ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತ ಸಭೆಯು ಹೊಟ್ಟೆಬಾಕತನವನ್ನು ಹೇಗೆ ವೀಕ್ಷಿಸುತ್ತದೆ?

ದೇವರ ವಾಕ್ಯವು ಕುಡಿಕತನ ಮತ್ತು ಹೊಟ್ಟೆಬಾಕತನ ಇವೆರಡನ್ನೂ ಖಂಡಿಸುತ್ತದೆ. ಇವು ದೇವರನ್ನು ಸೇವಿಸುವವರಿಗೆ ಸ್ವೀಕಾರಾರ್ಹವಾದ ನಡತೆಗಳಲ್ಲ ಎಂಬುದಾಗಿ ಅದು ತಿಳಿಸುತ್ತದೆ. ಆದುದರಿಂದ, ಕ್ರೈಸ್ತ ಸಭೆಯು ರೂಢಿಗತವಾಗಿ ಕುಡಿಯುತ್ತಾ ಇರುವ ಕುಡುಕನೊಬ್ಬನನ್ನು ವೀಕ್ಷಿಸುವಂತೆಯೇ ದೃಢೀಕರಿಸಲ್ಪಟ್ಟ ಹೊಟ್ಟೆಬಾಕನನ್ನೂ ವೀಕ್ಷಿಸುತ್ತದೆ. ಕುಡುಕನಾಗಲಿ ಅಥವಾ ಹೊಟ್ಟೆಬಾಕನಾಗಲಿ ಕ್ರೈಸ್ತ ಸಭೆಯ ಭಾಗವಾಗಿರಲಾರನು.

ಜ್ಞಾನೋಕ್ತಿ 23:​20, 21 ಹೇಳುವುದು: “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು. ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು; ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವದು.” ಧರ್ಮೋಪದೇಶಕಾಂಡ 21:20ರಲ್ಲಿ (ಪರಿಶುದ್ಧ ಬೈಬಲ್‌ *), ಮೋಶೆಯ ಧರ್ಮಶಾಸ್ತ್ರದ ಕೆಳಗೆ ಮರಣದಂಡನೆಗೆ ಪಾತ್ರನಾಗಿರುವ ‘ಹಠಮಾರಿಯೂ ಅವಿಧೇಯನೂ’ ಆಗಿರುವ ಒಬ್ಬ ವ್ಯಕ್ತಿಯ ಕುರಿತು ನಾವು ಓದುತ್ತೇವೆ. ಈ ವಚನಕ್ಕನುಸಾರ, ‘ಬಹಳವಾಗಿ ತಿಂದು ಕುಡಿಯುವುದು’ ಆ ಅವಿಧೇಯನೂ ಪಶ್ಚಾತ್ತಾಪರಹಿತನೂ ಆದ ವ್ಯಕ್ತಿಯ ಎರಡು ಗುಣಲಕ್ಷಣಗಳಾಗಿವೆ. ಪುರಾತನ ಇಸ್ರಾಯೇಲಿನಲ್ಲಿ, ದೇವರನ್ನು ಸೇವಿಸಲು ಬಯಸಿದ ವ್ಯಕ್ತಿಗಳ ಮಧ್ಯೆ ಹೊಟ್ಟೆಬಾಕತನವನ್ನು ಒಂದು ಸ್ವೀಕಾರಾರ್ಹವಾದ ನಡತೆಯಾಗಿ ವೀಕ್ಷಿಸಲಾಗುತ್ತಿರಲಿಲ್ಲ ಎಂಬುದು ಸ್ಪಷ್ಟ.

