ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮದ್ಯವನ್ನು ಉಪಯೋಗಿಸುವ ವಿಷಯದಲ್ಲಿ ಸಮತೂಕ ನೋಟವುಳ್ಳವರಾಗಿರಿ

ಮದ್ಯವನ್ನು ಉಪಯೋಗಿಸುವ ವಿಷಯದಲ್ಲಿ ಸಮತೂಕ ನೋಟವುಳ್ಳವರಾಗಿರಿ

ಮದ್ಯವನ್ನು ಉಪಯೋಗಿಸುವ ವಿಷಯದಲ್ಲಿ ಸಮತೂಕ ನೋಟವುಳ್ಳವರಾಗಿರಿ

“ದ್ರಾಕ್ಷಾರಸವು ಪರಿಹಾಸ್ಯ ಮದ್ಯವು ಕೂಗಾಟ; ಇವುಗಳಿಂದ ಓಲಾಡುವವನು [“ದಾರಿತಪ್ಪುವವನು,” Nw] ಜ್ಞಾನಿಯಲ್ಲ.”​—⁠ಜ್ಞಾನೋಕ್ತಿ 20:⁠1.

“ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ” ಎಂದು ಶಿಷ್ಯನಾದ ಯಾಕೋಬನು ಬರೆದನು. (ಯಾಕೋಬ 1:17) ದೇವರ ಅಸಂಖ್ಯಾತ ಒಳ್ಳೇ ವರಗಳು ಅಥವಾ ಕೊಡುಗೆಗಳಿಗಾಗಿ ಕೃತಜ್ಞತಾಭಾವದಿಂದ ಪ್ರಚೋದಿತನಾದ ಕೀರ್ತನೆಗಾರನು ಹಾಡಿದ್ದು: “ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ; ಅವರು ಭೂವ್ಯವಸಾಯಮಾಡಿ ಆಹಾರವನ್ನೂ ಹೃದಯಾನಂದಕರವಾದ ದ್ರಾಕ್ಷಾರಸವನ್ನೂ ಮುಖಕ್ಕೆ ಕಾಂತಿಯನ್ನುಂಟುಮಾಡುವ ಎಣ್ಣೆಯನ್ನೂ ಪ್ರಾಣಾಧಾರವಾದ ರೊಟ್ಟಿಯನ್ನೂ ಸಂಪಾದಿಸಿಕೊಳ್ಳುತ್ತಾರೆ.” (ಕೀರ್ತನೆ 104:14, 15) ಪೈರುಗಳು, ರೊಟ್ಟಿ, ಎಣ್ಣೆಯಂತೆಯೇ ದ್ರಾಕ್ಷಾರಸ ಹಾಗೂ ಇನ್ನಿತರ ಮದ್ಯಪಾನೀಯಗಳು ದೇವರಿಂದ ಕೊಡಲ್ಪಟ್ಟಿರುವ ಅತ್ಯುತ್ತಮ ಒದಗಿಸುವಿಕೆಗಳಾಗಿವೆ. ಆದರೆ ನಾವು ಅವುಗಳನ್ನು ಹೇಗೆ ಉಪಯೋಗಿಸಬೇಕು?

2 ಆನಂದದಾಯಕವಾದ ಒಂದು ಕೊಡುಗೆಯು ಯೋಗ್ಯ ರೀತಿಯಲ್ಲಿ ಉಪಯೋಗಿಸಲ್ಪಡುವಲ್ಲಿ ಮಾತ್ರ ಒಳ್ಳೇದಾಗಿರುತ್ತದೆ. ಉದಾಹರಣೆಗೆ, ಜೇನು ‘ಚೆನ್ನಾಗಿರುತ್ತದೆ,’ ಆದರೆ “ಜೇನನ್ನು ಹೆಚ್ಚಾಗಿ ತಿನ್ನುವದು ಹಿತವಲ್ಲ.” (ಜ್ಞಾನೋಕ್ತಿ 24:13; 25:27) ‘ದ್ರಾಕ್ಷಾಮದ್ಯವನ್ನು ಸ್ವಲ್ಪ’ ಕುಡಿಯುವುದು ಸ್ವೀಕಾರಾರ್ಹವಾಗಿರುವುದಾದರೂ, ಮದ್ಯಪಾನದ ದುರುಪಯೋಗವು ಗಂಭೀರವಾದ ಒಂದು ಸಮಸ್ಯೆಯಾಗಿದೆ. (1 ತಿಮೊಥೆಯ 5:23) ಈ ವಿಷಯದಲ್ಲಿ ಬೈಬಲ್‌ ಈ ಎಚ್ಚರಿಕೆಯನ್ನು ನೀಡುತ್ತದೆ: “ದ್ರಾಕ್ಷಾರಸವು ಪರಿಹಾಸ್ಯ ಮದ್ಯವು ಕೂಗಾಟ; ಇವುಗಳಿಂದ ಓಲಾಡುವವನು [“ದಾರಿತಪ್ಪುವವನು,” NW] ಜ್ಞಾನಿಯಲ್ಲ.” (ಜ್ಞಾನೋಕ್ತಿ 20:1) ಹಾಗಾದರೆ, ಮದ್ಯಪಾನದಿಂದ ದಾರಿತಪ್ಪುವುದರಲ್ಲಿ ಏನು ಒಳಗೂಡಿದೆ? * ಎಷ್ಟು ಪ್ರಮಾಣದ ಮದ್ಯಪಾನವು ಮಿತಿಮೀರಿದ ಸೇವನೆಯಾಗಿದೆ? ಈ ವಿಷಯದಲ್ಲಿ ಯಾವುದು ಸಮತೂಕ ನೋಟವಾಗಿದೆ?

ಮದ್ಯಪಾನದಿಂದ “ದಾರಿತಪ್ಪುವುದು”​—⁠ಹೇಗೆ?

3 ಪುರಾತನ ಇಸ್ರಾಯೇಲಿನಲ್ಲಿ, ಪಶ್ಚಾತ್ತಾಪಪಡದ ಹೊಟ್ಟೆಬಾಕನೂ ಕುಡುಕನೂ ಆಗಿರುವ ಒಬ್ಬ ಮಗನನ್ನು ಕಲ್ಲೆಸೆದು ಕೊಲ್ಲಬೇಕಾಗಿತ್ತು. (ಧರ್ಮೋಪದೇಶಕಾಂಡ 21:18-21) ಅಪೊಸ್ತಲ ಪೌಲನು ಕ್ರೈಸ್ತರಿಗೆ ಹೀಗೆ ಬುದ್ಧಿಹೇಳಿದನು: “ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡಿಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು.”​—⁠1 ಕೊರಿಂಥ 5:11; 6:9, 10.

