ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೃದಯಗಳ ಪರೀಕ್ಷಕನಾದ ಯೆಹೋವನನ್ನು ಹುಡುಕಿರಿ

ಹೃದಯಗಳ ಪರೀಕ್ಷಕನಾದ ಯೆಹೋವನನ್ನು ಹುಡುಕಿರಿ

ಹೃದಯಗಳ ಪರೀಕ್ಷಕನಾದ ಯೆಹೋವನನ್ನು ಹುಡುಕಿರಿ

“ನನ್ನನ್ನೇ ಆಶ್ರಯಿಸಿ ಬದುಕಿಕೊಳ್ಳಿರಿ.”​—⁠ಆಮೋಸ 5:⁠4.

ಯೆಹೋವ ದೇವರು ಪ್ರವಾದಿಯಾದ ಸಮುವೇಲನಿಗೆ ಹೇಳಿದ್ದು: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಯೆಹೋವನು ಹೇಗೆ ‘ಹೃದಯವನ್ನು ನೋಡುತ್ತಾನೆ’?

2 ಶಾಸ್ತ್ರವಚನಗಳಲ್ಲಿ ಹೃದಯವು, ಒಬ್ಬ ವ್ಯಕ್ತಿಯು ಆಂತರ್ಯದಲ್ಲಿ ಏನಾಗಿದ್ದಾನೊ ಅದನ್ನು, ಅಂದರೆ ಅವನ ಬಯಕೆಗಳು, ಆಲೋಚನೆಗಳು, ಭಾವನೆಗಳು ಮತ್ತು ಇಷ್ಟಗಳನ್ನು ಸೂಚಿಸಲು ಉಪಯೋಗಿಸಲ್ಪಟ್ಟಿದೆ. ಆದಕಾರಣ, ದೇವರು ಹೃದಯವನ್ನು ನೋಡುತ್ತಾನೆ ಎಂದು ಬೈಬಲು ಹೇಳುವಾಗ, ಆತನು ಹೊರತೋರಿಕೆಗಿಂತಲೂ ಹೆಚ್ಚನ್ನು ಅಂದರೆ ಆ ವ್ಯಕ್ತಿಯು ಆಂತರ್ಯದಲ್ಲಿ ಏನಾಗಿದ್ದಾನೆ ಎಂಬುದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಾನೆ ಎಂದು ಅರ್ಥೈಸುತ್ತದೆ.

ದೇವರು ಇಸ್ರಾಯೇಲನ್ನು ಪರೀಕ್ಷಿಸುತ್ತಾನೆ

3 ಈ ಹೃದಯಗಳ ಪರೀಕ್ಷಕನು ಆಮೋಸನ ದಿನಗಳಲ್ಲಿ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯವನ್ನು ಗಮನಿಸಿದಾಗ, ಏನನ್ನು ನೋಡಿದನು? ಆಮೋಸ 6:​4-6ರಲ್ಲಿ, ‘ದಂತದ ಮಂಚಗಳ ಮೇಲೆ ಮಲಗಿರುವ, ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಂಡಿರುವ’ ಪುರುಷರ ಕುರಿತಾಗಿ ತಿಳಿಸುತ್ತದೆ. ಅವರು ‘ಹಿಂಡಿನ ಮರಿಗಳನ್ನೂ ಕೊಟ್ಟಿಗೆಯ ಕರುಗಳನ್ನೂ ತಿನ್ನುತ್ತಿದ್ದರು.’ ಅಂಥ ಪುರುಷರು ತಮಗಾಗಿ ‘ವಾದ್ಯಗಳನ್ನು ಕಲ್ಪಿಸಿಕೊಂಡಿದ್ದರು’ ಮತ್ತು ‘ದ್ರಾಕ್ಷಾರಸವನ್ನು ಬೋಗುಣಿಗಳಲ್ಲಿ ಕುಡಿಯುತ್ತಿದ್ದರು.’

4 ಮೊದಲ ನೋಟಕ್ಕೆ ಇದೊಂದು ಸುಖಕರ ದೃಶ್ಯವಾಗಿ ಕಾಣಬಹುದು. ಧನಿಕರು ತಮ್ಮ ಐಷಾರಾಮದ ಮನೆಗಳಲ್ಲಿ, ಅತ್ಯುತ್ಕೃಷ್ಟವಾದ ಆಹಾರಪಾನೀಯಗಳಲ್ಲಿ ಲೋಲುಪರಾಗಿ, ಅತ್ಯುತ್ತಮವಾದ ಸಂಗೀತ ಉಪಕರಣಗಳಿಂದ ಮನರಂಜಿಸಿಕೊಳ್ಳುತ್ತಿದ್ದರು. ಅವರಿಗೆ ‘ದಂತದ ಮಂಚಗಳು’ ಸಹ ಇತ್ತು. ಪ್ರಾಕ್ತನಶಾಸ್ತ್ರಜ್ಞರು ಇಸ್ರಾಯೇಲ್‌ ರಾಜ್ಯದ ರಾಜಧಾನಿಯಾದ ಸಮಾರ್ಯದಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿರುವ ದಂತದ ವಸ್ತುಗಳನ್ನು ಕಂಡುಹಿಡಿದಿದ್ದಾರೆ. (1 ಅರಸುಗಳು 10:22) ಇವುಗಳಲ್ಲಿ ಅನೇಕ ದಂತಗಳು ಪೀಠೋಪಕರಣಗಳಿಗೆ ಜೋಡಿಸಿದವುಗಳೂ ಗೋಡೆಫಲಕಗಳಲ್ಲಿ ಕೆತ್ತಿಕೂಡಿಸಿದವುಗಳೂ ಆಗಿದ್ದಿರಬಹುದು.

5 ಇಸ್ರಾಯೇಲ್ಯರು ರುಚಿಕರವಾದ ಊಟಗಳನ್ನು ಮಾಡುತ್ತಾ ಉತ್ತಮ ದರ್ಜೆಯ ದ್ರಾಕ್ಷಾಮದ್ಯವನ್ನು ಕುಡಿಯುತ್ತಾ ರಮ್ಯವಾದ ಸಂಗೀತವನ್ನು ಆಲಿಸುತ್ತಾ ಸುಖವಾಗಿ ಜೀವಿಸುತ್ತಾ ಇದ್ದದ್ದಕ್ಕಾಗಿ ಯೆಹೋವ ದೇವರು ಅಸಂತೋಷಪಟ್ಟನೋ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಆತನೇ ಮನುಷ್ಯನ ಆನಂದಕ್ಕಾಗಿ ಈ ಎಲ್ಲ ವಿಷಯಗಳನ್ನು ಹೇರಳವಾಗಿ ಕೊಟ್ಟಿದ್ದಾನೆ. (1 ತಿಮೊಥೆಯ 6:17) ಯೆಹೋವನನ್ನು ಅಸಂತೋಷಪಡಿಸಿದ್ದು, ಜನರ ದುರಾಶೆಗಳು, ಅವರ ದುಷ್ಟ ಹೃದಯ ಸ್ಥಿತಿ, ಮತ್ತು ದೇವರ ಕಡೆಗೆ ಅವರಿಗಿದ್ದ ಅಗೌರವದ ಮನೋಭಾವ ಹಾಗೂ ಜೊತೆ ಇಸ್ರಾಯೇಲ್ಯರ ಕಡೆಗೆ ಅವರಿಗಿದ್ದ ಪ್ರೀತಿಯ ಕೊರತೆಯೇ ಆಗಿತ್ತು.

