“ಗಮನಾರ್ಹವಾದ ಒಳ್ಳೇ” ಭಾಷಾಂತರ
“ಗಮನಾರ್ಹವಾದ ಒಳ್ಳೇ” ಭಾಷಾಂತರ
ಒಂದು ಅಂದಾಜಿಗನುಸಾರ, 1952 ಮತ್ತು 1990ರ ನಡುವೆ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಸುಮಾರು 55 ಹೊಸ ಇಂಗ್ಲಿಷ್ ಭಾಷಾಂತರಗಳು ಪ್ರಕಟಿಸಲ್ಪಟ್ಟವು. ಭಾಷಾಂತರಕಾರರು ಮಾಡುವ ಪದಗಳ ಆಯ್ಕೆಗಳು, ಒಂದು ಮೂಲಪಾಠದ ಯಾವ ಎರಡು ಭಾಷಾಂತರಗಳೂ ನಿರ್ದಿಷ್ಟವಾಗಿ ಒಂದೇ ರೀತಿಯಲ್ಲಿ ತರ್ಜುಮೆಮಾಡಲ್ಪಡದಿರುವುದನ್ನು ಅರ್ಥೈಸುತ್ತವೆ. ಭಾಷಾಂತರಕಾರರ ಕೆಲಸದ ವಿಶ್ವಾಸಾರ್ಹತೆಯನ್ನು ನಿರ್ಧರಿಸಲಿಕ್ಕಾಗಿ, ಯು.ಎಸ್.ಎ, ಆರಿಸೋನದ ಫ್ಲ್ಯಾಗ್ಸ್ಟ್ಯಾಫ್ನಲ್ಲಿರುವ ಉತ್ತರ ಆರಿಸೋನ ವಿಶ್ವವಿದ್ಯಾನಿಲಯದ ಧಾರ್ಮಿಕ ಅಧ್ಯಯನಗಳ ಸಹಾಯಕ ಪ್ರೊಫೆಸರರಾಗಿರುವ ಜೇಸನ್ ಬೆಡೂನ್, ಎಂಟು ಪ್ರಮುಖ ಭಾಷಾಂತರಗಳ ನಿಷ್ಕೃಷ್ಟತೆಯನ್ನು ಪರಿಶೀಲಿಸಿದರು ಮತ್ತು ಹೋಲಿಸಿ ನೋಡಿದರು. ಇವುಗಳಲ್ಲಿ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್)ವೂ ಒಳಗೂಡಿತ್ತು. ಫಲಿತಾಂಶವೇನು?
ಅದರ ಭಾಷಾಂತರ ಆಯ್ಕೆಗಳಲ್ಲಿ ಕೆಲವೊಂದನ್ನು ಬೆಡೂನ್ರವರು ಅಸಮ್ಮತಿಸಿದರಾದರೂ, ಪರಿಗಣಿಸಲ್ಪಟ್ಟ ಇತರ ಕೆಲವು ಭಾಷಾಂತರಗಳಿಗೆ ಹೋಲಿಸುವಾಗ, ನೂತನ ಲೋಕ ಭಾಷಾಂತರವನ್ನು ಅವರು “ಗಮನಾರ್ಹವಾದ ಒಳ್ಳೇ” ಭಾಷಾಂತರ, “ಅತ್ಯಧಿಕ ಮಟ್ಟಿಗೆ ಉತ್ತಮವಾದದ್ದು” ಮತ್ತು “ಹೆಚ್ಚು ಸಮರಸವಾದದ್ದು” ಎಂದು ಕರೆದರು. ಒಟ್ಟಿನಲ್ಲಿ ಬೆಡೂನ್ರವರ ತೀರ್ಮಾನವೇನೆಂದರೆ, ನೂತನ ಲೋಕ ಭಾಷಾಂತರವು “ಸದ್ಯಕ್ಕೆ ಲಭ್ಯವಿರುವ ಹೊಸ ಒಡಂಬಡಿಕೆಯ ಅತ್ಯಂತ ನಿಷ್ಕೃಷ್ಟವಾದ ಇಂಗ್ಲಿಷ್ ಭಾಷಾಂತರಗಳಲ್ಲಿ ಒಂದಾಗಿದೆ” ಮತ್ತು “ತುಲನೆಮಾಡಲ್ಪಟ್ಟ ಭಾಷಾಂತರಗಳಲ್ಲೇ ಅತ್ಯಂತ ನಿಷ್ಕೃಷ್ಟವಾದದ್ದಾಗಿದೆ.”—ಭಾಷಾಂತರದಲ್ಲಿನ ಸತ್ಯತೆ: ಹೊಸ ಒಡಂಬಡಿಕೆಯ ಇಂಗ್ಲಿಷ್ ಭಾಷಾಂತರಗಳಲ್ಲಿ ನಿಷ್ಕೃಷ್ಟತೆ ಮತ್ತು ವ್ಯತ್ಯಾಸ (ಇಂಗ್ಲಿಷ್).
