ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ದೀನತೆಯು ನಮಗೆ ಯಾವ ಅರ್ಥದಲ್ಲಿದೆ?

ಯೆಹೋವನ ದೀನತೆಯು ನಮಗೆ ಯಾವ ಅರ್ಥದಲ್ಲಿದೆ?

ಯೆಹೋವನ ದೀನತೆಯು ನಮಗೆ ಯಾವ ಅರ್ಥದಲ್ಲಿದೆ?

ದಾವೀದನು ಕಷ್ಟಗಳನ್ನು ಎದುರಿಸಿದ ಒಬ್ಬ ವ್ಯಕ್ತಿಯಾಗಿದ್ದನು. ಅವನು ತನ್ನ ಮಾವನಾದ ಸೌಲನಿಂದ ದುರುಪಚರಿಸಲ್ಪಟ್ಟನು. ಇದಕ್ಕೆ ಸೌಲನ ಹೊಟ್ಟೆಕಿಚ್ಚು ಕಾರಣವಾಗಿತ್ತು. ಸೌಲನು ಮೂರು ಬಾರಿ ದಾವೀದನನ್ನು ಈಟಿಯಿಂದ ಕೊಲ್ಲಲು ಪ್ರಯತ್ನಿಸಿದನು ಮತ್ತು ಸತತವಾಗಿ ದಾವೀದನನ್ನು ಸೌಲನು ಬೇಟೆಯಾಡಿದ ಕಾರಣ ಅವನು ಪಲಾಯನಗೈಯಬೇಕಾಯಿತು. (1 ಸಮುವೇಲ 18:11; 19:10; 26:20) ಹಾಗಿದ್ದರೂ, ಯೆಹೋವನು ದಾವೀದನೊಂದಿಗಿದ್ದನು. ಕೇವಲ ಸೌಲನ ಕೈಯಿಂದ ಮಾತ್ರವಲ್ಲ ಅವನ ಇತರ ವೈರಿಗಳ ಕೈಯಿಂದಲೂ ಯೆಹೋವನು ಅವನನ್ನು ಕಾಪಾಡಿದನು. ಆದುದರಿಂದ, ಈ ಗೀತೆಯಲ್ಲಿ ವ್ಯಕ್ತವಾಗುವ ದಾವೀದನ ಭಾವನೆಗಳನ್ನು ನಾವು ಗಣ್ಯಮಾಡಬಲ್ಲೆವು: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ; [ಯೆಹೋವನೇ] ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” (2 ಸಮುವೇಲ 22:​2, 36) ಇಸ್ರಾಯೇಲಿನಲ್ಲಿ ದಾವೀದನು ತಕ್ಕಮಟ್ಟಿಗಿನ ಸ್ಥಾನವನ್ನು ಗಳಿಸಿದ್ದನು. ಹಾಗಾದರೆ, ಇದರಲ್ಲಿ ಯೆಹೋವನ ದೀನತೆಯು ಹೇಗೆ ಒಳಗೂಡಿದೆ?

ಯೆಹೋವನು ದೀನನು ಎಂದು ಶಾಸ್ತ್ರವಚನಗಳು ಹೇಳುವಾಗ, ಇದು ಆತನಿಗೆ ಯಾವುದೇ ವಿಧದಲ್ಲಿ ಇತಿಮಿತಿಗಳಿವೆ ಅಥವಾ ಆತನು ಇತರರಿಗೆ ಅಧೀನನು ಎಂಬ ಅರ್ಥವನ್ನು ನೀಡುವುದಿಲ್ಲ. ಬದಲಾಗಿ, ಆತನ ಅಂಗೀಕಾರವನ್ನು ಪಡೆಯಲು ಯಥಾರ್ಥವಾಗಿ ಪರಿಶ್ರಮಿಸುವ ಮಾನವರ ಕಡೆಗೆ ಆತನಿಗೆ ಆಳವಾದ ಕನಿಕರವಿದೆ ಮತ್ತು ಆತನು ಅವರಿಗೆ ಕರುಣೆಯನ್ನು ತೋರಿಸುತ್ತಾನೆ ಎಂಬುದನ್ನು ಈ ಸುಂದರವಾದ ಗುಣವು ಸೂಚಿಸುತ್ತದೆ. ಕೀರ್ತನೆ 113:​6, 7ರಲ್ಲಿ ನಾವು ಓದುವುದು: ‘[ಯೆಹೋವನು] ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ. ಆತನು ದೀನರನ್ನು ಧೂಳಿಯಿಂದ ಎಬ್ಬಿಸುತ್ತಾನೆ.’ ಆತನು “ಬಾಗುತ್ತಾನೆ” ಎಂಬುದು, ಆತನು “ನೋಡಲಿಕ್ಕಾಗಿ ತನ್ನನ್ನು ತಗ್ಗಿಸಿಕೊಳ್ಳುತ್ತಾನೆ” ಎಂಬ ಅರ್ಥವನ್ನು ಕೊಡುತ್ತದೆ. (ಟುಡೇಸ್‌ ಇಂಗ್ಲಿಷ್‌ ವರ್ಷನ್‌; ಯಂಗ್ಸ್‌ ಲಿಟರಲ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಬೈಬಲ್‌) ಅಪರಿಪೂರ್ಣನಾಗಿದ್ದರೂ ದೇವರನ್ನು ಸೇವಿಸಬೇಕೆಂಬ ಇಚ್ಛೆಯಿದ್ದ ದೀನ ಮನುಷ್ಯನಾದ ದಾವೀದನಿಗೆ ಗಮನಕೊಡುವ ಸಲುವಾಗಿ, ಯೆಹೋವನು ಸ್ವರ್ಗದಿಂದ ‘ಬಾಗಿದನು’ ಅಥವಾ ‘ತನ್ನನ್ನು ತಗ್ಗಿಸಿಕೊಂಡನು.’ ಆದುದರಿಂದ, ದಾವೀದನು ನಮಗೆ ಪುನರಾಶ್ವಾಸನೆ ನೀಡುವುದು: “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ.” (ಕೀರ್ತನೆ 138:⁠6) ದಾವೀದನೊಂದಿಗೆ ದೇವರು ವ್ಯವಹರಿಸಿದ ಕರುಣಾಭರಿತ, ತಾಳ್ಮೆಯ ಮತ್ತು ಕನಿಕರದ ವಿಧಾನವು ದೇವರ ಚಿತ್ತವನ್ನು ಮಾಡುವ ಎಲ್ಲರಿಗೂ ಒಂದು ಉತ್ತೇಜನದಾಯಕ ವಿಷಯವಾಗಿದೆ.