6 ‘ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಂಡಿದ್ದು, ಹಿಂಡಿನ ಮರಿಗಳನ್ನೂ ಕೊಟ್ಟಿಗೆಯ ಕರುಗಳನ್ನೂ ತಿನ್ನುತ್ತಿದ್ದ, ದ್ರಾಕ್ಷಾರಸವನ್ನು ಬೋಗುಣಿಗಳಲ್ಲಿ ಕುಡಿಯುತ್ತಿದ್ದ, ಮತ್ತು ವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಿದ್ದ’ ಆ ಜನರಿಗೆ ಆಶ್ಚರ್ಯವೊಂದು ಕಾದಿತ್ತು. ಅವರನ್ನು ಹೀಗೆ ಕೇಳಲಾಯಿತು: ‘ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತೀರೋ?’ ಇಸ್ರಾಯೇಲಿನಲ್ಲಿದ್ದ ಪರಿಸ್ಥಿತಿಗಳಿಗಾಗಿ ಅವರು ಅತಿಯಾಗಿ ದುಃಖಪಡಬೇಕಿತ್ತು, ಆದರೆ ಅವರು ‘ಯೋಸೇಫಿನ ಗಾಯಕ್ಕೆ ಮರುಗಲಿಲ್ಲ.’ (ಆಮೋಸ 6:​3-6) ಆ ಜನಾಂಗಕ್ಕೆ ಆರ್ಥಿಕ ಸಮೃದ್ಧಿಯಿದ್ದರೂ ಆಧ್ಯಾತ್ಮಿಕವಾಗಿ ಯೋಸೇಫನು ಅಥವಾ ಇಸ್ರಾಯೇಲ್‌ ಗಾಯಗೊಂಡಿರುವ ಇಲ್ಲವೆ ವಿಪತ್ಕಾರಕ ಸ್ಥಿತಿಯಲ್ಲಿರುವುದನ್ನು ದೇವರು ನೋಡಿದನು. ಹೀಗಿದ್ದರೂ ಜನರು ನಿಶ್ಚಿಂತರಾಗಿ ತಮ್ಮ ದಿನನಿತ್ಯದ ಕೆಲಸಗಳಲ್ಲಿ ಮಗ್ನರಾಗಿದ್ದರು. ಇಂದು ಸಹ ಅನೇಕರಿಗೆ ತದ್ರೀತಿಯ ಮನೋಭಾವವಿದೆ. ನಾವು ಕಷ್ಟಕರವಾದ ಸಮಯದಲ್ಲಿ ಜೀವಿಸುತ್ತಿದ್ದೇವೆಂದು ಅವರು ಒಪ್ಪಿಕೊಳ್ಳಬಹುದು, ಆದರೆ ಎಷ್ಟರ ವರೆಗೆ ಅದು ಅವರನ್ನು ವೈಯಕ್ತಿಕವಾಗಿ ಬಾಧಿಸುವುದಿಲ್ಲವೊ ಅಷ್ಟರ ವರೆಗೆ, ಅವರು ಬೇರೆಯವರ ಸ್ಥಿತಿಗತಿಯ ಬಗ್ಗೆ ಚಿಂತಿಸುವುದಿಲ್ಲ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಯಾವುದೇ ಆಸಕ್ತಿಯನ್ನು ಪ್ರದರ್ಶಿಸುವುದಿಲ್ಲ.

ಇಸ್ರಾಯೇಲ್‌—⁠ಅವನತಿಯಲ್ಲಿದ್ದ ಒಂದು ಜನಾಂಗ

7 ಈ ಜನಾಂಗದ ಹೊರತೋರಿಕೆ ಚೆನ್ನಾಗಿದ್ದರೂ, ಆಮೋಸ ಪುಸ್ತಕವು ಅದರ ಅವನತಿಗಿಳಿದಿರುವ ಸ್ಥಿತಿಯ ಚಿತ್ರಣವನ್ನು ಕೊಡುತ್ತದೆ. ಜನರು ದೈವಿಕ ಎಚ್ಚರಿಕೆಗಳಿಗೆ ಕಿವಿಗೊಟ್ಟು, ತಮ್ಮ ದೃಷ್ಟಿಕೋನವನ್ನು ತಿದ್ದಿಕೊಳ್ಳಲು ತಪ್ಪಿಹೋದದ್ದರಿಂದ, ಯೆಹೋವನು ಇನ್ನೆಂದೂ ಅವರನ್ನು ವೈರಿಗಳ ಕೈಯಿಂದ ರಕ್ಷಿಸುವುದಿಲ್ಲ. ಅಶ್ಶೂರ್ಯದವರು ಬಂದು ಅವರನ್ನು ಅವರ ಶೋಭಾಯಮಾನವಾದ ದಂತದ ಮಂಚಗಳಿಂದ ಕೆಳಗೆಳೆದು, ಬಂಧಿವಾಸಕ್ಕೆ ಎಳೆದುಕೊಂಡು ಹೋಗುವರು. ಅವರ ಸುಖಸೌಕರ್ಯದ ಜೀವನವು ಅಲ್ಲಿಗೇ ಕೊನೆಗೊಳ್ಳುವುದು!

8 ಆದರೆ ಇಸ್ರಾಯೇಲ್ಯರು ಇಂತಹ ಶೋಚನೀಯ ಅವನತಿಗೆ ಇಳಿದದ್ದು ಹೇಗೆ? ಈ ಪರಿಸ್ಥಿತಿಯು ಸಾ.ಶ.ಪೂ. 997ರಲ್ಲಿ, ಅಂದರೆ ರಾಜ ಸೊಲೊಮೋನನ ಮಗನಾದ ರೆಹಬ್ಬಾಮನು ಪಟ್ಟಕ್ಕೆ ಬಂದಾಗ ಮತ್ತು ಇಸ್ರಾಯೇಲಿನ ಹತ್ತು ಕುಲಗಳು ಯೆಹೂದ ಹಾಗೂ ಬೆನ್ಯಾಮೀನ್‌ ಕುಲಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಾಗ ಆರಂಭಗೊಂಡಿತು. “ನೆಬಾಟನ ಮಗ”ನಾದ ಒಂದನೆಯ ಯಾರೊಬ್ಬಾಮನು ಆ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದ ಮೊದಲನೇ ರಾಜನಾದನು. (1 ಅರಸುಗಳು 11:26) ಯಾರೊಬ್ಬಾಮನು ತನ್ನ ಆಳ್ವಿಕೆಯ ಕ್ಷೇತ್ರದಲ್ಲಿದ್ದ ಜನರಿಗೆ, ಯೆಹೋವನನ್ನು ಆರಾಧಿಸಲು ಯೆರೂಸಲೇಮಿಗೆ ಪ್ರಯಾಣ ಬೆಳೆಸುವುದು ಅತಿ ಪ್ರಯಾಸಕರವೆಂದು ಅವರ ಮನವೊಪ್ಪಿಸಿದನು. ಆದರೆ, ಅವನಿಗೆ ನಿಜವಾಗಿ ಜನರ ಕುರಿತು ಹಿತಚಿಂತನೆಯಿರಲಿಲ್ಲ. ಬದಲಾಗಿ, ತನ್ನ ಸ್ವಂತ ಅಭಿರುಚಿಗಳನ್ನು ಕಾಪಾಡಿಕೊಳ್ಳಲು ಅವನು ಪ್ರಯತ್ನಿಸುತ್ತಿದ್ದನು. (1 ಅರಸುಗಳು 12:26) ಇಸ್ರಾಯೇಲ್ಯರು ವರುಷಕ್ಕೆ ಮೂರಾವರ್ತಿ ಯೆಹೋವನನ್ನು ಘನಪಡಿಸುವ ಹಬ್ಬಗಳನ್ನು ಆಚರಿಸಲು ಯೆರೂಸಲೇಮಿಗೆ ಹೋಗುತ್ತಾ ಇರುವಲ್ಲಿ, ಅವರಲ್ಲಿ ಪುನಃ ಯೆಹೂದ ರಾಜ್ಯಕ್ಕಾಗಿ ಶ್ರದ್ಧಾಭಕ್ತಿಯ ಭಾವನೆಗಳು ಹುಟ್ಟುವವು ಎಂದು ಅವನು ಭಯಪಟ್ಟನು. ಇದನ್ನು ತಪ್ಪಿಸಲಿಕ್ಕಾಗಿ ಯಾರೊಬ್ಬಾಮನು, ದಾನ್‌ ಮತ್ತು ಬೇತೇಲ್‌ ಎಂಬ ಎರಡು ಸ್ಥಳಗಳಲ್ಲಿ ಒಂದೊಂದು ಚಿನ್ನದ ಬಸವನ ಮೂರ್ತಿಯನ್ನು ಸ್ಥಾಪಿಸಿದನು. ಹೀಗೆ, ಬಸವಾರಾಧನೆ ಇಸ್ರಾಯೇಲಿನ ರಾಷ್ಟ್ರೀಯ ಧರ್ಮವಾಯಿತು.​—⁠2 ಪೂರ್ವಕಾಲವೃತ್ತಾಂತ 11:​13-15.

