ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವನ್ನು ಧೈರ್ಯದಿಂದ ನುಡಿಯಿರಿ

ದೇವರ ವಾಕ್ಯವನ್ನು ಧೈರ್ಯದಿಂದ ನುಡಿಯಿರಿ

ದೇವರ ವಾಕ್ಯವನ್ನು ಧೈರ್ಯದಿಂದ ನುಡಿಯಿರಿ

‘ನೀನು ಹೋಗಿ ನನ್ನ ಜನರಿಗೆ ಪ್ರವಾದನೆಮಾಡು.’​—⁠ಆಮೋಸ 7:15.

ಯೆಹೋವನ ಸೇವಕನೊಬ್ಬನು ಶುಶ್ರೂಷೆಯಲ್ಲಿ ತೊಡಗಿದ್ದಾಗ ಒಬ್ಬ ಯಾಜಕನು ಅವನಿಗೆ ಎದುರಾದನು. ಆ ಯಾಜಕನು ಹೀಗೆಂದು ಕೂಗಿ ಹೇಳಿದನು: ‘ನಿನ್ನ ಸಾರುವಿಕೆಯನ್ನು ನಿಲ್ಲಿಸು! ಈ ಕ್ಷಣ ಇಲ್ಲಿಂದ ಹೊರಟುಹೋಗು!’ ಆಗ ಆ ಸೇವಕನು ಏನು ಮಾಡಿದನು? ಆ ತಗಾದೆಗೆ ಮಣಿದನೋ, ಇಲ್ಲವೆ ದೇವರ ವಾಕ್ಯವನ್ನು ಧೈರ್ಯದಿಂದ ನುಡಿಯುತ್ತಾ ಹೋದನೊ? ಇದನ್ನು ನೀವೇ ಕಂಡುಕೊಳ್ಳಬಲ್ಲಿರಿ, ಏಕೆಂದರೆ ಆ ಸೇವಕನು ತನ್ನ ಅನುಭವಗಳನ್ನು ತನ್ನದೇ ಹೆಸರುಳ್ಳ ಪುಸ್ತಕದಲ್ಲಿ ದಾಖಲಿಸಿಟ್ಟನು. ಅದು ಬೈಬಲಿನ ಆಮೋಸ ಪುಸ್ತಕವಾಗಿದೆ. ಆ ಯಾಜಕನೊಂದಿಗೆ ನಡೆದ ಮುಖಾಮುಖಿ ಭೇಟಿಯ ಕುರಿತು ಹೆಚ್ಚನ್ನು ತಿಳಿಯುವ ಮೊದಲು ನಾವು ಆಮೋಸನ ಹಿನ್ನೆಲೆಯ ಬಗ್ಗೆ ಕೆಲವು ಮಾಹಿತಿಯನ್ನು ತಿಳಿದುಕೊಳ್ಳೋಣ.

2 ಆಮೋಸನು ಯಾರು? ಅವನು ಎಲ್ಲಿ ಮತ್ತು ಯಾವ ಸಮಯದಲ್ಲಿ ಜೀವಿಸಿದ್ದನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಆಮೋಸ 1:1ರಲ್ಲಿ ಕಂಡುಕೊಳ್ಳುವೆವು. ಅಲ್ಲಿ ನಾವು ಹೀಗೆ ಓದುತ್ತೇವೆ: ‘ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಅಂದರೆ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನ ದೈವೋಕ್ತಿಗಳು.’ ಆಮೋಸನು ಯೆಹೂದದ ನಿವಾಸಿಯಾಗಿದ್ದನು. ಯೆರೂಸಲೇಮಿನಿಂದ 16 ಕಿಲೋಮೀಟರ್‌ ದಕ್ಷಿಣಕ್ಕಿದ್ದ ತೆಕೋವ ಅವನ ಹುಟ್ಟೂರಾಗಿತ್ತು. ಅವನು ಸಾ.ಶ.ಪೂ. ಒಂಬತ್ತನೆಯ ಶತಮಾನದ ಅಂತ್ಯದಲ್ಲಿ, ಅಂದರೆ ರಾಜ ಉಜ್ಜೀಯನು ಯೆಹೂದದಲ್ಲಿ ಮತ್ತು ಎರಡನೆಯ ಯಾರೊಬ್ಬಾಮನು ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ಆಳುತ್ತಿದ್ದಾಗ ಜೀವಿಸಿದನು. ಆಮೋಸನು ಕುರುಬನಾಗಿದ್ದನು. ವಾಸ್ತವದಲ್ಲಿ, ಆಮೋಸ 7:14ರಲ್ಲಿ ತಿಳಿಸುವಂತೆ, ಅವನು “ಗೊಲ್ಲನು” ಮಾತ್ರವಲ್ಲ, “ಅತ್ತಿಹಣ್ಣು ಕೀಳುವವನು [“ಚುಚ್ಚುವವನು,” NW]” ಸಹ ಆಗಿದ್ದನು. ಹೀಗೆ ಅವನು ವರುಷದ ಒಂದು ಭಾಗವನ್ನು ಕೊಯ್ಲಿನ ಸಮಯದ ಕೆಲಸಗಾರನಾಗಿ ಕಳೆದನು. ಅವನು ಅತ್ತಿಹಣ್ಣು ಚುಚ್ಚುವವನು ಅಥವಾ ತಿವಿಯುವವನಾಗಿದ್ದನು. ಅತ್ತಿಕಾಯಿ ಬೇಗನೆ ಹಣ್ಣಾಗುವಂತೆ ಈ ಚುಚ್ಚುವಿಕೆಯ ಕೆಲಸವನ್ನು ಮಾಡಲಾಗುತ್ತಿತ್ತು. ಅದು ತುಂಬ ಪ್ರಯಾಸಕರವಾದ ಕೆಲಸವಾಗಿತ್ತು.

‘ನೀನು ಹೋಗಿ ಪ್ರವಾದನೆಮಾಡು’

