ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪ್ರೀತಿಭರಿತ ಪರಾಮರಿಕೆಯಲ್ಲಿ ಭರವಸೆಯಿಡುವುದು

ಯೆಹೋವನ ಪ್ರೀತಿಭರಿತ ಪರಾಮರಿಕೆಯಲ್ಲಿ ಭರವಸೆಯಿಡುವುದು

ಜೀವನ ಕಥೆ

ಯೆಹೋವನ ಪ್ರೀತಿಭರಿತ ಪರಾಮರಿಕೆಯಲ್ಲಿ ಭರವಸೆಯಿಡುವುದು

ಆನಾ ಡೆಂಟ್ಸ್‌ ಟರ್‌ಪನ್‌ ಅವರು ಹೇಳಿದಂತೆ

“ನೀನು ಯಾವಾಗಲೂ ‘ಏಕೆ’ ಎಂಬ ಪ್ರಶ್ನೆಯನ್ನೇ ಕೇಳುತ್ತಿರುತ್ತೀ!” ಎಂದು ನನ್ನ ತಾಯಿಯವರು ನಸುನಗುತ್ತಾ ಉದ್ಗರಿಸಿದರು. ಚಿಕ್ಕ ಹುಡುಗಿಯಾಗಿದ್ದ ನಾನು ಯಾವಾಗಲೂ ನನ್ನ ಹೆತ್ತವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದೆ. ನನ್ನ ಕುತೂಹಲದ ವಿಷಯದಲ್ಲಿ ನನ್ನ ತಾಯಿತಂದೆಯರು ನನ್ನನ್ನೆಂದೂ ಬಯ್ಯಲಿಲ್ಲ. ಅದಕ್ಕೆ ಬದಲಾಗಿ, ಅವರು ನನಗೆ ತರ್ಕಬದ್ಧವಾಗಿ ಆಲೋಚಿಸಲು ಮತ್ತು ಒಂದು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಆಧಾರದ ಮೇಲೆ ನನ್ನ ಸ್ವಂತ ನಿರ್ಣಯಗಳನ್ನು ಮಾಡಲು ಕಲಿಸಿದರು. ಆ ತರಬೇತಿಯು ಎಷ್ಟು ಅಮೂಲ್ಯವಾದದ್ದಾಗಿ ಪರಿಣಮಿಸಿತು! ನಾನು 14 ವರ್ಷದವಳಾಗಿದ್ದಾಗ, ಒಂದು ದಿನ ನಾಸಿಗಳು ನನ್ನ ಪ್ರೀತಿಯ ಹೆತ್ತವರನ್ನು ನನ್ನಿಂದ ಕಸಿದುಕೊಂಡರು, ಮತ್ತು ನಾನು ಪುನಃ ಅವರನ್ನೆಂದೂ ನೋಡಲಿಲ್ಲ.

ನನ್ನ ತಂದೆಯಾದ ಆಸ್ಕಾರ್‌ ಡೆಂಟ್ಸ್‌ ಮತ್ತು ನನ್ನ ತಾಯಿಯಾದ ಆನ ಮಾರೀಯ ಅವರು ಸ್ವಿಸ್‌ನ ಗಡಿಯ ಬಳಿಯಿದ್ದ ಲೋರ್‌ಆಕ್‌ ಎಂಬ ಒಂದು ಜರ್ಮನ್‌ ನಗರದಲ್ಲಿ ವಾಸಿಸುತ್ತಿದ್ದರು. ಅವರು ಯುವ ಪ್ರಾಯದವರಾಗಿದ್ದಾಗ ರಾಜಕೀಯದಲ್ಲಿ ತುಂಬ ಕಾರ್ಯಶೀಲರಾಗಿದ್ದರು, ಮತ್ತು ಸಮುದಾಯದಲ್ಲಿನ ಜನರಿಗೆ ಚಿರಪರಿಚಿತರಾಗಿದ್ದರು ಹಾಗೂ ಜನರು ಇವರನ್ನು ಗೌರವಿಸುತ್ತಿದ್ದರು. ಆದರೆ 1922ರಲ್ಲಿ, ಅಂದರೆ ನನ್ನ ಹೆತ್ತವರು ವಿವಾಹವಾಗಿ ಸ್ವಲ್ಪ ಕಾಲಾವಧಿಯ ಬಳಿಕವೇ ರಾಜಕೀಯ ಹಾಗೂ ಜೀವನದಲ್ಲಿನ ತಮ್ಮ ಗುರಿಗಳ ವಿಷಯದಲ್ಲಿ ತಮಗಿದ್ದ ನೋಟವನ್ನು ಬದಲಾಯಿಸಿಕೊಂಡರು. ತಾಯಿಯವರು ಬೈಬಲ್‌ ವಿದ್ಯಾರ್ಥಿ​—⁠ಯೆಹೋವನ ಸಾಕ್ಷಿಗಳನ್ನು ಆಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು​—⁠ಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಲಾರಂಭಿಸಿದರು, ಮತ್ತು ದೇವರ ರಾಜ್ಯವು ಭೂಮಿಗೆ ಶಾಂತಿಯನ್ನು ತರುತ್ತದೆ ಎಂಬ ಸಂಗತಿಯನ್ನು ತಿಳಿದು ರೋಮಾಂಚನಗೊಂಡರು. ಸ್ವಲ್ಪದರಲ್ಲೇ ತಂದೆಯವರು ಸಹ ತಾಯಿಯೊಂದಿಗೆ ಅಧ್ಯಯನದಲ್ಲಿ ಜೊತೆಗೂಡಿದರು, ಮತ್ತು ಅವರು ಬೈಬಲ್‌ ವಿದ್ಯಾರ್ಥಿಗಳ ಕೂಟಗಳಿಗೆ ಹಾಜರಾಗತೊಡಗಿದರು. ಆ ವರ್ಷ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ತಂದೆಯವರು ತಾಯಿಗೆ ದೇವರ ವೀಣೆ (ಇಂಗ್ಲಿಷ್‌) ಎಂಬ ಬೈಬಲ್‌ ಅಧ್ಯಯನ ಪುಸ್ತಕವನ್ನು ಸಹ ಕೊಟ್ಟರು. ನಾನು 1923ರ ಮಾರ್ಚ್‌ 25ರಂದು ಜನಿಸಿದೆ, ಮತ್ತು ನನ್ನ ಹೆತ್ತವರಿಗೆ ನನ್ನನ್ನು ಬಿಟ್ಟು ಬೇರೆ ಮಕ್ಕಳಿರಲಿಲ್ಲ.

ನಮ್ಮ ಕುಟುಂಬ ಜೀವನದ ಎಷ್ಟು ಅಚ್ಚುಮೆಚ್ಚಿನ ಸ್ಮರಣೆಗಳು ನನಗಿವೆ! ಪ್ರಶಾಂತವಾದ ಬ್ಲ್ಯಾಕ್‌ ಫಾರೆಸ್ಟ್‌ನಲ್ಲಿನ ನಮ್ಮ ಬೇಸಗೆಕಾಲದ ಯಾತ್ರೆಗಳು ಮತ್ತು ಗೃಹನಿರ್ವಹಣೆಯ ವಿಷಯದಲ್ಲಿ ತಾಯಿಯವರು ಕಲಿಸುತ್ತಿದ್ದ ಪಾಠಗಳನ್ನು ನಾನೆಂದೂ ಮರೆಯೆ! ಅವರು ಅಡುಗೆಮನೆಯಲ್ಲಿ ನಿಂತುಕೊಂಡು, ತಮ್ಮ ಪುಟ್ಟ ಮಗಳಿಗೆ ಕೆಲಸವನ್ನು ಕಲಿಸುತ್ತಿರುವ ಚಿತ್ರವು ಈಗಲೂ ನನ್ನ ಮನಸ್ಸಿಗೆ ಬರುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನನ್ನ ಹೆತ್ತವರು ನನಗೆ ಯೆಹೋವ ದೇವರನ್ನು ಪ್ರೀತಿಸಲು ಮತ್ತು ಆತನ ಮೇಲೆ ಭರವಸೆಯಿಡಲು ಕಲಿಸಿದರು.

ನಮ್ಮ ಸಭೆಯಲ್ಲಿ ಸುಮಾರು 40 ಮಂದಿ ಕ್ರಿಯಾಶೀಲ ರಾಜ್ಯ ಪ್ರಚಾರಕರಿದ್ದರು. ರಾಜ್ಯದ ಕುರಿತು ಸಾರಲಿಕ್ಕಾಗಿ ಅವಕಾಶಗಳನ್ನು ಮಾಡಿಕೊಳ್ಳುವುದರಲ್ಲಿ ನನ್ನ ಹೆತ್ತವರಿಗೆ ವಿಶೇಷ ಕಲೆಯಿತ್ತು. ಅವರು ಈ ಮುಂಚೆ ಸಾಮುದಾಯಿಕ ಚಟುವಟಿಕೆಗಳಲ್ಲಿ ಒಳಗೂಡುತ್ತಿದ್ದರಾದ್ದರಿಂದ, ಇತರರೊಂದಿಗೆ ವ್ಯವಹರಿಸುವುದು ಅವರಿಗೆ ಬಹಳ ಸುಲಭವಾಗಿತ್ತು, ಮತ್ತು ಜನರು ಸಹ ಅವರನ್ನು ಒಳ್ಳೇ ರೀತಿಯಲ್ಲಿ ಬರಮಾಡಿಕೊಳ್ಳುತ್ತಿದ್ದರು. ಏಳು ವರ್ಷದವಳಾದಾಗ, ನಾನು ಸಹ ಮನೆಯಿಂದ ಮನೆಗೆ ಸಾರಲು ಬಯಸಿದೆ. ಮೊದಲನೆಯ ದಿನ ನನ್ನ ಜೊತೆಯಲ್ಲಿದ್ದವರು ನನಗೆ ಒಂದು ಸಾಹಿತ್ಯವನ್ನು ನೀಡಿ, ಒಂದು ಮನೆಯನ್ನು ತೋರಿಸಿ, “ಅಲ್ಲಿಗೆ ಹೋಗಿ ಇದು ಅವರಿಗೆ ಬೇಕೋ ಎಂದು ಕೇಳಿ ಬಾ” ಎಂದು ಹೇಳಿದರಷ್ಟೆ. ಇಸವಿ 1931ರಲ್ಲಿ ನಾವು ಸ್ವಿಟ್ಸರ್ಲೆಂಡ್‌ನ ಬಾಸೆಲ್‌ನಲ್ಲಿ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನವೊಂದಕ್ಕೆ ಹಾಜರಾದೆವು. ಅಲ್ಲಿ ನನ್ನ ಹೆತ್ತವರು ದೀಕ್ಷಾಸ್ನಾನ ಪಡೆದುಕೊಂಡರು.

