇಲಿನ ಭರವಸೆಯನ್ನು ಕಳೆದುಕೊಂಡರೆ, ಬೇಗನೆ ಅವನ ಸ್ಥಾನದಲ್ಲಿ ಇನ್ನೊಬ್ಬನು ಅಧಿಕಾರದಲ್ಲಿರಬಹುದು. ಪ್ರಬಲ ಅಧಿಕಾರಿಗಳು ತಮ್ಮ ಸ್ಥಾನವನ್ನು ಥಟ್ಟನೆ ಕಳೆದುಕೊಳ್ಳುವಂತೆ ಮಾಡಿದ ಪರಿಸ್ಥಿತಿಗಳ ಕೆಲವು ಉದಾಹರಣೆಗಳು ಇಲ್ಲಿವೆ.
ಕೆಟ್ಟ ಜೀವನ ಪರಿಸ್ಥಿತಿಗಳು. 18ನೇ ಶತಮಾನದ ಅಂತ್ಯದಷ್ಟಕ್ಕೆ, ಫ್ರಾನ್ಸಿನ ಅನೇಕ ನಿವಾಸಿಗಳು ವಿಪರೀತ ತೆರಿಗೆಯನ್ನು ತೆರುವಂತೆ ಆದರೆ ಆಹಾರದ ಕೊರತೆಯಲ್ಲಿ ಜೀವಿಸುವಂತೆ ಒತ್ತಾಯಿಸಲ್ಪಟ್ಟರು. ಈ ಪರಿಸ್ಥಿತಿಗಳು ಫ್ರಾನ್ಸಿನ ಕ್ರಾಂತಿಗೆ ನಡೆಸಿತು. ಇದರ ಪರಿಣಾಮವಾಗಿ, 1793ರಲ್ಲಿ ಅರಸನಾದ 16ನೇ ಲೂಯಿಗೆ ಶಿರಚ್ಛೇದನವಾಯಿತು.
ಯುದ್ಧ. ಒಂದನೇ ಲೋಕ ಯುದ್ಧವು, ಇತಿಹಾಸದಲ್ಲಿಯೇ ಅತಿ ಪ್ರಬಲರಾದ ಕೆಲವು ಸಾಮ್ರಾಟರ ಅಧಿಕಾರವನ್ನು ಕೊನೆಗೊಳಿಸಿತು. ಉದಾಹರಣೆಗಾಗಿ, ರಷ್ಯದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ 1917ರಲ್ಲಿ ಯುದ್ಧದಿಂದುಂಟಾದ ಆಹಾರದ ಅಭಾವವು ಫೆಬ್ರವರಿ ಕ್ರಾಂತಿಗೆ ನಡೆಸಿತು. ಈ ಕ್ರಾಂತಿಯು, ಚಕ್ರವರ್ತಿಯಾದ 2ನೇ ನಿಕೊಲಸ್ ತನ್ನ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಿತು ಮತ್ತು ಕಮ್ಯೂನಿಸ್ಟ್ ಆಡಳಿತವು ಆರಂಭಗೊಂಡಿತು. 1918ರ ನವೆಂಬರ್ ತಿಂಗಳಿನಲ್ಲಿ, ಜರ್ಮನಿಯು ಶಾಂತಿಯನ್ನು ಬಯಸಿತಾದರೂ ಅಧಿಕಾರದಲ್ಲಿ ಒಂದು ಬದಲಾವಣೆಯನ್ನು ಮಾಡುವ ತನಕ ಮಿತ್ರಪಕ್ಷಗಳು ಹೋರಾಟವನ್ನು ನಿಲ್ಲಿಸಲು ನಿರಾಕರಿಸಿದವು. ಇದರ ಪರಿಣಾಮವಾಗಿ, ಜರ್ಮನಿಯ ಚಕ್ರವರ್ತಿಯಾದ 2ನೇ ವಿಲ್ಹೆಲ್ಮ್‌ನನ್ನು ನಿರ್ಬಂಧದಿಂದ ನೆದರ್ಲೆಂಡ್ಸ್‌ಗೆ ಬಂಧಿವಾಸಿಯಾಗಿ ಕರೆದೊಯ್ಯಲಾಯಿತು.
ಬೇರೆ ರೀತಿಯ ಸರಕಾರ ವ್ಯವಸ್ಥೆಯನ್ನು ಹೊಂದುವ ಇಚ್ಛೆ. 1989ರಲ್ಲಿ ಕಬ್ಬಿಣದ ಪರದೆಯು ಬಿದ್ದುಹೋಯಿತು. ಬಂಡೆಯಷ್ಟು ಬಲವಾಗಿರುವಂತೆ ತೋರುತ್ತಿದ್ದ ಆಡಳಿತಗಳು ನುಚ್ಚುನೂರಾದವು, ಯಾಕಂದರೆ ಅವುಗಳ ಪ್ರಜೆಗಳು ಕಮ್ಯೂನಿಸ್ಟ್ ಆಳ್ವಿಕೆಯನ್ನು ತೊರೆದು ವಿವಿಧ ರೂಪದ ಆಳ್ವಿಕೆಯನ್ನು ಸ್ಥಾಪಿಸಿದರು.
[ಪುಟ 7ರಲ್ಲಿರುವ ಚಿತ್ರಗಳು]
ಯೇಸು ಹಸಿದವರಿಗೆ ಉಣಿಸಿದನು, ಅಸ್ವಸ್ಥರನ್ನು ವಾಸಿಮಾಡಿದನು, ಮತ್ತು ಎಲ್ಲಾ ಕ್ರೈಸ್ತರಿಗೆ ಒಂದು ಉತ್ತಮ ಮಾದರಿಯನ್ನು ಇಟ್ಟನು
[ಪುಟ 4ರಲ್ಲಿರುವ ಚಿತ್ರ ಕೃಪೆ]
ಲಾಯಿಡ್ ಜಾರ್ಜ್: Photo by Kurt Hutton/Picture Post/Getty Images