ಯೆಹೋವನ ತೀರ್ಪು ದುಷ್ಟರ ವಿರುದ್ಧ ಬರಲಿದೆ
ಯೆಹೋವನ ತೀರ್ಪು ದುಷ್ಟರ ವಿರುದ್ಧ ಬರಲಿದೆ
“ನಿನ್ನ ದೇವರ ಬರುವಿಕೆಗೆ [“ದೇವರನ್ನು ಸಂಧಿಸಲು,” Nw] ನಿನ್ನನ್ನು ಸಿದ್ಧಮಾಡಿಕೋ.”—ಆಮೋಸ 4:12.
ಯೆಹೋವನು ಭೂಮಿಯ ಮೇಲಣ ದುಷ್ಟತ್ವ ಮತ್ತು ಕಷ್ಟಾನುಭವಗಳಿಗೆ ಎಂದಾದರೂ ಅಂತ್ಯವನ್ನು ತರುವನೊ? 21ನೆಯ ಶತಮಾನದ ಆರಂಭದಲ್ಲಿ ಈ ಪ್ರಶ್ನೆಯು ಹಿಂದೆಂದಿಗಿಂತಲೂ ಹೆಚ್ಚು ದೊಡ್ಡದ್ದಾಗಿ ಎದ್ದುಕಾಣುತ್ತಿದೆ. ನಾವು ಯಾವ ಕಡೆ ತಿರುಗಿದರೂ ಮಾನವನು ಮಾನವನೊಂದಿಗೆ ಅಮಾನವೀಯ ರೀತಿಯಲ್ಲಿ ವರ್ತಿಸುವ ಪುರಾವೆಯು ಕಂಡುಬರುತ್ತದೆಂದು ತೋರುತ್ತದೆ. ಹಿಂಸಾಚಾರ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವಿಲ್ಲದ ಒಂದು ಲೋಕಕ್ಕಾಗಿ ನಾವೆಷ್ಟು ಹಂಬಲಿಸುತ್ತೇವೆ!
2 ಆದರೆ ಸಂತೋಷದ ಸುದ್ದಿಯೇನಂದರೆ, ಯೆಹೋವನು ದುಷ್ಟತ್ವಕ್ಕೆ ಅಂತ್ಯ ತರುವನೆಂಬ ವಿಷಯದಲ್ಲಿ ನಾವು ಪೂರ್ಣ ಭರವಸೆಯಿಂದಿರಸಾಧ್ಯವಿದೆ. ದೇವರ ಸ್ವಂತ ಗುಣಗಳು ಆತನು ದುಷ್ಟರಿಗೆ ವಿರುದ್ಧವಾಗಿ ಕ್ರಮಕೈಕೊಳ್ಳುವನೆಂಬ ಆಶ್ವಾಸನೆಯನ್ನು ನೀಡುತ್ತವೆ. ಯೆಹೋವನು ನೀತಿನ್ಯಾಯಗಳ ದೇವರು. ಕೀರ್ತನೆ 33:5ರಲ್ಲಿ ಆತನ ವಾಕ್ಯವು ತಿಳಿಸುವುದು: “ಆತನು ನೀತಿನ್ಯಾಯಗಳನ್ನು ಪ್ರೀತಿಸುವವನು.” ಇನ್ನೊಂದು ಕೀರ್ತನೆಯು ಹೇಳುವುದು: “ಯೆಹೋವನು . . . ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.” (ಕೀರ್ತನೆ 11:5) ಹೀಗಿರುವಾಗ, ನೀತಿನ್ಯಾಯವನ್ನು ಪ್ರೀತಿಸುವ ಸರ್ವಶಕ್ತ ದೇವರಾದ ಯೆಹೋವನು ತಾನು ದ್ವೇಷಿಸುವ ವಿಷಯಗಳನ್ನು ಸದಾ ಸಹಿಸಿಕೊಳ್ಳಲಾರನು.
3 ಯೆಹೋವನು ದುಷ್ಟತ್ವವನ್ನು ತೊಡೆದು ಹಾಕುವನು ಎಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಲು ಇನ್ನೊಂದು ಕಾರಣವನ್ನು ಪರಿಗಣಿಸಿರಿ. ಆತನ ಹಿಂದಣ ವ್ಯವಹಾರಗಳ ದಾಖಲೆಯು ಇದಕ್ಕೆ ಖಾತರಿಯನ್ನು ಕೊಡುತ್ತದೆ. ಯೆಹೋವನು ದುಷ್ಟರೊಂದಿಗೆ ವ್ಯವಹರಿಸುವ ರೀತಿಯ ಬಗ್ಗೆ ಎದ್ದುಕಾಣುವ ನಮೂನೆಗಳು ಬೈಬಲಿನ ಆಮೋಸ ಪುಸ್ತಕದಲ್ಲಿ ಕಂಡುಬರುತ್ತವೆ. ಆಮೋಸನ ಪ್ರವಾದನೆಯ ಇನ್ನೂ ಹೆಚ್ಚಿನ ಚರ್ಚೆಯು ದೈವಿಕ ತೀರ್ಪಿನ ಕುರಿತಾಗಿ ಮೂರು ಸಂಗತಿಗಳನ್ನು ಒತ್ತಿಹೇಳುವುದು. ಒಂದನೆಯದಾಗಿ, ದೈವಿಕ ತೀರ್ಪು ಯಾವಾಗಲೂ ಅರ್ಹವಾದದ್ದಾಗಿರುತ್ತದೆ. ಎರಡನೆಯದಾಗಿ, ಅದು ತಪ್ಪಿಸಲಸಾಧ್ಯವಾದದ್ದು. ಮತ್ತು ಮೂರನೆಯದಾಗಿ, ಅದು ಆಯ್ಕೆಮಾಡಿರುವವರ ಮೇಲೆ ಬರುವಂಥದ್ದಾಗಿರುತ್ತದೆ, ಯಾಕಂದರೆ ಯೆಹೋವನು ದುಷ್ಟರ ವಿರುದ್ಧ ತೀರ್ಪನ್ನು ವಿಧಿಸುತ್ತಾನೆ, ಆದರೆ ಪಶ್ಚಾತ್ತಾಪಪಡುವ ಮತ್ತು ಯೋಗ್ಯ ಪ್ರವೃತ್ತಿಯುಳ್ಳ ಜನರಿಗೆ ಕರುಣೆಯನ್ನು ದಯಪಾಲಿಸುತ್ತಾನೆ.—ರೋಮಾಪುರ 9:17-26.
ದೈವಿಕ ತೀರ್ಪು ಯಾವಾಗಲೂ ಅರ್ಹವಾದದ್ದಾಗಿರುತ್ತದೆ
4 ಆಮೋಸನ ದಿನಗಳಲ್ಲಿ ಇಸ್ರಾಯೇಲ್ ಜನಾಂಗವು ಆಗಲೇ ಎರಡು ರಾಜ್ಯಗಳಾಗಿ ಒಡೆದಿತ್ತು. ಒಂದು, ದಕ್ಷಿಣದ ಎರಡು ಕುಲಗಳ ಯೆಹೂದ ರಾಜ್ಯವಾಗಿತ್ತು ಮತ್ತು ಇನ್ನೊಂದು, ಉತ್ತರದ ಹತ್ತು ಕುಲಗಳ ಇಸ್ರಾಯೇಲ್ ರಾಜ್ಯ. ಯೆಹೋವನು ಆಮೋಸನನ್ನು ಪ್ರವಾದಿಯಾಗಿ ಸೇವೆಸಲ್ಲಿಸುವಂತೆ ನೇಮಿಸಿ, ಯೆಹೂದದಲ್ಲಿದ್ದ ಅವನ ಹುಟ್ಟೂರಿನಿಂದ ಇಸ್ರಾಯೇಲಿಗೆ ಕಳುಹಿಸಿದನು. ಅಲ್ಲಿ ಆಮೋಸನು ದೈವಿಕ ತೀರ್ಪನ್ನು ಘೋಷಿಸುವಂತೆ ದೇವರಿಂದ ಉಪಯೋಗಿಸಲ್ಪಡಲಿದ್ದನು.