9 ಯಾರೊಬ್ಬಾಮನು ಈ ಹೊಸ ಧರ್ಮವು ಅಂಗೀಕಾರಾರ್ಹವಾಗಿದೆ ಎಂಬ ತೋರಿಕೆಯನ್ನು ಅದಕ್ಕೆ ಕೊಡಲು ಪ್ರಯತ್ನಿಸಿದನು. ಆದುದರಿಂದ ಯೆರೂಸಲೇಮಿನಲ್ಲಿ ನಡೆಯುತ್ತಿದ್ದ ಹಬ್ಬಗಳಿಗೆ ಬಹುಮಟ್ಟಿಗೆ ಸಮಾನವಾಗಿರುವ ಆಚರಣೆಗಳನ್ನು ಅವನು ವ್ಯವಸ್ಥಾಪಿಸಿದನು. ನಾವು 1 ಅರಸುಗಳು 12:32ರಲ್ಲಿ ಓದುವುದು: “ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ ಬೇತೇಲಿನಲ್ಲಿ ಯೆಹೂದದೇಶದ ಜಾತ್ರೆಗೆ ಸರಿಯಾದ ಜಾತ್ರೆಯು ನಡಿಯಬೇಕೆಂದು ಅಪ್ಪಣೆಮಾಡಿ ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ ಬಸವನ ಮೂರ್ತಿಗಳಿಗೋಸ್ಕರ ವೇದಿಯ ಮೇಲೆ ಯಜ್ಞಮಾಡಿದನು.”

10 ಯೆಹೋವನು ಅಂಥ ಸುಳ್ಳು ಧಾರ್ಮಿಕ ಹಬ್ಬಗಳಿಗೆ ಎಂದಿಗೂ ತನ್ನ ಸಮ್ಮತಿಯನ್ನು ಕೊಡಲಿಲ್ಲ. ಈ ಸಂಗತಿಯನ್ನು ಆತನು ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದ ಅನಂತರ, ಸಾ.ಶ.ಪೂ. 844ರ ಸುಮಾರಿಗೆ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದ ರಾಜನಾದ ಎರಡನೆಯ ಯಾರೊಬ್ಬಾಮನ ಆಳ್ವಿಕೆಯ ಸಮಯದಲ್ಲಿ ಆಮೋಸನ ಮೂಲಕ ಸ್ಪಷ್ಟವಾಗಿ ವ್ಯಕ್ತಪಡಿಸಿದನು. (ಆಮೋಸ 1:⁠1) ಆಮೋಸ 5:21-24ನೆಯ ವಚನಗಳಿಗನುಸಾರ ದೇವರು ಹೇಳಿದ್ದು: “ನಿಮ್ಮ ಜಾತ್ರೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ; ನಿಮ್ಮ ಉತ್ಸವಗಳ ವಾಸನೆಯೇ ನನಗೆ ಬೇಡ. ನೀವು ನನಗೆ ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಅರ್ಪಿಸಿದರೂ ಸ್ವೀಕರಿಸೆನು; ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸುವ ಕೊಬ್ಬಿದ ಪಶುಗಳನ್ನು ನೋಡೆನು. ನಿಮ್ಮ ಗೀತಧ್ವನಿಯನ್ನು ನನ್ನಿಂದ ತೊಲಗಿಸಿರಿ; ನಿಮ್ಮ ವೀಣಾನಾದಕ್ಕೆ ಕಿವಿಗೊಡೆನು. ನ್ಯಾಯವು ಹೊಳೆಯ ಹಾಗೆ ಹರಿಯಲಿ, ಧರ್ಮವು ಮಹಾನದಿಯಂತೆ ಪ್ರವಹಿಸಲಿ.”

ಆಧುನಿಕ ದಿನದ ಹೋಲಿಕೆಗಳು

11 ಇಸ್ರಾಯೇಲಿನ ಆ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದವರ ಹೃದಯಗಳನ್ನು ಯೆಹೋವನು ಪರೀಕ್ಷಿಸಿ ಅವರ ಆಚರಣೆಗಳನ್ನೂ ಅವುಗಳ ಪ್ರಾಣಿಯಜ್ಞಗಳನ್ನೂ ತಳ್ಳಿಹಾಕಿದನೆಂಬುದು ಸ್ಪಷ್ಟ. ಅದರಂತೆಯೇ ಇಂದು ಆತನು ಕ್ರೈಸ್ತಪ್ರಪಂಚದ ಕ್ರಿಸ್ಮಸ್‌ ಮತ್ತು ಈಸ್ಟರ್‌ಗಳಂತಹ ವಿಧರ್ಮಿ ಆಚರಣೆಗಳನ್ನು ತಳ್ಳಿಹಾಕುತ್ತಾನೆ. ಯೆಹೋವನ ಆರಾಧಕರಿಗೆ ಇದರಲ್ಲಿ ಯಾವುದೇ ಸಹಭಾಗಿತ್ವ ಇರುವುದಿಲ್ಲ, ಏಕೆಂದರೆ ಧರ್ಮಕ್ಕೂ ಅಧರ್ಮಕ್ಕೂ ಹಾಗೂ ಬೆಳಕಿಗೂ ಕತ್ತಲೆಗೂ ಯಾವುದೇ ಜೊತೆ ಇರುವುದಿಲ್ಲ.​—⁠2 ಕೊರಿಂಥ 6:​14-16.