3 ಆಮೋಸನು ಮುಚ್ಚುಮರೆಯಿಲ್ಲದೆ ಹೇಳಿದ್ದು: “ನಾನು ಪ್ರವಾದಿಯಲ್ಲ, ಪ್ರವಾದಿ ಮಂಡಲಿಗೆ ಸೇರಿದವನೂ ಅಲ್ಲ.” (ಆಮೋಸ 7:14) ಹೌದು, ಆಮೋಸನು ಪ್ರವಾದಿಯಾಗಿ ಹುಟ್ಟಿರಲೂ ಇಲ್ಲ, ಪ್ರವಾದಿಯಾಗಿರಲು ತರಬೇತನ್ನು ಪಡೆದುಕೊಂಡಿರಲೂ ಇಲ್ಲ. ಆದರೂ, ಯೆಹೋವನು ತನ್ನ ಕೆಲಸವನ್ನು ಮಾಡಲಿಕ್ಕಾಗಿ ಯೆಹೂದದಲ್ಲಿದ್ದ ಜನರೆಲ್ಲರಿಂದ ಆಮೋಸನನ್ನು ಆರಿಸಿಕೊಂಡನು. ಆ ಸಮಯದಲ್ಲಿ ದೇವರು, ಒಬ್ಬ ಬಲಾಢ್ಯನಾದ ಅರಸನನ್ನಾಗಲಿ, ಜ್ಞಾನಿಯಾದ ಯಾಜಕನನ್ನಾಗಲಿ, ಧನಿಕನಾದ ಕುಲಪತಿಯನ್ನಾಗಲಿ ಆರಿಸಿಕೊಳ್ಳಲಿಲ್ಲ. ಇದು ನಮಗೆ ಭರವಸೆಕೊಡುವಂಥ ಪಾಠವೊಂದನ್ನು ಒದಗಿಸುತ್ತದೆ. ನಾವು ಉಚ್ಛವಾದ ಐಹಿಕ ಸ್ಥಾನಮಾನ ಅಥವಾ ವಿದ್ಯೆ ಇಲ್ಲದವರಾಗಿರಬಹುದು. ಆದರೆ ಅದು, ದೇವರ ವಾಕ್ಯವನ್ನು ಸಾರಲು ನಾವು ಅನರ್ಹರೆಂಬ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸಬೇಕೋ? ಖಂಡಿತವಾಗಿಯೂ ಇಲ್ಲ! ಕಷ್ಟಕರ ಟೆರಿಟೊರಿಗಳಲ್ಲಿಯೂ ಯೆಹೋವನ ಸಂದೇಶವನ್ನು ಸಾರಲು ಆತನು ನಮ್ಮನ್ನು ಸನ್ನದ್ಧಗೊಳಿಸಬಲ್ಲನು. ಯೆಹೋವನು ಆಮೋಸನನ್ನು ಹಾಗೆ ಸನ್ನದ್ಧಗೊಳಿಸಿದ್ದರಿಂದ, ದೇವರ ವಾಕ್ಯವನ್ನು ಧೈರ್ಯದಿಂದ ನುಡಿಯಬಯಸುವ ಸಕಲರಿಗೆ ಆ ಧೀರ ಪ್ರವಾದಿಯಿಟ್ಟ ಮಾದರಿಯನ್ನು ಪರಿಗಣಿಸುವುದು ಬೋಧಪ್ರದವಾಗಿರುವುದು.

4 ಯೆಹೋವನು ಆಮೋಸನಿಗೆ ಆಜ್ಞೆಯಿತ್ತದ್ದು: “ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದನೆಮಾಡು.” (ಆಮೋಸ 7:15) ಅದು ಒಂದು ಕಷ್ಟಕರವಾದ ನೇಮಕವಾಗಿತ್ತು. ಆ ಸಮಯದಲ್ಲಿ, ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ಶಾಂತಿ, ಭದ್ರತೆ ಮತ್ತು ಭೌತಿಕ ಸಮೃದ್ಧಿಯು ನೆಲೆಸಿತ್ತು. ಅನೇಕರಿಗೆ ‘ಚಳಿಗಾಲದ ಮನೆಗಳು’ ಮತ್ತು ‘ಬೇಸಿಗೆಯ ಮನೆ’ಗಳಿದ್ದವು, ಮತ್ತು ಇವನ್ನು ಸಾಮಾನ್ಯವಾದ ಮಣ್ಣಿನ ಇಟ್ಟಿಗೆಯಿಂದಲ್ಲ, ಬದಲಾಗಿ ದುಬಾರಿಯಾದ “ಕೆತ್ತಿದ ಕಲ್ಲಿನಿಂದ” ಕಟ್ಟಲಾಗಿತ್ತು. ಕೆಲವರಿಗೆ ದಂತ ಕೂರಿಸಲ್ಪಟ್ಟಿರುವ ಸೊಬಗಿನ ಪೀಠೋಪಕರಣಗಳಿದ್ದವು ಮತ್ತು ಕೆಲವರು “ಒಳ್ಳೊಳ್ಳೆಯ ತೋಟಗಳ” ದ್ರಾಕ್ಷಾಮದ್ಯವನ್ನು ಕುಡಿಯುತ್ತಿದ್ದರು. (ಆಮೋಸ 3:15; 5:11) ಇದರಿಂದಾಗಿ, ಅನೇಕ ಜನರು ಸ್ವತೃಪ್ತರಾಗಿದ್ದರು. ಹೌದು, ಆಮೋಸನಿಗೆ ನೇಮಿಸಲ್ಪಟ್ಟಿದ್ದಂಥ ಟೆರಿಟೊರಿಯು ಇಂದು ನಮ್ಮಲ್ಲಿ ಕೆಲವರು ಸೇವೆಮಾಡುವ ಟೆರಿಟೊರಿಯನ್ನು ಬಹುಮಟ್ಟಿಗೆ ಹೋಲುತ್ತಿದ್ದಿರಬಹುದು.

5 ಇಸ್ರಾಯೇಲ್ಯರ ಬಳಿ ಪ್ರಾಪಂಚಿಕ ಸ್ವತ್ತುಗಳಿದ್ದದ್ದರಲ್ಲಿ ಏನೂ ತಪ್ಪಿರಲಿಲ್ಲ. ಆದರೆ ಕೆಲವರು ಮೋಸಕರವಾದ ವಿಧಾನಗಳ ಮೂಲಕ ಐಶ್ವರ್ಯವನ್ನು ಶೇಖರಿಸುತ್ತಿದ್ದರು. ಧನಿಕರು ‘ಬಡವರನ್ನು ಹಿಂಸಿಸಿ ದಿಕ್ಕಿಲ್ಲದವರನ್ನು ಜಜ್ಜುತ್ತಿದ್ದರು.’ (ಆಮೋಸ 4:⁠1) ಪ್ರಭಾವಶಾಲಿಗಳಾದ ವರ್ತಕರು, ನ್ಯಾಯಾಧಿಪತಿಗಳು ಮತ್ತು ಯಾಜಕರು ಬಡವರನ್ನು ಸುಲುಕೊಳ್ಳಲು ಒಳಸಂಚು ನಡೆಸಿದರು. ಈಗ ನಾವು ಆ ಕಾಲಕ್ಕೆ ಹಿಂದೆ ಹೋಗಿ, ಈ ಜನರು ಏನು ಮಾಡುತ್ತಿದ್ದರೆಂಬುದನ್ನು ಗಮನಿಸೋಣ.