5 ಆಮೋಸನು ತನ್ನ ಕೆಲಸದ ಆರಂಭದಲ್ಲಿ ಮೊಂಡರಾಗಿದ್ದ ಉತ್ತರದ ಇಸ್ರಾಯೇಲ್ ರಾಜ್ಯದ ವಿರುದ್ಧ ಯೆಹೋವನ ತೀರ್ಪನ್ನು ಸಾರಲಿಲ್ಲ. ಬದಲಾಗಿ ಅವನು ಆರಂಭದಲ್ಲಿ ಸಿರಿಯ,
ಫಿಲಿಷ್ಟಿಯ, ತೂರ್, ಎದೋಮ್, ಅಮ್ಮೋನ್ ಮತ್ತು ಮೋವಾಬ್ ಎಂಬ ಹತ್ತಿರದ ಆರು ಜನಾಂಗಗಳ ವಿರುದ್ಧ ಪ್ರತಿಕೂಲ ದೈವಿಕ ತೀರ್ಪನ್ನು ಘೋಷಿಸಿದನು. ಆದರೆ ಆ ಜನಾಂಗಗಳು ನಿಜವಾಗಿಯೂ ದೇವರ ಪ್ರತಿಕೂಲ ತೀರ್ಪನ್ನು ಅನುಭವಿಸಲು ಅರ್ಹವಾಗಿದ್ದವೊ? ನಿಶ್ಚಯವಾಗಿಯೂ ಅರ್ಹವಾಗಿದ್ದವು! ಒಂದು ಕಾರಣವೇನೆಂದರೆ, ಅವರು ಯೆಹೋವನ ಜನರ ಕಟ್ಟಾ ವೈರಿಗಳಾಗಿದ್ದರು.6 ಉದಾಹರಣೆಗೆ, ಸಿರಿಯದವರು ‘ಗಿಲ್ಯಾದನ್ನು ಒಕ್ಕಿ ನುಗ್ಗುಮಾಡಿದ್ದಕ್ಕಾಗಿ’ ಅವರನ್ನು ಯೆಹೋವನು ಖಂಡಿಸಿದನು. (ಆಮೋಸ 1:3) ಸಿರಿಯದವರು ಯೊರ್ದನ್ ಹೊಳೆಯ ಪೂರ್ವದಲ್ಲಿದ್ದ ಇಸ್ರಾಯೇಲ್ ಪ್ರದೇಶವಾದ ಗಿಲ್ಯಾದಿನಿಂದ ಸ್ವಲ್ಪ ಕ್ಷೇತ್ರವನ್ನು ವಶಪಡಿಸಿಕೊಂಡು ಅಲ್ಲಿದ್ದ ದೇವಜನರ ಮೇಲೆ ಘೋರ ಹಾನಿಯನ್ನು ತಂದೊಡ್ಡಿದರು. ಫಿಲಿಷ್ಟಿಯ ಮತ್ತು ತೂರ್ ಜನಾಂಗಗಳ ವಿಷಯದಲ್ಲೇನು? ಫಿಲಿಷ್ಟಿಯರು ಇಸ್ರಾಯೇಲ್ಯರನ್ನು ದೇಶಭ್ರಷ್ಟರನ್ನಾಗಿ ಅಥವಾ ಬಂದಿಗಳನ್ನಾಗಿ ಹಿಡಿದು ಅವರನ್ನು ಇದೋಮ್ಯರಿಗೆ ಮಾರುತ್ತಿದ್ದರು, ಮತ್ತು ಕೆಲವು ಇಸ್ರಾಯೇಲ್ಯರು ತೂರಿನ ದಾಸತ್ವಕ್ಕೆ ಬಲಿಯಾದರು. (ಆಮೋಸ 1:6, 9) ಯೆಹೋವನ ಜನರನ್ನು ದಾಸತ್ವಕ್ಕೆ ಮಾರಿಬಿಡುವುದರ ಕುರಿತು ಸ್ವಲ್ಪ ಯೋಚಿಸಿರಿ! ಆದುದರಿಂದ, ಯೆಹೋವನು ಸಿರಿಯ, ಫಿಲಿಷ್ಟಿಯ ಮತ್ತು ತೂರಿನ ಮೇಲೆ ವಿಪತ್ತನ್ನು ತರಲಿದ್ದದ್ದರಲ್ಲಿ ಆಶ್ಚರ್ಯವೇನಿಲ್ಲ.
7 ಇಸ್ರಾಯೇಲಿನ ಸಂಬಂಧದಲ್ಲಿ ಮತ್ತು ಪರಸ್ಪರವಾಗಿಯೂ ಎದೋಮ್, ಅಮ್ಮೋನ್ ಮತ್ತು ಮೋವಾಬಿನ ಮಧ್ಯೆ ಸರ್ವಸಾಮಾನ್ಯವಾದ ವಿಷಯವೊಂದಿತ್ತು. ಈ ಮೂರು ಜನಾಂಗಗಳೂ ಇಸ್ರಾಯೇಲಿನ ಸಂಬಂಧಿಗಳಾಗಿದ್ದರು. ಎದೋಮ್ಯರು ಅಬ್ರಹಾಮನ ಸಂತಾನದಲ್ಲಿ ಯಾಕೋಬನ ಅವಳಿ ಸಹೋದರ ಏಸಾವನಿಂದ ಬಂದವರಾಗಿದ್ದರು. ಹೀಗೆ ಒಂದರ್ಥದಲ್ಲಿ ಅವರು ಇಸ್ರಾಯೇಲ್ಯರ ಸಹೋದರರಾಗಿದ್ದರು. ಅಮ್ಮೋನಿಯರು ಮತ್ತು ಮೋವಾಬ್ಯರು ಅಬ್ರಹಾಮನ ಸೋದರಳಿಯನಾದ ಲೋಟನ ವಂಶಸ್ಥರಾಗಿದ್ದರು. ಆದರೆ ಈ ಎದೋಮ್, ಅಮ್ಮೋನ್ ಮತ್ತು ಮೋವಾಬ್ ಜನಾಂಗದವರು ತಮ್ಮ ಇಸ್ರಾಯೇಲ್ಯ ಸಂಬಂಧಿಗಳನ್ನು ಸಹೋದರಭಾವದಿಂದ ಉಪಚರಿಸಿದರೊ? ನಿಶ್ಚಯವಾಗಿಯೂ ಇಲ್ಲ! ಎದೋಮ್ “ತನ್ನ ಸಹೋದರನ” ಮೇಲೆ ಕರುಣಾರಹಿತವಾಗಿ ಕತ್ತಿಯನ್ನು ಉಪಯೋಗಿಸಿತು, ಮತ್ತು ಅಮ್ಮೋನ್ಯರು ಇಸ್ರಾಯೇಲಿನ ಬಂದಿಗಳನ್ನು ಕ್ರೂರ ರೀತಿಯಲ್ಲಿ ಉಪಚರಿಸಿದರು. (ಆಮೋಸ 1:11, 13) ಮೋವಾಬ್ಯರು ಇಸ್ರಾಯೇಲ್ಯರನ್ನು ದುರುಪಚರಿಸಿದರೆಂದು ಆಮೋಸನು ನೇರವಾಗಿ ಹೇಳುವುದಿಲ್ಲವಾದರೂ, ಮೋವಾಬ್ಯರಿಗೆ ಇಸ್ರಾಯೇಲನ್ನು ವಿರೋಧಿಸಿದ ಕುರಿತು ಒಂದು ಉದ್ದ ಚರಿತ್ರೆಯಿತ್ತು. ಸಂಬಂಧಿಗಳಾದ ಈ ಮೂರು ಜನಾಂಗಗಳಿಗೆ ತೀವ್ರ ಶಿಕ್ಷೆಯು ಬರಲಿತ್ತು. ಯೆಹೋವನು ಅವರ ಮೇಲೆ ಅಗ್ನಿಮಯ ನಾಶನವನ್ನು ತರಲಿದ್ದನು.