12 ಇಸ್ರಾಯೇಲ್ಯರ ಬಸವಾರಾಧನೆ ಮತ್ತು ಕ್ರೈಸ್ತಪ್ರಪಂಚವು ನಡೆಸುತ್ತಿರುವ ಆರಾಧನೆಯ ಮಧ್ಯೆ ಇತರ ಹೋಲಿಕೆಗಳನ್ನೂ ನೋಡಸಾಧ್ಯವಿದೆ. ಕ್ರೈಸ್ತರೆನಿಸಿಕೊಳ್ಳುವ ಕೆಲವರು ದೇವರ ವಾಕ್ಯದ ಸತ್ಯವನ್ನು ಸ್ವೀಕರಿಸುತ್ತಾರಾದರೂ, ಕ್ರೈಸ್ತಪ್ರಪಂಚದ ಆರಾಧನೆಯು ತಾನೇ ದೇವರ ಕಡೆಗಿರುವ ನಿಜ ಪ್ರೀತಿಯಿಂದ ಪ್ರಚೋದಿತವಾಗಿರುವುದಿಲ್ಲ. ಹಾಗಿರುತ್ತಿದ್ದಲ್ಲಿ, ಅದು ಯೆಹೋವನನ್ನು ‘ಆತ್ಮದಿಂದಲೂ ಸತ್ಯದಿಂದಲೂ’ ಆರಾಧಿಸುತ್ತಿತ್ತು, ಏಕೆಂದರೆ ಆತನನ್ನು ಸಂತೋಷಪಡಿಸುವ ರೀತಿಯ ಆರಾಧನೆಯು ಅದೇ ಆಗಿದೆ. (ಯೋಹಾನ 4:24) ಇದಲ್ಲದೆ ಕ್ರೈಸ್ತಪ್ರಪಂಚವು, ‘ನ್ಯಾಯವು ಹೊಳೆಯ ಹಾಗೆ ಮತ್ತು ಧರ್ಮವು ಮಹಾನದಿಯಂತೆ ಹರಿಯಲು’ ಬಿಡುವುದಿಲ್ಲ. ಬದಲಿಗೆ, ಅದು ದೇವರ ನೈತಿಕ ಆವಶ್ಯಕತೆಗಳನ್ನು ಸದಾ ಹಗುರವಾಗಿ ತೆಗೆದುಕೊಳ್ಳುತ್ತದೆ. ಅದು ಹಾದರ ಮತ್ತು ಇತರ ಘೋರ ಪಾಪಗಳನ್ನು ಸಹಿಸಿಕೊಳ್ಳುತ್ತದೆ. ಅಷ್ಟೇಕೆ, ಅದು ಸಲಿಂಗಕಾಮ ವಿವಾಹಗಳನ್ನು ಆಶೀರ್ವದಿಸುವಷ್ಟರ ಮಟ್ಟಿಗೂ ಮುಂದುವರಿದಿದೆ!

“ಒಳ್ಳೇದನ್ನು ಪ್ರೀತಿಸಿರಿ”

13 ಯೆಹೋವನನ್ನು ಸ್ವೀಕಾರಯೋಗ್ಯ ರೀತಿಯಲ್ಲಿ ಆರಾಧಿಸಲು ಹಾತೊರೆಯುವ ಸಕಲರಿಗೆ ಆತನು ಹೇಳುವುದು: “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ.” (ಆಮೋಸ 5:15) ಪ್ರೀತಿ ಮತ್ತು ದ್ವೇಷಗಳು ಸಾಂಕೇತಿಕ ಹೃದಯದಿಂದ ಹೊಮ್ಮುವ ಬಲಾಢ್ಯ ಭಾವನೆಗಳಾಗಿವೆ. ಹೃದಯವು ವಂಚಕವಾಗಿರುವುದರಿಂದ, ಅದನ್ನು ಕಾಪಾಡಲು ನಾವು ಕೈಲಾಗುವುದೆಲ್ಲವನ್ನೂ ಮಾಡಬೇಕು. (ಜ್ಞಾನೋಕ್ತಿ 4:23; ಯೆರೆಮೀಯ 17:9) ನಮ್ಮ ಹೃದಯವು ದುರಾಶೆಗಳನ್ನು ಪೋಷಿಸುವಂತೆ ಬಿಡುವಲ್ಲಿ, ನಾವು ಕೆಟ್ಟದ್ದನ್ನು ಪ್ರೀತಿಸಿ, ಒಳ್ಳೇದನ್ನು ದ್ವೇಷಿಸಲು ಆರಂಭಿಸಬಹುದು. ಮತ್ತು ಪಾಪಾಚರಣೆಯ ಮೂಲಕ ನಾವು ಆ ದುರಾಶೆಗಳನ್ನು ಈಡೇರಿಸುತ್ತಿರುವಲ್ಲಿ, ಯೆಹೋವನ ಸೇವೆಯಲ್ಲಿ ನಾವೆಷ್ಟೇ ಹುರುಪನ್ನು ಪ್ರದರ್ಶಿಸಿದರೂ ಅದು ನಮಗೆ ಪುನಃ ದೇವರ ಅನುಗ್ರಹವನ್ನು ತರದು. ಹಾಗಿರುವುದರಿಂದ, ‘ಕೆಟ್ಟದ್ದನ್ನು ದ್ವೇಷಿಸಿ, ಒಳ್ಳೇದನ್ನು ಪ್ರೀತಿಸಲು’ ದೇವರು ನಮಗೆ ಸಹಾಯಮಾಡುವಂತೆ ನಾವಾತನಲ್ಲಿ ಬೇಡಿಕೊಳ್ಳೋಣ.

14 ಎಲ್ಲ ಇಸ್ರಾಯೇಲ್ಯರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುತ್ತಿರಲಿಲ್ಲ. ಉದಾಹರಣೆಗೆ ಹೋಶೇಯ ಮತ್ತು ಆಮೋಸ ‘ಒಳ್ಳೇದನ್ನು ಪ್ರೀತಿಸಿದರು’ ಮತ್ತು ದೇವರಿಗೆ ನಂಬಿಗಸ್ತಿಕೆಯಿಂದ ಪ್ರವಾದಿಗಳಾಗಿ ಸೇವೆಮಾಡಿದರು. ಇತರರು ನಾಜೀರರಾಗಿ ಜೀವಿಸಲು ಹರಕೆ ಹೊತ್ತರು. ಅವರು ನಾಜೀರರಾಗಿರುವಷ್ಟು ಕಾಲ, ದ್ರಾಕ್ಷಾಬಳ್ಳಿಯ ಉತ್ಪನ್ನಗಳನ್ನು, ವಿಶೇಷವಾಗಿ ದ್ರಾಕ್ಷಾಮದ್ಯವನ್ನು ತ್ಯಜಿಸಿದರು. (ಅರಣ್ಯಕಾಂಡ 6:​1-4) ಇಂತಹ ಒಳ್ಳೇದನ್ನು ಮಾಡುವವರ ಸ್ವತ್ಯಾಗದ ಜೀವನ ಮಾರ್ಗವನ್ನು ಬೇರೆ ಇಸ್ರಾಯೇಲ್ಯರು ಹೇಗೆ ವೀಕ್ಷಿಸಿದರು? ಈ ಪ್ರಶ್ನೆಗಾಗಿನ ಬೆಚ್ಚಿಬೀಳಿಸುವಂಥ ಉತ್ತರವು ಆ ಜನಾಂಗವು ಆಧ್ಯಾತ್ಮಿಕವಾಗಿ ಎಷ್ಟರ ಮಟ್ಟಿಗೆ ಕೊಳೆತುಹೋಗಿತ್ತೆಂಬುದನ್ನು ತಿಳಿಯಪಡಿಸುತ್ತದೆ. ಆಮೋಸ 2:12ರಲ್ಲಿ ಹೇಳುವುದು: “ನೀವೋ ಆ ಪ್ರತಿಷ್ಠಿತರಿಗೆ [ಸತ್ಯವೇದವು ರೆಫರೆನ್ಸ್‌ ಎಡಿಷನ್‌ ಪಾದಟಿಪ್ಪಣಿಗನುಸಾರ, “ನಾಜೀರರಿಗೆ,”] ದ್ರಾಕ್ಷಾರಸವನ್ನು ಕುಡಿಸಿದಿರಿ; ಪ್ರವಾದಿಗಳಿಗೆ ಪ್ರವಾದನೆಮಾಡಬೇಡಿರೆಂದು ಕಟ್ಟುಮಾಡಿದಿರಿ.”