ಆದರೆ, ಹೊಟ್ಟೆಬಾಕತನ ಎಂದರೆ ಏನು, ಮತ್ತು ಈ ವಿಷಯದ ಕುರಿತಾಗಿ ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳು ಏನನ್ನುತ್ತವೆ? ಹೊಟ್ಟೆಬಾಕನನ್ನು, “ವಾಡಿಕೆಯಾಗಿ ಅತಿಯಾಗಿ ತಿಂದು ಕುಡಿಯುವವನು” ಎಂದು ಅರ್ಥನಿರೂಪಿಸಲಾಗಿದೆ. ಆದುದರಿಂದ, ಹೊಟ್ಟೆಬಾಕತನವು ಒಂದು ರೀತಿಯ ಲೋಭವಾಗಿದೆ ಮತ್ತು “ಲೋಭಿಗಳು” ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂದು ದೇವರ ವಾಕ್ಯವು ತಿಳಿಸುತ್ತದೆ. (1 ಕೊರಿಂಥ 6:9, 10; ಫಿಲಿಪ್ಪಿ 3:18, 19; 1 ಪೇತ್ರ 4:3) ಅಷ್ಟುಮಾತ್ರವಲ್ಲದೆ, “ಶರೀರಭಾವದ ಕರ್ಮ”ಗಳನ್ನು ಅಭ್ಯಾಸಿಸುವುದರ ವಿರುದ್ಧ ಅಪೊಸ್ತಲ ಪೌಲನು ಕ್ರೈಸ್ತರನ್ನು ಎಚ್ಚರಿಸಿದಾಗ, “ಕುಡಿಕತನ ದುಂದೌತನ ಇಂಥವುಗಳೇ” ಎಂಬುದಾಗಿ ತಿಳಿಸಿದನು. (ಗಲಾತ್ಯ 5:​19-21) ಕುಡಿಕತನ ಮತ್ತು ದುಂದೌತನದೊಂದಿಗೆ ಅನೇಕವೇಳೆ ಅತಿಯಾಗಿ ತಿನ್ನುವುದು ಜೊತೆಗೂಡಿರುತ್ತದೆ. ಅಷ್ಟುಮಾತ್ರವಲ್ಲದೆ, ‘ಇಂಥವುಗಳು’ ಎಂದು ಪೌಲನು ಹೇಳಿದ ಹೇಳಿಕೆಯಲ್ಲಿ ಖಂಡಿತವಾಗಿಯೂ ಹೊಟ್ಟೆಬಾಕತನವು ಒಳಗೂಡಿದೆ. ಇತರ “ಶರೀರಭಾವದ ಕರ್ಮ”ಗಳಂತೆ, ಹೊಟ್ಟೆಬಾಕತನಕ್ಕೆ ಕುಖ್ಯಾತನಾಗಿರುವ ಮತ್ತು ಲೋಭದ ತನ್ನ ಆ ನಡತೆಯನ್ನು ಬದಲಾಯಿಸಿಕೊಳ್ಳಲು ಹಠಮಾರಿತನದಿಂದ ನಿರಾಕರಿಸುವ ಕ್ರೈಸ್ತನೊಬ್ಬನನ್ನು ಸಭೆಯಿಂದ ತೆಗೆದುಹಾಕಲೇಬೇಕು.​—⁠1 ಕೊರಿಂಥ 5:​11, 13. *

ಕುಡುಕನನ್ನು ಮತ್ತು ಹೊಟ್ಟೆಬಾಕನನ್ನು ದೇವರ ವಾಕ್ಯವು ಒಂದೇ ರೀತಿಯಾಗಿ ಪರಿಗಣಿಸುತ್ತದಾದರೂ, ಹೊಟ್ಟೆಬಾಕನಿಗಿಂತ ಕುಡುಕನನ್ನು ಗುರುತಿಸುವುದು ಸುಲಭ. ಕುಡಿಕತನದ ಚಿಹ್ನೆಗಳು ಸುಲಭವಾಗಿ ಕಣ್ಣಿಗೆ ಕಾಣುವಂಥವುಗಳಾಗಿರುತ್ತವೆ. ಆದರೆ, ಯಾವ ಹಂತದಲ್ಲಿ ಒಬ್ಬ ವ್ಯಕ್ತಿಯನ್ನು ದೃಢೀಕರಿಸಲ್ಪಟ್ಟ ಹೊಟ್ಟೆಬಾಕನೆಂದು ನಿರ್ಧರಿಸಬಹುದು ಎಂಬುದನ್ನು ತಿಳಿಯುವುದು ಕಷ್ಟಕರ, ಏಕೆಂದರೆ ಕೇವಲ ಹೊರತೋರಿಕೆಯಿಂದ ಅದನ್ನು ನಿರ್ಧರಿಸಸಾಧ್ಯವಿಲ್ಲ. ಆದುದರಿಂದ, ಈ ವಿಷಯಕ್ಕೆ ಸಂಬಂಧಿಸಿದ ನಿರ್ಣಯವನ್ನು ಮಾಡುವಾಗ ಸಭೆಯಲ್ಲಿರುವ ಹಿರಿಯರು ಬಹು ಜಾಗ್ರತೆಯನ್ನು ಮತ್ತು ವಿವೇಚನಾಶಕ್ತಿಯನ್ನು ಉಪಯೋಗಿಸಬೇಕಾದ ಅಗತ್ಯವಿದೆ.