ಸಂಕ್ಷೋಭೆಯಿಂದ ನಿರಂಕುಶ ಪ್ರಭುತ್ವಕ್ಕೆ

ಆ ದಿನಗಳಲ್ಲಿ ಜರ್ಮನಿಯು ಬಹಳ ಸಂಕ್ಷೋಭೆಗೆ ತುತ್ತಾಗಿತ್ತು, ಮತ್ತು ಬೇರೆ ಬೇರೆ ರಾಜಕೀಯ ಒಳಪಂಗಡಗಳು ಬೀದಿಗಳಲ್ಲಿ ಹಿಂಸಾತ್ಮಕವಾಗಿ ತಿಕ್ಕಾಟ ನಡೆಸುತ್ತಿದ್ದವು. ಒಂದು ದಿನ ರಾತ್ರಿ, ಪಕ್ಕದ ಮನೆಯಿಂದ ಕೇಳಿಬರುತ್ತಿದ್ದ ಚೀತ್ಕಾರದ ಧ್ವನಿಗೆ ನಾನು ನಿದ್ರೆಯಿಂದ ಎಚ್ಚೆತ್ತೆ. ಇಬ್ಬರು ಹದಿವಯಸ್ಕ ಹುಡುಗರು ತಮ್ಮ ಅಣ್ಣನನ್ನು ಕವಲುಗೋಲಿನಿಂದ ಕೊಲೆಮಾಡಿದ್ದರು; ಅವನ ರಾಜಕೀಯ ದೃಷ್ಟಿಕೋನಗಳನ್ನು ಇವರು ಅಸಮ್ಮತಿಸುತ್ತಿದ್ದದ್ದೇ ಇದಕ್ಕೆ ಕಾರಣವಾಗಿತ್ತು. ಯೆಹೂದ್ಯರ ಕಡೆಗಿನ ಕಡುದ್ವೇಷವು ಸಹ ಅತ್ಯಧಿಕ ಮಟ್ಟಿಗೆ ಹೆಚ್ಚಿತು. ಶಾಲೆಯಲ್ಲಿ ಒಬ್ಬ ಹುಡುಗಿಯು ಕೇವಲ ಯೆಹೂದ್ಯಳಾಗಿದ್ದ ಕಾರಣಕ್ಕಾಗಿಯೇ ಒಂದು ಮೂಲೆಯಲ್ಲಿ ನಿಂತಿರಬೇಕಾಗಿತ್ತು. ಅವಳನ್ನು ನೋಡಿ ನನಗೆ ತುಂಬ ಮರುಕವಾಗುತ್ತಿತ್ತು, ಆದರೆ ಬಹಿಷ್ಕರಿಸಲ್ಪಡುವುದು ಯಾವ ಅನಿಸಿಕೆಯನ್ನು ಉಂಟುಮಾಡುತ್ತದೆ ಎಂಬುದನ್ನು ಅತಿ ಬೇಗನೆ ನಾನೇ ಅನುಭವಿಸಿ ನೋಡಲಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ.

ಇಸವಿ 1933ರ ಜನವರಿ 30ರಂದು ಅಡಾಲ್ಫ್‌ ಹಿಟ್ಲರನು ಜರ್ಮನಿಯ ಪ್ರಧಾನಾಧಿಕಾರಿಯಾದನು. ನಾಸಿಗಳು ನಗರಾಡಳಿತ ಕಚೇರಿಯ ಮೇಲೆ ಸ್ವಾಸ್ತಿಕದ ಬಾವುಟವನ್ನು ಏರಿಸಿದ್ದನ್ನು ನಾವು ಸ್ವಲ್ಪ ಹತ್ತಿರದಿಂದಲೇ ವೀಕ್ಷಿಸಿದೆವು. ಶಾಲೆಯಲ್ಲಿ ನಮ್ಮ ಹುರುಪಿನ ಶಿಕ್ಷಕರು “ಹೇಲ್‌ ಹಿಟ್ಲರ್‌!” ಎಂಬ ಅಭಿನಂದನೆಯನ್ನು ಹೇಳಲು ಕಲಿಸಿದರು. ಆ ದಿನ ಮಧ್ಯಾಹ್ನ ನಾನು ತಂದೆಯವರಿಗೆ ಇದರ ಕುರಿತು ತಿಳಿಸಿದೆ. ಅವರ ಮನಸ್ಸಿಗೆ ತುಂಬ ಕಷ್ಟವಾಯಿತು. ಅವರು ಹೇಳಿದ್ದು: “ಇದು ಸರಿಯಲ್ಲ. ‘ಜಯವಾಗಲಿ’ ಎಂಬುದು ರಕ್ಷಣೆಯನ್ನು ಅರ್ಥೈಸುತ್ತದೆ. ನಾವು ‘ಹೇಲ್‌ ಹಿಟ್ಲರ್‌’ ಎಂದು ಹೇಳುವಲ್ಲಿ, ಇದು ನಾವು ಯೆಹೋವನಿಗೆ ಬದಲಾಗಿ ಅವನೇ ರಕ್ಷಣೆಗೆ ಕಾರಣನೆಂದು ಒಪ್ಪಿಕೊಳ್ಳುವುದನ್ನು ಅರ್ಥೈಸುತ್ತದೆ. ಇದು ಸರಿಯೆಂದು ನನಗನಿಸುವುದಿಲ್ಲ, ಆದರೆ ನೀನೇನು ಮಾಡಬೇಕು ಎಂಬುದನ್ನು ಸ್ವತಃ ನೀನೇ ನಿರ್ಧರಿಸು.”

ನಾನು ಹಿಟ್ಲರ್‌ಗೆ ಸಲ್ಯೂಟ್‌ಮಾಡಬಾರದೆಂಬ ನಿರ್ಧಾರಕ್ಕೆ ಬಂದದ್ದರಿಂದ, ನನ್ನ ಸಹಪಾಠಿಗಳು ನನ್ನನ್ನು ಸಮಾಜದಿಂದ ಹೊರಹಾಕಲ್ಪಟ್ಟ ವ್ಯಕ್ತಿಯಂತೆ ಉಪಚರಿಸತೊಡಗಿದರು. ಕೆಲವು ಹುಡುಗರು ಶಿಕ್ಷಕರ ಕಣ್ತಪ್ಪಿಸಿ ನನಗೆ ಹೊಡೆಯುತ್ತಿದ್ದರು. ಕಾಲಕ್ರಮೇಣ ಅವರು ನನ್ನನ್ನು ನನ್ನಷ್ಟಕ್ಕೇ ಬಿಟ್ಟುಬಿಟ್ಟರು, ಆದರೆ ನನ್ನೊಂದಿಗೆ ಆಟವನ್ನು ಸಹ ಆಡಬಾರದೆಂದು ನಮ್ಮ ತಂದೆಯರು ನಮಗೆ ಹೇಳಿದ್ದಾರೆ ಎಂದು ನನ್ನ ಸ್ನೇಹಿತರು ತಿಳಿಸಿದರು. ನನ್ನನ್ನು ತುಂಬ ಅಪಾಯಕರ ವ್ಯಕ್ತಿಯಾಗಿ ಪರಿಗಣಿಸಲಾಗಿತ್ತು.

ನಾಸಿಗಳು ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳು ಕಳೆದ ಬಳಿಕ, ಯೆಹೋವನ ಸಾಕ್ಷಿಗಳು ಸರಕಾರಕ್ಕೆ ಅಪಾಯವನ್ನುಂಟುಮಾಡುತ್ತಾರೆ ಎಂದು ಅವರ ಮೇಲೆ ನಿಷೇಧವನ್ನು ತಂದೊಡ್ಡಿದರು. ನಾಸಿ ಖಾಸಗಿ ಸಿಪಾಯಿಗಳು ಮಾಗ್ಡಬುರ್ಕ್‌ನಲ್ಲಿದ್ದ ಆಫೀಸನ್ನು ಮುಚ್ಚಿಸಿಬಿಟ್ಟರು ಮತ್ತು ನಮ್ಮ ಕೂಟಗಳ ಮೇಲೆ ನಿಷೇಧ ಒಡ್ಡಿದರು. ನಾವು ಗಡಿಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ, ಗಡಿಯನ್ನು ದಾಟಿ ಬಾಸೆಲ್‌ಗೆ ಹೋಗಲಿಕ್ಕಾಗಿ ತಂದೆಯವರು ಪರವಾನಗಿಯನ್ನು ಪಡೆದರು ಮತ್ತು ಅಲ್ಲಿ ನಾವು ಭಾನುವಾರದ ಕೂಟಗಳಿಗೆ ಹಾಜರಾಗುತ್ತಿದ್ದೆವು. ಭವಿಷ್ಯತ್ತನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುವಂತೆ, ಜರ್ಮನಿಯಲ್ಲಿರುವ ನಮ್ಮ ಸಹೋದರರು ಸಹ ಇಂಥ ಆಧ್ಯಾತ್ಮಿಕ ಆಹಾರವನ್ನು ಪಡೆಯಬೇಕೆಂಬ ಹಾರೈಕೆ ತನಗಿದೆ ಎಂದು ತಂದೆಯವರು ಅನೇಕಬಾರಿ ಹೇಳುತ್ತಿದ್ದರು.