15 ಆ ಇಸ್ರಾಯೇಲ್ಯರಿಗೆ ನಾಜೀರರ ಮತ್ತು ಪ್ರವಾದಿಗಳ ನಂಬಿಗಸ್ತಿಕೆಯ ಮಾದರಿಯನ್ನು ನೋಡಿ ನಾಚಿಕೆಯಾಗಬೇಕಿತ್ತು ಮತ್ತು ಅದು, ಅವರು ತಮ್ಮ ಮಾರ್ಗವನ್ನು ಬದಲಾಯಿಸಿಕೊಳ್ಳುವಂತೆ ಪ್ರೇರೇಪಿಸಬೇಕಿತ್ತು. ಅದಕ್ಕೆ ಬದಲಾಗಿ ಅವರು, ದೇವರನ್ನು ಘನಪಡಿಸುವುದರಿಂದ ಆ ನಿಷ್ಠಾವಂತರನ್ನು ನಿರುತ್ತೇಜಿಸಲು ಪ್ರೀತಿರಹಿತವಾಗಿ ಪ್ರಯತ್ನಿಸಿದರು. ನಮ್ಮ ಜೊತೆ ಕ್ರೈಸ್ತರಾದ ಪಯನೀಯರರು, ಮಿಷನೆರಿಗಳು, ಸಂಚರಣ ಮೇಲ್ವಿಚಾರಕರು, ಇಲ್ಲವೆ ಬೆತೆಲ್‌ ಕುಟುಂಬದ ಸದಸ್ಯರು ತಮ್ಮ ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಿ, ಸಾಮಾನ್ಯ ಜೀವನವೆಂದು ಕರೆಯಲ್ಪಡುವ ಜೀವನಕ್ಕೆ ಹಿಂದಿರುಗುವಂತೆ ನಾವೆಂದಿಗೂ ಒತ್ತಾಯಿಸದಿರೋಣ. ಬದಲಿಗೆ, ಅವರು ತಮ್ಮ ಸತ್ಕಾರ್ಯದಲ್ಲಿ ಮುಂದುವರಿಯುವಂತೆ ನಾವು ಅವರನ್ನು ಪ್ರೋತ್ಸಾಹಿಸೋಣ!

16 ಆಮೋಸನ ದಿನಗಳಲ್ಲಿನ ಅನೇಕ ಇಸ್ರಾಯೇಲ್ಯರು ಪ್ರಾಪಂಚಿಕ ರೀತಿಯಲ್ಲಿ ಸಮೃದ್ಧಿಯನ್ನು ಆನಂದಿಸುತ್ತಿದ್ದರಾದರೂ, ಅವರು “ದೇವರ ವಿಷಯಗಳಲ್ಲಿ ಐಶ್ವರ್ಯವಂತ”ರಾಗಿರಲಿಲ್ಲ. (ಲೂಕ 12:​13-21) ಅವರ ಪಿತೃಗಳು ಅರಣ್ಯದಲ್ಲಿ 40 ವರ್ಷಕಾಲ ಕೇವಲ ಮನ್ನವನ್ನು ತಿಂದರು. ಅವರು ಕೊಟ್ಟಿಗೆಯಲ್ಲಿ ಸಾಕಿದ ಹೋರಿಗಳ ಮಾಂಸವನ್ನೂ ತಿನ್ನಲಿಲ್ಲ, ದಂತ ಮಂಚಗಳ ಮೇಲೆ ಹಾಯಾಗಿ ಮಲಗಿದ್ದೂ ಇಲ್ಲ. ಆದರೆ ಮೋಶೆಯು ಅವರ ಕುರಿತು ಸೂಕ್ತವಾಗಿಯೇ ಹೇಳಿದ್ದು: “ನೀವು ಕೈಹಾಕಿದ ಎಲ್ಲಾ ಕೆಲಸಗಳನ್ನೂ ನಿಮ್ಮ ದೇವರಾದ ಯೆಹೋವನು ಸಫಲಪಡಿಸಿದ್ದಾನಲ್ಲಾ. . . . ಈ ನಾಲ್ವತ್ತು ವರುಷ ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದದರಿಂದ ನಿಮಗೆ ಏನೂ ಕಡಿಮೆಯಾಗಲಿಲ್ಲ.” (ಧರ್ಮೋಪದೇಶಕಾಂಡ 2:7) ಹೌದು, ಅರಣ್ಯದಲ್ಲಿದ್ದ ಆ ಇಸ್ರಾಯೇಲ್ಯರಿಗೆ ನಿಜವಾಗಿಯೂ ಅಗತ್ಯವಿದ್ದದ್ದೆಲ್ಲವೂ ದೊರೆತವು. ಅತಿ ಪ್ರಧಾನವಾಗಿ, ಅವರಿಗೆ ಯೆಹೋವನ ಪ್ರೀತಿ, ಸಂರಕ್ಷಣೆ, ಮತ್ತು ಆಶೀರ್ವಾದವಿತ್ತು.

17 ಯೆಹೋವನು ಆಮೋಸನ ಸಮಕಾಲೀನರಿಗೆ, ಆತನು ಅವರ ಪಿತೃಗಳನ್ನು ವಾಗ್ದತ್ತ ದೇಶಕ್ಕೆ ಕರೆತಂದು, ಅವರ ಎಲ್ಲ ವೈರಿಗಳನ್ನು ದೇಶದಿಂದ ತೊಲಗಿಸಲು ಅವರಿಗೆ ಸಹಾಯಮಾಡಿದ್ದನ್ನು ನೆನಪಿಸಿದನು. (ಆಮೋಸ 2:​9, 10) ಆದರೆ ಆರಂಭದ ಇಸ್ರಾಯೇಲ್ಯರನ್ನು ದೇವರು ಐಗುಪ್ತದಿಂದ ಬಿಡಿಸಿ ವಾಗ್ದತ್ತ ದೇಶಕ್ಕೆ ನಡಿಸಿದ್ದೇಕೆ? ಅವರು ಸುಖಭೋಗದ ಸೋಮಾರಿ ಜೀವನವನ್ನು ನಡೆಸಿ ತಮ್ಮ ಸೃಷ್ಟಿಕರ್ತನನ್ನು ತೊರೆದುಬಿಡಬೇಕೆಂಬ ಉದ್ದೇಶದಿಂದಲೋ? ಅಲ್ಲ! ಬದಲಿಗೆ, ಅವರು ಸ್ವತಂತ್ರರೂ ಆಧ್ಯಾತ್ಮಿಕವಾಗಿ ಶುದ್ಧರೂ ಆದ ಜನರಾಗಿ ಆತನನ್ನು ಆರಾಧಿಸುವುದನ್ನು ಸಾಧ್ಯಮಾಡಲಿಕ್ಕಾಗಿಯೇ. ಆದರೆ ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದ ನಿವಾಸಿಗಳು ಕೆಟ್ಟದ್ದನ್ನು ಹಗೆಮಾಡಿ, ಒಳ್ಳೇದನ್ನು ಪ್ರೀತಿಸಲಿಲ್ಲ. ಬದಲಾಗಿ ಅವರು ಯೆಹೋವ ದೇವರನ್ನು ಬಿಟ್ಟು ವಿಗ್ರಹಗಳನ್ನೇ ಘನಪಡಿಸುತ್ತಿದ್ದರು. ಎಷ್ಟು ನಾಚಿಕೆಯ ಸಂಗತಿ!