ದೈವಿಕ ತೀರ್ಪು ತಪ್ಪಿಸಲಸಾಧ್ಯವಾದದ್ದು
8 ಆಮೋಸನ ಪ್ರವಾದನೆಯಲ್ಲಿ ಈ ಮುಂಚೆ ತಿಳಿಸಲಾದ ಆರು ಜನಾಂಗಗಳು ಪ್ರತಿಕೂಲವಾದ ದೈವಿಕ ತೀರ್ಪಿಗೆ ಅರ್ಹವಾಗಿದ್ದವು ಎಂಬುದರಲ್ಲಿ ಯಾವ ಸಂಶಯವಿಲ್ಲ. ಅಷ್ಟುಮಾತ್ರವಲ್ಲದೆ, ಅದರಿಂದ ತಪ್ಪಿಸಿಕೊಳ್ಳಲು ಅವರಿಗೆ ಯಾವ ಮಾರ್ಗವೂ ಇರಲಿಲ್ಲ. ಆಮೋಸ ಒಂದನೆಯ ಅಧ್ಯಾಯದ 3ನೆಯ ವಚನದಿಂದ ಆರಂಭಗೊಂಡು ಎರಡನೆಯ ಅಧ್ಯಾಯದ 1ನೆಯ ವಚನದ ವರೆಗೆ
ಯೆಹೋವನು ಆರು ಬಾರಿ ಹೀಗೆನ್ನುತ್ತಾನೆ: “ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.” ಆ ಮಾತುಗಳಿಗೆ ಹೊಂದಿಕೆಯಲ್ಲಿ, ಈ ಜನಾಂಗಗಳಿಗೆ ವಿರುದ್ಧವಾಗಿ ಬರಲಿದ್ದ ದಂಡನೆಯನ್ನು ಆತನು ತಪ್ಪಿಸಲಿಲ್ಲ. ಈ ಜನಾಂಗಗಳಲ್ಲಿ ಪ್ರತಿಯೊಂದೂ ಆ ಬಳಿಕ ವಿಪತ್ತಿಗೊಳಗಾದವೆಂಬುದನ್ನು ಇತಿಹಾಸವೇ ಸ್ಪಷ್ಟಪಡಿಸುತ್ತದೆ. ಇವುಗಳಲ್ಲಿ ಕಡಿಮೆಪಕ್ಷ ಫಿಲಿಷ್ಟಿಯ, ಮೋವಾಬ್, ಅಮ್ಮೋನ್ ಮತ್ತು ಎದೋಮ್ ಎಂಬ ನಾಲ್ಕು ಜನಾಂಗಗಳಾದರೊ ಕ್ರಮೇಣ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವು!9 ಮುಂದಕ್ಕೆ ಆಮೋಸನ ಪ್ರವಾದನೆಯು, ಏಳನೆಯ ಜನಾಂಗವೂ ಆಮೋಸನ ಸ್ವದೇಶವೂ ಆದ ಯೆಹೂದದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಉತ್ತರದ ಇಸ್ರಾಯೇಲ್ ರಾಜ್ಯದಲ್ಲಿ ಆಮೋಸನ ಮಾತುಗಳನ್ನು ಕೇಳುತ್ತಿದ್ದವರು ಯೆಹೂದ ರಾಜ್ಯದ ವಿರುದ್ಧ ಆಮೋಸನು ತೀರ್ಪು ಘೋಷಿಸುವುದನ್ನು ಕೇಳಿ ಆಶ್ಚರ್ಯಗೊಂಡಿರಬಹುದು. ಯೆಹೂದದ ನಿವಾಸಿಗಳು ಪ್ರತಿಕೂಲ ತೀರ್ಪಿಗೆ ಏಕೆ ಅರ್ಹರಾಗಿದ್ದರು? ‘ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿದ್ದೇ’ ಇದಕ್ಕೆ ಕಾರಣವಾಗಿತ್ತೆಂದು ಆಮೋಸ 2:4 ತಿಳಿಸುತ್ತದೆ. ತನ್ನ ಧರ್ಮಶಾಸ್ತ್ರದ ಕಡೆಗೆ ತೋರಿಸಲಾದ ಇಂಥ ಉದ್ದೇಶಪೂರ್ವಕ ಅಲಕ್ಷ್ಯವನ್ನು ಯೆಹೋವನು ಹಗುರವಾಗಿ ತೆಗೆದುಕೊಳ್ಳಲಿಲ್ಲ. ಆಮೋಸ 2:5ಕ್ಕನುಸಾರ, ಆತನು ಮುಂತಿಳಿಸುವುದು: “ನಾನು ಯೆಹೂದದ ಮೇಲೆ ಬೆಂಕಿಯನ್ನು ಸುರಿಸುವೆನು; ಅದು ಯೆರೂಸಲೇಮಿನ ಅರಮನೆಗಳನ್ನು ನುಂಗಿಬಿಡುವದು.”
10 ಅಪನಂಬಿಗಸ್ತ ಯೆಹೂದವು ಬರಲಿದ್ದ ದುರ್ಗತಿಯಿಂದ ತಪ್ಪಿಸಿಕೊಳ್ಳಸಾಧ್ಯವಿರಲಿಲ್ಲ. ಏಳನೆಯ ಬಾರಿ ಯೆಹೋವನು ಹೇಳುವುದು: “ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ.” (ಆಮೋಸ 2:4) ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಯೆಹೂದವನ್ನು ನಿರ್ಜನಗೊಳಿಸಿದಾಗ ಮುಂತಿಳಿಸಲ್ಪಟ್ಟಿದ್ದ ಶಿಕ್ಷೆಯನ್ನು ಅದು ಅನುಭವಿಸಿತು. ಹೀಗೆ, ದುಷ್ಟರು ದೈವಿಕ ತೀರ್ಪಿನಿಂದ ತಪ್ಪಿಸಿಕೊಳ್ಳಲಾರರೆಂಬುದನ್ನು ನಾವು ಪುನಃ ನೋಡುತ್ತೇವೆ.
11 ಆಮೋಸನು ಆಗ ತಾನೇ ಏಳು ಜನಾಂಗಗಳ ಮೇಲೆ ಯೆಹೋವನ ತೀರ್ಪನ್ನು ಸಾರಿ ಹೇಳಿದ್ದನು. ಆಮೋಸನು ತನ್ನ ಪ್ರವಾದನೆಯನ್ನು ಹೇಳಿ ಮುಗಿಸಿದ್ದಾನೆಂದು ಯಾರಾದರೂ ಭಾವಿಸಿದ್ದರೆ ಅವರ ಅಭಿಪ್ರಾಯ ತಪ್ಪಾಗಿತ್ತು. ಏಕೆಂದರೆ ಆಮೋಸನ ಘೋಷಣೆಗಳು ಇನ್ನೂ ಮುಗಿದಿರಲಿಲ್ಲ! ಅವನ ಪ್ರಧಾನ ನೇಮಕವು, ಉತ್ತರದ ಇಸ್ರಾಯೇಲ್ ರಾಜ್ಯದ ವಿರುದ್ಧ ನಿಷ್ಠುರ ತೀರ್ಪಿನ ಸಂದೇಶವನ್ನು ತಿಳಿಸುವುದಾಗಿತ್ತು. ಇಸ್ರಾಯೇಲು ಪ್ರತಿಕೂಲವಾದ ದೈವಿಕ ತೀರ್ಪಿಗೆ ಅರ್ಹವಾಗಿತ್ತು, ಏಕೆಂದರೆ ಆ ಜನಾಂಗದ ನೈತಿಕ ಮತ್ತು ಆಧ್ಯಾತ್ಮಿಕ ಅವನತಿಯು ಶೋಚನೀಯವಾಗಿತ್ತು.