ಅಪಾಯಕರ ತಿರುಗಾಟಗಳು

ಮಾಗ್ಡಬುರ್ಕ್‌ ಆಫೀಸನ್ನು ಮುಚ್ಚಿದ ಬಳಿಕ, ಅಲ್ಲಿನ ಮಾಜಿ ಸಿಬ್ಬಂದಿಯಾಗಿದ್ದ ಯೂಲಿಯೂಸ್‌ ರಿಫಲ್‌ ಗುಪ್ತವಾದ ಸಾರುವ ಕೆಲಸವನ್ನು ಸಂಘಟಿಸಲಿಕ್ಕಾಗಿ ತನ್ನ ಸ್ವಂತ ಸ್ಥಳವಾಗಿದ್ದ ಲೋರ್‌ಆಕ್‌ಗೆ ಬಂದನು. ತಂದೆಯವರು ಆ ಕೂಡಲೆ ಸಹಾಯ ಹಸ್ತವನ್ನು ಚಾಚಿದರು. ಸ್ವಿಟ್ಸರ್ಲೆಂಡ್‌ನಿಂದ ಜರ್ಮನಿಗೆ ಬೈಬಲ್‌ ಸಾಹಿತ್ಯವನ್ನು ತರುವುದರಲ್ಲಿ ಸಹಾಯಮಾಡಲು ಒಪ್ಪಿಕೊಂಡಿದ್ದೇನೆ ಎಂದು ಅವರು ನನಗೂ ತಾಯಿಯವರಿಗೂ ವಿವರಿಸಿದರು. ಇದು ಅತ್ಯಂತ ಅಪಾಯಕರ ಕೆಲಸವಾಗಿದೆ ಮತ್ತು ತಾನು ಯಾವಾಗ ಬೇಕಾದರೂ ಬಂಧಿಸಲ್ಪಡಬಹುದು ಎಂದು ಅವರು ಹೇಳಿದರು. ಈ ಕೆಲಸವು ನಮಗೂ ಅಪಾಯಕರವಾಗಿತ್ತಾದ್ದರಿಂದ, ಇದರಲ್ಲಿ ನಾವು ಒತ್ತಾಯಪೂರ್ವಕವಾಗಿ ಒಳಗೂಡಿಸಲ್ಪಡಬಾರದು ಎಂಬುದು ಅವರ ಇಚ್ಛೆಯಾಗಿತ್ತು. ತತ್‌ಕ್ಷಣವೇ ನನ್ನ ತಾಯಿಯವರು “ನಾನು ನಿಮ್ಮೊಂದಿಗಿದ್ದೇನೆ” ಎಂದು ಹೇಳಿದರು. ಅವರಿಬ್ಬರೂ ನನ್ನತ್ತ ನೋಡಿದಾಗ, “ನಾನು ಸಹ ನಿಮ್ಮೊಂದಿಗಿದ್ದೇನೆ” ಎಂದು ನಾನು ಹೇಳಿದೆ.

ತಾಯಿಯವರು ಕಾವಲಿನಬುರುಜು ಪತ್ರಿಕೆಯ ಗಾತ್ರದ ಒಂದು ಪರ್ಸನ್ನು ಕ್ರೋಷಾದಲ್ಲಿ ಹೆಣೆದು, ಆ ಪರ್ಸಿನೊಳಗೆ ಸಾಹಿತ್ಯವನ್ನು ತುಂಬಿಸಿ, ತದನಂತರ ಅದರ ತುದಿಯನ್ನು ಕ್ರೋಷಾದಲ್ಲಿ ಹೊಲಿದುಬಿಡುತ್ತಿದ್ದರು. ತಂದೆಯವರ ಉಡುಪುಗಳಲ್ಲಿ ಮತ್ತು ನಮ್ಮ ಎರಡು ಲಂಗಗಳಲ್ಲಿ ಅವರು ಗುಪ್ತವಾದ ಜೇಬುಗಳನ್ನು ಮಾಡಿದ್ದರು. ಈ ಲಂಗಗಳಲ್ಲಿ ನಾವು ಚಿಕ್ಕ ಬೈಬಲ್‌ ಅಧ್ಯಯನ ಸಹಾಯಕಗಳನ್ನು ತುಂಬ ಹುಷಾರಾಗಿ ಸಾಗಿಸಸಾಧ್ಯವಿತ್ತು. ಪ್ರತಿ ಬಾರಿ ನಮ್ಮ ಗುಪ್ತ ನಿಕ್ಷೇಪವನ್ನು ನಾವು ಮನೆಗೆ ತರುತ್ತಿದ್ದಾಗ ನಾವು ಬಿಡುಗಡೆಯ ನಿಟ್ಟುಸಿರು ಬಿಡುತ್ತಿದ್ದೆವು ಮತ್ತು ಯೆಹೋವನಿಗೆ ಉಪಕಾರವನ್ನು ಸಲ್ಲಿಸುತ್ತಿದ್ದೆವು. ನಮ್ಮ ಮನೆಯ ಅಟ್ಟದಲ್ಲಿ ನಾವು ಸಾಹಿತ್ಯವನ್ನು ಬಚ್ಚಿಡುತ್ತಿದ್ದೆವು.

ಆರಂಭದಲ್ಲಿ ನಾಸಿಗಳು ನಮ್ಮ ವಿಷಯದಲ್ಲಿ ಸ್ವಲ್ಪವೂ ಶಂಕಿಸಲಿಲ್ಲ. ಅವರು ನಮ್ಮನ್ನೆಂದೂ ಪ್ರಶ್ನಿಸಲಿಲ್ಲ ಇಲ್ಲವೆ ನಮ್ಮ ಮನೆಯನ್ನು ತಲಾಷುಮಾಡಲಿಲ್ಲ. ಆದರೂ, ಏನಾದರೂ ತೊಂದರೆಯಾದಲ್ಲಿ ನಮ್ಮ ಆಧ್ಯಾತ್ಮಿಕ ಸಹೋದರರಿಗೆ ಎಚ್ಚರಿಕೆ ನೀಡಲಿಕ್ಕಾಗಿ ನಾವು ಒಂದು ಕೋಡ್‌ ಅನ್ನು ಉಪಯೋಗಿಸಲು ನಿರ್ಧರಿಸಿದೆವು. ಈ ಕೋಡ್‌ ಸಂಖ್ಯೆಯು 4711 ಆಗಿದ್ದು, ಪ್ರಸಿದ್ಧ ಪರಿಮಳ ದ್ರವ್ಯದ ಹೆಸರಾಗಿತ್ತು. ಒಂದುವೇಳೆ ನಮ್ಮ ಮನೆಗೆ ಬರುವುದು ಅಪಾಯಕರವಾಗಿ ಕಂಡುಬಂದಲ್ಲಿ, ನಾವು ಹೇಗಾದರೂ ಆ ಸಂಖ್ಯೆಯನ್ನು ಉಪಯೋಗಿಸಿ ಸಹೋದರರನ್ನು ಎಚ್ಚರಿಸುತ್ತಿದ್ದೆವು. ನಮ್ಮ ಕಟ್ಟಡವನ್ನು ಪ್ರವೇಶಿಸುವುದಕ್ಕೆ ಮುಂಚೆ, ಮನೆಯ ಕೊಠಡಿಯ ಕಿಟಕಿಗಳನ್ನು ನೋಡುವಂತೆ ಸಹ ತಂದೆಯವರು ಅವರಿಗೆ ತಿಳಿಸಿದರು. ಒಂದುವೇಳೆ ಎಡಗಡೆಯ ಕಿಟಕಿಯು ತೆರೆದಿಡಲ್ಪಟ್ಟಿರುವಲ್ಲಿ, ಏನೋ ಸಮಸ್ಯೆಯಾಗಿದೆ ಎಂಬುದನ್ನು ಇದು ಅರ್ಥೈಸುತ್ತಿತ್ತು, ಮತ್ತು ಅವರು ದೂರವೇ ಉಳಿಯಬೇಕಾಗಿತ್ತು.