ಯೆಹೋವನು ಲೆಕ್ಕಕೇಳುತ್ತಾನೆ

18 ಇಸ್ರಾಯೇಲ್ಯರ ಅಸಹ್ಯ ನಡತೆಯನ್ನು ದೇವರು ಅಲಕ್ಷ್ಯಮಾಡುವುದಿಲ್ಲ. ಆತನು ಹೀಗೆ ಹೇಳುವ ಮೂಲಕ ತನ್ನ ನಿಲುವನ್ನು ತೀರ ಸ್ಪಷ್ಟಗೊಳಿಸಿದ್ದನು: “ನಿಮ್ಮ ಎಲ್ಲಾ ಪಾಪಗಳ ಫಲವನ್ನು ನಿಮಗೆ ತಿನ್ನಿಸುವೆನು.” (ಆಮೋಸ 3:⁠2) ಈ ಮಾತುಗಳು, ಆಧುನಿಕ ದಿನದ ಐಗುಪ್ತವಾಗಿರುವ ಈ ದುಷ್ಟ ವಿಷಯಗಳ ವ್ಯವಸ್ಥೆಯ ದಾಸತ್ವದಲ್ಲಿದ್ದ ನಮಗೆ ಸಿಕ್ಕಿರುವ ಬಿಡುಗಡೆಯ ಕುರಿತು ನಾವು ಆಲೋಚಿಸುವಂತೆ ಮಾಡಬೇಕು. ಯೆಹೋವನು ನಮ್ಮನ್ನು ಆಧ್ಯಾತ್ಮಿಕವಾಗಿ ಬಿಡುಗಡೆ ಮಾಡಿರುವುದು, ನಾವು ಸ್ವಾರ್ಥದ ಗುರಿಗಳನ್ನು ಬೆನ್ನಟ್ಟಲಿಕ್ಕಾಗಿ ಅಲ್ಲ. ಬದಲಿಗೆ ನಾವು ಸ್ವತಂತ್ರ ಜನರಾಗಿ ಶುದ್ಧಾರಾಧನೆಯಲ್ಲಿ ಒಳಗೂಡಿ ಆತನನ್ನು ಹೃತ್ಪೂರ್ವಕವಾಗಿ ಸ್ತುತಿಸಲಿಕ್ಕಾಗಿಯೇ. ನಮ್ಮ ದೇವದತ್ತ ಸ್ವಾತಂತ್ರ್ಯವನ್ನು ನಾವು ಹೇಗೆ ಉಪಯೋಗಿಸುತ್ತೇವೆಂಬುದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಉತ್ತರಕೊಡಲಿಕ್ಕಿದೆ ಅಥವಾ ಲೆಕ್ಕವೊಪ್ಪಿಸಲಿಕ್ಕಿದೆ.​—⁠ರೋಮಾಪುರ 14:12.

19 ವಿಷಾದಕರವಾಗಿ, ಇಸ್ರಾಯೇಲಿನ ಅಧಿಕಾಂಶ ನಿವಾಸಿಗಳು ಆಮೋಸನ ಈ ಪ್ರಬಲವಾದ ಸಂದೇಶಕ್ಕೆ ಕಿವಿಗೊಡಲಿಲ್ಲ. ಆಮೋಸ 4:​4, 5ರಲ್ಲಿ ದಾಖಲಿಸಲ್ಪಟ್ಟಿರುವ ಈ ಮಾತುಗಳ ಮೂಲಕ ಪ್ರವಾದಿಯು, ಆಧ್ಯಾತ್ಮಿಕವಾಗಿ ರೋಗಗ್ರಸ್ತವಾದ ಅವರ ಹೃದಯದ ಸ್ಥಿತಿಯನ್ನು ಬಯಲುಪಡಿಸಿದನು: “ಬೇತೇಲಿಗೆ ಬಂದು ದ್ರೋಹಮಾಡಿರಿ, ಗಿಲ್ಗಾಲಿನಲ್ಲಿ ನೆರೆದು ದ್ರೋಹವನ್ನು ಇನ್ನೂ ಹೆಚ್ಚಿಸಿರಿ; . . . ಇಸ್ರಾಯೇಲ್ಯರೇ, ಹೀಗೆ ಮಾಡುವದು ನಿಮಗಿಷ್ಟವಷ್ಟೆ.” ಇಸ್ರಾಯೇಲ್ಯರು ಯೋಗ್ಯವಾದ ಬಯಕೆಗಳನ್ನು ಬೆಳೆಸಿಕೊಂಡಿರಲಿಲ್ಲ. ಅವರು ತಮ್ಮ ಹೃದಯಗಳನ್ನು ಕಾಪಾಡಿಕೊಂಡಿರಲಿಲ್ಲ. ಇದರ ಪರಿಣಾಮವಾಗಿ, ಅವರಲ್ಲಿ ಹೆಚ್ಚಿನವರು ಕೆಟ್ಟದ್ದನ್ನು ಪ್ರೀತಿಸಿ ಒಳ್ಳೆಯದನ್ನು ಹಗೆ ಮಾಡಲಾರಂಭಿಸಿದ್ದರು. ಈ ಹಟಮಾರಿ ಬಸವಾರಾಧಕರು ಬದಲಾಗಲಿಲ್ಲ. ಯೆಹೋವನು ಅವರಿಂದ ಲೆಕ್ಕಕೇಳಲಿದ್ದನು ಮತ್ತು ಅವರು ಸಾಯುವ ವರೆಗೂ ಪಾಪಿಗಳಾಗಿಯೇ ಇರಲಿದ್ದರು!

20 ಇಸ್ರಾಯೇಲಿನಲ್ಲಿ ಆಗ ಜೀವಿಸುತ್ತಿದ್ದ ಯಾವನಿಗೂ ಯೆಹೋವನಿಗೆ ನಂಬಿಗಸ್ತನಾಗಿ ಉಳಿಯುವುದು ಖಂಡಿತ ಸುಲಭವಾಗಿರಲಿಲ್ಲ. ಸಾಂಕೇತಿಕ ಅರ್ಥದಲ್ಲಿ ಪ್ರವಾಹಕ್ಕೆ ಎದುರಾಗಿ ಈಜುವುದು ಸುಲಭವಲ್ಲ ಎಂಬುದು ಇಂದಿರುವ ಕ್ರೈಸ್ತ ಆಬಾಲವೃದ್ಧರಿಗೆ ಚೆನ್ನಾಗಿ ತಿಳಿದಿದೆ. ಆದರೆ ದೇವರ ಕಡೆಗಿರುವ ಪ್ರೀತಿ ಮತ್ತು ಆತನನ್ನು ಮೆಚ್ಚಿಸಬೇಕೆಂಬ ಬಯಕೆಯ ಕಾರಣ, ಕೆಲವು ಮಂದಿ ಇಸ್ರಾಯೇಲ್ಯರು ಸತ್ಯಾರಾಧನೆಯನ್ನು ಆಚರಿಸುವಂತೆ ಪ್ರಚೋದಿಸಲ್ಪಟ್ಟರು. ಅಂಥವರಿಗೆ ಯೆಹೋವನು ಆಮೋಸ 5:4ರಲ್ಲಿ ದಾಖಲಿಸಲ್ಪಟ್ಟಿರುವ ಈ ಹಾರ್ದಿಕ ಆಮಂತ್ರಣವನ್ನು ಕೊಟ್ಟನು: “ನನ್ನನ್ನೇ ಆಶ್ರಯಿಸಿ ಬದುಕಿಕೊಳ್ಳಿರಿ.” ಇಂದು, ಯೆಹೋವನ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಮತ್ತು ಆತನ ಚಿತ್ತವನ್ನು ಮಾಡುವ ಮೂಲಕ ಪಶ್ಚಾತ್ತಾಪಪಟ್ಟು ಆತನನ್ನು ಆಶ್ರಯಿಸುವವರಿಗೆ ಆತನು ಅದೇ ರೀತಿಯ ಕರುಣೆಯನ್ನು ತೋರಿಸುತ್ತಾನೆ. ಈ ಮಾರ್ಗವನ್ನು ಬೆನ್ನಟ್ಟುವುದು ಸುಲಭದ ವಿಷಯವಲ್ಲ, ಆದರೆ ಹಾಗೆ ಮಾಡುವುದು ನಿತ್ಯಜೀವಕ್ಕೆ ನಡೆಸುತ್ತದೆ.​—⁠ಯೋಹಾನ 17:⁠3.