12 ಇಸ್ರಾಯೇಲ್ ರಾಜ್ಯದಲ್ಲಿ ಸರ್ವಸಾಮಾನ್ಯವಾಗಿದ್ದ ದಬ್ಬಾಳಿಕೆಯನ್ನು ಆಮೋಸನ ಪ್ರವಾದನೆಯು ಬಯಲುಪಡಿಸುತ್ತದೆ. ಇದರ ಕುರಿತಾಗಿ ಆಮೋಸ 2:6, 7 ಓದುವುದು: “ಇಸ್ರಾಯೇಲು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಇಸ್ರಾಯೇಲ್ಯರು ನ್ಯಾಯವಂತನನ್ನು ಬೆಳ್ಳಿಗೆ ಮಾರುತ್ತಾರೆ, ಒಂದು ಜೊತೆಕೆರದ ಸಾಲಕ್ಕಾಗಿ ದಿಕ್ಕಿಲ್ಲದವನನ್ನು ವಿಕ್ರಯಿಸುತ್ತಾರೆ. ಬಡವನು ತಲೆಯ [ಮೇಲೆ ಎರಚಿಕೊಂಡ] ನೆಲದ ದೂಳನ್ನೂ ಆತುರವಾಗಿ ಆಶಿಸುತ್ತಾರೆ; ದೀನರ ದಾರಿಗೆ ಅಡ್ಡಿಹಾಕುತ್ತಾರೆ.”
13 ನ್ಯಾಯವಂತರನ್ನು ಕೇವಲ “ಬೆಳ್ಳಿಗಾಗಿ” ಮಾರಲಾಗುತ್ತಿತ್ತು, ಅಂದರೆ ಪ್ರಾಯಶಃ ನ್ಯಾಯಾಧಿಪತಿಗಳು ಬೆಳ್ಳಿಯನ್ನು ಲಂಚವಾಗಿ ಪಡೆದು ನಿರಪರಾಧಿಗಳಿಗೆ ಶಿಕ್ಷೆ ವಿಧಿಸುತ್ತಿದ್ದರು. ಸಾಲಕೊಟ್ಟವರು ತಾವು ಬಡವರಿಗೆ ನೀಡಿರುವ ‘ಜೊತೆಕೆರಗಳ’ ಬೆಲೆಯ ಸಾಲಕ್ಕಾಗಿ, ಅಂದರೆ ಪ್ರಾಯಶಃ ಅಲ್ಪಮೊತ್ತದ ಸಾಲಕ್ಕಾಗಿ ಅವರನ್ನು ದಾಸತ್ವಕ್ಕೆ ಮಾರಿಬಿಡುತ್ತಿದ್ದರು. ದುರವಸ್ಥೆ, ಶೋಕ ಅಥವಾ
ಅವಮಾನದ ಸಂಕೇತವಾಗಿ ತಮ್ಮ ತಲೆಗೆ ಮಣ್ಣೆರಚಿಕೊಳ್ಳುವಷ್ಟು ಹೀನಾಯವಾದ ಸ್ಥಿತಿಗೆ ‘ಬಡವರನ್ನು’ ಇಳಿಸಲು ನಿರ್ದಯಿ ಜನರು ‘ಆತುರವಾಗಿ’ ಆಶಿಸುತ್ತಿದ್ದರು ಇಲ್ಲವೆ ಉತ್ಸುಕತೆಯಿಂದ ಪ್ರಯತ್ನಿಸುತ್ತಿದ್ದರು. ಭ್ರಷ್ಟಾಚಾರವು ಎಷ್ಟು ವ್ಯಾಪಕವಾಗಿತ್ತೆಂದರೆ ‘ದೀನರಿಗೆ’ ಯಾವುದೇ ನ್ಯಾಯ ದೊರೆಯುವ ನಿರೀಕ್ಷೆಯಿರಲಿಲ್ಲ.14 ದುರುಪಚಾರಕ್ಕೆ ಯಾರು ಒಳಗಾಗಿದ್ದರೆಂದು ಗಮನಿಸಿರಿ. ಅವರು ಯಾರೆಂದರೆ ದೇಶದಲ್ಲಿರುವ ನ್ಯಾಯವಂತರು, ಬಡವರು, ದಿಕ್ಕಿಲ್ಲದವರು, ಮತ್ತು ದೀನರೇ. ಯೆಹೋವನು ಇಸ್ರಾಯೇಲ್ಯರೊಂದಿಗೆ ಮಾಡಿದ ಧರ್ಮಶಾಸ್ತ್ರದ ಒಡಂಬಡಿಕೆಯು ದುರ್ಬಲರಿಗೂ ದಿಕ್ಕಿಲ್ಲದವರಿಗೂ ಕನಿಕರ ತೋರಿಸುವುದನ್ನು ಅಗತ್ಯಪಡಿಸಿತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಹತ್ತು ಕುಲಗಳ ಇಸ್ರಾಯೇಲ್ ರಾಜ್ಯದಲ್ಲಿ ಇಂಥವರ ಸ್ಥಿತಿ ತೀರ ದುರ್ಭರವಾಗಿತ್ತು.
“ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ಸಿದ್ಧಮಾಡಿಕೋ”
15 ಅನೈತಿಕತೆ ಮತ್ತು ಇತರ ಪಾಪಕೃತ್ಯಗಳು ಇಸ್ರಾಯೇಲಿನಲ್ಲಿ ತುಂಬಿದ್ದರಿಂದ, ಸಕಾರಣದಿಂದಲೇ ಪ್ರವಾದಿ ಆಮೋಸನು ಈ ದಂಗೆಕೋರ ಜನಾಂಗವನ್ನು ಹೀಗೆಂದು ಎಚ್ಚರಿಸಿದನು: “ನಿನ್ನ ದೇವರ ಬರುವಿಕೆಗೆ [“ದೇವರನ್ನು ಸಂಧಿಸಲು,” NW] ನಿನ್ನನ್ನು ಸಿದ್ಧಮಾಡಿಕೋ.” (ಆಮೋಸ 4:12) ಅಪನಂಬಿಗಸ್ತ ಇಸ್ರಾಯೇಲು ಬರಲಿದ್ದ ದೈವಿಕ ತೀರ್ಪಿನಿಂದ ತಪ್ಪಿಸಿಕೊಳ್ಳಸಾಧ್ಯವಿರಲಿಲ್ಲ, ಏಕೆಂದರೆ ಯೆಹೋವನು ಎಂಟನೆಯ ಬಾರಿ ಹೀಗೆ ಘೋಷಿಸಿದನು: “ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ.” (ಆಮೋಸ 2:6) ಆದರೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಪಾಪಿಗಳ ಕುರಿತು ದೇವರು ಹೇಳುವುದು: “ಅವರಲ್ಲಿ ಯಾರೂ ಓಡಿಹೋಗರು, ಯಾರೂ ತಪ್ಪಿಸಿಕೊಳ್ಳರು. ಪಾತಾಳದ ವರೆಗೆ ತೋಡಿಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು; ಸ್ವರ್ಗದ ತನಕ ಹತ್ತಿದರೇನು, ಅಲ್ಲಿಂದಲೂ ಅವರನ್ನಿಳಿಸುವೆನು.”—ಆಮೋಸ 9:1, 2.