ದೇವರ ನಿಯಮವು ಉಲ್ಲಂಘಿಸಲ್ಪಟ್ಟದ್ದು

6 ನಾವು ಮೊದಲಾಗಿ ಪೇಟೆಗೆ ಹೋಗೋಣ. ಅಲ್ಲಿ, ಅಪ್ರಾಮಾಣಿಕರಾದ ವರ್ತಕರು ‘ಕೊಳಗವನ್ನು ಕಿರಿದುಮಾಡು’ತ್ತಾರೆ, ‘ತೊಲವನ್ನು ಹೆಚ್ಚಿಸು’ತ್ತಾರೆ, ಮತ್ತು “ನುಚ್ಚುನುಸಿಯನ್ನು” ಗೋದಿಯಾಗಿ ಮಾರುತ್ತಾರೆ. (ಆಮೋಸ 8:​4, 5) ವರ್ತಕರು ತಮ್ಮ ಗಿರಾಕಿಗಳಿಗೆ ಮಾರುವಾಗ ತೂಕದಲ್ಲಿ ವಂಚಿಸುತ್ತಾರೆ, ಬೆಲೆಯು ತೀರ ಹೆಚ್ಚಾಗಿರುತ್ತದೆ ಆದರೆ ಗುಣಮಟ್ಟವಾದರೋ ಕೀಳ್ದರ್ಜೆಯದ್ದಾಗಿದೆ. ಹೀಗೆ ಅವರು ಬಡವರನ್ನು ಕಂಗಾಲಾಗುವ ವರೆಗೂ ಶೋಷಿಸಿದ ಬಳಿಕ, ಬಡವರು ತಮ್ಮನ್ನೇ ಗುಲಾಮರಾಗಿ ಮಾರಿಕೊಳ್ಳಬೇಕಾಗುತ್ತದೆ. ಆ ಬಳಿಕ, ಈ ವರ್ತಕರು ಇವರನ್ನು ಒಂದು “ಜೊತೆ ಕೆರ”ಗಳ ಬೆಲೆಗೆ ಕೊಂಡುಕೊಳ್ಳುತ್ತಾರೆ. (ಆಮೋಸ 8:⁠5) ಸ್ವಲ್ಪ ಯೋಚಿಸಿರಿ, ಆ ಲೋಭಿಗಳಾದ ವರ್ತಕರು ತಮ್ಮ ಜೊತೆ ಇಸ್ರಾಯೇಲ್ಯರನ್ನು ಪಾದರಕ್ಷೆಗಳ ಬೆಲೆಗೆ ಸಮಾನವಾದ ಮೌಲ್ಯವುಳ್ಳವರಾಗಿ ನೋಡುತ್ತಾರೆ! ದಿಕ್ಕಿಲ್ಲದವರಿಗೆ ಅದೆಂಥ ಅವಮಾನ, ಮತ್ತು ದೇವರ ನಿಯಮದ ಎಷ್ಟು ಗುರುತರವಾದ ಉಲ್ಲಂಘನೆ! ಆದರೂ, ಅದೇ ವರ್ತಕರು ‘ಸಬ್ಬತ್ತನ್ನು’ ಆಚರಿಸುತ್ತಾರೆ. (ಆಮೋಸ 8:⁠4) ಹೌದು ಅವರು ಧರ್ಮನಿಷ್ಠರಾಗಿದ್ದಾರೆ, ಆದರೆ ಹೊರತೋರಿಕೆಗೆ ಮಾತ್ರ.

7 ಆ ವರ್ತಕರು “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ದೇವರ ನಿಯಮವನ್ನು ಮುರಿದರೂ ದಂಡನೆಯಿಂದ ಹೇಗೆ ತಪ್ಪಿಸಿಕೊಳ್ಳುತ್ತಿದ್ದರು? (ಯಾಜಕಕಾಂಡ 19:18) ಅವರು ಇದರಲ್ಲಿ ಸಾಫಲ್ಯವನ್ನು ಪಡೆಯುತ್ತಿದ್ದರು ಏಕೆಂದರೆ, ನ್ಯಾಯವನ್ನು ಜಾರಿಗೆ ತರಬೇಕಾದ ನ್ಯಾಯಾಧಿಪತಿಗಳೇ ಈ ಪಾತಕದಲ್ಲಿ ಅವರೊಂದಿಗೆ ಪಾಲುಗಾರರಾಗಿದ್ದರು. ಮೊಕದ್ದಮೆಗಳು ಇತ್ಯರ್ಥವಾಗುವ ಪಟ್ಟಣದ ದ್ವಾರದಲ್ಲಿ, ನ್ಯಾಯಾಧಿಪತಿಗಳು ‘ಲಂಚವನ್ನು ತೆಗೆದುಕೊಳ್ಳುತ್ತಾ ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುತ್ತಾ’ ಇದ್ದರು. ಈ ನ್ಯಾಯಾಧಿಪತಿಗಳು ಬಡವರನ್ನು ಕಾಪಾಡುವ ಬದಲು ಲಂಚ ತೆಗೆದುಕೊಂಡು ಅವರಿಗೆ ದ್ರೋಹಬಗೆದರು. (ಆಮೋಸ 5:​10, 12) ಹೀಗೆ, ನ್ಯಾಯಾಧಿಪತಿಗಳು ಸಹ ದೇವರ ನಿಯಮವನ್ನು ಅಲಕ್ಷಿಸುತ್ತಿದ್ದರು.

8 ಈ ಮಧ್ಯೆ, ಇಸ್ರಾಯೇಲಿನ ಯಾಜಕರು ಯಾವ ಪಾತ್ರವನ್ನು ವಹಿಸುತ್ತಿದ್ದರು? ಇದನ್ನು ಕಂಡುಕೊಳ್ಳಲು, ನಾವು ಇನ್ನೊಂದು ಸ್ಥಳಕ್ಕೆ ನಮ್ಮ ಗಮನವನ್ನು ಹರಿಸಬೇಕು. ಯಾಜಕರು “ತಮ್ಮ ದೇವರ ಮಂದಿರದಲ್ಲಿ” ಎಂತಹ ಪಾಪಗಳು ನಡೆಯುವಂತೆ ಅನುಮತಿಸಿದ್ದಾರೆ ಎಂಬುದನ್ನು ಗಮನಿಸಿ! ಆಮೋಸನ ಮೂಲಕ ದೇವರು ಹೇಳಿದ್ದು: “ಮಗನೂ ತಂದೆಯೂ ಒಬ್ಬಳಲ್ಲೇ ಹೋಗಿ ನನ್ನ ಪವಿತ್ರನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.” (ಆಮೋಸ 2:​7, 8) ಸ್ವಲ್ಪ ಯೋಚಿಸಿರಿ, ಇಸ್ರಾಯೇಲ್ಯ ಪಿತನೂ ಅವನ ಪುತ್ರನೂ ಒಬ್ಬ ದೇವದಾಸಿಯೊಂದಿಗೇ ಲೈಂಗಿಕ ದುರಾಚಾರವನ್ನು ನಡೆಸುತ್ತಿದ್ದರು! ಮತ್ತು ಆ ದುಷ್ಟ ಯಾಜಕರು ಅಂಥ ಅನೈತಿಕತೆಯನ್ನು ನೋಡಿಯೂ ನೋಡದಂತೆ ಇರುತ್ತಿದ್ದರು!​—⁠ಯಾಜಕಕಾಂಡ 19:29; ಧರ್ಮೋಪದೇಶಕಾಂಡ 5:18; 23:17.

9 ಇತರ ಪಾಪಕೃತ್ಯಗಳಿಗೆ ಸೂಚಿಸುತ್ತಾ ಯೆಹೋವನು ಹೇಳಿದ್ದು: “ಒಂದೊಂದು ಯಜ್ಞವೇದಿಯ ಹತ್ತಿರದಲ್ಲಿಯೂ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆ ಮಲಗಿಕೊಳ್ಳುತ್ತಾರೆ; ದಂಡಹಾಕಿಸಿಕೊಂಡವರ ದ್ರಾಕ್ಷಾರಸವನ್ನು ತಮ್ಮ ದೇವರ ಮಂದಿರದಲ್ಲಿಯೂ ಕುಡಿಯುತ್ತಾರೆ.” (ಆಮೋಸ 2:8) ಹೌದು, ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಣುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡಬೇಕು ಎಂಬ ವಿಮೋಚನಕಾಂಡ 22:​26, 27ರಲ್ಲಿ ದಾಖಲಾಗಿರುವ ನಿಯಮವನ್ನು ಯಾಜಕರೂ ಜನಸಾಮಾನ್ಯರೂ ಅಲಕ್ಷಿಸಿದರು. ಅದಕ್ಕೆ ಬದಲಾಗಿ ಅವರು, ಸುಳ್ಳು ದೇವರುಗಳ ಹೆಸರಿನಲ್ಲಿ ತಿಂದು ಕುಡಿದು ಮಲಗಲು ಆ ಕಂಬಳಿಯನ್ನು ಉಪಯೋಗಿಸುತ್ತಿದ್ದರು. ಮತ್ತು ಬಡವರಿಂದ ಸುಲುಕೊಂಡ ದಂಡದಿಂದ, ಸುಳ್ಳು ಧರ್ಮದ ಹಬ್ಬಗಳಂದು ಕುಡಿಯಲು ದ್ರಾಕ್ಷಾಮದ್ಯವನ್ನು ಕೊಂಡುಕೊಳ್ಳುತ್ತಿದ್ದರು. ಶುದ್ಧಾರಾಧನೆಯಿಂದ ಅವರು ಎಷ್ಟು ದೂರ ಸರಿದಿದ್ದರು!