ಆಧ್ಯಾತ್ಮಿಕ ಕ್ಷಾಮದ ಹೊರತಾಗಿಯೂ ಸಮೃದ್ಧಿ

21 ಸತ್ಯಾರಾಧನೆಯನ್ನು ಬೆಂಬಲಿಸದವರಿಗೆ ಏನು ಕಾದಿತ್ತು? ಅತಿ ಭಯಂಕರ ರೀತಿಯ ಕ್ಷಾಮ​—⁠ಆಧ್ಯಾತ್ಮಿಕ ಕ್ಷಾಮವೇ! ಕರ್ತನಾದ ಯೆಹೋವನು ಇಂತೆಂದನು: “ಆಹಾ, ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.” (ಆಮೋಸ 8:11) ಕ್ರೈಸ್ತಪ್ರಪಂಚವು ಇಂಥದ್ದೇ ಆಧ್ಯಾತ್ಮಿಕ ಕ್ಷಾಮದಿಂದ ಬಳಲುತ್ತಿದೆ. ಆದರೆ ಅದರ ಮಧ್ಯದಲ್ಲಿರುವ ಸಹೃದಯಿಗಳು ದೇವಜನರ ಆಧ್ಯಾತ್ಮಿಕ ಸಮೃದ್ಧಿಯನ್ನು ನೋಡಿ, ಯೆಹೋವನ ಸಂಘಟನೆಯೊಳಕ್ಕೆ ಹಿಂಡು ಹಿಂಡಾಗಿ ಬರುತ್ತಿದ್ದಾರೆ. ಕ್ರೈಸ್ತಪ್ರಪಂಚದ ಸ್ಥಿತಿ ಮತ್ತು ಸತ್ಯ ಕ್ರೈಸ್ತರ ಮಧ್ಯೆ ಇರುವ ಸ್ಥಿತಿಯಲ್ಲಿನ ವ್ಯತ್ಯಾಸವನ್ನು ಸೂಕ್ತವಾಗಿಯೇ ಯೆಹೋವನ ಈ ಮಾತುಗಳಲ್ಲಿ ತೋರಿಬರುತ್ತದೆ: “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ. ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ.”​—⁠ಯೆಶಾಯ 65:⁠13.

22 ಯೆಹೋವನ ಸೇವಕರಾದ ನಮಗಿರುವ ಆಧ್ಯಾತ್ಮಿಕ ಒದಗಿಸುವಿಕೆಗಳಿಗಾಗಿ ಮತ್ತು ಆಶೀರ್ವಾದಗಳಿಗಾಗಿ ನಾವು ವೈಯಕ್ತಿಕವಾಗಿ ಕೃತಜ್ಞರಾಗಿದ್ದೇವೊ? ನಾವು ಬೈಬಲನ್ನು ಮತ್ತು ಕ್ರೈಸ್ತ ಸಾಹಿತ್ಯಗಳನ್ನು ಅಧ್ಯಯನಮಾಡುವಾಗ ಹಾಗೂ ನಮ್ಮ ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಉಪಸ್ಥಿತರಾಗುವಾಗ, ನಮ್ಮ ಹೃದಯದ ಸುಸ್ಥಿತಿಯ ಕಾರಣ ಖಂಡಿತವಾಗಿ ನಮಗೂ ಉಲ್ಲಾಸದಿಂದ ಧ್ವನಿಗೈಯಬೇಕೆಂದೆನಿಸುತ್ತದೆ. ನಮಗೆ ಆಮೋಸನ ದೇವಪ್ರೇರಿತ ಪ್ರವಾದನೆಯ ಜೊತೆಗೆ ದೇವರ ವಾಕ್ಯದ ಸ್ಪಷ್ಟ ತಿಳಿವಳಿಕೆ ದೊರೆತಿರುವುದಕ್ಕಾಗಿ ನಾವು ಹರ್ಷಿಸುತ್ತೇವೆ.

23 ದೇವರನ್ನು ಪ್ರೀತಿಸಿ ಆತನನ್ನು ಘನಪಡಿಸಲು ಬಯಸುವ ಎಲ್ಲ ಮಾನವರಿಗೆ, ಆಮೋಸನ ಪ್ರವಾದನೆಯು ಒಂದು ನಿರೀಕ್ಷೆಯ ಸಂದೇಶವನ್ನು ಹೊಂದಿದೆ. ನಮ್ಮ ಈಗಿನ ಆರ್ಥಿಕ ಪರಿಸ್ಥಿತಿ ಹೇಗೇ ಇರಲಿ ಅಥವಾ ಈ ಸಂಕಟಮಯ ಲೋಕದಲ್ಲಿ ನಾವು ಯಾವುದೇ ಕಷ್ಟಗಳನ್ನು ಎದುರಿಸುತ್ತಿರಲಿ, ದೇವರನ್ನು ಪ್ರೀತಿಸುವ ನಾವು ದೈವಿಕ ಆಶೀರ್ವಾದಗಳನ್ನು ಮತ್ತು ಅತ್ಯುತ್ತಮವಾದ ಆಧ್ಯಾತ್ಮಿಕ ಆಹಾರವನ್ನು ಆನಂದಿಸುತ್ತಿದ್ದೇವೆ. (ಜ್ಞಾನೋಕ್ತಿ 10:22; ಮತ್ತಾಯ 24:45-47) ಆದುದರಿಂದ, ನಮ್ಮ ಅನುಭೋಗಕ್ಕಾಗಿ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವಾತನಾದ ದೇವರಿಗೆ ಸಕಲ ಘನತೆಯೂ ಸಲ್ಲುತ್ತದೆ! ನಾವು ಸದಾ ಆತನಿಗೆ ನಮ್ಮ ಹೃತ್ಪೂರ್ವಕವಾದ ಸ್ತುತಿಯನ್ನು ಕೊಡಲು ದೃಢನಿಶ್ಚಯವುಳ್ಳವರಾಗಿರೋಣ. ಹೃದಯಗಳ ಪರೀಕ್ಷಕನಾದ ಯೆಹೋವನನ್ನು ನಾವು ಹುಡುಕುವುದಾದರೆ, ಇದು ನಮ್ಮ ಆನಂದಮಯ ಸುಯೋಗವಾಗಿರುವುದು.

ನೀವು ಹೇಗೆ ಉತ್ತರಿಸುವಿರಿ?

• ಆಮೋಸನ ದಿನಗಳಲ್ಲಿ ಇಸ್ರಾಯೇಲಿನಲ್ಲಿ ಯಾವ ಪರಿಸ್ಥಿತಿಗಳು ಅಸ್ತಿತ್ವದಲ್ಲಿದ್ದವು?

• ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿದ್ದ ಪರಿಸ್ಥಿತಿಗಳಿಗೆ ಆಧುನಿಕ ದಿನದಲ್ಲಿ ಯಾವ ಹೋಲಿಕೆಗಳಿವೆ?