ಇಸವಿ 1936 ಮತ್ತು 1937ರಲ್ಲಿ ಗೆಸ್ಟಪೊಗಳು ಜನರನ್ನು ಸಾಮೂಹಿಕವಾಗಿ ಬಂಧಿಸಿದರು ಹಾಗೂ ಸಾವಿರಾರು ಮಂದಿ ಸಾಕ್ಷಿಗಳನ್ನು ಸೆರೆಮನೆಗಳಿಗೆ ಮತ್ತು ಕೂಟ ಶಿಬಿರಗಳಿಗೆ ಹಾಕಿದರು. ಇಲ್ಲಿ ಸಾಕ್ಷಿಗಳು ಅತ್ಯಂತ ಕ್ರೂರವಾದ ಮತ್ತು ಹಿಂಸಾತ್ಮಕವಾದ ದುರುಪಚಾರಕ್ಕೆ ತುತ್ತಾದರು. ಸ್ವಿಟ್ಸರ್ಲೆಂಡ್‌ನ ಬರ್ನ್‌ನಲ್ಲಿದ್ದ ಬ್ರಾಂಚ್‌ ಆಫೀಸು, ಕೂಟ ಶಿಬಿರಗಳಲ್ಲಿ ನಡೆಯುತ್ತಿದ್ದ ಸಂಭವಗಳ ವಿಸ್ತೃತ ವರದಿಗಳನ್ನು ಸಂಗ್ರಹಿಸಲಾರಂಭಿಸಿತು. ಈ ವರದಿಗಳಲ್ಲಿ ಕೆಲವು ಕೂಟ ಶಿಬಿರಗಳಿಂದ ಗುಪ್ತವಾಗಿ ಸಾಗಿಸಲ್ಪಟ್ಟು, ನಾಸಿ ದುಷ್ಕೃತ್ಯಗಳನ್ನು ಬಯಲುಪಡಿಸುವ ಕ್ರೋಯ್‌ಟ್ಸ್‌ಟ್ಸೂಗ್‌ ಗೇಗನ್‌ ಡಾಸ್‌ ಕ್ರಿಸ್ಟನ್‌ಟೂಮ್‌ (ಕ್ರೈಸ್ತಮತದ ವಿರುದ್ಧ ಧಾರ್ಮಿಕಯುದ್ಧ) ಎಂದು ಕರೆಯಲ್ಪಡುವ ಪುಸ್ತಕವಾಗಿ ಪ್ರಕಟಿಸಲ್ಪಟ್ಟಿತು. ನಾವು ಈ ಗುಪ್ತ ವರದಿಗಳನ್ನು ಗಡಿಪ್ರದೇಶದಿಂದ ಬಾಸೆಲ್‌ಗೆ ಕೊಂಡೊಯ್ಯುವ ಅಪಾಯಕರ ಕೆಲಸವನ್ನು ವಹಿಸಿಕೊಂಡೆವು. ನಾವು ಈ ಕಾನೂನುಬಾಹಿರ ದಸ್ತಾವೇಜುಗಳೊಂದಿಗೆ ನಾಸಿಗಳ ಕೈಗೆ ಸಿಕ್ಕಿಬೀಳುತ್ತಿದ್ದಲ್ಲಿ, ಆ ಕೂಡಲೆ ನಾವು ಸೆರೆಮನೆಯಲ್ಲಿ ಹಾಕಲ್ಪಡಸಾಧ್ಯವಿತ್ತು. ನಮ್ಮ ಸಹೋದರರು ಅನುಭವಿಸುತ್ತಿದ್ದ ಕಷ್ಟದ ಕುರಿತು ಓದಿ ನಾನು ತುಂಬ ಅತ್ತೆ. ಆದರೂ, ನನಗೆ ಭಯವೆನಿಸಲಿಲ್ಲ. ಯೆಹೋವನೂ ನನ್ನ ಆಪ್ತ ಮಿತ್ರರಾಗಿರುವ ನನ್ನ ಹೆತ್ತವರೂ ನನ್ನನ್ನು ನೋಡಿಕೊಳ್ಳುವರು ಎಂಬ ಭರವಸೆ ನನಗಿತ್ತು.

ಹದಿನಾಲ್ಕರ ಪ್ರಾಯದಲ್ಲಿ ನಾನು ಶಾಲೆಯಿಂದ ಉತ್ತೀರ್ಣಳಾದೆ, ಮತ್ತು ಒಂದು ಹಾರ್ಡ್‌ವೇರ್‌ ಅಂಗಡಿಯಲ್ಲಿ ಗುಮಾಸ್ತೆಯಾಗಿ ಕೆಲಸಮಾಡತೊಡಗಿದೆ. ಸಾಮಾನ್ಯವಾಗಿ ನಾವು ಶನಿವಾರ ಮಧ್ಯಾಹ್ನ ಅಥವಾ ಭಾನುವಾರದಂದು ತಂದೆಯವರಿಗೆ ಕೆಲಸದಿಂದ ಬಿಡುವು ಸಿಗುತ್ತಿದ್ದಾಗ ನಮ್ಮ ಸಾಹಿತ್ಯ ರವಾನೆಯ (ಕುರಿಯರ್‌) ಕೆಲಸಗಳನ್ನು ಮಾಡುತ್ತಿದ್ದೆವು. ಸರಾಸರಿ ಪ್ರತಿ ಎರಡು ವಾರಗಳಿಗೆ ಒಮ್ಮೆ ನಾವು ಹೋಗುತ್ತಿದ್ದೆವು. ವಾರಾಂತ್ಯದ ತಿರುಗಾಟಕ್ಕಾಗಿ ಹೊರಗೆ ಹೋಗುವ ಇತರ ಕುಟುಂಬಗಳಂತೆಯೇ ನಾವು ಕಂಡುಬರುತ್ತಿದ್ದೆವು, ಮತ್ತು ಸುಮಾರು ನಾಲ್ಕು ವರ್ಷಗಳ ವರೆಗೆ ಗಡಿಪ್ರದೇಶದ ಸಿಪಾಯಿಗಳು ನಮ್ಮನ್ನು ತಡೆಯಲಿಲ್ಲ ಅಥವಾ ನಮ್ಮನ್ನು ತಲಾಷು ಮಾಡಲಿಲ್ಲ​—⁠ಇದು 1938ರ ಫೆಬ್ರವರಿ ತಿಂಗಳಿನ ಒಂದು ದಿನದ ತನಕ ಮುಂದುವರಿಯಿತು.

ಸಿಕ್ಕಿಹಾಕಿಕೊಂಡದ್ದು!

ಬಾಸೆಲ್‌ನ ಹತ್ತಿರ ನಾವು ಸಾಹಿತ್ಯವನ್ನು ಪಡೆದುಕೊಳ್ಳುತ್ತಿದ್ದ ಸ್ಥಳಕ್ಕೆ ಆಗಮಿಸಿದಾಗ ಮತ್ತು ನಮಗಾಗಿ ಕಾದಿರಿಸಲ್ಪಟ್ಟಿದ್ದ ಸಾಹಿತ್ಯದ ರಾಶಿಯನ್ನು ನೋಡಿದಾಗ ನನ್ನ ತಂದೆಯ ಮುಖದಲ್ಲಿ ವ್ಯಕ್ತವಾದ ಭಾವನೆಯನ್ನು ನಾನೆಂದೂ ಮರೆಯಲಾರೆ. ಸಾಹಿತ್ಯ ರವಾನಿಸುವ ಇನ್ನೊಂದು ಕುಟುಂಬವು ಬಂಧಿಸಲ್ಪಟ್ಟಿದ್ದರಿಂದ, ಇನ್ನೂ ಹೆಚ್ಚಿನ ಪುಸ್ತಕಗಳನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲೆ ಬಿದ್ದಿತು. ಗಡಿಪ್ರದೇಶದಲ್ಲಿ ಕಸ್ಟಮ್ಸ್‌ ಅಧಿಕಾರಿಯು ನಮ್ಮ ಮೇಲೆ ಸಂಶಯಾಸ್ಪದ ದೃಷ್ಟಿ ಬೀರಿದನು ಹಾಗೂ ನಮ್ಮನ್ನು ತಲಾಷು ಮಾಡುವಂತೆ ಆಜ್ಞೆಯನ್ನಿತ್ತನು. ಪುಸ್ತಕಗಳು ಕಣ್ಣಿಗೆ ಬಿದ್ದ ಬಳಿಕ ಅವನು ಬಂದೂಕನ್ನು ನಮಗೆ ಗುರಿಯಾಗಿಟ್ಟು, ಕಾಯುತ್ತಿದ್ದ ಪೊಲೀಸ್‌ ಕಾರುಗಳ ಕಡೆಗೆ ನಮ್ಮನ್ನು ಕರೆದೊಯ್ದನು. ಅಧಿಕಾರಿಗಳು ನಮ್ಮನ್ನು ವಾಹನದಲ್ಲಿ ಕರೆದೊಯ್ಯುತ್ತಿರುವಾಗ, ತಂದೆಯವರು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು, “ನೀನು ದ್ರೋಹಿಯಾಗಬೇಡ. ಅವರಿಗೆ ಯಾರ ಹೆಸರನ್ನೂ ಬಯಲುಪಡಿಸಬೇಡ!” ಎಂದು ಕಿವಿಯಲ್ಲಿ ಪಿಸುಗುಟ್ಟಿದರು. “ಖಂಡಿತ ಇಲ್ಲ” ಎಂಬ ಆಶ್ವಾಸನೆಯನ್ನು ನಾನು ಅವರಿಗೆ ನೀಡಿದೆ. ನಾವು ಲೋರ್‌ಆಕ್‌ಗೆ ಆಗಮಿಸಿದಾಗ, ಆ ಅಧಿಕಾರಿಗಳು ನನ್ನ ಪ್ರೀತಿಯ ತಂದೆಯನ್ನು ನನ್ನಿಂದ ಅಗಲಿಸಿದರು. ತಂದೆಯವರು ಒಳಗೆ ಹೋಗಿ ಸೆರೆಮನೆಯ ದ್ವಾರಗಳು ಮುಚ್ಚಿಕೊಳ್ಳುತ್ತಿರುವಾಗ, ಕೊನೆಯ ಬಾರಿ ನಾನು ಅವರನ್ನು ನೋಡಿದೆ.