4 ಕುಡುಕತನದ ಗುಣಲಕ್ಷಣಗಳನ್ನು ವರ್ಣಿಸುತ್ತಾ ಬೈಬಲ್‌ ಹೇಳುವುದು: “ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ. ಅದು [ಗಂಟಲಿನೊಳಗೆ] ಮೆಲ್ಲಗೆ ಇಳಿದುಹೋಗಿ ಆಮೇಲೆ ಹಾವಿನಂತೆ ಕಚ್ಚುತ್ತದೆ, ಹೌದು, ನಾಗದ ಹಾಗೆ ಕಡಿಯುತ್ತದೆ. ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವದು, ಮನಸ್ಸು ವಿಪರೀತಗಳನ್ನು ಹೊರ ಪಡಿಸುವದು.” (ಜ್ಞಾನೋಕ್ತಿ 23:31-33) ವಿಪರೀತ ಕುಡಿಯುವುದು ಅನಾರೋಗ್ಯ, ಮಾನಸಿಕ ತಳಮಳ, ಹಾಗೂ ಪ್ರಜ್ಞಾಹೀನತೆಯನ್ನೂ ಉಂಟುಮಾಡುತ್ತಾ ವಿಷದ ಹಾವಿನಂತೆ ಕಚ್ಚುತ್ತದೆ. ಒಬ್ಬ ಕುಡುಕನು “ಇಲ್ಲದ್ದನ್ನೇ ಕಾಣ”ಬಹುದು, ಅಂದರೆ ಅವನಿಗೆ ಭ್ರಮೆಹಿಡಿಯಬಹುದು ಅಥವಾ ಅವನು ಕಲ್ಪನಾಲೋಕದಲ್ಲಿ ವಿಹರಿಸಬಹುದು. ಸಾಮಾನ್ಯವಾಗಿ ನಿಗ್ರಹಿಸಲ್ಪಡಸಾಧ್ಯವಿರುವ ಕೆಟ್ಟ ಆಲೋಚನೆಗಳು ಹಾಗೂ ಬಯಕೆಗಳ ಕುರಿತು ಮಾತಾಡುವುದರಲ್ಲಿಯೂ ಅವನು ನಿಯಂತ್ರಣ ತಪ್ಪಬಹುದು.

5 ಒಬ್ಬನು ಮದ್ಯಪಾನಮಾಡಿರುವುದಾದರೂ, ಅವನು ಕುಡಿದಿದ್ದಾನೆಂದು ಇತರರು ಗ್ರಹಿಸುವಷ್ಟರ ಮಟ್ಟಿಗೆ ಕುಡಿಯದಿರುವಂತೆ ಜಾಗರೂಕನಾಗಿರುವುದು ಹಾನಿರಹಿತವೋ? ಕೆಲವು ವ್ಯಕ್ತಿಗಳು ಬಹಳಷ್ಟು ಮದ್ಯವನ್ನು ಸೇವಿಸಿದ ಬಳಿಕವೂ ಕುಡಿಕತನದ ಯಾವುದೇ ಲಕ್ಷಣವನ್ನು ತೋರಿಸುವುದಿಲ್ಲ. ಆದರೂ, ಇಂಥ ರೂಢಿಯು ಹಾನಿರಹಿತವಾಗಿದೆ ಎಂದು ನೆನಸುವುದು ವಾಸ್ತವದಲ್ಲಿ ಒಂದು ರೀತಿಯ ಆತ್ಮವಂಚನೆಯಾಗಿದೆ. (ಯೆರೆಮೀಯ 17:⁠9) ಕ್ರಮೇಣವಾಗಿ, ಪ್ರಗತಿಪರವಾಗಿ ಒಬ್ಬನು ಮದ್ಯಪಾನದ ಮೇಲೆ ಅವಲಂಬನೆಯನ್ನು ಬೆಳೆಸಿಕೊಳ್ಳಬಹುದು ಮತ್ತು ‘ಮದ್ಯಕ್ಕೆ ಗುಲಾಮನೂ’ ಆಗಬಹುದು. (ತೀತ 2:⁠2) ಒಬ್ಬ ಮದ್ಯವ್ಯಸನಿಯಾಗಿ ಪರಿಣಮಿಸುವ ಕಾರ್ಯಗತಿಯ ಕುರಿತು ಬರಹಗಾರ್ತಿಯಾದ ಕ್ಯಾರಲೈನ್‌ ನ್ಯಾಪ್‌ ಹೇಳುವುದು: “ಮದ್ಯವ್ಯಸನಿಯಾಗುವುದು, ನಿಧಾನಗತಿಯ, ಕ್ರಮೇಣವಾದ, ಕುಟಿಲವಾದ, ವರ್ಣಿಸಲಸಾಧ್ಯವಾದ ಕಾರ್ಯಗತಿಯಾಗಿದೆ.” ಮದ್ಯಪಾನದಲ್ಲಿ ವಿಪರೀತವಾಗಿ ಒಳಗೂಡುವುದು ಎಷ್ಟು ಮಾರಕವಾದ ಪಾಶವಾಗಿದೆ!

6 ಯೇಸುವಿನ ಎಚ್ಚರಿಕೆಯನ್ನೂ ಪರಿಗಣಿಸಿರಿ: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.” (ಲೂಕ 21:34, 35) ಕುಡಿಯುವುದು ಒಬ್ಬ ವ್ಯಕ್ತಿಯನ್ನು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಜಡಗಟ್ಟಿಸುವ ಹಾಗೂ ಸೋಮಾರಿಯನ್ನಾಗಿ ಮಾಡುವ ಮುಂಚೆ ಅದು ಕುಡಿಕತನದ ಮಟ್ಟವನ್ನು ತಲಪಬೇಕೆಂದಿಲ್ಲ. ಅವನು ಈ ಸ್ಥಿತಿಯಲ್ಲಿರುವಾಗಲೇ ಯೆಹೋವನ ದಿನವು ಬರುವುದಾದರೆ ಆಗೇನು?

ಮದ್ಯದ ದುರುಪಯೋಗವು ಯಾವುದಕ್ಕೆ ನಡಿಸಬಲ್ಲದು?

7 ಮದ್ಯವನ್ನು ಅಮಿತವಾಗಿ ಬಳಸುವುದು ಒಬ್ಬನನ್ನು ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅನೇಕ ಅಪಾಯಗಳಿಗೆ ಒಡ್ಡುತ್ತದೆ. ಮದ್ಯದ ದುರುಪಯೋಗದಿಂದ ಬರುವ ರೋಗಗಳಲ್ಲಿ, ಯಕೃತ್ತಿನ ತೀವ್ರ ರೋಗ, ಆಲ್ಕೊಹಾಲಿಕ್‌ ಹೆಪಟೈಟಿಸ್‌, ಹಾಗೂ ಡಿಲಿರೀಯಮ್‌ ಟ್ರೀಮನ್ಸ್‌ನಂಥ ನರಕ್ಕೆ ಸಂಬಂಧಿಸಿದ ರೋಗಗಳು ಸೇರಿವೆ. ದೀರ್ಘಕಾಲದ ವರೆಗೆ ಮದ್ಯವನ್ನು ದುರುಪಯೋಗಿಸುವುದು, ಕ್ಯಾನ್ಸರ್‌, ಮಧುಮೇಹ, ಹಾಗೂ ಹೃದಯ ಮತ್ತು ಹೊಟ್ಟೆಯ ಕೆಲವು ರೋಗಗಳಿಗೆ ಸಹ ಕಾರಣವಾಗುತ್ತದೆ. ಮದ್ಯದ ದುರುಪಯೋಗವು, “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ” ಎಂಬ ಶಾಸ್ತ್ರೀಯ ನಿರ್ದೇಶನಕ್ಕೆ ಹೊಂದಿಕೆಯಲ್ಲಿಲ್ಲ ಎಂಬುದು ಸುಸ್ಪಷ್ಟ.​—⁠2 ಕೊರಿಂಥ 7:⁠1.