16 ‘ಪಾತಾಳದ ವರೆಗೆ’ ತೋಡಿಕೊಂಡು ಹೋದರೂ ಅಂದರೆ ಸೂಚಕರೂಪದಲ್ಲಿ ಭೂಮಿಯ ಅತಿ ಕೆಳಗಿನ ಭಾಗದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ ಯೆಹೋವ ತೀರ್ಪಿನಿಂದ ತಪ್ಪಿಸಿಕೊಳ್ಳಲು ದುಷ್ಟರಿಗೆ ಸಾಧ್ಯವಿರುವುದಿಲ್ಲ. ಅವರು “ಸ್ವರ್ಗದ ತನಕ” ಹತ್ತಿದರೂ ಅಂದರೆ ಉನ್ನತ ಪರ್ವತಗಳಲ್ಲಿ ಆಶ್ರಯವನ್ನು ಹುಡುಕಲು ಪ್ರಯತ್ನಿಸಿದರೂ ದೈವಿಕ ತೀರ್ಪಿನಿಂದ ಅವರು ತಪ್ಪಿಸಿಕೊಳ್ಳಲಾರರು. ಯೆಹೋವನ ಎಚ್ಚರಿಕೆ ಸ್ಪಷ್ಟವಾದುದ್ದಾಗಿತ್ತು: ಆತನ ಕೈಗೆ ಎಟುಕದಂತೆ ನಾವು ಅಡಗಿಕುಳಿತುಕೊಳ್ಳಬಹುದಾದ ಸ್ಥಳವಿರುವುದಿಲ್ಲ. ದೈವಿಕ ನ್ಯಾಯಕ್ಕನುಸಾರ, ಇಸ್ರಾಯೇಲ್ ರಾಜ್ಯವು ತನ್ನ ದುಷ್ಕಾರ್ಯಗಳಿಗಾಗಿ ಲೆಕ್ಕವೊಪ್ಪಿಸಬೇಕಾಗಿತ್ತು. ಮತ್ತು ಆ ಸಮಯವು ನಿಶ್ಚಯವಾಗಿಯೂ ಬಂತು. ಸಾ.ಶ.ಪೂ. 740ರಲ್ಲಿ, ಆಮೋಸನು ಪ್ರವಾದನೆಯನ್ನು ದಾಖಲಿಸಿದ ಸುಮಾರು 60 ವರುಷಗಳ ಅನಂತರ, ಇಸ್ರಾಯೇಲ್ ರಾಜ್ಯವು ಜಯಶಾಲಿಗಳಾದ ಅಶ್ಶೂರದ ಸೈನಿಕರಿಂದ ಪತನಗೊಂಡಿತು.
ದೈವಿಕ ತೀರ್ಪು ಆಯ್ಕೆಮಾಡಿರುವವರ ಮೇಲೆ ಬರುವಂಥದ್ದಾಗಿದೆ
17 ದೈವಿಕ ತೀರ್ಪು ಯಾವಾಗಲೂ ಅರ್ಹವಾದದ್ದಾಗಿದೆ ಮತ್ತು ಅದು ತಪ್ಪಿಸಲಸಾಧ್ಯವಾದದ್ದು ಎಂಬುದನ್ನು ತಿಳಿದುಕೊಳ್ಳುವಂತೆ ಆಮೋಸನ ಪ್ರವಾದನೆಯು ನಮಗೆ ಸಹಾಯಮಾಡಿದೆ. ಆದರೆ ಆಮೋಸನ ಪುಸ್ತಕವು, ಯೆಹೋವನ ತೀರ್ಪು ಆಯ್ಕೆಮಾಡಿರುವವರ ಮೇಲೆ ಬರುವಂಥದ್ದಾಗಿರುತ್ತದೆ ಎಂಬುದನ್ನೂ ಸೂಚಿಸುತ್ತದೆ. ದುಷ್ಟರು ಎಲ್ಲಿಯೇ ಅಡಗಿರಲಿ, ಯೆಹೋವನು ಅವರನ್ನು ಕಂಡುಹಿಡಿದು ಅವರ ಮೇಲೆ ತನ್ನ ತೀರ್ಪನ್ನು ಬರಮಾಡಬಲ್ಲನು. ಅಂತೆಯೇ, ಆತನು ಪಶ್ಚಾತ್ತಾಪಪಡುವವರನ್ನು ಮತ್ತು ನೀತಿವಂತರನ್ನು ಕಂಡುಹಿಡಿದು ಅವರಿಗೆ ಕರುಣೆಯನ್ನು ತೋರಿಸಬಲ್ಲನು. ಈ ವಿಷಯವನ್ನು ಆಮೋಸನ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಸೊಗಸಾಗಿ ಎತ್ತಿತೋರಿಸಲಾಗಿದೆ.
18 ಆಮೋಸ 9ನೆಯ ಅಧ್ಯಾಯದ 8ನೆಯ ವಚನಕ್ಕನುಸಾರ ಯೆಹೋವನು ಹೇಳಿದ್ದು: “ಯಾಕೋಬಿನ ಮನೆತನವನ್ನು ಸಂಪೂರ್ಣವಾಗಿ ನಾಶಮಾಡೆನು.” ವಚನ 13ರಿಂದ 15ರಲ್ಲಿ ತಿಳಿಸಿರುವಂತೆ, ತನ್ನ ಜನರನ್ನು “ದುರವಸ್ಥೆಯಿಂದ ತಪ್ಪಿಸುವೆನು” ಎಂದು ಯೆಹೋವನು ವಚನಕೊಟ್ಟನು. ಇಂಥವರಿಗೆ ಕರುಣೆ ತೋರಿಸಲ್ಪಟ್ಟು ಅವರು ಸುರಕ್ಷೆ ಮತ್ತು ಸಮೃದ್ಧಿಯನ್ನು ಅನುಭವಿಸುವರು. ‘ಉಳುವವನು ಕೊಯ್ಯುವವನ ಹಿಂದೆ ಒತ್ತಿಕೊಂಡುಹೋಗುವನೆಂದು’ ಯೆಹೋವನು ವಾಗ್ದಾನಿಸಿದನು. ಇದನ್ನು ಸ್ವಲ್ಪ
ಯೋಚಿಸಿರಿ—ಕೊಯ್ಯಲ್ಪಟ್ಟಿರುವ ಫಲವು ಎಷ್ಟು ಸಮೃದ್ಧವಾಗಿರುವುದೆಂದರೆ, ಮುಂದಿನ ಉಳುವ ಮತ್ತು ಬಿತ್ತುವ ಕಾಲ ಬಂದರೂ ಎಲ್ಲವನ್ನು ಶೇಖರಿಸುವ ಕೆಲಸವು ಇನ್ನೂ ಮುಗಿದಿರುವುದಿಲ್ಲ!19 ಯೆಹೂದ ಮತ್ತು ಇಸ್ರಾಯೇಲ್ ಈ ಎರಡೂ ಜನಾಂಗಗಳಲ್ಲಿದ್ದ ದುಷ್ಟರ ವಿರುದ್ಧ ಯೆಹೋವನ ತೀರ್ಪು ಆಯ್ಕೆಮಾಡಿರುವವರ ಮೇಲೆ ಬರುವಂಥ ತೀರ್ಪಾಗಿತ್ತು ಎಂದು ಹೇಳಸಾಧ್ಯವಿದೆ, ಏಕೆಂದರೆ ಪಶ್ಚಾತ್ತಾಪಪಟ್ಟ ಜನರಿಗೆ ಮತ್ತು ಯೋಗ್ಯ ಪ್ರವೃತ್ತಿಯಿದ್ದವರಿಗೆ ಕರುಣೆಯು ತೋರಿಸಲ್ಪಟ್ಟಿತು. ಆಮೋಸ 9ನೆಯ ಅಧ್ಯಾಯದಲ್ಲಿ ದಾಖಲಾಗಿರುವ ಈ ಪುನಸ್ಸ್ಥಾಪನಾ ವಾಗ್ದಾನದ ನೆರವೇರಿಕೆಯಲ್ಲಿ, ಇಸ್ರಾಯೇಲ್ ಮತ್ತು ಯೆಹೂದದ ಪಶ್ಚಾತ್ತಾಪಪಟ್ಟಿದ್ದ ಜನಶೇಷವೊಂದು ಕೊನೆಗೆ ಸಾ.ಶ.ಪೂ. 537ರಲ್ಲಿ ಸೆರೆವಾಸದಿಂದ ಹಿಂದಿರುಗಿ ಬಂತು. ತಮ್ಮ ಪ್ರಿಯ ಸ್ವದೇಶದಲ್ಲಿ ಅವರು ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸಿದರು. ಅವರು ಅಲ್ಲಿ ಸುರಕ್ಷಿತತೆಯಲ್ಲಿ ತಮ್ಮ ಮನೆಗಳನ್ನೂ ಪುನಃನಿರ್ಮಿಸಿ, ದ್ರಾಕ್ಷೇತೋಟ ಮತ್ತು ಉದ್ಯಾನಗಳನ್ನು ನೆಟ್ಟರು.