ನಾಲ್ಕು ತಾಸುಗಳ ವರೆಗೆ ನಾಲ್ಕು ಮಂದಿ ಗೆಸ್ಟಪೊಗಳು ನನ್ನ ವಿಚಾರಣೆ ನಡೆಸಿದರು. ಇತರ ಸಾಕ್ಷಿಗಳ ಹೆಸರುಗಳನ್ನು ಮತ್ತು ವಿಳಾಸಗಳನ್ನು ತಿಳಿಸುವಂತೆ ನನ್ನನ್ನು ಒತ್ತಾಯಿಸಿದರು. ನಾನು ನಿರಾಕರಿಸಿದಾಗ, ಅಧಿಕಾರಿಗಳಲ್ಲಿ ಒಬ್ಬನು ಕೋಪೋದ್ರಿಕ್ತನಾದನು ಮತ್ತು “ನಿನ್ನ ಬಾಯಿ ಬಿಡಿಸಲು ನಮ್ಮ ಬಳಿ ಬೇರೆ ಅಸ್ತ್ರಗಳಿವೆ!” ಎಂದು ಬೆದರಿಸಿದನು. ನಾನು ಯಾವ ವಿಷಯದ ಬಗ್ಗೆಯೂ ಬಾಯಿ ಬಿಡಲಿಲ್ಲ. ಆ ಬಳಿಕ ಅವರು ತಾಯಿಯನ್ನೂ ನನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ, ಮೊದಲ ಬಾರಿಗೆ ಮನೆಯ ತಲಾಷು ಮಾಡಿದರು. ಆಮೇಲೆ ನನ್ನ ತಾಯಿಯನ್ನು ಕೈದುಮಾಡಿ, ನನ್ನನ್ನು ದೊಡ್ಡಮ್ಮನ ಮನೆಗೆ ಕಳುಹಿಸಿದರು ಮತ್ತು ಅವರ ಕೈಗೆ ನನ್ನನ್ನು ಒಪ್ಪಿಸಿದರು; ದೊಡ್ಡಮ್ಮ ಸಹ ಒಬ್ಬ ಸಾಕ್ಷಿಯಾಗಿದ್ದಾರೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ನನಗೆ ಕೆಲಸಕ್ಕೆ ಹೋಗುವ ಅನುಮತಿಯಿತ್ತಾದರೂ, ನನ್ನ ಪ್ರತಿಯೊಂದು ಚಲನವಲನವನ್ನು ಅವಲೋಕಿಸಲಿಕ್ಕಾಗಿ ನಮ್ಮ ಮನೆಯ ಮುಂದೆ ಕಾರ್‌ನಲ್ಲಿ ನಾಲ್ಕು ಮಂದಿ ಗೆಸ್ಟಪೊಗಳು ಕುಳಿತಿರುತ್ತಿದ್ದರು ಮತ್ತು ಒಬ್ಬ ಪೊಲೀಸನು ಬೀದಿಯ ಅಕ್ಕಪಕ್ಕಗಳಲ್ಲಿ ಗಸ್ತು ತಿರುಗುತ್ತಿದ್ದನು.

ಕೆಲವು ದಿನಗಳ ತರುವಾಯ, ಮಧ್ಯಾಹ್ನದ ಊಟದ ಸಮಯದಲ್ಲಿ ನಾನು ಮನೆಯಿಂದ ಹೊರಗೆ ಬರುತ್ತಿದ್ದಾಗ, ತನ್ನ ಸೈಕಲ್‌ನಲ್ಲಿ ನನ್ನ ಕಡೆಗೆ ಬರುತ್ತಿದ್ದ ಒಬ್ಬ ಸಹೋದರಿಯನ್ನು ನಾನು ನೋಡಿದೆ. ಅವಳು ನನ್ನ ಹತ್ತಿರ ಬಂದಾಗ, ಒಂದು ಚಿಕ್ಕ ಚೀಟಿಯನ್ನು ನನ್ನ ಕಡೆಗೆ ಎಸೆದದ್ದು ನನ್ನ ಕಣ್ಣಿಗೆ ಬಿತ್ತು. ನಾನು ಆ ಚೀಟಿಯನ್ನು ಹಿಡಿದುಕೊಳ್ಳುತ್ತಿರುವಾಗ, ಇದನ್ನೆಲ್ಲ ಗೆಸ್ಟಪೊಗಳು ನೋಡುತ್ತಿದ್ದಾರೋ ಎಂಬುದನ್ನು ಗಮನಿಸಲು ಹಿಂದಿರುಗಿ ನೋಡಿದೆ. ನನ್ನ ಆಶ್ಚರ್ಯಕ್ಕೆ, ಆ ಕ್ಷಣದಲ್ಲಿ ಅವರೆಲ್ಲರೂ ತಲೆಯನ್ನು ಹಿಂದೆ ಬಾಗಿಸಿ ನಗುತ್ತಿದ್ದರು!

ನಾನು ಮಧ್ಯಾಹ್ನ ಆ ಸಹೋದರಿಯ ಹೆತ್ತವರ ಸ್ಥಳಕ್ಕೆ ಹೋಗುವಂತೆ ಚೀಟಿಯಲ್ಲಿ ತಿಳಿಸಲಾಗಿತ್ತು. ಆದರೆ ಗೆಸ್ಟಪೊಗಳು ನನಗೆ ಕಾವಲಿದ್ದದರಿಂದ, ಅವಳ ಹೆತ್ತವರನ್ನೂ ದೋಷಾರೋಪಣೆಯಲ್ಲಿ ಸಿಕ್ಕಿಸುವ ಅಪಾಯಕ್ಕೆ ನಾನು ಹೇಗೆ ತಲೆಯೊಡ್ಡಸಾಧ್ಯವಿತ್ತು? ನಾನು ಕಾರ್‌ನಲ್ಲಿದ್ದ ಗೆಸ್ಟಪೊ ಏಜೆಂಟ್‌ಗಳ ಕಡೆಗೆ ತದನಂತರ ಬೀದಿಯಲ್ಲಿ ಅತ್ತಿಂದಿತ್ತ ಗಸ್ತು ತಿರುಗುತ್ತಿದ್ದ ಪೊಲೀಸನ ಕಡೆಗೆ ನೋಡಿದೆ. ಏನು ಮಾಡಬೇಕು ಎಂಬುದೇ ನನಗೆ ತೋಚಲಿಲ್ಲ, ಮತ್ತು ಸಹಾಯಕ್ಕಾಗಿ ನಾನು ಯೆಹೋವನಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದೆ. ಇದ್ದಕ್ಕಿದ್ದಂತೆ, ಆ ಪೊಲೀಸನು ಗೆಸ್ಟಪೊಗಳ ಕಾರ್‌ನ ಕಡೆಗೆ ಹೋಗಿ ಅವರೊಂದಿಗೆ ಮಾತಾಡಿದನು. ಆ ಬಳಿಕ ಅವನೂ ಅದೇ ಕಾರನ್ನು ಹತ್ತಿದನು ಮತ್ತು ಅವರೆಲ್ಲರೂ ಎಲ್ಲಿಗೋ ಹೊರಟುಹೋದರು!

ಅಷ್ಟರಲ್ಲೇ ನನ್ನ ದೊಡ್ಡಮ್ಮನವರು ಮೂಲೆಯಿಂದ ನಡೆಯುತ್ತಾ ಬಂದರು. ಅಷ್ಟರಲ್ಲಾಗಲೇ ಮಧ್ಯಾಹ್ನವಾಗಿ ಸ್ವಲ್ಪ ಸಮಯವಾಗಿತ್ತು. ಅವರು ಚೀಟಿಯನ್ನು ಓದಿ, ಅದರಲ್ಲಿ ತಿಳಿಸಲ್ಪಟ್ಟಿರುವಂತೆ ಆ ಮನೆಗೆ ನಾವು ಹೋಗಬೇಕೆಂದು ನೆನಸಿದರು; ಸಹೋದರರು ನನ್ನನ್ನು ಸ್ವಿಟ್ಸರ್ಲೆಂಡ್‌ಗೆ ಕರೆದೊಯ್ಯಲು ಏರ್ಪಾಡನ್ನು ಮಾಡಿದ್ದಾರೆಂದು ನಾವು ಊಹಿಸಿದೆವು. ನಾವು ಅಲ್ಲಿಗೆ ಹೋದಾಗ, ಆ ಕುಟುಂಬವು ನನ್ನನ್ನು ಹೈನ್‌ರಿಕ್‌ ರೀಫ್‌ ಎಂಬ ಒಬ್ಬ ಅಪರಿಚಿತನಿಗೆ ಪರಿಚಯಿಸಿತು. ನಾನು ಸುರಕ್ಷಿತವಾಗಿ ಅಲ್ಲಿಗೆ ಬಂದು ಮುಟ್ಟಿದ್ದು ಅವನಿಗೆ ಸಂತೋಷ ನೀಡಿತೆಂದೂ ನಾನು ಸ್ವಿಟ್ಸರ್ಲೆಂಡ್‌ಗೆ ತಪ್ಪಿಸಿಕೊಂಡುಹೋಗಲಿಕ್ಕಾಗಿ ನನಗೆ ಸಹಾಯಮಾಡಲು ಅವನು ಬಂದಿದ್ದಾನೆಂದೂ ಆ ವ್ಯಕ್ತಿಯು ನನಗೆ ಹೇಳಿದನು. ಅರ್ಧ ತಾಸಿನೊಳಗೆ ಒಂದು ಅರಣ್ಯಪ್ರದೇಶದಲ್ಲಿ ತನ್ನನ್ನು ಸಂಧಿಸುವಂತೆ ಅವನು ಹೇಳಿದನು.