ಪರಮಾಧಿಕಾರಿಯಾದ ಯೆಹೋವನು ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನವನ್ನು ಹೊಂದಿರುವುದಾದರೂ, ನಮ್ಮಲ್ಲಿ ಪ್ರತಿಯೊಬ್ಬರೊಂದಿಗೆ ವ್ಯವಹರಿಸಲು ಆತನು ಇಚ್ಛೆಯುಳ್ಳವನಾಗಿದ್ದಾನೆ. ಅತಿ ಕಷ್ಟಕರ ಸನ್ನಿವೇಶಗಳಲ್ಲಿ ಸಹ ನಮ್ಮನ್ನು ಎಂದಿಗೂ ಆಶಾಭಂಗಗೊಳಿಸದಂಥ ಆತನ ಸಹಾಯಹಸ್ತದಲ್ಲಿ ನಾವು ಭರವಸೆಯಿಡಬಹುದೆಂಬ ಆಶ್ವಾಸನೆಯನ್ನು ಇದು ನಮಗೆ ನೀಡುತ್ತದೆ. ಆತನು ನಮ್ಮನ್ನು ಮರೆತುಬಿಡುವನು ಎಂದು ಭಯಪಡಲು ಯಾವುದೇ ಕಾರಣವಿಲ್ಲ. ತನ್ನ ಜನರಾದ ಪುರಾತನ ಇಸ್ರಾಯೇಲ್ಯರ ಕುರಿತು ಯೆಹೋವನಿಗಿದ್ದ ಚಿಂತನೆಯನ್ನು ಸೂಕ್ತವಾಗಿಯೇ ಹೀಗೆ ತಿಳಿಸಲಾಗಿದೆ: “[ಅವರು] ದೀನಾವಸ್ಥೆಯಲ್ಲಿದ್ದಾಗ [ಅವರನ್ನು] ನೆನಪುಮಾಡಿಕೊಂಡನು; ಆತನ ಕೃಪೆಯು ಶಾಶ್ವತವಾದದ್ದು.”​—⁠ಕೀರ್ತನೆ 136:23.

ಯೆಹೋವನ ಆಧುನಿಕ ದಿನದ ಸೇವಕರೋಪಾದಿ ದಾವೀದನಂತೆ ನಾವು ಸಹ ಕಷ್ಟಕರ ಸನ್ನಿವೇಶವನ್ನು ಎದುರಿಸಬಹುದು. ದೇವರನ್ನು ತಿಳಿಯದವರಿಂದ ನಾವು ಕುಚೋದ್ಯವನ್ನು ಎದುರಿಸಬಹುದು, ಅಥವಾ ಒಂದುವೇಳೆ ನಾವು ನ್ಯೂನ ಆರೋಗ್ಯದಿಂದಾಗಿ ಸಂಕಟಪಡುತ್ತಿರಬಹುದು ಇಲ್ಲವೆ ನಮ್ಮ ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡಿರಬಹುದು. ನಮ್ಮ ಪರಿಸ್ಥಿತಿಯು ಏನೇ ಆಗಿರಲಿ, ನಮ್ಮ ಹೃದಯವು ಯಥಾರ್ಥವಾಗಿರುವಲ್ಲಿ ನಾವು ಪ್ರಾರ್ಥನೆಯಲ್ಲಿ ಯೆಹೋವನನ್ನು ಸಮೀಪಿಸಬಲ್ಲೆವು ಮತ್ತು ಆತನ ಕರುಣೆಗಾಗಿ ಬೇಡಿಕೊಳ್ಳಬಲ್ಲೆವು. ಯೆಹೋವನು ನಮ್ಮನ್ನು ಗಮನಿಸಲು “ಬಾಗುತ್ತಾನೆ” ಮತ್ತು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ. ಪ್ರೇರಿತ ಕೀರ್ತನೆಗಾರನು ಬರೆದದ್ದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” (ಕೀರ್ತನೆ 34:15) ಯೆಹೋವನ ಕೋಮಲ ಗುಣವಾದ ದೀನತೆಯನ್ನು ಪ್ರತಿಬಿಂಬಿಸುವಂತೆ ಇದು ನಿಮ್ಮ ಹೃದಯವನ್ನು ಪ್ರಚೋದಿಸುವುದಿಲ್ಲವೇ?

[ಪುಟ 30ರಲ್ಲಿರುವ ಚಿತ್ರಗಳು]

ಯೆಹೋವನು ದಾವೀದನ ಪ್ರಾರ್ಥನೆಗಳನ್ನು ಆಲಿಸಿದಂತೆಯೇ ಇಂದು ನಮ್ಮ ಪ್ರಾರ್ಥನೆಗಳನ್ನು ಆಲಿಸುವ ಇಚ್ಛೆಯುಳ್ಳವನಾಗಿದ್ದಾನೆ