ಯೆಹೋವನ ಪ್ರತಿಕೂಲ ತೀರ್ಪು ಬಂದೇ ಬರುತ್ತದೆ!
20 ಆಮೋಸನು ಸಾರಿದ ದೈವಿಕ ತೀರ್ಪಿನ ಸಂದೇಶಗಳ ನಮ್ಮ ಪರಿಗಣನೆಯು, ಯೆಹೋವನು ನಮ್ಮ ದಿನಗಳಲ್ಲೂ ದುಷ್ಟತ್ವಕ್ಕೆ ಅಂತ್ಯ ತರುವನೆಂಬ ಆಶ್ವಾಸನೆಯನ್ನು ನಮಗೆ ಕೊಡಬೇಕು. ನಾವು ಅದನ್ನು ಏಕೆ ನಂಬಬಲ್ಲೆವು? ಒಂದನೆಯದಾಗಿ, ಗತಕಾಲದಲ್ಲಿ ದೇವರು ದುಷ್ಟರೊಂದಿಗೆ ವ್ಯವಹರಿಸಿರುವ ದೃಷ್ಟಾಂತಗಳು, ನಮ್ಮ ದಿನಗಳಲ್ಲಿಯೂ ಆತನು ಹೇಗೆ ಕ್ರಿಯೆಗೈಯುವನೆಂಬುದನ್ನು ನಮಗೆ ತಿಳಿಸುತ್ತವೆ. ಎರಡನೆಯಾಗಿ, ಧರ್ಮಭ್ರಷ್ಟ ಇಸ್ರಾಯೇಲ್ ರಾಜ್ಯದ ವಿರುದ್ಧ ದೈವಿಕ ತೀರ್ಪಿನ ಜಾರಿಗೊಳಿಸುವಿಕೆಯು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನ’ ದೋಷಭರಿತ ಭಾಗದ ಅಂದರೆ ಕ್ರೈಸ್ತಪ್ರಪಂಚದ ಮೇಲೆ ದೇವರು ನಾಶನವನ್ನು ತರುವನೆಂದು ಖಾತ್ರಿಗೊಳಿಸುತ್ತದೆ.—ಪ್ರಕಟನೆ 18:2.
21 ಕ್ರೈಸ್ತಪ್ರಪಂಚ ದೈವಿಕ ತೀರ್ಪಿಗೆ ಅರ್ಹವಾಗಿದೆ ಎಂಬ ವಿಷಯದಲ್ಲಿ ಯಾವ ಸಂಶಯವೂ ಇಲ್ಲ. ಅದರ ಧಾರ್ಮಿಕ ಮತ್ತು ನೈತಿಕ ದುರವಸ್ಥೆಯೇ ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕ್ರೈಸ್ತಪ್ರಪಂಚ ಹಾಗೂ ಸೈತಾನನ ಲೋಕದ ಉಳಿದ ಭಾಗದ ವಿರುದ್ಧ ಯೆಹೋವನ ತೀರ್ಪು ನಿಶ್ಚಯವಾಗಿಯೂ ತಕ್ಕದ್ದಾಗಿದೆ. ಅದು ತಪ್ಪಿಸಲಾಗದಂಥದ್ದೂ ಆಗಿದೆ. ಏಕೆಂದರೆ ಯೆಹೋವನು ತೀರ್ಪು ವಿಧಿಸುವ ಸಮಯ ಬಂದಾಗ ಆಮೋಸ ಪುಸ್ತಕದ 9ನೇ ಅಧ್ಯಾಯದ 1ನೇ ವಚನವು ಅನ್ವಯವಾಗುವುದು: “ಅವರಲ್ಲಿ ಯಾರೂ ಓಡಿಹೋಗರು, ಯಾರೂ ತಪ್ಪಿಸಿಕೊಳ್ಳರು.” ಹೌದು, ದುಷ್ಟರು ಎಲ್ಲಿಯೇ ಅವಿತುಕೊಂಡರೂ ಯೆಹೋವನು ಅವರನ್ನು ಹುಡುಕಿ ತೆಗೆಯುವನು.
22 ದೈವಿಕ ತೀರ್ಪು ಯಾವಾಗಲೂ ಅರ್ಹವಾದದ್ದಾಗಿಯೂ, ತಪ್ಪಿಸಿಕೊಳ್ಳಲುಸಾಧ್ಯವಿಲ್ಲದ್ದಾಗಿಯೂ ಮತ್ತು ಆಯ್ಕೆಮಾಡಿರುವವರ ಮೇಲೆ ಬರುವಂಥದ್ದಾಗಿಯೂ ಇದೆ. ಇದನ್ನು ಅಪೊಸ್ತಲ ಪೌಲನ ಮಾತುಗಳಿಂದ ತಿಳಿದುಕೊಳ್ಳಸಾಧ್ಯವಿದೆ: “ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. ಯಾವಾಗ ಕೊಡುವನಂದರೆ ಯೇಸು ಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು. ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.” (2 ಥೆಸಲೋನಿಕ 1:6-8) ತನ್ನ ಅಭಿಷಿಕ್ತರನ್ನು ಸಂಕಟಪಡಿಸಿದ ಕಾರಣ ಪ್ರತಿಕೂಲ ತೀರ್ಪನ್ನು ಹೊಂದಲು ಅರ್ಹರಾಗಿದ್ದವರ ಮೇಲೆ ಅದನ್ನು ತರುವುದು “ದೇವರ ಎಣಿಕೆಯಲ್ಲಿ ನ್ಯಾಯವಾಗಿದೆ.” ಆ ತೀರ್ಪು ತಪ್ಪಿಸಿಕೊಳ್ಳಲು ಅಸಾಧ್ಯವಾದದ್ದಾಗಿದೆ, ಏಕೆಂದರೆ ‘ಯೇಸು ಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಉರಿಯುವ ಬೆಂಕಿಯಲ್ಲಿ ಪ್ರತ್ಯಕ್ಷನಾಗುವಾಗ’ ದುಷ್ಟರು ಪಾರಾಗಲಾರರು. ದೈವಿಕ ತೀರ್ಪು ಆಯ್ಕೆಮಾಡಲ್ಪಟ್ಟ ತೀರ್ಪೂ ಆಗಿರುವುದು, ಏಕೆಂದರೆ ಯೇಸುವು “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.” ಮತ್ತು ದೈವಿಕ ತೀರ್ಪಿನ ಜಾರಿಗೊಳಿಸುವಿಕೆಯು, ಸಂಕಟಪಡುವ ದೇವಭಯವುಳ್ಳ ಜನರಿಗೆ ಸಾಂತ್ವನವನ್ನು ತರುವುದು.