ದೇಶಭ್ರಷ್ಟ ಜೀವನ

ನಾನು ಸಹೋದರ ರೀಫ್‌ರನ್ನು ಸಂಧಿಸಿದಾಗ, ಕಣ್ಣೀರು ಕಪೋಲಗಳ ಮೇಲೆ ಧಾರಾಕಾರವಾಗಿ ಹರಿಯುತ್ತಿತ್ತು. ನನ್ನ ಹೆತ್ತವರನ್ನು ಬಿಟ್ಟುಹೋಗುವ ವಿಚಾರವೇ ನನ್ನ ಎದೆಗುಂದಿಸಿತು. ಎಲ್ಲವೂ ಅದೆಷ್ಟು ಬೇಗನೆ ನಡೆದುಹೋಗಿತ್ತು. ಕೆಲವು ಕ್ಷಣಗಳ ಚಿಂತಾಕುಲ ಆಲೋಚನೆಯ ಬಳಿಕ ನಾವು ಯಾತ್ರಿಕರ ಒಂದು ಗುಂಪಿನೊಂದಿಗೆ ಜೊತೆಗೂಡಿ ಸುರಕ್ಷಿತವಾಗಿ ಸ್ವಿಸ್‌ ದೇಶದ ಗಡಿಯನ್ನು ದಾಟಿದೆವು.

ನಾನು ಬರ್ನ್‌ನಲ್ಲಿದ್ದ ಬ್ರಾಂಚ್‌ ಆಫೀಸಿಗೆ ಬಂದಾಗ, ಇಲ್ಲಿನ ಸಹೋದರರೇ ನಾನು ತಪ್ಪಿಸಿಕೊಳ್ಳುವಂತೆ ಏರ್ಪಾಡನ್ನು ಮಾಡಿದ್ದರು ಎಂಬುದು ನನಗೆ ತಿಳಿದುಬಂತು. ಅವರ ದಯೆಯಿಂದ ನನಗೆ ಇರಲು ಜಾಗ ಸಿಕ್ಕಿತು. ನಾನು ಅಡುಗೆಮನೆಯಲ್ಲಿ ಕೆಲಸಮಾಡುತ್ತಿದ್ದೆ, ಇದು ನನಗೆ ತುಂಬ ಇಷ್ಟಕರವಾಗಿತ್ತು. ಆದರೆ ಎರಡು ವರ್ಷಗಳ ಸೆರೆವಾಸದ ಶಿಕ್ಷೆಗೆ ತುತ್ತಾಗಿದ್ದ ನನ್ನ ಹೆತ್ತವರಿಗೆ ಏನಾಗುತ್ತದೆ ಎಂಬುದರ ಕುರಿತು ಸ್ವಲ್ಪವೂ ಸುಳಿವಿಲ್ಲದೆ ದೇಶಭ್ರಷ್ಟಳಾಗಿ ಜೀವಿಸುವುದು ಎಷ್ಟು ಕಷ್ಟಕರವಾಗಿತ್ತು! ಕೆಲವೊಮ್ಮೆ ನಾನು ದುಃಖ ಹಾಗೂ ಚಿಂತೆಯಲ್ಲಿ ಮುಳುಗಿಬಿಡುತ್ತಿದ್ದೆ ಮತ್ತು ಸ್ನಾನದಮನೆಯಲ್ಲಿ ಚಿಲಕಹಾಕಿಕೊಂಡು ತುಂಬ ಅಳುತ್ತಿದ್ದೆ. ಆದರೆ ನಾನು ಕ್ರಮವಾಗಿ ನನ್ನ ಹೆತ್ತವರೊಂದಿಗೆ ಪತ್ರ ವ್ಯವಹಾರವನ್ನು ನಡೆಸಲು ಶಕ್ತಳಾಗಿದ್ದೆ, ಮತ್ತು ಅವರು ನಿಷ್ಠಾವಂತಳಾಗಿ ಉಳಿಯುವಂತೆ ನನ್ನನ್ನು ಉತ್ತೇಜಿಸಿದರು.

ನನ್ನ ಹೆತ್ತವರ ನಂಬಿಕೆಯ ಮಾದರಿಯಿಂದ ಪ್ರಚೋದಿತಳಾದ ನಾನು, ಯೆಹೋವನಿಗೆ ನನ್ನ ಜೀವಿತವನ್ನು ಸಮರ್ಪಿಸಿಕೊಂಡೆ ಮತ್ತು 1938ರ ಜುಲೈ 25ರಂದು ದೀಕ್ಷಾಸ್ನಾನ ಪಡೆದುಕೊಂಡೆ. ನಾನು ಬೆತೆಲ್‌ನಲ್ಲಿ ಒಂದು ವರ್ಷವಿದ್ದ ಬಳಿಕ, ಬೆತೆಲ್‌ ಕುಟುಂಬಕ್ಕೆ ಆಹಾರವನ್ನು ಒದಗಿಸಲಿಕ್ಕಾಗಿ ಮತ್ತು ಹಿಂಸೆಯಿಂದ ಪಲಾಯನಗೈಯುತ್ತಿದ್ದ ಸಹೋದರರಿಗೆ ವಸತಿಯನ್ನು ನೀಡಲಿಕ್ಕಾಗಿ ಸ್ವಿಸ್‌ ಬ್ರಾಂಚ್‌ನಿಂದ ಖರೀದಿಸಲ್ಪಟ್ಟಿದ್ದ ಶೇನೇಲಾ ಫಾರ್ಮಿನಲ್ಲಿ ಕೆಲಸಮಾಡಲು ಹೋದೆ.

ಇಸವಿ 1940ರಲ್ಲಿ ನನ್ನ ಹೆತ್ತವರ ಸೆರೆವಾಸದ ಅವಧಿಯು ಮುಗಿದಾಗ, ಒಂದುವೇಳೆ ಅವರು ತಮ್ಮ ನಂಬಿಕೆಯನ್ನು ತೊರೆಯುವಲ್ಲಿ ಮಾತ್ರ ಅವರನ್ನು ಬಿಡುಗಡೆಮಾಡುತ್ತೇವೆಂದು ನಾಸಿಗಳು ಹೇಳಿದರು. ಆದರೆ ನನ್ನ ಹೆತ್ತವರು ದೃಢನಿಶ್ಚಿತರಾಗಿ ಉಳಿದರು ಮತ್ತು ತಂದೆಯವರನ್ನು ಡಾಕೌ ಕೂಟ ಶಿಬಿರಕ್ಕೆ ಮತ್ತು ತಾಯಿಯನ್ನು ರಾವೆನ್ಸ್‌ಬ್ರೂಕ್‌ ಕೂಟ ಶಿಬಿರಕ್ಕೆ ಕಳುಹಿಸಲಾಯಿತು. ಇಸವಿ 1941ರ ಚಳಿಗಾಲದಲ್ಲಿ, ನನ್ನ ತಾಯಿಯವರು ಮತ್ತು ಸೆರೆಯಲ್ಲಿದ್ದ ಇತರ ಸ್ತ್ರೀ ಸಾಕ್ಷಿಗಳು ಮಿಲಿಟರಿ ಕೆಲಸವನ್ನು ಮಾಡಲು ನಿರಾಕರಿಸಿದರು. ಇದಕ್ಕೆ ಶಿಕ್ಷೆಯಾಗಿ, ಅವರನ್ನು 3 ದಿನಗಳು ಹಾಗೂ 3 ರಾತ್ರಿಗಳ ವರೆಗೆ ಚಳಿಯಲ್ಲಿ ನಿಲ್ಲಿಸಲಾಯಿತು, ತದನಂತರ ಅವರನ್ನು ಕತ್ತಲೆ ಕೋಣೆಗಳಲ್ಲಿ ಬಂಧಿಸಿಡಲಾಯಿತು ಹಾಗೂ 40 ದಿನಗಳ ವರೆಗೆ ಅತ್ಯಂತ ಕಡಿಮೆ ಪ್ರಮಾಣದ ಆಹಾರವನ್ನು ನೀಡಲಾಯಿತು. ಆಮೇಲೆ ಅವರಿಗೆ ತುಂಬ ಹೊಡೆಯಲಾಯಿತು. ಇಸವಿ 1942ರ ಜನವರಿ 31ರಂದು, ಕ್ರೂರವಾದ ರೀತಿಯಲ್ಲಿ ಹೊಡೆದು ಮೂರು ವಾರಗಳು ಕಳೆದ ಬಳಿಕ ತಾಯಿಯವರು ತೀರಿಕೊಂಡರು.