8 ಮದ್ಯದ ದುರುಪಯೋಗವು ಆದಾಯದ ದುರ್ಬಳಕೆ, ಅಷ್ಟುಮಾತ್ರವಲ್ಲ ಉದ್ಯೋಗ ನಷ್ಟವನ್ನೂ ಅರ್ಥೈಸುತ್ತದೆ. ಪುರಾತನ ಇಸ್ರಾಯೇಲಿನ ಅರಸನಾದ ಸೊಲೊಮೋನನು ಎಚ್ಚರಿಕೆ ನೀಡಿದ್ದು: “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು.” ಏಕೆ? ಅವನು ವಿವರಿಸಿದ್ದು: “ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು; ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವದು.”​—⁠ಜ್ಞಾನೋಕ್ತಿ 23:20, 21.

9 ಇನ್ನೊಂದು ಅಪಾಯವನ್ನು ಸೂಚಿಸುತ್ತಾ, ದಿ ಎನ್‌ಸೈಕ್ಲಪೀಡೀಯ ಆಫ್‌ ಆಲ್ಕೊಹಾಲಿಸಮ್‌ ಹೇಳುವುದು: “ಮದ್ಯದ ದುರುಪಯೋಗವು ಡ್ರೈವಿಂಗ್‌ ಕೌಶಲಗಳನ್ನು ಕುಂದಿಸುತ್ತದೆ, ಮತ್ತು ಪ್ರತಿಕ್ರಿಯಿಸುವ ಕಾಲಾವಧಿ, ಹೊಂದಾಣಿಕೆ, ಗಮನ, ದೃಷ್ಟಿಪ್ರಜ್ಞೆ ಹಾಗೂ ವಿಮರ್ಶನ ಶಕ್ತಿಯನ್ನೂ ದುರ್ಬಲಗೊಳಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.” ಮದ್ಯಪಾನವನ್ನು ಮಾಡಿ ಡ್ರೈವಿಂಗ್‌ ಮಾಡುವುದರ ಪರಿಣಾಮಗಳು ವಿಪತ್ಕಾರಕವಾಗಿವೆ. ಯುನೈಟೆಡ್‌ ಸ್ಟೇಟ್ಸ್‌ ಒಂದರಲ್ಲಿಯೇ, ಮದ್ಯಪಾನಕ್ಕೆ ಸಂಬಂಧಿಸಿದ ಟ್ರ್ಯಾಫಿಕ್‌ ಅಪಘಾತಗಳಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಸಾಯುತ್ತಾರೆ ಮತ್ತು ಲಕ್ಷಾಂತರ ಮಂದಿ ಗಾಯಗೊಳ್ಳುತ್ತಾರೆ. ವಿಶೇಷವಾಗಿ ಈ ಅಪಾಯಕ್ಕೆ ಸುಲಭವಾಗಿ ತುತ್ತಾಗುವವರು, ಡ್ರೈವಿಂಗ್‌ನಲ್ಲಿ ಹಾಗೂ ಕುಡಿತದಲ್ಲಿ ಕಡಿಮೆ ಅನುಭವವುಳ್ಳವರಾಗಿರುವ ಯುವ ಜನರೇ ಆಗಿದ್ದಾರೆ. ಮದ್ಯವನ್ನು ಅತ್ಯಧಿಕ ಪ್ರಮಾಣದಲ್ಲಿ ಸೇವಿಸಿದ ಬಳಿಕ ಯಾರಾದರೂ ಡ್ರೈವಿಂಗ್‌ ಮಾಡಬಲ್ಲರೋ ಮತ್ತು ಅದೇ ಸಮಯದಲ್ಲಿ ಯೆಹೋವ ದೇವರ ಒಂದು ಕೊಡುಗೆಯಾಗಿರುವ ಜೀವವನ್ನು ಗೌರವಿಸುತ್ತೇವೆಂದು ಪ್ರತಿಪಾದಿಸಬಲ್ಲರೋ? (ಕೀರ್ತನೆ 36:⁠9) ಜೀವದ ಪಾವಿತ್ರ್ಯವನ್ನು ಪರಿಗಣಿಸುವಾಗ, ಒಬ್ಬ ವ್ಯಕ್ತಿಯು ವಾಹನವನ್ನು ಡ್ರೈವ್‌ಮಾಡಬೇಕಾಗಿರುವಾಗ ಸ್ವಲ್ಪವೂ ಮದ್ಯವನ್ನು ಕುಡಿಯದಿರುವುದು ಅವನಿಗೆ ಅಥವಾ ಅವಳಿಗೆ ಅತ್ಯುತ್ತಮವಾದದ್ದಾಗಿದೆ.

10 ಮಿತಿಮೀರಿ ಕುಡಿಯುವುದು ಜನರಿಗೆ ಶಾರೀರಿಕವಾಗಿ ಮಾತ್ರವಲ್ಲ ಆಧ್ಯಾತ್ಮಿಕವಾಗಿಯೂ ಹಾನಿಯನ್ನುಂಟುಮಾಡುತ್ತದೆ. “ದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ” ಎಂದು ಬೈಬಲ್‌ ಹೇಳುತ್ತದೆ. (ಹೋಶೇಯ 4:11) ಮದ್ಯಪಾನವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅಮಲೌಷಧ ದುರುಪಯೋಗದ ಕುರಿತಾದ ಯು.ಎಸ್‌. ರಾಷ್ಟ್ರೀಯ ಸಂಸ್ಥೆಯ ಪ್ರಕಾಶನವೊಂದು ಹೀಗೆ ವಿವರಿಸುತ್ತದೆ: “ಯಾರಾದರೊಬ್ಬರು ಕುಡಿದಿರುವಾಗ, ಮದ್ಯವು ಜೀರ್ಣಾಂಗ ವ್ಯೂಹದ ಮೂಲಕ ರಕ್ತಪ್ರವಾಹದೊಳಕ್ಕೆ ಲೀನವಾಗುತ್ತದೆ ಮತ್ತು ಆ ಕೂಡಲೆ ಮಿದುಳಿಗೆ ತಲಪುತ್ತದೆ. ಇದು, ಮಿದುಳಿನಲ್ಲಿ ಆಲೋಚನೆಯನ್ನು ಹಾಗೂ ಭಾವನೆಗಳನ್ನು ನಿಯಂತ್ರಿಸುವ ಭಾಗಗಳು ನಿಧಾನವಾಗಿ ಕೆಲಸಮಾಡುವಂತೆ ಮಾಡುತ್ತದೆ. ಆ ವ್ಯಕ್ತಿಗೆ ಹೆಚ್ಚು ಹತೋಟಿಯಿರುವುದಿಲ್ಲ.” ಇಂಥ ಸ್ಥಿತಿಯಲ್ಲಿ ನಾವು ‘ದಾರಿತಪ್ಪುವುದು,’ ಸಲಿಗೆಯಿಂದ ವರ್ತಿಸುವುದು ಹಾಗೂ ಅನೇಕ ಪ್ರಲೋಭನೆಗಳಿಗೆ ಒಡ್ಡಲ್ಪಡುವುದು ಹೆಚ್ಚು ಸಂಭವನೀಯ.​—⁠ಜ್ಞಾನೋಕ್ತಿ 20:⁠1.