ಉದಾಹರಣೆಗೆ, ಸ್ಥೂಲಕಾಯವು ಹೊಟ್ಟೆಬಾಕತನದ ಸೂಚನೆಯಾಗಿರಬಹುದು. ಆದರೆ, ಅದು ಯಾವಾಗಲೂ ಸತ್ಯವಾಗಿರುವುದಿಲ್ಲ. ಒಬ್ಬ ವ್ಯಕ್ತಿಯು ಸ್ಥೂಲಕಾಯನಾಗಿರುವುದಕ್ಕೆ ಒಂದು ಅಸ್ವಸ್ಥವು ಕಾರಣವಾಗಿರಬಹುದು. ಕೆಲವೊಮ್ಮೆ ಆನುವಂಶಿಕ ಸಂಗತಿಗಳು ಸಹ ಸ್ಥೂಲಕಾಯವನ್ನು ಹೊಂದಿರುವುದಕ್ಕೆ ಕಾರಣವಾಗಿರುತ್ತವೆ. ನಾವು ಮನಸ್ಸಿನಲ್ಲಿಡಬೇಕಾದ ಇನ್ನೊಂದು ವಿಷಯವೇನೆಂದರೆ, ಸ್ಥೂಲಕಾಯವು ಒಂದು ದೈಹಿಕ ಸ್ಥಿತಿಯಾಗಿದೆ, ಆದರೆ ಹೊಟ್ಟೆಬಾಕತನವು ಒಂದು ಮನೋಭಾವವಾಗಿದೆ. ಸ್ಥೂಲಕಾಯವನ್ನು ವಿಪರೀತ ಬೊಜ್ಜುಳ್ಳ ಶಾರೀರಿಕ ಸ್ಥಿತಿ ಎಂದು ಅರ್ಥನಿರೂಪಿಸಲಾಗಿದೆ, ಆದರೆ ಹೊಟ್ಟೆಬಾಕತನವನ್ನು ಲೋಭ ಅಥವಾ ಅತಿಯಾದ ಸುಖಾನುಭವ ಎಂಬುದಾಗಿ ಅರ್ಥನಿರೂಪಿಸಲಾಗಿದೆ. ಆದುದರಿಂದ, ಹೊಟ್ಟೆಬಾಕತನವು ಒಬ್ಬನ ಶರೀರದ ಗಾತ್ರದಿಂದ ನಿರ್ಣಯಿಸಲ್ಪಡುವುದಿಲ್ಲ, ಬದಲಾಗಿ ಆಹಾರದ ಕಡೆಗೆ ಅವನಿಗಿರುವ ಮನೋಭಾವದಿಂದ ನಿರ್ಣಯಿಸಲ್ಪಡುತ್ತದೆ. ಒಬ್ಬ ವ್ಯಕ್ತಿಯು ಸಾಮಾನ್ಯ ಗಾತ್ರದ ಶರೀರವನ್ನು ಹೊಂದಿರಬಹುದಾದರೂ ಅಥವಾ ಒಂದುವೇಳೆ ತೆಳ್ಳಗಿನ ಮೈಕಟ್ಟಿನವನಾಗಿದ್ದರೂ, ಹೊಟ್ಟೆಬಾಕನಾಗಿರಬಲ್ಲನು. ಅಷ್ಟುಮಾತ್ರವಲ್ಲದೆ, ಯಾವುದನ್ನು ಒಂದು ಆದರ್ಶ ದೇಹತೂಕ ಅಥವಾ ಆಕಾರವೆಂದು ವೀಕ್ಷಿಸಲಾಗುತ್ತದೋ ಅದು ಸ್ಥಳದಿಂದ ಸ್ಥಳಕ್ಕೆ ಬಹಳಷ್ಟು ವ್ಯತ್ಯಾಸವಾಗಿರುತ್ತದೆ.