ತಂದೆಯವರು ಡಾಕೌ ಕೂಟ ಶಿಬಿರದಿಂದ ಆಸ್ಟ್ರಿಯದಲ್ಲಿರುವ ಮೌತಾವಸನ್‌ ಶಿಬಿರಕ್ಕೆ ವರ್ಗಾಯಿಸಲ್ಪಟ್ಟರು. ಈ ಶಿಬಿರದಲ್ಲಿ ನಾಸಿಗಳು ಸೆರೆವಾಸಿಗಳಿಗೆ ಆಹಾರವನ್ನು ಕೊಡದಿರುವ ಮೂಲಕ ಮತ್ತು ದಬ್ಬಾಳಿಕೆಭರಿತ ಶಾರೀರಿಕ ದುಡಿಮೆಯ ಮೂಲಕ ಅವರನ್ನು ಏಕಪ್ರಕಾರವಾಗಿ ಕೊಲ್ಲುತ್ತಿದ್ದರು. ತಾಯಿಯವರು ತೀರಿಹೋಗಿ ಆರು ತಿಂಗಳುಗಳ ಬಳಿಕ ನಾಸಿಗಳು ನನ್ನ ತಂದೆಯವರನ್ನು ಭಿನ್ನ ರೀತಿಯಲ್ಲಿ ಅಂದರೆ ವೈದ್ಯಕೀಯ ಪ್ರಯೋಗಗಳಿಂದ ಕೊಂದುಬಿಟ್ಟರು. ಶಿಬಿರದ ವೈದ್ಯರು ಉದ್ದೇಶಪೂರ್ವಕವಾಗಿಯೇ ಮಾನವ ಪ್ರಯೋಗಪ್ರಾಣಿಗಳಿಗೆ ಕ್ಷಯರೋಗದ ಚುಚ್ಚುಮದ್ದನ್ನು ನೀಡಿದರು. ತದನಂತರ ಸೆರೆವಾಸಿಗಳ ಹೃದಯಕ್ಕೆ ಮಾರಕ ಚುಚ್ಚುಮದ್ದನ್ನು ಚುಚ್ಚಲಾಯಿತು. ತಂದೆಯವರು “ದುರ್ಬಲವಾದ ಹೃದಯದ ಸ್ನಾಯುವಿನ” ಕಾರಣದಿಂದಾಗಿ ಮೃತಪಟ್ಟರೆಂದು ಅಧಿಕೃತ ದಾಖಲೆಯು ತಿಳಿಸಿತು. ಅವರು 43 ವರ್ಷ ಪ್ರಾಯದವರಾಗಿದ್ದರು. ಕೆಲವು ತಿಂಗಳುಗಳು ಕಳೆದ ಬಳಿಕವೇ ಈ ಪಾಶವೀಯ ಕೊಲೆಗಳ ಸುದ್ದಿಯು ನನ್ನ ಕಿವಿಗೆ ಮುಟ್ಟಿತು. ನನ್ನ ಪ್ರೀತಿಯ ಹೆತ್ತವರ ಸವಿನೆನಪುಗಳು ಈಗಲೂ ನನಗೆ ಕಣ್ಣೀರು ಬರಿಸುತ್ತವೆ. ಆದರೂ, ಆಗ ಮತ್ತು ಈಗಲು ಸಹ, ಸ್ವರ್ಗೀಯ ಜೀವಿತದ ನಿರೀಕ್ಷೆಯಿದ್ದ ನನ್ನ ತಂದೆತಾಯಿಯರು ಯೆಹೋವನ ಹಸ್ತಗಳಲ್ಲಿ ಸುರಕ್ಷಿತರಾಗಿದ್ದಾರೆ ಎಂಬ ಅರಿವು ನನಗೆ ಸಾಕಷ್ಟು ಸಾಂತ್ವನವನ್ನು ನೀಡಿದೆ.

ಎರಡನೇ ಲೋಕ ಯುದ್ಧದ ಬಳಿಕ, ನ್ಯೂ ಯಾರ್ಕಿನಲ್ಲಿರುವ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 11ನೆಯ ಕ್ಲಾಸಿಗೆ ಹಾಜರಾಗುವ ಸುಯೋಗ ನನಗೆ ಸಿಕ್ಕಿತು. ಐದು ತಿಂಗಳುಗಳ ವರೆಗೆ ಶಾಸ್ತ್ರವಚನಗಳ ಅಧ್ಯಯನದಲ್ಲಿ ಮುಳುಗಿರುವುದು ಎಷ್ಟು ಆನಂದಕರವಾದುದಾಗಿತ್ತು! ಇಸವಿ 1948ರಲ್ಲಿ ಪದವಿಯನ್ನು ಪಡೆದ ಬಳಿಕ, ಒಬ್ಬ ಮಿಷನೆರಿಯಾಗಿ ಸೇವೆಮಾಡಲಿಕ್ಕಾಗಿ ನಾನು ಸ್ವಿಟ್ಸರ್ಲೆಂಡ್‌ಗೆ ಕಳುಹಿಸಲ್ಪಟ್ಟೆ. ತದನಂತರ ಸ್ವಲ್ಪದರಲ್ಲೇ ನಾನು ಜೇಮ್ಸ್‌ ಎಲ್‌. ಟರ್‌ಪನ್‌ರನ್ನು ಸಂಧಿಸಿದೆ. ಇವರು ಗಿಲ್ಯಡ್‌ನ ಐದನೆಯ ಕ್ಲಾಸಿನಿಂದ ಪದವೀಧರರಾಗಿದ್ದ ಒಬ್ಬ ನಂಬಿಗಸ್ತ ಸಹೋದರರಾಗಿದ್ದರು. ಮೊದಲ ಬ್ರಾಂಚ್‌ ಆಫೀಸು ಟರ್ಕಿಯಲ್ಲಿ ಸ್ಥಾಪಿಸಲ್ಪಟ್ಟಾಗ, ಇವರು ಅದರ ಮೇಲ್ವಿಚಾರಕರಾಗಿ ಸೇವೆಮಾಡಿದರು. ಇಸವಿ 1951ರ ಮಾರ್ಚ್‌ ತಿಂಗಳಿನಲ್ಲಿ ನಾವು ವಿವಾಹವಾದೆವು, ಮತ್ತು ಸ್ವಲ್ಪ ಕಾಲಾವಧಿಯಲ್ಲೇ ನಾವು ಹೆತ್ತವರಾಗುತ್ತಿದ್ದೇವೆ ಎಂಬುದು ನಮಗೆ ತಿಳಿದುಬಂತು! ನಾವು ಯುನೈಟೆಡ್‌ ಸ್ಟೇಟ್ಸ್‌ಗೆ ಸ್ಥಳಾಂತರಿಸಿದೆವು ಮತ್ತು ಅದೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಮಾರ್‌ಲೀನ್‌ ಎಂಬ ನಮ್ಮ ಹೆಣ್ಣು ಮಗುವಿನ ಜನನವಾಯಿತು.

ಈ ಎಲ್ಲಾ ವರ್ಷಗಳಾದ್ಯಂತ ಜೇಮ್ಸ್‌ ಮತ್ತು ನಾನು ನಮ್ಮ ರಾಜ್ಯ ಸೇವೆಯಲ್ಲಿ ಅಪಾರವಾದ ಆನಂದವನ್ನು ಕಂಡುಕೊಂಡಿದ್ದೇವೆ. ಒಬ್ಬ ಬೈಬಲ್‌ ವಿದ್ಯಾರ್ಥಿಯನ್ನು ನಾನು ಈಗಲೂ ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ; ಅವಳು ಪೆನೀ ಎಂಬ ಹೆಸರಿನ ಒಬ್ಬ ಚೀನೀ ಯುವ ಸ್ತ್ರೀಯಾಗಿದ್ದಾಳೆ. ಇವಳಿಗೆ ಬೈಬಲ್‌ ಅಧ್ಯಯನ ಮಾಡುವುದೆಂದರೆ ತುಂಬ ಇಷ್ಟ. ಅವಳು ದೀಕ್ಷಾಸ್ನಾನ ಪಡೆದುಕೊಂಡು, ತದನಂತರ ಈಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಲ್ಲಿ ಸೇವೆಮಾಡುತ್ತಿರುವ ಗೈ ಪಿಯರ್ಸ್‌ರನ್ನು ವಿವಾಹವಾದಳು. ನನ್ನ ಹೆತ್ತವರ ಕೊರತೆಯು ಉಂಟುಮಾಡಿರುವ ಶೂನ್ಯ ಭಾವನೆಯನ್ನು ತುಂಬಿಸಲು ಇಂಥ ಆತ್ಮೀಯರು ನನಗೆ ಸಹಾಯಮಾಡಿದ್ದಾರೆ.

ಇಸವಿ 2004ರಲ್ಲಿ, ನನ್ನ ಹೆತ್ತವರ ಸ್ವಂತ ಸ್ಥಳವಾಗಿದ್ದ ಲೋರ್‌ಆಕ್‌ನ ಸ್ಟಿಕ್‌ ಸ್ಟ್ರೀಟ್‌ನಲ್ಲಿ ಸಹೋದರರು ಒಂದು ಹೊಸ ರಾಜ್ಯ ಸಭಾಗೃಹವನ್ನು ನಿರ್ಮಿಸಿದರು. ಯೆಹೋವನ ಸಾಕ್ಷಿಗಳು ಏನನ್ನು ಮಾಡಿದ್ದರೋ ಅದನ್ನು ಮಾನ್ಯಮಾಡುತ್ತಾ, ನನ್ನ ಹೆತ್ತವರ ಗೌರವಾರ್ಹವಾಗಿ ಒಂದು ಬೀದಿಯ ಹೆಸರನ್ನು ಡೆಂಟ್ಸ್‌ಶ್ಟ್ರಾಸ (ಡೆಂಟ್ಸ್‌ ಸ್ಟ್ರೀಟ್‌) ಎಂದು ಬದಲಾಯಿಸಲು ನಗರದ ಸಮಿತಿಯು ನಿರ್ಧರಿಸಿತು. ಬಾಡಿಶ ಟ್ಸೈಟುಂಗ್‌ ಎಂಬ ಸ್ಥಳಿಕ ವಾರ್ತಾಪತ್ರಿಕೆಯು, “ಹತ್ಯೆಗೈಯಲ್ಪಟ್ಟ ಡೆಂಟ್ಸ್‌ ದಂಪತಿಯ ಸ್ಮರಣಾರ್ಥವಾಗಿ: ಹೊಸ ಬೀದಿಯ ಹೆಸರು” ಎಂಬ ಮೇಲ್ಬರಹದ ಕೆಳಗೆ, ನನ್ನ ಹೆತ್ತವರು “ತಮ್ಮ ನಂಬಿಕೆಯ ಕಾರಣದಿಂದಾಗಿ ಮೂರನೆಯ ಶಾಸನದ ಸಮಯದಲ್ಲಿ ಕೂಟ ಶಿಬಿರದಲ್ಲಿ ಹತ್ಯೆಗೈಯಲ್ಪಟ್ಟರು” ಎಂದು ತಿಳಿಸಿತು. ನನಗಾದರೋ, ನಗರದ ಸಮಿತಿಯು ಮಾಡಿದ ಈ ಕೃತ್ಯವು ಅನಿರೀಕ್ಷಿತವಾಗಿತ್ತಾದರೂ, ಅತ್ಯಂತ ಹೃದಯೋತ್ತೇಜಕ ರೀತಿಯಲ್ಲಿ ಸನ್ನಿವೇಶಗಳ ಬದಲಾವಣೆಯೂ ಆಗಿತ್ತು.