11 ಅಷ್ಟುಮಾತ್ರವಲ್ಲ, ಬೈಬಲ್‌ ಹೀಗೆ ಆಜ್ಞೆಯನ್ನಿತ್ತಿದೆ: “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ಅಧಿಕ ಪ್ರಮಾಣದಲ್ಲಿ ಮದ್ಯವನ್ನು ಬಳಸುವುದು ಎಂದಾದರೂ ದೇವರಿಗೆ ಘನತೆಯನ್ನು ತರುತ್ತದೋ? ಒಬ್ಬ ಕ್ರೈಸ್ತನು ಕುಡುಕನೆಂಬ ಹೆಸರನ್ನು ಪಡೆದುಕೊಳ್ಳುವುದರಿಂದ ದೂರವಿರಲು ಬಯಸುತ್ತಾನೆಂಬುದು ನಿಶ್ಚಯ. ಇಂಥ ಕೆಟ್ಟ ಹೆಸರು ಯೆಹೋವನ ನಾಮಕ್ಕೆ ಘನತೆಯನ್ನಲ್ಲ, ನಿಂದೆಯನ್ನು ತರುತ್ತದೆ.

12 ಒಬ್ಬ ಕ್ರೈಸ್ತನು ಕುಡಿಯುವ ವಿಷಯದಲ್ಲಿ ಸಭ್ಯತೆಯ ಕೊರತೆಯನ್ನು ತೋರಿಸುವ ಮೂಲಕ ಜೊತೆ ವಿಶ್ವಾಸಿಯನ್ನು ಬಹುಶಃ ಒಬ್ಬ ಹೊಸ ಶಿಷ್ಯನನ್ನು ಎಡವಿ ಬೀಳಿಸುವಲ್ಲಿ ಆಗೇನು? (ರೋಮಾಪುರ 14:21) ಯೇಸು ಎಚ್ಚರಿಕೆ ನೀಡಿದ್ದು: “ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವದು ಅವನಿಗೆ ಹಿತವಾಗುವದು.” (ಮತ್ತಾಯ 18:6) ಮಿತಿಮೀರಿದ ಮದ್ಯಪಾನದ ಫಲಿತಾಂಶವಾಗಿ ಸಭೆಯಲ್ಲಿನ ಸೇವಾ ಸುಯೋಗಗಳು ಸಹ ಕೈತಪ್ಪಿಹೋಗಸಾಧ್ಯವಿದೆ. (1 ತಿಮೊಥೆಯ 3:​1-3, 8) ಇದರ ಇನ್ನೊಂದು ದುಷ್ಪರಿಣಾಮವು, ಮದ್ಯದ ದುರುಪಯೋಗವು ಕುಟುಂಬದಲ್ಲಿ ಉಂಟುಮಾಡುವ ಹಾನಿಕರ ತೊಂದರೆಯೇ ಆಗಿದೆ.

ಅಪಾಯಗಳಿಂದ ದೂರವಿರಿ​—⁠ಹೇಗೆ?

13 ಮದ್ಯದ ದುರುಪಯೋಗದಿಂದ ಉಂಟಾಗುವ ಅಪಾಯಗಳಿಂದ ದೂರವಿರಲಿಕ್ಕಾಗಿರುವ ಒಂದು ಕೀಲಿ ಕೈ, ಕೇವಲ ಕುಡಿಕತನದಿಂದ ಅಲ್ಲ, ಬದಲಾಗಿ ಮಿತಿಮೀರಿದ ಮದ್ಯಸೇವನೆಯಿಂದಲೂ ದೂರವಿರುವುದನ್ನು ನಮ್ಮ ಗುರಿಯಾಗಿ ಮಾಡಿಕೊಳ್ಳುವುದೇ ಆಗಿದೆ. ಹಾಗಾದರೆ, ಎಷ್ಟು ಪ್ರಮಾಣದ ಮದ್ಯಪಾನವು ನಿಮ್ಮ ವಿಷಯದಲ್ಲಿ ಮಿತ ಪ್ರಮಾಣದ್ದಾಗಿದೆ ಹಾಗೂ ಎಷ್ಟು ಪ್ರಮಾಣವು ಮಿತಿಮೀರಿದ ಮದ್ಯಸೇವನೆಗೆ ಸಮಾನವಾಗಿದೆ ಎಂಬುದನ್ನು ಯಾರು ನಿರ್ಧರಿಸಸಾಧ್ಯವಿದೆ? ಇದರಲ್ಲಿ ಅನೇಕ ಅಂಶಗಳು ಒಳಗೂಡಿರುವುದರಿಂದ, ಎಷ್ಟು ಸಲ ಕುಡಿಯುವುದು ವಿಪರೀತ ಕುಡಿಯುವಿಕೆಗೆ ಸಮಾನವಾಗಿದೆ ಎಂಬ ವಿಷಯದಲ್ಲಿ ಕಟ್ಟುನಿಟ್ಟಾದ ಯಾವುದೇ ನಿಯಮವು ಇರಸಾಧ್ಯವಿಲ್ಲ. ಪ್ರತಿಯೊಬ್ಬನಿಗೆ ವೈಯಕ್ತಿಕವಾಗಿ ತನ್ನ ಮಿತಿಯ ಕುರಿತು ತಿಳಿದಿರಬೇಕಾಗಿದೆ ಮತ್ತು ಆ ಮಿತಿಯೊಳಗೇ ಉಳಿಯಬೇಕಾಗಿದೆ. ಎಷ್ಟು ಪ್ರಮಾಣದ ಮದ್ಯವು ನಿಮ್ಮ ಮಿತಿಯಾಗಿದೆ ಎಂಬುದನ್ನು ನಿರ್ಧರಿಸಲು ನಿಮಗೆ ಯಾವುದು ಸಹಾಯಮಾಡುವುದು? ಈ ವಿಷಯದಲ್ಲಿ ಮಾರ್ಗದರ್ಶಕವಾಗಿ ಕಾರ್ಯನಡಿಸಸಾಧ್ಯವಿರುವಂಥ ಒಂದು ಮೂಲತತ್ತ್ವವು ಇದೆಯೋ?

14 ಬೈಬಲ್‌ ಹೇಳುವುದು: “ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ, . . . ಅವು ನಿನಗೆ ಜೀವವೂ ನಿನ್ನ ಕೊರಳಿಗೆ ಭೂಷಣವೂ ಆಗಿರುವವು.” (ಜ್ಞಾನೋಕ್ತಿ 3:21, 22) ಹಾಗಾದರೆ, ಅನುಸರಿಸಬೇಕಾಗಿರುವ ಮಾರ್ಗದರ್ಶಕ ಮೂಲತತ್ತ್ವವು ಹೀಗಿದೆ: ನಿಮ್ಮ ವಿಮರ್ಶನ ಶಕ್ತಿಯನ್ನು ಅನಗತ್ಯವಾಗಿ ಕುಂಠಿತಗೊಳಿಸಿ, ನಿಮ್ಮ ಆಲೋಚನಾ ಸಾಮರ್ಥ್ಯವನ್ನು ಜಡಗೊಳಿಸುವ ಯಾವುದೇ ಪ್ರಮಾಣದ ಮದ್ಯವು ನಿಮ್ಮ ಮಟ್ಟಿಗೆ ತೀರ ಹೆಚ್ಚಾಗಿರುತ್ತದೆ. ಆ ವೈಯಕ್ತಿಕ ಮಿತಿಯು ಎಷ್ಟಾಗಿದೆ ಎಂಬುದನ್ನು ಗ್ರಹಿಸುವುದರಲ್ಲಿ ನಿಮಗೆ ನೀವೇ ಪ್ರಾಮಾಣಿಕರಾಗಿರಬೇಕಾಗಿದೆ!

