ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏನು ಓದಬೇಕೆಂಬ ವಿಷಯದಲ್ಲಿ ಸೊಲೊಮೋನನ ವಿವೇಕಭರಿತ ಸಲಹೆ

ಏನು ಓದಬೇಕೆಂಬ ವಿಷಯದಲ್ಲಿ ಸೊಲೊಮೋನನ ವಿವೇಕಭರಿತ ಸಲಹೆ

ಏನು ಓದಬೇಕೆಂಬ ವಿಷಯದಲ್ಲಿ ಸೊಲೊಮೋನನ ವಿವೇಕಭರಿತ ಸಲಹೆ

“ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.” (ಪ್ರಸಂಗಿ 12:12) ಇಸ್ರಾಯೇಲಿನ ವಿವೇಕಿ ಅರಸನಾದ ಸೊಲೊಮೋನನು ಸುಮಾರು 3,000 ವರ್ಷಗಳ ಹಿಂದೆ ಈ ಮಾತುಗಳನ್ನು ಬರೆದನಾದರೂ, ಓದುವುದನ್ನು ನಿರುತ್ತೇಜಿಸುವ ಉದ್ದೇಶ ಅವನದ್ದಾಗಿರಲಿಲ್ಲ. ಬದಲಾಗಿ, ಓದುವ ವಿಷಯದಲ್ಲಿ ಆಯ್ಕೆಯನ್ನು ಮಾಡುವ ಆವಶ್ಯಕತೆಯ ಕುರಿತು ಅವನು ಮಾತಾಡುತ್ತಿದ್ದನು. ಇಂದು ಲೋಕದಲ್ಲಿ ಮುದ್ರಣಾಲಯಗಳಿಂದ ವಾರ್ಷಿಕವಾಗಿ ನೂರಾರು ಕೋಟಿ ಪುಟಗಳಷ್ಟು ವಾಚನ ಸಾಮಗ್ರಿಯು ಮುದ್ರಿಸಲ್ಪಡುತ್ತಿರುವಾಗ, ಈ ಜ್ಞಾಪನವು ಎಷ್ಟು ಸಮಯೋಚಿತವಾದದ್ದಾಗಿದೆ!

ಸೊಲೊಮೋನನು ಯಾವುದರ ಕುರಿತಾಗಿ “ಬಹುಗ್ರಂಥಗಳು” ಎಂದು ಸೂಚಿಸಿ ಮಾತಾಡಿದನೋ ಅವು ಭಕ್ತಿವೃದ್ಧಿಮಾಡುವ ಅಥವಾ ಚೈತನ್ಯದಾಯಕವಾದ ಗ್ರಂಥಗಳಾಗಿರಲಿಲ್ಲ ಎಂಬುದು ಸುವ್ಯಕ್ತ. ಆದುದರಿಂದ, ಅವುಗಳ ವ್ಯಾಸಂಗವು ಸಕಾರಾತ್ಮಕವಾದ ಹಾಗೂ ನಿತ್ಯವಾದ ಪ್ರಯೋಜನಗಳನ್ನು ನೀಡುವುದಕ್ಕೆ ಬದಲಾಗಿ, “ದೇಹಕ್ಕೆ ಆಯಾಸ”ಕರವಾಗಿದೆ ಎಂದು ಅವನು ತರ್ಕಿಸಿದನು.

ಆದರೆ, ಓದುವವನಿಗೆ ಪ್ರಯೋಜನಕರವಾಗಿ ಇರಸಾಧ್ಯವಿರುವ ಸ್ವಸ್ಥವಾದ, ವಿಶ್ವಾಸಾರ್ಹ ಮಾರ್ಗದರ್ಶನೆಯನ್ನು ಒದಗಿಸುವಂಥ ಪುಸ್ತಕಗಳೇ ಇಲ್ಲ ಎಂದು ಸೊಲೊಮೋನನು ಹೇಳಿದನೋ? ಇಲ್ಲ, ಏಕೆಂದರೆ ಅವನು ಹೀಗೂ ಬರೆದನು: “ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು; ಸಂಗ್ರಹವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು; ಒಬ್ಬನೇ ಕರ್ತನಿಂದ [“ಕುರುಬನಿಂದ,” NW] ಬಂದಿವೆ.” (ಪ್ರಸಂಗಿ 12:11) ವಾಸ್ತವದಲ್ಲಿ, “ಮುಳ್ಳುಗೋಲುಗಳ” ಹಾಗಿರುವ ಲಿಖಿತ ನುಡಿಗಳು, ಸಹಾಯಕರವಾದ ಪ್ರಚೋದನೆಯನ್ನು ಒದಗಿಸಬಲ್ಲವು. ಅವು ಒಬ್ಬ ವ್ಯಕ್ತಿಯನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಉತ್ತೇಜಿಸಬಲ್ಲವು. ಅಷ್ಟುಮಾತ್ರವಲ್ಲ, ‘ಬಿಗಿಯಾಗಿ ಬಡಿದ ಮೊಳೆಗಳಂತೆ’ ಅವು ಒಬ್ಬನ ನಿರ್ಧಾರವನ್ನು ಬಲಪಡಿಸಲು ಸಹಾಯಮಾಡಿ, ಸ್ಥಿರವಾದ ಪರಿಣಾಮವನ್ನು ಬೀರಬಲ್ಲವು.

ಇಂಥ ವಿವೇಕಯುತ ನುಡಿಗಳನ್ನು ನಾವೆಲ್ಲಿ ಕಂಡುಕೊಳ್ಳಸಾಧ್ಯವಿದೆ? ಸೊಲೊಮೋನನಿಗನುಸಾರ, ಒಬ್ಬನೇ ಕುರುಬನಾಗಿರುವ ಯೆಹೋವನಿಂದ ಬರುವಂಥ ನುಡಿಗಳೇ ಸರ್ವೋತ್ಕೃಷ್ಟ ನುಡಿಗಳಾಗಿವೆ. (ಕೀರ್ತನೆ 23:⁠1) ಆದುದರಿಂದ, ಒಬ್ಬನು ಇಂಥ ವಿವೇಕಯುತ ನುಡಿಗಳನ್ನು ಕಂಡುಕೊಳ್ಳಲಿಕ್ಕಾಗಿರುವ ಅತ್ಯುತ್ತಮ ಪುಸ್ತಕವು ದೇವರಿಂದ ಪ್ರೇರಿತವಾಗಿರುವ ಬೈಬಲೇ ಆಗಿದೆ. ಇಂಥ ಪ್ರೇರಿತ ನುಡಿಗಳನ್ನು ಕ್ರಮವಾಗಿ ಓದುವುದು, ಒಬ್ಬನು “ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗು”ವಂತೆ ಸಹಾಯಮಾಡಬಲ್ಲದು.​—⁠2 ತಿಮೊಥೆಯ 3:​16, 17.