10 ಧರ್ಮಶಾಸ್ತ್ರದ ಎರಡು ಅತಿ ದೊಡ್ಡ ಆಜ್ಞೆಗಳನ್ನು, ಅಂದರೆ ಯೆಹೋವನನ್ನು ಮತ್ತು ನೆರೆಯವನನ್ನು ಪ್ರೀತಿಸಬೇಕೆಂಬ ಆಜ್ಞೆಗಳನ್ನು ಇಸ್ರಾಯೇಲ್ಯರು ನಾಚಿಕೆಯಿಲ್ಲದೆ ಉಲ್ಲಂಘಿಸುತ್ತಿದ್ದರು. ಈ ಕಾರಣದಿಂದಲೇ ದೇವರು ಅವರ ಅಪನಂಬಿಗಸ್ತಿಕೆಗಾಗಿ ಅವರನ್ನು ಖಂಡಿಸಲು ಆಮೋಸನನ್ನು ಕಳುಹಿಸಿದನು. ಇಂದು, ಕ್ರೈಸ್ತಪ್ರಪಂಚವನ್ನೂ ಸೇರಿಸಿ ಲೋಕದ ಜನಾಂಗಗಳು ಪುರಾತನ ಇಸ್ರಾಯೇಲಿನ ಭ್ರಷ್ಟ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತವೆ. ಕೆಲವರು ಅಭ್ಯುದಯ ಹೊಂದುತ್ತಿರುವಾಗ, ಇತರ ಅನೇಕರು ದೊಡ್ಡ ವ್ಯಾಪಾರ ಸಂಸ್ಥೆಗಳ, ರಾಜಕೀಯ ಮತ್ತು ಸುಳ್ಳುಧರ್ಮಗಳ ಅಪ್ರಾಮಾಣಿಕ ನಾಯಕರ ದುರಾಚಾರಗಳ ಕಾರಣ ಆರ್ಥಿಕವಾಗಿ ಕಂಗಾಲಾಗಿದ್ದಾರೆ ಹಾಗೂ ಭಾವಾತ್ಮಕವಾಗಿ ನೊಂದಿದ್ದಾರೆ. ಆದರೂ, ಕಷ್ಟಾನುಭವಿಸುತ್ತಿರುವ ಮತ್ತು ತನ್ನನ್ನು ಹುಡುಕಲು ಪ್ರೇರಿಸಲ್ಪಡುವವರ ಬಗ್ಗೆ ಯೆಹೋವನು ಚಿಂತಿತನಾಗಿದ್ದಾನೆ. ಆದಕಾರಣ, ತನ್ನ ಈ ದಿನಗಳ ಸೇವಕರು ಆಮೋಸನು ಮಾಡಿದಂಥ ಕೆಲಸವನ್ನೇ ಮಾಡುವಂತೆ, ಅಂದರೆ ತನ್ನ ವಾಕ್ಯವನ್ನು ಧೈರ್ಯದಿಂದ ನುಡಿಯುವಂತೆ ಆತನು ಅವರನ್ನು ನೇಮಿಸಿದ್ದಾನೆ.

11 ನಮ್ಮ ಮತ್ತು ಆಮೋಸನ ಕೆಲಸದ ಮಧ್ಯೆ ಹೋಲಿಕೆಗಳಿರುವ ಕಾರಣ, ಅವನ ಮಾದರಿಯನ್ನು ಪರಿಗಣಿಸುವುದರಿಂದ ನಾವು ತುಂಬ ಪ್ರಯೋಜನವನ್ನು ಪಡೆದುಕೊಳ್ಳುವೆವು. ವಾಸ್ತವದಲ್ಲಿ, ಆಮೋಸನು ನಮಗೆ (1) ನಾವು ಯಾವ ಸಂದೇಶವನ್ನು ಸಾರಬೇಕು, (2) ಅದನ್ನು ಹೇಗೆ ಸಾರಬೇಕು, ಮತ್ತು (3) ವಿರೋಧಿಗಳು ನಮ್ಮ ಸಾರುವ ಕೆಲಸವನ್ನು ಏಕೆ ತಡೆಯಲಾರರು ಎಂಬುದನ್ನು ತೋರಿಸುತ್ತಾನೆ. ಈ ಅಂಶಗಳನ್ನು ಒಂದೊಂದಾಗಿ ಪರಿಗಣಿಸೋಣ.

ನಾವು ಆಮೋಸನನ್ನು ಅನುಕರಿಸಬಲ್ಲ ವಿಧ

12 ಯೆಹೋವನ ಸಾಕ್ಷಿಗಳಾದ ನಾವು ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲೆ ನಮ್ಮ ಕ್ರೈಸ್ತ ಶುಶ್ರೂಷೆಯನ್ನು ಕೇಂದ್ರೀಕರಿಸುತ್ತೇವೆ. (ಮತ್ತಾಯ 28:​19, 20; ಮಾರ್ಕ 13:10) ಹಾಗಿದ್ದರೂ, ದುಷ್ಟರ ಮೇಲೆ ಯೆಹೋವನು ತರಲಿದ್ದ ಪ್ರತಿಕೂಲ ನ್ಯಾಯತೀರ್ಪನ್ನು ಆಮೋಸನು ಘೋಷಿಸಿದಂತೆಯೇ ನಾವೂ ದೇವರ ಎಚ್ಚರಿಕೆಗಳ ಕುರಿತು ಸಾರುತ್ತೇವೆ. ಉದಾಹರಣೆಗೆ, ಇಸ್ರಾಯೇಲ್ಯರ ಮೇಲೆ ತನಗಿದ್ದ ಕೋಪವನ್ನು ಯೆಹೋವನು ಪದೇಪದೇ ಸ್ಪಷ್ಟವಾಗಿ ವ್ಯಕ್ತಪಡಿಸಿದನು ಎಂಬುದನ್ನು ಆಮೋಸ 4:​6-11 ತೋರಿಸುತ್ತದೆ. ಅವನು ಜನರಿಗೆ, “ಅನ್ನದ ಕೊರತೆ”ಯನ್ನು ಉಂಟುಮಾಡಿದನು, ‘ಮಳೆಯನ್ನು ತಡೆದನು,’ “ಬೂದಿಯಿಂದಲೂ ಬಿಸಿಗಾಳಿಯಿಂದಲೂ ಬಾಧಿಸಿ”ದನು, ಮತ್ತು ಅವರ ಮಧ್ಯೆ “ವ್ಯಾಧಿ”ಯನ್ನು ಕಳುಹಿಸಿದನು. ಇವೆಲ್ಲವೂ ಇಸ್ರಾಯೇಲ್ಯರು ಪಶ್ಚಾತ್ತಾಪಪಡುವಂತೆ ಮಾಡಿದವೊ? “ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಎಂದು ದೇವರು ಹೇಳಿದನು. ಹೌದು, ಇಸ್ರಾಯೇಲ್ಯರು ಯೆಹೋವನನ್ನು ಪದೇಪದೇ ತಿರಸ್ಕರಿಸಿದರು.