15 ಕೆಲವು ಸನ್ನಿವೇಶಗಳಲ್ಲಿ, ಸ್ವಲ್ಪ ಕುಡಿಯುವುದರಿಂದಲೂ ದೂರವಿರುವುದು ವಿವೇಕಯುತವಾಗಿರಬಹುದು. ಭ್ರೂಣಕ್ಕೆ ಆಗಬಹುದಾದ ಹಾನಿಯನ್ನು ಪರಿಗಣಿಸುವಾಗ, ಒಬ್ಬ ಗರ್ಭಿಣಿಯು ಕುಡಿಯದಿರುವ ಆಯ್ಕೆಯನ್ನು ಮಾಡಬಹುದು. ಮತ್ತು ಈ ಮುಂಚೆ ಮದ್ಯಪಾನದ ವಿಷಯದಲ್ಲಿ ಸಮಸ್ಯೆಯಿದ್ದ ಒಬ್ಬ ವ್ಯಕ್ತಿಯ ಅಥವಾ ಯಾರ ಮನಸ್ಸಾಕ್ಷಿಯು ಕುಡಿಯುವುದನ್ನು ಅಸಮ್ಮತಿಸುತ್ತದೋ ಅಂಥ ವ್ಯಕ್ತಿಯ ಸಮಕ್ಷಮದಲ್ಲಿ ಕುಡಿಯದಿರುವುದು ದಯಾಪರ ಕೃತ್ಯವಾಗಿರುವುದಿಲ್ಲವೋ? ದೇವದರ್ಶನದ ಗುಡಾರದಲ್ಲಿ ಯಾಜಕತ್ವಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರಿಗೆ ಯೆಹೋವನು ಹೀಗೆ ಆಜ್ಞೆ ನೀಡಿದ್ದನು: “ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ.” (ಯಾಜಕಕಾಂಡ 10:8, 9) ಆದುದರಿಂದ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದಕ್ಕೆ ಮುಂಚೆ, ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ ಮತ್ತು ಇನ್ನಿತರ ಆಧ್ಯಾತ್ಮಿಕ ಜವಾಬ್ದಾರಿಗಳನ್ನು ಪೂರೈಸುತ್ತಿರುವಾಗ ಮದ್ಯಪಾನೀಯಗಳನ್ನು ಕುಡಿಯಬೇಡಿ. ಅಷ್ಟುಮಾತ್ರವಲ್ಲ, ಮದ್ಯದ ಬಳಕೆಯು ನಿಷೇಧಿಸಲ್ಪಟ್ಟಿರುವ ಅಥವಾ ನಿರ್ದಿಷ್ಟ ವಯೋಮಿತಿಯ ಜನರಿಗೆ ಮಾತ್ರ ಅನುಮತಿಸಲ್ಪಟ್ಟಿರುವ ದೇಶಗಳಲ್ಲಿ, ಕ್ರೈಸ್ತರು ಆಯಾ ದೇಶದ ನಿಯಮಗಳನ್ನು ಪಾಲಿಸಬೇಕು.​—⁠ರೋಮಾಪುರ 13:⁠1.

16 ಒಂದು ಮದ್ಯಪಾನೀಯವು ನಿಮಗೆ ಕೊಡಲ್ಪಟ್ಟಾಗ ಅಥವಾ ನಿಮ್ಮ ಮುಂದೆ ಇಡಲ್ಪಟ್ಟಿರುವಾಗ, ‘ನಾನು ಕುಡಿಯಲೇಬೇಕೊ?’ ಎಂಬುದು ನಾವು ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆಯಾಗಿದೆ. ಒಂದುವೇಳೆ ನೀವು ಕುಡಿಯಲು ನಿರ್ಧರಿಸುವಲ್ಲಿ, ನಿಮ್ಮ ವೈಯಕ್ತಿಕ ಮಿತಿಯನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಟ್ಟುಕೊಂಡಿರಿ, ಮತ್ತು ಆ ಮಿತಿಯನ್ನು ಮೀರದಿರಿ. ಉದಾರ ಮನೋಭಾವದ ಆತಿಥೇಯನು ನಿಮ್ಮ ಮೇಲೆ ಪ್ರಭಾವ ಬೀರುವಂತೆ ಬಿಡದಿರಿ. ಮತ್ತು ಪಾರ್ಟಿಗಳಂಥ ಸಮಾರಂಭಗಳಲ್ಲಿ ಅಪರಿಮಿತ ಪ್ರಮಾಣದಲ್ಲಿ ಮದ್ಯಗಳು ನೀಡಲ್ಪಡುವ ಬಾರ್‌ಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅನೇಕ ಸ್ಥಳಗಳಲ್ಲಿ, ಮಕ್ಕಳು ಕಾನೂನುಬದ್ಧವಾಗಿ ಮದ್ಯಪಾನವನ್ನು ಪಡೆಯುವ ಅನುಮತಿಯಿರುತ್ತದೆ. ಹೀಗಿರುವಾಗ, ಮದ್ಯದ ಉಪಯೋಗದ ವಿಷಯದಲ್ಲಿ ತಮ್ಮ ಮಕ್ಕಳಿಗೆ ಸಲಹೆ ನೀಡುವುದು ಮತ್ತು ಈ ವಿಚಾರದಲ್ಲಿ ಅವರ ಆಗುಹೋಗುಗಳ ಮೇಲೆ ಕಣ್ಣಿಡುವುದು ಹೆತ್ತವರ ಜವಾಬ್ದಾರಿಯಾಗಿದೆ.​—⁠ಜ್ಞಾನೋಕ್ತಿ 22:⁠6.