ಅರ್ಮಗೆದೋನ್‌ ಯುದ್ಧವು ನಮ್ಮ ಜೀವಮಾನಕಾಲದಲ್ಲಿ ಬರುವುದಿಲ್ಲ ಎಂಬಂಥ ರೀತಿಯಲ್ಲಿ ಅಲ್ಲ, ಬದಲಾಗಿ ಅದು ನಾಳೆಯೇ ಬರುತ್ತದೋ ಎಂಬಂತೆ ನಾವು ಭವಿಷ್ಯತ್ತಿಗಾಗಿ ಯೋಜನೆಯನ್ನು ಮಾಡಬೇಕು ಎಂದು ತಂದೆಯವರು ಯಾವಾಗಲೂ ಹೇಳುತ್ತಿದ್ದರು. ನಾನು ಯಾವಾಗಲೂ ಅನ್ವಯಿಸಿಕೊಳ್ಳಲು ಪ್ರಯತ್ನಿಸಿರುವ ಅಮೂಲ್ಯ ಸಲಹೆಯು ಇದಾಗಿದೆ. ತಾಳ್ಮೆಯನ್ನು ಹಾಗೂ ಕಾತುರಭರಿತ ನಿರೀಕ್ಷಣೆಯನ್ನು ಸಮತೂಕವಾಗಿರಿಸುವುದು ಸುಲಭವೇನಲ್ಲ, ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯದ ಹಾನಿಕರ ಪರಿಣಾಮಗಳು ನನ್ನನ್ನು ಈಗ ಮನೆಯಲ್ಲೇ ಇರುವಂತೆ ಮಾಡಿರುವುದರಿಂದ ಇದು ತುಂಬ ಕಷ್ಟಕರ. ಆದರೂ, ತನ್ನ ಎಲ್ಲ ನಂಬಿಗಸ್ತ ಸೇವಕರಿಗೆ ಯೆಹೋವನು ಮಾಡಿರುವ ವಾಗ್ದಾನವನ್ನು ನಾನೆಂದೂ ಸಂಶಯಿಸಿಲ್ಲ. ಅದೇನೆಂದರೆ “ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”​—⁠ಜ್ಞಾನೋಕ್ತಿ 3:5, 6.

[ಪುಟ 29ರಲ್ಲಿರುವ ಚೌಕ/ಚಿತ್ರ]

ಗತಕಾಲಗಳ ಅಮೂಲ್ಯ ನುಡಿಗಳು

ಸ್ವಲ್ಪ ದೂರದ ಹಳ್ಳಿಯಿಂದ ಬಂದಿದ್ದ ಸ್ತ್ರೀಯೊಬ್ಬಳು 1980ಗಳಲ್ಲಿ ಲೋರ್‌ಆಕ್‌ ಅನ್ನು ಸಂದರ್ಶಿಸಿದಳು. ಆ ಸಮಯದಲ್ಲಿ, ಪಟ್ಟಣದ ಜನರು ತಮಗೆ ಬೇಡವಾದ ಸೊತ್ತುಗಳನ್ನು ಸಾರ್ವಜನಿಕ ಚೌಕವೊಂದಕ್ಕೆ ತರುತ್ತಿದ್ದರು ಮತ್ತು ಅಲ್ಲಿ ಇತರರು ಈ ವಸ್ತುಗಳನ್ನು ನೋಡಸಾಧ್ಯವಿತ್ತು ಮತ್ತು ತಮಗೆ ಇಷ್ಟವಾದ ವಸ್ತುಗಳನ್ನು ತೆಗೆದುಕೊಳ್ಳಸಾಧ್ಯವಿತ್ತು. ಹೊಲಿಗೆಯ ವಸ್ತುಗಳಿದ್ದ ಒಂದು ಚಿಕ್ಕ ಪೆಟ್ಟಿಗೆಯು ಈ ಸ್ತ್ರೀಗೆ ಸಿಕ್ಕಿತು ಮತ್ತು ಅವಳು ಅದನ್ನು ಮನೆಗೆ ತೆಗೆದುಕೊಂಡುಹೋದಳು. ಆಮೇಲೆ ಆ ಪೆಟ್ಟಿಗೆಯ ತಳದಲ್ಲಿ ಒಬ್ಬ ಚಿಕ್ಕ ಹುಡುಗಿಯ ಫೋಟೋಗಳು ಮತ್ತು ಕೂಟ ಶಿಬಿರದ ಲೇಖನ ಸಾಮಗ್ರಿಗಳ ಮೇಲೆ ಬರೆಯಲ್ಪಟ್ಟಿದ್ದ ಪತ್ರಗಳು ಅವಳಿಗೆ ಸಿಕ್ಕಿದವು. ಈ ಸ್ತ್ರೀಯು ಆ ಪತ್ರಗಳ ಬಗ್ಗೆ ಆಸಕ್ತಿಯನ್ನು ತೋರಿಸಿದಳು, ಮತ್ತು ಜಡೆಗಳಿರುವ ಈ ಚಿಕ್ಕ ಹುಡುಗಿ ಯಾರು ಎಂಬ ವಿಷಯದಲ್ಲಿ ಚಿಂತಿತಳಾದಳು.

ಇಸವಿ 2000ದಲ್ಲಿ ಒಂದು ದಿನ ಆ ಸ್ತ್ರೀಯು ಲೋರ್‌ಆಕ್‌ನ ಐತಿಹಾಸಿಕ ವಸ್ತುಪ್ರದರ್ಶನಾಲಯದ ಕುರಿತು ಒಂದು ವಾರ್ತಾಪತ್ರಿಕೆಯಲ್ಲಿ ನೋಡಿದಳು. ಆ ಲೇಖನವು ನಾಸಿ ಆಳ್ವಿಕೆಯ ವರ್ಷಗಳಲ್ಲಿನ ಯೆಹೋವನ ಸಾಕ್ಷಿಗಳ ಇತಿಹಾಸವನ್ನು ವಿವರಿಸಿತ್ತು; ಇದರಲ್ಲಿ ನಮ್ಮ ಕುಟುಂಬದ ವಿಚಾರವೂ ಒಳಗೂಡಿಸಲ್ಪಟ್ಟಿತ್ತು. ಅದರಲ್ಲಿ ನನ್ನ ಹದಿಪ್ರಾಯದ ಚಿತ್ರಗಳು ಸಹ ಇದ್ದವು. ಈ ಚಿತ್ರಗಳಲ್ಲಿರುವ ಹೋಲಿಕೆಯನ್ನು ನೋಡಿದ ಆ ಸ್ತ್ರೀಯು ಒಬ್ಬ ಪತ್ರಕರ್ತೆಯನ್ನು ಸಂಪರ್ಕಿಸಿ, ಈ ಪತ್ರಗಳ ಕುರಿತು ಅವಳಿಗೆ ಹೇಳಿದಳು. ಒಟ್ಟು 42 ಪತ್ರಗಳಿದ್ದವು! ಕೆಲವೇ ವಾರಗಳಲ್ಲಿ ಆ ಪತ್ರಗಳು ನನ್ನ ಕೈಸೇರಿದವು. ಅದರಲ್ಲಿದ್ದ ನನ್ನ ಹೆತ್ತವರ ಕೈಬರಹವು, ನನ್ನ ಕುರಿತು ಸತತವಾಗಿ ವಿಚಾರಿಸುತ್ತಾ ನನ್ನ ದೊಡ್ಡಮ್ಮನಿಗೆ ಬರೆಯಲ್ಪಟ್ಟಿದ್ದ ಪತ್ರಗಳದ್ದಾಗಿತ್ತು. ನನ್ನ ಕುರಿತಾಗಿದ್ದ ಅವರ ಪ್ರೀತಿಭರಿತ ಚಿಂತೆಯು ಎಂದೂ ನಿಂತುಹೋಗಲಿಲ್ಲ. ಸುಮಾರು 60ಕ್ಕೂ ಹೆಚ್ಚು ವರ್ಷಗಳ ಬಳಿಕವೂ ಈ ಪತ್ರಗಳು ಉಳಿದಿರುವುದು ಮತ್ತು ಪುನಃ ಕಣ್ಣಿಗೆ ಬಿದ್ದಿರುವುದು ನಿಜವಾಗಿಯೂ ಒಂದು ಅದ್ಭುತವಾಗಿದೆ!

[ಪುಟ 25ರಲ್ಲಿರುವ ಚಿತ್ರಗಳು]

ಹಿಟ್ಲರನು ಅಧಿಕಾರಕ್ಕೆ ಬಂದಾಗ ನಮ್ಮ ಸುಖಿ ಕುಟುಂಬವು ಛಿದ್ರವಾಯಿತು

[ಕೃಪೆ]

ಹಿಟ್ಲರ್‌: U.S. Army photo

[ಪುಟ 26ರಲ್ಲಿರುವ ಚಿತ್ರಗಳು]

1. ಮಾಗ್ಡಬುರ್ಕ್‌ ಆಫೀಸ್‌

2. ಗೆಸ್ಟಪೊಗಳು ಸಾವಿರಾರು ಮಂದಿ ಸಾಕ್ಷಿಗಳನ್ನು ಬಂಧಿಸಿದರು

[ಪುಟ 28ರಲ್ಲಿರುವ ಚಿತ್ರ]

ನಮ್ಮ ರಾಜ್ಯ ಸೇವೆಯಲ್ಲಿ ನಾನು ಮತ್ತು ಜೇಮ್ಸ್‌ ಮಹತ್ತರವಾದ ಆನಂದವನ್ನು ಕಂಡುಕೊಂಡಿದ್ದೇವೆ