13 ಯೆಹೋವನು ಪಶ್ಚಾತ್ತಾಪಪಡದ ಇಸ್ರಾಯೇಲ್ಯರನ್ನು ಶಿಕ್ಷೆಗೊಳಪಡಿಸಿದನು. ಆದರೆ, ಮೊದಲು ಅವರು ಒಂದು ಪ್ರವಾದನಾತ್ಮಕ ಎಚ್ಚರಿಕೆಯನ್ನು ಪಡೆದುಕೊಂಡರು. ಇದಕ್ಕೆ ಹೊಂದಿಕೆಯಲ್ಲಿ, ದೇವರು ಪ್ರಕಟಿಸಿದ್ದು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” (ಆಮೋಸ 3:7) ಯೆಹೋವನು ನೋಹನಿಗೆ ಬರಲಿದ್ದ ಜಲಪ್ರಳಯದ ಕುರಿತು ತಿಳಿಯಪಡಿಸಿ, ಅವನು ಜನರನ್ನು ಎಚ್ಚರಿಸಬೇಕೆಂದು ಹೇಳಿದ್ದನು. ಅದರಂತೆಯೇ, ಆಮೋಸನು ಅಂತಿಮ ಎಚ್ಚರಿಕೆಯನ್ನು ಕೊಡುವಂತೆ ಯೆಹೋವನು ಹೇಳಿದನು. ಆದರೆ ವಿಷಾದಕರವಾಗಿ, ಇಸ್ರಾಯೇಲ್ಯರು ಆ ದೈವಿಕ ಸಂದೇಶವನ್ನು ಅಲಕ್ಷಿಸಿದರು, ಮತ್ತು ಸೂಕ್ತ ಕ್ರಿಯೆಯನ್ನು ಕೈಗೊಳ್ಳಲು ತಪ್ಪಿಹೋದರು.

14 ಆಮೋಸನ ಕಾಲ ಮತ್ತು ನಮ್ಮ ದಿನಗಳ ಮಧ್ಯೆ ಕೆಲವು ಗಮನಾರ್ಹ ಹೋಲಿಕೆಗಳಿವೆಯೆಂಬುದನ್ನು ನೀವು ನಿಸ್ಸಂದೇಹವಾಗಿಯೂ ಒಪ್ಪಿಕೊಳ್ಳುವಿರಿ. ಅಂತ್ಯಕಾಲದಲ್ಲಿ ಅನೇಕ ವಿಪತ್ತುಗಳು ಸಂಭವಿಸುವವೆಂದು ಯೇಸು ಕ್ರಿಸ್ತನು ಮುಂತಿಳಿಸಿದನು. ಲೋಕವ್ಯಾಪಕವಾಗಿ ನಡೆಯಲಿರುವ ಸಾರುವ ಕೆಲಸದ ಕುರಿತೂ ಅವನು ಮುಂತಿಳಿಸಿದನು. (ಮತ್ತಾಯ 24:​3-14) ಆದರೆ, ಆಮೋಸನ ದಿನಗಳಂತೆಯೇ ಇಂದು ಸಹ ಹೆಚ್ಚಿನ ಜನರು ಸಮಯದ ಸೂಚನೆಗಳನ್ನೂ ರಾಜ್ಯ ಸಂದೇಶವನ್ನೂ ಅಲಕ್ಷಿಸುತ್ತಾರೆ. ಅಂಥವರಿಗೆ, ಪಶ್ಚಾತ್ತಾಪರಹಿತ ಇಸ್ರಾಯೇಲ್ಯರಿಗೆ ಏನು ಬಂದೊದಗಿತೊ ಅದೇ ಪರಿಣಾಮಗಳು ಬಂದೊದಗುವವು. ಯೆಹೋವನು ಅವರನ್ನು ಎಚ್ಚರಿಸಿದ್ದು: “ನಿನ್ನ ದೇವರ ಬರುವಿಕೆಗೆ [“ದೇವರನ್ನು ಸಂಧಿಸಲು,” NW] ನಿನ್ನನ್ನು ಸಿದ್ಧಮಾಡಿಕೋ.” (ಆಮೋಸ 4:12) ಅಶ್ಶೂರದ ಸೈನ್ಯವು ಅವರನ್ನು ಸೋಲಿಸಿದಾಗ ದೇವರ ಪ್ರತಿಕೂಲ ತೀರ್ಪನ್ನು ಅನುಭವಿಸುವ ಮೂಲಕ ಅವರು ದೇವರನ್ನು ಸಂಧಿಸಿದರು. ಇಂದು ಈ ಭಕ್ತಿಹೀನ ಲೋಕವು ಹರ್ಮಗೆದೋನಿನಲ್ಲಿ ‘ದೇವರನ್ನು ಸಂಧಿಸುವುದು.’ (ಪ್ರಕಟನೆ 16:​14, 16) ಆದರೆ ಈ ಮಧ್ಯೆ, ಯೆಹೋವನ ತಾಳ್ಮೆ ಮುಂದುವರಿಯುವಷ್ಟರ ವರೆಗೆ ನಾವು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಹೀಗೆ ಪ್ರೇರಿಸುತ್ತೇವೆ: “ಯೆಹೋವನ ಕಡೆಗೆ ತಿರುಗಿಕೊಳ್ಳಿರಿ, ಬದುಕುವಿರಿ.”​—⁠ಆಮೋಸ 5:⁠6.

ಆಮೋಸನಂತೆ ವಿರೋಧವನ್ನು ಎದುರಿಸುವುದು

15 ನಾವು ಏನನ್ನು ಸಾರುತ್ತೇವೋ ಆ ವಿಷಯದಲ್ಲಿ ಮಾತ್ರವಲ್ಲ ನಾವು ಹೇಗೆ ಸಾರುತ್ತೇವೆಂಬ ವಿಷಯದಲ್ಲೂ ಆಮೋಸನನ್ನು ಅನುಕರಿಸಬಲ್ಲೆವು. ಈ ನಿಜತ್ವವನ್ನು 7ನೆಯ ಅಧ್ಯಾಯದಲ್ಲಿ ಎತ್ತಿಹೇಳಲಾಗಿದೆ. ಇದೇ ಅಧ್ಯಾಯದಲ್ಲಿ, ನಮ್ಮ ಈ ಚರ್ಚೆಯ ಆರಂಭದಲ್ಲಿ ತಿಳಿಸಲ್ಪಟ್ಟಿರುವ ಆ ಯಾಜಕನ ಬಗ್ಗೆ ತಿಳಿಸಲಾಗಿದೆ. ಅವನು, “ಬೇತೇಲಿನ ಯಾಜಕನಾದ ಅಮಚ್ಯ”ನಾಗಿದ್ದನು. (ಆಮೋಸ 7:10) ಬೇತೇಲ್‌ ಪಟ್ಟಣವು ಬಸವಾರಾಧನೆಯನ್ನು ಒಳಗೊಂಡಿದ್ದ ಇಸ್ರಾಯೇಲಿನ ಭ್ರಷ್ಟ ಧರ್ಮದ ಕೇಂದ್ರವಾಗಿತ್ತು. ಹೀಗಿರುವುದರಿಂದ, ಅಮಚ್ಯನು ರಾಷ್ಟ್ರೀಯ ಧರ್ಮದ ಒಬ್ಬ ಯಾಜಕನಾಗಿದ್ದನು. ಆಮೋಸನ ಧೀರ ಮಾತುಗಳಿಗೆ ಅವನು ಹೇಗೆ ಪ್ರತಿವರ್ತಿಸಿದನು?