ನೀವು ಸಮಸ್ಯೆಯೊಂದಿಗೆ ವ್ಯವಹರಿಸಬಲ್ಲಿರಿ

17 ದ್ರಾಕ್ಷಾರಸ ಮತ್ತು ಅಮಲೇರಿಸುವ ಮದ್ಯದ ದುರುಪಯೋಗವು ನಿಮಗೆ ಒಂದು ಸಮಸ್ಯೆಯಾಗಿದೆಯೋ? ಒಂದುವೇಳೆ ಮದ್ಯದ ದುರುಪಯೋಗವು ಒಂದು ಗುಪ್ತ ಪಾಪವಾಗಿ ಪರಿಣಮಿಸುತ್ತಿರುವಲ್ಲಿ, ಇಂದಲ್ಲ ನಾಳೆ ಅದು ನಿಮ್ಮ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂಬುದಂತೂ ನಿಶ್ಚಯ. ಆದುದರಿಂದ ಸ್ವತಃ ನಿಮ್ಮನ್ನು ಸಮಗ್ರವಾಗಿ ಹಾಗೂ ಪ್ರಾಮಾಣಿಕವಾಗಿ ಪರಿಶೀಲಿಸಿಕೊಳ್ಳಿರಿ. ಮುಂದೆ ಕೊಡಲ್ಪಟ್ಟಿರುವಂಥ ಸ್ವಅನ್ವೇಷಕ ಪ್ರಶ್ನೆಗಳನ್ನು ಕೇಳಿಕೊಳ್ಳಿರಿ: ‘ನಾನು ಈ ಮುಂಚಿಗಿಂತಲೂ ಹೆಚ್ಚು ಮದ್ಯವನ್ನು ಸೇವಿಸುತ್ತಿದ್ದೇನೋ? ನನ್ನ ಮದ್ಯಗಳು ಮುಂಚಿಗಿಂತಲೂ ಹೆಚ್ಚೆಚ್ಚು ಆಲ್ಕೊಹಾಲ್‌ ಉಳ್ಳವುಗಳಾಗಿವೆಯೋ? ಚಿಂತೆಗಳನ್ನು, ಒತ್ತಡವನ್ನು ಅಥವಾ ಸಮಸ್ಯೆಗಳನ್ನು ಮರೆಯಲಿಕ್ಕಾಗಿ ನಾನು ಮದ್ಯವನ್ನು ಉಪಯೋಗಿಸುತ್ತೇನೋ? ನನ್ನ ಕುಡಿತದ ವಿಷಯದಲ್ಲಿ ಕುಟುಂಬದ ಒಬ್ಬ ಸದಸ್ಯನೊ ಅಥವಾ ಸ್ನೇಹಿತನೋ ಚಿಂತೆಯನ್ನು ತೋರಿಸಿದ್ದಾರೋ? ನನ್ನ ಕುಡಿತವು ನನ್ನ ಕುಟುಂಬ ವೃತ್ತದಲ್ಲಿ ಸಮಸ್ಯೆಗಳನ್ನು ಉಂಟುಮಾಡಿದೆಯೋ? ಒಂದು ವಾರ, ಒಂದು ತಿಂಗಳು ಅಥವಾ ಕೆಲವಾರು ತಿಂಗಳುಗಳ ವರೆಗೆ ಮದ್ಯಪಾನವಿಲ್ಲದೆ ಇರುವುದನ್ನು ನಾನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತೇನೋ? ನಾನು ಎಷ್ಟು ಪ್ರಮಾಣದ ದ್ರಾಕ್ಷಾರಸವನ್ನು ಅಥವಾ ಮದ್ಯವನ್ನು ಸೇವಿಸುತ್ತೇನೆಂಬುದನ್ನು ಇತರರಿಂದ ಮರೆಮಾಚಲು ಪ್ರಯತ್ನಿಸುತ್ತೇನೋ?’ ಈ ಪ್ರಶ್ನೆಗಳಲ್ಲಿ ಕೆಲವಕ್ಕೆ ನಿಮ್ಮ ಉತ್ತರವು ಹೌದು ಎಂದಾಗಿರುವಲ್ಲಿ ಆಗೇನು? ‘ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವ’ ಮನುಷ್ಯನಂತಿರಬೇಡಿ. (ಯಾಕೋಬ 1:22-24) ಸಮಸ್ಯೆಯನ್ನು ಸರಿಪಡಿಸಲು ಸೂಕ್ತ ಹೆಜ್ಜೆಗಳನ್ನು ತೆಗೆದುಕೊಳ್ಳಿ. ನೀವೇನು ಮಾಡಬಲ್ಲಿರಿ?

18 ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದ್ದು: ‘ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿರಿ.’ (ಎಫೆಸ 5:​18, 19) ನಿಮ್ಮ ವಿಷಯದಲ್ಲಿ ಎಷ್ಟು ಪ್ರಮಾಣದ ಮದ್ಯಪಾನವು ಮಿತಿಮೀರಿದ್ದಾಗಿದೆ ಎಂಬುದನ್ನು ನಿರ್ಧರಿಸಿರಿ ಮತ್ತು ಸೂಕ್ತವಾದ ಮಿತಿಗಳನ್ನು ಇಡಿರಿ. ಆ ಮಿತಿಗಳನ್ನು ಎಂದಿಗೂ ಮೀರಬಾರದು ಎಂಬ ನಿರ್ಧಾರವನ್ನು ಮಾಡಿರಿ: ಸ್ವನಿಯಂತ್ರಣವನ್ನು ರೂಢಿಸಿಕೊಳ್ಳಿರಿ. (ಗಲಾತ್ಯ 5:​22, 23) ಅತಿಯಾಗಿ ಮದ್ಯಪಾನಮಾಡುವಂತೆ ನಿಮ್ಮನ್ನು ಒತ್ತಾಯಿಸುವ ಸಹವಾಸಿಗಳು ನಿಮಗಿದ್ದಾರೋ? ಜಾಗ್ರತೆಯಿಂದಿರಿ. ಬೈಬಲ್‌ ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”​—⁠ಜ್ಞಾನೋಕ್ತಿ 13:⁠20.

19 ಯಾವುದೇ ಸಮಸ್ಯೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನೀವು ಮದ್ಯವನ್ನು ಬಳಸುತ್ತಿರುವಲ್ಲಿ, ಆ ಸಮಸ್ಯೆಯನ್ನು ನೇರವಾಗಿ ಎದುರಿಸಿರಿ. ದೇವರ ವಾಕ್ಯದಿಂದ ಕೊಡಲ್ಪಡುವ ಸಲಹೆಯನ್ನು ಅನ್ವಯಿಸುವ ಮೂಲಕ ಸಮಸ್ಯೆಗಳೊಂದಿಗೆ ವ್ಯವಹರಿಸಸಾಧ್ಯವಿದೆ. (ಕೀರ್ತನೆ 119:105) ಒಬ್ಬ ಭರವಸಾರ್ಹ ಕ್ರೈಸ್ತ ಹಿರಿಯನ ಸಹಾಯವನ್ನು ಪಡೆದುಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಆಧ್ಯಾತ್ಮಿಕತೆಯನ್ನು ವರ್ಧಿಸಲಿಕ್ಕಾಗಿ ಯೆಹೋವನು ಮಾಡಿರುವ ಒದಗಿಸುವಿಕೆಗಳನ್ನು ಸದುಪಯೋಗಿಸಿರಿ. ದೇವರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಿರಿ. ಆತನಿಗೆ ಕ್ರಮವಾಗಿ ಪ್ರಾರ್ಥಿಸಿರಿ, ವಿಶೇಷವಾಗಿ ನಿಮ್ಮ ಬಲಹೀನತೆಯ ಕುರಿತು ಬೇಡಿಕೊಳ್ಳಿರಿ. ನಿಮ್ಮ ‘ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸುವಂತೆ’ ದೇವರ ಬಳಿ ವಿನಂತಿಸಿಕೊಳ್ಳಿರಿ. (ಕೀರ್ತನೆ 26:⁠2) ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಂತೆ, ಸಮಗ್ರತೆಯ ಮಾರ್ಗದಲ್ಲಿ ನಡೆಯಲಿಕ್ಕಾಗಿ ನಿಮ್ಮಿಂದಾದಷ್ಟು ಮಟ್ಟಿಗೆ ಪ್ರಯತ್ನಿಸಿರಿ.