• ಮುಂತಿಳಿಸಲ್ಪಟ್ಟ ಯಾವ ಕ್ಷಾಮವು ಇಂದು ಅಸ್ತಿತ್ವದಲ್ಲಿದೆ, ಆದರೆ ಅದರಿಂದ ಯಾರು ಬಾಧಿಸಲ್ಪಡುವುದಿಲ್ಲ?

[ಅಧ್ಯಯನ ಪ್ರಶ್ನೆಗಳು]

1, 2. ಯೆಹೋವನು ‘ಹೃದಯವನ್ನು ನೋಡುತ್ತಾನೆ’ ಎಂದು ಶಾಸ್ತ್ರವಚನಗಳು ತಿಳಿಸುವಾಗ ಅದರ ಅರ್ಥವೇನು?

3, 4. ಆಮೋಸ 6:​4-6ಕ್ಕನುಸಾರ, ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ಯಾವ ಪರಿಸ್ಥಿತಿಗಳು ಅಸ್ತಿತ್ವದಲ್ಲಿದ್ದವು?

5. ಆಮೋಸನ ದಿನಗಳ ಇಸ್ರಾಯೇಲ್ಯರ ವಿಷಯದಲ್ಲಿ ಯೆಹೋವನು ಅಸಂತೋಷಗೊಂಡದ್ದೇಕೆ?

6. ಆಮೋಸನ ಸಮಯದಲ್ಲಿ ಇಸ್ರಾಯೇಲಿನ ಆಧ್ಯಾತ್ಮಿಕ ಪರಿಸ್ಥಿತಿಯು ಹೇಗಿತ್ತು?

7. ಇಸ್ರಾಯೇಲಿನ ಜನರು ದೈವಿಕ ಎಚ್ಚರಿಕೆಗಳಿಗೆ ಕಿವಿಗೊಡದಿರುವಲ್ಲಿ ಏನು ಸಂಭವಿಸಲಿತ್ತು?

8. ಇಸ್ರಾಯೇಲ್ಯರು ಆಧ್ಯಾತ್ಮಿಕವಾಗಿ ಕೆಟ್ಟದಾದ ಸ್ಥಿತಿಯನ್ನು ತಲಪಿದ್ದು ಹೇಗೆ?

9, 10. (ಎ) ಒಂದನೆಯ ಯಾರೊಬ್ಬಾಮ ರಾಜನಿಂದ ಯಾವ ಧಾರ್ಮಿಕ ಆಚರಣೆಗಳು ವ್ಯವಸ್ಥಾಪಿಸಲ್ಪಟ್ಟವು? (ಬಿ) ಎರಡನೆಯ ಯಾರೊಬ್ಬಾಮ ರಾಜನ ದಿನಗಳಲ್ಲಿ ಇಸ್ರಾಯೇಲಿನಲ್ಲಿ ನಡೆಸಲಾಗುತ್ತಿದ್ದ ಹಬ್ಬಗಳನ್ನು ದೇವರು ಹೇಗೆ ವೀಕ್ಷಿಸಿದನು?

11, 12. ಪುರಾತನ ಇಸ್ರಾಯೇಲಿನ ಆರಾಧನೆ ಮತ್ತು ಕ್ರೈಸ್ತಪ್ರಪಂಚವು ನಡೆಸುತ್ತಿರುವ ಆರಾಧನೆಯ ಮಧ್ಯೆ ಯಾವ ಹೋಲಿಕೆಗಳಿವೆ?

13. ಆಮೋಸ 5:15ರ ಮಾತುಗಳಿಗೆ ಅನುಗುಣವಾಗಿ ನಾವೇಕೆ ನಡೆಯಬೇಕು?

14, 15. (ಎ) ಇಸ್ರಾಯೇಲಿನಲ್ಲಿ ಒಳ್ಳೇದನ್ನು ಮಾಡುವವರಲ್ಲಿ ಯಾರು ಸೇರಿದ್ದರು, ಆದರೆ ಅವರಲ್ಲಿ ಕೆಲವರನ್ನು ಹೇಗೆ ಉಪಚರಿಸಲಾಯಿತು? (ಬಿ) ಇಂದು ಪೂರ್ಣ ಸಮಯದ ಸೇವೆಯಲ್ಲಿರುವವರನ್ನು ನಾವು ಹೇಗೆ ಪ್ರೋತ್ಸಾಹಿಸಬಲ್ಲೆವು?

16. ಮೋಶೆಯ ಕಾಲದಲ್ಲಿದ್ದ ಇಸ್ರಾಯೇಲ್ಯರು ಆಮೋಸನ ಕಾಲದಲ್ಲಿದ್ದವರಿಗಿಂತ ಎಷ್ಟೋ ಹೆಚ್ಚು ಉತ್ತಮ ಸ್ಥಿತಿಯಲ್ಲಿದ್ದುದ್ದೇಕೆ?

17. ಆರಂಭದ ಇಸ್ರಾಯೇಲ್ಯರನ್ನು ಯೆಹೋವನು ವಾಗ್ದತ್ತ ದೇಶಕ್ಕೆ ಕೊಂಡೊಯ್ದದ್ದೇಕೆ?

18. ಯೆಹೋವನು ನಮ್ಮನ್ನು ಆಧ್ಯಾತ್ಮಿಕವಾಗಿ ಬಿಡುಗಡೆ ಮಾಡಿರುವುದೇಕೆ?

19. ಆಮೋಸ 4:​4, 5ಕ್ಕನುಸಾರ, ಅಧಿಕಾಂಶ ಇಸ್ರಾಯೇಲ್ಯರು ಯಾವುದನ್ನು ಪ್ರೀತಿಸಲಾರಂಭಿಸಿದರು?

20. ಆಮೋಸ 5:4ಕ್ಕೆ ಹೊಂದಿಕೆಯಲ್ಲಿರುವ ಮಾರ್ಗವನ್ನು ಒಬ್ಬನು ಹೇಗೆ ಬೆನ್ನಟ್ಟಸಾಧ್ಯವಿದೆ?

21. ಸತ್ಯಾರಾಧನೆಯನ್ನು ಬೆಂಬಲಿಸದವರು ಯಾವ ಕ್ಷಾಮವನ್ನು ಅನುಭವಿಸುವರು?

22. ಉಲ್ಲಾಸಧ್ವನಿಗೈಯಲು ನಮಗೆ ಸಕಾರಣವಿದೆ ಏಕೆ?

23. ದೇವರನ್ನು ಘನಪಡಿಸುವವರು ಏನನ್ನು ಆನಂದಿಸುತ್ತಾರೆ?

[ಪುಟ 21ರಲ್ಲಿರುವ ಚಿತ್ರಗಳು]

ಅನೇಕ ಇಸ್ರಾಯೇಲ್ಯರು ಐಷಾರಾಮದ ಜೀವನವನ್ನು ಅನುಭವಿಸುತ್ತಿದ್ದರೂ ಅವರಿಗೆ ಆಧ್ಯಾತ್ಮಿಕ ಸಮೃದ್ಧಿಯಿರಲಿಲ್ಲ

[ಪುಟ 23ರಲ್ಲಿರುವ ಚಿತ್ರ]

ಪೂರ್ಣ ಸಮಯದ ಸೇವಕರು ತಮ್ಮ ಒಳ್ಳೇ ಕೆಲಸವನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿರಿ

[ಪುಟ 24, 25ರಲ್ಲಿರುವ ಚಿತ್ರಗಳು]

ಯೆಹೋವನ ಸಂತೋಷದಾಯಕ ಜನರ ಮಧ್ಯೆ ಆಧ್ಯಾತ್ಮಿಕ ಕ್ಷಾಮವಿಲ್ಲ