16 ಅಮಚ್ಯನು ಆಮೋಸನಿಗೆ ಹೇಳಿದ್ದು: “ಕಣಿಯವನೇ, ನಡೆ, ಯೆಹೂದದೇಶಕ್ಕೆ ಓಡಿಹೋಗು; ಅಲ್ಲೇ ಪ್ರವಾದನೆಮಾಡುತ್ತಾ ಹೊಟ್ಟೆಹೊರಕೋ; ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆಮಾಡಬೇಡ; ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ.” (ಆಮೋಸ 7:​12, 13) ಕಾರ್ಯತಃ ಅಮಚ್ಯನು ಹೇಳಿದ್ದು: ‘ನಡೆ ನಿನ್ನ ಊರಿಗೆ! ನಮಗೆ ನಮ್ಮದೇ ಆದ ಧರ್ಮವಿದೆ.’ ಸರಕಾರವು ಆಮೋಸನ ಕೆಲಸದ ಮೇಲೆ ನಿಷೇಧ ಹಾಕುವಂತೆಯೂ ಅವನು ಪ್ರಯತ್ನಿಸಿದನು. ಅವನು ಅರಸನಾದ ಎರಡನೇ ಯಾರೊಬ್ಬಾಮನಿಗೆ ಅಂದದ್ದು: “ಆಮೋಸನು ಇಸ್ರಾಯೇಲ್ಯರ ಮಧ್ಯದಲ್ಲಿ ನಿನ್ನ ಮೇಲೆ ಒಳಸಂಚುಮಾಡಿದ್ದಾನೆ.” (ಆಮೋಸ 7:10) ಅಮಚ್ಯನು ಆಮೋಸನನ್ನು ರಾಜದ್ರೋಹಿ ಎಂದು ಖಂಡಿಸಿದನು! ಅವನು ಅರಸನಿಗೆ ಹೀಗಂದನು: “[ಆಮೋಸನು]​—⁠ಯಾರೊಬ್ಬಾಮನು ಖಡ್ಗದಿಂದ ಹತನಾಗುವನು, ಇಸ್ರಾಯೇಲು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು ಖಂಡಿತ ಎಂದು ನುಡಿದಿದ್ದಾನೆ.”​—⁠ಆಮೋಸ 7:11.

17 ಈ ಒಂದೇ ಒಂದು ವಾಕ್ಯದಲ್ಲಿ ಅಮಚ್ಯನು ತಪ್ಪು ಅಭಿಪ್ರಾಯ ಕೊಡುವ ಮೂರು ಹೇಳಿಕೆಗಳನ್ನು ಮಾಡಿದನು. ಅವನು ಹೇಳಿದ್ದು: ‘ಆಮೋಸನು ನುಡಿದಿದ್ದಾನೆ.’ ಆದರೆ ಆಮೋಸನು ತಾನು ಆ ಪ್ರವಾದನೆಯ ಮೂಲನೆಂದು ಎಂದಿಗೂ ಹೇಳಿರಲಿಲ್ಲ. ಬದಲಾಗಿ, ಅವನು ಯಾವಾಗಲೂ: “ಯೆಹೋವನು ಇಂತೆನ್ನುತ್ತಾನೆ” ಎಂದು ಹೇಳಿದನು. (ಆಮೋಸ 1:⁠3) “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು” ಎಂದು ಹೇಳಿದನೆಂಬ ಅಪವಾದವೂ ಆಮೋಸನ ಮೇಲೆ ಹಾಕಲ್ಪಟ್ಟಿತು. ಆದರೆ ಆಮೋಸ 7:9ನೆಯ ವಚನದಲ್ಲಿ ದಾಖಲಾಗಿರುವಂತೆ, ಆಮೋಸನು ಹೀಗೆ ಪ್ರವಾದಿಸಿದ್ದನು: “ನಾನು [ಯೆಹೋವನು] ಕತ್ತಿಹಿರಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.” ಅಂಥ ವಿಪತ್ತನ್ನು ಯೆಹೋವನು ಯಾರೊಬ್ಬಾಮನ “ಮನೆತನಕ್ಕೆ,” ಅಂದರೆ ಅವನ ಸಂತಾನಕ್ಕೆ ವಿರುದ್ಧವಾಗಿ ಮುನ್‌ತಿಳಿಸಿದ್ದನು. ಅದಲ್ಲದೆ, ‘ಇಸ್ರಾಯೇಲು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವುದು ಖಂಡಿತ’ ಎಂದು ಆಮೋಸನು ಅಂದಿದ್ದಾನೆಂದು ಅಮಚ್ಯನು ಅಪವಾದ ಹೊರಿಸಿದನು. ಆದರೆ ದೇವರ ಕಡೆಗೆ ತಿರುಗುವ ಯಾವನೇ ಇಸ್ರಾಯೇಲ್ಯನು ಆಶೀರ್ವಾದಗಳನ್ನು ಪಡೆಯುವನೆಂಬದನ್ನೂ ಆಮೋಸನು ಪ್ರವಾದಿಸಿದ್ದನು. ಹೀಗೆ, ಆಮೋಸನ ಸಾರುವ ಕೆಲಸದ ಮೇಲೆ ಅಧಿಕೃತ ನಿಷೇಧವನ್ನು ತರುವ ಉದ್ದೇಶದಿಂದ ಅಮಚ್ಯನು ತಿರುಚಲ್ಪಟ್ಟ ಅರ್ಧಸತ್ಯಗಳನ್ನು ಉಪಯೋಗಿಸಿದನೆಂದು ಸ್ಪಷ್ಟವಾಗಿ ತೋರಿಬರುತ್ತದೆ.

18 ಅಮಚ್ಯನು ಉಪಯೋಗಿಸಿದಂಥ ಮತ್ತು ಇಂದು ಯೆಹೋವನ ಜನರ ವಿರೋಧಿಗಳು ಉಪಯೋಗಿಸುವ ವಿಧಾನಗಳ ಮಧ್ಯೆ ನೀವು ಹೋಲಿಕೆಗಳನ್ನು ಗಮನಿಸಿದ್ದೀರೊ? ಅಮಚ್ಯನು ಆಮೋಸನ ಬಾಯಿಮುಚ್ಚಿಸಲು ಪ್ರಯತ್ನಿಸಿದಂತೆಯೇ, ನಮ್ಮ ದಿನಗಳಲ್ಲಿ ಕೆಲವುಮಂದಿ ಪಾದ್ರಿಗಳು, ಬಿಷಪರು ಮತ್ತು ಪೇಟ್ರಿಯಾರ್ಕರು ಯೆಹೋವನ ಸೇವಕರ ಸಾರುವ ಕೆಲಸಕ್ಕೆ ತಡೆಹಾಕಲು ಪ್ರಯತ್ನಿಸುತ್ತಾರೆ. ಅಮಚ್ಯನು ಆಮೋಸನ ಮೇಲೆ ಒಳಸಂಚಿನ ಸುಳ್ಳು ಅಪವಾದಗಳನ್ನು ಹೊರಿಸಿದನು. ಅದೇ ರೀತಿಯಲ್ಲಿ ಇಂದು ಕೆಲವು ಪಾದ್ರಿಗಳು, ಯೆಹೋವನ ಸಾಕ್ಷಿಗಳು ರಾಷ್ಟ್ರೀಯ ಭದ್ರತೆಗೆ ಒಂದು ಬೆದರಿಕೆಯಾಗಿದ್ದಾರೆಂದು ತಪ್ಪಾಗಿ ಅಪಾದಿಸುತ್ತಾರೆ. ಮತ್ತು ಆಮೋಸನೊಂದಿಗೆ ಹೋರಾಡಲು ಅಮಚ್ಯನು ಅರಸನಿಂದ ಸಹಾಯವನ್ನು ಬಯಸಿದಂತೆ, ಪಾದ್ರಿಗಳು ಯೆಹೋವನ ಸಾಕ್ಷಿಗಳನ್ನು ಹಿಂಸಿಸಲು ರಾಜಕೀಯ ಮಿತ್ರರ ಕಡೆಗೆ ತಿರುಗುತ್ತಾರೆ.