20 ನೀವಿಷ್ಟು ಪ್ರಯತ್ನಗಳನ್ನು ಮಾಡಿದರೂ ಮಿತಿಮೀರಿದ ಮದ್ಯಪಾನದ ಸಮಸ್ಯೆಯು ಹಾಗೆಯೇ ಮುಂದುವರಿಯುವಲ್ಲಿ ಆಗೇನು? ಆಗ ನೀವು ಯೇಸುವಿನ ಬುದ್ಧಿವಾದವನ್ನು ಅನುಸರಿಸಬೇಕು: “ಇದಲ್ಲದೆ ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿದ್ದು ಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವದಕ್ಕಿಂತ ಕೈಕಳಕೊಂಡವನಾಗಿ ಜೀವದಲ್ಲಿ ಸೇರುವದು ನಿನಗೆ ಉತ್ತಮ.” (ಮಾರ್ಕ 9:​43, 44) ಉತ್ತರವೇನೆಂದರೆ, ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಿರಿ. ನಾವು ಐರೀನ್‌ ಎಂದು ಕರೆಯುವಂಥ ಒಬ್ಬ ಸ್ತ್ರೀಯು ಇದನ್ನೇ ಮಾಡಲು ನಿರ್ಧರಿಸಿದಳು. ಅವಳು ಹೇಳುವುದು: “ಸುಮಾರು ಎರಡೂವರೆ ವರ್ಷಗಳ ವರೆಗೆ ಮದ್ಯಪಾನವನ್ನು ನಿಲ್ಲಿಸಿದ ಬಳಿಕ, ಒಂದು ಸಲ ಕುಡಿಯುವುದರಿಂದ ಏನೂ ತೊಂದರೆಯಿಲ್ಲ ಎಂದು ನನಗನಿಸತೊಡಗಿತು; ಸನ್ನಿವೇಶವನ್ನು ಹೇಗೆ ನಿರ್ವಹಿಸಬಲ್ಲೆ ಎಂಬುದನ್ನು ನೋಡೋಣ ಎಂದುಕೊಂಡೆ. ಆದರೆ ಈ ಅನಿಸಿಕೆ ನನಗೆ ಬಂದಾಕ್ಷಣ, ಆ ಕೂಡಲೆ ನಾನು ಈ ವಿಷಯದ ಕುರಿತು ಯೆಹೋವನಿಗೆ ಪ್ರಾರ್ಥಿಸುತ್ತಿದ್ದೆ. ನೂತನ ವ್ಯವಸ್ಥೆಯು ಬರುವ ತನಕ, ಅಷ್ಟುಮಾತ್ರವಲ್ಲ ನೂತನ ವ್ಯವಸ್ಥೆಯಲ್ಲಿ ಸಹ ಮದ್ಯಪಾನವನ್ನು ಮಾಡದಿರುವ ದೃಢನಿರ್ಧಾರವನ್ನು ನಾನು ಮಾಡಿದ್ದೇನೆ.” ದೇವರ ನೀತಿಯ ನೂತನ ಲೋಕದಲ್ಲಿನ ಜೀವನಕ್ಕೆ ಹೋಲಿಸುವಾಗ, ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ದೊಡ್ಡ ತ್ಯಾಗವೇನಲ್ಲ.​—⁠2 ಪೇತ್ರ 3:⁠13.

“ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ”

21 ಒಬ್ಬ ಕ್ರೈಸ್ತನ ಜೀವನ ಮಾರ್ಗವನ್ನು ಒಂದು ಓಟಕ್ಕೆ ಅಥವಾ ಪಂದ್ಯಕ್ಕೆ ಹೋಲಿಸುತ್ತಾ ಅಪೊಸ್ತಲ ಪೌಲನು ಹೇಳಿದ್ದು: “ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ. ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ಮಿತವಾಗಿರುತ್ತಾರೆ. ಅವರು ಬಾಡಿ ಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.”​—⁠1 ಕೊರಿಂಥ 9:24-27.

22 ಯಾರು ಓಟವನ್ನು ಯಶಸ್ವಿಕರವಾಗಿ ಮುಗಿಸುತ್ತಾರೋ ಅವರಿಗೆ ಮಾತ್ರ ಬಹುಮಾನವು ಕೊಡಲ್ಪಡುತ್ತದೆ. ಮದ್ಯದ ದುರುಪಯೋಗವು, ಜೀವಕ್ಕಾಗಿರುವ ಓಟದಲ್ಲಿ ಅಂತಿಮ ರೇಖೆಯನ್ನು ತಲಪುವುದರಿಂದ ನಮ್ಮನ್ನು ತಡೆಯಸಾಧ್ಯವಿದೆ. ನಾವು ಸ್ವನಿಯಂತ್ರಣವನ್ನು ರೂಢಿಸಿಕೊಳ್ಳಬೇಕು. ನಿಶ್ಚಿತಾಭಿಪ್ರಾಯದಿಂದ ಓಡಬೇಕಾದರೆ, ನಾವು “ಕುಡಿಕತನ”ದಲ್ಲಿ ಒಳಗೂಡಬಾರದಾಗಿದೆ. (1 ಪೇತ್ರ 4:⁠3) ಅದಕ್ಕೆ ಬದಲಾಗಿ, ಎಲ್ಲ ವಿಷಯಗಳಲ್ಲಿ ನಾವು ಸ್ವನಿಯಂತ್ರಣವನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಮದ್ಯಪಾನೀಯಗಳನ್ನು ಸೇವಿಸುವ ವಿಷಯಕ್ಕೆ ಬರುವಾಗ, “ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕು”ವುದಾದರೆ ನಾವು ವಿವೇಕಿಗಳಾಗಿದ್ದೇವೆ.​—⁠ತೀತ 2:⁠12.

[ಪಾದಟಿಪ್ಪಣಿ]

^ ಪ್ಯಾರ. 4 ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟಿರುವಂತೆ, “ಮದ್ಯ” ಎಂಬುದು ಬಿಯರ್‌, ದ್ರಾಕ್ಷಾಮದ್ಯ ಹಾಗೂ ಇನ್ನಿತರ ಲಿಕ್ಕರ್‌ಗಳಿಗೆ ಅನ್ವಯವಾಗುತ್ತದೆ.

ನಿಮಗೆ ನೆನಪಿದೆಯೋ?

• ಮದ್ಯದ ದುರುಪಯೋಗದಲ್ಲಿ ಏನು ಒಳಗೂಡಿದೆ?

• ಮದ್ಯದ ದುರುಪಯೋಗದಿಂದ ಯಾವ ಹಾನಿಯು ಉಂಟಾಗುತ್ತದೆ?

• ಮದ್ಯದ ದುರುಪಯೋಗದ ಅಪಾಯಗಳಿಂದ ನೀವು ಹೇಗೆ ದೂರವಿರಸಾಧ್ಯವಿದೆ?

• ಮದ್ಯದ ದುರುಪಯೋಗದ ಸಮಸ್ಯೆಯನ್ನು ನೀವು ಹೇಗೆ ನಿಭಾಯಿಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನಿಂದ ಕೊಡಲ್ಪಟ್ಟಿರುವ ಕೆಲವು ಒಳ್ಳೇ ಕೊಡುಗೆಗಳಿಗಾಗಿ ಕೀರ್ತನೆಗಾರನು ತನ್ನ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಿದನು?