ಯಥಾರ್ಥರಿಗೆ ನಿರೀಕ್ಷೆ
23 ಯೋಗ್ಯ ಪ್ರವೃತ್ತಿಯುಳ್ಳ ಜನರಿಗೆ ಆಮೋಸನ ಪ್ರವಾದನೆಯಲ್ಲಿ ಸಾಂತ್ವನ ಮತ್ತು ನಿರೀಕ್ಷೆಯ ಅದ್ಭುತಕರವಾದ ಸಂದೇಶವು ಅಡಕವಾಗಿದೆ. ಆಮೋಸ ಪುಸ್ತಕದಲ್ಲಿ ಮುನ್‌ತಿಳಿಸಲ್ಪಟ್ಟಂತೆ, ಯೆಹೋವನು ತನ್ನ ಪುರಾತನ ಕಾಲದ ಜನರನ್ನು ಪೂರ್ಣವಾಗಿ ನಾಶಗೊಳಿಸಲಿಲ್ಲ. ಆತನು ಕಟ್ಟಕಡೆಗೆ ಇಸ್ರಾಯೇಲ್ ಮತ್ತು ಯೆಹೂದದ ಸೆರೆವಾಸಿಗಳನ್ನು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರತಂದು ಅವರನ್ನು ಹೇರಳವಾದ ಸುರಕ್ಷತೆ ಮತ್ತು ಸಮೃದ್ಧಿಯಿಂದ ಆಶೀರ್ವದಿಸಿದನು. ನಮ್ಮ ದಿನಗಳಿಗಾಗಿ ಇದು ಏನನ್ನು ಅರ್ಥೈಸುತ್ತದೆ? ದೈವಿಕ ತೀರ್ಪನ್ನು ಜಾರಿಗೊಳಿಸುವ ಸಮಯದಲ್ಲಿ ದುಷ್ಟರು ಎಲ್ಲಿಯೇ ಅಡಗಿದರೂ ಯೆಹೋವನು ಅವರನ್ನು ಕಂಡುಹಿಡಿಯುವನು ಮತ್ತು ಆತನ ಕರುಣಾಪಾತ್ರರು ಈ ಭೂಮಿಯಲ್ಲಿ ಎಲ್ಲಿಯೇ ಜೀವಿಸುತ್ತಿರಲಿ ಆತನು ಅವರನ್ನೂ ಕಂಡುಹಿಡಿಯುವನು ಎಂಬುದನ್ನು ಇದು ನಮಗೆ ಖಚಿತಪಡಿಸುತ್ತದೆ.
ಅ. ಕೃತ್ಯಗಳು 13:48, NW) ಹೌದು, ನಾವೀಗ ಅನುಭವಿಸುತ್ತಿರುವ ಆಧ್ಯಾತ್ಮಿಕ ಸಮೃದ್ಧಿಯಲ್ಲಿ ಸಾಧ್ಯವಿರುವಷ್ಟು ಹೆಚ್ಚು ಜನರು ಪಾಲ್ಗೊಳ್ಳಲು ಸಹಾಯಮಾಡಿ, ದುಷ್ಟರ ಮೇಲೆ ಬರಲಿರುವ ದೈವಿಕ ತೀರ್ಪಿನ ಜಾರಿಗೊಳಿಸುವಿಕೆಯಿಂದ ಅವರೂ ಪಾರಾಗಬೇಕೆಂಬುದೇ ನಮ್ಮ ಅಪೇಕ್ಷೆ. ಈ ಆಶೀರ್ವಾದವನ್ನು ಅನುಭವಿಸಲು ನಮ್ಮ ಹೃದಯದ ಸ್ಥಿತಿಯು ಯೋಗ್ಯವಾಗಿರಲೇಬೇಕು ಎಂಬುದು ನಿಶ್ಚಯ. ಇದು ಸಹ ಆಮೋಸನ ಪ್ರವಾದನೆಯಲ್ಲಿ ಎತ್ತಿತೋರಿಸಲ್ಪಟ್ಟಿದೆ ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ನೋಡುವೆವು.
24 ದುಷ್ಟರ ವಿರುದ್ಧ ಯೆಹೋವನ ತೀರ್ಪಿಗಾಗಿ ನಾವು ಕಾಯುತ್ತಿರುವಾಗ, ನಂಬಿಗಸ್ತ ಸೇವಕರಾದ ನಮ್ಮ ಅನುಭವವು ಏನಾಗಿದೆ? ಯೆಹೋವನು ನಮ್ಮನ್ನು ತುಂಬಿತುಳುಕುವ ಆಧ್ಯಾತ್ಮಿಕ ಸಮೃದ್ಧಿಯಿಂದ ಆಶೀರ್ವದಿಸುತ್ತಿದ್ದಾನೆ. ಕ್ರೈಸ್ತಪ್ರಪಂಚದ ಸುಳ್ಳು ಬೋಧನೆಗಳಿಂದಾಗಿ ಫಲಿಸಿರುವ ಮಿಥ್ಯೆಗಳು ಹಾಗೂ ವಿಕೃತತೆಗಳಿಂದ ಮುಕ್ತವಾಗಿರುವ ಆರಾಧನಾ ರೀತಿಯು ನಮ್ಮದಾಗಿದೆ. ಯೆಹೋವನು ನಮಗೆ ಹೇರಳವಾದ ಆಧ್ಯಾತ್ಮಿಕ ಆಹಾರವನ್ನೂ ಕೊಟ್ಟು ಹರಸಿದ್ದಾನೆ. ಆದರೆ ಇದನ್ನು ನೆನಪಿನಲ್ಲಿಡಿ: ಯೆಹೋವನಿಂದ ಬರುವ ಈ ಸಮೃದ್ಧ ಆಶೀರ್ವಾದಗಳು ನಮ್ಮ ಮೇಲೆ ದೊಡ್ಡ ಜವಾಬ್ದಾರಿಯನ್ನೂ ತರುತ್ತವೆ. ಬರಲಿರುವ ತೀರ್ಪಿನ ಬಗ್ಗೆ ನಾವು ಇತರರನ್ನು ಎಚ್ಚರಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ. “ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿಯಿರುವ” ಜನರನ್ನು ಹುಡುಕಲಿಕ್ಕಾಗಿ ನಾವು ಸಾಧ್ಯವಿರುವುದನ್ನೆಲ್ಲ ಮಾಡಲು ಬಯಸುತ್ತೇವೆ. (ನೀವು ಹೇಗೆ ಉತ್ತರಿಸುವಿರಿ?
• ಯೆಹೋವನ ಪ್ರತಿಕೂಲ ತೀರ್ಪು ಯಾವಾಗಲೂ ಅರ್ಹವಾದದ್ದಾಗಿರುತ್ತದೆಂದು ಆಮೋಸನ ಪ್ರವಾದನೆಯು ಹೇಗೆ ತೋರಿಸುತ್ತದೆ?
• ದೈವಿಕ ತೀರ್ಪು ತಪ್ಪಿಸಲಸಾಧ್ಯವಾದದ್ದು ಎಂಬುದನ್ನು ತೋರಿಸಲು ಆಮೋಸನು ಯಾವ ರುಜುವಾತನ್ನು ಒದಗಿಸಿದನು?