ಹೊಟ್ಟೆಬಾಕತನದ ಸೂಚನೆಗಳಾವುವು? ಹೊಟ್ಟೆಬಾಕನು ಯಾವಾಗಲೂ ಹತೋಟಿಯನ್ನು ಕಳೆದುಕೊಳ್ಳುತ್ತಾನೆ, ತನಗೆ ಅಹಿತ ಅಥವಾ ಅಸೌಖ್ಯದ ಅನಿಸಿಕೆಯಾಗುವ ಹಂತದ ವರೆಗೆ ಆಹಾರವನ್ನು ಗಬಗಬನೆ ತಿನ್ನುತ್ತಾನೆ. ಅವನ ಸ್ವನಿಯಂತ್ರಣದ ಕೊರತೆಯು ತಾನೇ, ಯೆಹೋವನ ಮತ್ತು ಆತನ ಜನರ ಒಳ್ಳೇ ಹೆಸರಿನ ಮೇಲೆ ಅವನು ತರುವ ಕಳಂಕದ ಕುರಿತು ಅವನಿಗೆ ಯಾವುದೇ ನಿಜವಾದ ಚಿಂತೆಯಿಲ್ಲ ಎಂಬುದನ್ನು ಸೂಚಿಸುತ್ತದೆ. (1 ಕೊರಿಂಥ 10:31) ಇನ್ನೊಂದು ಬದಿಯಲ್ಲಿ, ಕೆಲವೊಂದು ಸಂದರ್ಭಗಳಲ್ಲಿ ಅತಿಯಾಗಿ ಊಟಮಾಡುವವನನ್ನು ಕೂಡಲೆ “ಲೋಭಿ” ಎಂದು ವೀಕ್ಷಿಸಲಾಗುವುದಿಲ್ಲ. (ಎಫೆಸ 5:⁠5) ಹಾಗಿದ್ದರೂ, ಗಲಾತ್ಯ 6:1ರ (NW) ತಾತ್ಪರ್ಯಕ್ಕನುಸಾರ ಅಂಥ ಕ್ರೈಸ್ತನಿಗೂ ಸಹಾಯದ ಅಗತ್ಯವಿರಬಹುದು. ಪೌಲನು ತಿಳಿಸುವುದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ, ಅವನ ಅರಿವಿಗೆ ಬರುವ ಮುಂಚೆಯೇ ತಪ್ಪು ಹೆಜ್ಜೆಯನ್ನು ತೆಗೆದುಕೊಳ್ಳುವಲ್ಲಿ, ಆಧ್ಯಾತ್ಮಿಕ ಅರ್ಹತೆಗಳುಳ್ಳ ನೀವು ಅಂಥವನನ್ನು ಸೌಮ್ಯ ಮನೋಭಾವದಿಂದ ಸರಿಹೊಂದಿಸಲು ಪ್ರಯತ್ನಿಸಿರಿ.”

ಅತಿಯಾಗಿ ತಿನ್ನುವುದನ್ನು ತ್ಯಜಿಸಬೇಕೆಂಬ ಬೈಬಲಿನ ಸಲಹೆಯು ಇಂದು ಏಕೆ ಅಷ್ಟು ಪ್ರಾಮುಖ್ಯವಾಗಿದೆ? ಏಕೆಂದರೆ, ನಮ್ಮ ದಿನಗಳ ಕುರಿತು ಯೇಸು ಎಚ್ಚರಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.” (ಲೂಕ 21:34, 35) ಆಧ್ಯಾತ್ಮಿಕವಾಗಿ ಗಂಡಾಂತರಕ್ಕೊಳಪಡಿಸುವ ಜೀವನ ಶೈಲಿಯಿಂದ ದೂರವಿರುವ ಒಂದು ಪ್ರಾಮುಖ್ಯ ವಿಧಾನವು ಹೊಟ್ಟೆಬಾಕತನವನ್ನು ತ್ಯಜಿಸುವುದೇ ಆಗಿದೆ.

ಮಿತಸ್ವಭಾವವು ಕ್ರೈಸ್ತ ಸದ್ಗುಣವಾಗಿದೆ. (1 ತಿಮೊಥೆಯ 3:​2, 11, NW) ಆದುದರಿಂದ, ತಿನ್ನುವ ಮತ್ತು ಕುಡಿಯುವ ಹವ್ಯಾಸದ ಕುರಿತು ಬೈಬಲಿನ ಸಲಹೆಯನ್ನು ಅನ್ವಯಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಿರುವ ಎಲ್ಲರಿಗೆ ಯೆಹೋವನು ಖಂಡಿತವಾಗಿಯೂ ಸಹಾಯಮಾಡುವನು.​—⁠ಇಬ್ರಿಯ 4:16.

[ಪಾದಟಿಪ್ಪಣಿಗಳು]

^ ಪ್ಯಾರ. 4 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 5 ಮೇ 1, 1986ರ ಕಾವಲಿನಬುರುಜು (ಇಂಗ್ಲಿಷ್‌) ಸಂಚಿಕೆಯ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ನೋಡಿ.