2. ಮದ್ಯದ ಉಪಯೋಗದ ವಿಷಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

3, 4. (ಎ) ಕುಡಿಕತನದ ಹಂತವನ್ನು ತಲಪುವ ಮಟ್ಟಿಗೆ ಕುಡಿಯುವುದು ಬೈಬಲಿನಲ್ಲಿ ಖಂಡಿಸಲ್ಪಟ್ಟಿದೆ ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ಕುಡಿಕತನದ ಕೆಲವು ಗುಣಲಕ್ಷಣಗಳು ಯಾವುವು?

5. ಮದ್ಯಪಾನದಲ್ಲಿ ವಿಪರೀತವಾಗಿ ಒಳಗೂಡುವುದು ಯಾವ ರೀತಿಯಲ್ಲಿ ಹಾನಿಕರವಾದದ್ದಾಗಿದೆ?

6. ಒಬ್ಬನು ಮದ್ಯಪಾನದಲ್ಲಿ ವಿಪರೀತವಾಗಿ ಒಳಗೂಡುವುದರಿಂದ ಹಾಗೂ ಅತಿಭೋಜನದಿಂದ ದೂರವಿರಬೇಕು ಏಕೆ?

7. ಮದ್ಯದ ದುರುಪಯೋಗವು, 2 ಕೊರಿಂಥ 7:1ರಲ್ಲಿ ತಿಳಿಸಲ್ಪಟ್ಟಿರುವ ನಿರ್ದೇಶನಕ್ಕೆ ತದ್ವಿರುದ್ಧವಾದದ್ದಾಗಿದೆ ಏಕೆ?

8. ಜ್ಞಾನೋಕ್ತಿ 23:​20, 21ಕ್ಕನುಸಾರ, ಮದ್ಯದ ದುರುಪಯೋಗದಿಂದ ಯಾವ ಪರಿಣಾಮವು ಉಂಟಾಗಸಾಧ್ಯವಿದೆ?

9. ಒಬ್ಬ ವ್ಯಕ್ತಿಯು ಒಂದು ವಾಹನವನ್ನು ಡ್ರೈವ್‌ಮಾಡಲಿಕ್ಕಿರುವಲ್ಲಿ, ಅವನು ಮದ್ಯಪಾನೀಯಗಳನ್ನು ಕುಡಿಯದಿರುವುದು ಏಕೆ ವಿವೇಕಯುತವಾದದ್ದಾಗಿದೆ?

10. ಮದ್ಯಪಾನವು ನಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರಬಲ್ಲದು, ಮತ್ತು ಇದು ಏಕೆ ಅಪಾಯಕರವಾಗಿದೆ?

11, 12. ಮದ್ಯವನ್ನು ಮಿತಿಮೀರಿ ಉಪಯೋಗಿಸುವುದರಿಂದ ಯಾವ ಆಧ್ಯಾತ್ಮಿಕ ಹಾನಿಯು ಉಂಟಾಗಬಲ್ಲದು?

13. ಮದ್ಯದ ದುರುಪಯೋಗದಿಂದ ದೂರವಿರುವುದರಲ್ಲಿ ಯಾವುದು ನಿರ್ಣಯಾತ್ಮಕವಾಗಿದೆ?

14. ಮದ್ಯದ ಮಿತವಾದ ಸೇವನೆ ಅಥವಾ ಮಿತಿಮೀರಿದ ಸೇವನೆಯ ಮಟ್ಟವನ್ನು ನಿರ್ಧರಿಸಲು ಯಾವ ಮಾರ್ಗದರ್ಶಕ ಮೂಲತತ್ತ್ವವು ನಿಮಗೆ ಸಹಾಯಮಾಡುವುದು?

15. ಒಬ್ಬನು ಯಾವಾಗ ಸ್ವಲ್ಪ ಕುಡಿಯುವುದರಿಂದಲೂ ದೂರವಿರುವುದು ವಿವೇಕಯುತವಾಗಿರಬಹುದು?

16. ಒಂದು ಮದ್ಯಪಾನೀಯವು ನಿಮ್ಮ ಮುಂದೆ ಇಡಲ್ಪಟ್ಟಿರುವಾಗ, ಏನು ಮಾಡಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸಬೇಕು?

17. ಮದ್ಯದ ದುರುಪಯೋಗದ ವಿಷಯದಲ್ಲಿ ನಿಮಗೆ ಸಮಸ್ಯೆ ಇದೆಯೋ ಎಂಬುದನ್ನು ವಿವೇಚಿಸಲು ಯಾವುದು ನಿಮಗೆ ಸಹಾಯಮಾಡಬಲ್ಲದು?

18, 19. ಮದ್ಯಪಾನದ ಮಿತಿಮೀರಿದ ಬಳಕೆಯನ್ನು ನೀವು ಹೇಗೆ ನಿಲ್ಲಿಸಸಾಧ್ಯವಿದೆ?

20. ಮಿತಿಮೀರಿದ ಮದ್ಯಪಾನದ ಸತತ ಸಮಸ್ಯೆಯನ್ನು ನಿಭಾಯಿಸಲಿಕ್ಕಾಗಿ ಯಾವ ಸೂಕ್ತ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳಬೇಕಾಗಿದೆ?

21, 22. ಜೀವಕ್ಕಾಗಿರುವ ಓಟದಲ್ಲಿ ಅಂತಿಮ ರೇಖೆಯನ್ನು ತಲಪುವುದರಿಂದ ಯಾವ ವಿಘ್ನವು ನಮ್ಮನ್ನು ತಡೆಯಬಲ್ಲದು, ಮತ್ತು ನಾವು ಅದರಿಂದ ಹೇಗೆ ದೂರವಿರಬಲ್ಲೆವು?

[ಪುಟ 19ರಲ್ಲಿರುವ ಚಿತ್ರ]

ದ್ರಾಕ್ಷಾರಸವು ‘ಹೃದಯಾನಂದಕರವಾಗಿದೆ’

[ಪುಟ 20ರಲ್ಲಿರುವ ಚಿತ್ರ]

ನಮ್ಮ ವೈಯಕ್ತಿಕ ಮಿತಿಯು ನಮಗೆ ಗೊತ್ತಿರಬೇಕು ಮತ್ತು ಆ ಮಿತಿಯೊಳಗೇ ಉಳಿಯಬೇಕು

[ಪುಟ 21ರಲ್ಲಿರುವ ಚಿತ್ರ]

ಎಷ್ಟನ್ನು ಮಾತ್ರ ಸೇವಿಸಬೇಕು ಎಂಬುದನ್ನು ಮುಂಚಿತವಾಗಿಯೇ ನಿರ್ಧರಿಸಿರಿ

[ಪುಟ 22ರಲ್ಲಿರುವ ಚಿತ್ರ]

ನಿಮ್ಮ ದೌರ್ಬಲ್ಯದ ಕುರಿತು ಕ್ರಮವಾಗಿ ಯೆಹೋವನೊಂದಿಗೆ ಪ್ರಾರ್ಥಿಸಿರಿ

[ಪುಟ 23ರಲ್ಲಿರುವ ಚಿತ್ರ]

ಮದ್ಯದ ಉಪಯೋಗದ ವಿಷಯದಲ್ಲಿ ತಮ್ಮ ಮಕ್ಕಳಿಗೆ ಉಪದೇಶವನ್ನು ನೀಡುವುದು ಹೆತ್ತವರ ಜವಾಬ್ದಾರಿಯಾಗಿದೆ