• ದೇವರ ತೀರ್ಪು ಆಯ್ಕೆಮಾಡಿರುವವರ ಮೇಲೆ ಬರುವಂಥದ್ದಾಗಿದೆ ಎಂಬುದನ್ನು ಆಮೋಸ ಪುಸ್ತಕವು ಹೇಗೆ ತೋರಿಸಿಕೊಡುತ್ತದೆ?
[ಅಧ್ಯಯನ ಪ್ರಶ್ನೆಗಳು]
1, 2. ದೇವರು ದುಷ್ಟತ್ವವನ್ನು ಅಂತ್ಯಗೊಳಿಸುವನು ಎಂದು ನಾವು ಏಕೆ ಭರವಸೆಯಿಂದಿರಬಲ್ಲೆವು?
3. ಆಮೋಸನ ಪ್ರವಾದನೆಯ ಹೆಚ್ಚಿನ ಚರ್ಚೆಯು ಏನನ್ನು ಒತ್ತಿಹೇಳಲಿದೆ?
4. ಯೆಹೋವನು ಆಮೋಸನನ್ನು ಎಲ್ಲಿಗೆ ಕಳುಹಿಸಿದನು, ಮತ್ತು ಯಾವ ಉದ್ದೇಶಕ್ಕಾಗಿ?
5. ಆಮೋಸನು ಮೊದಲಾಗಿ ಯಾವ ಜನಾಂಗಗಳ ವಿರುದ್ಧ ಪ್ರವಾದಿಸಿದನು, ಮತ್ತು ಅವರು ಪ್ರತಿಕೂಲ ದೈವಿಕ ತೀರ್ಪಿಗೆ ಅರ್ಹರಾಗಲು ಒಂದು ಕಾರಣ ಯಾವುದಾಗಿತ್ತು?
6. ದೇವರು ಸಿರಿಯ, ಫಿಲಿಷ್ಟಿಯ ಮತ್ತು ತೂರಿನ ಮೇಲೆ ಏಕೆ ವಿಪತ್ತನ್ನು ತರಲಿದ್ದನು?
7. ಇಸ್ರಾಯೇಲಿನ ಸಂಬಂಧದಲ್ಲಿ ಎದೋಮ್, ಅಮ್ಮೋನ್ ಮತ್ತು ಮೋವಾಬಿನ ಮಧ್ಯೆ ಯಾವ ಸರ್ವಸಾಮಾನ್ಯವಾದ ವಿಷಯವಿತ್ತು, ಆದರೆ ಅವರು ಇಸ್ರಾಯೇಲ್ಯರನ್ನು ಹೇಗೆ ಉಪಚರಿಸಿದರು?
8. ಇಸ್ರಾಯೇಲಿನ ಹತ್ತಿರದಲ್ಲಿದ್ದ ಆರು ಜನಾಂಗಗಳ ವಿರುದ್ಧ ದೇವರ ತೀರ್ಪುಗಳು ತಪ್ಪಿಸಲಸಾಧ್ಯವಾದದ್ದಾಗಿದ್ದವು ಏಕೆ?
9. ಯೆಹೂದದ ನಿವಾಸಿಗಳು ಯಾವುದಕ್ಕೆ ಅರ್ಹರಾಗಿದ್ದರು, ಮತ್ತು ಏಕೆ?
10. ಯೆಹೂದವು ದುರ್ಗತಿಯಿಂದ ತಪ್ಪಿಸಿಕೊಳ್ಳಸಾಧ್ಯವಿರಲಿಲ್ಲ ಏಕೆ?
11-13. ಪ್ರಧಾನವಾಗಿ ಯಾವ ಜನಾಂಗದ ವಿರುದ್ಧ ಆಮೋಸನು ಪ್ರವಾದಿಸಿದ್ದನು, ಮತ್ತು ಯಾವ ವಿಧಗಳ ದಬ್ಬಾಳಿಕೆಯು ಅಲ್ಲಿ ನಡೆಯುತ್ತಿತ್ತು?
14. ಹತ್ತು ಕುಲಗಳ ಇಸ್ರಾಯೇಲ್ ರಾಜ್ಯದಲ್ಲಿ ಯಾರು ದುರುಪಚಾರಕ್ಕೆ ಒಳಗಾಗಿದ್ದರು?
15, 16. (ಎ) “ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ಸಿದ್ಧಮಾಡಿಕೋ” ಎಂಬ ಎಚ್ಚರಿಕೆಯು ಇಸ್ರಾಯೇಲ್ಯರಿಗೆ ಏಕೆ ಕೊಡಲ್ಪಟ್ಟಿತು? (ಬಿ) ದುಷ್ಟರು ದೈವಿಕ ತೀರ್ಪನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂಬುದನ್ನು ಆಮೋಸ 9:1, 2 ಹೇಗೆ ತೋರಿಸುತ್ತದೆ? (ಸಿ) ಸಾ.ಶ.ಪೂ. 740ರಲ್ಲಿ ಹತ್ತು ಕುಲದ ಇಸ್ರಾಯೇಲ್ ರಾಜ್ಯಕ್ಕೆ ಏನು ಸಂಭವಿಸಿತು?
17, 18. ದೇವರ ಕರುಣೆಯ ಕುರಿತಾಗಿ ಆಮೋಸ 9ನೆಯ ಅಧ್ಯಾಯ ಏನನ್ನು ಪ್ರಕಟಪಡಿಸುತ್ತದೆ?
19. ಇಸ್ರಾಯೇಲ್ ಮತ್ತು ಯೆಹೂದದ ಜನಶೇಷವೊಂದಕ್ಕೆ ಏನು ಸಂಭವಿಸಿತು?
20. ಆಮೋಸನಿಂದ ಘೋಷಿಸಲ್ಪಟ್ಟ ತೀರ್ಪಿನ ಸಂದೇಶಗಳ ಕುರಿತಾದ ನಮ್ಮ ಪರಿಗಣನೆಯು ನಮಗೆ ಯಾವುದರ ಆಶ್ವಾಸನೆಯನ್ನು ನೀಡಬೇಕು?
21. ಕ್ರೈಸ್ತಪ್ರಪಂಚವು ದೇವರ ಪ್ರತಿಕೂಲ ತೀರ್ಪನ್ನು ಹೊಂದಲು ಅರ್ಹವಾದದ್ದಾಗಿದೆ ಏಕೆ?
22. ಎರಡನೇ ಥೆಸಲೋನಿಕ 1:6-8ರಲ್ಲಿ ದೈವಿಕ ತೀರ್ಪಿನ ಕುರಿತಾದ ಯಾವ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ?
23. ಆಮೋಸ ಪುಸ್ತಕದಿಂದ ಯಾವ ನಿರೀಕ್ಷೆ ಮತ್ತು ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ?
24. ಯಾವ ವಿಧಗಳಲ್ಲಿ ಯೆಹೋವನ ಆಧುನಿಕ ದಿನದ ಸೇವಕರು ಆಶೀರ್ವದಿಸಲ್ಪಟ್ಟಿದ್ದಾರೆ?
[ಪುಟ 16, 17ರಲ್ಲಿರುವ ಚಿತ್ರ]
ಇಸ್ರಾಯೇಲ್ ರಾಜ್ಯಕ್ಕೆ ದೈವಿಕ ತೀರ್ಪಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ
[ಪುಟ 18ರಲ್ಲಿರುವ ಚಿತ್ರ]
ಸಾ.ಶ.ಪೂ. 537ರಲ್ಲಿ, ಇಸ್ರಾಯೇಲ್ ಮತ್ತು ಯೆಹೂದದ ಜನಶೇಷವೊಂದು ಬಾಬೆಲಿನ ಸೆರೆವಾಸದಿಂದ ಹಿಂದಿರುಗಿ ಬಂತು