ಅನೇಕ ಭಾಷಾಂತರಕಾರರು “ಬೈಬಲ್ ಏನು ಹೇಳುತ್ತದೋ ಅದನ್ನು, ಆಧುನಿಕ ವಾಚಕರು ಏನನ್ನು ಬಯಸುತ್ತಾರೋ ಮತ್ತು ಅದು ಹೇಗೆ ವಿವರಿಸಲ್ಪಡಬೇಕೆಂದು ನೆನಸುತ್ತಾರೋ ಆ ರೀತಿಯಲ್ಲೇ ವ್ಯಕ್ತಪಡಿಸಲಿಕ್ಕಾಗಿ, ಅದರ ಸರಳಾನುವಾದ ಮಾಡುವ ಇಲ್ಲವೆ ಅದನ್ನು ಸವಿಸ್ತಾರವಾಗಿ ತಿಳಿಸುವ” ಒತ್ತಡಕ್ಕೆ ಒಳಗಾಗಿದ್ದರು ಎಂಬುದನ್ನು ಸಹ ಬೆಡೂನ್ ಗಮನಿಸಿದರು. ಇನ್ನೊಂದು ಕಡೆಯಲ್ಲಿ, ನೂತನ ಲೋಕ ಭಾಷಾಂತರವು ತೀರ ಭಿನ್ನವಾಗಿದೆ, ಇದಕ್ಕೆ ಕಾರಣವು “NWನಲ್ಲಿರುವ ಹೊಸ ಒಡಂಬಡಿಕೆಯ ಲೇಖಕರ ಮೂಲ ಅಭಿವ್ಯಕ್ತಿಗಳ ಅಕ್ಷರಾರ್ಥಕ ಮತ್ತು ಜಾಗರೂಕ ಭಾಷಾಂತರವು ಅತ್ಯಧಿಕವಾಗಿ ನಿಷ್ಕೃಷ್ಟವಾಗಿರುವುದೇ” ಆಗಿದೆ ಎಂಬುದನ್ನು ಬೆಡೂನ್ ಗಮನಿಸಿದರು.
ನೂತನ ಲೋಕ ಬೈಬಲ್ ಭಾಷಾಂತರ ಕಮಿಟಿಯು ತನ್ನ ಕೃತಿಯ ಮುನ್ನುಡಿಯಲ್ಲಿ ಅಂಗೀಕರಿಸಿರುವಂತೆಯೇ, ಪವಿತ್ರ ಶಾಸ್ತ್ರವನ್ನು ಅದರ ಮೂಲ ಭಾಷೆಗಳಿಂದ ಆಧುನಿಕ ಭಾಷೆಗಳಿಗೆ ಭಾಷಾಂತರಿಸುವುದು “ಅತ್ಯಂತ ಜವಾಬ್ದಾರಿಯುತವಾದ ಒಂದು ಸಂಗತಿಯಾಗಿದೆ.” ಕಮಿಟಿಯು ಮುಂದುವರಿಸುತ್ತಾ ಹೇಳುವುದು: “ಪವಿತ್ರ ಶಾಸ್ತ್ರದ ದೈವಿಕ ಲೇಖಕನಿಗೆ ಭಯಪಟ್ಟು ಆತನನ್ನು ಪ್ರೀತಿಸುವ ಈ ಕೃತಿಯ ಭಾಷಾಂತರಕಾರರು, ಆತನ ಆಲೋಚನೆಗಳನ್ನು ಮತ್ತು ಪ್ರಕಟನೆಗಳನ್ನು ಸಾಧ್ಯವಾದಷ್ಟು ಹೆಚ್ಚು ನಿಷ್ಕೃಷ್ಟವಾಗಿ ತಿಳಿಯಪಡಿಸಲು ಆತನ ಮುಂದೆ ವಿಶೇಷ ಜವಾಬ್ದಾರಿಯನ್ನು ಹೊಂದಿದ್ದೇವೆಂದು ನೆನಸುತ್ತಾರೆ.”
ಇಸವಿ 1961ರಲ್ಲಿ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವು ಪ್ರಥಮವಾಗಿ ಪ್ರಕಾಶನಮಾಡಲ್ಪಟ್ಟಂದಿನಿಂದ, ಇದು 32 ಭಾಷೆಗಳಲ್ಲಿ ಮತ್ತು 2 ಬ್ರೇಲ್ ಮುದ್ರಣಗಳಲ್ಲಿ ಲಭ್ಯಗೊಳಿಸಲ್ಪಟ್ಟಿದೆ. ನೂತನ ಲೋಕ ಭಾಷಾಂತರದ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು ಅಥವಾ “ಹೊಸ ಒಡಂಬಡಿಕೆ”ಯು ಇನ್ನೂ 18 ಹೆಚ್ಚಿನ ಭಾಷೆಗಳಲ್ಲಿ ಮತ್ತು ಒಂದು ಬ್ರೇಲ್ ಮುದ್ರಣದಲ್ಲಿ ಲಭ್ಯಗೊಳಿಸಲ್ಪಟ್ಟಿದೆ. ಒಂದುವೇಳೆ ನಿಮ್ಮ ಸ್ವಂತ ಭಾಷೆಯಲ್ಲಿ ಲಭ್ಯವಿರುವಲ್ಲಿ, ಈ ಆಧುನಿಕ ಹಾಗೂ “ಗಮನಾರ್ಹವಾದ ಒಳ್ಳೇ” ಭಾಷಾಂತರದಿಂದ ನೀವು ದೇವರ ವಾಕ್ಯವನ್ನು ಓದುವಂತೆ ನಾವು ಕರೆಕೊಡುತ್ತೇವೆ.