ವಿರೋಧಿಗಳು ನಮ್ಮ ಸಾರುವ ಕೆಲಸವನ್ನು ನಿಲ್ಲಿಸಲಾರರು

19 ಅಮಚ್ಯನು ತಂದ ವಿರೋಧಕ್ಕೆ ಆಮೋಸನು ಹೇಗೆ ಪ್ರತಿಕ್ರಿಯೆ ತೋರಿಸಿದನು? ಮೊದಲಾಗಿ, ಆಮೋಸನು ಆ ಯಾಜಕನಿಗೆ ಹೀಗೆ ಪ್ರಶ್ನಿಸುತ್ತಾನೆ: ‘ಇಸ್ರಾಯೇಲಿಗೆ ವಿರುದ್ಧವಾಗಿ ಪ್ರವಾದನೆ ಮಾಡಬೇಡ ಎಂದು ಹೇಳುತ್ತಿಯೊ?’ ಬಳಿಕ ಯಾವುದೇ ಹಿಂಜರಿಕೆಯಿಲ್ಲದೆ ದೇವರ ಧೈರ್ಯಶಾಲಿ ಪ್ರವಾದಿಯು, ಅಮಚ್ಯನು ಖಂಡಿತವಾಗಿಯೂ ಕೇಳಲು ಬಯಸದ ಮಾತುಗಳನ್ನು ನುಡಿಯುತ್ತಾನೆ. (ಆಮೋಸ 7:​16, 17) ಆಮೋಸನು ಹೆದರಲಿಲ್ಲ. ನಮಗೆ ಎಂತಹ ಉತ್ಕೃಷ್ಟ ಮಾದರಿ! ದೇವರ ವಾಕ್ಯವನ್ನು ಸಾರುವ ವಿಷಯದಲ್ಲಿ ನಾವು ದೇವರಿಗೆ ಅವಿಧೇಯರಾಗದಿರುವೆವು. ಆಧುನಿಕ ದಿನದ ಅಮಚ್ಯರು ಕ್ರೂರ ಹಿಂಸೆಯನ್ನು ಚಿತಾಯಿಸುವಂಥ ದೇಶಗಳಲ್ಲಿಯೂ ನಾವು ಅವಿಧೇಯರಾಗದಿರುವೆವು. ಆಮೋಸನಂತೆ ನಾವು ಹೀಗೆ ಘೋಷಿಸುತ್ತಾ ಹೋಗುವೆವು: “ಯೆಹೋವನು ಇಂತೆನ್ನುತ್ತಾನೆ.” ವಿರೋಧಿಗಳು ನಮ್ಮ ಸಾರುವ ಕೆಲಸವನ್ನು ಎಂದಿಗೂ ನಿಲ್ಲಿಸಲಾರರು, ಏಕೆಂದರೆ “[ಯೆಹೋವನ] ಹಸ್ತವು” ನಮ್ಮೊಂದಿಗಿದೆ.​—⁠ಅ. ಕೃತ್ಯಗಳು 11:​19-21.

20 ತಾನು ಹಾಕುವ ಬೆದರಿಕೆಗಳು ವ್ಯರ್ಥವೆಂದು ಅಮಚ್ಯನಿಗೆ ಗೊತ್ತಿರಬೇಕಾಗಿತ್ತು. ಏಕೆಂದರೆ, ತಾನು ಮಾತಾಡುವುದನ್ನು ಯಾವನೂ ಏಕೆ ನಿಲ್ಲಿಸಲಾರನೆಂಬುದನ್ನು ಆಮೋಸನು ಆಗಲೇ ವಿವರಿಸಿದ್ದನು​—⁠ಮತ್ತು ಇದು ನಮ್ಮ ಚರ್ಚೆಯ ಮೂರನೆಯ ವಿಷಯವಾಗಿದೆ. ಆಮೋಸ 3:​3-8ಕ್ಕನುಸಾರ ಆಮೋಸನು, ಪ್ರತಿಯೊಂದು ಕಾರ್ಯಕ್ಕೆ ಒಂದು ಕಾರಣವು ಇದ್ದೇ ಇರುತ್ತದೆ ಎಂಬುದನ್ನು ತೋರಿಸಲು ಪ್ರಶ್ನೆ ಮತ್ತು ದೃಷ್ಟಾಂತಗಳ ಸರಮಾಲೆಯನ್ನೇ ಉಪಯೋಗಿಸುತ್ತಾನೆ. ಬಳಿಕ, ಅವನು ಈ ಅನ್ವಯವನ್ನು ಮಾಡುತ್ತಾನೆ: “ಸಿಂಹವು ಗರ್ಜಿಸಿದೆ, ಭಯಪಡದವರು ಯಾರು? ಕರ್ತನಾದ ಯೆಹೋವನು ನುಡಿದಿದ್ದಾನೆ, ಆ ನುಡಿಯನ್ನು ಸಾರದಿರುವವರು ಯಾರು?” ಇನ್ನೊಂದು ಮಾತಿನಲ್ಲಿ, ಆಮೋಸನು ತನ್ನ ಕೇಳುಗರಿಗೆ ಹೇಳುವುದು: ‘ಸಿಂಹದ ಗರ್ಜನೆ ಕೇಳಿದಾಗ ಹೇಗೆ ನೀವು ಭಯಪಡದೆ ಇರಲಾರಿರೋ ಹಾಗೆಯೇ ದೇವರ ವಾಕ್ಯವನ್ನು ಸಾರುವಂತೆ ಯೆಹೋವನ ಆಜ್ಞೆಯನ್ನು ನಾನು ಕೇಳಿರುವುದರಿಂದ ಅದನ್ನು ಸಾರದಿರಲಾರೆನು.’ ದೇವಭಯ ಅಥವಾ ಯೆಹೋವನ ಕಡೆಗಿರುವ ಗಾಢವಾದ ಪೂಜ್ಯಭಾವನೆಯು ಆಮೋಸನನ್ನು ಧೈರ್ಯದಿಂದ ನುಡಿಯುವಂತೆ ಪ್ರೇರಿಸಿತು.

21 ಸಾರಲು ಯೆಹೋವನು ಕೊಟ್ಟಿರುವ ಆಜ್ಞೆಯನ್ನು ನಾವೂ ಕೇಳುತ್ತೇವೆ. ನಮ್ಮ ಪ್ರತಿಕ್ರಿಯೆಯೇನು? ಆಮೋಸನಂತೆ ಮತ್ತು ಯೇಸುವಿನ ಆರಂಭದ ಹಿಂಬಾಲಕರಂತೆ ಯೆಹೋವನ ವಾಕ್ಯವನ್ನು ನಾವು ಧೈರ್ಯದಿಂದ ನುಡಿಯುತ್ತೇವೆ. (ಅ. ಕೃತ್ಯಗಳು 4:​23-31) ವಿರೋಧಿಗಳು ಚಿತಾಯಿಸುವಂಥ ಹಿಂಸೆಯಾಗಲಿ, ನಾವು ಸಾರುವಾಗ ಜನರು ತೋರಿಸುವ ಉದಾಸೀನಭಾವವಾಗಲಿ ನಮ್ಮ ಬಾಯಿಯನ್ನು ಮುಚ್ಚಿಸಲಾರದು. ಆಮೋಸನಿಗಿದ್ದಂಥ ರೀತಿಯ ಹುರುಪನ್ನು ತೋರಿಸುತ್ತಾ ಯೆಹೋವನ ಸಾಕ್ಷಿಗಳು ಭೌಗೋಳಿಕವಾಗಿ ಧೈರ್ಯದಿಂದ ಸುವಾರ್ತೆಯನ್ನು ಘೋಷಿಸುವುದನ್ನು ಮುಂದುವರಿಸಲು ಪ್ರಚೋದಿಸಲ್ಪಟ್ಟಿದ್ದಾರೆ. ಮುಂಬರುವ ಯೆಹೋವನ ತೀರ್ಪಿನ ಕುರಿತು ಜನರನ್ನು ಎಚ್ಚರಿಸುವ ಜವಾಬ್ದಾರಿ ನಮಗಿದೆ. ಆದರೆ ಆ ತೀರ್ಪಿನಲ್ಲಿ ಏನು ಒಳಗೊಂಡಿದೆ? ಈ ಪ್ರಶ್ನೆಗೆ ಉತ್ತರವು ಮುಂದಿನ ಲೇಖನದಲ್ಲಿ ಕೊಡಲ್ಪಡುವುದು.

ನೀವು ಹೇಗೆ ಉತ್ತರಿಸುವಿರಿ?

• ಯಾವ ಪರಿಸ್ಥಿತಿಗಳ ಮಧ್ಯೆ ಆಮೋಸನು ತನ್ನ ದೇವದತ್ತ ನೇಮಕವನ್ನು ಪೂರೈಸಿದನು?

• ಆಮೋಸನಂತೆ ನಾವು ಏನನ್ನು ಸಾರಬೇಕು?

• ನಮ್ಮ ಸಾರುವ ಕೆಲಸವನ್ನು ನಾವು ಯಾವ ಮನೋಭಾವದಿಂದ ಮಾಡಬೇಕು?

• ವಿರೋಧಿಗಳು ನಮ್ಮ ಸಾಕ್ಷಿಕಾರ್ಯವನ್ನು ನಿಲ್ಲಿಸಲು ಏಕೆ ಅಶಕ್ತರಾಗಿದ್ದಾರೆ?

[ಅಧ್ಯಯನ ಪ್ರಶ್ನೆಗಳು]

1, 2. ಆಮೋಸನು ಯಾರು, ಮತ್ತು ಅವನ ಕುರಿತು ಬೈಬಲ್‌ ಏನನ್ನುತ್ತದೆ?

3. ಸಾರಲು ನಾವು ಅನರ್ಹರೆಂಬ ಭಾವನೆಯು ನಮ್ಮಲ್ಲಿರುವಲ್ಲಿ, ಆಮೋಸನ ಕುರಿತು ಕಲಿಯುವುದು ನಮಗೆ ಹೇಗೆ ಸಹಾಯಮಾಡಬಲ್ಲದು?

4. ಇಸ್ರಾಯೇಲಿನಲ್ಲಿ ಪ್ರವಾದಿಸುವುದು ಆಮೋಸನಿಗೆ ಒಂದು ಸವಾಲಾಗಿತ್ತೇಕೆ?

5. ಕೆಲವು ಇಸ್ರಾಯೇಲ್ಯರು ಯಾವ ಅನ್ಯಾಯದ ವಿಷಯಗಳನ್ನು ನಡೆಸುತ್ತಿದ್ದರು?

6. ಇಸ್ರಾಯೇಲ್ಯ ವರ್ತಕರು ಇತರರನ್ನು ಶೋಷಿಸಿದ್ದು ಹೇಗೆ?

7. ಇಸ್ರಾಯೇಲ್ಯರ ವರ್ತಕರಿಗೆ ದೇವರ ನಿಯಮವನ್ನು ಮುರಿಯಲು ಯಾವುದು ಸಾಧ್ಯವನ್ನಾಗಿ ಮಾಡಿತು?

8. ದುಷ್ಟ ಯಾಜಕರು ಯಾವ ನಡತೆಯನ್ನು ನೋಡಿಯೂ ನೋಡದಂತೆ ಇರುತ್ತಿದ್ದರು?

9, 10. ದೇವರ ಯಾವ ನಿಯಮಗಳನ್ನು ಉಲ್ಲಂಘಿಸಿದ ಅಪರಾಧವು ಇಸ್ರಾಯೇಲ್ಯರ ಮೇಲಿತ್ತು, ಮತ್ತು ಇದರಿಂದ ನಮ್ಮ ದಿನಕ್ಕೆ ಯಾವ ಹೋಲಿಕೆಯನ್ನು ನಾವು ನೋಡಬಲ್ಲೆವು?

11. ಆಮೋಸನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು?

12, 13. ಇಸ್ರಾಯೇಲ್ಯರ ಮೇಲೆ ತನಗಿದ್ದ ಕೋಪವನ್ನು ಯೆಹೋವನು ಹೇಗೆ ತೋರಿಸಿದನು, ಮತ್ತು ಅವರ ಪ್ರತಿಕ್ರಿಯೆ ಏನಾಗಿತ್ತು?

14. ಆಮೋಸನ ಕಾಲ ಮತ್ತು ನಮ್ಮ ದಿನಗಳ ಮಧ್ಯೆ ಯಾವ ಹೋಲಿಕೆಗಳಿವೆ?

15-17. (ಎ) ಅಮಚ್ಯನು ಯಾರು, ಮತ್ತು ಆಮೋಸನು ಘೋಷಿಸಿದ ಮಾತುಗಳಿಗೆ ಅವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಆಮೋಸನ ವಿರುದ್ಧವಾಗಿ ಅಮಚ್ಯನು ಯಾವ ಅಪವಾದಗಳನ್ನು ಹೊರಿಸಿದನು?

18. ಅಮಚ್ಯನು ಉಪಯೋಗಿಸಿದಂಥ ಮತ್ತು ಇಂದು ಪಾದ್ರಿಗಳು ಉಪಯೋಗಿಸುವ ವಿಧಾನಗಳ ಮಧ್ಯೆ ಯಾವ ಹೋಲಿಕೆಗಳಿವೆ?

19, 20. ಅಮಚ್ಯನಿಂದ ಬಂದ ವಿರೋಧಕ್ಕೆ ಆಮೋಸನು ಹೇಗೆ ಪ್ರತಿವರ್ತಿಸಿದನು?

21. ಸುವಾರ್ತೆಯನ್ನು ಸಾರಬೇಕೆಂಬ ದೇವರ ಆಜ್ಞೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ?

[ಪುಟ 10ರಲ್ಲಿರುವ ಚಿತ್ರ]

ದೇವರು ತನ್ನ ಕೆಲಸವನ್ನು ಮಾಡಲಿಕ್ಕಾಗಿ ಅತ್ತಿಹಣ್ಣು ಚುಚ್ಚುವವನಾದ ಆಮೋಸನನ್ನು ಉಪಯೋಗಿಸಿದನು

[ಪುಟ 13ರಲ್ಲಿರುವ ಚಿತ್ರಗಳು]

ಆಮೋಸನಂತೆ, ಯೆಹೋವನ ಸಂದೇಶವನ್ನು ನೀವೂ ಧೈರ್ಯದಿಂದ ಘೋಷಿಸುತ್ತಿದ್ದೀರೋ?